ಋತುಮಾನದ ಹಾರೈಕೆಗಳನ್ನು ಹೊತ್ತು ಮತ್ತೆ ಬಂದಿದೆ ಅಂಚೆ. ವನ್ಯ ಸಂದೇಶದ ಕಳಕಳಿಯೊಡನೆ ವರ್ತಮಾನದ ಸಾಮಾಜಿಕ ಸ್ವಾಸ್ಥ್ಯದ ಮೇಲೂ ಸಾಮಯಿಕ ಬೆಳಕು ಚೆಲ್ಲುವ ಇಪ್ಪತ್ತಾರನೇ ವರ್ಷದ ಏಕವ್ಯಕ್ತಿ ಸಾಧನೆ. ಲಕೋಟೆ ಬಿಡಿಸಿ ನೋಡಿದೆ – ವಿವೇಚನಾಹೀನ ಅಭಿವೃದ್ಧಿಯ ಹುಳು ಕಡಿದವರಿಗೆ ಬೆನ್ನು ಹಾಕಿ ಕುಳಿತ ಕಠಿಣ ಲೆಕ್ಕ ಪರಿಶೋಧಕನದೇ ಮೊದಲ ಚಿತ್ರ. ಆತನ ಪ್ರಶ್ನೆಗಳೋ ನೇರ, ಮಾರ್ಮಿಕ “ಭೂಮಿಯ ಸಂಪನ್ಮೂಲಗಳನ್ನು ಎಷ್ಟು ಬಳಸಿದ್ದೀ? ಎಷ್ಟು ಬೆಳೆಸಿದ್ದೀ? ಎಷ್ಟು ಉಳಿಸಿದ್ದೀ?” ಹೆಚ್ಚಾಗಿ ಇಂಥ ವಿಚಾರಗಳ ಖಾತೆಯನ್ನೇ ಮರೆತು ಮೆರೆಯುವ, ಅತಿ-ಬಳಸುವ ಪ್ರವೃತ್ತಿಯಲ್ಲವೇ ನಮ್ಮದು!

ತನ್ನ ಉದ್ದದ ಹಿಂಗಾಲು ಚಾಚಿ, ಭಾವಪೂರ್ಣವಾಗಿ ಪುಟ್ಟ ಕೈ ಎತ್ತಿ ನಮ್ಮ ಭ್ರಮೆಯ ಆವರಣಕ್ಕೆ ಲಗ್ಗೆಯಿಡುತ್ತಿರುವ ನಮ್ಮ ಇನ್ನೊಬ್ಬ ಸಹಜೀವಿಯದೇ ಎರಡನೇ ಚಿತ್ರ. ಇವನದ್ದು ತೋರಿಕೆಗೆ ಪ್ರಶ್ನೆ. ವಾಸ್ತವದಲ್ಲಿ ನಾವು (ಸಾಮಾನ್ಯ ಮನುಷ್ಯರು) ಮರೆತ ಜೀವಜಾಲದ, ವಿಶ್ವ ಬಾಂಧವ್ಯದ ನೆನಪು ಹುಟ್ಟಿಸುವ ಪ್ರಯತ್ನ. “ನೀವು ಕಾಲಿಡದೆಡೆ, ನಿಮ್ಮ ಕೈವಾಡವಿಲ್ಲದೆಡೆ ಎಲ್ಲವೂ ಎಷ್ಟು ಸುಸೂತ್ರವಾಗಿ, ನೆಮ್ಮದಿಯಿಂದ ಸಾಗುತ್ತಿದೆ! ಗಮನಿಸಿದ್ದೀರಾ?”

ವಾರದ ಆರೂ ದಿನ ನಗರದ ಹೃದಯದಲ್ಲಿ ಅಂದರೆ ಅಕ್ಷರಶಃ ಹೊಗೆ, ದೂಳು, ಗದ್ದಲಗಳ ಸಂತೆಯಲ್ಲಿ ಕುಳಿತಿರುವ ವೃತ್ತಿ ನನ್ನದು. ಕೇವಲ ಆದಿತ್ಯವಾರ ಮತ್ತು ವಿಶೇಷಪಟ್ಟ ರಜಾದಿನಗಳ ಪರ್ವತಾರೋಹಣ ಸಂಬಂಧೀ ಸಾಹಸೀ ಚಟುವಟಿಕೆಗಳು ನನ್ನ ನಿಜವಾದ ವಿಶ್ರಾಂತಿ. ಆ ಅನುಭವಗಳ ಸವಿಯನ್ನು ಸಮಾಜದೊಡನೆ ಹಂಚಿಕೊಳ್ಳಲು ಮತ್ತು ಪರೋಕ್ಷವಾಗಿ ಇತರರಿಗೂ ಪ್ರೇರಣೆ ಕೊಡಲು ನಾನು ಲೇಖನಗಳನ್ನು ಪ್ರಕಟಿಸಿದ್ದುಂಟು, ಸಂಕಲಿಸಿ ಪುಸ್ತಕ ಮಾಡಿದ್ದೂ ಉಂಟು, ಹೀಗೆ ಈಚೆಗೆ ಬ್ಲಾಗ್ ತುಂಬುವುದೂ ನಡೆಸಿದ್ದೇನೆ. ಬರವಣಿಗೆ ನಮ್ಮ ಕ್ರಿಯೆಗಳನ್ನು ನಮಗೇ ವಿಮರ್ಶಿಸಿಕೊಳ್ಳಲು ಮತ್ತು ಮುಂದಿನ ನಮ್ಮ ನಡೆಗೊಂದು ಖಾಚಿತ್ಯ ತರಲು ಬಲು ಸಹಕಾರಿ.

ಹೀಗೆ ನಾನೇನೋ ನನ್ನ ಶೋಧದಲ್ಲೇ ಇರುವ ಯಾವುದೋ ಒಂದು ವರ್ಷ ಅನಿರೀಕ್ಷಿತವಾಗಿ ವಿರಾಜಪೇಟೆಯ ದೂರದಿಂದ ಅಪರಿಚಿತ ಡಾ|ನರಸಿಂಹನ್ ಎಂಬುವರಿಂದ ವನ್ಯಜೀವಿ ಚಿತ್ರ ಮತ್ತು ಸಂರಕ್ಷಣ ಸಂದೇಶಪತ್ರ ಬಂತು. ಇದು ಒಮ್ಮೆಗೆ ನನ್ನ ಆತ್ಮಪ್ರತಿಷ್ಠೆಗೆ ಸಂದ ಸಮ್ಮಾನದಂತೇ ಅನ್ನಿಸಿತು. ಆದರೆ ಮರುಕ್ಷಣದಲ್ಲಿ ಕೆಲವು ವರ್ಷಗಳಿಂದ ಇವರು ಇದನ್ನು ನಡೆಸಿರುವುದು ಕಾಣಿಸಿತು. ಸಾವಿರಾರು ಕಾರ್ಡುಗಳಲ್ಲಿ ವನ್ಯಸಂರಕ್ಷಣೆಯ ಚಿತ್ರ, ಉಕ್ತಿ ಮತ್ತು ಮಾಹಿತಿಯನ್ನು ಸ್ವಹಸ್ತದಲ್ಲಿ ಮಾಡುವುದಲ್ಲದೆ ಸ್ವಂತ ಖರ್ಚಿನಲ್ಲಿ ಸಾವಿರಾರು ಜನರಿಗೆ ರವಾನಿಸುತ್ತಲೂ ಇರುವುದು ಅರಿವಿಗೆ ಬಂತು. (ಪತ್ರದ ಕೊನೆಯಲ್ಲಿ ಇವರು ತನ್ನ ಪ್ರೋತ್ಸಾಹಕರಿಗೆ ಮಾಡುವ ಏಕೈಕ ಮನವಿ: “ದಯವಿಟ್ಟು ಹೆಚ್ಚು ಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ. ನನ್ನ ಅಂಚೆ ವೆಚ್ಚವನ್ನು ತಗ್ಗಿಸಲು ಸಹಕರಿಸಿ. ವಿಳಾಸ: ಡಾ| ಎಸ್.ವಿ. ನರಸಿಂಹನ್, ವಿರಾಜಪೇಟೆ, ಕೊಡಗು – ೫೭೧೨೧೮)

ನನ್ನ ಅನುಭವದಲ್ಲಿ ದಾನ, ಅನುದಾನ, ಸಾಲ ಮುಂತಾದ ಪ್ರಾಯೋಜಕತೆಯ ವಿಭಿನ್ನ ರೂಪಗಳು ಹೆಚ್ಚಾಗಿ ಯಾವುದೇ ಸದುದ್ದೇಶಕ್ಕೆ ಸಹಕಾರದ ಹೆಸರಿನ ನೇಣುಗಂಬಗಳು. ಇದನ್ನೇ ಹೆಗ್ಗೋಡಿನ ಕೆ.ವಿ.ಅಕ್ಷರ ಒಂದು ಕಡೆ ರಂಗ ಕಲೆಗಳ ಕುರಿತು ಬರೆಯುತ್ತಾ ‘ವೈಚಾರಿಕ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಂದೆ ಸೆನ್ಸಾರ್ ಇತ್ತು. ಇಂದು ಅದಕ್ಕೂ ಮಿಗಿಲಾದ ಸ್ಪಾನ್ಸರ್ ಅಂದರೆ ಪ್ರಾಯೋಜಕತೆ ಇದೆ’ ಎಂದು ವ್ಯಂಗ್ಯವಾಡಿದ್ದು ಇಲ್ಲಿ ಅವಶ್ಯ ನೆನಪಿಸಿಕೊಳ್ಳಬಹುದು. ಎಲ್ಲವನ್ನೂ ಸ್ವಂತ ಬುದ್ಧಿ ಮತ್ತು ಖರ್ಚಿನಲ್ಲಿ ಸ್ವಂತ ಖುಶಿಗಾಗಿ ಆದರೆ ಸಾರ್ವಜನಿಕ ಹೃದಯ ಪರಿವರ್ತನೆಗಾಗಿ ಮಾಡುತ್ತಿರುವ ನರಸಿಂಹನ್ ಬಗ್ಗೆ ನನಗೆ ಅಪಾರ ಗೌರವ ಬಂತು. ಅವರ ಬಗ್ಗೆ ನನ್ನ ಕುತೂಹಲದ ಕಣ್ಣು ಅರಳಿಸಿ ನೋಡಿದೆ. ಇವರ ಸಂದೇಶಪತ್ರಗಳನ್ನು ಪಡೆದ ಕೆಲವು ಪತ್ರಿಕೆಗಳು ಇವರ ಪ್ರಯತ್ನಕ್ಕೆ ಪೂರಕವಾಗಿ ಲೇಖನಗಳನ್ನು ಪ್ರಕಟಿಸಿದ್ದೂ ಕಂಡೆ. ಅಂದು ನಾನವರಿಗೆ ಕೃತಜ್ಞತೆ ತಿಳಿಸಿದ್ದೆನೋ ಬಿಟ್ಟೆನೋ ಮರೆತಿದ್ದೇನೆ. ಆದರೆ ಇವನ್ನು ಮತ್ತೆ ನನಗೆ ಕಳಿಸಬೇಡಿ ಎಂಬ ಷರಾ ಖಂಡಿತಾ ಹಾಕಿರಬೇಕು. ಅವರನ್ನು ನಿರುತ್ತೇಜನಗೊಳಿಸಲು ಅಂಚೆ ಚೀಟಂತೂ ಖಂಡಿತಾ ಕಳಿಸಲಿಲ್ಲ. ಕಾರಣ ಇಷ್ಟೇ – ನನಗೆ ಅಮೂಲ್ಯವಾದ ವಸ್ತುಗಳನ್ನು ಸಂಗ್ರಹಿಸಿಡುವ ಅಭ್ಯಾಸ ಇಲ್ಲ. ಮತ್ತವು ನೋಡಿ ಎಸೆಯುವ ಇತರ ಕಾರ್ಡುಗಳಂತಲ್ಲವಲ್ಲ! ಆದರೆ ಈ ಪುಣ್ಯಾತ್ಮ ಕಳಿಸುತ್ತಲೇ ಇದ್ದಾರೆ. ಹಾಗೆಂದು ಆ ಸುಂದರ ಸಂದೇಶಗಳನ್ನು ಹಾಳುಗೆಡವದೆ ನನಗೆ ತೋಚಿದ ಸಹೃದಯಿಗಳಿಗೆ ದಾಟಿಸುತ್ತಲೇ ಬಂದಿದ್ದೇನೆ. ಈಗ ನನ್ನ ಅರಿವಿಗೆ ಬಂದಿದೆ, ಇಲ್ಲಿ ಸಂದೇಶ ವನ್ಯದ್ದು ಮಾತ್ರವಲ್ಲ, ಸ್ನೇಹಾಚಾರದ್ದು ಬಹಳ ಗಾಢವಾಗಿದೆ. ಅಲ್ಲದೆ ಅವರ ಸಂದೇಶ ಪ್ರಸರಣದ ಆಶಯದಲ್ಲಿ ನನ್ನಂತವರ ವಿವೇಚನೆಯೂ ಸೇರಿರುವಂತಿದೆ.

ಕೈಯಾರೆ ಅವರು ಚಿತ್ರಿಸಿ, ಬಣ್ಣವನ್ನೂ ತುಂಬಿದ ಎರಡು ಕಾರ್ಡುಗಳಲ್ಲದೆ ಎರಡು ಮುದ್ರಿತ ಪತ್ರಗಳೂ ಜೊತೆಯಲ್ಲಿ ಬಂದಿವೆ. ಒಂದು ಅವರು ಈ ವರ್ಷ ವನ್ಯಜೀವಿ ಸಂದೇಶವಾಹಕರನ್ನಾಗಿಸಿದ ಕೀಟ, ಪ್ರಾಣಿ, ಪಕ್ಷಿಗಳ (ಹದಿನೆಂಟು. ಆದರೆ ಒಟ್ಟು ಪ್ರತಿಗಳು ಒಂದು ಸಾವಿರದ ಏಳ್ನೂರಾ ಎಂಬತ್ತು!) ಸಂಕ್ಷಿಪ್ತ ಪರಿಚಯ. ಗಮನಿಸಿ, ಇದು ಪುಸ್ತಕದ ಬದನೇಕಾಯಿಯಲ್ಲ. ಪ್ರತ್ಯಕ್ಷದರ್ಶಿಯ, ನಿಸ್ವಾರ್ಥ ಪ್ರಚಾರಕನ ಟಿಪ್ಪಣಿಗಳು. ಪಕ್ಷಿಗಳಿಗೆ ಸಂಬಂಧಪಟ್ಟಂತೆ ಇಂಥಾ ಟಿಪ್ಪಣಿಗಳ ವಿಸ್ತೃತ ಮತ್ತು ಸಚಿತ್ರ ರೂಪವೇ ಈಗ ಲಭ್ಯವಿರುವ ಅವರ ಪುಸ್ತಕ – ಕೊಡಗಿನ ಖಗರತ್ನಗಳು. ಇದು ಪಶ್ಚಿಮ ಘಟ್ಟಗಳ ಸುತ್ತಮುತ್ತ ಕಂಡುಬರುವ ಮುನ್ನೂರಾ ಹತ್ತು ಹಕ್ಕಿಗಳ ವರ್ಣಪೂರಿತ ಚಿತ್ರ ಸಹಿತ ಮಾಹಿತಿ ಪುಸ್ತಕ; ಅಕ್ಷರಶಃ ಅನ್ವೇಷಕನ ಕೈಪಿಡಿ. ಬೆಲೆ ಕೇವಲ ರೂ. ಇನ್ನೂರೈವತ್ತು. (ದೂರದೂರಿನವರು ನನಗೆ ಸ್ವವಿಳಾಸ ಸಹಿತ ರೂ. ೨೫೦-೦೦ + ಸಾದಾ ಅಂಚೆವೆಚ್ಚವಾದರೆ ಐದು, ನೋಂದಾಯಿತವಾದರೆ ರೂ ೨೫ ಮುಂಗಡ ಮನಿಯಾರ್ಡರ್ ಕಳಿಸಿ ಪುಸ್ತಕ ಪಡೆಯಬಹುದು.)

ಯಾವುದೇ ಶುದ್ಧ ವೃತ್ತಿಪರನನ್ನು ಪರಾಂಬರಿಸಿ ನೋಡಿದರೆ ಅಲ್ಲೊಬ್ಬ ಉತ್ಕೃಷ್ಟ ಸಮಾಜಸೇವಕನನ್ನೂ ನಾವು ಕಾಣಬಹುದು. ಅದಕ್ಕೆ ಉದಾಹರಣೆಯಾಗಿ ವನ್ಯಪ್ರೇಮಿ ನರಸಿಂಹನ್ ಅವರ ಡಾಕ್ಟರ್‌ಗಿರಿ ಈ ಸಲದ ಇನ್ನೊಂದು ಪತ್ರವನ್ನು ರೂಪಿಸಿದೆ. ನನ್ನ ವಗ್ಗರಣೆಯಿಲ್ಲದೆ ಡಾ| ನರಸಿಂಹನ್ ಪತ್ರ ಪಾಕವನ್ನು ನಿಮ್ಮ ಅನುಪಾನಕ್ಕೆ ಕೊಡುತ್ತಿದ್ದೇನೆ.

  • “ಇತ್ತೀಚೆಗೆ ಎಲ್ಲೆಡೆ ಕೇಳಿಬರುತ್ತಿರುವ ಹಂದಿಜ್ವರದ ಬಗ್ಗೆ ಈ ಸಾರಿ ನಿಮ್ಮ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತೇನೆ. ಹಂದಿಜ್ವರ ಎನ್ನುವುದು ಎಚ್೧ ಎನ್ ೧ ಎಂಬ ವೈರಸ್ಸಿನಿಂದ ಉಂಟಾಗುವ ರೋಗ. ವೈರಸ್‌ಗಳು ಇಂದು-ನೆನ್ನೆ ಹುಟ್ಟಿದ ಜೀವಿಗಳಲ್ಲ. ಭೂಮಿಯ ಮೇಲೆ ಮೊದಮೊದಲು ಅಂದರೆ ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ವಿಕಾಸ ಹೊಂದಿದ ಏಕಾಣುಜೀವಿಗಳು.
  • “ವೈರಸ್‌ಗಳಿಗಿರುವ ಎರಡು ವಿಶಿಷ್ಟ ಗುಣಗಳಿಂದಾಗಿ ಅವು ಪ್ರಪಂಚದಲ್ಲಿ ಇಷ್ಟು ಸಮರ್ಥವಾಗಿ, ಯಾವುದೇ ಆತಂಕವಿಲ್ಲದೆ ವಿಕಾಸಹೊಂದಲು ಸಾಧ್ಯವಾಗಿದೆ. ಮೊದಲನೆಯದಾಗಿ, ಈ ಸೂಕ್ಷ್ಮಾಣುಜೀವಿಗಳಿಗೆ ತಮ್ಮ ಬೆಳವಣಿಗೆಗೆ ಅವಶ್ಯವಾದ ರಾಸಾಯನಿಕ ದ್ರವ್ಯಗಳನ್ನು ತಮ್ಮದೇ ದೇಹದಲ್ಲಿ ತಯಾರು ಮಾಡಿಕೊಳ್ಳುವ ಶಕ್ತಿಯಿಲ್ಲ. ಹೀಗಾಗಿ ಅವು ಬೆಳೆಯಲು ಒಂದು ಪ್ರಾಣಿ ಅಥವಾ ಸಸ್ಯವನ್ನು ಅವಲಂಬಿಸುತ್ತದೆ. ಮತ್ತೆ ಆ ಜೀವಿಯ ಯಾವ ಕೋಶದಲ್ಲಿ ತಮಗೆ ಆವಶ್ಯವಿರುವ ಜೀವದ್ರವ್ಯ ದೊರಕುತ್ತದೋ ಅದನ್ನು ಆಕ್ರಮಿಸಿ, ನಾಶಮಾಡಿ, ತಾವು ಬೆಳೆಯುತ್ತವೆ. ಆದ್ದರಿಂದಲೇ ಅತಿ ಸಾಮಾನ್ಯವಾದ ನೆಗಡಿ-ಶೀತ, ದಢಾರದಿಂದ ಹಿಡಿದು ಪೊಲಿಯೋ ಏಯ್ಡ್ಸ್ ಮತ್ತು ಎಚ್೧ ಎನ್೧ವರೆಗೆ ಹರಡುವ ಎಲ್ಲಾ ವೈರಸ್ ರೋಗಗಳೂ ನಮ್ಮ ದೇಹದ ಒಂದೊಂದು ವಿಶೇಷ ಜೀವಕೋಶಗಳಿಗೇ ಅಂಟುತ್ತವೆ.
  • “ಎರಡನೆಯದಾಗಿ, ವೈರಾಣುಗಳು ಆಗಿಂದಾಗ್ಗೆ ತಮ್ಮ ದೇಹದ ರೂಪವನ್ನು ಅಲ್ಪ್ಸ ಸ್ವಲ್ಪ ಬದಲಿಸಿಕೊಳ್ಳುವ ಗುಣವನ್ನು ಹೊಂದಿವೆ. ಇದರಿಂದಾಗಿ ಒಂದು ವೈರಸ್ ವೇಷ ಮರೆಸಿಕೊಂಡು ಪುನಃ ನಮ್ಮ ದೇಹವನ್ನು ಆಕ್ರಮಿಸಿದರೂ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಸೋತುಹೋಗುತ್ತದೆ!
  • “ಇಂದು ಮಾನವನ ಹಸ್ತಕ್ಷೇಪದಿಂದ ಭೂಮಿಯ ಮೇಲೆ ಪ್ರತಿದಿನ ಒಂದೊಂದು ಪ್ರಭೇದದ ಸಸ್ಯ ಅಥವಾ ಪ್ರ್ರಾಣಿ ವಿನಾಶ ಹೊಂದುತ್ತಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಒಂದೊಂದು ಜೀವಿಯ ಜೀವಕೋಶಗಳ ಮೇಲೆ ಅವಲಂಬಿತವಾದ ಒಂದೊಂದು ವೈರಾಣು ಅನಿವಾರ್ಯವಾಗಿ ಮಾನವ ದೇಹವನ್ನು ಗುರಿಯಾಗಿಟ್ಟುಕೊಂಡಿದೆಯೆಂದು ನನಗೆ ಅನಿಸುತ್ತದೆ. ಏಕೆಂದರೆ, ಈವತ್ತು ನಾವು ಜಗತ್ತಿನ ಎಲ್ಲೆಡೆ ಬಹು ತೀವ್ರವಾಗಿ ಬೆಳೆಯುತ್ತಿದ್ದೇವೆ. ಜಾಗತಿಕ ಅಭಿವೃದ್ಧಿಯೊಂದಿಗೆ ನಮ್ಮ ಓಡಾಟದ ವೇಗವೂ ಅಧಿಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಹೊಸ ಹೊಸ ವೈರಸ್‌ಗಳನ್ನು ತಡೆದುಕೊಳ್ಳುವ ಶಕ್ತಿಯೂ ಇಲ್ಲ. ಹೀಗಾಗಿ ಇಂದು ನಮ್ಮನ್ನು ಹೊಸ ಹೊಸ ವೈರಸ್ ರೋಗಗಳು ಕಾಡುತ್ತಿವೆ. ಇದು ನಾವೇ ನಮ್ಮ ಮೇಲೆ ಹೇರಿಕೊಂಡ ಗೋರಿಕಲ್ಲು!
  • “ಈವತ್ತು ಈ ವೈರಸ್‌ಗಳು ಮಾನವನ ಮೇಲೆ ಒಂದು ರೀತಿಯ ಯುದ್ಧವನ್ನೇ ಸಾರಿವೆಯೋ ಅನಿಸುತ್ತದೆ. ವಿಪರ್ಯಾಸವೆಂದರೆ, ಇದು ಭೂಮಿಯ ಮೇಲೆ ವಿಕಾಸ ಹೊಂದಿದ ಅತಿ ಪುರಾತನ ಮಾತ್ತು ಅತಿ ವಿಕಸಿತ ಜೀವಿಗಳ ನಡುವಣ ಯುದ್ಧವೇ ಆಗಿದೆ.”

ಸುಮಾರು ಹನ್ನೊಂದು ವರ್ಷಗಳ ಹಿಂದೆ ಮಂಗಳೂರಿನ ಸಮೀಪ ನಾನು ಒಂದು ಎಕ್ರೆ ಪಾಳು ಭೂಮಿ ಕೊಂಡದ್ದೂ ಅದನ್ನು ಪ್ರಾಕೃತಿಕ ಪುನರುಜ್ಜೀವನದ ಪ್ರಯೋಗಭೂಮಿಯಾಗಿಸುವ ಸಂಕಲ್ಪ ಹೊತ್ತು ‘ಅಭಯಾರಣ್ಯ’ವೆಂದೇ ಹೆಸರಿಸಿದ್ದೂ ನನ್ನ ಬ್ಲಾಗಿಗರಿಗೆ ಹೊಸ ವಿಚಾರವೇನೂ ಅಲ್ಲ. ಅಂದು ವನ್ಯದ ಆವಶ್ಯಕತೆಯನ್ನು ಪ್ರಚುರಿಸುವ ಉದ್ದೇಶದಿಂದ ಅದನ್ನು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಉದ್ಘಾಟಿಸುವ ಕಾರ್ಯಕ್ರಮ ಹಾಕಿಕೊಂಡೆ. ಊರಿನ ಪರಿಚಿತರಿಗೆ, ಪರಿಸರ ಆಸಕ್ತ ಹೆಸರುಗಳಿಗೆ ಆಮಂತ್ರಣ ಪತ್ರ ಅಲ್ಲಲ್ಲ, ಸರಿಯಾಗಿ ಹೇಳಬೇಕಾದರೆ ನನ್ನ ಉದ್ದೇಶಗಳನ್ನು ಸ್ಪಷ್ಟಗೊಳಿಸುತ್ತಿದ್ದ ಎಂಟೋ ಹತ್ತು ಪುಟದ ಪುಸ್ತಿಕೆಯನ್ನೇ ಕಳಿಸಿದ್ದೆ. ನನ್ನ ಸುತ್ತಮುತ್ತಲಿನ ಸಾಮಾನ್ಯರಿಗೆ ಪ್ರತ್ಯಕ್ಷ ಪ್ರೇರಣೆಕೊಡುವುದು, ದೂರದ ಪರಿಣತರಿಗೆ ಕೇವಲ ಮಾಹಿತಿ ಕೊಡುವುದು ನನ್ನುದ್ದೇಶ. ಮಂಗಳೂರಿನವರೇ ಎಷ್ಟೋ ಮಂದಿ ನೆಪಗಳನ್ನೊಡ್ಡಿ ಜಾರಿಕೊಂಡರು. ಮತ್ತೆಷ್ಟೋ ಮಂದಿ ಟೇಪು ಕತ್ತರಿಸುವ ಔಪಚಾರಿಕ ಅಥವಾ ಗೃಹಪ್ರವೇಶದಂಥಾ ವೈದಿಕ ವಿಧಿ ನಿರೀಕ್ಷೆಯಲ್ಲಿ ಬಂದು, ಎರಡೂ ಇಲ್ಲದಿದ್ದರೂ ದೇಶಾವರಿ ನಗೆ ಕೊಟ್ಟು, ಕೈಕುಲುಕಿ, ವ್ಯವಸ್ಥೆ ಮಾಡಿದ್ದ ಕಾಫಿತಿಂಡಿ ಸದುಪಯೋಗಪಡಿಸಿ ಮರೆಯಾದರು. ಆದರೆ…

ಬೆಳಿಗ್ಗೆಯೇ ಬಂದ ನನ್ನ ಮಡಿಕೇರಿಯ ಸಂಬಂಧಿಗಳೊಡನೆ ಅನಿರೀಕ್ಷಿತವಾಗಿಯೇ ಆದರೂ ಸಮಾನಾಸಕ್ತಿಯ ಬಂಧುವಂತೆ ಬಂದು ಮೊದಲ ಬಾರಿಗೆ ನನಗೆ ಮುಖ ಪರಿಚಯಲಾಭವನ್ನೂ ಕೊಟ್ಟವರಲ್ಲಿ ಡಾ|ನರಸಿಂಹನ್ ಪ್ರಮುಖರು. ಸಭಾಕಲಾಪಗಳು ಅಪರಾಹ್ನದಲ್ಲಿತ್ತು. ಆದರಿವರು ಕಾಡು ಹರಟೆಗಳಿಗೆ, ಯಾವ ಔಪಚಾರಿಕತೆಗಳಿಗೆ ಕಾಯದೇ ಸ್ಥಳಪರಿಚಯದ ಹುಡುಗನೊಬ್ಬನನ್ನು ಹಿಡಿದುಕೊಂಡು ಆಸುಪಾಸಿನ ತೋಟ, ಗುಡ್ಡ ಸುತ್ತಿದರು. ತಮ್ಮ ಪಕ್ಷಿವೀಕ್ಷಣೆಯ ಹವ್ಯಾಸಕ್ಕೆ ಹೊಸ ಪರಿಸರವನ್ನು ತೆರೆದುಕೊಂಡರು. ಸಂಜೆಯ ಕಲಾಪಗಳಲ್ಲಿ ಎಲ್ಲರೊಡನೆ ಒಂದಾಗಿ ಬಂದಷ್ಟೇ ಅನೌಪಚಾರಿಕವಾಗಿ ಮರಳಿದರು. ಇಂದು ಶುದ್ಧ ವೃತ್ತಿಪರರಾದವರಿಗೂ ಪ್ರತ್ಯೇಕ ಸ್ವಾಗತ ಮಾತುಗಳು, ವಿಶೇಷ ಉಪಚಾರಗಳು, ಕೃತಜ್ಞತಾ ಹೇಳಿಕೆಗಳು ಸಂಘಟಕರಿಂದ ಹೊರಡದಿದ್ದರೆ ಅಪಖ್ಯಾತಿಯ ಅಲೆ ಏಳುವುದು ಖಚಿತ. ಕೆಲಸದ ಮುಂದೆ ವ್ಯಕ್ತಿಪ್ರತಿಷ್ಠೆಯನ್ನು ಮೆರೆಯದ ಡಾ| ನರಸಿಂಹನ್ ಅವರ ನಡವಳಿಕೆ ಇಂದು ಸಾರ್ವಜನಿಕರಂಗದಲ್ಲಿ ಹೆಚ್ಚುಕಡಿಮೆ ಇಲ್ಲವೇ ಆದ ದೊಡ್ಡ ಗುಣ.

ಸುಮಾರು ಎಂಟು ವರ್ಷದ ಹಿಂದೆ ನನ್ನ ದೊಡ್ಡ ಮಿತ್ರ ಬಳಗವನ್ನು ಸಂಯೋಜಿಸಿಕೊಂಡು ನಾವೇ ಮನೆಯವರು ‘ಅಭಯಾರಣ್ಯ’ದಲ್ಲಿ ಒಂದು ‘ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ’ ನಡೆಸಿದೆವು. ಅಲ್ಲಿ ಆಯ್ದ ಇಪ್ಪತ್ತೈದು ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನ ಶಿಕ್ಷಣ, ಊಟ, ವಾಸ ಉಚಿತ. ಬೆಳಿಗ್ಗೆ ಐದರಿಂದ ತೊಡಗಿ ರಾತ್ರಿ ಹನ್ನೊಂದರವರೆಗೆ ಒಂದು ಮಿನಿಟೂ ಸೋರಿಹೋಗದಂತೆ ಕಾರ್ಯಕಲಾಪಗಳ ಸರಣಿಯೇ ಇತ್ತು. ಚಾರಣ, ಪಕ್ಷಿವೀಕ್ಷಣೆ, ಕೀಟಪರಿಚಯ, ಸಸ್ಯ ಪರಿಚಯ, ಜಲಸಂಚಯನ, ನಕ್ಷತ್ರವೀಕ್ಷಣೆ, ಹ್ಯಾಂ ಮುಂತಾದವು ಹೊರಾಂಗಣದ ಕಲಾಪಗಳು. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ನಾಟಕ, ಸಂಗೀತ, ಯಕ್ಷಗಾನ, ಸಾಹಿತ್ಯ, ಕಾವ್ಯ, ಆಕಾಶವಾಣಿ, ಕಾನೂನು, ಜನಪದ, ವನ್ಯ ಸಂರಕ್ಷಣೆ, ಸಾವಯವ ಕೃಷಿ, ಕಸದಿಂದ ರಸ, ಪವಾಡ ತನಿಖೆ, ಬಳಕೆದಾರರ ಹೋರಾಟ ಮಾಹಿತಿ, ವೈಜ್ಞಾನಿಕ ಮನೋಭಾವ ಇತ್ಯಾದಿ ಒಳಾಂಗಣದವು.

ಮಂಗಳೂರು ಆಸುಪಾಸಿನ ನನ್ನ ಹಲವು ಆತ್ಮೀಯ ಆದರೆ ಅಸಾಮಾನ್ಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಸೇವೆಯನ್ನು ಈ ಶಿಬಿರಕ್ಕೆ ಪೂರ್ಣ ಉಚಿತವಾಗಿ ಅಂದರೆ ಕನಿಷ್ಠ ಪ್ರಯಾಣಭತ್ತೆಯೂ ಪಡೆಯದೆ ಧಾರೆ ಎರೆಯುವವರಿದ್ದರು. ಆದರೂ ದೂರದೂರಿನ ಪರಿಚಿತ ಕೆಲವರಿಗೆ ಕೇವಲ ಸುದ್ದಿಯ ಮಟ್ಟದಲ್ಲಿ ಪತ್ರ ಕಳಿಸಿದಂತೆ ಡಾ| ನರಸಿಂಹನ್ ಅವರಿಗೂ ಕಳಿಸಿದ್ದೆ. ನನ್ನ ನಿರೀಕ್ಷೆಯಲ್ಲಿ ದೂರದೂರಿನವರು ಸ್ವಂತ ಖರ್ಚು ಹಾಕಿಕೊಂಡು ನಮ್ಮ ಶಿಬಿರಕ್ಕೆ ಬರುವಷ್ಟು ಅದ್ಭುತವನ್ನೇನೂ ನಾವು ಸಂಘಟಿಸಿರಲಿಲ್ಲ. ಆ ಸಂಪನ್ಮೂಲ ವ್ಯಕ್ತಿಗಳು ಅನ್ಯ ಕಾರ್ಯ ನಿಮಿತ್ತ ಮಂಗಳೂರಿನತ್ತ ಬರುವವರಿದ್ದರೆ, ಬಿಡುವುಮಾಡಿಕೊಳ್ಳುವುದು ಸಾಧ್ಯವಿದ್ದರೆ, ಶಿಬಿರಾರ್ಥಿಗಳಿಗೆ ಲಾಭವಾದೀತೆಂಬ ದೂ(ದು?)ರಾಲೋಚನೆಯಲ್ಲಿ ಪತ್ರ ಹೋಗಿತ್ತು. ಆದರೆ ನರಸಿಂಹನ್ನರ ವಿಶ್ವಾಸ ದೊಡ್ಡದು. ಅಕಾಲಿಕವಾಗಿ ಸುರಿಯುತ್ತಿದ್ದ ಕುಂಭದ್ರೋಣ ಮಳೆಯಲ್ಲೂ ತನ್ನ ಹೆಂಡತಿ ಮಕ್ಕಳನ್ನು ಕೂಡಿಕೊಂಡು ಶಿಬಿರದ ಒಂದು ದಿನ ಬೆಳಿಗ್ಗೆ ಸ್ವಂತ ಕಾರಿನಲ್ಲಿ ಬಂದರು. ಜೊತೆಗೆ ಅಭಯಾರಣ್ಯ ಕೇಂದ್ರವಾಗಿರುವಂತೆ ಆ ಋತುವಿನ ರಾತ್ರಿಯಾಕಾಶದ ನಕ್ಷೆಗಳನ್ನು ಸಂಗ್ರಹಿಸಿ ಅಷ್ಟೂ ಶಿಬಿರಾರ್ಥಿಗಳಿಗೆ ಸಾಲುವಷ್ಟು ಪ್ರತಿ ಮಾಡಿಸಿ ತಂದಿದ್ದರು. ತನ್ನ ಹೆಚ್ಚುಗಾರಿಕೆಯನ್ನು ನಮ್ಮ ವ್ಯವಸ್ಥೆಯ ಮೇಲೆ ಹೇರದಂತೆ, ವಿಚಾರಿಸಿಕೊಂಡು ಪಕ್ಷಿವೀಕ್ಷಕರಿಗೆ ಕಿವಿಮಾತುಗಳನ್ನಷ್ಟೇ ಹೇಳಿದರು. ತಾವು ದೊಡ್ಡದಾಗಿ ಬಿಡಿಸಿಟ್ಟಿದ್ದ ಹಲವು ಹಕ್ಕಿ ಚಿತ್ರಗಳನ್ನು ಊಟದ ವಿರಾಮದಲ್ಲಿ ಎಲ್ಲರೂ ನೋಡುವಂತೆ ಪ್ರದರ್ಶಿಸಿದರು. ನಮ್ಮ ಕಾಡಿನ ಕಲ್ಪನೆಗೆ ಪೂರಕವಾಗಿ ಅಂದು ಅವರು ತಂದಿತ್ತ ಐದೂ ಗಿಡಗಳು ಇಂದು ಬೆಳೆದು ನಳನಳಿಸುತ್ತಾ ನಮ್ಮಲ್ಲವರ ನೆನಪನ್ನೂ ಹಸಿರಾಗಿಟ್ಟಿದೆ. ನರಸಿಂಹನ್ ಅವರ ವನ್ಯಸಂರಕ್ಷಣೆಯ ಸಂದೇಶಪ್ರಸಾರದ ಮುಂದುವರಿಕೆ, ಪಕ್ಷಿಕೈಪಿಡಿಯ ಪ್ರಕಟಣೆ, ನಕ್ಷತ್ರವೀಕ್ಷಣೆ ಮೊದಲಾದ ವೃತ್ತಿಯ ಮಿತಿಯಿಂದ ಹೊರಗಿನ ಚಟುವಟಿಕೆಗಳನ್ನು ಸಮಾಜಸೇವೆ, ಪರಿಸರವಾದಿ ಎಂಬಿತ್ಯಾದಿ ಸವಕಲು ಮತ್ತು ಅತ್ಯಂತ ಅಪಮೌಲ್ಯಗೊಂಡ ವಿಶೇಷಣದೊಡನೆ ಹೊಗಳಲು ನನಗೆ ಮನಸ್ಸು ಬರುವುದಿಲ್ಲ. ಇದವರ ಆರೋಗ್ಯಪೂರ್ಣ ಜೀವನಕ್ರಮ. ಜೀವನರಂಗದ ಇವರ ಭಾರೀ ಆಟವನ್ನು ಮೈದಾನದ ಅಂಚಿನಲ್ಲಿ ನಿಂತು ನೋಡುತ್ತಾ ಪ್ರೋತ್ಸಾಹ ಕೊಡುತ್ತಿರುವ (೨೫ ವರ್ಷಗಳಲ್ಲಿ ಅವರಿಂದ ಸಂದೇಶವಾಹಕ ಅಂಚೆ ಸ್ವೀಕರಿಸಿದವರ ಸಂಖ್ಯೆ ೭೦೪೦. ವಿತರಣೆಯಾದ ಕಾರ್ಡುಗಳ ಸಂಖ್ಯೆ ೫೧,೮೨೦. ಮತ್ತೆ ಆ ಕಾರ್ಡುಗಳು, ಪತ್ರಗಳು ಕೈಬದಲಿಸಿ ಮುಟ್ಟಿದವರು, ಬಾಯ್ದೆರೆ, ಪತ್ರಿಕೆಯೇ ಮೊದಲಾದ ವಿವಿಧ ಮಾಧ್ಯಮಗಳ ಅಯಾಚಿತ ಪ್ರಚಾರದಲ್ಲಿ ತಿಳಿದು ಮೆಚ್ಚಿಕೊಂಡವರು ಅಸಂಖ್ಯ) ಇಷ್ಟೊಂದು ಜನಗಳೊಡನೆ ನನ್ನ ಧ್ವನಿ ಸೇರಿಸಿ “ಕೀಪಿಟಪ್ಪ್ ನರಸಿಂಹನ್, ದಯವಿಟ್ಟು ಮುಂದುವರಿಸಿ” ಎಂದಷ್ಟೇ ಹೇಳಬಲ್ಲೆ. ಇದನ್ನೋದಿದ ನೀವೂ ನರಸಿಂಹನ್ ಕುರಿತ ನಿಮ್ಮ ಅನುಭವದ ಅಥವಾ ಕನಿಷ್ಠ ಮೆಚ್ಚುಗೆಯ ನಾಲ್ಕು ಮಾತುಗಳನ್ನು ಇಲ್ಲೇ ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ಮರೆಯುವುದೂ ಇಲ್ಲ ಎಂದು ನಂಬಿದ್ದೇನೆ.