ಏರಿದವನಿಳಿಯಲೇಬೇಕು

ರಂಗನಾಥ ವಿಜಯ ಭಾಗ ಏಳು

ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ ವ್ಯಕ್ತಿಗೆ ಅದು ಮರಳುವಲ್ಲಿ ಅಷ್ಟಷ್ಟು ಒಜ್ಜೆಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ. ನಮ್ಮ ಸ್ಥಿತಿಯೂ ಅದಕ್ಕೇನೂ ಕಡಿಮೆಯದ್ದಲ್ಲ. ‘ಗಗನಗಾಮಿತನ’ ದೊಡ್ಡ ಅನುಭವದ ಒಂದು ತುಣುಕು ಮಾತ್ರ. ಅದರ ಪೂರ್ಣತೆಗಾಗಿ ನಾವು ಬೇಗನೆ ಸ್ಮರಿಸಿಕೊಂಡೆವು – ಏರಿದವನಿಳಿಯಲೇಬೇಕು. ಹಾಂ, ಆದರೆ ಹೇಳಿದಷ್ಟು ಸುಲಭವಲ್ಲ ಬಂಡೆ ಇಳಿಯುವುದು. ಕಡಿದಾದ ಏರಿನಲ್ಲಿ ನಡೆಯನ್ನು ನಿರ್ದೇಶಿಸಲು ನಮ್ಮ ನೇರ ದೃಷ್ಟಿಯೊಡನೆ ಕೈಕಾಲುಗಳನ್ನು ತೊಡಗಿಸುತ್ತೇವೆ. ಹಾಗೇ ಇಳಿದರಾಯ್ತು ಎನ್ನುವಂತಿಲ್ಲ. ನಾವು ಹಲ್ಲಿ ಉಡಗಳಂತೆ ತಲೆಕೆಳಗಾಗಿ ಇಳಿಯುವ ಭಾಗ್ಯ ಪಡೆದಿಲ್ಲವಲ್ಲಾ! ಮತ್ತೆ ಕಾಲಿಗೇ ದೃಷ್ಟಿ ಸಂಯೋಜಿಸಿದರಾಯ್ತು ಎನ್ನಲು ನಾವು ಏಡಿಗಳಂತೆ ಚಾಚು ನೇತ್ರರೂ ಅಲ್ಲ. ಸೀದಾ ನಡೆದಿಳಿಯಲಾಗದ ಜಾರಿನಲ್ಲೆಲ್ಲಾ ನಾವು ಮೊದಲು ಪ್ರಪಾತಕ್ಕೆ ಬೆನ್ನು ಹಾಕಿ, ಕೈಗಳನ್ನು ಭದ್ರ ಹಿಡಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನಂತರ ಪ್ರತಿ ಹೆಜ್ಜೆಯಲ್ಲಿ ಇಳಿದಿಕ್ಕು ಸ್ಪಷ್ಟಪಡಿಸಿಕೊಳ್ಳುತ್ತಿರಬೇಕು. ಮತ್ತೆ ಏಣಿ ಇಳಿಯುವವನಂತೆ ಒಂದೊಂದೇ ಹೆಜ್ಜೆ ಕೆಳಬಿಟ್ಟು ‘ಮೆಟ್ಟಿಲು’ ದಕ್ಕುವವರೆಗೆ ಸಣ್ಣದಾಗಿ ಪರದಾಡಬೇಕು. ಮೇಲೆ ಹತ್ತುವಾಗ ಕೊಳ್ಳ ನಿರುಕಿಸುವ ಭಯದಿಂದ ವಿನಾಯ್ತಿ ಪಡೆದವರಿಗೆ ಇಲ್ಲಿ ಚಳಿ ಕೂರುವುದು ಖಾತ್ರಿ. ನೈಜ ಶಿಲಾರೋಹಣದಲ್ಲಿ ಹತ್ತಿದೆಲ್ಲಾ ಶಿಲಾಮುಖಗಳು ಇಳಿಯಲು ಹಾಗೇ ದಕ್ಕುತ್ತವೆ ಎಂದಿಲ್ಲ. ಹಾಗಾಗಿ ಕಡಿದಾದ ಶಿಲಾರೋಹಣದಲ್ಲಿ ‘ನೈಜ’ ಮತ್ತು ‘ಕೃತಕ’ ಎಂಬೆರಡು ಪಾಠ ಇದ್ದರೆ ಶುದ್ಧ ಶಿಲಾವರೋಹಣದಲ್ಲಿ ಹಗ್ಗಗಳನ್ನು ಬಳಸಿ ಮಾಡುವ ಕೃತಕ – ರ್ಯಾಪೆಲಿಂಗ್ (rapelling) ತಂತ್ರ ಒಂದೇ.

Continue reading

ಆಕಾಶ ಪಾತಾಳಗಳ ನಡುವೆ

ರಂಗನಾಥ ವಿಜಯ ಭಾಗ ಆರು
[ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ ಅಂತಾರಲ್ಲಾ ಹಾಗೆ) ಎನ್ನುವ ಭಾವದೊಡನೆ ರಂಗನಾಥ ಸ್ತಂಭ ಎಂಬ ದೈತ್ಯನ ಭುಜದಂಚಿನಲ್ಲಿ ನಿಲ್ಲಿಸಿದ್ದೆ. ‘ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು’ ಎಂದೇ ಮುಗಿಸಿದ್ದೆ. ಓ ಅದು ನಾವು ತಿರುಗಿದ್ದಲ್ಲ ಮಾರ್ರೇ ನಮ್ಮ ಕತ್ತು ಮಾತ್ರ ತಿರುಗಿದ್ದಪ್ಪಾ! ಬನ್ನಿ ಬನ್ನಿ ಮುಂದ್ ಹೋಪಾ...]

ರಂಗನಾಥ ಸ್ತಂಭದ ಉತ್ತರಮೈ ಕೆಳಗಿನಿಂದ ಮುಂಚಾಚಿಕೆಯಂತೇ ಇದ್ದರೂ ಮೇಲಿನಂಶ ನಮ್ಮಲ್ಲಿ ನವಚೇತನವನ್ನೇ ತುಂಬಿತು. ಉತ್ತಮ ಮಹಲುಗಳ ಹಿತ್ತಲ ಕುಪ್ಪೆಯಂತೆ ಇಲ್ಲಿ ಪುಡಿ ಬಂಡೆಗಳ ಒಟ್ಟಣೆ, ಹುಲ್ಲು, ಮುಳ್ಳು, ಬಳ್ಳಿಯೂ ಸಾಕಷ್ಟು ಕುದುರಿತ್ತು. ನಾವೋ ಚಿಂದಿ ಆಯುವವರು. ಆದರೂ ಒಂದು ಹೊತ್ತಿನ ದಿವ್ಯಕ್ಕಾಗಿ ‘ಕುಪ್ಪೆ’ ಕಂಡ ಸಂಭ್ರಮದಲ್ಲಿ ಆತುರ ತೋರದ ಸಂಯಮಿಗಳು. ಸುಮಾರು ಐವತ್ತಡಿ ಅಂತರದವರೆಗೆ ಸಣ್ಣ ಡುಬ್ಬದಂತೇ ಕಂಡರೂ ಅಭದ್ರ ರಚನೆಯಂತಿತ್ತು. ಆಚೆಗೆ ಅನತಿ ದೂರದಲ್ಲಿ ಶಿಖರವೇ ಕಾಣಿಸುತ್ತಿತ್ತು. ಇನ್ನಷ್ಟು ಉತ್ತರ ಮೈಗೆ ಸರಿದು ಅನ್ಯ ಸಾಧ್ಯತೆಗಳನ್ನು ಹುಡುಕಲು ಸಮಯವಿರಲಿಲ್ಲ. ಹಾಗಾಗಿ ಸ್ವಲ್ಪ ಅಪಾಯಕಾರಿಯೇ ಆದರೂ ಸರಿ ಎಂದು ಶಿಖರ ಸಾಧನೆಗೆ ಹೊಸ ಕೆಚ್ಚು ಮೂಡಿಸಿಕೊಂಡೆವು.

Continue reading

ಸಂದುಗೊಂದಿನಲ್ಲಿ ಉನ್ನತ ಚಿಂತನ

ರಂಗನಾಥ ವಿಜಯ – ಭಾಗ ಐದು

“ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯುವಿನಂತೆ ಕಣ್ಮರೆಯಾದರು. ದೇವಕಿಗೆ ಅಳುಕು, ಉಪಾಧ್ಯರಿಗೆ ನರಸೆಳೆತ, ಜೊನಾಸ್ ಬುರೂಸ್! ನಾನು?” ಬೆದರಿದ ಕಣ್ಣಿನಲ್ಲಿ ಎಲ್ಲ ಗ್ರಹಿಸುತ್ತ ಗಣಪತಿ ಭಟ್ಟರ ಸ್ವಗತ ನಡೆದಿತ್ತು. “ದೇವು ಸೊಂಟಕ್ಕೆ ಗಂಟು ಕೊಟ್ಟರು. ಮೇಲಿನಿಂದ ಅಭಯ ರೈಟ್ ಅಂದ. ನಾನು ಆ ಮೂವರ ಮೊತ್ತವೇ ಇರಬೇಕೆಂದುಕೊಳ್ಳುತ್ತಾ ಬಂಡೆ ಎದುರಿಸಿದೆ. ಕೆಳಮುಖವಾಗಿ ಹಿಡಿದ ಬೊಗಸೆ ಕೈಯಂತಿದ್ದ ೨೦-೨೫ ಅಡಿ ಎತ್ತರದ ಕೊರಕಲು – ಮೊದಲ ಸವಾಲು. ಅಂಚು ತುಳಿಯಬೇಕು, ಬಿರುಕಿಗೆ ಕಾಲು ಜಾರಬಾರದು. ಜಾರಿದರೆ ಕಾಲು ತುಂಡು ಗ್ಯಾರಂಟಿ. ಅವರಿವರ ಮಾರ್ಗದರ್ಶನದಲ್ಲಿ ಧೈರ್ಯ ಒಟ್ಟುಗೂಡಿಸಿ ಏರಿಯೇ ಬಿಟ್ಟೆ.”
Continue reading

ರಂಗನಂಘ್ರಿಗೆ ಮಣಿದೂ…

ರಂಗನಾಥ ಸ್ತಂಭ ವಿಜಯ – ಭಾಗ ನಾಲ್ಕು
ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ ಕ್ಷಣಾರ್ಧದಲ್ಲಿ ಮುಂದಿನ ಹೆಜ್ಜೆಗೆ ಅರಿವಿಲ್ಲದೆ ಪೂರ್ಣ ದಾಟಿಬಿಟ್ಟಿದ್ದೆ. ಅಕ್ಷರಶಃ ನನ್ನ ಕೂದಲೂ ಕೊಂಕಲಿಲ್ಲ. ಮೊದಲು ಆತಂಕದ ಭಾವ ಮತ್ತೆ ಬೈಗುಳ, ಎಚ್ಚರಿಕೆಗಳ ಸುರಿಮಳೆ. ಕೊನೇಗೆ ತರಹೇವಾರಿ ನಂಬಿಕೆಗಳ ಮೇಲೆ ಅದೃಷ್ಟದಿಂದ ದೇವರವರೆಗೆ ವಂದನಾರ್ಪಣೆ! ತೀವ್ರ ಏರಿಳಿತಗಳಲ್ಲಿ ನೇರ ಸಾಲು ಹಿಡಿಯಬಾರದು. ನಡೆಯುವಾಗಲೂ ಸೂಕ್ಷ್ಮ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಇತರರ ಚಲನವಲನಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ ಮುಂದುವರಿಯಬೇಕು. ಮೋಜಿಗೇ ಆದರೂ ಪ್ರಕೃತಿಯ ನೈಜ ಸಮತೋಲನವನ್ನು ತಪ್ಪಿಸಬಾರದು ಎಂಬಿತ್ಯಾದಿ ಪಾಠಗಳ ಮನನಕ್ಕೆ ಈ ಆಕಸ್ಮಿಕ ಅವಕಾಶ ಮಾಡಿಕೊಟ್ಟದ್ದಂತೂ ಖರೆ.

Continue reading