ಅಧ್ಯಾಯ ಅರವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತಾರನೇ ಕಂತು

ಇನ್ನು ಬರೆಯತೊಡಗಿದ ನನ್ನ ಜೀವನ ವೃತ್ತಾಂತವು, ಸಾಧಾರಣ, ಇಲ್ಲಿಗೆ ಮುಗಿಯುವುದು. ಇಲ್ಲೇ ನಡೆದುಹೋದ ಸಂಗತಿಗಳನ್ನು ಒಮ್ಮೆ ಹಿಂತಿರುಗಿ ನೋಡೋಣವೆಂದು ಮನಸ್ಸಾಗುತ್ತದೆ. ನನ್ನ ಈ ಜೀವನದ ಸಂಗಾತಿಯಾಗಿ ಏಗ್ನೆಸ್ಸಳು ನನ್ನ ಕೈ ಹಿಡಿದುಕೊಂಡು ಜತೆಯಲ್ಲೇ ಬರುತ್ತಿರುವಳು. ನನ್ನ ಮಕ್ಕಳು, ಸ್ನೇಹಿತರು, ಪರಿಚಿತರು, ನಮ್ಮ ಸುತ್ತಲೂ ಕಂಡುಬರುತ್ತಾರೆ. ಈ ಜನಸಮೂಹದಿಂದಲೂ ನನಗೆ ವಿಶೇಷ ಪರಿಚಯವಿಲ್ಲದ ಇತರರಿಂದಲೂ ನನ್ನನ್ನು ಕುರಿತಾಗಿ ಅವರು ಆಡುತ್ತಿರುವ ಪ್ರಶಂಸೆ, ಹಿತವಚನ ಮೊದಲಾದ ಮಾತುಗಳೂ ಕೇಳಿಬರುತ್ತಿವೆ.

ಜನಸಂದಣಿಯಲ್ಲಿ ಸ್ಪಷ್ಟವಾಗಿ ತೋರಿಬರುವ ಮುಖಗಳು ಕೆಲವಿವೆ. ಅವರೆಲ್ಲರನ್ನೂ ಒಂದಾವೃತ್ತಿಯಾದರೂ ನೋಡೋಣ. ಮೊದಲು ನನಗೆ ಕಾಣುವವಳು ನನ್ನ ಅತ್ತೆ – ಎಂಬತ್ತು ವರ್ಷ ಪ್ರಾಯ ಕಳೆದರೂ ನೆಟ್ಟಗೆ ನಿಂತು, ಚಳಿಯಲ್ಲೂ ಆರು ಮೈಲು ನಡೆದು ದಣಿಯದೆ, ಕನ್ನಡಕ ಧರಿಸಿರುವ ಅತ್ತೆ. ಅನಂತರ ಕಾಣುವವಳು – ಪೆಗಟಿ, ನನ್ನ ಬಾಲ್ಯದ ದಾದಿ. ನನಗೆ ನಡೆಯಲು ಕಲಿಸಿದಂತೆ ನನ್ನ ಕಿರಿಮಗುವಿಗೆ ಈಗ ಅವಳು ನಡೆಯಲು ಕಲಿಸುತ್ತಿದ್ದಾಳೆ. ನನ್ನ ಹಳೆ `ಮೊಸಳೆ ಪುಸ್ತಕ’ವನ್ನು ಕಾಪಾಡಿಕೊಂಡು ಬಂದಿದ್ದಾಳೆ ಪೆಗಟಿ – ಎಷ್ಟೊಂದು ಪ್ರೀತಿ!

ಸಂಜೆಯ ಹೊಂಬಣ್ಣದ ಬಿಸಿಲಿನಲ್ಲಿ ಆಡುವ ಮಕ್ಕಳ ಜತೆಯಲ್ಲಿ ಕಲೆತು ಬೆರೆತು, ಆಟವಾಡುವ ಆ ನರೆತ ತಲೆಗೂದಲಿನ ಮುದುಕ – ಗಾಳಿಪಟ ಬಿಟ್ಟುಕೊಂಡು ಮಕ್ಕಳಂತೆ ನಗುತ್ತಾನಷ್ಟೆ – ಅವನ್ಯಾರು? ಓಹೋ! ಅವರು ಮಿ. ಡಿಕ್ಕರು. ಅತ್ತೆಯಂಥ ಒಳ್ಳೆ ಜನರು ಬೇರೆ ಯಾರೂ ಇಲ್ಲವೆಂದು ಈಗಲೂ ಹೇಳಿ ಸಂತೋಷಿಸುತ್ತಾರೆ! ಆ ಹೂವಿನ ತೋಟದಲ್ಲಿ ಗಂಭೀರ ಮುಖವುಳ್ಳ, ಮನೋರೋಗದಿಂದ ಬಗ್ಗಿ ಮಂಕಾಗಿ ತೋರುವ ಓರ್ವ ವೃದ್ಧೆ ಮತ್ತೂ ಅವಳ ಸಮೀಪದಲ್ಲಿ ತುಟಿಗೆ ಅಡ್ಡವಾಗಿ ಗಾಯಗೊಂಡಿರುವ, ಈಗ ಕೃಶವಾಗಿರುತ್ತಾ ಪೂರ್ವದಲ್ಲಿ ತೇಜಸ್ವಿಯಾಗಿರಬೇಕಾಗಿದ್ದ ಹೆಂಗಸರು ಇರುವರಷ್ಟೆ – ಅವರ ಪರಿಚಯವಿದೆಯಲ್ಲಾ? ಪ್ರೇಮ ಭಂಗದಿಂದ ಕೃಶಳಾಗಿರುವ ಮಿಸ್ ಡಾರ್ಟಲ್ಲಳನ್ನೂ ಪುತ್ರ ಶೋಕದಿಂದ ಜೀವನ್ಮೃತಳಾಗಿರುವ ಮಿಸೆಸ್ ಸ್ಟೀಯರ್ಫೋರ್ತಳನ್ನೂ ಒಮ್ಮೆ ನೋಡಿರಿ!

ಜೂಲಿಯಾ ಮಿಲ್ಸಳನ್ನು ನೋಡಬೇಡವೇ? ಅವಳು ಮದುವೆಯಾಗಿ ಶ್ರೀಮಂತಿಕೆಯಿಂದ ಮೆರೆದು ನಲಿಯುತ್ತಿರುವಳು. ಮಿಸ್ ಮಿಲ್ಸಳು ಹೀಗಾಗುವಳೆಂದು ಯಾರೂ ಗ್ರಹಿಸಿರಲಿಲ್ಲ. ಮಿಸ್ ಮಿಲ್ಸಳು ಮೆರೆಯುವಾಗ ಅವಳ ಸುಖವಿಲಾಸಗಳಲ್ಲಿ ಭಾಗವಹಿಸಲು ಜಾಕ್ ಮಾಲ್ಡನ್ ಮತ್ತೂ `ಸಿಪಾಯಿ’ಯರು ಸೇರುತ್ತಿರುವರಲ್ಲವೇ! ಇವರಿಗೆ ಈಗ ಡಾಕ್ಟರ್ ಸ್ಟ್ರಾಂಗರಲ್ಲಿ ಮೊದಲಿನಷ್ಟು ಸಲಗೆ ತೋರುವುದಿಲ್ಲ. ಇತ್ತ ಡಾಕ್ಟರ್ ಸ್ಟ್ರಾಂಗರು ತಮ್ಮ ಡಿಕ್ಷನರಿ ಕೆಲಸದಲ್ಲಿ ಬಹು ಮುಂದರಿಸಿದ್ದಾರೆ. ಸಾಧಾರಣ `ಡಿ’ ಅಕ್ಷರದವರೆಗೆ ತಲುಪಿದ್ದಾರೆ. ಅವರ ಡಿಕ್ಷನರಿ ಕೆಲಸ, ಪ್ರೇಮದ ಪತ್ನಿ ಇವುಗಳಿಂದ ಅವರ ಸಂಸಾರ ಸುಖವಾಗಿ, ಸಂತೋಷದಿಂದ ಸಾಗುತ್ತಿದೆ. ಇನ್ನು ಕಾಣುವುದು ಯಾರನ್ನು? ನನ್ನ ಬಾಲ್ಯದ ಸ್ನೇಹಿತ ಟ್ರೇಡಲ್ಸನನ್ನು, ಅವನ ತಲೆ ಸಾಣೆ ಹೋಗದಿರುವಲ್ಲಿ ಎದ್ದು ನಿಲ್ಲುವ ಕೂದಲು ಮೊದಲಿನಂತೆಯೇ ಎದ್ದು ನಿಂತಿದೆ. ಅವನು ವಕೀಲ ವೃತ್ತಿಯಲ್ಲಿ ತುಂಬಾ ಹಣ ಸಂಪಾದಿಸುತ್ತಿದ್ದಾನೆ. ಮೇಜಿನ ಎದುರು ತುಂಬಾ ರಿಕಾರ್ಡು ಕಟ್ಟುಗಳನ್ನಿಟ್ಟುಕೊಂಡು ಸಂತೋಷ ಸಂತೃಪ್ತಿಯ ಮೂರ್ತಿಯಾಗಿ ಕುಳಿತಿರುವ ಟ್ರೇಡಲ್ಸನನ್ನು ನೋಡಿದಷ್ಟು ಸಾಲದೆನಿಸುತ್ತದೆ.

ಟ್ರೇಡಲ್ಸನ ಮಾವನ ಮನೆಯವರಲ್ಲಿ ಕೆಲವರಿಗೆ ಮದುವೆಯಾಗಿದೆ; ಕೆಲವರು ಶಾಲೆಯಲ್ಲಿ ಓದುತ್ತಾರೆ. ಅವರೆಲ್ಲರ ವಿದ್ಯಕ್ಕೆ ಸಂಬಂಧಪಟ್ಟ ಖರ್ಚನ್ನು ಟ್ರೇಡಲ್ಸನೇ ಮಾಡುತ್ತಿದ್ದಾನೆ. ಮದುವೆಯಾಗದ ಹೆಣ್ಣು ಮಕ್ಕಳು ತಂದೆಯೊಡನೆಯೂ ಟ್ರೇಡಲ್ಸನೊಡನೆಯೂ ಇರುತ್ತಾರೆ. ಟ್ರೇಡಲ್ಸನು ಈಗ ವಾಸವಾಗಿರುವ ಮನೆ ಹೊಸತು. ಅವನೇ ಕ್ರಯಕ್ಕೆ ಪಡಕೊಂಡ ಮನೆ. ಹಿಂದೆ ಸೋಫಿಯೂ ಟ್ರೇಡಲ್ಸನೂ ನೋಡಿ ಸಂತೋಷಪಟ್ಟುಕೊಂಡು ಬಂದಿದ್ದ ಮನೆಯನ್ನೇ ಈಗ ಕ್ರಯಕ್ಕೆ ಪಡೆದಿದ್ದಾನೆ. ಈ ಮನೆ ದೊಡ್ಡದಾಗಿದ್ದು ಸೋಫಿಯ ತಂಗಿಯರು ಬಂದಾಗ ಇರಲು ಸಾಕಷ್ಟು ಸೊಗಸಾದ ಸ್ಠಳ ಇದರಲ್ಲಿದೆ. ಸೋಫಿಯ ಸುಂದರಿಯಾದ ಅಕ್ಕ ಒಬ್ಬ ಕ್ರೂರಿ, ದುರಾಚಾರಿಯನ್ನು ಮದುವೆಯಾಗಿ, ಆ ಗಂಡನೂ ಸತ್ತು, ಟ್ರೇಡಲ್ಸನ ಮನೆಯಲ್ಲೇ ಇದ್ದಾಳೆ.

ಯಾವುದು ಏನಿದ್ದರೂ ತೃಪ್ತಿ ಸಮಾಧಾನಗಳ ಮತ್ತೂ ಸರಳ ಸ್ವಭಾವದ ಟ್ರೇಡಲ್ಸನು ಅಷ್ಟೊಂದು ನಂಟರಿಷ್ಟರ ಭಾರವನ್ನು ಸಂತೋಷದಿಂದ ಹೊತ್ತು ಬದುಕುತ್ತಿದ್ದಾನೆ. ಅವನಿಗೆ ಸಂಪೂರ್ಣ ಒಪ್ಪುವ, ಅವನ ಮೆಚ್ಚಿಗೆಯ ಸೋಫಿಯು ಈ ಸದ್ಗುಣಗಳಲ್ಲಿ ಟ್ರೇಡಲ್ಸನನ್ನೇ ಮೀರಿಸುವಂತಿದ್ದಾಳೆ. ಈ ವರೆಗೆ ಜತೆಯಲ್ಲಿ ಬಂದಿರುವ ಜನಸ್ತೋಮವನ್ನು ಮರೆತು ಚರಿತ್ರೆಯನ್ನು ಮುಗಿಸುವುದು ಸ್ವಲ್ಪ ಬೇಸರದ ಸಂಗತಿ. ಆ ಎಲ್ಲಾ ಮುಖಗಳೂ ಮಾಯವಾದರೂ ಒಂದು ಮುಖ ಮಾತ್ರ ಸ್ಥಿರವಾಗಿ ನಿಂತು ಅವೆಲ್ಲವುಗಳ ಮೇಲೂ ನಾನು ನೋಡಬೇಕಾದ ಎಲ್ಲಾ ವಸ್ತು, ವಿಷಯಗಳ ಮೇಲೂ ಒಂದು ಜ್ಯೋತಿಯಂತೆ ತನ್ನ ಪ್ರಭೆಯನ್ನು ಬೀರುತ್ತಿದೆ. ನಾನು ನೋಡುವುದೇ ಆ ಬೆಳಕಿನಿಂದ. ಈ ತೇಜೋಮಯ ಮುಖವನ್ನೊಮ್ಮೆ ನೋಡಿ ಹಿಡಿದಿರುವ ಕಾರ್ಯವನ್ನು ಮುಗಿಸುವೆನು.

ರಾತ್ರಿ ಅಪಾರವಾಯಿತು – ದೀಪವೂ ಮಸಕಾಗುತ್ತಾ ಬಂದಿದೆ. ನನ್ನ ಜೀವನದ ಮಾರ್ಗದರ್ಶಕಳಾಗಿದ್ದ – ಯಾರು ನನ್ನ ಜತೆಯಲ್ಲಿ ಈವರೆಗೆ ಇಲ್ಲದಿರುತ್ತಿದ್ದರೆ ನಾನೊಬ್ಬ ಅನಾಮಧೇಯನಾಗಿ ಮಾತ್ರ ಉಳಿಯುತ್ತಿದ್ದೆನೋ – ಅಂಥವಳ, ಪ್ರಿಯ ಸಾನ್ನಿಧ್ಯ ಈಗಲೂ ನನ್ನ ಬಳಿ ಇದೆ. ಏಗ್ನೆಸ್, ಪ್ರಿಯತಮಳಾದ ಏಗ್ನೆಸ್, ಈ ಜೀವನ ವೃತ್ತಾಂತದ ದೇಶ, ಕಾಲ, ಜನ ಮಾಯವಾದಂತೆಯೇ ನಾನೂ ಮಾಯವಾಗುವ – ನನ್ನ ಬದುಕಿರೋಣದ ಅಂತ್ಯದಲ್ಲಿ ಪ್ರಪಂಚದ ಜ್ಞಾನವೇ ಮಾಯವಾಗುವ – ಸಮಯದಲ್ಲಿ ನನ್ನ ಕಣ್ಣೆದುರಿನ ಕೊನೆಯ ಪ್ರಭೆಯಾಗಿ ನಿಂತಿರಮ್ಮಾ – ಅಗ ಸ್ವರ್ಗದ ಕಡೆಗೆ ಕೈತೋರಿಸುವ ದಿವ್ಯ ಜ್ಯೋತಿಯಾಗಿ ಬೆಳಗಮ್ಮಾ!

(ಡೇವಿಡ್ ಕಾಪರ್ಫೀಲ್ಡನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ, ಮುಗಿಯಿತು)

ಡೇವಿಡ್ ಕಾಪರ್ ಫೀಲ್ಡ್ ಕೇಳು-ಪುಸ್ತಕ ಕೇಳಲು ಇಲ್ಲಿ ಚಿಟಿಕೆ ಹೊಡೆಯಿರಿ.

ಡೇವಿಡ್ ಕಾಪರ್ ಫೀಲ್ಡ್ ಇ-ಪುಸ್ತಕ ಓದಲು ಇಲ್ಲಿ ನೋಡಿ… https://issuu.com/abhayasimha/docs/david_copperfied