Athree Book Center

Entries categorized as ‘ಪ್ರವಾಸ ಕಥನ’

ಮೃಗಜಲದ ಬೆನ್ನೇರಿ

March 10, 2010 · 3 Comments

ಸುಮಾರು ನಲ್ವತ್ತು ವರ್ಷಗಳ ಹಿಂದಿನ ನನ್ನ ಅನುಭವ ಕಥನ – ತಾತಾರ್ ಶಿಖರಾರೋಹಣವನ್ನು ಮರುಕಥನಕ್ಕಿಳಿದು ನಾಲ್ಕು ಕಂತು ಕಳೆದಿದೆ. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ತಂಡ, ಉದಕಮಂಡಲ ಶ್ರೇಣಿಯ, ಮುದುಮಲೈ ವನಧಾಮಾಂತರ್ಗತ ತಾತಾರ್ ಬೆಟ್ಟವನ್ನು ವಾತಾವರಣದ ವಿಪರೀತದಲ್ಲೂ ಏರುತ್ತೇರುತ್ತೇರುತ್ತಾ ಒತ್ತರಿಸಿ ಬಂದ ರಾತ್ರಿಗೆ ಆಕಸ್ಮಿಕವಾಗಿ ಒದಗಿದ ಬಂಡೆಮರೆಯಲ್ಲಿ ಶಿಬಿರ ಹೂಡಿದ್ದಾಗಿದೆ. ಅತ್ತ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನೆಯ ಸಮರದಲ್ಲಿ ತೊಡಗಿದ ಭಾರತೀಯ ಸೇನೆಯ ವೀರಗಾಥೆಯನ್ನು ತುಣುಕು ರೆಡಿಯೋ ವರದಿಗಳಲ್ಲಿ ಸ್ಫೂರ್ತಿಪೇಯದಂತೆ ಹೀರುತ್ತಾ ಸಾಗಿದ ಪ್ರಾಕೃತಿಕ ಸಾಹಸಯಾನಕ್ಕಿಲ್ಲಿ ಶಿಖರಯೋಗ ಕಾಣಿಸುವ ಹಂತ ಬಂದಿದೆ. ನಿನ್ನೆಯ ಅನ್ನಕ್ಕೆ ಇಂದಿನ ವಗ್ಗರಣೆ ಎಂಬ ತಾತ್ಸಾರ ಕಳೆದು, ಹಿಂದಿನ ಸಾಧನೆ ಮುಂದಕ್ಕೆ ಪ್ರೇರಣೆ ಎಂಬ ಉತ್ಸಾಹ ತಳೆದು ಬನ್ನಿ, ಹೊರಡೋಣ ಸವಾರಿ…
(more…)

Categories: ಪ್ರವಾಸ ಕಥನ · ವನ್ಯಲೋಕ

ಅಯನದ್ವಯಕ್ಕೂ ಭೀಷ್ಮ ಕಾಯ

February 25, 2010 · 2 Comments

(ತಾತಾರ್ ೪)

ತಾತಾರ್ ಶಿಖರಾರೋಹಣ ಪುಸ್ತಕವನ್ನು ಅಂದು (೧೯೭೨) ಪುಣೆಯಲ್ಲಿದ್ದ ನನ್ನ ಸೋದರತ್ತೆ ಸೀತಾ ಓದಿ ಕಾಲೆಳೆದಿದ್ದಳು, “ಇದು ‘ಕುದುರೆಮುಖದೆಡೆಗೆ’ ಬರೆದ ನಾರಣ್ಣಯ್ಯನೇ (ನನ್ನ ತಂದೆ) ಬರೆದುಕೊಟ್ಟಿರಬೇಕು.” ಕುದುರೆಮುಖದೆಡೆಗೆ (೧೯೬೮) ಬೆಂಗಳೂರು ವಿಶ್ವವಿದ್ಯಾನಿಲಯದ ಪಠ್ಯೇತರ ಪ್ರಕಟಣೆಗಳಲ್ಲಿ ಪ್ರಥಮ ಪುಸ್ತಕ. ಮುಂದೆ ಇದು ತಂದೆಯದೇ ಎನ್.ಸಿ.ಸಿ ದಿನಗಳಲ್ಲಿ, ಸವಾಲನ್ನು ಎದುರಿಸುವ ಛಲದಲ್ಲಿ ಮತ್ತು ಕೊನೆಯದಾಗಿ ಮುಗಿಯದ ಪಯಣದಲ್ಲಿ ಸಮಕಾಲೀನ ಆವಶ್ಯಕತೆಗಳಿಗನುಗುಣವಾಗಿ ಪರಿಷ್ಕೃತಗೊಂಡು ಮರುಮುದ್ರಣಗಳನ್ನೂ ಕಂಡಿದೆ. ತಂದೆಯ ಸಾಹಿತ್ಯ ಕೊಡುಗೆಗಳಲ್ಲಿ ಸರಸ ಶೈಲಿ, ಹಾಸ್ಯಪ್ರಜ್ಞೆಗಳಿಂದ ನಿರ್ವಿವಾದವಾಗಿ ಜನಪ್ರಿಯತೆಯನ್ನು ಗಳಿಸಿದ ಬರವಣಿಗೆಗಳು ಇಂಥವು. ಆದರೆ ತಂದೆ ಯಾವುದನ್ನು ತನ್ನ ಜೀವನದ ಪರಮಲಕ್ಷ್ಯ (ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಪ್ರಸರಣ) ಎಂದು ಭಾವಿಸಿ (‘ವಿಜ್ಞಾನ ಎನ್ನಶನ’ ಎಂದೇ ಘೋಷಿಸಿ) ದುಡಿದರೋ ಅಲ್ಲಿ ಹೀಗಳೆವ ಕೆಲವು ಪ್ರಯತ್ನಗಳನ್ನು ಆಗಾಗ ಅನುಭವಿಸಿದ್ದುಂಟು. (ತಪ್ಪು ತಿಳಿಯಬೇಡಿ, ಅದರಿಂದ ವಿಷಾದ, ಸಂತ್ರಸ್ತತನದಂಥ ಭಾವಗಳು ಅವರನ್ನೆಂದೂ ಕಾಡಲಿಲ್ಲ.) ಕಳೆದ ವಾರ ‘ಕೆಂಡಸಂಪಿಗೆ’ಯಲ್ಲಿ ಕೆ.ವಿ ತಿರುಮಲೇಶ್ ಕೂಡಾ ಇಂಥದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾಗ, ಅವರ ಬೆಂಬಲಕ್ಕೆ ತಂದೆಯ ಉದಾಹರಣೆ ಕೊಟ್ಟು ನನ್ನ ಮಿತಿಯ ನಾನೂ ನಾಲ್ಕು ಮಾತು ಹೊಸೆದೆ. ಮೊದಲು ಅದನ್ನಷ್ಟು ಉದ್ದರಿಸಿ, ನಿರುಮ್ಮಳವಾಗಿ ತಾತಾರಿನತ್ತದ ಯಾತ್ರೆ ಮುಂದುವರಿಸುತ್ತೇನೆ, ಸೇರಿಕೊಳ್ಳಿ, ಜೊತೆ ಬಿಡಬೇಡಿ.

(more…)

Categories: ಪ್ರವಾಸ ಕಥನ · ವನ್ಯಲೋಕ

ಒದ್ದೆ ಕನಸುಗಳು (ತಾತಾರ್ ೩)

February 10, 2010 · 6 Comments

ತೆಪ್ಪಕಾಡಿನಲ್ಲಿ ತೆಪ್ಪಗೆ ಬಿದ್ದವರ ಕಥೆಯಂತೂ ನಿಮಗೆ ಗೊತ್ತಾಯ್ತು. ಹಾಗೆಂದು ಮಸಣಿಗುಡಿಗೆ ಹೋದವರು ಹಿಂದಿನ ಯೋಚನೆಗಳನ್ನು ಇಟ್ಟುಕೊಳ್ಳುವುದು ಹೇಗೆ ಎಂದು ತಪ್ಪು ಭಾವಿಸಬೇಡಿ. ಅವರು ಮಸಣಿಗುಡಿ ತಲಪಿದ್ದೇ ಊರಬಾಗಿಲಿನಲ್ಲೇ ಇದ್ದ ಚೆಕ್ ಪೋಸ್ಟ್ ಬಳಿಯ ಮೈದಾನದಲ್ಲಿ ಬೀಡುಬಿಟ್ಟರು. ನಾಗರಾಜ್ ರೋಪಿಗೆ ಎಲ್ಲ ಗುಡಾರಗಳನ್ನು ವ್ಯವಸ್ಥಿತವಾಗಿ ಬಿಡಿಸಲು ಸೂಚನೆ ಹೋಯ್ತು. ಬಹಳ ಬಿಸಿಯಿಂದಲೇ ಸುರು ಮಾಡಿದ್ದರಂತೆ, ಆದರೆ ಬೆಣ್ಣೆಯಂತಾ ಸದಸ್ಯರು ಕರಗಿಹೋದರು. ಜಾವೀದ್ ಸೇಟ್ ಮತ್ತು ಬಾಲಸುಬ್ರಹ್ಮಣ್ಯಂ ಸೇರಿ ಮೊದಲ ಗುಡಾರ ಎಬ್ಬಿಸಿದರು. ಉಳಿದವು ಮೆಲ್ಲ ಮೆಲ್ಲನೆ ಏಳುತ್ತಿದ್ದಂತೆ ಜಾವೀದ್ ರೋಪಿಗೆ ಶಿಬಿರಾಗ್ನಿಗೆ ಸೌದೆ ಸಂಗ್ರಹಿಸುವ ಆದೇಶ ಹೊರಟಿತು. ಇದಕ್ಕೂ ಬಾಲಗ್ರಹ. ಇನ್ನೊಂದು ತಂಡ ನೀರು ಸಂಗ್ರಹಕ್ಕೆ ಹೊಯ್ತು. ಇಲ್ಲ, ಬಾವಿಗೆ ಬೀಳಲಿಲ್ಲ, ಅಲ್ಲಿಗೆ ಚಕ್ರದ ಮೇಲೆ ಬಂದಿದ್ದ ಸಣ್ಣ ಪ್ರಾಣಿ ಸಂಗ್ರಹಾಲಯದ ಹುಲಿ ಸಿಂಹಗಳನ್ನು ನೋಡುತ್ತ ಮೈಮರೆಯಿತು. ಮತ್ತೆ ಕೆಲವರು ಗೂಡು ಹೋಟೇಲಿನಲ್ಲಿ ಊರಿನ ರುಚಿಗಳನ್ನು ಪರೀಕ್ಷಿಸಿದರು. ಉಂಡಾಡಿಗಳ ಉಡಾಫೆ ಸಹಿಸದೆ ಹುಡುಗಿಯರು ಸುಮಾರು ಸೌದೆ ಸಂಗ್ರಹಿಸಿದರು. ಅವರೇ ನೀರಿನ ಹೊಣೆಗಾರರಿಗೆ ಮಾತಿನಲ್ಲಿ ಕುಕ್ಕಿ ಚುರುಕು ಮೂಡಿಸಿದರು. ಊಟದ ವೇಳೆಯೂ ಬಂತು (ಮಾಡಿದರು) ಆದರೆ ಉಳಿದೇ ಹೋಯ್ತು ಪಲ್ಲವಿ… `ಇನ್ನೂ ಯಾಕ ಬರಲಿಲ್ಲವ್ವಾ ತೆಪ್ಪಕಾಡಿನಂವಾ’

(more…)

Categories: ಪ್ರವಾಸ ಕಥನ · ವನ್ಯಲೋಕ

ನಿರಾಶ್ರಿತರ ಶಿಬಿರ

January 28, 2010 · 6 Comments

(ತಾತಾರ್-೨)

[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]

ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ – ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.

(more…)

Categories: ಪ್ರವಾಸ ಕಥನ