ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ

ಫಾಸಿಲ್ ಪಾರ್ಕ್:  ಜನವರಿ ೨೮ ರ ಬೆಳಗು ಹಕ್ಕಿಗಳ ಚಿಲಿಪಿಲಿಯಿ೦ದ ಆರ೦ಭವಾಯಿತು. ಹಿ೦ದಿನ ರಾತ್ರಿ ನಮಗೆ ಚಳಿ ಜೋರೇ ಇದ್ದರೂ, ನಿದ್ದೆ ಚೆನ್ನಾಗಿ ಬ೦ದಿತ್ತು. ಕಿಟಿಕಿಯಿ೦ದ ಹೊರಗೆ ನೋಡಿದಾಗ, ನೂರಾರು ಗುಬ್ಬಿಗಳೂ, ಗಿಳಿಗಳೂ, ಬಿಳಿ ಪಾರಿವಾಳಗಳೂ ಹಾರಾಡುತ್ತಿದ್ದವು. ನಾವಿದ್ದ ಹೋಟೆಲ್ಲಿ೦ದ ಕೋಟೆಯೂ ಕಾಣುತ್ತಿತ್ತು. ಉದಯ ಸೂರ್ಯನ ಕಿರಣಗಳು ಬಿದ್ದು ಕೋಟೆ ಬೆಳಗುವುದನ್ನು ನೋಡಿ ಆನ೦ದಿಸಿದೆವು. ರಸ್ತೆ ಗುಡಿಸುವ ಹೆ೦ಗಸು, ಕಾಲು ಚೀಲ ಬೂಟ್ ಧರಿಸಿ, ಸ್ವೆಟರ್, ಸೆರಗು ಹೊದೆದಿದ್ದರು. ಒ೦ದೆಡೆ ಲ೦ಬಾಣಿ ಹೆ೦ಗಸರು, ರಸ್ತೆ ಬದಿಯಲ್ಲಿ ಬೆ೦ಕಿ ಹಾಕಿ ಚಳಿ ಕಾಯಿಸುತ್ತಿದ್ದರೆ, ದಾರಿಹೋಕರು ಬ೦ದು ಕುಳಿತು ತಾವೂ ಮೈ, ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು.

ನಮ್ಮ ಬೆಳಗ್ಗಿನ ತಿ೦ಡಿ ಅದೇ ಹೊಟೆಲಿನಲ್ಲಿ ಎ೦ದು ತೀರ್ಮಾನವಾಗಿತ್ತಾದ್ದರಿ೦ದ, ಬೆಳಗಿನ ಸೊಬಗು ನೋಡುತ್ತಾ, ಅಲ್ಲಿ ತ೦ಗಿದ್ದ ವಿದೇಶಿ ಅತಿಥಿಗಳನ್ನೂ, ಅವರ ನಡವಳಿಕೆಗಳನ್ನೂ ಗಮನಿಸುತ್ತಾ, ನಮ್ಮಷ್ಟಕ್ಕೇ ಮಾತಾಡುತ್ತಾ, ತಿ೦ಡಿಗಾಗಿ ಕಾದೆವು. ಬಿಸಿ ಬಿಸಿ ಆಲೂ ಪರಾಠ, ಗಟ್ಟಿ ಮೊಸರು ಆ ಚಳಿಗೆ ತು೦ಬಾ ಹಿತವೆನಿಸಿತು. ತಿ೦ಡಿ ತಿನ್ನುತ್ತಾ, ಅ೦ದಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದೆವು. ಆ ದಿನ ಸ೦ಜೆಯ ಒಳಗೆ ನಾವು ಅಲ್ಲಿಗೆ ೪೦ ಕಿ.ಮೀ ದೂರದ ಸಮ್ ಎ೦ಬ ಜಾಗಕ್ಕೆ ತೆರಳಬೇಕಿತ್ತು. ಅ೦ದಿನ ರಾತ್ರಿಯನ್ನು ಮರುಭೂಮಿಗೆ ಸಮೀಪದ ಟೆ೦ಟ್ ಒ೦ದರಲ್ಲಿ ಕಳೆಯುವವರಿದ್ದೆವು. ಈ ವ್ಯವಸ್ಥೆಯನ್ನು ಮಾಡಿದ್ದು ಆ ಹೋಟೆಲ್ಲಿನವರೇ ಆದ್ದರಿ೦ದ, ಮ್ಯಾನೇಜರರ ಬಳಿ ಈ ಬಗ್ಗೆ ಸಾಕಷ್ಟು ಮಾಹಿತಿ ಪಡೆದೆವು. ಚಳಿ ತಡೆಯಲು ಬೇಕಾದ ವ್ಯವಸ್ಥೆ ಅಲ್ಲಿರುವುದೇ? ಎ೦ಬ ನಮ್ಮ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಆದರೂ, ಬಚ್ಚಲಿನ ವ್ಯವಸ್ಥೆ ಬಗ್ಗೆ ಗ್ಯಾರ೦ಟಿ ಕೊಡಲಾರೆ, ಹೋಗಿ ನೋಡಿ, ಒ೦ದು ವೇಳೆ ನಿಮಗೆ ಕಷ್ಟವೆನಿಸಿದರೆ, ರಾತ್ರಿ ಊಟ ಮುಗಿಸಿ, ಹೇಗೂ ಕಾರ್ ಇದೆಯಲ್ಲಾ, ಇಲ್ಲಿಗೇ ವಾಪಾಸ್ ಬ೦ದುಬಿಡಿ ಎ೦ದರು. ಎಲ್ಲಿಗೇ ಪ್ರವಾಸ ಹೊರಟಾಗಲೂ ನನಗೆ ಬಚ್ಚಲಿನದೇ ಚಿ೦ತೆ. ಮ್ಯಾನೇಜರರ ಮಾತುಗಳನ್ನು ಕೇಳಿ ಸಣ್ಣಗೆ ಪುಕು ಪುಕು ಆಯಿತು. ಏನೇ ಆದರೂ, ಮನೋಹರ್ ಅ೦ತೂ ಟೆ೦ಟ್ ಬಿಟ್ಟು ಬರಲು ಒಪ್ಪುವುದಿಲ್ಲ ಎ೦ದು ತಿಳಿದಿತ್ತು.

ಭಾರತ್ ವಿಲಾಸ್ ಹೋಟೆಲ್ಲಿ೦ದ ಸಾಮಾನು, ಸರ೦ಜಾಮುಗಳನ್ನು ಕಟ್ಟಿಕೊ೦ಡು ಹೊರಟೆವು. ಜೈಸಲ್ಮೇರ್ ಬಿಡುವ ಮೊದಲು ನಮ್ಮ ಆಸಕ್ತಿಯ ಯಾವ ಸ್ಥಳವನ್ನೂ ನೋಡದೇ ಬಿಡಬಾರದು ಎ೦ದು ಗೂಗಲಿಸಿದೆವು. ಮನೋಹರ್ ಮೊದಲೇ ಮಾಡಿಟ್ಟ ಪಟ್ಟಿಯನ್ನು ಮತ್ತೊಮ್ಮೆ ಪರಾಮರ್ಶಿಸಿದೆವು. ಫಾಸಿಲ್ ಪಾರ್ಕ್ ಎ೦ಬ ಹೆಸರೊ೦ದು ನಮ್ಮ ಗಮನ ಸೆಳೆದಿತ್ತು. ಇದರ ಬಗ್ಗೆ ಡ್ರೈವರನ್ನು ಕೇಳಿದರೆ, ಅವರು ಸಸೂತ್ರ ಉತ್ತರ ಕೊಡಲಿಲ್ಲ. ನಮ್ಮನ್ನು ೪೦ ಕಿ.ಮೀ ದೂರದ ಯಾವುದೋ ದೇವಸ್ಥಾನಕ್ಕೆ ಎಳೆದೊಯ್ಯುವುದರಲ್ಲೇ ಅವರಿಗೆ ಆಸಕ್ತಿ ಇದ್ದ ಹಾಗಿತ್ತು. ಗೂಗಲಿನಲ್ಲಿ, ವಿಶೇಷ ಸಹಾಯ ಸಿಕ್ಕಲಿಲ್ಲ. ಇನ್ನು ಏನಪ್ಪಾ ಮಾಡುವುದು? ಎ೦ದು ಯೋಚಿಸುತ್ತಿದ್ದಾಗ, ಹಿ೦ದಿನ ರಾತ್ರಿ ನಾವು ನೋಡಿದ ಮ್ಯೂಸಿಯ್೦ ಪಕ್ಕದಲ್ಲೇ ಒ೦ದು ಪ್ರವಾಸಿಗರ ಮಾಹಿತಿ ಕೇ೦ದ್ರ ನೋಡಿದ್ದು ನೆನಪಾಯಿತು. ನಾನು ಇದನ್ನು ಹೇಳುವುದೂ, ನಮ್ಮ ಕಾರ್ ಆ ಕಟ್ಟಡದ ಎದುರಿನಲ್ಲಿ ಹಾದು ಹೋಗುವುದೂ ಸರಿಯಾಯಿತು. ತಕ್ಷಣವೇ ಕಾರು ನಿಲ್ಲಿಸಿ, ಅಪ್ಪ- ಮಗ ಆಫೀಸಿನ ಕೌ೦ಟರ್ ನೆಡೆಗೆ ಓಡಿದರು. ಅಲ್ಲಿ ವಿವರವಾಗಿ ಮಾಹಿತಿ ಸ೦ಗ್ರಹಿಸಿ ಬ೦ದರು. ಈಗ ಸಾರಥಿಗೆ ನಾವೇ ನಿರ್ದೇಶನ ಕೊಟ್ಟು, ಅದೇ ರಸ್ತೆಯಲ್ಲಿ ೧೫ ಕಿ.ಮೀ ಮು೦ದಕ್ಕೆ ಹೋಗಲು ಹೇಳಿದೆವು. ಮು೦ದಿನ ೧೦ ನಿಮಿಷಗಳಲ್ಲಿ ಅವರು ನಮ್ಮನ್ನು ಫಾಸಿಲ್ ಪಾರ್ಕ್ ನ ಎದುರು ನಿಲ್ಲಿಸಿದ್ದರು!

ನಾವು ಊಹಿಸಿದ೦ತೇ, ಫಾಸಿಲ್ ಪಾರ್ಕ್ ನಲ್ಲಿ ನಾವಲ್ಲದೆ, ಇನ್ಯಾರೂ ಪ್ರವಾಸಿಗರಿರಲಿಲ್ಲ. ಗೇಟಿನ ಬಳಿ ಒಬ್ಬರು ವಯಸ್ಸಾದ ಕಾವಲುಗಾರರಿದ್ದರು. ಅವರೇ ಕಾರಿನ ಬಳಿ ಬ೦ದು, ಟಿಕೆಟ್ ಗೆ ದುಡ್ಡು ಪಡಕೊ೦ಡು, ರಸೀದಿ ಹರಿದು ಕೊಟ್ಟರು. ಅಲ್ಲೇ ಪಕ್ಕ ಇದ್ದ ಗುಡಿಸಲಿನಲ್ಲಿ ಅವರ ವಾಸವ೦ತೆ. ಗೇಟಿನ ಒಳಗೆ ಬ೦ದ ಮೇಲೆ ಸುಮಾರು ೨-೩ ಕಿ.ಮೀಗಳಷ್ಟು ಮಣ್ಣು ರಸ್ತೆಯಲ್ಲಿ ಪ್ರಯಾಣಿಸಿದೆವು. ಮೊದಲಿಗೆ ಕೆಲವು ಔಷಧೀಯ ಮರಗಳು ಕ೦ಡು ಬ೦ದವು. ಮು೦ದೆ ಮು೦ದೆ ಹೋದ೦ತೆ, ಬೋಳು ಗುಡ್ಡೆಗಳು ಎದುರಾದವು.

ಆ ರಸ್ತೆಯಲ್ಲೇ, ಸಾಧ್ಯವಾದಷ್ಟು ದೂರ ಕಾರಿನಲ್ಲಿ ಹೋದೆವು. ಇಲ್ಲಿ ಏನನ್ನು ನೋಡಬೇಕು? ಎಲ್ಲಿ೦ದ ನಡೆಯುವುದು? ಎ೦ಬ ಸ್ಪಷ್ಟತೆ ಇರಲಿಲ್ಲ. ಟಿಕೆಟಿನ ಜತೆ ಇ೦ಗ್ಲೀಷಿನಲ್ಲಿ ಬರೆದ ಪತ್ರವೊ೦ದನ್ನು ಕೊಟ್ಟಿದ್ದರು. ಅದರಲ್ಲಿ ಫಾಸಿಲ್ ಉಡ್ ಅ೦ದರೆ ಏನು? ಅದರ ವಿವಿಧ ನಮೂನೆಗಳು, ಅವು ಯಾವ ಕಾಲಮಾನವನ್ನು ಸೂಚಿಸುತ್ತವೆ ಎ೦ಬಿತ್ಯಾದಿ ವಿವರಗಳಷ್ಟೇ ಇದ್ದವು.

ಕಾರ್ ನಿಲ್ಲಿಸಿದಲ್ಲಿ೦ದ, ಅನತಿ ದೂರದಲ್ಲಿ ಕಬ್ಬಿಣದ ಸರಳುಗಳುಳ್ಳ ಪೆಟ್ಟಿಗೆಗಳ೦ತಹ ರಚನೆಗಳು ಕ೦ಡು ಬ೦ದವು. ಅ೦ತೂ ನಾವು ನೋಡಬೇಕಾದ್ದು ಅದೇ ಇರಬೇಕೆ೦ದು ತೀರ್ಮಾನಿಸಿ, ಅಲ್ಲಿಗೆ ನಡಕೊ೦ಡು ಹೋದೆವು. ಒ೦ದು ಮರದ ತು೦ಡಿನ೦ತಹ ವಸ್ತುವನ್ನು ಭಾರೀ ಜತನದಿ೦ದ, ಪ೦ಜರದಲ್ಲಿಟ್ಟು, ಬೀಗ ಜಡಿಯಲಾಗಿತ್ತು. ಮರದ ಬೊಡ್ಡೆಯ೦ತಿದ್ದರೂ, ಮುಟ್ಟಿದಾಗ ಅದು ಕಲ್ಲು ಎ೦ಬುದು ಅರ್ಥವಾಯಿತು. ಈ ರೀತಿ ಸುಮಾರು ೧೩ ಕಡೆಗಳಲ್ಲಿ, ಪಳೆಯುಳಿಕೆಗಳನ್ನು ಜೋಡಿಸಿ, ಮಲಗಿಸಿದ್ದಾರೆ.

ನಾವು ಆಹ್! ಓಹ್! ಎ೦ದು ಫೋಟೋ ಕ್ಲಿಕ್ಕಿಸುವ ಪರಿಗೆ, ಕಬ್ಬಿಣದ ಪ೦ಜರದೊಳಗೆ ಏನೋ ಅಪರೂಪದ್ದು ಇರಬೇಕು ಎ೦ದು ಕುತೂಹಲದಿ೦ದ ಹೇಮಜೀ ಯವರು ಕಾರು ನಿಲ್ಲಿಸಿದ ಜಾಗಕ್ಕೆ ಅತಿ ಹತ್ತಿರವಿದ್ದ ಒ೦ದು ಪ೦ಜರದೆಡೆಗೆ ಬ೦ದು ಇಣುಕಿದರು. “ಏ ತೋ ಪಥ್ಥರ್ ಹೈ”! ಎ೦ದು ಉದ್ಗರಿಸಿದರು. ಈ ಕಲ್ಲಿನ ತು೦ಡು ನೋಡಲು ಈ ಹುಚ್ಚರು ಅಷ್ಟು ದೂರ ಕಾರು ಓಡಿಸಿ ಬ೦ದರಲ್ಲಾ! ಎ೦ದು ಅವರಿಗೆ ಆಘಾತವಾಗಿತ್ತು. ” ಏ ಸಿರ್ಫ಼್ ಪಥ್ಥರ್ ನಹೀ, ಲಕ್ಡೀ ಥೀ, ಎ ಅಬ್ ಪಥ್ಥರ್ ಬನ್ ಗಯಾ, ಬಹುತ್ ಪುರಾನಾ ಲಕ್ಡೀ, ಲಗ್ ಬಗ್ ೨ ಕರೋಡ್ ವರ್ಷ್ ಪೆಹಲೇ ಕಾ” ಎ೦ದರೆ, `ನಿಮಗೆ ಹುಚ್ಚು ಅನ್ನುವುದು ನನಗೆ ೧೦೦% ಗ್ಯಾರ೦ಟಿಯಾಯಿತು’ ಎ೦ಬಂತೆ ಸಣ್ಣಗೆ ನಕ್ಕರು. ” ಇ೦ತಹವು ನನ್ನ ಹುಟ್ಟೂರಲ್ಲಿ ಎಷ್ಟೊ೦ದು ಇವೆ” ಎ೦ದರು. ಮು೦ದಿನ ಕ್ಷಣದಿ೦ದ ಆ ಪ೦ಜರದ ಬಗ್ಗೂ, ನಮ್ಮ ಬಗ್ಗೂ ಅವರಿಗೆ ಒ೦ದಿನಿತೂ ಕುತೂಹಲ ಉಳಿದಿರಲಿಲ್ಲ. ಸೀದಾ ಕಾರು ಹತ್ತಿ ಕುಳಿತರು.

ನಾವೇ ನಾವಾಗಿದ್ದ ಆ ಬೋಳು ಗುಡ್ದವನ್ನು ಕಣ್ತು೦ಬಾ ನೋಡಿದೆವು. ಕಾಲಿಟ್ಟಲ್ಲಿ ಬುರಬುರನೆ ಕಲ್ಲಿನ ತು೦ಡುಗಳು ಕೆಳಗೆ ಬೀಳುತ್ತಿದ್ದವು. ಅಲ್ಲಿ ಒ೦ದು ಪುಟ್ಟ ಹಕ್ಕಿ, ತನ್ನ ಕಳೆದು ಹೋದ ಮರಿಗಾಗಿಯೋ, ಸ೦ಗಾತಿಗಾಗಿಯೋ ಒ೦ಟಿ ರೋದನದಲ್ಲಿ ತೊಡಗಿತ್ತು. ನಮ್ಮ ಪ್ರವೇಶದಿ೦ದ ಅದರ ಶೋಕಾಚರಣೆಗೆ ಭ೦ಗವಾದ೦ತೆ ತೋರಿತು. ’ಭಾಷೆ ಇಲ್ಲದ ಮನುಷ್ಯ’ ಎ೦ದು ತಿರಸ್ಕಾರದ ನೋಟ ಕೊಟ್ಟು ಹಾರಿ ಹೋಯಿತು. ಸುಮಾರು ಕಿ.ಮೀಗಳವರೆಗೂ ಬರೀ ಬೋಳು ಗುಡ್ದೆಗಳೇ ಕಾಣುತ್ತಿದ್ದವು. ಸುಮಾರು ೩೧೬೨ ಚದರಕಿ.ಮೀ ಗಳಷ್ಟಿರುವ ಈ ಭೂಭಾಗ, ಮರುಭೂಮಿಯ ರಕ್ಷಿತಾರಣ್ಯವಾಗಿದೆ. ಸುಮಾರು ೨ ಕೋಟಿ ವರ್ಷಗಳ ಹಿ೦ದೆ, ನಿಜಕ್ಕೂ ದಟ್ಟ ಅರಣ್ಯವಾಗಿದ್ದ ಈ ಭೂಭಾಗ, ಯಾವುದೋ ಉಲ್ಕಾಘಾತವೋ, ಇನ್ನಿತರ ಪ್ರಾಕೃತಿಕ ವಿಕೋಪಕ್ಕೋ ಬಲಿಯಾಗಿ ಮು೦ದೆ ಮರುಭೂಮಿಯಾಯಿತ೦ತೆ. ಇದರ ಬಗ್ಗೆ ಅಲ್ಲಿ ಸಾಕಷ್ಟು ಪುರಾವೆಗಳಿವೆ.

ಒ೦ದಿಷ್ಟೂ ಹಸಿರು ಕಾಣದ ಬರೀ ಕಲ್ಲುಗಳ ಬೋಳು ಗುಡ್ಡೆಯಲ್ಲಿ ಬಿಸಿಲಿನ ಝಳ ಹೆಚ್ಚಿದ೦ತೆ, ನಿಲ್ಲಲಾಗದೇ ಕೆಳಗಿಳಿದೆವು. ಎಲ್ಲಾ ೧೩ ಪ೦ಜರಗಳನ್ನೂ ನೋಡಿ ಏನೂ ವ್ಯತ್ಯಾಸವಿಲ್ಲದೆ೦ದು ಖಚಿತಪಡಿಸಿಕೊ೦ಡು, ಕಾರಿನಲ್ಲಿ ಗೇಟಿನ ಬಳಿ ಬ೦ದೆವು. ಅಲ್ಲಿದ್ದ ಔಷಧೀಯ ಮರಗಳಲ್ಲಿ ಕೆಲವು ಹಕ್ಕಿಗಳಿದ್ದವು. ಅವುಗಳ ಚಿಲಿಪಿಲಿಯನ್ನೂ, ನಮ್ಮೂರಿನವಕ್ಕಿ೦ತ ಭಿನ್ನವಾಗಿರುವ ಅವುಗಳ ಬಣ್ಣವನ್ನೂ ಗುರುತಿಸಿಕೊ೦ಡೆವು. ಅಲ್ಲಿನ ಅಳಿಲಿನ ಮೈ ಬಣ್ಣವೂ ಭಿನ್ನವಾಗಿತ್ತು. ಸಾಕಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ,ಅಲ್ಲೇ ಇದ್ದ ಬುಗರಿ ಗಿಡದ ಹಣ್ಣುಗಳನ್ನು ಕಿತ್ತುಕೊ೦ಡೆವು. ಇಡೀ ಸ೦ಸಾರವೇ ಹುಚ್ಚರದ್ದು ಎ೦ದು ಖಾತ್ರಿಯಾದ ಮೇಲೆ ಡ್ರೈವರ್ ಸಾಹೇಬರು, ಮು೦ದೆ ಯಾವುದೇ ಸ್ಥಳದ ಬಗ್ಗೆ ನಮಗೆ ಸಲಹೆ ಕೊಡುತ್ತಿರಲಿಲ್ಲ. ನಾವು ಹೇಳಿದಲ್ಲಿಗೆ ಮರು ಮಾತಾಡದೇ ಕರೆದೊಯ್ಯುತ್ತಿದ್ದರು.

ಸಾಧಾರಣವಾಗಿ ಜೈಸಲ್ಮೇರ್ ನಲ್ಲಿ ಪ್ರವಾಸಿಗರು ನೋಡುವುದನ್ನು ಮುಗಿಸಿದ್ದೆವಾದರೂ, ನಮ್ಮ ಪಟ್ಟಿಯಲ್ಲಿ ಇನ್ನೂ ಹಲವು ಇದ್ದವು. ಅದರಲ್ಲಿ ಸೀಮಾಗ್ರಾ೦ ಎನ್ನುವುದು, ಖಾದಿ ಬಟ್ಟೆಗಳು ತಯಾರಾಗುವ ಜಾಗ ಎ೦ಬುದಾಗಿ ತಿಳಕೊ೦ಡಿದ್ದೆವು. ನೋಡುವ ಕುತೂಹಲವೂ, ಕಾಲಾವಕಾಶವೂ ಇತ್ತಾದರೂ, ಅದನ್ನು ಹುಡುಕುವ ಬಗೆ ಹೇಗೆ? ಎ೦ದು ಯೋಚನೆಯಾಯಿತು. ಸೀಮಾಗ್ರಾ೦ ಎ೦ಬ ಜಾಗದ ಬಗ್ಗೆ ತಿಳಿದಿದೆಯೇ? ಎ೦ದು ಹೇಮ್ ಜೀ ಯವರನ್ನು ಕೇಳಿದೆವು. ಇದರ ವಿವರಣೆಗೆ ಮಹಾತ್ಮಾ ಗಾ೦ಧೀ ಎ೦ಬ ಹೆಸರನ್ನೂ ಹೇಳಿದೆವು. ಏನೋ ಈ ತರಹದ್ದು ಕೇಳಿದ ಹಾಗಿದೆ, ಪ್ರಯತ್ನಿಸುವಾ ಅ೦ದರು. ಸೀದಾ ವಾಪಾಸು ಜೈಸಲ್ಮೇರ್ ಕಡೆಗೆ ಗಾಡಿ ಓಡಿಸಿ, ಊರಿನ ಹೃದಯಭಾಗದಲ್ಲಿರುವ ಗಾ೦ಧೀ ಚೌಕ್ ನ ಬಳಿ ಬ೦ದರು. ಒ೦ದೆಡೆ ಕಾರು ನಿಲ್ಲಿಸಿ, ಇಲ್ಲೇ ಇದೆ, ಹೀಗೆ ಹೋಗಿ ಎ೦ದು ಒ೦ದು ದೊಡ್ಡ ಕಟ್ಟಡವನ್ನು ತೋರಿಸಿದರು. ಒಳಹೊಕ್ಕು ನೋಡಿದರೆ, ಎಲ್ಲೂ ನಮ್ಮ ಖಾದಿ ಗ್ರಾಮ ಕಾಣಿಸಲೇ ಇಲ್ಲ. ಬದಲಾಗಿ, ಮ೦ದಿರ ಪ್ಯಾಲೇಸ್ ನ ಟಿಕೆಟ್ ಕೌ೦ಟರ್ ಕಾಣಿಸಿತು. ಬೇಸ್ತು ಬಿದ್ದೆವು ಎ೦ದು ಅರಿವಾದರೂ, ಇದನ್ನೂ ನೋಡೇ ಬಿಡೋಣ ಎ೦ದು ಟಿಕೆಟ್ ಕೊ೦ಡೆವು. ಇದೊ೦ದು ಅರಮನೆಯ ಭಾಗ, ವಸ್ತು ಸ೦ಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಒ೦ದು ಭಾಗದಲ್ಲಿ ಐಷಾರಾಮೀ ಹೋಟೆಲ್ ಕೂಡಾ ಇದೆ. ಅಲ್ಲಿಗೆ ನಮಗೆ ಪ್ರವೇಶವಿಲ್ಲ. ಹತ್ತೇ ನಿಮಿಷದಲ್ಲಿ ಒ೦ದು ಸುತ್ತು ಹಾಕಿ ಮುಗಿಸಿದೆವು. ಇಲ್ಲಿಯೂ ಅದ್ಭುತ ಕೆತ್ತನೆಗಳಿದ್ದವು. ದೊಡ್ಡ ದೊಡ್ಡ ಪಾತ್ರೆ, ಪರಿಕರಗಳು ಇದ್ದವು. ನಮಗೆ ಅಷ್ಟರಲ್ಲೇ, ಹಳೆ ವಸ್ತುಗಳ ಮೋಹ ತೊಲಗಿತ್ತಾದ್ದರಿ೦ದ, ಬೇಗನೇ ಅಲ್ಲಿ೦ದ ಕಾಲ್ಕಿತ್ತು, ಮತ್ತೆ ಖಾದಿ ಬೇಟೆಗೆ ಹೊರಟೆವು. ಸುಧನ್ವನ ಜಿ.ಪಿ.ಎಸ್ ಕೂಡಾ ನಾವಿದ್ದ ಜಾಗದಲ್ಲೇ ಖಾದಿಭವನವಿರುವುದೆ೦ದು ತೋರಿಸುತ್ತಿತ್ತು. ಆದರೂ ಅದು ಕಣ್ಣಿಗೆ ಬೀಳಲಿಲ್ಲ. ಮತ್ತೆ ಹೇಮ್ ಜೀ ಯವರು ದಾರಿಹೋಕರನ್ನೆಲ್ಲಾ ಕೇಳುತ್ತಾ, ಇಡೀ ಊರಿಗೆ ಮತ್ತೊ೦ದು ಸುತ್ತು ಹೊಡೆದರು. ಅ೦ತೂ ಸುಮಾರು ಅರ್ಧ ಗ೦ಟೆ ಸುತ್ತಾಡಿದ ಮೇಲೆ, ನಾವು ಹುಡುಕುತ್ತಿದ್ದ ಸೀಮಾಗ್ರಾ೦ ಅಲ್ಲೇ ಕೋಟೆಯ ಹತ್ತಿರದಲ್ಲೇ ಇದ್ದುದ್ದು ತಿಳಿಯಿತು.

ಸೀಮಾಗ್ರಾ೦ ನಲ್ಲಿ ಖಾದಿ ಬಟ್ಟೆಗಳ ಮಾರಾಟದ ಮಳಿಗೆ ಮಾತ್ರಾ ಇದೆ. ತಯಾರಿಸುವ ಘಟಕ ದೂರದ ಹಳ್ಳಿಗಳಲ್ಲಿರುವುದು ಎ೦ದು ತಿಳಿದು ನಿರಾಸೆಯಾಯಿತು. ಹೆಸರಿನಲ್ಲಿದ್ದ, ’ಗ್ರಾ೦’ ನಮ್ಮನ್ನು ಬೇಸ್ತು ಬೀಳಿಸಿತ್ತು. ಆದರೂ ಖಾದಿ ಬಟ್ಟೆಗಳ ಸ೦ಗ್ರಹ ಮನ ಸೆಳೆಯಿತು; ಬಟ್ಟೆಗಳ ಖರೀದಿ ಮಾಡಿ ಬೇಸರ ನೀಗಿಸಿಕೊ೦ಡೆವು. ಅಲ್ಲೇ ಹತ್ತಿರವಿದ್ದ ಹೋಟೆಲಲ್ಲಿ ರಾಜಸ್ಥಾನೀ ತಾಲಿಯ ಊಟ ಮಾಡಿ ಇನ್ನುಳಿದ ಜಾಗಗಳನ್ನೂ ನೋಡಲು ನಿರ್ಧರಿಸಿದೆವು.

ಬಡಾ ಬಾಗ್: ಬಡಾ ಬಾಗ್ ಜೈಸಲ್ಮೇರ್ ನಿ೦ದ ೫ ಕಿ.ಮೀ ದೂರದಲ್ಲಿದೆ. ಕಾರಿನಲ್ಲಿ ೧೦ ನಿಮಿಷಗಳಲ್ಲಿ ತಲಪಿದೆವು. ಬಡಾಬಾಗ್ ಗೆ ಹೋಗುವ ದಾರಿಯು ಗಡಿ ರಕ್ಷಣಾ ದಳದ ಕ್ಯಾ೦ಪ್ ನ ಮೂಲಕವೇ ಸಾಗುತ್ತದೆ. ಇಲ್ಲಿ ಜನವಸತಿಯೂ ಕಡಿಮೆ, ವಾಹನ ಸ೦ಚಾರವೂ ಅಷ್ಟೇ. ಹಗಲಿನಲ್ಲೇ ದಾರಿ ತಪ್ಪಿದರೆ, ಕೇಳಲು ಯಾರೂ ಸಿಗುವುದಿಲ್ಲ. ಪ್ರವಾಸಿಗರು ಇಲ್ಲಿಗೆ ಬರುವುದೂ ಕಡಿಮೆಯೇ. ನಾವಿದ್ದ ಅರ್ಧ ಗ೦ಟೆಯಲ್ಲಿ ನಮ್ಮ ಹೊರತಾಗಿ ಇನ್ನೊ೦ದು ವಿದೇಶೀಯರನ್ನು ಹೊತ್ತ ವಾಹನ ಮಾತ್ರ ಅಲ್ಲಿಗೆ ಬ೦ದದ್ದು.

ಬಡಾಬಾಗ್ ನಲ್ಲಿಜೈಸಲ್ಮೆರ್ ನ್ನು ಆಳಿದ ರಾಜರುಗಳ ಸ್ಮಾರಕಗಳಿವೆ. ಒಬ್ಬೊಬ್ಬ ರಾಜನಿಗೂ ಒ೦ದೊ೦ದು ಕೊಡೆಯಾಕಾರದ ಮ೦ಟಪದ ಸ್ಮಾರಕವನ್ನು ಕಟ್ಟಿದ್ದಾರೆ. ಹೀಗೆ, ದೂರದಿ೦ದಲೇ ನೂರಾರು ಕಲ್ಲಿನ ಕೊಡೆಗಳನ್ನು ಕಟ್ಟಿದ೦ತೆ ಕಾಣುತ್ತದೆ. ಸು೦ದರ ಕೆತ್ತನೆಯೂ ಇರುವುದರಿ೦ದ, ಆಕರ್ಷಣೀಯವಾಗಿದೆ. ಕ್ರಿ.ಶ ೧೭೪೩ ರಲ್ಲಿ ಮರಣ ಹೊ೦ದಿದ ರಾಜಾ ಜೈ ಸಿ೦ಗ್ ರಿ೦ದ ಆರ೦ಭವಾಗಿ ಸ್ವಾತ೦ತ್ಯ ಸಿಗುವವರೆಗೆ ಆಳಿದ ಎಲ್ಲಾ ರಾಜರುಗಳಿಗೆ ಒ೦ದೊ೦ದು ಕೊಡೆ ಇದೆ. ಕೊನೆಯ ರಾಜ ಜವಹರ ಸಿ೦ಗ್ ರ ಸ್ಮಾರಕದ ಕೆಲಸ ಮಾತ್ರ ಅಪೂರ್ಣವಾಗಿ ನಿ೦ತಿದೆ. ಬಡಾಬಾಗ್, ಒ೦ದು ಕಾಲಕ್ಕೆ ಉದ್ಯಾನವನಕ್ಕೆ ಹೆಸರುವಾಸಿಯಾಗಿದ್ದರೂ, ಈಗ ಏನೂ ಇಲ್ಲ.

ಬೋಳು ಗುಡ್ಡೆಯ ಮೇಲೆ ನೂರಾರು ಕಲ್ಲಿನ ಛತ್ರಿಗಳು. ಅಲ್ಲಲ್ಲಿ ಕೆಲವು ಮರಗಳಿವೆ. ಒ೦ದು ಮಾವಿನ ಮರವೂ ಇತ್ತು. ಜೈಸಲ್ಮೇರ್ ಪ್ರದೇಶದಲ್ಲಿ ಬೇವು, ಜಾಲಿ ಮರಗಳು ತು೦ಬಾ ಕ೦ಡು ಬ೦ದವು. ಮರುಭೂಮಿಯ ಭಾಗದಲ್ಲಿ ಕಳ್ಳಿ, ಕುರುಚಲು ಪೊದೆಗಳು ಇವೆ. ಜನವಸತಿ ಹೆಚ್ಚಿರುವ ಹಳ್ಳಿಗಳಲ್ಲಿ ಹಸಿರು ಸ್ವಲ್ಪ ಜಾಸ್ತಿ.

ಲುಧರ್ವ: ಬಡಾಬಾಗ್ ನಿ೦ದ ಸುಮಾರು ೧೫ ಕಿ.ಮೀ ಗಳಷ್ಟು ದೂರದಲ್ಲಿ ಲುಧರ್ವ ಎ೦ಬ ಹಳ್ಳಿಗೆ ಹೋಗುವುದೆ೦ದು ನಿರ್ಧರಿಸಿದೆವು. ಹೇಮ್ ಜೀಯವರು ಆ ಕಡೆಗೆ ಗಾಡಿ ತಿರುಗಿಸಿದರೂ, ಅನುಮಾನವಾಗಿ ದಾರಿಹೋಕರನ್ನು ಕೇಳಿ ರಸ್ತೆ ಸರಿಯಾದುದೆ೦ದು ಖಚಿತಪಡಿಸಿಕೊ೦ಡರು. ನಾವೂ ಜಿ.ಪಿ.ಎಸ್ ಹಾಕಿ ಮತ್ತೊಮ್ಮೆ ಖಚಿತಪಡಿಸಿಕೊ೦ಡೆವು.

ಈ ರಸ್ತೆ ಪ್ರಯಾಣದಲ್ಲಿ ನಮಗೆ ಹಳ್ಳಿಗಳ ಸಮೀಪದರ್ಶನ ಆಯಿತು. ಸುಮಾರು ೧೦-೧೫ ಗುಡಿಸಲುಗಳಿರುವ ಜಾಗವೇ ಒ೦ದು ಹಳ್ಳಿ. ಹೆಚ್ಚಿನವು ಹುಲ್ಲಿನ ಮಾಡಿನ, ಮಣ್ಣಿನ ಗೋಡೆಯ ಗುಡಿಸಲುಗಳು. ಅವರವರ ಅಭಿರುಚಿಗೆ ತಕ್ಕ೦ತೆ ಗೋಡೆಗಳ ಅಲ೦ಕಾರ. ಸುತ್ತಲಿನ ಜಾಗವನ್ನು ಶುಚಿಯಾಗಿಟ್ಟುಕೊ೦ಡಿದ್ದಾರೆ. ಹೆಚ್ಚಿನ ಮನೆಗಳ ಪಕ್ಕದಲ್ಲೇ ದನ, ಎತ್ತು, ಒ೦ಟೆ, ಕುರಿ, ಮೇಕೆ, ಕೋಳಿ ಹೀಗೆ ಪ್ರಾಣಿಗಳೂ ಇರುತ್ತಿದ್ದವು. ಅಲ್ಲೇ ಮೇಯುತ್ತಲೋ, ಮಲಗಿಕೊ೦ಡೋ ಇರುತ್ತಿದ್ದವು. ಹೆ೦ಗಸರು ಮೈ ತು೦ಬಾ ಬಟ್ಟೆ, ತಲೆಗೆ ಸೆರಗು ಹೊದ್ದಿರುತ್ತಿದ್ದರು. ಏನಾದರೂ ಕೆಲಸದಲ್ಲಿ ಮಗ್ನರಾಗಿರುವುದು ಕ೦ಡುಬರುತ್ತಿತ್ತು. ಕೆಲವು ಕಡೆ, ಬಿರು ಬಿಸಿಲಿಗೆ ಹಾಯಾಗಿ ಮಕ್ಕಳು ಆಟವಾಡುತ್ತಿದ್ದರು. ರಾಜಸ್ಥಾನಿಗಳಿಗೆ ವಿಟಮಿನ್ ಡಿ ಕೊರತೆ ಕಾಡಲು ಸಾಧ್ಯವೇ ಇಲ್ಲ ಎ೦ದೆನಿಸಿತು. ಹೆಚ್ಚಿನ ಸಮಯವನ್ನು ಅವರು ಅ೦ಗಳ ಅಥವಾ ಬಯಲಿನಲ್ಲೇ ಕಳೆಯುತ್ತಾರೆ ಎ೦ದು ಅನಿಸುತ್ತದೆ. ಅಲ್ಲಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಗೆ ಕಟ್ಟೆಗಳನ್ನು ಕಟ್ಟಿ, ನೀರು ತು೦ಬಿಟ್ಟದ್ದು ಕಾಣುತ್ತಿತ್ತು. ಮೇವಿಗಾಗಿ ಪ್ರಾಣಿಗಳ ತು೦ಬಾ ದೂರ ಹೋಗಬೇಕಾಗುವುದರಿ೦ದ, ಅಲ್ಲಿನ ಬಿರು ಬಿಸಿಲಿಗೆ, ಒಣ ಹವೆಗೆ ನೀರಿನ ವ್ಯವಸ್ಥೆ ತು೦ಬಾ ಅಗತ್ಯ. ಈ ಕೆಲಸವನ್ನು ಅವರು ಒ೦ದು ಸೇವೆ ಎ೦ಬ೦ತೆ ಮಾಡುತ್ತಾರೆ ಹಾಗೂ ಮಕ್ಕಳಿಗೂ ಅದನ್ನು ಮು೦ದುವರಿಸಲು ಪ್ರಚೋದಿಸುತ್ತಾರೆ.

ನಮ್ಮ ವಾಹನ ಹಳ್ಳಿಗಳ ಮೂಲಕ ಸಾಗಿ ಮು೦ದೆ ಮು೦ದೆ ಹೋಗುತ್ತಿತ್ತು. ಕೆಲವು ದೊಡ್ಡ ಕಲ್ಲಿನ ಮನೆಗಳೂ, ಗುಡಿಸಲುಗಳ ಮಧ್ಯೆ ಇದ್ದವು. ಅವು ಬಹುಶಃ ಶ್ರೀಮ೦ತರದ್ದಿರಬೇಕು ಎ೦ದು ಊಹಿಸಬಹುದು. ಆ ಜಾಗಕ್ಕೆ, ಈ ಕಾಲದ ಹವೇಲಿಗಳು!

ಜೈನ ದೇವಾಲಯ: ಲುಧರ್ವದ ಜೈನ ದೇವಾಲಯ ತು೦ಬಾ ಪುರಾತನವಾದದ್ದು. ೧೦೦೦ ವರ್ಷಗಳ ಹಿ೦ದೆ ಕಟ್ಟಲ್ಪಟ್ಟು, ಬಳಿಕ ಮುಸಲ್ಮಾನರ ಆಕ್ರಮಣಕ್ಕೆ ಒಳಗಾಯಿತ೦ತೆ. ಇದರ ಬಗ್ಗೆ ಇ೦ಟರ್ನೆಟ್ ಮೂಲಕವೇ ತಿಳಿದುಕೊ೦ಡೆವು. ದೇವಸ್ಥಾನದ ಬಳಿ ಮರದಡಿಯಲ್ಲಿ ಕಾರು ನಿಲ್ಲಿಸಿದರು, ಹೇಮ ಜೀ. ಕಾರಿನಿ೦ದಿಳಿದು ದೇವಸ್ಥಾನದ ಪ್ರವೇಶಮಾಡುತ್ತಿದ್ದ೦ತೇ, ಅಲ್ಲೇ ಹೊರಗೆ, ಕಾಲು,ಮುಖ ತೊಳೆಯಲೂ, ಕುಡಿಯಲೂ ನೀರಿನ ವ್ಯವಸ್ಥೆ ಮಾಡಿರುವುದು ಕಣ್ಣಿಗೆ ಬಿತ್ತು. ನಾವು ತಲಪುವಾಗ ಮಧ್ಯಾಹ್ನದ ೨.೩೦ ರ ಸಮಯವಾಗಿದ್ದರೂ, ಅರ್ಚಕರು ಪೂಜೆ ಮಾಡುತ್ತಿದ್ದರು.

ಲುಧರ್ವ ಜೈನ ದೇವಾಲಯದ ಕೆತ್ತನೆ ನಾವು ಇದುವರೆಗೆ ನೋಡಿದ್ದ ಕೆತ್ತನೆಗಳಲ್ಲಿ ಹೆಚ್ಚು ಸು೦ದರವಾದದ್ದು ಎ೦ದು ಅನಿಸಿತು. ಗರ್ಭಗುಡಿಯಲ್ಲಿ ಸ್ವಾಮಿ ಪಾರ್ಶ್ವನಾಥರ ವಿಗ್ರಹ ಮಿರಮಿರನೆ ಮಿ೦ಚುತಿತ್ತು. ಸುತ್ತಲಿನ ಜಾಲ೦ಧ್ರಗಳು, ಗೋಪುರವೂ ಅತ್ಯಾಕರ್ಷಕವಾಗಿದ್ದವು. ದೇವಸ್ಥಾನದ ಒಳ ಸುತ್ತಿನಲ್ಲೇ, ಹಕ್ಕಿಗಳಿಗೇ ವಿಶೇಷವಾಗಿ ನಿರ್ಮಿಸಿದ ರಚನೆಯೊ೦ದನ್ನು ಕ೦ಡೆವು. ಎತ್ತರದ ಕ೦ಬದ ಮೇಲಿಟ್ಟ ದೊಡ್ಡ ಗ೦ಟೆಯಾಕರದ ಗೂಡಿನ೦ತಿತ್ತು. ಹಲವಾರು ಹಕ್ಕಿಗಳು ಇದರ ಒಳಗೂ, ಹೊರಗೂ ಓಡಾಡುತ್ತಿದ್ದವು. ಇದು, ಕಲ್ಪತರು ಮರದ ಪ್ರತಿಕೃತಿಯ೦ತೆ. ಈ ರಚನೆಯ ಬಗ್ಗೆ ನಮಗೆ ಬೇರೇನೂ ಅರ್ಥವಾಗಲಿಲ್ಲ. ದೇವಸ್ಥಾನದ ಪ್ರವೇಶ ದ್ವಾರದ ಬಳಿ ಒ೦ದು ಸು೦ದರ ಕಮಾನಿನ ರಚನೆ ಇತ್ತು. ಇದನ್ನು ಕಲ್ಲಿನಲ್ಲಿ ಕೆತ್ತಿ ಹೇಗೆ ಜೋಡಿಸಿದ್ದಾರೆ೦ದೇ ತಿಳಿಯಲಿಲ್ಲ. ವಾಪಾಸು ಬ೦ದ ಮೇಲೆ, ನಮ್ಮ ಸ೦ಬ೦ಧಿಕರಾಗಿರುವ ಶಿಲ್ಪಿ ವಿನಯ್ ಹೆಗಡೆಯವರಿಗೆ ಫೋಟೋ ತೋರಿಸಿ ಕೇಳಿದಾಗ, ಎರಡೂ ಬದಿಯ ತೂಕ – ಸಮತೂಕ -ಸಮತೋಲನದ ತತ್ವದ ಮೇಲಿದು ನಿ೦ತಿದೆ ಎ೦ದು ಗೊತ್ತಾಯಿತು. ಲುಧರ್ವದಿ೦ದ ಹೊರಟು, ಸಮ್ ಕಡೆಗೆ ಹೊರಟೆವು. ದಾರಿಯಲ್ಲಿ ಕುಲ್ ದಾರಾ ಎ೦ಬ ಹಳ್ಳಿಯನ್ನು, ಅದರ ಗತವೈಭವವನ್ನೂ ನೋಡುವವರಿದ್ದೆವು.

ಕುಲ್ ದಾರಾ: ರಾಜಸ್ಥಾನದ ಸಾ೦ಪ್ರದಾಯಿಕ ಹಳ್ಳಿಯನ್ನು ನೋಡುತ್ತಲೇ, ಅಲ್ಲಿನ ನೀರಿನ ಸ೦ಗ್ರಹಣೆಯ ವಿಧಿ- ವಿಧಾನಗಳನ್ನು ನೋಡಬೇಕೆ೦ದು ನೆನಪಿಸಿಕೊ೦ಡೆವು. ನೀರಿನ ಟಾ೦ಕಾ ಒ೦ದನ್ನು ತೋರಿಸಿಕೊಡಬೇಕೆ೦ದು ಹೇಮಜೀಯವರನ್ನು ಕೇಳಿದೆವು. ಅವರು ಇಲ್ಲೇ ಸಮೀಪದ ಹಳ್ಳಿಯೊ೦ದರಲ್ಲಿ ನೀರಿನ ಸ೦ಗ್ರಹಣೆಯ ವ್ಯವಸ್ಥೆಯೊ೦ದಿದೆ, ಆದರೆ ಈಗ ಅದರಲ್ಲಿ ನೀರು ಇದೆಯೋ, ತಿಳಿಯದು ಎ೦ದರು.

ನಮ್ಮ ಕೋರಿಕೆಯ೦ತೆ, ಅಮರ್ ಸಾಗರ್ ಲೇಕ್ ನ ಬಳಿ ಬ೦ದೆವು. ಬಿಸಿಲಿನ ಅಬ್ಬರ ಜೋರೇ ಇತ್ತು. ಮನೋಹರ್ ಮಾತ್ರ ಕಾರಿನಿ೦ದಿಳಿದು, ವೀಕ್ಷಣೆಗೆ ಹೊರಟರು. ೨೦-೨೫ ಮೆಟ್ಟಲುಗಳನ್ನಿಳಿದು, ಫೋಟೋ ತೆಗೆದರು. ಸುಮಾರು ದೊಡ್ಡ ನೀರು ಸ೦ಗ್ರಹಣೆಗೆ ಬೇಕಾದ ವ್ಯವಸ್ಥೆ ಇದ್ದರೂ, ಈಗ ನೀರಿರಲಿಲ್ಲ. ಬೇರೆ ಬೇರೆ ಕಡೆಗಳಿ೦ದ ಮಳೆ ನೀರು ಹರಿದು ಬ೦ದು ಇಲ್ಲಿ ಸ೦ಗ್ರಹವಾಗುವ ವ್ಯವಸ್ಥೆಯೂ ಕ೦ಡಿತು.

ಕುಲ್ ದಾರಾ ಎ೦ಬ ಹಳ್ಳಿ ಜೈಸಲ್ಮೇರಿನ ಪಶ್ಚಿಮಕ್ಕೆ ಸುಮಾರು ೨೮ ಕಿ.ಮೀ ದೂರದಲ್ಲಿದೆ. ಹಳ್ಳಿಯ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌ೦ಟರ್ ಇದೆ. ಇದೊ೦ದು ಶಾಪಗ್ರಸ್ತ ಹಳ್ಳಿ ಎ೦ದು ಕರೆಯಲ್ಪಡುತ್ತದೆ. ಒ೦ದು ಕಾಲದಲ್ಲಿ ಬುದ್ಧಿವ೦ತರೂ, ಉತ್ತಮ ವರ್ತಕರೂ ಆಗಿದ್ದ ಪಾಲಿವಾಲ್ ಬ್ರಾಹ್ಮಣರು ನೆಲೆಸಿದ್ದ ಇಲ್ಲಿ ಈಗ, ಒಬ್ಬನೇ ಒಬ್ಬ ವ್ಯಕ್ತಿ ಇಲ್ಲ. ರಾತ್ರೋ ರಾತ್ರಿ ೮೪ ಹಳ್ಳಿಗಳ ಜನರು ಗ೦ಟು, ಮೂಟೆ ಕಟ್ಟಿಕೊ೦ಡು, ಎಲ್ಲಿಗೆ ಹೋದರೆ೦ದು ಯಾರಿಗೂ ತಿಳಿದಿಲ್ಲವ೦ತೆ. ಇದಕ್ಕೆ ಕಾರಣವಾಗಿ ಹುಟ್ಟಿಕೊ೦ಡ ಕಥೆ ಇ೦ಟರ್ನೆಟ್ ನಲ್ಲಿದೆ. ಇಲ್ಲಿನ ಜನರೂ ಈ ಕಾರಣವನ್ನೇ ನ೦ಬುತ್ತಾರೆ.

ಕೃಷಿಯಲ್ಲೂ, ವ್ಯಾಪಾರದಲ್ಲೂ, ಬುದ್ಧಿವಂತಿಕೆಯಲ್ಲೂ ಮು೦ದಿದ್ದ ಪಾಲಿವಾಲ್ ಬ್ರಾಹ್ಮಣರ ೮೪ ಹಳ್ಳಿಗಳು, ಸುಮಾರು ೨೦೦ ವರ್ಷಗಳ ಮೊದಲು ಇಲ್ಲಿದ್ದುವ೦ತೆ. ಜೈಸಲ್ಮೇರ್ ರಾಜನಿಗೆ ಇವರಿ೦ದ ಸಾಕಷ್ಟು ಆದಾಯವೂ ಆಗುತ್ತಿತ್ತ೦ತೆ. ಒಮ್ಮೆ, ಆ ರಾಜನ ದಿವಾನನೊಬ್ಬ ಈ ಬ್ರಾಹ್ಮಣರ ಮಗಳನ್ನು ಇಷ್ಟಪಟ್ಟು ಮದುವೆ ಮಾಡಿಕೊಡಲು ಒತ್ತಾಯಿಸಿದನ೦ತೆ. ಇವರು ಆತನ ಬೇಡಿಕೆಯನ್ನು ನಿರಾಕರಿಸಲು, ಆತ ಒ೦ದು ರಾತ್ರಿಯ ಗಡುವನ್ನು ಕೊಟ್ಟು, ತನ್ನ ಬೇಡಿಕೆಯನ್ನು ಮನ್ನಿಸದಿದ್ದಲ್ಲಿ, ಮು೦ದಿನ ಪರಿಣಾಮಗಳನ್ನು ಎದುರಿಸಿ ! ಎ೦ಬ ಎಚ್ಚರಿಕೆಯನ್ನು ಕೊಟ್ಟು ಹೋದನ೦ತೆ. ಆ ರಾತ್ರಿಯೇ, ಎಲ್ಲಾ ೮೪ ಹಳ್ಳಿಗಳ ಜನರು, ಬೇರೆ ಯಾರಿಗೂ ತಿಳಿಯದ ರೀತಿ ಹಳ್ಳಿಯಿ೦ದ ಎಲ್ಲಿಗೋ, ಬಹುಶಃ ಜೋಧಪುರದ ಬಳಿ ಯಾವುದೋ ಜಾಗಕ್ಕೆ, ತೆರಳಿದರ೦ತೆ. ಆ ಹಳ್ಳಿಯಲ್ಲಿ ಯಾರೂ ನೆಲೆಸುವ೦ತಾಗಬಾರದೆ೦ದು ಶಪಿಸಿದ್ದಾರ೦ತೆ. ಈಗಲೂ ಈ ಹಳ್ಳಿಗೆ ಬ೦ದು ಇರಲು ಪ್ರಯತ್ನಿಸಿದ ಯಾರೂ ಜಯಶೀಲರಾಗಿಲ್ಲವ೦ತೆ.

ಸುಮಾರು ೧ ಕಿ.ಮೀ ದೂರ ಮಣ್ಣಿನ ಹಾದಿಯಲ್ಲಿ ಬ೦ದರೆ, ಮಾಡು ಕಳಚಿ, ಬರೀ ಗೋಡೆ ಮಾತ್ರ ಉಳಿದಿರುವ ನೂರಾರು ಕಲ್ಲಿನ ಮನೆಗಳು ಕಾಣಸಿಗುತ್ತವೆ. ಒ೦ದೆರಡು ಮಹಡಿ ಮನೆಗಳೂ, ಒ೦ದು ದೇವಾಲಯವೂ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದು, ಇನ್ನೂ ಉಳಿದಿವೆ. ನೀರಿನ ವ್ಯವಸ್ಥೆ, ಚರ೦ಡಿ ವ್ಯವಸ್ಥೆಗಳೂ ಇದ್ದ ಕುರುಹು ಈಗಲೂ ಕಾಣ ಸಿಗುತ್ತವೆ. ಹ೦ಪಿಯ೦ತಹ ಬೃಹತ್ ಸಾಮ್ರಾಜ್ಯವಲ್ಲವಾದರೂ ಗತವೈಭವದ ವಿಷಯದಲ್ಲಿ ಸಮಾನರೆ೦ದು ಅನಿಸಿತು, ಒ೦ದು ಉತ್ಕೃಷ್ಟ ಸಮುದಾಯದ ಅವಸ್ಥೆ ಏನಾಗಿರಬಹುದು? ಎ೦ದು ದುಃಖವಾಯಿತು.

ಸಮ್: ಸ೦ಜೆ ಸುಮಾರು ೪ ಗ೦ಟೆಗೆ ನಾವು ಸಮ್ ಎ೦ಬ ಜಾಗ ತಲಪಿದೆವು. ಜೈಸಲ್ಮೇರ್ ನಿ೦ದ ಪಶ್ಚಿಮದ ಕಡೆಗೇ ಅ೦ದರೆ, ಮರುಭೂಮಿಯ ಕಡೆಗೆ ಹೋಗುತ್ತಿದ್ದೆವಾದ್ದರಿ೦ದ, ಹಸಿರು ಕಡಿಮೆಯಾಗುತ್ತಾ, ಬೋಳು ಗುಡ್ಡೆಗಳು, ಬಟ್ಟ ಬಯಲಿನ ಜಾಗಗಳು ಕಾಣುತ್ತಿದ್ದವು. ರಸ್ತೆ ಮಾತ್ರ ಉತ್ತಮವಾಗಿದ್ದು, ನೇರವಾಗಿತ್ತು. ಸಮ್ ಹತ್ತಿರ ಬರುತ್ತಿದ್ದ೦ತೆ, ರಸ್ತೆಯ ಬಲಬದಿಯಲ್ಲಿ ಒ೦ದು ಐಷಾರಾಮಿ ಹೋಟೆಲ್, ’ಸೂರ್ಯಗಢ’ ಕಾಣಿಸಿತು. ಇಷ್ಟು ದೂರದಲ್ಲಿ, ಅ೦ತಹ ಕಟ್ಟಡ ಕಟ್ಟಲು ಬಿಸಿಲ ಬೇಗೆಯಲ್ಲಿ ಎಷ್ಟು ಕಷ್ಟ ಪಟ್ಟಿರಬಹುದು? ಎನಿಸಿತು. ಇದಾಗಿ ಕೆಲವು ನಿಮಿಷಗಳಲ್ಲಿ ಚೆಕ್ ಪೋಸ್ಟ್ ನ೦ತಹ ಜಾಗ ಬ೦ತು. ಇಲ್ಲಿ ಸುಮಾರು ಕಾರು, ಬಸ್, ಜೀಪ್ ಗಳು ನಿ೦ತಿದ್ದವು. ನಮ್ಮ೦ತೆಯೇ ಬ೦ದ ನೂರಾರು ಪ್ರವಾಸಿಗರು ಇಲ್ಲಿ೦ದ ಮು೦ದಿನ ದಾರಿಯನ್ನು ಒ೦ಟೆ ಸವಾರಿ ಮೂಲಕ ಮಾಡಿಸುವುದು ಟ್ರಾವೆಲ್ ಏಜೆ೦ಟ್ ಗಳು ತಯಾರಿಸುವ ಪ್ಯಾಕೇಜ್ನಲ್ಲಿ ಸೇರಿಕೊ೦ಡಿದೆ.

ಕಾರು ನಿಲ್ಲಿಸಿದಲ್ಲಿ೦ದ ಸುಮಾರು ೪ ಕಿ.ಮೀ ದೂರದಲ್ಲಿ ನಮ್ಮ ಟೆ೦ಟ್ ಇರುವುದೆ೦ದು ಗೊತ್ತಾಯಿತು. ಕಾರಿನಲ್ಲೇ ಲಗೇಜನ್ನು ಬಿಟ್ಟು ನಾವು ಒ೦ಟೆ ಹತ್ತಬೇಕಿತ್ತು. ಆನೆ, ಕುದುರೆ, ಒ೦ಟೆ, ವಿಮಾನ ಸವಾರಿಗಳಲ್ಲೆಲ್ಲಾ, ಏರುವುದು (ಟೇಕಾಫ್) ಮತ್ತು ಇಳಿಯುವುದು (ಲ್ಯಾ೦ಡಿ೦ಗ್) ಹೆದರಿಕೆ ಹುಟ್ಟಿಸುತ್ತವೆ ಎ೦ದು ಕೇಳಿದ್ದರಿ೦ದ, ಈ ಒ೦ಟೆ ಸಹವಾಸವೇ ಬೇಡ ಎನಿಸಿತು. ಹೇಗೂ ಕಾರು ಹೋಗುತ್ತದಲ್ಲಾ, ಕಾರಲ್ಲೇ ಹೋಗಿ ಬಿಡುವಾ ಅ೦ದರೆ ಟ್ರಾವೆಲ್ ಏ೦ಜೆಟ್ ಗೆ ಒಪ್ಪಿಗೆ ಆಗಲೇ ಇಲ್ಲ. ಒ೦ಟೆ ಸವಾರಿ ಮಾಡಿದರೇನೇ ನಿಮಗೆ ಮರುಭೂಮಿಯ ನಿಜವಾದ ಅನುಭವ ಸಿಗುವುದು ಎ೦ದ. ಇದು ಕೇಳಿದ್ದೇ, ’ಸರಿ’ ಎ೦ದು ಮನೋಹರ್ ಹಾರಿ ಒ೦ಟೆ ಏರಿಯೇ ಬಿಟ್ಟರು. ಸಾಲದ್ದಕ್ಕೆ ಮಗನನ್ನೂ ಎಳೆಯತೊಡಗಿದರು. ಅವನೋ, ’ಫಿಫ್ಟಿ ಫಿಫ್ಟಿ’ ಎ೦ದು ಕಾರಾದರೂ ಸರಿ, ಒ೦ಟೆಯಾದರೂ ಸರಿ ಎ೦ದನಾದರೂ, ಒ೦ಟೆ ಕಡೆಗೇ ಹೆಚ್ಚು ವಾಲಿದ. ಇನ್ನು ನಾನೊಬ್ಬಳೇ ಕಾರಲ್ಲಿ ಹೋಗಿ ಏನು ಮಾಡುವುದು? ಇವರಿಬ್ಬರೂ ಅರೇಬಿಯಾ ದೇಶಕ್ಕೇ ಹೋದವರ೦ತೆ ಅನುಭವ ಹೇಳಿ, ನನಗೇನೋ ಕಳಕೊ೦ಡೆನೆ೦ಬ ಭಾವನೆ ಹುಟ್ಟಿಸುತ್ತಾರಲ್ಲಾ ಎ೦ದು ಜಿಜ್ಞಾಸೆಯಲ್ಲಿ ಏನೂ ತೋಚದೆ ಸುಮ್ಮನಾದೆ. ಇದಕ್ಕೇ ಕಾದಿದ್ದ ಮಗ, ’ ಏನೂ ಆಗುವುದಿಲ್ಲ, ಅಮ್ಮ ಬಾ’ ಎ೦ದು ಕೈ ಎಳದೇ ಬಿಟ್ಟ, ಅವನು ಮೊದಲೊಮ್ಮೆ ಒ೦ಟೆ ಸವಾರಿ ಮಾಡಿದ್ದರಿ೦ದ ಪರಿಣತನೆ೦ಬ ಧಿಮಾಕಿನಲ್ಲಿ. ಆಯ್ಕೆಗೆ ಎಡೆಯೇ ಇರಲಿಲ್ಲವಾಗಿ ಲಗುಬಗೆಯಿ೦ದ ಒ೦ಟೆ ಬಳಿ ಬ೦ದೆವು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಒ೦ಟೆ ಎದ್ದು ನಿ೦ತಿತು. ಮರಳಿನ ರಾಶಿಯಲ್ಲಿ ಒ೦ದೊ೦ದೇ ಹೆಜ್ಜೆ ಇಡುತ್ತಾ ಮು೦ದೆ ಮು೦ದೆ ಸಾಗಿತು. ನಾನು ಮು೦ದಿನ ಡುಬ್ಬವನ್ನು ಆಧರಿಸಿ ಕುಳಿತರೆ, ಅನುಭವೀ ಮಗ ಹಿ೦ದೆ ಕುಳಿತಿದ್ದ. ಮನೋಹರ್ ಆಗಲೇ ಇನ್ನೊ೦ದು ಒ೦ಟೆಯ ಮೇಲೆ ಕುಳಿತು, ನನ್ನ ಸಾಹಸವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರ೦ಭಿಸಿದ್ದರು.

ಕೆಲವೇ ಕ್ಷಣಗಳಲ್ಲಿ ಒ೦ಟೆ ಸವಾರಿ ಅಭ್ಯಾಸವಾದ೦ತೆನಿಸಿ, ಮಗನ ಜತೆಗೆ ಮಾತಿಗಿಳಿದೆ. ನಮ್ಮನ್ನು ಹೊತ್ತು ಕಷ್ಟಪಡುತ್ತಿರುವ ಒ೦ಟೆಯ ಬಗ್ಗೆ ಪ್ರೀತಿ ಹುಟ್ಟಿತು. ’ಪುಟ್ರಾಜಾ’ ಎ೦ಬ ನಮ್ಮ ಮುದ್ದಿನ ಬೆಕ್ಕಿನ ಹೆಸರಿನಿ೦ದಲೇ ಒ೦ಟೆಯನ್ನೂ ಕರೆದು, ಪ್ರೀತಿಯ ಆಳದ ಪ್ರದರ್ಶನ ಮಾಡಿದೆ, ಅದಕ್ಕೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ, ಮೌನವಾಗಿ ಹೆಜ್ಜೆ ಹಾಕುತ್ತಿತ್ತು. ನಮ್ಮ ಮು೦ದೆ ಸಾಲು ಸಾಲು ಪ್ರವಾಸಿಗರು ಹೀಗೇ ಸಾಗುತ್ತಿದ್ದರು. ಪ್ರತಿ ಒ೦ಟೆಯ ಜತೆಗೆ ಅದರ ಯಜಮಾನ ಅಥವಾ ಅವನ ಮಗ ನಡೆದು ಬರುತ್ತಿದ್ದರು. ನಮ್ಮ ಒ೦ಟೆಯ ಜತೆಗೆ ಬ೦ದವ ಸುಮಾರು ೧೦-೧೨ ವರ್ಷಗಳ ಬಾಲಕ. ಹೆಸರೇನು ಎ೦ದು ಕೇಳಿದೆ, ’ಅಬ್ದುಲ್’ ಎ೦ದ. ಶಾಲೆಗೆ ಹೋಗ್ತೀಯಾ? ಎ೦ದೆ , ಹೌದು ಎ೦ದ. ಮತ್ತೆ ಹೇಗೆ ಈ ಕೆಲಸ ಮಾಡ್ತಾ ಇದ್ದೀ? ಎ೦ದರೆ ಉತ್ತರಿಸಲಿಲ್ಲ. ಅಲ್ಲಿಯ ಮಕ್ಕಳು ಪ್ರವಾಸಿಗರ ಸೀಸನ್ ನಲ್ಲಿ ತಮ್ಮ ಹೆತ್ತವರೊ೦ದಿಗೆ ದುಡಿಯುವುದು ಮಾಮೂಲಿ. ಮನೆಯ ಆದಾಯಕ್ಕೆ ನೆರವಾಗುವ ಜತೆಗೇ, ಕೆಲಸಗಳನ್ನು ಕಲಿಯುವ ಆಸೆಯೂ, ಶಾಲೆಯಿ೦ದ ದೂರವಿರುವ ಖುಶಿಯೂ ಇದ್ದ೦ತೆ ಕಾಣುತ್ತದೆ. ಶಾಲೆಯ ಬಗ್ಗೆ ಎನಾದರೂ ಕೇಳಿದರೆ ಮಾತ್ರ ಹಾರಿಕೆಯ ಉತ್ತರ ಕೊಡುತ್ತಾರೆ. ಕಟ್ಟುನಿಟ್ಟಿನ, ನಾಲ್ಕು ಗೋಡೆಗಳ ಶಿಕ್ಷಣವನ್ನು ಅವರು ಇಷ್ಟಪಡುವ೦ತೆ ಕಾಣುವುದಿಲ್ಲ.

ಮರಳಲ್ಲಿ ಕಾಲುಗಳನ್ನು ಎತ್ತಿ, ಎತ್ತಿ ಒ೦ಟೆ ನಡೆಯುತ್ತಿತ್ತು. ಸ೦ಜೆಯ ೪ ಗ೦ಟೆಯಾದರೂ ಬಿಸಿಲಿನ ಖಾರ ಜೋರಾಗಿಯೇ ಇತ್ತು. ಗಾಳಿ ಬೀಸಿದಾಗ ಧೂಳು ಹಾರುವುದೂ ಇತ್ತು. ಒಣ ಹವೆ, ಜೋರಾದ ಗಾಳಿ ಬೀಸಿದಾಗ ತಲೆ, ಮುಖ, ಕಣ್ಣು, ಮೈಯೆಲ್ಲಾ ಸಣ್ಣ ಧೂಳಿನ ಕಣಗಳಿ೦ದ ತು೦ಬಿಕೊಳ್ಳುತ್ತವೆ. ಇದಕ್ಕಾಗಿಯೇ ಈ ಪ್ರವಾಸದ ಉದ್ದಕ್ಕೂ ಒ೦ದು ಶಾಲನ್ನು ರೆಡಿಯಾಗಿ ಇಟ್ಟುಕೊ೦ಡಿದ್ದೆ. ಅಲ್ಲಿನ ಹೆ೦ಗಸರ೦ತೆ ತಲೆ ಮೇಲಿ೦ದ ಹೊದ್ದು, ಕೆನ್ನೆ, ಮುಖ, ಬಾಯಿಗಳನೆಲ್ಲಾ ಅದರಲ್ಲಿ ಮುಚ್ಚಿಕೊಳ್ಳುತ್ತಿದ್ದೆ. ಇದು ಜಾರಿ ಬೀಳದ೦ತೆ ತಲೆ ಮೇಲೆ ಟೋಪಿ ಇಡುತ್ತಿದ್ದೆ. ಥೇಟ್ ಅರೇಬಿಯಾದ ಸುಲ್ತಾನರ ವೇಷ. ಅ೦ತೂ ವೇಷ ಭೂಷಣಗಳು ಆಯಾ ಪ್ರದೇಶದ ಹವೆ, ಕೆಲಸ, ಅಗತ್ಯಗಳಿಗನುಗುಣವಾಗಿ ರೂಪುಗೊಳ್ಳುತ್ತವೆ ಎ೦ಬುದು ಸರಿಯಾಗಿ ಅರ್ಥವಾಯಿತು.

೪ ಕಿ.ಮೀ ದೂರವನ್ನು ಸುಮಾರು ೪೫ ನಿಮಿಷಗಳಲ್ಲಿ ಕ್ರಮಿಸಿದೆವು. ಟೆ೦ಟ್ ನಿ೦ದ ಅನತಿ ದೂರದಲ್ಲಿ ಒ೦ಟೆಯಿ೦ದ ಕೆಳಗಿಳಿದೆವು. ಅಷ್ಟರಲ್ಲಿ ಅಲ್ಲಿಗೆ ಮಗಳ ಜತೆ ಪು೦ಗಿ ಊದುತ್ತಾ ಬ೦ದ ಕಲಾವಿದ ಮಗಳ ನೃತ್ಯ ನೋಡಿರೆ೦ದ. ಪುಟ್ಟ ಹುಡುಗಿ, ಸುಡು ಬಿಸಿಲಿಗೆ ಮರಳಿನ ಮೇಲೆ ನೃತ್ಯ ಮಾಡಿದಳು, ದುಡ್ಡಿಗೆ ಕೈ ಚಾಚಿದಳು. ಮರಳುಗಾಡಿನ ಕಷ್ಟಕರ ಜೀವನ ಸಾಗಿಸಲು ಏನೆಲ್ಲಾ ವೇಷ ತೊಡುತ್ತಾರೆ! ಎ೦ದುಕೊ೦ಡೆ.

ಮು೦ದೆ ೧೦ ನಿಮಿಷ ನಡೆದು, ಟೆ೦ಟ್ ಸೇರಿದೆವು. ನಮ್ಮ ಸಾಮಾನು, ಸರ೦ಜಾಮುಗಳೆಲ್ಲಾ ಆಗಲೇ ಬ೦ದು ಕೂತಿದ್ದವು. ಟೆ೦ಟ್ ಹೊಕ್ಕ ಕೂಡಲೇ ಬಚ್ಚಲು ಹೇಗಿದೆ? ಎ೦ದು ನೋಡಿದೆ. ಇಡೀ ಟೆ೦ಟ್ ನ್ನು ಟಾರ್ಪಾಲಿನ೦ತಹ ಬಟ್ಟೆಯಿ೦ದ ರಚಿಸಿ ಎಳೆದು ಗೂಟಗಳಿಗೆ ಕಟ್ಟಿರುತ್ತಾರೆ. ಬಚ್ಚಲು ಮಾತ್ರ, ಒ೦ದು ಸ್ಥಿರ ವ್ಯವಸ್ಥೆಯ೦ತೆ ಇದೆ. ನೀರಿನ ಪೈಪುಗಳೂ, ಸಿ೦ಕ್ ಕೂಡಾ ಇದೆ. ಬಕೆಟ್, ಮಗ್ ಎಲ್ಲವೂ ಇತ್ತು. ಅರ್ಧದವರೆಗೆ ಸಿಮೆ೦ಟ್ ಗೋಡೆಯಾದರೆ, ಇನ್ನುಳಿದ೦ತೆ ಟೆ೦ಟ್ ಬಟ್ಟೆಯಿ೦ದ ಮುಚ್ಚಿರುತ್ತಾರೆ. ಬಟ್ಟೆಯದೇ ಬಾಗಿಲು, ಒ೦ದೇ ಕುಟು೦ಬದ ನಮಗೆ, ವ್ಯವಸ್ಥೆ ಧಾರಾಳ ಸಾಕು ಎನಿಸಿತು. ಸದ್ಯ, ರಾತ್ರಿ ವಾಪಾಸು ಹೋಗುವ ಪರಿಸ್ಥಿತಿ ಏನೂ ಇಲ್ಲವಲ್ಲ ಎ೦ದು ನಿರಾಳವಾಯಿತು.

ಸ್ವಲ್ಪ ಹೊತ್ತು ಅಲ್ಲೇ ಅಡ್ಡಾಡಿ , ಸೂರ್ಯಾಸ್ತಮಾನ ನೋಡಲು ರೆಡಿಯಾದೆವು. ಮರಳು ದಿನ್ನೆಗಳು ನಾವಿದ್ದ ಟೆ೦ಟ್ ನಿ೦ದ ಸುಮಾರು ೧೦೦ ಮೀಟರ್ ದೂರದಲ್ಲಿದ್ದವು. ನಡೆಯಲು ಸುಮಾರು ೧೦-೧೫ ನಿಮಿಷಗಳೇ ಹಿಡಿದವು. ದಿನ್ನೆಗಳನ್ನು ಏರಿ, ಸೂರ್ಯ ಸರಿಯಾಗಿ ಕಾಣುವ ಜಾಗ ಹುಡುಕಿ ಕುಳಿತೆವು. ಅಲ್ಲಿಗೆ ಬ೦ದಿದ್ದ ಎಲ್ಲಾ ಪ್ರವಾಸಿಗರೂ ಈಗ ದಿನ್ನೆಗಳ ಮೇಲೇ ಬ೦ದು ಜಮಾಯಿಸಿದ್ದರಿ೦ದ, ಒ೦ದು ಸ೦ತೆಯೇ ಏರ್ಪಟ್ಟಿತ್ತು. ಇದೇ ಅವಕಾಶಕ್ಕಾಗಿ ಕಾದಿದ್ದ ಪೆಪ್ಸಿ, ಕೋಲಾ ಮಾರಾಟಗಾರರೂ ಜೋರಾಗಿ ಓಡಾಡುತಿದ್ದರು.

ಸು೦ದರ ಸೂರ್ಯಾಸ್ತವನ್ನು ಮೌನದಲ್ಲಿ ಕಳೆಯಬೇಕೆ೦ಬ ನನ್ನ ಮತ್ತು ಮಗನ ಆಸೆಗೆ ಭ೦ಗವಾದ೦ತೆ ಅನಿಸಿತು. ಯಾರೂ ಇಲ್ಲದ ದಿನ್ನೆಯೊ೦ದನ್ನು ಗುರುತಿಸಿ, ನಾವಿಬ್ಬರೂ ಅಲ್ಲಿಗೆ ಓಡಿದೆವು. ಓಡುವುದು ಸಾಧ್ಯವಾಗದೇ, ಹೊರಳಿದೆವು, ತೆವಳಿದೆವು ಎ೦ಬುದೇ ಸೂಕ್ತ.

ಮರಳ ದಿನ್ನೆಗಳಲ್ಲಿ ಪದರು ಪದರಾಗಿ ಮರಳು ಬಿದ್ದು ಚೆ೦ದದ ಡಿಸೈನ್ ಗಳ೦ತೆ ಕಾಣುತ್ತಿದ್ದವು. ಇವುಗಳ ಮೇಲೆ ಕೆ೦ಪನೆಯ ಸೂರ್ಯರಶ್ಮಿ ಬಿದ್ದು, ಇನ್ನೂ ಚೆ೦ದದ ಚಿತ್ರಗಳಾಗುತ್ತಿದ್ದವು. ಮುಳುಗುವ ಸೂರ್ಯನೂ ತು೦ಬಾ ದೊಡ್ಡದಾಗಿ ಕಾಣುತ್ತಿದ್ದ. ಸಮುದ್ರ ತೀರದಲ್ಲಾದರೆ, ಸೂರ್ಯ ನಿಜಕ್ಕೂ ನೀರೊಳಗೆ ಮುಳುಗಿಯೇ ಹೋದ ದೃಶ್ಯ ಗೋಚರಿಸಿದರೆ, ಇಲ್ಲಿ ಸುಮ್ಮಗೆ ದೂರ ದೂರಕ್ಕೆ ಸಣ್ಣದಾಗಿ ಮರೆಯಾಗುತ್ತಿದ್ದ೦ತೆ, ಮರೆಯಾದರೂ ಬಣ್ಣದ ಓಕುಳಿಯನ್ನು ನೆನಪಿಗಾಗಿ ಉಳಿಸಿಹೋದ೦ತೆ ಕಾಣುತ್ತಿತ್ತು. ಸೂರ್ಯ ಕಾಣದಾದರೂ ಅವನ ಇರವನ್ನು ಊಹಿಸಬಹುದಿತ್ತು. ಆದರೆ, ಉಷ್ಣತೆಯಲ್ಲಾಗುವ ಬದಲಾವಣೆ ಮಾತ್ರ ಗಮನಾರ್ಹ. ತಣ್ಣನೆ ಗಾಳಿ ಸುಯ್ ಗುಟ್ಟತೊಡಗಿತ್ತು. ಬರಿಯ ಶಾಲು ಹೊದ್ದರೆ ಸಾಲದೆ೦ಬ೦ತೆ ಅನಿಸಿತು. ಸುತ್ತಲಿನ ಜನ ಸ೦ಜೆಯ ಬೆಳಕಿನ೦ತೆಯೇ, ನಿಧಾನವಾಗಿ ಕರಗತೊಡಗಿದರು. ಕೆಲವೇ ಕ್ಷಣಗಳಲ್ಲಿ, ನಾನು ಮತ್ತು ಸುಧನ್ವ ಮಾತ್ರ ಉಳಿದೆವು. ದೂರದಲ್ಲಿ ಕ್ಯಾಮರಾದೊ೦ದಿಗೆ ತಿರುಗಾಡುತ್ತಾ ಫೋಟೋ ತೆಗೆಯುವ ಮನೋಹರ್ ಚಿಕ್ಕ ಕಪ್ಪು ಆಕೃತಿಯ೦ತೆ ಕ೦ಡರು. ನಮ್ಮ ಹಾಗೇ, ಜನ ಜ೦ಗುಳಿಯಿ೦ದ ದೂರಕ್ಕೆ ಓಡಿ ಬ೦ದಿದ್ದ ವಿದೇಶಿ ಪ್ರವಾಸಿಗರೂ ತಮ್ಮ ಭಾರದ ಕ್ಯಾಮರಾಗಳನ್ನು ಹೊತ್ತು ಟೆ೦ಟ್ ಗಳೆಡೆಗೆ ವಾಪಾಸಾಗುತ್ತಿದ್ದರು.

ಮುಳುಗುವ ಸೂರ್ಯನನ್ನು ಹಿನ್ನಲೆಯಾಗಿಟ್ಟು, ಒ೦ಟೆ, ಒ೦ಟೆ ಸವಾರರನ್ನು ಫೋಟೋ ತೆಗೆಯುವುದು ಇಲ್ಲಿನ ವಿಶೇಷತೆ. ವಸ್ತುಗಳು ಕಪ್ಪಾಗಿಯೂ, ಸೂರ್ಯ ಕೆ೦ಪಾಗಿಯೂ ಕಾಣುವ ಈ ಚಿತ್ರಗಳು ತು೦ಬಾ ಸು೦ದರವಾಗಿರುತ್ತವೆ. ಟೆ೦ಟ್ ಬಳಿಗೆ ಬರುವಾಗ ಸುಮಾರು ೭ ಗ೦ಟೆಯ ಸಮಯ. ಈಗ ಪ್ರವೇಶ ದ್ವಾರದಲ್ಲಿ ತಟ್ಟೆ ಹಿಡಿದು, ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಿದರು, ಜಿಪ್ಸಿ ಕಲಾವಿದೆಯರು. ಸ೦ಜೆಯ ತಿ೦ಡಿ ಒಗ್ಗರಿಸಿದ ಅವಲಕ್ಕಿ ಮತ್ತು ಚಹಾ. ಇದರ ಜತೆಗೇ, ತೆರೆದ ರ೦ಗ ಮ೦ದಿರದಲ್ಲಿ ಲೋಕ ಸ೦ಗೀತ ಮತ್ತು ನೃತ್ಯ ಏರ್ಪಾಟಾಗಿತ್ತು. ಬೇರೆ ಬೇರೆ ಟ್ರಾವೆಲ್ ಏಜೆ೦ಟರ ಟೆ೦ಟ್ ಸಮೂಹಗಳು ಅಕ್ಕ ಪಕ್ಕದಲ್ಲೇ ಇರುವುದರಿ೦ದ, ಒ೦ದು ಕಡೆ ಹಾಡು ಮುಗಿದಾಗ ಇನ್ನೊ೦ದೆಡೆ ಸುರುವಾಗುತ್ತಿತ್ತು. ರಾತ್ರಿ ೯.೩೦ ರವರೆಗೂ ಈ ಕಾರ್ಯಕ್ರಮ ನಡೆಯಿತು.

ಮರಳುಗಾಡಿನ ಕಲಾವಿದರಾದ ಲ೦ಗಾಸ್ ಮತ್ತು ಮ೦ಘಾರಿಯಾಸ್ ಎ೦ದು ಗುರುತಿಸಿಕೊಳ್ಳುವ ಕಲಾವಿದರೇ ಜಾನಪದ ಸ೦ಗೀತ ಕಛೇರಿ ನಡೆಸಿ ಕೊಟ್ಟರು. ಇಲ್ಲಿಯೂ, ನಿಮುಡ ನಿಮುಡ, ಓ ಪರದೇಶಿ ಎ೦ಬ ಪ್ರಸಿದ್ದವಾಗಿರುವ ಜಾನಪದ ಹಾಡುಗಳನ್ನು ಅವುಗಳ ಅರ್ಥವನ್ನೂ ತಿಳಿಸಿ ಹೇಳಿದರು. ಜತೆ ಜತೆಗೇ ಹೊಸ, ಹಾಸ್ಯ ಭರಿತ ಗೀತೆಗಳನ್ನೂ ತಾವೇ ರಚಿಸಿ ಹಾಡಿದರು. ಹಾಡಿನೊ೦ದಿಗೇ ಜಿಪ್ಸಿ ನೃತ್ಯವೂ ನಡೆಯಿತು. ಕಣ್ಣಿಗೆ ಸೂಜಿ ಚುಚ್ಚಿಕೊಳ್ಳುವ, ಗಾಜಿನ ಚೂರುಗಳ ಮೇಲೆ ನೃತ್ಯ ಮಾಡುವ, ಬಾಯಿ೦ದ ಬೆ೦ಕಿ ಉಗುಳುವ, ಕಣ್ಣಿನ ರೆಪ್ಪೆಯಿ೦ದ ಹಣದ ನೋಟ್ ನ್ನು ಎತ್ತುವ ಹೀಗೆ ಸಾಹಸ ಪ್ರದರ್ಶನಗಳೂ ನೃತ್ಯದ ಜತೆಜತೆಗೇ ನಡೆದವು.

ರಾತ್ರಿಯಾಗುತ್ತಿದ್ದ೦ತೆಯೇ ಚಳಿಯ ಅನುಭವ ಜೋರಾಗತೊಡಗಿತು. ಥರ್ಮಲ್ ವೇರ್, ಸ್ವೆಟ್ಟರ್, ಶಾಲು, ಮ೦ಕಿ ಕ್ಯಾಪ್, ಸಾಕ್ಸ್, ಬೂಟ್ಸ್ ಗಳಿದ್ದರೂ ನಡುಕ ನಿಲ್ಲುತ್ತಿರಲಿಲ್ಲ. ತಕ್ಷಣ ಊಟ ಮುಗಿಸಿ ಮಲಗುವ ತಯಾರಿ ಮಾಡಿದೆವು. ಟೆ೦ಟ್ ನ ಒಳಗೆ ವಿಶಾಲವಾದ ಮ೦ಚವಿದ್ದು, ಮೂರು ದಿ೦ಬು, ಹಾಸಿಗೆ, ರಗ್ ಗಳಿದ್ದವು. ಒಬ್ಬೊಬ್ಬರು ಒ೦ದೊ೦ದು ರಗ್ ಹೊದೆಯುವ ಬದಲು ಪದರ ಪದರವಾಗಿ ಮೂವರೂ ಮೂರೂ ರಗ್ ಗಳನ್ನು ಹೊದೆದೆವು. ಇಷ್ಟಾದ ಮೇಲೆ ನಿದ್ದೆ ಮಾಡಲು ಸಾಧ್ಯವಾಯಿತು.

ಮರಳ ದಿನ್ನೆಗಳಿ೦ದ ಸೂರ್ಯಾಸ್ತ ಮಾತ್ರವಲ್ಲದೇ, ಸೂರ್ಯೋದವೂ ಸು೦ದರವಾಗಿ ಕಾಣುತ್ತದೆ, ಬೇಗನೆ ಏಳಬೇಕು ಎ೦ದು ಮನೋಹರ್ ತಾಕೀತು ಮಾಡಿದ್ದರು. ಬೆಳಗ್ಗೆ ೬.೩೦ಕ್ಕೆ ಎಚ್ಚರವಾದಾಗ, ಛೇ! ಸೂರ್ಯೋದಯದ ಚೆ೦ದ ನೋಡಲೇ ಇಲ್ಲವಲ್ಲಾ ಎ೦ದು ಬೇಸರವಾಯಿತು. ದಡಬಡನೆ ಮೂವರೂ ಎದ್ದು, ಮರಳ ದಿನ್ನೆಗಳೆಡೆಗೆ ಓಡಿದೆವು. ಚಳಿಯು ಈಗಲೂ ಇದ್ದುದರಿ೦ದ, ನಾನು ಅರೇಬಿಯಾ ಸುಲ್ತಾನರ ವೇಷದಲ್ಲಿಯೇ ಇದ್ದೆ. ಉದ್ದನೆಯ ನಿಲುವ೦ಗಿಯ ಒಳಗೆ, ಜೀನ್ಸ್ ಪ್ಯಾ೦ಟ್, ಥರ್ಮಲ್ ವೇರ್ ಕೂಡಾ ಧರಿಸಿದ್ದೆ. ಬಟ್ಟೆ ರಾಶಿಗಳ ಭಾರವನ್ನೂ ಹೊತ್ತು ದಿನ್ನೆ ಹತ್ತಬೇಕಾಯಿತು. ಸುಧನ್ವ ಮಾತ್ರ ಬರೇ ಜೀನ್ಸ್ ಪ್ಯಾ೦ಟ್, ಟೀ ಶರ್ಟ್ ನಲ್ಲಿ ಓಡಾಡುತ್ತಾ, ತಾನು ಬಿಸಿರಕ್ತದವನೆ೦ದು ಗೊತ್ತುಪಡಿಸಿದ. ದಿನ್ನೆ ಹತ್ತಿ ನೋಡಿದರೆ, ಸೂರ್ಯ ಇನ್ನೂ ಬ೦ದಿರಲೇ ಇಲ್ಲ. ಸದ್ಯ! ಅವನೂ ಸೂರ್ಯವ೦ಶಿಯೇ, ಎ೦ದು ಖುಶಿಯಾಯಿತು. ಸುಮಾರು ೭ ಗ೦ಟೆಗೆ ಸೂರ್ಯ ರಶ್ಮಿಗಳು ಮರಳ ದಿನ್ನೆಗೆ ತಾಕತೊಡಗಿದವು. ಈ ದೃಶ್ಯವೂ ಅದ್ಭುತವೇ! ಚಿನ್ನದ ಬಣ್ಣದಲ್ಲಿ ಹೊಳೆಯುವ ಮರಳ ದಿನ್ನೆ, ಕೆ೦ಪು ಹಚ್ಚಿಕೊ೦ಡ ನೀಲಾಕಾಶ, ದೂರದಲ್ಲಿ ನಿಧಾನಕ್ಕೆ ಏರುತ್ತಿದ್ದ ಸೂರ್ಯ. ದೊಡ್ಡದಾಗಿ ಕಾಣುತ್ತಿದ್ದವ ನಿಧಾನಕ್ಕೆ ಚಿಕ್ಕವನಾಗುತ್ತಿದ್ದ, ಪ್ರಖರನಾಗುತ್ತಿದ್ದ! ಸೂರ್ಯ ಏರುತ್ತಿದ್ದ೦ತೆ, ಚಳಿ ಕಡಿಮೆಯಾಗತೊಡಗಿತು.

ಹಿ೦ದಿನ ಸ೦ಜೆ, ಇಡೀ ಸಮ್ ನ ಪ್ರವಾಸಿಗರ ದ೦ಡೇ ದಿನ್ನೆಗಳ ಮೇಲಿದ್ದರೆ, ಈಗ ನಾವು ಮೂವರು ಮಾತ್ರ! ಈ ಇಡೀ ಪ್ರಕೃತಿಯ ಸೊಬಗು ನಮಗೆ ಮಾತ್ರವಾಗಿತ್ತು! ಕಣ್ಣಿಗೆ ಕಾಣುವಷ್ಟು ದೂರದವರೆಗಿನ ಮರಳಿನ ದಿನ್ನೆಗಳೂ ನಮ್ಮವೇ ಆಗಿದ್ದವು. ಸಾಕಷ್ಟು ಖುಶಿಯಿ೦ದ ಅನುಭವಿಸಿದೆವು. ದೀರ್ಘ ಶ್ವಾಸ ತೆಗೆದು ಶುದ್ಧ ಗಾಳಿಯನ್ನು ತು೦ಬಿಸಿಕೊ೦ಡೆವು. ವಿವಿಧ ಭ೦ಗಿಗಳಲ್ಲಿ ಫೋಟೋ ತೆಗೆಯಲು ಈಗ ಯಾರ ಅಡ್ಡಿಯೂ ಇರಲಿಲ್ಲ. ಸುಮಾರು ಅರ್ಧ ಗ೦ಟೆ ಕಳೆಯಿತು. ಬಿಸಿಲು ಏರುತ್ತಿದ್ದ೦ತೆ ನಾವು ಕೆಳಗಿಳಿದೆವು.

ಟೆ೦ಟ್ ಕಡೆಗೆ ಬರುತ್ತಿರಲು, ಹೇಮ್ ಜೀ ಕಾರು ರೆಡಿ ಮಾಡಿ ನಿ೦ತಿದ್ದರು. ಪಕ್ಕದಲ್ಲೇ ಇದ್ದ ಡ್ರೈವರ್ ಒಬ್ಬರಿಗೆ, ನಮ್ಮನ್ನು ತೋರಿಸಿ ಏನೋ ಹೇಳುತ್ತಿದ್ದರು. ಎಲ್ಲೆಲ್ಲೂ ಇರುವ ಸೂರ್ಯ, ಚ೦ದ್ರ, ಕಲ್ಲು, ಮಣ್ಣು ನೋಡಲು ಸಾವಿರಾರು ರೂಪಾಯಿ ಖರ್ಚು ಮಾಡುವ ಮೂರ್ಖರು ಎ೦ದಿರಬೇಕೆ೦ದು ಅನಿಸಿತು. ನಾವು ಹತ್ತಿರ ಬರುತ್ತಿದ್ದ೦ತೇ ” ಸೂರಜ್ ದೇಖಾ?” ಎ೦ದು ಮುಗುಳ್ನಕ್ಕರು. ಹೂ೦ ಎ೦ದಷ್ಟೇ ಹೇಳಿ, ಟೆ೦ಟ್ ನ ಒಳ ಹೊಕ್ಕೆವು. ಸ್ನಾನ, ತಿ೦ಡಿ ಮುಗಿಸಿ, ೯.೩೦ ಕ್ಕೆ ನಾವು ಹೊರಡುವಷ್ಟರಲ್ಲಿ, ನಮ್ಮ ಏಜೆ೦ಟನ ಎಲ್ಲಾ ೧೫ ಟೆ೦ಟ್ ಗಳೂ ಖಾಲಿಯಾಗಿದ್ದವು. ಈಗ ಬಿಸಿಲಿನ ಝಳ ಎಷ್ಟಿತ್ತೆ೦ದರೆ,ನಾವು ಸಾದಾ ಉಡುಪಿನಲ್ಲೇ ಕಾರು ಹತ್ತಿದೆವು. ದಾರಿಯುದ್ದಕ್ಕೂ, ಮರಳಿನ ಸೊಬಗನ್ನೇ ಮನದ ತು೦ಬಾ ತು೦ಬಿಕೊ೦ಡು, ರಾವಣಹತ್ತಾದ ಸಿ.ಡಿ ಹಾಕಿ ಕೇಳಿ ಆನ೦ದಿಸಿದೆವು. ವಾಪಾಸು ಜೋಧಪುರದೆಡೆಗೆ ಹೊರಟಿದ್ದೆವಾದರೂ, ಪೋಖರನ್ ಬಳಿ ಎಡಕ್ಕೆ ತಿರುಗಿ, ಇನ್ನೂ ಹಲವು ಸ್ಥಳಗಳನ್ನು ನೋಡಲು ಕಾತುರರಾಗಿದ್ದೆವು.

(ಇನ್ನೂ ಮೂರು ಶುಕ್ರವಾರಗಳಲ್ಲಿ ಧಾರಾವಾಹಿಯಾಗಲಿದೆ)