ಬುದ್ಧಿವಂತ ಕೇಳಿದ “ಕಲ್ಪಿಸಿಕೋ – ಅತ್ತ ದರಿ, ಇತ್ತ ಕಮರಿ, ಬೆನ್ನಟ್ಟುತ್ತಿದೆ ಕರಿ, ಎದುರಿಗೊಂದು ಹರಿ! ಪಾರಾಗುವ ಪರಿ?” ದಡ್ಡ ಉತ್ತರಿಸಿದ “ಡೋಂಟ್ ವರಿ, ಕಲ್ಪನೆಯನ್ನು ಹರಿ.”

ನನಗೆ ತಿಳಿದಂತೆ ಸುಮಾರು ಎರಡೂವರೆ ವರ್ಷಗಳ ಹಿಂದೆ ಕನ್ನಡಕ್ಕೊಂದು ಪುಸ್ತಕ ನೀತಿಯಾಗಬೇಕೆಂಬ ಸೊಲ್ಲು ಅಂಕೋಲಾದ ಕಮ್ಮಟ ಒಂದರಲ್ಲಿ ಮೊದಲ ಬಾರಿಗೆ ಕೇಳಿಬಂತು. ಕಮ್ಮಟದ ಸಹ-ಪ್ರಾಯೋಜಕರಾದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ|ಎಸ್.ಜಿ.ಸಿದ್ಧರಾಮಯ್ಯನವರು ವ್ಯರ್ಥ-ಕಮ್ಮಟದ ಸಮಾಪನಕ್ಕೆ ರೋಮಾಂಚನ ತರುವಂತೆ ಈ ನುಡಿಯಾಡಿದ್ದರು. ನಾನು ಅಂದೇ ಅದನ್ನು ಕಟುವಾಗಿ ಟೀಕಿಸಿ ನಾಲ್ಕೈದು ಪುಟದುದ್ದದ ಪತ್ರವನ್ನು ಅಧ್ಯಕ್ಷರಿಗೆ (ಸ್ವಲ್ಪ ತಡೆದು ಯಥಾಪ್ರತಿಯೊಡನೆ ಹಲವು ಸಾಹಿತ್ಯಾಸಕ್ತರಿಗೂ) ಪತ್ರಿಸಿದೆ. ಅವರ ಸಭಾರಂಜನೆಯ ಮಾತುಗಳು ಬರವಣಿಗೆಯ ಖಾಚಿತ್ಯಕ್ಕಿಳಿಯಲಿಲ್ಲ; ಪ್ರತಿಕ್ರಿಯೆ ಬರಲೇ ಇಲ್ಲ. ಕಪುಪ್ರಾ ಮುಂದೆಂದೋ ಅನಿರೀಕ್ಷಿತವಾಗಿ ಒಂದು ನೀತಿ ನಿರೂಪಣಾ ಸಮಿತಿ ಮಾಡಿ ಅಯಾಚಿತವಾಗಿ ನನಗೆ ಸದಸ್ಯತನ ಪ್ರದಾನಿಸಿತು. ಕೂಡಲೇ ರವಾನೆಯಾದ ನನ್ನ ತಿರಸ್ಕಾರಕ್ಕೂ ಪ್ರಾಧಿಕಾರದಿಂದ ಪ್ರತಿಕ್ರಿಯೆ ಶೂನ್ಯ. ಆದರೆ ಮುಂದೆ ಹಲವು ಬಾರಿ ನನ್ನ ಸಮಯಾನುಕೂಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನೀತಿ ನಿರೂಪಣಾ ಸಮಿತಿಯ ಸಭೆಗೆ ಕರೆಯಂತು ನನಗೆ ಬರುತ್ತಲೇ ಇತ್ತು! ಪ್ರತಿಯೊಂದಕ್ಕು ನಾನು ಬರೆದ ಚಿಕಿತ್ಸಕ ಪತ್ರಗಳಿಗೆ ಪ್ರತಿಕ್ರಿಯೆ ಮೊದಲಿನಂತೆಯೇ ಸೊನ್ನೆ. ಈಗ ಕೇಳಲೊಂದು ಪ್ರಜಾಪ್ರತಿನಿಧಿಯಿಲ್ಲದ ಅತಂತ್ರ ಕಾಲದಲ್ಲಿ ಕಪುಪ್ರಾ `ಪುಸ್ತಕ ನೀತಿ’ಯನ್ನು ಯೋಗ್ಯ ಚರಂಡಿಯ ಮೂಲಕ ಮೇಲೆ ಕಳಿಸಿದ್ದಲ್ಲದೆ, ತನ್ನ ಮುಖವಾಣಿ – ಪುಸ್ತಕ ಲೋಕದ ಈಚಿನ ಸಂಚಿಕೆಯಲ್ಲಿ (ಸಂಪುಟ ೧ ಸಂಚಿಕೆ ೪, ಮಾರ್ಚ್-ಏಪ್ರಿಲ್ ಮೇ ೨೦೦೮) ಪ್ರಕಟಿಸಿಕೊಂಡಿದೆ. ಪ್ರಸಕ್ತ ಕಪುಪ್ರಾ ಮಂಡಳಿ ತನ್ನ ಆಡಳಿತಾವಧಿಯ ಕೊನೆಯ ಘಟ್ಟದಲ್ಲಿರುವುದು, ಇದು ಅಧ್ಯಕ್ಷರೂ ಸೇರಿದಂತೆ ಸದಸ್ಯರಿಗೆ ಸದ್ಯದಲ್ಲೇ ಆಯ್ದು ಬರಲಿರುವ `ಹೊಸ ಅರಸರ’ ಆಡಳಿತದಲ್ಲಿ ಅವಕಾಶಗಳ ಅನಂತ ಬಾಗಿಲು ತೆರೆಯಲು `ಮಾಯಾಕೀಲಿಕೈ’ ಆಗುವುದನ್ನೂ ಮರೆಯುವಂತಿಲ್ಲ!

ಸಮಾಜದ ಮೂಲಭೂತ ಸೌಕರ್ಯಗಳನ್ನು ಸಂಘಟಿಸುವುದು ಪ್ರಜಾ ಸರಕಾರದ ಕರ್ತವ್ಯ. ಯಾವುದೇ ಉದ್ಯಮ ಸಮಾಜ ವಿರೋಧಿಯಾಗದಂತೆ ಅಂದರೆ ನೀತಿಗೆಡದಂತೆ ನೋಡಿಕೊಳ್ಳುವುದು ಈ ಕರ್ತವ್ಯದ ಒಂದು ಭಾಗ. ಆದರೆ ಯಾರದೋ ಸ್ವಾರ್ಥಕ್ಕೋ ತಪ್ಪು ತಿಳುವಳಿಕೆಗೋ ಕರ್ನಾಟಕ ಸರಕಾರ ಚೂರು ಚೂರಾಗಿ ತೊಡಗಿ ಇಂದು ಬೃಹತ್ ಪುಸ್ತಕೋದ್ಯಮಿಯೇ ಆಗಿದೆ. ಅದರ ಒಂದು ದುರ್ಬಲ ಕವಲು ಕನ್ನಡ ಪುಸ್ತಕ ಪ್ರಾಧಿಕಾರ. ಇದು ಸರಕಾರದ ಬೃಹತ್ ಛತ್ರಿಯ ಅಡಿಯಲ್ಲಿ ಚೂರುಪಾರು ಪ್ರಕಾಶನ, ವಿತರಣೆ ಮತ್ತು ಪ್ರಾಯೋಜಕತೆ ನಡೆಸುವ ಆದರೆ ತನ್ನದೆ ಪ್ರತ್ಯೇಕ (ವಿಮರ್ಶಾತೀತವಾದ?) ಸಂವಿಧಾನ ಇರುವ ಒಂದು ಗೂಡಂಗಡಿ. ಇದರ ಉದ್ದೇಶ, ಸಂವಿಧಾನ ಬೇರೇ ಇದೆ. ಆದರೂ ತನ್ನ ಮಾತೃ ಸಂಸ್ಥೆ, ಅಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇತರ ಎಲ್ಲಾ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೂ ಇರುವ ಸ್ವತಂತ್ರ ಪ್ರಕಟಣೆ, ವಿತರಣೆ ಮತ್ತು ಪ್ರಾಯೋಜಕತೆಯ ವಿನಿಯೋಗ `ಶಕ್ತಿ’ ಇದ್ದೇ ಇದೆ! ಸಹಜವಾಗಿ ಕಪುಪ್ರಾ ನ್ಯಾಯಪೀಠದಲ್ಲಿ ಕೂರಲು ಅವಶ್ಯಕವಾದ ನಿರಪೇಕ್ಷ ಸ್ಥಿತಿಯಲ್ಲಿಲ್ಲದ ಒಂದು ಹಿತಾಸಕ್ತಿಯ ಪಕ್ಷ. ಅದು ಹೊರಡಿಸಿದ `ಪುಸ್ತಕನೀತಿ’ ಬದನೆಕಾಯಿ ತಿನ್ನುವವರು ಹೇಳಿದ ಶಾಸ್ತ್ರವಷ್ಟೇ ಆಗಲು ಸಾಧ್ಯ. (ಗಾದೆ – ಹೇಳೋದು ಶಾಸ್ತ್ರ, ತಿನ್ನೋದು ಬದನೆಕಾಯಿ). ರಾಜಕೀಯ ಪಕ್ಷಗಳು ಚುನಾವಣಾ ವೇಳೆಯಲ್ಲಿ ಹೊರಡಿಸುವ ಪ್ರಣಾಳಿಕೆಗಳಂತೆ ಇದು ಅವಾಸ್ತವ. ಹೆಚ್ಚೆಂದರೆ ಕಪುಪ್ರಾ ತನ್ನಿರವಿನ ಸಮರ್ಥನೆಗೆ ನಡೆಸಿದ ಡೊಂಬರಾಟ `ಪುಸ್ತಕ ನೀತಿ’.

`ಲೇಖನ ಸಂಸ್ಕೃತಿ ಪ್ರಾಚೀನ, ಅದರ ವಕ್ತಾರ ಪುಸ್ತಕ – ಸಂದ ಯುಗಗಳ ಅನುಭವ ಸಂಚಯ…’ ಹೀಗೆ ಸಾಗುತ್ತದೆ `ಪುಸ್ತಕ ನೀತಿ’ಯ ಪೀಠಿಕೆ. ಅದೆಲ್ಲ ಸರಿ, ಆದರೆ ಮುಂದುವರಿದು ಚರಿತ್ರೆಯ ಸೌಧ ಕಟ್ಟುವವರು ತಮಗೊಂದು ಕೋಣೆ ಕಾಯ್ದಿರಿಸುವ ಮೋಹಕ್ಕೆ ಬಿದ್ದಿದ್ದಾರೆ. ಒಮ್ಮೆಲೆ `ಸರ್ಕಾರವೂ ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂಬ ಹುಸಿವಾದ ಹೊಸೆಯುತ್ತದೆ. ವಾಸ್ತವದಲ್ಲಿ ಮುದ್ರಣದ ಆವಿಷ್ಕಾರದೊಡನೆ ಪುಸ್ತಕ ಸಂಸ್ಕೃತಿಗೆ ಉದ್ಯಮದ ವ್ಯಾಪ್ತಿ ಮತ್ತು ಖಾಚಿತ್ಯ ಬಂತು. ಸರಕಾರ ಇದಕ್ಕೆ ಕೈ ಹಾಕಿದ್ದೇ ಅನುಭವ ಮತ್ತು ಬಾಧ್ಯತೆಯಿಲ್ಲದ ದೊಡ್ಡ ದಂಡು, ಅಪಾರ ಅಧಿಕಾರ ಮತ್ತು ಹಣ ಹರಿಯಿತು. ಸಹಜವಾಗಿ ಪುಸ್ತಕದ ಲಕ್ಷ್ಯ ಸಂಸ್ಕೃತಿಯಿಂದ ವಾಣಿಜ್ಯಕ್ಕೆ ಪಲ್ಲಟಗೊಂಡಿತು; ಎಲ್ಲ ಅನೀತಿಗಳಿಗೆ ಪ್ರಧಾನ ಕಾರಣವಾಯಿತು. ಇಂದು ನಿನ್ನೆ ಹುಟ್ಟಿದ ಲೇಖಕ, ಪ್ರಕಾಶಕರನ್ನು ಬಿಡಿ, ಉಳಿದು ಪ್ರವರ್ಧಿಸುತ್ತಿರುವ ಹಿರಿಯ (ಲೇಖಕರೂ ಅಪವಾದವಲ್ಲ) ಪ್ರಕಾಶನ ಸಂಸ್ಥೆಗಳೂ (ಖಾಸಗಿ ಮತ್ತು ಸರಕಾರೀ) ತಮ್ಮ ಮೊದಲ ತಲೆಮಾರಿನ ವ್ಯಕ್ತಿಗಳ ಆದರ್ಶವನ್ನು ಅಡವಿಟ್ಟು ಇಂದು ಸರಕಾರೀ ಕೃಪೆಯಲ್ಲಿ ಹಣಕಾಸಿನ ಸಂಸ್ಥೆಗಳಾಗಿವೆ. ಇಂದು (ಸರಕಾರೀ) ಅನುದಾನ, ಸಹಾಯಧನ, ರಿಯಾಯ್ತಿ ದರದ ಕಾಗದ, ಬಹುಮಾನ, ಪ್ರಶಸ್ತಿ, ಸಗಟು ಖರೀದಿ, ರಿಯಾಯ್ತಿ ಮಾರಾಟ ಮುಂತಾದ ಮಾತನ್ನು ಬಿಟ್ಟ ಕನ್ನಡ ಪುಸ್ತಕೋದ್ಯಮವೇ ಇಲ್ಲ ಎನ್ನುವ ಹಂತಕ್ಕೆ ನಾವು ಬಂದಿದ್ದೇವೆ. ಅಷ್ಟೂ ಸರಕಾರೀ ಪುಸ್ತಕೋದ್ಯಮದ ವಕ್ತಾರರು (ವಿವಿ ನಿಲಯಗಳ ಪ್ರಸಾರಾಂಗಗಳ ನಿರ್ದೇಶಕರುಗಳು, ಅಕಾಡೆಮಿಗಳ ಅಧ್ಯಕ್ಷರುಗಳು, ಇಲಾಖೆಗಳ ವರಿಷ್ಠರುಗಳು ಇತ್ಯಾದಿ) ನಿಜ ಪುಸ್ತಕ ಸಂಸ್ಕೃತಿಯ ಸಿದ್ಧಿ ಶೂನ್ಯರಾದರೂ ತತ್ತ್ವ ಬೋಧಿಸುವಲ್ಲಿ ಯಾವ ಜಗದ್ಗುರುವನ್ನೂ ಬಿಟ್ಟಿಲ್ಲ. ಆತ್ಮವಿಮರ್ಶೆ, `ಮಠ’ ವಿಸರ್ಜಿಸುವ ಮಾತು ಇವರಲ್ಲಿ ಎಂದೂ ಸುಳಿಯದು. ಇದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರವೂ ಹೊರತಲ್ಲ ಎನ್ನುವುದಕ್ಕೆ ಸಾಕ್ಷಿ ಈ ಪುಸ್ತಕ ನೀತಿ. ಪುಸ್ತಕ ನೀತಿಯಲ್ಲಿನ ನಿಯಮಗಳೆಲ್ಲದರ ಪ್ರಧಾನ ಶ್ರುತಿ `ಸರಕಾರದ ಕೃಪೆಗೆ ಪಾತ್ರರಾಗಿ’. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಅನ್ಯತ್ರ ಮೋಸ ಹೋಗಬೇಡಿ, ನಮ್ಮಲ್ಲಿಗೆ ಬನ್ನಿ! ನಿಜವಾಗಿ ಆಗಬೇಕಾದದ್ದು `ಓದುಗರ ನಿಕಷಕ್ಕೆ ಒಡ್ಡಿಕೊಳ್ಳಿ’ ಅಥವಾ `ಮಾರಿ ಇಲ್ಲವೇ ಮಡಿಯಿರಿ’.

ಸಾಮಾನ್ಯ ಓದುಗನಿಗೆ ಪುಸ್ತಕದ ತಾಂತ್ರಿಕ ಪುಟ ಕೇವಲ ಐತಿಹಾಸಿಕ ಅಗತ್ಯ. ಆದರೂ ಇದರ ಸುತ್ತೇ ಪುಸ್ತಕ ನೀತಿಯ ಬಹ್ವಂಶ ವ್ಯಾಪಿಸಿರುವುದು ನಿಯಾಮಕರ ಧೋರಣೆಗೆ ಹಿಡಿದ ಕನ್ನಡಿಯೇ ಅಗಿದೆ. ಜ್ಞಾನ ಪೀಠ ಪ್ರಶಸ್ತಿ ರೂಪುಗೊಂಡ ಮೊದಲಕಾಲದಲ್ಲಿ ದೀರ್ಘಾಯು ಡೀವೀಜಿ ಹೊಸತೇನನ್ನು ಕೊಡಲಾಗದ (ಕೊನೆಗಾಲ) ಸ್ಥಿತಿಯಲ್ಲಿದ್ದರು. ಅವರ ಕೃತಿಗಳ ಮಾಹಿತಿ ಪುಟವನ್ನಷ್ಟೇ ನೋಡಿದ ಜ್ಞಾನಪೀಠ ಸಮಿತಿ ಪುರಸ್ಕರಿಸಲು ಸೋತಿತು. ಅದೇ ಅಡಿಕೋಲಿನಲ್ಲಿ ಬೇಂದ್ರೆ, ಕಾರಂತರನ್ನು ಅಳೆದದ್ದಕ್ಕೇ ಅವರ ಅತ್ಯುತ್ತಮವೇನೂ ಅಲ್ಲದ ನಾಕುತಂತಿ ಮೂಕಜ್ಜಿಯ ಕನಸುಗಳನ್ನು ಹೆಸರಿಸುವಂತಾಯ್ತು. ನಿರ್ದಿಷ್ಟ ಪ್ರತಿಫಲದ ಆಮಿಷದೊಡನೆ ಬರುವ ಇಂದಿನ ಮಾಹಿತಿ ಪುಟದ ಮುದ್ರಿತ ವಿವರಗಳು ವಿಶ್ವಾಸಾರ್ಹವಾಗಿರಬೇಕಿಲ್ಲ! ಅದು ನಿಜಕ್ಕೂ ಪ್ರಾಮಾಣಿಕವಾಗಿಲ್ಲ ಎನ್ನುವಲ್ಲಿಂದ `ನೀತಿ’ ನಿರೂಪಣೆ ತೊಡಗಿರುವುದರಿಂದ ಹೊಸದಾಗಿ ಏನೂ ಹೇಳಿದಂತಾಗಿಲ್ಲ; ನೀತಿಪಾಠ ಹೊರಟಲ್ಲಿಗೇ ಮುಟ್ಟಿದಂತಾಗಿದೆ!

ಲೇಖಕನಿಗೆ ರಾಯಧನ, ಕೃತಿಸ್ವಾಮ್ಯದ ರಕ್ಷಣೆ, ಪುಸ್ತಕದಲ್ಲಿ ಮುದ್ರಿತ ಬೆಲೆ, ವ್ಯಾಪಾರಿ ವಟ್ಟಾ, ವಿತರಣೆಯ ಜವಾಬ್ದಾರಿ, ವಿಶೇಷ ಸನ್ನಿವೇಶಗಳ ನಿರ್ವಹಣೆ ಅಂದರೆ ಪಠ್ಯ ಆವೃತ್ತಿ, ಸುಲಭ ಬೆಲೆ ಆವೃತ್ತಿ, ಸಮ್ಮೇಳನವೇ ಮೊದಲಾದ ಸ್ಮರಣೀಯ ಸಂದರ್ಭಗಳು ಅಥವಾ ದಾಸ್ತಾನು ತೀರುವಳಿಯಂಥಾ ಮಾರಾಟಾವಕಾಶಗಳು ಇತ್ಯಾದಿ, ಎಲ್ಲಕ್ಕೂ ಮಿಗಿಲಾಗಿ ಪುಸ್ತಕೋದ್ಯಮದ ಪರಂಪರೆಯ ರಕ್ಷಣೆಯ ಕುರಿತು `ಪ್ರಣಾಳಿಕೆ’ ಮೌಢ್ಯದಲ್ಲಿದೆಯೋ ಜಾಣ ಮೌನ ವಹಿಸಿದೆಯೋ ನನಗೆ ತಿಳಿಯದು. ಪ್ರಸ್ತುತ `ಪರಂಪರೆ’ಯ ಕುರಿತು ಎರಡು ಉದಾಹರಣೆ ಕೊಡದಿದ್ದರೆ ಒಟ್ಟು ವಾದ ದಾರಿ ತಪ್ಪುವ ಅಪಾಯವಿದೆ. ಖಾಸಗಿ ಪುಸ್ತಕೋದ್ಯಮದಲ್ಲಿ ಪರಂಪರೆ ಬಲು ಸಂಕೀರ್ಣವಾಗಿ ಭ್ರಷ್ಟಗೊಂಡಿದೆ. ಬರವಣಿಗೆ ಜೀವನೋಪಾಯದ ಮೂಲವಾಗುವ ಕಲ್ಪನೆಯೂ ಅಸಾಧ್ಯವಾದ ಕಾಲದಲ್ಲಿ ನಾಲ್ಕಾಣೆಗೆ ಹಕ್ಕು ಮಾರಿಕೊಂಡವರಿಂದ ಇಂದು ಘನವಾದ ಪ್ರಕಾಶನ ಸಂಸ್ಥೆಗಳ ಹೆಸರು ಇಲ್ಲಿ ಬೇಡ. ಪರಂಪರೆಯ ಇನ್ನೊಂದೇ ಪ್ರಧಾನ ಎಳೆ ಸರಕಾರೀ ವಲಯದಲ್ಲಿ ಸದಾ ಕಗ್ಗಂಟಾಗಿರುವುದರಿಂದ ಅದರಲ್ಲೇ ಎರಡು ಸಂಸ್ಥೆಗಳನ್ನಷ್ಟೇ ಮೇಜಿಗೆಳೆದು ಕಿರು ಶಸ್ತ್ರಕ್ರಿಯೆಗೊಳಪಡಿಸುತ್ತೇನೆ. ೧) ಮೈಸೂರು ವಿ.ವಿ ನಿಲಯದ ಹಿರಿಯರು ಯುಗ ಯಾತ್ರಿ ಭಾರತೀಯ ಸಂಸ್ಕೃತಿ, ವಿಶ್ವಕೋಶ, ಪ್ರವಾಸಿ ಕಂಡ ಇಂಡಿಯಾ, ತೋಟಗಾರಿಕಾ ಶಾಸ್ತ್ರಗಳಂಥ ಹಲವು ಮಾಲಿಕೆಗಳ ಯೋಜನೆ ಹಾಕಿ, ಚಾಲನೆ ಕೊಟ್ಟಿದ್ದರು. ಮುಂದುವರಿದ ಕಾಲದಲ್ಲಿ ಬದಲಾದ (ವ್ಯಕ್ತಿ) ಆಡಳಿತಗಳಲ್ಲಿ ಅವು ಮೌಲ್ಯ ಮಾಪನಕ್ಕೊಳಗಾಗದೆ, ಅವಗಣನೆಗೆ ಅಲ್ಲದಿದ್ದರೂ ನಿಧಾನದ್ರೋಹಕ್ಕೆ ಒಳಗಾದದ್ದು ವಿಚಾರವಂತರೆಲ್ಲರೂ ಕಂಡಂತೆಯೇ ಇದೆ. ಪ್ರವಾಸೀ ಕಂಡ ಇಂಡಿಯಾದ ಸಂಪಾದಕ ಡಾ| ಎಚ್.ಎಲ್ ನಾಗೇಗೌಡರು ಒಮ್ಮೆ ಭೇಟಿಯಾಗಿದ್ದಾಗ ಕೇವಲ ಬಿಡಿ ಪುಸ್ತಕ ವ್ಯಾಪಾರಿಯಾದ ನನ್ನಲ್ಲೂ ಕೇಳಿದ್ದರು, “ನನ್ನ ಮತ್ತು ವಿವಿನಿಲಯದೊಳಗಿನ ಮೌಖಿಕ ಒಪ್ಪಂದದ ಪ್ರಕಾರ ನನ್ನಲ್ಲಿ ಪ್ರ.ಕಂ.ಇಂಡಿಯಾಕ್ಕೆ ಹತ್ತು ಸಂಪುಟಗಳಷ್ಟು ಹಸ್ತಪ್ರತಿ ಸಿದ್ಧವಿದೆ. ಈಗಿನವರು ಪುನರ್ಮುದ್ರಣವಿರಲಿ, ಎಂಟರಿಂದ ಮುಂದೆ ಸರಣಿ ಪೂರ್ಣಕ್ಕೂ ಮನಸ್ಸು ಮಾಡುತ್ತಿಲ್ಲ. ನನಗೆ ಒಂದು ಕಾಸೂ ಬೇಡ, ನೀವು ಪ್ರಕಟಿಸುತ್ತೀರಾ?” ೨) ಕನ್ನಡ ಪುಸ್ತಕ ಪ್ರಾಧಿಕಾರ ಒಂದು ಆಡಳಿತಾವಧಿಯಲ್ಲಿ ಖಾಸಗಿ ಮಳಿಗೆಗಳ ಜಾಲಕ್ಕೆ `ಸಹಾಯ ಹಸ್ತ’ ಚಾಚಿತು (ಮಳಿಗೆಗಳ ಬಾಕಿಯಲ್ಲ, ಆರೋಗ್ಯ ವಿಚಾರಿಸಿದವರು ಇದ್ದಾರೆಯೇ?). ಇನ್ನೊಂದು ಅವಧಿಯಲ್ಲಿ ತನ್ನದೇ ಸಂಚಾರ ಮಳಿಗೆಯ ಕನಸು ಸ್ಥಾಪಿಸಿತು (ಆ ಬಸ್ಸು, ಸಿಬ್ಬಂದಿ ಏನಾಯ್ತು?). ಮತ್ತೊಂದು ಅವಧಿಯಲ್ಲಿ ಸ್ವಂತ ಶಾಖೆಗಳ ಹುಚ್ಚು ಹತ್ತಿಸಿಕೊಂಡಿತು (ಶಾಖೆ ಪುಷ್ಠಿಗೊಳ್ಳುವ ಮೊದಲು ಹೂ ಹಣ್ಣು ಎಣಿಸುವ ಕೆಲಸ ಒಂದೆಡೆ ನಡೆದದ್ದು ನನಗೆ ತಿಳಿದಿದೆಯಾದರೂ ಶಾಖಾವ್ಯವಸ್ಥಾಪಕನ ಹಿತ ದೃಷ್ಟಿಯಿಂದ ಇಲ್ಲಿ ಹೆಸರಿಸಿಲ್ಲ). ತೀವ್ರ ವಿಷಾದದಲ್ಲಿ ಹೇಳುತ್ತೇನೆ – ಹಿಂದಿನವರ ಮಾತನ್ನು ಉಳಿಸುವ, ಹೂಡಿಕೆಗಳನ್ನು ಸಮರ್ಥಿಸುವ ಅಂದರೆ ಪರಂಪರೆ ಕಾಯುವ ಕೆಲಸ ಯಾವುದೇ ಸರಕಾರೀ ವ್ಯವಸ್ಥೆಯಲ್ಲಿ ನಡೆಯುವುದೇ ಇಲ್ಲ. ಹಾಗಾಗಿ ಕಪುಪ್ರಾದ ಮುಂದಿನ ಆಡಳಿತ ಮಂಡಳಿ ಪ್ರಸ್ತುತ `ಪುಸ್ತಕನೀತಿ’ಯನ್ನು ಗುಡಿಸಿ ಕ.ಬು ಸೇರಿಸಿದರೆ ಏನೂ ಆಶ್ಚರ್ಯವಿಲ್ಲ.

ಪುಸ್ತಕಲೋಕ ತನ್ನ ಸಂಪಾದಕೀಯದಲ್ಲಿ ಪುಸ್ತಕನೀತಿಯನ್ನು ಚರ್ಚೆಗೆ ಒಡ್ಡಿಕೊಳ್ಳುವ ಮಾತಾಡುತ್ತದಾದರೂ ಮೂಲಶೋಧನೆ ಬಯಸುವ ಇಂಥ ಪ್ರತಿಕ್ರಿಯೆಯನ್ನು ಚರ್ಚೆಗೆ ಒಡ್ಡಿಕೊಳ್ಳುವ ಧೈರ್ಯ ಮಾಡದು. ಹಾಗಾಗಿ ಸೂಕ್ಷ್ಮವಾದ ಪತ್ರವನ್ನು ಇಲ್ಲಿ ತುಸುವೇ ವಿಸ್ತರಿಸಿದ್ದೇನೆ. ಇದನ್ನು ಅನುಭವ, ಉದಾಹರಣೆಗಳ ಬಲದಲ್ಲಿ ವಿಮರ್ಶಿಸುವವರ ಪ್ರತಿಕ್ರಿಯೆಗಳು ನಿಜ ಪುಸ್ತಕನೀತಿಯನ್ನು ನಿರೂಪಿಸಬಹುದು ಎಂದೂ ಆಶಿಸುತ್ತೇನೆ.