ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು ದಾರಿಯಲ್ಲಿ ಬೈಕು ಓಡಿದ್ದಲ್ಲ. ನಾವು ಸಾಗಿಸಿದ್ದು! ಕವಿದುಕೊಂಡ ಪೊದರು, ಅಡ್ಡಬಿದ್ದ ಮರ, ಕೊರಕಲಾದ ಜಾಡು, ರಭಸದ ತೊರೆ, ಹೂಳುವ ಗೊಸರು ಸುಧಾರಿಸಿ ಸಾಕಾಗಿ ಪೂರ್ಣ ನಡಿಗೆಗೇ ಶರಣಾದೆವು. ಗುಡ್ಡದ ಓರೆಯಲ್ಲಿ ತೊರೆಯೊಂದಕ್ಕೆ ಸಮಸಮವಾಗಿ ಹಗುರವಾಗಿ ಏರಿ ನಡೆದೆವು. ಜರಿದದ್ದನ್ನು ಸರಿಸದೆ, ಮುಚ್ಚಿ ಬೆಳೆದ ಮರ ಪೊದರನ್ನು ಸವರದೆ ನಡೆದಂತೆ, ಜಾಡಿನ ಬಗ್ಗೆ ಸಂಶಯ ಪೀಡಿಸತೊಡಗಿತು. ಗೊಂದಲ ನಿವಾರಿಸಲು ಹೊಳೆ ಪಾತ್ರೆಗೆ ಇಳಿದೆವು.

ಹೊಳೆಯ ಹರಹು ಮತ್ತು ನೀರು ನಮ್ಮ ಬರ್ಕಣದ ನಿರೀಕ್ಷೆಗೆ ಕಡಿಮೆಯಿತ್ತು. ಒಣ ಬಂಡೆಯಿಂದ ಬಂಡೆಗೆ ಅಡಿಯಿಡುತ್ತ, ಅಪರೂಪಕ್ಕೆ ಹತ್ತುತ್ತ, ಜಿಗಿಯುತ್ತ ತೊರೆ ಪಾತ್ರ ತಿರುಗಿದಂತೆಲ್ಲ ಹರಿವಿನ ಎದುರು ದಿಕ್ಕನ್ನು ಅನುಸರಿಸಿದೆವು. ಸುತ್ತಣ ಹಸಿರು ತೊರೆಯನ್ನು ಮುಗಿಬಿದ್ದು ಮುಚ್ಚುವಂತಿದ್ದುದರಿಂದ ನಮಗೆ ಆ ಕಣಿವೆಯ ವಿಸ್ತಾರವಾಗಲೀ ಅಂಚುಗಟ್ಟಿದ ಬೆಟ್ಟ ಸಾಲಿನ ಉನ್ನತಿಯಾಗಲೀ ಅಂದಾಜಿಗೆ ನಿಲುಕಲಿಲ್ಲ. ಆದರೂ ಕ್ರಮಿಸಿದ ಅಂತರ ಹೆಚ್ಚಿದಂತೆಲ್ಲಾ ನಮ್ಮ ‘ಪವಾಡ’ದ ನಿರೀಕ್ಷೆ ಬಲಿಯುತ್ತಿದ್ದುದಕ್ಕೆ ಆಘಾತ ಕೊಡುವಂತೆ ಒಂದು ಬಲ ತಿರುವಿನಾಚೆಗೆ ಪುಟ್ಟ ಜಲಪಾತವೇ ಕಾಣಿಸಿ, ಹುಡುಕಾಟಕ್ಕೆ ತತ್ಕಾಲೀನ ತೆರೆಯೆಳೆಯಿತು. ಬೆಟ್ಟದ ಒಂದು ಮುಂಚಾಚಿದ ಬಂಡೆಯಿಂದ ತೆಳುವಾಗಿ ನೀರು ಜಾರುತ್ತಿತ್ತು. ಸುಮಾರು ನೂರು-ನೂರೈವತ್ತು ಅಡಿ ಎತ್ತರದ ಆ ಕಗ್ಗಲ್ಲ ಮೈ ಬರ್ಕಣ ಅಬ್ಬಿಯ ಒಂದು ಅಂಶವಾದರೂ ಆಗುವುದು ಅಸಾಧ್ಯವಿತ್ತು. ಇದ್ದುದರಲ್ಲಿ ಬೇಗ ಸಂತೋಷಿಸಿ, ಬೈಕಿಗೆ ಮತ್ತೆ ಮುಖ್ಯ ದಾರಿಗೆ ಮರಳಿದೆವು.

ಅಂದು ಸಮಯ ಇನ್ನೂ ಸಾಕಷ್ಟು ಉಳಿದಿದೆ ಎನ್ನುವುದಕ್ಕೆ ಬೈಕನ್ನು ಆಗುಂಬೆಯೆಡೆಗೇ ಓಡಿಸಿದೆವು. ನಿಮಗೆ ದಾರಿ ಗೊತ್ತೇ ಇದೆಯಾದರೂ ಇದೇ ಮೊದಲು ಓದುವವರ ಅನುಕೂಲಕ್ಕಾಗಿ – ಆಗುಂಬೆ ಪೇಟೆಯಿಂದ ಶೃಂಗೇರಿ ದಾರಿಯಲ್ಲಿ ಸ್ವಲ್ಪ ಹೋಗಿ ಬಲದ ಮಣ್ಣುದಾರಿ ಅನುಸರಿಸಬೇಕು. ಹಲವು ಕವಲನ್ನು ಅಸ್ಪಷ್ಟ ಕೈಕಂಬಗಳ ತಿದ್ದುಪಡಿಯೊಡನೆ ಸುಧಾರಿಸಿಕೊಂಡರೆ ಪಶ್ಚಿಮಘಟ್ಟ ಸಾಲಿನ ಪ್ರಪಾತದ ಅಂಚು ಅಥವಾ ವಿಶಾಲ ಕಣಿವೆಯೊಂದರ ಮೇಲ್ತಟಿಗೆ ತಲುಪುತ್ತೀರಿ. ನಾವು ವೀಕ್ಷಣ ಕಟ್ಟೆ ಸೇರಿ, ಕಡು ಹಸುರ ಮೌನಕಣಿವೆಯ ಪೂರ್ವ ಮೂಲೆಗೆ ದೃಷ್ಟಿ ಹರಿಸಬೇಕು. ಹಸುರಿನ ನಡುವೆ ಬೆಳ್ಳಿ ಸರಿಗೆ ಬಳುಕಿದಂತೆ ಶೋಭಿಸುತ್ತದೆ ಬರ್ಕಣ ಅಬ್ಬಿ. ಅದರ ಅನೇಕ ಸೀಳು, ಬೀಳುಗಳು ನಮ್ಮ ದೂರಕ್ಕೆ ಏಕವಾದಂತೆ, ನಿಶ್ಶಬ್ಧವಾಗಿ, ಅದು ಜಲಪಾತವೇ ಹೌದೋ ಅಲ್ಲವೋ ಎಂದು ಭ್ರಮೆ ಹುಟ್ಟಿಸುವಂತಿತ್ತು. ಅನಂತರ ಹೀಗೇ ಇತ್ತ ತಣ್ಣೀರಬೈಲು, ಅಲ್ಲಿ ಕಾಣಿಸಿದ ಪುಟ್ಟ ಜಲಪಾತವನ್ನೂ ಹಕ್ಕಿನೋಟದಲ್ಲಿ ಗುರುತಿಸಲು ವಿಫಲ ಯತ್ನ ಮಾಡಿ, ಬೇರೊಂದೇ ಹೊಳಹು ಹಾಕಿ ಮಂಗಳೂರಿಸಿದೆವು.

ತಣ್ಣೀರಬೈಲಿನಿಂದ, ವೀಕ್ಷಣ ಕಟ್ಟೆಯಿಂದ ತೆಗೆದ ಫೋಟೋಗಳನ್ನು ಇಟ್ಟುಕೊಂಡು ಪುರುಸೊತ್ತಿನಲ್ಲಿ ವಿಮರ್ಶಿಸಿದೆವು. ಮಹಾತಲೆಗಳು ಘಟ್ಯಾಡಿದಾಗ ಕಾಣಿಸಿದ ಒಂದೇ ದೋಷ, ನಮ್ಮ ಪ್ರಯತ್ನಗಳೆಲ್ಲಾ ಕೂಪುದಾರಿ ಅಥವಾ ಸವಕಲು ಜಾಡು ಮೀರಿ ಹರಿದಿರಲಿಲ್ಲ. ಹಾಗಾಗಿ ಜಾಡುಗಳನ್ನೇ ನಿರಾಕರಿಸಿದ ಪ್ರಯತ್ನಕ್ಕೆ ಸಜ್ಜಾದೆವು. ಈ ಬಾರಿ ಬರ್ಕಣವನ್ನು ದೃಷ್ಟಿಗೆ ಕಟ್ಟಿಕೊಂಡು ನೇರ ಕೊಳ್ಳಕ್ಕಿಳಿಯುವ ಸರಳ ಯೋಜನೆ. ಆದರೆ ಎಂದಿನಂತೆ ನಮ್ಮ ಬೈಕ್ ಪಡೆ ಹೊರಡಿಸುವಂತಿರಲಿಲ್ಲ. ಒಂದೇ ಹಗಲಿನಲ್ಲಿ ಕೊಳ್ಳಕ್ಕಿಳಿದು, ತಳ ನೋಡಿ, ವಾಪಾಸು ಏರುವ ಶ್ರಮ ವಿಪರೀತವಾಗುತ್ತಿತ್ತು ಮತ್ತು ಹಗಲೂ ಸಾಲದಾಗುವ ಹೆದರಿಕೆ ಇತ್ತು. ಹಾಗಾಗಿ ಬೆಳಿಗ್ಗೆ ನಮ್ಮನ್ನು ಮೇಲೆ ಬಿಟ್ಟು, ಸಂಜೆ ಕೆಳಗಿನಿಂದ ಸಂಗ್ರಹಿಸಿಕೊಳ್ಳುವ ಬಾಡಿಗೆ ವಾಹನವನ್ನೇ ಅಂದಾಜಿಸಿದೆವು. ಸ್ಟ್ಯಾಂಡರ್ಡ್ ಸರ್ಕ್ಯುಲೇಟಿಂಗ್ ಗ್ರಂಥಾಲಯದ ಗೆಳೆಯ ವಿಕ್ಟರ್ ಆಳ್ವಾರಿಸ್ ಅವರೊಬ್ಬ ಗೆಳೆಯನನ್ನು – ಮೆಟಡೋರ್ ಚಾಲಕ, ಗುರುತು ಮಾಡಿಕೊಟ್ಟರು. ಆಗಿನ ನಿಯಮಾನುಸಾರ (ಈಗ ಹೇಗಿದೆ ಎಂದು ಗೊತ್ತಿಲ್ಲ) ಖಾಸಗಿ ಆಂಬುಲೆನ್ಸ್ ನಡೆಸುವವರಿಗೆ ವಾಹನ ಖರೀದಿಯಲ್ಲೋ ರಸ್ತೆ ಸುಂಕದಲ್ಲೋ ಸರಕಾರದಿಂದ ಕೆಲವು ಸಹಾಯ, ಸವಲತ್ತುಗಳಿದ್ದವಂತೆ. ಹಾಗೇ ಈತ ತೋರಿಕೆಗೆ ಆಂಬುಲೆನ್ಸ್ ಎನಿಸುವ ವಾಹನವನ್ನೇ ಖರೀದಿಸಿದ್ದ. ಆದರೆ ಬಾಡಿಗೆ ಸಿಕ್ಕಂತೆ, ಮದುವೆಗೋ ಮಸಣಕೋ ಹೋಗೆಂದ ಕಡೆ ಓಡಿಸುತ್ತಿದ್ದ!

ಆದಿತ್ಯವಾರ (೧೨-೧-೧೯೯೨, ಇಂದಿಗೆ ೨೧ ವರ್ಷಗಳ ಹಿಂದೆ) ಬೆಳಿಗ್ಗೆ ಐದು ಗಂಟೆಗೆ ನಾವು ಮಂಗಳೂರು ಬಿಟ್ಟೆವು. ಹೋಗುವ ದಾರಿಯಲ್ಲೇ ಚಾಲಕನಿಗೆ ತಣ್ಣೀರಬೈಲು ಕವಲು ತೋರಿಸಿ, ಸಂಜೆಗೆ ಅಲ್ಲಿ ನಮ್ಮನ್ನು ಕಾದು ನಿಲ್ಲಲು ಸೂಚಿಸಿದ್ದೂ ಆಯ್ತು. ಕಾರ್ಕಳ ದಾಟುವವರೆಗೆ ಸೂರ್ಯ ದರ್ಶನ ಕೊಡಲಿಲ್ಲ. ನಾವು ವೀಕ್ಷಣ ಕಟ್ಟೆ ಸೇರಿದಾಗ ಗಂಟೆ ಒಂಬತ್ತಾಗಿದ್ದರೂ ನಿಧಾನಕ್ಕೆದ್ದ ಸೋಮಾರಿ ಸೂರ್ಯ ಮಂಕಾಗಿಯೇ ಇದ್ದ. ಕೆಳ ಕಣಿವೆಯನ್ನು ಮಂಜಿನ ಹೊದಿಕೆ ಎಳೆದು ಎಬ್ಬಿಸುವುದಕ್ಕೆ ತೊಡಗಿದಂತಿರಲಿಲ್ಲ. ಅಬ್ಬಿಯೇನೋ ಸ್ಥಿರಚಿತ್ರದಂತೆ ಕಾಣುತ್ತಿತ್ತು – ಅದೇ ನೀರವತೆ, ಭ್ರಮಾಪೂರ್ಣ ನೋಟ. ವಾಹನ ಬೀಳ್ಕೊಂಡು ನಡಿಗೆಗಿಳಿದೆವು.

ಬರ್ಕಣ ಕೊಳ್ಳ ಪೂರ್ವ- ಪಶ್ಚಿಮಕ್ಕೆ ಚಾಚಿಕೊಂಡಿದೆ. ನಮ್ಮ ಲಕ್ಷ್ಯ ಪೂರ್ವದಲ್ಲಿದ್ದರೂ ವೀಕ್ಷಣಾ ಕಟ್ಟೆಯ ಆ ಮುಖದಲ್ಲೂ ನೇರ ಕೆಳಕ್ಕೂ ಬಂಡೆ ಗೋಡೆಯಂತೆ ಕಡಿದಾಗಿತ್ತು. ಇಳಿಯುವ ಪ್ರಯತ್ನ ಮಾಡದೇ ಪ್ರಪಾತದಂಚಿನಲ್ಲೇ ಪಶ್ಚಿಮಕ್ಕೆ ಸರಿದೆವು. ಕುರುಚಲು ಕಾಡಿನ ನಡುವೆ ಅಸ್ಪಷ್ಟ ಜಾನುವಾರು ಜಾಡು ಹಿಡಿದು ಹತ್ತು ಮಿನಿಟು ನಡೆದೆವು. ಬಂಡೆ ಮೈ ಕಳೆದ ಮೇಲೆ ಅಂಚಿನುದ್ದಕ್ಕೆ ಅಷ್ಟಾವಕ್ರ ಗುಜ್ಜಾರಿ ಮರಗಳ ಸಮೂಹ ಬೇಲಿ ಕಟ್ಟಿದ ಹಾಗೆ ಹೆಣೆದುಕೊಂಡಿತ್ತು. ಬುಡದ ನೆಲವನ್ನು ಮಳೆಬಿಸಿಲು ಗಾಳಿಯಿಂದ ರಕ್ಷಿಸಲು ಪ್ರಕೃತಿ ಕಟ್ಟಿದ ಈ ಮರೆ ನಮ್ಮನ್ನಿರಲಿ ನಮ್ಮ ದೃಷ್ಟಿಯನ್ನೂ ದಾಟಲು ಬಿಡದಷ್ಟು ದಟ್ಟವಿತ್ತು. ಅನಾಥವಾಗಿ ನಿಂತಿದ್ದ ಹಳೆಯ ಗಡಿ ಕಲ್ಲೊಂದನ್ನು ದಾಟಿ ಸ್ವಲ್ಪ ಮುಂದೆ ಎಡಕ್ಕೊಂದು ಸಂದು ಕಾಣಿಸಿದಲ್ಲಿ ದೇಹ ತೂರಿಸಿದೆವು. ಅಲ್ಲಿಗೆ ಚೌಕಾಸಿ ನಡಿಗೆ ಮುಗಿದಿತ್ತು. ನೇರ ಕೊಳ್ಳದೊಡನೆ ಮುಖಾಮುಖಿ ಪ್ರಾರಂಭ. ತೀವ್ರ ಇಳುಕಲಿನ ಆದರೆ ಧಾರಾಳ ಕುರುಚಲು ಗಿಡಮರಗಳ ಮಣ್ಣು ನೆಲದಲ್ಲೇ ಸಾಗಬೇಕಿತ್ತು. ತರಗೆಲೆ, ಪುಡಿಕಲ್ಲು, ಹುಡಿಮಣ್ಣು ರಾಶಿಯನ್ನೇ ಇಳಿಯುವ ಸ್ಥಿತಿ. ಎಷ್ಟೇ ಜಾಗ್ರತೆ ವಹಿಸಿದರೂ ಪಾದ ಹುಗಿಯುತ್ತಿತ್ತು. ಕಲ್ಲುಗುಂಡುಗಳು ಜಾರಿ ಉರುಳುತ್ತಿದ್ದವು. ಬೂಟುಗಳೊಳಗೆ ಮಣ್ಣು ಕಸ ಸೇರದಂತೆ, ನಮ್ಮ ನಡಿಗೆಯಿಂದ ನೆಲೆ ತಪ್ಪಿದ ಉರಗಗಳ ಸಂಪರ್ಕ ಬಾರದಂತೆ, ಉರುಳು ಕಲ್ಲುಗಳು ನಮ್ಮಲ್ಲೇ ಇನ್ನೊಬ್ಬರಿಗೆ ಅಪಾಯ ತಾರದಂತೆ ಹೆಜ್ಜೆಯಲ್ಲಿ ಲಘುತ್ವ, ನಾವೇ ಉರುಳಿ ಹೋಗದ ದೃಢತೆ, ಹುಡುಕುನೋಟ ಸಂಯೋಗವಾಗಬೇಕಿತ್ತು. ಸಹಜವಾಗಿ ನೆಲ ಒಡ್ಡಿಕೊಂಡಂತೆ ಸಾಧ್ಯವಾದಷ್ಟು ಓರೆ ಜಾಡನ್ನೇ ರೂಢಿಸಿಕೊಂಡೆವು. ಇದು ಉರುಳುಗಲ್ಲುಗಳನ್ನು ತಪ್ಪಿಸುವುದರೊಡನೆ ನಮ್ಮ ಅಬ್ಬಿ ಲಕ್ಷ್ಯವನ್ನೂ ಸುಲಭಗೊಳಿಸುತ್ತಿತ್ತು. ವೀಕ್ಷಣಾ ಕಟ್ಟೆಯ ತಳದ ಬಂಡೆಮೈ ತಪ್ಪಿಸಿ ಓರೆಯಲ್ಲಿ ಪೂರ್ವ ದಿಕ್ಕಿಗೆ ಸಾಗುವುದು ನಮಗೆ ತೀರಾ ಅವಶ್ಯವೂ ಇತ್ತು. ಅಬ್ಬಿಗೂ ಮೊದಲೇ ಹೊಳೆಪಾತ್ರೆ ಸೇರಿದರೆ ಮತ್ತೆ ನೀರಹರಿವಿನ ನಡುವೆ ಬಂಡೆಗುಂಡುಗಳ ಸರಣಿ ಆಯ್ದು ಏರುವ ಶ್ರಮ ಬರುತ್ತಿತ್ತು. ಜೊತೆಗೆ ಅನಿಶ್ಚಿತ ಗುರಿಯನ್ನು ಹಗಲಳಿಯುವ ಮುನ್ನ ಮುಟ್ಟಿ, ತಪ್ಪಲಿನ ಅನಿಶ್ಚಿತ ಹಳ್ಳಿಗೆ ತಲಪಲೇಬೇಕೆಂಬ ಗುರಿಗೆ ಸಮಯದ ಕೊರತೆಯೂ ಕಾಡುವ ಅಪಾಯವಿತ್ತು.

ಭರಭರನೆ ಬೀಸುಗಾಲಿಕ್ಕಿ ಇಳಿದದ್ದಲ್ಲ, ಜಾರಿದೆವು. ಹಿಮದ ಹಾಸುಗಳಲ್ಲಿ, ಈಚೆಗೆ ಎಲ್ಲೋ ಮರು ಭೂಮಿಯಲ್ಲೂ ಕೇವಲ ನುಣ್ಣನೆ ಅಟ್ಟೆಯ ಬೂಟುಹಾಕಿ (ಸ್ಕೀಯಿಂಗ್ ಹಲಿಗೆಗಳಲ್ಲ), ಕೈಗೆರಡು ಊರೆಗೋಲು ಹಿಡಿದು ಜಾರುವಾಟ – ‘ಬೂಟಿಂಗ್’, ಮಾಡುವುದಿದೆಯಂತೆ. ಅಂದು, ನಮಗೆ ಹಾಗೊಂದು ತಂತ್ರವಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ಆವಶ್ಯಕತೆಯೇ ಶೋಧನೆಯ ಮೂಲ ಎಂಬಂತೆ, ಸಿಕ್ಕ ಸಣ್ಣಪುಟ್ಟ ಗಿಡ, ತೋರದ ಬಳ್ಳಿಗಳನ್ನು ಆಚೀಚೆ ಬಾಚಿಕೊಳ್ಳುತ್ತಾ ಕೊನೆಯವರೆಗೆ ಜಗ್ಗುತ್ತಾ (ಟಾರ್ಜಾನ್ ಮರಗಳೆತ್ತರದಲ್ಲಿ ಲೀಲಾಜಾಲವಾಗಿ ಸಾಗುತ್ತಾನಲ್ಲಾ ಹೆಚ್ಚುಕಮ್ಮಿ ಹಾಗೇ!) ಸಾಗಿದೆವು. ಕೆಲವರು ಅಲ್ಲಿ ಇಲ್ಲಿ ಸಿಕ್ಕ ಒಣ ಕೋಲುಗಳನ್ನು ಹೊಂದಿಸಿಕೊಂಡದ್ದೂ ಇತ್ತು. ಆದರಿದು ಸಿನಿಮಾವಲ್ಲ, ವಾಸ್ತವ. ಕಾಲು ಜಾರುವಲ್ಲಿ ಅಂದಾಜಿನ ಮಣ್ಣು ಕಳೆದು ಕಲ್ಲು ಹೆಟ್ಟಿದರೆ ಮುಗ್ಗುರಿಸಬೇಕು. ಗಟ್ಟಿ ನೆಲವೆಂದು ಊರಿದಾಗ ಎಲೆಮರೆಯಲ್ಲಿ ಬಂಡೆ ಹಾಸು ಸಿಕ್ಕು ಜಾರಿ ಕಾಲು ಕಿಸಿದು ಕುಕ್ಕರಿಸಿದ್ದೂ ಇತ್ತು, ಅಪರೂಪಕ್ಕೆ ದಿಂಡುರುಳಿದ್ದೂ ಇತ್ತು. ಕೆಲವು ಪ್ರಸಂಗಗಳಲ್ಲಿ ನಮ್ಮ ಕೈಯಾಸರೆಗಳು ಗಟ್ಟಿಯಾಗಿಯೇ ಇದ್ದುದಕ್ಕೆ ನಾವು ಕೊಳ್ಳದತ್ತ ಉರುಳಿಹೋಗಲಿಲ್ಲ ಎಂದು ಸ್ಪಷ್ಟವಾಗಿ ಇಂದೂ ನೆನಪಿಸಿಕೊಳ್ಳಬಲ್ಲೆ. ಆದರೆ ಹಿಡಿದ ಬಳ್ಳಿ ಹರಿದು ಬಂದಲ್ಲಿ, ಸರದಿಯಲ್ಲಿ ಒದಗಿದ ಅವಸರಕ್ಕೆ ಬಾಚಿಕೊಂಡದ್ದು ಮೈಮುಳ್ಳು ಗಿಡವಾದಾಗ, ನಾವು ನಿರೀಕ್ಷಿಸದೇ ಪಕ್ಕಾ ಮುಳ್ಳಸರಿಗೆಯಂಥಾ ಬೆತ್ತದ ಕುಡಿವರಿಗಳು ಬಟ್ಟೆ ಹರಿಯುವುದಿರಲಿ, ಕೈಕಾಲುಗಳಲ್ಲಿ ದೀರ್ಘ ಗೀರುಗಾಯ ಮಾಡಿದಾಗೆಲ್ಲಾ ನಮ್ಮ ಪಾಡು ಪೂರ್ತಿ ಅದೃಷ್ಟದ ಕೈಯಲ್ಲೇ ಇರುತ್ತಿತ್ತು. (ಅದು ಸರಿಯಾಗಿಯೇ ಇದ್ದದ್ದಕ್ಕೆ ಇಂದು ಅನುಭವದ ನೆನಪಿನ ಸವಿಯನ್ನು ಹಂಚಿಕೊಳ್ಳುತ್ತಿದ್ದೇನೆ) ಮೆಟಡೋರಿನಿಂದಿಳಿಯುವಾಗ ಚಳಿಗೆ ಮುದುಡಿಕೊಂಡಿದ್ದವರು ಈಗ ಬೆವರಧಾರೆ ಹರಿಸಿದ್ದೆವು. “ಎಷ್ಟಾದರೂ ಇಳಿಯುದಲ್ವಾ ದಮ್ಮು ಕಟ್ಟುವ ಏರು ದಾರಿಯಲ್ಲ” ಎಂದೇ ಭಾವಿಸಿ ಬಂದವರಂತೂ ಕೆಲವೊಮ್ಮೆ ಕುಸಿದು ಕುಳಿತಲ್ಲೇ ಮಿನಿಟೆರಡು ಉಸಿರು ಹೆಕ್ಕುವಂತಾಗಿತ್ತು.

ಒಂದೆರಡು ಸಣ್ಣ ತಟ್ಟುಗಳೇನೋ ಸಿಕ್ಕವು. ಆದರದು ಮನುಷ್ಯ ಬಿಟ್ಟು ದೊಡ್ಡ ವನ್ಯ ಮೃಗಗಳೂ ಸಂಚರಿಸದ ನೆಲ; ಯಾವುದೇ ಜಾಡು, ದಿಕ್ಕಿನ ಸೂಚನೆಗಳೂ ನಮಗೆ ದಕ್ಕಲಿಲ್ಲ. ಹಲವು ಏಣುಗಳು, ಸಹಜವಾಗಿ ಮಳೆಗಾಲದಲ್ಲಷ್ಟೇ ನೀರು ಕಂಡಿರಬಹುದಾದ ಪುಟ್ಟ ಕಣಿವೆಗಳನ್ನೂ ಅಡ್ಡ ಹಾಯ್ದೆವು. ನೆಲಕಚ್ಚಿದ ಕುರುಚಲು ಕಾಡು ಭಾರೀ ಮರಗಳಿಗೆ ಅವಕಾಶ ಮಾಡಿಕೊಡುತ್ತಿದ್ದಂತೆ, ಸಣ್ಣಪುಟ್ಟ ಭೂ ಕುಸಿತಗಳೂ ಸಿಕ್ಕವು. ಇವು ನಮ್ಮ ಚಾರಣವನ್ನು ನಿಧಾನಿಸಿದರೂ ಪರೋಕ್ಷವಾಗಿ ಕಣಿವೆಯ ತಳ ಸಮೀಪಿಸಿದ್ದನ್ನು ಸೂಚಿಸಿದವು. ಕಿರು ಓಣಿಯೊಂದರಲ್ಲಿ ಹರಿ ನೀರೂ ಸಿಕ್ಕ ಮೇಲಂತೂ ಜಾಡು ಮೂಡಿಸುವುದು, ಪ್ರಗತಿ ತುಂಬಾ ಕಠಿಣವಾಯ್ತು. ನೀರ ಪಾತ್ರೆಯಲ್ಲಿ ಬೂಟುಗಾಲು ಮುಳುಗಿಸದೆ, ಪಾಚಿ ಬಂಡೆಯಲ್ಲಿ ಜಾರದೆ ನಡೆಯುವ ಕಷ್ಟ. ದಂಡೆಗೇರಿದರೆ ಮುಳ್ಳುಬಲ್ಲೆಗಳ ದಟ್ಟ ಹೆಣಿಗೆ. ಸಾಮಾನ್ಯವಾಗಿ ನನ್ನಲ್ಲಿ ಜನ ಕೇಳುವುದುಂಟು, “ಬೇಟೆಗಲ್ಲದಿದ್ದರೂ ಆತ್ಮ ರಕ್ಷಣೆಗಾಗಿಯಾದರೂ ನೀವು ಕೋವಿ, ಕತ್ತಿಗಳನ್ನು ಒಯ್ಯುತ್ತೀರಲ್ಲಾ?” ನಮ್ಮ ಯಾರಲ್ಲೂ ಪಿಸ್ತೂಲ್ ಕೋವಿಗಳ ಮಾತೂ ಬರುವುದು ಅಸಾಧ್ಯ. ಮತ್ತೆ ಸಾಮಾನ್ಯವಾಗಿ ಕಾಡಿನಲ್ಲಿ ದಾರಿ ಬಿಡಿಸಲು ಒದಗೀತೆಂದು ಕತ್ತಿ ಒಯ್ಯುವ ಅಭ್ಯಾಸವೂ ನಮಗೆ ಹಿಡಿಸಿದ್ದಿಲ್ಲ. ಪ್ರಾಣಿಜಾಡುಗಳಿದ್ದರೆ ತಗ್ಗಿ ನುಸುಳುತ್ತೇವೆ, ಅವಕಾಶವಿದ್ದಂತೆ ಬಳಸಿ ನಡೆಯುತ್ತೇವೆ. ಅನಿವಾರ್ಯತೆ ಬಂದಲ್ಲಿ ನಾವಷ್ಟೇ ದಾಟುವ ಜಾಡು ಬಿಡಿಸುವಾಗ ಕೆಲವು ಪೊದರುಗೈಗಳನ್ನು ಮುರಿಯುವುದಿರಬಹುದು, ಅಷ್ಟೆ. ದಾರಿ ಬಿಡಿಸುವುದು ಹೆಚ್ಚು ಹೊತ್ತಿನ ಪ್ರಯಾಸವಾಗಲಿಲ್ಲ. ಸ್ವಲ್ಪೇ ದೂರದಲ್ಲಿ ಮುಖ್ಯ ಕಣಿವೆಯ ತಳ, ಪ್ರಧಾನ ತೊರೆಯ ಪಾತ್ರೆ ಸಿಕ್ಕಿತು. ಅಲ್ಲಿಗೆ ಅಬ್ಬಿ ನೋಡಲು ಏರು ಜಾಡು ಎಷ್ಟು ಅಂತರದ್ದು ಮತ್ತೆ ಮರಳುವಲ್ಲಿ ಹಳ್ಳಿ ಎಲ್ಲಿನದು ಎಂಬೆರಡೇ ಸವಾಲು ಉಳಿದಂತಾಯ್ತು.

ತೊರೆ ಪಶ್ಚಿಮ ಮುಖಿಯೇ ಆದರೂ ಅದರ ಹರಹು, ನೀರಮೊತ್ತ ಹೇಳುತ್ತಿತ್ತು ಇದು ನಾವು ಹಿಂದೆ ನೋಡಿದ್ದಲ್ಲ. ಘಟ್ಟದ ಮೇಲೆಲ್ಲೋ ಈ ತೊರೆ ಹಲವು ಗೆಳತಿಯರನ್ನು ಕೂಡಿಕೊಳ್ಳುತ್ತಾ ಆಟವಾಡಿಕೊಂಡಿದ್ದಾಗ, ಕಾಡು ಕಣ್ಣು ಕಟ್ಟಿ ತಂದು, ಭಾರೀ ಪ್ರಪಾತದಿಂದ ಕೆಳಗೆ ನೂಕಿಬಿಟ್ಟಿರಬೇಕು. ಆ ಕೋಪವನ್ನು ಬಿದ್ದು ಅದೆಷ್ಟೋ ದೂರ ಬಂದ ಮೇಲೂ ತೊರೆ ಮರೆತಂತಿರಲಿಲ್ಲ. ಬೆಟ್ಟದ ಪಾದವನ್ನು ಯದ್ವಾ ತದ್ವಾ ಕೊರೆದಿತ್ತು. ಅಡ್ಡ ಬಿದ್ದ ಮರಗಳೆಷ್ಟು, ಬಿರಿದು ಹೋಳುಹೋಳಾದ ಬಂಡೆಗಳೆಂತವು, ಕುಸಿದು ಕೂತ ದರೆಗಳೆಷ್ಟು! ಅದನ್ನು ಶಾಂತಪಡಿಸುವಂತೆಯೋ ಕುತೂಹಲದಿಂದ ನೆರೆದು ನೋಡುವಂತೆಯೋ ದಂಡೆಯ ಮರಗಿಡಬಳ್ಳಿಯ ದಟ್ಟಣೆಯೂ ಅಸಾಧಾರಣವೇ ಇತ್ತು. ದಂಡೆ ಜರಿದ ಕುರುಹುಗಳು, ಮರ ಪೊದರು ಅಡ್ಡ ಮಲಗಿ ಕೊರೆದು ಕುಂಬಾದ ಅಡ್ಡಿಗಳು ಧಾರಾಳ ಇದ್ದವು. ಅಂಚುಗಟ್ಟಿ ನಿಂತ, ಕೆಲವೆಡೆ ನಡುಗಡ್ಡೆಗಳಲ್ಲೂ ಬೇರೂರಿದ ಭೀಮ ವೃಕ್ಷಗಳು ಬುಡದಿಂದ ಮೂರು ನಾಲ್ಕಡಿ ಎತ್ತರದಿಂದಲೂ ಉಕ್ಕಿನ ಸಲಾಕೆಗಳಂತೆ ಬೇರುಗಳನ್ನು ಚಾಚಿದ್ದೂ, ಕೆಲವು ನೆಲಕ್ಕೇ ‘ಗೂಟ’ ಹೊಡೆದಂತಿದ್ದುದೆಲ್ಲ ಅಲ್ಲಿನ ಮಳೆಗಾಲದ ರೌದ್ರವನ್ನು ನಮಗೆ ಪರೋಕ್ಷವಾಗಿ ಬಿತ್ತರಿಸುವಂತಿದ್ದವು. (ಅನ್ಯ ದಂಡೆಗಳಲ್ಲಿ ಕಂಡಂತೆ ಇವು ಅಖಂಡ ಹಲಗೆಗಳಂತೆ ಇರಲಿಲ್ಲ – ಬಹುಶಃ ಪ್ರವಾಹಕ್ಕೆ ಕಟ್ಟೆಯಂತಾದತೆ ತನ್ನ ಬುಡಕ್ಕೇ ಎರವಾಗುವ ಜಾಣತನ ಮರ ಕಂಡುಕೊಂಡಿರಬೇಕು. ಅವು ಮೂಲದಲ್ಲೇ ಬೇರು ಚಾಚಿದವೇ ಮಣ್ಣಿನಡಿಯಲ್ಲಿದ್ದ ಬೇರುಗಳು ನೀರ ಸವಕಳಿಯಲ್ಲಿ ಮೇಲೆ ಕಾಣುವಂತಾದವೇ ನನ್ನಳವಿಗೆ ಮೀರಿದ ಪ್ರಶ್ನೆಗಳು.) ಅಲ್ಲೇ ಒಂದು ಕಲ್ಲ ಇರುಕಿನಲ್ಲಿ ಕಡವೆಯೊಂದರ ಕೊಂಬೂ ಮೂಳೆ ಅವಶೇಷಗಳೂ ನಮಗೆ ಕಾಣಸಿಕ್ಕವು. ಅದೂ ಹಾಗೇ – ಹುಲಿ, ಚಿರತೆಯಂಥ ಮಾಂಸಾಹಾರಿಗಳ ಬೇಟೆಯ ಉಳಿಕೆಯೇ ಪ್ರಾಯ ಸಹಜವಾಗಿಯೋ ಅಪಘಾತಕ್ಕೀಡಾಗಿಯೋ ಸತ್ತು ಕರಗಿದ್ದೋ ನಮ್ಮ ಊಹೆಗೆ ಮೀರಿದ ಸಂಗತಿಗಳು.

ಅಬ್ಬಿಸಾಕ್ಷಾತ್ಕಾರಕ್ಕಾಗಿ ನಾವು ಇತರ ವಿವರಗಳನ್ನು ಚುರುಕಾಗಿ ಗ್ರಹಿಸುತ್ತಾ ಎರಡು ಯೋಚನೆಯಿಲ್ಲದೆ ನೀರ ಎದುರು ನಡಿಗೆಗಿಳಿದೆವು. ಅಮೂರ್ತ ಕೆತ್ತನೆಗಳು, ನಾಗರಿಕ ವಲಯದಲ್ಲಿ ಅಲಭ್ಯವಾದ ಜೀವವೈವಿಧ್ಯ, ತೊರೆ – ಪಾತ್ರೆಯ ಅಸಂಖ್ಯ ಅನುಸಂಧಾನಗಳು ನೋಡಿದಷ್ಟು ಇದ್ದವು. ಅವೇನಿದ್ದರೂ ನಮ್ಮ ಅವಸರಕ್ಕೆ ಮಾತ್ರ ಒಗ್ಗದ ಜಾಡದು. ಒಣ ಬಂಡೆ ಸರಣಿಯನ್ನು ಅಂದಾಜಿಸಿ ಹತ್ತಿ, ಕುಪ್ಪಳಿಸಿ, ಪರಸ್ಪರ ಕೈಯಾಸರೆ ಕೊಟ್ಟೂ ಕೆಲವೊಮ್ಮೆ ಅನಿಯಂತ್ರಿತವಾಗಿ ಜಾರಿ ಬೂಟು, ಅರ್ಧ ಪ್ಯಾಂಟೂ ನೀರು ಕುಡಿಯುವುದಿತ್ತು. ಹಾಗೆಂದು ತೀರಾ ಅಸಾಧ್ಯವಾದಲ್ಲಿ ದಂಡೆಗೆ ನುಗ್ಗಿ ಪೊದರು, ಗಿಡಗಳ ನಡುವೆ ಜಾಡು ಬಿಡಿಸ ತೊಡಗಿದರೆ ಶ್ರಮ ಮತ್ತು ಸಮಯದ ವೆಚ್ಚಕ್ಕೆ ಪ್ರಗತಿ ತುಂಬಾ ಮಂದ.

ಸುಮಾರು ಒಂದು ಗಂಟೆಯ ನಡಿಗೆ ಮತ್ತು ನಿರೀಕ್ಷೆಗಳು ಬಂಜೆಯಾಗದಂತೆ ಹಸಿರೊಡೆದು ಹಾಲು ಬಸಿದಂತೆ ಬರ್ಕಣ ಅಬ್ಬಿ ನಮ್ಮೆದುರು ಕಂಗೊಳಿಸಿತು. ಆದರೆ ಅದು ತೀರಾ ಹತ್ತಿರದ ನೋಟ. ಅಲ್ಲೂ ನೀರುಳಿದ ಸ್ಥಳಗಳನ್ನು ಹಸಿರು ‘ಕಾವಲುಗಾರರು’ ಮರೆ ಮಾಡಿ ಕಣ್ಣಂದಾಜು ಎತ್ತರವನ್ನು ಆರ್ನೂರಡಿಗೂ ಮೀರಿಸಲು ಅವಕಾಶ ಕೊಡಲೇ ಇಲ್ಲ. ಶತಶತಮಾನಗಳಲ್ಲಿ ಮೇಲಿನಿಂದ ಕಳಚಿಬಿದ್ದ ಭಾರೀ ಬಂಡೆ ಹಳಕುಗಳು, ಕೊಚ್ಚಿ ಬಂದ ಮರ, ಎಡೆಯಲ್ಲಿ ನೆಲೆಯೂರಲೆಳಸುವ ಹೊಸ ಹಸಿರು ಸೇರಿ ಸ್ಥಳದ ಪೂರ್ಣ ಆಯ ಅಳತೆ ಗ್ರಹಿಸಲು ಆ ನೆಲೆ ನಮಗೆ ಸಹಕಾರಿಯಾಗಿರಲಿಲ್ಲ. ನಮಗೆ ಕಾಣುವಂತೆ ಧುಮುಗುಡುವ ನೀರು ಸಮಗ್ರ ಬರ್ಕಣವೋ ಅಕ್ಕಪಕ್ಕದ ದಿಬ್ಬ ಗೆದ್ದು ನೋಡುವುದು ಸಾಧ್ಯವಾದರೆ ಇನ್ನಷ್ಟು ಧಾರೆಗಳಿರಬಹುದೋ ಇತ್ಯಾದಿ ನಮ್ಮ ಸಂದೇಹಗಳಿಗೆ ಕಾಲನ ಕಟ್ಟಳೆ ಕಾಡುತ್ತಿತ್ತು. ಆಗುಂಬೆಯ ವೀಕ್ಷಣ ಕಟ್ಟೆಗೆ ಎರವಾದ ಶಾಬ್ದಿಕ ಕೊರತೆಯನ್ನು ಹತ್ತು ನೂರುಪಟ್ಟು ತುಂಬಿಕೊಡುವಂತೆ ಕಣಿವೆಯೆಲ್ಲಾ ಅಬ್ಬಿಯದೇ ಮೊರೆತ. ದೂರದಲ್ಲಿ ಬೆಳ್ಳಿಯ ಬೆಳಕು ಮಾತ್ರ ಕಂಡವರ ಎದೆಗಿಲ್ಲಿ ಛಳಕು. ಸಮಯದ ಮಿತಿಯಿಟ್ಟುಕೊಳ್ಳದೆ ಇನ್ನೊಮ್ಮೆ ಬರುವ ಯೋಚನೆಯನ್ನೇ ಗಟ್ಟಿ ಮಾಡುತ್ತಾ ಅವಸರದಲ್ಲಿ ಬುತ್ತಿಯೂಟದ ಶಾಸ್ತ್ರ ಮುಗಿಸಿ, ಕಣಿವೆಯಿಂದ ಹೊರ ಬರುವ ಅನ್ವೇಷಣೆಗಿಳಿದೆವು.

[ಬರ್ಕಣ ಪ್ರಥಮ ತಳದರ್ಶನದ ನನ್ನ ಕಥನವನ್ನು ಸಂಪಾದಕೀಯ ಕತ್ತರಿ ಪ್ರಯೋಗದೊಡನೆ ೨೭-೬-೧೯೯೩ರ ಉದಯವಾಣಿ ಪ್ರಕಟಿಸಿತು. ಹಾಗಾಗಿ ಪ್ರಥಮ ಭೇಟಿಯ ಕಥನವನ್ನು ಸದ್ಯ ಇಲ್ಲಿ ತಡೆ ಹಿಡಿಯುತ್ತೇನೆ. ಈ ಮೊದಲ ಅನ್ವೇಷಣೆ ಕಳೆದು ಮತ್ತೊಂದೆರಡೇ ವಾರದಲ್ಲಿ ಬರ್ಕಣ ತಳದರ್ಶನಕ್ಕೆ ತಪ್ಪಲಿನಿಂದಲೇ ನೇರ ಬಂದಿದ್ದೆವು. ಆಗ ಪರಿಚಿತವಾಗಿದ್ದ ತಪ್ಪಲಿನ ಹಳ್ಳಿಯವರೆಗೂ ಬೈಕಿನಲ್ಲೇ ಬಂದು ಜಾಡು ಹಿಡಿದು ಕಾಡು ನುಗ್ಗಿದಾಗಿನ, ಅಂದರೆ ಎರಡನೇ ಭೇಟಿಯ ಕೆಲವು ತಾಜಾ ಮಾತುಗಳನ್ನು ತುಸು ಕಿಲುಬು ಮಾತ್ರ ತೊಳೆದು, ಇಲ್ಲಿ ಬೆಸೆದು ಮುಂದುವರಿಸುತ್ತೇನೆ.]
ಬರ್ಕಣ ತಳದರ್ಶನದ ಎರಡನೇ ಸಾಹಸ ಯಾತ್ರೆಗೆ ನಮ್ಮದು ನಾಲ್ಕು ಬೈಕ್, ಎಂಟು ಜನರ ತಂಡ. ನಾನು ಮತ್ತು ದೇವಕಿ ಮಾತ್ರ ಹಳಬರು. ಪ್ರಥಮ ಭೇಟಿಯನಂತರ ಕಣಿವೆಯಿಂದ ಹೊರ ಬಂದ ನೆನಪಿನಲ್ಲಿ ಕೊನೆಯ ಹಳ್ಳಿಗೇ ನೇರ ಹೋಗಿ ಬೈಕ್ ಬಿಟ್ಟು ನಡಿಗೆಗಿಳಿದೆವು. ಹಿಂದಿನ ಸಲ ನಾವು ಅಬ್ಬಿಯಿಂದ ಹಳ್ಳಿಗೆ ಏಕಮುಖವಾಗಿ ಬಂದಿದ್ದೆವು. ಈ ಸಲ ಏರುಮುಖ ಹಿಡಿದಾಗ ಸವಕಲು ಜಾಡಿನ ಕವಲುಗಳು ಲೆಕ್ಕ ತಪ್ಪಿಸಿದವು. ಸುಮಾರು ಅರ್ಧ ಗಂಟೆಯ ನಡಿಗೆಯಾಗುವಾಗ ಸಿಕ್ಕ ಹಳ್ಳಿಗರು ನಮ್ಮ ತಪ್ಪು ತಿದ್ದಿದರು. ಇಲ್ಲವಾದರೆ ಅರಿವಿಲ್ಲದೇ ಮತ್ತೆಷ್ಟೋ ನಡೆದು, ಈ ಹಿಂದೆ ಬರ್ಕಣ ತಳ ಶೋಧನಾ ಅರಸಾಟಗಳಲ್ಲಿ ಕಂಡಿದ್ದ ಮೇಗದ್ದೆ ಅಬ್ಬಿಯ ಕಿಬ್ಬಿಯೊಳಗೆ ಸೇರಿ ಹೋಗಲಿದ್ದೆವು. ಮತ್ತು ಅಂದೇ ಮರಳಿ ಯತ್ನ ಮಾಡಲು ಸಮಯ ಸಾಲದೇ ಸೋಲುತ್ತಿದ್ದೆವು! ಇದರಿಂದ ಸುಮಾರು ಒಂದು ಗಂಟೆಯೇ ವ್ಯರ್ಥವಾದರೂ ನಮ್ಮ ಅಬ್ಬಿ ದರ್ಶಿಸುವ ‘ಭಕ್ತಿ’ ಅಚಲವಾಗಿತ್ತು.

ತಿದ್ದಿದ ನಡಿಗೆಯಲ್ಲಿ ಮುಖ್ಯ ಹಳ್ಳದ ಪಾತ್ರೆ ಅಥವಾ ಅದು ಕಣ್ಣಳವಿಯಲ್ಲೇ ಇರುವಂಥಾ ಜಾಡುಗಳನ್ನಷ್ಟೇ ನಂಬಿ ಬಿರುಬೀಸು ಹೆಜ್ಜೆಯನ್ನೇ ಹಾಕಿದ್ದೆವು. ಪಶ್ಚಿಮ ಘಟ್ಟದ ಅಗಾಧತೆಯಂತೇ ಈ ವಲಯದ ಪ್ರಚಂಡ ಮಳೆಗಾಲ – ಅದರ ಕಾಲದಲ್ಲೇ ಅಬ್ಬರಿಸಿದರೂ ಪ್ರತಿ ಹಳ್ಳ ಹೊಳೆಯಲ್ಲಿ ಅಸಾಧ್ಯ ದಾಂಧಲೆ ನಡೆಸುತ್ತದೆ. ಆದರೆ ಮಳೆಗಾಲ ಕಳೆದ ವಾರ – ಹತ್ತು ದಿನದಲ್ಲೇ ಎಲ್ಲೋ ಕೆಲವು ಮಹಾಹೊಳೆಗಳನ್ನು ಉಳಿದೆಲ್ಲವೂ ಚಾರಣಿಗರಿಗೆ ನಿರಪಾಯಕಾರಿ ಬಿನ್ನಾಣದಲ್ಲಿರುತ್ತವೆ. ನಾವು ನೆಚ್ಚಿದ ಬರ್ಕಣ ಬಿದ್ದಿಳಿವ ತೊರೆಯಾದರೂ ಅದಕ್ಕೆ ಹೊರತಲ್ಲ. ಮಳೆಗಾಲದ ಏಕ ಮಹಾಕಾಯೆ ಬುಸುಗುಡುತ್ತಾ ತಾನೇ ಕುಟ್ಟಿ, ಕೆಡಹಿ, ಕೊಚ್ಚಿ ಮಾಡಿದಷ್ಟೂ ಅಗಲದಲ್ಲಿ ಈಗ ಲಲಿತೆ, ಅಸಂಖ್ಯ ರೂಪಗಳ ಕಲಕಲನಿನದೆ. ಮಳೆಗಾಲದ ಬಹುರೂಪಿ ವೀರವೃತ್ತಿಯಲ್ಲಿ ಕೆಂಬಣ್ಣ, ಸುಳಿ ಸೆಳವಿನ ಮಹಾಬಲದಲ್ಲಿ ಎದೆನಡುಗಿಸಿದ್ದಿರಬಹುದು. ಆದರೆ ಇಂದು, ಶೃಂಗಾರ ಲಾಸ್ಯಗಳ ವಿನೋದದಲ್ಲಿ ಮೈಮರೆತು ಮಡುಗಟ್ಟಿ ನಿಂತಲ್ಲಿ ಮಿರುಗುವ ಮಾಯಾದರ್ಪಣ. ಕಲ್ಲ ಓಣಿಗಳ ಓಟದಲ್ಲಿ ಹನಿ ಚದುರದೆ ಮಂದ ತೈಲ ಗಂಭೀರೆ. ಪುಟ್ಟಪುಟ್ಟ ಬೀಳುಗಳಲ್ಲಿ ನೊರೆಗಟ್ಟುವ ಹಾಲಿನದೇ ಧಾರೆ, ತೊಟ್ಟಿಕ್ಕುವಲ್ಲಿ ಸ್ಫಟಿಕ ಮಣಿಮಾಲೆ. ಬಂಡೆ ಹಾಸಿನ ಮೇಲೆ ತಾನೇ ಕೊರೆದ ಬಾಗು ಬಳಕಿನಲ್ಲಿ ನಲಿದು, ತೆಳು ಮರಳ ಮಡುಗಳಲ್ಲಿ ನಿಂತು ಸುತ್ತ ಸುಳಿದು, ಸಾಗುವ ತೊರೆಯ ವೈಭವಕ್ಕೆ ಎಷ್ಟು ಭಾಷೆಯ ತೊಡವು ಕೊಟ್ಟರೂ ಕಡಿಮೆಯೇ. ಹಾಗೆಂದ ಮಾತ್ರಕ್ಕೆ ಇಲ್ಲಿನ ನಡಿಗೆಯನ್ನು ಲಲಿತ ಕಾವ್ಯವಿಹಾರ ಎಂದು ಭ್ರಮಿಸೀರಿ. ಅಲ್ಲ, ಇದು ಪಂಡಿತಗಬ್ಬ! ಅರ್ಥ ಬರೆಯಲು ಅಂದಿನ ನಮ್ಮ ಮಿತ್ರ ಬಳಗದಲ್ಲೇ ಇದ್ದ ಪಂಡಿತ ದಂಪತಿಗಳ ಅನುಭವದೊಡನೆಯೇ ನಾಲ್ಕು ಹೆಜ್ಜೆ ಹಾಕೋಣ.

ಕನ್ನಡದಲ್ಲಿ ಬೇಂದ್ರೆಯವರ ಗಂಗಾವತರಣವೂ ಸೇರಿದಂತೆ ಪ್ರಕೃತಿ ಸೌಂದರ್ಯದ ಕುರಿತು ಧಾರಾಳ ಪಾಠಮಾಡುವ ಭೂಮಿಗೌಡ, ಸಬೀಹಾ (ಅಧ್ಯಾಪಕ-) ದಂಪತಿ ಬರ್ಕಣದ ಅವತರಣವನ್ನು ಸ್ವಾಂಗೀಕರಿಸಿಕೊಳ್ಳಲು ಅತ್ಯುತ್ಸಕರಾಗಿಯೇ ಜೊತೆಗೊಟ್ಟಿದ್ದರು. ಆದರೆ ಇಲ್ಲಿನ ಕಠಿಣ ಪದಗಳು (ಬಂಡೆ, ಮುಳ್ಳುಗಳು), ಛಂದೋಬಂಧ (ಜಾಡಿಲ್ಲದ ನಡೆ), ಪ್ರತಿಮೆಗಳು (ಕಾಡು, ಬೆಟ್ಟ) ಮುಖ್ಯವಾಗಿ ಸಬೀಹಾರ ಅರ್ಥವಂತಿಕೆಗೆ ನಿಲುಕಲಿಲ್ಲ. ಕಾಡಿನ ನೆರಳು, ನೀರ ತಣ್ಪು ಸಾಕಷ್ಟಿದ್ದರೂ ಏರುನಡಿಗೆಯ ತೀವ್ರತೆ ಅವರನ್ನು ಕಾಡಿತು. ಚಂಡಿ ಬಂಡೆಯ ಮೇಲೆ ಕಾಲಿಟ್ಟು ತಳಬುಳುಂಕಾದರೆ, ಕೊರಕಲು ಹಾರಲು ನಾಡಿಮಿಡಿತ ತಡವರಿಸುತ್ತಿತ್ತು. ಇವರನ್ನು ಕಂಡರೆ ಸವಕಲು ಜಾಡಿನಲ್ಲಿ ಮಲಗಿದ್ದ ಬೇರು ಎದ್ದು ತೊಡರುಗಾಲು ಕೊಡುತ್ತಿತ್ತು, ಗಾಳಿಗೊಲಿದ ಮುಳ್ಳುಗೈ ಇವರನ್ನೇ ಒರೆಸುತ್ತಿತ್ತು. ಆಧಾರಕ್ಕೆ ಹಿಡಿದ ಗೆಲ್ಲು ಮುಳ್ಳು ಮೊಳೆಯಿಸಿಕೊಂಡರೆ, ಕುಂಬುಮರ ಕಟ್ಟಿರುವೆ ಹಿಂಡನ್ನೇ ದಾಳಿಗಿಟ್ಟಿತು; ಪಾಪ, ಕಾವ್ಯವಾಚನದುದ್ದಕ್ಕೂ ರಸಭಂಗ. ನನಗೋ ಬಾಲ್ಯದಲ್ಲಿ ಹುಲಿವೇಷದವನ ಹಿಂದೆ ಬಾಲ ಹಿಡಿಯುವವನ ಪಾಡು ನೋಡಿದ್ದೇ ನೆನಪು. ಇನ್ನೂ ಸುಮಾರು ಒಂದು ಗಂಟೆಯ ನಡಿಗೆ ಬಾಕಿಯುಳಿದಂತೆ ಸಬೀಹಾ ಅಬ್ಬಿ ದರ್ಶನದ ಪ್ರಯತ್ನ ಕೈಚೆಲ್ಲಿದರು. ದಟ್ಟ ಕಾಡಿನ ನಡುವೆ ಒಬ್ಬರನ್ನೇ ಬಿಟ್ಟು (ಹಿಂದೆ ಹೋಗುವಾಗ ಸೇರಿಸಿಕೊಳ್ಳುವ ಭರವಸೆ ಮೇಲೆ) ಹೋಗಲಾಗದ ಅನಿವಾರ್ಯತೆಯಲ್ಲಿ ಭೂಮಿಗೌಡರೂ ಜೊತೆಗೆ ನಿಂತರು. ಮುಂದೆ ಮೇಷ್ಟ್ರಿಬ್ಬರೂ ‘ಅನುಭವವು ಸವಿಯಲ್ಲ, (ಅನ್ಯರ) ಅನುಭವದ ವ್ಯಾಖ್ಯಾನವೇ ಸವಿಯು’ ಎನ್ನುವುದನ್ನು ಸ್ವಾನುಭವದ ಬಲದಲ್ಲೇ ಪಾಠ ಮಾಡಿರಬೇಕು!

ಜಾಡು ತಪ್ಪಿದ ಗೊಂದಲದಲ್ಲಿ ಸೋರಿಹೋದ ಸಮಯ, ಸಬೀಹಾರಿಂದಾದ ವಿಳಂಬಕ್ಕೆ ತಪ್ಪುಕಾಣಿಕೆ ಕೊಡುವಂತೆ ನಾವು ವೇಗ ವರ್ಧಿಸಲು ಪ್ರಯತ್ನಿಸಿದೆವು. ಮಳೆಗಾಲೇತರ ದಿನಗಳ ನೀರಮೊತ್ತದ ಲೆಕ್ಕ ಹಾಕಿದರೆ ಇದು ಕೊಡಗಿನ ವಲಯದೊಳಗೆ ಹರಿವ ಕುಮಾರಧಾರಾಕ್ಕೆ ಸಮನಿದ್ದಿರಬಹುದು. ಆದರೆ ಇಲ್ಲಿನ ಕಣಿವೆಯ ಇಕ್ಕಟ್ಟಿನಲ್ಲಿ ಪಾತ್ರೆಯ ಹರಹು ಕಡಿಮೆಯಾಗಿ ಜಾಡು ಆಯ್ದುಕೊಳ್ಳುವುದು ಕರಕಷ್ಟವಾಗಿತ್ತು. ಮುಂದುವರಿದಂತೆ ಕಣಿವೆಯ ಇಕ್ಕಟ್ಟು ನಮಗೆಲ್ಲೂ ಸ್ಥಿರ ಜಾಡು ಅನುಸರಿಸದಂತೆ ಕಾಡುತ್ತಲೇ ಇತ್ತು. ನೀರ ತಪಸಿ (ಬಂಡೇಗುಂಡು) ಸ್ಥಿರವೆಂದು ಕಾಲಿಟ್ಟರೆ ಜಾರಿದ್ದು ಮಾಯೆ. ಒಣ ಬಂಡೆ ಸರಣಿ ಸಿಕ್ಕ ಕುಶಿಯಲ್ಲಿ ದಾಪುಗಾಲಿಟ್ಟಾಗ ಮೂರನೆಯದೇ ಮಡುವಿನ ನಡುವೆ ಕೈಕೊಟ್ಟಿತ್ತು. ಅಲ್ಲೇ ಬದಿಯಲ್ಲಿ ಯಾವುದೋ ಪ್ರಾಣಿ ನುಗ್ಗಿದ ಜಾಡು ಕಾಣಿಸಿದಾಗ ಈ ಎಲ್ಲ ರಗಳೆ ಇಲ್ಲದ ದಂಡೆ ಗಟ್ಟಿ ಎಂಬ ಭಾವ. ಜಾಡು ಎಲ್ಲೋ ಮರೆಯಾಗಿ ಅಬೇಧ್ಯ ಹಸಿರಿನಲ್ಲಿ ತೊಳಾಲಾಡುವಾಗ ಮತ್ತೆ ಹೊಳೆಪಾತ್ರೆಯ ಮೇಲೆ ಕಣ್ಣು. ಕಾಲದ ಸಾಲ ಬೇರೆ ತಲೆ ತಿನ್ನುತ್ತಿತ್ತು. ಪ್ರತಿ ಹೆಜ್ಜೆಯ ಅಡ್ಡಿಯೂ ಅದರ ಮೇಲಣ ಬಡ್ಡಿಯಾಗುತ್ತಿದ್ದಂತೆ ಇನ್ನೇನು ಪ್ರಯತ್ನ ಕೈಚೆಲ್ಲಿ ಹಿಂದೆ ಸರಿಯುವುದೇ ಎನ್ನುವ ಹಂತದಲ್ಲಿ, ಕೆಲವೇ ವಾರಗಳ ಹಿಂದೆ ನಾವು ಮೇಲಿನ ವೀಕ್ಷಣಾ ಕಟ್ಟೆಯಿಂದ ಇಳಿದ ಜಾಗ ಗುರುತಿಸಿದೆವು. ಮತ್ತೆ ಕುರುಹುಗಳ ಸರಣಿಯೂ ಹೆಚ್ಚಿತು. ಇದೇ ಬಂಡೆ ಹಾಸಲ್ಲವೇ ತರಗೆಲೆ ಮುಸುಕಿನಲ್ಲಿ ಜಾರಿಸಿ ನನ್ನ ಮೊಣಕಾಲು ತರಚಿದ್ದು. ಅರೆ, ಇಲ್ಲಿ ಬೆಳೆದಿದ್ದ ಕಾಡಬಾಳೆ ಗೊನೆ ಕಪಿ ಪಾಲಾಯ್ತೇ? ಓ ಹಸಿರಿಗೆ ನುಗ್ಗಬೇಡಿ – ತುರುಚಂಗಿ, ಎಂದೆ ನಮ್ಮೊಳಗೆ ಉತ್ಸಾಹದ ಟಿಪ್ಪಣಿಗಳನ್ನು ಹೇಳಿಕೊಳ್ಳುತ್ತಿದ್ದಂತೆ ಮರಗಳೆತ್ತರದ ಕಂಡಿಯಾಚೆಗೆ ಕನಕನಿಗೊಲಿದ ಕೃಷ್ಣನಂತೆ ಬರ್ಕಣ ತಲೆ ತೋರಿಸಿತು. ಅಪರಾಹ್ನ ಒಂದೂವರೆ ಗಂಟೆಯ ಸುಮಾರಿಗೆ ನಮ್ಮ ಪಾಲಿನ ಗಂಗೆ ಅವತರಿಸಿದಳು.

ಊಹಿಸಲಾಗದ ಎತ್ತರದ ಶ್ರೇಣಿಯ ನೆತ್ತಿಯಲ್ಲಿ, ಮರಗಿಡಗಳ ಅಖಂಡ ಗೋಡೆಯಲ್ಲೊಂದು ನೀಲಾಕಾಶ ತೋರುವ ಕಂಡಿ; ಪ್ರಪಾತದಂಚಿನ ಹೊಳೆಪಾತ್ರೆಯೇ ಇರಬೇಕು. ದಿಟ್ಟಿ ಕೆಳಕೆಳಗೆ ಹರಿಸಿದರೂ ನಾವು ನಿಂತ ಜಾಗಕ್ಕೇನೂ ಕಾಣದ ಹಸಿರಿನ ಹೆಣಿಗೆ. ಮತ್ತೂ ಕೆಳಗೆ ಕಡು ಹಸಿರನ್ನೂ ಹರಿದು ಕಾಣುವ ಕರಿಮಿರಿಗುಟ್ಟುವ ಬಂಡೆ; ಜಲಪಾತದ ಕುರುಹಿಟ್ಟರೂ ದರ್ಶನವಿಲ್ಲ. ಅದರದೇ ತಳ ಅಂಚಿನಿಂದ ಎಂಬಂತೆ ಆದರೂ ಬಲು ಎತ್ತರದಲ್ಲಿ ಒಮ್ಮೆಲೆ ನೀರುಕ್ಕುವ ನೋಟ. ಪೂರ್ವ-ದಕ್ಷಿಣ ದಿಕ್ಕುಗಳ ನಡುವೆ ಆಕಾಶಕ್ಕೊಡ್ಡಿದ ಪನ್ನಾಲಿಯಲ್ಲಿ ಶೂನ್ಯವನ್ನೇ ತುಂಬಿ ಜಲಪಾತವಾಗಿಸಿದ ಅಲೌಕಿಕತೆ. ನಾಲ್ಕೆಂಟು ಮೆಟ್ಟಲಿನಂಥ ರಚನೆಗಳಲ್ಲಿ ನೀರು ಹಿಂದೆ ಬಿಟ್ಟ ಸಂಬಂಧಗಳಿಗೆ ವಿದಾಯ ಹೇಳುವಂತೆ, ಕೆಳಗೆ ಕಾದ ನಮಗೆ ‘ಕಾಣಿರೋ ನನ್ನ ಕಾಣಿರೋ’ ಎಂದು ಕೈ ಬೀರಿದಂತೆ ಪುಟಿಯುತ್ತಿತ್ತು. ಅದರ ಚೆಲ್ಲಾಟಕ್ಕೆ ಗಾಳಿ ತಡೆತಡೆದು ಸುಳಿದಿತ್ತು. ನೀರು ಕಲ್ಲಪಾತ್ರೆಯ ಅಂಚಿಗೆ ಬಡಿದು ಬಲ ಹೊರಳಿತ್ತು. ಮೆರವಣಿಗೆಗೆ ನಿತ್ಯ ಸಾಕ್ಷಿಯಾಗಲು ತುದಿಗಾಲು, ಅರೆಗಾಲು ಹಾಕಿದ್ದ ಈ ಅಂಚಿನ ಹಸಿರು ರೋಮಾಂಚನದಲ್ಲಿ ನಲಿದಿತ್ತು. ಮುಂದುವರಿದಲ್ಲಿ ಮುಂಚಾಚಿದ ಕಲ್ಲ ಉಬ್ಬನ್ನು ತೆಳು ಪೊರೆಯಂತೆ ಆವರಿಸಿದ ನೀರು ಕೆಳ ಅಂಚಿಗೆ ಬರುವಾಗ ಎರಡು ಧಾರೆಗಳಾಗಿ ಹುರಿಗೊಂಡಿತ್ತು. ಅಲ್ಲೊಂದು ಓರೆಪಾತ್ರೆಗೆ ಬಿದ್ದು ಸಮಾನಾಂತರದಲ್ಲಿ ಮತ್ತೆ ಎಡ ಅಂಚಿಗೆ ಸರಿಯುತ್ತಿತ್ತು. ಅಲ್ಲಿ ಗಿರಿಕನ್ನೆಗೆ, ನೀಳವೇಣಿಗೆ ಜಡೆ ಹೆಣೆವ ಸಂಭ್ರಮ. ಕಡೆಕುಚ್ಚು ಕಟ್ಟುವಲ್ಲಿ ನಾಲ್ಕೆಂಟು ಕುಡಿಗಳಲ್ಲಿ ಹಂಚಿ ಎಸೆವ ಬಿನ್ನಾಣ. ಮಾತಿನ ರಂಗುಗಳನ್ನು ಉಳಿದು ದಿಟ್ಟಿ ಕೊಡಿಯಿಂದ ಅಡಿಗಿಳಿಯುತ್ತಿದ್ದಂತೆ ನೀರಧಾರೆಗಳ ಎತ್ತರ ಬಿತ್ತರ ಮತ್ತು ಮೊತ್ತ ಹೆಚ್ಚಿ, ಧುಮುಗುಟ್ಟಿ ಝರಿಪಾತ್ರೆ ಕುದಿನೀರ ಪ್ರವಾಹದಂತೆ, ಹಾರಿದ ಹುಡಿಯೆಲ್ಲ ನೇರ ಮೋಡವೇ ಆಗಿ ಶೋಭಿಸುವಂತಿತ್ತು ಬರ್ಕಣ ಅಬ್ಬಿ.

ತೊರೆಗೇ ಬಾಯಿ ಹಚ್ಚಿ ಅಗಸ್ತ್ಯರಾದೆವು, ಅಬ್ಬಿಗೆ ತಲೆಕೊಟ್ಟು (ಸಣ್ಣ ಧಾರೆಗಳನ್ನಾರಿಕೊಳ್ಳುವ ಜಾಣತನದೊಡನೆ) ಗಂಗಾಧರರಾದೆವು! (‘ಜಯಿಸಿದ’ ಅಮಲಿನಲ್ಲಿ ಅಳವಿ ಮೀರಿ ನುಗ್ಗಿದವರ ಬಿಗಿದ ಚಲ್ಲಣಕ್ಕೂ ಬಂದಿತ್ತು ತಲ್ಲಣ!) ಭಾರೀ ಕಲ್ಲ ಹಳಕುಗಳೇ ತಳಗಟ್ಟಿದ್ದರಿಂದ ಇಲ್ಲಿ ಹೇಳಿಕೊಳ್ಳುವಂಥ ಮಡುವಿಲ್ಲ. ಆದರೆ ಜಲಧಾರೆಗಳ ವೈವಿಧ್ಯ ಮತ್ತು ಶೀತಲ ನೀರಮೊತ್ತದಲ್ಲಿ ನಮ್ಮೆಲ್ಲರಿಗೂ ಸೂಕ್ತ ‘ಮಸಾಜ್ ಪಾರ್ಲರ್’ಗಳನ್ನೇ ಬರ್ಕಣ ಉಚಿತವಾಗಿ ಹರಡಿತ್ತು. ಮೂರು ಗಂಟೆಗೂ ಮಿಕ್ಕು ಮೈ ಹುಡಿ ಮಾಡುತ್ತಾ ಹರಿಸಿದ ಬೆವರು, ಸೇರಿಸಿದ ದೂಳು ಕಸ, ಪಡೆದ ಹುಳ ಕಡಿತ, ಗೀರುಗಾಯ, ಕೊನೆಯಲ್ಲಿ ಬಳಲಿಕೆಯನ್ನೂ ಕಿತ್ತೊಗೆಯುವಂತೆ ಒದಗಿತ್ತು ದಿವ್ಯ ಸ್ಪರ್ಷಚಿಕಿತ್ಸೆ. ಪುಟ್ಟ ಮಡುಗಳಲ್ಲಿ ಮುಳುಗೆದ್ದೆವು, ಒಡಲ ಒರಳು ಮಾಡಿ ಕುಟ್ಟಿಸಿಕೊಂಡೆವು, ನೇರ ನಿಲ್ಲಲಾಗದಲ್ಲಿ ಬರಿಯ ಸಿಂಚನಕ್ಕೂ ರೋಮಾಂಚನ ಅನುಭವಿಸಿದೆವು. ಸಮಯದ ಪರಿವೆ ಹರಿಯಲಾಗದ ಸಂಕಟಕ್ಕೆ ಶೀತನಿರ್ಮಲ ಜಲತಾಡನದಿಂದೀಚೆ ಅದೆಷ್ಟು ಬೇಗ ಈಚೆ ಬಂದರೂ ಯಾವ ಸೋಪು ಶಾಂಪೂ ಬಳಸದೆ ಎಲ್ಲರೂ ಸ್ವಚ್ಛ, ಕೆಂಪು ಕೆಂಪು!
[ಅಂದಿನ ಬುತ್ತಿಯೂಟದಲ್ಲಿ ಪಲ್ಯ ಹಳಸಿದ್ದರೂ ಹಿಂಡಿ ಚಟ್ನಿಗೆ ಉಪ್ಪೇ ಪ್ರಧಾನವಾಗಿದ್ದರೂ ಇಡ್ಲಿ ಪೊಟ್ಟಣಕ್ಕೆ ಒಡೆ ಸೇರಿಸಲು ಮಾಣಿ ಮರೆತಿದ್ದರೂ ಒಯ್ದಷ್ಟೂ ತಿನಿಸಿನ ವೈವಿಧ್ಯ ಸಾಲದಾಗಿದ್ದರೂ ದೂರಿದವರಿಲ್ಲ; ನಾಯಿ ಹಸಿದಿತ್ತು. ಒಂದು ತುತ್ತಿಗೆಂಬಂತೆ ಬೇವು, ಮೆಣಸನ್ನೂ ತಿಂದು ಮುಗಿಸಿದ್ದೆವು. ಮರುಪಯಣದ ಸ್ವಾರಸ್ಯಕ್ಕಿನ್ನು ಬರ್ಕಣ ತಳಶೋಧದ ಪ್ರಥಮ ಸಾಹಸಕ್ಕೇ ಒಯ್ಯುತ್ತೇನೆ.]
ವೀಕ್ಷಣಾಕಟ್ಟೆಯಿಂದ ನಾವಿಳಿದದ್ದು ಹೊಳೆಯ ಬಲದಂಡೆಗಾದರೆ ಈಗ ಎಡದಂಡೆಯಲ್ಲಿ ಸ್ವಲ್ಪ ಪ್ರಶಸ್ತ ನೆಲ ಕಾಣಿಸಿದ್ದರಿಂದ ಅದರಲ್ಲಿ ಮುಂದುವರಿದೆವು. ಯಾವುದೇ ರೀತಿಯ ಸವಕಲು ಜಾಡು, ಕೂಪು ದಾರಿಯ ಅವಶೇಷ ಸಿಕ್ಕೀತೆನ್ನುವ ನಮ್ಮ ಆಶಯ ಫಲಿಸಲೇ ಇಲ್ಲ. ನೆಲ ಕುಸಿದು, ಸಣ್ಣಪುಟ್ಟದಾಗಿ ಜಾರಿ ಎದ್ದು ಮತ್ತೆ ಹೊಳೆ ಪಾತ್ರೆಗೆ ಶರಣಾದೆವು. ಕಾಡಿನ ಏಳುಬೀಳುಗಳೆಲ್ಲಾ ನೋಟಕ್ಕೆ ತೀವ್ರವಾಗಿ ಕಾಣಿಸಿದರೂ ಹುಡಿಮಣ್ಣು, ತರಗೆಲೆಗಳ ಮೃದುತಲ್ಪದಲ್ಲಿ (ಜಟ್ಟಿಯುದ್ಧದ ಗೋದಾ ಇದ್ದಂತೆ) ದೈಹಿಕ ಆಘಾತಗಳು ಕಡಿಮೆಯೇ ಇರುತ್ತವೆ. ಆದರೆ ಹೊಳೆಯ ಪಾತ್ರೆಯಲ್ಲಿ ಬಿದ್ದರೆ ಬಂಡೆಯಪ್ಪಳಿಕೆ, ಕಾಲು ಸಿಲುಕಿದರೆ, ತಿರುಚಿದರೆ ಸ್ಪಷ್ಟ ಮತ್ತು ದೈಹಿಕ ನಷ್ಟಗಳು ತೀವ್ರವೇ ಆಗುವ ಅಪಾಯ ಸದಾ ಹೆದರಿಸುತ್ತಿರುತ್ತದೆ. ಹಿಂದಿನದೇ ಎರಡು ಉದಾಹರಣೆಗಳನ್ನು ಇಲ್ಲಿ ಸೂಕ್ಷ್ಮವಾಗಿ ಜ್ಞಾಪಿಸಿಕೊಳ್ಳುತ್ತೇನೆ.

ಚಾರ್ಮಾಡಿಯಿಂದ ಬಲ್ಲಾಳರಾಯನದುರ್ಗಕ್ಕೆ ಲಗ್ಗೆ ಹಾಕುವ ಉತ್ಸಾಹದಲ್ಲಿ ನಡೆದ ನಮ್ಮೊಂದು ತಂಡಕ್ಕೆ ಹಗಲಳಿದರೂ ಯೋಗ್ಯ ಶಿಬಿರಸ್ಥಾನ ದಕ್ಕದೇ ಕಾಡು ನುಗ್ಗಬೇಕಾಯ್ತು. ಮುಂಚೂಣಿಯಲ್ಲಿದ್ದ ದೇವು ಮತ್ತು ಅಭಯ, ಇದ್ದೊಂದು ಮಿಣುಕು ಟಾರ್ಚ್ ನಂಬಲಾಗದೇ ಕುರುಡು ಜೋಡಿಯಂತೆ ಪರಸ್ಪರ ಕೈ ಹಿಡಿದುಕೊಂಡು ಹುಡಿಮಣ್ಣಿನ ಕೊಳ್ಳಕ್ಕೆ ಅಂದಾಜಿನ ಕಾಲಿಳಿಸಿದರು. ತರಗೆಲೆ ರಾಶಿ ಮೊಳಕಾಲು ಹುಗಿದು, ಅಡಿಯ ಹುಡಿಮಣ್ಣು ಪಾದ ಜಾರಿಸಿ, ಇಬ್ಬರನ್ನೂ ಕೊಳ್ಳ ಸೆಳೆಯಿತಂತೆ. ಕನಿಷ್ಠ ಮೂವತ್ತು ನಲ್ವತ್ತಡಿ ಅನಿಯಂತ್ರಿತವಾಗಿ ಜಾರಿ, ಉರುಳಿಯೇ ಕಿರು ಕಣಿವೆಯ ತಳ ತಟ್ಟಿದ್ದರು. ಮೊದಲು, ಜಾರುಬಂಡೆಯಾಟದ ಮೋಜನುಭವಿಸಿದ್ದಕ್ಕೆ ದೊಡ್ಡ ನಗೆಯೋ ನಗೆ! ಮತ್ತೆ ಕಣ್ಣಿಗೆ ಕೈ ಹಾಕಿದರೂ ಕಾಣದಷ್ಟು ಗಾಢಾಂಧಕಾರದಲ್ಲಿ ಟಾರ್ಚ್ ಎಲ್ಲಿ ರಟ್ಟಿತೋ ಬೆನ್ನ ಚೀಲ ಎಲ್ಲಿ ಜಾರಿತೋ ಹಿಂದಿನವರು ಏನು ಗ್ರಹಿಸಿದರೋ ಎಂಬೆಲ್ಲಾ ಸಮಸ್ಯೆಯೂ ಕಾಡಿತ್ತಂತೆ. ತಮಾಷೆ ಎಂದರೆ ಇಬ್ಬರಿಗೂ ಯಾವ ದೈಹಿಕ ಸಂಕಟವೂ ಕಾಡಲಿಲ್ಲ ಎನ್ನುವುದು ನಿಧಾನಕ್ಕೆ ಹೊಳೆಯಿತಂತೆ!

ಇನ್ನೊಮ್ಮೆ, ಕುಮಾರಪರ್ವತದನೇರ ಮೈ ಇಳಿಯುವಾಗ ದೇವರಾಜರು ಬಳಲಿಕೆಗಳ ಮೊತ್ತದೊಡನೆ ಕೇವಲ ಎರಡಡಿ ಆಳದ ಬಂಡೆ ಕೊರಕಲಿನಲ್ಲಿ ಕಾಲಿರಿಕಿಸಿಕೊಂಡು ಕುಸಿದಿದ್ದರು. ಮತ್ತವರನ್ನು ಉಳಿದ ಅನಿಶ್ಚತತೆಯ ಉದ್ದಕ್ಕೂ ಇಬ್ಬಿಬ್ಬರು ಭುಜ ಕೊಟ್ಟು ಹೊರಲೇ ಬೇಕಾದ ಕತೆ ನಿಮಗೆ ಗೊತ್ತೇ ಇದೆ.

ಬರ್ಕಣ ಅಬ್ಬಿ ಬಿಟ್ಟ ನಮಗೆ ಬಲದಂಡೆಯಲ್ಲೊಂದು ಬಹಳ ಹಳೆಯ ಕೂಪುದಾರಿಯ ಅವಶೇಷ ಸಿಕ್ಕಿತು. ಆದರಲ್ಲಿ ಸವಕಲು ಜಾಡಿನ ಕನಿಷ್ಠ ಸೌಕರ್ಯವೂ ಒದಗದಾಗ ಮತ್ತೆ ಸ್ವತಂತ್ರರೇ ಆಗಬೇಕಾಯ್ತು. ಕಣಿವೆ ತೆರೆದುಕೊಂಡಂತೆಲ್ಲಾ ಸಸ್ಯರಾಜಿಯಲ್ಲೂ ಬದಲಾವಣೆಗಳನ್ನು ಕಾಣುತ್ತ ಹೋದೆವು. ವನೋತ್ಪತ್ತಿಗಳ ಸಂಗ್ರಹಕ್ಕೆ ನುಗ್ಗುವ ಹಳ್ಳಿಗರು ಮಾಡಿದ ಸವಕಲು ಜಾಡುಗಳು ಬಲು ಬೇಗನೆ ನಮ್ಮ ಹುಡುಕಾಟವನ್ನು ಕಡಿಮೆ ಮಾಡಿದವು. ಅವು ಅಲ್ಲಲ್ಲಿ ಕವಲು ಒಡೆಯುವುದೂ ಸೇರಿಸಿಕೊಳ್ಳುವುದೂ ನಡೆದೇ ಇತ್ತು. ಆದರೆ ನಾವು ಹೊಳೆಯನ್ನು ಪ್ರಧಾನ ಕಣ್ಣಳವಿಯಲ್ಲೇ ಉಳಿಸಿಕೊಂಡೇ ಮುಂದುವರಿದೆವು. ಒಂದೆಡೆ ಹೊಳೆಯಂಚಿಗೇ ತುಸು ಜವುಗು ನೆಲದ ದೀರ್ಘ ನಡೆಯೇ ಸಿಕ್ಕಿದ್ದು ಸುಂದರ ಹಾಗೂ ಹಿತಕರ ಅನುಭವ. ಆರೆಂಟಡಿ ಎತ್ತರದ ದಟ್ಟ ವಾಟೆ ಗಿಡಗಳು (ಬಿದಿರಿನದೇ ಒಂದು ಪ್ರಬೇಧ) ಆ ಉದ್ದಕ್ಕೂ ದಟ್ಟವಾಗಿಯೇ ಹಬ್ಬಿದ್ದವು. ಅದರ ಸಂಗ್ರಹಕ್ಕಂತೂ ಹಳ್ಳಿಗರು ಬಂದ ಲಕ್ಷಣಗಳು ಧಾರಾಳವಿದ್ದವು. ಅವುಗಳ ನಡುವೆ ಸಹಜವಾಗಿ ಸ್ಪಷ್ಟ ಮಿದುಮಣ್ಣಿನ ಸವಕಲು ಜಾಡು ರೂಪುಗೊಂಡಿತ್ತು. ಅಂಚುಗಟ್ಟಿದ ತೆಳು ಹಸಿರು, ಹಳದಿ ಮಿಶ್ರಿತ ವಾಟೆ ಕೋಲು ಬಾಗಿ, ನೆತ್ತಿಯಲ್ಲಿ ಬೆಂಗದಿರನನ್ನೂ ಮರೆಮಾಡಿದ್ದವು. ಅವುಗಳ ಅರೆಪಾರದರ್ಶಕ ಹಸುರಿನ ಎಲೆಗಳು ತಂಗಾಳಿ ತೀಡಿ, ಒಟ್ಟಾರೆ ನಮಗೆ ನಗರದ ಯಾವುದೇ ಯೋಜಿತ ಬಳ್ಳಿಮಾಡಕ್ಕಿಂತ ಸುಂದರ ನೆನಪಾಗಿ ಇಂದಿಗೂ ಉಳಿದಿದೆ.

ಜಾಡುಗಳು ಬಲಗೊಳ್ಳುತ್ತಾ ಕೂಪುದಾರಿಯಾಗಿ ಹರಿಹರಿದು ಸುಮಾರು ಎರಡೂವರೆ ಗಂಟೆಯ ಅವಿರತ ನಡೆ ಬೆಳಕು ಕಾಣಿಸಿದ್ದು ಮೇಗದ್ದೆಯಲ್ಲಿ! ಕೂಡ್ಲು ತೀರ್ಥ ನೋಡುವ ದಾರಿಯಲ್ಲಿ ತಿಂಗಳೆ ಕವಲಿನನಂತರ ಸುಮಾರು ಐದು ಕಿಮೀ ಅಂತರದಲ್ಲಿ ಸಿಗುವ ಸೀತಾನದಿ ಸೇತುವೆಯಿಂದ ಸುಮಾರು ಒಂದು ಕಿಮೀ ಎಡಕವಲಿನ ಹಳ್ಳಿ ಮೇಗದ್ದೆ. ವಾಸ್ತವವಾಗಿ ಹಿಂದೆ ನಾವು ಬರ್ಕಣ ತಳ ಹುಡುಕುವ ಪ್ರಯತ್ನದಲ್ಲಿ ಮೇಗದ್ದೆಗೂ ಹೋದದಿತ್ತು. ಆದರೆ ಆಗ ನಾವನುಸರಿಸಿದ್ದು ದಕ್ಷಿಣ ಮಗ್ಗುಲಿನ ಮೇಗದ್ದೆ ಹೊಳೆ. ಉತ್ತರ ಮಗ್ಗುಲಿನ ಈ ಕೊಲ್ಲಂಗಾರು ಹಳ್ಳ ನಮ್ಮ ಗಮನಕ್ಕೇ ಬಂದಿರಲಿಲ್ಲ. (ಇದು ಸೇತುವೆ ಕಳೆದು ಕೆಳಪಾತ್ರೆಯಲ್ಲಿ ಸೀತಾನದಿಗೆ ಸಂಗಮಿಸುತ್ತದೆ) ನಮ್ಮ ವಿಚಾರಣೆಗೆ ಸಿಕ್ಕ ಹಳ್ಳಿಗರಾದರೂ ಘಟ್ಟದ ಮೇಲಿನ ಹೆಸರು ‘ಬರ್ಕಣ’ಕ್ಕೆ ಅಜ್ಞಾನಿಗಳೇ ಇದ್ದದ್ದು ತಪ್ಪಲ್ಲ. ಮೇಗದ್ದೆ ಗುರುತು ಸಿಕ್ಕಿದ್ದೇ ನಮ್ಮ ದಿಕ್ಕು ದೆಸೆಯೇನೋ ಸ್ಪಷ್ಟವಾಯ್ತು. ಆದರೆ ಹೊರ ಬರುವ ವ್ಯವಸ್ಥೆ ಮಾತ್ರ ಇನ್ನೂ ದೀರ್ಘದ್ದು ಎನ್ನುವುದೂ ಸ್ಫುಟವಾಯ್ತು. ಸೀತಾ ನದಿಗೆ ಒಂದು, ತಿಂಗಳೆ ಕವಲಿಗೆ ಐದು, ಮುಖ್ಯ ರಸ್ತೆಗೆ ಆರು ಕೊನೆಯಲ್ಲಿ ತಣ್ಣೀರಬೈಲು ಕವಲಿನಲ್ಲಿ ನಿಂತಿರಬಹುದಾದ ಮೆಟಡೋರಿಗೆ ಒಂದು ಕಿಮೀ ಸೇರಿಸಿದರೆ ಕನಿಷ್ಠ ಹದಿಮೂರು ಕಿಮೀ ನಡೆಯುವುದು ಬಿಟ್ಟು ಬೇರೇನೂ ಪರಿಹಾರ ಕಾಣಿಸಲಿಲ್ಲ. ಕಾಡಿನಲ್ಲಿ ಕತ್ತಲಾಗುವುದು ಬೇಗ. ಹೆಚ್ಚು ಯೋಚನೆ, ವಿಶ್ರಾಂತಿ ಎಂದು ತಡಮಾಡದೇ ತಂಡ ‘ಚಲ್ರೇ ನೌಜವಾನ್’ ಮಂತ್ರ ಪಠಿಸುವುದಷ್ಟೇ ಉಳಿಯಿತು. (ಘೋಷಣೆಯ ಸತ್ತ್ವ ಆಚರಣೆಯಲ್ಲಿರಬೇಕಾಗಿಲ್ಲ!) ಬೆಳಿಗ್ಗೆ ಮೆಟಡೋರ್ ಚಾಲಕನಿಗೆ ಸಂಜೆ ಇಂಥಲ್ಲಿ ಸಿಕ್ಕೋಣ ಎಂದು ಬೀಳ್ಕೊಡುವಾಗ ಆತ ವೃತ್ತಿ ಸಹಜವಾಗಿ ಕೇಳಿದ್ದ, “ಅಲ್ಲಿಗೇ ಡೆಡ್ ಬಾಡಿ ಹಿಡ್ಕೊಂಡು ಬರ್ತೀರಾ?” ಆಗ ನಾವೆಲ್ಲಾ ಬಲುದೊಡ್ಡ ಹಾಸ್ಯ ಕೇಳಿದಂತೆ ಭಾರೀ ನಗೆ ಮಾಡಿದ್ದೆವು. “ನಾವು ಯಾವ ಕೊಳ್ಳಾ ಹಾರಿದವನ ಶವ ಹುಡುಕಿ ಬಂದವರಲ್ಲಪ್ಪಾ” ಅಂತ ಅಂಬ್ಯುಲೆನ್ಸ್ ಚಾಲಕನಿಗೆ ಸ್ಪಷ್ಟಪಡಿಸಿದ್ದೆವು. ಮತ್ತೆ ಹೆಮ್ಮೆಯಲ್ಲಿ ನಮ್ಮ ಸಾಹಸ ಯೋಜನೆಯನ್ನೂ ಸಣ್ಣದಾಗಿ ವಿವರಿಸಿದ್ದೆವು. ಆದರೀಗ? ಪ್ರತಿಯೊಬ್ಬರೂ ಅವರವರ ಡೆಡ್ (ಟಯರ್ಡ್) ಬಾಡಿ ಹೊತ್ತು ನಡೆಯುವ ಸ್ಥಿತಿ!

ನೆನಪಿರಲಿ, ಸುಮಾರು ಎರಡು ದಶಕಗಳ ಹಿಂದಿನ ಮಾತಿದು. ಸಾರ್ವಜನಿಕದಲ್ಲಿ ಚರವಾಣಿಯ ಕಲ್ಪನೆಯೂ ಇರದ, ತಿಂಗಳೆ ಮೂಲೆಗೆ ದೂರವಾಣಿ ಬಿಟ್ಟು ವಿದ್ಯುತ್ ಪೂರೈಕೆಯೂ ಇಲ್ಲದ ಕಾಲವದು. ಹಗಲಲ್ಲಿ ಹೆಬ್ರಿ ಸೋಮೇಶ್ವರ ದಾರಿಯಲ್ಲಿ ಸಂಚರಿಸುವ ಬಸ್ಸಿಗಾದರೂ ಆರೋ ಎಂಟೋ ಕಿಮೀ ನಡೆದೇ ಸೇರಬೇಕಾದ ಕುಗ್ರಾಮದಲ್ಲಿ ನಾವು ಸಂಜೆಗತ್ತಲು ಆವರಿಸುವ ವೇಳೆ ಒಂದು ಖಾಸಗಿ ವಾಹನವನ್ನು ನಿರೀಕ್ಷಿಸುವುದೂ ವಿಪರೀತವೇ ಎನ್ನುವ ಸ್ಥಿತಿ. ತರ್ಕ, ಒಳದಾರಿಗಳನ್ನು ಯೋಚಿಸುವುದು ಬಿಟ್ಟು ಕಾಲೆಳೆಯತೊಡಗಿದೆವು. ಹೊಳೆ ಸಾಂಗತ್ಯ ಉದ್ದಕ್ಕೂ ಇದ್ದುದರಿಂದ ನಮ್ಮಲ್ಲಿ ನೀರಿಗೇನೂ ಕೊರತೆಯಿರಲಿಲ್ಲ. ಮತ್ತೆ ಬೆಲ್ಲ, ಪೆಪ್ಪರ್ಮಿಂಟಿನಂತ ಸಣ್ಣಪುಟ್ಟ ಬಾಯಿ ಚಪ್ಪರಿಕೆಯಲ್ಲಷ್ಟೇ ಸಮಾಧಾನ ಕಂಡುಕೊಳ್ಳುತ್ತಾ ಎಲ್ಲ ವಿವಿಧ ವೇಗಗಳಲ್ಲಿ ದಾರಿ ಸವೆಸಿದೆವು. ಹೊಳೆ ಪಾತ್ರೆಯಲ್ಲಿ ಬಂಡೆ ಬಂಡೆ ಹಾರಿದವರಿಗೆ ಇಲ್ಲಿ ದಾರಿಯಲ್ಲಿ ಕಿತ್ತ ಜಲ್ಲಿಯೂ ಒದೆಯುತ್ತಿತ್ತು. ಸಣ್ಣ ಪುಟ್ಟ ಏರಿನಲ್ಲೂ ನಾವು ನೂಕುಬಲಹೀನರು. ಅಲ್ಪಸ್ವಲ್ಪ ಇಳಿಜಾರಿಗೂ ಬಿರಿಬಿಗಿಯಲಾಗದ ನಿತ್ರಾಣಿಗಳು. ಹಗಲು ಘಟ್ಟ ಇಳಿಯುವಲ್ಲಿ ಮತ್ತೆ ಜಾಡರುಸುವಲ್ಲಿ ಪಾದಗಳು ವಿಶೇಷವಾಗಿ ಹದಗೆಟ್ಟಿದ್ದವು. ಈಗ ಅಡಿಯಲ್ಲಿ ನೀರಗುಳ್ಳೆಗಳ ಸಾಲು, ಕಣಕಾಲಿನಲ್ಲಿ ಮರಳು ಕಸ ಉಜ್ಜಿದ ಹಸಿಗಾಯ, ಉಗುರೋ ಸುಲಿದಿಟ್ಟಂತೆ ಉಗ್ರ ಉರಿ. ಆದರೂ ಇಟ್ಟ ಪ್ರತಿ ಹೆಜ್ಜೆಯಲ್ಲೂ ಮೆಟಡೋರಿನತ್ತ ಗಳಿಸಿದ ಸಾಮೀಪ್ಯವನ್ನು ಎಣಿಸುತ್ತಾ ನಡೆದೆವು. ಹಿಂದೆ ಬಿದ್ದವರು ಇತರರನ್ನು ಉದಾರವಾಗಿ ಮುಂದೆ ಬಿಟ್ಟಂತೆ ಸ್ವಲ್ಪ ಕೂರುತ್ತಾ ಮುಂದುವರಿದವರು ಇತರರ ಮೇಲೆ ಕನಿಕರ ಮೂಡಿ ಕಾಯುವವರಂತೆ ಸ್ವಲ್ಪ ಕೂರುತ್ತಾ ಎಲ್ಲ ಪರಸ್ಪರ ದೃಷ್ಟಿಯಳವಿನಲ್ಲೇ ಮುಂದುವರಿದಿದ್ದೆವು.

ತಿಂಗಳೇ ಕವಲು ಬರುವಾಗ ಸೂರ್ಯಾಸ್ತವಾಗಿತ್ತು. ಒಂದಿಬ್ಬರು ಬವಳಿ ಬಂದು ಕುಸಿದು, ಲಂಬಿತ ವಿಶ್ರಾಂತಿಯಲ್ಲಿ ನಿರೀಕ್ಷೆಗೂ ಮೀರಿ ತಡವಾಗಿದ್ದೆವು. ಅಲ್ಲಿ ಗೂಡಂಗಡಿಯೊಂದರಲ್ಲಿ ಲಭ್ಯವಿದ್ದ ಒಂದಷ್ಟು ಒಣ ಅವಲಕ್ಕಿ, ನೀರುಳ್ಳಿ, ಉಪ್ಪು ಹಾಕಿ ನೀರು ಹನಿಸಿಕೊಂಡು ಬಿಗಿಯಾಗಿ ಕಲಸಿದ ತಿನಿಸಂತೂ ಎಲ್ಲರಿಗೂ ಅಮೃತಸದೃಶವೇ ಆಯ್ತು. ಆದರೂ ಕೆಲವರಿಗೆ ಮುಂದಿನ ಏಳು ಕಿಮೀ ಅಂದು ನಡೆದು ಮುಗಿಸುವುದು ಅಸಾಧ್ಯವೆಂದೇ ಕಾಣಿಸಿತ್ತು. ಹಾಗಾಗಿ ಯೋಜನೆಯನ್ನು ತುಸು ಬದಲಿಸಿ, ಇಬ್ಬರು ಸಮರ್ಥರನ್ನಷ್ಟೇ ಮುಂದೆ ಬಿಟ್ಟು ಉಳಿದವರೆಲ್ಲ ಅಲ್ಲೇ ವಿಶ್ರಮಿಸಿದರು. ಮುಂದುವರಿದವರ ಅದೃಷ್ಟವೂ ಚೆನ್ನಾಗಿತ್ತು. ಆಕಸ್ಮಿಕವಾಗಿ ಬಂದ ಸೈಕಲಿಗನೊಬ್ಬ ನಮ್ಮೆಲ್ಲರ ಸಂಕಟವನ್ನು ಕಂಡು ಉದಾರವಾಗಿ ಸೈಕಲ್ ಕೊಟ್ಟ. ಮತ್ತೊಂದು ಅರ್ಧ ಗಂಟೆಯಲ್ಲಿ ಕಥೆ ಸುಖಾಂತವಾಯ್ತು. ಜೊತೆಗೆ ಸಾಧನೆಯ ಪಟ್ಟಿಗಷ್ಟೇ ದಕ್ಕಿದ ಬರ್ಕಣ ಅಬ್ಬಿಯ ಬುಡವನ್ನು ಇನ್ನೊಮ್ಮೆ ವಿರಾಮದಲ್ಲಿ ನೋಡಲೇಬೇಕೆಂಬ ಛಲವೂ ಬಲಿದಿತ್ತು!