Category Archives: ಹೀಗೆ ಒಂದಿಷ್ಟು

ಬ್ಯಾಂಕ್ ಬ್ಯಾಂಕ್ ಭ್ಯಾಂಘ್!

ಚಲಾವಣೆಗೆ ಬಂದ ಖೋಟಾನೋಟು!

ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು) ನನ್ನ ಮಿಂಚಂಚೆ ವಿಳಾಸಕ್ಕೆ ನೂಕುತ್ತಾ ಎಚ್ಚರಿಸಿದ್ದರು. ಆ ಪತ್ರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬೀಐ) ಮಹೇಂದ್ರ ಕೊಟಕ್ ಬ್ಯಾಂಕಿನ ಯಾರದೋ ಪತ್ರವನ್ನು ಉದ್ದೇಶಿಸಿ ಕೊಟ್ಟ ಸ್ಪಷ್ಟೀಕರಣ. ಸಾರಾಂಶ – ಪಾಕಿಸ್ತಾನದ ಕೆಟ್ಟಬುದ್ಧಿಯಲ್ಲಿ ಅಸಂಖ್ಯ ಕಳ್ಳನೋಟುಗಳು ಭಾರತದಲ್ಲಿ ಚಲಾವಣೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಸಾವಿರರೂಪಾಯಿ ನೋಟುಗಳಲ್ಲಿ 2AQ ಮತ್ತು 8AC ಸೀರೀಸಿನ ಬಗ್ಗೆ – ಎಚ್ಚರೆಚ್ಚರ! Continue reading

ಮಹಾಲಿಂಗರು ಕಂಡ ಸಂಜೀವರ ಸಾಹಸ

ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ. ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ -  ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ.

Continue reading

ನಾನ್ಯಾಕೆ ಚೀಲ ಕೊಡುತ್ತಿಲ್ಲ?

‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ ಪಡೆದವರಂತೆ ಮುಖಭಾವ, ಅವಹೇಳನಕಾರಿ ನಡೆ, ಖರೀದಿಸಿದ್ದನ್ನೇ ತಿರಸ್ಕರಿಸಿ ಹೋಗುವ ಕ್ರಮಗಳೂ ಇಲ್ಲದಿಲ್ಲ! ತಮ್ಮ ಪರಿಸರಪ್ರೇಮದ ಬಗ್ಗೆ ಕೊರೆದು, “ನನಗೆ ಬೇಡಾ ಆದರೇ…” ಎಂದು ಮತ್ತೆ ನನಗೆ ಏನೇನೂ ಹೊಸದಲ್ಲದ, ಸರಕಾರ ಪ್ಲ್ಯಾಸ್ಟಿಕ್ ಕುರಿತು ನಿಗದಿಪಡಿಸಿದ ಬಣ್ಣ ಮತ್ತು ದಪ್ಪದ ಬಗ್ಗೆ ವಿವರಣೆ (ಇದೂ ಪ್ರಕೃತಿಪರವೇನೂ ಅಲ್ಲ, ಸಮಾಜಕ್ಕೊಂದು ರಿಯಾಯ್ತಿ), ಮರುಬಳಕೆಗೆ ಪ್ರೇರಿಸುವ ದಪ್ಪದ ಮತ್ತು ಅಂದದ ಪ್ಲ್ಯಾಸ್ಟಿಕ್, ಬಯೋ ಡಿಗ್ರೇಡಬಲ್ ಪ್ಲ್ಯಾಸ್ಟಿಕ್, ಹತ್ತಿಯದೋ ಸೆಣಬಿನದೋ ಚೀಲಗಳು, ಹಳೆಂii ಪತ್ರಿಕೆಗಳನ್ನೇ ಸಾಕಷ್ಟು ಅಂಟು, ಬಲಯುತವಾದ ಹಿಡಿಕೆಗಳನ್ನೊದಗಿಸಿ ಮಾಡಿದ ‘ಪರಿಸರಪ್ರೇಮಿ’ ಚೀಲ ಇತ್ಯಾದಿ ನೂರೆಂಟು ಸಲಹೆ ಕೊಡುವ ಜನಗಳಿಗೆ (ನಮ್ಮೊಡನಿದ್ದೂ ನಮ್ಮಂತಾಗದವರು) ಕೊರತೆ (ಕೊರೆತ?) ಎಂದೂ ಆದದ್ದಿಲ್ಲ (ಮುಗಿದದ್ದಿಲ್ಲ!). ಅಂಗಡಿ ಮತ್ತು ಪರಿಸರಪ್ರೇಮವನ್ನು ಜಾಹೀರುಗೊಳಿಸುವ ಚೀಲಗಳನ್ನು “ಕ್ರಯಕ್ಕೇ ಕೊಡಿ” ಎಂದು ಸಜೆಸ್ಟುವವರಿಗೂ ಕೊರತೆಯಿಲ್ಲ. ಇವೆಲ್ಲ ನನಗೆ ತಿಳಿಯದ್ದೇನೂ ಅಲ್ಲ. ನಾನು ಕೇವಲ ನಕ್ಕು ಸುಮ್ಮನಿರುತ್ತೇನೆ.

Continue reading

ಅತ್ರಿ – ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!

ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ – ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ ಜವಾಬ್ದಾರಿಗಳನ್ನು ಮತ್ತು ಬಹುತೇಕ ಬರವಣಿಗೆಗಳನ್ನೂ ಕೊಟ್ಟ ನನ್ನ ತಂದೆ – ಜಿಟಿ ನಾರಾಯಣ ರಾವ್, ನನ್ನ ಪ್ರಕಾಶನದ ಅಘೋಷಿತ ಬಹುಮುಖ್ಯ ಪಾಲುದಾರ. ಅವರು ತಮ್ಮ ಬರಹಗಳಿಗೆ (ಗೌರವಧನ), ಮುದ್ರಣ ಕಾರ್ಯದ ಸಂಪೂರ್ಣ ನಿರ್ವಹಣೆಗೆ (ಓಡಾಟ, ಅಂಚೆವೆಚ್ಚ ಇತ್ಯಾದಿ) ಚಿಕ್ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆದರ್ಶದ ಮಾತುಗಳನ್ನೇ ನಾನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತ “ಪುಸ್ತಕಗಳ ಬಿಡಿ ಮಾರಾಟವೇ ನನ್ನ ಪ್ರಧಾನ ವೃತ್ತಿ. ಪ್ರಕಾಶನವೇನಿದ್ದರೂ ನನ್ನ ಮತ್ತು ಮುಖ್ಯವಾಗಿ ತಂದೆಯ ಒಲವಿನ ಬರಹಗಳನ್ನು (ಅದರಲ್ಲೂ ಜನಪ್ರಿಯ ವಿಜ್ಞಾನ ಸಾಹಿತ್ಯ), ಕೇವಲ ಸಾಮಾಜಿಕ ಋಣ ಸಂದಾಯದ ನೆಲೆಯಲ್ಲಿ ಮಾಡುತ್ತೇನೆ. ಓದುಗ ಪ್ರಕಾಶನದ ಪರಮ ಲಕ್ಷ್ಯ. ಕಾಗದ, ಮುದ್ರಣಗಳಲ್ಲಿ ಆವಶ್ಯಕತೆಯನ್ನಷ್ಟೇ ನೋಡಿ ಬಳಸಿದರೂ ಸರಳ ಸೌಂದರ್ಯಕ್ಕೆ ಕೊರತೆ ಮಾಡುತ್ತಿಲ್ಲ” ಎಂದೇ ಘೋಷಿಸಿಕೊಂಡೆ.
Continue reading