(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ)

ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ “ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆ” ನನ್ನ ಸಮಾಧಾನ. ಐದೂಐವತ್ತಕ್ಕೆ ನಾನೂ ಸೈಕಲ್ ಏರಿದೆ. ದಾರಿಯೆಲ್ಲ ಮಳೆ ಹೊಯ್ದು ಚೊಕ್ಕ ತೊಳೆದಂತಿತ್ತು. ಸೂರ್ಯಮೇಶ್ಟ್ರು ಕಣ್ಣು ಕೆಕ್ಕರಿಸುವಾಗ, ಪಡ್ಡೆ ಮೋಡಗಳು ಅಡಗುಮೂಲೆಗೆ ಧಾವಿಸಿದ್ದವು. ಆದರೆ ಉಡುಪಿ – ಮಂಗಳೂರು ಹೆದ್ದಾರಿ ಇಷ್ಟು ಸರಳವಾಗಿರಲಿಲ್ಲ. ಅಲ್ಲಿ ಚತುಷ್ಚಕ್ರ (ಮತ್ತು ಅದಕ್ಕೂ ಮೀರಿದವು!) ವಾಹನಗಳಿಗೆ ಹಾವುನಡೆ ಅಭ್ಯಸಿಸಲು ಆಚೆಗೂ ಈಚೆಗೂ ಕೈಕಂಬ ಬದಲಿಸುತ್ತಲೇ ಇರುತ್ತಾರೆ, ಜಲಕ್ರೀಡೆಯಾಡಲು ಅಸಂಖ್ಯ ಕೊಳಗಳನ್ನೂ ಮಾಡಿದ್ದಾರೆ. ಹೀಗಾಗಿ ಅದರಲ್ಲಿ ಸುರತ್ಕಲ್ ಸಮೀಪದಿಂದ, ಅಂದರೆ ಸುಮಾರು ಹನ್ನೆರಡು ಕಿಮೀ ಸೈಕಲ್ ತುಳಿಯಬೇಕಾದ ಅಭಿಗೆ, ಮಳೆ ಬಿಟ್ಟರೂ ಇರಿಚಲು ಬಿಡದ ಕಾಟ! ಆದರೂ ಆರು ಕಳೆದು ಎರಡೋ ಮೂರೋ ಮಿನಿಟಿನಲ್ಲಿ ಅವನು ನಂತೂರು ತಲಪಿದಾಗ, ನಮ್ಮ ಬಿಸಿಲೆ ಮಹಾಯಾನಕ್ಕೆ ಜೀವ ಬಂದಿತ್ತು.

ಮಿತ್ರ ಬಳಗದ ಸೈಕಲ್ ಸರ್ಕೀಟ್ ಕಾಟ ತಡೆಯದೆ ಗೆಳೆಯ ವೇಣುವಿನೋದಿಗೆ ಕಟ್ಟಿದ್ದ ಸೈಕಲ್ ಬಸಿರು, ಅಂದು (ಸುಮಾರು ಎಂಟು ತಿಂಗಳ ಹಿಂದಿನ ಮಾತು) ಅವಧಿ-ಪೂರ್ವ ಹೆರಿಗೆಯಾಗಿತ್ತು!! ಅವರು ಸುರತ್ಕಲ್ಲಿನವರು. ಮೊದಲ ಸರ್ಕೀಟಿಗೆ ನನ್ನ ಜತೆ ಬೇಕು ಎಂದರು. ಕೂಳೂರು ಸಂಧಿಸ್ಥಾನ ಮಾಡಿಕೊಂಡಿದ್ದೆವು. ಅಲ್ಲಿಗೆ ಅಳಿಯನ ಜತೆ ಗಿಳಿಯನಂತೆ, `ವೇಣಣ್ಣ’ನ ಜತೆ ಕಾಣಿಸಿದ ನೆರೆಹೊರೆಯ `ತಮ್ಮ’, ಈ ಹುಡುಗ – ಅಭಿಜಿತ್ ನಾರಾಯಣ ಭಟ್. “ಅಷ್ಟೆಲ್ಲಾ ದೊಡ್ಡ ಹೆಸರು ಕಷ್ಟಾಂತ ನಾನೇ ಮಾಡಿಕೊಂಡದ್ದು – ಅಭಿಭಟ್” ಎಂದು ಈತ ಮುಖ ತುಂಬಾ ನಗೆ ಕೊಡುವಾಗ ಥೇಟ್ ಶಾಲಾಬಾಲಕ! ಆದರೆ ವಾಸ್ತವದಲ್ಲಿ, ಎಂಜಿನಿಯರಿಂಗ್ ಕಲಿಕೆ ಪೂರ್ಣ ಮಾಡಿ, ಇನ್ಫೋಸಿಸ್ಸಿನಲ್ಲಿ ಅರಂಗೇಟ್ರಂಗೆ ಆಗಸ್ಟ್ ಮುಹೂರ್ತ ಕಾದಿದ್ದ. ಅಂದು ಗೆಳೆಯನ ಎರವಲು ಸೈಕಲ್ಲೇರಿ ಬಂದಿದ್ದ. ನಮ್ಮೊಡನೆ ಉತ್ಸಾಹವೇ ಮೈವೆತ್ತಂತೆ ಪೇಜಾವರ, ಜೋಕಟ್ಟೆಗಾಗಿ ಪೊರ್ಕೋಡಿ ಚಡಾವೇರಿ, ಬಜ್ಪೆಯಿಂದ ಮಳವೂರು ಕೊಳ್ಳಕ್ಕೆ ಜಾರಿ ಮತ್ತೆ ಕಾವೂರು ಪದವಿನಲ್ಲಿ ಕಟ್ಟಿದ್ದ ದಮ್ಮು ಬಿಟ್ಟು ಸರ್ಕೀಟ್ ಮುಗಿಸುವುದರೊಳಗೆ ಅಭಿ `ಅಪ್ಪನಿಗೆ ಇಪ್ಪತ್ತಾರು ಸಾವಿರದ ಬಿಲ್ ಮುಟ್ಟಿಸುವ’ ಸಂಕಲ್ಪ ಮಾಡಿದ್ದ! ಹಾಗೆ ಬಂದ ಹೊಸ ಸೈಕಲ್ ಮೇಲೆ ಪುಂಡುಗುದುರೆ ಕಡಿವಾಣ ಕಳಚಿಕೊಂಡಂತೆ ಸ್ವತಂತ್ರವಾಗಿ ಬೇಕಾದ್ದು ಹಾರಾಡಿ, ಈಗ ಗಟ್ಟಿಯಾಗಿದ್ದಾನೆ. ನಾನು “ಬಿಸಿಲೆ” ಎಂದಾಗ ಹವಾಮಾನ, ಹೋಗಿಬರುವ ಏರು ದೂರ ಬಿಡಿ, ಕನಿಷ್ಠ ಸ್ಥಳದ ಭೌಗೋಳಿಕ ಪರಿಜ್ಞಾನವೂ ಇಲ್ಲದೇ “ಜೈ” (ಫೇಸ್ ಬುಕ್ಕಿನ `ಲೈಕ್’ಗೆ ಪರ್ಯಾಯ ಪದ!) ಎಂದು ಬಿಟ್ಟಿದ್ದ. ಆದರೆ ಆತ `ಪರಮೇಶ್ವರನ್’ಗಾಗಿ (ಪರ್ಮಿಶನ್) ಅಮ್ಮನ ಎದುರು `ತಪಸ್ಸು’ ಮಾಡಲು ತೊಡಗಿದಾಗ ಸಹಜವಾಗಿ ಗಡಿಬಿಡಿ, ಗಾಬರಿ. ಯಾವತ್ತೂ ಕವುಚಿಕೊಳ್ಳಬಹುದಾದ ಮಳೆಗಾಲ, ಒಂದು ದಿಕ್ಕಿಗೆ ನೂರಾ ಇಪ್ಪತ್ನಾಲ್ಕು ಕಿಮೀ ಸವಾರಿ, ಅದರಲ್ಲೂ ಪಶ್ಚಿಮ ಘಟ್ಟವನ್ನೇ ಪೂರ್ಣ ಏರುವ (೨೪ಕಿಮೀ ಉದ್ದದ) ಕಚ್ಚಾದಾರಿ, ಇಂಬುಳದಿಂದ ಆನೆಯವರೆಗೆ ಏನೂ ಅಟಕಾಯಿಸಬಹುದಾದ ಕಗ್ಗಾಡು, ಯಾರನ್ನೂ ಹೆದರಿಸುವಂತದ್ದೇ. ಆದರೆ “ಕೊಟ್ಟ ಮಾತಿಗೆ ತಪ್ಪಲಾರೆನು” ಎಂದು ಕರು ಪುಣ್ಯಕೋಟಿಗೆ ಮಾತು ತಿರುಗಿಸಿತ್ತು. ಕರಾರುಬದ್ಧವಾದ ಅನುಮತಿ ಪತ್ರ ಬಿಡುಗಡೆಯಾಗಿತ್ತು: “ಉಪ್ಪಿನಂಗಡಿಯವರೆಗೆ ಮಾತ್ರ ಹೋಗಿ, ರಾತ್ರಿಗೆ ಪುತ್ತೂರಿನ ಸಂಬಂಧಿಕರಲ್ಲಿಯೇ ಉಳಿಯತಕ್ಕದ್ದು.

ಮಾರಣೇ ದಿನ ಬೇಕಾದರೆ, ಬಿಸಿಲೆಯಿಂದ ಮರಳುವ ಗೆಳೆಯರನ್ನು ಕಾದು, ಸೇರಿಕೊಂಡು ವಾಪಾಸು ಬರಬಹುದು.” ಆದರೆ ನಾವಿಬ್ಬರು ಪೆಡಲುತ್ತ, ಮುಂದೆ ಉಸಿರು ಹೆಕ್ಕಲು ನಿಂತಲ್ಲೆಲ್ಲಾ ಈತ ಚರವಾಣಿಯಲ್ಲಿ ಅಮ್ಮನ ತಲೆ ತಿಂದು, ಪೂರ್ಣ ಸಾಹಸಕ್ಕೆ ಅನುಮತಿ ಗಿಟ್ಟಿಸಿಕೊಂಡ. ಮತ್ತೆ ಪುತ್ತೂರಿನ ಅಣ್ಣನಿಗೂ ಚರವಾಣಿಯಲ್ಲಿ ಪೂಸಿ ಹೊಡೆದು, ರಾತ್ರಿ ವಾಸಕ್ಕೆ ಬೇಕಾದ ಕನಿಷ್ಠ ಬಟ್ಟೆ ಬರಿಯನ್ನು ದಾರಿಯಲ್ಲಿ ತಂದೊಪ್ಪಿಸಲು ನಿಶ್ಚೈಸಿಕೊಂಡ.

ದಾರಿ ಕಳೆಯುತ್ತಿದ್ದಂತೆ ನನ್ನ ನಿತ್ಯದ ಸೈಕಲ್ ಸರ್ಕೀಟಿನಲ್ಲಿ ಹತ್ತೆಂಟು ಬಾರಿ ಪಟ್ಟಿ ಮಾಡಿದ ಅವೇ ಹೆಸರುಗಳು, ಅಷ್ಟೇ ಅಲ್ಲ ಬದಲುತ್ತಿರುವ ಚಹರೆಗಳು ಹಿಂದೆ ಬೀಳುತ್ತಲೇ ಇದ್ದವು. ಪಡೀಲಿನ ಅಪೂರ್ಣ ರೈಲ್ವೇ ಮೇಲ್ಸೇತು, ಮಂಗಳೂರಿನ ಮುಖ್ಯ ಜಲನಾಳವೇ ಮೊನ್ನೆ ಮೊನ್ನೆ ಸ್ಫೋಟಿಸಿದ್ದ ಕಣ್ಣೂರು, ದೇವಂದಬೆಟ್ಟದ ಕಡವಿನ ಕಟ್ಟೇ – ಅರ್ಕುಳ, (ಇವಕ್ಕೆಲ್ಲ ವಿವರಣೆಗಳಿಗೆ ಫೇಸ್ ಬುಕ್ಕಿನ ನನ್ನ ಟೈಮ್ ಲೈನಿನ ಹಳೆಯ ನಮೂದುಗಳನ್ನು ನೋಡಬಹುದು) ಮಂಗಳೂರಿಗೆ ಉರಗೋದ್ಯಾನ ಕೊಡುವಲ್ಲಿ ಮಹತ್ತರವಾದ ಕೊಡುಗೆಯಿತ್ತ ರೆ.ಫಾ. ಓಡ್ರಿಕ್ಕರ ಫರಂಗಿಪೇಟೆ, ಎಲ್ಲಿನ ಪೊಳಲಿ ಎಲ್ಲಿನ ದ್ವಾರ – ಬೆಂಜನಪದವಿನ ಕವಲು, ಬೇಸಗೆಯಿಂದ ಬೇಸಗೆಗೆ ವಾಯ್ದೆ ಹೇಳುವ ನವ-ತುಂಬೆ ಅಣೆಕಟ್ಟು, ಬ್ರಹ್ಮರಕೂಟ್ಲಿನಲ್ಲಿ ಗಂಟುಬಿದ್ದ ಚತುಷ್ಪಥ ಇತ್ಯಾದಿ ಹೆಸರಿಸಲು ಹೊರಟರೆ ಮುಗಿಯದು ಪಟ್ಟಿ. ಏಳು ಗಂಟೆಯೊಳಗೇ ಜೋಡುಮಾರ್ಗ ತಲಪಿ ಐದು ಮಿನಿಟುಗಳ ಮೊದಲ ವಿಶ್ರಾಂತಿಪಡೆದೆವು. ಚರವಾಣಿ ಚರಚರೆಯ ನಡುವೆಯೂ ಅಭಿ ಅನಾಮಿಕ ಕಿಟ್ಟಿಗಷ್ಟು ಕಿಲಿಕಿಲಿ ಮಾಡಿ ರಂಜಿಸಿದ ಮೇಲೆ ಮುಂದುವರಿದೆವು.

ಜೋಡುಮಾರ್ಗದಲ್ಲಿ ರೈಲ್ವೇಗೆ ಎರಡನೆಯದಾಗಿ ಬಂದ ಹೊಸ ಮೇಲ್ಸಂಕ ದಾಟಿ, ನೇತ್ರಾವತಿ ಸೇತಿನ ಮೇಲೆ ಐದು ಮಿನಿಟು ತಂಗಿದೆವು. ಪಾಣೆಮಂಗಳೂರು ಸೇತುವೆ ಎಂದೇ ಖ್ಯಾತಿ ಪಡೆದ ಬ್ರಿಟಿಷ್ ಯುಗದ ಉಕ್ಕಿನ ರಚನೆ ಸಪುರವಾಯ್ತು, ಮುದಿಯಾಯ್ತು, ಬದಲಿಯಾಗಬೇಕು ಎಂದು ಹೇಳುವುದರಲ್ಲಿ ದಶಕಗಳನ್ನೇ ಕಳೆದಿದ್ದೆವು. ಅಂತೂ ಈ ಸೇತುವೆ ಬಂತೆನ್ನುವ ಕಾಲಕ್ಕೆ, ರಸ್ತೆ ಚತುಷ್ಪಥವಾಗಿ ವಿಸ್ತರಿಸಿ, ಇದನ್ನು ಒಂಟಿ ಕಂಟಕ ಎನ್ನುವಂತಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಳೆಯ ನಿರೀಕ್ಷೆಯಲ್ಲಿ ತುಂಬೆ ಅಣೆಕಟ್ಟೆಯ ದ್ವಾರಗಳೆಲ್ಲ ಮುಕ್ತವಾಗಿರುವುದರಿಂದ ನೇತ್ರಾವತಿ ಬೇಸಗೆಯಷ್ಟೂ ಮೈ ತುಂಬಿಕೊಂಡಿರಲಿಲ್ಲ. ಘಟ್ಟದಲ್ಲಾದರೂ ಮಳೆ ಉತ್ತಮವಿರಬಹುದೆಂಬ ಭರವಸೆ ಹುಟ್ಟಿಸುವಂತೆ ನೀರಿನಲ್ಲಿ ಕೆಂಬಣ್ಣವೂ ಕಾಣಿಸಲಿಲ್ಲ. ಇದು ನಮ್ಮ ಯಾನದ ಬಗ್ಗೆ ನಿಶ್ಚಿಂತೆ ಮೂಡಿಸಿದರೂ ಒಟ್ಟು ಸಾಮಾಜಿಕ ಭವಿಷ್ಯದ ಬಗ್ಗೆ ಸಮಾಧಾನವನ್ನು ತರುವಂತಿರಲಿಲ್ಲ.

ಪುತ್ತೂರು ಮಾರ್ಗದ ಏಕೈಕ ಘನ ಏರು ನರಸಿಂಹ ಪರ್ವತವನ್ನು ಕಳೆದು, ರಿಂಜಿಂ ಕಾಫಿ ಅಥವಾ ಕೇಟೀಖ್ಯಾತ ಕಲ್ಲಡ್ಕ ದಾಟಿ, ಮಾಣಿಯಲ್ಲಿ ಎಡಗವಲು ಹಿಡಿದು ಪೇರಮೊಗ್ರಿನವರೆಗೂ ನಿರಂತರ ಪೆಡಲಿ, ತುಸು ವಿಶ್ರಮಿಸಿದೆವು. ಈ ಹಳ್ಳಿ ಅಭಿಯ ಅಜ್ಜನ ಊರಂತೆ. ಅದಕ್ಕೂ ಮುಖ್ಯವಾಗಿ, ಮೊದಲೇ ಹೇಳಿದಂತೆ ಆತನ ಬಿಸಿಲೆ ಅನುಮತಿಯ ವಿಸ್ತರಣಾ ನೆಲೆ. ನಾವು ಐದು ಮಿನಿಟು ಕಾಯುವುದರೊಳಗೆ ಆತನ ಅಣ್ಣ – ಮುಕುಂದ ಶರ್ಮ, ಬೈಕಿನಲ್ಲಿ ಬಂದು ನಮ್ಮ ಮುಂದುವರಿಕೆಯನ್ನು ಸುಗಮಗೊಳಿಸಿದರು. ಮತ್ತಿನ ದಾರಿ ಸಮೀಪಿಸುತ್ತಿದ್ದ ಘಟ್ಟ ಮತ್ತು ನೇತ್ರಾವತಿ ಕಣಿವೆಯನ್ನು ನೆನಪಿಸುವಂತೆ ಹೆಚ್ಚಿನ ಇಳಿಜಾರುಗಳನ್ನೇ ಕೊಟ್ಟು ನಮ್ಮನ್ನು ರಂಜಿಸಿತು. ಹಾಗಾಗಿ ಪೂರ್ವ ನಿಗದಿತ ವೇಳಾಪಟ್ಟಿಗೆ ತುಸು ಬೇಗವೇ ಉಪ್ಪಿನಂಗಡಿ ಪೇಟೆಯ ದ್ವಾರದಂತೇ ಇರುವ ಮಹಾಸೇತುವೆತ್ರಯವನ್ನು ಮುಟ್ಟಿದ್ದೆವು. ಇಲ್ಲಿ ದಕ್ಷಿಣದಿಂದ ಬರುವ ಕುಮಾರಧಾರಾ ನದಿ, ಮೊದಲು ಸುದೂರದಲ್ಲಿ ರೈಲ್ವೇ, ನಾವು ನಿಂತ ಹೊಸತು, ಕೊನೆಯಲ್ಲಿ ಪಕ್ಕದಲ್ಲೇ ಸುಮಾರು ಎರಡಾಳು ತಗ್ಗಿನಲ್ಲಿರುವ ಹಳೆಯ ರಸ್ತೆಸೇತುಗಳಡಿಯಲ್ಲಿ ಹರಿದಿತ್ತು. ಋತುಮಾನದ ಅಬ್ಬರಗಳೇನೂ ಇರಲಿಲ್ಲ. ಅದು ಅನತಿ ದೂರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಪಾತ್ರೆ ರೂಢಿಸಿಕೊಂಡ ನೇತ್ರಾವತಿಯನ್ನು ಸಂಗಮಿಸುತ್ತದೆ. ನಾವು ಐದು ಮಿನಿಟು ಅಲ್ಲಿ ಕಳೆದು, ಹೆದ್ದಾರಿಯಲ್ಲೇ ಮುಂದುವರಿದೆವು. ಉಪ್ಪಿನಂಗಡಿ ಹೊರವಲಯದ ಹೋಟೆಲ್ ಆದಿತ್ಯದಲ್ಲಿ ಲಘೂಪಹಾರಕ್ಕೆ ನಿಂತೆವು. ಪೂರ್ವ ನಿಶ್ಚಯದಂತೆ ಅದು ನಮ್ಮ ಮಿತ್ರ ಸಂಗಮಕ್ಕೂ ತಾಣವಾಗಿತ್ತು.

ನಾವತ್ತ ಮಂಗಳೂರು ಬಿಟ್ಟ ಸಮಯಕ್ಕೆ ಸರಿಯಾಗಿ ಡಾ| ಜಗನ್ನಾಥ ರೈ, ಮೂಡಬಿದ್ರೆ ಬಿಟ್ಟಿದ್ದರು. ಅಲ್ಲಿಂದ ವೇಣೂರು, ಗುರುವಾಯನಕೆರೆಗಾಗಿ ಉಪ್ಪಿನಂಗಡಿಗೆ ಬರುವುದನ್ನು ಕಿಮೀ ಲೆಕ್ಕದಲ್ಲಿ ಅಳೆದರೆ ಮಂಗಳೂರು ದಾರಿಗಿಂತ ನಾಲ್ಕೈದು ಕಿಮೀಯಷ್ಟೆ ಹೆಚ್ಚು. ಆದರೆ ಬೆಟ್ಟದ ತಪ್ಪಲಿನ ಮತ್ತು ಒಳನಾಡಿನ ದಾರಿಯಾದ್ದರಿಂದ ಏರು ತಗ್ಗು ಮಾತ್ರ ವಿಪರೀತ. ಆದರೂ ನಾವು ಬನ್ಸ್ ಗಿಡಿದು, ಕಾಫಿ ಎರೆಯುವುದರೊಳಗೆ ರೈಗಳು ಬಂದು ಸೇರಿದ್ದರು.

ಪುರಿಯ ಜಗನ್ನಾಥನ ಮಹಾರಥ ಕಂಡು ಬೆರಗುವಟ್ಟ ಇಂಗ್ಲಿಷ್ ಭಾಷೆ ಮಹಾಕಾಯಕ್ಕೆ ಪರ್ಯಾಯವಾಗಿ ಜಗ್ಗರ್ನಾಟ್ (Juggernaut) ಶಬ್ದವನ್ನೇ ತನ್ನ ಕೋಶಕ್ಕೆ ಸೇರಿಸಿಕೊಂಡಿದೆ. ಅದನ್ನು ಅನ್ವರ್ಥವಾಗಿಸುವಂತೆ ತನ್ನ ಐವತ್ತೇಳರ ಎಳೆಹರಯದಲ್ಲೂ ಮೂಡಬಿದ್ರೆಯ ಸರ್ಕಾರೀ ಪಶುವೈದ್ಯ ವೃತ್ತಿಯ ಬಿಡುವಿನಲ್ಲೇ ಸೈಕಲ್ಲೇರಿ ಮಹಾಕಾಯಕಕ್ಕೆ ಇಳಿಯುವ ಅಪೂರ್ವ ವ್ಯಕ್ತಿ ಜಗನ್ನಾಥ ರೈ. ಇವರಿಗೆ ಯಾವುದೇ ಸ್ಪರ್ಧೆ, ಪ್ರಶಸ್ತಿಗಳ ಹಂಗಿಲ್ಲ – ಸೈಕ್ಲಿಂಗ್ ಸ್ವಾಂತ ಸುಖಾಯ. ಎಲ್ಲರಂತೆ ನೆಚ್ಚಿನ ಕುಟುಂಬ, ಬೈಕು, ಕಾರು ಇದ್ದರೂ ಉತ್ತಮ ವಿದೇಶೀ ಸೈಕಲ್, ಅದಕ್ಕೆ ಪೂರಕ ದಿರುಸು, ಸಲಕರಣೆಗಳೆಲ್ಲವನ್ನೂ ಸಂಗ್ರಹಿಸಿ, ಬಳಕೆಯಲ್ಲೂ ಪಳಗಿಸಿದ್ದಾರೆ ರೈಗಳು. ಆಪ್ತ ಮಿತ್ರರ್ಯಾರಾದರೂ ಬಂದರೆ, ಇವರು ಬೈಕೋ ಕಾರಿಗೋ ಏರಿಸಿಕೊಂಡು ಐದಾರು ಕಿಮೀ ದೂರದ ಕೆಸರಗದ್ದೆಯ ಅಪೂರ್ವ-ರುಚಿಯ ಸರಳ ಹೋಟೆಲಿಗೆ ಒಯ್ದು ಗರಿಗರಿ ದೋಸೆ ತಿನ್ನಿಸುತ್ತಾರೆ. ಸ್ವಂತಕ್ಕೆ ಒಮ್ಮೊಮ್ಮೆ, ಅಷ್ಟೇ ಸಹಜವಾಗಿ ಸೈಕಲ್ಲೇರಿ ಒಂಟಿಯಾಗಿ ಕಾರ್ಕಳ, ಬಜಗೋಳಿ, ಮಾಳ, ಭಗವತಿ ಘಾಟಿಯಾಗಿ ದ.ಕ. ಗಡಿ ಕಳೆದು, ಕೆರೆಕಟ್ಟೆಯ (ಕೇವಲ ಐವತ್ತು ಕಿಮೀ ಅಂತರ, ಅದರಲ್ಲೂ ಶುದ್ಧ ಏರುದಾರಿ ಸುಮಾರು ಹದಿನೈದು ಕಿಮೀ!) ಇನ್ನೊಂದೇ ಹಳ್ಳಿ ಹೋಟೆಲಿನ ತಿಂಡಿಯ ಘಮ ಆಸ್ವಾದಿಸುತ್ತಾರೆ. ಹಾಗೆಂದು ಇದನ್ನು (ನನ್ನಂತೆ) ಸೈಕಲ್ ಸರ್ಕೀಟೆಂದು ಜಾಹೀರುಪಡಿಸುವುದು ಬಿಡಿ, ಮನೆಯವರಿಗೂ ಅರಿವಾಗದಂತೆ ತಣ್ಣಗೆ ಮಧ್ಯಾಹ್ನದೂಟಕ್ಕೆ ಮನೆಯಲ್ಲಿ ಹಾಜರಿರುತ್ತಾರೆ. ಇಷ್ಟಾಗಿ ಈ ಪುಣ್ಯಾತ್ಮ ಕೋಳಿ, ಕುರಿ ಹೊಡೆದು ಶಕ್ತಿ ಸಂಚಯಿಸದ ವೀಗನ್! (ಪ್ರಾಣಿ ಉತ್ಪನ್ನಗಳನ್ನೇ ನಿರಾಕರಿಸುವ ಕಡು ಸಸ್ಯಾಹಾರಿ!!) ಮಂಗಳೂರು ಸೈಕಲ್ಲಿಗರ ಸಂಘದ ದೀರ್ಘ ಓಟಕ್ಕೆ ರೈ(ಟ್), ಪೆಟ್ರೋಲ್ ಉಳಿಸಿ ಬೆಂಗಳೂರು ಮಹಾಯಾನಕ್ಕೆ ರೈ(ಟ್), ಕೊನೆಗೆ ಕಾಡು-ಕಚ್ಚಾ ಮಾರ್ಗದ ಬಿಸಿಲೆಯೋಟಕ್ಕೂ ರೈ(ಟ್) ಎಂದೇ ಹೇಳಿದ್ದರು ಜಗನ್ನಾಥ ರೈ! [ಈ ಲೇಖನ ಪ್ರಕಟವಾಗುವ ಕಾಲಕ್ಕೆ, ಅಂದರೆ ಬಿಸಿಲೆ ಸೈಕಲ್ ಮಹಾಯಾನ ಕಳೆದು ಒಂದೇ ವಾರದಲ್ಲಿ – ಜುಲೈ ೧೧,೧೨ರಂದು ರೈಗಳು ಇನ್ನು ಕೆಲವು ಮಿತ್ರರೊಡನೆ ಮೂಡಬಿದ್ರೆ-ಮಡಿಕೇರಿ ಮಹಾಯಾನ ಮಾಡಿ ಬಂದಿದ್ದಾರೆ. ಅದರಲ್ಲಿ ಸುಳ್ಯ-ಪಣತ್ತೂರು-ಭಾಗಮಂಡಲ ಮಾರ್ಗಕ್ರಮಣವಂತೂ ನಾನು ಕೇಳಿಯೇ ದಂಗಾಗಿ ಹೋದೆ. ಅದರ ವಿವರಗಳನ್ನು ಸ್ವತಃ ರೈಗಳಿಗೇ ಲೇಖನ ಮಾಡಿಕೊಡಲು ಕೇಳಿಕೊಂಡಿದ್ದೇನೆ.]

ಬಿಸಿಲೆ ಸೈಕಲ್ ಸವಾರಿ ನಾನು ಕೆಲವು ತಿಂಗಳ ಹಿಂದೆಯೇ ನಿರ್ಯೋಚನೆಯಿಂದ ಘೋಷಿಸಿದ್ದೆ. ಆದರೆ ನನ್ನ ದಿನಾಂಕಗಳ ಸೂಚನೆಗಳೆಲ್ಲ ಸರ್ಕಾರೀ ಆಶ್ವಾಸನೆಗಳೇ ಆಗಿತ್ತು. ಬಿಸಿಲೆಯ ಅಶೋಕವನದಲ್ಲಿ ವರ್ಷಕ್ಕೊಂದರಂತೆ ಮೂರು ಕಪ್ಪೆ ಶಿಬಿರಗಳು ನಡೆದಿರುವುದು ನಿಮಗೆ ತಿಳಿದೇ ಇದೆ (ಇಲ್ಲದವರು ನೋಡಿ: ಕಪ್ಪೆ ಶಿಬಿರಗಳು) ಅವುಗಳನ್ನು ಸಂಘಟಿಸಿದ್ದ `ಕ್ಯಾಪ್ಟನ್’ ದೀಪಿಕಾ ಈಚೆಗೆ “ನಾಲ್ಕನೇ ವರ್ಷದ ಕಪ್ಪೆ ಶಿಬಿರ ಜುಲೈ ೪-೫ಕ್ಕೆ…” ಎಂದಾಗ ಒಮ್ಮೆಲೆ ನನಗೆ ಸೈಕಲ್ ಸವಾರಿಗೆ ಒಂದು ಮುಹೂರ್ತ ಕೊಟ್ಟ ಹಾಗಾಗಿತ್ತು. ಸಾಲದ್ದಕ್ಕೆ ಮಳೆಗಾಲದ ನಡುವೆ ನುಸಿದ ಬಿಸಿಲು ಉತ್ತೇಜಿಸಿತು. ಲೆಕ್ಕಾಚಾರಗಳು ಪೂರಕವಾಗಿಯೇ ಕಾಣಿಸಿದುವು!

ಮಂಗಳೂರಿನಿಂದ ಬಿಸಿಲೆ ಕವಲು – ಅಂದರೆ, ಕುಳ್ಕುಂದಕ್ಕೆ ಸುಮಾರು ಒಂದು ನೂರು ಕಿಮೀ ಅಂತರ. ಇದು ಬಹುತೇಕ ಮಟ್ಟಸ, ಉತ್ತಮ ಡಾಮರು ಮಾರ್ಗ. ಅಂದರೆ ಗಂಟೆಗೆ ಸರಾಸರಿ ಹದಿನೇಳಿಪ್ಪತ್ತು ಕಿಮೀ ಕ್ರಮಿಸಿದರೆ ಐದಾರು ಗಂಟೆಯ ಸವಾರಿ. ಮತ್ತಿನ ಇಪ್ಪತ್ನಾಲ್ಕು ಕಿಮೀ ಕಾಡು. ಅದರಲ್ಲೂ ಮೊದಲ ನಾಲ್ಕೈದು ಕಿಮೀ ದಕ ವಲಯದೊಳಗಿದೆ. ಅಲ್ಲಿ ಏರಿಕೆಯಿಲ್ಲ, ಸುಂದರ ಡಾಮರೂ ಇದೆ. ಮುಂದುವರಿದ ಐದಾರು ಕಿಮೀ, ಅಂದರೆ ಬೂದಿಚೌಡಿಯವರೆಗೆ ದಾರಿ ಕಚ್ಚಾ ಇರಬಹುದಾದರೂ ಏರಿಕೆ ಇಲ್ಲ. ಹೀಗೆ ನಿವ್ವಳ ಹದಿನಾಲ್ಕು ಕಿಮೀ ನಿಜ ಏರು – ನಮಗೆ ಹೆಚ್ಚು ಹೊರೆಯಾಗದು. ಅಂದರೆ ಕಪ್ಪೆಶಿಬಿರದ ಮೊದಲ ದಿನದ ಮಧ್ಯಾಹ್ನದೂಟಕ್ಕೆ ನಾವು ಆಶ್ಚರ್ಯದ ಅತಿಥಿಗಳು!

ದೀಪಿಕಾ, ವಿವೇಕ್, ರೋಹಿತರೆಲ್ಲರೂ ಕಪ್ಪೆಶಿಬಿರಕ್ಕೆ ಬರಲು ನನ್ನನ್ನು ಒತ್ತಾಯಿಸಿದ್ದರು. ನಾನು ಸೈಕಲ್ ಮಹಾಯಾನದ ಗುಪ್ತ ಯೋಜನೆಯನ್ನು ಬಿಟ್ಟುಕೊಡದೇ ನಿರಾಕರಿಸಿದ್ದೆ. ವಾರದ ಹಿಂದಷ್ಟೇ, ರೋಹಿತ್ ಶಿಬಿರಕ್ಕೆ ಕಾರೋಡಿಸಲು ದಾರಿ ವಿಚಾರಣೆ ನಡೆಸಿದ್ದರು. ಆಗ ಅದು ರಿಪೇರಿಗಾಗಿ ಪೂರ್ಣ ಮುಚ್ಚಿಹೋಗಿದೆ ಎಂದು ತಿಳಿಯಿತು. ಶಿರಾಡಿ ಮೊದಲೇ ಮುಚ್ಚಿತ್ತು. ಸಹಜವಾಗಿ ರೋಹಿತ್ ಕಾರು ಮಡಿಕೇರಿ ಸೋಮವಾರಪೇಟೆ ಸುತ್ತು ಹಾಕುವುದು ಅನಿವಾರ್ಯವಿತ್ತು. ಅಂದರೆ ಅವರು ಬೆಳಗ್ಗೆ ಮೂರು ನಾಲ್ಕು ಗಂಟೆಗೇ ಹೊರಟಿರುತ್ತಾರೆ ಎಂದು ನಾನು ಅಂದಾಜಿಸಿದ್ದೆ. ಆದರೆ ಅವರು ನಿಧಾನಿಸಿದ್ದರು. ನಾವಿನ್ನೂ ತುಂಬೆ ಬಳಿ ಇದ್ದಾಗಲೇ ಹಿಂದಿನಿಂದ ಬಂದ ರೋಹಿತ್ ನನ್ನನ್ನು ಗುರುತಿಸಿ, ಕಾರು ನಿಧಾನಿಸಿ ವಿಚಾರಿಸಿ, ನಮ್ಮ ಭೇಟಿಯ ಗುಟ್ಟು ರಟ್ಟಾಗುವಂತಾಗಿತ್ತು!

ಮ್ಮೂವರ ತಂಡ ಉಪ್ಪಿನಂಗಡಿ ಬಿಡುವಾಗ ಗಂಟೆ ಹತ್ತು ಕಳೆದಿತ್ತು. ಒಂದು ಕಿಮೀ ಅಂತರದಲ್ಲೇ ಹೆದ್ದಾರಿ ಬಿಟ್ಟು ಕಡಬದ ದಾರಿ ಅನುಸರಿಸಿದೆವು. ನಾಲ್ಕೈದು ವರ್ಷಗಳ ಹಿಂದೆ ಹೊಲಗೆಟ್ಟು ಹೋಗಿದ್ದ ಈ ದಾರಿಯನ್ನು ವಿಸ್ತರಿಸಿ ಬಹು ಉತ್ತಮ ರೀತಿಯಲ್ಲಿ ಪುನಾರೂಪಿಸಿದ್ದು ನನ್ನ ನೆನಪಿನಲ್ಲಿತ್ತು. ಅದಲ್ಲವಾದರೆ ಗುಂಡ್ಯದವರೆಗೆ ಹೆದ್ದಾರಿ ಅನುಸರಿಸಿ ಮತ್ತೆ ಸುಬ್ರಹ್ಮಣ್ಯದತ್ತ ಕವಲೊಡೆದು ಹೋಗಬೇಕಾಗುತ್ತಿತ್ತು. ಅದು ಸುತ್ತು ಹಾಗೂ ವಿಪರೀತ ಏರಿಳಿತಗಳ ದಾರಿ, ನಮ್ಮನ್ನು ಖಂಡಿತವಾಗಿ ಹೆಚ್ಚು ಬಳಲಿಸುತ್ತಿತ್ತು. ಕಡಬ ದಾರಿ ಸವೆಯಿಸುತ್ತಿದ್ದಂತೆ ನಮಗಿನ್ನೊಂದು ಹೆಚ್ಚುವರಿ ರಿಯಾಯ್ತಿ ಕಾಣಿಸಿತು. ಅಲ್ಲಿನ ಕಿಲೋಕಲ್ಲುಗಳು ಸುಬ್ರಹ್ಮಣ್ಯವನ್ನು ಉದ್ದೇಶಿಸಿ ಐವತ್ತೊಂದರಿಂದ ಇಳಿಯೆಣಿಕೆ ನಡೆಸಿದ್ದವು. ಆದರೆ ನಮ್ಮ ಗುರಿ ಮೂರು ಕಿಮೀ ಮೊದಲೇ ಸಿಗಲಿದ್ದ ಕುಳ್ಕುಂದ! ಶ್ರಮಪೂರ್ಣ ಓಟ ದೀರ್ಘವಾದಷ್ಟೂ ಸೂಕ್ಷ್ಮಗಳ ಅರಿವು ಮಾಸುವುದಿಲ್ಲ; ಹೆಚ್ಚುತ್ತದೆ.

ಕೊಯ್ಲದಲ್ಲಿ ದೇಹಕ್ಕಿಂತ ಬಲವಾದ ಮುಂಡಾಸಿನಂತೆ ಏನೋ ಮಹಾದ್ವಾರ ನಿಂತಿತ್ತು. ಅಲ್ಲಿನ ಸುವಿಸ್ತಾರ ಸರಕಾರೀ ಭೂಮಿ ಹುಲ್ಲುಗಾವಲು, ಜಾನುವಾರು ಅಭಿವೃದ್ಧಿ ಕೇಂದ್ರ, ಪಶುವೈದ್ಯಕೀಯ ಕಾಲೇಜು ಎಂದೇನೇನೋ ಸುದ್ದಿ ತಕ್ಕಡಿಗಳಲ್ಲಿ ತೂಗಿ ತೂಗಿ ಸಾರ್ವಜನಿಕ ಹಣಕ್ಕಷ್ಟು ಹೊರೆಯಾಗುತ್ತಲೇ ಇರುವುದು ಮಸಕು ಮಸಕಾಗಿ ನೆನಪಿಗೆ ಬಂತು. ರಾಮಕುಂಜ ದಾಟುವಾಗ ಅಲ್ಲಿನ ಪೇಜಾವರ ಮಠಾಧೀಶರ ಪ್ರೌಢಶಾಲೆ ನೆನಪಾಗದಿರುವುದು ಹೇಗೆ! ಸುಮಾರು ಮೂರು ದಶಕಗಳ ಹಿಂದೆ, ಹೀಗೇ ಒಂದು ಮಳೆಗಾಲ ನಾನು ಮತ್ತು ಕೃಶಿ (ಡಾ| ಕೃಷ್ಣಮೋಹನ ಪ್ರಭು) ಅಲ್ಲಿ ದಿನ ಪೂರ್ತಿ – (ಒಟ್ಟಾರೆ ಮೂರು ಬಾರಿ) `ಹುಲಿ, ಹುಲಿ, ಹುಲಿ’ ಹುಲಿ ಸಂರಕ್ಷಣೆಯ ಬಗ್ಗೆ ಚಲನಚಿತ್ರ ತೋರಿಸಿ, ಚರ್ಚೆ ನಡೆಸಿಕೊಟ್ಟಿದ್ದೆವು. ಮುಂದೆ ಸಿಗುವ ಬಲ್ಯದಲ್ಲಿ ಹಾಗೇ ಮರ್ಧಾಳದಲ್ಲಿ ಎಡಕ್ಕೆ ಸಿಗುವ ಕವಲು ದಾರಿಗಳು ಈಗೇನೋ ಮಂಗಳೂರು – ಹಾಸನ ಹೆದ್ದಾರಿಯನ್ನು ಸೇರುತ್ತವೆ; ಹಾಗೆ ಮಾರ್ಗಸೂಚನಾ ಫಲಕಗಳೂ ಹೇಳುತ್ತವೆ. ಆದರೆ ಅದರ ವಿಕಾಸದ ಕೆಲವು ಹಂತಗಳಲ್ಲಿ ಆರೋಹಣ (ನಮ್ಮ) ಬಳಗ ನಡೆಸಿದ ಓಡಾಟಗಳದೆಷ್ಟು. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಕೊರತೆಯ ಪಟ್ಟಿಗೆ ಇಚ್ಲಂಪಾಡಿಯ ಸೇತುವೆ ಸೇರಿಸಿದ್ದು, ಗುಂಡ್ಯ ದಾರಿ ಮುಚ್ಚಿ ಹೋಗಿದ್ದಾಗ ಇಲ್ಲೆಲ್ಲೋ ಗೊಸರ ದಾರಿಯಲ್ಲಿ ಬೈಕ್ ಅಡ್ಡ ಮಗುಚಿದ್ದು ಇತ್ಯಾದಿ ವಿವರಗಳು ಮರೆತೇ ಹೋಗಿದ್ದರು, ಮನಸ್ಸಿನ ಹಚ್ಚಡದ ಮೇಲಳಿಸದ ಕಲೆಯಂತೆ ಇಂದೂ ಕಾಡಿತ್ತು.

ಈ ನಡುವೆ ಮೊದಲು ಹಾಯುವ ಹೊಸಮಠದಲ್ಲಿನ ಮುಳುಗು ಸೇತುವೆ! ಇದರ ಬಗ್ಗೆ ನಾನೇನು, ನಾಲ್ಕೈದು ದಶಕಗಳ ಯಾವುದೇ ಹಳೇ ಪತ್ರಿಕೆ ತೆಗೆದರೂ ಮಳೆಗಾಲದಲ್ಲಿ ಇದು ಸುದ್ಧಿ ಮಾಡದೇ ಇದ್ದ ದಿನವಿಲ್ಲ. ಇದರಡಿಯಲ್ಲಿ ನುಸಿಯುವ ಗುಂಡ್ಯ ಹೊಳೆಯ ಪ್ರತಾಪವನ್ನು ಕೊಂಡಾಡುವುದೋ ಎತ್ತರಿಸಿದ ಸೇತುವೆ ರಚಿಸುವುದರಲ್ಲಿ ಆಡಳಿತದ ನಿಷ್ಕಾಳಜಿಯನ್ನು ಖಂಡಿಸುವುದೋ ಅರ್ಥವಾಗದ ಪರಿಸ್ಥಿತಿ. ಇಪ್ಪತ್ತೈದು ವರ್ಷಗಳ ಹಿಂದೆ ಸುಧಾದಲ್ಲಿ ಇದರ ಕುರಿತು ನಾನೇ ಒಂದು ಚಿತ್ರ ಲೇಖನ ಬರೆದಿದ್ದೆ. ಇಲ್ಲಿನ ತಗ್ಗು ಸೇತುವೆಯನ್ನು ವಾಮನನಿಗೆ ಹೋಲಿಸಿ ಎಂದು ತ್ರಿವಿಕ್ರಮನಾಗುತ್ತಾನೆ ಎಂದೇ ಕೇಳಿದ್ದೆ. ಈಗ ಕೆಳ ಪಾತ್ರೆಯಲ್ಲಿ ಹೊಸ ಸೇತುವೆಗೆ ಮೋಟು ಕಾಂಕ್ರೀಟ್ ಸ್ತಂಭಗಳು ನಿಂತಿರುವುದನ್ನು ಕಾಣುತ್ತೇವೆ. ಆದರೆ ಸದ್ಯ ಅಲ್ಲೇನೂ ಕೆಲಸ ನಡೆದಿರುವ ಲಕ್ಷಣಗಳೂ ಇಲ್ಲ. ಅಂದರೆ ಈ `ಮೊಳಕೆ’ಗಳ ಪ್ರಾಯ ಏನು, ಇವು ಬಲಿಷ್ಠ ಸೇತುವಾಗಿ ವಿಕಸಿಸಲು ಇನ್ನೆಷ್ಟು ಕಾಲ ಹಳಸಬೇಕು, ಎಷ್ಟು ಸಾರ್ವಜನಿಕ ಜೀವ ಸೊತ್ತು ನಷ್ಟವಾಗಬೇಕು ಎಂದು ಎಂದಿನಂತೆ ವಿಷಾದಿಸುವುದಷ್ಟೇ ಉಳಿಯಿತು. ಅದರಲ್ಲಿ ಅನಿವಾರ್ಯ ನೆರೆ ಬಂದಾಗ ವಾಹನ ಸಂಚಾರವನ್ನು ನಿಧಾನಿಸುವ ಭೀಕರ ರಸ್ತೆಯುಬ್ಬುಗಳು, ಪೂರ್ಣ ತಡೆಗಟ್ಟುವ ಗೇಟು, ರಾತ್ರಿ ಹಗಲು ನೀರ ಏರಿಳಿತಗಳ ಮೇಲೆ ಕಣ್ಣಿಡುವ ಹೋಮ್ ಗಾರ್ಡೋ ಪೋಲೀಸೋ ಸಿಬ್ಬಂದಿಗೆ ತತ್ಕಾಲೀನವಾಗಿ ಮಳೆಯಿಂದ ಕಾಪಾಡಿಕೊಳ್ಳಲು ಕಟ್ಟಿ ಕೊಟ್ಟ ಗೂಡು ಪ್ರಜಾಪ್ರಭುತ್ವದ ಎಷ್ಟು ದೊಡ್ಡ ಅಣಕ.

ಜನಜನಿತವಿರುವ ಹೆಸರು ಕಡಬ. ಗೂಗಲ್ ನಕ್ಷೆ ಹೇಳುವಂತೆ ಕೋಡಿಂಬಳ, ಇನ್ನೂ ಕೆಲವು ಬೋರ್ಡುಗಳಲ್ಲಿ `ಕದಂಬ’ ಮೆರೆಯುವುದೂ ಕಾಣುತ್ತದೆ. ಇದು ಪುನರುತ್ಥಾನವಾದಿಗಳ ಜಾಣ್ಮೆಯೋ ವಾಸ್ತವದ ಸ್ಥಳನಾಮದ ಭಾಗವೋ ತಿಳಿದವರು ಹೇಳಬೇಕು.

ಒಬ್ಬರನ್ನೊಬ್ಬರು ಹಿಂದೆ ಮುಂದೆ ಹಾಕಿಕೊಳ್ಳುತ್ತಲೇ ನಾವು ಸಾಗಿದ್ದೆವು. ಅವರಿಬ್ಬರ ಸೈಕಲ್ಲಿನಲ್ಲಿ ನೀರಿಡುವ ಕ್ಲಿಪ್ ಓಟದಲ್ಲೂ ಬಳಸಲು ಸಹಕಾರಿಯಾಗಿತ್ತು. ನಾನು ಅಂಥದ್ದೇ ಕ್ಲಿಪ್ಪಿನ ಮಿತಿಯನ್ನು ಮೀರಿಸಿದ ಬಾಟಲಿಟ್ಟು ಕಟ್ಟುತ್ತಿದ್ದೆ. ಹಾಗಾಗಿ ನೀರು ಕುಡಿಯುವುದಿದ್ದರೆ ನಾನು ಸವಾರಿ ನಿಲ್ಲಿಸುವುದು ಅನಿವಾರ್ಯವಾಗುತ್ತಿತ್ತು. ಇಲ್ಲದಿದ್ದರೂ ಅರ್ಧ ಮುಕ್ಕಾಲು ಗಂಟೆಗಳ ಅಂತರದಲ್ಲಿ, ಕೆಲವೊಮ್ಮೆ ದೀರ್ಘ ಏರಿನ ಕೊನೆಗೆ ಸಿಕ್ಕ ಮರದ ನೆರಳಲ್ಲಿ ಮೂವರು ಒಟ್ಟಾಗಿ ನಿಂತು ವಿಶ್ರಮಿಸುವುದಿತ್ತು. ಜತೆಗೆ ಒಯ್ದಿದ್ದ ಪನ್ನೇರಳೆ, ಕಡ್ಲೆ ಚಿಕ್ಕಿ, ಬಿಸ್ಕೆಟ್, ದಾರಿ ಬದಿಯ ಅಂಗಡಿಗಳಲ್ಲಿ ಹಣ್ಣು, ಹಣ್ಣಿನ ರಸ, ಚಾಕ್ಲೆಟ್ ಚಪ್ಪರಿಸುವುದೂ ಇತ್ತು. ಒಮ್ಮೆ ಅದ್ಯಾವುದೋ ಮೂಲೆಯ ಮೋಡದ ತುಣುಕಿಗೆ ನಮ್ಮನ್ನು ತುಸು ಕೆಣಕುವ ಉಮೇದು ಬಂದಂತಿತ್ತು. ಕೂಡಲೇ ನಾನು ವಾಚು, ಚರವಾಣಿ, ಕ್ಯಾಮರಾ ಮತ್ತು ಹಣವನ್ನು ಪ್ಲ್ಯಾಸ್ಟಿಕ್ ತೊಟ್ಟೆಗೆ ಹಾಕಿ ಕಿಸೆಗೆ ಜಡಿದೆ. ಮತ್ತೆ ಕಳೆದ ವರ್ಷವೇ ಬಹಳ ಶ್ರಮದಿಂದ ಹುಡುಕಿ ಸಂಪಾದಿಸಿದ್ದ ಮಳೆಕೋಟನ್ನು ಧರಿಸಿ ಮುಂದುವರಿದಿದ್ದೆ. ಹಗುರ ಬಟ್ಟೆ ಧರಿಸಿದ್ದ ರೈಗಳು ನೆನೆಯುವುದನ್ನೇ ಬಯಸಿದ್ದರು. ಆದರೆ ಬೆನ್ನ ಚೀಲದಲ್ಲಿದ್ದ ರಾತ್ರಿ ವಾಸದ ಸಾಮಗ್ರಿಗಳ ರಕ್ಷಣೆಗಾಗಿ ಮಳೆಕೋಟು ಹಾಕಿಕೊಂಡರು. ಅಭಿ ಮಳೆನಿರೋಧಕ್ಕೇನೂ ತಂದಿರಲಿಲ್ಲ ಮತ್ತು ಸೆಕೆಯಲ್ಲಿ ಬಳಲುವುದಕ್ಕಿಂತ ನೆನೆಯುತ್ತ ಸವಾರಿ ನಡೆಸುವುದನ್ನೇ ಬಯಸಿದ್ದ. ಹೀಗೆ ನಾವು ಬಹುಮುಖವಾಗಿ ಆದರೆ ದಿಟ್ಟವಾಗಿ ಮಳೆಯನ್ನು ಎದುರಿಸಿದ್ದಕ್ಕೋ ಏನೋ ಅದು ತೊಡಗಿದಷ್ಟೇ ಚುರುಕಾಗಿ ಬಯಲಾಗಿತ್ತು.

ನೆಟ್ಟಣದ ಅರಣ್ಯ ಇಲಾಖೆಯ ತೋಪು, `ಸುಬ್ರಹ್ಮಣ್ಯ ರೋಡ್’ ಎಂದೇ ಹೆಸರಾಂತ ಬಿಳಿನೆಲೆಯ ರೈಲ್ವೇ ನಿಲ್ದಾಣ ಹಾಗೂ ವಿಸ್ತಾರ ಶಾಲಾವಠಾರ ದಾಟುವ ವೇಳೆಗೆ ಶಾಲೆಗಳು ಬಿಡುವ ಹೊತ್ತಾಗಿತ್ತು. ಬೆಳಿಗ್ಗೆ ನಾವಿಬ್ಬರೇ ಬರುತ್ತಿದ್ದಾಗ, ಉಪ್ಪಿನಂಗಡಿಯವರೆಗೆ ಶಾಲೆಗಳಿಗೆ ಕಾಲೆಳೆಯುವ ಮಕ್ಕಳನ್ನು ಕಂಡಿದ್ದೆವು. ಈಗ ಅಲ್ಲಲ್ಲಿ ಶನಿವಾರದ ಅಪರಾಹ್ನದ ಬಿಡುವಿಗೆ ಮತ್ತೆ ಹಿಂಬಾಲಿಸುವ ಆದಿತ್ಯವಾರದ ರಜೆಗೆ ಮಕ್ಕಳು ಹಾರುವುದನ್ನೇ ಕಾಣತೊಡಗಿದ್ದೆವು. ಹೀಗೆ ಕಾಲಗತಿಯಲ್ಲಿ ನಮ್ಮ ಕಾಲಗತಿ ಸೋತದ್ದಕ್ಕೆ ಸಾಕ್ಷಿಯಾಗಿ ಒಂದು ಗಂಟೆಗೆ ನಾವು ಕುಳ್ಕುಂದವನ್ನಷ್ಟೇ ತಲಪಿದ್ದೆವು. ಮುಂದಿನ ಸವಾರಿಯ ಲೆಕ್ಕಾಚಾರಗಳು ಏನಿದ್ದರೂ ಹೊಟ್ಟೆಪಾಡನ್ನು ಅಲ್ಲೇ ಮುಗಿಸಲು ನಿಶ್ಚೈಸಿದೆವು.

ಕುಳ್ಕುಂದದಲ್ಲಿದ್ದ ಅರಣ್ಯ ಗೇಟು ಕೆಲವು ವರ್ಷಗಳ ಹಿಂದೆಯೇ ಬರ್ಖಾಸ್ತಾಗಿದೆ. ಸುಬ್ರಹ್ಮಣ್ಯದ ಹೆಸರಿನೊಡನೆ ಸೇರಿ ಬರುವ ಇಲ್ಲಿನ ವರ್ಷಾವಧಿ ಜಾನುವಾರು ಜಾತ್ರೆಯೂ ಕಾಲಧರ್ಮದಲ್ಲಿ ಆಕರ್ಷಣೆ ಕಳೆದುಕೊಳ್ಳುತ್ತಾ ಬಂದು, ಈಚೆಗೆ ನಿಂತೇ ಹೋಗಿದೆ. ಈಚೆಗೆ ಬಿಸಿಲೇಘಾಟಿಯೂ ಮುಚ್ಚಿ ಕುಳ್ಕುಂದದ ಮಹತ್ವ ಮರೆಯಾಗಿತ್ತು. ದೂರದ ಮೋಟಾರ್ ವಾಹನಿಗರು ಕುಳ್ಕುಂದಕ್ಕೂ ಮೂರು ಕಿಮೀ ಮೊದಲೇ ಸಿಗುವ ಕೈಕಂಬ, ಅಂದರೆ ಕಡಬ – ಗುಂಡ್ಯಗಳ ದಾರಿ ಸಂಗಮಿಸುವ ಸ್ಥಳದಲ್ಲಿ ನಿಂತರೂ ನಿಂತರೇ. ಉಳಿದಂತೆ ಮೂರೇ ಕಿಮೀ ಅಂತರದಲ್ಲಿ ಸಿಗುವ ಸುಬ್ರಹ್ಮಣ್ಯ ಬಿಟ್ಟು, ಕುಳ್ಕುಂದದಲ್ಲಿ ವಿಶ್ರಮಿಸುವ ಯೋಚನೆ ಯಾರೂ ಮಾಡರು. ಕುಳ್ಕುಂದ ಕೇವಲ ದಾರಿ ಬದಿಯ ಸ್ಥಳವಾಗಿ ಬಳಲಿದೆ. ಆದರೆ ನಮ್ಮ ಸ್ಥಿತಿ ಬೇರೇ. ಬಂದ ನೂರು ಕಿಮೀ, ಉಳಿದ ಇಪ್ಪತ್ನಾಲ್ಕು ಕಿಮೀಗಳ ಲೆಕ್ಕಕ್ಕೆ ಸುಬ್ರಹ್ಮಣ್ಯದವರೆಗೆ ಹೋಗಿ ಬರುವ ಹೆಚ್ಚುವರಿ ಆರು ಕಿಮೀ ಸೇರಿಸಲು ನಾವು ಸಿದ್ಧರಿರಲಿಲ್ಲ. ಅಲ್ಲೇ ಇದ್ದ ಒಂದು ಬಡಕಲು ಹೋಟೆಲ್ ಸೇರಿ, ಊಟದ ಶಾಸ್ತ್ರ ಮುಗಿಸಿದೆವು. ಮತ್ತೆ ದಾರಿಗಿಳಿಯುವಾಗ ಗಂಟೆ ಒಂದೂವರೆ.

“ಪೂರ್ವ ದಿಗಂತವನ್ನು ಅಲಂಕರಿಸಿದ ಕುಮಾರಪರ್ವತವೇ ಲಕ್ಷ್ಯ” – ಇದು ಹೆಚ್ಚಾಗಿ ಬಿಸಿಲೆ ದಾರಿಗಿಳಿಯುವವರ ನಾಂದಿವಾಕ್ಯ. ಆದರೆ ಈ ಸಲ ಅದು ದಟ್ಟ ಮೋಡದ ಬಿಳಿ ಮುಸುಕಿನೊಳಗಿತ್ತು. ದಾರಿಯಲ್ಲಿ ಮೊದಲ ಕಿಮೀಯಷ್ಟೇ ಹಳ್ಳಿ. ಉಳಿದಂತೆ ಘಟ್ಟಾ ಏರಿ ಮುಗಿವ ಬಿಸಿಲೆ ಹಳ್ಳಿಯವರೆಗೂ ನಿರ್ಜನ ಕಾಡೇ ಕಾಡು. ದಾರಿ ದಕ ಗಡಿಯವರೆಗೂ ಮಟ್ಟಸ ನುಣ್ಣನೆ ಡಾಮರೆಂಬ ನನ್ನ ನೆನಪು ನಿಜವೇ ಇತ್ತು. ಆದರೆ ನೆನಪಿನ ಕಡತಗಳಲ್ಲಿದ್ದ ನಮೂದುಗಳೆಲ್ಲ ಬೈಕ್ ಕಾರು ಸವಾರಿಯದ್ದು. ಸೈಕಲ್ ಅನುಭವ ಹಾಗಲ್ಲ. ಹಳ್ಳಿ ಕಳೆದದ್ದೇ ಸಿಕ್ಕ ತುಸು ಏರು, ನುಣ್ಣನೆ ಡಾಮರಿನಲ್ಲೂ ಬಿದ್ದ ಗೀರು, ಅಂಚಿನಲ್ಲಿ ನಿಂತ ನೀರೆಲ್ಲಾ ಸೈಕಲ್ ತುಳಿಯುವ ಕಾಲು ಮತ್ತು ನಿರ್ವಹಣೆಯ ಜಾಣ್ಮೆಗಳನ್ನು ಸದಾ ಜಾಗೃತವಾಗಿಯೇ ಇಡುತ್ತದೆ. ಪ್ರತ್ಯಕ್ಷ ಕಾಣದಿದ್ದರೂ ಕಾಡು ತುಂಬಿ ಬಂದಂತೆ ಕೇಳುವ ಅನತಿ ದೂರದ ಕುಮಾರಧಾರಾ ನದಿಯ ಮೊರೆತದಲ್ಲಿ ನಿರಂತರ ಕುಸುರಿ ನಡೆಸುವ ಬಿಬ್ಬಿರಿ, ಹಕ್ಕಿಗಳುಲಿ ನಮ್ಮ ಅದುವರೆಗಿನ ಶಬ್ದ ಪ್ರಪಂಚವನ್ನೇ ಬದಲಾಯಿಸಿಬಿಟ್ಟಿತು. ನೆಟಿಕೆ ಮುರಿಯುತ್ತ ಓಲಾಡುವ ಬಿದಿರು, ತೋರಣಗಟ್ಟಿದಂತೆ ಕಾಣುವ ಬಳ್ಳಿ ಹಸಿರುಗಳೆಡೆಯಲ್ಲಿ ಹಾವಾಡುವ ದಾರಿಯನ್ನು ಅನುಸರಿಸುವಾಗ ನಮ್ಮ ನೂರು ಕಿಮೀ ಕಳೆದ ಶ್ರಮ ಒಮ್ಮೆಗೆ ಮರೆತೇ ಹೋಗಿತ್ತು.

ಅಲ್ಲಿ ಇಲ್ಲಿ ಮಳೆಗೆ ಸಣ್ಣ ದರೆ ಜರಿದದ್ದು, ಕಣಿ ಮುಚ್ಚಿದ್ದು, ಗೆಲ್ಲು ಬಿದ್ದದ್ದನ್ನೆಲ್ಲ ಅರಣ್ಯ ಇಲಾಖೆ ಹೊಸದಾಗಿ ಒತ್ತರೆ ಮಾಡಿದ್ದು ಕಾಣಿಸುತ್ತಿತ್ತು. ತುಸು ಮುಂದೆ ಸ್ವತಃ ಆ ವಲಯದ ಅರಣ್ಯಾಧಿಕಾರಿಯೇ ನಿಂತು, ದಾರಿ ಶುದ್ಧ ಮಾಡುವ ಜೆಸಿಬಿಯೊಂದರ ಉಸ್ತುವಾರಿ ನಡೆಸಿದ್ದೂ ಕಂಡೆವು. ಅಲ್ಲಿ ದಾರಿ ಮುಚ್ಚಿದಂತೆ ಬಿದಿರ ಬುಡವೊಂದು ಮಗುಚಿ ಬಿದ್ದಿತ್ತು. ಅದನ್ನೆಳೆದಂತೆ ಬರುತ್ತಿದ್ದ ಬಳ್ಳಿ, ಮಣ್ಣೆಲ್ಲವನ್ನು ಯಂತ್ರ ಸಮೂಲ ನಿವಾರಿಸುತ್ತಿತ್ತು. ನಾವು ಮಿನಿಟೆರಡು ದಾರಿ ಕಾದು ನಿಂತೆವು. ನಮ್ಮ ಪ್ರಾಯ, ಸೈಕಲ್ ಕಂಡ ಕುತೂಹಲಕ್ಕೆ ಅಧಿಕಾರಿ ನಮ್ಮೊಡನೆ ಎರಡು ಮಾತಾಡಿದರು. “ಎಲ್ಲಿಂದ? ಎಲ್ಲಿಗೆ? ಯಾಕೆ?” “ದೂರದ ಮಂಗಳೂರು, ವಾಹನವಾಗಿ ಸೈಕಲ್, ಲಕ್ಷ್ಯವಾಗಿ ಬಿಸಿಲೆ…” ನಮ್ಮ ವಿವರಗಳು ಆತನಿಗೆ `ಎಲ್ಲೋ ಹುಚ್ಚು’ ಅನ್ನಿಸುತ್ತಿದ್ದಿರಬೇಕು. ಕೊನೆಯಲ್ಲಿ `ಕಪ್ಪೆ ಅಧ್ಯಯನ’ದ ಮಾತು ಬಂದಾಗಂತೂ ಆತನಿಗೆ ಬಹಳ ದೊಡ್ಡ ಹಾಸ್ಯವಾಗಿಯೇ ಕಂಡದ್ದು ನಮಗೆ ಕೆಡುಕೆನ್ನಿಸಿತು. ಅಷ್ಟರಲ್ಲಿ ಜೆಸಿಬಿ ಚಾಲಕ ನಮಗೆ ದಾರಿ ಬಿಡಿಸಿ ಕೊಟ್ಟದ್ದರಿಂದ, ಕೂಪಮಂಡೂಕವನ್ನು ಅದರ ಪಾಡಿಗೆ ಬಿಟ್ಟು ನಾವು ಪೆಡಲು ಬೆಳೆಸಿದೆವು.

ದಕ ವಲಯದ ಅರಣ್ಯವನ್ನು ಬಹಳ ಚುರುಕಾಗಿಯೇ ಕಳೆದಿದ್ದೆವು. ಆ ಕೊನೆಯಲ್ಲಿದ್ದ ಕಾಡ ಝರಿಯೊಂದರ ಸಮಸೇತುವನ್ನು ಪುಟ್ಟ ಸೇತುವೆಯನ್ನಾಗಿಸುವ ಕೆಲಸಕ್ಕೆ ಪೂರ್ಣ ಅಗೆದು ಹಾಕಿದ್ದರು. ತೊರೆಯ ಒಂದಂಚಿನಲ್ಲಿ ಸಿಮೆಂಟ್ ತೊಲೆಯೊಂದನ್ನು ಅಡ್ಡ ಹಾಕಿ ಪಾದಚಾರಿಗಳಿಗೆ ಅವಕಾಶ ಮಾಡಿದ್ದರು. ಅಲ್ಲಿ ಒಬ್ಬಿಬ್ಬ ಮೋಟಾರ್ ಸೈಕಲ್ಲಿಗರು ಎಚ್ಚರಿಕೆಯಲ್ಲಿ ದಾಟಿಸಿ ಓಡಾಡುವುದು ನಮ್ಮ ಅನುಭವಕ್ಕೆ ಬಂತು. ಅಲ್ಲವಾದರೂ ನಮಗೆ ಸೈಕಲ್ ಎತ್ತಿ ದಾಟಿಸುವುದು ಒಂದು ಸಮಸ್ಯೆಯೇ ಅಲ್ಲ. ಗಡಿಯಿಂದ ತೊಡಗಿದಂತೆ ಮುಂದೆ ದಾರಿ ಸುಮಾರು ಮೂರು ಕಿಮೀ ಉದ್ದಕ್ಕೆ ಸಾಕಷ್ಟು ಅಗಲವಾಗಿ ಭರ್ಜರಿ ಕಾಂಕ್ರಿಟೀಕರಣ ಕಂಡಿತ್ತು. ಮುಂದೆಯೂ ಬೂದಿ ಚೌಡಿಯವರೆಗೆ ಕಾಂಕ್ರೀಟಿಗೆ ಪೂರ್ವಭಾವೀ ಕೆಲಸಗಳೆಲ್ಲ ಮುಗಿಸಿದ್ದರು. ದಾರಿ ಅಗಲ ಮಾಡಿ, ಸಮಗೊಳಿಸಿ, ಹೊಳೆ ಜಲ್ಲಿ ಹಾಸಿದ್ದು ನಮ್ಮ ಸವಾರಿಯನ್ನು ಸುಲಭವೇ ಮಾಡಿತ್ತು. ಇನ್ನೊಂದು ಕೊನೆಯಲ್ಲಿ ಯಂತ್ರ ಕೆಟ್ಟದ್ದಕ್ಕೋ ಮಳೆಗಾಲ ತೊಡಗಿದ್ದಕ್ಕೋ ಕೆಲಸ ತತ್ಕಾಲೀನವಾಗಿ ನಿಂತದ್ದು ಸ್ಪಷ್ಟವಾಗುತ್ತಿತ್ತು. ಒಟ್ಟಾರೆ ದಾರಿ ಪೂರ್ಣಗೊಂಡ ಕಾಲಕ್ಕೆ ತೀರಾ ಸಣ್ಣ ಸಂಖ್ಯೆಯ ನಿತ್ಯ ಬಳಕೆಯ ಸಾರ್ವಜನಿಕರಿಗೂ ಗಂಭೀರ ವನ್ಯಪ್ರಿಯರಿಗೂ ಅನುಕೂಲವಾಗುವುದರಲ್ಲಿ ಏನೂ ಸಂಶಯವಿಲ್ಲ. ಆದರೆ ಸುಗಮ ಸಂಚಾರ ವ್ಯವಸ್ಥೆಯೊಡನೆ ಹೆಚ್ಚುವ ಅನಾಗರಿಕ ಸಂದಣಿಯನ್ನು ನೆನೆಸುವಾಗ ವನ್ಯ ಸ್ಥಿತಿಯ ಬಗ್ಗೆ ಕಳವಳ ಮಾತ್ರ ಉಳಿಯುತ್ತದೆ.

ಬೂದಿಚೌಡಿ – ವನ್ಯೋತ್ಪನ್ನಗಳನ್ನು ಸಂಗ್ರಹಿಸಿಯೇ ಜೀವನ ನಡೆಸುವವರ, ಆದಿವಾಸಿಗಳ ಆರಾಧನಾ ತಾಣ; ಮೂರ್ತಿ ಪೂಜೆಯ ಆದಿಮ ರೂಪದ ಪ್ರತಿನಿಧಿಯಾಗಿ ಒಂದು ಕಾಡು ಕಲ್ಲು. ವನ್ಯದ ಕುರಿತ ಪರಿಷ್ಕೃತ ಶಾಸನಗಳಿಂದ ಆ ಜನ ಮತ್ತು ಹಸಿ ಕೋಳಿ, ಕುರಿ, ಆಡು, ಕೋಣಗಳ ರಕ್ತ ಬಸಿಯುತ್ತಿದ್ದ ಅಲ್ಲಿನ ರೂಢಿಗಳು ಇಂದು ನೆಲೆ ತಪ್ಪಿವೆ. ಆದರೆ ಅದನ್ನು ಆದಿಮ ಶ್ರದ್ಧಾ ಕೇಂದ್ರದಿಂದ ಶಿಷ್ಟ ವಾಣಿಜ್ಯ ಉದ್ದೇಶಕ್ಕೆ ಮತಾಂತರಗೊಳಿಸಿ ಭರ್ಜರಿ ಮಂಟಪ, ಬೆಳ್ಳಿಯ ಮೊಗ, ನಂದಾದೀಪ, ಗಂಟೆ, ತರಹೇವಾರು ಪೂಜಾ ಸೌಕರ್ಯಗಳೆಲ್ಲವನ್ನು ಹೇರಿ, ಶ್ರೀಗಡಿಚಾಮುಂಡೇಶ್ವರಿ ಮಾಡಿ, ನಾಗರಿಕ ಮನಸ್ಸುಗಳಲ್ಲಿ ಇದರ ಇರವು ಅನಿವಾರ್ಯವಾಗಿ ಕಾಣಿಸುತ್ತಿರುವಲ್ಲಿ ಅರಣ್ಯ ಇಲಾಖೆಯ ಪಾತ್ರ ಬಹಳ ದೊಡ್ಡದಿರುವುದು ತೀರಾ ನಾಚಿಗೆಗೇಡು. ಅಘೋಷಿತವಾಗಿ ಇದನ್ನು ಸಾಕುವುದಕ್ಕಾಗಿಯೇ ಕುಳ್ಕುಂದದ ತಪಾಸಣಾ ಗೇಟನ್ನು ಇಲ್ಲಿಗೆ ವರ್ಗಾಯಿಸಿ, ಸಿಬ್ಬಂದಿಗಳ ವಾಸ ಸವಲತ್ತುಗಳನ್ನು ಇಲ್ಲಿ ಹೊಸದಾಗಿ ರಚಿಸಿ ಕೊಟ್ಟಿದ್ದಾರೆ. ಮುಂದುವರಿದು ದೇವಿಯ ನೆಪದಲ್ಲಿ ತಂಗುವ ಪಯಣಿಗರ ಸೌಕರ್ಯಕ್ಕಾಗಿ ಕಾಡ ತೊರೆಗೆ ಕಟ್ಟೆ ಕಟ್ಟಿ, ಮೂತ್ರ ದೊಡ್ಡಿಗಳನ್ನು ರಚಿಸಿ, ಸೌರ ವಿದ್ಯುತ್ ಬಲದಲ್ಲಿ ಬೀದಿ ದೀಪವನ್ನೂ ಬೆಳಗಿದ್ದಾರೆ. ಇವೆಲ್ಲ ಸದಾ ಹಾಳಾಗುತ್ತಾ ಉತ್ತಮಿಕೆಯನ್ನು ಹಕ್ಕೊತ್ತಾಯ ಮಾಡುತ್ತಾ ಕೆಟ್ಟ ಕುರುವೊಂದು ವನ್ಯಕ್ಕೆ ಕ್ಯಾನ್ಸರಾಗಿ ವೃದ್ಧಿಸುತ್ತಿರುವುದು ತೀರಾ ಶೋಚನೀಯ.

ಬಿಸಿಲೆಘಾಟಿಯ ದಾರಿ ಮೂಲದಲ್ಲಿ (ಶಿರಾಡಿ, ಚಾರ್ಮಾಡಿಗಳಿಗಿಂತಲೂ) ತುಂಬ ವ್ಯವಸ್ಥಿತವಾದ ರಚನೆ. ಹಾಗಾಗಿ ಇಂದೂ ಏರು ಕೋನದಲ್ಲಿ ಅದು ಎಲ್ಲೂ ತೀವ್ರ ಸವಾಲುಗಳನ್ನು ಒಡ್ಡುವುದೇ ಇಲ್ಲ. ಜೀರ್ಣೋದ್ಧಾರದ ಹೆಸರಿನಲ್ಲಿ ಕಾಲಕಾಲಕ್ಕೆ ವಿಸ್ತರಿಸಿ, ಹೇರಿದ ಡಾಮರು ಹೊದಿಕೆ ಕಿತ್ತು, ಕೊರೆದು ಹೋಗಿ ನಮ್ಮನ್ನು ಸತಾಯಿಸುತ್ತಿತ್ತು. ಸೈಕಲ್ ಗೇರ್ ಮೂರು ಗುಣಿಸು ಎರಡಕ್ಕಿಂತ ಹೆಚ್ಚೂ ಬೇಡ, ಕಡಿಮೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿ ತುಳಿಯುತ್ತಲೇ ಇದ್ದೆವು. ಕಣ್ಣನ್ನು ದಾರಿಗೆ ಕೀಲಿಸಿ ನಮ್ಮ ಪಥವನ್ನು ಪ್ರತಿ ಕ್ಷಣವೂ ಯೋಜಿಸುತ್ತಲೇ ಹ್ಯಾಂಡಲನ್ನು ಭದ್ರವಾಗಿ ಹಿಡಿದು ಪ್ರತಿ ಕಲ್ಲು, ಕೆಸರು, ಚಡಿ, ಕೊರಕಲು, ಉದುರು ಸೌದೆಗಳ ಎಡೆಯಲ್ಲಿ ಏಕವೇಗವನ್ನು ಕಾಯ್ದುಕೊಳ್ಳಬೇಕಾಗುತ್ತಿತ್ತು. ಉಬ್ಬೆದ್ದ ಕಲ್ಲಿನ ಮೇಲೆ ಮುಂದಿನ ಚಕ್ರ ಪಕ್ಕಕ್ಕೆ ಜಾರಿದರೂ ಹಿಂದಿನ ನೂಕುಬಲದಲ್ಲಿ ಸುಧಾರಿಸಿಕೊಳ್ಳುತ್ತಿದ್ದೆವು. ಹಾಗೇ ಹಿಂಚಕ್ರ ಕೆಸರು ಕಚ್ಚಿ ತಡವರಿಸುವಾಗ ಅಥವಾ ಕಳ್ಳಸುತ್ತು ಹೊಡೆಯುವಾಗಲೂ ನಮ್ಮ ಏಕವೇಗ ಸಹಾಯಕ್ಕೊದಗುತ್ತಿತ್ತು. ತೀರಾ ನಿಧಾನಿಯಾದರೆ ಪ್ರತಿ ಕಲ್ಲು ಕೊರಡೂ ಕಟ್ಟೆಯಾಗಿ ಸೀಟಿಳಿಸಿಬಿಡುತ್ತಿತ್ತು. ವೇಗ ಹೆಚ್ಚಿಸುವುದಂತೂ ಅಸಾಧ್ಯ ಎನ್ನುತ್ತಿತ್ತು ಜೋಮುಗಟ್ಟುವ ಅಂಗೈ, ನೋಯುತ್ತಿದ್ದ ಎರಡೂ ಭುಜ! ಎಲ್ಲಕ್ಕೂ ಮಿಗಿಲಾಗಿ ಸೈಕಲ್ಲಿನ ಆರೋಗ್ಯ ಉಳಿಸಿಕೊಳ್ಳಲೇಬೇಕಿತ್ತು. ರೈ ಹಾಗೂ ಅಭಿ ಆಗೀಗ ಸೀಟಿಂದೆದ್ದು, ಪೆಡಲಿನ ಮೇಲೆ ನಿಂತು ತುಳಿಯುವುದನ್ನು ರೂಢಿಸಿಕೊಂಡಿದ್ದರು. ಇಲ್ಲಿ ದೇಹಭಾರವೇ ಪೆಡಲಿಗಿಳಿಯುವುದರಿಂದ ಚಲನೆಗೆ ಹೆಚ್ಚಿನ ಶಕ್ತಿಯೂ ಉರಿಯುವ ಅಂಡಿಗೆ ಬದಲಾವಣೆಯೂ ಬಂದಂತಾಗುತ್ತಿತ್ತು. ನಾನು ಇಳಿಜಾರುಗಳಲ್ಲಿ ಹೀಗೇ ನಿಂತು ಸುಧಾರಿಸುವುದು ಇದೆ. ಹಿಂದೆ ಜಂಟಿ ಸೈಕಲ್ಲಿನಲ್ಲಿ ಒಬ್ಬನೇ ಸವಾರಿ ಮಾಡುವಾಗ ಏರುದಾರಿಗಳಲ್ಲಿ ಸೀಟಿಂದೆದ್ದು ಮೆಟ್ಟಿ ಗುರುಮುಟ್ಟಿದ್ದೂ ಇದೆ. ಆದರೆ ಒಂಟಿ ಸೈಕಲ್ಲಿನಲ್ಲಿ ಅದೂ ಕಠಿಣ ಪರಿಸ್ಥಿತಿಯ ಏರಿನಲ್ಲಿ ನನಗೆ ಸೀಟಿಂದೆದ್ದು ಪೆಡಲೊತ್ತುವುದು ಒಗ್ಗುತ್ತಲೇ ಇರಲಿಲ್ಲ.

ಮೈಯ್ಯಲ್ಲಿ ಹರಿಯುತ್ತಿದ್ದುದು ಬೆವರೋ ಹೊಳೆಯೋ! ಸಣ್ಣ ಒಂದೆರಡು ಮಳೆಗೆ ಕೋಟು ಧರಿಸಿದ್ದೇವೆಂದಷ್ಟೇ ಸಮಾಧಾನ. ಅದರ ಸೋರಿಕೆಯೋ ಒಳಗಿಂದೊಳಗೇ ನಮ್ಮ ಬೆವರಿನ ಪಸರಿಕೆಯೋ – ಚಂಡಿಯಾಗುವುದಂತೂ ತಪ್ಪಲಿಲ್ಲ. ಒಂದೆರಡು ಝರಿಗಳ ಶೀತಲ ಜಲ ನಮ್ಮ ದಾಹಕ್ಕೆ, ಮುಖಕ್ಕೆ ತಳಿದು ಪುನಃಶ್ಚೇತನಕ್ಕೆ ಕಾರಣವಾದದ್ದು ಮಿತ್ರರಿಗೆ ಸಾಲಲಿಲ್ಲವಂತೆ. ಒಂದೆಡೆ ಇದ್ದಂತೆಯೇ ಝರಿಯ ಬಂಡೆಗೊರಗಿ ಹಾಯೆಂದದ್ದೂ ಇತ್ತು. ದಮ್ಮು ಖಾಲಿಯಾದಂತೆ, ಅಂಗುಳ ಒಣಗಿ ಉರಿದಂತೆ ನಿಂತು ನೀರು ಧಾರಾಳ ಕುಡಿಯುತ್ತಿದ್ದೆವು. ಚಿಕ್ಕಿ ಚಾಕ್ಲೇಟ್ ಚಪ್ಪರಿಸುವ ನೆಪ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪಡೆದ ವಿಶ್ರಾಂತಿಗಳಿಗೆ ಲೆಕ್ಕವಿಲ್ಲ. ಆದರೆ ಎಲ್ಲೂ ಯಾರೂ ಅಸಾಧ್ಯ ಎಂದು ಕೈಚೆಲ್ಲುವ, ನಾಳೆ ಹೇಗೆ ಎಂದು ಭಯಬೀಳುವ ಸನ್ನಿವೇಶ ಬರಲೇ ಇಲ್ಲ. ಕೆಲವೆಡೆಗಳಲ್ಲಿ ನನ್ನ ನೆನಪಿನ ಕಡತದಿಂದ ಸ್ಥಳಪುರಾಣಗಳನ್ನು ಚೂರುಪಾರು ವಿಸ್ತರಿಸುತ್ತಿದ್ದೆ. ಉಳಿದಂತೆ ಒಬ್ಬರನ್ನೊಬ್ಬರು ಹಿಂದೆ ಮುಂದೆ ಹಾಕುತ್ತಾ ಮೌನವಾಗಿಯೇ ಪರಿಸರಶ್ರುತಿಯಲ್ಲಿ ಲೀನರಾಗಿದ್ದೆವು. ಉಳಿದಿಬ್ಬರು ಪ್ರಥಮ ಬಾರಿಗೆ ಬಿಸಿಲೆಯನ್ನೂ ಇಂಥ ಸವಾರಿಯನ್ನೂ ಅನುಭವಿಸುತ್ತಿದ್ದುದರಿಂದ ಬೆರಗು, ಆನಂದಗಳ ಭಾವಗಳೇ ಹೆಚ್ಚು. ಪ್ರಕೃತಿ ಶಿಬಿರದ ಅವಶೇಷ, ಅಡ್ಡಹೊಳೆಯ ಸೇತುವೆ, ಝರಿಗಳನ್ನು ಹಾಯುವ ಸಮಸೇತು, ಸಾಕಷ್ಟು ಸುಸ್ಥಿರವಾಗಿಯೇ ಉಳಿದಿದ್ದ ಹಿಮ್ಮುರಿ ತಿರುವುಗಳು, ಧುತ್ತೆಂದು ಎದುರಾಗುವ ಕನ್ನಡಿಕಲ್ಲು, ಓ ಎಂದು ಬಹು ಆಳಧ್ವನಿ ತೆಗೆವ ಕುಮಾರಧಾರಾ ಕೊಳ್ಳ, ಮಂಜಿನ ಮುಸುಗೆಳೆದೇ ಕೂತು ದರ್ಶನ ನಿರಾಕರಿಸಿದ ಕುಮಾರಪರ್ವತದ ಕಾಲ್ಪನಿಕ ರೂಪ, ಅಶೋಕವನದ ಆದಿ – ಅಂತ, ಬೀಟೀಸ್ಪಾಟ್ ಎಂದೇ ಖ್ಯಾತವಾದ ವೀಕ್ಷಣಾ ಕಟ್ಟೆಯ ದ್ವಾರವೆಲ್ಲ ಕಳೆದು ಬಿಸಿಲೆ ಗೇಟು ತಲಪುವಾಗ ಸಂಜೆ ಗಂಟೆ ಆರಾಗಿತ್ತು.

ಬಿಸಿಲೆ, ಅಲ್ಲಿನ ನಮ್ಮ ವ್ಯವಸ್ಥೆಗಳು, ಕಪ್ಪೆ ಶಿಬಿರದ ಬಗ್ಗೆ ನಾನಿಲ್ಲಿ ವಿಸ್ತರಿಸುವುದಿಲ್ಲ. ತಿಳಿವಿನ ದಾಹವುಳ್ಳವರು, ಹಿಂದೆ ಓದಿ ಮರೆತವರು ಅವಶ್ಯ ಇಲ್ಲೇ ಪುಟದಂಚಿನಲ್ಲಿರುವ `ಕುಮಾರಪರ್ವತ’ ಹಾಗೂ `ಕಪ್ಪೆಶಿಬಿರಗಳು’ ವಿಭಾಗಗಳನ್ನೇ ತೆರೆದು ಎಲ್ಲಾ ಲೇಖನಗಳನ್ನೂ ಓದಿಕೊಳ್ಳಬಹುದು. ತುಳಸಿ ಹೋಟೆಲಿನ ದೇವೇಗೌಡ ದಂಪತಿ ನಮ್ಮನ್ನು ಸಂಭ್ರಮಾಶ್ಚರ್ಯದಿಂದ ಸ್ವಾಗತಿಸಿದರು. ಪುಳಿಯೊಗರೆ, ಡಬ್ಬಲ್ ಚಾ ಹಾಕಿದ ಮೇಲೆ, ಶಿಬಿರ ನೆಲೆಸಿದ ಸಮುದಾಯಭವನಕ್ಕೆ ಹೋದೆವು. ಎಲ್ಲರೂ ಕ್ಷೇತ್ರ ಕಾರ್ಯಕ್ಕೆ ಹೋಗಿದ್ದುದರಿಂದ ಭವನ ಬೀಗ ಹಾಕಿತ್ತು. ಆದರೆ ಅಭಿ ಮತ್ತು ರೈಗಳ ಉತ್ಸಾಹ ಹೊರಗಿದ್ದ ತಣ್ಣೀರಲ್ಲೇ ಮಿಂದು, ಬಟ್ಟೇ ಕುಸುಕಿ ಹಾಕುವಲ್ಲಿಯವರೆಗೂ ತಣಿಯಲಿಲ್ಲ. ರೈಗಳಂತೂ ಸೈಕಲ್ಲಿಗೂ ಅಭ್ಯಂಜನ ಮಾಡಿಸಿಬಿಟ್ಟರು. ಎಂದಿನಂತಲ್ಲದೆ ನನ್ನ ದೇಹವೇಕೋ ಮುಳಿದಿದ್ದುದರಿಂದ ಕೇವಲ ಕೈಕಾಲು ಮುಖ ತೊಳೆದು ಒಣ ಹಾಗೂ ಬೆಚ್ಚನ್ನ ಬಟ್ಟೆಗಳಿಗೆ (ಸ್ವೆಟ್ಟರ್!) ಬದಲಾಗಿ ಮುರುಟಿ ಕುಳಿತುಕೊಳ್ಳಬೇಕಾಯ್ತು. ಕತ್ತಲು, ಚಿರಿಪಿರಿ ಮಳೆಗಳನ್ನು ಹಿಡಿದುಕೊಂಡೇ ಶಿಬಿರಾರ್ಥಿಗಳು ಮರಳುತ್ತಿದ್ದಂತೆ ವಠಾರದ ಜೀವಕಳೆ ಏರಿತು, ನಮ್ಮ ಸಾಧನೆಗೆ ಅಪೂರ್ವ ಧನ್ಯತೆಯೂ ಲಭಿಸಿತು.

ಡಾ| ಕೆ.ವಿ. ಗುರುರಾಜ್ – ಅಂತಾರಾಷ್ಟ್ರೀಯ ಮಟ್ಟದ ಕಪ್ಪೆ ವಿಜ್ಞಾನಿ ನಿರಂತರ ನಾಲ್ಕನೇ ವರ್ಷದಲ್ಲಿ, ಸದಾ ಏರುತ್ತಲೇ ಇರುವ ಉತ್ಸಾಹದಲ್ಲಿ ಶಿಬಿರವನ್ನು ನಡೆಸಿದ್ದರು. ಅಂದು ಮಧ್ಯಾಹ್ನದೂಟಕ್ಕೆ ಎಲ್ಲ ಸೇರುವಂತೆ ಮೂರು ಕಾರು ತುಂಬಾ ಬೆಂಗಳೂರು ಮೈಸೂರು ವಲಯದಿಂದಲೂ ನಾವೇ ಕಂಡಂತೆ ಒಂದು ಕಾರಿನಲ್ಲಿ ಮಂಗಳೂರಿನಿಂದಲೂ ಭಾಗಿಗಳು ಅಲ್ಲಿಗೆ ಬಂದಿದ್ದರು. ಈ ಬಾರಿ ಹೆಚ್ಚುವರಿಯಾಗಿ ಜೀವಿಗಳ ದೇಹೋಷ್ಣತೆಯನ್ನು ಗ್ರಹಿಸಿ ಚಿತ್ರಗ್ರಹಣ, ಗಗನಕ್ಕೇರಿ ಚಿತ್ರಗ್ರಹಣಗಳ ತಂತ್ರಜ್ಞರೂ ಶಿಬಿರದಲ್ಲಿ ಭಾಗಿಯಾಗಿದ್ದರು. ನಿಯತ ವೇಳೆಗಳಲ್ಲಿ ಯಾಂತ್ರಿಕವಾಗಿಯೇ ಚಿತ್ರಗ್ರಹಣ ದಾಖಲೆ ಕೊಡುವ ತಂತ್ರಗಳನ್ನು ಪ್ರಯೋಗಿಸಿ ವಿಶೇಷ ಅಧ್ಯಯನವನ್ನೂ ಕೆವಿಜಿ ನಡೆಸಿದ್ದರು. ವಿದ್ಯುತ್ತಿಲ್ಲದ, ನಾಲ್ಕು ಗೋಡೆ ಮತ್ತು ಬೋಳು ನೆಲ ಮಾಡಷ್ಟೇ ಇರುವ ಸೋರುವ ವಾಸದ ನೆಲೆ, ಅವ್ಯವಸ್ಥೆಯ ಶೌಚ ಸವಲತ್ತು, ಪ್ರಯಾಣದ ಬಳಲಿಕೆ, ಮಳೆ, ಚಳಿ, ಜಿಗಣೆಗಳಾದಿ ಯಾವ ನೆಪಗಳೂ ಶಿಬಿರ ಚಟುವಟಿಕೆಯನ್ನು ಕುಂದಿಸಿರಲಿಲ್ಲ! ರಾತ್ರಿ ಊಟಕ್ಕಾಗುವಾಗಲೂ ಹಾಗೇ. ಎಲ್ಲ ದೇವೇಗೌಡರ ಹೋಟೆಲಿಗೇ ಹೋಗಿ, ಸ್ಥಳ ಸಿಕ್ಕಂತೆ ಒಳಗೆ ಕುಳಿತೋ ಹೊರಗಿಳಿಸಿದ ಮಾಡಿನಲ್ಲಿ ಇರಿಚಲು ಬಡಿಯುತ್ತಿದ್ದಂತೆ ನಿಂತೋ ಊಟ ಮುಗಿಸಿದರು. ತಿಂದದ್ದು ಬರಿಯ ಅನ್ನ, ಪಲ್ಯ, ಸಾರು, ಸಾಂಬಾರ್ ಮಜ್ಜಿಗೆಯಾದರೂ ಮಾತೆಲ್ಲ ಕಪ್ಪೆ ಕಪ್ಪೆ ಕಪ್ಪೆ. ಇದ್ದದ್ದು ಪಕ್ಕಾ ಕಾಡಿನ ಪರಿಸರವಾದರೂ ಎಲ್ಲೂ ಕಾಡುಹರಟೆಗೆ ಅವಕಾಶವಿರಲಿಲ್ಲ! ಊಟದುದ್ದಕ್ಕೆ ಅವರೊಡನೆ ನಾವೂ ಬೇಕಾದ್ದು ಮಾತಾಡಿದ್ದಷ್ಟೇ ಬಂತು. ಮತ್ತೆ ಅವರೆಲ್ಲ ಕತ್ತಲಿನಲ್ಲಿ ಹೆಚ್ಚುವರಿ ಕಪ್ಪೆಗಳ ಮುಖಾಮುಖಿಗೆ ಸಜ್ಜುಗೊಳ್ಳುತ್ತಿದ್ದಂತೆ (ಆಮೇಲೆ ತಿಳಿದಂತೆ, ರಾತ್ರಿ ಹನ್ನೊಂದು ಗಂಟೆಯವರೆಗೂ ಮಾಡಿದರಂತೆ), ನಾವು ಮೂವರು ಮಾತ್ರ ನಿದ್ರೆಗೆ ಜಾರಿದೆವು.

ಬೆಳಿಗ್ಗೆ ಶಿಬಿರ ಪೂರ್ಣ ಜಾಗೃತಗೊಳ್ಳುವ ಮೊದಲು ನಾವು ಮರಳಿ ಮಂಗಳೂರ ದಾರಿ ಹಿಡಿಯುವುದರಲ್ಲಿದ್ದೆವು. ದೇವೇಗೌಡರು ಕೊಟ್ಟ ಹೊಸತೇ ಪುಳಿಯೊಗರೆ ಕಂಠ ಮಟ್ಟ ತುಂಬಿ, ಎರಡೆರಡು ಚಾ ಮೇಲಿನಿಂದ ಹೊಯ್ದು ಗಟ್ಟಿಯಾದೆವು. ಅಭಿ ಮತ್ತು ರೈಗಳು ಮೂರೂ ಸೈಕಲ್ಲುಗಳ ಚಕ್ರಗಳ ಗಾಳಿ ತನಿಖೆ ಮಾಡಿದ್ದರು. ಉಳಿದಂತೆ ಹಿಂದಿನ ದಿನದ ಬಳಲಿಕೆಯ ಶೇಷವಿಲ್ಲದವರಂತೆ ಸುಮಾರು ಏಳೂವರೆ ಗಂಟೆಗೇ ಬಿಸಿಲೆ ಬಿಟ್ಟೆವು. ವೀಕ್ಷಣಾ ಕಟ್ಟೆಗೆ ಒಂದು ಚುಟುಕಿನ ಮತ್ತು ಚುರುಕಿನ ಭೇಟಿ ಕೊಟ್ಟೆವು. ಅಲ್ಲಿಂದ ನೋಡಲು ಗಿರಿಯಾಗಲೀ ಕಂದರವಾಗಲೀ ಮಂಜು ಮುಕ್ತವಿರಲಿಲ್ಲ. ಕಷ್ಟದಲ್ಲಿ ಸಿಗುವ ಚರವಾಣಿ ಸಂಪರ್ಕವನ್ನಷ್ಟು ಬಳಸಿ, ಹಿಂದಿನ ದಿನ ಕುಳ್ಕುಂದ ಬಿಟ್ಟ ಮೇಲೆ ಏನಾಯ್ತೆಂಬ ಕುರಿತು ನಂನಮ್ಮ ಮನೆಗಳಿಗೆ ವಾರ್ತಾಪ್ರಸಾರ ಮಾಡಿ ಮತ್ತೆ ದಾರಿಗಿಳಿದೆವು.

ಬಿಸಿಲೆ ಇಳಿದಾರಿಯಲ್ಲಿ ಶ್ರಮವೇನಿದ್ದರೂ ಬಿರಿ ಒತ್ತುವ ಬೆರಳುಗಳದ್ದು, ದೃಢ ಜಾಡರಸಿ ಓಟ ನೆಲೆಸುವ (ಪಲ್ಟಿಯಲ್ಲ!) ಜಾಣತನದ್ದು ಮಾತ್ರ. ಎಲ್ಲೂ ಅವಸರಿಸದೆ, ಹಾಗಾಗಿ ಯಾವುದೇ ಅಘಟನೆಗಳಿಲ್ಲದೆ ಕಚ್ಚಾ ಮಾರ್ಗವನ್ನು ಕಳೆದು ನಿಟ್ಟುಸಿರು ಬಿಟ್ಟೆವು. ಕಿಮೀ ಅಂತರದಲ್ಲಿ ಕಳೆದ ದೂರ ಬಲು ಸಣ್ಣದು, ಬಳಸಿದ ಸಮಯ ದೊಡ್ಡದೇ ಆದರೂ ಹಿಂದಿನ ದಿನಕ್ಕೆ ಹೋಲಿಸಿದರೆ ಬಹಳ ಚುರುಕಿದ್ದೆವು! ಕಾಂಕ್ರೀಟ್ ಹಾಸು, ದಕ ಗಡಿ ಕಳೆದು ಡಾಮರು ಮಾರ್ಗಕ್ಕಿಳಿದಲ್ಲಿ, ಹಿಂದಿನ ದಿನದ ಕಾಮಗಾರಿಯ ಮುಂದುವರಿಕೆ ಮತ್ತು ಅದೇ ಅಧಿಕಾರಿ ಕಾಣಸಿಕ್ಕರು. ಅಧಿಕಾರಿಯ ಅಜ್ಜಾನದ ಪರೆ ಹರಿದಿರಲಿಲ್ಲ “ಹೋ! ಎಷ್ಟು ಕಪ್ಪೆ ಕಂಡ್ರೀ” ಎಂದು ಉದ್ಗರಿಸಿದ. ನಾವು ಸೈಕಲ್ಲಿನ ವೇಗವನ್ನೂ ಇಳಿಸದೇ “ಹಾಂ, ಚೀಲದಲ್ಲಿ ಹಿಡಿಸದಷ್ಟೂ” ಎಂದು ಗೇಲಿಯ ಧ್ವನಿಯಲ್ಲೇ ಹೇಳಿಕೊಂಡು ಬಂದುಬಿಟ್ಟೆವು.

ಹಿಂದಿನ ದಿನವೂ ಅಂದೂ ನಮಗೆ ತೀರ ವಿರಳವಾಗಿ ಈ ದಾರಿಯಲ್ಲಿ ಕೆಲವು ಮೋಟಾರ್ ಸೈಕಲ್ ಸವಾರರು ಸಿಕ್ಕಿದ್ದಿತ್ತು. ಅವರಿಗೆಲ್ಲ ಆ ಕಾಡು, ಆ ಕಚ್ಚಾ ದಾರಿ ಅನಿವಾರ್ಯತೆಯ ಅನುಭವ. ಆದರೂ ನಮ್ಮ ಸಾಹಸ, ಲಕ್ಷ್ಯಗಳ ಬಗ್ಗೆ ವಿಚಾರಿಸಿ ಬೆರಗಿನಲ್ಲೇ ಮೆಚ್ಚುವ ಸಹಜತೆ ಇತ್ತು. ಹಿಂದಿನ ಸಂಜೆ ಏರುದಾರಿಯಲ್ಲಿ ಕೊನೆಯ ಹಿಮ್ಮುರಿ ತಿರುವಿನ ಬಳಿ ಮೇಲಿನಿಂದ ಬಂದಿದ್ದ ಎರಡು ಕಾರು ತುಂಬಾ `ಮಝಾ ಗ್ಯಾಂಗ್’ ಬಾಟಲು ತಿನಿಸು ಹರಡಿಕೊಂಡು ಬಿದ್ದಿತ್ತು. ಅದು ಆ ಪರಿಸರಕ್ಕೆ ತೀರಾ ಅನಪೇಕ್ಷಣೀಯ ಮತ್ತು ದಾರಿ ಪೂರ್ಣ ನಾಗರಿಕವಾದಾಗ ಮುಕುರಿಬೀಳುವ ಬಲುದೊಡ್ಡ ದುಷ್ಟಕೂಟದ ಪ್ರತಿನಿಧಿ ಮಾತ್ರ. ನಮ್ಮ ಲೆಕ್ಕಕ್ಕೆ ಆ ಜನಗಳೂ ನಮ್ಮ ಸಾಧನೆಯನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ಆದರೆ ಜೀವವೈವಿಧ್ಯದ ಅತ್ಯುನ್ನತ ನೆಲೆಯಲ್ಲಿ ನಿಂತುಕೊಂಡು, ಅದನ್ನೇ ಜೀವನಯಾಪನೆಗೆ `ಪರಿಣತಿ’ಯ ನೆಲೆಯಲ್ಲಿ ನೆಚ್ಚಿಕೊಂಡಿರುವ ಅಧಿಕಾರಿ ಮಾತ್ರ ನಮ್ಮನ್ನು ಗ್ರಹಿಸಲೇ ಇಲ್ಲ. `ಮಝಾ ಗ್ಯಾಂಗ್’, ವನ್ಯಜೀವಿಗಳಿಗೆ ಹಾನಿಕಾರಕವಾದ ವಿಪರೀತ ವಾಹನ ಸಂಚಾರಗಳನ್ನೂ ನಿಯಂತ್ರಿಸಬೇಕಾದ ಅಧಿಕಾರಿಯಲ್ಲಿ ಈ ಮಟ್ಟದ ಮೌಢ್ಯ ಇರುವವರೆಗೆ ನಮ್ಮ ವನ್ಯಕ್ಕೆ ಭವಿಷ್ಯ ಮಸುಕೇ ಎಂದು ವಿಷಾದಿಸುವುದಷ್ಟೇ ನಮಗುಳಿಯಿತು.

ಕುಳ್ಕುಂದವನ್ನು ಹಾಯ್ದು, ಹತ್ತೂ ಕಾಲರ ಅಂದಾಜಿಗೆ ನಾವು ಕೈಕಂಬದ ಬಳಿಯ ಇನ್ನೊಂದೇ ಗೂಡು ಹೋಟೆಲಿನಲ್ಲಿ ನಿಂತೆವು. ಅಲ್ಲಿ ಎಂಟೆಂಟು ತೆಳುದೋಸೆ, ಚಟ್ನಿ, ಚಾ ಸಮಾರಾಧನೆ ನಡೆಸಿದೆವು. ಮುಂದೆ ಪೆಡಲಾವರ್ತಗಳನ್ನು ಹೆಚ್ಚಿಸುತ್ತ, ಕಿಲೋ ಕಲ್ಲುಗಳ ಲೆಕ್ಕವನ್ನು ಇಳಿಸುತ್ತ ಸಾಗಿದೆವು. ನಿನ್ನೆಯ ಹಾಯೆಂದ ಇಳಿಜಾರುಗಳನ್ನು ಇಂದಿನ ಅಯ್ಯೋ ಎನ್ನುವ ಏರು ಎಂದು ಕಾಣಲಿಲ್ಲ. ಬದಲಿಗೆ ನಿನ್ನೆ ದಮ್ಮು ಕಟ್ಟಿದ ಏರುಗಳೆಲ್ಲ ಇಂದಿನ ವರವೆನ್ನುವಂತೆ ಸುಖಿಸಿದೆವು. ಮತ್ತೆ ಒಂದೆರಡು ದಾರಿ ಬದಿಯ ಅಂಗಡಿಗಳ ಜೂಸು, ಬಾಳೆಹಣ್ಣು, ಚಾಕ್ಲೇಟ್ಗಳೆಂದು ವಿಶ್ರಾಂತಿಯ ನೆಪಗಳನ್ನು ಹುಡುಕಿಕೊಳ್ಳುತ್ತಿದ್ದೆವು. ಅವಕಾಶ ಸಿಕ್ಕಲ್ಲೆಲ್ಲ ನಮ್ಮ ನೀರಕ್ಯಾನುಗಳನ್ನು ಖಾಲಿ ಮಾಡುತ್ತಲೂ ಮರುತುಂಬಿಕೊಳ್ಳುತ್ತಲೂ ಚಕ್ರ ಉರುಳಿಸಿದೆವು. ಒರಟು ಸವಾರಿಗೇ ಮೀಸಲಾದ ಟಯರುಗಳ ಅನವಶ್ಯಕ ಉಜ್ಜಾಟದ ರೋಂಯ್ ರೋಂಯ್ ಬಿಟ್ಟರೆ ನಮ್ಮದೇ ಉಸಿರಿನ ಸುಯ್ಯಲಷ್ಟೇ ಕೇಳುವಂತೆ ತುಳಿದೇ ತುಳಿದು ಎರಡು ಗಂಟೆಯ ಸುಮಾರಿಗೆ ಉಪ್ಪಿನಂಗಡಿ ತಲಪಿದೆವು. ಅಲ್ಲಿ ಒಂದು ಗಂಟೆಯ ಊಟದ ವಿಶ್ರಾಂತಿ. ಕೊನೆಯಲ್ಲಿ ಬಂದು ಸೇರಿದಷ್ಟೇ ಅನೌಪಚಾರಿಕವಾಗಿ ರೈಗಳು ಮೂಡಬಿದ್ರೆಯ ದಾರಿಯಲ್ಲೂ ನಾವಿಬ್ಬರು ಮಂಗಳೂರ ದಾರಿಯಲ್ಲೂ ಮುಂದುವರಿದೆವು.

ಉಪ್ಪಿನಂಗಡಿ ಬಿಡುತ್ತಿದ್ದಂತೆ “ಊಟವಾದ ಕೂಡಲೇ ಹೀಗೊಂದು ಚಡಾವು ಸಿಗಬಾರದಿತ್ತು” ಎಂದು ದೂರುವಷ್ಟು ದೀರ್ಘ ಏರು ನಮ್ಮನ್ನು ತುಸು ಸತಾಯಿಸಿತು. ಇನ್ನು ನನ್ನ ವೇಷಭೂಷಣವೋ – ನಾಲ್ಕು ಸುತ್ತು ಮೇಲಕ್ಕೆ ಮಡಚಿದ ಕಾಲಿನ ಮಾಮೂಲೀ ಪ್ಯಾಂಟ್, ಮೇಲೆ ಎಂದಿನ ದೊಗಳೆ ಜುಬ್ಬಾ, ಕಾಲಿಗೆ ಸರಳ ಬೆಲ್ಟಿನ ಚಪ್ಪಲಿ, ಬೆನ್ನಲ್ಲಿ ಐದೂವರೆ ಕೇಜಿಗೂ ಮಿಕ್ಕ ಹೊರೆ. ಸವಾರಿಯ ಶ್ರಮದೊಡನೆ ಬೆನ್ನ ಹೊರೆಯ ಜಗ್ಗಾಟ, ಚಪ್ಪಲಿಯ ಬೆಲ್ಟಿನೆಡೆಯಲ್ಲಿ ರಸ್ತೆಯಿಂದ ಹಾರಿದ ಮರಳಕಣಗಳು ಕುಳಿತು ಉಜ್ಜುವುದು ನಾನೇ ತಂದುಕೊಂಡ ಹಿಂಸೆಗಳು. ಹ್ಯಾಂಡಲ್ ಗ್ರಿಪ್ಪುಗಳು ಸುದೀರ್ಘ ಘರ್ಷಣೆಯಲ್ಲಿ ಅಂಟುಬಿಟ್ಟು, ಹಿಗ್ಗಿ, ಕೈಗೆ ಕಳಚಿ ಬರುತ್ತಿದ್ದುವು. ಇವೆಲ್ಲ ನನ್ನ ನಿಯತ ವೇಗವನ್ನು ಬಹುವಾಗಿ ಕುಂದಿಸಿತು. ಅಭಿಯ ಬೆನ್ನ ಹೊರೆ ಎರಡೂವರೆ ಕೇಜಿ ಮಾತ್ರ. ಮತ್ತೆ ಪ್ಯಾಡೆಡ್ ಲಘು ಪ್ಯಾಂಟ್, ಹಗುರದ ಬನಿಯನ್, ಕಾಲಿಗೆ ಶೂ ಮತ್ತು ಎಲ್ಲಕ್ಕೂ ಮಿಕ್ಕು ತಾರುಣ್ಯದ ಬಲದಲ್ಲಿ ಆತ ಹೆಚ್ಚಿನ ವೇಗ ಗಳಿಸಬಲ್ಲವನಾಗಿದ್ದ. ಅಲ್ಲದೆ ಆತನ ದಾರಿಯೂ ನನಗಿಂತ ಹೆಚ್ಚಿನ ದೂರದ್ದು. ಹಾಗಾಗಿ ಕಲ್ಲಡ್ಕದಲ್ಲಿ ಕಾಫಿಯ ಶಾಸ್ತ್ರ ಮುಗಿಸಿದ ಮೇಲೆ ನಾನಾತನನ್ನು ತಂಡದ ಔಪಚಾರಿಕತೆಯಿಂದ ಮುಕ್ತಗೊಳಿಸಿದೆ. ಮತ್ತೆ ದಿನದ ಬೆಳಕೆಲ್ಲ ನನ್ನದೇ ಎನ್ನುವ ವಿಶ್ವಾಸದಲ್ಲಿ ನೆಲ ನೋಟಕನಾಗಿ ತುಳಿಯುತ್ತಾ ಮನೆ ಸೇರುವಾಗ ಸಂಜೆ ಆರೂವರೆ ಕಳೆದಿತ್ತು. ರೈಗಳ ಸೈಕಲ್ ಹೆಚ್ಚಿನ ಯೋಗ್ಯತೆಯದ್ದು. ಅವರ ಹೊರೆ ದಿರುಸುಗಳೆಲ್ಲ ಪಕ್ಕಾ ವಿಶ್ವ ಮಾನದ್ದು. ಸಹಜವಾಗಿ ಪಳಗಿದ ಕಾಸ್ತಾರ – ಜಗನ್ನಾಥ ರೈ, ತಮ್ಮ `ಸವಾರಿ’ಯನ್ನು ಕತ್ತಲೆಗೆ ಮುನ್ನ ಮನೆ ಮುಟ್ಟಿಸಿದ್ದರು. ಎರಡು ಮುದಿ ಎತ್ತುಗಳಿಗೆ (ನಾನು ಮತ್ತು ಜಗನ್ನಾಥ ರೈ) ಕಟ್ಟಿದ `ಪುಟ್ಟ ಗಾಡಿ’ಯಂತೇ ಅಭಿಭಟ್ ಕಾಣುತ್ತಿದ್ದ. ಆದರೆ ಮೊತ್ತದಲ್ಲಿ ನಮಗಿಂತ ಕನಿಷ್ಠ ಮೂವತ್ತು ಕಿಮೀ ಹೆಚ್ಚು ತುಳಿಯುವ ಅನಿವಾರ್ಯತೆ ಆತನದು. ಎಲ್ಲವನ್ನೂ ಚೆನ್ನಾಗಿಯೇ ಸುಧಾರಿಸಿ ಏಳು ಗಂಟೆಯ ಸುಮಾರಿಗೆ ಅಭಿಯೂ ಮನೆ ತಲಪಿದ್ದ. ಎರಡು ದಿನಗಳಲ್ಲಿ ಮಳೆ, ಬಿಸಿಲು, ಏರಿಳಿತ, ಹೆದ್ದಾರಿ, ಕಚ್ಚಾ ಮಾರ್ಗಗಳೆಂದು ಲೆಕ್ಕಿಸದೆ ಕನಿಷ್ಠ ಇನ್ನೂರೈವತ್ತು ಕಿಮೀಗೂ ಹೆಚ್ಚು ಸೈಕಲ್ ಮೆಟ್ಟಿದ್ದೆವು. ಅದರ ಮೇಲೂ ಇನ್ನಷ್ಟು ತುಳಿಯಬಲ್ಲೆವು ಎನ್ನುವ ಆತ್ಮವಿಶ್ವಾಸವನ್ನು ಕುದುರಿಸಿದ್ದು – ಬಿಸಿಲೆ ಸೈಕಲ್ ಮಹಾಯಾನ.

ಬಿಸಿಲೆ ಘಾಟಿಯಲ್ಲಿ ಈಗ ನಡೆದಿರುವ ರಸ್ತೆಯ ಅಗಲೀಕರಣ, ಕಾಂಕ್ರಿಟೀಕರಣ ಪೂರ್ಣಗೊಂಡಂದು ಇದು ಶಿರಾಡಿ ಘಾಟಿ ಮಾರ್ಗಕ್ಕೆ ಪರ್ಯಾಯ ದಾರಿಯಾಗಿ ಬಳಕೆಯಾಗುವುದು ಖಾತ್ರಿ. ದಾರಿಯ ಒಂದು ಮಗ್ಗುಲಲ್ಲಿ ಪುಷ್ಪಗಿರಿ ವನಧಾಮ, ಇನ್ನೊಂದು ಮಗ್ಗುಲಲ್ಲಿ ನಿರ್ಜನ ಕಾಯ್ದಿರಿಸಿದ ಕಾಡು. ವನ್ಯ ತಜ್ಞರ ಅಭಿಪ್ರಾಯದಲ್ಲಿ ಇದೂ ವನಧಾಮದ ಎಲ್ಲಾ ಯೋಗ್ಯತೆಗಳನ್ನು ಉಳಿಸಿಕೊಂಡಿರುವ ಕಾಡು (ಡೀಮ್ಡ್ ಫಾರೆಸ್ಟ್). ಇವುಗಳ ನಡುವೆ ಕೇವಲ ಮಾರ್ಗಕ್ರಮಣಕ್ಕಾಗಿ ಓಡಾಡುವ ಮಹಾ ವಾಹನಗಳನ್ನು ಬಿಡುವುದೆಂದರೆ ಬಹುಮುಖದಲ್ಲಿ ವನ್ಯದ ಅವಹೇಳನವೇ ಸರಿ. ವನ್ಯಮೃಗಗಳ ದುರಂತ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಮತ್ತೆ ಆ ಕಾಲದಲ್ಲಿ ಇಲ್ಲಿ ಸೈಕಲ್ ಸವಾರಿ, ನಮಗೊದಗಿದಂತೆ ಸಾಹಸಿ ಕಾರ್ಯಕ್ರಮವಾಗುವುದಿಲ್ಲ; ವಾಹನಗಳ ಸಮ್ಮರ್ದದಲ್ಲಿ ದುರಂತ ಯಾನವಾಗದಿದ್ದರೆ ವಿಶೇಷ.