ತೆಪ್ಪಕಾಡಿನಲ್ಲಿ ತೆಪ್ಪಗೆ ಬಿದ್ದವರ ಕಥೆಯಂತೂ ನಿಮಗೆ ಗೊತ್ತಾಯ್ತು. ಹಾಗೆಂದು ಮಸಣಿಗುಡಿಗೆ ಹೋದವರು ಹಿಂದಿನ ಯೋಚನೆಗಳನ್ನು ಇಟ್ಟುಕೊಳ್ಳುವುದು ಹೇಗೆ ಎಂದು ತಪ್ಪು ಭಾವಿಸಬೇಡಿ. ಅವರು ಮಸಣಿಗುಡಿ ತಲಪಿದ್ದೇ ಊರಬಾಗಿಲಿನಲ್ಲೇ ಇದ್ದ ಚೆಕ್ ಪೋಸ್ಟ್ ಬಳಿಯ ಮೈದಾನದಲ್ಲಿ ಬೀಡುಬಿಟ್ಟರು. ನಾಗರಾಜ್ ರೋಪಿಗೆ ಎಲ್ಲ ಗುಡಾರಗಳನ್ನು ವ್ಯವಸ್ಥಿತವಾಗಿ ಬಿಡಿಸಲು ಸೂಚನೆ ಹೋಯ್ತು. ಬಹಳ ಬಿಸಿಯಿಂದಲೇ ಸುರು ಮಾಡಿದ್ದರಂತೆ, ಆದರೆ ಬೆಣ್ಣೆಯಂತಾ ಸದಸ್ಯರು ಕರಗಿಹೋದರು. ಜಾವೀದ್ ಸೇಟ್ ಮತ್ತು ಬಾಲಸುಬ್ರಹ್ಮಣ್ಯಂ ಸೇರಿ ಮೊದಲ ಗುಡಾರ ಎಬ್ಬಿಸಿದರು. ಉಳಿದವು ಮೆಲ್ಲ ಮೆಲ್ಲನೆ ಏಳುತ್ತಿದ್ದಂತೆ ಜಾವೀದ್ ರೋಪಿಗೆ ಶಿಬಿರಾಗ್ನಿಗೆ ಸೌದೆ ಸಂಗ್ರಹಿಸುವ ಆದೇಶ ಹೊರಟಿತು. ಇದಕ್ಕೂ ಬಾಲಗ್ರಹ. ಇನ್ನೊಂದು ತಂಡ ನೀರು ಸಂಗ್ರಹಕ್ಕೆ ಹೊಯ್ತು. ಇಲ್ಲ, ಬಾವಿಗೆ ಬೀಳಲಿಲ್ಲ, ಅಲ್ಲಿಗೆ ಚಕ್ರದ ಮೇಲೆ ಬಂದಿದ್ದ ಸಣ್ಣ ಪ್ರಾಣಿ ಸಂಗ್ರಹಾಲಯದ ಹುಲಿ ಸಿಂಹಗಳನ್ನು ನೋಡುತ್ತ ಮೈಮರೆಯಿತು. ಮತ್ತೆ ಕೆಲವರು ಗೂಡು ಹೋಟೇಲಿನಲ್ಲಿ ಊರಿನ ರುಚಿಗಳನ್ನು ಪರೀಕ್ಷಿಸಿದರು. ಉಂಡಾಡಿಗಳ ಉಡಾಫೆ ಸಹಿಸದೆ ಹುಡುಗಿಯರು ಸುಮಾರು ಸೌದೆ ಸಂಗ್ರಹಿಸಿದರು. ಅವರೇ ನೀರಿನ ಹೊಣೆಗಾರರಿಗೆ ಮಾತಿನಲ್ಲಿ ಕುಕ್ಕಿ ಚುರುಕು ಮೂಡಿಸಿದರು. ಊಟದ ವೇಳೆಯೂ ಬಂತು (ಮಾಡಿದರು) ಆದರೆ ಉಳಿದೇ ಹೋಯ್ತು ಪಲ್ಲವಿ… `ಇನ್ನೂ ಯಾಕ ಬರಲಿಲ್ಲವ್ವಾ ತೆಪ್ಪಕಾಡಿನಂವಾ’

ಗೋವಿಂದರಾಜ್ ಸುಜಾತರು ಮತ್ತೆ ಏನೆಲ್ಲಾ ಸರ್ಕಸ್ ಮಾಡಿ, ಅಲ್ಲಿ ಶೂಟಿಂಗ್ ನಿರತರಾಗಿದ್ದ ತಮಿಳು ಸಿನಿಮಾ ಮಂದಿಯನ್ನು ಒಲಿಸಿಕೊಂಡು, ಅವರ ಜೀಪ್ ಎರವಲು ಪಡೆದರು. ತೆಪ್ಪಕಾಡಿನಲ್ಲಿ ಗುಡ್ಡೆಬಿದ್ದ ಕಟ್ಟುಗಳಿಗೇನೋ ಅದು ಸಾಕಾಯ್ತು, ಸದಸ್ಯರಿಗೆ ನಡುಗೆಯೇ. ಹೇಳಿಕೇಳಿ ಸಾಹಸಯಾತ್ರೆಗೇ ಹೊರಟವರು. ಮತ್ತೆ ಆಹ್ಲಾದಕರ ವನವಿಹಾರ, ದಾರಿಬದಿಯ ಮರಗಳಲ್ಲಿ ಆಕರ್ಷಣೀಯ ನೆಲ್ಲಿಕಾಯಿ ಸಿಕ್ಕ ಮೇಲೆ ನಾಲ್ಕೂವರೆ ಮೈಲನ್ನು ನಡಿಗೆಯಲ್ಲಲ್ಲ, ಓಡಿಯೇ ಮುಗಿಸುತ್ತೇವೆ ಎಂದೂ ತೊಡಗಿದ್ದೆವು. ದಿನಪೂರ್ತಿ ಕಾದಾಗ ಬರದ ಖಾಲೀ ಲಾರಿಯೊಂದು ಆಗ ಬಂದು ಪರೋಕ್ಷವಾಗಿ ನಮ್ಮನ್ನು ಸೋಲಿಸಿತು. ಮತ್ತೆ ಎಲ್ಲಾ ಒಟ್ಟಾಗಿ, ಬಾಕಿ ಗುಡಾರಗಳು ತಲೆ ಎತ್ತಿ ಶಿಬಿರ ಸಮರ್ಪಕವಾಗಿತ್ತಾ ‘ಆಗ ಸಂಜಿಯಾಗಿತ್ತಾ.’

ಉದಕಮಂಡಲ ದಾರಿಯಿಂದ ಸಿಂಗಾರಂ ಜಲವಿದ್ಯುದಾಗರಕ್ಕೊಂದು ದಾರಿ ಕವಲೊಡೆಯುವಲ್ಲಿ ಇರುಕಿಕೊಂಡಂತಿರುವ ಪುಟ್ಟ ಹಳ್ಳಿ ಮಸಣಿಗುಡಿ. ಗುಪ್ಪೆ ಹಾಕಿದಂತೆ ಇಪ್ಪತ್ತು ಮೂವತ್ತು (ಜೋಪಡಿಗಿಂತ ಸ್ವಲ್ಪ ಉತ್ತಮ ಸ್ಥಿತಿಯ) ಮನೆಗಳು, ಶಾಲೆ, ಗುಡಿ, ಮಸೀದಿ, ಊರ ಗಡಿರೇಖೆಯಂತೊಂದು ಹೊಳೆ. ಸೂಜಿ ಕಾರ್ಖಾನೆ ಇಲ್ಲಿನ ವೈಶಿಷ್ಟ್ಯ! [ಯಃಕಶ್ಚಿತ್ ಸೂಜಿಗೂ ಒಂದು ಸ್ವತಂತ್ರ ಕಾರ್ಖಾನೆ ಬೇಕೋ ಅದೂ ಇಂಥಾ ಕಗ್ಗಾಡ ಮೂಲೆಯಲ್ಲಿ? ಅದು ಯಾವುದೇ ಕಿರಾಣಿ ಅಂಗಡಿಯವನ ಡ್ರಾಯರಿನ ಸಿಗರೇಟು ಡಬ್ಬಿಯಲ್ಲೋ ಬೇಗಡೆ ಕಾಗದದ ಲಕೋಟೆಯಲ್ಲೋ ತಂತಾನೇ ಇರುತ್ತದೆ ಎಂಬ ಮುಗ್ಧತನ ಹಾಗಾಗಿ ಬೆರಗು ಆ ಕಾಲದಲ್ಲಿ ನನಗಿತ್ತು] ಮತ್ತೇನಿದ್ದರೂ ಇಲಾಖೆಗಳ ಅನಿವಾರ್ಯ ರಚನೆಗಳು. ಅವುಗಳದೇ ಒಂದು ಪ್ರವಾಸೀ ಬಂಗ್ಲೆ ಬಳಕೆಗೆ ಬಂದರೆ, ಆಗೀಗ ಚಿತ್ರೀಕರಣದವರ ತಂಡಗಳು ತಂಗಿದರಷ್ಟೇ ಊರಿಗೆ ವಿಶೇಷ ಎನ್ನುವಂತಿತ್ತು. [ಆದರೆ ಸುಮಾರು ಆರೇಳು ವರ್ಷದ ಹಿಂದೆ ನಾನತ್ತ ಹೋಗಿದ್ದಾಗ ಮತ್ತು ಇಲ್ಲಿನ ಹೊಸ ಫೋಟೋಗಳನ್ನು ಕಳೆದ ವರ್ಷವಷ್ಟೇ ಹೋಗಿದ್ದಾಗ ಹಿಡಿದು ತಂದ ಗೆಳೆಯ ಮನೋಹರ ಉಪಾಧ್ಯರು ಕಂಡಂತೆಯೂ ಇಂದು ಪ್ರವಾಸೋದ್ಯಮದ ಗಿರ ಮಸಣಿಗುಡಿಯನ್ನೂ ಬಿಟ್ಟಿಲ್ಲ ಎಂದಷ್ಟೇ ಸಖೇದ ದಾಖಲಿಸುತ್ತೇನೆ]

ಬಯಲಿನಲ್ಲಿ ದಾರಿಗೆ ಮುಖ ಹಾಕಿದಂತೆ U ಆಕಾರದಲ್ಲಿ ನಮ್ಮ ಎಂಟು ಗುಡಾರಗಳನ್ನು ಅರಳಿಸಿ, ಎದುರು ಸಂಸ್ಥೆಯ ಧ್ವಜ ಹಾರಿಸಿದೆವು. [ಬರವಣಿಗೆಯಲ್ಲಿ ಎಲ್ಲವೂ ರಮ್ಯ. ವಾಸ್ತವದಲ್ಲಿ ಹೆಚ್ಚಿನ ಗುಡಾರಗಳು ಮೂರಡಿ ಆರಡಿಯ ಎರಡು ಜಮಖಾನಗಳ ಸಂಯೋಜನೆ. ನನ್ನದಕ್ಕಂತೂ ಮೂರಡಿ ಎತ್ತರದ ಎರಡು ಬಿದಿರು ದೆಬ್ಬೆಗಳೇ ಆಧಾರ, ಆರು ಕಾಡುಕಲ್ಲುಗಳೇ ಮೂಲೆ ಕೀಲುಗಳು. ಇದಕ್ಕಪವಾದವಾಗಿ ಒಂದೆರಡು ಗುಡಾರಗಳು (ಮೀಡ್ ಮಾದರಿಯವು) ನಮ್ಮ ಶಿಬಿರದಲ್ಲಿತ್ತಾದರೂ ಇಂದು ಲಭ್ಯವಿರುವ ಗುಡಾರಗಳಲ್ಲಿನ ಸಾವಿರಾರು ಮಾದರಿಗಳು, ಸೌಕರ್ಯಗಳು ಮತ್ತು ವರ್ಣ ವೈವಿಧ್ಯಕ್ಕೆ ಹೋಲಿಸಿದರೆ ನಮ್ಮ ಶಿಬಿರ ಅಲೆಮಾರಿ ಜನಾಂಗಗಳ ‘ಅರೆಮನೆ’ಗಳೊಡನೆ ಸ್ಪರ್ಧಿಸುವಂತಿತ್ತು.] ಊರ ಕುಡಿನೀರ ಟಾಂಕಿಯಲ್ಲಿನ ನಲ್ಲಿಯಿಂದ ನೀರು ತರಲು ನಾನು ಮುಂದಾದೆ. ಆದರೆ ಅದು ದಿನಕ್ಕೊಮ್ಮೆ ಮಾತ್ರ ವಿತರಣಾ ನಿಯಮದಲ್ಲಿದ್ದುದರಿಂದ ಯಾವುದೋ ಮನೆಯವರ ಕೃಪೆಗೆ ಪಾತ್ರನಾದೆ. ಅಷ್ಟರಲ್ಲಿ ನನಗೂ ಮೊದಲೇ ಊರ ಹೊಳೆಗೇ ನೀರು ತರಲು ಹೋಗಿದ್ದ ನಮ್ಮ ಸ್ತ್ರೀ ಸದಸ್ಯರು ‘ಸಿನಿಮಾ ನಟಿಯರಾಗಿ’ ಊರ ‘ಅಭಿಮಾನೀ ಬಳಗ’ವನ್ನು ಆಕರ್ಷಿಸಿ, ಬಳಲುತ್ತ ಬರುವುದು ಕಾಣಿಸಿತು. ವಾಸ್ತವದಲ್ಲಿ ಪ್ಯಾಂಟು, ಶರಟು ತೊಟ್ಟ ಮಹಿಳೆಯರು ಅದರಲ್ಲೂ ಹೊಳೆ ದಂಡೆಯಲ್ಲಿ ಎಂದಾಗ ಮುಗ್ದ ಹಳ್ಳೀ ಮಂದಿಗೆ ನಿಲುಕಿದ ಕಲ್ಪನೆ (ಪ್ರೇಮ ಸಲ್ಲಾಪದೊಡನೆ ವಿಹರಿಸುವ) ಸಿನಿಮಾ ತಾರೆಯರದು ಮಾತ್ರವಾಗಿತ್ತು. ಅನಂತರ ‘ಎಲ್ಲರೂ ಹಂಚಿಕೊಂಡು ಶಿಬಿರ ಕಾರ್ಯಗಳು ನಡೆಯಬೇಕು’ ಎನ್ನುವ ನಿಯಮ ಸಾಂಪ್ರದಾಯಿಕ ನಿಯಮಗಳಿಗೆ ದಾರಿ ಮಾಡಿಕೊಟ್ಟಿತು; ಹೆಂಗಸರಿಗೆ ಅಡುಗೆ ಕೆಲಸವೇ ಗಟ್ಟಿ!

ಕತ್ತಲಿನೊಡನೆ ಚಳಿ ಅಮರಿಕೊಂಡಿತು. ನಮ್ಮ ಬಡಕಲು ಸೌದೆ ಸಂಗ್ರಹ ಇಡೀ ರಾತ್ರಿಗೆ ಸಾಕಾಗದೆಂದು ಅರಿವಾದದ್ದೇ ಸಮೀಪದಲ್ಲಿ ಚದುರಿದಂತೆ ಬಿದ್ದಿದ್ದ ಕೆಲವು ಒಣ ಮರಗಳನ್ನೂ ದಾಸ್ತಾನು ಮಾಡಿ, ಕೆಲವನ್ನು ಶಿಬಿರಾಗ್ನಿ ಎಂದು ಉರಿಸಲೂ ತೊಡಗಿ “ಶ್ಲೀಈಈ ಅಹಹ ಉಹುಹು” ಮಂತ್ರೋಚ್ಚಾರಣೆಗೂ ಸುರು ಮಾಡಿದ್ದೆವು. ನಮ್ಮ ಸಂಕಲ್ಪದ ಪ್ರಭಾವವೋ ಮಂತ್ರದ ಶಕ್ತಿಯೋ ‘ಯಜ್ಞ’ ಪರಿಮಳಿಸತೊಡಗಿತು. ಆದರೆ ವಿಘ್ನಕಾರಕರಾದ ರಾಕ್ಷಸ ಪಾತ್ರದಲ್ಲಿ ಬಂದವರು ಕೆಲವು ಊರ ಹಿರಿಯರು ಮತ್ತು ಅರಣ್ಯ ಇಲಾಖೆಯ ಗಾರ್ಡು. ವಾಸ್ತವದಲ್ಲಿ ನಾವು ಅರಿವಿಲ್ಲದೆ ಅಲ್ಲಿ ಸಹಜವಾಗಿ ಲಭ್ಯವಿದ್ದ ಗಂಧದ ಕೊರಡುಗಳನ್ನೇ ಉರಿಗೆ ಒಡ್ಡಿದ್ದೆವು. ತಿಂಗಳ ಹಿಂದೆ ಸಾಹಸ ಯಾತ್ರೆಯನ್ನು ಆಯೋಜಿಸಿದಂದಿನಿಂದಲೇ ನಾವು ಇಲಾಖೆಯ ಸಹಾಯ ಮತ್ತು ಸಹಕಾರವನ್ನು ಗಳಿಸಿಯೇ ಇದ್ದೆವು. ಹಾಗಾಗಿ ಅವರು ತಪ್ಪು ತಿಳಿಯದೆ ಗಂಧದ ಕೊರಡುಗಳನ್ನು ಒಯ್ದು, ಅನ್ಯ ಸೌದೆ ಒದಗಿಸಿದರು. ಹೆಚ್ಚೇನು ಶಿಬಿರಾಗ್ನಿಯ ಔಪಚಾರಿಕ ಉದ್ಘಾಟನೆಯನ್ನು ಆ ವಲಯದ ಅರಣ್ಯಾಧಿಕಾರಿ – ಜಾನ್ ಆಂಬ್ರೋಸ್ ಎನ್ನುವವರೇ ಬಂದು ಸಂತೋಷದಿಂದ ನಡೆಸಿಕೊಟ್ಟರು. ನಾವು ಎದುರಿಸಬಹುದಾದ ವನ್ಯಮೃಗಗಳಾದಿ ಎಲ್ಲ ಸವಾಲುಗಳಿಗೂ ಅವರೊಡನೆಯ ಅನೌಪಚಾರಿಕ ಮಾತುಕತೆಗಳಲ್ಲಿ ಪರಿಹಾರವನ್ನೂ ನಾವು ಕಂಡುಕೊಂಡೆವು. ಮೊದಲೇ ನಿಶ್ಚಯಿಸಿದ್ದಂತೆ ಮಾರಣೇ ದಿನ ಬೆಳಿಗ್ಗೆ ಇಬ್ಬರು ಮಾರ್ಗದರ್ಶಿಗಳ ಬಗ್ಗೆಯೂ ಭರವಸೆ ಕೊಟ್ಟು ಹೋದರು.

ಎರಡು ಪಂಪ್ ಸ್ಟೌಗಳ ಭರ್ರದಲ್ಲಿ ಕಾಫಿ, ಅನ್ನ, ಪಲ್ಯ, ಸಾರು ಸಾಲಿನಲ್ಲಿ ಬಂದಂತೆ, ಸಂಜೆಯ ಲೆಕ್ಕ ರಾತ್ರಿಯ ಲೆಕ್ಕ ಚುಕ್ತಾ ಮಾಡುವಾಗ ಗಂಟೆ ಹತ್ತಾಗಿತ್ತು. ಗುಡಾರಗಳೆಲ್ಲ ಒಳಗೆ ಹಾಸಿಗೆ ಬಿಚಾಯಿಸಿಕೊಂಡು ‘ಮಲಗಲು ಬನ್ನಿ’ ಎಂದು ಕರೆಯುತ್ತಿದ್ದವು. ಆ ಪುಟ್ಟ ಮನೆಗಳನ್ನು ಬೆಳಗುವ ಮೊಂಬತ್ತಿಗಳೂ ಕರೆ ಬೆಂಬಲಿಸಿ ತಲೆದೂಗುತ್ತಿದ್ದವು. ಆದರೆ ಹೊಂಗನಸಿಗೂ ಮುನ್ನ ಸುಳಿಗಾಳಿ ಸುಂಟರಗಾಳಿಯಾಗುತ್ತಲಿತ್ತು. ‘ಸಾಹಸಿಗಳಿಗೆ ಪ್ರಥಮ ಪರೀಕ್ಷೆ’ ಒಡ್ಡುವಂತೆ ಮಂಜಿನ ಮುಸುಕಿನ ಹಿಂದೆ ಕರಿಮೋಡಗಳು ತಮ್ಮ ಆಯುಧಗಳನ್ನು ಝಳಪಿಸುತ್ತ ಕಲೆತವು. ಅವಕ್ಕೆಲ್ಲ ಸೊಪ್ಪು ಹಾಕದೆ ‘ಮನರಂಜನಾ ಅಧಿಕಾರಿ’ ನಾಗರಾಜ್, ಉದ್ಘಾಟನೆಗೆ ತಾನೇ ಆಫ್ರಿಕದ ಕಾಡುಜನಾಂಗದ ಒಂದು ಹಾಡು ಒಗೆದುಬಿಟ್ಟಾ! (ನಾವೂ ಆಫ್ರಿಕನ್ನೇ ಇರಬೇಕು ಎಂದು ಅಂದುಕೊಂಡೆವು, ಅಲ್ಲಾ ಎನ್ನಲು ನಮಗ್ಗೊತ್ತಿರಬೇಕೇ!) ಮುಂದಿನ ಸರದಿ ಮಹಿಳೆಯರದು ಎಂದು ಆತ ಘೋಷಿಸಿದ್ದೂ ಆಯ್ತು. ಆದರೆ ತಪ್ಪಿ ಮಳೆ ಕೇಳಿಸಿಕೊಂಡಿತೋ ಏನೋ ಶಿಬಿರಾಗ್ನಿ ನೊಂದುಕೊಳ್ಳುವಂತೆ ಹನಿಗಳ ಪ್ರಹಾರಕ್ಕಿಳಿಯಿತು. ಕೇವಲ ಇಬ್ಬನಿಯ ಶೈತ್ಯಕ್ಕಷ್ಟೇ ಸಜ್ಜುಗೊಂಡಿದ್ದ ಎಲ್ಲ ಗುಡಾರಗಳಿಗೂ ಇದ್ದ ಬದ್ದ ಪ್ಲ್ಯಾಸ್ಟಿಕ್ ಹಾಳೆಗಳು, ಮಳೆಕೋಟುಗಳನ್ನೂ ಮುಚ್ಚಿ ಏನೋ ಬಂದೋಬಸ್ತು ಮಾಡಿಕೊಂಡೆವು. ಮತ್ತೆ ರಾತ್ರಿ ಸರದಿಯ ಮೇಲೆ ಎಲ್ಲರೂ ಪಹರೆ ಕಾರ್ಯ ನಡೆಸಬೇಕಿತ್ತು. ಅದಕ್ಕೆ ತಂಡಗಳ ಸೂಚನೆಯನ್ನು ಸುಜಾತರಿಂದ ಕೇಳಿಕೊಂಡು ಗುಡ್ನಾಯಿಟಿಸಿದೆವು. ನಾನು ಗಿರೀಶನೂ ಗುಡಾರ ಸೇರಿ, ಶೂ ಕಳಚಿಟ್ಟು, ಬೆಚ್ಚನೆಯ ಸವಲತ್ತುಗಳನ್ನೆಲ್ಲ ಮೈಮೇಲೆಳೆದುಕೊಂಡು ಮಲಗಿದೆವು.

ಮಳೆನಾಡ ಮಳೆಯದುವು ಗೋಳು ಕರೆಯುತ್ತಿತ್ತು
ಸುಳಿಗಾಳಿ ಸುಯ್ ಸುಯ್ದು ಅನುಮೋದಿಸುತ್ತಿತ್ತು.

ಮೊದಲ ಜಾಮದ ಪಹರೆ ಗೋವಿಂದರಾಜ್, ನಾಗರಾಜ್ ಮತ್ತು ಜಸವಂತರದ್ದು. ಹನಿಗಳ ನಡುವೆ ಅಂತರ ಕಡಿಮೆಯಾಗುತ್ತ ಹೋಯ್ತು. ಚಳಿ, ಹಾವು ಮತ್ತು ವನ್ಯ ಮೃಗಗಳಿಂದ ಶಿಬಿರವನ್ನು ದೂರವಿಡುವ ಶಿಬಿರಾಗ್ನಿಯ ಶಿಖೆ ಅಳಿವು ಉಳಿವುಗಳ ನಡುವೆ ತುಯ್ಯತೊಡಗಿತು. ಇಂದ್ರ ಕಳಿಸಿದ ಮುಸಲ ಧಾರೆಯನ್ನು ತಡೆದು ಖಾಂಡವವನ ದಹನಾನುಕೂಲಿಯಾದ ಗೋವಿಂದ ಇಲ್ಲೂ ಕೆಲಸ ಮಾಡಿದಂತೇ ಇತ್ತು. ಕೈ ಮಿಲಾಯಿಸಿ ರೈನ್ ಕೋಟ್ಗಳನ್ನೇ ಎತ್ತರದಲ್ಲಿ ಬಿಡಿಸಿ ಹಿಡಿದು ಅಗ್ನಿಯನ್ನು ವರುಣನಿಂದ ಕಾಪಾಡಿದರು (ಇಲ್ಲಿ ತಕ್ಷಕನ ತಪ್ಪಿಸೋಣ ನಮ್ಮ ಗಮನಕ್ಕಂತೂ ಬರಲಿಲ್ಲ!). ನೆಲಕ್ಕೆ ಬಿದ್ದ ನೀರು ಗುಡಾರಗಳೊಳಗೆ ಹರಿಯದಂತೆ ಇದ್ದೊಂದು ಹಿಮಗೊಡಲಿಯಲ್ಲೇ ನೆಲ ಕೆರೆದು ಸಪುರ ಕಣಿಗಳನ್ನು ಮಾಡತೊಡಗಿದರು. ಹುಡುಗಿಯರ ಗುಡಾರದ ಸುತ್ತೂ ಹೀಗೇ ನೆಲ ಕೆರೆಯುತ್ತಿದ್ದಂತೆ, ನಿದ್ದೆಯ ಮಂಪರಿನಲ್ಲಿದ್ದ ಕಾವೇರಿಯಮ್ಮನಿಗೆ ಭೀಕರ ಕನಸು. ಕಾಡು ಹಂದಿಯ ದಂತ ಮಸೆತ, ಹೆಬ್ಬುಲಿಯ ಪಂಜದ ಪೆಟ್ಟು ಮೂರ್ತವಾದಂತಾಗಿ ಕಾವೇರಿಯಮ್ಮನ ಬಾಯಿಯಿಂದ ಗೋವಿಂದೋ ಗೋವಿಂದ. ಇವರು ಗೊಂದಲದಲ್ಲಿ ಚಡಪಡಿಸಿ ಏಳುತ್ತಿದ್ದಂತೆ ಗುಡಾರದ ಮೇಲೆ ಹಾಸಿದ್ದ ಯಾವುದೋ ಮಳೆಕೋಟಿನ ಮಡಿಕೆಯಲ್ಲಿ ತುಂಬಿದ್ದ ಶೀತಲ ನೀರು ಮಲಗಿದ್ದವರ ಮೈಗೆ ಒಮ್ಮೆಗೆ ಬಿತ್ತು. ಮತ್ತೆಕೇಳಬೇಕೇ ಗಾಬರಿಗೆಟ್ಟ ಹುಡುಗಿಯರು ನಿಮಿಷಾರ್ಧದಲ್ಲಿ ಗುಡಾರದಿಂದ ಹೊರಗೆ ಸಿಡಿದಿದ್ದರು! ಮುಂದಿನದೆಲ್ಲ ಜಲಪರ್ವವೇ. ಅಚ್ಯುತರಾಯರು ಹುಡುಗಿಯರಿಗೆ ತನ್ನ ಗುಡಾರ ತೆರವು ಮಾಡಿಕೊಟ್ಟರು. ಗೋವಿಂದರಾಜರ ಜಲನಿರೋಧಕ ಮಲಗುವ ಚೀಲವನ್ನೇ ಬಿಡಿಸಿ ಅವರಿಗೆ ಬೆಚ್ಚನೆಯ ಹೊದಿಕೆ ಮಾಡಿದ್ದೂ ಆಯ್ತು. ಆದರೆ ಸಂತೃಪ್ತ ನೆಲ ಅಲ್ಲೂ ಇತರ ಗುಡಾರಗಳಲ್ಲೂ ಜಲಜಾಗೃತಿಯನ್ನು ಉಂಟುಮಾಡಿತು! ಒದ್ದೆ ಕಾಗೆಗಳಂತೆ ಒಬ್ಬೊಬ್ಬರೇ ಮುನಿದ ಶಿಬಿರಾಗ್ನಿಗೆ ಮುತ್ತಿಗೆ ಹಾಕುತ್ತಿದ್ದಂತೆ ‘ಇನ್ನೇನಪ್ಪಾ ಮಾಡುವುದು’ ಯೋಚನೆ ಹೆಚ್ಚಾಯ್ತು, ಅನುಕೂಲಕ್ಕೆ ಸಂಜೆ ಅರಣ್ಯಾಧಿಕಾರಿ ಕೊಟ್ಟ ಆಮಂತ್ರಣ ನನೆಪಿಗೂ ಬಂತು. ಹಾಗಾಗಿ ಮೊದಲು ಒಂದಷ್ಟು ಹುಡುಗರು ಅಚ್ಯುತರಾಯರ ಮುಂದಾಳತ್ವದಲ್ಲಿ ಅಗತ್ಯದ ಹಾಸಿಗೆ ಬಟ್ಟೆಗಳನ್ನು ಅವಚಿಕೊಂಡು ಅರಣ್ಯ ಇಲಾಖೆಯ ಜಗುಲಿಗೆ ವಲಸೆ ಹೋದರು. ಸ್ವಲ್ಪ ಸಮಯದಲ್ಲೇ ಜಸವಂತನ ನೇತೃತ್ವದಲ್ಲಿ ಹುಡುಗಿಯರನ್ನೂ ರವಾನಿಸಬೇಕಾಯ್ತು. ಆದರೆ ಜಸವಂತನಿಗೆ ಕಛೇರಿ ದಾರಿ ತಪ್ಪಿ ಊರಲೆದು, ನಿದ್ದೆಗೇಡಿ ಗುಮಾಸ್ತನೊಬ್ಬನ ಕಣ್ಣಿಗೆ ಬಿದ್ದು ನೆಲೆ ಸೇರಿದರು. ಶಿಬಿರ ಸ್ಥಾನದಲ್ಲಿ ಗೋವಿಂದರಾಜ್, ಇತ್ತ ಜಗುಲಿಯಲ್ಲಿ ರಮೇಶ್ ಕಾಲಮಿತಿಯಿಲ್ಲದ ಕಾವಲುಗಾರರು.

ಏತನ್ಮಧ್ಯೆ ನಾನೆಲ್ಲಿದ್ದೆ ಅಂತೀರಾ? ಎಲ್ಲರೂ ಎದ್ದಿರಲು ಇವನೊಬ್ಬನಿದ್ದ, ಗಟ್ಟಿಯಾಗಿ ಮಲಗಿದ್ದ! ಮೂರು ಗಂಟೆಗೆ ಪಹರೆಯ ಸರದಿ ಮರೆಯದಂತೆ ಭಾಸ್ಕರ ಎಬ್ಬಿಸಿದಾಗಲೇ ನಾನು ಬುದ್ಧ. ನೀರಿಳಿಯುತ್ತಿದ್ದ ಗುಡಾರದ ಬಟ್ಟೆಯಿಂದ ಸಂಪರ್ಕದಲ್ಲಿದ್ದ ನನ್ನ ಪ್ಯಾಂಟೂ ಹೊದಿಕೆಗಳೂ ನೀರೆಳೆದುಕೊಂಡು ನನಗೆ (ಅತಿ)ಶೈತ್ಯೋಪಚಾರ ನೀಡಿತ್ತು. ಕೊರಡುಗಟ್ಟಿದ ಕೈಕಾಲು ಝಾಡಿಸಿ, ಕಾಲ್ಚೀಲ ಹಿಂಡಿ ಹಾಕಿ, ಶೂವಿನೊಳಗಿನ ನೀರು ಖಾಲಿ ಮಾಡಿ, ತೊಡರಿಸಿಕೊಳ್ಳುತ್ತಾ ಕಣ್ಣುಹೊಸೆಯುತ್ತಾ ಹೊರಗೆ ಬಂದಾಗಲೇ ಗೊತ್ತು ಶಿಬಿರ ಖಾಲಿ.

ಮಳೆಚಳಿಗೆ ಕಾಲಪುರುಷಂಗೂ ಜಡಂಗಡ. ತೆವಳುತ್ತ ಬಂದ ನಾಲ್ಕು ಗಂಟೆಗೆ ಸುಜಾತ ಹೊರಬಿದ್ದು, ಶಿಬಿರಕಾರ್ಯ ವಹಿಸಿಕೊಂಡರು. ಮಳೆ ನಿಂತಿತ್ತು. ಗೋವಿಂದರಾಜ್ ದಕ್ಕಿದಷ್ಟು ವಿಶ್ರಾಂತಿ ಎಂದು ಗುಡಾರ ಸೇರಿಕೊಂಡರು. ಕರ್ತವ್ಯ ಪ್ರಜ್ಞೆ ಮರೆಯದೆ ರಮೇಶನೂ ಕಛೇರಿ ಜಗುಲಿ ಬಿಟ್ಟು ಬಂದು ಕಾಫಿ ತಿಂಡಿಗಳ ತಯಾರಿಗೆ ಸೇರಿಕೊಂಡ. ಮಳೆ ನೀರೇನೋ ಧಾರಾಳ ವ್ಯಾಪಿಸಿತ್ತು. ಆದರೆ ಪರಂಗಿ ಕವಿಯೊಬ್ಬನ ಕ್ಷಮೆ ಕೋರಿ:|

ನೀರು ನೀರು ಎಲ್ಲೆಲ್ಲು ನೀರು
ಶಿಬಿರವೋ ಚಂಡಿಪಿಂಡಿ
ನೀರು ನೀರು ಎಲ್ಲೆಲ್ಲು ನೀರು
ಕುಡಿಯೆ ಇಲ್ಲ ಅರೆಗಿಂಡಿ

ಸೂರ್ಯ ಮಳೆಕೋಟು, ಮಫ್ಲರ್ ಎಲ್ಲಾ ಹಾಕಿಕೊಂಡು ನಿಧಾನಕ್ಕೆ ಬಂದ. ಬಿಸುಪಿಲ್ಲ, ಬರಿಯ ಮಂದ ಬೆಳಕು. ವಿಶ್ರಾಂತಿ, ಹವೆ, ಪೂರೈಕೆ ಮುಂತಾದವೆಲ್ಲ ಆದರ್ಶಯುತವಾಗಿದ್ದಾಗ ಬೆಟ್ಟ ಹತ್ತುವುದು ಸಾಹಸ ಎಂಬ ಅಪಕಲ್ಪನೆ ನಮ್ಮದಲ್ಲ. ಎಲ್ಲವನ್ನೂ ಸುಧಾರಿಸಿಕೊಂಡು ಕಾಫಿ ತಿಂಡಿ ಮಾಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ತಯಾರಿಸಿ ಕಟ್ಟಿಕೊಂಡದ್ದಾಯ್ತು. ನಿದ್ದೆ ಒದ್ದೆಗಳ ಪ್ರಭಾವದಲ್ಲಿ ದೈಹಿಕವಾಗಿ ಹಿಂದುಳಿಯ ಬಯಸುವವರಿಗೆ ನಾಯಕರು ವ್ಯರ್ಥ ಅವಕಾಶವನ್ನೂ ಕೊಟ್ಟದ್ದಾಯ್ತು. ಅರಣ್ಯ ಇಲಾಖೆಯ ಮಾರ್ಗದರ್ಶಿಗಳು ಬರುವಾಗ ನಮ್ಮ ಪೂರ್ಣ ತಂಡ on the mark ಇತ್ತು. ಒದ್ದೆ ಗುಡಾರವೇ ಮುಂತಾದ ಹಲವು ಸಾಮಾನುಗಳನ್ನು ಅಲ್ಲೇ ಅರಣ್ಯ ಇಲಾಖೆಯ ವಶದಲ್ಲಿ ಬಿಟ್ಟು ಊರು ಬಿಡುವಾಗ ಗಂಟೆ ಹನ್ನೊಂದು. ಮೂವರು ಮಾರ್ಗದರ್ಶಿಗಳು, ಅಯಾಚಿತವಾಗಿ ಜೊತೆಗೊಟ್ಟ ಊರಿನ ಒಂದು ಬೀಡಾಡಿ ನಾಯಿ (ಟೈಗರ್) ಸೇರಿ ಇಪ್ಪತ್ನಾಲ್ಕು ಮಂದಿ ಮನದ, ದಿನದ, ಭವಿಷ್ಯದ ಮಂಕು ಹರಿಯುವಂತೆ ಜೈಕಾರ ಹಾಕಿ ಶಿಂಗಾರಂ ದಾರಿ ತುಳಿದೆವು.

ಡಾಮರು ದಾರಿ ತುಳಿಯುತ್ತಿದ್ದಂತೆ ಆರಂಭಿಕ ಉತ್ಸಾಹದಲ್ಲಿ ನಮ್ಮದು ಗದ್ದಲ ತುಸು ಜಾಸ್ತಿಯೇ ಇತ್ತು. ದಾರಿ ಹೊಳೆಯೊಂದರ ಅಂಚಿಗೆ ಇಳಿಯುತ್ತಿದ್ದಂತೆ ಕಣಿವೆಯಿಂದ ಆನೆಯ ಘೀಳು ಕೇಳಿಸಿದ್ದೇ ಎಲ್ಲರ ಬಡಿವಾರ ಬಂದ್. ಒಂದೇ ಗಂಟೆಯಲ್ಲಿ ಡಾಮರು ದಾರಿಯನ್ನು ಬಲಕ್ಕೆ ಬಿಟ್ಟು ನಾವು ಬಿದಿರು ಕಾಡಿನೊಳಗಿನ ಕಾಲು ದಾರಿ ಹಿಡಿದೆವು. ಆಗಿಂದಾಗ್ಗೆ ಆನೆ ಲದ್ದಿಯ ದರ್ಶನ; ಹಲವು ಹಳತು, ನಮ್ಮೆದೆ ತಲ್ಲಣಕ್ಕೆ ಕೆಲವು ಬಿಸಿಬಿಸಿ. ಒಂದೊಂದು ಅಕರಾಳ ವಿಕರಾಳ ಸಿಗಿದು ಬಿದಿರುಗಳ ಹಿಂಡ್ಲಿನಾಚೆ, ಪ್ರತಿ ತಿರುವಿನಾಚೆ ಗಜ ದರ್ಶನದ ನಿರೀಕ್ಷೆಯಲ್ಲಿ ನಮ್ಮ ಹೆಜ್ಜೆ ತಡವರಿಸುತ್ತಿದ್ದರೂ ಚುರುಕಾಗಿಯೇ ಇತ್ತು.

ಮೊದಮೊದಲು ಗಂಟೆಗೊಮ್ಮೆ ಐದು ಮಿನಿಟಿನ ವಿಶ್ರಾಂತಿ. ಮುಂದುವರಿದಂತೆ ಏರು ತೀವ್ರವಾದಂತೆ, ಅಡ್ಡಿಗಳು ಹೆಚ್ಚಿದಂತೆ ಗತಿ ನಿಧಾನವಾದದ್ದಕ್ಕೆ ಪ್ರತ್ಯೇಕ ವಿರಾಮವಿಲ್ಲದೆ ಆರೋಹಣ ಸಾಗಿತು. ಮಧ್ಯೆ ಸ್ವಲ್ಪ ದೂರ ಸುತ್ತಿ ಸುತ್ತಿ ಬರುತ್ತಿದ್ದ, ಜೀಪು ಮಾತ್ರ ಪಯಣಿಸಬಹುದಾಗಿದ್ದ ಕಚ್ಚಾ ದಾರಿಯೊಂದು ಸಿಕ್ಕಿದರೂ ಬೇಗನೆ ಆಳೆತ್ತರದ ಹುಚ್ಚು ಹುಲ್ಲುಹಬ್ಬಿದ ತೆರೆಮೈ ಸೇರಿದೆವು. ಮಾರ್ಗದರ್ಶಿಗಳು ಹುಲ್ಲು ಬಗಿಯುತ್ತ, ಅಡ್ಡಗಟ್ಟುವ ಪೊದರುಗೈಗಳನ್ನು ಸವರುತ್ತ ಆದಷ್ಟು ನಮ್ಮ ನಡೆಯನ್ನು ಹಸನು ಮಾಡಿಕೊಡುತ್ತಿದ್ದರು. ಆದರೆ ವನ್ಯ ಪರಿಸರಕ್ಕೆ ತಕ್ಕಂತೆ ನಾವೂ ಜಾಗೃತರಾಗಿ ಸುತ್ತಲೂ ಕುತೂಹಲದೊಡನೆ ಎಚ್ಚರಿಕೆಯ ದೃಷ್ಟಿ ಬೀರುತ್ತ ಸಾಗಿದೆವು. ಟೈಗರ್ ಸಾಲಿನ ಹಿಂದೊಮ್ಮೆ ಮುಂದೊಮ್ಮೆ, ಇಲ್ಲಿ ನನ್ನ ಕಾಲಿನ ಸಂದಿನಲ್ಲಿ ನುಸಿದು ಅಲ್ಲಿ ನರೇಶನ ಶಿಳ್ಳೆಗೆ ಕುಣಿಕುಣಿದು ಮುಂದುವರಿದಿತ್ತು. ಮಂಗ (ಮಾರ್ಗದರ್ಶಿಗಳ ಭಾಷೆಯಲ್ಲಿ ಕೊರುಂಗು), ತೋಳ್ದಪ್ಪದ ಹಸಿರು ಹಾವು ಕಂಡದ್ದಾಯ್ತು, ಮುಂದೇನು, ಮುಂದೇನು? ಬೆಟ್ಟದ ಏಣುಗಳನ್ನು ಓರೆಯಲ್ಲಿ ದಾಟುತ್ತಾ ಅಂದರೆ ಬಲಬದಿಗೆ ಸರಿಯುತ್ತಾ ನಡೆದವರಿಗೆ ಅಡ್ಡ ಸಿಕ್ಕಿತೊಂದು ಝರಿ – ಬೂದಿಪರೆಹಳ್ಳ. ತನ್ನ ಹಲವು ಶತಮಾನಗಳ ಸಾಹಸದಲ್ಲಿ ಅದು ಆಳವಾದ ಕೊರಕಲನ್ನೇ ಸಾಧಿಸಿತ್ತು. ಮೇಲಿನ ಪೊದೆಗಳಿಂದ ಸೋಸಲ್ಪಟ್ಟು, ಬೇರು ಬಂಡೆಗಳ ತಾಕಲಾಟದಲ್ಲಿ ನೊರೆಯುಕ್ಕಿಸಿ ‘ಸಾಹಸಿಗಳಷ್ಟೇ ದಾಟಬಹುದು’ ಎಂಬ ಸವಾಲಿಕ್ಕಿ ಕೆಳಗಿನ ಕಣಿವೆಯತ್ತ ಮರೆಯಾಗುತ್ತಿತ್ತು. ಹಿಂದೆ ಯಾರೋ ಒಂದೆರಡು ಸಣ್ಣ ಬಂಡೆಗುಂಡುಗಳನ್ನು ಆಯಕಟ್ಟಿನ ಜಾಗದಲ್ಲಿ ಉರುಳಿಸಿ ಕಷ್ಟಸಾಧ್ಯ ಸೇತುವನ್ನೇನೋ ಮಾಡಿದ್ದರು. ಆದರೆ ತೊರೆ ಅದನ್ನೂ ಆಗಿಂದಾಗ್ಗೆ ತೊಯ್ಯಿಸಿ, ಅಲ್ಲಿ ಹಾವಸೆ ಬೆಳೆದು ಬೆದರಿಸುತ್ತಿತ್ತು. ಕೊರಕಲಿಗಿಳಿಯುವಲ್ಲೂ ಕರಿಮಣ್ಣು ಕುಸಿಯುತ್ತಿತ್ತು, ಜಾರುತ್ತಿತ್ತು. ಕೋಲೂರಿ, ಕೈ ಕೈ ಮಿಲಾಯಿಸಿ, ಬಂಡೆಯಿಂದ ಬಂಡೆಗೆ ಹುಶಾರಿನಿಂದ ಹಾರಿ ಎಲ್ಲ ಅತ್ತ ದಾಟಿದೆವೆನ್ನುವಾಗ ಹಿಂದಿನಿಂದ ಕುಂಯ್ ಕುಂಯಿ. ಅತಿಥಿ ಟೈಗರ್ ನೀರಿನಬ್ಬರಕ್ಕೆ ಬೆದರಿ ಕೊರಕಲಿನಾಚೆ ಥರಗುಟ್ಟುತ್ತ ನಿಂತಿತ್ತು! ಮತ್ತೆ ನಮ್ಮ ಮಾರ್ಗದರ್ಶಿ – ಸುಬ್ಬಯ್ಯನ್, ಹೋಗಿ ಸುಲಭವಾಗಿ ಸಿಕ್ಕದ ನಾಯಿಯನ್ನು ಬೆರೆಸಿ ಹಿಡಿದು, ಎತ್ತಿಕೊಂಡು ಈಚೆ ದಡ ಕಾಣಿಸಿದ.

ಏರಿಕೆ ವಾರೆಯಲ್ಲೂ ತೀವ್ರವಾಗಿತ್ತು. ಸವಕಲು ಕಾಲುದಾರಿಗಳೇನೂ ಇರಲಿಲ್ಲ. ಅಲ್ಲಲ್ಲಿ ಹತ್ತಿಯೇ ಮುಂದುವರಿಯಬೇಕಾದ ಭಾರೀ ಬಂಡೆ ಗುಂಡುಗಳು. ಊರೆಗೋಲಾಗಿ ಒಯ್ದಿದ್ದ ದೊಣ್ಣೆಗಳಂತೂ ವೃಥಾ ಭಾರಗಳು. ಸೂರ್ಯ ಮತ್ತೆ ಮರೆಯಾಗಿ ಸುರಿಯುತ್ತಿದ್ದ ಮಂಜೋ ಮುತ್ತುತ್ತಿದ್ದ ಮೋಡಗಳ ಪ್ರಭಾವದಲ್ಲಿ ಕಾಲಿಟ್ಟ ನೆಲ, ಆಧಾರಕ್ಕೆ ಜಗ್ಗಿದ ಹುಲ್ಲು ಎಲ್ಲವೂ ಜಾರುತ್ತಿತ್ತು, ಬೆನ್ನಿನ ಅಸಾಮಾನ್ಯ ಹೊರೆ ತೊನೆದು ಜಗ್ಗುತ್ತಿತ್ತು. ಒಂದೆಡೆ, ಕಾಡು ಪೂರ್ಣ ಹರಿದಲ್ಲಿ ಬಲು ದೀರ್ಘ ಮತ್ತು ಹೆಚ್ಚು ಕಡಿದಾದ ಬಂಡೆಯ ಹಾಸಿನ ಸವಾಲು. ನಮ್ಮಲ್ಲಿನ ರೋಪ್‌ಗಳು ಜಾಗೃತವಾದವು. ಹೊರೆ ಇಳುಹಿ, ಕೆಲವು ಗಟ್ಟಿ ಕುಳಗಳು ಬಂಡೆಯ ಹಾಸಿನುದ್ದಕ್ಕೂ ಆಯಕಟ್ಟಿನ ಜಾಗಗಳಲ್ಲಿ ಹರಡಿ ನಿಂತೆವು. ಮತ್ತೆ ಹೊರೆಗಳನ್ನು, ಇತರ ಸದಸ್ಯರನ್ನು, ಕೊನೆಯಲ್ಲಿ ಟೈಗರನ್ನೂ ಕೈ ಕೈ ಬದಲಾಯಿಸಿ ಮೇಲೇರಿದೆವು. ಇಲ್ಲಿ, ಅದುವರೆಗೆ ಕಾಣಿಸದಿದ್ದ ಕೊಳ್ಳದಾಳದ ದೃಶ್ಯ ಮುಕ್ತವಾಗಿತ್ತು. ತಪ್ಪಲಿನ ಕಾಡು, ಮಸಣಿಗುಡಿ ಬೆಚ್ಚನೆಯ ಬಿಸಿಲಿನಲ್ಲಿ ಮಿಂದಿದ್ದರೆ ಶಿಖರ ವಲಯ ಮಳೆಯನ್ನೇ ಹೊತ್ತು ನಿಂತಂತಿತ್ತು! ಆ ಎತ್ತರದ ಬೆಟ್ಟದ ಸೀಳೊಂದರಿಂದ ನುಸಿದ ಮೋಡ ಸಂದೋಹ ಹಸೆಗಾರ ಬಿಲ್ಲು ಹೊಡೆದು ಹಿಂಜಿದ ಹತ್ತಿಯಂತೆ ಹರಡುತ್ತಿದ್ದ ದೃಶ್ಯ ಚಿರಸ್ಮರಣೀಯ.

ವಿಸ್ತಾರ ಬಂಡೆ ಹರಹಿನ ಮೇಲಂಚಿನ ಮಟ್ಟಸ ಜಾಗದಲ್ಲಿ ನಿಂತಿದ್ದೆವು. ಸಹಜವಾಗಿ ಆನೆಗಳ ಭಯ ದೂರವಾಗಿ ಮಾತು, ಹಾಸ್ಯ ಧಾರಾಳವಾಗಿತ್ತು. ಆದರೆ ಸ್ವಲ್ಪೇ ಮುಂದೆ ನಮ್ಮ ಅಂದಾಜುಗಳನ್ನು ಹುಸಿಮಾಡುವಂತೆ ಆನೆಯ ಲದ್ದಿ ಗುಪ್ಪೆ ಕಾಣಿಸಿದಾಗ ಉಳಿದದ್ದು ಕೇವಲ ಬೆರಗು. ನಮ್ಮ ದೈನಂದಿನ ಮಾತುಗಳಲ್ಲಿ ಮಹಾಕಾಯರನ್ನೆಲ್ಲಾ ಆನೆಗೆ ಸಮೀಕರಿಸಿ ನಗುವ ನಮ್ಮ ಮಂದಬುದ್ಧಿಗೆ ಆ ಮಂದಚರ್ಮಿ ಮಂದಸ್ಮಿತ ಕೊಟ್ಟಂತಿತ್ತು. ಬೆಟ್ಟದ ತಪ್ಪಲಿನೆಡೆಗೆ ದೃಷ್ಟಿ ಹರಿದಂತೆ ಹುಲ್ಲು ಹಾಸು, ಹಸಿರು ಅರಣ್ಯಗಂಬಳಿಗಳಾಚೆ ನೇರ ತಪ್ಪಲಿನಲ್ಲಿ ಸಿಂಗಾರಂ ಪವರ್ ಹೌಸ್ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದರ ಓಂಕಾರದಂಥ ಏಕನಾದ ಮಾತ್ರ ಕಣಿವೆಯುದ್ದಕ್ಕೂ ಅನುರಣಿಸುತ್ತಿತ್ತು. ಅಲ್ಲಿ ತಯಾರಾದ ಶಕ್ತಿ ಸಾಗಣೆಯ ಭಾರೀ ಕಂಬ, ತಂತಿಗಳ ಸರಣಿ ಮಸಣಿಗುಡಿ ದಾಟಿ ದಿಗಂತದಲ್ಲಿ ಲೀನವಾಗಿತ್ತು. ಅದು ಬಳಸಿಬಿಟ್ಟ (ಚಪ್ಪೆ!) ನೀರು ಕಾಲುವೆಯಲ್ಲಿ ಕಾಡಲೆಯುತ್ತಿದ್ದದ್ದು ಒಂದು ಕಲಾತ್ಮಕ ರೇಖೆ.

ಗಂಟೆ ಮೂರಾದರೂ ಶಿಖರ ಇನ್ನೂ ಅಗೋಚರ ಎತ್ತರಗಳಲ್ಲೇ ಇತ್ತು. ಮಾರ್ಗದರ್ಶಿಗಳ ಮುಖ್ಯಸ್ಥ ರಾಜು ಹೊರಡುವಾಗ ಹಾಕಿದ ಅಂದಾಜು ಸರಿಯಾಗಿದ್ದರೆ ನಾವಾಗಲೇ ಶಿಖರ ಸೇರಿ ಒಂದೂವರೆ ಗಂಟೆಯೇ ಕಳೆದಿರುತ್ತಿತ್ತು! ಊಟ ವಿಶ್ರಾಂತಿಗಳೇನಿದ್ದರೂ ಅಲ್ಲೇ ಎಂದುಕೊಂಡಿದ್ದ ಛಲವಂತರ ಕಾಲುಗಳು ಎಳೆಯುತ್ತಿತ್ತು. ನೀರಲ್ಲಿ ನೆನೆದ ಶೂಗಳ ಹಿಂಸೆ ತಡೆಯಲಾರದೆ ಕೆಲವರು ಅವನ್ನು ಕಂಠಾಭರಣ ಮಾಡಿಕೊಂಡಿದ್ದರು. ಆಧಾರಕ್ಕೆ ಬಲಿತ ಹುಲ್ಲನ್ನು ಹಿಡಿದು ಹಿಡಿದು ಕೈಯಲ್ಲಿ ಅಸಂಖ್ಯ ಗೀಚು ಗಾಯಗಳ ಉರಿ. ಚಪಲಕ್ಕೆ ಚಪ್ಪರಿಸಿದ ಚಾಕಲೇಟಿನಂತ ಚಿಲ್ಲರೆಗಳು ಆಕರ್ಷಣೆ ಕಳೆದುಕೊಂಡಿದ್ದವು. ವಾತಾವರಣದಲ್ಲಿ ಶೀತವಿದ್ದರೇನು ತೀವ್ರ ದೈಹಿಕ ಶ್ರಮದಲ್ಲಿ ದೇಹದ ದ್ರವಪದಾರ್ಥಗಳು ಕಳೆದು ಆರೋಗ್ಯದ ಸಮಸ್ಯೆಯಾಗುವುದು ನಮಗೆ ತಿಳಿದೇ ಇತ್ತು. ವಾಟರ್ ಬಾಟಲುಗಳಲ್ಲಿ ಹೊತ್ತ ನೀರು ಸಾಲದಾಗುತ್ತ ಬಂತು. ಅಕ್ಕಿ ಬೇಳೆಗಳ ಡಬ್ಬಿ ಹೊರುವವರಿಗೆ ಹೆಣಭಾರ. ಪಾತ್ರೆ ಪರಡಿಗಳ ಡಬ್ಬಿ ಒಬ್ಬನಿಂದಾಗದು, ಇಬ್ಬರಿಗೆ ಕಡಿಮೆ. ಸ್ಟೌಗಳ ಡಬ್ಬಿ ನೆಟ್ಟಗಿರಬೇಕು, ತರಕಾರಿಯ ಚೀಲ ಜಜ್ಜಿ ಹೋಗಬಾರದು. ಉಳಿದವರಿಗೂ ಬೆನ್ನುಚೀಲಗಳೇನೂ ಹಗುರದ ಮಾತಾಗಿರಲಿಲ್ಲ. ಸಹಜವಾಗಿ ಸಾಲಿನಲ್ಲಿ ಹಿಂದು ಮುಂದಿನವರ ಅಂತರ ಹೆಚ್ಚುವುದು, ಅಸಹನೆ ಗೊಣಗಾಟ ಬೆಳೆಯುವ ಮುನ್ನ ಸುಮಾರು ನಾಲ್ಕು ಗಂಟೆಯ ಅಂದಾಜಿಗೆ ತಂಗುದಾಣದ ಅನ್ವೇಷಣೆಗಿಳಿದೆವು.

ಸುಮಾರು ಅರುವತ್ತಡಿ ಅಂತರದಲ್ಲೆ ಸ್ವಲ್ಪ ಕೆಳಗಿಳಿದು ಒಂದು ಬಂಡೆಯ ಮುಂಚಾಚಿಕೆಯನ್ನು ರಾಜು ಆಯ್ಕೆ ಮಾಡಿದ. ನಮ್ಮ ಅಸಾಧಾರಣ ಹೊರೆಗಳೊಡನೆ ಇಳಿಯುವುದಂತೂ ಹೊಸದೇ ಸಾಹಸವಾಗಿತ್ತು! ಅಕ್ಷರಶಃ ಹರಿದುಕೊಂಡು ಹೋಗಿ, ಶಿಬಿರ ಸ್ಥಾನವನ್ನು ಸೇರಿ ಮೈಚಾಚಿದೆವು. ಮಧ್ಯಾಹ್ನದ ಊಟ + ಸಾಯಂಕಾಲದ ತಿಂಡಿ = ಐದು ಪೂರಿ ಪಲ್ಯ. ಆದರೆ ನೀರಿಲ್ಲದೆ ಅದು ಗಂಟಲಿಳಿಯುವುದಾದರೂ ಹೇಗೆ? ಮತ್ತೆ ಮಂಕಾಗಿಯೇ ಇದ್ದ ಹಗಲೂ ಕತ್ತಲ ಬಿಡಾರಕ್ಕೆ ಅಲ್ಲಿ ಬೇಗನೆ ಜಾರುವ ಸೂಚನೆಗಳಿದ್ದುದರಿಂದ ಒಟ್ಟಾರೆ ಶಿಬಿರ ಕಾರ್ಯಗಳಿಗೆ ನೀರ ಮೂಲ ಬೇಗನೇ ಹಿಡಿಯಲೇಬೇಕಿತ್ತು. ಮಾರ್ಗದರ್ಶಿ ರಾಯನ್ ಮತ್ತು ಜಾವೀದ್ ಹುಲ್ಲು ಕಂಟಿಗಳನ್ನು ನಿವಾರಿಸುತ್ತ ಏಣುಗಳಾಚೆ ಜಲಶೋಧಕ್ಕೆ ಮುಂದಾದರು. ಉಳಿದವರು ಬಂಡೆಮರೆಯನ್ನು ಒಂದು ರಾತ್ರಿಗಾದರೂ ವಾಸಯೋಗ್ಯ ಮಾಡುವ ತರಾತುರಿಗೆ ಬಿದ್ದರು.

ಮಸಣಿಗುಡಿಯ ನಿದ್ದೆಗೇಡಿಗಳು, ದಿನಪೂರ್ತಿಯ ಆರೋಹಿಗಳು ಶಿಬಿರ ಹೂಡಿದ ಪರಿ, ರಾತ್ರಿ ಕಳೆದ ವಿವರಗಳು ಮತ್ತೂ ಶಿಖರ ಸಾಧಿಸಿದ ವೈಭವಗಳೊಡನೆ ಮುಂದಿನ ವಾರ ಸಿಗುತ್ತೇನೆ. ಹಿಂದಿನ ಕಥಾನಕದ ಪ್ರತಿಕ್ರಿಯೆ ಬಾಕೀದಾರರು ಇದರ ಲೆಕ್ಕವನ್ನೂ ಸೇರಿಸಿ ಅಕ್ಷರಸ್ಥರಾಗುತ್ತೀರಿ ಎಂದು ನಂಬುತ್ತೇನೆ.