About Me

ವೈಯಕ್ತಿಕ

ಜಿ.ಎನ್.ಅಶೋಕವರ್ಧನ (ಜನನ ೧೯೫೨). ತಂದೆ – ಜಿ.ಟಿ. ನಾರಾಯಣರಾವ್, ತಾಯಿ – ಜಿ.ಎನ್. ಲಕ್ಷ್ಮೀದೇವಿ, ಹೆಂಡತಿ – ಜಿ.ಎ. ದೇವಕಿ, ಮಗ – ಜಿ.ಎ. ಅಭಯ ಸಿಂಹ ಮತ್ತು ಸೊಸೆ – ಎಂ. ರಶ್ಮಿ ಅಭಯ್, ಮೊಮ್ಮಗಳು – ಆಭಾ ಸಿಂಹ. ಮಡಿಕೇರಿ, ಬಳ್ಳಾರಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿನ ವಿದ್ಯಾಭ್ಯಾಸದ ಕೊನೆಗೆ ೧೯೭೪ರಲ್ಲಿ ಮೈ.ವಿ.ವಿ ನಿಲಯದಿಂದ ಇಂಗ್ಲಿಷ್ ಎಂ.ಎ. ತಾಪೇದಾರಿ ಒಲ್ಲದ್ದಕ್ಕೆ, ಹವ್ಯಾಸಕ್ಕೆ ತೊಡಗಿಕೊಂಡಿದ್ದ ಪುಸ್ತಕವ್ಯಾಪಾರ ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರಾಗಿ ವೃತ್ತಿಗಿಳಿಸಿತು. ಮೂವತ್ತಾರು ವರ್ಷಗಳ ವೃತ್ತಿಜೀವನ ಪುಸ್ತಕದ ಬಿಡಿ ಮಾರಾಟ, ವಿತರಣೆ, ಪ್ರಕಾಶನ ಮತ್ತು ತಾತ್ತ್ವಿಕ ಅನುಸಂಧಾನಗಳಲ್ಲಿ ವಿಕಸಿಸಿತು. ಆದರೆ ಕೊನೆಯಲ್ಲಿ ಪುಸ್ತಕೋದ್ಯಮದ ಬಹು ವ್ಯಾಪ್ತಿಯಂತೇ ಕರಾಳತೆಯೂ ಕಾಣಿಸಿ ವೈಯಕ್ತಿಕ ಹೋರಾಟದ ವೈಫಲ್ಯವನ್ನು ಮನಗಾಣಿಸಿತು. ಪರಸ್ಪರ ಪೋಷಣೆಯಲ್ಲಿ ಸಂಸ್ಥೆ (ಅತ್ರಿ) ಮತ್ತು ವ್ಯಕ್ತಿಗೆ (ಅಶೋಕ) ಆರ್ಥಿಕ ಸಂತೃಪ್ತಿ ಇದ್ದರೂ ಬದಲಾದ ‘ಯುಗಧರ್ಮದಲ್ಲಿ’ ಪ್ರೀತಿ ಉಳಿಯದ್ದಕ್ಕೆ ಅಂಗಡಿ ಮುಚ್ಚಿ, ಸ್ವಯಂ ನಿವೃತ್ತಿ. ಉದ್ದಕ್ಕೂ ಬೆಳೆದು ಬಂದ ಹವ್ಯಾಸೀ ಆಸಕ್ತಿಗಳನ್ನು ಆರ್ಥಿಕ ಆದಾಯದ ಲಕ್ಷ್ಯವಿಲ್ಲದೆ ಸಮಾಜಹಿತಕ್ಕೆ ಹೆಚ್ಚು ಒಡ್ಡಿಸುವಲ್ಲಿ ಪೂರ್ಣಾವಧಿ ಸ್ವಯಂಸೇವೆ.

 

ಆರೋಹಣ
 
ತಂದೆಯಿಂದ ಎನ್.ಸಿ.ಸಿ ಮೂಲವಾಗಿ ಮೊಳೆತ ಪರ್ವತಾರೋಹಣ ಆಸಕ್ತಿಗೆ ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ ವಿ. ಗೋವಿಂದರಾಜರು (ದಖ್ಖಣ ಪರ್ವತಾರೋಹಣ ಸಂಸ್ಥೆ) ಶಿಸ್ತಿನ ಕೃಷಿಕೊಟ್ಟು ಗಟ್ಟಿಮಾಡಿದರು. ವೃತ್ತಿರಂಗದಲ್ಲಿ ವಾರದ ಆರುದಿನ ನಗರದೊಳಗೆ ಅದೂ ಅಂಗಡಿಯ ಕುರ್ಚಿಗೇ ಅಂಟಿದ್ದಕ್ಕೆ ಪ್ರತಿಯಾಗಿ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಹೆಸರಿನ ಅನೌಪಚಾರಿಕ ತಂಡ ಮೂವತ್ತಾರು ವರ್ಷದುದ್ದಕ್ಕೆ ವಿಕಸನಗೊಂಡಿತ್ತು. ವೃತ್ತಿಗೆ ರಜಾದಿನಗಳಲ್ಲಿ ಅವಿಭಜಿತ ದಕ ಜಿಲ್ಲೆಯ ಅಳವಿಯೊಳಗಿನ ಪಶ್ಚಿಮಘಟ್ಟದಲ್ಲಿ ಇದರ ಸದಸ್ಯರು ಪಾದ ಊರದ ಶಿಖರವಿಲ್ಲ, ನುಗ್ಗದ ಕಾಡಿಲ್ಲ! ಗುಹಾಶೋಧನೆ, ಬೈಕ್ ಯಾತ್ರೆಗಳು, ಸೈಕಲ್ ಯಾನಗಳು, ಈಚೆಗೆ ದೋಣಿಚಾಲನೆಗಳೂ ವ್ಯಾಪಕವಾಗಿ, ಕಡಲಯಾನ, ಗಗನಗಮನಗಳು ಕೆಲವೂ ಸೇರಿ ಪ್ರಕೃತಿಪರ ಕುತೂಹಲ ನಿರಂತರವಾಯ್ತು, ಅವುಗಳ ಪ್ರಾಕೃತಿಕ ಸ್ವರೂಪವನ್ನು ಕಾಪಾಡಿಕೊಳ್ಳುವಲ್ಲಿ ಕೆಲಸಕ್ಕೆ ಪ್ರೇರಣೆಯೂ ಬಂತು. ಸಹಜ ಸಸ್ಯ ಪುನರುತ್ಥಾನದ ಪ್ರಯೋಗಭೂಮಿಯಾಗಿ ‘ಅಭಯಾರಣ್ಯ’ ಹುಟ್ಟಿಕೊಂಡಿತು. ಉಲ್ಲಾಸ ಕಾರಂತ, ಕೆ.ಎಂ. ಚಿಣ್ಣಪ್ಪರ ಗೆಳೆತನ, ಸ್ಥಳೀಯವಾಗಿ ನಿರೇನ್ ಜೈನರ ಆಪ್ತ ಒಡನಾಟದಿಂದ ‘ಅಶೋಕವನ’ದ ರಚನೆಯಾಯ್ತು. ಮುಂದಿನ ಪರಮ ಲಕ್ಷ್ಯವಾಗಿ ವನ್ಯಸಂರಕ್ಷಣೆ ಕಾದಿದೆ.

ಇತ್ಯಾದಿ
ಯಕ್ಷಗಾನ ಸೇರಿದಂತೆ ವಿವಿಧ ರಂಗಕಲೆಗಳು, ಸಂಗೀತ, ಸಿನಿಮಾ, ಪ್ರವಾಸ, ಓದು ಇತ್ಯಾದಿ ಎಲ್ಲಾ ಒಳ್ಳೆಯದರ ತುಸು ಹೆಚ್ಚೇ ಎನ್ನುವ ಪರಿಚಯ. ಅನಿವಾರ್ಯ ಎಂದು ಕಂಡಾಗ (ಮುಖ್ಯವಾಗಿ ಗೆಳೆಯ ಮಂಟಪ ಮನೋಹರ ಉಪಾಧ್ಯರೊಡನೆ) ಅವುಗಳೊಡನೆ ಔಪಚಾರಿಕ ಬಂಧನಗಳಿಲ್ಲದ ಸಣ್ಣಪುಟ್ಟ ಸಂಘಟನಾತ್ಮಕ ಪ್ರಯೋಗಗಳು. ಕೊನೆಯದಾಗಿ ಎಲ್ಲಕ್ಕೂ ಇಲ್ಲಿ, ಅಂದರೆ ಜಾಲತಾಣದಲ್ಲಿ, ಔಚಿತ್ಯವರಿತು ಪ್ರಸರಣ ನಡೆಸುವುದರಲ್ಲಿ ಅರ್ಥಪೂರ್ಣ ಕಾಲವಿನಿಯೋಗ. ಜೂನ್ ೨೦೦೮ರಿಂದ ತೊಡಗಿದಂತೆ ಸರಾಸರಿಯಲ್ಲಿ ವಾರಕ್ಕೊಂದರಂತೆ ಲೇಖನ ಅಂದರೆ, ಇದುವರೆಗೆ (೨೦೧೮) ಆರ್ನೂರಕ್ಕೂ ಮಿಕ್ಕು ಬರಹಗಳು, ಹತ್ತಕ್ಕೂ ಮಿಕ್ಕು ವಿ-ಪುಸ್ತಕಗಳು, ಕೇಳು ಸಾಹಿತ್ಯ, ನಕ್ಷೆ, ಚಿತ್ರ, ಚಲಚಿತ್ರಗನ್ನೆಲ್ಲ ಈ ಜಾಲತಾಣದಲ್ಲಿ ತುಂಬುತ್ತ ಬಂದಿದ್ದೇನೆ. ಇದುವರೆಗೆ ಪ್ರಕಟಿತ ಮುದ್ರಿತ ಪುಸ್ತಕಗಳು: ೧. ತಾತಾರ್ ಶಿಖರಾರೋಹಣ (೧೯೭೩), ೨. ಚಕ್ರವರ್ತಿಗಳು (೧೯೯೦), ೩. ಬೆಟ್ಟಗುಡ್ಡಗಳು (೧೯೯೪), ೪. ಪುಸ್ತಕ ಮಾರಾಟ ಹೋರಾಟ (೧೯೯೯), ೫. ಕುಮಾರ ಪರ್ವತದ ಸುತ್ತಮುತ್ತ (೨೦೧೩), ೬. ದ್ವೀಪ ಸಮೂಹದ ಕಥೆ (೨೦೧೧, ೨೦೧೪) ಮತ್ತು ೭. ಶಿಲಾರೋಹಿಯ ಕಡತ (೨೦೧೪). ನನ್ನ ಲೆಕ್ಕಕ್ಕೆ ಈ ಮಾಧ್ಯಮ ಅರೆ-ಖಾಸಗಿ ಸಾರ್ವಜನಿಕ ವೇದಿಕೆ. ಹಾಗಾಗಿ ನಾನು ಏನು ತುಂಬಿದರೂ (ಅನಿವಾರ್ಯವಾಗಿ ನನ್ನ ಅನುಭವದ ಮಿತಿಯಲ್ಲಿದ್ದರೂ) ಹತ್ತು ಜನರಿಗೆ ಉಪಯೋಗವಾಗುವವನ್ನು ಮಾತ್ರ ತುಂಬುತ್ತೇನೆ. ಅದಕ್ಕೂ ಹೆಚ್ಚಾಗಿ ಓದುಗರಿಂದ ಉಪಚಾರದ ಮಾತುಗಳ ಬದಲು ಕೇಳುವುದು ಇಷ್ಟೇ ೧. ತಪ್ಪಿದ್ದರೆ ತಿದ್ದಿ ೨. ಇದಕ್ಕೆ ಸಂವಾದಿಯಾಗಿ ನಿಮ್ಮಲ್ಲೇನಾದರೂ ಅನುಭವವಿದ್ದರೆ ದಯವಿಟ್ಟು ಆಯಾ ಲೇಖನದ ಪ್ರತಿಕ್ರಿಯಾ ಅಂಕಣದಲ್ಲಿ ಧಾರಾಳ ತುಂಬಿ. ಪತ್ರಿಕೆಗಳಂತೆ ಇಲ್ಲಿ ಜಾಗದ ಮಿತಿ, ಸಂಪಾದಕನ ಕತ್ತರಿ ಇಲ್ಲ. ಮತ್ತೂ ಮಖ್ಯವಾಗಿ ಭಾಷೆಯ ಬಂಧನವಿಲ್ಲ. ನೀವು ಕನ್ನಡದಲ್ಲೇ ಪ್ರತಿಕ್ರಿಯಿಸಬೇಕೆಂದಿಲ್ಲ. ನಿಮಗನುಕೂಲವಾದಂತೆ ಕನ್ನಡದಲ್ಲಿ, ಶುದ್ಧ ಇಂಗ್ಲಿಷಿನಲ್ಲಿ ಅಥವಾ ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನೇ ಬರೆದರೂ ಧಾರಾಳ ನಡೆಯುತ್ತದೆ – ಏನೂ ಸಂಕೋಚಪಟ್ಟುಕೊಳ್ಳದೇ ಬರೆಯಿರಿ.
(ಹೆಚ್ಚಿನ ವಿವರಗಳಿಗೆ ಮತ್ತು ಸಾಕ್ಷಿಗಳಿಗೆ ಜಾಲತಾಣವನ್ನೇ ಶೋಧಿಸಿ)