Category Archives: ಪುಸ್ತಕ ಲೋಕ

ಬ್ಯಾಂಕ್ ಬ್ಯಾಂಕ್ ಭ್ಯಾಂಘ್!

ಚಲಾವಣೆಗೆ ಬಂದ ಖೋಟಾನೋಟು!

ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು) ನನ್ನ ಮಿಂಚಂಚೆ ವಿಳಾಸಕ್ಕೆ ನೂಕುತ್ತಾ ಎಚ್ಚರಿಸಿದ್ದರು. ಆ ಪತ್ರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬೀಐ) ಮಹೇಂದ್ರ ಕೊಟಕ್ ಬ್ಯಾಂಕಿನ ಯಾರದೋ ಪತ್ರವನ್ನು ಉದ್ದೇಶಿಸಿ ಕೊಟ್ಟ ಸ್ಪಷ್ಟೀಕರಣ. ಸಾರಾಂಶ – ಪಾಕಿಸ್ತಾನದ ಕೆಟ್ಟಬುದ್ಧಿಯಲ್ಲಿ ಅಸಂಖ್ಯ ಕಳ್ಳನೋಟುಗಳು ಭಾರತದಲ್ಲಿ ಚಲಾವಣೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಸಾವಿರರೂಪಾಯಿ ನೋಟುಗಳಲ್ಲಿ 2AQ ಮತ್ತು 8AC ಸೀರೀಸಿನ ಬಗ್ಗೆ – ಎಚ್ಚರೆಚ್ಚರ! Continue reading

ನಾನ್ಯಾಕೆ ಚೀಲ ಕೊಡುತ್ತಿಲ್ಲ?

‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ ಪಡೆದವರಂತೆ ಮುಖಭಾವ, ಅವಹೇಳನಕಾರಿ ನಡೆ, ಖರೀದಿಸಿದ್ದನ್ನೇ ತಿರಸ್ಕರಿಸಿ ಹೋಗುವ ಕ್ರಮಗಳೂ ಇಲ್ಲದಿಲ್ಲ! ತಮ್ಮ ಪರಿಸರಪ್ರೇಮದ ಬಗ್ಗೆ ಕೊರೆದು, “ನನಗೆ ಬೇಡಾ ಆದರೇ…” ಎಂದು ಮತ್ತೆ ನನಗೆ ಏನೇನೂ ಹೊಸದಲ್ಲದ, ಸರಕಾರ ಪ್ಲ್ಯಾಸ್ಟಿಕ್ ಕುರಿತು ನಿಗದಿಪಡಿಸಿದ ಬಣ್ಣ ಮತ್ತು ದಪ್ಪದ ಬಗ್ಗೆ ವಿವರಣೆ (ಇದೂ ಪ್ರಕೃತಿಪರವೇನೂ ಅಲ್ಲ, ಸಮಾಜಕ್ಕೊಂದು ರಿಯಾಯ್ತಿ), ಮರುಬಳಕೆಗೆ ಪ್ರೇರಿಸುವ ದಪ್ಪದ ಮತ್ತು ಅಂದದ ಪ್ಲ್ಯಾಸ್ಟಿಕ್, ಬಯೋ ಡಿಗ್ರೇಡಬಲ್ ಪ್ಲ್ಯಾಸ್ಟಿಕ್, ಹತ್ತಿಯದೋ ಸೆಣಬಿನದೋ ಚೀಲಗಳು, ಹಳೆಂii ಪತ್ರಿಕೆಗಳನ್ನೇ ಸಾಕಷ್ಟು ಅಂಟು, ಬಲಯುತವಾದ ಹಿಡಿಕೆಗಳನ್ನೊದಗಿಸಿ ಮಾಡಿದ ‘ಪರಿಸರಪ್ರೇಮಿ’ ಚೀಲ ಇತ್ಯಾದಿ ನೂರೆಂಟು ಸಲಹೆ ಕೊಡುವ ಜನಗಳಿಗೆ (ನಮ್ಮೊಡನಿದ್ದೂ ನಮ್ಮಂತಾಗದವರು) ಕೊರತೆ (ಕೊರೆತ?) ಎಂದೂ ಆದದ್ದಿಲ್ಲ (ಮುಗಿದದ್ದಿಲ್ಲ!). ಅಂಗಡಿ ಮತ್ತು ಪರಿಸರಪ್ರೇಮವನ್ನು ಜಾಹೀರುಗೊಳಿಸುವ ಚೀಲಗಳನ್ನು “ಕ್ರಯಕ್ಕೇ ಕೊಡಿ” ಎಂದು ಸಜೆಸ್ಟುವವರಿಗೂ ಕೊರತೆಯಿಲ್ಲ. ಇವೆಲ್ಲ ನನಗೆ ತಿಳಿಯದ್ದೇನೂ ಅಲ್ಲ. ನಾನು ಕೇವಲ ನಕ್ಕು ಸುಮ್ಮನಿರುತ್ತೇನೆ.

Continue reading

ಅತ್ರಿ – ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!

ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ – ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ ಜವಾಬ್ದಾರಿಗಳನ್ನು ಮತ್ತು ಬಹುತೇಕ ಬರವಣಿಗೆಗಳನ್ನೂ ಕೊಟ್ಟ ನನ್ನ ತಂದೆ – ಜಿಟಿ ನಾರಾಯಣ ರಾವ್, ನನ್ನ ಪ್ರಕಾಶನದ ಅಘೋಷಿತ ಬಹುಮುಖ್ಯ ಪಾಲುದಾರ. ಅವರು ತಮ್ಮ ಬರಹಗಳಿಗೆ (ಗೌರವಧನ), ಮುದ್ರಣ ಕಾರ್ಯದ ಸಂಪೂರ್ಣ ನಿರ್ವಹಣೆಗೆ (ಓಡಾಟ, ಅಂಚೆವೆಚ್ಚ ಇತ್ಯಾದಿ) ಚಿಕ್ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆದರ್ಶದ ಮಾತುಗಳನ್ನೇ ನಾನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತ “ಪುಸ್ತಕಗಳ ಬಿಡಿ ಮಾರಾಟವೇ ನನ್ನ ಪ್ರಧಾನ ವೃತ್ತಿ. ಪ್ರಕಾಶನವೇನಿದ್ದರೂ ನನ್ನ ಮತ್ತು ಮುಖ್ಯವಾಗಿ ತಂದೆಯ ಒಲವಿನ ಬರಹಗಳನ್ನು (ಅದರಲ್ಲೂ ಜನಪ್ರಿಯ ವಿಜ್ಞಾನ ಸಾಹಿತ್ಯ), ಕೇವಲ ಸಾಮಾಜಿಕ ಋಣ ಸಂದಾಯದ ನೆಲೆಯಲ್ಲಿ ಮಾಡುತ್ತೇನೆ. ಓದುಗ ಪ್ರಕಾಶನದ ಪರಮ ಲಕ್ಷ್ಯ. ಕಾಗದ, ಮುದ್ರಣಗಳಲ್ಲಿ ಆವಶ್ಯಕತೆಯನ್ನಷ್ಟೇ ನೋಡಿ ಬಳಸಿದರೂ ಸರಳ ಸೌಂದರ್ಯಕ್ಕೆ ಕೊರತೆ ಮಾಡುತ್ತಿಲ್ಲ” ಎಂದೇ ಘೋಷಿಸಿಕೊಂಡೆ.
Continue reading

ಮೌಲ್ಯಗಳ ಪುಡಾರೀಕರಣ

ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ,  ಸೆರೆ ಸಿಕ್ಕೀತು, ಹುಶಾರ್!

ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!

ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ಯಲ್ಲಿ ಪ್ರಕಟಿಸಿದರು. ಈಗ ಮೊದಲು ಲೇಖನ ನೋಡಿ:

Continue reading