(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ)
ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ!

ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದ ‘ನಾಯಕ’ತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ (ಅತ್ರಿ – ಅಶೋಕ, ಆನಂದ, ಅನಂತ) ಹನುಮಂತನಗರ ಕಿಷ್ಕಿಂಧೆಯ ನೆನಪನ್ನೇ ಕೊಟ್ಟಿತು! ಅಲ್ಲಿನ ಸಂಜೆಗಳು ನನಗೆ ಆಸುಪಾಸಿನ ಮನೆಯ ಹುಡುಗರೊಡನೆ ದಾರಿಬದಿಯಲ್ಲೋ ಇನ್ನೂ ನಿವೇಶನಗಳಾಗಿ ಸ್ಪಷ್ಟ ಅಭಿವೃದ್ಧಿಗೊಳ್ಳದ ಹದಿನೈದನೇ ಅಡ್ಡ ರಸ್ತೆಯಿಂದಾಚಿನ ಮೈದಾನದಲ್ಲೋ ಕಬಡ್ಡಿ, ಕ್ರಿಕೆಟ್, ಗಾಳಿಪಟ, ಬುಗುರಿಯಾಟಗಳಲ್ಲಿ ಮುಗಿಯುತ್ತಿತ್ತು.

ಆಗ ಇಂದಿನಂತೆ ಸಿದ್ಧ ಗಾಳಿಪಟಗಳು ಮಾರಾಟಕ್ಕೆ ಸಿಗುತ್ತಿದ್ದದ್ದು ನನಗೆ ತಿಳಿದಿರಲಿಲ್ಲ. ಯಾರೋ ಸಹಪಾಠಿಯಿಂದ ಕಲಿತು, ಹಳೇ ಪತ್ರಿಕೆಯ ಪುಟಗಳಿಗೆ ಮನೆಯ ಹಿಡಿಸೂಡಿ ಕಡ್ಡಿ ಹೊಸೆದು, ಅನ್ನದ ಅಂಟು ಹಚ್ಚಿ ತೇಲಿಬಿಡುವ ನನ್ನ ಹುಚ್ಚಿಗೆ ಅಮ್ಮನ ಎಂಬ್ರಾಯಿಡರಿ ನೂಲೆಲ್ಲಾ ಖಾಲಿಯಾಗಿತ್ತು. “ಪಟ್ವೇನೋ ಮಾಡ್ಬೌದೂ. ಸೂಸ್ತ್ರ ಕಟ್ಟೋದೇ ಇರೋದು” ಎನ್ನುವ ಕೋಣಗಳ ನಡುವೆ ನಾನು ಅದೃಷ್ಟದಲ್ಲೆ ಜಾಣ ಅನ್ನಿಸಿಕೊಂಡಿದ್ದೆ! ಒಂದಕ್ಕೊಂದು ಜಂಟಿ ಹಾಕಿ ಐದು ಪಟದವರೆಗೂ ನಾನು ಗಾಳಿಗೇರಿಸಿದ್ದಿತ್ತು. ನಮ್ಮ ಮನೆಯ ಬೋಳು ತಾರಸಿಗೇರಿ (ಎರಡನೇ ಮಾಳಿಗೆ) ಪಟ ಏರಿಸಿದರೆ, ಅದು ಸಾಮಾನ್ಯವಾಗಿ ಯಾವುದೇ ಲೈಟ್ ಕಂಬ, ತಂತಿಗೆ ಸಿಗದಂತೆ ಮೇಲೇರಿ ಹಾರುತ್ತಿತ್ತು. ಇನ್ನೂ ದೊಡ್ಡ ಲಾಭವೆಂದರೆ ಕೊಳೆಗೇರಿಗಳೇ ಆಗಿದ್ದ ಅತ್ತಿತ್ತಣ ಹಳ್ಳಿಯ ಪೋಲಿ ಪಟಾಲಮ್ಮು ಎಟುಕಿಗೆ ನನ್ನ ಪಟ ನಿಲುಕದ ಎತ್ತರವನ್ನೂ ಸಾಧಿಸುತ್ತಿತ್ತು.

ಒಮ್ಮೆ ನನ್ನ ಐದು ತಲೆಯ ಪಟ ಏರೇರಿ ಹೋಗಿದೆ, ದಾರದುಂಡೆ ಕೊನೆಯಲ್ಲಿದ್ದೆ. ಆ ಎತ್ತರದಲ್ಲೆಲ್ಲೋ ಗಾಳಿ ಸಂಚಾರ ತಗ್ಗುತ್ತ ಬಂದು ದಾರ ಎಳೆದಷ್ಟೂ ಹೊಟ್ಟೆ ಬರತೊಡಗಿತು (ಜಗ್ಗಿ ಜೋತು ಬೀಳುವುದು). ಇದು ಗುತ್ತೇಹಳ್ಳಿ ಪೋಕರಿಗಳ್ಯಾರದೋ ಕಣ್ಣಿಗೆ ಬಿದ್ದು ‘ಆಪರೇಶನ್ ಹಿಜಾಕ್’ ಸುರು ಮಾಡಿದರು. ಒಂದು ಮಾರುದ್ದದ ಸ್ವಲ್ಪ ದಪ್ಪ ಹಗ್ಗದ ಎರಡೂ ಕೊನೆಗೆ ಸಮತೂಕದ ಎರಡು ಪುಟ್ಟ ಕಲ್ಲು ಕಟ್ಟಿ (ಲಂಗರು ಎನ್ನಿ. ಅಂದಿನ ಜನಪದ ಹೆಸರು ನನ್ನ ನೆನಪಿನಲ್ಲಿಲ್ಲ) ಮೇಲಕ್ಕೆ ಬೀಸಿ ಒಗೆಯುತ್ತಾರೆ. ಅದು ನಮ್ಮ ಪಟದ ದಾರಕ್ಕೆ ತೊಡರಿಕೊಂಡರೆ ಸಾಕು, ಮೊದಲೇ ಹೊಟ್ಟೆ ಬಂದ ದಾರ ಭಾರಕ್ಕೆ ಅಲ್ಲೇ ನೆಲಕ್ಕಿಳಿದು ಬಿಡುತ್ತದೆ. ನಾನು ‘ತುರ್ತು ಪರಿಸ್ಥಿತಿ’ ಘೋಷಿಸಿದ್ದೇ ನನ್ನ ಬಳಗ ತಾರಸಿಯ ಉದ್ದಗಲಕ್ಕೆ ದಾರ ಎಳೆದೆಳೆದು ಹಾಕತೊಡಗಿತು. ತ್ವರಿತ ತುಯ್ತದಲ್ಲಿ ಪಟ ತುಸು ಚೇತರಿಸಿಕೊಂಡು ಗುತ್ತೇಹಳ್ಳಿ ಲಂಗರು ತಪ್ಪಿಸಿಕೊಂಡರೂ ಇಲ್ಲೇ ಎರಡು ಗಲ್ಲಿಗಳಾಚೆ ನೆಲ ಮುಟ್ಟುವ ಅಂದಾಜು ಕಾಣಿಸಿತು. ಉಳಿದವರಿಗೆ ದಾರ ಎಳೆಯುವ ಕೆಲಸ ಬಿಟ್ಟು ನಾವಿಬ್ಬರು ದಡಬಡನೆ ತಾರಸಿ ಬಿಟ್ಟಿಳಿದು ಅತ್ತ ಓಡಿದ್ದೆವು. ಆದರೆ ಅಲ್ಲಿ, ಇನ್ನೇನು ವಿಜಯಲಕ್ಷ್ಮಿ ತನ್ನ ವರಣಮಾಲೆ ಹಿಡಿದು ಕಾದಿದ್ದಾಳೆ ಎನ್ನುವಾಗ ಹಾಜರಿದ್ದು ಐದೂ ಪಟ, ದಾರ ದಕ್ಕಿಸಿಕೊಂಡವ ರೌಡಿ ರುದ್ರ! ಯಾರೀ ರಕ್ಕಸ? ಅದಕ್ಕುತ್ತರ ಕಂಡುಕೊಳ್ಳುವ ಮೊದಲು ಅಣಿಗೊಳ್ಳಬೇಕಾದ ಇನ್ನೊಂದು ಪೂರ್ವರಂಗ – ನಮ್ಮ ಬಳಗದ ಇನ್ನೊಂದೇ ಆಟ, ಬುಗುರಿ.

ಆಚೀಚೆ ಮನೆಯ ಮೂರ್ನಾಲ್ಕು ಹುಡುಗರು ರಸ್ತೆ ಕರೆಯಲ್ಲೋ ಹಿತ್ತಿಲಿನ ದೂರದಲ್ಲಿ ಇನ್ನೂ ಮನೆಗಳು ಬಾರದ ಖಾಲಿ ನಿವೇಶನಗಳಲ್ಲೋ ಬುಗುರಿಯಾಟ ಆಡುವುದಿತ್ತು. ವಿವಿಧ ರೂಪಗಳ ಬುಗುರಿ ಮತ್ತು ಹಗ್ಗ (ಚಾಟಿ) ಅಂಗಡಿಯಿಂದ ಕೊಂಡು, ಅವಕ್ಕೆ ನಾವೇ ಆಣಿ (ಮೊಳೆ) ಹೊಡೆದುಕೊಳ್ಳಬೇಕಿತ್ತು. (ಅಂಗಡಿಯಿಂದ ಪ್ರತ್ಯೇಕ ಕೊಂಡ ಎರಡೋ ಮೂರೋ ಇಂಚಿನ ಆಣಿಯ ತಲೆ ತೆಗೆಯಬೇಕು, ಕೇವಲ ಬುಗುರಿ ತಿರುಗಿಸುವ ಚಂದಕ್ಕಾದರೆ ಮೊಂಡುಮೊನೆ ಸಾಕು. ಆದರೆ ಸ್ಪರ್ಧಾತ್ಮಕ ಆಟಗಳಿಗೆ ‘ಮಹಾಯುದ್ಧ’ ಸಿದ್ಧತೆಯೇ ಆಗುತ್ತಿತ್ತು ಬಾಲಸೈನ್ಯದಲ್ಲಿ! ಎದುರಾಳಿಯ ಬುಗುರಿಗೆ ಗುನ್ನ, ಗಾಯ ಮಾಡಲು ಚೂಪಿನ ವೈವಿಧ್ಯ, ಒಡೆದು ಹೋಳೇ ಮಾಡಿಬಿಡಲು ಬಾಚಿಮೊನೆಯನ್ನು ರೂಪಿಸುವುದೂ ಇರುತ್ತಿತ್ತು. ಪುಟ್ಟಪಥದ ಕಲ್ಲಿನಂಚಿಗೆ ಆಣಿ ಇಟ್ಟು ಒದಗಿಬಂದರೆ ಸುತ್ತಿಗೆ ಇಲ್ಲವಾದರೆ ಯಾವುದೋ ಕಲ್ಲಿನಲ್ಲಿ ಜಜ್ಜಬೇಕು, ಅಡಿ ಒತ್ತು ಸರಿಯಿಲ್ಲದೆ ಹಿಡಿದ ಬೆರಳಿಗೆ ಬರುವ ಆಘಾತ, ಗುರಿ ತಪ್ಪಿದರಂತೂ ಉಂಟೇ ಉಂಟು ಬೆರಳೇ ಜಜ್ಜಿಕೊಳ್ಳುವ ಕಷ್ಟ. ಮತ್ತೆ ಬುಗುರಿಗೇರಿಸುವಾಗ ವಾರೆಯಾಗಬಾರದು. ಹಾಗೂ ವಾರೆಯಾದರೆ ಅದನ್ನು ಕೀಳಲು ಅಮ್ಮನಿಗೆ ಗೊತ್ತಾಗದಂತೆ ಮನೆ ಬಾಗಿಲಿನ ಸಂದಿನಲ್ಲಿ ಇರುಕಿಸಿ ಎಳೆದು ತೆಗೆದು, ಹಳೇ ತೂತಕ್ಕೆ ಬೆಂಕಿಕಡ್ಡಿ ತುಂಡು ಜಡಿದು, ವೀರ ಫಲುಗುಣನಂತೆ ಒಕ್ಕಣ್ಣು ಮುಚ್ಚಿ, ಹೊಸದಾಗಿ ಗುರಿ ಹಿಡಿದು ಆಣಿ ಕುಟ್ಟಬೇಕು. ಮತ್ತೆ ಅದನ್ನು ಕಲ್ಲಿಗೆ ಉಜ್ಜುಜ್ಜಿ ಹದಬರಿಸಿ, ಬೆರಳಲ್ಲಿ ಮುಟ್ಟಿ ಆನಂದಿಸಿ, ಚಾಟಿ ಸುತ್ತಿ ಒಂದೆರಡು ಬಾರಿ ಆಡಿಸಿದಾಗಲೇ ಧೈರ್ಯ. [ಆರು ತಿಂಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಹುಡುಗರು ಬುಗುರಿಯಾಟದಲ್ಲಿ ತಲ್ಲೀನರಾಗಿದ್ದುದು ಕಂಡು ಭಾರೀ ಕುಶಿಯಾಯ್ತು. ಅವರಲ್ಲೊಬ್ಬ ನಮ್ಮ ಮೇಲೆ ಕೃಪೆಯಿಟ್ಟು ತಿರುಗುವ ಬುಗುರಿಯನ್ನು ತಮ್ಮನ ಹೆಂಡತಿ ಜಯಶ್ರೀ ಕೈಗೆ ಕೊಟ್ಟಿದ್ದ!]

ಆಟ ತೀರಾ ಸರಳ. ಮೊದಲು ಇದ್ದಷ್ಟು ಮಂದಿ ಅವರವರ ಬುಗುರಿಗಳಿಗೆ ಚಾಟಿ ಸುತ್ತಿ ವೃತ್ತಾಕಾರದಲ್ಲಿ ನಿಲ್ಲುತ್ತಿದ್ದೆವು. “ಒಂದೆರ್ಡ್ಮೂರ್” ಹೇಳಿ ಒಮ್ಮೆಲೆ ಎಲ್ಲ ಮಧ್ಯೆ ಬುಗುರಿಗಳನ್ನು ಮುಟ್ಟಿಸಿ (ಕುಡುಕರು ಚೀರ್ಸ್ ಹೇಳಿದಂತೆ) ಹೊರಕ್ಕೆ ತೆರೆದುಕೊಂಡು ಬುಗುರಿಯಾಡಿಸಬೇಕು. ಮತ್ತದನ್ನು ಹಗ್ಗದಲ್ಲಿ ಮೇಲೆ ಚಿಮ್ಮಿಸಿ (ಮಡಿಕೇರಿಯಲ್ಲಿ ಇದನ್ನು ಅಪೀಟ್ (= up it?) ಎನ್ನುತ್ತಿದ್ದೆವು. ಬೆಂಗಳೂರು ಜನಪದ ಮರೆತುಹೋಗಿದೆ) ಕೈಯಲ್ಲಿ ಹಿಡಿಯಬೇಕಿತ್ತು. ಇದರಲ್ಲಿ ಕೊನೆಯವನು ಸೋತವ. ಮುಂದಿನ ಹಂತದಲ್ಲಿ ನೆಲದಲ್ಲಿ ಸುಮಾರು ಎರಡಡಿ ವ್ಯಾಸದ ಸಣ್ಣ ವೃತ್ತ ಬರೆಯುತ್ತಿದ್ದೆವು. ಸೋತವನ ಬುಗುರಿಯನ್ನು ಅದರ ನಡುವಿನಲ್ಲಿಡುತ್ತಿದ್ದೆವು. ಅನಂತರ ಸರದಿಯ ಮೇಲೆ ಒಬ್ಬೊಬ್ಬರೆ ತಮ್ಮ ಬುಗುರಿಯಾಡಿಸುವುದರೊಡನೆ ವೃತ್ತದೊಳಗಿನ ಬುಗುರಿಯ ಮೇಲೆ ದಾಳಿ ಮಾಡುತ್ತಿದ್ದೆವು. ಮೊದಲೂ ಆಮೇಲೂ ಯಾವುದೇ ಕಾರಣಕ್ಕೆ ಬುಗುರಿ ತಿರುಗದೇ ಹೋದರೆ – ‘ಕೊಟ್ಟ’ (ಕೈ ಕೊಟ್ಟ? ಖೋಟಾ/ತಾ?) ಎನ್ನುತ್ತಿದ್ದೆವು. ಮತ್ತದೂ ಸೋತವನ ಜತೆಗೆ ವೃತ್ತದ ನಡುವಿಗೆ ಬರುತ್ತಿತ್ತು. ದಾಳಿಯ ಬುಗುರಿ ವೃತ್ತ ಬಡಿದರೂ ಅಲ್ಲೇ ಆಡುವಂತಿರಲಿಲ್ಲ. ಹೊಡೆಯುವಾಗಷ್ಟೇ ತಿರುಗಿದರೂ ಮತ್ತೆ ತಾನೇ ಹೊರಬಂದು ಖಾಲಿ ಬಿದ್ದರೂ ತೊಂದರೆಯಿಲ್ಲ. ಆದರೆ ಒಳಗೇ ತಿರುಗುತ್ತಿದ್ದು, ಸೋತವ/ರು ಅದನ್ನು ಕೈಯಾರೆ ಒತ್ತಿಬಿಟ್ಟರೆ ಅದಕ್ಕೂ ವೃತ್ತದೊಳಗೆ ಮಲಗಿ ಪೆಟ್ಟು ತಿನ್ನುವ ಯೋಗ. ದಾಳಿಯಲ್ಲಿ ಒಳಗಿನ ಬುಗುರಿ ವೃತ್ತದಿಂದ ಹೊರ ಸಿಡಿದರೆ ಎಲ್ಲ ಕೂಡಲೇ ಒಂದು ಅಪೀಟ್ ತೆಗೆಯಬೇಕು. ಮೊದಲು ಸೋತವ – ದಾಳಿಕೋರರ ಬುಗುರಿ ಒತ್ತಲೋ ಸಿಡಿದ ತನ್ನ ಬುಗುರಿಯನ್ನು ತುರ್ತಾಗಿ ಸಂಗ್ರಹಿಸಿ, ಆಡಿಸಿ, ಅಪೀಟ್ ತೆಗೆಯಲು ಹೊಂಚುತ್ತಲೇ ಇರುತ್ತಾನೆ. ಮತ್ತೆ ಸೋತವನ ಬುಗುರಿ ವೃತ್ತದೊಳಗೆ ಮಲಗುತ್ತದೆ, ಆಟಕ್ಕೆ ಮುಕ್ತಾಯ ಇಲ್ಲ.

ಬುಗುರಿ ದಾಳಿಯಲ್ಲಿ ಹಲವು ವಿಧಗಳಿವೆ. ಮಿತ್ರರು, ಸೌಮ್ಯರು ತಮ್ಮ ಬುಗುರಿಯ ದೇಹವನ್ನಷ್ಟೇ ಸೋತ ಬುಗುರಿಗೆ ತಾಗಿಸಿ ಅದು ಹೊರ ರಟ್ಟುವಂತೆ ನೋಡಿಕೊಳ್ಳುವುದಿದೆ. ಆದರೆ ಹೆಚ್ಚಿನವರು ತಮ್ಮ ಬುಗುರಿಯ ಆಣಿಯೇ ಇನ್ನೊಂದು ಬುಗುರಿಯ ದೇಹಕ್ಕೆ ಅಪ್ಪಳಿಸಿ ಗಾಯ (‘ಗುನ್ನ’ ಎಂದೇ ಕೇಳಿದ ನೆನಪು) ಮಾಡಬೇಕು, ಕೆತ್ತೆ ಎಬ್ಬಿಸಬೇಕು, ಎರಡು ಹೋಳೇ ರಟ್ಟಿಸಬೇಕು ಎಂದೇ ಪ್ರಯತ್ನಿಸುತ್ತಿದ್ದರು. ಅದಕ್ಕೆ ಸರಿಯಾಗಿ ಮೊಳೆಗಳ ಚೂಪೂ ಆಡಿಸುವ ಶೈಲಿಯನ್ನೂ ರೂಢಿಸಿಕೊಂಡಿರುತ್ತಾರೆ. ಭರ್ಚಿ ಎಸೆಯುವವನಂತೆ (ಜ್ಯಾವೆಲಿನ್ ತ್ರೋ) ವೃತ್ತದ ಹೊರ ಅಂಚಿಗೆ ಒಂದು ಕಾಲು ಬಡಿದು ಚಾಟಿ ಬೀಸುವ ಭಂಗಿ ಸಾಮಾನ್ಯವಲ್ಲ. ಅಂಥವರ ತೂಕದ ಬುಗುರಿಗಳೂ ಹಾಗೇ ‘ಗಕ್’ಎಂದು ಸೋತ ಬುಗುರಿಗೋ (ಗುರಿ ತಪ್ಪಿದರೆ) ನೆಲಕ್ಕೋ ಅಪ್ಪಳಿಸಿ, ಮಣ್ಣು ಚಿಮ್ಮಿ, ‘ಘೂಂ’ ಎಂದು ವೃತ್ತದಿಂದ ಹೊರಕ್ಕೆ ಪುಟಿಯುತ್ತಿದ್ದವು. ಅಂಥವರ ಚಾಟಿಯ ನೇಯ್ಗೆ, ತೋರ, ಉದ್ದ, ಸುತ್ತುವ ಕ್ರಮ, ಬುಗುರಿಯನ್ನು (ಅನಿಲ್ ಕುಂಬ್ಳೆ ಪ್ರತಿ ಎಸೆತಕ್ಕೂ ಬೆರಳುಗಳಿಂದ ಚೆಂಡನ್ನು ಆವರಿಸುವ ಶೈಲಿಯಂತೇ) ಹಿಡಿಯುವ ಪರಿ, ಆಣಿಯ ಮೊನೆಯನ್ನು ನಾಲಿಗೆಗೆ ಮುಟ್ಟಿಸಿ ಗುರಿ ಕಾಯಿಸಿ ಬಿಡುವ ಶೈಲಿ, ಪ್ರತಿ ಹೆಜ್ಜೆಯಲ್ಲೂ ಅಮಿತ ಪರಿಣತಿ ಇರುತ್ತದೆ. ಸವಕಳಿಯಲ್ಲಿ ಸುಂಗೆದ್ದ ಚಾಟಿಗೇ ಕೆಲವೊಮ್ಮೆ ಬುಗುರಿ ತೊಡರಿ, ‘ಸರ್ಕೆ’ಂದು ಬರುವ ಮರುಹೊಡೆತ (ಬೂಮ್ ರ‍್ಯಾಂಗಿನ ಹಾಗೇ) ಬಲು ಅಪಾಯಕಾರಿ. (ಇದರಲ್ಲಿ ಕಣ್ಣೋ ಹಲ್ಲೋ ಜಖಂಗೊಂಡವರ ಕತೆಗಳನ್ನೂ ಕೇಳಿದ್ದೇನೆ! ಶಾಲೆಯಲ್ಲಿ ಕೆಲವೊಮ್ಮೆ ಮಾಷ್ಟ್ರುಗಳು ಹುಡುಗರ ಕಿಸೆ, ಚೀಲ ತನಿಖೆ ಮಾಡಿ, ನಿಷೇಧಿತ ಬಾಂಬಿನಂತೆ ಬುಗುರಿ ವಶಪಡಿಸಿಕೊಳ್ಳುತ್ತಿದ್ದುದೂ ಉಂಟು!). ಇನ್ನು ಸುತ್ತಿದ ಚಾಟಿ ಸಡಿಲಾಗಿಯೋ ಬುಗುರಿಯ ಮೈ ನುಣುಪಾಗಿಯೋ ಬೀಸಿನ ವರಿಸೆ ತಪ್ಪಿಯೋ (ನೋ ಬಾಲ್?) ತಿರುಗದ ಬುಗುರಿ ಎಸೆದು ಹೋಗುವುದೂ ಇತ್ತು.

ಬುಗುರಿಯಾಟಕ್ಕೆ ಮಣ್ಣಿನ ಅಂಕಣ ಯಾವತ್ತೂ ಸಿಗುತ್ತಿರಲಿಲ್ಲ. ಆಗಂತೂ ನಡುನಡುವೆ ಆಡುವವರ ದಾಳಿಯ ಶೈಲಿಯನುಸರಿಸಿ ಮೊಳೆ ಒಳಗೆ ಸೇರಿ ಗಿಡ್ಡವಾಗುತ್ತ ಬರುವುದಿತ್ತು. ಅಂಥವರು ‘ಟೈಂಪೀಸ್’ (= time please?) ಕೇಳಿಕೊಂಡು, ಅಲ್ಲಲ್ಲೇ ಅವಸರವಸರವಾಗಿ ಪುಟ್ಟಪಥದ ಕಲ್ಲಿನ ಇರುಕಿಗೆ ಆಣಿ ಸಿಲುಕಿಸಿ ತೆಗೆದು, ತೂತಕ್ಕೆ ಹೊಸದಾಗಿ ಬೆಂಕಿಕಡ್ಡಿ ಮೋಟು ತುರುಕಿ ಮತ್ತೆ ಮೊಳೆ ಜಡಿದು, ಮೊನೆ ಸರಿ ಮಾಡಿ ದಾಳಿಗಿಳಿಯುವ ಪರಿ ನೆನೆಸಿಕೊಳ್ಳುವಾಗ, “ಮುರಿಯಲಾಗದು ಶಸ್ತ್ರಧಾರಾ ಪರಮತೀರ್ಥಸ್ನಾನ” ಎಂದ ಕೇವಲ ಚಂಡಿಯುಟ್ಟು ಬರೆದ ಕುಮಾರವ್ಯಾಸನೂ ಬಾಲ್ಯದಲ್ಲಿ ಬುಗುರಿಯಾಡಿದವನೇ ಇರಬೇಕು ಅನಿಸುತ್ತದೆ!

ಆಟದ ಬಿರುಸಿನಲ್ಲಿ ಎಷ್ಟೋ ಬಾರಿ ನಮ್ಮ ಬುಗುರಿಗಳು ಮಳೆನೀರ ಗಂಡಿಗಳ ಮೂಲಕ ಮೋರಿಗಳ ಕತ್ತಲಕೂಪಕ್ಕೆ ಸಂದು ಹೋಗುತ್ತಿತ್ತು. ಈ ಗಂಡಿಬಾಯಿಗಳಾದರೋ ಪರೋಕ್ಷ ಕಸತೊಟ್ಟಿಯೇ ಆಗಿರುತ್ತಿದ್ದುವು. ಆಸುಪಾಸಿನ ಮನೆಗಳು ಉಳದದ್ದು ಕೊಳತದ್ದು ಬರುತ್ತಿದ್ದದ್ದು ಈ ಗಂಡಿಬಾಯಿಗೇ. ಸೋರುಮೂಗಿನವರು ಇಲ್ಲೇ ಒಮ್ಮೆಗೆ ಒಣ ಉಸಿರು ತೆಗೆದಿರಬೇಕು ಎನ್ನುವುದಕ್ಕೆ ಒತ್ತಿನ ಲೈಟ್ ಕಂಬವೂ ಸಾಕ್ಷಿ ಹೇಳುತ್ತಿತ್ತು. ಪ್ರಜ್ಞಾವಂತ ಉಗುಳುಪ್ರಿಯರು ನಾಭೀಮೂಲದಿಂದ ಹೂಂಕರಿಸಿ ವರ್ಣಮಯ ಶ್ಲೇಷ್ಮ ಚೆಲ್ಲುವುದೂ ಅಲ್ಲೇ. ಅಂಥಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಕೋಲೋ ಕೊಡೆಯೋ ಹಿಡಿದು ಕಣ್ಣು ಚೂಪು ಮಾಡಿ ಬುಗುರಿ ಎಳೆಯುವ ಪ್ರಯತ್ನ ನಾವು ಮಾಡಹೊರಟರೆ ನಮ್ಮ ಹಿಂದಿನ ಮೂರು ತಲೆಮಾರೆಲ್ಲಾ ನರಕಕ್ಕೆ ಬಿದ್ದುಹೋದೀತು. ಆಗ ನಮಗೆ ನೆನಪಾಗುತ್ತಿದ್ದವನೂ ರೌಡಿರುದ್ರನೇ.

ಹನುಮಂತನಗರದ ವಲಯದಲ್ಲಿ ನಮ್ಮ ದಿಗಂತಕ್ಕೆ (ಬಹಳ ದೊಡ್ಡದೇನಲ್ಲ) ಸಿಗುತ್ತಿದ್ದ ಮೂರು ಎತ್ತರದ ಸ್ಥಳಗಳು – ಬಸವನಗುಡಿ ಅಥವಾ ಬ್ಯೂಗಲ್ ರಾಕ್, ನರಹರಿಬೆಟ್ಟ ಮತ್ತು ಹನುಮಂತನ ಗುಡ್ಡ. ಬಸವನ ಗುಡಿ ಅಥವಾ ಅದಕ್ಕೆ ಸಂಬಂಧಪಟ್ಟ ಕಳ್ಳೇಕಾಯಿ ಪರಿಸೆ (ವರ್ಷಾವಧಿ ಜಾತ್ರೆ ಅನ್ನಿ) ನನಗೇನೂ ಆಕರ್ಷಣೆ ಮೂಡಿಸಿರಲಿಲ್ಲ. ಉಳಿದ ಕಾಲಗಳಲ್ಲಿ ಅಲ್ಲಿನ ಪುಡಿ ಬಂಡೆಗಳು ಮತ್ತು ಹನುಮಂತನ ಗುಡ್ಡೆಯ ಬಂಡೆಗಳ ಮೇಲೇರಿ ಓಡಾಡುವುದು, ನನ್ನೊಳಗಿನ ಟಾರ್ಜಾನ್, ಫ್ಯಾಂಟಮ್‌ಗಳಿಗೆ ತುಂಬಾ ತೃಪ್ತಿ ತರುತ್ತಿತ್ತು. ಆದರೆ, ಅಲ್ಲೂ ನನ್ನನ್ನು ಆಂತರ್ಯದಲ್ಲಿ ಕಾಡುತ್ತಿದ್ದ ಭಯ ರೌಡಿರುದ್ರನದ್ದೇ! ವಾಸ್ತವದಲ್ಲವನು ಹೆಚ್ಚು ಕಡಿಮೆ ನನ್ನ ಸಮಪ್ರಾಯದ, ಆದರೆ ದೇಹಗಾತ್ರದಲ್ಲಿ ನನ್ನ ಭುಜಕ್ಕೂ ಬಾರದ ಒಣಕಲ ಪೋರ (ಬೆಳೆದವರ ಭಾಷೆಯಲ್ಲಿ ಮಾತ್ರ ರೌಡಿ). ಹನುಮಂತನಗರದ ಒತ್ತಿನ ಸುಂಕೇನಹಳ್ಳಿಯ ಚಿಲ್ರೆ ಸೌದೆ ಡಿಪೋ-ಮನೆಯ ಸದಸ್ಯ ಈ ರುದ್ರ; ದಾರಿದ್ರ್ಯ, ಅವಿದ್ಯಾವಂತಿಕೆ, ಸರಿಯಾಗಿ ಹೇಳಿಕೇಳುವವರಿಲ್ಲದ ಅವ್ಯವಸ್ಥೆಗಳ ಮೂರ್ತರೂಪ. ಎಣ್ಣೆ ಕತ್ತರಿ ಮತ್ತು ಬಾಚಣಿಗೆ ಕಾಣದ ಕೂದಲು, ನೀರು ಸೋಪೂ ಮುಟ್ಟದ ಮೈ, ‘ಮರ್ಯಾದ’ಸ್ತರ ಲೆಕ್ಕದಲ್ಲಿ ಬಟ್ಟೆಯೇ ಅಲ್ಲದ/ ಇಲ್ಲದ ಉಡುಪು. ಆದರೂ ಬಾಲ ಬಯಕೆಯಲ್ಲಿ, ಬದುಕುವ ಛಲದಲ್ಲಿ ಅವನಿಗೆ ಭಂಡತನವೇ ಬಂಡವಾಳ. (ಸರಿ ತಿಂದು ತಿದ್ದಿ ಬೆಳೆದ, ಆಡುಮಾತಿನಲ್ಲಿ ಹೇಳುವುದಾದರೆ ಅವನ ಎರಡರಷ್ಟಿದ್ದ ನನ್ನಂತವರಿಗೆ ಪುಕ್ಕುತನವೇ ಕಡಿವಾಣ!) ನಾವು ಐದು ಪೈಸೆ ತೋರಿದರೆ ಆತ ನಿರ್ಯೋಚನೆಯಿಂದ ಮಳೆನೀರ ಗಂಡಿಯೊಳಗೆ ದೇಹ ತೂರಿಸಿ ಬುಗುರಿ ಎತ್ತಿ ಕೊಡುತ್ತಿದ್ದ. ಆದರೆ ಅಕಸ್ಮಾತ್ ಅದು, ಅಥವಾ ಇನ್ನೆಂದಾದರೂ ನಮ್ಮ ಇನ್ಯಾವುದೇ ಚಿಲ್ಲರೆ ಆಟದ ಸಾಮಾನುಗಳು ಅವನಿಗೇ ಬೇಕನ್ನಿಸಿಬಿಟ್ಟರೆ ಮಾತ್ರ ನಾವು ಉದಾರಿಗಳಾಗುವುದು ಕಡ್ಡಾಯವಾಗುತ್ತಿತ್ತು! ಸೂತ್ರಹರಿದು ಪಟ ಗೋತಾ ಹೊಡೆದಂತೆ, ಹಿಂಪೆಟ್ಟಿಗೆ ನಮ್ಮ ಬುಗುರಿಯೇ ಹೋಳಾಗಿಬಿದ್ದಂತೆ, ಬೌಂಡ್ರಿ ನಿರೀಕ್ಷೆಯ ಟೆನಿಸ್ ಚೆಂಡು ಸಿಟಿಬಸ್ಸಿನ ಟೈರಡಿಗೆ ಸಿಕ್ಕಂತೆ ಎಲ್ಲ ರುದ್ರಂ ಸಮರ್ಪಯಾಮೀ!!

ಶ್ರೀ ರಾಮಕೃಷ್ಣ ಆಶ್ರಮ

ಶ್ರೀರಾಮಕೃಷ್ಣಾಶ್ರಮ ತನ್ನ ಶಾಖೆ ಹೊಂದಿದ ಊರೂರುಗಳಲ್ಲಿ ಸಾರ್ವಜನಿಕದಲ್ಲಿ ಅಧ್ಯಾತ್ಮಿಕ ಜಾಗೃತಿಯೊಡನೆ ವಿಭಿನ್ನ ಸಾಮಾಜಿಕ ಹೊಣೆಗಾರಿಕೆಗಳನ್ನೂ ನಿಭಾಯಿಸುತ್ತದೆ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹಾಗೆ ಬೆಂಗಳೂರಿನ ಶಾಖೆ ಬೇರೆ ಬೇರೆ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ತನ್ನದೇ ಶಿಸ್ತಿನಲ್ಲಿ ಊಟವಸತಿಯ (ಉಚಿತವಲ್ಲ, ನ್ಯಾಯಯುತವಾದ ಶುಲ್ಕದಲ್ಲೇ) ವ್ಯವಸ್ಥೆಯನ್ನು ಆದ್ಯತೆಯಲ್ಲೇ ನಿರ್ವಹಿಸುತ್ತದೆ. ಆದರೆ ನಗರದ ಗಾತ್ರಾನುಗುಣವಾಗಿಯೋ ಏನೋ ಮಠ ಕೇಂದ್ರವಾದ ಆಧ್ಯಾತ್ಮಿಕ ಜಾಗೃತಿಯನ್ನು ಸ್ವಲ್ಪ ದೊಡ್ಡದೇ ಮಟ್ಟದಲ್ಲಿ ನಿರ್ವಹಿಸುತ್ತದೆ. ಸಾರ್ವಜನಿಕ ನೆಲೆಯಲ್ಲಿ ಧ್ಯಾನ, ಭಜನೆ, ಸರ್ವಧರ್ಮ ಸಮಭಾವದ ಹಬ್ಬಗಳಾಚರಣೆ, ಪ್ರವಚನಗಳು, ಪುಸ್ತಕ ಮಾರಾಟ ಮುಂತಾದವುಗಳನ್ನು ತನ್ನದೇ ಶಿಸ್ತಿನಲ್ಲಿ ನಡೆಸುತ್ತದೆ. ಅದಕ್ಕೆ ಪೂರಕವಾಗಿ (ಮುಖ್ಯವಾಗಿ) ಪ್ರೌಢಶಾಲಾ ಮಟ್ಟದ ಬಾಲಕರನ್ನೂ ಒಳಗೊಳ್ಳುವಂತೆ ಎರಡು ವಿಧದ ವಿವೇಕಾನಂದ ಬಾಲಕ ಸಂಘವನ್ನು ನಡೆಸುತ್ತಿತ್ತು. ಒಂದು ದೈನಂದಿನ ಸಂಜೆ ಕೂಟದ್ದಾದರೆ ಇನ್ನೊಂದು ವಾರಾಂತ್ಯಗಳಲ್ಲಿ ಪೂರ್ವಾಹ್ನದ ಕೂಟವಾಗಿತ್ತು. ನಾನು ಅದರ ವಾರಾಂತ್ಯದ ಕೂಟದ ಸದಸ್ಯನಾಗಿದ್ದೆ. (ನನಗಿಂತ ಎರಡೋ ಮೂರೋ ವರ್ಷ ಹಿರಿಯ ಮತ್ತು ದೈನಂದಿನ ಸಂಘದ ಸದಸ್ಯರಾಗಿ ಬೆಳೆದು ಬಂದವರು ಇಂದಿನ ಬಿಳಿಗಿರಿ ರಂಗನ ಬೆಟ್ಟದ ಖ್ಯಾತಿಯ ಮ್ಯಾಗ್ಸೇಸೇ ಪುರಸ್ಕೃತ ಡಾ| ಸುದರ್ಶನ್.)

ಆದಿತ್ಯವಾರದ ಬಳಗದಲ್ಲಿದ್ದ ಐವತ್ತರವತ್ತು ಮಂದಿಯಲ್ಲಿ ನಾಲ್ಕೈದು ತುಕಡಿಗಳನ್ನು ಮಾಡಿ ವ್ಯಾಯಾಮ, ಸೇವೆ, ಆಟ, ಭಜನೆ, ಅಧ್ಯಾತ್ಮಿಕ ವಿಚಾರ ಮುಂತಾದವುಗಳನ್ನು ಪ್ರಾಥಮಿಕ ಮಟ್ಟದಲ್ಲಿ ಪ್ರೀತಿಯಿಂದ ಪ್ರಸರಿಸುತ್ತಿದ್ದರು. ಇಲ್ಲಿ ನಾನು ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಕೊಕ್ಕೋಗಳನ್ನು ಕಲಿತು ಮನದಣಿಯೆ ಆಡಿದ್ದೇನೆ. ನಾನು ಎಂದೂ ಹಾಡುಗಾರನಲ್ಲ. ಆದರೆ ಇಂದೂ ನಾನು ಖಾಸಾ ಲಹರಿಯಲ್ಲಿ ಸಾಕಷ್ಟು ಗಟ್ಟಿಯಾಗಿಯೇ ಗುನುಗಿಕೊಳ್ಳುವ ಬಹುತೇಕ ದಾಸರ ಪದಗಳು ಮತ್ತು ಇತರ ಭಾರತೀಯ ಸಂತರುಗಳ ಮನದುಂಬುವ ಭಕ್ತಿ ಸಂಗೀತದ ಅಡಿಪಾಯ ಆಶ್ರಮದ್ದೇ. ನನಗೆ ವೇದೋಪನಿಷತ್ತಾದಿ ಭಾರತೀಯ ಧರ್ಮಶಾಸ್ತ್ರಗಳ ಪ್ರಾಥಮಿಕ ಪರಿಚಯ (ಇಂದು ನನಗೆ ಬರುವ ಎಷ್ಟೋ ಶಾಂತಿಮಂತ್ರಗಳನ್ನು ಸ್ವರ ಮತ್ತು ಅರ್ಥ ಸಹಿತ ರೂಢಿಸಿದ್ದೇ ರಾಮಕೃಷ್ಣಾಶ್ರಮ) ನೀಡಿದ್ದೇ ವಿವೇಕಾನಂದ ಬಾಲಕ ಸಂಘ. ಆಶ್ರಮದ ಒಳಗಿನ ದಾರಿ, ಸಾರ್ವಜನಿಕರ ಓಡಾಟದ ವಠಾರಗಳ ಕಸಗುಡಿಸುವುದು, ಪ್ರಾರ್ಥನ ಮತ್ತು ಪ್ರವಚನ ಮಂದಿರಗಳದ್ದು ನೆಲ ಬಳಿಯುವುದೂ ನಮಗಲ್ಲಿ ಗೌರವದ ಕಾಯಕವಾಗಿ ರೂಢಿಸಿತು. ಇನ್ನು ವಿಶೇಷ ದಿನಗಳಲ್ಲಿ ನಮ್ಮ ಸಮಯಾನುಕೂಲ ನೋಡಿಕೊಂಡು ಹೆಚ್ಚುವರಿ ಸ್ವಯಂಸೇವಕರಾಗಿ ಎಲ್ಲಾ ಬಗೆಯ ನಿಜ ಕೆಲಸಗಳನ್ನು ಮಾಡುವಲ್ಲಿ ಆಶ್ರಮ ನಮಗೆ ಮುಕ್ತವಾಗಿ ಮತ್ತು ಪ್ರೀತಿಯಿಂದ ಅವಕಾಶ ಕೊಡುತ್ತಲೇ ಇತ್ತು. (ಎರಡು ವಿಸ್ತರಣೆ: ಈಚಿನ ದಿನಗಳಲ್ಲಿ ಬಹುತೇಕ ಸ್ವಯಂಸೇವೆ ನಡೆಯುವುದೇ ಸ್ವ-ಪ್ರದರ್ಶನಕ್ಕಾಗಿ ಎಂಬಂತಾಗಿದೆ. ಹಾಗಾಗಿ ನಾನು ನಿಜ ಕೆಲಸಗಳನ್ನು ಎಂದು ಒತ್ತಿ ಹೇಳಿದ್ದೇನೆ. ಇನ್ನೊಂದು ಮುಖ್ಯ ವಿಚಾರ, ಬಾಲಕ ಸಂಘದ ಸೇವೆಗಳು ಎಂದೂ ಆಶ್ರಮದ ‘ಹಣ ಉಳಿತಾಯದ’ ಯೋಜನೆಗಳಾಗಿ ನಮಗೆ ಕಾಣಿಸಿದ್ದೇ ಇಲ್ಲ. ನಮ್ಮ ಕಾಯಕದ ಕೊರತೆಯಿಂದ ಅಲ್ಲಿನ ಯಾವುದೇ ಕೆಲಸಗಳು ವಿಳಂಬಿಸಿದ್ದಾಗಲೀ ನಿಂತದ್ದಾಗಲೀ ನನಗೆ ತಿಳಿದಿಲ್ಲ.) ಈ ಹೆಚ್ಚುವರಿ ಕಾಯಕದಲ್ಲಿ ನಾನು ಆಶ್ರಮದ ಪುಸ್ತಕ ಮಳಿಗೆಯೊಡನೆ ಬೆಳೆಸಿಕೊಂಡ ಸಂಬಂಧ ಮುಂದೆ ಮೂವತ್ತಾರು ವರ್ಷಗಳುದ್ದಕ್ಕೆ, ನಾನು ವೃತ್ತಿ ಪುಸ್ತಕ ವ್ಯಾಪಾರಿಯಾಗಿ ನಿಂತಾಗ ಮತ್ತೆ ಮತ್ತೆ ಮಧುರ ನೆನಪಾಗಿ ಉಲ್ಲೇಖಕ್ಕೊದಗುತ್ತಿತ್ತು. ಇಂದು ನಾನು ದೇವಶ್ರದ್ಧೆ, ತತ್ವಶಾಸ್ತ್ರಗಳ ಆಳ, ಸಮಾಜ ಸೇವೆಯ ವಿಸ್ತಾರ ಮೊದಲಾದವುಗಳಲ್ಲಿ ಖಂಡಿತಾ ಇಲ್ಲ. ಆದರೆ ನನ್ನೆಲ್ಲ ಕೆಲಸಗಳಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ವಿವೇಕಾನಂದ ಬಾಲಕ ಸಂಘದ ಸತ್ಪ್ರಭಾವ ನಿಸ್ಸಂದೇಹವಾಗಿದೆ.

ಹನುಮಂತನ ಗುಡ್ಡದಿಂದ ಹೊರಟ ನಾವಿಬ್ಬರು ದಾರಿಯಲ್ಲೇ ಸಿಗುವ ಶ್ರೀರಾಮಕೃಷ್ಣಾಶ್ರದ ವಠಾರವನ್ನು ಸುಮಾರು ಅರ್ಧ ಮುಕ್ಕಾಲು ಗಂಟೆ ಬಲು ಪ್ರೀತಿಯಿಂದ ಸುತ್ತು ಹಾಕಿ ಮನೆ ಸೇರಿದೆವು.

ಭೂಮಿಯಷ್ಟೇ ಅಲ್ಲ, ಬೆಂಗಳೂರೂ ಉರುಟಾಗಿದೆ!

ಬೆಂಗಳೂರು ಭೇಟಿಯ ಕೊನೆಯಲ್ಲಿ ನಾವು ಹಾಗೇ ಬೈಕೇರಿ ನಾಲ್ಕೈದು ದಿನಗಳ ಮಟ್ಟಿಗೆ ಸ್ವಲ್ಪ ಹೊರರಾಜ್ಯಗಳಲ್ಲಿ ಸುತ್ತಬೇಕೆಂದೂ ಯೋಚಿಸಿದ್ದೆವು. ಅದಕ್ಕೆ ನನಗೆ ಬಲವತ್ತರವಾಗಿ ಆಕರ್ಷಿಸಿದ ಸ್ಥಳ – ಆಶ್ಚರ್ಯಪಡಬೇಡಿ, ತಿರುಪತಿ! ೧೯೬೨-೬೫ರ ದಿನಗಳಲ್ಲಿ (ನಾನು ಐದಾರನೇ ತರಗತಿಯಲ್ಲಿದ್ದಿರಬೇಕು) ನಮ್ಮ ಕುಟುಂಬ ಬಳ್ಳಾರಿಯಲ್ಲಿತ್ತು. ನನ್ನ ತಂದೆ ವೃತ್ತಿ ನಿಮಿತ್ತ ಅನಿವಾರ್ಯತೆಯಲ್ಲಿ ಸ್ವಲ್ಪ ಊರು ಸುತ್ತಿದ್ದಿದೆ. ಆದರೆ ಬಯಸಿ, ಪ್ರವಾಸ ಅಥವಾ ಕುಟುಂಬದೊಡನೆ ಸುತ್ತಾಟ ಎನ್ನುವುದನ್ನು ಎಂದೂ ಇಷ್ಟಪಟ್ಟವರೇ ಅಲ್ಲ. ಅದೂ ತೀರ್ಥಯಾತ್ರೆ, ಅವರ ಪಟ್ಟಿಯಲ್ಲಿ ಇರುವುದು ಸಾಧ್ಯವೇ ಇರಲಿಲ್ಲ. ಆದರೂ ಏನು ಪ್ರೇರಣೆಯೋ ಏನು ಒತ್ತಾಯವೋ ತಿಳಿದಿಲ್ಲ. ಬಳ್ಳಾರಿಯಿಂದ ನಮ್ಮನ್ನೆಲ್ಲ ಕೂಡಿಕೊಂಡು ತಿರುಪತಿ ಪ್ರವಾಸ ನಡೆಸಿದ್ದರು. ಅಲ್ಲಿದ್ದ ಒಂದೆರಡು ದಿನಕ್ಕೆ ಪೂರ್ವ ನಿಗದಿಯಾಗಿದ್ದ ಸಣ್ಣ ಮನೆ (ಡಾರ್ಮಿಟರಿ), ಬಿಸಿನೀರ ವ್ಯವಸ್ಥೆ ಸಿಗದೆ ಅಲ್ಲಿ ತಣ್ಣೀರು ಮಿಂದು ಮರಗಟ್ಟಿದಂತಾದದ್ದು, ಲಡ್ಡುಪ್ರಸಾದಕ್ಕೆ ಪಡೆಯುವಲ್ಲಿ ನೂಕುನುಗ್ಗಲಾದದ್ದು, ದೇವಳದ ಕೆರೆ ಕೊಚ್ಚೆ ಗುಂಡಿಯಂತೆ ಇದ್ದದ್ದು, ಪಾಪನಾಶಿನಿ ಜಲಪಾತದ ಬಳಿ ಹೋದದ್ದು ಹೀಗೆ ಅಸಂಬದ್ಧ ನೆನಪಿನ ತುಣುಕುಗಳಷ್ಟೇ ನನ್ನಲ್ಲಿತ್ತು.

ತಿರುಗಾಟ ನನಗಂತೂ ಪ್ರಿಯ ಹವ್ಯಾಸ. ಹಾಗೇ ನನ್ನ ವೃತ್ತಿ-ಹವ್ಯಾಸಗಳ ದಿನಗಳಲ್ಲಿ ಎಷ್ಟೂ ತಿರುಪತಿ ಯಾತ್ರಾ ವಿವರಗಳನ್ನು ಕೇಳುತ್ತಿದ್ದೆ. ನಾವು ಯೋಚಿಸಿಯೇ ಎರಡು ಬಾರಿ ಭಾರತವನ್ನು ಬೈಕಿನಲ್ಲಿ ಸುತ್ತಿಯೂ ಬಂದೆವು. ಆದರೆ ಎಂದೂ ಮನಸ್ಸಿನಲ್ಲಿ ತೀರಾ ಮಸುಕಾಗಿದ್ದ ತಿರುಪತಿ ಚಿತ್ರವನ್ನು ಶುದ್ಧಗೊಳಿಸಬೇಕು ಎಂದು ಅನಿಸಿದ್ದೇ ಇಲ್ಲ. ಆದರೆ ಈಚೆಗೆ ಮೊದಲು ಗೆಳೆಯ ಕೆ. ಎಲ್ ರೆಡ್ಡಿ, ಮೊನ್ನೆ ಮೊನ್ನೆ ತಮ್ಮ ಅನಂತನೂ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗಿ ಬಂದು ಕಥಿಸುವಾಗ (ರುಕ್ಮಿಣಿಯ ಪ್ರವಾಸಕಥನಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ) ಯಾಕೋ ಅಲ್ಲಿ ನಾನೂ ನೋಡುವಂತದ್ದಿದೆ ಎಂದನ್ನಿಸಿತು. ನಮ್ಮದೇ ಊರಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿಯ ಕೃಷ್ಣ ಮಂದಿರ, ಕಟೀಲೇ ಮೊದಲಾದ ಕ್ಷೇತ್ರಗಳನ್ನು ನೋಡಿದ ಅನುಭವದಲ್ಲಿ ತಿರುಪತಿಯ ಪ್ರಾಕೃತಿಕ ಸ್ಥಿತಿ ಮತ್ತು ಅಭಿವೃದ್ಧಿಯ ಗತಿ ನೋಡಲೇಬೇಕೆಂಬ ಕುತೂಹಲ ಬೆಳೆಯಿತು. ನಾವು ಬೆಂಗಳೂರಿನಲ್ಲಿದ್ದ ಮೂರನೇ ದಿನ ನಾವು ಅಭಯ ರಶ್ಮಿಯರಿಗೆ ಕನಿಷ್ಠ ನಾಲ್ಕು ದಿನಕ್ಕೆ ವಿದಾಯ ಹೇಳಿ, “ದಾರಿಯಾವುದಯ್ಯಾ ವೈಕುಂಠಕೇ॒” ಎಂದು ರಾಗ ತೆಗೆಯುತ್ತ ತಿಮ್ಮಪ್ಪನೂರಿಗೆ ಬೈಕು ಹೊರಡಿಸಿದೆವು.

ಹೀರೋಹೊಂಡಾ ಸ್ಪ್ಲೆಂಡರ್ ಗಾಡಿಯೇನೋ ಸ್ಪ್ಲೆಂಡಿಡ್ಡೇ. ಆದರೆ ಅಭಯ ಅದಕ್ಕೆ ವ್ಯಕ್ತಿಸವಾರಿಯನ್ನು ಮೀರಿದ ಯಾವ ಸೌಲಭ್ಯಗಳನ್ನು ಅಳವಡಿಸಿರಲಿಲ್ಲ. ಅದೇ ನನ್ನ ಭಾರತ ಓಟದಂದು ಇದೇ ಜಾತಿಯ ಸಿಡಿ ೧೦೦ ಗಾಡಿಗೆ ಎಷ್ಟೆಲ್ಲ ಹೊಂದಿಸಿದ್ದೆ ನೋಡಿ. ಟ್ಯಾಂಕಿನ ಇಕ್ಕೆಲಗಳಲ್ಲಿ ಸ್ಯಾಡಲ್ ಬ್ಯಾಗ್ ಮತ್ತು ಮೇಲೆ ತುರ್ತು ಕಾಗದ ಪತ್ರಗಳನ್ನಷ್ಟೇ ಇಡುವ ಸಂಚಿ. ಹಿಂದಿನ ಚಕ್ರದ ಎರಡೂ ಬದಿಗೆ ದೊಡ್ಡ ಬಲವಾದ ಡಬ್ಬಿಗಳು. ಕೊನೆಯಲ್ಲಿ ಬೈಕಿನಲ್ಲೇ ಸೇರಿ ಬಂದ ಹಿಡಿಕೆ ಹಾಗೂ ಏಳೆಂಟಿಂಚು ಅಳತೆಯ ಕ್ಯಾರಿಯರ್ ಮೇಲೂ ಅಪರಿಮಿತ ಹೊರೆಯಿಟ್ಟು ಕಟ್ಟುವ ವ್ಯವಸ್ಥೆ. ನಮ್ಮ ತಿರುಪತಿ ಯಾತ್ರೆ ನಾಲ್ಕು ದಿನಗಳ ಅಂದಾಜಿನದ್ದಾದ್ದರಿಂದ ಇಬ್ಬರ ಆವಶ್ಯಕತೆಗಳು ಎಷ್ಟು ಕಡಿಮೆಯೆಂದರೂ ದೊಡ್ಡ ಬೆನ್ನುಚೀಲ ಒಂದರಲ್ಲಿ ತುಂಬಿತ್ತು. ಅದನ್ನು ಹಿಂದೆ ಕಟ್ಟಲು ಕ್ಯಾರಿಯರಿಲ್ಲ, ಮುಂದೆ ನನ್ನ ಭುಜದಾಸರೆಯೊಡನೆ ಟ್ಯಾಂಕಿನ ಮೇಲೆ ಹೇರಲು ಗಾತ್ರ ದೊಡ್ಡದು ಎಂಬ ಅನಾನುಕೂಲ. ಅದರ ಗಾತ್ರ ಇಬ್ಬರ ನಡುವೆ ಮಕ್ಕಳನ್ನು ಇರುಕಿಸಿದಂತೆ ಹೊಂದಿಸಲೂ ಒಡ್ಡಿಕೊಳ್ಳಲಿಲ್ಲ. ಅನಿವಾರ್ಯವಾಗಿ ಸಹವಾರಿ – ದೇವಕಿ ಭುಜಕ್ಕೇನೋ ಹಾಕಿಕೊಂಡಳು. ಆದರೆ ಗಮನಿಸಿ ಬೈಕಿನ ಹಿಂದಿನ ಹಿಡಿಕೆಯ ಸಣ್ಣ ಆಧಾರ ಬಿಟ್ಟರೆ ದೇವಕಿಗಿದು ಪ್ರಯಾಣದುದ್ದಕ್ಕೂ ಕನಿಷ್ಠ ಅರೆವಾಸಿಯಾದರೂ ಹೊತ್ತೇ ಕುಳಿತ ಅನುಭವ. ಮತ್ತು ಅದು ಬೈಕಿಗೆ ನೇರ ಬಿಗಿಯದ ಹೊರೆಯಾದ್ದರಿಂದ ಸವಾರಿಯ ಓಲಾಟಗಳಲ್ಲಿ ಪ್ರತ್ಯೇಕ ಅಸ್ತಿತ್ವವನ್ನು ಸಾರಿ ಎಚ್ಚರಿಸುತ್ತಿತ್ತು. ವೇಗತಡೆಯ ಭಾರೀ ದಿಬ್ಬವನ್ನು ತುಸು ವೇಗದಲ್ಲಿ ಏರಿಸಿದರೂ ಎದುರು ಚಕ್ರ ನೆಲ ಬಿಟ್ಟೇಳುವ (ವ್ಹೀಲೀ) ಮತ್ತು ಸಂದುಗೊಂದುಗಳಲ್ಲಿ ಚುರುಕಿನ ತಿರುವುಗಳನ್ನು ತೆಗೆದದ್ದೇ ಆದರೆ ಸವಾರನಿಗೆ ಅನಿಯಂತ್ರಿತ ಓಲಾಟ (ವೋಬ್ಲಿಂಗ್) ಕೊಡುವ ಅಪಾಯ ಇದ್ದೇ ಇತ್ತು.

ಹೊಸಕೋಟೆ – ಚಿತ್ತೂರು – ತಿರುಪತಿ ಮುಖ್ಯವಾಗಿ ಕಾಣಿಸುವ ಗೂಗಲ್ ನಕ್ಷೆ ನಮ್ಮ ಬಳಿ ಇತ್ತು. ಅಭಯ ಮುಂದುವರಿದು ಆರೇಳು ಪುಟಗಳ ಮಾರ್ಗಸೂಚಕ ಟಿಪ್ಪಣಿಗಳನ್ನೂ ಮುದ್ರಿಸಿ ಕೊಟ್ಟಿದ್ದ. ಎಲ್ಲಕ್ಕೂ ಮುಖ್ಯವಾಗಿ ಮೂಲದಲ್ಲಿ ನಾವು ಉತ್ತರಳ್ಳಿ, ಬನಶಂಕರಿಯೆಡೆಗಿನ ಮುಖ್ಯ ದಾರಿಗಳಲ್ಲಿ ಹಾಯ್ದು ಔಟರ್ ರಿಂಗ್ ರೋಡ್ ಸೇರಿದರೆ “ಸುಲೂಭ” ಎಂದು ಬಾಯ್ದೆರೆ ಸೂಚನೆಯನ್ನೂ ಕೊಟ್ಟುಬಿಟ್ಟ. ಈ ಬಾರಿಯ ನಮ್ಮ ಓಡಾಟದ ಒಟ್ಟಾರೆ ಧೋರಣೆಗನುಗುಣವಾಗಿ ಬೆಳಿಗ್ಗೆ ಆರಾಮವಾಗಿಯೇ ಎಂಟೂವರೆಗೆ ಮನೆ ಬಿಟ್ಟೆವು. ಆದರೆ ಇಲ್ಲೇ ನಾವು ತಪ್ಪಿದ್ದೆವು. ಬೆಂಗಳೂರಿನಲ್ಲಿ ಹತ್ತೂವರೆ ಹನ್ನೊಂದು ಗಂಟೆಗೆ ಶಾಲೆ, ಕಛೇರಿ ತೆರೆಯುವುದಿರಬಹುದು. ಆದರೆ ಬಹುತೇಕ ಮಂದಿ ‘ಅಭಿವೃದ್ಧಿ’ಯ ಸಂಕಟಗಳೊಡನೆ ಏಗಿಕೊಂಡು ಹತ್ತಿಪ್ಪತ್ತು ಕಿಮೀ ಪಯಣಿಸುವ ಸಂಕಟಕ್ಕೆ ಸಾಕಷ್ಟು ಮುಂಚೆಯೇ ದಾರಿ ತುಂಬಿಬಿಟ್ಟಿದ್ದರು. ನಾವು ಮೊದಲ ಹತ್ತು ಕಿಮೀ ಪಯಣಿಸಲು ಒಂದು ಗಂಟೆ ವ್ಯಯಿಸಿದ್ದೆವು. ಮುಂದುವರಿದಂತೆ ಭಾರೀ ಹೆದ್ದಾರಿಯೇನೋ ಸಿಕ್ಕಿತು. ಆದರೆ ವೈವಿಧ್ಯಮಯ ನೇಲು ಸೇತುವೆ, ಕೆಳಜಾಡು, ಮೇಲು ಸೇತುವೆಗಳ ಓಟದಲ್ಲಿ ವಾಹನಗಳದ್ದೇ ಸಾಮ್ರಾಜ್ಯ. ಸಾಂಪ್ರದಾಯಿಕ ದಾರಿ ಬದಿಯ ಜನ, ಅಂಗಡಿ, ಸಣ್ಣ ಪುಟ್ಟ ಬೋರ್ಡು, ಸೂಚನೆ ಇರಲೇ ಇಲ್ಲ. ಆಗೀಗ ಸಿಗುವ ಸಿಗ್ನಲ್ ಅಥವಾ ಕವಲು ದಾರಿ ಸಮೀಪಿಸುವಲ್ಲಿ ದಾರಿಗೆ ಭಾರೀ ಉಕ್ಕಿನ ತೋರಣ ಕಟ್ಟಿ ಸುಂದರ ಬೋರ್ಡುಗಳನ್ನೇನೋ ಕೊಟ್ಟಿದ್ದರು. ಆದರೆ ಅವೆಲ್ಲ ದೂರದ ಆಶಯಗಳನ್ನಷ್ಟೇ ಹೇಳುತ್ತಿದ್ದವು. ಉದಾಹರಣೆಗೆ, ಎಲ್ಲಿಂದೆಲ್ಲಿಗೂ ಒಂದು ಎಡ ಬಾಣದ ಗುರುತು ‘ಬೆಂಗಳೂರು ಸಿಟಿ’ ಎನ್ನುತ್ತಿತ್ತು. “ಹೌದು, ಇದು ರಿಂಗ್ ರೋಡ್. ಅಂದರೆ ಅಪ್ರದಕ್ಷಿಣಾ ಕ್ರಮದಲ್ಲಿ ಅನುಸರಿಸುವ ಎಲ್ಲರಿಗೂ ಎಲ್ಲ ಜಾಗಗಳಲ್ಲೂ ಬೆಂಗಳೂರು ಸಿಟಿಯನ್ನು ಕಾಣಿಸುವುದು ನ್ಯಾಯವೇ” ಎನ್ನಬೇಡಿ. ಬದಲು ನಗರದ ಯಾವ ಭಾಗ ಎಂದಿದ್ದರೆ ಹೆಚ್ಚಿನ ಉಪಯೋಗವಾಗುತ್ತಿರಲಿಲ್ಲವೇ ಎನ್ನುವುದು ನನ್ನ ಕೊರಗು. ಇನ್ನು ನೇರ ಸೂಚನೆಗಳದು ಇನ್ನೊಂದೇ ಅಧ್ವಾನ. ಅವುಗಳಲ್ಲಿ ಯಾವುದೋ ಹಂತದಲ್ಲಿ ನಾನೂರೈನೂರು ಕಿಮೀ ಆಚಿನ ‘ಹೈದರಾಬಾದ್’ ಕಾಣಿಸತೊಡಗಿತು. ನನ್ನ ಪ್ರಜ್ಞೆ “ಅಂದರೆ ಉತ್ತರಕ್ಕೆ ಹೋಗ್ತಿದ್ದೀ. ನೀನು ಪೂರ್ವಕ್ಕೆ ಹೋಗಬೇಡವೇ” ಕೆಣಕಿತು. ಆದರೆ all roads lead to Rome ಎನ್ನುವ ಉಕ್ತಿ ನೆನಪಾಗಿ ಎಲ್ಲೋ ಪೂರ್ವಕ್ಕೆ ಹೊರಳುವ ಅವಕಾಶ ಬರುತ್ತದೆ ಎಂಬ ಸಮಾಧಾನ. ಶುದ್ಧ ಕಾಡಿನಲ್ಲಾದರೋ ಬರಿಯ ದಿಕ್ಕು ಹಿಡಿದು ನುಗ್ಗಬಹುದು, ಇಲ್ಲಿ ದಾರಿ ಮತ್ತು ವ್ಯವಸ್ಥೆಯ ಶಿಸ್ತು ಅವಕಾಶ ಕೊಡಬೇಕಲ್ಲಾಂತ ಕಾಯುತ್ತಲೇ ಓಡುತ್ತಲೇ ಇದ್ದೆವು.

ಬೆಂಗಳೂರಿನಿಂದ ಚೆನ್ನೈವರೆಗಿನ ನಕ್ಷೆ ಒಂದು ಹಾಳೆಯಲ್ಲಷ್ಟೇ ಸುಧಾರಿಸಿದ್ದರಿಂದ ಮಹಾನಗರ ಬಿಡುವ ಸಣ್ಣ ದಾರಿಗಳ ಜಾಲ ಕಾಣಿಸಿರಲಿಲ್ಲ, ಸ್ಥಳಗಳ ಹೆಸರೂ ಇರಲಿಲ್ಲ. ಆರೆಂಟು ಪುಟದ ಟಿಪ್ಪಣಿಗಳೂ ‘೧೩.೪ ಕಿಮೀಯಲ್ಲಿ ಬಲ, ೧೪.೩ ಕಿಮೀಯಲ್ಲಿ ಎಡ ಇತ್ಯಾದಿ’ ನಿರ್ಜೀವ ಲೆಕ್ಕಾಚಾರವನ್ನು ಹೇಳುತ್ತಿತ್ತೇ ವಿನಾ ‘ಚಿಂತಾಮಣಿ’, ‘ಕೋಲಾರ’ ಮುಂತಾದ ಊರುಗಳ ಹೆಸರು ಅಥವಾ ದೊಡ್ಡ ಅಂಗಡಿ, ಕಟ್ಟಡಗಳ ಹೆಸರು ಇತ್ಯಾದಿ ಜೀವಂತ ಲೋಕಾಚಾರವನ್ನು ಬಿಟ್ಟಿತ್ತು. ಬಹಳ ಕಷ್ಟದಲ್ಲಿ ಅವರಿವರನ್ನು ಕೇಳಿದೆವು – ಹೆದ್ದಾರಿಯ ಜನಪದವೇ ವಿಚಿತ್ರ. ಏನು ಅರ್ಥಮಾಡಿಕೊಳ್ಳುತ್ತಿದ್ದರೋ ತರಹೇವಾರಿ ಸೂಚನೆಗಳಂತು ಸಿಗುತ್ತಲೇ ಇದ್ದುವು. ಒಬ್ಬರು ಖಡಕ್ಕಾಗಿ “ಹೊಸಕೋಟೆ ಇನ್ನೂ ನೀವು ೧೫ ಕಿಮೀ ಹೋಗಬೇಕು” ಎಂದರೆ ಇನ್ನೊಬ್ಬರು ಅಷ್ಟೇ ಸ್ಪಷ್ಟವಾಗಿ “ಇಲ್ಲ, ನೀವು ತಪ್ಪು ದಾರಿಯಲ್ಲಿ ತುಂಬಾ ದೂರ ಬಂದಿದ್ದೀರಿ, ಹಿಂದೆ ಹೋಗಿ ಎಡಕ್ಕೆ ತಿರುಗಿ” ಎನ್ನುತ್ತಿದ್ದರು. ಮರುವಿಚಾರಣೆಯಲ್ಲಿ ಮಗುದೊಬ್ಬರು “ಹಾಂ, ಬಂದದ್ದು ಸರೀ ಇದೆ. ಇನ್ನು ೧೫ ಅಲ್ಲ ಸ್ವಲ್ಪ ಹೆಚ್ಚೇ ಹೋಗಬೇಕು” ಧೈರ್ಯ ಕೊಡುತ್ತಿದ್ದರು, ನಾವು ಮುಂದುವರಿದೆವು.

ಹನ್ನೊಂದೂವರೆಯ ಸುಮಾರಿಗೆ, ಅಂದರೆ ಹೊರಟು ಮೂರು ಗಂಟೆಯ ಮೇಲೆ ಹೆಸರಿಲ್ಲದ ಒಂದು ಪೇಟೆಯಲ್ಲಿ (ಕೇಳಿ ತಿಳಿದರೂ ನಕ್ಷೆಯಲ್ಲಿ ನಮ್ಮ ಸ್ಥಾನ ಗುರುತಿಸಲಾಗದ ಸ್ಥಿತಿ ನಮ್ಮದು) ‘ಉಡುಪಿ’ ಹೊಟೆಲ್ ಒಂದರಲ್ಲಿ ಕಾಫಿಗೆ ನಿಂತೆವು. ಆಗ ಯಜಮಾನನ್ನು ವಿವರವಾಗಿ ಕೇಳಿದೆವು. ನಾವು ಬಂದ ದಾರಿ ಸರಿ, ಹೀಗೇ ಇನ್ನೂ ಸುಮಾರು ಮೂವತ್ತು ಕಿಮೀ ಹೋದರೆ ಹೊಸಕೋಟೆ ಗಟ್ಟಿ ಎಂದು ಸಮರ್ಥಿಸಿದರು. ಬಂದ ದೂರ ಕರಕಷ್ಟದ ೫೪ ಕಿಮೀ. ಇನ್ನು ಸುಖಮುಖದ ಮೂವತ್ತೇ ಅಲ್ಲವೇ, ಊಟಕ್ಕೆ ಹೊಸಕೋಟೆ ಸೇರಿಯೇ ಸಿದ್ಧ ಎಂದು ನಿಸ್ಸಂದೇಹವಾಗಿ ಧಾವಿಸಿದೆವು. ದಾರಿಯೇನೋ ಬೆಳಗ್ಗಿನಿಂದಲೇ ಕಂಡಂತೆ ಚತುಷ್ಪಥದ ಹೆದ್ದಾರಿಯದೇ ರೂಪ. ಆದರೂ ಆರೆಂಟು ಕಿಮೀ ಕಳೆಯುವಷ್ಟರಲ್ಲಿ, ಆಗ ಕಂಡಂತೆ ನಮ್ಮ ಗ್ರಹಚಾರಕ್ಕೆ, ಈಗ ನೋಡಿದರೆ ನಮ್ಮ ಅದೃಷ್ಟಕ್ಕೆ, ಅಲ್ಲೊಂದು ರೈಲ್ವೇ ಲೆವೆಲ್ ಕ್ರಾಸಿಂಗ್ ಬಂತು. ಯಾವುದೋ ರೈಲಿನ ನಿರೀಕ್ಷೆಯಲ್ಲಿ ಗೇಟು ಹಾಕಿದ್ದರು. ಐದು ಮಿನಿಟಿನಲ್ಲೇ ರೈಲೇನೋ ಬಂತು. ಆದರೆ ನಮ್ಮ ನಿರಾಶೆಯ ಪರಾಕಾಷ್ಠೆಗೆ ಅದು ಮೈಸೂರು ಬೆಂಗಳೂರು ರೈಲು!

ಬೆಳಿಗ್ಗೆ ಮೈಸೂರು ರಸ್ತೆ ಬಿಟ್ಟು ಹೊರಟ ನಾವು ಇಷ್ಟುದ್ದಕ್ಕೂ ಓಡಿದ್ದೆಲ್ಲಾ ಬೆಂಗಳೂರ ಸುತ್ತ?! ಮನಸ್ಸು ತಡೆಯಲಿಲ್ಲ, ಅಲ್ಲಿದ್ದ ಒಬ್ಬ ಪೊಲಿಸ್ ವಿಚಾರಿಸಿದೆವು, ನಾವು ತಪ್ಪು ದಾರಿ ಹಿಡಿದದ್ದನ್ನು ಶ್ರುತಪಡಿಸಿದರು. ಒಂದೆರಡು ಕಿಮೀ ಹಿಂದಕ್ಕೇನೋ ಹೋದೆವು. ತಿರುಪತಿ ತಿಮ್ಮಪ್ಪನ ಹೆಸರಿನದೇ (ಸಪ್ತಗಿರಿ…) ಯಾವುದೋ ಅಂಗಡಿ ಕಾಣಿಸಿದಲ್ಲಿ ಮತ್ತೆ ವಿಚಾರಿಸಿದೆವು. ಆತನಂತೂ ಸ್ಪಷ್ಟ ಇಪ್ಪತ್ತಕ್ಕೂ ಕಿಮೀ ಹಿಂದಕ್ಕೆ ಹೋಗಿ ದಾರಿ ಬದಲಾಯಿಸುವುದು ಅನಿವಾರ್ಯ ಎಂದೇ ಹೇಳಿದ ಮೇಲೆ ನಾವು ಪರಿಸ್ಥಿತಿಯನ್ನು ಮತ್ತೊಮ್ಮೆ ವಿಶ್ಲೇಷಣೆ ಮಾಡಿದೆವು. ಅಷ್ಟರಲ್ಲಾಗಲೇ ೬೦ಕ್ಕೂ ಹೆಚ್ಚು ಕಿಮೀ ಉರಿಬಿಸಿಲಿನಲ್ಲಿ ಬಂದದ್ದು ವ್ಯರ್ಥ. ಹೊಸದೇ ಸರಿದಾರಿ ಹಿಡಿದು ಮುಂದುವರಿದರೂ ಈಗಾಗಲೇ ದೇವಕಿಯ ಭುಜ ಜಗ್ಗಿದ ಚೀಲ ಇನ್ನೂ ಕನಿಷ್ಠ ನಾನೂರಕ್ಕೂ ಮಿಕ್ಕ ಕಿಮೀ ಮತ್ತು ನಾಲ್ಕು ದಿನ ಹಿಂಸೆ ಕೊಡುವುದೂ ಖಾತ್ರಿ. ದಾರಿ, ವ್ಯವಸ್ಥೆ ಅಳೆದೂ ಸುರಿದೂ ತಿರುಪತಿ ಯಾತ್ರೆಯನ್ನು ಅಂದಿಗೆ ರದ್ದುಪಡಿಸಿದೆವು. ಹೆಚ್ಚು ಕಡಿಮೆ ನಗರದ ಒಂದು ಅಪ್ರದಕ್ಷಿಣೆಯನ್ನು ಪೂರೈಸಿದ್ದ ನಾವು ಈಗ ಸಮೀಪಿಸಿದ್ದ ಮೈಸೂರು ದಾರಿ ಸೇರಿ ಅಭಯನ ಮನೆಗೇ ಮರಳಿದೆವು. ಅಭಯ ಸಕ್ಕರೆಯ ಡಬ್ಬಿಂಗ್ ಕೆಲಸದಲ್ಲಿ ಯಾವುದೋ ಸ್ಟುಡಿಯೋದಲ್ಲಿದ್ದ. ರಶ್ಮಿ ಇನ್ನೆಲ್ಲೋ ‘ಪಲ್ಲವಿ ಅನುಪಲ್ಲವಿ’ಯ ಚಿತ್ರೀಕರಣದಲ್ಲಿ ಮುಳುಗಿದ್ದಳು. ೭೯ ಕಿಮೀ ದಾರಿ, ಸುಮಾರು ಐದು ಗಂಟೆಯ ಸವಾರಿ, ತಪ್ಪು ಒಪ್ಪುಗಳ ಸೂಚನೆಗಳನ್ನು ಕೊಟ್ಟ ಅಷ್ಟೂ ಜನರನ್ನು ಮರೆತು, ನಮ್ಮ ತನುವನ್ನು ನಾವೇ ಸಂತಯಿಸಿಕೊಳ್ಳುತ್ತಾ “ಬೋರೇ ಗೌಡ ಬೆಂಗಳೂರಿಗ್ಬಂದಾ” ಎಂದು ಹಾಡುತ್ತ, ನಮ್ಮ ಸೋಲನ್ನು ಯಾರಿಗೂ ಹೇಳಬಾರದು ಎಂದುಕೊಳ್ಳುತ್ತಾ ಸಂಜೆ ಬಸ್ಸು ಹಿಡಿದು ಮಂಗಳೂರ ದಾರಿ ನೋಡಿದೆವು. ದಯವಿಟ್ಟು ನೀವು ಯಾರಿಗೂ ಹೇಳಬೇಡಿ!

(ಮುಗಿದುದು)