ನಿದ್ದೆಗೇಡಿ ನಾನು ಮೂರು ಗಂಟೆಗೇ ಎದ್ದರೂ (೨೮-೧೨-೨೦೦೯ರಂದು) ನಮ್ಮ ಮನೆಗೆ ಬೆಳಿಗ್ಗೆ ಐದು ಗಂಟೆಗೆ ಆಯ್ತು. ಮನೆಯಲ್ಲಿ ನಾವು ನಾಲ್ಕೇ ಜನವಿದ್ದರೂ ಬೆಂಗಳೂರಿನಿಂದ ಬರಲಿದ್ದ ಕ್ಯಾಮರಾ ತಂಡದ ನಿರೀಕ್ಷೆಯಲ್ಲಿ ಬಾಯ್ಲರ್ ಕುದಿಸಿದೆವು. ಮದುಮನೆಯ ಸಂಭ್ರಮದಲ್ಲಿ ನಮ್ಮ ಪೂರ್ವರಂಗಗಳನ್ನೆಲ್ಲ ಮುಗಿಸಿ, ಆರು ಗಂಟೆಗೆಲ್ಲಾ ಇನ್ನೇನು, ಮುಂದೇನು ಎನ್ನುವ ಸ್ಥಿತಿ. ಕುತೂಹಲಕ್ಕೆ ಅಭಯ ಚರವಾಣಿಯಲ್ಲಿ ಕ್ಯಾಮರಾ ತಂಡದ ನಾಯಕ ಧರ್ಮೇಂದ್ರರನ್ನು ವಿಚಾರಿಸಿಕೊಂಡ. “ಅಯ್ಯೋ ಬಿಡಿ ಸಾರ್, ಇನ್ನಾ ಒನ್ನೆಂಡಾಫ್ ಅವರ್ನಲ್ಲಿ ಮಂಗ್ಲೂರ್ ರೀಚಾಗ್ತೀವಿ.” ನಂಬಿದೆವು, ನನ್ನ ಕಾರು ಅಂಗಳಕ್ಕೆ ಇಳಿಯಿತು, ಹೋಟೆಲಿನ ಇಡ್ಲಿ ಒಡೆ ತಂತು, ತಿಂತು (ಏಯ್! ಕಾರ್ ತಿನ್ಲಿಲ್ಲಾ ಬಿಡಿ). ಡಾ| ಮನೋಹರ ಉಪಾಧ್ಯರ ದೊಡ್ಡ ಕಾರನ್ನು ಚಾಲಕ ತಂದ, ಅದಕ್ಕೂ ನನ್ನದಕ್ಕೂ ಒಂದೊಂದು ಜನರೇಟರ್ ಅಲ್ಲದೆ ಏನೇನೆಲ್ಲಾ ತುಂಬಿ ಸಜ್ಜುಗೊಳಿಸಿದೆವು. ಉಪಾಯ್ದರೂ (ಕೋಟದ ಆಡುನುಡಿಯಲ್ಲಿ ಉಪಾಧ್ಯರು>ಉಪಾಯ್ದರೂಂತ ಹಿಂದೆಯೇ ಹೇಳಿದ್ದು ಇಷ್ಟು ಬೇಗ ಮರೆತಿರಲಾರಿರಿ.) ಬಂದರು, ಆದರೆ ಕ್ಯಾಮರಾ ಟೀಮ್ ಬರಲಿಲ್ಲ! ಬಾಯ್ಲರ್, ಇಡ್ಲಿ ಸಾಂಬಾರ್ ತಣಿದಿತ್ತು, ಅಭಯ ಕುದಿಯುತ್ತಿದ್ದ. “ಒನ್ನೆಂಡಾಫ್ ಅಂತೆ, ಟೂ ಆಯ್ತು. ಮೊಬೈಲ್ ನೋಡಿದರೆ ‘ಸ್ವಿಚ್ಡಾಫ್’ ಬರ್ತಾ ಇದೆ…” ಶತಪಥ ಹಾಕುವುದಷ್ಟೇ ಉಳಿಯಿತು.
Entries categorized as ‘ಯಕ್ಷಗಾನ’
ತೆರೆಮರೆಯ ಕುಣಿತ
December 25, 2009 · 12 Comments
Categories: ಯಕ್ಷಗಾನ
ಎಣ್ಣೆ ಬೇಕು ದೀವಟಿಗೆಗೆ!
December 7, 2009 · 17 Comments
ಆಹಾಹೋsssss ಹ್ಹೋss ಹ್ಹೋಯ್!
ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ) ಅಭಯಸಿಂಹನ ಪೂರ್ಣ ತಾಂತ್ರಿಕ ಜವಾಬ್ದಾರಿಯಲ್ಲಿ ದಾಖಲೀಕರಣದ ವೆಚ್ಚಗಳ ಅಂದಾಜುಪಟ್ಟಿ ಮಾಡಿಸಿದೆವು. ತಂಡ ಮತ್ತು ಪ್ರಸಂಗಗಳ ಆಯ್ಕೆಯಲ್ಲಿ ಬಡಗು ತಿಟ್ಟಿಗೆ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರ. ಕೆಲಕಾಲದಿಂದ ಯಕ್ಷಗಾನಕ್ಕೆ ಸಾಂಪ್ರದಾಯಿಕ ಚಂದ ಮರುಕಳಿಸಲು ಕ್ರಿಯಾತ್ಮಕವಾಗಿ ಹೆಣಗುತ್ತಿರುವ ಪೃಥ್ವೀ ರಾಜ್ ಕವತ್ತಾರ್‌ಗೆ ತೆಂಕು ತಿಟ್ಟಿನ ತಂಡವೊಂದರ ಸಂಯೋಜನೆ ಮತ್ತು ನಿರ್ದೇಶನವನ್ನೂ ವಹಿಸಿಕೊಟ್ಟೆವು. ಮಳೆ ಪೂರ್ಣ ನಿಂತ ಮೇಲಿನ ಒಂದು ದಿನವನ್ನು ಪ್ರದರ್ಶನಕ್ಕೆ ನಿಶ್ಚಯಿಸಿಕೊಂಡದ್ದೂ ಆಯ್ತು.
Categories: ಯಕ್ಷಗಾನ
ದೀವಟಿಗೆ ಕಥಾನಕವನ್ನು ಬಣ್ಣಿಪೆನು ಪೊಡಮಡುತ
November 19, 2009 · 4 Comments
ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.
Categories: ಯಕ್ಷಗಾನ
ದೀವಟಿಗೆಯಲ್ಲಿ ಸಭಾಕ್ಲಾಸ್
November 12, 2009 · 12 Comments
ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಪಾರ್ಕಿಂಗ್, ನಡೆದು ಬರುತ್ತಿದ್ದಂತೆ ಮೊದಲ ಗೇಟಿನ ಬಳಿ ವಿದ್ಯುಜ್ಜನಕ, ಅಭಯಾರಣ್ಯದ ಗೇಟಿನ ಬುಡದಲ್ಲಿ ಜನರೇಟರಿನ ಮೇಲೊಂದು ಕಣ್ಣಿಟ್ಟುಕೊಂಡು, (ನನ್ನ ಪ್ರಕಟಣೆಗಳ ಮತ್ತು ಆಯ್ದ ವನ್ಯ ಸಂಬಂಧೀ) ಪುಸ್ತಕಗಳ ಸಣ್ಣ ಮಾರಾಟ ಪ್ರದರ್ಶನಕ್ಕೆ ಅಂಗಡಿಯ ನನ್ನ ಬಲಗೈ – ಶಾಂತಾರಾಮ ಸಜ್ಜುಗೊಂಡಿದ್ದ. ಅವನ ಎದುರಿಗೆ ಮೊಂಟೆಪದವಿನ ಹೋಟೆಲ್ ಬಾಬು ನಮ್ಮ ಕ್ಯಾಂಟೀನ್ ನಿರ್ವಣೆಯಲ್ಲಿ ನಿರತನಾಗಿದ್ದ. ವೈಭವ ಇಲ್ಲ, ಆದರೆ ಹೊಟ್ಟೆಗಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಬನ್ನು, ಬಾಳೇಹಣ್ಣು, ಮಜ್ಜಿಗೆ, ಕಾಪಿ, ಚಾ ತಿಂದಷ್ಟೂ (ಅದನ್ನು ಕೆಲವು ಪ್ರತಿಷ್ಠಿತರು ‘ಕೇಳಿದಷ್ಟೂ’ ಎಂದು ಅವರ ಅನುಕೂಲಕ್ಕೆ ತಿದ್ದಿಕೊಂಡು ಪಂಟಿಬಿರಿಯ ತಿಂದದ್ದಲ್ಲದೆ ಬನ್ಸು ಕಟ್ಟಿಕೊಂಡು ಹೋದದ್ದನ್ನು ಹೇಳದಿರಲಾರೆ) ಉಚಿತವಾಗಿ ಕೊಡಲು “On your mark” ಆಗಿದ್ದ. ಪ್ರೇಕ್ಷಾಂಗಣದಲ್ಲಿ ದಪ್ಪ ತಾರ್ಪಾಲನ್ನು ಹರಡಿದ್ದಲ್ಲದೆ, ಪ್ರಾಯಸ್ಥರಿಗೆ ಅಥವಾ ಸೊಂಟಬಾಗದವರಿಗೆ ಒಂದು ಬದಿಯಲ್ಲಿ ಇಪ್ಪತ್ತು ಮೂವತ್ತು ಕುರ್ಚಿಗಳನ್ನೂ ಹಾಕಿದ್ದೆವು. ರಂಗ, ಚೌಕಿಗಳಲ್ಲಿ ನಮ್ಮ ಜವಾಬ್ದಾರಿಯನ್ನಷ್ಟೂ ಚೊಕ್ಕ ಮಾಡಿದೆವು. ‘ಕಾಡ್ಮನೆ’ಯೊಳಗೆ ಇರುವ, ಬರಬಹುದಾದ ಜನರ ಲೆಕ್ಕಾಚಾರದಲ್ಲಿ (ನನ್ನ ಹೆಂಡತಿ) ದೇವಕಿ, ನನ್ನಮ್ಮನ ಸಹಾಯದಲ್ಲಿ (ಸುಮಾರು ಮೂವತ್ತು ಮಂದಿಗೆ) ಅಡುಗೆ ಮಾಡಿ ಮುಗಿಸುವುದರೊಳಗೆ ನಮ್ಮ ರಾಗ ಸುರುವಾಗಿತ್ತು “ದೊಡ್ಡ ಬಟ್ಟಲಮ್ಮಾ ದೊಡ್ಡ ಬಟ್ಟಲೂ.”
Categories: ಯಕ್ಷಗಾನ
