ರಂಗನಾಥ ಸ್ತಂಭ ವಿಜಯ – ಭಾಗ ನಾಲ್ಕು

ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ ಕ್ಷಣಾರ್ಧದಲ್ಲಿ ಮುಂದಿನ ಹೆಜ್ಜೆಗೆ ಅರಿವಿಲ್ಲದೆ ಪೂರ್ಣ ದಾಟಿಬಿಟ್ಟಿದ್ದೆ. ಅಕ್ಷರಶಃ ನನ್ನ ಕೂದಲೂ ಕೊಂಕಲಿಲ್ಲ. ಮೊದಲು ಆತಂಕದ ಭಾವ ಮತ್ತೆ ಬೈಗುಳ, ಎಚ್ಚರಿಕೆಗಳ ಸುರಿಮಳೆ. ಕೊನೇಗೆ ತರಹೇವಾರಿ ನಂಬಿಕೆಗಳ ಮೇಲೆ ಅದೃಷ್ಟದಿಂದ ದೇವರವರೆಗೆ ವಂದನಾರ್ಪಣೆ! ತೀವ್ರ ಏರಿಳಿತಗಳಲ್ಲಿ ನೇರ ಸಾಲು ಹಿಡಿಯಬಾರದು. ನಡೆಯುವಾಗಲೂ ಸೂಕ್ಷ್ಮ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಇತರರ ಚಲನವಲನಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ ಮುಂದುವರಿಯಬೇಕು. ಮೋಜಿಗೇ ಆದರೂ ಪ್ರಕೃತಿಯ ನೈಜ ಸಮತೋಲನವನ್ನು ತಪ್ಪಿಸಬಾರದು ಎಂಬಿತ್ಯಾದಿ ಪಾಠಗಳ ಮನನಕ್ಕೆ ಈ ಆಕಸ್ಮಿಕ ಅವಕಾಶ ಮಾಡಿಕೊಟ್ಟದ್ದಂತೂ ಖರೆ.

ಮುಂದುವರಿದಂತೆ ಪೊದರುಗಳು ವಿರಳ. ಎತ್ತೆತ್ತರದ ಮರ, ಉಂಡುಂಡೆ ಕಾಂಡ. ಇದು ಯಾವ ಜಾತಿಯ ಮರವಪ್ಪಾಂತ ತಲೆ ಎತ್ತಿ ನೋಡಿದರೆ ಆಶ್ಚರ್ಯ. ಕಳ್ಳಿ! (Cactus) ಹೌದು, ಒಣ ಬಯಲಿನ ದಿಬ್ಬದಂಚುಗಳ ರಕ್ಷಕಿ, ಅಲಂಕಾರಿಕ ಉದ್ಯಾನವನಗಳಲ್ಲಿ ಬಳಿಸುಳಿಯಗೊಡದ ವಿಭಿನ್ನ ರೂಪೀ ನರ್ತಕಿ, ಶುದ್ಧ ಮುಳ್ಳಿ. ಮಂದ ಹಸುರಿನ ಚೌಕ ಗೂಟಗಳ ಪುಟಾಣಿ ತುಂಡುಗಳನ್ನು ತುದಿಯಿಂದ ತುದಿಗೆ ಬೆಸೆದಂತೆ, ಆಕಾಶಕ್ಕೇನೋ ಮೊರೆಯಿಡುವ ಕೈಗಳು ಚಾಚಿದಂತೆ, ವಿನಯದಲ್ಲಿ ಮೈಡೊಂಕಿದಂತೆ, ಕೃಷ್ಣನೆದುರಿನ ತ್ರಿವಕ್ರೆಯಂತೆ ಅಕರಾಳ ವಿಕರಾಳ ಭಂಗಿಗಳಲ್ಲಿ ಕಂಡು ಗೊತ್ತಿದ್ದ ಕಳ್ಳಿ, ಇಲ್ಲೇನು ಭಾರೀ ಮರದ ಮೇಲೆ ಸವಾರಿ ಹೊರಟಿದೆಯೇ? ಇಲ್ಲ, ಅದು ಕಳ್ಳಿಯದೇ ಕಾಂಡ, ಹದಿನೈದು ಇಪ್ಪತ್ತಡಿಗೂ ಮಿಕ್ಕು ಎತ್ತರದವರೆಗೂ ಸಾಗುವಾನಿಯಂಥದ್ದೇ ದಿಂಡಿನ ಕಳ್ಳಿಮರ; ಮೇಲೆ ನೋಡಿದರಷ್ಟೇ ಗುಟ್ಟು ರಟ್ಟು! ಅದು ಕಳ್ಳಿಮರಗಳದ್ದೇ ಕಾಡೋ ಎಂಬಷ್ಟು ಮರಗಳ ದಟ್ಟಣೆ. ಇತರ ಹಲವು ಮರ ಮತ್ತು ಅವನ್ನೆಲ್ಲ ಪರಸ್ಪರ ಬಂಧಿಸುವ ತೋರ ಬಳ್ಳಿಗಳೂ ಹೆಣೆದು ಆಕಾಶಕ್ಕಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿ ಇಲ್ಲಿ ಓಟೆಯ ಹಿಂಡು, ಬೆತ್ತದ ಹಂಬು ಬಿಟ್ಟರೆ ಕೆಳಸ್ತರದ ಹಸುರು ಅಲ್ಲಿ ತುಂಬಾ ಕಡಿಮೆಯಿತ್ತು. ನುಸುಲು ಮಣ್ಣಿನಲ್ಲಿ ಕಣಿವೆಯತ್ತಣ ಜಾರಿಕೆಯನ್ನು ನಿವಾರಿಸಿಕೊಂಡು ಪಶ್ಚಿಮಕ್ಕೆ ಸರಿದು ಹತ್ತೇ ಮಿನಿಟಿನಲ್ಲಿ ಸ್ತಂಭದ ದಕ್ಷಿಣ ಮೂಲೆಯನ್ನು ತಲಪಿದ್ದೆವು. ಒಟ್ಟಾರೆ ಒಂದೂವರೆ ಗಂಟೆಯ ಶ್ರಮದಲ್ಲಿ ರಂಗನಾಥನ ಚರಣಾರವಿಂದ ಸ್ಪರ್ಷದ ಪುಳಕ ನಮಗೊದಗಿತ್ತು.

ಗಲಿವರನ ಅಳತೆ ಎಲ್ಲಿಂದ?:

ಅಲ್ಲಿ ತೋರುವಂತೆ ಭವಾನಿ ನದಿಕೊಳ್ಳದ ಸುವಿಸ್ತಾರ ದಕ್ಷಿಣ ದಂಡೆಯ ಭಾರೀ ಏಕಶಿಲಾ ಶಿಖರ ನಮ್ಮ ರಂಗನಾಥ. ಕೊಡೈಕೆನಾಲಿನ ಪಿಲ್ಲರ್ ರಾಕಿನ ಭಂಗಿ ಮತ್ತು ಪರಿಸರದಲ್ಲಿ ಬಹುಮಟ್ಟಿಗೆ ಹೋಲುವ ರಚನೆ ಇದು. ಒಂದೇ ವ್ಯತ್ಯಾಸ – ಅದು ಕುಬ್ಜ, ಇದು ದೈತ್ಯ; ವಾಮನ ತ್ರಿವಿಕ್ರಮ. ಇಲ್ಲಿ ನಮ್ಮೂರಿನ ಹಲವು ಶಿಲಾ ಶಿಖರಗಳು ಸಹಜವಾಗಿ ನೆನಪಿಗೆ ಬರುತ್ತವೆ, ಆದರೆ ಹೋಲಿಕೆ ಸಲ್ಲ. ಜಮಾಲಬಾದ್, ಕೊಡಂಜೆ ಕಲ್ಲು, ಕಾರಿಂಜ ಇತ್ಯಾದಿ ನಮ್ಮ ಕಲ್ಲ ಶಿಖರಗಳು ಸ್ವತಂತ್ರವಾಗಿ ರೂಪುಗೊಂಡವು. ಪ್ರಾಕೃತಿಕ ವೈಪರೀತ್ಯ ಮತ್ತು ಮನುಷ್ಯ ತಿದ್ದುಪಡಿಗಳು ಅವನ್ನು ಪ್ರಭಾವಿಸಿರಬಹುದು. ಆದರೆ ಮೂಲತಃ ಇವು ಬೆಟ್ಟಗಳೇ ಆಗಿದ್ದಿರಬೇಕು. ರಂಗನಾಥ ಸ್ತಂಭ ಹಾಗಲ್ಲ. ಮನುಷ್ಯ ನೆನಪಿನ ಕಿರು ಕಾಲಮಾನಗಳನ್ನು ಮೀರಿದ ದಿನಗಳಲ್ಲೆಲ್ಲೋ ಇದು ಭವಾನಿ ನದಿಯ ದಕ್ಷಿಣ ದಂಡೆಯ ಅವಿಭಾಜ್ಯ ಅಂಶವಾಗಿದ್ದಿರಬೇಕು. ಭೂಕಂಪವೋ ಮೇಘಸ್ಫೋಟವೋ ಈ ಕಣಿವೆಯನ್ನು ತಟ್ಟಿದ್ದಿರಬೇಕು. ಪರಿಣಾಮವಾಗಿ ಸಿಡಿಲ ಮಸೆತ, ನೀರ ಕೊರೆತ, ಭಾರೀ ದಂಡೆ ಕುಸಿತಗಳು ಅಕ್ಷರಶಃ ಇದನ್ನು ಯುದ್ಧ ಭೂಮಿಯಂತಾಗಿಸಿರಬೇಕು. ಆಗ ಈ ಭಾರೀ ಶಿಲಾ ಖಂಡ ಮುಖ್ಯ ಹಾಸಿನಿಂದ ಬೇರ್ಪಟ್ಟದ್ದಿರಬಹುದು, ತುಸು ವಾಲಿದ್ದೂ ಇರಬಹುದು. ಮತ್ತೆ ಸುತ್ತಣ ಮಣ್ಣು, ಸಣ್ಣ ಪುಟ್ಟ ಶಿಲಾ ಹಳಕುಗಳು ತೊಳೆದು ಹೋಗಿ, ಕುಸಿದು ಬಿದ್ದು, ಪ್ರಕೃತಿ ಪ್ರಕಟಿಸಿದ ಮೇರು ಕೃತಿಗೆ ಹೆಸರು ರಂಗನಾಥ ಸ್ತಂಭ. ಮತ್ತಿನ ವರ್ಷಗಳಲ್ಲಿ ಋತುಮಾನಗಳ ಪೆಟ್ಟು, ಜೀವ ಜಾಲಗಳ ಬಂಧ ಅದಕ್ಕೆ ಇಂದಿನ ಸ್ವತಂತ್ರ ನಿಲುವು, ಪ್ರಭೆ ಕೊಟ್ಟಿದೆ. ಕಣಿವೆಯ ತೀವ್ರ ಇಳುಕಲಿನ ಮೈಯಲ್ಲಿ ನಿಂತ ಇದರ ನಿಖರ ಬುಡ ಗುರುತಿಸುವುದು ಕಷ್ಟ. ಅದರ ಉತ್ತರ ಮುಖದ ತಳ ಅಥವಾ ಭವಾನಿ ನದಿಯ ಪಾತ್ರೆಯಲ್ಲೆಲ್ಲೋ ಇದ್ದಿರಬಹುದಾದ ಸ್ತಂಭದ ನಿಜ ಬುಡವನ್ನು ಸ್ಥಾಪಿಸಿ (ಎಷ್ಟು ಸಾವಿರ ಅಡಿಯೋ), ಆರೋಹಣಕ್ಕಿಳಿಯುವುದು ನಮ್ಮ ಉದ್ದೇಶವಲ್ಲ. ನಮ್ಮದೇನಿದ್ದರೂ ನೈಜ ಆರೋಹಣಕ್ಕೆ ಸುಲಭಸಾಧ್ಯವಾದ, ಸಾಧ್ಯವಾದರೆ ಅತ್ಯಂತ ಕಡಿಮೆ ಎತ್ತರದ ಬುಡದಿಂದ ತೊಡಗಿ ಚುರುಕಾಗಿ ಶಿಖರ ಸಾಧಿಸುವುದು ಮಾತ್ರ. ವಾಸ್ತವದಲ್ಲಿ ನಾವು ಹೆಚ್ಚುಕಡಿಮೆ ಶಿಲಾರೋಹಣಕ್ಕೆ ಪ್ರಶಸ್ತವಾದ ಸ್ಥಳವನ್ನೇ ಮುಟ್ಟಿದ್ದೆವು (ದಕ್ಷಿಣ ಕೊನೆಯ ಪೂರ್ವದ ಮಗ್ಗುಲು).

ಶಿಲಾರೋಹಣದ ಪ್ರಾಥಮಿಕ ಪಾಠ ಮತ್ತು ನಿಜ ಪ್ರಯೋಗವೆರಡನ್ನೂ ನಮ್ಮಲ್ಲಿ ಅನೇಕರು ಇಲ್ಲೇ ಅನುಭವಿಸುವವರಿದ್ದರು. ವಾಸ್ತವದಲ್ಲಿ ನಾನೊಬ್ಬನೇ ತರಬೇತಾದ ಮತ್ತು ಸ್ವಲ್ಪ ಅನುಭವೀ ಶಿಲಾರೋಹಿ. ಅಭಯ ನನ್ನ ಸಹವಾಸ ದೋಷದಲ್ಲಿ, ದೇವು ಸ್ವತಂತ್ರ ಪ್ರವೃತ್ತಿಯಲ್ಲಿ ಅಲ್ಪಸ್ವಲ್ಪ ಶಿಲಾರೋಹಣ ಅನುಭವವೋ ಮಾಹಿತಿಯೋ ಇದ್ದವರಾದರೂ ಒಟ್ಟಾರೆ ತಂಡದ ಜವಾಬ್ದಾರಿ ನನ್ನೊಬ್ಬನದೇ. ಹಾಗಾಗಿ ಈ ಸಾಹಸಯಾತ್ರೆಗೂ ವಾರದ ಹಿಂದೆ ಮೂಡಬಿದ್ರೆ ಸಮೀಪದ ಕೊಡಂಜೆ ಕಲ್ಲಿಗೊಂದು ಭೇಟಿ ಕೊಟ್ಟಿದ್ದೆವು. ಕನಿಷ್ಠ ಸಲಕರಣೆಯಾದ ರಕ್ಷಣಾ ಹಗ್ಗದ ಪರೀಕ್ಷೆಯಿಂದ ತೊಡಗಿ ಉಪಯುಕ್ತ ಗಂಟುಗಳು ಮತ್ತವುಗಳನ್ನು ಬಳಸುವ ಕ್ರಮಗಳನ್ನು ಅಭ್ಯಸಿಸಿದ್ದೆವು. Bow line ಅಥವಾ endman (ಹೆದೆಯನ್ನು ಕೊಪ್ಪಿಗೆ ಸಿಕ್ಕಿಸುವ) ಗಂಟು ಹಗ್ಗದ ಒಂದು ತುದಿ ಬಳಸಿ ಹಾಕುವಂಥದ್ದು; ಇದು ಮುಂದಾಳಿಗೆ ಅಥವಾ ಕೊನೆಯಾಳಿಗೆ. ಮತ್ತೆ ಹಗ್ಗದ ಉದ್ದದಲ್ಲಿ ಎಲ್ಲೂ ತೊಡರಿಸಿಕೊಳ್ಳಬಹುದಾದ ಗಂಟು middleman ಅವಶ್ಯಕತೆ ಮತ್ತು ಅನುಕೂಲ ನೋಡಿಕೊಂಡು ಎಷ್ಟೂ ಜನರನ್ನು ಪೋಣಿಸುತ್ತದೆ – ಇವು ಶಿಲಾರೋಹಿಗೆ ರಕ್ಷಣೆಯ ದೃಷ್ಟಿಯಲ್ಲಿ ಅವಶ್ಯ. ಇದರ ಕಲಿಕೆ, ಬಳಕೆ ಪಾಠಗಳೊಡನೆ ಅಂದು ಸುಮಾರು ನಾನೂರಡಿ ಎತ್ತರದ ಕೊಡಂಜೆ -ಕೋಡುಗಲ್ಲನ್ನು ನಾವು ಏರಿದ್ದೆವು. ಬಂಡೆಗೆ ಕೈ, ಕಾಲು ಉಜ್ಜಿ ಬಿಸಿಲಿಗೆ ಬಸವಳಿದಿದ್ದೆವು, ಚಿಮಣಿಯಲ್ಲಿ (ಮುಂದೆ ವಿವರಿಸುತ್ತೇನೆ) ದೇಹ ತೂರಿ, ತೇಕಿ ದಣಿದಿದ್ದೆವು. ಆ ಪಾಠಗಳ ಕಡತವನ್ನೇ ಬಿಚ್ಚಿದಂತೆ ರಂಗನಾಥನ ಪಾದಮೂಲದಲ್ಲಿ ನಾನು ಹಗ್ಗದ ಸುರುಳಿ ಬಿಚ್ಚಿ, ಒಂದು ಕೊನೆಯನ್ನು ನನ್ನದೇ ಸೊಂಟಕ್ಕೆ ಬಿಗಿದೆ.

ಸ್ತಂಭದ ಒಂದು ಸಣ್ಣ ಕೊರಕಲಿನ, ಸಣ್ಣ ಚಡಿಯಲ್ಲಿ ನಾನು ಮೊದಲ ಹೆಜ್ಜೆ ತೊಡಗಿಸುವಾಗ ಗಂಟೆ ಒಂಬತ್ತು. ನನ್ನ ಕೈ ಹಿಡಿಕೆಗಳು, ಊರುವ ಹೆಜ್ಜೆಗಳು, ಮೈಯ್ಯ ಭಂಗಿ ಹಿಂದಿನವರಿಗೆ ಸುಲಭ ಅನುಸರಣೆಗೂ ಒದಗುವಂತೆ ನೋಡಿಕೊಂಡು ಏರಿದೆ. ಹತ್ತು ಮಾತುಗಳಿಗಿಂತ ಒಂದು ನಿದರ್ಶನ ಲೇಸು. ಸುಮಾರು ನಲವತ್ತು ವರ್ಷಗಳ ಹಿಂದೆ (೧೯೭೦), ದಖ್ಖಣ ಪರ್ವತಾರೋಹಣ ಸಂಸ್ಥೆಯ ಸ್ಥಾಪಕ, ಶಿಲಾರೋಹಣ ತಂತ್ರ ನಿಪುಣ, ನನ್ನ ಗುರು ಗೋವಿಂದರಾಜರು ನೀಡಿದ ಕ್ರಮಪಾಠ ನನ್ನ ಸ್ಮರಣೆಯಲ್ಲಿ ಸ್ಪಷ್ಟವಿತ್ತು. ರಕ್ಷಣೆಯ ಹಗ್ಗ ಸೊಂಟದಲ್ಲಿ ಉಸಿರು ಕಟ್ಟಿಸದಷ್ಟು ಸಡಿಲ, ಜಾರಿ ಎದೆಗೆ ಏರದಷ್ಟು ಬಿಗಿಯಿತ್ತು. ಆರೋಹಣ ಸಮಯದಲ್ಲಿ ಅದು ಕೈಕಾಲುಗಳಿಗೆ ತೊಡರದಂತೆ, ಅದರ ಚಾಚಿಕೆ ರಕ್ಷಕನ ದಿಕ್ಕು ತಪ್ಪದಂತೆ ನಿಭಾವಣೆ ಮುಖ್ಯ. (ಅರೆ, ಆಕಾಶ ಏನು ನೋಡ್ತೀರಿ, ಇದು ಅಧ್ಯಾತ್ಮ ಪಾಠವಲ್ಲ ಸ್ವಾಮೀ! ಮೇಲಿರುವವನು ಸಹ ಆರೋಹಿ!) ನಿಲುಕದ ಹಿಡಿಕೆಗಳಿಗೆ ತಿಣುಕದ, ಒದಗಿದ ನೈಜ ಚಡಿ, ಸಂದು, ದಿಬ್ಬಗಳನ್ನು ಗರಿಷ್ಠ ಪ್ರಯೋಜನಕ್ಕೆ ಬಳಸುವ ಸಂಯಮ, ಜಾಣ್ಮೆ ಇಲ್ಲಿ ನಿಜ ಪ್ರಗತಿಯ ಮೆಟ್ಟಿಲು. ನಮ್ಮ ಎರಡು ಪಾದ ಮತ್ತೆರಡು ಹಸ್ತಗಳ ಬಳಕೆಯಲ್ಲಿ ಆದಷ್ಟು ಮೂರು ಸಂಪರ್ಕಗಳು ಗಟ್ಟಿಯಿರಲೇ ಬೇಕು. ಕಾಲು ಕತ್ತರಿ ಹಾಕದ, ಬಂಡೆಗೆ ಮೈ ಚಾಚದ ಓತಿ ನಡೆಯೇ ಶುದ್ಧ. ಇಳಿಯುವ ತ್ರಾಣವನ್ನು ಠೇವಣಿಯಂತೆ ಉಳಿಸಿ, ಏರಿಕೆಗೆ ಬಡ್ಡಿಯನ್ನಷ್ಟೇ ಬಳಸಿ. ಇದ್ದ ಎಲ್ಲಾ ಶಕ್ತಿ ಬಳಸಿ ಏರುವುದು ಕ್ರೀಡಾಭಾವವಲ್ಲ; ಆತ್ಮಹತ್ಯಾ ದೋಷ! ಏರುವುದು ದಿಬ್ಬವೇ ಆದರೂ ಛಲ ಮತ್ತು ಪ್ರಯತ್ನ ಗುಡ್ಡದಷ್ಟು, ಶಿಸ್ತು ಮತ್ತು ವಿನಯ ಬೆಟ್ಟದಷ್ಟಾದರೆ ಗಳಿಕೆ ಪರ್ವತ ಶ್ರೇಣಿಯಷ್ಟು ನಿಶ್ಚಯ. ಅಂಥವರಿಗೆ ಉಳಿಯುವುದು ಎರಡೇ ಬಂಡೆ. ಒಂದು ಏರಿದ್ದು, ಇನ್ನೊಂದು ಏರದ್ದು, ಏರಲಾಗದ್ದು ಇಲ್ಲ.

ಸುಮಾರು ಐವತ್ತಡಿ ಎತ್ತರದಲ್ಲಿ ಸುಮಾರು ಮೂರ್ನಾಲ್ಕು ಮಂದಿಗೆ ನಿಂತು ವಿರಮಿಸಬಹುದಾದ ಸ್ಥಳ ಕಾಣಿಸಿತು. ಅಲ್ಲಿ ನಾನು ದೃಢವಾಗಿ ಕುಳಿತು, ಎಳೆದೊಯ್ದ ಹಗ್ಗವನ್ನು ರಕ್ಷಣಾತ್ಮಕವಾಗಿ ನಿಯಂತ್ರಿಸುತ್ತ ಕೆಳಗಿನೊಬ್ಬರಿಗೆ ಏರಲು ಸೂಚನೆ ಕೊಟ್ಟೆ. ಆತ ನಾನೆಳೆದ ಹಗ್ಗದಲ್ಲೊಂದು middle man ಅಥವಾ thumb knot on the bite ಹಾಕಿ, ತನ್ನನ್ನು ಅದಕ್ಕೆ ತೊಡರಿಸಿಕೊಂಡು ಏರತೊಡಗಿದ. ಎಡ ಮೊಣಕಾಲೆತ್ತರದ ಕಿರು ಒಡಕಿನಲ್ಲಿ ಎಡ ತುದಿಗಾಲನ್ನು ಸಿಕ್ಕಿಸಿ, ಬಲಭುಜದ ಮೇಲಕ್ಕಿದ್ದ ಕಲ್ಲ ಚಡಿಗೆ ಕೈಯುದ್ದ ಮಾಡಿ ನಾಲ್ಕೂ ಬೆರಳುಗಳ ಒಗ್ಗಟ್ಟಿನಲ್ಲಿ ಜಿಗುಟಿ ಹಿಡಿದು, ಬಲಗಾಲಿನಿಂದ ನೆಲ ಚಿಮ್ಮಿದ. ಈಗ ಮೊದಲೇ ಕಂಡುಕೊಂಡಿದ್ದ ಕಲ್ಲುಬ್ಬೊಂದನ್ನು ಎಡಗೈಯಲ್ಲಿ ಬಾಚಿ ಅವುಚಿಕೊಂಡು ಬಲಗಾಲಿಗೊಂದು ಎತ್ತರದ ನೆಲೆ ಕಾಣಿಸಿದ. ಹೀಗೆ ಒಂದೊಂದೇ ಹಿಡಿಕೆ, ತುಳಿಕೆಗಳಲ್ಲಿ ಆತ ಮೇಲೆ ಬರುತ್ತಿದ್ದಂತೆ ನಮ್ಮ ನಡುವೆ ಸಡಿಲ ಬೀಳುತ್ತಿದ್ದ ಹಗ್ಗವನ್ನಷ್ಟೇ ನಾನು ಎಳೆದೆಳೆದು ಬಿಗಿ ಮಾಡಿಕೊಳ್ಳುವುದೂ ನಡೆದೇ ಇತ್ತು. ಇದರಿಂದ ಆತ ಯಾವುದೇ ಹಂತದಲ್ಲಿ ಕಾಲು ಜಾರಿಯೋ ಹಿಡಿಕೆ ಕಿತ್ತುಹೋಗಿಯೋ ಕೆಳಕ್ಕೆ ಉರುಳುವ ಆಕಸ್ಮಿಕವೊದಗಿದರೆ, ಇದ್ದಲ್ಲೇ ಒಂದೆರಡು ಅಡಿಗಳ ಅಂತರದಲ್ಲೇ ಹಗ್ಗದಲ್ಲಿ ನೇಲುತ್ತಾನೆ. ಖಂಡಿತವಾಗಿಯೂ ನೆಲಕ್ಕಪ್ಪಳಿಸಿ ಹೋಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಗಮನಿಸದ ಸಾಮಾನ್ಯರು ಶಿಲಾರೋಹಣ ಅಥವಾ rock climbingನ್ನು rope climbing ಎಂದೇ ತಪ್ಪು ತಿಳಿದುಬಿಡುತ್ತಾರೆ. ಇದಕ್ಕೆ ಪೂರಕವಾಗಿ ಐತಿಹಾಸಿಕ ಕಥೆ, ಸಿನಿಮಾಗಳಲ್ಲೂ ಬಾಚುಮುಳ್ಳಿನ ಉಂಗುರಕ್ಕೋ ಉಡದ ಬಾಲಕ್ಕೋ ಹಗ್ಗ ಬಿಗಿದು ಭಾರೀ ಹಡಗಿಗೆ ಏರಿ ಹೋಗುವುದು, ಎತ್ತೆತ್ತರದ ಕೋಟೆಗೆ ಲಗ್ಗೆ ಹಾಕುವುದು ಹೆಚ್ಚಿನವರ ನೆನಪಿನಕೋಶದಲ್ಲಿ ಇರುವುದೂ ತಪ್ಪಲ್ಲ! ನೈಜ ಶಿಲಾರೋಹಣ ಅಭ್ಯಾಸಕ್ಕೆ ಸಾಮಾನ್ಯರಿಗೂ ಒಲಿಯುವ ಸಾಹಸ ಕ್ರೀಡೆ; ಅಮಾನುಷ ಸಾಧನೆ, ಚಮತ್ಕಾರ ಖಂಡಿತ ಅಲ್ಲ. ಒಟ್ಟಾರೆ ಅನುಭವ ಮತ್ತು ದೈಹಿಕ ಮಿತಿಯೊಳಗೆ ಮಾಡುವ ಯಾವುದೇ ನೈಜ ಶಿಲಾರೋಹಣದಲ್ಲಿ ಹಗ್ಗ ಕೇವಲ ಮಾನಸಿಕ ದೃಢತೆಗೆ ಬಳಕೆಯಾಗುತ್ತದೆ. ಪರಿಸ್ಥಿತಿಯ ಅನಿವಾರ್ಯತೆಗಳಲ್ಲಿ, ಆಕಸ್ಮಿಕಗಳಲ್ಲಿ ಹಗ್ಗದ ಪೂರ್ಣ ಬಳಕೆಯಾಗುವುದು ನಿಜವೇ ಆದರೂ ಇದು ನಿಜ ಕ್ರೀಡಾ ಸಾಧನೆಯಲ್ಲ.

ಮೊದಲು ಪ್ರಸನ್ನ ಮತ್ತೆ ದೇವು ಬಂದರು. ನಾಲ್ಕನೆಯವರಿಗೆ ಅಲ್ಲಿ ಜಾಗ ಸಾಕಾಗದೆಂದು ನಾನು ಮತ್ತೂ ಮೇಲಿನ ಹಂತಕ್ಕೆ ಹಗ್ಗ ಎಳೆದುಕೊಂಡು ಏರಿದೆ. ಈಗ ಎರಡನೆಯವನು ದೃಢವಾಗಿ ನೆಲೆಸಿ (ಸ್ಥಳಾನುಕೂಲದಲ್ಲಿ ನಿಂತೋ ಕುಳಿತೋ), ನನ್ನ ಏರುಜಾಡನ್ನು ತನ್ನ ಮನಸ್ಸಿನಲ್ಲಿ ದಾಖಲಿಸಿಕೊಳುತ್ತಾ ಹಗ್ಗವನ್ನು ಕೊಡುತ್ತಾ ಪರೋಕ್ಷವಾಗಿ ನನಗೆ ರಕ್ಷಣೆಯನ್ನು ಕೊಡುವುದೂ ನಡೆಯುತ್ತದೆ. ಅದೇ ಸಮಯದಲ್ಲಿ ಮೂರನೆಯವನು ನಾಲ್ಕನೆಯವನನ್ನು ಹೀಗೇ ಏರಿಸಿಕೊಳ್ಳುತ್ತಿರುತ್ತಾನೆ. ತಂಡದಲ್ಲಿ ತರಬೇತಾದವರ ಸಂಖ್ಯೆ ಮತ್ತು ಹಗ್ಗಗಳು ಹೆಚ್ಚಾದಷ್ಟೂ ಒಂದು ಬಿಟ್ಟು ಒಂದರಂತೆ ಆರೋಹಿಗಳ ಸಂಖ್ಯೆ ಏರುತ್ತದೆ, ಕಂಬಳಿ ಹುಳುವಿನ ಚಲನೆಯಂತೆ ಪ್ರಗತಿ ಚುರುಕಾಗುತ್ತದೆ. (ನಮ್ಮಲ್ಲಿ ನೂರಡಿ ಮತ್ತು ಇನ್ನೂರಡಿಯ ಒಂದೊಂದು ಹಗ್ಗಗಳಿದ್ದವು.) ಆದರ್ಶಗಳ ಮಾತಂತಿರಲಿ, ನಮ್ಮ ಕಥೆ ಮುಂದೇನಾಯ್ತೂಂತ ಸ್ವಲ್ಪ ಅವರವರ ಮಾತಿನಲ್ಲೇ ಕೇಳಿ.

ನೆನಪಿನ ಹೊರೆಯಲ್ಲಿ ಬಳಲಿದ ದೇವಕಿ: ದೇವಕಿ ನನ್ನಷ್ಟೇ ರಂಗನಾಥ ಸ್ತಂಭದ ಮಾಹಿತಿ ಇದ್ದವಳು ಎನ್ನುವುದು ನಿಮಗೂ ಗೊತ್ತು. ಆದರೆ ಶಿಲಾರೋಹಣದ ತುಡಿತ ಮಾತ್ರ ವ್ಯತಿರಿಕ್ತವಾಗಿತ್ತು. ಆಕೆಯ ಉಜಿರೆಯ ಕಾಲೇಜು ದಿನಗಳಲ್ಲಿ ಜಮಾಲಾಬಾದ್ ಮೆಟ್ಟಿಲೆಣಿಸಿದ್ದೊಂದೇ ಸಾಧನೆ. ನಮ್ಮ ವಿವಾಹದಿಂದೀಚೆಗೆ (೧೯೮೦) ನನ್ನ ಸಾಹಸ ಪ್ರವಾಸಗಳೆಲ್ಲದರಲ್ಲೂ ಆಕೆ ಅನಿವಾರ್ಯ ಸಂಗಾತಿ. ಆದರೆ ಪ್ರಪಾತದಂಚಿನಲ್ಲಿ ಕೊಳ್ಳ ಹಣಿಕುತ್ತಾ ಎತ್ತರಗಳನ್ನು ಸಾಧಿಸುವುದರಲ್ಲಿ ಆಕೆಗೆ ಸಣ್ಣ ಮಾನಸಿಕ ತಡೆಯಿತ್ತು (ಎತ್ತರದ ಭೀತಿ – vertigo). ಕುದುರೆಮುಖ ಶಿಖರದಲ್ಲಿ ನಿಂತು ಬೆಳ್ತಂಗಡಿ ವೀಕ್ಷಿಸಿ ಈಕೆ ಸಂತೋಷಿಸಬಲ್ಲಳು. ಆದರೆ ಮನೆಯ ಒಂದೇ ಮಹಡಿಯ ಅಂಚುಗಟ್ಟೆ ಏರಿ ಟೀವೀ ಆಂಟೆನ್ನಾ ತಿರುಗಿಸುತ್ತಾ ನೇರ ಅಂಗಳ ದಿಟ್ಟಿಸಲಾರಳು. ಅನಿವಾರ್ಯತೆಯಲ್ಲಿ ಭಯ ಹತ್ತಿಕ್ಕಿ ದೇವಕಿ ಗುರಿ ಸಾಧಿಸಿದ ನಿದರ್ಶನಗಳು ಹಲವಿವೆ. ಆದರೆ ಅದಕ್ಕೆ ತಾನು ತೆಗೆದುಕೊಂಡ ಇತರರ ಸಮಯ ಮತ್ತು ಸಹನೆಯ ಬಗ್ಗೆ ವಿಷಾದವೂ ಇದೆ. ಎಲ್ಲಕ್ಕೂ ಮುಖ್ಯವಾಗಿ ಆ ಸಾಧನೆಗಳು ಅವಳಿಗೆಂದೂ ಸವಿನೆನಪಿನ ಭಾಗವಾಗುವುದೇ ಇಲ್ಲ! (ಇಲ್ಲಿ ಅನುಭವದ ನೆನಪೇ ಸಿಹಿ ಎನ್ನುವ ಗಾದೆ ಸುಳ್ಳಾಗುತ್ತದೆ; ಛೆ, ವೇದದ ಗತಿ?) ಈಚೆಗೆ ನಾನು ರಂಗನಾಥ ಸ್ತಂಭದ ಮರುಜಪಕ್ಕಿಳಿದೊಡನೆ ಆಕೆ ತಾನು ‘ತಳಶಿಬಿರಾಧಿಪತಿ’ ಎಂದು ಪುರಶ್ಚರಣೆ ಆರಂಭಿಸಿದ್ದಳು. ಹಾಗಾಗಿ ಮಂಗಳೂರು ಬಿಟ್ಟಂದಿನಿಂದ ನಾನಂತೂ ದೇವಕಿಗೆ ಒತ್ತಾಯಿಸುವ, ಮಂಕುಮಾಡುವ, ನೆನಪಿಸುವ ಕೆಲಸವನ್ನೇನೂ ಮಾಡಲಿಲ್ಲ. ಆ ಬೆಳಿಗ್ಗೆ ಆಕೆ ಪೂರ್ಣ ಉಮೇದಿನಲ್ಲಿ ಮತ್ತು ಯಾರಿಗೂ ಕಡಿಮೆಯಿರದ ತಾಕತ್ತಿನಲ್ಲೇ ಸ್ತಂಭದ ಬುಡದವರೆಗೂ ಹೆಜ್ಜೆ ಹಾಕಿದ್ದಳು. ಇನ್ನು ಯಾರಿಗೆ ಗೊತ್ತು, ಅದೇ ಸ್ತೋಮ ಪ್ರಜ್ಞೆಯಲ್ಲಿ ಬಂಡೆ ಏರಿಯೂ ಬಿಟ್ಟರೆ ಯಾಕೆ ಬೇಡ ಎಂಬುದು ನನ್ನ ಮೌನದ ಗುಟ್ಟು. ಆದರೆ ನಾನು ಮೂರನೇ ಹಂತದಲ್ಲಿದ್ದಾಗ ಅಭಯನಿಂದ ಸುದ್ದಿ ಬಂತು, “ಅಮ್ಮ ರಿಟಾಯರ್ ಆಗಿದ್ದಾಳೆ.” ಹಾಗಾದರೆ ದೇವಕಿ ಬಂದದ್ದು ಯಾಕೆ? ಅವಳ ಮಾತಿನಲ್ಲೇ ಕೇಳಿ.

“ಈ ಬಾರಿ ನಾನು ಮಂಗಳೂರಿನಲ್ಲೇ ಉಳಿದುಬಿಡುವುದಾಗಿ ನಿರ್ಧರಿಸಿದ್ದೆ. ಆದರೆ ಆ ಬಂಡೆಯ ಗಾತ್ರವನ್ನು ನೆನೆಸಿದಾಗೆಲ್ಲಾ ಅಶೋಕ್ ಮತ್ತು ಅಭಯರನ್ನು ಮಾತ್ರ ಹೋಗಲು ಬಿಟ್ಟು ತಣ್ಣಗೆ ಕೂರಲು ಮನಸ್ಸು ಕೇಳಲಿಲ್ಲ. ನಾನು ಬಂಡೆ ಏರುವುದಿಲ್ಲ ಎಂದು ನಿರ್ಧರಿಸಿಕೊಂಡೇ ತಂಡ ಸೇರಿಕೊಂಡೆ. ಬಸ್ಸೇರಿ ಮೈಸೂರಿನಲ್ಲಿ ಅತ್ತೆ ಮನೆ ಸೇರಿದಾಗ ಸಂಭ್ರಮದ ವಾತಾವರಣದಲ್ಲಿ ನಾನೂ ಕ್ರಿಯಾಶೀಲ ಸದಸ್ಯೆಯೇ ಸರಿ ಎನ್ನುವಂತಾಗಿತ್ತು. ಮುಂದೆ ದಾರಿ ಸವೆದಂತೆಲ್ಲಾ ನೀಲಗಿರಿ ಶ್ರೇಣಿಯನ್ನು ಕಣಿವೆಯ ಅಂಚುಗಳಲ್ಲೂ ನಮ್ಮ ಸುಮೋ ಅಂಕಾಡೊಂಕಿ ಏರಿ ಭಾರೀ ಶಿಖರಗಳನ್ನು ಸಣ್ಣ ಮಾಡುತ್ತಿದ್ದಂತೆ ನನಗೇನು ಅನುಭವ ಕಡಿಮೆಯೇ ಎಂಬ ಭಾವ ಬಲಿಯಿತು. ನೆನಪು ಆಯುತ್ತದೆ.

“ಆನಂದ ಸಾಧಿಸಿದ್ದನ್ನು ನಾನು ಹೆಂಡತಿಯೊಡನೆ ಸಾಧಿಸುತ್ತೇನೆ’ ಎಂಬ ಛಲದಲ್ಲಿ ಹಿಂದೊಮ್ಮೆ ದಕ್ಷಿಣ ಭಾರತ ಬೈಕ್ ಪ್ರವಾಸದಲ್ಲಿ ಅಶೋಕ್ ನನ್ನನ್ನು ಇಲ್ಲಿಗೆ ತಂದಿದ್ದರು (೧೯೮೫). ನಮಗಿಬ್ಬರಿಗೂ ತಂಡದ ಇತರರಿಗೂ ರಂಗನಾಥ ಸ್ತಂಭದ ಪ್ರಥಮ ದರ್ಶನವದು. ನಮ್ಮ ಕೋತಗೇರಿಯ ಗೆಳೆಯರಾದ ಶೋಭಾ, ವರ್ಮ ದಂಪತಿ ಆ ದಿನದ ಆತಿಥೇಯರು ಮಾತ್ರವಲ್ಲ, ತಮ್ಮ ಪುಟ್ಟ ಸ್ಯಾಲಿಯೊಡನೆ (ಮಗಳು) ವೀಕ್ಷಕರಾಗಿಯೂ ಬಂದಿದ್ದರು. ಆರೋಹಣ ತಂಡದ ಇತರ ಇಬ್ಬರು ಸದಸ್ಯ – ಅರವಿಂದ ರಾವ್ ಮತ್ತು ಬಾಲಕೃಷ್ಣರೊಡನೆ ಕಾಡುನುಗ್ಗಿ, ಕಣಿವೆಗಿಳಿದು, ದಿಕ್ಕು ಆಯ್ದು, ಬಂಡೆಯ ಮೈಯಲ್ಲಿ ತೊಡಗಿಕೊಳ್ಳುವವರೆಗೆ ನನ್ನ ವಿಶ್ವಾಸಕ್ಕೇನೂ ಕೊರತೆಯಿರಲಿಲ್ಲ. ನಾನು ಸ್ವಲ್ಪ ನಿಧಾನಿ. ಅಶೋಕ್ ನನಗಾಗಿ ಹಿಂದೆ ಉಳಿದಿದ್ದರು. ಯಾವುದೋ ಅಸಂಖ್ಯ ಶಾಖೆಯ ಮರ ಏರಿ, ಬಂಡೆಗೆ ವರ್ಗಾವಣೆಯೇನೋ ಸುಲಭವಾಗಿ ಪಡೆದೆವು. ಸಣ್ಣ ಕೊರಕಲಿನೊಳಗೆ ಬಿರುಕು, ಉಬ್ಬು ಆರಿಸುತ್ತ ಸುಮಾರು ನೂರು ನೂರೈವತ್ತು ಅಡಿ ಹತ್ತಿ ಹೊರಮೈ ಅಂಚಿಗೆ ಹೊರಳಿದೆ. ಅಬ್ಬಾ! ನೂರಾರು ಅಡಿ ಆಳದ ಕೊಳ್ಳ ಒಮ್ಮೆಲೇ ನನ್ನ ಪಾದಮೂಲದಲ್ಲೇ ಎನ್ನುವಂತೆ ತೆರೆದುಕೊಂಡಿತು. ನನ್ನ ಮನಸ್ಸಿನ ಉತ್ಸಾಹದ್ರವ ಹಿಂಡಿ ಹೋಗಿ ನಾನು ಭಯದ ಹಿಪ್ಪೆಯೇ ಆದೆ. ಮತ್ತೆ ಅಶೋಕ್‌ನ ಯಾವುದೇ ಮಾತು ನನಗೆ ಮುಂದುವರಿಯಲು ಪ್ರೇರಣೆ ಕೊಡಲಿಲ್ಲ. ಕೊಳ್ಳಕ್ಕೆ ಬೆನ್ನು ಹಾಕಿ ಮತ್ತೆ ಕೊರಕಲಿನಲ್ಲಿ ಇಳಿಯಹೊರಟರೂ ಕಣ್ಣ ಮುಂದೆ ನನ್ನನ್ನು ನುಂಗುವ ಆಳವೇ ಗಟ್ಟಿ ನಿಂತು, ಅಂದು ಅಶೋಕ್‌ನನ್ನು ಸಾಕಷ್ಟು ಸತಾಯಿಸಿದ್ದೆ. ಆದರೂ ನೆನಪು ಆಯುತ್ತದೆ.

“ಕಳೆದ ಹದಿನಾಲ್ಕು ವರ್ಷಗಳ ಸಾಹಸಯಾನಗಳ ಗೆಯ್ಮೆಯಲ್ಲಿ ನನ್ನ ಅನುಭವದ ಕೊಡಕ್ಕೆ ಸೇರ್ಪಡೆಯೇ ಹೆಚ್ಚು. ಜ್ಞಾನ (ವೃದ್ಧಾಪ್ಯ?) ಪ್ರೌಢಿಮೆಯಲ್ಲಿ ನಾನು ಅಶೋಕ್‌ಗೆ ಎರಡನೆಯವಳು. ಕಳೆದ ಮೇಯಲ್ಲಿ ಒಟ್ಟಾರೆ ಊಟಿ ದರ್ಶನದಲ್ಲಿ ಇಲ್ಲಿಗೂ ಭೇಟಿಕೊಟ್ಟಿದ್ದೆವು. ರಂಗನಾಥ ಮಂಜಿನ ಮುಸುಕಿನೊಳಗಿದ್ದ. ‘ಎಲ್ಲಿರುವೆ ರಂಗನಾಥಾಆಆಆಆಆಆಆ’ ಎಂದು ಕಣಿವೆ ಪ್ರತಿಧ್ವನಿಸುವಂತೆ ಬೊಬ್ಬಿಟ್ಟೆವು. ಆತನಿಗೆ ಕೇಳಿಸಿರಬೇಕು. ಧುತ್ತನೆ ಸ್ತಂಭ ಮೈದೋರಿ, ನುಡಿದಂತಾಗಿತ್ತು ‘ಇಕೋ ಇಲ್ಲಿ! ನಾನಿರುವ ಎತ್ತರಕ್ಕೆ ನೀನೇರಬಲ್ಲೆಯಾ?’ ಅಂದಿನ ಕಾರ್ಯಕ್ರಮ ಪಟ್ಟಿಯಲ್ಲಿ ಅಷ್ಟು ದೊಡ್ಡ ಸವಾಲಿಗೆ ಜವಾಬು ಕೊಡಲು ಸಮಯವಿರಲಿಲ್ಲ. ಶೀಘ್ರದಲ್ಲೇ ಇನ್ನೊಮ್ಮೆ ಬಂದು ಉತ್ತರ ಕೊಟ್ಟೇವು ಎಂದು ತಂಡ ನಿರ್ಧರಿಸಿದಾಗ ನನ್ನ ಅನುಮೋದನೆಯೂ ಇತ್ತು; ಹಳೆಯ ಸೋಲಿಗೆ ಮಂಜು ಮುಸುಕಿತ್ತು. ಹಾಗೇ ಈ ಬಾರಿ ಬಂಡೆಯ ಬುಡದವರೆಗೂ ಮುಂದುವರಿದೆ. ಆದರೆ ಕಲ್ಪಿತ ದೃಢತೆ ಕನಿಷ್ಠ ಎಂಟ್ನೂರಡಿ ಖಾಚಿತ್ಯದೆದುರು ಕರಗಿಹೋಯ್ತು. ಆಳ ದಿಟ್ಟಿಸುವ ಭಯ – ಸ್ವಭಾವ, ಜಾಗ್ರತವಾಯ್ತು. ಅಭಯನ ಇನ್ನಿಲ್ಲದಂತೆ ಒತ್ತಾಯಿಸಿದ. ಅಶೋಕ್ ವಾಪಾಸ್ ಬಂದು ಬೆನ್ನಿಗೆ ನಿಂತಿದ್ದರೂ ಬದಲದ ಮಾನಸಿಕ ತಡೆಯಿಂದ ನಾನು ಹಿಂದುಳಿದೆ.”

ಮತ್ತಷ್ಟು ಹತಪ್ರಭೆಗಳು: ಜೊನಾಸ್ ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲೇ ಇದ್ದಾಗ ನಮ್ಮೊಡನೆ ಒಂದೆರಡು ಚಾರಣ ಕಾರ್ಯಕ್ರಮಗಳಿಗೆ ಬಂದಿದ್ದರು. ಅವರ ದೈಹಿಕ, ಮಾನಸಿಕ ಒಲವುಗಳು ನಮ್ಮದೇ ಸ್ತರದಲ್ಲಿದ್ದರೂ ಆರ್ಥಿಕ ಪಾರತಂತ್ರ್ಯ ಹೆಚ್ಚಿನ ಚಟುವಟಿಕೆಗಳಿಗೆ ಕಡಿವಾಣ ಹಾಕಿತ್ತು. ಈಚೆಗೆ ಕರಿಚಿನ್ನದ ನಾಡು (ಗಲ್ಫ್ ದೇಶ) ಸೇರಿದ್ದವರು, ಗೃಹಸ್ಥನಾಗುವ ಯೋಚನೆಯೊಡನೆ ರಜೆಯಲ್ಲಿ ಬಂದಿದ್ದರು. ನಾನು ಊಟಿ ಎಂದಾಗ ಸಹಜವಾಗಿ ಅವರ ತಲೆ ಓಡಿದ್ದು ಮಧುಚಂದ್ರದ ಯೋಜನೆಗೆ! ಹೆಚ್ಚೆಚ್ಚು ಚಾರಣ ಮಾಡಬೇಕೆಂಬ ಮೂಲ ಪ್ರವೃತ್ತಿಯ ಪೋಷಣೆಯ ಆಸೆಗೂ ಮಿಗಿಲಾಗಿ ಭಯವೂ ಇವರನ್ನು ಒಮ್ಮೆ ವಿಚಲಿತಗೊಳಿಸಿತಂತೆ. ಆದರೆ ಇಲ್ಲಿ ಜಾಣಾ’s (Jonas’ ಎಂಬರ್ಥದಲ್ಲಿ?) ಮನಸ್ಸು ಮದುವೆಯೋತ್ತರದ ಯೋಜನೆಯನ್ನೇ ಬೆಳೆಸಿತು. ಬಿಡುವುಂಟು. ಸಣ್ಣ ಖರ್ಚು ಮತ್ತು ಶ್ರಮದಲ್ಲಿ ಸಾಹಸಾನುಭವ ದಕ್ಕಿದರೆ ಯಾಕೆ ಬೇಡ? ಕಷ್ಟವಾದರೆ ಹತ್ತದುಳಿದ. ಮಧುಚಂದ್ರಕ್ಕೆ ಊಟಿ ಹೇಗೆ ಎಂದು ನೋಡಿ ಅಂದಾಜಿಸುವ ಮಟ್ಟದಲ್ಲಿ ನಷ್ಟವಿಲ್ಲ! ಜೊನಾಸ್ ಇಂಗಿತ ನನಗೆ ಮೊದಲೇ ಸ್ಪಷ್ಟವಾಗಿತ್ತು. ಸಾಲದ್ದಕ್ಕೆ ಕೆಲವೇ ದಿನಗಳ ಮೊದಲು ಇವರ ವೃತ್ತಿ ಸಂಬಂಧದಲ್ಲಿ ಯಾವುದೋ ರಾಸಾಯನಿಕ ಇವರ ಕೈಗೆ ಹತ್ತಿ, ತೀವ್ರ ಹುಣ್ಣುಗಳಾದದ್ದು ಇನ್ನೂ ಪೂರ್ತಿ ಗುಣವಾಗಿರಲಿಲ್ಲ. ಭಟ್ಟರ ಮಾತಿನಲ್ಲಿ ಹೇಳುವುದಾದರೆ “ಮೃದುಪಾಣಿಯಾದ ಜೋನಾಸ್ ಸ್ತಂಭದ ಬುಡ ತಲಪುವಾಗ ರಕ್ತಹಸ್ತನಾಗಿದ್ದರು.” ಇದು ಕೊಳ್ಳಕ್ಕೆ ಇಳಿಯುವಾಗ ಅನಿವಾರ್ಯತೆಯಲ್ಲಿ ಹುಲ್ಲು, ಕಲ್ಲು, ಮುಳ್ಳು ಸವರಿದ ಪರಿಣಾಮ. ಕೊನೆಯದಾಗಿ ಅವರಿಗೂ ಔನ್ನತ್ಯದ ಭೀತಿ ಕಾಡಿ, ಹಿಂದುಳಿದವರ ತಂಡಕ್ಕೆ ತಾನೇ ಮುಂದಾಳು ಎಂದರು!

ಉಪಾಧ್ಯರು ಬಂಡೆ, ಬೆಟ್ಟ ಕಡಿಮೆ ಕಂಡವರಲ್ಲ. ಕಂಡದ್ದೆಲ್ಲ ವಿರಾಮದಲ್ಲಿ ಹತ್ತಲು ಪ್ರಯತ್ನಿಸದೇ ಬಿಟ್ಟದ್ದೂ ಇಲ್ಲ. ಹಾಗೆ ಒಳ್ಳೆಯದು ಕಂಡದ್ದನ್ನು ಅಷ್ಟೇ ಒಳ್ಳೆ ಛಾಯಾಚಿತ್ರಗಳಲ್ಲಿ ಸಂಗ್ರಹಿಸಿ, ತನ್ನ ಸಂಪರ್ಕಕ್ಕೆ ಬಂದವರಿಗೆ ಪ್ರಕೃತಿಹುಚ್ಚು ಸಾಂಕ್ರಾಮಿಕವಾಗುವಂತೆ ಸಾಕಷ್ಟು ಕೆಲಸವನ್ನೂ ಮಾಡಿದ್ದಾರೆ. ಅವರು ನಮ್ಮ ಹಿಂದಿನ ಮೋಜಣಿ ಓಟಕ್ಕೂ (ಒಟ್ಟು ಊಟಿ ನೋಡಿ ಹೋಗುವ ಯಾತ್ರೆ) ಬಂದಿದ್ದರು. ಸ್ತಂಭದ ವರ್ಣ ಛಾಯೆಗಳು, ಪ್ರಾಕೃತಿಕ ಒಡಕು, ಉಬ್ಬು, ಹಸಿರು ಮೂಡಿಸುವ ವಿವಿಧ ಭಾವಗಳನ್ನು ಕಂಡು ಪರವಶರಾಗಿದ್ದರು. ಅಂದೇ ಅಲ್ಲೇ ‘ಇದನ್ನು ಮುಂದೊಂದು ದಿನ ಹತ್ತಲು ಬರಲೇಬೇಕು. ಆಗ ಆ, ಈ ಕೋನಗಳಿಂದ ಇಂತಿಂಥಾ ಮಸೂರ ಬಳಸಿ ಚಿತ್ರ ಹಿಡಿಯಬೇಕು’ ಎಂದು ಅಂದಾಜಿಸಿದ್ದರಂತೆ. ಮನೋಭಿತ್ತಿಗೆ ಹತ್ತಿಕೊಂಡ ಕಲ್ಪನೆ ಸಾಕಾರಗೊಳ್ಳುವ ಗಳಿಗೆ ಒದಗಿತ್ತು. ಆದರೆ ಈಚಿನ ಎರಡು ತಿಂಗಳು ಅವರನ್ನು ಸತತ ಕಾಡಿದ ಕೆಮ್ಮು ಹೋದ ರಾತ್ರಿಯೂ ಗೋಳುಹೊಯ್ದುಕೊಂಡಿತ್ತು. ಆದರೂ ಅವರಿವರನ್ನು ಅನುಸರಿಸಿ ಸ್ತಂಭದ ಪಾದ ಮುಟ್ಟಿದ್ದರು. ಅದೇ ಲಹರಿಯಲ್ಲಿ ಹಗ್ಗಕ್ಕೆ ನಾಲ್ಕನೆಯವರಾಗಿ ಪೋಣಿಸಿಕೊಂಡು ಏರಲೂ ತೊಡಗಿದರು. ಇವರಿಗೆ ಕೆಲವು ವರ್ಷಗಳ ಹಿಂದೆ ವಾಹನಾಪಘಾತಕ್ಕೆ ಸಿಕ್ಕಿ ತೀವ್ರ ಜರ್ಝರಿತಗೊಂಡ ಕಾಲೊಂದು ಸ್ವಲ್ಪ ದುರ್ಬಲವಾಗಿತ್ತು. ಹತ್ತಿಪ್ಪತ್ತಡಿ ಮೇಲೆ ಹೋಗುತ್ತಿದ್ದಂತೆ, ಅದು ಸ್ವಾತಂತ್ರ್ಯ ಬಯಸಿ ಹಿಂದೆಳೆಯತೊಡಗಿತು. ಕೆಳಗಿನಿಂದ ರಕ್ಷಣಾ ಹಗ್ಗ ಕಟ್ಟಿಬಿಟ್ಟ ಅಭಯ, ಮೇಲಿನಿಂದ ಹಗ್ಗ ಜಗ್ಗುತ್ತಿದ್ದ ದೇವು ಸುಲಭ ಜಾಡಿನ ಬಗ್ಗೆ ಧಾರಾಳ ಮಾಹಿತಿ ಕೊಡುತ್ತಲೇ ಇದ್ದರು. ಆದರೂ ಕಾಲು ನಡುಗಿತು, ಒಮ್ಮೆಗೇ ಸೊಂಟದ ಕೀಲೇ ಸೆಟೆದ ಅನುಭವವಾಗಿ ಉಪಾಯ್ದರು ಸ್ವರ್ಗ ಕೆಡೆದ ತ್ರಿಶಂಕುವಾದರು! “ಬಿಲೇ ಟೈಟ್. ಉಪಾದ್ರು ಜಾರಿದ್ರೂ” ಬೊಬ್ಬೆ ಭವಾನಿ ಕಣಿವೆ ತುಂಬಿತು. Belay ಅಂದರೆ ರಕ್ಷಣಾ ಹಗ್ಗ – ಬಿಗಿ ಮಾಡುವ ಸೂಚನೆ ಯಾರು ಕೊಡದಿದ್ದರೂ ಶಿಲಾರೋಹಣದ ತಂತ್ರಗಳನ್ನು ನಾವು ಸರಿಯಾಗಿಯೇ ರೂಢಿಸಿದ್ದರಿಂದ ಸಹಜವಾಗಿಯೇ ಬಿಗಿಯಿತ್ತು. ಮತ್ತಲ್ಲಿ ಗಾಬರಿಪಡುವಂತದ್ದೇನು ಆಗಲೂ ಇಲ್ಲ. ಆದರೆ ಒಂದು ದೃಢ ನೆಲೆ ತಪ್ಪಿ ಒಮ್ಮೆ ಹಗ್ಗದಲ್ಲಿ ನೇತಾಡಿದ್ದಕ್ಕೇ ಉಪಾಧ್ಯರ ಮನೋಬಲ ಕುಸಿದದ್ದಂತೂ ನಿಜ. ನಿಧಾನಕ್ಕೆ ಹಗ್ಗದ ಆಧಾರದೊಡನೆ ಹಿಂದಕ್ಕೆ ಜಾರಿ ಜಾರಿ ಇಳಿದು, ನಿರ್ಮಮವಾಗಿ ಉಳಿದವರಿಗೆ “ನೀವು ಮುಂದುವರಿಸಿ” ಹೇಳಿಯೇ ಬಿಟ್ಟರು. ಎಲ್ಲ ಮುಗಿದ ಮೇಲೆ ಉಪಾಧ್ಯರು ನಮ್ಮೊಡನೆ ದೊಡ್ಡದಾಗಿಯೇ ಯೋಚಿಸಿದ್ದಿದೆ, “ದೇವು, ಅಭಯ ಸರಿಯಾಗಿಯೇ ಉತ್ತೇಜನ ಕೊಟ್ಟರು. ಆದರೂ ನಾನು ಎದುರಿರಬೇಕಿತ್ತು. ಅಶೋಕರ ಹೆಚ್ಚಿನ ಅನುಭವದ ಬಲ ಸಿಕ್ಕಿದ್ದರೆ ಏರಿಯೇಬಿಡುತ್ತಿದ್ದೆನೇನೋ.” ಅಂತೂ ಅಂದು ಹಿಂದುಳಿದ ಸದಸ್ಯರ ತಂಡಕ್ಕೆ ಉಪಾಧ್ಯರು ಕೊನೆಯ ಸದಸ್ಯರು.

(ಮುಂದುವರಿಯಲಿದೆ)

[ಅಂದ ಮಾತ್ರಕ್ಕೆ ‘ಅಶೋಕನಿಗೇ’ ಬರಹದ ಉನ್ನತ ಸ್ತರ ಸಂದರ್ಶನಕ್ಕೆ ಉತ್ತೇಜನದ ಮಾತುಗಳನ್ನು ಕೊಡುವಲ್ಲಿ ನೀವು ಯಾಕೆ ಹಿಂದುಳಿಯಬೇಕು? ವಿಮರ್ಶೆಯ ನುಡಿ-‘ಕಟ್ಟು’ಗಳನ್ನು ಬಿಗಿದು, ತತ್ಸಮಾನ ಅನುಭವಗಳ ಆಸರೆ ಕೊಟ್ಟು ನನ್ನನ್ನು ಏರಿಸಿಕೊಳ್ಳುವಲ್ಲಿ ಮುಂದಾಳುಗಳಾಗಿ. ನೀವು ಅಷ್ಟು ಮಾಡಿ ರಂಗನಾಥನ ಮಂಡೆಗೆ ಇನ್ನೆಷ್ಟು ದೂರಾಆಆಆಆ ಎನ್ನುವುದರೊಳಗೆ ಮುಂದಿನ ಗುರುವಾರ ಬಂದಿರುತ್ತದೆ, ನಾನಿನ್ನಷ್ಟು ಹಗ್ಗ ಬಿಚ್ಚಿಡುತ್ತೇನೆ!]