ಅಧ್ಯಾಯ – ಇಪ್ಪತ್ತೈದು

[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತೇಳನೇ ಕಂತು

ನಾನು ಬುದ್ಧಿಗೆಟ್ಟು ವರ್ತಿಸಿದ ನಂತರದ ಮಾರನೇ ದಿನ ಬೆಳಗ್ಗೆ ನಾನೆದ್ದು ಮನೆಯಿಂದ ಹೊರಹೊರಡುವಾಗ ಒಬ್ಬ ಆಳು ನನಗೊಂದು ಪತ್ರ ತಂದುಕೊಟ್ಟನು. ಪತ್ರ ಏಗ್ನೆಸ್ಸಳದೇ ಆಗಿರಬೇಕೆಂಬ ಇಂಗಿತ ಬಲವತ್ತರವಾಗಿತ್ತು. ಅಲ್ಲದೆ ಅದನ್ನು ಓದುವುದು ತಾನೆ ಹೇಗೆಂದು ಬಹುವಾಗಿ ಹೆದರಿದೆ. ನಾಟಕ ಶಾಲೆಯಲ್ಲಿ ಏಗ್ನೆಸ್ಸಳು ಕಂಡಿದ್ದ ನನ್ನ ದುರ್ನಡತೆಯನ್ನು ಕುರಿತಾಗಿ ಅವಳು ಏನು ಬರೆದಿರಬಹುದೋ ಎಂಬುದೇ ನನ್ನ ಹೆದರಿಕೆಯಾಗಿತ್ತು. ಪತ್ರಕ್ಕೆ ಉತ್ತರ ಕೊಡಬೇಕೆಂಬುದಾಗಿ ಆಳು ತಿಳಿಸಿದುದರಿಂದ ಆಳನ್ನು ಹೊರಗೆ ನಿಲ್ಲಿಸಿ, ನಾನು ಒಳಗೆ ಬಂದು ಮೇಜಿನ ಬಳಿ ಕುಳಿತು ಪತ್ರ ಓದಿದೆ. ಅದು ಏಗ್ನೆಸ್ಸಳದೇ ಆಗಿತ್ತು. ನನಗೆ ಅನುಕೂಲವಾದ ಸಮಯವನ್ನು ತಿಳಿಸಿ, ಅಂಥಾ ಸಮಯದಲ್ಲಿ ನಾನು ಅವಳನ್ನು ಮಿ. ವಾಟರ್ ಬ್ರೂಕ್ಸ್ ಎಂಬವರ ಮನೆಯಲ್ಲಿ ಕಾಣಬೇಕೆಂದು ಬರೆದಿದ್ದಳು. ಅವಳ ತಂದೆಯ ಜತೆಯಲ್ಲಿ ಒಂದು ಕಾರ್ಯದ ನಿಮಿತ್ತವಾಗಿ ಅವರಿಬ್ಬರೂ ಮಿ. ವಾಟರ್ ಬ್ರೂಕ್ಸರ ಮನೆಗೆ ಬಂದಿರುವುದಾಗಿಯೂ ಬರೆದಿದ್ದಳು. ನನ್ನ ದುರ್ವರ್ತನೆಯನ್ನು ಎಳ್ಳಷ್ಟೂ ಪ್ರಸ್ತಾಪಿಸದಿದ್ದ ಪತ್ರಕ್ಕೆ ಏನುತ್ತರ ಬರೆಯುವುದೆಂದೇ ಗೊತ್ತಾಗದೆ ಕಷ್ಟಪಟ್ಟೆ. ನನ್ನ ತಪ್ಪನ್ನು ಪ್ರಥಮವಾಗಿ ಒಪ್ಪಿ, ಅನಂತರ ಕ್ಷಮಾಯಾಚನೆ ಮಾಡುವುದು ವಿಹಿತವೆಂದು ನಿಶ್ಚೈಸಿಕೊಂಡೆ. ಆದರೂ ಪ್ರಾರಂಭಿಸುವುದು ಹೇಗೆಂದು ನಿರ್ಧರಿಸಲಾರದೇ ಕಷ್ಟಪಡತೊಡಗಿದೆ. “ನಿನ್ನ ಮನಸ್ಸಿನಲ್ಲಿ ನಾನೇ ಚಿತ್ರಿಸಿರುವ ನನ್ನ ಅಮಂಗಲ ಸ್ವರೂಪವನ್ನು ಹೇಗೆ ಮರೆಸಲಿ?” ಎಂದು ಬರೆದು ನೋಡಿದೆ. ಅದು ಸರಿದೋರದೆ ಮತ್ತೊಂದು ವಿಧದಿಂದ ಪ್ರಾರಂಭಿಸಿದೆ. ಷೇಕ್ಸ್ಪಿಯರ್ ಕವಿಯ ಮಾತನ್ನು ಉಪಯೋಗಿಸಿ “ತಮ್ಮ ವೈರಿಯನ್ನೇ ಬಾಯೊಳಗೆ ಬಚ್ಚಿಡುವ ಮರುಳರಿದ್ದಾರಲ್ಲವೇ!” ಎಂದು ಬರೆದು ಪ್ರಾರಂಬಿಸಿ, ಅದೂ ಸರಿದೋರದೆ, ಕೊನೆಗೆ ಇಷ್ಟೇ ಬರೆದೆನು –
ಪ್ರಿಯ ಏಗ್ನೆಸ್,
ನಿನ್ನ ಪತ್ರ ನಿನ್ನ ದಿವ್ಯ ಸ್ವರೂಪದ ಪ್ರತಿಬಿಂಬವೇ ಆಗಿದೆ. ಇಷ್ಟಕ್ಕಿಂತ ಹೆಚ್ಚೇನನ್ನೂ ಹೇಳಲಾರೆ. ನಾನು ನಾಲ್ಕು ಗಂಟೆಗೆ ಬರುವೆನು.
ಇಂತೀ
ನಿನ್ನ ಪ್ರೀತಿಯನ್ನು ಬಯಸುವ, ಪಶ್ಚಾತ್ತಾಪಪಡುತ್ತಿರುವ
ಟ್ರಾಟೂಡ್ ಕಾಪರ್ಫೀಲ್ಡ್

ನಾನು ಒಪ್ಪಿಕೊಂಡ ಸಮಯಕ್ಕೇ ಅವಳಿದ್ದಲ್ಲಿಗೆ ಹೋಗಲು ನನಗೆ ಅನುಕೂಲವಾಗಲಿಲ್ಲ. ನಾನು ಅಮಲುಕೋರನಾಗಿದ್ದ ಅವಸ್ಥೆ ಕಂಡಿದ್ದ ಏಗ್ನೆಸ್, ಅಂದಿನ ರಾತ್ರಿಯ ವಿಷಯವನ್ನು ಪ್ರಸ್ತಾಪಿಸಿದರೆ ಉತ್ತರ ಕೊಡುವುದೇನು? ಅವಳನ್ನು ಕಂಡು ಮಾತನ್ನಾರಂಭಿಸುವುದೂ ಸಹ ಹೇಗೆ? ಎಂಬಿತ್ಯಾದಿಯಾಗಿ ಆಲೋಚಿಸುತ್ತಾ ತಡವಾಗಿ ಹೋಯಿತು. ಅಂತೂ ಅವಳು ತಿಳಿಸಿದ್ದ ಮನೆಗೆ ತಲುಪಿದೆ. ನನ್ನ ಆಗಮನ ನಿರೀಕ್ಷಿಸುತ್ತಾ ಏಗ್ನೆಸ್ ಒಂದು ಕೋಣೆಯಲ್ಲಿ ಒಬ್ಬಳೇ ಕುಳಿತಿದ್ದಳು. ಮಿ. ವಿಕ್ಫೀಲ್ಡರ ಮನೆಯಲ್ಲಿ ನಾನಿದ್ದಾಗ ಅವಳು ಯಾವ ರೀತಿಯಲ್ಲಿದ್ದಳೋ ಹಾಗೆಯೇ ಇಂದೂ ಪ್ರಸನ್ನಳಾಗಿ, ನನ್ನ ಆಗಮನದಿಂದುಂಟಾದ ಸಂತೋಷವನ್ನು ಮುಖದಲ್ಲಿ ಸೂಚಿಸುತ್ತಾ ಕುಳಿತಿದ್ದಳು. ನನ್ನ ಅಂಜಿಕೆಗೆ ಕಾರಣಗಳಾಗಿದ್ದ ವಿಷಯವನ್ನೇ ತಿಳಿಯದವಳಂತೆ ಅವಳು ನನ್ನೊಡನೆ ಮಾತಾಡತೊಡಗಿದಳು. ಪಶ್ಚಾತ್ತಾಪಪಡುತ್ತಿದ್ದ ನನಗೆ ಅವಳ ಈ ಗುಣ ಆನಂದಬಾಷ್ಪವನ್ನೇ ಸುರಿಯುವಂತೆ ಮಾಡಿತು.

“ಏಗ್ನೆಸ್, ಆ ದಿನ ರಾತ್ರಿ ನನ್ನನ್ನು ಇನ್ನು ಯಾರು ನೋಡಿದ್ದರೂ ಸಹ ನೀನು ನೋಡಿದ್ದರಿಂದ ನಾನು ನೊಂದುಕೊಂಡ ಅರ್ಧಪಾಲೂ ನೊಂದುಕೊಳ್ಳುತ್ತಿರಲಿಲ್ಲ. ನಿನ್ನನ್ನು ಪುನಃ ನೋಡುವುದಕ್ಕಿಂತ ಸಾಯುವುದೇ ಲೇಸೆಂಬುವವರೆಗೂ ನನಗೆ ತೋರಿದೆ. ನನ್ನನ್ನು ದಯಮಾಡಿ ಕ್ಷಮಿಸು” ಎಂದು ನಾನು ಬಿನ್ನೈಸಿಕೊಂಡೆನು.

ಏಗ್ನೆಸ್ ನನ್ನ ಕೈಯನ್ನು ಹಿಡಿದುಕೊಂಡು –
“ಟ್ರಾಟೂಡ್, ನಿನ್ನ ದುಃಖವನ್ನಾಗಲೀ ಪಶ್ಚಾತ್ತಾಪವನ್ನಾಗಲೀ ನನ್ನ ಹತ್ತಿರ ಹೇಳದೆ ಇನ್ನು ಯಾರ ಹತ್ತಿರ ಹೇಳಬಲ್ಲೆ? ಅದು ನನಗೆ ಗೊತ್ತಿದೆ. ಕಳೆದುಹೋದುದನ್ನು ಯೋಚಿಸಬೇಡ. ನಾನಂತೂ ಅದನ್ನು ಸಂಪೂರ್ಣ ಮರೆತಿದ್ದೇನೆ. ನಾನು ಕ್ಷಮಿಸಬೇಕಾದಂಥ ಅನ್ಯಾಯವನ್ನೇನೂ ನೀನು ಮಾಡಿರುವುದಿಲ್ಲ. ಏನಾದರೂ ಬಹು ಸ್ವಲ್ಪ ನಡೆದು ಹೋಗಿದ್ದರೂ ಅದು ಅರಿತು ಮಾಡಿದ್ದಲ್ಲ” ಅಂದಳು. ಅವಳ ಮೃದು ಸ್ಪರ್ಷವೂ ಮೃದು ಸ್ವರವೂ ನನಗೆ ತುಂಬಾ ಸಮಾಧಾನ ಕೊಟ್ಟಿತು.

“ನೀನು ನನ್ನ ಶುಭದೇವತೆ – ಭಾಗ್ಯದೇವತೆ” ಅಂದೆನು ನಾನು.
“ಟ್ರಾಟೂಡ್, ಸ್ಟೀಯರ್ಫೋರ್ತನ ಸಹವಾಸ ಹಿತವಲ್ಲ – ಶುಭವಲ್ಲ” ಅಂದಳು ಏಗ್ನೆಸ್.
“ಆ ದಿನದ ಒಂದೇ ಒಂದು ಪ್ರಸಂಗಕ್ಕಾಗಿ ನನ್ನ ಅತ್ಯಂತ ಪ್ರಿಯ ಮಿತ್ರನಾದ, ತಿಳಿವಳಿಕೆಯುಳ್ಳ ಸ್ಟೀಯರ್ಫೋರ್ತನನ್ನು ಕುರಿತು ಹಾಗೆ ಗ್ರಹಿಸಬಾರದು ಏಗ್ನೆಸ್” ಅಂದೆ ನಾನು.
“ನನಗೆ ನಿನ್ನ ಮೇಲಿರುವ ಪ್ರೀತಿಯಿಂದ, ನಿನ್ನ ಹಿತಚಿಂತನೆಯಿಂದ, ಮನಬಿಚ್ಚಿ ಹೇಳುವೆನು, ಕೇಳು. ಆತ ನಿನ್ನ ಅಶುಭದೇವತೆ. ನನ್ನ ಅಂತರಂಗದಲ್ಲಿ ಆ ರೀತಿ ಭಾಸವಾಗುತ್ತದೆ. ನೀನು ಆಗಿಂದಾಗ ಅವನನ್ನು ನಿರ್ವಂಚನೆಯಿಂದ ಹೊಗಳಿದ ಸಂಗತಿಗಳನ್ನು ನನ್ನ ಬುದ್ಧಿಗೆ ತಕ್ಕಂತೆ ವಿಮರ್ಶಿಸಿ ಈ ಅಭಿಪ್ರಾಯಕ್ಕೆ ಬಂದಿದ್ದೇನೆ. ನಿನ್ನ ಮನಸ್ಸಿಗೆ ನೋವಾದರೆ ಕ್ಷಮಿಸು” ಅಂದಳು ಏಗ್ನೆಸ್.

ಸ್ಟೀಯರ್ಫೋರ್ತನು ನನಗೆಂದಿಗೂ ಕೆಡುಕನ್ನು ಗೈಯ್ಯಲಾರನೆಂದು ನಾನು ಮನಸ್ಸಿನಲ್ಲಿ ತರ್ಕಿಸುತ್ತಿದ್ದ ಹಾಗೆಯೇ ಏಗ್ನೆಸ್ ಅಳುಕದೆ, ಗಂಭೀರವಾಗಿ, ಸದುದ್ದೇಶದಿಂದ ಹೇಳಿದ ಮಾತುಗಳನ್ನು ನಾನು ಪುನಃ ಪುನಃ ಯೋಚಿಸಿ, ವಿಮರ್ಶಿಸಿದಂತೆಲ್ಲ, ಅಂಥಾ ವಿಮರ್ಶೆ ನನ್ನ ಮನಸ್ಸಿನಲ್ಲಿ ಸ್ಟೀಯರ್ಫೋರ್ತನನ್ನು ಕುರಿತು ತುಂಬಾ ಪರಿಣಾಮವನ್ನುಂಟುಮಾದಿತು. ನನ್ನ ಅಂತರಂಗದ ಚಿತ್ರದಲ್ಲಿ ಸ್ಟೀಯರ್ಫೋರ್ತನು ವಿಮರ್ಶಾನಂತರ ಸ್ವಲ್ಪ ಕುರೂಪಿಯೂ ಕುಮಾರ್ಗಿಯೂ ಆಗಿ ತೋರತೊಡಗಿದನು. ಅವನ ಸುತ್ತಲೂ ನಾನು ನಿರ್ಮಿಸಿಕೊಂಡಿದ್ದ ಪ್ರಭೆಯೂ ಸ್ವಲ್ಪ ಮಸಕಾಯಿತು.

ಏಗ್ನೆಸ್ಸಳು ನನ್ನೊಡನೆ ಇನ್ನೂ ಅನೇಕ ವಿಷಯಗಳನ್ನು ಕುರಿತು ಮಾತಾಡಿದಳು. ಅವಳು ಲಂಡನ್ನಿಗೆ ಬಂದ ಉದ್ದೇಶವೇನೆಂದು ತಿಳಿಸಿದಳು. ಮಿ. ವಿಕ್ಫೀಲ್ಡರ ಮನೆಯಲ್ಲಿ – ಗೃಹಕೃತ್ಯದಲ್ಲಿ ಆಗಿದ್ದ ಬದಲಾವಣೆಗಳನ್ನು, ಅವರ ವೃತ್ತಿ, ವ್ಯವಹಾರಗಳಲ್ಲಿ ಆಗಿದ್ದ ಮಾರ್ಮಿಕವಾದ ಬದಲಾವಣೆಗಳನ್ನೂ ಹೇಳಿದಳು. ಮಿ. ವಿಕ್ಫೀಲ್ಡರನ್ನು ಉರೆಯನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತನ್ನ ಅಂಕಿತದಲ್ಲಿ – ಮುಷ್ಟಿಯೊಳಗೆ – ಇಟ್ಟುಕೊಂಡಿದ್ದನಂತೆ. ಮಿ. ವಿಕ್ಫೀಲ್ಡ್ ಮತ್ತು ಏಗ್ನೆಸ್ಸರ ವಾತ್ಸಲ್ಯ, ಪ್ರೀತಿ, ಕೌಟುಂಬಿಕ ವ್ಯವಹಾರಗಳಲ್ಲೂ ಉರೆಯನ ಪ್ರವೇಶ ಬಹು ಸೂಕ್ಷ್ಮವಾಗಿ ನಡೆಯುತ್ತಿತ್ತಂತೆ. ದಿನದಿಂದ ದಿನಕ್ಕೆ ಮಿ. ವಿಕ್ಫೀಲ್ಡರ ಮಾನಸಿಕ ಸ್ಥಿತಿ ಬಹು ಶೋಚನೀಯಾವಸ್ಥೆಗೆ ಬರುತ್ತಿರುವುದನ್ನು ಏಗ್ನೆಸ್ ಕಾಣುತ್ತಿದ್ದಳಂತೆ. ಉರೆಯನಿಗೆ ತನ್ನ ಮೇಲಿರುವ ಗೋಪ್ಯವಾದ ಅಧಿಕಾರದ ಕಾರಣವಾಗಿ, ಅಂಜಿಕೆಯಿಂದಲೇ ಮಿ. ವಿಕ್ಫೀಲ್ಡರು ಅವನನ್ನು ತನ್ನ ಪಾಲುಗಾರನನ್ನಾಗಿ ಮಾಡಿಕೊಂಡಿದ್ದಾರೆಂದೂ ಈಗ ಮಿ. ವಿಕ್ಫೀಲ್ಡರ ವಕೀಲಿ ಅಫೀಸಿನ ಹೆಸರು `ವಿಕ್ಫೀಲ್ಡ್ ಮತ್ತು ಹೀಪ್’ ಎಂದಾಗಿತ್ತೆಂದೂ ತಿಳಿಸಿದಳು. ಈ ಬದಲಾವಣೆಯ ಕಾರಣವಾಗಿ ಮಿ. ವಿಕ್ಫೀಲ್ಡರು ಮೊದಲಿಗಿಂತಲೂ ಹೆಚ್ಚೆಚ್ಚು ವೈನನ್ನು ದುಃಖಶಮನಕ್ಕಾಗಿ ಕುಡಿಯುತ್ತಿದ್ದಾರಂತೆ. ಈ ವಿಷಯಗಳನ್ನೆಲ್ಲ ತಿಳಿಸುವಾಗ ಏಗ್ನೆಸ್ಸಳಿಗೆ ಸ್ವಲ್ಪ ಕಣ್ಣೀರು ಬರುತ್ತಿತ್ತು. ಆದರೆ ಮನೆಯೊಳಗಿನ ಈ ಎಲ್ಲಾ ವಿಷಯಗಳೂ ಬಹು ಗೋಪ್ಯವಾಗಿರಬೇಕೆಂದೂ ಹಾಗಿಲ್ಲದಿದ್ದರೆ ತಂದೆಯ ದುಃಖ, ಕಷ್ಟಗಳು ಇನ್ನಷ್ಟು ಹೆಚ್ಚಬಹುದೆಂದೂ ತಾನು ತನ್ನ ತಂದೆಗೋಸ್ಕರ ಎಂಥ ಕಷ್ಟವನ್ನಾದರೂ ಸಹಿಸಲು ಸಿದ್ಧಳೆಂದೂ ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧಳೆಂದೂ ನನಗೆ ತಿಳಿಸಿದಳು.

ಇಷ್ಟೆಲ್ಲ ಮಾತು ಮುಗಿಯುವ ಸಮಯದಲ್ಲಿ ಮಿಸೆಸ್ ವಾಟರ್ ಬ್ರೂಕ್ಸರು ನಮ್ಮ ಕೋಣೆಗೆ ಬಂದರು. ಏಗ್ನೆಸ್ ನನ್ನ ಪರಿಚಯವನ್ನು ಅವರಿಗೆ ಮಾಡಿಕೊಟ್ಟಳು. ನನ್ನನ್ನು ಅವರು ನಾಟಕ ಶಾಲೆಯಲ್ಲಿ ನೋಡಿರಬೇಕೆಂದು ನಾನು ಸಂಶಯಪಡುತ್ತಿದ್ದಾಗಲೇ ಅಂದಿನ ನನ್ನ ಅಮಲುಕೋರವರ್ತನೆಯನ್ನು ನೆನೆದು ಅವರು ಭಯಪಡುತ್ತಿರುವಂತೆಯೂ ನಾನು ತಿಳಿದೆನು! ಆದರೂ ಏಗ್ನೆಸ್ಸಳ ಪರಿಚಯದ ಕಾರಣವಾಗಿ ಅವರು ನನ್ನೊಡನೆ ಗೌರವದಿಂದ ಮಾತಾಡುತ್ತಾ ಮರುದಿನವೇ ಅವರ ಮನೆಯಲ್ಲಿ ಜರುಗಲಿದ್ದ ಒಂದು ಔತಣಕೂಟಕ್ಕೆ ಆಮಂತ್ರಣವನ್ನಿತ್ತರು. ನಾನು ಆಮಂತ್ರಣವನ್ನು ಸ್ವೀಕರಿಸಿ ನನ್ನ ಮನೆಗೆ ಹೋದೆನು.

ಆಮಂತ್ರಣ ಪ್ರಕಾರ ನಾನು ಮರುದಿನ ಮಿ. ವಾಟರ್ ಬ್ರೂಕ್ಸ್ರರ ಮನೆಗೆ ಕ್ಲುಪ್ತ ಸಮಯಕ್ಕೆ ಹೋದೆ. ಉರೆಯನಿಗೂ ಅಮಂತ್ರಣವಿದ್ದಿರಬೇಕೆಂದು ತೋರುತ್ತದೆ. ಅವನ ಈಗಿನ ಸ್ಥಾನಮಾನಕ್ಕೆ ಸರಿಯಾಗಿ ದುಸ್ತು ಮಾಡಿಕೊಂಡು ಉರೆಯನೂ ಅಲ್ಲಿಗೆ ಬಂದಿದ್ದನು.

ಮಿ. ವಾಟರ್ ಬ್ರೂಕ್ಸರು ಆಗರ್ಭ ಶ್ರೀಮಂತರು. ಜನನದಿಂದಲೇ ಅಭಿವೃದ್ಧಿಯ ಪಥದಲ್ಲಿ ಕಾಲಿರಿಸಿದವರು. ಹಿಂದೆ ಬೀಳುವುದು, ಬಡತನ ಎಂಬುದನ್ನೆಲ್ಲ ಎಷ್ಟನ್ನೂ ಅರಿಯದವರು. ಶ್ರೀಮಂತಿಕೆಯ ಶಿಖರವನ್ನೇರಿ ಅಲ್ಲಿ ಭದ್ರವಾಗಿ ಕುಳಿತು ಮೆರೆಯುವವರು. ಅಭಿವೃದ್ಧಿಯ ಶಿಖರದಲ್ಲಿದ್ದವರಿಗೆ ಕೆಳಗಿನ ಜನಸ್ತೋಮ ಕುಬ್ಜವಾಗಿ ತೋರುವುದು ಸ್ವಾಭಾವಿಕವಷ್ಟೆ. ಈ ಸ್ವಭಾವದಿಂದಲೇ ಅವರು ತಮ್ಮ ಶ್ರೀಮಂತಿಕೆಯನ್ನು ಸದಾ ಸ್ಮರಣೆಯಲ್ಲಿ ಸ್ಪಷ್ಟವಾಗಿಟ್ಟುಕೊಂಡಿರುತ್ತಾ ಬಡತನ – ಕೀಳ್ತನಗಳ ಸ್ಪಷ್ಟತೆಯನ್ನು (ಆತ್ಮರಕ್ಷಣೆಗಾಗಿ) ಸದಾ ಸ್ಮರಣೆಯಲ್ಲಿಟ್ಟುಕೊಂಡಿರುತ್ತಿದ್ದರು. ಈ ಸಂಬಂಧದ ಗುಣದೋಷಗಳು ಅವರ ರಕ್ತದಲ್ಲಿ ಬೆರೆತುಹೋಗಿ, ನಡೆನುಡಿಗಳಲ್ಲಿ ಸುಲಭವಾಗಿ ಹೊರಹೊಮ್ಮುತ್ತಿದ್ದುವು. ಈ ಕಾರಣದಿಂದಲೇ ಅವರನ್ನು ಯಾರೂ ಸಲಿಗೆಯಿಂದ ಗುರುತಿಸುವುದನ್ನು ಅವರು ಮನಸಾ ವಾಚಾ ನಿಷೇಧಿಸುತ್ತಿದ್ದರು.

ಔತಣಕೂಟಕ್ಕೆ ಆಮಂತ್ರಿತರಾದವರಲ್ಲಿ ಬಹು ಹೆಚ್ಚಿನವರೆಲ್ಲರ ಮಾತಿನ ಕ್ರಮವೂ ಶ್ರೀಮಂತಿಕೆಯನ್ನು ಪ್ರಧಾನವಾಗಿಟ್ಟುಕೊಂಡದ್ದೇ ಆಗಿತ್ತು. ಎಷ್ಟು ಮಾತಾಡಿದರೆ, ಯಾವ ಮಾತಾಡಿದರೆ, ಶ್ರೀಮಂತಿಕೆಯ ಪ್ರಭೆ ಎದ್ದು ಕಾಣುವುದೋ ಅಂಥ ಮಾತುಗಳನ್ನು ಮಾತ್ರ ಅಭ್ಯಸಿಸಿ ಬಂದಿದ್ದವರಂತೆ ಅವರೆಲ್ಲರೂ ಮಾತಾಡುತಿದ್ದರು.. ನರೆತ ತಕೆಕೂದಲಿನವರೊಬ್ಬರು ಮಿ. ವಾಟರ್ ಬ್ರೂಕ್ಸರ ಶ್ರೀಮಂತಿಕೆಯನ್ನು – ಹಿಮವದ್ಗಿರಿಯು ಮೌನವಾಗಿದ್ದು, ತನ್ನ ಧವಳ ಶೋಭೆಯಿಂದ ಪ್ರಪಂಚದ ಶೋಭೆಯನ್ನು ಹೆಚ್ಚಿಸುತ್ತಿರುವಂತೆ – ತಮ್ಮ ಬೋಳು ತಲೆಯನ್ನು ಅಲ್ಲಾಡಿಸುವುದು ಮಾತ್ರದಿಂದ ಪ್ರಶಂಶಿಸುತ್ತಿದ್ದರು. ಆ ದಿನದ ಕೂಟದಲ್ಲಿ ಟ್ರೇಡಲ್ಸನೂ ಇದ್ದನು. ಅವನು ಮಿ. ವಾಟರ್ ಬ್ರೂಕ್ಸರ ಕೈಕೆಳಗೆ ವಕೀಲಿವೃತ್ತಿ ಅಭ್ಯಾಸ ಮಾಡುತ್ತಿದ್ದ ಕಾರಣವಾಗಿಯೂ ನಿಜವಾಗಿಯೂ ಅಂದು ಅಲ್ಲಿ ಇರಬೇಕಾಗಿದ್ದ `ಆಗರ್ಭ ಶ್ರೀಮಂತ’ ಮಿ. ಹೆನ್ರಿ ಸ್ಪೈಕರರು ಬರದಿದ್ದುದರಿಂದ ಖಾಲಿ ಬಿದ್ದ ಸ್ಥಾನದ ಭರ್ತಿಗಾಗಿಯೂ ಅಂದು ಆಮಂತ್ರಿತನಾಗಿದ್ದುದೆಂದು ಮಿ. ವಾಟರ್ ಬ್ರೂಕ್ಸರು ಬಹಿರಂಗವಾಗಿ, ಸ್ಪಷ್ಟವಾಗಿ, ಅಳುಕು, ನಾಚಿಕೆ, ದಾಕ್ಷಿಣ್ಯವಿಲ್ಲದೆ ತಿಳಿಸಿದರು.

ಕೊನೆಗೆ ಔತಣದ ಊಟ ನಡೆಯಿತು. ಎಲ್ಲರೂ ಶ್ರೀಮಂತಿಕೆಯ ಶಿಸ್ತಿನ ಪ್ರಕಾರ ಮಾತ್ರ ಊಟ ಮಾಡಿದರು. ಊಟವಾದನಂತರ ಎಲ್ಲರೂ ಕುಳಿತು ಮಾತಾಡಿದರು. ಮಾತೂ ಶ್ರೀಮಂತಿಕೆ, ಕುಲ, ಮೊದಲಾದ ಘನ ಗೌರವದ ಕುರಿತಾದದ್ದೇ ಆಗಿತ್ತು. ಒಬ್ಬ ಶ್ರೀಮಂತ ಮಾತಾಡುತ್ತಾ ಹೇಳಿದರು –
“ಯಾವ ಕೆಲಸವೇ ಆದರೂ ಉತ್ತಮ ರೀತಿಯಲ್ಲಿ ಪೂರ್ತಿಗೊಳ್ಳಬೇಕಾದರೆ ಯೋಗ್ಯ ಮನೆತನದವರೇ ಅಂಥ ಕೆಲಸವನ್ನು ವಹಿಸಿಕೊಳ್ಳಬೇಕು. ಅಂದರೆ ಮನೆತನವನ್ನು ಪ್ರಮುಖವಾಗಿಟ್ಟುಕೊಂಡೇ ಸರಕಾರದ ಉಚ್ಚ ಪದವಿಗಳಿಗೆ ಅಧಿಕಾರಿಗಳನ್ನು ನೇಮಿಸಬೇಕು”.
“ವಿದ್ಯೆ, ಡಿಗ್ರಿ, ಇವೆಲ್ಲಾ ಅವಶ್ಯವಿರಬಹುದಾದರೂ ರಕ್ತ, ಮನೆತನ ಅವುಗಳಿಗೂ ಮೇಲಾದವು” ಅಂದರು ಮತ್ತೊಬ್ಬರು.

ಅವರ ಮಾತುಗಳಲ್ಲಿ ಯಾರೊಬ್ಬರ ಹೆಸರನ್ನು ಪೂರ್ತಿಯಾಗಿ ಹೇಳದೇ – ತಮ್ಮೊಳಗೆ ಬಳಕೆಯಲ್ಲಿರುವುವೆಂದು ಹೆಮ್ಮೆಪಟ್ಟುಕೊಳ್ಳುವುದಕ್ಕಾಗಿ – ಕೆಲವು ಸಂಕೇತಾಕ್ಷರಗಳನ್ನು ಮಾತ್ರ ಉಪಯೋಗಿಸಿ ಮಾತಾಡುತ್ತಿದ್ದರು. ಹಣದ ಲೆಖ್ಖ ಮಾತಾಡುವಾಗ ದಶಸಾವಿರ, ಮಿಲಿಯದ ಅಂಕೆಗಳಿಗಿಂತ ಕೆಳಗಿನ ಅಂಕೆಗಳೇ ಅವರ ಬಾಯಿಯಲ್ಲಿ ಬರುತ್ತಿರಲಿಲ್ಲ.

ಈ ವಿಧದ ಮಾತನ್ನರಿಯದ ಟ್ರೇಡಲ್ಸನೂ ನಾನೂ ಒಂದು ಮೂಲೆಯಲ್ಲಿ ಕುಳಿತು ನಮ್ಮ ನಮ್ಮ ಬಳಕೆಯ ವಿಷಯಗಳನ್ನು ಮಾತಾಡಿದೆವು. ಆ ಸಭೆಯಲ್ಲಿ ನಮ್ಮಂಥ ಅನಾಮಧೇಯರು ಆ ಔತಣಕೂಟದ ಸಂತೋಷ, ಗೌಜು, ಗಲಭೆಯ ವರ್ಧನೆಗಾಗಿ ಇದ್ದ `ಜನಹಿಂಡು’ ಮಾತ್ರವಾಗಿ ಹೋಗಿದ್ದೆವು. ಆದರೆ ಇದೇ ಸಮಯದಲ್ಲಿ ಅತಿ ಶ್ರೀಮಂತಿಕೆಗೆ ಪರಮ ವಿರೋಧ ದಿಕ್ಕಿನಲ್ಲಿದ್ದ, ದೀನ, ದರಿದ್ರ, ಅನಾಮಧೇಯ ಉರೆಯನು ತಗ್ಗಿ, ಬಗ್ಗಿ ತನ್ನ ಬಡತನ, ಅಲ್ಪತನಗಳನ್ನು ಬಹಿರಂಗವಾಗಿ, ಒಪ್ಪುತ್ತಾ ಕೈಗಳನ್ನು ಬಳುಕಿಸಿ, ತಿರುಚಿಸಿ, ಇತರರ ಸಂತೋಷದಿಂದ ತಾನು ಸಂತೋಷಪಡುತ್ತಿರುವುದಾಗಿ ನಟಿಸಿ ಅರೆನಗೆ ನಗುತ್ತಿದ್ದನು. ಅವನ ವಂಚಕತನದ ನಟನೆಗಳನ್ನು ಕಂಡು ಅವನನ್ನು ಒದ್ದು ಹೊರಗೆ ಅಟ್ಟಿದ್ದರೆ ಉತ್ತಮವಿತ್ತೆಂದು ನನಗೆ ತೋರುತ್ತಿತ್ತು.

ಉರೆಯನ ವಿನೀತತೆ ನಟನೆಯೆಂದು ನನಗೆ ಗೊತ್ತಿದ್ದರೂ ನನ್ನ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಮಿ. ವಿಕ್ಫೀಲ್ಡರಿಗಾಗಲೀ ಏಗ್ನೆಸ್ಸಳಿಗಾಗಲೀ ತೊಂದರೆಯಾಗಬಹುದೆಂದು ಹೆದರಿ, ನಾನು ಉರೆಯನನ್ನು ಕಂಡು ಸಂತೋಷಪಟ್ಟವನಂತೆಯೇ ನಟಿಸಿ ವರ್ತಿಸಿದೆ. ನಾನು ಕೆಲವೊಮ್ಮೆ ಏಗ್ನೆಸ್ಸಳ ಹತ್ತಿರ ಮಾತಾಡುತ್ತಿದ್ದೆ. ಆಗ ಉರೆಯನು ಎಡೆಬಿಡದೆ ನಮ್ಮನ್ನು ನೋಡುತ್ತಾ ನಾವು
ಏನೇನು ಮಾತಾಡುತ್ತಿದ್ದೇವೆಂದು ಸೂಕ್ಷ್ಮವಾಗಿ ಆಲಿಸಿ ಕೊಂಡಿರುತ್ತಿದ್ದನೆಂದೂ ನಾನು ತಿಳಿದೆನು.

ಆ ದಿನ ಕೂಟ ಸಮಾಪ್ತವಾದನಂತರ ನಾವು ನಮ್ಮ ನಮ್ಮ ಮನೆಗೆ ಹೊರಟೆವು. ಆಗ, ಕೇವಲ ಸಾಂಪ್ರದಾಯಿಕವಾಗಿ, ನಾನು ಉರೆಯನನ್ನು ನನ್ನ ಮನೆಗೆ ಬರಲು ಆಮಂತ್ರಿಸಿದೆನು. ಉರೆಯನು ಅಮಂತ್ರಣವನ್ನು ಬಹು ವಿನೀತನಾಗಿ ಸ್ವೀಕರಿಸಿ, ನನ್ನ ಜತೆಯಲ್ಲೇ ನನ್ನ ಮನೆಗೆ ಬಂದನು.

ಅತಿಥಿಗೆ ತಕ್ಕದಾಗಿ ಉರೆಯನನ್ನು ಸೋಫಾದಲ್ಲಿ ಕೂರಿಸಿ ನಾನು ಕುರ್ಚಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಾತಾಡಿದೆವು. ಉರೆಯನು ತನ್ನ ಉದ್ದವಾದ ಕಾಲುಗಳನ್ನು ನೀಡಿ, ಅವುಗಳ ಮೇಲೆ ತನ್ನ ನೀಳವಾದ ಕೈಗಳನ್ನು ಬಳುಕಿಸಿಟ್ಟುಕೊಂಡು, ಅಂಗ, ಮುಖ ವಿನ್ಯಾಸಗಳಲ್ಲಿ ದೀನತೆ, ನಮ್ರತೆ, ಬಡತನವನ್ನು ಸೂಚಿಸುತ್ತಾ
“ಮಾಸ್ಟರ್ ಕಾಪರ್ಫೀಲ್ಡ್ – ಅಲ್ಲ, ಕ್ಷಮಿಸಿ, ಮಿ. ಕಾಪರ್ಫೀಲ್ಡ್, ಈ ದಿನದ ನಮ್ಮಿಬ್ಬರ ಇಲ್ಲಿನ ಭೇಟಿಯು ನನ್ನ ಪಾಲಿಗೆ ಬಹು ವಿಶೇಷವಾದುದು. ಹಿಂದೊಮ್ಮೆ ನೀನು ನನಗೊಂದು ಸೂಚನೆಯಿತ್ತಿದ್ದೆ. ಆ ಪ್ರಕಾರವೇ ದೇವರ ದಯೆಯಿಂದ, ನನ್ನ ಕಾರ್ಯಗಳು ಯಶಸ್ವಿಯಾಗಿವೆ. ಆ ಸಂತೋಷದ ಸಂಗತಿಯನ್ನು ನಿನಗೆ ತಿಳಿಸುವ ಸಂದರ್ಭ ಈಗ ಬಂದಿದೆ” ಅಂದನು.

ಈ ರೀತಿಯ ವಕ್ರ, ವಿನಮ್ರ, ವಂಚನೆಯ ವಿಷಯಗಳನ್ನು ಹೇಳುವ ಪೀಠಿಕೆಯನ್ನು ಕೇಳುತ್ತಾ ನನಗೆ ಕೋಪ ಏರುತ್ತಿದ್ದರೂ ಶಿಷ್ಟಾಚಾರಕ್ಕಾಗಿ ಸಿಟ್ಟನ್ನು ತಡೆಹಿಡಿದು –
“ಏನದು ಅಂಥಾ ಮಹತ್ವದ ಘಟನೆ” ಎಂದು ಏನೂ ಅರಿಯದವನಂತೆ ಕೇಳಿದೆ.
“ಮಿ. ವಿಕ್ಫೀಲ್ಡರ್ಂಥವರ ಜತೆ ಪಾಲುಗಾರನಾಗಿ, ಅವರ ವೃತ್ತಿಯನ್ನು ನಾನೂ ನಡೆಸುವ ಸಂದರ್ಭ ಬಂದಿದೆ. ಹಿಂದೆ ಒಮ್ಮೆ ನೀನಿತ್ತುದು ಒಂದು ಸೂಚನೆಯೇ ಆಗಿದ್ದರೂ ಅದು ಆಶೀರ್ವಾದವಾಗಿ ಪರಿಣಮಿಸಿ, ಆಶೀರ್ವಾದ ಕಾರ್ಯಗತವಾಗಿದೆ. ನಮ್ಮಂಥ ಬಡವರಿಗೆ ದೊರಕಿರುವ ಈ ಉತ್ತಮ ಪರಿಸ್ಥಿತಿಯನ್ನು ಕುರಿತು – ಬಡವನಾದರೂ ನನ್ನ ಹೃದಯದಲ್ಲಿ ತುಂಬಿರುವ ಕೃತಜ್ಞತೆಯನ್ನು ನಿನಗೆ ತಿಳಿಸಬೇಕಾಗಿದೆ. ಇದಕ್ಕಾಗಿ ನಾನು ನಿನ್ನನ್ನು ವಂದಿಸುತ್ತೇನೆ. ದೀನರೂ ದರಿದ್ರರೂ ಸಹ ನಮಗಿಂತ ಮೇಲ್ತರಗತಿಯವರಿಗೆ ಸಹಾಯಮಾಡಬಹುದಾದ ಸಂದರ್ಭಗಳನ್ನು ದೇವರು ಕಲ್ಪಿಸುವನು. ದೇವನೇನೋ ಕರುಣೆಯಿಂದ ನನಗೂ ಮಿ. ವಿಕ್ಫೀಲ್ಡರಿಗೂ ಹಿತವಾಗುವಂಥ – ಅಂಥ ಸಂದರ್ಭವನ್ನೇ ಒದಗಿಸಿರುತ್ತಾನೆ, ಮಿ. ಕಾಪರ್ಫೀಲ್ಡ್. ಮಿ. ವಿಕ್ಫೀಲ್ಡರ ವಹಿವಾಟುಗಳೆಲ್ಲಾ ಬಹು ಅವ್ಯವಸ್ಥಿತ ಸ್ಥಿತಿಯಲ್ಲಿದ್ದುವು. ಅವುಗಳನ್ನು ನಾನು ಅವರ ವಿನಮ್ರ ಸೇವಕನಾಗಿ ಸರಿಪಡಿಸಿರುತ್ತೇನೆ. `ನಾನು ಉಪಕಾರ ಮಾಡಿದೆ, ನಾನು ಮಾತ್ರ’ ಎಂದು ನಾನು ಹೇಳುವುದು ನ್ಯಾಯವಾಗಲಾರದು. ಉಪಕಾರವು ಪರಸ್ಪರವಾಗಿ ನಡೆದಿದೆ – ಮಿ. ವಿಕ್ಫೀಲ್ಡ್ರಿಂದ ನನಗೆ ತುಂಬಾ ಉಪಕಾರವಾಗಿದೆ. ಮಿ. ಮತ್ತು ಮಿಸ್ ವಿಕ್ಫೀಲ್ಡರ ಹಿತಕ್ಕಾಗಿಯೇ ನಾನು – ಕೃತಜ್ಞತಾಬುದ್ಧಿಯಿಂದ – ನನ್ನ ಕಡೆಯ ಸಹಾಯವನ್ನು ಕೊಟ್ಟಿರುತ್ತೇನೆ. ನಮ್ಮಂಥವರಿಗೂ ನೀತಿ, ಧರ್ಮಗಳ ಜ್ಞಾನವಿರುತ್ತದೆ, ಕೃತಜ್ಞತೆಯಿರುತ್ತದೆ. ನಾನಿದ್ದ ಸ್ಥಾನ, ಸಂದರ್ಭಗಳಲ್ಲಿ ಇನ್ನೊಬ್ಬನಿರುತ್ತಿದ್ದರೆ, ಮಿ. ವಿಕ್ಫೀಲ್ಡರು ಮಾಡಿರುವ ಅಜಾಗ್ರತೆ, ತಪ್ಪು ಮೊದಲಾದುವುಗಳನ್ನು ಉಪಯೋಗಿಸಿಕೊಂಡು, ಅವರನ್ನು ತನ್ನ ಅಂಕಿತದೊಳಗೆ – ಮುಷ್ಠಿಯೊಳಗೆ, ಇಟ್ಟುಕೊಳ್ಳುತ್ತಿದ್ದನು. ಅವರ ವಹಿವಾಟುಗಳ ಪರಿಸ್ಥಿತಿ ಹಾಗಿತ್ತು” ಎಂದು ಉರೆಯನಂದನು. `ಅಂಕಿತದೊಳಗೆ’ ಎಂದು ಅವನು ಹೇಳುತ್ತಿದ್ದಾಗ ಅವನ ತಿರುಟಲು ಕೈಯ್ಯ ಹೆಬ್ಬೆರಳನ್ನು ಮೇಜಿನ ಮೇಲೆ ಒತ್ತಿ ಇಟ್ಟು, ಆ ಒತ್ತಿ ಇಟ್ಟಾ ಕ್ರಮದಿಂದ ಮೇಜಿಗೂ ತನ್ನ ಹೆಬ್ಬೆರಳಿಗೂ ಮಧ್ಯದಲ್ಲಿರುವ ಮಿ. ವಿಕ್ಫೀಲ್ಡರು ಅವನ ವಶಕ್ಕೆ – ಅಧಿಕಾರಕ್ಕೆ, ಒಳಪಟ್ಟಿಲ್ಲವೇ ಎಂದು ನಾನು ನೋಡಿ ನಿಶ್ಚೈಸಬಹುದೆಂಬಂತೆ ನನ್ನನ್ನೆ ನೋಡಿದನು.

ಉರೆಯನ ಮಾತುಗಳೂ ನೋಟವೂ ನನಗೆ ಸಹಿಸಲಾರದವೇ ಆಗಿದ್ದರೂ ಏಗ್ನೆಸ್ಸಳ ಹಿತವನ್ನು ಗ್ರಹಿಸಿ – ಅವಳು ಹಿಂದೆ ಹೇಳಿದ್ದ ಎಚ್ಚರಿಕೆಯ ಮಾತುಗಳನ್ನು ನೆನೆಸಿಕೊಂಡು – ತಾಳ್ಮೆಯಿಂದಲೇ ಮಾತಾಡತೊಡಗಿದೆನು.
“ಮಿ. ಕಾಪರ್ಫೀಲ್ಡ್, ನಾನು ಮಿಸ್ ಏಗ್ನೆಸ್ಸಳಿಗಾಗಿಯೂ ಆ ರೀತಿ ಮಿ. ವಿಕ್ಫೀಲ್ಡರಿಗೆ ಸಹಾಯ ಮಾಡಬೇಕಾಯಿತು. ಮಿಸ್ ಏಗ್ನೆಸ್ಸಳು ಯೋಗ್ಯ ತರುಣಿಯಲ್ಲವೇ?” ಎಂದು ಉರೆಯ ಕೇಳಿದ.
“ನಿಜ – ನಿನ್ನ ಮಾತು ಪರಿಪೂರ್ಣ ನಿಜ. ಅವಳಷ್ಟು ಸದ್ಗುಣ ಸಂಪನ್ನೆಯನ್ನು ನಾನು ಎಲ್ಲೂ ನೋಡಿರುವುದಿಲ್ಲ. ಅವಳು ಯಾರ ಸಮೀಪದಲ್ಲಿದ್ದರೂ ಅವರೆಲ್ಲರಿಗಿಂತ ಉತ್ತಮಳಾಗಿ ಅವಳು ಸ್ವಾಭಾವಿಕವಾಗಿ ಮೆರೆಯುವಳು” ಎಂದು ನಾನು ಉತ್ತರವಿತ್ತೆ.
“ಅವಳ ಯೋಗ್ಯತೆಯನ್ನು ಪ್ರಶಂಸಿಸಿದುಕ್ಕಾಗಿ ನಿನಗೆ ವಂದನೆಗಳು” ಎಂದು ಉರೆಯನು ನನಗೆ ವಂದಿಸಿದನು.
ಉರೆಯನು ಏಗ್ನೆಸ್ಸಳನ್ನು ವಂದಿಸಿದುದೇ ಏಗ್ನೆಸ್ಸಳಿಗೆ ಅಪಮಾನಕರವೆಂದು ನಾನು ತಿಳಿದೆ. ಆದರೂ ಅದನ್ನು ತೋರಿಸದೆ –
“ಏಗ್ನೆಸ್ಸಳ ಯೋಗ್ಯತೆ ಯಾರ ಪ್ರಶಂಸೆಯಿಂದಲೂ ಬದಲಾಗಲಾರದು. ಅದು ಪ್ರಶಂಸೆಗೆ ಒಳಗಾಗತಕ್ಕದ್ದಲ್ಲ. ಮತ್ತು ನನ್ನ ಪ್ರಶಂಸೆಗೆ ನಿನ್ನ ವಂದನೆಗಳು ಅನಗತ್ಯ, ಉರೆಯ” ಎಂದು ನಾನು ಹೇಳಿಬಿಟ್ಟೆ.
ಉರೆಯನು ಮತ್ತಷ್ಟು ವಿನೀತತೆಯಿಂದ-
“ಮಿ. ಕಾಪರ್ಫೀಲ್ಡ್, ನೀನು ನನ್ನನ್ನು `ಉರೆಯಾ’ ಎಂದು ಮಾತ್ರ ಕರೆದರೆ ಸಾಕು. ನಾನು ಬಡವ – ನನ್ನ ತಾಯಿಯೂ ಬಡವಿ. ನಮ್ಮ ಸ್ಥಾನದ ಅರಿವು ನಮಗೆ ಸದಾ ಇದ್ದೇ ಇದೆ. ಆದರೆ, ಇಂದು ನಿನ್ನಲ್ಲಿ ಇದನ್ನೆಲ್ಲ ಹೇಳಲು ಕಾರಣ ನಮ್ಮ ಬಾಲ್ಯದ ಪರಿಚಯ ಮತ್ತು ಸ್ನೇಹ ಮಾತ್ರವಾಗಿದೆ. ನಮ್ಮಂಥ ಬಡವರಿಗೂ ಮನಸ್ಸು, ಹೃದಯ, ಪ್ರೇಮಭಾವನೆ ಇವೆಯಷ್ಟೆ. ಆ ಕಾರಣವಾಗಿ, ನನ್ನ ಬಾಲ್ಯದ ಸ್ನೇಹಿತನ ಹತ್ತಿರ ಮಾತ್ರ, ಈಗ ನನ್ನ ಹೃದಯವನ್ನು ಬಿಚ್ಚಿ ತೋರಿಸುತ್ತಿದ್ದೇನೆ. ನಾನು ಏಗ್ನೆಸ್ಸಳನ್ನು ಪ್ರೀತಿಸುತ್ತಿದ್ದೇನೆ. ಅವಳ ದಿವ್ಯ ಹಸ್ತವನ್ನು ದಾಂಪತ್ಯದ ಕಟ್ಟಿನಿಂದ ಹಿಡಿದು ಬಾಳುವ ಅಭಿಲಾಶೆ ನನಗಿದೆ” ಅಂದನು.

ಉರೆಯ ಅವನ ಅಂತರಂಗವನ್ನು ನನ್ನಲ್ಲಿ ಬಿಚ್ಚಿ ಹೇಳಲು ನಮ್ಮ ಸ್ನೇಹ ಕಾರಣವಾಗಿರಲಿಲ್ಲವೆಂದೂ ಅವನ ದುರುದ್ದೇಶ ಸಾಧನೆಗೆ ಈ ಕ್ರಮದ ಮಾತುಗಳು ಅಗತ್ಯವೆಂದೂ ಅವನು ತಿಳಿದಿದ್ದನೆಂದೂ ನನಗೆ ಗೊತ್ತಾಯಿತು. ಆಗ ನನಗೆ ಆಗಿದ್ದ ಕೋಪ ಹೇಳತೀರದು. ತರ್ಕಗಳಿಂದ ಗೊತ್ತುಪಡಿಸಲಾಗದ ಭಾವನೆಗಳು ಮನಸ್ಸಿನಲ್ಲೆದ್ದು – ಆಶ್ಚರ್ಯ, ದುಃಖ, ಕ್ರೋಧಗಳ ನಾನಾ ಸ್ವರೂಪಗಳು ನನ್ನನ್ನು ಬಾಧಿಸಿದುವು. ಆದರೂ ನನ್ನ ಸಿಟ್ಟಿನ ಆವೇಶದಿಂದ ಏಗ್ನೆಸ್ಸಳಿಗೂ ಮಿ. ವಿಕ್ಫೀಲ್ಡರಿಗೂ ಬಾಧಕವಾಗಬಾರದೆಂಬ ಒಂದೇ ಒಂದು ಕಾರಣಕ್ಕಾಗಿ ನಾನು ಮೌನವಾಗಿರುತ್ತಾ ಅವನನ್ನೇ ಮಾತಾಡಲು ಎಡೆಕೊಟ್ಟೆನು. ಹಾಗಾಗಿ ಉರೆಯನು ಮಾತಾಡತೊಡಗಿದನು –

“ನನ್ನ ಸ್ಥಿತಿಯನ್ನು ತಿಳಿಸುತ್ತೇನೆ, ಕೇಳು. ನಾನು ಬಡವ. ನಮ್ಮ ಮನೆ ಚಿಕ್ಕದು. ಈ ಪಾಲುದಾರಿಕೆಯ ಜತೆಕೂಟವು ನನಗೆ ಪೂರ ಹೊಸತು. ಅದು ಸ್ಥಿರವಾಗಲೂ ಸಮಯ ಬೇಕು. ನನ್ನ ಈ ಎಲ್ಲಾ ಕುಂದು ಕೊರತೆಗಳನ್ನು ಜ್ಞಾಪದಲ್ಲಿಟ್ಟುಕೊಂಡು, ಏಗ್ನೆಸ್ಸಳನ್ನು ಪಡೆಯಲು ಅರ್ಹತೆ ಸಂಪಾದಿಸುವುದಕ್ಕಾಗಿ ಹಗಲಿರುಳು ದುಡಿಯುವೆನು. ಇಂಥ ಅರ್ಹತೆ ಪಡೆಯಲು – ಮಿ. ಕಾಪರ್ಫೀಲ್ಡ್ – ನಿನ್ನ ಸಹಾಯವೂ ಅಗತ್ಯವಿದೆ. ನನ್ನ ಬಾಲ್ಯದ ಸ್ನೇಹಿತನಾಗಿ, ನನ್ನ ಮತ್ತು ಏಗ್ನೆಸ್ಸಳ ಗುಣಗಳನ್ನು ಬಲ್ಲ – ಈ ಎಲ್ಲ ಪರಿಸ್ಥಿತಿಗಳನ್ನು ಅರ್ಥಮಾಡಿ ವರ್ತಿಸಬಲ್ಲ – ನೀನೊಬ್ಬನು ನನಗೆ ಸಹಾಯ ಮಾಡಿದರೆ ನನಗೆ ನನ್ನ ಬಯಕೆ ಸಿದ್ಧಿಯಾಗುವುದು ಖಂಡಿತ. ನೀನು ನನಗೆ ಅಡ್ಡ ಬರದಿರಬೇಕಾದುದೇ ಇದರಲ್ಲಿ ಪ್ರಥಮವಾದ, ಮುಖ್ಯ, ವಿಷಯ. ಎಲ್ಲವನ್ನೂ ಗ್ರಹಿಸಿ ನೋಡು. ತಂದೆಯ ಸುಖಕ್ಕಿಂತ ಬೇರೆ ಯಾವ ಸುಖವೂ ತನಗಿಲ್ಲವೆಂದು ಏಗ್ನೆಸ್ಸಳು ತಿಳಿಯುತ್ತಿದ್ದಾಳೆ. ಅವಳ ತಂದೆಯನ್ನು ಕಷ್ಟ ನಿಷ್ಠುರಗಳಿಂದ ರಕ್ಷಿಸಿ ಪೋಷಿಸಲು ತಕ್ಕ ತ್ರಾಣ, ಅವಕಾಶವುಳ್ಳ ನನ್ನಲ್ಲಿ ಅವಳು ಅನುರಕ್ತಳಾಗದಿರಲು ಕಾರಣವಿಲ್ಲ. ತುಂಬಾ ವಿವೇಕವಿದ್ದು ಪೂರ್ವಾಪರ ಗ್ರಹಿಸಬಲ್ಲ ಏಗ್ನೆಸ್ಸಳಿಗೆ ಈ ಸಂದರ್ಭ ಪೂರ್ಣ ಅರ್ಥವಾಗದಿರದು. ಬೇಕಾದುದು ನಿನ್ನೊಬ್ಬನ ಸಹಾಯ ಮಾತ್ರ. ನಾನು ಬಡವನಾದರೂ ನನ್ನ ಪರಿಶ್ರಮಗಳಿಂದ ಸಾಕಷ್ಟು ಯೋಗ್ಯತೆಯನ್ನು ಸಂಪಾದಿಸಬಲ್ಲೆ” ಎಂದು ಮೊದಲಾಗಿ ಉರೆಯನು ಹೇಳಿದನು. ನಾನೊಬ್ಬ ಅವನ ಸ್ನೇಹಿತನೆಂದು ಶಬ್ದಗಳಲ್ಲಿ ತೋರಿಸುತ್ತಾ ಅರ್ಥದಿಂದ ನಾನು ಅವನ ಪ್ರತಿಸ್ಪರ್ಧಿ, ವಿರೋಧಿ ಎಂಬಂತೆ ಕಾಣಿಸುತ್ತಾ ನಾನು ಪ್ರೀತಿಸಿ ಗೌರವಿಸುವ ಆ ತಂದೆ ಮಗಳಂದಿರ ಹಿತಕ್ಕಾಗಿಯೇ ನಾನು ಅವನನ್ನು ವಿರೋಧಿಸಬಾರದೆಂದು ನನ್ನನ್ನು ಎಚ್ಚರಿಸುತ್ತಾ ಅವನ ಅಧಿಕಾರ, ಅಂಕಿತದೊಳಗೆ ಆ ತಂದೆ ಮಗಳಂದಿರು ಇದ್ದಾರೆಂಬುದನ್ನು ಉದ್ದೇಶಪೂರ್ವಕವಾಗಿ, ವಕ್ರವಾಗಿ ತಿಳಿಸುತ್ತಾ ಉರೆಯನು ಮಾತಾಡಿದನು.

ಉರೆಯನ ಬಡತನ ಪ್ರದರ್ಶನ, ವಿನೀತತೆಗಳೆಲ್ಲಾ ಬರೇ ಸೋಗು ಎಂದೂ ಮಿ. ವಿಕ್ಫೀಲ್ಡರ ಮೇಲೆ ಏನೋ ಒಂದು ಬಲವಾದ ಮತ್ತು ಗುಪ್ತವಾದ ಹಿಡಿತ ಇವನಿಗೆ ಇದೆಯೆಂದೂ ನನಗೆ ತಿಳಿಯಿತು – ಹಾಗೆ ತಿಳಿಯುತ್ತಾ ಹೆದರಿದೆನು.

ಆ ರಾತ್ರಿ ಅವನು ನನ್ನ ಮನೆಯಲ್ಲೇ ಮಲಗಿದನು. ಕಪ್ಪು ಬಟ್ಟೆಯ ದುಸ್ತನ್ನು ತೊಟ್ಟಿದ್ದ ಉರೆಯ ದುಸ್ತನ್ನು ಕಳಚದೆ ಮಲಗಿ ನಿದ್ರಿಸುತ್ತಿದ್ದಾಗ ಒಂದು ಹೆಣದಂತೆಯೇ ತೋರುತ್ತಿದ್ದನು. ನನಗೆ ನಿದ್ರೆ ಬರದೆ ಕಷ್ಟಪಡುತ್ತಿದ್ದಾಗ ಉರೆಯ ನಿಜವಾಗಿಯೂ ಹೆಣವೇ ಆಗಿರಬಹುದೇ ಎಂದು ಆಗಿಂದಾಗ್ಗೆ ಅವನನ್ನು ನೋಡುತ್ತಿದ್ದೆ. ಆಗ ಉರೆಯ ಟಪಾಲು ಪೆಟ್ಟಿಗೆಯಂತೆ ಅರ್ಧ ತೆರೆದಿಟ್ಟ ಬಾಯಿಯಿಂದ ಉಸಿರೆಳೆದು ಮೂಗು ಗಂಟಲುಗಳಲ್ಲಿ ತೂರಿ ಒಳಬಿಡುವಾಗ ನೀರು ನಳಿಗೆಯಲ್ಲಿ ಹರಿದಂತೆ ಶಬ್ದ ಕೇಳಿಸುತ್ತಿತ್ತು.

ಉರೆಯ ಬೆಳಗ್ಗೆ ನಮ್ಮ ಮನೆಯಿಂದ ಹೊರ ಹೊರಟಾಗ ಭಯಂಕರವಾದ ಆ ವರೆಗಿನ ರಾತ್ರಿಯೂ ತೊಲಗಿತು. ನಾನು ಆ ದಿನ ವಕೀಲ್ ಆಫೀಸಿಗೆ ಹೋಗುವ ಮೊದಲು ಮನೆಯ ಎಲ್ಲಾ ಕಿಟಕಿಗಳನ್ನು ತೆರೆದಿಟ್ಟು, ಗಾಳಿ ಬೆಳಕು ಒಳನುಗ್ಗಿ ಉರೆಯನ ಎಲ್ಲಾ ವಿಧದ ಸೋಗು ಸಂಬಂಧಗಳನ್ನೂ ಉಚ್ಚಾಟನೆಯಾಗುವಂಥ ಏರ್ಪಾಡು ಮಾಡಿದ್ದೆನು.

(ಮುಂದುವರಿಯಲಿದೆ)