ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸದ್ಯ ಪಶ್ಚಿಮಘಟ್ಟದ ಪರಿಸರವನ್ನು ಅದರಲ್ಲೂ ಮುಖ್ಯವಾಗಿ ವನ್ಯ ಪರಿಸರವನ್ನು ಜಲವಿದ್ಯುತ್ತು ಯೋಜನೆಗಳು ಅಪಾರವಾಗಿ ಹಾಳುಗೆಡವುತ್ತಿವೆ. ಇಲ್ಲಿ ಪ್ರಧಾನ ಉತ್ಪನ್ನಕ್ಕಿಂತ ಉಪೋತ್ಪನ್ನಗಳ ಆಕರ್ಷಣೆ ಹೆಚ್ಚು. ಸಾಲ, ಸಬ್ಸಿಡಿ, ಮರ, ಕಲ್ಲು, ಸಾಗಣೆ, ನಿರ್ಮಾಣ ಕಂತ್ರಾಟು ಎಲ್ಲವೂ ಬಹು ಕೋಟಿಗಳ ಲೆಕ್ಕ. ಅವನ್ನೆಲ್ಲ ತಿಳಿದು ನಿರಾಕರಿಸಬೇಕಾದವರು ದಿನ ನಿತ್ಯದ ಗಂಜಿ, ಬೀಡಿಗಳಿಗೆ ಪರದಾಡುವ ಜನಗಳು. ಇವರ ಅಹವಾಲುಗಳು ಸಾಮಾನ್ಯವಾಗಿ `ಯಥೇಚ್ಛ’ ಪರಿಹಾರ ದಕ್ಕುವುದರೊಡನೆ ಸಮಾಧಿಯಾಗುತ್ತವೆ! ಅದನ್ನು ಮೀರಿದ ಪರಿಸರದ ಕೊರಗು ಅವರಿಗೆ ಬರುವುದು ಸಾಧ್ಯವಿಲ್ಲ. ಅವರಿಗೆ ಮನೆ, ಕೃಷಿ, ನಾಗರಿಕ ಮರುವಸತಿಯೋ ಪರಿಹಾರವೋ ಕೊಡುವುದು ಸಾಧ್ಯವಾಗಬಹುದು. ಆದರೆ ಯಾವುದೇ ಪ್ರಾತಿನಿಧ್ಯ ಬಿಡಿ, ಸೊಲ್ಲೂ ಇಲ್ಲದ ಅಸಂಖ್ಯ ಮನುಷ್ಯೇತರ ಜೀವಾಜೀವಗಳಿಗೇನು ಪರಿಹಾರ? ಈ ಹಿನ್ನೆಲೆಯೊಡನೆ ಪರಿಸರ ಅಧ್ಯಯನ ವರದಿ ಮತ್ತು ಯೋಜನೆಯ ಅನುಷ್ಠಾನದ ಪರಿಸರದಲ್ಲೇ ಜನಾಭಿಪ್ರಾಯದ ಕ್ರೋಢೀಕರಣ (Environmental Impact Assessment – EIA) ಇಂದು ಯಾವುದೇ ಯೋಜನೆಗೆ ಕಡ್ಡಾಯವಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಳ್ಳ ಕೇಂದ್ರವಾಗಿ ಕೆಪಿಸಿಎಲ್ ಪ್ರಥಮ ಹಂತದ ಗುಂಡ್ಯ ಜಲವಿದ್ಯುತ್ (೨೦೦ ಮೆಗಾವಾಟ್ಸ್) ಯೋಜನೆ ರೂಪಿಸಿದೆ. ಆ ಕುರಿತು ಕೆಪಿಸಿಎಲ್ ಆಗಸ್ಟ್ ಹದಿನೆಂಟರಂದು ಹೊಂಗಡಳ್ಳದಲ್ಲಿ ಕಾನೂನಿನ ಪ್ರಕಾರ ಸಭೆ ಘೋಷಿಸಿತು. ಆದರೆ ಮುಂದುವರಿದ ದಿನಗಳಲ್ಲಿ ಉಪನಿಬಂಧನೆಗಳನ್ನು ಗಾಳಿಗೆ ತೂರಿ, ದಿನಾಂಕವನ್ನು ಹಿಂದೆಳೆದು, `ಸಾಕಷ್ಟು ತಯಾರಿ’ಯೊಡನೆ ಆಗಸ್ಟ್ ಆರಕ್ಕೆ ಸಭೆಯನ್ನು ನಡೆಸಿತು. ಹಾಗಾಗಿ ಸಭೆಂii ದಿನದಂದು ಮೊದಲು ದಾಖಲಾದದ್ದೇ ಕಾನೂನು ತಜ್ಞರ ಪ್ರತಿಭಟನೆ. ಮತ್ತೆ ಸರಿಯಾದ ಮಾರ್ಗ, ಸಾರ್ವಜನಿಕ ವಾಹನ ಸೌಕರ್ಯವಿಲ್ಲದಿದ್ದರೂ ಮಳೆಚಳಿಗಳ ಲೆಕ್ಕವಿಡದೆ ಹಳ್ಳಿಮೂಲೆಯ `ದೊಡ್ಡ’ ಭವನ ತುಂಬಿ ಹರಿಯುವಂತೆ ಬಂದ ಜನ ಮತ್ತವರ ಅಭಿಪ್ರಾಯ ಧಾರೆ.

“ಸೈನ್ಯ ಸೇರಿದ ಮಗ ಯುದ್ಧದಲ್ಲಿ ಸತ್ತ ಎಂದಿಟ್ಟುಕೊಳ್ಳಿ. ಅದನ್ನು ದೇಶಕ್ಕಾಗಿ ತ್ಯಾಗ ಎಂದುಕೊಳ್ಳುವಂತೆ ಈಗ ನಾವು ಸ್ವಲ್ಪ ರಾಜ್ಯಕ್ಕಾಗಿ ತ್ಯಾಗ ಮಾಡಬೇಕು. ರಾಜ್ಯದ ವಿದ್ಯುತ್ ಕ್ಷಾಮ ನೀಗಲು ನಾವು ತ್ಯಾಗ ಮಾಡಿ ಹೊಂಗಡಹಳ್ಳದಲ್ಲಿ ಜಲವಿದ್ಯುತ್ ಯೋಜನೆ ಕಾರ್ಯಗತವಾಗಲು ಸಹಕರಿಸಬೇಕು”. “ತ್ಯಾಗವಂತೆ ತ್ಯಾಗ, ಅರ್ಥ ಗೊತ್ತಿದೆಯೇನ್ರೀ? ಎಕ್ರೆಗೆ ನಲ್ವತ್ತು ಸಾವಿರ ಬೆಲೆ ಬಾಳುವ ನೆಲವನ್ನು ಬಿಟ್ಟುಕೊಟ್ಟಂಗೆ ಮಾಡಿ ಎಕ್ರೆಗೆ ನಾಲ್ಕು ಲಕ್ಷಕ್ಕೆ ಕಡಮೆ ಇಲ್ಲದಂತೆ ಪರಿಹಾರ ತೆಗೆದುಕೊಳ್ತೀರಲ್ಲ. ನಾಚ್ಕೆ ಆಗಬೇಕು”. “ಯೋಜನೆ ಬರಲೀ ಬಿಡಲೀ ನಮಗಿಲ್ಲಿ ಜೀವನವಿಲ್ಲ. ಒಂದು ಸರಿಯಾದ ದಾರಿಯೂ ಇಲ್ಲಾಂತ ನಮಗೆ ಹೆಣ್ಣು ಕೊಡುವವರೇ ಇಲ್ಲ. ನಾನೇನೋ ಪೇಟೆ ಸೇರಿಕೊಂಡು `ಅದೂ ಇದೂ’ ಮಾಡ್ಕೊಂಡು ಯಶಸ್ವಿಯಾದ ಮೇಲೆ…” “ಇಲ್ಲಿ ದಾರಿಯಿಲ್ಲಾಂತಂದ್ರೂ ಆರೋಗ್ಯಾ ಇದೆ. ಕೃಷಿಯಿಲ್ದೇ ಹೋದ್ರೂ ಹಲಸಿನ ಕಾಯಿಯಿದೆ, ಕೆಸ ಇದೆ, ಕಣಿಲೆ ಇದೆ, ಮತ್ತೊಂದು ಇದೆ. ಇಲ್ಲಿಂದ ರೂಪಾಯಿ ಎಣಿಸ್ಕೊಂಡು ಪೇಟೆಗೆ ಹೋದ್ರೆ ಏನಿದೆ, ಮಣ್ಣು!” “ಪ್ರಾಮಾಣಿಕವಾಗಿ ಹೇಳ್ತೀನಿ, ನನಗಿರೋದು ಬರೀ ಹದಿನೈದೆಕ್ರೆ ಜಮೀನು, ಮುನ್ನೂರು ಎಕ್ರೆ ಒತ್ತುವರಿ. ಅಭಿವೃದ್ಧಿಗಾಗಿ ಹದಿನೈದೆಕ್ರೆ ವಶ ಪಡಿಸಿಕೊಳ್ಳೋರು ಉಳಿದ ಮುನ್ನೂರಕ್ಕೇನು ಕೊಟ್ರೂ ವನ್ಯಕ್ಕೆ ಲಾಭವೇ ಅಲ್ಲವೇ?” “ಕೊಯ್ನಾದ ಭೂಕಂಪ, ಕೈಗಾ ನೆಲದ ಅಸ್ಥಿರತೆಯ ಅಧ್ಯಯನ ವರದಿಗಳು ಸ್ಪಷ್ಟವಾಗಿ ಹೇಳುವುದೇನು? ಇಲ್ಲಿ ಭೂಮ್ಯಂತರಾಳದಲ್ಲಿ ಒಂದು ಬೃಹತ್ ಷಡ್ಭುಜಾಕೃತಿಯ ಸ್ತರಭಂಗವಾಗಿದೆ. ಅದರ ಒಂದು ಕೋನದಲ್ಲಿ ಕೊಯ್ನಾ ಕೈಗಾಗಳಿದ್ದರೆ ಇನ್ನೊಂದು ಕೊನೆಯೇ ಹೊಂಗಡಳ್ಳ. ಇಂಥಲ್ಲಿ ಭಾರೀ ಮೊತ್ತದ ನೀರು ನಿಲ್ಲಿಸಿದ್ರೆ ಭೂಕಂಪ ಖಚಿತಾ ಅನ್ನುತ್ತೆ ವರದಿ. ಆದರೆ ನಮ್ಮ ಯೋಜನಾ ಇಂಜಿನಿಯರ್ ಹೇಳ್ತಾರೆ, ನಮ್ಮ ಕಟ್ಟೆಯ ಅಡಿಪಾಯ ಸಾಮಾನ್ಯ ಭೂಕಂಪ ತಡೆಯೋವಷ್ಟು ಗಟ್ಟಿ ಮಾಡ್ತೀವಿ. ನಾನು ಕೇಳ್ತೀನಿ, ಸರೀ ಸ್ವಾಮೀ, ಪುನರ್ವಸತಿ ಅಗತ್ಯವಿಲ್ಲದೆ ಇಲ್ಲೇ ಉಳ್ಯೋರ ಮನೆಗಳ ಅಡಿಪಾಯಕ್ಕೇನು ಮಾಡ್ತೀರಿ?” “ಇದು ಗಟ್ಟಿನೆಲ, ಹೂಳು ತುಂಬೋಲ್ಲ ಎಂದ್ರು. ಮೂರು ಮಳೆಗಾಲ ಕಳೆಯುವಾಗಲೇ ನಮ್ಮ ಗದ್ದೆಯಲ್ಲೆಷ್ಟು ಹೂಳು ಸೇರಿರುತ್ತೇಂತ ಇವರು ಬಂದು ನೋಡ್ಬೇಕು.” “ವಸತಿ, ಕೃಷಿಭೂಮಿಗಳ ಪುನರ್ವ್ಯವಸ್ಥೆಯ ರಂಗು ರಂಗಿನ ಚಿತ್ರ ತೋರಿಸಿದ್ರು. ನಲ್ವತ್ತಕ್ಕೂ ಮಿಕ್ಕು ವರ್ಷಗಳ ರಾಮನಗರ, ಶರಾವತಿ ಪುನರ್ವಸಿತರ ಊರು, ಇಲ್ಲಿನ ಹೆಚ್ಚಿನ ಸಭಿಕರು ಕೇಳಿಲ್ಲ, ಅವಶ್ಯ ನೋಡಬೇಕು. ಮನೆಗಳಿಂದ ಕೃಷಿಭೂಮಿ ಹನ್ನೆರಡು ಕಿಮೀ ದೂರ. ವಾಹನ ಸೌಕರ್ಯವಿಲ್ಲ, ಎರಡು ಗುಡ್ಡೆ ಹತ್ತಿ, ಇಳಿದು ಬೆಳಿಗ್ಗೆ ಹೋಗಿ ಸಂಜೆ ಬರಬೇಕು. ಏನು, ಎಷ್ಟು ಕೃಷಿ ಮಾಡಬಹುದು?” “ದೇಶಕ್ಕೆ, ಕರ್ನಾಟಕಕ್ಕೆ ಎರಡು ಅನನ್ಯ ಕೊಡುಗೆ – ಕ್ಯಾಸನೂರು ಜ್ವರ ಮತ್ತು ಹಂದಿಗೋಡು ಖಾಯಿಲೆ ಕೊಟ್ಟ ಖ್ಯಾತಿ ಶಿವಮೊಗ್ಗ ಜಿಲ್ಲೆಗಿದೆ. ಇನ್ನೂ ಎರಡರ ಮೂಲ ಕಂಡವರಿಲ್ಲ ಮತ್ತು ಪರ್ಯಾಪ್ತ ಚಿಕಿತ್ಸೆ ಸಾಧ್ಯವಾಗಿಲ್ಲ. ಕಾರಣಗಳೇನೇ ಇರಲಿ ಇವೆರಡೂ ಮೊದಲೇ ಶೀತ ಪ್ರದೇಶವಿದ್ದಲ್ಲಿ, ಮನುಷ್ಯ ಮಾಡಿದ ಭಾರೀ ಜಲಸಂಗ್ರಹಗಳ ಒತ್ತಿನಲ್ಲಿ ಹುಟ್ಟಿಕೊಂಡವು ಎನ್ನುವುದು ಮರೆಯಬಾರದು!” “ಆನೆಗಳಿವೆ ಅಂತಾರೆ, `ಮೆಗಾ’ ಪ್ರಾಣಿಗಳಿಲ್ಲಂತಾನೂ ವರದಿ ಹೇಳುತ್ತೆ. ಇಲಿ, ಹಲ್ಲಿ, ಕಾಡ್ಕೋಳಿ ವನ್ಯ ಪಶುಪಟ್ಟಿಯಲ್ಲಿ ಬರುತ್ತವೆ. ವರದಿಯ ಉರಗ ವರ್ಗದಲ್ಲಿ cattle leech – ಜಿಗಣೆ, ಕಾಣಿಸಿಕೊಂಡಿದೆ. ಪುಷ್ಪಗಿರಿ ವನಧಾಮದ ಪಕ್ಷಿಗಳು ಐದಾರು ಕಿಮೀ ನೇರ ಹಾರಾಟದಲ್ಲಿ ಹೊಂಗಡಳ್ಳಕ್ಕೆ ಬಂದರೆ ಯೋಜನಾ ವರದಿಗಾರರು ಅಂಕುಡೊಂಕಿನ ಡಾಮರು ದಾರಿಯ ಮೂವತ್ತಾರು ಕಿಮೀ ಅಂತರ ತೋರಿಸುತ್ತಾರೆ. ಯಾಕಂದ್ರೇ ಕಾನೂನು ಹೇಳುತ್ತೆ ವನಧಾಮದಿಂದ ಕನಿಷ್ಠ ಹತ್ತು ಕಿಮೀ ದೂರದಲ್ಲಿ ಯಾವುದೇ ಭಾರೀ ಅಭಿವೃದ್ಧಿ ಕಾರ್ಯಗಳು ನಡೆಯಬಾರದು. ಇಲ್ಲಿ ಏನೂ ಕೆಲಸ ಮಾಡದೆ ಜೀವವೈವಿಧ್ಯ ವರದಿ ಬರೆದವರಿಗೆ ಎಲ್ಲವೂ `ಸಾಮಾನ್ಯ’ವಾಗಿ ಕಾಣಿಸಿದೆ. ಇದು ಶುದ್ಧಾಂಗ ತಪ್ಪು, ವರದಿಗಾರರನ್ನು ಕಪ್ಪುಪಟ್ಟಿಗೆ ಹಾಕಬೇಕು.”

“ಈ ಸಭೆಯನ್ನು ಕೆಪಿಸಿಎಲ್ ನಮ್ಮ ಮೇಲಿನ ಅತೀವ ಕಾಳಜಿಯೊಡನೆ ವ್ಯವಸ್ಥೆಗೊಳಿಸಿದೆ ಎಂಬ ಭ್ರಮೆ ಕೆಲವರಿಗಿದ್ದರೆ ಅದು ತಪ್ಪು. ಸಂದ ವರ್ಷಗಳಲ್ಲಿ ಬೃಹತ್ ಯೋಜನೆಗಳು ಜನಾಭಿಪ್ರಾಯವನ್ನು ಕಡೆಗಣಿಸಿದ್ದಕ್ಕೆ ಪ್ರಾಯಶ್ಚಿತವಾಗಿ ಇಂಥಾ ಸಭೆ, ಮತ್ತದರ ಬಹುಮತಕ್ಕೆ ಮನ್ನಣೆ ಕಡ್ಡಾಯವಾಗಿದೆ. ಶರಾವತಿಯ ಹಿನ್ನೀರಿನ ತುಮ್ರಿ ಎಂಬ ಹಳ್ಳಿ ಪರೋಕ್ಷ ಸಂತ್ರಸ್ತ ಸ್ಥಳಗಳಲ್ಲಿ ಒಂದು. ಇದರ ನಲ್ವತ್ತಕ್ಕೂ ಮಿಕ್ಕು ವರ್ಷಗಳ ತಾಳ್ಮೆ ಇದಕ್ಕಿನ್ನೂ ಮುಖ್ಯ ನೆಲದೊಡನೆ ಸಾರ್ವಕಾಲಿಕ ಸಂಪರ್ಕ ಸೇತುಕೊಡಲು ಯಶಸ್ವಿಯಾಗಿಲ್ಲ. ರಾಜ್ಯಕ್ಕೇ ಬೆಳಕು ಕೊಟ್ಟ ಈ ನೆಲಕ್ಕೆ ವಿದ್ಯುತ್ ಸರಬರಾಜು ಎಂದೂ ಶುದ್ಧವಿಲ್ಲ. ಉಳಿದ ಸವಲತ್ತುಗಳ ವಿಚಾರ ಹೇಳಿದಷ್ಟು ಮುಗಿಯದು! ನಾಳೆ ಹೊಂಗಡಳ್ಳದ ಯೋಜನೆ ಕಾರ್ಯಗತವಾದರೆ ಇಲ್ಲೂ ಅಸಂಖ್ಯ ತುಮ್ರಿಗಳು ಹುಟ್ಟಿಕೊಳ್ಳುತ್ತವೆ.”

೧೯೭೫ ರ ಸುಮಾರಿನಿಂದ ನಮ್ಮ ಮಿತ್ರ ಬಳಗ ಈ ವಲಯಗಳಲ್ಲಿ ಶಿಸ್ತು ಬದ್ಧವಾದ ಚಾರಣ, ಶಿಬಿರ ನಡೆಸಿದ್ದಕ್ಕೆ, ವನ್ಯ ವಕ್ತಾರರಾಗಿ ಟೀಕಿಸಿದ್ದಕ್ಕೆ ಲೆಕ್ಕವಿಲ್ಲ. ಬರಿದೇ ಹೊರಗಿನಿಂದ ಟೀಕಿಸಿದರೆ ಸಾಲದು ಎಂಬಂತೆ ಎರಡು ವರ್ಷಗಳ ಹಿಂದೆ ಹೊಂಗಡಹಳ್ಳದ ಸ್ವಲ್ಪ ಕೆಳಗೆ, ಅಂದರೆ ಬಿಸಲೆ ವಲಯದಲ್ಲಿ ನಾವು ಪೂರ್ತಿ ಖಾಸಗಿಯಾಗಿ ವನ್ಯದ ಒತ್ತಿನ ನೆಲ ಕೊಂಡು (`ಅಶೋಕವನ’) ಎಲ್ಲಾ ತರದ ಮನುಷ್ಯ ಚಟುವಟಿಕೆಗಳಿಂದ ಕಾಪಾಡಲು ತೊಡಗಿದ್ದೂ ಆಯ್ತು. ಜೊತೆಗೆ ನಡೆಸಿದ ಪ್ರಾಕೃತಿಕ ಶೋಧಗಳು ಇಲ್ಲಿನ ಅನನ್ಯತೆಯನ್ನು ಸ್ಪಷ್ಟವಾಗಿ ತೋರುವುದರೊಡನೆ ಇವನ್ನು ಪ್ರಾಕೃತಿಕವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಸಾರುತ್ತಿವೆ. ಈ ವಲಯದ್ದೇ ಆದ Nilgiri Marten ಅಥವಾ ಮರನಾಯಿ ಎಂದೇ ಹೆಸರಿಸಲ್ಪಟ್ಟ ಜೀವಿಯೊಂದು ದಕ್ಷಿಣ ಭಾರತದಲ್ಲೇ ಅಳಿದುಹೋಗಿದೆ ಎಂದು ವನ್ಯ ವಿಜ್ಞಾನಿ ವಿವೇಕ್ ಮೆನನ್ ತಮ್ಮ ಪುಸ್ತಕ Inidan mammals ನಲ್ಲಿ ದಾಖಲಿಸಿದ್ದಾರೆ.

ಅವರಿಗೆ ಮಸುಕಾಗಿ ಅದೂ ಕಷ್ಟದಲ್ಲಿ ಸಿಕ್ಕ ಒಂದು ಮರನಾಯಿಯ ಚಿತ್ರ ದಾಖಲಾದದ್ದು ಕೇರಳದ ಎರುವಿಮಲೈ ವನಧಾಮದಲ್ಲಂತೆ. ಅದೇ ನಮ್ಮ ಬಿಸಲೆಯ ಒಂದು ಶಿಬಿರಾವಧಿಯಲ್ಲಿ ನಮ್ಮ ಯಾವ ವಿಶೇಷ ಶೋಧಪ್ರಯತ್ನಗಳೂ ಇಲ್ಲದೆ ಮೂರು ಮರನಾಯಿಗಳ ಸಣ್ಣ ಹಿಂಡು ವಿಡಿಯೋ ದಾಖಲೆಗೇ ಸಿಕ್ಕಿದ್ದು ತುಂಬ ಗಮನಾರ್ಹ. ಈ ಚಿತ್ರ ಕಳೆದೊಂದು ವರ್ಷದಿಂದ ಅಂತರ್ಜಾಲದಲ್ಲಿದ್ದು (ನೋಡಿ: ಬ್ಲಾಗ್: abhaya.wordpress.com ಅಲ್ಲಿ ವಿಡಿಯೋಸ್ನಲ್ಲಿ `ಅಶೋಕವನ’) ಅಸಂಖ್ಯ ವನ್ಯಾಸಕ್ತರನ್ನು ಸೆಳೆಯುವುದರೊಡನೆ ಈ ವಲಯದ ವನ್ಯ ರಕ್ಷಣೆಗೆ ಇನ್ನಿಲ್ಲದ ಮಹತ್ವವನ್ನು ತಂದಿದೆ.ಗುಂಡ್ಯ ಜಲ ವಿದ್ಯುತ್ ಯೋಜನಾ ವರದಿ ನಾವು ಏನು ಗಳಿಸುತ್ತೇವೆ ಎಂಬ ರಮ್ಯ ಚಿತ್ರಗಳನ್ನು ಪ್ರಸರಿಸುವ ಮೊದಲು ಏನೆಲ್ಲಾ ಕಳೆದುಕೊಳ್ಳುತ್ತೇವೆ ಎಂಬುದನ್ನು ಯೋಗ್ಯ ಅಧ್ಯಯನ ನಡೆಸಬೇಕಿತ್ತು. ಆದರೆ ದಾಂಡೇಲಿಯೇ ಮೊದಲಾಗಿ ಮೂರು ಜಲವಿದ್ಯುತ್ ಯೋಜನೆಗಳಿಗೆ ಅನುಬಂಧವಾಗಿ ಬಂದ ಅದೇ ಅದೇ ಅಪಭ್ರಂಶವನ್ನು ಇಲ್ಲಿಯೂ ಸೇರಿಸಿ ಮರುಳು ಮಾಡಲು ಹೊರಟದ್ದು ನಾಚಿಗೆಗೇಡು. ವಾಸ್ತವದಲ್ಲಿ ಕೇವಲ ಹೊಟ್ಟೆಪಾಡಿನವರ ಬಳಿ, ಪ್ರಜಾಸತ್ತೆಯಲ್ಲಿ ತಮಗೆ ದತ್ತವಾದ ಹಕ್ಕುಗಳ ಪೂರ್ಣ ಆಯಾಮ ತಿಳಿಯದವರ ಬಳಿ, ಕನಿಷ್ಠ ಬಳಕೆದಾರರ ಹಕ್ಕು/ಸಂಬಂಧವನ್ನಾದರೂ ಆಡಳಿತದೊಂದಿಗೆ ದಕ್ಕಿಸಿಕೊಳ್ಳಲಾಗದ ಜನರ ಬಳಿ ಪರಿಸರದ ಸೊಲ್ಲೆತ್ತುವುದೇ ದೊಡ್ಡ ಕಪಟ ನಾಟಕ. ಗುಂಡ್ಯ ಜಲವಿದ್ಯುತ್ ಯೋಜನೆ ಸಾರ್ವಜನಿಕ ಹಣಹಾಳು, ಪರಿಸರಕ್ಕೆ ಬಲುದೊಡ್ಡ ಶಾಪ.