[ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಎರಡು]

ಉಪೋಪ ಕಥೆಗಳ ‘ಕಾಟದಲ್ಲಿ’ ಭಗವತಿ ನೇಚರ್ ಕ್ಯಾಂಪ್ ದ್ವಾರದಿಂದ ಹೊರಟ ನಿಮ್ಮನ್ನು ದಾರಿ ಹೊಳೆ ಪಾತ್ರದತ್ತ ಸರಿಯುವಲ್ಲಿ, ವಿದ್ಯುತ್ ಸ್ತಂಭ ಸಾಲಿನ ನೆರಳಲ್ಲಿ ನಿಲ್ಲಿಸಿ ಬಿಟ್ಟಿದ್ದೆ. ಬನ್ನಿ, ಈಗ ಆ ಹೊಳೆ – ಭದ್ರಾ ನದಿಯ ಆದಿಮ ರೂಪಿಯನ್ನೇ ದಾಟಿ ಮುಂದುವರಿಯೋಣ. ಕುರಿಯಂಗಲ್ಲಿನ ಹಿಮ್ಮೈಯ ಬೆಟ್ಟಕಾಡಿನಿಂದ ಬಸಿಯುವ ಈ ಶುದ್ಧ ಸಲಿಲಕ್ಕೆ ನಮ್ಮಿಂದ ಮೇಲೆ ಎರಡು ಕಡೆ ಮಾತ್ರ ಮನುಷ್ಯ ಸಂಪರ್ಕವಿದೆ. ಮೊದಲು, ಸುಮಾರು ಒಂದು ಕಿಮಿ ಮೇಲೆ – ಕುರಿಯಂಗಲ್ಲಿನ (ಅಂದಕಾಲತ್ತಿಲೆ) ರಿಪೀಟರ್ ಸ್ಟೇಶನ್ನಿಗೆಹೋಗುತ್ತಿದ್ದ ಮಣ್ಣದಾರಿಯ ಅನುಕೂಲಕ್ಕೊಂದು ಗಟ್ಟಿ ಸೇತುವೆ. ರಾಷ್ಟ್ರೀಯ ಉದ್ಯಾನವನದ ಬಿಗಿ ಬರುವ ಮುನ್ನ ಅಲ್ಲಿವರೆಗೆ ವಾಹನ ನುಗ್ಗಿಸಿ ಹೊಳೆ ಮತ್ತದರ ಸುತ್ತಮುತ್ತ ಸಾಕಷ್ಟು ‘ವನವಿಹಾರಿಗಳ’ ದಾಂಧಲೆ ನಡೆಯುವುದಿತ್ತು. ಈಗ ಜನ, ವಾಹನ ಸಂಚಾರ ತೀರಾ ವಿರಳ. ಇದ್ದರೂ ವನ್ಯ ಇಲಾಖೆಯ ಮಾರ್ಗದರ್ಶಿಯೊಡನೇ ಹಾದು ಹೋಗುವುದರಿಂದ ಮಲಿನಕಾರಕವಲ್ಲ ಎಂದು ನಂಬಬಹುದು.

ಮತ್ತೊಂದೇ ಘಟ್ಟ, ನೇಚರ್ ಕ್ಯಾಂಪಿನ ದಂಡೆ! ಇದು ನಾನು ಹಿಂದೆ ನೋಡಿದಾಗ ಮೋಜುಗಾರರಿಗೆ ಏನೇನೂ ಒಗ್ಗದ ಶುದ್ಧ ಪ್ರಾಕೃತಿಕ ಸ್ಥಿತಿಯಲ್ಲಿತ್ತು. ಶಿಬಿರದಿಂದ ಸವಕಲು ಜಾಡು ಮಾತ್ರ. ತೆಳು ನೀರು, ಜವುಗು ನೆಲ ಮೆಟ್ಟಿದರಷ್ಟೇ ಹೊಳೆಪಾತ್ರೆ. ಅಂಚುಗಟ್ಟಿದ ವೈವಿಧ್ಯಮಯ ಸಸ್ಯರಾಜಿಯ ಚೌಕಟ್ಟು ಅನನ್ಯ ಸುಂದರ. ಎಲ್ಲೋ ಪೊದರಗೈ ಅಥವಾ ಹೊಳೆಯಲ್ಲೇ ನಿಂತಂತಿದ್ದ ಭಾರೀ ಮರದ ಬೇರಗಟ್ಟೆಯಷ್ಟೇ ಈಜುಡುಗೆಗೆ ಬದಲಲು ಇದ್ದ ಸೌಕರ್ಯ. ಹೊಳೆ ಪಾತ್ರೆಯಲ್ಲೇ ಮೂವತ್ತಡಿ ಮೇಲೆ ಮತ್ತು ಅಷ್ಟೇ ಅಂತರದಲ್ಲಿ ಕೆಳಗೆ ಕಲಕಲಿಸುವ ನೀರು. ಹೊಳೆ ಅಲ್ಲಿ ತೀವ್ರ ಎಡ ತಿರುವು ತೆಗೆದು ಮಡುಗಟ್ಟಿದೆ. ಸುತ್ತುವರಿದ ಹಸುರಿನ ಮಿರುಗಿನಲ್ಲಿ ಮರುಳುಗಟ್ಟಿಸುವ ಹೊಳೆ, ಆಳವನ್ನೂ ಮರೆಯಿಸುವ ದಪ್ಪಗನ್ನಡಿ! ಜಲಕೇಳಿಗೆ ಧಾವಿಸುವವರ ಪ್ರತಿ ಹೆಜ್ಜೆಯನ್ನು ಹುಸಿಮಾಡಿ, ಒಮ್ಮೆಗೆ ದೃಢ ಸುಳಿಗೈಯಲ್ಲಿ ಆಳಕ್ಕೆಳೆದು ಆವರಿಸಿಬಿಡುವ ನೀರೆ, ಭದ್ರೆ, ಮೈ ಸೆಟೆಯಿಸುವ ಶೀತಲೆ! ಮಳೆಗಾಲದಲ್ಲಿ ಕೊಚ್ಚಿ ಬಂದ ಬಳ್ಳಿ ಕೊರಡು ತೊಡರಬಹುದು, ಯುಗಾಂತರಗಳ ಧ್ಯಾನಸ್ಥ ಬಂಡೆ ಕಾಲನ್ನು ಹೆಟ್ಟಬಹುದು. ಗಿಡಗಂಟಿಗಳ ಕೊರಳ ನಾದ, ಮುತ್ತಿಕ್ಕುವ ಮೀನುಗಳ ಮೋಜು ಮರೆಯಿಸಿ ಮೊಸಳೆ ಹಾವುಗಳನ್ನೂ ಕಾಣಿಸಬಹುದಾದ ಧೀರೆ!! ಏನೇ ಇರಲಿ, ಇಷ್ಟು ಬೆಳಿಗ್ಗೆ ಶಿಬಿರತಾಣದವರು ನೀರಾಟಕ್ಕಿಳಿಯರು ಎಂಬ ವಿಶ್ವಾಸ ನನ್ನದು. ಹಾಗಾಗಿ ಹೊಳೆ ನೀರ ನೇರ ಕುಡಿ-ಯೋಗ್ಯತೆಯನ್ನು ಚಾರಣ-ಮಿತ್ರರಿಗೆ ಸಾರಿದೆ ಮತ್ತು ಮೊಗೆಮೊಗೆದು ಹೊಟ್ಟೆಗಿಳಿಸಿ ಸಮರ್ಥಿಸಿಯೂ ಬಿಟ್ಟೆ. ಅನಂತರ ರೋಹಿತ್ ಹೇಳಿದರು, ದ್ವಾರದಲ್ಲೇ ಅಷ್ಟು ಕಾಂಕ್ರೀಟ್ ಹೇರಿದ ಇಲಾಖೆ ಹೊಳೆಪಾತ್ರೆಯನ್ನೂ ಅಭಿವೃದ್ಧಿಗೊಳಪಡಿಸಿದೆ! ವಿವರ ಕೇಳಿದರೆ ಕುಡಿದ ನೀರು ಅಜೀರ್ಣವಾದೀತೆಂದು ಹೆದರಿ ಸುಮ್ಮನಾಗಿಬಿಟ್ಟೆ!!

ಎದುರು ದಂಡೆಯಲ್ಲಿ ಹಸುರೀಕರಣ ಜಾಡ್ಯದ ಉಳಿಕೆಗಳಾದ ಕೆಲವು ನೀಲಗಿರಿ, ಅಕೇಸಿಯಾ ಮರಗಳನ್ನು ದಾಟಿದೆವು. ಮತ್ತೆ ತೀರಾ ಕಡಿದಾದ ಹುಲ್ಲುಗುಡ್ಡೆಯಲ್ಲೇ ಹಾವಾಡುವ ದಾರಿಯ ಅವಶೇಷ ಅನುಸರಿಸಿದೆವು. ಮೂರು ನಾಲ್ಕು ಹಿಮ್ಮುರಿ ತಿರುವುಗಳನ್ನು ಕಳೆದು ನೆತ್ತಿ ಸೇರಿ, ಕಳೆದ ಉಸಿರು ಹೆಕ್ಕಿಕೊಳ್ಳುತ್ತಿದ್ದಂತೆ ಹೊಸ ದೃಶ್ಯಾವಳಿ ತೆರೆದುಕೊಂಡವು. ಬಂದ ದಾರಿಯನ್ನೇ ನೋಡಿದರೆ (ಪಶ್ಚಿಮಕ್ಕೆ) ನೇಚರ್ ಕ್ಯಾಂಪ್. ಅಲ್ಲೇ ಹೊಳೆಯಂಚಿನಲ್ಲೆಂಬಂತೆ ಒಂದು ಕಾಂಕ್ರೀಟ್ ವಾಚ್ ಟವರ್ ಕಣ್ಣು ಚುಚ್ಚಿತು. ಸುತ್ತ ಸ್ಪರ್ಧಿಸಲಾಗದ ಎತ್ತರಕ್ಕೆ ಶತಶತಮಾನಗಳಿಂದ ನಿಂತ ಶಿಖರಗಳ ನಡುವೆ ಏನೂ ಅಲ್ಲದ ಇದು, ಅಭಿವೃದ್ಧಿಯ ಅಪಕಲ್ಪನೆಗೆ ಒಳ್ಳೆಯ ಉದಾಹರಣೆ! ಮನುಷ್ಯ ಚಟುವಟಿಕೆಯ ಕಳಚುವಿಕೆ ಅರ್ಥಾತ್ಹೊರಗಿನವರು ಇಲ್ಲಿ ಏನೂ ಮಾಡದಂತೆ ನೋಡಿಕೊಳ್ಳಬೇಕಾದದ್ದು ಇಲಾಖೆ ಪ್ರಾಕೃತಿಕ ಪುನಶ್ಚೇತನಕ್ಕೆ ಕೊಡಬೇಕಾದ ಸವಲತ್ತು. ನೇರ ಹಾನಿಕರವಾದ ಬೇಟೆ, ನಾಟಾ ಬಿಡಿ, ಮನುಷ್ಯ ವಸತಿ, ಕೃಷಿ, ಜಾನುವಾರು ಮುಂತಾದವೂ ಅಕ್ರಮವೆಂದೇ ಸಾರುತ್ತದೆ ವನ್ಯನೀತಿ. ದುರಂತವೆಂದರೆ ವನ್ಯದ ಕುರಿತು ಸಾರ್ವಜನಿಕ ಶಿಕ್ಷಣದ ಹೆಸರಿನಲ್ಲಿ ಮೂಡಿ, ವಿಕಸಿಸುತ್ತಿರುವ ‘ಪ್ರಕೃತಿ ಶಿಬಿರ’ ಮತ್ತೆ ಮನುಷ್ಯ ರಚನೆ ಮತ್ತು ಚಟುವಟಿಕೆಗಳನ್ನು ಬೇರೇ ರೂಪದಲ್ಲಿ ಹೇರುತ್ತಿದೆ. (ಸತ್ತವರ ನೆರಳು ನಾಟಕದಲ್ಲಿ ಸನ್ಯಾಸಿಯ ಕುರಿತು ಹೀಗೇ ಒಂದು ಮಾತು ಬರುತ್ತದೆ – ಮನೆ, ಮಡದಿ, ಸಂಸಾರ ಇತ್ಯಾದಿ ಬಿಡುತ್ತಾ ತೊಡಗಿದಾತ ಮಠ, ಶಿಷ್ಯಂದಿರು, ಉತ್ಸವ ಎಂದು ಸೇರಿಸಿಕೊಳ್ಳುತ್ತಾ ಹೋಗುತ್ತಾನೆ!) ಕತ್ತೆತ್ತಿ ಸಹಜವಾಗಿ ನಾಲ್ಕು ನಕ್ಷತ್ರ ನೋಡದವನಿಗೆ ‘ವೀಕ್ಷಣೆ’ಗೆ ಬೈನಾಕ್ಯುಲರ್ ಒದಗಿಸಿದ ಹಾಗಾಗಿದೆ – ವಾಚ್ ಟವರ್! ಎಲ್ಲವೂ ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗಿಸಬೇಕೆಂಬ ಧೋರಣೆಯೇ ತಪ್ಪು; ಹಲ್ಲಿದ್ದವನಿಗೆ ಕಡಲೆ, ಸಾಕು.

ಘಟ್ಟಸಾಲಿನ ಮುಖ್ಯ ಶಿಖರ ಶ್ರೇಣಿಯ ನೇರ ಒಳಮೈಯಲ್ಲಿದ್ದೆವು. ಅನೂರ್ಜಿತ ಸ್ಥಿತಿಯಲ್ಲಿದ್ದ ಕಚ್ಚಾ ದಾರಿ ಪೂರ್ವ-ದಕ್ಷಿಣದತ್ತ (ಆಗ್ನೇಯ) ಸಾಗಿತ್ತು. (ಬಯಸಿದರೆ, ದಾರಿ ಬಿಟ್ಟು ಬಲಕ್ಕೆ ಸರಿದರೆ, ಇಲ್ಲಿ ನಾವು ಎಲ್ಲೂ ಹತ್ತು ಮಿನಿಟಿನ ಸಾಧಾರಣ ಏರಿಕೆಯಲ್ಲಿ ಶಿಖರಗಳನ್ನು ಮುಟ್ಟಬಹುದಿತ್ತು. ಆದರೆ ಅದರಲ್ಲಿ ನಾವು ಸಮಯ ಕಳೆಯಲಿಲ್ಲ.) ಪ್ರಾಕೃತಿಕ ಸನ್ನಿವೇಶಗಳಿಗೆ ತಕ್ಕುದಾಗಿ ಶಿಖರ ಸಾಲು ಕೆಲವೆಡೆ ಬೋಳುಮಂಡೆ (ಕೇವಲ ಹುಲ್ಲುಗಾವಲು) ಮತ್ತೆ ಕೆಲವೆಡೆ ದಪ್ಪ ಹಸುರಿನ ಟೊಪ್ಪಿಗೆ ಧರಿಸಿತ್ತು. ಎಡ ವಿಸ್ತಾರದಲ್ಲಿ, ಭಗವತಿ ಬೋಗುಣಿಯ ಆಚೆ ಹಿಮ್ಮೂಲೆಯಲ್ಲಿ ಗಂಗಡಿಕಲ್ಲಿನ ಚೂಪು (ಗಡಿಬಿಡಿಯಲ್ಲಿ ಗಂಗಡಿಕಲ್ಲು ನೋಡಿ). ಅಲೆಯಲೆಯುವ ಮಿರುಗು ಹಸುರಿನ ಅದರ ಮೈಯುದ್ದಕ್ಕೆ ದೃಷ್ಟಿ ಹರಿಸುತ್ತ ಇತ್ತ ನೋಡಿ. ಹಲವು ಶಿಖರ ಚೂಪುಗಳು ಸುತ್ತುವರಿದಂತೆ ನಿಂತು, ಬೆರಗುಗಣ್ಣಿಂದ ಮಡಿಲಲ್ಲೆದ್ದ ಮಟ್ಟಸ ಭೂಮಿ ನೋಡುತ್ತಿವೆಯಲ್ಲಾ ಅದೇ ಲಖ್ಯಾ ಅಣೆಕಟ್ಟು.

“ಏನೂ ಅಲ್ಲದ ಪುಟ್ಟ ಕಣಿವೆ, ಬಡಕಲು ತೊರೆ ಲಖ್ಯಾ. ಅದಕ್ಕೆ ಮಣ್ಣಿನದೇ ಅಣೆಕಟ್ಟು. ಲೋಹದ ಅದಿರು ಪ್ರತ್ಯೇಕಿಸಿ ಉಳಿದ ಕೆಸರನ್ನಷ್ಟೂ ಇದಕ್ಕೆ ತುಂಬುವುದು. ಅಲ್ಲಿ ಪೂರ್ಣ ಮಣ್ಣಿನಂಶ ತಂಗಿಸಿ, ಹಣಿಯಾದ ನೀರನ್ನು ಮಾತ್ರ ಮರುಬಳಕೆಗೋ ಭದ್ರಾ ಹೊಳೆಗೋ ಬಿಡುತ್ತೇವೆ ಗಣಿಗಾರಿಕಾ ಸಂಸ್ಥೆಯ ಘೋಷಿತ ಆದರ್ಶಗಳು. ಹಸುರು ಬೆಟ್ಟಗಳ ನಡುವಣ ನಿರ್ಮಲ ಜಲಧಿ, ವ್ಯವಸ್ಥಿತ ಹುಲ್ಲ ಹಾಸನ್ನೇ ಹೊದ್ದ ಈ ಅಣೆಕಟ್ಟು, ಇಲಾಖೆಯ ಪರಿಸರ ಪ್ರೇಮದ ಪ್ರಧಾನ ಸಂಕೇತವೇ ಆಗಿತ್ತು. ಆದರೆ ಗಣಿಗಾರಿಕೆ ನಡೆಯುತ್ತಿದ್ದ ಕಾಲದಲ್ಲೇ ಒಮ್ಮೆ ನಾವು ಹೀಗೇ ಹೋಗಿದ್ದಾಗ, ಕಾರ್ಖಾನೆಯಿಂದ ಲಖ್ಯಾಕ್ಕೆ ಹೋಗುತ್ತಿದ್ದ ಕೊಳವೆ ಒಡೆದು ಕೆಸರು ನೇರ ಭದ್ರಾನದಿ ಸೇರುತ್ತಿದ್ದದ್ದು ಕಂಡದ್ದುಂಟು. ಕ್ಷಣಿಕ ಆಕಸ್ಮಿಕಗಳನ್ನು ನೇರ್ಪುಗೊಳಿಸಿದ ಅಧಿಕೃತ ವರದಿಗಳು ದೊಡ್ಡದಾಗಿಯೇ ಬರುತ್ತಿದ್ದಾಗಲೂ ಸ್ಫಟಿಕ ನಿರ್ಮಲ ವನವಾಹಿನಿ ಭದ್ರೆಯಲ್ಲಿ ರಕ್ತಪ್ರವಾಹವೇ ಸಾಮಾನ್ಯವಾಗಿತ್ತು. ಅದೊಂದು ಮಳೆಗಾಲ ಅಣೆಕಟ್ಟೆಯ ಕೋಡಿಕಾಲುವೆಯ ಬಳಿ ಭಾರೀ ಭೂ ಕುಸಿತ ಸಂಭವಿಸಿದ್ದು, ಕುದುರೆಮುಖ ಪಟ್ಟಣಕ್ಕೆ ಕೆಸರ ಸುನಾಮಿ ಅಪ್ಪಳಿಸುವ ಭೀತಿ ತಲೆದೊರಿತ್ತು. ರಕ್ಕಸ ಯಂತ್ರಗಳು ಯುದ್ಧಸ್ತರದಲ್ಲಿ ಬಂದೋಬಸ್ತು ನಡೆಸಿದ್ದಾಗ, ನಾನೂ ಹೋಗಿ ನೋಡಿ ಬಂದಿದ್ದೆ. ಆ ದಿನಗಳು ಅಧಿಕೃತ ಘೋಷಣೆಗಳ ಪೊಳ್ಳಿಗೆ ಒಳ್ಳೆಯ ಉದಾಹರಣೆಯಂತೆ ನನಗೆ ನೆನಪಿಗೆ ಬರುತ್ತಲೇ ಇರುತ್ತದೆ. ಅಣೆಕಟ್ಟೆ ರಚನೆಯ ಕಾಲದಲ್ಲಿ ಇಲಾಖೆಯ ಪರಿಣತರು ಅಂತಿಂಥ ಮಳೆ, ಭೂಕಂಪವನ್ನು ಸಹಿಸಿ ಪರಿಸರ ರಕ್ಷಿಸುವಂತೆ ವಿನ್ಯಾಸ ಮಾಡಿದ್ದೇವೆ ಎಂದದ್ದನ್ನು ಚೊಕ್ಕ ಮರೆತು ಕುದುರೆಮುಖ ಊರಿಗೂರೇ ಖಾಲಿಯಾಗಿತ್ತು. (ಡಾ| ರಾಜಾರಾಮಣ್ಣ ಕೈಗಾ ಪರಮಾಣು ವಿದ್ಯುತ್ ಕೇಂದ್ರ ನಿರ್ಮಾಣ ಕಾಲದಲ್ಲಿ ಅದರ ಪರಿಸರ ಶುದ್ಧಿಯನ್ನು ಪ್ರಮಾಣೀಕರಿಸಲು ತನ್ನ ನಿವೃತ್ತಿ ಜೀವನವನ್ನು ಅಲ್ಲೇ ಕಳೆಯುವುದಾಗಿ ಘೋಷಿಸಿಕೊಂಡು, ಅನಂತರ ಸಾರ್ವಜನಿಕ ನೆನಪಿನ ಅಲ್ಪಾಯುವನ್ನು ಬಳಸಿಕೊಂಡು ಬೆಂಗಳೂರಿನಲ್ಲೇ ಉಳಿದ ಹಾಗೇ) ಕಾಲದ ವಿಪರ್ಯಾಸಕ್ಕೆ ಕನ್ನಡಿ ಹಿಡಿದಂತೆ ಇಂದು, ತೋರಿಕೆಯ ಮೇಲ್ಮೈ ನೀರಮಿರುಗು ಬತ್ತಿ, ಪಶ್ಚಿಮ ಘಟ್ಟದ ಹಸುರಿನ ನಡುವಣ ಅಕ್ಷರಶಃ ಮರುಭೂಮಿ ಲಖ್ಯಾ!

ಲಖ್ಯಾದಿಂದ ದೃಷ್ಟಿ ಕಳಚಿ, ಮುಂದುವರಿಸಿದಾಗ ಸುದೂರದಲ್ಲಿ ಅಗ್ನಿಪರ್ವತದ ಅಂಚಿನಂತೇ ತೋರುತ್ತದೆ – ಗಣಿಗಾರಿಕೆಯಲ್ಲಿ ತಲೆಹೊಡೆಸಿಕೊಂಡ ಬೆಟ್ಟಸಾಲು. ನಿಯಂತ್ರಿತ ಸ್ಫೋಟವೇ ಮೊದಲಾಗಿ ಎಲ್ಲ ಮನುಷ್ಯ ಚಟುವಟಿಕೆಗಳು ನಿಂತು ವರ್ಷವೆರಡಾದರೂ ಗಾಯ ಮಾಯದೆ, ಇನ್ನೆಷ್ಟು ವರ್ಷಗಳು ಬೇಕೋ ಎಂಬ ಆತಂಕ ಮೂಡಿಸುತ್ತದೆ. ಆ ದಿಕ್ಕಿನಲ್ಲೇ ಸಾಗುತ್ತಿದ್ದ ಜೀಪು ದಾರಿಯ ಅವಶೇಷವನ್ನೇ ಅನುಸರಿಸಿ ನಮ್ಮ ಚಾರಣ ಮುಂದುವರಿಯಿತು. ಈ ವಲಯದ ಹೆಸರು ಪಾಂಡರಮಕ್ಕಿ; ಹೆಸರಿನಲ್ಲೇನಿದೆ ಎಂಬ ಕುತೂಹಲಿಗಳಿಗೆ ಅದಿರಲಿ. ಗಂಗಡಿಕಲ್ಲೂ ಸೇರಿದಂತೆ ಈ ವಲಯದ ಎಲ್ಲಾ ಬೆಟ್ಟಗಳ ತೆರೆಮೈಯಲ್ಲಿ ಅಡ್ಡಾದಿಡ್ಡಾ ಕಾಣಿಸುವ ಕಚ್ಚಾ ಮಾರ್ಗಗಳು ಮೂಲದಲ್ಲಿ ಗಣಿಗಾರಿಕೆಯವರ ಅನ್ವೇಷಣಾಪಥಗಳೇ ಆಗಿವೆ. (ಗಂಗಡಿಕಲ್ಲಿನ ಶ್ರೇಣಿಯಲ್ಲಂತೂ ಒಂದೆರಡು ಕಡೆ ಭಾರೀ ತಗ್ಗುಗಳನ್ನೇ ಮಾಡಿ ಮಾದರಿಗಳನ್ನು ಸಂಗ್ರಹಿಸಿದ್ದರ ಕುರುಹೂ ಕಾಣಸಿಗುತ್ತದೆ.) ಗಣಿಗಾರಿಕೆ ನಿಂತಮೇಲೆ, ರಾಷ್ಟ್ರೀಯ ಉದ್ಯಾನವನ ಗಟ್ಟಿಗೊಳ್ಳುತ್ತಿದ್ದಂತೆ, ಆ ದಾರಿಗಳಲ್ಲಿ ಹೆಚ್ಚಿನವನ್ನು ಪ್ರಾಕೃತಿಕವಾಗಿ ಜೀರ್ಣಗೊಳ್ಳಲು ಬಿಟ್ಟು ವನ್ಯ ಸಂರಕ್ಷಣಾ ಆದ್ಯತೆಯ ನೆಲೆಯಲ್ಲಿ ಅವಶ್ಯವಾದವುಗಳನ್ನಷ್ಟೇ ಊರ್ಜಿತದಲ್ಲಿಡುವುದು ನಿರೀಕ್ಷಿತ. ಇಲ್ಲಿ ಅಂಥ ಪ್ರಯತ್ನವೂ ನಡೆಯಲಿಲ್ಲ ಎಂದು ನಾವು ಉದ್ಗರಿಸುವ ಮೊದಲು. . . .

ಕಚ್ಚಾ ಮಾರ್ಗ ಮಳೆಗಾಲದ ಹೊಡೆತದಲ್ಲಿ ಸಾಕಷ್ಟು ಕೊರೆದು ಜರಿದು ಹೋಗಿತ್ತು. ಕೆಲವೆಡೆಗಳಲ್ಲಿ ತೆರ್ಮೆ, ಹುಲ್ಲೂ ಬೆಳೆದು ಸವಕಲು ಜಾಡೂ ಮರೆಯಾಗಿತ್ತು. ಆದರೆ ಬೇರೆ ಬೇರೆ ಅಂತರದಲ್ಲಿ, ಮೂರು ಕಿರು ಕಣಿವೆಗಳ ಸಹಜವಾಗಿ ಒರತೆ ಮೂಡಿದ ಜಾಗಗಳಲ್ಲೇ ಇಲಾಖೆ ಮಾರಿಹಲಿಗೆ ಹೊಡೆದು (ಅರ್ತ್ ಮೂವರ್) ‘ಅಭಿವೃದ್ಧಿ ಕೆಲಸ ನಡೆಸಿಬಿಟ್ಟಿತ್ತು! ಹುಲ್ಲ ಹರಹು ಒತ್ತೊತ್ತಿ ಬಂದು ಪೊದರು, ಕುಬ್ಜ ಎನ್ನುವಂಥ ಮರಗಳಿಂದ ತೊಡಗಿ, ಬುಡದ ನೆಲದಲ್ಲಿ ಪುಡಿಬಂಡೆಗಳ ಎಡೆಯಿಂದ ನೀರಕಣ್ಣು ತೆರೆಯುವಲ್ಲೇ ಯಂತ್ರ ವಿಸ್ತಾರವಾಗಿ ನೆಲ ಗೋರಿತ್ತು. ದಿನಕ್ಕೊಂದು ಚಿನ್ನದ ಮೊಟ್ಟೆ ಕೊಡುವ ಬಾತುಕೋಳಿಗೆ ಚೂರಿ ಹಾಕಿದ ಬುದ್ಧಿವಂತಿಕೆ. ನೆಲದ ಪ್ರಾಕೃತಿಕ ಸ್ಥಿತಿ ಮಾತ್ರವಲ್ಲ, ಅಷ್ಟೂ ಹುಲ್ಲು ಪೊದರು ಮರಗಳ ವಿಕಾಸಪಥವನ್ನು ನಾಶ ಮಾಡಿ ಕಚ್ಚಾ ಅಣೆಕಟ್ಟು ನಿಲ್ಲಿಸಿ ಪುಟ್ಟ ಸರಸಿ ನಿರ್ಮಿಸಿದ್ದರು. ವನ್ಯ ಜೀವಿಗಳಿಗೆ ಜಲಮೂಲ ಒದಗಿಸುವ ಯೋಜನೆ! ಒಂದೆಡೆಯಲ್ಲಿ ಆಚೀಚಿನ ಮರಸಾಲು ಕಳೆದರೂ ಒಂಟಿ ಮರವನ್ನು ನೀರ ನಡುವೆ ಎಂಬಂತೆ ಉಳಿಸಿಬಿಟ್ಟಿದ್ದಾರೆ. ವರ್ಷದ ಕೆಲವು ತಿಂಗಳು ಹರಿನೀರು ಕಂಡರೂ ಉಳಿದಂತೆ ಗಟ್ಟಿನೆಲದಲ್ಲಿ ಬೇರು ರೂಢಿಸಿದ್ದ ಮರ ಈಗ ಜಲಸಸ್ಯವಾಗಿ ಮತಾಂತರಗೊಳ್ಳಬೇಕು! ಇಲ್ಲವೇ ದುರ್ಯೋದನನಿಂದ ಜಲಸ್ತಂಭನ ವಿದ್ಯೆ ಕಲಿತು ಬದುಕಬೇಕು! ಇನ್ನು ಪಾತ್ರೆಯೊಳಗೆ ಕಸ, ಹೂಳು ತುಂಬಿಯೋ ಮತ್ತೆ ಯಾವುದೋ ಮಹಾಮಳೆಗಾಲದಲ್ಲಿ ಕಟ್ಟೆ ಬಿರಿದೋ ಹುಲ್ಲು, ಪೊದರು, ಮರ ವಿಕಸಿಸಿ ಮತ್ತೆ ತೊರೆ ಜುಳುಜುಳಿಸುವ ಕಾಲ ಕಾಯಬೇಕಿದೆ!!

ಗಾಳಿ ಬರ್ರೋ ಎನ್ನುತ್ತಿತ್ತು. ಹಸಿರು ಸೊಕ್ಕಿದ ಹುಲ್ಲು ಅಲ್ಲಲ್ಲಿ ಹಳದಿಯ ಛಾಯೆ ಗ್ರಹಿಸಿದರೂ ದೃಢವಾಗಿ ನಿಂತು ಅನುಮೋದಿಸುತ್ತಿತ್ತು. ನಮ್ಮ ಬಲದ ಹುಲ್ಲ ಹರಹಿನ ಶಿಖರ ಸಾಲು, ಮುಂದೆ ಒಮ್ಮೆಗೇ ದಟ್ಟ ಕಾಡಿನ ಟೊಪ್ಪಿ ಧರಿಸಿತ್ತು. ಅಲ್ಲಿವರೆಗೆ ನೇರ ಪಶ್ಚಿಮ ಗಾಳಿಗೆ ಒಡ್ಡಿಕೊಂಡಿದ್ದ (ಬಹುಶಃ ಶ್ರೇಣಿಯ ಹೊರಮೈ) ಪರ್ವತರಾಯರ ಮಂಡೆಗೆ ಇಲ್ಲಿ (ಒಳ ಚಾಚಿಕೊಂಡಾಗ) ಚಳಿ ಹಿಡಿದಿರಬೇಕೆಂದು ನಮ್ಮೊಳಗೇ ನಗೆಮಾಡಿಕೊಂಡೆವು. ಹುಲ್ಲ ಹರಹಿನ ಮಟ್ಟಸ ನೆಲದಲ್ಲಿ ಹಂದಿರಾಯರ ದುಂಡಿ ‘ಸ್ಯಾಂಪ್ಲಿಂಗ್ ನಡೆಸಿದ ಅಪಾರ ಕುರುಹುಗಳು ಸಿಕ್ಕುತ್ತಲೇ ಇತ್ತು. (ಏಏ, ರೆಡ್ಡಿ ಎಡ್ಡಿ ಜೊತೆಗೆ ಪಾಪ ಇವನ್ನು ಲೋಕಾಯುಕ್ತಕ್ಕೆ ಹಾಕಬೇಡಿ! ಗೆಡ್ಡೆ, ಎರೆಹುಳದಿಂದಾಚೆ ಅವಕ್ಕೇನೂ ರುಚಿಸದು) ದೊಡ್ಡ ಹಾವಿನ ಒಂದು ಪೊರೆ, ಕರಡಿ ಹಾಗೂ ಚಿರತೆಯ ಮಲದ ಅವಶೇಷಗಳು ಧಾರಾಳ ಕಾಣಸಿಕ್ಕವು. ದೂರ ನೋಟಕ್ಕೆ ಕಡವೆಗಳಂತೂ ಒಂಟಿಯಾಗಿ, ಗುಂಪುಗಳಲ್ಲಿ ದರ್ಶನ ಕೊಡುತ್ತಲೇ ಇದ್ದವು. ಹೆಚ್ಚಿನ ಹಕ್ಕಿ, ಪ್ರಾಣಿಗಳು ಯಾಕೋ ನಮ್ಮ ಸಮಯಕ್ಕೆ ಒಲಿಯಲಿಲ್ಲ. ಮಧ್ಯಂತರದಲ್ಲೊಂದು ಸಣ್ಣ ನೀರ ಸೆಲೆ ಮತ್ತು ಏರು ಹಗಲಿನ ಚಾರಣದ ದೀರ್ಘ ತಾರ್ಕಿಕ ಕೊನೆಯಲ್ಲಿ ಆಳವಾದ ಕಣಿವೆಯೊಂದರ ಪೊದರು ನುಗ್ಗಿ ಸೇರಿದ ಝರಿಪಾತ್ರೆ ನಮಗೆ ನೆರಳನ್ನೂ ಬುತ್ತಿಯೂಟಕ್ಕೆ ‘ಪಾನಕವನ್ನೂ ಒದಗಿಸಿದವು.

ಬುತ್ತಿಯೂಟ ಮುಗಿಸಿದ್ದೇ ನಾವು ತೆರೆಮೈಗೆ ಬಂದು, ಪಾಂಡರಮಕ್ಕಿ ವಲಯದ ಆ ಕೊನೆಯಲ್ಲಿ ಮೊಳೆತ ತುಂಡು ಕಲ್ಲುಗಳ ಮೇಲೆ ಹರಡಿಕೊಂಡು ಕುಳಿತೆವು. ಸುಮಾರು ಒಂದು ಗಂಟೆಯ ಕಾಲ ಸುತ್ತಣ ಆಗುಹೋಗುಗಳಿಗೆ ನಾವು ಕೇವಲ ಕಣ್ಣುಕಿವಿಗಳು, ತೀರಾ ಅನಿವಾರ್ಯವಾದರೆ ಪಿಸುನುಡಿಗಳು. ಅಲ್ಲಿ ಬೆಟ್ಟ ಸಾಲು ಸ್ವಲ್ಪ ಹೆಚ್ಚೇ ಇಳಿದು, ವಿಸ್ತಾರ ಮೈಚಾಚಿದೆ. ಙವು ಹೆಸರರಿಯದ ಸಣ್ಣ ಒಂದು ಶ್ರೇಣಿಯಾಚೆ ಅಗ್ನಿಪರ್ವತದ ಅಂಚಿನಂತೇ ತೋರುತ್ತದೆ – ಗಣಿಗಾರಿಕೆಯಲ್ಲಿ ತಲೆಹೊಡೆಸಿಕೊಂಡ ಬೆಟ್ಟಸಾಲು. ಅವೆರಡರ ನಡುವೆ ಅಲ್ಲೆಲ್ಲೋ ಆಳದಲ್ಲಿ ಕಚ್ಚಿಗೆ ಹೊಳೆ ಹರಿದಿತ್ತು. ಗಣಿಗಾರಿಕೆಯ ದಿನಗಳಲ್ಲಿ ಅದರ ನೇರ ಉತ್ಪಾತಗಳನ್ನು ನಾಗರಿಕತೆಗೆ ಸಾರುತ್ತಲೇ ಬಂದ ಕಚ್ಚಿಗೆಹೊಳೆ ಈಗ ನಿಟ್ಟುಸಿರು ಬಿಟ್ಟು ಸುಧಾರಿಸಿಕೊಳ್ಳುತ್ತಿರಬೇಕು. ಆ ಕೊನೆಯಲ್ಲಿ ಬಲದ ಶಿಖರಸಾಲನ್ನು ಅತ್ಯಂತ ತಗ್ಗಿನಲ್ಲಿ ದಾಟಿ, ನೇರ ದಕಜಿಲ್ಲೆಯ ನಾರಾವಿಗೆ ಹಿಂದೆಂದೋ ಇಳಿದದ್ದನ್ನು ನಿರೇನ್ ಸ್ಮರಿಸಿಕೊಂಡರು. ದೂರದೂರದಲ್ಲಿ ಕಡವೆ, ಕಾಟಿಯನ್ನೂ ಕಂಡ ಮೇಲೆ ಇಂದಿಗೆ ಇಷ್ಟೇ ಲಭ್ಯ ಎಂದು ಮೇಲೆದ್ದೆವು. ವನಧಾಮ ಪ್ರಾಣಿಸಂಗ್ರಹಾಲಯವಲ್ಲ. ನಾವಲ್ಲಿ ಹೋದ ತಪ್ಪಿಗೆ ಸಕಲ ಜೀವರಾಶಿಗಳು ನಮ್ಮೆದುರು ಹಾಜರಾತಿ ಹಾಕುತ್ತವೆಂದೇನೂ ನಾವು ಭಾವಿಸಿರಲಿಲ್ಲ. (ಚಂಡೆ ಬಾರಿಸಿಕೊಂಡು, ನಾನು ನೀನು ಸಖಿಯರೆಲ್ಲಾ ವನಕೆ ಪೋಗುವಾಂತ ಹಾಡಿಕೊಂಡು, ನಾಗರಹೊಳೆಗೋ ಬಂಡಿಪುರಕ್ಕೋ ಹೋದವರೆಷ್ಟೋ ಮಂದಿ ಏನೂ ಕಾಣದೆ ಬಂದು ನನ್ನಲ್ಲಿ ದೂರುತ್ತಿರುತ್ತಾರೆ!)

ಬೆಳಿಗ್ಗೆ ಬರುವಾಗ ಏರುಬಿಸಿಲಿಗೆ ಮಲೆತು ನಿಂತಂತಿದ್ದ ಶೃಂಗರಾಜರು ನಮ್ಮ ಮರುದಾರಿಗೆ ತಣ್ಣನೆ ನೆರಳ ಹಾಸು ಬಿಡಿಸುತ್ತಿದ್ದರು. ಬೋರ್ಗಾಳಿ ವಿರಾಮದ ಮನೆ ಸೇರಿರಬೇಕು; ನೀರವ, ನಿಸ್ಪಂದ. ಆದರೆ ಇಂದಿನ ಈ ಪ್ರಶಾಂತ ಮೌನಕ್ಕೆಷ್ಟು ಬೆಲೆ ಸಂದಿದೆ ಎನ್ನುವ ಯೋಚನೆಗಳು ನಮ್ಮ ದಾರಿಯುದ್ದಕ್ಕೂ ಬಿಡಿಸಿಕೊಳ್ಳುತ್ತಲೇ ಇತ್ತು. ಒಂದು ಕಾಲದಲ್ಲಿ ಇಲ್ಲಿ ವ್ಯರ್ಥವಾಗುವ ಹುಲ್ಲನ್ನೆಲ್ಲಾ ಬರಗಾಲಪೀಡಿತ ಪ್ರದೇಶದ ರಾಸುಗಳಿಗೆ ರವಾನೆ ಮಾಡುವ ಸಚಿವಾಶ್ವಾಸನೆ ಹೊರಟದ್ದಿತ್ತು. ಹೀಗೇ ಇನ್ಯಾರೋ ಬಯಲುಸೀಮೆಗೆ ಹೊರಟ ಮೋಡ ಸವಾರಿಗೆ ಅಡ್ಡಿಯುಂಟು ಮಾಡುವ ಶಿಖರಗಳ ತಲೆಹೊಡೆಯುವ ಯೋಜನೆ ಹಾಕಿದ್ದು, ಮಂಗನ ಕಾಯಿಲೆ ಜೋರಾದಾಗ ಕಾಡಿಗೇ ಕಿಚ್ಚಿಡುವ ಹೇಳಿಕೆ ಕೊಟ್ಟದ್ದೂ ಇತ್ತು. ಸಮಷ್ಟಿಯ ವಿವೇಚನೆ ಅವನ್ನೆಲ್ಲ ಕಾರ್ಯಗತವಾಗಲು ಬಿಡಲಿಲ್ಲ. ಆದರೆ ಹತ್ತೊಂಬತ್ತನೇ ಶತಮಾನದ ಖನಿಜ ವರದಿ ನೋಡಿ, ವನ್ಯವನ್ನು ಕಸಮಾಡಿ, ಗಣಿಗಾರಿಕೆಗಿಳಿದ ಕೆ.ಐ.ಒ.ಸಿ.ಎಲ್ (ವಿಸ್ತೃತ ರೂಪದ ಕೆ=ಕುದುರೆಮುಖ, ಹೆಸರನ್ನು ಅವಹೇಳನ ಮಾಡುತ್ತದೆ) ಗಟ್ಟಿ ನೆಲೆಸಿಯೇಬಿಟ್ಟಿತು. ತಂತ್ರಜ್ನಾನದ ಅಗಾಧತೆಯೂ ವಿಜ್ನಾನವೆಂದು ಭ್ರಮಿಸಿದ್ದ ನನ್ನಂತವರೂ ಅಲ್ಲೆಲ್ಲಾ ಓಡಾಡಿ ಸಂಭ್ರಮಿಸಿದ್ದೆವು. ಬ್ರಿಟಿಷರು ಮನುಷ್ಯ ಉಪಯುಕ್ತತೆಯನ್ನೇ ಲಕ್ಷ್ಯವಾಗಿಟ್ಟುಕೊಂಡು ನಡೆಸಿದ ಸರ್ವೇಕ್ಷಣಾ ವರದಿಗಳನ್ನು ಮೀರಿದಂತೆ ಭೂಜೈವಿಕ ಅಧ್ಯಯನಗಳು ಈ ವಲಯದಲ್ಲೇನೂ ನಡೆದಿರಲಿಲ್ಲ. ಸಹಜವಾಗಿ ತೀರಾ ಅಲ್ಪಸಂಖ್ಯಾತರಾದ ವನ್ಯ ವಿಜ್ನಾನಿಗಳ ವಿರೋಧಕ್ಕೆ ಹೆಚ್ಚಿನ ಆಧಾರಗಳಿರಲಿಲ್ಲ, ಹುಯ್ಲಿಗೆ ಬಲ ಬರಲಿಲ್ಲ.

ಗಣಿಗಾರಿಕೆಯ ನಿಗದಿತ ಆಯುಷ್ಯ ಮುಗಿಯುತ್ತಾ ಬರುವ ಕಾಲಕ್ಕೆ ಕಂಪೆನಿಯ ‘ಪರಿಸರ ಪ್ರೇಮ ಸಾಕಷ್ಟು ಸೋರಿಹೋಗಿತ್ತು. ಆದರೂ ರಾಜ್ಯಸರಕಾರ ‘ಲಾಭದಾಯಕ (ಯಾರಿಗೆ?) ಉದ್ದಿಮೆ ಎಂದು, ಆಯುಷ್ಯವೃದ್ಧಿ ವರವನ್ನೂ ಅದರ ಹೆಚ್ಚಿನ ಹಸಿವಿಗೆ ಗಂಗಡಿಕಲ್ಲು ಶ್ರೇಣಿಯನ್ನೂ ಧಾರೆ ಎರೆಯಲು ಸಿದ್ಧವಾಗಿತ್ತು. ಆದರೆ ಈಗ ವನ್ಯ ಪ್ರೇಮಿಗಳ ಸತ್ತ್ವವೂ ವೃದ್ಧಿಯಾಗಿತ್ತು. ನ್ಯಾಯಿಕ ಹೋರಾಟದಲ್ಲಿ ಅತ್ಯುಚ್ಛ ನ್ಯಾಯಾಲಯ ನಿಸ್ಸಂದಿಗ್ದ ಶಬ್ದಗಳಲ್ಲಿ ಗಣಿಗಾರಿಕೆಯನ್ನು ಉಚ್ಚಾಟಿಸಿತು. ಸುಮಾರು ಮೂರು ದಶಕಗಳ ಕಾಲ ದಿನದ ಯಾವ ವೇಳೆಯಲ್ಲೂ ದಿಗ್ಭಿತ್ತಿ ಬಿರಿಯುವಂತೆ ಸರಣಿ ಸ್ಫೋಟಗಳನ್ನು ಅನುಭವಿಸಬಹುದಿತ್ತು. ವನದ ಶ್ರುತಿ ಅಡಗಿಹೋಗುವಂತೆ ಕಲ್ಲರೆದು, ಪಾಕಹರಿಸುವ (ಕೊಳವೆಸಾಲಿನಲ್ಲಿ ಮಂಗಳೂರಿಗೆ) ಯಂತ್ರಗಳ ಮೊರೆತವಂತೂ ನಿರಂತರ. ಇಂದು ಅವೆಲ್ಲ ಸ್ತಬ್ಧ. ಆದರೂ…

ದೇಶಭಕ್ತರ ಹೆಸರಿನಲ್ಲಿ ದೇಶಭಕ್ಷಕರು ಬೆಳೆದು, ರಾಷ್ಠ್ರ ಸಂವಿಧಾನಕ್ಕಿಂತ ಪಕ್ಷ ಸಂಹಿತೆಗಳೇ ದೊಡ್ಡವಾಗಿ, ಅಧಿಕಾರಕ್ಕಿಂತ ಅಮಲುಗಳು ಹೆಚ್ಚಿ ಇಲ್ಲಿನ ವನ್ಯದ ದಿಗಂತದಲ್ಲಿ ಘೋರರಕ್ಕಸ ಸಂದೋಹ ಆರ್ಭಟಿಸುತ್ತಲೇ ಇವೆ. ಕೆಐಸಿಓಎಲ್ ಇನ್ನೂ ಮಲ್ಲೇಶ್ವರದಲ್ಲಿ ತನ್ನೊಂದು ಗುಜರಿ ಅಂಗಡಿ ಉಳಿಸಿಕೊಂಡು, ವರ್ಣಮಯ ಸಾಬೂನು ಗುಳ್ಳೆ ಹಾರಿಸುತ್ತಲೇ ಇದೆ. ಆಗಾಗ ಬ್ರಷ್, ಬಾಣಲೆ ಹಿಡಿದು, ಕನಿಷ್ಠ ದೂಳು ಗುಡಿಸಿ ‘ಚಿನ್ನ ಹೆಕ್ಕಲು ಅವಕಾಶವನ್ನಾದರೂ ಕೊಡಿ ಎಂದು ಗೋಗರೆಯುವುದೂ ಇದೆ. ಪ್ರವಾಸೋದ್ಯಮ ಇಲಾಖೆ ಕಾಲಕಾಲಕ್ಕೆ ಸಿಡಿಸುವ ಬಣ್ಣಬಣ್ಣದ ಆಕಾಶಬುಟ್ಟಿ, ಪಟಾಕಿಗಳ ಕಸಗುಡಿಸುವ ಕೆಲಸ ಅವಿರತ ನಡೆಯುತ್ತಲೇ ಇರಬೇಕು. ಕತ್ತೆ ವ್ಯಾಪಾರಕ್ಕಾಗಿ ರೆಸಾರ್ಟ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಧ್ಯಾನ, ಪೋಲಿಸೋ ಇನ್ನೂ ಮೇಲಿನ ಕಮಾಂಡೋಗಳ ಪಟ್ಟು, ಎಲ್ಲಿಂದೆಲ್ಲಿಗೋ ಸಮೀಪವಾಗಲು ಹೆದ್ದಾರಿಗೆ (ಎನ್ನೆಚ್) ತುಡಿತ, ಲಖ್ಯಾದಲ್ಲಿ ತುಂಬಿದ ಟನ್ನುಗಟ್ಟಳೆ ಹೂಳಿಗೆ ಇಟ್ಟಿಗೆ ಹಂಚುಗಳಾಗುವ ಬಯಕೆ ಇತ್ಯಾದಿ ಪಟ್ಟಿ ಮಾಡಿದಷ್ಟೂ ಮುಗಿಯದು. ಮಂಗಳೂರಿನ ಇಂಗದ ದಾಹಕ್ಕೆ ಇಲ್ಲಿ ‘ವ್ಯರ್ಥವಾಗುವ ಕೊಳವೆಸಾಲು ಮತ್ತು ಗಿರಿಧಾರೆಗಳ ಮೇಲೇ ಕಣ್ಣು. ಕೇಂದ್ರ ಸರಕಾರದ ಗಣಿ ಇಲಾಖೆ ಇಲ್ಲಿ ಪುನರುಜ್ಜೀವನದ ಮಾತಾಡಿದರೆ, ರಾಜ್ಯ ಅರಣ್ಯ ಇಲಾಖೆ ಖಡಕ್ ವಿರೋಧ ನಿಲ್ಲಿಸುತ್ತದೆ. ಅದೇ ಕೇಂದ್ರ ಇದನ್ನು ವಿಶ್ವ ಪರಂಪರಾ ಪಟ್ಟಿಗೆ ಸೇರಿಸಲು ಮುಂದಾದಾಗ ರಾಜ್ಯ ಸ್ವಾಯತ್ತತೆಯ ಮಾತೆತ್ತಿ ಲತ್ತೆ ಕೊಡುತ್ತದೆ. ಇನ್ನೂ ಇನ್ನೂ ನಿಮ್ಮ ಸಹನೆ ಪರೀಕ್ಷೆ ಮಾಡುವ ಬದಲು ಪಾಂಡರಮಕ್ಕಿ ಚಾರಣ ಕಥಾನಕಕ್ಕೇ ಮಂಗಳ ಹಾಡಲು ಅನುಮತಿ ಕೋರುತ್ತೇನೆ.

ಸಬ್ ಕೋ ಸನ್ಮತಿ ದೇ ಭಗವಾನ್!