ಅಧ್ಯಾಯ ಇಪ್ಪತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ಮೂರನೇ ಕಂತು

ಸ್ಟೀಯರ್ಫೋರ್ತನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಲೇ ಇದ್ದ ಅವನ ಕೆಲಸದವನೊಬ್ಬನು ಈಗಲೂ ಅವನ ಮನೆಯಲ್ಲಿ ಸೇವಕನಾಗಿದ್ದನು. ಅವನು ಕೆಲಸದವನು – ಸೇವಕನು – ಎಂದಂದುಬಿಡಬಹುದಾದವನಂತೆ ಎಂದೂ ಇರುತ್ತಿರಲಿಲ್ಲ. ಗೌರವಕ್ಕೆ ಅರ್ಹತೆಯುಳ್ಳವರು ಯಾರಾದರೂ ಇರುವುದಾದರೆ ಹಾಗೆ ಇರುವವನೇ ಅವನು, ಎಂಬಷ್ಟರ ಮಟ್ಟಿಗೆ ಅವನು ಗೌರವಯೋಗ್ಯ ಮೂರ್ತಿಯಾಗಿದ್ದನು. ಒಂದು ವೇಳೆ, ಈ ಮಾತುಗಳು ಉತ್ಪ್ರೇಕ್ಷೆಯವು ಎಂದು ಯಾರಾದರೂ ಆಕ್ಷೇಪಿಸುವುದಿದ್ದರೆ, ಅವನ್ನೇ ಸ್ವಲ್ಪ ಬದಲು ಮಾಡಿ, ಅವನ ವೃತ್ತಿಯಲ್ಲಿ ಇರುವವರಲ್ಲೆಲ್ಲ, ಅತ್ಯಂತ ಗೌರವಾನ್ವಿತನಾಗಿರಲು ಬೇಕಾದ ದೇಹ, ಮುಖವರ್ಚಸ್ಸು, ನಡೆನುಡಿ, ಅವನ ವೃತ್ತಿಯ ತಜ್ಞತೆ, ಲೋಕಾನುಭವ, ಮೊದಲಾದ್ದೆಲ್ಲ ಅವನಿಗೆ ಇತ್ತು ಎಂದಾದರೂ ಹೇಳಲೇಬೇಕಾದಂತೆ ಅವನಿದ್ದನು. ಅವನ ಮುಖ ಗಾಂಭೀರ್ಯವಾಗಿತ್ತು ಅವನ ಸ್ವರವೂ ಗಂಭೀರತರದ್ದಾಗಿತ್ತು. ತನಗಿಂತ ಮೇಲ್ತರಗತಿಯವರನ್ನು ಕಂಡುಕೊಂಡು ಅವರೊಡನೆ ವಿನಯದಿಂದ ವರ್ತಿಸಿ ತನಗಿಂತ ಕೀಳ್ತರಗತಿಯವರಲ್ಲೆಲ್ಲ ಬಹು ಘನಸ್ತಿಕೆಯಿಂದ ಮೆರೆದು, ಒಂದೆಡೆ ಆಳಾಗಿ – ಇನ್ನೊಂದೆಡೆ ಯಜಮಾನನಾಗಿ – ಇರುವ ಅನುಭವಸಂಪನ್ನನೇ ಈ ಆಳು. ತನ್ನ ಸಂಪರ್ಕಕ್ಕೆ ಬಂದ ಜನ, ಸನ್ನಿವೇಶ, ಸಂದರ್ಭಗಳನ್ನು ಸೂಕ್ಷ್ಮವಾಗಿ, ವಿಚಾರಿಸಿ ನೋಡಿ, ಮನಸ್ಸಿನಲ್ಲಿ ಕಾದಿಟ್ಟು, ಯಜಮಾನನಿಗೆ ಬೇಕಾದಾಗ, ಬೇಕಾದಷ್ಟು ಮಾತ್ರ ಒದಗಿಸಬಲ್ಲ ಕಾರ್ಯಚತುರನಿವನು.

ಅವನ ಪ್ರಾಯ ತಿಳಿದವರಿಲ್ಲ – ವಿಚಾರಿಸಲು ಯಾರಿಗೂ ಧೈರ್ಯವಿದ್ದಿರಲಾರದು. ಅವನ ಹೆಸರನ್ನೂ ಪೂರ್ತಿಯಾಗಿ ಅರಿತವರಿಲ್ಲ. ಅದಕ್ಕೆ ಮುಂದಾಗುವ ಎದೆಗಾರಿಕೆಯವರೂ ಇದ್ದಿರಲಾರರು. ನನ್ನ ಅಂದಾಜಿನಲ್ಲಿ ಅವನ ಪ್ರಾಯ ನಲವತ್ತೂ ಆಗಿರಬಹುದು –ಅರವತ್ತೂ ಆಗಿರಬಹುದು. ಎಲ್ಲರೂ ತಿಳಿದಿರುವ ಪ್ರಕಾರದ ಅವನ ಹೆಸರು ಲಿಟ್ಮರ್ ಎಂದಾಗಿತ್ತು.

ನಮ್ಮನ್ನು ನೋಡುವಾಗಲೆಲ್ಲ ಅವನು, ಸ್ವಲ್ಪ ಬಗ್ಗಿಯೇ ನಿಲ್ಲುತ್ತಿದ್ದನು. ನಮ್ಮನ್ನೆಂದೂ ಅವನು ದೃಷ್ಟಿಸಿ ನೋಡುತ್ತಿರಲಿಲ್ಲ. ನಮ್ಮೊಡನೆ ಮಾತಾಡುವಾಗಲೆಲ್ಲ `ಸರ್’, `ಸ್ವಾಮೀ’, `ತಾವು’ ಎಂದು ವಿನಯದಿಂದ, ಮೃದುವಾಗಿ, ವಿಶೇಷವೆಂದು ತೋರ್ಪಡದಂತೆ ಪ್ರಯೋಗಿಸಿ ನಾವು ಬಯಸಿದಾಗ ಮಾತ್ರ ಎದುರಿಸುತ್ತಾ, ಯಾರೂ ಇರಬಾರದೆಂದು ನಾವು ಗ್ರಹಿಸುವ ಮೊದಲೇ ಕಾಣದೇ ಆಗುತ್ತಾ ಎಂದೂ ಕಾಲು ಸಪ್ಪಳವನ್ನಾಗಲೀ ಇತರ ಶಬ್ದಗಳನ್ನಾಗಲೀ ಮಾಡದೇ ಎಂದೂ ಯಾವ ತಪ್ಪನ್ನು ಮಾಡದ ಆಳು ಅಂದರೆ ಈ ಲಿಟ್ಮರನಾಗಿದ್ದನು. ನನ್ನಂಥ ಚಿಕ್ಕವರಿಗೆ ಅಷ್ಟೊಂದು ಲೋಕಾನುಭವವಿದ್ದವನ ಎದುರು ಕುಳಿತಿರುವುದೆಂದರೇ ಹೆದರಿಕೆಯ ಪ್ರಸಂಗವೆಂದು ತೋರುತ್ತಿತ್ತು.

ಇಂಥ ಶಕ್ತಿವಂತ, ಗಾಂಭೀರ್ಯಯುತ, ಸೇವಕನನ್ನು ಆಳಾಗಿ ನಡೆಸಿ ಬರುತ್ತಿದ್ದ ಸ್ಟೀಯರ್ಫೋತನ ಶಕ್ತಿ ಇನ್ನೆಷ್ಟಿರಬೇಕೆಂದು ನಾನು ಆಶ್ಚರ್ಯಪಡುತ್ತಿದ್ದೆ. ನಾನು ಸ್ಟೀಯರ್ಫೋರ್ತನ ಮನೆಯಲ್ಲಿ ಇದ್ದ ಒಂದೆರಡು ದಿನಗಳಲ್ಲಿ ಈ ಲಿಟ್ಮರನ ಪರಿಚಯ ನನಗೆ ಸಾಕಷ್ಟು ಆಗಿತ್ತು. ಆ ಮನೆಯಲ್ಲಿ ನಾನು ಬಹು ಸುಖವಾಗಿಯೂ ಸಂತೋಷವಾಗಿಯೂ ಆ ಒಂದೆರಡು ದಿನಗಳನ್ನು ಕಳೆದೆನು. ಆದರೂ ಲಿಟ್ಮರನು ನನ್ನೆದುರು ಇದ್ದಾಗ ನನಗೆ ಆಗುತ್ತಿದ್ದ ಕಷ್ಟವೊಂದಿಲ್ಲದಿರುತ್ತಿದ್ದರೆ, ನನ್ನ ಸಂತೋಷವು ಇನ್ನಷ್ಟು ಹೆಚ್ಚೇ ಆಗಿರುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.

ನಾನೂ ಸ್ಟೀಯರ್ಫೋರ್ತನೂ ಜತೆಯಾಗಿಯೇ ಯಾರ್ಮತ್ತಿಗೆ ಹೋಗುವುದೆಂದೂ ಯಾರ್ಮತ್ತಿಗೆ ತಲುಪಿದನಂತರ ನಾವು ನಮಗೆ ಕುಷಿ ಕಂಡಂತೆ ಬೇರೆ ಬೇರೆಯಾಗಿ ಹೋಗಿ, ಕೊನೆಗೆ ಮಿ. ಪೆಗಟಿಯ ಮನೆಗೆ ಜತೆಯಾಗಿಯೇ ಹೋಗುವುದೆಂದು ನಿಶ್ಚಯಿಸಿಕೊಂಡೆವು. ಇಷ್ಟೆಲ್ಲಾ ನಿಶ್ಚೈಸಿಕೊಂಡು ನಾವು ಟಪಾಲು ಬಂಡಿಯನ್ನೇರಿ ಯಾರ್ಮತ್ತಿಗೆ ಪ್ರಯಾಣ ಬೆಳೆಸಿದೆವು.

ಯಾರ್ಮತ್ತಿಗೆ ತಲುಪಿದನಂತರ ನಾನು ಓಮರರ ಮನೆಗೆ ಹೋದೆನು. ಮಿ. ಓಮರರು, ಅವರ ಖಾಸಶ್ವಾಸದ ಖಾಯಿಲವನ್ನು ತನ್ನ ಜೀವನದ ಒಂದು ಅಂಶವೆಂದೇ ಅಂಗೀಕರಿಸಿಕೊಂಡು, ಮೊದಲಿನಂತೆಯೇ ತನ್ನ ಜೀವನದಲ್ಲಿನ ಸಂತೃಪ್ತಿ ಸಂತೋಷಗಳಿಂದ ಆನಂದದಲ್ಲೇ ಇದ್ದರು. ಅವರ ಅಂಗಡಿಯ ಬೋರ್ಡು ಈಗ `ಓಮರ್ ಮತ್ತು ಜೋರಾಂ’ ಎಂಬ ಹೆಸರಿನಿಂದಿತ್ತು. ಓಮರರು ನನ್ನನ್ನು ಕಂಡಕೂಡಲೇ ಗುರುತಿಸಲಾರದೆ, “ಓಮರರಿದ್ದಾರೆಯೇ?” ಎಂದು ನಾನು ವಿಚಾರಿಸಿದ್ದಕ್ಕೆ –

“ಇದ್ದೇನೆ ಸರ್, ನನ್ನಿಂದೇನಾಗಬೇಕು, ದಯಮಾಡಿ ತಿಳಿಸಿ” ಅಂದರು. ನಾನು ಹಸ್ತಲಾಘವವನ್ನಿತ್ತಾಗ ಸ್ವಲ್ಪ ಅನುಮಾನದಿಂದಲೇ ತಮ್ಮ ಕೈ ನೀಡಿದರು. ಆಗ ನಾನು – “ಜ್ಞಾಪಿಸಿಕೊಳ್ಳಿರಿ, ಮಿ. ಓಮರ್, ಆ ದಿನ ನಾನು, ಒಂದು ಶವ ದಫನ್ ಸಂಬಂಧ ಬಂದಿದ್ದೆ. ನಿಮ್ಮ ಮಗಳು, ಮಿ. ಜೋರಾಂ, ನೀವೂ ನಾನೂ ಬ್ಲಂಡರ್ಸ್ಟನ್ನಿಗೆ ಹೋದೆವು” ಎಂದನ್ನುವಾಗಲೇ “ ಆ ದಿನದ ಮುಖ್ಯ ಪಾತ್ರಿ – ಒಬ್ಬ ಸ್ತ್ರೀ ಅಲ್ಲವೇ?” ಅಂದರು. “ನನ್ನ ತಾಯಿ” ಎಂದು ನಾನಂದೆ. “ಜತೆಯಲ್ಲೊಂದು ಚಿಕ್ಕ ಮಗುವೂ ಇತ್ತು” ಎಂದನ್ನುತ್ತಾ ನನ್ನನ್ನು ನೋಡಿ ಬಹು ಆಶ್ಚರ್ಯಪಟ್ಟುಕೊಂಡು, “ಓ ದೇವರೇ ನೀವೆಷ್ಟು ದೊಡ್ಡವರಾಗಿರುತ್ತೀರಪ್ಪಾ” ಎಂದಂದು ನನ್ನನ್ನು ಒಳಗೆ ಕರೆದು ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಅನಂತರ ನಾವು ಅನೇಕ ವಿಷಯಗಳನ್ನು ಮಾತಾಡಿದೆವು.

ಮೊದಲು ಅವರ ಕೆಲಸಗಾರನಾಗಿದ್ದ ಜೋರಾಂನು ಓಮರರ ಮಗಳು ಮಿನ್ನಿಯನ್ನು ಮದುವೆಯಾಗಿ, ಓಮರರ ಪಾಲುಗಾರನಾಗಿ ಆ ಅಂಗಡಿಯನ್ನು ಇಬ್ಬರು ನಡೆಸುತ್ತಿದ್ದರು. ಎಮಿಲಿಯೂ ಅಲ್ಲಿದ್ದಳು. ಅವಳು ನನ್ನನ್ನು ಕಂಡು ಮುಗುಳ್ನಗೆ ನಕ್ಕು ಅಡಗಿಕೊಂಡಳು. ಆಗಲೇ ಎಮಿಲಿಯ ಪ್ರಸ್ತಾಪವೂ ಬಂತು. ಎಮಿಲಿಯು ತನ್ನ ಕುಟುಂಬದ ವೃತ್ತಿಯನ್ನು ಬಿಟ್ಟು ಹೊಲಿಗೆ ಕೆಲಸವನ್ನು ಕಲಿಯುತ್ತಿದ್ದಳಂತೆ. ಈ ವಿಷಯವನ್ನು ತಿಳಿಸುವಾಗ ಮಿನ್ನಿಯೂ ಜತೆ ಕೂಡಿದಳು. ಎಮಿಲಿಗೆ ತನ್ನ ಕುಟುಂಬದ ವೃತ್ತಿಯ ಮೇಲಿನ ಪ್ರೀತಿಗಿಂತ ಹೆಚ್ಚಾದ ಪ್ರೀತಿ ಮೇಲ್ತರಗತಿ ಸಂಸಾರಗಳ – ಶ್ರೀಮಂತರ – ವೃತ್ತಿಗಳ ಮೇಲೆ ಇತ್ತೆಂದು ಮಿನ್ನಿ ತಿಳಿಸಿದಳು. ಹೊಲಿಗೆ ಕೆಲಸವು ಶ್ರೀಮಂತರ ಸಂಸರ್ಗಕ್ಕೆ ಹೆಚ್ಚು ಅನುಕೂಲವೆಂದೂ – ತಮ್ಮ ಕುಟುಂಬದ ವೃತ್ತಿಗಿಂತ ಮೇಲಾದದ್ದೆಂದೂ ಎಮಿಲಿ ಭಾವಿಸಿಯೇ ಆ ವೃತ್ತಿಯಲ್ಲಿ ತರಬೇತು ಹೊಂದುತ್ತಿದ್ದುದಂತೆ. ಎಮಿಲಿ ತಮ್ಮ ಆನುವಂಶಿಕವಾದ ವೃತ್ತಿಯನ್ನು ಬಿಟ್ಟು ಈ ರೀತಿ ಇರುವುದನ್ನು ಕುರಿತು ಮಿ. ಪೆಗಟೀ, ಹೇಮ್ ಮೊದಲಾದವರು ಬೇಸರಪಡುತ್ತಿದ್ದರೆಂದೂ ತಿಳಿದೆನು.

ಅನಂತರ ನಾನು ಬಾರ್ಕಿಸನ ಮನೆಗೆ ಹೋದೆನು. ಬಾರ್ಕಿಸನು ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದನು. ಪೆಗಟಿ-ಬಾರ್ಕಿಸರ ಸಂಸಾರ ಸುಖಕರವಾಗಿಯೇ ನಡೆದಿತ್ತೆಂದೂ ಈಗಲೂ ನಡೆಯುತ್ತಿದೆಯೆಂದೂ ಪೆಗಟಿ ತಿಳಿಸಿದಳು. ಬಾರ್ಕಿಸನ ಕೊರೆತೆಯೆಂದ ಪಕ್ಷಕ್ಕೆ ಅವನ ಜಿಪುಣತ್ವ ಮಾತ್ರವಾಗಿತ್ತಂತೆ. ಅದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಸಂಗತಿಯನ್ನೇ ಪೆಗಟಿ – ತಮಾಶೆಗಾಗಿ – ತಿಳಿಸಿದಳು. ಬಾರ್ಕಿಸನು ಮಲಗಿದ್ದ ಹಾಸಿಗೆಯ ಅಡಿಯಲ್ಲಿ, ತಲೆ ಕಡೆಯಲ್ಲಿ ಒಂದು ಪೆಟ್ಟಿಗೆ ಇತ್ತು. ಅವನ ಒಂದು ಕೈಯ್ಯನ್ನು ಅವನು ಸದಾ ಅತ್ತ ಕಡೆ ಇಟ್ಟುಕೊಂಡಿರುತ್ತಿದ್ದನು. ಅಷ್ಟೂ ಅಲ್ಲದೆ ಅವನ ಕೋಣೆಗೆ ಯಾರಾದರೂ ಬಂದು ಹೋದ ಕೂಡಲೇ ಒಂದು ಚಿಕ್ಕ ಗೂಟದಿಂದ ಪೆಟ್ಟಿಗೆ ಕಡೆಗೆ ನೂಕಿ ನೂಕಿ ಅದು ಅಲ್ಲೇ ಉಂಟೋ ಎಂದೂ ಪರೀಕ್ಷಿಸಿಕೊಳ್ಳುತ್ತಿದ್ದನಂತೆ. ಮತ್ತೆ, ಈ ಗೂಟವನ್ನು ಲಾಡಿಯಿಂದ ಕಟ್ಟಿ, ತನ್ನ ಹಾಸಿಗೆಗೆ ಲಾಡಿಯ ಒಂದು ತುದಿಯನ್ನು ಹೊಲೆದಿದ್ದನಂತೆ. ಈ ವಿಧದ ಜಿಪುಣತ್ವವೇನಿದರೂ ಆ ದಂಪತಿಗಳ ಸಂಸಾರ ಸುಖವಾಗಿ ಸಾಗುತಿತ್ತು ಎಂದು ತಿಳಿದೆನು. ಪೆಗಟಿ ಅವಳ ಮನೆಯಲ್ಲಿ ಈಗಲೂ ನನ್ನ ಬಾಲ್ಯದ ಕೆಲವು ವಸ್ತುಗಳನ್ನೂ ನನ್ನ ಮೊಸಳೆ ಪುಸ್ತಕ, ಮತ್ತೆ ಕೆಲವು ಚಿತ್ರಗಳನ್ನೂ ಬಹು ಎಚ್ಚರಿಕೆಯಿಂದ ಕಾಪಾಡಿಟ್ಟುಕೊಂಡಿದ್ದುದನ್ನು ತೋರಿಸಿದಳು. ಪೆಗಟಿಯ ಮನೆಯಲ್ಲಿ ಹೀಗೆ ಸ್ವಲ್ಪ ಹೊತ್ತು ಇದ್ದು, ಅವಳು ಕೊಟ್ಟ ಹಣ್ಣು ಹಂಪಲುಗಳನ್ನು ತಿಂದು, ಮಿ. ಪೆಗಟಿಯ ಮನೆ ಕಡೆಗೆ ಹೊರಟೆನು. ದಾರಿಯಲ್ಲೇ – ನಾವು ಮೊದಲೇ ಏರ್ಪಡಿಸಿಕೊಂಡಿದ್ದಂತೆ – ಸ್ಟೀಯರ್ಫೋರ್ತನೂ ನನ್ನ ಜತೆ ಸೇರಿದನು.

ನಾವು ಮಿ. ಪೆಗಟಿಯ ಮನೆಗೆ ಸಮೀಪಿಸುತ್ತಿದ್ದ ಹಾಗೆ ಆ ಮನೆಯೊಳಗಿನ ಮಾತುಗಳೂ ನಗಾಡುವ ಶಬ್ದವೂ ಕೇಳಿಸತೊಡಗಿತು. ನಾವು ಅಲ್ಲಿಗೆ ಹಠಾತ್ತಾಗಿ ಪ್ರವೇಶಿಸಿ ಅವರನ್ನು ಭೇಟಿ ಮಾಡಬೇಕೆಂದಿದ್ದುದರಿಂದ, ಮಾತಾಡದೆ, ಬಾಗಿಲು ತೆಗೆದು, ಒಳಗೆ ಪ್ರವೇಶಿಸಿದೆವು.

ನಾವು ನುಗ್ಗುವಾಗ ಮೊದಲು ಕಂಡದ್ದು ಮಿಸೆಸ್ ಗಮ್ಮಿಜ್ಜಳ ಹರ್ಷೋದ್ಗಾರ – ಅವಳು ಕೈ ಚಪ್ಪಾಳೆ ತಟ್ಟಿ ನಗಾಡುತ್ತಿದ್ದಳು. ಮಿಸೆಸ್ ಗಮ್ಮಿಜ್ಜಳೇ ಈ ಪರಿಸ್ಥಿತಿಗೆ ಬಂದಿರುವಾಗ ಅಲ್ಲಿನ ಸಂತೋಷದ ಸಂದರ್ಭಗಳು ಹೇಗಿರಬಹುದೆಂದು ನನಗೆ ಆಶ್ಚರ್ಯವಾಯಿತು. ಮಿ. ಪೆಗಟಿ ಮುಖದಲ್ಲಿ ಸಂತೋಷ ಸಂತೃಪ್ತಿಗಳು ತುಂಬಿ ತುಳುಕುತ್ತಿದ್ದು, ತನ್ನ ಎರಡು ಕೈಗಳನ್ನು ಅಗಲಿಸಿ ಹಿಡಿದುಕೊಂಡು, ತನ್ನೆದುರು ನಿಂತಿದ್ದ ಎಮಿಲಿಯನ್ನು ಅಪ್ಪಿಕೊಳ್ಳಲು ಸಿದ್ಧನಾಗಿದ್ದನು. ಹೇಮನು ರೂಪ ಲಾವಣ್ಯಗಳನ್ನು ಮೆಚ್ಚಿ ಸಂತೋಷಿಸುತ್ತಾ ಅವನ ಸ್ವಾಭಾವಿಕವಾದ ಹೆಡ್ದುತನ ಮತ್ತು ನಾಚಿಕೆಗಳಿಂದ ಸ್ವಲ್ಪ ಮಾತ್ರ ನಗುತ್ತಾ ಆದರೂ ಅಲ್ಲಿ ನಡೆದಿದ್ದ ಪ್ರಸಂಗವನ್ನು ಸಂಪೂರ್ಣ ತಿಳಿದು ಆನಂದಿಸುತ್ತಾ ಎಮಿಲಿಯನ್ನು ಮಿ. ಪೆಗಟಿಗೆ ಅರ್ಪಿಸುವ ಸಿಧ್ಧತೆಯಲ್ಲಿದ್ದನು. ನವ ತರುಣಿ, ಸುಂದರಿ ಎಮಿಲಿ ಅಲ್ಲಿದ್ದ ಎಲ್ಲರ ಮುದ್ದು ಕೂಸಿನಂತೆ ಮಾತ್ರ ಬೆಳೆದು ಬಂದು, ಇಂದು ಈ ಪ್ರಸಂಗದಲ್ಲಿನ ಹೇಮನ ಸಂಪರ್ಕ, ಸಂಬಂಧಗಳ ಅರಿವನ್ನು ಗ್ರಹಿಸಿ, ಸಂತೋಷಿಸಿ, ಮುಖದಲ್ಲಿ ನಸುಗೆಂಪು ತಂದುಕೊಂಡು ಹೇಮನ ಕೈಯಿಂದ ಬಿಟ್ಟು ಮಿ. ಪೆಗಟಿಯ ಬಳಿ ಸೇರಲು ಒಂದು ಹೆಜ್ಜೆಯನ್ನೆತ್ತಿದ್ದಳು.

ನಮ್ಮ ಪ್ರವೇಶ ಈ ಸನ್ನಿವೇಶದಲ್ಲೇ ಆಗಿದ್ದುದರಿಂದ ಎಮಿಲಿ ನಿಂತಲ್ಲೇ ನಿಂತುಬಿಟ್ಟಳು. ನಮ್ಮ ಹಠಾತ್ತಾದ ಪ್ರವೇಶ ಅಲ್ಲಿನ ಆನಂದಮಯ ಪರಿಸ್ಥಿತಿಯನ್ನು ಏಕಾಏಕಿಯಾಗಿ ಕರಗಿಸಿ ಮಾಯಗೊಳಿಸಿತು. ಅಲ್ಲಿ ಎಲ್ಲರ ಮುಖದಲ್ಲಿ ಆಗ ಇದ್ದದ್ದು ಒಂದು ವಿಧದ ಶೂನ್ಯತೆ. ಮತ್ತೆ ಕ್ರಮೇಣವಾಗಿ ಚೇತರಿಸಿ ಬಂದ ಆಶ್ಚರ್ಯ. ನಾವೂ ಸ್ವಲ್ಪ ಗಾಬರಿಗೊಂಡು ಸ್ತಬ್ದವಾಗಿ ಹೋದೆವು. ಕೊನೆಗೆ ನಾನು “ಮಿ. ಪೆಗಟಿ ನನ್ನ ಗುರುತು ಸಿಕ್ಕಲಿಲ್ಲವೇ” ಎಂದು ಕೇಳಿದೆ.

ಅಷ್ಟರಲ್ಲಿ ಹೇಮನಿಗೆ ನನ್ನ ಗುರುತು ಸಿಕ್ಕಿತು – “ಮಾಸ್ಟರ್ ಡೇವಿ, ಮಾಸ್ಟರ್ ಡೇವಿ” ಎಂದು ಅವನು ಸಂತೋಷದಿಂದ ಕೂಗಿಕೊಂಡನು. ಸ್ಟೀಯರ್ಫೋರ್ತನ ಪರಿಚಯ ಮಿ. ಪೆಗಟಿ, ಹೇಮರಿಗೆ ಹೇಗೂ ಇದ್ದುದರಿಂದಲೂ ಸ್ಟೀಯರ್ಫೋರ್ತನ ಸುಲಭವಾದ, ಸಲಿಗೆಯ ಸರಳ ಸ್ವಭಾವದ ಮಾತುಗಳಿಂದಲೂ ನಾವೆಲ್ಲರೂ ಅರೆಕ್ಷಣದಲ್ಲೇ ಚಿರಪರಿಚಿತರಂತೆ ಕಲೆತು ಮಾತಾಡತೊಡಗಿದೆವು. ನನ್ನ ಪರಿಚಯ ಹೇಮನಿಗೆ ನನ್ನ ಬಾಲ್ಯಾರಭ್ಯ ಇದ್ದುದನ್ನು ತಿಳಿಸುತ್ತಾ ಬಹು ಸಂತೋಷದಿಂದ – “ಮಾಸ್ಟರ್ ಡೇವಿ ಈಗ ದೊಡ್ಡವನಾಗಿದ್ದಾನೆ. ಜ್ಞಾನ ಭಂಡಾರವೇ ಈಗ ನಮ್ಮೆದುರು ಬಂದು ನಿಂತಿದ್ದಾನೆ – ವಿದ್ಯಾಸಾಗರನಾಗಿದ್ದಾನೆ ನಮ್ಮ ಡೇವಿ” ಅಂದನು ಹೇಮನು.

ಈ ಸಂತೋಷಕೂಟದಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಹೆಚ್ಚು ಸಂತೋಷಪಡುತ್ತಿದ್ದರೆಂಬಂತೆ, ಮಿ. ಪೆಗಟಿ ಆವೇಶದಿಂದ ಅನ್ನತೊಡಗಿದನು – “ಮಹನೀಯರುಗಳೇ – ತೋರುವಿಕೆಯಲ್ಲಿ ಇಬ್ಬರಾಗಿದ್ದರೂ ನಿಮ್ಮೊಳಗಿನ ಪ್ರೇಮದ ಕಟ್ಟಿನಿಂದ ಒಬ್ಬರೇ ಆಗಿರುವ ಮಹನೀಯರೇ – ನಾನೊಬ್ಬ ಒರಟು ನಾವಿಕ. ಅನೇಕ ವಿಷಯಗಳಲ್ಲಿ ಒರಟನಾದರೂ ಪ್ರೀತಿಸುವುದರಲ್ಲೂ ಒಬ್ಬರನ್ನು ನಂಬುವುದರಲ್ಲೂ ಉಕ್ಕಿನಂತೆ ಸ್ಥಿರವಾಗಿರುವವನು. ನನ್ನ ಒರಟುತನ ತಮಗೆ ಆಶ್ಚರ್ಯಕರವಾಗಿ ತೋರಿದರೆ ನನಗೆ ಬೇಸರವಿಲ್ಲ. ಅದು ತಮಗೆ ಅಸಹ್ಯವಾಗಿ ಕಂಡರೆ, ನನ್ನನ್ನು ದಯಮಾಡಿ ಕ್ಷಮಿಸಿರಿ. ತಮಗೆ ಇಂದಿನ ದಿನ, ಇಲ್ಲಿನ ಸಂದರ್ಭಗಳು, ವಿಶೇಷವಾಗದಿರಬಹುದು. ಆದರೆ ನನ್ನ ಮಟ್ಟಿಗೆ ಇಂದಿನ ದಿನಕ್ಕಿಂತ ಮಹತ್ವದ ಸುದಿನ ಬೇರೊಂದಿಲ್ಲ. ನನ್ನನ್ನೇ ಪ್ರೀತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಸಲಹಿ, ಸಾಕಿಬಂದಿರುವ ನನ್ನ ಮುದ್ದು ಎಮಿಲಿಯನ್ನು, ಪುಟ್ಟು ಎಮಿಲಿಯನ್ನು, ಯೋಗ್ಯನಾದ, ದೃಢಕಾಯ, ಸರಳ, ಶಕ್ತಿವಂತ ನಾವಿಕನೊಬ್ಬನಿಗೆ ಮದುವೆ ಮಾಡಿಕೊಡುವ ನಿರ್ಧಾರ ಈಗಲೇ ಆಗಿದೆ. ಮದುಮಗನಾಗತಕ್ಕವನನ್ನೂ ನಾನು ಸಾಕಿ ಬಂದಿರುತ್ತೇನೆ. ಅವನು ತನ್ನ ಸಂಸಾರವನ್ನು ಮರ್ಯಾದೆಯಿಂದ ನಡೆಸಿ ಬರಲು ತ್ರಾಣವಿರುವ ಯುವಕ. ಈ ತರುಣ ತರುಣಿಯರು ಅನಾಥರಾಗಿ ನನ್ನ ಲಾಲನೆಪಾಲನೆಯಲ್ಲಿದ್ದುದು ಮಾತ್ರವಲ್ಲ – ನನ್ನ ಶರೀರದಲ್ಲಿ ಹೃದಯದ ಬಡಿತವಿರುವವರೆಗೆ ಅವರನ್ನು ನನಗೆ ಮಕ್ಕಳಿದ್ದಿದ್ದರೆ ಆ ಮಕ್ಕಳನ್ನು ಪ್ರೀತಿಸುತ್ತಿರಬಹುದಾದುದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಅವರ ಅಭಿವೃದ್ಧಿ, ಸುಖಸಂತೋಷಗಳಿಗಾಗಿಯೇ ನನ್ನ ಇನ್ನು ಮುಂದಿನ ಜೀವನವೂ ನಡೆಯಬೇಕೆಂದು ನಿಶ್ಚೈಸಿರುವೆನು,”

ಹೀಗಂದುಕೊಂಡು, ತನ್ನ ಬಲವಾದ ಎದೆಯನ್ನು ಮುಟ್ಟಿ ತೋರಿಸಿಕೊಂಡು, ಎಮಿಲಿಯನ್ನು ನೋಡಿ – “ಮುದ್ದು, ಎಮಿಲೀ, ಈ ಕಡೆ ಬಾ. ನಿನ್ನ ಬಾಲ್ಯದ ಸ್ನೇಹಿತರಾದ ಮಿ. ಡೇವಿಡ್ಡರೂ ಅವರ ಆಪ್ತ ಸ್ನೇಹಿತರಾದ ಮಿ. ಸ್ಟೀಯರ್ಫೋರ್ತರೂ ಇಂದಿನ ಈ ಸುಮುಹೂರ್ತದಲ್ಲೇ ಬಂದಿರುವವರು. ಅದೂ ಒಂದು ಮಹತ್ವದ ಸಂಗತಿಯೇ ಸರಿ. ಅವರು ನಿನ್ನೊಡನೆ ಮಾತಾಡಿ, ನಿನ್ನ ಶುಭವನ್ನು ಕೋರಿ ಹರಸುವರು, ಇತ್ತ ಬಾ ಅಮ್ಮಾ” ಎಂದು ಕರೆದನು.

ಸ್ಟೀಯರ್ಫೋರ್ತನು ಈ ಸಂದರ್ಭಕ್ಕೆ ತಕ್ಕದಾಗಿ, ಗಂಭೀರತೆಯನ್ನು ತಾಳಿ – “ನೀನೊಬ್ಬ ಬಹುಯೋಗ್ಯ ಗೃಹಸ್ಥ. ಸಂತೋಷದಿಂದ ಬಾಳಿ ಬದುಕಲು ಪರಿಪೂರ್ಣ ಅರ್ಹತೆಯುಳ್ಳವನು. ನಿಮ್ಮ ಹೇಮನೂ ಹಾಗೆಯೇ – ಉತ್ತಮ ಯುವಕನು. ನಿಮಗೆಲ್ಲ ಶುಭವಾಗಲಿ” ಅಂದನು.

ಮಿ. ಪೆಗಟಿಯ ಉತ್ಸಾಹ ಇಳಿಯಲಿಲ್ಲ. ಪುನಃ ಆವೇಶದಿಂದಲೇ ಹೇಳತೊಡಗಿದನು – “ನನ್ನ ಜೀವಮಾನದ ಕೊನೆಯ ಸಂತೋಷವೇ ಇಂದಿನದು. ನೆಂಟರಿಷ್ಟರ ಸಮಕ್ಷಮದಲ್ಲಿ ಪುಟ್ಟ ಎಮಿಲಿಯ ಭವಿಷ್ಯವನ್ನೆಲ್ಲ ಯೋಗ್ಯ ಪತಿಯ ಕೈಗೆ ಒಪ್ಪಿಸುವ ಇಂದು ದೊರಕಿರುವಂಥ ಮುಹೂರ್ತ ಪುನಃ ಎಂದಿಗೂ ದೊರಕಲಾರದು. ನಾನು ಇಂದೇ ಈಗಲೇ ಸತ್ತರೂ ನಾನು ಸ್ವಲ್ಪವೂ ಚಿಂತಿಸೆನು. ನಾನು ಇನ್ನು ಎಂದು ಸತ್ತರೂ ನನ್ನ ಮನಸ್ಸಿಗೆ ಸಮಾಧಾನವಿದೆ. ಕತ್ತಲೆಯ ರಾತ್ರಿ ಸಮಯ ಸಮುದ್ರದಲ್ಲಿ ಬಿರುಗಾಳಿಯೆದ್ದು, ಯಾರ್ಮತ್ತನ್ನೆ ಅಲೆಗಳು ಬಡಿದು ನಡುಗಿಸುವಾಗ, ನಾನೊಬ್ಬನೇ ಸಮುದ್ರದಲ್ಲಿ ಏಕಾಂಗಿಯಾಗಿ ಊರನ್ನು ಸೇರಲು ಬರುವಾಗ, ಅಲೆಗಳ ಜತೆಯಲ್ಲಿ ಯುದ್ಧಗೈದು, ಸೋತು ಸಮುದ್ರಗತವಾಗುತ್ತಿರುವಾಗ ಯಾರ್ಮತ್ತಿನ ಬೆಳಕನ್ನು ನಾನು ಕೊನೆಯದಾಗಿ ಕಂಡು ಮಡಿಯಬೇಕಾಗುವ ಪ್ರಸಂಗವೇ ಬಂದರೂ ನಾನು ಬೆದರೆನು. ನನ್ನ ಒಲವಿನ ಎಮಿಲಿಯನ್ನು ರಕ್ಷಿಸಿ, ಪೋಷಿಸುವ ಸಮರ್ಥ ಈ ಸ್ಥಳದಲ್ಲಿದ್ದಾನೆಂಬ ನನ್ನ ನಂಬಿಕೆಯೇ ನನ್ನ ಮರಣ ಕಾಲದಲ್ಲು ಸ್ಥಿರ ಶಾಂತಿಯನ್ನು ಕೊಡಬಲ್ಲುದು. ಅಲ್ಲವೇ ಹೇಮ್?” ಎಂದು ಹೇಳುತ್ತಾ ತನ್ನ ಅಭಿಪ್ರಾಯದ ಸಮರ್ಥನೆಗೆ ಹೇಮನ ಕಡೆ ನೋಡಿದನು. ಹೇಮನು ತನ್ನ ಮುಖಭಾವದಿಂದ ಮುಖ್ಯವಾಗಿಯೂ ಕೈಕರಣ, ಶಬ್ದಗಳಿಂದ ಎರಡನೆಯದಾಗಿಯೂ ಮಿ. ಪೆಗಟಿಯ ಮಾತುಗಳನ್ನು ಸಂತೋಷದಿಂದ ಸಮರ್ಥಿಸಿದನು.

ಹೀಗೆ ನಾವು ಮನಸ್ವೀಯಾಗಿ ಮಾತುಗಳನ್ನು ನಡೆಸಿ, ಅನಂತರ ಊಟ ಮಾಡಿದೆವು. ಊಟವಾದನಂತರ ಕಥೆ, ಚರಿತ್ರೆ, ಪ್ರವಾಸಗಳ ಅನುಭವ ಇತ್ಯಾದಿಗಳನ್ನು ಒಬ್ಬೊಬ್ಬರೇ ತಂತಮಗೆ ತಿಳಿದಷ್ಟನ್ನು ಹೇಳುತ್ತಾ ಕಾಲ ಕಳೆದೆವು. ಈ ಕಥೆ ಹೇಳುವುದರಲ್ಲೂ ಸ್ಟೀಯರ್ಫೋರ್ತನು ಬಹು ಕೌಶಲವುಳ್ಳವನಾಗಿದ್ದನು. ಅವನ ವಾಕ್ಚಾತುರ್ಯ, ವಿವರಣೆಗಳನ್ನೆಲ್ಲ ಎಲ್ಲರೂ ನಿಶ್ಶಬ್ದದಿಂದ ಕೇಳಿ ಆನಂದಿಸಿದರು. ಸ್ಟೀಯರ್ಫೋರ್ತನು ಜನ, ಸಂದರ್ಭಗಳಿಗೆ ತಕ್ಕವಾಗಿ ನಜರು, ಸಹಾಯ ಮೊದಲಾದುವನ್ನು ಕೊಡುವ ಮಾಡುವ ಅನುಭವಿಯಾಗಿದ್ದುದರಿಂದ, ಇಲ್ಲಿಗೆ ಬರುವಾಗಲೇ ಮಿ. ಪೆಗಟಿಗಾಗಿ ಒಂದು ಬಾಟ್ಲಿ (ನಾವಿಕರಿಗೆ ಬಹುಪ್ರಿಯವಾದ ನಮೂನೆಯ) ವೈನನ್ನು ತಂದಿದ್ದನು. ಅದನ್ನು ಅವನು ಮಿ. ಪೆಗಟಿಗೆ ನಜರಾಗಿ ಕೊಟ್ಟನು. ಅದನ್ನು ಎಲ್ಲರೂ ಸ್ವಲ್ಪ ಸ್ವಲ್ಪ ಕುಡಿದರು. ಅಂದಿನ ಸಂತೋಷಕ್ಕೆ ಒಂದು ಪದವನ್ನು ಹಾಡಬೇಕೆಂದು ಮಿ. ಪೆಗಟಿಗೆ ತೋರಿ ಅವನು ನಾವಿಕರ ಒಂದು ಪದವನ್ನು ಹಾಡಿದನು. ಅವನು ಹಾಡಿದ್ದೋ ಆರ್ಭಟಿಸಿದ್ದೋ ಎಂಬುದನ್ನು ಅವರವರ ಅಭಿರುಚಿ ಪ್ರಕಾರ ನಾವು ಗ್ರಹಿಸಿಕೊಂಡೆವು. ಸ್ಟಿಯರ್ಫೋರ್ತನು ಪ್ರತಿಯಾಗಿ ಒಂದು ಪದವನ್ನು ಹಾಡಿದನು. ಅವನ ಹಾಡುಗಾರಿಕೆ ಎಲ್ಲರನ್ನೂ ಮುಗ್ಧಗೊಳಿಸಿತು. ಸ್ಟೀಯರ್ಫೋರ್ತನ ನಡೆನುಡಿ, ಸಂಗೀತ, ಕಥೆ, ಪ್ರತಿಭೆಗಳನ್ನು ಎಲ್ಲರೂ ಕಂಡು ಬೆರಗಾಗಿ – ಮರುಳಾಗಿ – ಮೈಮರೆತು ಎಲ್ಲರೂ ಒಂದೇ ಸಂಸಾರದವರಂತೆ – ನಾಚಿಕೆ, ಹೇಡಿತನಗಳನ್ನು ಬಿಟ್ಟು – ಬೆರೆತು ಸಂತೋಷಿಸಿದೆವು. ನಮ್ಮ ಕೂಟದ ಪ್ರಾರಂಭ ಭಾಗದಲ್ಲಿ ಸ್ವಲ್ಪ ನಾಚಿಕೆಯಿಂದ ಅಡಗಿ ಕುಳಿತಿದ್ದ ಎಮಿಲಿಯೂ ಸಹ ನಮ್ಮೆಲ್ಲರಂತೆ ಸಲಿಗೆಯಿಂದ ಕೂಟದ ಆನಂದಗಳಲ್ಲಿ ಭಾಗಿಯಾಗಿದ್ದಳು.

ಈ ಸಂತೋಷಕೂಟ ಮುಕ್ತಾಯವಾದನಂತರ ಸ್ಟೀಯರ್ಫೋರ್ತನೂ ನಾನೂ ಅಲ್ಲಿಂದ – ಅವರೆಲ್ಲರಿಂದ ಬೀಳ್ಕೊಳ್ಳಲ್ಪಟ್ಟು – ಹೊರಟೆವು. ನಾವು ಸ್ವಲ್ಪ ದೂರ ಜತೆಯಲ್ಲೇ ಹೋಗಿ, ಅನಂತರ ನಮ್ಮ ನಮ್ಮ ಕಡೆಯ ಸ್ಥಳಗಳಿಗೆ ಹೋಗಬೇಕಾಗಿದ್ದಿತು. ನಾವು ಜತೆಯಲ್ಲೇ ಹೋಗುತ್ತಿದ್ದಾಗ ಸ್ಟೀಯರ್ಫೋರ್ತನು ತುಂಬಾ ಆಲೋಚನೆಗಳಲ್ಲಿದ್ದಂತೆ ತೋರಿದನು. ಅಂತೂ ಆಲೋಚನೆಯೇ ಸ್ಪೋಟನವಾದಂತೆ – “ಆ ಒರಟು ಕರಡಿ ಹೇಮನು ಸುಂದರೀಮಣಿ ಎಮಿಲಿಗೆ ತಕ್ಕಂಥ ಗಂಡ ಎಷ್ಟು ಮಾತ್ರಕ್ಕೂ ಅಲ್ಲ” ಎಂದನು. ಸ್ಟೀಯರ್ಫೋರ್ತನು ಬಡವರನ್ನು ಕುರಿತಾಗಿ ಮಾತಾಡುತ್ತಿದ್ದುದೇ ಹೆಚ್ಚಾಗಿ ಹಾಗೆಂದು ತಿಳಿದಿದ್ದ ನಾನು ಸ್ವಲ್ಪ ಬೇಸರದಿಂದಲೇ – “ಪ್ರೇಮಕ್ಕೆ ಅಂತರಂಗದ ಸೊಬಗು ಮಾತ್ರ ಪ್ರಧಾನವಾದುದು. ಬಹಿರಂಗದ ಒರಟುತನ ನಿರ್ಲಕ್ಷ್ಯವಾದುದಲ್ಲವೇನು, ಸ್ಟೀಯರ್ಫೋರ್ತ್?” ಎಂದು ಕೇಳಿದೆನು.

ಇದಕ್ಕೆ ಸ್ಟೀಯರ್ಫೋರ್ತನು ಯಾವ ಉತ್ತರವನ್ನೂ ಕೊಡದೇ ನಡೆಯುತ್ತಿದ್ದನು. ಸ್ವಲ್ಪ ದೂರ ಹೋಗುತ್ತಾ ಕಳವಳದಿಂದಲೇ ಎಂಬಂತೆ ಮತ್ತೂ ಬಹ್ವಂಶ ಆತ್ಮಗತವೇ ಎಂಬಂತೆ, ನನ್ನನ್ನು ನೋಡಿ ಅವನಂದನು – “ಡೇವೀ ನಿನ್ನ ಪ್ರಶ್ನೆಗೆ ಉತ್ತರಕೊಡುವ ವಿಷಯ ಹಾಗಿರಲಿ. ನನ್ನ ಮನಸ್ಸಿನ ಗತಿಯನ್ನು ನಿನಗೆ ತಿಳಿಸಲಿಚ್ಛಿಸುತ್ತೇನೆ, ನೋಡು. ನನಗೆ ನಾನೇ ಶತ್ರುವಾಗಿರುವೆನೆಂಬ ಭಾವನೆಯು ನನಗೆ ಕೆಲವೊಮ್ಮೆ ಮೂಡುವುದಿದೆ! ಬಾಲ್ಯದಲ್ಲಿ ಶಿಸ್ತಿಲ್ಲದೆ ಬೆಳೆದವರ ಬಾಳೆಲ್ಲ ಹೀಗೆಯೇ! ಶಿಸ್ತನ್ನು ಬೋಧಿಸಿ ನನ್ನನ್ನು ಬೆಳೆಸಬಲ್ಲ ತಂದೆ ನನಗೆ ಬಾಲ್ಯದಲ್ಲಿ ಇರಬೇಕಿತ್ತು, ಡೇವಿ. ನಿನ್ನ ಪ್ರಶ್ನೆಗೆ ಉತ್ತರಿಸದೆ – ಅಥವಾ ನನ್ನ ಮಾತುಗಳಿಂದ ನಿನಗೆ ನೋವಾದರೆ ಕ್ಷಮಿಸು, ಡೇವಿ. ನಿನಗೆ ಶುಭವಾಗಲಿ!” ಈ ಮಾತುಗಳು ಅವನ ಅಂತರಂಗದ ವೇದನೆಯಿಂದ ಹೊರಬಂದಂತೆ ತೋರಿದುವು.

ಅನಂತರ ನಾವು ಮುಂದುವರಿಯುವಾಗ, ಸದಾ ಹರ್ಷಚಿತ್ತನಾಗಿರುವ ಅವನ ಸ್ವಭಾವಕ್ಕೆ ಸರಿಯಾಗಿ ಸ್ಟೀಯರ್ಫೋರ್ತನು ಮಿ. ಪೆಗಟಿ ಆರ್ಭಟೆಯಂತೆ ಹಾಡಿದ್ದ ಪದವನ್ನೇ ಬಹು ಮಧುರವಾಗಿ ಹಾಡುತ್ತಾ ನಡೆದನು. ಈ ರೀತಿ ನಾವು ಯಾರ್ಮತ್ ಪಟ್ಟಣದ ಕಡೆಗೆ ಸಾಗಿದೆವು.

(ಮುಂದುವರಿಯಲಿದೆ)