ಚಳಿ ತಡೆಯಲಾರದೆ ಸೂರ್ಯ ಆಗಲೇ ಗೃಹಾಭಿಮುಖನಾಗಿದ್ದ. ಸುಬ್ಬಯ್ಯನ್ ಅಲ್ಲಿದ್ದ ಊರ ದನಗಳು ಬಿಟ್ಟುಹೋದ ಜಾಡು ನೋಡಿ, ನಮಗೆ ಹಿಂದಿರುಗಲು ಹೊಸದೇ ದಿಕ್ಕು ಮತ್ತು ಹೆಚ್ಚು ನಾಗರಿಕ ಜಾಡು ಸೂಚಿಸಿದ. ಮತ್ತದು ನಮ್ಮವರಿಗೂ ಒಪ್ಪಿಗೆಯಾದ್ದರಿಂದ ನಾವು ಹಿಂದೆ ಬಿಟ್ಟ ಜನ, ಸಾಮಾನನ್ನು ತರಲು ಧಾವಿಸಿದೆವು. ಪೊದರ ಗುಹಾಮಾರ್ಗದ ಉದ್ದಕ್ಕೆ ಅಕ್ಷರಶಃ ಹಿಮಜಾರಾಟವನ್ನೇ ಅನುಕರಿಸಿದೆವು. ರಾಜು ರಮೇಶಾದಿಗಳಿಗೆ ವಿಜಯವಾರ್ತೆಯೊಡನೆ ದಾರಿ ಬದಲಾವಣೆಯನ್ನೂ ತಿಳಿಸಿ, ಸಮಯಾಭಾವವನ್ನು ಗಮನದಲ್ಲಿಟ್ಟುಕೊಂಡು ಗಂಟು ಮೂಟೆಗಳನ್ನು ಬೆನ್ನಿಗೇರಿಸಿ ಮತ್ತೆ ಶಿಖರಕ್ಕೆ ಮರಳಿ… “ಝರ್ರ್ ಧಡ್ಡ್!” ಹಾಂ, ನಿಲ್ಲಿ, ನಿಲ್ಲಿ. ಗುಹಾಮಾರ್ಗ ಮೊದಲ ಶೋಧದಲ್ಲೇ ಕೆಸರೆದ್ದಿತ್ತು. ಮತ್ತಿಳಿಯುವಾಗ ಎಲ್ಲರೂ ನಿರ್ಯೋಚನೆಯಿಂದ ಜಾರಿ ಈಗ ಅದು ಅಕ್ಷರಶಃ ಜಾರುಗುಪ್ಪೆ. ಸಾಲದ್ದಕ್ಕೆ ಬೆನ್ನ ಮೇಲೆ ಸಿಂದಬಾದನ ಮುದುಕ! ಎಷ್ಟೇ ಎಚ್ಚರಿಕೆಯಿಂದ ಎರಡೂ ಬದಿಯ ಗಿಡಗಳ ಬುಡ ಹಿಡಿದು, ಮತ್ತೊಂದೆರಡು ಬುಡ ತುಳಿದು ಮುಂದುವರಿಯ ತೊಡಗಿದರೆ ಬೆನ್ನ ಗಂಟನ್ನು ಪೊದರ ಚಪ್ಪರ ಹೆಟ್ಟಿಯೂ ಮಲಗಿಸುತ್ತಿತ್ತು. ಅಂತೂ ಇಂತೂ ಅದರಿಂದ ಪಾರಾಗುವುದರೊಳಗೆ ಕನಿಷ್ಠ ಎರಡು ಬಾರಿಯಾದರೂ ನೆಲಕಚ್ಚದ ವ್ಯಕ್ತಿಯಿರಲಿಲ್ಲ! ಮೊದಲೇ ಬಳಲಿದವರು ಈಗ ಅಡಿಯಿಂದ ಮುಡಿವರೆಗೆ ಕೆಸರ ಮುದ್ರೆ ಹೊಡೆದುಕೊಂಡು ಶಿಖರ ಸೇರುವಾಗ ಸಾಕೋ ಸಾಕು. ಹೆಚ್ಚಿದ ಮಂಜು ಚಳಿಯ ಹೊಡೆತದಲ್ಲಿ (ಇಪ್ಪತ್ತಡಿ ಆಚೆಗೆ ಎಲ್ಲವೂ ಮಾಯ) ಎಲ್ಲರೂ ಚಡಪಡಿಸುತ್ತ, ಒಂದಷ್ಟು ಗ್ಲುಕೋಸ್, ನೀರು ಮಾತ್ರ ಸೇವಿಸಿ, ಜನಗಣಮನ ಹಾಡಿ, ಶಿಖರ ಬಿಟ್ಟೆವು. ಗಂಟೆ ಮೂರು ಮುವತ್ತೈದು.

ಮಾರ್ಗದರ್ಶಿಗಳು ಚಳಿಗಾಳಿಯಿಂದ ತಪ್ಪಿಸಿಕೊಳ್ಳಲು ಚುರುಕು ಹೆಜ್ಜೆ ಹಾಕುತ್ತಿದ್ದರು. ನಾವು ಮೂಕರಾಗಿ, ಬೆನ್ನಿನ ಭಾರಕ್ಕೆ ಮುಗ್ಗುರಿಸಿದವರಂತೆ ಹಿಂಬಾಲಿಸಿದೆವು. ಮಳೆ ನಿಂತಿತು, ಮಂಜು ಹರಿಯಿತು. ಹತ್ತುವಾಗ ಅಚ್ಯುತರಾಯರು ಆಗಾಗ ಹೇಳುತ್ತಿದ್ದ ಹಾಡು, ‘ಕರಡಿ ಬೆಟ್ಟಕ್ಕೆ ಹೋಯಿತು, ನೋಡಿತೇನನು? ಬೆಟ್ಟದ ಇನ್ನೊಂದು ಭಾಗ ಕರಡಿ ನೋಡಿತು’, ಈಗ ನಿಜವಾಗುತ್ತಿತ್ತು! ವಾತಾವರಣ ತಿಳಿಯಾದ್ದರಿಂದ ತುಸು ಹಾಯೆನಿಸಿದರೂ ನೀರು ಕುಡಿದು ವಜನ್ ಹೆಚ್ಚಿಸಿಕೊಂಡ ಹೊರೆ, ಒದ್ದೆ ಪ್ಯಾಂಟು ಉಜ್ಜಿ ಕೆಲವರಿಗೆ ಮೊಣಕಾಲುಗಳಲ್ಲೂ ಉರಿಗುಳ್ಳೆ ಎದ್ದು ಹೊಸದೇ ಹಿಂಸೆ. ಎಮ್ಮೆ ಜಾಡು ಹಿಂಬಾಲಿಸುತ್ತಾ ಸ್ವಲ್ಪ ಇಳಿಸಿದ ಸುಬ್ಬಯ್ಯನ್ ಇನ್ನೊಂದು ಗುಡ್ಡ ಏರತೊಡಗಿದ. ಈಗಾಗಲೇ ಸಾಕಷ್ಟು ಏರಿದ್ದವರಿಗೆ ಇನ್ನೂ ಏರಿಕೆ ಎಲ್ಲಿಗೆ ಎಂದು ಅಸಹಾಯಕತೆಯ ಪ್ರಶ್ನೆ ಮೂಡಿ ಸಾಯುವುದರೊಳಗೆ, ಅದೃಷ್ಟವಶಾತ್ ಮೇಯುತ್ತಿದ್ದ ದನದ ಹಿಂಡೂ ಮೇಯಿಸುತ್ತಿದ್ದ ಗೋಪಾಲಕರೂ ಸಿಕ್ಕರು. ಅವರಲ್ಲೊಬ್ಬ ಮುದಿಯ ನಮ್ಮ ವಿಚಾರಣೆ ನಡೆಸಿ, ಸುಬ್ಬಯ್ಯನ್ ಅಂದಾಜಿನ ದಿಕ್ಕು ಹಿಡಿದ ಹಳ್ಳಿಗೆ ಹತ್ತು ಹದಿನೈದು ಮೈಲು ಹೋಗಬೇಕು. ಬದಲಿಗೆ ಸಮೀಪದ ತಮ್ಮ ಹಳ್ಳಿಗಾದರೆ ಹೀಗೆ ಬನ್ನಿ ಎಂದು ಆಶಾದೀವಿಗೆ ಹಿಡಿದ. ನಾವು ಹಿಂಬಾಲಿಸಿದೆವು.

ಎಮ್ಮೆ ದನಗಳ ಜಾಡು ಸ್ಪಷ್ಟವಾಯಿತು. ಐದಾರು ಗಂಟೆಗಳ ಬಳಿಕ ನಾಡು ನೋಡಿಯೇವೇನೋ ಎಂದುಕೊಂಡಿದ್ದವರಿಗೆ ಬಲು ಬೇಗನೇ ದೊಡ್ಡ ಒಂದು ದನದ ದೊಡ್ಡಿ ದಾಟಿ ಹಳ್ಳಿ ದಾರಿ ಸೇರಿದ್ದು ಹೊಸ ಜೀವ ತಂದಿತು. ದಾರಿಯ ಎರಡೂ ಬದಿಗಳಲ್ಲಿ ನೀಲಗಿರಿ, ಸಿಲ್ವರ್ ಓಕ್ ಸಾಲು ವೃಕ್ಷಗಳ ಬೇಲಿ. ಆಚೆ ವಿಸ್ತಾರ ಚಾತೋಟ. ಮತ್ತೆ ಅನತಿ ದೂರದಲ್ಲಿ ಡಾಮರು ದಾರಿ, ಹಳ್ಳಿಗಾಡಿನ ಬಸ್, ಹತ್ತಿಳಿಯುವ ಮಂದಿ. ಆ ಜಾಗದ ಅಂದರೆ ಗ್ಲೆನ್ ಮೋರ್ಗೆನ್ ಎಸ್ಟೇಟಿನ ಪುಟ್ಟ ಬಸ್ಸು ತಂಗುದಾಣ ನಮಗೆ ಆ ಹೊತ್ತಿಗೆ ತತ್ಕಾಲೀನ ನೆಲೆಯಾಗಿ ಒದಗಿತು. ಪಕ್ಕದಲ್ಲೇ ಇದ್ದ ಸಾರ್ವಜನಿಕ ನಲ್ಲಿಯಿಂದ ನೀರು ಹಿಡಿದು ನಮ್ಮ ಪಾಕಶಾಸ್ತ್ರಿಗಳು ಹಸಿವೆ ನೀಗಲು ವ್ರತ ಹಿಡಿದರು. ಉಳಿದ ನಾವು ಒಂದಷ್ಟು ಒಣ ಕೋಲೂ ಮುಳ್ಳೂ ರಾಶಿ ಹಾಕಿ ಬೆಂಕಿ ಎಬ್ಬಿಸಿ, ಬಟ್ಟೆ ಆರಿಸುವ, ಮೈ ಕಾಯಿಸುವ ಕೆಲಸಕ್ಕಿಳಿದೆವು.

ಎಸ್ಟೇಟ್ ನೋಡಿದ್ದೇ ಮಾರ್ಗದರ್ಶಿ ರಾಜೂವಿನ ಚಹರೆ ಬದಲಾಗಿತ್ತು. ಅಲ್ಲಿ ಅವನ ಚಿಕ್ಕಪ್ಪ ಕೂಲಿಕಾರರ ಮೇಸ್ತ್ರಿ. ಇವನು ಅವನಲ್ಲಿಗೆ ಹೋಗಿ, ಉಪಚಾರ ಪಡೆದು (ತೀರ್ಥ ಸೇವನೆ ಮಾಡಿ), ನಮ್ಮ ಸಹಾಯಕ್ಕೆ ಆತನನ್ನು ಕರೆದುಕೊಂಡೇ ಬಂದ. ಅಷ್ಟರೊಳಗೆ ನಾವು ಅಲ್ಲಿ ಇಲ್ಲಿ ವಿಚಾರಿಸಿ ಮಸಣಿಗುಡಿಗೆ ಡಾಮರು ದಾರಿ ಅನುಸರಿಸುವುದನ್ನು ಗಟ್ಟಿ ಮಾಡಿಕೊಂಡಿದ್ದೆವು. ಉಪ್ಪಿಟ್ಟು, (ಜಾಹೀರಾತುಗಳು ಹೇಳುವಂತೆ ಶಕ್ತಿಪೇಯ) ಓವೆಲ್ಟೀನ್ ಹೊಟ್ಟೆಗೆ ಹಾಕಿ ಸಂಜೆ ಆರೂಕಾಲಕ್ಕೆ “ಚಲೋ ಮಸಣಿಗುಡಿ” ಜೈಕಾರ ಹಾಕಿಯೇ ಬಿಟ್ಟೆವು. ಆದರೆ ವಾಸ್ತವ ಅಷ್ಟು ಹಗುರವಿರಲಿಲ್ಲ. ಐದೇ ಮಿನಿಟಿನ ಅಂತರದಲ್ಲಿ, ನಾನು ಏರುದಾರಿಯಲ್ಲಿ ವಿವರಿಸಿದ್ದ ಶಿಂಗಾರಂ ಪವರ್ ಹೌಸಿನ ಬೆಟ್ಟದ ಮೇಲಿನ ಜಲಮೂಲ ವ್ಯವಸ್ಥೆಗಳು ಕಾಣ ಸಿಕ್ಕವು. ಅಲ್ಲಿನ ಇಂಜಿನಿಯರ್ ಕೊಟ್ಟ ಮಾಹಿತಿ ನಮಗೆ ತೀರಾ ಪ್ರತಿಕೂಲವಾಗಿತ್ತು. ಡಾಮರ್ ದಾರಿಯಲ್ಲೇ ಹೋಗುವುದಿದ್ದರೆ ಮಸಣಿಗುಡಿ ನಲ್ವತ್ತು ಮೈಲು ದೂರ, ಒಳದಾರಿ ಅನುಸರಿಸಿದರೂ ಹದಿನೆಂಟು ಮೈಲು ದಟ್ಟ ಕಾಡು, ಅದೂ ಗಾಢಾಂಧಕಾರ, ವನ್ಯಮೃಗಗಳ ರಾಜ್ಯದಲ್ಲಿ ಸುಲಭ ಸಾಧ್ಯವಲ್ಲ. ಅಲ್ಲಿಂದ ತಪ್ಪಲಿನ ಪವರ್ ಹೌಸ್‌ವರೆಗೆ ಕೇಬಲ್ ಕಾರುಗಳೇನೋ (ಗೌರೀಶಂಕರದಿಂದ ಪಾತಾಳಗಂಗೆಗೆ, ಉಕ್ಕಿನ ಮಿಣಿ ಕಟ್ಟಿ, ನಿಯತಾಂತರದಲ್ಲಿ ಜೋಲು ತೊಟ್ಟಿಲುಗಳ ಸರಣಿ ಇಟ್ಟು, ಸ್ಥಾವರ ಯಂತ್ರದಿಂದ ಚಲಾಯಿಸುವ ವ್ಯವಸ್ಥೆ) ಇದ್ದವಾದರೂ ಬಹಳ ನಿಧಾನಗತಿಯವು. ನಮ್ಮ ತಂಡಕ್ಕೆ ಕನಿಷ್ಠ ಐದು ತೊಟ್ಟಿಲು ಬೇಕಾಗುತ್ತಿತ್ತು. ಅವನ್ನು ಗಂಟೆಗಟ್ಟಳೆ, ಅಕಾಲದಲ್ಲಿ ಚಾಲನೆಗೆ ತೊಡಗಿಸುವುದು, ಅದೂ ಇಲಾಖೆಗೆ ಏನೇನೂ ಸಂಬಂಧವಿಲ್ಲದ ಕೆಲಸಕ್ಕೆ ತೊಡಗಿಸುವುದು, ಅವರ ಅಧಿಕಾರ ವ್ಯಾಪ್ತಿಯಿಂದ ತೀರಾ ಹೊರಗಿತ್ತು. ಅಧಿಕಾರದ ಮಿತಿಯಲ್ಲಿ ಆತ ಕಂಪೆನಿಯ ಅತಿಥಿ ಗೃಹ ಕೊಡಬಹುದಿತ್ತು. ಆದರೆ ನಮ್ಮ ದುರದೃಷ್ಟಕ್ಕೆ ಅಂದು ಅದೂ ಭರ್ತಿಯಾಗಿತ್ತು.

ಗಂಟೆ ಏಳಾಗಿತ್ತು. ಉದಕಮಂಡಲದ ಚಳಿ ಮಸಣಿಗುಡಿಯ ಚಳಿಯಂತೆ ರಿಯಾಯ್ತಿ ಮಾಲಲ್ಲ. ಮಸಣಿಗುಡಿಯನ್ನು ಮರೆತು ಗ್ಲೆನ್ಮೋರ್ಗೆನ್ ಎಸ್ಟೇಟಿನ ದಾರಿಯನ್ನು ಮತ್ತೆ ತುಳಿದೆವು. ಬಸ್ ನಿಲ್ದಾಣದಿಂದ ಮುಂದೆ ಮಣ್ಣು ದಾರಿಗಿಳಿದು, ಕಲ್ಲುಗಳನ್ನು ಢೋಂಕೆಂದೆಡವುತ್ತ, ಕೆಸರಿನಲ್ಲಿ ತಚಪಚಕ್ಕಾಯಿಸಿ, ಹೊಂಡಗಳಲ್ಲಿ ಕುಸಿದೇಳುತ್ತ ಎಂಟು ಗಂಟೆಯ ಸುಮಾರಿಗೆ ಕೂಲಿಮಕ್ಕಳ ಶಾಲಾ ಜಗುಲಿ ಸೇರಿದೆವು. ರಾಜೂಚಿಕ್ಕಪ್ಪ (ರಾಜು ಕುಡಿತದ ತುರೀಯ ಸ್ಥಿತಿಯಲ್ಲಿ ಹೇಳುವಂತೆ ಸರ್ವಶಕ್ತ) ನಮಗೆ ಆ ಒಂದೇ ಕೋಣೆಯ ಶಾಲೆಯ ಬಾಗಿಲೂ ತೆರೆಸಿ ‘ಬೆಚ್ಚನೆ ಗೂಡು’ ಒದಗಿಸಿದ. ಶಾಲೆಯೆಂದೇ ಅವರು ಹೇಳಿ ಕೊಟ್ಟದ್ದರಿಂದ ಅದರೊಳಗಿನ ಪಳೆಯುಳಿಕೆಗಳನ್ನು ನಾವು ವಿದ್ಯಾ ಇಲಾಖೆಯೊಡನೆ ಸಮೀಕರಿಸ ಬೇಕಾಯ್ತು. ಇಲ್ಲವಾದರೆ ಒಂದೇ ಶಬ್ದದಲ್ಲಿ ಹೇಳುವುದಿದ್ದರೆ ‘ಅಪ್ಪಟದೊಡ್ಡಿ’. ಆದರೂ ಜಗುಲಿಯ ಬಲಭಾಗವನ್ನು ಅಡುಗೆಗೂ ಎಡ ಭಾಗದಲ್ಲೊಂದು ಬೆಂಕಿ ಎಬ್ಬಿಸಿ, ಚಳಿಕಾಯಿಸಲೂ ನಿಗದಿಸಿದೆವು. ಇದ್ದ ಏಕೈಕ ಕೊಠಡಿ ಎಲ್ಲರ ಮಲಗುಕೋಣೆ. ಕೂಲಿಕಾರರ ಮನೆಗಳಿಗೆ ರಾತ್ರಿಗಳಿಗೆ ಬೆಳಕು ಕೊಡುವ ಯೋಚನೆಯೇ ಬಾರದ ಆ ದಿನಗಳಲ್ಲಿ, ಅವರ ಮಕ್ಕಳ ನಿರುಪಯುಕ್ತ ಶಾಲೆಗೆ ವಿದ್ಯುಚ್ಛಕ್ತಿ ಎಲ್ಲಿಂದ ಬರಬೇಕು. ನೀರು ‘ಚಿಕ್ಕಪ್ಪ’ನ ಸಹಾಯಕ ಒದಗಿಸಿದ, ಉಳಿದ ಅವಶ್ಯಕತೆಗಳಿಗೆ ತೋಟದ ಹರಹು, ದಟ್ಟ ಕತ್ತಲು ಅಗತ್ಯಮೀರಿ ಅನುಕೂಲವಿತ್ತು!

ಹಿಂದೊಬ್ಬ ಆಲದ ಬೇರು, ಹುಲಿಯುಗುರು ಮತ್ತು ಹಂದಿಬಾಲ ಸೇರಿಸಿ ಕುಟ್ಟಿ, ಕಾಯಿಸಿ, ಭಟ್ಟಿಯಿಳಿಸಿ ಕುಡಿದನಂತೆ. ಇದರಿಂದ ನೊಂದ ಮರದ ಮೇಲಿನ ಗಿಳಿ, ಹುಲಿ ಮತ್ತು ಹಂದಿಗಳು ಕುಡಿಯುವವರಿಗೇ ಶಾಪವಿಟ್ಟವಂತೆ. ಅದಕ್ಕೆ ಸರಿಯಾಗಿ ರಾಜು ಮೊದಲು ಗಿಳಿಯಂತೆ ಗಳಹಿ, ತಂಡ ಆತನ ಚಿಕ್ಕಪ್ಪನ ಆಶ್ರಯಕ್ಕೆ ಬಂದ ಮೇಲಂತೂ ಆತಿಥ್ಯ ಒದಗಿಸುವಲ್ಲಿ ಹುಲಿಯಂತೆ ಆಕ್ರಮಣಕಾರಿಯಾಗಿ, ಈಗ ಕಂಬಳಿಕುಪ್ಪೆಯಲ್ಲಿ ಮುದ್ದೆಯಾಗಿ ಹಂದಿಯಂತೆ ಶಿಬಿರಾಗ್ನಿಯ ಒಂದು ಮೂಲೆಯಲ್ಲಿ ಬಿದ್ದುಕೊಂಡ. ಉಳಿದಿಬ್ಬರು ಮಾರ್ಗದರ್ಶಿಗಳೂ ಅಲ್ಲೇ ಹುಗಿದುಕೊಂಡರು. ಹೊರಗೆ ದಟ್ಟ ಮಂಜು ಬೀಳುತ್ತಿತ್ತು, ಪಾಕಶಪ್ತರು ನಿಷ್ಠೆಯಿಂದ ಕೆಲಸ ನಡೆಸಿದ್ದರು. ಉಳಿದವರು ಅವರವರ ಚೀಲ ಬಗಿದು, ನೀರು ಹಿಂಡಿ, ಕನಿಷ್ಠ ಹಾಸು ಹೊದಿಕೆಗಳನ್ನಾದರೂ ಬೆಂಕಿಗೆ ಒಡ್ಡಿ ಒಣಗಿಸಿಕೊಳ್ಳುವ, ನಿದ್ರೆ ಕದಿಯುವ ಕೆಲಸ ನಡೆಸಿದ್ದೆವು. ಹನ್ನೊಂದು ಗಂಟೆಗೆ ಊಟದ ಹೆಸರಿನಲ್ಲಿ ಏನೋ ಖಿಚಡಿ ಹೊಟ್ಟೆಗೆ ಹಾಕಿ, ಮಲಗು ಕೋಣೆ ಸೇರಿದೆವು. ಬೆಂಕಿಯ ಬಳಿ ಕಾದು ಕೆಂಪಾದ ಭಾವ ಮೂಡಿಸುತ್ತಿದ್ದ ಮೈ, ಬಟ್ಟೆಬರೆ ಒಳಗೆ ಹೋದದ್ದೇ ಒದ್ದೆ, ಗದಗುಡಿಸುತ್ತಿತ್ತು. ಅಡಿಯಿಂದ ಮುಡಿಗೆ ಚಳಿ ಏರುವಂತೆ [ಪೃಷ್ಟ ಶೀತಸ್ಯ ಪ್ರಾಣ ನಾಶಂ!] ಕಾಲುಕೋಟಗುಡುತ್ತಿತ್ತು. ಒಂದಿಬ್ಬರು ಹುಡುಗಿಯರಂತೂ ವಿಪರೀತ ಚಳಿಗೆ ಕೈಕಾಲು ಸೆಟೆದು ಒಮ್ಮೆಗೆ ‘ಪರವಶರಾಗಿ’ ಗಾಬರಿಹುಟ್ಟಿಸಿದರು. ಅವರನ್ನು ಬೆಂಕಿಯ ಬಳಿ ಒಯ್ದು, ಪಾದಕ್ಕೆ ಬಿಸಿಬೂದಿ ಉಜ್ಜಿ, ಬಿಸಿಚಾ ಕುಡಿಸಿ ಸರಿ ಮಾಡಿದೆವೆನ್ನಿ. ಬಹುತೇಕ ಮಂದಿಗೆ ನಿದ್ರೆಗೆ ಪ್ರಯತ್ನಿಸುವ ನರಕಕ್ಕಿಂತ ಬೆಂಕಿಯ ಬಳಿಯ ಜಾಗರಣೆಯೇ ಪ್ರಿಯವಾಯ್ತು. ಒಂದೇ ಲಾಭವೆಂದರೆ, ಹಾಗೆ ಕುಳಿತವರು ಮರುದಿನದ ಬೆಳಿಗ್ಗೆ, ಮಧ್ಯಾಹ್ನಗಳಿಗೆ ಬೇಕಾದ ಪೂರಿ ಪಲ್ಯಗಳನ್ನೆಲ್ಲ ತಯಾರಿಸಿ ಮುಗಿಸಿದರು.

ಹಾಲಿಲ್ಲದ ಕರಿಕಾಫಿ ಎಲ್ಲರಿಗು ಶುಭ ಪ್ರಾತಃಕಾಲ ಕೋರಿತು. ನೀರುತರಲೆಂದು ಹೋದ ಗಿರೀಶ ಜಯರಾಮರು ಮರಗಟ್ಟಿದ ಬರಿಗೈಯಲ್ಲಿ ‘ಬೆಂಕಿಪವಾಡ’ ಮಾಡುವುದನ್ನು ಕಂಡಮೇಲೆ ನಾವೆಲ್ಲ “ನಿದ್ರೆಯೇ ಮಾಡದ ಮೇಲೆ ಮುಖ ತೊಳೆಯುವುದು ಯಾಕೆಂದು” ಮಾತಿನಲ್ಲೇ ಶುಚಿಯಾದೆವು. ಪೂರಿಪಲ್ಯ ಹೊಟ್ಟೆಗೆ ಹಾಕಿ, ಗಂಟು ಮೂಟೆ ಕಟ್ಟಿದೆವು. ನಾವು ಉಳಿಸಿದ ಕಸವೆಲ್ಲ ಜಗುಲಿಯ ಬೆಂಕಿಗೆ, ಬೆಂಕಿ ತೊರೆನೀರಿಗೆ, ಗಂಟುಗದಡಿಗಳು ಬೆನ್ನಿಗೆ, ಕಾಲು ಮರಳಿ ದಾರಿಗೆ, ಪಯಣ ಮುಂದಕೆ, ನೆನಪು ಹಿಂದಕೆ, ಗಂಟೆಯ ನೆಂಟ ಎಂಟಾಗಿ ಹದಿನಾಲ್ಕರಿಂದ ಹದಿನೈದಕ್ಕೆ.

ಜಾರುವ ದಾರಿಯಲ್ಲಿ

ಗ್ಲೆನ್ ಮೋರ್ಗೆನ್ ಹಳ್ಳಿಯಿಂದ ತುಸು ದೂರದಲ್ಲಿ ದಾರಿ ಬಿಟ್ಟು ತರಕಾರಿ ತೋಟಗಳ ನಡುವಣ ಕಾಲ್ದಾರಿ ಅನುಸರಿಸಿದೆವು. ಎಲ್ಲೆಲ್ಲೂ ಮೊಟ್ಟೆಗೋಸು (ಎಲೆಕೋಸು ಅಥವಾ ಕ್ಯಾಬೇಜ್). ಸಣ್ಣದಾಗಿ ಕೋಸು ಹರಹಿನ ಗುಡ್ಡವೇರುತ್ತಾ ಇಳಿಯುತ್ತಾ ಸಾಗಿದ್ದ ಕಾಲ್ದಾರಿ ನಮ್ಮ ಬೂಟುಗಾಲಿಗೆ ಭಾರೀ ಜಾರುಗುಪ್ಪೆ. ಮುಂದೆ ನೀಲಗಿರಿ ತೋಪು, ಮತ್ತಷ್ಟು ಜಾರುಬಂಡಿ. ಎಲ್ಲರೂ ಎಲ್ಲರಿಗೂ ಜಾಗ್ರತೆ ಹೇಳುತ್ತಾ ನಾನೂ ಬಿದ್ದಾಗ ಕೈಯಲ್ಲಿದ್ದ ಪೆಟ್ರೋಮ್ಯಾಕ್ಸಿನ ಐದನೆಯ ಅಂದರೆ ಕೊನೆಯ ಕನ್ನಡಿ ಮತ್ತು ಮ್ಯಾಂಟಲಿಗೂ ಅವಕಾಶ ಒದಗಿಸಿದ್ದೆ [ಬಳಸುವ ಅದೃಷ್ಟ ಅಂದಿನ ರಾತ್ರಿಗಿತ್ತೇ? – ಪ್ರಶ್ನೆ ಕಾಯ್ದಿರಿಸಿಕೊಳ್ಳೀ]. ಮುಂದೆ ಚಾತೋಟ [ನೋಟಕ್ಕೆ ಮಾತ್ರ; ಕುಡಿಯಲು ಸಿಗಬೇಕು ಚಾಲೋಟ]. ಭಾರೀ ಕುರಿ ಬೆನ್ನ ತುಪ್ಪುಳದ ನಡುವೆ ಹೇನು ಹೆಕ್ಕುವಂತೆ ಚಿಗುರು ಚಿವುಟುವ ಹೆಂಗಳೆಯರು. ಬೆಟ್ಟದಂಚಿಗೆ ತಲೆಕೆಳಗಾಗಿ ತೋರಣ ಕಟ್ಟಿದಂತೆ ಪೀತದಾರು ಮರಗಳು (Pine trees). ಎಲ್ಲೋ ಬೆಟ್ಟದ ತೊರೆಗೆ ಹುಚ್ಚಿನ ಆರ್ಭಟೆ. ಮತ್ತೆ ಸುದೂರದ ಕಣಿವೆಗಳು ಮಂಜಿನಲ್ಲಿ ಮೀಯುತ್ತಿದ್ದರೆ, ಮೀರಿ ನಿಂತ ಬೆಟ್ಟ ಶಿಖರಗಳೆಲ್ಲಾ ರೆಕ್ಕೆಗಟ್ಟಿ ಹಾರುತ್ತಿದ್ದವು! ಹಿಂದಿನೆರಡು ದಿನ ಹೀರಿದ ನೀರನ್ನೆಲ್ಲಾ ಹಿತ ಬಿಸಿಲಿನಲ್ಲಿ ಆರಿಸುತ್ತಾ, ಟೀ ಚಿಗುರು ಚಪ್ಪರಿಸಿ, ಕಾಡುಹೂ ಕಿತ್ತೆಸೆದು, ಅವಿರತ ನಡೆನಡೆದು ಹನ್ನೊಂದುವರೆಯ ಸುಮಾರಿಗೆ ಹೊಸತೊಂದು ಹಳ್ಳಿಯಲ್ಲಿ ವಿಶ್ರಾಂತಿಗೆ ನಿಂತೆವು.

ಪಡಗಾರು ಕೋತಿಗೇರಿ ಹಳ್ಳಿ, ಶೋಲೂರು ಗ್ರಾಮ, ಉದಕಮಂಡಲ, ತಮಿಳ್ನಾಡು, ಇದು ಅಲ್ಲಿನ ಅಂಚೆ ವಿಳಾಸ. [ಹೀಗೆ ಪ್ರಾರಂಭಗೊಂಡು ಸುಮಾರು ಐದು ಪುಟಗಳುದ್ದಕ್ಕೆ ‘ನಾಗರಿಕತೆಯ ಹೊಸ್ತಿಲಲ್ಲಿ’ ಎಂಬ ಸ್ವತಂತ್ರ ಅಧ್ಯಾಯವನ್ನೇ ಪುಸ್ತಕದಲ್ಲಿ ಬರೆದಿದ್ದೇನೆ. ಆ ಪ್ರಾಯದ ಉತ್ಸಾಹವನ್ನು ಈ ಪ್ರಾಯದ ಅನುಭವದಲ್ಲಿ ಕೆಲವೇ ವಾಕ್ಯಗಳಿಗೆ ಸೀಮಿತಗೊಳಿಸಿದ್ದೇನೆ. ಅದೂ ಭೈರಿಗೆಯಾದರೆ ಕ್ಷಮಿಸಿ] ನಲವತ್ತೈವತ್ತು ಒತ್ತೊತ್ತಾಗಿದ್ದ ಮಣ್ಣಿನ ಮನೆಗಳು. ಹೆಚ್ಚಿನವಕ್ಕೆ ಹುಲ್ಲಿನ ತೊಪ್ಪಿ, ಕೆಲವಕ್ಕೆ ಹಂಚಿನ ಹ್ಯಾಟ್. ಮನೆಗಳ ಒರಟು ಎದುರಿನ ಬಾಗಿಲು ತುಲನಾತ್ಮಕವಾಗಿ ದೊಡ್ಡದು. ಇಲ್ಲಿ ಹಣೆಗಟ್ಟಿಸಿಕೊಂಡರೆ ಒಳಗಿನವು ಎದೆಗೇ ತಂದೀತು ಕುತ್ತ. ಒಳಗೆ ಗಾಳಿ ಬೆಳಕಿಗೇ ಪ್ರವೇಶ ಕೊಡದ ಜನ, ಕುತೂಹಲದ ನಮ್ಮನ್ನು ಬಿಟ್ಟಾರೇ. ಹಳ್ಳಿಗೇ ಒಂದು ವಿಸ್ತಾರ ಅಂಗಳ, ಅಂಚುಗಳಲ್ಲಿ ಕಟ್ಟಿದ್ದ ಎರಡಡಿ ಎತ್ತರದ ಜಗುಲಿ ಎಲ್ಲ ಸೆಗಣಿಸಾರಿಸಿ ಚೊಕ್ಕ ಇಟ್ಟುಕೊಂಡವು ನಮಗೆ ಹರಡಿಕೊಳ್ಳಲು ಧಾರಾಳವಾಯ್ತು. ಪೆಪ್ಪರ್ ಮಿಂಟ್, ಪಾನಕ, ಡಬ್ಬಿ ಹಣ್ಣು ಎಲ್ಲ ನಾವು ಹಂಚಿಕೊಳ್ಳುತ್ತಿದ್ದಂತೆ ಜಾವೀದ್ ‘ಸಾರ್ವಜನಿಕ ಸಂಪರ್ಕಾಧಿಕಾರಿ’ ಕೆಲಸ ಮಾಡಿದ್ದ! ಹಳ್ಳಿಯ ಮುಖಂಡ, ಓರ್ವ ಪೂಜಾರಿಯನ್ನು ಮಾತಾಡಿಸಿ ನಮಗೊಂದು ಹಳ್ಳಿಗರ ಸಾಂಸ್ಕೃತಿಕ ಪರಿಚಯದ ವ್ಯವಸ್ಥೆಯಾಯ್ತು. ಶುದ್ಧ ಸ್ನೇಹಪರ ಹಳ್ಳಿಗರು (ಕೂಲಿಕಾರರು) ಎಲ್ಲೆಲ್ಲಿನ ಕೆಲಸ ಬಿಟ್ಟು ಹರಿದು ಬಂದರು. ಅರಕೋಲು, ತಂಬಟೆ, ಕೊಂಬು ಶ್ರುತಿಲಯಬದ್ಧ ನಾದ ಹೊರಡಿಸಿದರು. ಬಾಲರಿಂದ ವೃದ್ಧೆಯರವರೆಗೆ ಸಾಂಪ್ರದಾಯಿಕ ಅಲಂಕಾರ ಮಾಡಿಕೊಂಡು ಕುಣಿದೇ ಕುಣಿದರು. ಐದು ಹತ್ತು ಮಿನಿಟಿನ ವಿಶ್ರಾಂತಿಗೆ ಕುಳಿತವರಿಗೆ ಒಂದು ಗಂಟೆಯೇ ಕಳೆದುಹೋದ ಅರಿವು ಮೂಡಿದಾಗ, ಗಡಬಡಿಸಿ ಚಾರಣ ಮುಂದುವರಿಸಿದೆವು.

ಚಾ ತೋಟದಲ್ಲಿ ಸ್ವಲ್ಪ ಹಾಯ್ದು ವಿದ್ಯುತ್ ಇಲಾಖೆಯ ಸುತ್ತು ಬಳಸಿನ ದಾರಿ ವಾಹನ ಮಾರ್ಗವನ್ನು ಪುನಃ ಸೇರಿದೆವು. ತೋಟ ಹಿಂಜರಿದು ಕಾಡು ಆವರಿಸುತ್ತಿದ್ದಂತೆ ಮಾರ್ಗ ತೀವ್ರ ಇಳುಕಲಿನ ಜಾಡು ಹಿಡಿಯಿತು. ದಪ್ಪ ದಪ್ಪ ಕಾಡುಕಲ್ಲುಗಳನ್ನೇ ಒತ್ತೊತ್ತಾಗಿ ನಿಗಿದು ದಾರಿ ಮಾಡಿದ್ದರು. ಮಹಡಿ ಕಟ್ಟಡಗಳಿಗೆ ಹಳಗಾಲದಲ್ಲಿರುತ್ತಿದ್ದ ಸುರುಳೇಣಿಯಂತೇ ದಾರಿ ಇಳಿದಿತ್ತು. ಅಸಂಖ್ಯ ಹಿಮ್ಮುರಿ ತಿರುವುಗಳು. ಕಾಡ ತೊರೆಗಳು ಅಲ್ಲಲ್ಲಿ ಬದಿಯ ಚರಂಡಿಯನ್ನು ಮೀರಿಯೋ ಪುಟ್ಟ ಅಡ್ಡಮೋರಿಗಳನ್ನು ನಿಗಿದು ನೆಗೆದೋ ದಾರಿಯುದ್ದಕ್ಕೆ ಹರಿದು ಬರುತ್ತಿತ್ತು. ಹಾವಸೆಗಟ್ಟಿದ ಅಲ್ಲೆಲ್ಲ ನಮಗೆ ನಡಿಗೆಯೇ ಕಷ್ಟವಾಗಿದ್ದಾಗ ಇಲ್ಲಿ ಇನ್ನೆಂಥಾ ವಾಹನ ಓಡಿಸುತ್ತಾರೋ ಎಂದು ಆಶ್ಚರ್ಯ ಮಾತ್ರ ಉಳಿಯಿತು. ಸುಮಾರು ಅರುವತ್ತೆಪ್ಪತ್ತು ಹಿಮ್ಮುರಿ ತಿರುವಗಳ ಮುಕ್ತಾಯಕ್ಕೆ ಒಂದು ವಿಸ್ತಾರ ಕಣಿವೆಯ ತಳ ತಲಪಿದ್ದೆವು.

ಕಣಿವೆಯಲ್ಲಿ “ಓ ಬಂದಿರೇ” ಎಂದು ಇಪ್ಪತ್ತಡಿ ಬೀಳನ್ನು ಲೆಕ್ಕಿಸದೆ ಎದುರುಗೊಂಡ ಪರ್ವತಕುವರಿ ಉಟ್ಟಿದ್ದಳು ನೊರೆಗುಳ್ಳೆಗಳ ಸೀರೆ, ತೊಟ್ಟಿದ್ದಳು ಬನಹಸುರ ಕುಪ್ಪಸ. ಅವಳ ಸಡಗರ ದಾರಿ ದಾಟುವಲ್ಲಿಗೆ ಗಂಭೀರವಾಗಿ, ಮುಂದೆ ನಾಚಿಕೆಯಾಗಿ ಬದಲಿ, ಬಂಡೆಗುಂಡುಗಳ ನಡುವೆ ನುಸಿದು ಮರೆಯಾಗಿಸಿತ್ತು. ನಿರಂತರ ಹೊರೆಹೊತ್ತ ನಡಿಗೆ, ಆಗೀಗ ಕೆಲವರಿಗೆ ಬಳಲಿಕೆಯಿಂದ ಸೆಟೆಯುತ್ತಿದ್ದ ಕಾಲು (ಮೀನಖಂಡ) ನೋಡಿ, ಉಪಚರಿಸಿದ ಅನುಭವದಲ್ಲಿ ಹದಿನೈದಿಪ್ಪತ್ತಡಿ ಅಗಲದ ತೊಡೆಮಟ್ಟದ ಆ ಝರಿ ದಾಟಲು ರಕ್ಷಣಾ ಹಗ್ಗ ಬಳಸಿದೆವು. ಮೇಲೆಲ್ಲೂ ಅಂದು ಮಳೆಯಿರಲಿಲ್ಲವಾಗಿ ತೊರೆಯ ಸೆಳವು ಸಾಮಾನ್ಯವಿತ್ತು. ಆಯ್ತು, ಮುಗಿಯಿತು ಎಂದು ಮುಂದಿನ ಹೆಜ್ಜೆ ಎತ್ತುವಾಗ ಹತ್ತೆಂಟು ಹಿಮ್ಮುರಿ ತಿರುವುಗಳಾಚೆಯೇ ಈ ಝರಿಯ ಸದ್ದಿಗೆ ಹೆದರಿ ಹಿಂದುಳಿದ ಟೈಗರ್, ಮೂರು ದಿನಗಳ ನಮ್ಮ ನೆಚ್ಚಿನ ನಾಯಿ, ಊಳಿಟ್ಟು ಕರೆದದ್ದು ಕೇಳಿತು! ಹತ್ತುವ ದಾರಿಯಲ್ಲಿ ಸಿಕ್ಕ ಬೂದಿಪರೆ ಹಳ್ಳದ ಬಳಿ ಟೈಗರನ್ನು ಎತ್ತಿ ದಾಟಿಸಿದ್ದ ಮಾರ್ಗದರ್ಶಿಗಳಿಗೆ ಇಲ್ಲಿ ಉತ್ಸಾಹ ಉಳಿದಿರಲಿಲ್ಲ. ನರೇಶ್, ಶ್ರೀನಿವಾಸರ ಪ್ರಯತ್ನಗಳು ಫಲಿಸಲಿಲ್ಲ. ಅನುಕೂಲ ನಾಯಿಶಾಸ್ತ್ರ ನೆನಪಿಗೆ ಬಂತು. ನಾಯಿಗಳು ಹುಟ್ಟಾ ಈಜುಗಾರರು. ನಾವು ದೂರ ಹೋದಮೇಲೆ ಅದು ಭಯ ಹತ್ತಿಕ್ಕಿ ಬಂದೇ ಬರುತ್ತದೆ. ನಾಯಿ ಮೇಲಣ ಪ್ರೀತಿ, ಮುಂದಿನ ದಾರಿಯ ಭೀತಿ ತೂಗಿ ನಿರ್ಯೋಚನೆಯಿಂದ ಮುಂದುವರಿದೆವು. [ಇಲ್ಲೂ ಟೈಗರ‍್ಗೆ ವಿದಾಯ ಎಂಬ ಶೀರ್ಷಿಕೆಯಲ್ಲಿ ಅಂದು ಎರಡು ಪುಟ ಅತ್ತಿದ್ದೇನೆ.]

ಅದುವರೆಗೆ ಕಾಲು ಬೆರಳುಗಳಲ್ಲೆದ್ದ ನೀರ ಗುಳ್ಳೆಗಳು, ಬಳಲಿಕೆ ಮರೆತರೆ ಬಟ್ಟೇ ಬೂಟುಗಳು ಒಣಗಿ, ಹವೆ ಹಿತವಾಗಿ, ಮುಖ್ಯ ನಡಿಗೆ ಇಳಿಮುಖವಾಗಿದ್ದದ್ದು ಸುಧಾರಿಸಿಹೋಗಿತ್ತು. ಆದರೀಗ ಮತ್ತೆ ಬೂಟುಗಳೊಳಗೆ ನೀರು, ಪ್ಯಾಂಟು ಚಂಡಿ ಸಾಲದ್ದಕ್ಕೆ ಎದುರುಗುಡ್ಡೆ ಏರು. ಮೊಣಕಾಲಿಗೆ ಕೈ, ಉಚ್ವಾಸಕ್ಕೊಂದು ಹೆಜ್ಜೆ, ನಿಶ್ವಾಸಕ್ಕೊಂದು ಒಜ್ಜೆ! ಅದೃಷ್ಟಕ್ಕೆ ದಾರಿ ಓರೆಯಲ್ಲಿ ಸಾಗಿ ಮತ್ತೆ ಇನ್ನೊಂದೇ ಕಣಿವೆಯತ್ತ ಇಳಿಸಿತು. ಸ್ವಲ್ಪ ರಿಯಾಯ್ತಿಯ ಈ ದಾರಿಯಲ್ಲಿ ಕಾಡನೆಲ್ಲಿ ಧಾರಾಳ ಸಿಕ್ಕಿ, ನಮ್ಮ ಜಠರಾಗ್ನಿ ತಣ್ಪೆರೆಯಿತು. ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಮತ್ತೆ ಕಾಡಾನೆಗಳ ವಲಯ, ಅಂದರೆ ಬಿದಿರಕಾಡು. ಮುಂದೆ ಗಂಧದ ಕಾಡು, ಹೊಳೆ, ಸೂಜಿ ಕಾರ್ಖಾನೆ ಮಸಣಿಗುಡಿ ಸಾಲಿನಲ್ಲಿ ಬಂದೇ ಬಂತು. ಮತ್ತೆ ಕತ್ತಲು ಮುಸುಕುವ ಮುನ್ನ ಊರು ಸೇರಿದ್ದೆವು. ಆದರೆ ನೆನಪಿರಲಿ, ಇದು ಮಸಣಿಗುಡಿ!

[ಕಥಾ ಸಾಹಿತ್ಯದ ಶೈಲಿಯಲ್ಲಾದರೆ ನಾವು ಗ್ಲೆನ್ ಮೋರ್ಗೆನ್ ತಲಪಿದಾಗಲೇ ನನ್ನ ಕಥನ ಮುಗಿಯಬೇಕಿತ್ತು. ಆದರಿಲ್ಲಿ ಮತ್ತೆ ರಾತ್ರಿ ಎಂಟಕ್ಕೆ ಸಂಜೆಯುಣಿಸು, ಹನ್ನೊಂದಕ್ಕೆ ರಾತ್ರಿಯೂಟ. ಮತ್ತೊಂದೇ ಮಳೆ ಕಾಡಬಹುದಾದ ರಾತ್ರಿ ತಪ್ಪಿಸಲು ಇಲಾಖೆಯ ಜಗುಲಿ ಸೇರಿದರೂ ಬಿಡದ ಚಳಿ, ಇಲ್ಲದ ಬಿಸುಪಿನ ಬಟ್ಟೆಬರಿ ಹೈರಾಣಗೊಳಿಸಿತ್ತು. ಹಳ್ಳಿಮೂಲೆಯಾದರೇನು ಸತಾಯಿಸಿದ ಬಸ್ಸು, ತೆಪ್ಪಕಾಡಿನಲ್ಲಿ ಮತ್ತೆ ಕಟ್ಟೆಪೂಜೆ. ಮೈಸೂರಿನವರೆಗಾದರೂ ಸ್ವಸ್ಥಪಯಣ ಯೋಜಿಸಿ ಗುಡಲೂರಿಗೇ ಪ್ರತಿನಿಧಿಗಳನ್ನು ಕಳಿಸಿ, ಬಸ್ಸಿನಲ್ಲಿ ಸೀಟು ಹಿಡಿಸಿದರೂ ಮುಗಿಯದ ಸನ್ನಿವೇಶಗಳ ಫಿತೂರಿಯಲ್ಲಿ ತಂಡ ಚಲ್ಲಾಪಿಲ್ಲಿಯಾಗಿ (ಆಘಾತಗಳೇನೂ ಇಲ್ಲ) ಮೈಸೂರು ಸೇರಿತು ಎಂದಿತ್ಯಾದಿ ಮೂಲ ಕಥನ ಮತ್ತೆ ಹದಿನಾರು ಪುಟದುದ್ದಕ್ಕೆ ವಿಸ್ತರಿಸಿದೆ. ಅದರ ಉದ್ದಕ್ಕೆ ನಿಮ್ಮನ್ನೆಳೆಯದೆ ತಾತಾರ್ ಶಿಖರಾರೋಹಣಕ್ಕೆ ಮಂಗಳ ಹಾಡಲು ಅನುಮತಿಕೊಡಿ. ಆರು ಕಂತುಗಳ ಉದ್ದಕ್ಕೆ ನೀವು ಸಲ್ಲಿಸಿದ ಸೇವೆ “ದಕ್ಕಿತ್ತೋ ದಕ್ಕಿತ್ತು” ಎನ್ನುವಂತೆ ಪ್ರತಿಕ್ರಿಯಾ ಅಂಕಣವನ್ನು ಶ್ರೀಮಂತಗೊಳಿಸುತ್ತೀರೆಂದು ನಂಬಿದ್ದೇನೆ.]