ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಹೊಸ ಪುಸ್ತಕ (- ಗುಜರಾತಿನ ವ್ಯಂಗ್ಯ ಕಿರುಗತೆಗಳು – ಅನುವಾದಕ ಡಿ.ಎನ್ ಶ್ರೀನಾಥ್) ಅನಾವರಣದ ಆಮಂತ್ರಣ ಬಂದಿತ್ತು. ಮಾಲಿಕ ಪ್ರಕಾಶ್ ಕಂಬತ್ತಳ್ಳಿ ವಿಳಾಸ ಬರೆಯುವಲ್ಲಿ ನನ್ನ ಹೆಸರಿನ ಇನಿಶಿಯಲ್ಸ್ನಲ್ಲಿ `ಎನ್’ ಅಕ್ಷರ ಬಿಟ್ಟಿದ್ದರು. ಅದಕ್ಕೆ ಕೂಡಲೇ ಅದೇ ಕವರಿನ ಮೇಲೆ ನಾನು ಗೀಚಿದ್ದರ ಪರಿಷ್ಕೃತ ರೂಪ:

ಪ್ರಿಯರೇ `ಎನ್’ಗ್ಯಾಕೆ ನೋ ಎಂಟ್ರಿ ಮಾಡಿದ್ರಿ? ಎನ್ (= ನಾರಾಯಣ ರಾವ್, ನನ್ನ ತಂದೆ) ತೀರಿಹೋದರೂಂತ ಸೂಚಿಸ್ತಿದ್ದೀರಾ? ಸರಕಾರೀ (ಪುಸ್ತಕೋದ್ಯಮದ) ಯೋಜನೆಗಳಿಗೆಲ್ಲಾ ನಕಾರ ಹೇಳುವವ ಎಂದೇ ನನ್ನ ಹೆಸರಿನ `ನ’ಕಾರ ತಪ್ಪಿಸಿದ್ದೋ ಕೇವಲ ಕಣ್ತಪ್ಪಿನಿಂದ ಬಿಟ್ಟು ಹೋದದ್ದೋ ನನಗೆ ಗೊಂದಲವಿದೆ. ಈ ಕೂಡಲೇ ಪರಿಹರಿಸುವಿರಾಗಿ ನಂಬಿದ್ದೇನೆ. ಇಲ್ಲವಾದರೆ ನಾನು ಕೂಡಲೇ ಡಿ.ಎನ್. ಶ್ರೀನಾಥರನ್ನು ಸಂಪರ್ಕಿಸುತ್ತೇನೆ. “ಅಂಕಿತ ನಿಮ್ಮ ಅಂಕಿತದ ಎನ್ಗೆ ಸಂಚಕಾರ ತರುವ ಅಪಾಯವಿದೆ. ಸ್ವಂತ ಹೆಸರಿನ ರಕ್ಷಣೆಗಾಗಿ ನಿರೀಕ್ಷಣಾ-ನಾಮಾಂತರ ರಕ್ಷಣಾ ಕ್ರಮ ಕೈಗೊಳ್ಳಿ” ಎಂದು ಸೂಚಿಸಬೇಕಾದೀತು! ಹೀಗೆ ನಮ್ಮ ಹೆಸರುಗಳಿಂದ ಎನ್ ಕಿತ್ತು ಹಾಕಿದ ನಿಮ್ಮ ಮಳಿಗೆಯನ್ನು ನಾಮಾಂತರಕ್ಕೆ ಒಳಪಡಿಸುವುದೇ ಆದರೆ `ಎನ್ಕಿತ್ತ ಪುಸ್ತಕ’ (ಪ್ರಕಾ-axe ನಮ್ಮ ಮೇಲೆ ಬಿದ್ದದ್ದರಿಂದಲೇ?) ಅನ್ವರ್ಥವಾಗುವುದಿಲ್ಲವೇ?

ಮತಾಂತರಕ್ಕೆ ಮಾತ್ರ ವಿರೋಧ ಹೇಳುವ ಭಜರಂಗಿಗಳು ನಾಮಾಂತರದ ಉಸಾಬರಿಗೆ ಬರಲಾರರು ಎಂಬ ವಿಶ್ವಾಸ ನನ್ನದು. (ಭಜರಂಗದ ಕರೆಯ ಮೇರೆಗೆ ಬಂದ್ ಆಚರಿಸುತ್ತಿರುವಾಗ ಬಜ್ಪೆ ಬಳಿ ಹೊರವಾಗಿ ಗಡ್ಡ ಬಿಟ್ಟ `ಅಯ್ಯಪ್ಪಸ್ವಾಮಿ’ಯೊಬ್ಬನಿಗೆ ಈ ಸ್ವಯಂ ಪೋಲೀಸ್ ಅತ್ಯುತ್ಸಾಹದಲ್ಲಿ ನಾಲ್ಕು ತದುಕಿದರಂತೆ. ಆತ ಪೆಟ್ಟು ಪೆಟ್ಟಿಗೂ ಅಯ್ಯಪ್ಪಾ ಎಂದ ಮೇಲೆ “ಛೆ! ಸ್ವಲ್ಪ ಕುಂಕುಮಹಚ್ಚಿಕೊಳ್ಳಬಾರದಿತ್ತೇ” ಎಂದು ಬಿಟ್ಟರಂತೆ. ಅದೇ ಉತ್ಸಾಹದಲ್ಲಿ…) ಮತ್ತೀಗ ಬಂದರೂ ಅವರ ಬೆಂಬಲಕ್ಕೆ ರಾಜ್ಯದ ಭಾಜಪ ಸರಕಾರ ನಿಲ್ಲಲಾರದು. ಕೇಂದ್ರ ಸರಕಾರದ ಯುದ್ಧ ಸಿದ್ಧತೆಗೆ ಒಮ್ಮೆ ಬೆದರಿ ಮತ್ತೆ ಸೆಡ್ಡುಹೊಡೆದ ನಿಲುವಿನಲ್ಲಿ ಒಂದೊಮ್ಮೆ ನಿಂತರೂ ಪ್ರಶ್ನಿಸಲು ಸೋನಿಯಾ ಸರಕಾರ ಮುಂದಾಗದು. ಕಾರಣ ಸುಸ್ಪಷ್ಟ – `So-near-ಗಾದಿ’ಯಾದವರು (ಪ್ರಧಾನಿ ಪೀಠಕ್ಕೆ) ಸೋನಿಯಾಗಾಂಧಿಯಾಗಿಯೇ ಹಿನ್ನೆಲೆಗೆ ಸರಿದದ್ದು ನಾಮಾಂತರದ ನಿಷ್ಪ್ರಯೋಜಕತ್ವದಿಂದ ಎಂದು ಮನಗಂಡಿದ್ದಾರೆ. ಹೆಸರಿನಲ್ಲೇನಿದೆ ಎಂಬಲ್ಲಿಗೆ ಮುಗಿಸುತ್ತೇನೆ.