ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೧)

೧೯೭೪ರ ಅಪರಾರ್ಧದಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಶುರು ಮಾಡುವುದೆಂದು ಸಂಕಲ್ಪಿಸಿ, ಪುತ್ತೂರಿನಿಂದಮಾ ಉಡುಪಿವರೆಗಿರ್ದ (ನನ್ನ ಮಿತಿಯ) ದಕ್ಷಿಣ ಕನ್ನಡ ನಾಡಿನಲ್ಲಿ ಓಡಾಡಿಕೊಂಡಿದ್ದೆ. ಅದೊಂದು ಶನಿವಾರ ಮೈಸೂರಿನಿಂದ ಹೀಗೇ ಪುತ್ತೂರಿಗೆ ಬಂದ ನನ್ನ ಪರ್ವತಾರೋಹಿ ಗೆಳೆಯ ವಿಶ್ವನಾಥನನ್ನು ಕೂಡಿಕೊಂಡು ನಾನೊಂದು ದಿಢೀರ್ ಯೋಜನೆ ಹಾಕಿದೆ. ಲಕ್ಷ್ಯ ಸುಬ್ರಹ್ಮಣ್ಯದಿಂದ ಏರಬೇಕಾದ ಕುಮಾರಪರ್ವತ. ಸೋದರ ಮಾವನ ಮಗ ಚಂದ್ರಶೇಖರನೂ ಉಮೇದ್ವಾರಿಯಾದ. ಅವನು ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (ಇನ್ನೂ ಒಂಬತ್ತೋ ಹತ್ತನೆಯದೋ ತರಗತಿ). ಹುಲ್ಲು, ಕಲ್ಲುಗಳ ಜಾಡು ಮತ್ತು ಪ್ರತೀತಿಯಂತೆ ಮರೆಸಿ ಕುಟುಕಬಹುದಾದ ಹಾವಿನ ಭಯ. ಅದಕ್ಕೆ ಒಳದಾರಿ ಕಂಡುಕೊಂಡೆವು. ಅವನ ಚಿಕ್ಕಪ್ಪ – ಗೌರೀಶಂಕರರ ಪ್ಯಾಂಟ್ ಹಾಕಿಸಿ, ಬಡಕಲು ಹೊಟ್ಟೆಗೆ ಬೆಲ್ಟಿನ ಬಿಗಿತವನ್ನೂ ನೇತುಬೀಳುವ ಉದ್ದ ಕಾಲುಗಳಿಗೆ ಗೋಣಿ ಹಗ್ಗದ ರಕ್ಷೆಯನ್ನೂ ಕೊಟ್ಟದ್ದಾಯ್ತು. ಇನ್ಯಾರದೋ ಸ್ವಲ್ಪ ದೊಡ್ಡದೇ ಎನ್ನಬಹುದಾದ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲ ಹಾಕಿ, ಬಿಗಿದು ಟಿಪ್ ಟಾಪ್ ಮಾಡಿದೆವು. ಅದುವರೆಗೆ ಸುಬ್ರಹ್ಮಣ್ಯ ಪೇಟೆಯನ್ನೂ ನೋಡದ ನಾವು ಮೂವರು (ಸಂಖ್ಯಾ ಜೋಯಿಸರು ಏನು ಹೇಳ್ತಾರೋ!) ಕುಮಾರಪರ್ವತದ ಜಪಮಾಡುತ್ತಾ ದಿನದ ಕೊನೇ ಬಸ್ಸೇರಿದೆವು.

ಅಂದಿನ ಸುಬ್ರಹ್ಮಣ್ಯ ಬಿರುಮಲೆಯ ತಪ್ಪಲಿನಲ್ಲಿ, ಕಗ್ಗಾಡ ಅಂಚಿನಲ್ಲಿ ಜೂಗರಿಸುತ್ತಿದ್ದ ದೊಡ್ಡ ಹಳ್ಳಿ. ಅಲ್ಲಿನ ಏಕೈಕ ಹೋಟೆಲ್ ಕುಮಾರಕೃಪಾ ಬಾಗಿಲು ಮುಚ್ಚುವ ಮುನ್ನ ದಿನದ ಕೊನೆಯ ಬಸ್ಸಿನ (ನಮ್ಮದು) ಡ್ರೈವರ್ ಕಂಡಕ್ಟರ್ (ಮತ್ತೆ ಆಕಸ್ಮಿಕವಾಗಿ ಒದಗಿದರೆ ನಾಲ್ಕೆಂಟು ಪ್ರವಾಸಿಗಳಿಗೆ) ಊಟ ಕೊಡಲು ತೆರೆದಿತ್ತು. ಹಾಗಾಗಿ ನಾವೂ ಊಟ ಗಿಟ್ಟಿಸಿದೆವು. ಅಲ್ಲಿ ಪೇಟೆಗೆ ಬಂದಿದ್ದ ಮಲೆಕುಡಿಯರ ಕುಂಡನ ಪರಿಚಯವಾಯ್ತು. ಬೆಟ್ಟದ ತಪ್ಪಲಿನ ಕಾಡಿನಿಂದಲೇ ಬಂದ ಈತನನ್ನು ಹೋಟೆಲಿನವರು ಸಮರ್ಥ ಮಾರ್ಗದರ್ಶಿ ಎಂದೇ ಪರಿಚಯಿಸಿದರು. ಆದರೆ ಆತ ಮೊದಲು ಶುದ್ಧಾಂಗ ಪಟ್ಟಣಿಗರಾದ ನಮಗೆ ಹಲವು ಅಡ್ಡಿಗಳನ್ನು ಹೇಳಿದ. ದೀಪಾವಳಿಯ ಸುಮಾರಿಗೆ, ಅಂದರೆ ಹುಲ್ಲಿಗೆ ಬೆಂಕಿ ಬೀಳುವವರೆಗೆ (ಇಂದು ನಮಗ್ಗೊತ್ತು, ಬೆಂಕಿ ಬೀಳುವುದಲ್ಲ, ಮನುಷ್ಯರೇ ಹಾಕುವುದು) ಏರುವ ಜಾಡು ಹಿಡಿಯುವುದು ಕಷ್ಟ. ತಪ್ಪಲಿನಲ್ಲಿ ಆನೆಗಳ ಸಂಚಾರವಿರುವುದರಿಂದ ಬೆಳಕು ಹರಿಯುವ ಮುನ್ನ ಹೊರಡುವುದು ಅಪಾಯ. ಮತ್ತೆ ಅಷ್ಟುದ್ದದ ದಾರಿಯನ್ನು (ಎಷ್ಟೋ ಮೈಲು ಹೇಳಿದ್ದ) ದಿನ ಒಂದರಲ್ಲಿ ನಮ್ಮಿಂದ ಹತ್ತಿಳಿಯುವುದು ಅಸಾಧ್ಯ ಎನ್ನುವ ಮಾತಿಗಂತು ಹೋಟೆಲಿನವರೂ ಅನುಮೋದನೆಯ ಧ್ವನಿಗೂಡಿಸಿದರು. ನಮ್ಮ ಪರ್ವತಾರೋಹಣ ಸಾಧನೆಗಳ ಬಡಿವಾರದಲ್ಲಿ ಅವನನ್ನು ಹೇಗೋ ಒಪ್ಪಿಸಿದೆವು. ದೇವಸ್ಥಾನದ ಛತ್ರದಲ್ಲಿ (ಉಚಿತ?) ಕೋಣೆಯೊಂದು ಹಿಡಿದು, ನಾಲ್ಕಾಣೆ ಬಾಡಿಗೆಯ ಮೂರು ಚಾಪೆ ಪಡೆದು ರಾತ್ರಿ ಕಳೆದೆವು.

ಐದು ಗಂಟೆಗೆ ಮುಖಕ್ಕಷ್ಟು ನೀರು ಮಾತ್ರ ಬಡಿದುಕೊಂಡು ಕುಂಡನ ಬೆನ್ನು ಹಿಡಿದೆವು. ಕಾಡು ನುಗ್ಗಿದಲ್ಲಿ ಸ್ವಲ್ಪ ಅಡ್ಡ ದಾರಿ ಹಿಡಿದು ಸಿಕ್ಕ ತೊರೆದಂಡೆಯಲ್ಲಿ ಚುರುಕಿನ ಪ್ರಾತರ್ವಿಧಿಗಳನ್ನಷ್ಟು ಮುಗಿಸಿ, ಅವಿರತ ಬೆಟ್ಟ ಏರಿದೆವು. (ಕುಂಡ ಹೇಳಿದ ಸ್ಥಳನಾಮಗಳನ್ನಷ್ಟೇ ಪೋಣಿಸಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಲೆಂಕಿರಿ, ಗಿರಿಗದ್ದೆ, ಕಲ್ಲ ಚಪ್ಪರ, ಬಾರತೊಪ್ಪೆ, ಶೇಷ ಮತ್ತು ಸಿದ್ಧಪರ್ವತಗಳನ್ನು ಅವಿರತ ಹೆಜ್ಜೆಗಳಲ್ಲಿ ಕೆಳನೂಕಿ ಶಿಖರ ಸೇರಿದೆವು!) ವಾಸ್ತವದಲ್ಲಿ ಬೆಟ್ಟದ ಪಾದದಲ್ಲಿದ್ದ ಭಾರೀ ಮರಗಳ ಕಾಡನ್ನು ಉತ್ತರಿಸುವ ಕೊನೆಯಲ್ಲಿ ಸಿಗುವ ಲೆಂಕಿರಿ (ಬಿದಿರಿನ ಒಂದು ಪ್ರಬೇಧ) ಕಾಡು ಅ ವಲಯದ ಸ್ಥಳನಾಮವೂ ಹೌದು. ಮುಂದೆ, ಎಲ್ಲ ಅನುಭವಿಗಳೂ ಅಪರಿಚಿತರ ‘ಆರಂಭಶೂರತ್ವವನ್ನು’ ಪರೀಕ್ಷಿಸಲು ಸಹಜವಾಗಿ ಹೇಳುವ ಮಾತಿನಷ್ಟೇ ಕುಂಡನ ಮಾತೂ ನಿಜವಿತ್ತು. ಒಟ್ಟಾರೆ ಬೆಟ್ಟದ ಮೈಯಲ್ಲಿ ಹುಲ್ಲು ಬೆಳೆದು ನಿಂತಿದ್ದದ್ದು ನಿಜವಾದರೂ ಶಿಖರಮುಖಿಯಾದ ಸವಕಲು ಜಾಡು ಅಬಾಧಿತ ಮತ್ತು ಸ್ಪಷ್ಟವಿತ್ತು. ಸುಮಾರು ಅರ್ಧ ದಾರಿಯಲ್ಲಿ ಸಿಗುವ, ಗಿರಿಗದ್ದೆ ಹಿಂದೆಂದೋ ‘ಬೆಟ್ಟದಜೀವ’ವೊಂದು ರೂಢಿಸಿದ್ದ ಕೃಷಿ ನೆಲವಂತೆ. (ಇಂದು ಅಲ್ಲಿ ಮತ್ತೆ ಒಕ್ಕಲು ನೆಲೆಸಿ ಎರಡು ದಶಕಗಳೇ ಮೀರಿದೆ. ಇಂದು ಗಿರಿಗದ್ದೆ ಭಟ್ಟರ ಮನೆ ಚಾರಣಿಗರಿಗೆ ಹಳಗಾಲದ ಅಡಗೂಲಜ್ಜಿಯ ಮನೆಯೇ) ಅಲ್ಲಿನ ಜೋಪಡಿಯ ಅವಶೇಷ, ಹಡಿಲು ಬಿದ್ದ ಗದ್ದೆ, ಕಾಡು ನುಂಗುತ್ತಿದ್ದರೂ ಎಡೆಯಲ್ಲಿ ಕೈಯಾಡಿಸುತ್ತಿದ್ದ ಬಾಳೆ, (ನೆನಪು ಸರಿಯಿದ್ದರೆ) ಒಂದೆರಡು ಲಾಚಾರಿ ತೆಂಗು ಕಂಗುಗಳನ್ನು ಮೇಲಂಚಿನಿಂದಲೇ ದಾಟಿದ್ದೆವು. ದಿಣ್ಣೆಯಿಂದ ದಿಣ್ಣೆಗೆ ಉಸಿರುಗಟ್ಟಿ ಏರಿದಷ್ಟೂ ಮುಗಿಯದ ಭಾವ ತರುತ್ತಿದ್ದ ಮುಂದಿನ ಹಂತವನ್ನು ಹಿಂದಿನವರು ಅನ್ವರ್ಥಕವಾಗಿ ಬಾರತೊಪ್ಪೆ ಅಥವಾ ಭತ್ತದ ರಾಶಿ ಎಂದಿದ್ದರು. ನಾವೋ ಆ ರಾಶಿಯ ಮೇಲೆ ಪದ ಕುಸಿಯುವ ಹುಳುಗಳು! ಅದೊಂದು ದಿಣ್ಣೆ ಕಳೆಯುವಾಗ ಅಜ್ಞಾತ ಹಿಂದಿನವರು ನಾಲ್ಕೋ ಆರೋ ಕಲ್ಲಕಂಬ ನಿಲ್ಲಿಸಿ, ಕೆಳಗೆ ಕಟ್ಟೆಕಟ್ಟಿ, ಮೇಲೆ ಚಪ್ಪಡಿ ಹಾಸಿ ನಿಲ್ಲಿಸಿದ್ದ ಹತ್ತು ಹದಿನೈದಡಿ ಚಚ್ಚೌಕದ ಕಲ್ಲಚಪ್ಪರ ಕಾಣಸಿಕ್ಕಿ ನಮಗೆ ಸಣ್ಣ ಬೆರಗನ್ನೇ ಉಂಟುಮಾಡಿತ್ತು. ದೀರ್ಘ ಬೋಳು ಬೆಟ್ಟದೇಣಿನ ಏಕಮಾತ್ರ ನೆರಳ ತುಣುಕು ಈ ಕಲ್ಲಚಪ್ಪರ. ಅದರ ಒತ್ತಿನ ಕಾಡತೊರೆಯಂತೂ (ಹಿಂದಿನವರು ಮೇಲೆಲ್ಲೋ ಸಹಜ ತೊರೆಗೆ ಅಡ್ಡ ಚರಂಡಿ ಹೊಡೆದು ತಿದ್ದಿದ್ದೂ ಇರಬಹುದು) ನಿರ್ವಿವಾದವಾಗಿ ಪ್ರಕೃತಿ ನಮಗಿತ್ತ ಅಮೋಘ ವರ. ಹಾಗೆ ಒಂದೆರಡು ಸಣ್ಣ ಅಡ್ಡನೋಟ ಮತ್ತು ಉಸಿರು ಹೆಕ್ಕುವ ಕ್ರಿಯೆಗಳನ್ನು ಬಿಟ್ಟರೆ ಶೇಷಪರ್ವತ, ಸಿದ್ಧರಬೆಟ್ಟಗಳನ್ನು ಮಣಿಸಿ, ಶಿಖರ ಪಾದದಲ್ಲಿದ್ದ ಕುಮಾರ ತೀರ್ಥವನ್ನು ಮುಟ್ಟಿದಾಗ ಕುಂಡನೂ ನಂಬಲಿಲ್ಲ – ಗಂಟೆ ಹತ್ತೂ ಮುಕ್ಕಾಲು.

ತೊರೆಯಲ್ಲಿ ಮಿಂದು, ಶುದ್ಧ ಬಂಡೆಯ ಶಿಖರಕ್ಕೇರಿ, ವೀಕ್ಷಣೆ ಮತ್ತು ‘ಸಂಪ್ರದಾಯ’ದಂತೆ ಕುಮಾರಲಿಂಗ ಸಂಗ್ರಹ ನಡೆಸಿ, ತೊರೆಗೇ ಮರಳುವಾಗ ಹನ್ನೆರಡು ಗಂಟೆ. ಬುತ್ತಿಯೂಟ ಮುಗಿಸಿ ಇಳಿಯೋಟ ನಡೆಸಿದಾಗಂತೂ ಪೇಟೆ ಮೂರೂವರೆ ಗಂಟೆಯ ದಾರಿ. ಅಂದಿನ ಸುಬ್ರಹ್ಮಣ್ಯ ಇಂದಿನಂತೆ ಸ್ಪಂದನರಹಿತ ಸಂತೆಯಾಗಿರಲಿಲ್ಲ. ದಾರಿಯಲ್ಲಿ ಸಿಕ್ಕವರು, ಹೋಟೆಲಿನವರು, ದೇವಾಲಯದ ಅರ್ಚಕರು ಪ್ರತ್ಯೇಕ ಪ್ರತ್ಯೇಕವಾಗಿ ಉದ್ಗರಿಸುವವರೇ “ನಿಜಕ್ಕೂ ಶಿಖರಕ್ಕೆ ಇಷ್ಟು ಬೇಗ ಹೋಗಿ ಬಂದ್ರಾ?!!” ಸಾಕ್ಷ್ಯಕ್ಕೆ ಕುಂಡನಿದ್ದ, ನಮ್ಮ ಕಿಸೆಯ ಕುಮಾರಲಿಂಗಗಳಿದ್ದವು. ಅವಕ್ಕೂ ಮಿಗಿಲಾಗಿ ನಾವು ಮೊದಲೇ ಮಾತಾಡಿಕೊಂಡಂತೆ ಶಿಖರದಿಂದ ಕನ್ನಡಿ ಹಿಡಿದು ಸೂರ್ಯಬಿಂಬ ಪ್ರತಿಫಲಿಸಿದ್ದನ್ನು ದೇವಾಲಯದ ವಠಾರದಲ್ಲೇ ಕಂಡವರಿದ್ದರು.

ಒಳದಾರಿಯಲ್ಲಿ ಬೇಸ್ತು – ಎರಡನೇ ಖಂಡಕ್ಕೊಂದು ಪೀಠಿಕೆ

ನಿಮಗೆ ಗೊತ್ತಿರಬಹುದು – ಅದುವರೆಗಿನ ನನ್ನ ಪರ್ವತಾರೋಹಣದ ಒಡನಾಡಿಗಳೆಲ್ಲ ಮೈಸೂರಿನವರು. ನಮ್ಮೂವರ ‘ಕುಮಾರ ವಿಜಯ’ದ ಸವಿವರ ಕಥನ (ನನ್ನ ಲೇಖನವನ್ನು ಕರ್ಮವೀರ, ವಾರಪತ್ರಿಕೆ ೨೮-೯-೧೯೭೫ರ ಸಂಚಿಕೆಯಲ್ಲಿ ಪ್ರಕಟಿಸಿತು) ಓದಿ, ನನ್ನಿಂದ ಕೇಳಿ, ಮಿತ್ರ ವಲಯದಲ್ಲಿ ಕುತೂಹಲ ತರಂಗಗಳು ಅಸಂಖ್ಯವಾದವು. ಒಂದೇ ತಿಂಗಳಲ್ಲಿ ಹೆಚ್ಚಿನ ಶೋಧ ಸಾಧ್ಯತೆಗಳನ್ನು ಜೊತೆಗೂಡಿಸಿಕೊಂಡು ನಾನು ಮೈಸೂರಿನಿಂದಲೇ ಇನ್ನೊಂದು ತಂಡ ಹೊರಡಿಸಬೇಕಾಯ್ತು – ಕುಮಾರಪರ್ವತಕ್ಕೇ ಜೈ!

ಅದೊಂದು ಸಂಜೆ, ಕೊನೆಯ ಮಡಿಕೇರಿ ಬಸ್ಸು ಹಿಡಿಯಲು ನಮ್ಮ ಹದಿಮೂರು ಜನರ ತಂಡ ದಡಬಡಿಸುತ್ತಿದ್ದಾಗ ಅನಿರೀಕ್ಷಿತವಾಗಿ ನನ್ನ ತಂದೆ ವಿದೇಶೀ ಪ್ರಾಯಸ್ಥರೊಬ್ಬರನ್ನು ಕರೆ ತಂದರು. ಹೆಲ್ಮುಟ್ ಸ್ಟೈನ್ ಮೇಯರ್, ಜರ್ಮನಿಯ ಆಲ್ಪ್ಸ್ ಕ್ಲಬ್ಬಿನ (ಗೌರವ ಅಲ್ಲ, ಕಾರ್ಯನಿರತ) ಅಧ್ಯಕ್ಷ. ಅವರ ಮಗಳು, ಅಳಿಯ ಮಾನಸಗಂಗೋತ್ರಿಯ ಜರ್ಮನ್ ಭಾಷಾ ಶಿಕ್ಷಕರು. ಸಂಬಂಧದ ಕೊಂಡಿ, ಭಾರತ ದರ್ಶನದ ಬಯಕೆ ಒಗ್ಗೂಡಿ ಅರವತ್ತರ ಹರಯ ಮೀರಿದ ಈ ದೃಢಕಾಯ (ಸ್ಥೂಲ ಶರೀರಿ ಎಂದೇ ಹೇಳಬಹುದು) ಮೈಸೂರಿಗೆ ಬಂದಿದ್ದರು. ಅದಕ್ಕೂ ಮುನ್ನ ಅವರು ಪಶ್ಚಿಮಘಟ್ಟದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದರು. ಹೆಚ್ಚಿನ ವಿವರಗಳಿಗಾಗಿ ಮೈಸೂರಿನಲ್ಲಿ ಅವರಿವರನ್ನು ವಿಚಾರಿಸಿದಾಗ ಕುದುರೆಮುಖ ಶಿಖರ ಹತ್ತಿದ್ದ ನನ್ನ ತಂದೆಯ ಖ್ಯಾತಿ ಇವರ ಕಿವಿ ಮೇಲೆ ಬಿದ್ದು, ಹುಡುಕಿಕೊಂಡು ಬಂದರಂತೆ. ತಂದೆ “ಬರಿಯ ಮಾತೇಕೆ! ಅನುಭವಕ್ಕೇ ಸಿದ್ಧರಿದ್ದರೆ ಮಗನ ತಂಡ ಸೇರಬಹುದು . . .” ಎಂಬ ಸೂಚನೆ ಕೊಟ್ಟರು. ವಾಕ್ಯಪೂರ್ಣಗೊಳ್ಳುವ ಮೊದಲು ಹೆಲ್ಮುಟ್ ಅಜ್ಜ ಅಳಿಯನ ಮನೆ ದಾರಿಯಲ್ಲಿ ಕಾರೋಡಿಸಿ, ತನ್ನ ಸದಾ ಸಜ್ಜಾಗಿದ್ದ (ಎವರ್ರೆಡಿ ಎನ್ನುವ ಹಾಗೆ) ಬೆನ್ನುಚೀಲ ಏರಿಸಿಕೊಂಡು ಬಂದುಬಿಟ್ಟಿದ್ದರು!

ನಂಬಿದರೆ ನಂಬಿ ಆ ದಿನಗಳಲ್ಲಿ ತುರುಸಿನ ಸ್ಪರ್ಧೆಯಲ್ಲಿ ಸಂಜೆಯ ಸಾವ್ಕಾರೀ (ಖಾಸಗಿ) ಬಸ್ಸೊಂದು ತನ್ನ ಮಡಿಕೇರಿ ಪ್ರಯಾಣವನ್ನು ಎರಡೂವರೆ ಗಂಟೆಯಲ್ಲಿ ಪೂರೈಸುತ್ತಿತ್ತು. ಆದರೆ ಆ ದಿನ ಪೇಟೆಯ ಹತ್ತೆಂಟು ‘ಹೋಲ್ಡೈನ್’ ‘ರಯೀಈಟ್’ಗಳನ್ನೆಲ್ಲಾ ಸುಧಾರಿಸಿಕೊಂಡು ನಮ್ಮ ಬಸ್ (ನನ್ನ ನೆನಪು ಸರಿಯಿದ್ದರೆ ‘ಎಸ್ಸಿವಿಡಿಯೆಸ್’ ಅದರ ಹೆಸರಿನ ಹೃಸ್ವರೂಪ) ಗ್ರಹಾಂತರ ಯಾನದ ‘ಬಿಡುಗಡೆಯ’ ವೇಗದ ಆಸುಪಾಸಿನಲ್ಲಿದ್ದಾಗ ಒಮ್ಮೆಲೆ ಬಸ್ಸಿನೊಳಗೆ ಮರ್ಮಬೇಧಕವಾದ ಚೀತ್ಕಾರ ಕೇಳಿಸಿತು. ಏನು, ಎಂಥ ಎಂದೆಲ್ಲರೂ ಗಾಬರಿಗೆಟ್ಟು ನೋಡುತ್ತಿದ್ದಂತೆ, ಬಿಳಿಕೆರೆ ಕೆರೆ ದಂಡೆಯಲ್ಲೋಡುತ್ತಿದ್ದ ಬಸ್ಸು ಉಸ್ಸಪ್ಪಾಂತ ನಿಲ್ಲಬೇಕಾಯ್ತು. ಸಿಡಿದ ಬಾಗಿಲಿನಿಂದ ಒಬ್ಬ ಪಂಚೆ ಮುದುರೆತ್ತಿಕೊಂಡು ಪೊದರ ಮರೆಗೋಡಿದ! ಅವನ ತೀವ್ರ ಮಲಬಾಧೆ ತೀರುವವರೆಗೆ ತಡೆಬಿದ್ದ ನಮ್ಮ ಯುದ್ಧೋತ್ಸಾಹಕ್ಕೆ ನಿಜವಾದ ಶಾಂತಿ ಸಿಕ್ಕಿದ್ದು ಕುಶಾಲನಗರದಲ್ಲಿ. ನಮಗಿಂತ ಸುಮಾರು ಒಂದು ಗಂಟೆ ಮೊದಲೇ ಹೊರಟಿದ್ದ ಸರಕಾರೀ ಬಸ್ ಅರ್ಥಾತ್ ಮಡ್ಕೇರಿ ಎಕ್ಸ್ಪ್ರೆಸ್, ತನ್ನ ಸಡಿಲಿದ ತಗಡುಗಳನ್ನು ಕುಲುಕುತ್ತಾ ಬಂದು, ಅಲ್ಲಿ ಉಡುಪಿ ಗಣೇಶ ಭಾವನಲ್ಲಿ ಸುಸ್ತುಪರಿಹರಿಸಿಕೊಳ್ಳುತ್ತಿತ್ತು. ನಮ್ಮ ಬಸ್ ಅದನ್ನು ಸೈಡ್ ಹೊಡೆದಾಗ ಆ ಕಾಲದಲ್ಲಿ ನನಗಾದ ಥ್ರಿಲ್ಲು ಬಹುಶಃ ಇಂದಿಗೂ ಪ್ರಸ್ತುತ! ನೆನಪಿರಲಿ, ಇಂದು ಕುಶಾಲನಗರದವರೆಗೆ ಕುಡಿದ ನೀರೂ ಕುಲುಕದಂತೆ ಕರೆದೊಯ್ಯುವ ‘ಕರ್ಮಕಾಂಡ’ ಪೂರೈಸಿದ್ದರೂ ಅರ್ಥಾತ್ ಕನ್ನಿಕೆಯ ಕದಪಿನಂತಾ ದಾರಿಯಾಗಿದ್ದರೂ ಮೂರು ಗಂಟೆಗೆ ಕಡಿಮೆ ಮಡಿಕೇರಿ ನೋಡುವುದು ಕಷ್ಟ. ಅಂದು ನಾವು ಎಂಟು ಗಂಟೆಯ ಸುಮಾರಿಗೆ ಮಡಿಕೇರಿ ತಲಪಿದ್ದೆವು!

ಮಡಿಕೇರಿ ಶಾಲಾ ರಸ್ತೆಯ ಮೊದಲಲ್ಲೇ ಇರುವ ‘ದ್ವಾರಕ’, ಬ್ರಿಟಿಷರ ಕಾಲದ ಭಾರೀ ಮನೆ, ನನ್ನ ಚಿಕ್ಕಪ್ಪ ರಾಘವೇಂದ್ರನದ್ದು. ಅದರ ದೊಡ್ಡ ನಡುಕೋಣೆಯನ್ನು ನಮಗೆ ರಾತ್ರಿ ವಾಸಕ್ಕೆ ಕೊಟ್ಟದ್ದಲ್ಲದೆ ಚಾಪೆ, ಹೊದಿಕೆ ಎಲ್ಲಾ ಸಜ್ಜು ಮಾಡಿಸಿದ್ದ. ಹೆಚ್ಚಿನ ಸದಸ್ಯರು ಬಳಸಿಕೊಂಡರು. ಆದರೆ ಒಂದು ರಾತ್ರಿ ಬೆಟ್ಟದ ಮೇಲೂ ಉಳಿಯಲಿದ್ದ ‘ಸಾಹಸಿಯ’ ಸ್ವಯಂಪೂರ್ಣತೆಗೆ ಇದೊಂದು ಅವಮಾನವೆಂದೇ ಬೊಗಳೆ ಬಿಟ್ಟ ನಾನು ನನ್ನಲ್ಲಿದ್ದ ತೆಳು ಜಮಖಾನಾ ಹಾಸಿ, ಹಗುರದ ಹೊದಿಕೆ ಹೊದ್ದು ಮಲಗಿದ್ದೆ. ಮಡಿಕೇರಿ ನನ್ನ ಬಾಲ್ಯದ ನೆಲವೇ ಇರಬಹುದು, ಚಳಿ ಎದುರಿಸುವಲ್ಲಿ ನನ್ನ ಸಂಕಲ್ಪ ದೊಡ್ಡದೇ ಇರಬಹುದು. ಆದರೆ ಹಾಸುಹೊದಿಕೆಗಳನ್ನು ನಗಣ್ಯ ಮಾಡಿದ ನೆಲದ ಶೀತ, ವಾತಾವರಣದ ಕೋಟ, ನನ್ನ ನಿದ್ರೆ ವಂಚಿಸಿದ್ದಂತೂ ನಿಜ. ಎಡಮಗ್ಗುಲಿಗೆ ಮುರುಟಿದರೂ ಮಗ್ಗುಲು ಬದಲಿಸಿದರೂ ಮೂಳೆಗಿಳಿದಾ ಚಳಿ ನನ್ನ ರಾತ್ರಿಯನ್ನು ಬಲು ದೀರ್ಘ ಮಾಡಿತು.

ದ್ವಾರಕಾದ ಅಡಿಗೆಯಾತ ಬಲು ಚುರುಕು. ಐದು ಗಂಟೆಗೇ ತಿನ್ನುವಷ್ಟೂ ಅವಲಕ್ಕಿ ಉಪ್ಪಿಟ್ಟು (ಜಲ್ಲಿ ಸಿಮೆಂಟ್. ಬಾಂಡಿಗೇಜೆಂಟ್ – ಸಕ್ಕರೆ, ಬಾಳೆಹಣ್ಣೂ ಇತ್ತು), ಘಮ್ಮನೆ ಕಾಫಿಯಲ್ಲದೆ, ಪ್ರತಿಯೊಬ್ಬರಿಗೂ ಮಧ್ಯಾಹ್ನಕ್ಕೆ ಹೊತ್ತೊಯ್ಯಲು ಮೊಸರನ್ನದ ಕಟ್ಟುಗಳನ್ನೂ ಹಿಡಿಸಿಬಿಟ್ಟರು. ನಿರ್ಜನ ಮಡಿಕೇರಿ ಪೇಟೆಯುದ್ದದಲ್ಲಿ ಅಲ್ಲೊಂದು ಇಲ್ಲೊಂದು ಉರಿಯುತ್ತಿದ್ದ ಬೀದಿದೀಪಕ್ಕೆ ಸಾರ್ಥಕತೆ ಕೊಟ್ಟು, ಬೆಳಕು ಹರಿಯುತ್ತಿದ್ದಂತೆ ಕಾಲೇಜು ಸಮೀಪದಲ್ಲಿ ಎಡಮಗ್ಗುಲ ಗುಡ್ಡೆಯ ಸವಕಲು ಜಾಡು ಹಿಡಿದೆವು. ನನ್ನ ಬಾಲ್ಯದಲ್ಲಿ ಅಲ್ಲಿನ ಹಡ್ಲು ಎನ್.ಸಿ.ಸಿ ಹುಡುಗರ ಫ಼ಯರಿಂಗ್ ರೇಂಜ್ (ಗುಂಡು ಹೊಡೆಯುವುದರ ಅಭ್ಯಾಸ ಕಣ) ಆಗಿದ್ದು ನೆನಪಿಗೆ ಬಂತು. ಆದರೆ ಆಗಲೇ (ಏಳೆಂಟು ವರ್ಷಗಳ ಅಂತರದಲ್ಲಿ) ಅಲ್ಲೂ ಗುಡ್ಡದ ಮೈಯಲ್ಲೂ ಬಿಡಿ ಬಿಡಿ ವಾಸದ ಮನೆಗಳು ಎದ್ದಿದ್ದವು. ಗುಡ್ಡೆ ಸಾಲಿನ ನೆತ್ತಿಯಲ್ಲಿ ಕುರುಚಲು ಕಾಡಿನ ನಡುವೆ ಜಾನುವಾರು ಜಾಡು ಅಸಂಖ್ಯವಿತ್ತು. ಅನುಕೂಲದ್ದನ್ನು ಅನುಸರಿಸುತ್ತಾ ವಿಸ್ತಾರ ಬೋಗುಣಿಯೊಳಗೆ ಮಲಗಿದಂತಿದ್ದ ಮಡಿಕೇರಿಯನ್ನು ದೂರ ಮಾಡುತ್ತಾ ಬಲಕ್ಕೆ ಕಾಲೇಜು ವಠಾರವನ್ನೂ ಹಿಂದಿಕ್ಕುತ್ತಾ ಮುಂದುವರಿದೆವು. ಬೆಟ್ಟ ಸಾಲಿನ ಇನ್ನೊಂದು ಮಗ್ಗುಲು ತೀರಾ ಕಡಿದು. ಅತ್ತ ಕಣಿವೆಯಲ್ಲಿ ಕಂಡೂ ಕಾಣದಂತೆ ಮಂಗಳೂರು ದಾರಿ, ಅಂದರೆ ಸಂಪಾಜೆ ಘಾಟಿ ಮೈಚಾಚಿತ್ತು. ಈ ಶ್ರೇಣಿಯಲ್ಲಿ ನಾನು ಬಾಲ್ಯದಲ್ಲಿ ಒಂದೋ ಎರಡೋ ಬಾರಿ ‘ವಾನರಸೇನೆಯ’ ಸದಸ್ಯನಾಗಿದ್ದುಕೊಂಡು ಅಮ್ಮೆಹಣ್ಣು, ಗೊಟ್ಟೆಹಣ್ಣು ಸೂರೆಗೊಂಡದ್ದೂ ಇತ್ತು. ಬೆಟ್ಟದ ಈ ಸೆರಗು ಪಶ್ಚಿಮದೋಟದಿಂದ ಉತ್ತರಕ್ಕೆ ತಿರುಗುವ ಕೊನೆಯಲ್ಲಿನ ಶಿಖರವೇ ಸಣ್ಣ ಐತಿಹಾಸಿಕ ಖ್ಯಾತಿಯೂ ಇರುವ ನಿಶಾನಿಮೊಟ್ಟೆ. ಚಾರಿತ್ರಿಕ ದಿನಗಳಲ್ಲಿ, ಮಡಿಕೇರಿ ಅರಸರ ಕಣ್ಗಾವಲಿನ ಭಟರು ಇಲ್ಲಿ ಮೊಕ್ಕಾಂ ಮಾಡಿ, ಕರಾವಳಿ ವಲಯದಿಂದ ಏರಿ ಬರಬಹುದಾಗಿದ್ದ ವೈರಿ ಸೈನ್ಯದ ಕುರಿತು ನಿಗಾ ವಹಿಸುತ್ತಿದ್ದರಂತೆ. ಹಾಗೆ ಸಿಕ್ಕ ಮಾಹಿತಿಯನ್ನು ಇಲ್ಲಿ ಸೂಕ್ತ ನಿಶಾನಿ ಹಾರಿಸುವ ಮೂಲಕ ಮಡಿಕೇರಿ ಕೋಟೆಗೆ ತುರ್ತು ರವಾನೆ ಮಾಡುತ್ತಿದ್ದರಂತೆ. (ಇಂತೆಂದು ಇದು ‘ನಿಶಾನಿಮೊಟ್ಟೆ’ ಎನ್ನುತ್ತದೆ ಸ್ಥಳಪುರಾಣ. ಕೊಡಗಿನಲ್ಲಿ ಗುಡ್ಡೆಗಳನ್ನು ಮೊಟ್ಟೆ ಎನ್ನುವುದು ರೂಢಿ.) ಸ್ಪಷ್ಟ ಸೂರ್ಯೋದಯಕ್ಕೆ ನಾವು ನಿಶಾನಿಮೊಟ್ಟೆಯನ್ನು ಮೆಟ್ಟಿದ್ದೆವು. ಅಲ್ಲಿನ ಬೀಸುಗಾಳಿಗೆ ಮೈತಣಿಸಿ, ಉತ್ತರದ ತಪ್ಪಲಿಗೆ ಇಳಿಯ ತೊಡಗಿದೆವು.

ಈಗ ಜಾಡಿನ ಜಿಡುಕಿಗೆ ತೋಟಗಳ ಬೇಲಿ ಸೇರಿಕೊಂಡಿತು. ತಂಡಕ್ಕೆ ಮಾರ್ಗದರ್ಶಿ ನಾನೇ. ನನ್ನಲ್ಲಿ ಭೂಪಟ ಇಲ್ಲ, ಈ ವಲಯ ಸುತ್ತಿದ ಅನುಭವ ಮೊದಲೇ ಇಲ್ಲ. ದಿಕ್ಕಿನ ಅಂದಾಜು, ಹೇಗೋ ಘಟ್ಟ ಇಳಿದರಾಯ್ತು ಎಂದಷ್ಟೇ ಉಡಾಫೆ ಹೊಡೆದು ಯಾರುಯಾರದೋ ಬೇಲಿ ಹಾರಿ, ಗದ್ದೆ ಹುಣಿ ಸಾಗುವಾಗ ನಾಯಿಗಳಂತೂ ವಿಚಾರಿಸಿಕೊಳ್ಳುವುದು ಇದ್ದದ್ದೇ. ಒಂದೆಡೆ ಕುಪಿತ ಕೃಷಿಕನೊಬ್ಬ ತಾರ ಪಂಚಮದಲ್ಲಿ ಉಸಿರೆಳೆಯದೆ ಬೈಗುಳಮಾಲೆ ನಮಗೆ ತೊಡಿಸಿ, ಕೋವಿ ತಂದರೂ ‘ಸುಟ್ಟ್ ಹಾಕ್ಬುಡ್ದಿದ್ದದ್ದು’ ನಮ್ಮ ಪುಣ್ಯವೇ ಸರಿ. ನಾವು ಮೈಸೊಕ್ಕಿ ಸಾಹಸ ಗೀಹಸಾಂತ ಅವೇಳೆಯಲ್ಲಿ ಆತನ ಒಪ್ಪೊತ್ತಿನ ಶ್ರಮದ ಬೇಲಿಯನ್ನು ಮುರಿದು ನುಗ್ಗುವುದು ಮತ್ತೆ ಯಾವ ನ್ಯಾಯ? ನಮ್ಮನ್ನಲ್ಲದಿದ್ದರೂ ಹೆಲ್ಮುಟ್ ಅಜ್ಜನನ್ನು ನೋಡಿದ ಮೇಲೆ ಆತ ಶಾಂತನಾಗಿ ಗಾಳೀಬೀಡಿನ ಜಾಡು ತೋರಿದ. ಗಾಳಿಬೀಡು ನನ್ನ ಅಂದಾಜಿನ ಪ್ರಕಾರ ಅಂದಿನ ನಾಗರಿಕತೆಯ ವಿಸ್ತರಣದ ಕೊನೆಯ ಹಳ್ಳಿ. ಮಣ್ಣ ದಾರಿಯೇನೋ ಇತ್ತು, ಮುಂದುವರಿದೂ ಇತ್ತು. ಆದರೆ ಗಾಡಿದಾರಿಯಾಗಿ ಬಂದದ್ದು, ಘಟ್ಟ ಇಳಿಯುವಲ್ಲಿ ಕೂಪು ದಾರಿಯಾಗಿ (ಕೆಲವು ವರ್ಷಗಳ ಹಿಂದೆ ಕಾಡಿನ ಶವಯಾತ್ರೆ ಕ್ರಮವಾಗಿ ನಡೆಸುತ್ತಿದ್ದ ಲಾರಿಗಳಿಗಾಗಿ ಮಾಡಿದ್ದ ದಾರಿ) ಮುಂದುವರಿದಿತ್ತು. ಹಳ್ಳಿ ಹೈಕಳು ‘ಇದೇನು ವಿಚಿತ್ರ’ ಎಂದು ನಮ್ಮನ್ನು ನೋಡಿದರೆ ಅದಕ್ಕೂ ಮಿಗಿಲಿತ್ತು ಹೆಲ್ಮುಟ್ ಅಜ್ಜನ ಸರ್ವಂಕಷ ಕುತೂಹಲ. ಆತನ ಹರಕು ಮುರುಕು ಇಂಗ್ಲಿಶಿನಲ್ಲಿ (ನಮ್ಮದು ಭಾರೀ ಉತ್ತಮದ್ದೇನೂ ಅಲ್ಲ) ಗಾಡಿದಾರಿ ಬೀಫ್ ರೋಡ್ (ಗೋಮಾಂಸದ ರಸ್ತೆ! ಅದೃಷ್ಟಕ್ಕೆ ವರ್ತಮಾನದ ಗೋಜಾಗೃತಿ ಇಲ್ಲದ ದಿನಗಳವು) ಎನ್ನಿಸಿಕೊಂಡಂತಹ ಮಾತುಗಳು ಮಾರ್ಗಾಯಾಸವನ್ನು ಹಗುರಗೊಳಿಸಿದವು.

ಮೊದಮೊದಲು ಸಿಕ್ಕ ನಾಲ್ಕು ಹಳ್ಳಿಗರಲ್ಲೇನೋ ‘ಸುಬ್ರಹ್ಮಣ್ಯಕ್ಕೆ ದಾರಿ?’ ಎಂದು ವಿಚಾರಿಸಿಕೊಂಡದ್ದು ಸರಿ. ಆದರೆ ಮುಂದುವರಿದಂತೆ ಪೂರ್ಣ ನಿರ್ಜನ ಮತ್ತು ವನ್ಯವಷ್ಟೇ ಇತ್ತು. ಇದ್ದ ಅಸಂಖ್ಯ ಜಾಡುಗಳಲ್ಲಿ ಅದೃಷ್ಟ ಮಾತ್ರದಿಂದ ಆಯ್ದು ಮುಂದುವರಿಯಬೇಕಿದ್ದ ನಮಗೆ ದೇವರೇ ಗಸಿ! ಅಲ್ಲಲ್ಲಿ ಮರ ಬಿದ್ದು, ದರೆ ಜರಿದು, ದಾರಿ ಕೊರೆದು ಅದರ ಅನೂರ್ಜಿತತನವನ್ನು ಸಾರುತ್ತಿತ್ತು. ಏನಲ್ಲದಿದ್ದರೂ ವರ್ಷದ ಹೆಚ್ಚುಕಟ್ಟಳೆ ದಿನಗಳಂದು ಆಸುಪಾಸಿನ ಕೆಲವೇ ಕೆಲವು ಹಳ್ಳಿಗರು ಸುಬ್ರಹ್ಮಣ್ಯಕ್ಕೆ ನಡೆದುಹೋದ ಅಥವಾ ಮೇಯಲು ಬಿಟ್ಟು, ಕಳೆದುಹೋದ ಜಾನುವಾರು ಹುಡುಕಿಕೊಂಡೋ ವನೋತ್ಪತ್ತಿ ಸಂಗ್ರಹಿಸಿಕೊಂಡೋ ಓಡಾಡಿದವರ ದೆಸೆಯಿಂದ ಸವಕಲು ಜಾಡು ಮಾತ್ರ ಸ್ಪಷ್ಟವಿತ್ತು. ಆದರೆ ಇದರಲ್ಲೂ ನಮ್ಮ ಲೆಕ್ಕಕ್ಕೆ ಒಂದು ದೋಷವಿತ್ತು. ಓಡಾಡಿದವರೆಲ್ಲಾ ಸುಬ್ರಹ್ಮಣ್ಯದ ಏಕಲಕ್ಷ್ಯ ಹೊಂದಿರಲಿಲ್ಲವಾದ್ದರಿಂದ ಜಾಡುಗಳು ಹಲವೆಡೆ ಕವಲೊಡೆದು ನಮ್ಮನ್ನು ಗೊಂದಲಕ್ಕೀಡುಮಾಡುತ್ತಿತ್ತು. ಕಾಡುಮುಚ್ಚಿಕೊಂಡಿದ್ದು ದೂರದ ದೃಶ್ಯಗಳ್ಯಾವವೂ ಮುಕ್ತವಾಗಿಲ್ಲದೇ ನಾವು ದಿಕ್ಕೇಡಿಗಳಾಗಿ ನಡೆದದ್ದೇ ನಡೆದದ್ದು. ಮಧ್ಯಾಹ್ನದ ವೇಳೆಗೆ ಒಂದು ಕಾಡತೊರೆ ಬದಿಯಲ್ಲಿ ಊಟಕ್ಕೆ ನಿಂತೆವು.

ಕೆನೆ ಮೊಸರು ಹಾಕಿ ಕಲಸಿದ ಸಣ್ಣಕ್ಕಿಯ ಅನ್ನ, ಉಂಡು ಮೂರುಗಂಟೆಗೂ ಕೈ ಮೂಸಿಕೊಳ್ಳುವಂತ ಪರಿಮಳದ ಮಾವಿನಕಾಯಿ ಉಪ್ಪಿನ ಕಾಯಿಯ ಊಟ ನಮಗಂತೂ ಹೊಸಚೇತನವನ್ನೇ ಕೊಟ್ಟಿತು. ಅದರೆ ಜರ್ಮನ್ ಅಜ್ಜನಿಗೋ ಮೊಸರನ್ನ ಹುಳಿಬಂದ ಘಾಟು, ಉಪ್ಪಿನಕಾಯಿಯೋ ಸಾಕ್ಷಾತ್ ಕೆಂಡದುಂಡೆಯಾಗಿ ಹೆದರಿಸಿಬಿಟ್ಟವು. ಆತ ತನ್ನ ಅಕ್ಷಯಚೀಲ ತೆಗೆದು ಪುಟ್ಟ ಡಬ್ಬಿಯಲ್ಲಿದ್ದ ಓಟ್ಮೀಲ್ (ಓಟ್ ಬೀಜದ ತಿರುಳಿಗೆ ಇನ್ನಷ್ಟು ಪೌಷ್ಟಿಕ ಧಾನ್ಯಗಳ ಪಕ್ವ ಪುಡಿಗಳು, ಒಣ ಹಣ್ಣಿನ ಹೋಳುಗಳೂ ಸೇರಿಸಿ ಮಾಡಿದ ತಿನಿಸು) ಮೆದ್ದು. ಜೊತೆಗೆ ದೊಡ್ಡ ಹಸಿ ಸೇಬನ್ನೂ ನಂಚಿಕೊಂಡ. ಮತ್ತಿನ್ನೊಂದೇ ಡಬ್ಬಿಯ ಓವಲ್ಟೀನಿಗೆ ಶುದ್ಧ ಝರಿ ನೀರು ಸೇರಿಸಿ, ಝರ್ಭುರ್ ಮಾಡಿ, ಹೊಟ್ಟೆ ತಂಪು ಮಾಡಿಕೊಂಡ. (ನನ್ನ ನೆನಪು ಸರಿಯಿದ್ದರೆ ಆಗ ವಿದೇಶೀಯರಿಗೂ ಬಾಟಲ್ ನೀರಿನ ಗಿರ ಇರಲಿಲ್ಲ) ಮುಗಿಯದ ನಮ್ಮೂಟ ಮತ್ತು ತುಸುವೇ ವಿರಾಮದ ವೇಳೆ ಬಳಸಿ ಅಜ್ಜ ದೊಗಳೆ ಚಡ್ಡಿ, ಸಡಿಲ ಬನಿಯನ್ನು ಕಳಚಿಟ್ಟು ಪುಟ್ಟ ಕಾಚಾದೊಡನೆ ಅದೇ ತೊರೆಯಲ್ಲಿ ಜಲಸ್ತಂಭನ ಮಾಡಿ ಹೆಚ್ಚಿನ ಲವಲವಿಕೆ ಸಂಚಯಿಸಿದ್ದು ನಮಗೆ ತೀರಾ ಅನಿರೀಕ್ಷಿತ. ಇಂಥಾ ವಿಚಾರಗಳಲ್ಲೆಲ್ಲಾ ನಾವು (ಭಾರತೀಯರು) ಅನಾವಶ್ಯಕ ಮಡಿವಂತರು. ಸ್ವಿಮ್ಮಿಂಗ್ ಟ್ರಂಕ್ಸು, ಸೋಪು, ಶಾಂಪೂ, ಟವೆಲ್ಲು, ಡ್ರೈ ಕ್ಲಾತ್ ಇಲ್ಲದೇ ಬಾತ್ ಯೋಚಿಸುವುದೇ ಇಲ್ಲ. ದಮ್ಮು ಕಟ್ಟಿದ ಏರು ದಾರಿಯಲ್ಲಿ ಹೀಗೇ ಬೀಸುಗಾಳಿಯನ್ನು ಸ್ವಾಗತಿಸಿದಂತೆ, ಕಗ್ಗಾಡಿನಲ್ಲಿ ಬೆವೆತು ಬಾಯಾರಿ ನಡೆವಾಗ ಸಿಕ್ಕ ತೊರೆ ನೀರನ್ನು ನಿರ್ಯೋಚನೆಯಿಂದ ಹೀರಿದಂತೆ, ಬಳಲಿಕೆಗೆ ಒಂದೈದು ಗಳಿಗೆ ನೀರಿಗೆ ಬಿದ್ದೇಳುವುದು ಗೊತ್ತೇ ಇಲ್ಲ. ಆಯ್ತಪ್ಪಾಂತ ನೀರಿಗಿಳಿದರೂ ನಮ್ಮ ಜಲಸಂಸ್ಕೃತಿ (ಶಾಸ್ತ್ರ ಪುರಾಣಗಳು ಏನೇ ಹೇಳಲಿ, ಆಚರಣೆಯಲ್ಲಿ) ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಜಾಗಗಳಲ್ಲಿ ತೀರಾ ಕೊಳಕು ಎನ್ನುವುದನ್ನೂ ನಾನಿಲ್ಲಿ ಹೇಳದಿರಲಾರೆ. ಜರ್ಮನ್ ಅಜ್ಜ ಐದೇ ಮಿನಿಟು ನೀರಿನಲ್ಲಿದ್ದರೆ, ಒಂದು ಮಿನಿಟು ಬರಿದೇ ತೊರೆಯಂಚಿನಲ್ಲಿ ನಿಂತು ಸ್ವಲ್ಪ ಮೈ ಒಣಗಿಸಿಕೊಂಡು, ಅದದೇ ಚಡ್ಡಿ, ಬನಿಯನ್ನೇರಿಸಿ ನಮಗೂ ಐದು ಮಿನಿಟು ಮೊದಲೇ ದಾರಿ ಹಿಡಿದದ್ದಂತೂ ನಮ್ಮಲ್ಲಿ ಜಲಕ್ರೀಡೆಗಿಳಿದವರಿಂದ ನಿರೀಕ್ಷಿಸಲು ಸಾಧ್ಯವೇ ಇಲ್ಲ.

ಅಪರಾಹ್ನದ ನಡಿಗೆಯ ಮೊದಲ ತಿರುವಿನಲ್ಲೇ ನಾವು ನೇರ ಇಳಿದಾರಿಯಂಚಿಗೆ ಬಂದಿದ್ದೆವು. ಸಹಜವಾಗಿ ಅನತಿದೂರದಲ್ಲಿ ಆಕಾಶಕ್ಕಡ್ಡವಾಗಿ ನಿಂತಂತೆ ತೋರುತ್ತಿದ್ದ ಶೇಷಪರ್ವತವನ್ನು ನಾನು ಗುರುತಿಸುವುದರೊಡನೇ ತಂಡಕ್ಕೆ ಹೊಸ ವೇಗ ಬಂತು. ನನ್ನ ಒಂದೇ ಒಂದು ಭೇಟಿ ಪರಿಚಯದ ಸುಬ್ರಹ್ಮಣ್ಯಕ್ಕೆ ಯಾವ ಜಾಡು ಹತ್ತಿರದ್ದು ಎಂದು ನಿರ್ಧರಿಸಲು ಪ್ರತಿ ಕವಲಿನಲ್ಲಿ ತಿಣುಕುತ್ತಿದ್ದೆ. ಹಾಗೆಂದು ವೇಳೆಗಳೆಯುವುದಾಗಲೀ ತಪ್ಪೋ ಸರಿಯೋ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಾಗಲೀ ನಡೆಯಲ್ಲಿ ನಿಧಾನವಾಗಲೀ ಅಸಾಧ್ಯವೆನ್ನುವಂತೆ ಸೂರ್ಯ ಜಾರುತ್ತಿದ್ದ. ಕಾಡಿನಲ್ಲಿ ಕತ್ತಲು ಅವಸರಿಸುತ್ತದೆ. ಹೊತ್ತುಗಳೆಯುತ್ತಿದ್ದಂತೆ ಹೆಜ್ಜೆಯ ಒಜ್ಜೆ ಹೆಚ್ಚುತ್ತಿದ್ದರೂ ನಡೆಯ ಬೀಸು ಇಳಿಯದಂತೆ ನೋಡಿಕೊಂಡ ಫಲ ಐದೂವರೆಯ ಸುಮಾರಿಗೆ ಕಡಮಕಲ್ಲು ತಲಪಿದೆವು. ನಾವನುಸರಿಸಿದ ದಾರಿಯಲ್ಲಿ ಹಲವು ಒಳದಾರಿಗಳನ್ನು ತಪ್ಪಿಸಿಕೊಂಡಿದ್ದಿರಬಹುದಾದರೂ ಹಿಡಿದ ದಿಕ್ಕು, ತಲಪಿದ ಸ್ಥಳ ಸರಿಯಾಗಿಯೇ ಇತ್ತು ಎಂದು ಹಳ್ಳಿಗರು ಶಭಾಸ್ಗಿರಿ ಏನೋ ಕೊಟ್ಟರು. ಆದರೆ ದಾರಿಯಲ್ಲೇ ನಡೆದುಹೋದರೆ ಸುಬ್ರಹ್ಮಣ್ಯ ಇನ್ನೂ ಹದಿನಾರು ಮೈಲು ದೂರದಲ್ಲಿದೆ ಎಂದಾಗ ಎಲ್ಲರ ಜೀವ ತಲ್ಲಣಿಸಿದ್ದು ಸುಳ್ಳಲ್ಲ.

ಆ ದಿನಗಳಲ್ಲಿ ಕಡಮಕಲ್ಲು ಆಸುಪಾಸಿನಲ್ಲಿ ಇನ್ನೂ ಕಾಡು ಕಟಾವು ನಡೆದೇ ಇತ್ತು. ನಮಗೆ ಸಿಕ್ಕ ನಾರಾಯಣ ಎಂಬೊಬ್ಬ ನಾಟಾ ಮೂಪ ಎರಡು ಸಾಧ್ಯತೆಗಳನ್ನು ತೋರಿಸಿದ. ತಾನು ಕಾರ್ಯನಿಮಿತ್ತ ಸುಬ್ರಹ್ಮಣ್ಯಕ್ಕೆ ಹತ್ತೇ ಮೈಲು ಅಂತರದ ಒಳದಾರಿ ಹಿಡಿದು ಹೋಗುತ್ತಿದ್ದೇನೆ. ನಮ್ಮಲ್ಲಿ ಅನುಸರಿಸುವ ಉತ್ಸಾಹಿಗಳಿದ್ದರೆ ಸ್ವಲ್ಪ ನಿಧಾನವಾದರೂ ಕರೆದೊಯ್ಯಬಲ್ಲೆ. ಇನ್ನೊಂದು ಸಾಧ್ಯತೆ, ಮಲೆಯಿಂದ ಟಿಂಬರ್ ಲಾರಿ ಬರುವ ನಿರೀಕ್ಷೆಯುಂಟು. ಅದನ್ನು ಕಾದು ಕುಳಿತು, ಜಾಗ ಇದ್ದರೆ ಮತ್ತವರು ಸೇರಿಸಿಕೊಂಡರೆ, ಎಂಟು ಗಂಟೆ ಮುನ್ನ ಡಾಮರು ದಾರಿ ತಲಪಬಹುದು. ಅಲ್ಲಿಗೆ ಸುಳ್ಯದಿಂದ ಬರುವ ಕೊನೆಯ ಸುಬ್ರಹ್ಮಣ್ಯ ಬಸ್ಸು ಸಿಗುತ್ತದೆ. ಹಾಗೂ ಲಾರಿ ಬರದಿದ್ದರೆ ಅಲ್ಲೇ ಯಾರದ್ದಾದರೂ ಜೋಪಡಿ ಸೇರಿಕೊಂಡು ರಾತ್ರಿ ಹಾಗೂ ಸುಸ್ತು ಕಳೆದುಕೊಂಡು ಮಾರಣೇ ಹಗಲು ನಡೆದರಾಯ್ತು. ಹೆಲ್ಮುಟ್ ಅಜ್ಜ ಸೇರಿದಂತೆ ಮೂರ್ನಾಲ್ಕು ಮಂದಿ ಲಾರಿ ಅದೃಷ್ಟಕ್ಕೇ ನಿಂತರು. ದೇಹಾನುಕೂಲವಿಲ್ಲದಿದ್ದರೂ ಚಾರಣವ್ರತ ಸಡಿಲಿಸಲು ಇಷ್ಟಪಡದ ನಾವೊಂದಷ್ಟು ಮಂದಿ ನಾರಾಯಣ ಸ್ಮರಣೆ ಮಾಡುತ್ತಾ ಮೇಲೆದ್ದೆವು.

ಜೋಪಡಿ ಹೋಟೆಲ್ ಒಂದರಲ್ಲಿ ಕಣ್ಣ ಚಾ ಹಾಕಿ ಕಾಲುಗಳಿಗೆ ಚಾಲನೆ ಕೊಟ್ಟೆವು. ಹರಿಹರಪುರದವರೆಗೆ ದೂಳಿದೂಸರಿತ (ಲಾರಿ ಸಂಚಾರದ ಫಲ) ರಸ್ತೆಯಲ್ಲೇ ನಡೆದೆವು. ಸ್ವಲ್ಪೇ ಹೊತ್ತಿನಲ್ಲಿ ಹೆಚ್ಚಿನ ಪರಿಣಾಮಕ್ಕಾಗಿ ಎಂಬಂತೆ ಹಿಂದಿನಿಂದೊಂದು ಲಾರಿಯೂ ಬಂತು. ಅದು ದೂಳಿನ ಅಲೆ ಎಬ್ಬಿಸಿದ್ದಲ್ಲದೆ ನಾವು ಕರುಬುವಂತೆ ನಮ್ಮ ತಂಡದಿಂದ ಹಿಂದುಳಿದಿದ್ದ ಅಷ್ಟೂ ಮಂದಿಯನ್ನೇರಿಸಿಕೊಂಡು (ಇನ್ನು ಜಾಗವಿಲ್ಲ ಎಂಬ ಸ್ಥಿತಿಯಿತ್ತು) ಬಂದು ನಮಗೆ ಹೆಚ್ಚಿನ ದೂಳು ತಿನ್ನಿಸಿ ಹೋಯ್ತು. ಹರಿಹರಪುರದಲ್ಲಿ ಮತ್ತೊಮ್ಮೆ ಚಾ ಹಾಕಿ ಒಳದಾರಿಗೆ ನುಗ್ಗಿದೆವು. ಹುಣ್ಣಿಮೆ ಇದ್ದಿರಬೇಕು. ತಿಂಗಳ ಬೆಳಕಿನಲ್ಲಿ, ಕಾಡಿನ ತಣ್ಪು ಮತ್ತು ಪರಿಮಳದಲ್ಲಿ, ಇದ್ದೂ ಇಲ್ಲದ ರವದಲ್ಲಿ, ಹೆಚ್ಚೇನೂ ಏರಿಳಿತಗಳಿಲ್ಲದ ಆ ನಡೆ ನಿಜಕ್ಕೂ ರಮ್ಯವಿಹಾರವೇ ಆಗಬೇಕಿತ್ತು. ಅದರೆ ಮೂರು ದಿನದ ಶಿಬಿರ ಸಾಮಗ್ರಿ ಬೆನ್ನಿಗೇರಿಸಿ, ರಾತ್ರಿ ನಿದ್ದೆಗೆಟ್ಟದ್ದು ಸಾಲದೆಂಬಂತೆ ಬೆಳಗು ಮುನ್ನಾ ನಡಿಗೆಗೆ ತೊಡಗಿ, ಉರಿಬಿಸಿಲಿನಲ್ಲಿ ಅವಿರತ ಬಂದು, ಇನ್ನೂ ಮತ್ತೂ ಪಾದ ಬೆಳೆಸಬೇಕಿದ್ದ ಸ್ಥಿತಿಯಲ್ಲಿ ಎಲ್ಲರದೂ ಒಂದೇ ಸೊಲ್ಲು “ನಾರಾಯಣಾ ಇನ್ನೆಷ್ಟು ದೂರಾ?” ಎಂಟೂವರೆಯ ಸುಮಾರಿಗೆ ಸುಬ್ರಹ್ಮಣ್ಯ ತಲಪಿದೆವು.

ಛತ್ರದಲ್ಲಿ ಕೋಣೆ ಹಿಡಿದು, ಹೊರೆ ಇಳಿಸಿ, ವಿರಾಮದಲ್ಲಿ ಊಟ ಮಾಡಿದರಾಯ್ತು ಎನ್ನುವ ತಾಳ್ಮೆ ಯಾರಿಗೂ ಇರಲಿಲ್ಲ. ಕುಮಾರಕೃಪಕ್ಕೆ ನುಗ್ಗಿ ಎಲ್ಲಂದರಲ್ಲಿ ಹೊರೆ ಇಳಿಸಿದೆವು, ಎಂದರೆ ಗಾಬರಿಯಾಗಬೇಡಿ. ಆ ಕಾಲದ ಸುಬ್ರಹ್ಮಣ್ಯದಲ್ಲಿ ಆ ವೇಳೆಯಲ್ಲಂತೂ ಹೋಟೆಲಿಗೇನು ಇಡೀ ಪೇಟೆಗೆ ನಾವೇ ಜನ! ಕೈ ತೊಳೆದ ಶಾಸ್ತ್ರ ಮಾಡಿ ಒಬ್ಬೊಬ್ಬರೇ ಸಿಕ್ಕ ಕುರ್ಚಿಯ ಮೇಲೆ ಅಕ್ಷರಶಃ ಕುಸಿದೆವು. ನಮ್ಮೆಲ್ಲರನ್ನೇನೋ ಕುರ್ಚಿಗಳು ತಾಳಿಕೊಂಡವು. ಆದರೆ ಹೆಲ್ಮುಟ್ ಅಜ್ಜನ ಗ್ರಹಾಚಾರಕ್ಕೋ ಅಧಿಕ ಬಾರಕ್ಕೋ ಅವರಾರಿಸಿಕೊಂಡ ಕುರ್ಚಿ ಕಾಲುಮುರಿದು ಬಿದ್ದು ಅಜ್ಜನನ್ನೂ ಧರೆಗುರುಳಿಸಿತು. ಅದೃಷ್ಟಕ್ಕೆ ಕುಸಿಯುವಾಗ ಹಿಂದಿನ ಮೇಜು ತಲೆಗಪ್ಪಳಿಸಲಿಲ್ಲ, ನೆಲಕ್ಕೆ ಕುಕ್ಕುರಬಡಿದಲ್ಲಿ ಅಜ್ಜನ ಕಾಲು ಸೊಂಟಗಳಿಗೂ ಜಖಂ ಆಗಲಿಲ್ಲ! ಊಟದ ಶಾಸ್ತ್ರ ಮುಗಿಸಿ, ಕೋಣೆ ಹಿಡಿದು, ಮಲಗುವ ಶಾಸ್ತ್ರಕ್ಕೆ ಹೊರಟೆವು. ಪೂರ್ವ ಪರಿಚಯದ ಮೇಲೆ ಮೊದಲೇ ಕಾಗದ ಬರೆದು ನಿಶ್ಚಯಿಸಿದ್ದಂತೆ ಮಲೆಕುಡಿಯರ ಕುಂಡ ನಮ್ಮ ಮರುದಿನದ ಕಾರ್ಯಕ್ರಮ ಗಟ್ಟಿ ಮಾಡಲು ಅಲ್ಲಿ ಕಾದಿದ್ದ. ಮೊದಲ ಸಾಹಸಕ್ಕೆ ವರವಾಗಿ ಸಿಕ್ಕ ಆತ ಅಂದು (ಆತನದ್ದೇನೂ ತಪ್ಪಿಲ್ಲದೇ) ಶಾಪವಾಗಿ ತೋರಿದ! ಆದರೂ ನಾಯಕನಾಗಿ ನನ್ನ ಘೋಷಣೆ ಹೊರಡಿಸಿಯೇ ಬಿಟ್ಟೆ, “ಎಲ್ಲ ಕೇಳ್ರಪ್ಪೋ ಕೇಳ್ರೀ. ತಂಡಕ್ಕೆ ನಾಳೆ ಸೂರ್ಯೋದಯ ಕುಮಾರಪರ್ವತದ ಪಾದದಲ್ಲಿ. ಬೆಳಿಗ್ಗೆ ಐದು ಗಂಟೆಗೆ ಊರು ಬಿಟ್ಟು ನಡೆಸಲು ಕುಂಡ ಸಜ್ಜಾಗಿದ್ದಾನೆ, ಕೇಳ್ರಪ್ಪೋ…” ಮುಗಿಸುವಾಗ ನನ್ನ ಮಾತೇ ನನಗೆ ವೈರಿಯಂತನ್ನಿಸುತ್ತಿತ್ತು!

(ಮುಂದುವರಿಯಲಿದೆ)

ಪ್ರಿಯ ಓದುಗರೇ ನಿಮ್ಮ ‘ಮಡಿಕೇರಿ-ಸುಬ್ರಹ್ಮಣ್ಯ ಚಾರಣದ ಸುಸ್ತು’ ಪರಿಹರಿಸಿಕೊಳ್ಳಲು ವಾರಕಾಲದ ವಿಶ್ರಾಂತಿ ಕೊಡುತ್ತೇನೆ. ಅದುವರೆಗೆ ನೀವು ಇಲ್ಲೇ ಕೆಳಗೆ ಬರೆಯುವ ಅನಿಸಿಕೆಗಳೇ – ನನ್ನ ಅಂದಿನ ಕಾಲು ಸೊಂಟಗಳ ಜಗತಕ್ಕೆ ಅಮೃತಾಂಜನ, ಮೈನೋವಿಗೆ ಅನಾಸಿನ್ ಮತ್ತು ಮುಂದಿನ ಕಥನಕ್ಕೆ ಠಾನಿಕ್ಕು. ಜೊತೆಗೆ ಕುಮಾರವಿಜಯದ ಎರಡನೇ ಆವೃತ್ತಿಯ ಇನ್ನಷ್ಟು ಅನುಭವ ಕಥನಕ್ಕೆ ಕಾಯುವ ಕಣ್ಣುಗಳಾಗಿರುತ್ತೀರೆಂದು ನಂಬಿದ್ದೇನೆ.]