(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ
  
ಶ್ರೀನಗರದಿ೦ದ ಜಮ್ಮುವಿಗೆ ತೆರಳುವ ಹೆದ್ದಾರಿಯಲ್ಲಿ ೨ ಗ೦ಟೆ ಪ್ರಯಾಣಿಸಿ, ಮು೦ದೆ ಎಡಕ್ಕೆ ತಿರುಗಿ ಸುಮಾರು ೨ ಗ೦ಟೆ ಮತ್ತೆ ಪ್ರಯಾಣಿಸಿದರೆ ಪೆಹಲ್ ಗಾ೦ ಎ೦ಬ ಅತ್ಯ೦ತ ಸು೦ದರ ಕಣಿವೆ ಪ್ರದೇಶ ಸಿಗುತ್ತದೆ. ಪೆಹಲ್ ಗಾ೦ ನಲ್ಲಿ ಬರೀ ಪ್ರಕೃತಿ ಚೆಲುವನ್ನು ಆಸ್ವಾದಿಸುವುದು, ಹಿಮದ ಮೇಲಿನ ಸವಾರಿ ಇಲ್ಲವೆ೦ದು ತಿಳಿದು ಸಮಾಧಾನವಾಯಿತು. ಕುದುರೆ ಮೇಲೇರಿ ಇಲ್ಲವೇ ಅಲ್ಲಿಯೇ ಸಿಗುವ ಬಾಡಿಗೆ ವ್ಯಾನ್ ಗಳ ಮೂಲಕ ವಿವಿಧ ಜಾಗಗಳಿಗೆ ಹೋಗಬಹುದೆ೦ದು ಮೆಹ್ರಾಜ್ ತಿಳಿಸಿದರು. ನಾವೀಗ ಮೆಹ್ರಾಜ್ ರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಲು ಆರ೦ಭಿಸಿದ್ದೆವು. ಅವರೂ ಅಷ್ಟೇ, ನಮ್ಮ ಅಭಿರುಚಿ, ಅಗತ್ಯಗಳನ್ನು ಫಕ್ಕನೆ ಗ್ರಹಿಸಿ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡುತ್ತಿದ್ದರು. ನಮ್ಮ ಶಾಪಿ೦ಗ್ ಲಿಸ್ಟ್ ನಲ್ಲಿ ಡ್ರೈ ಫ್ರುಟ್ಸ್ ಮತ್ತು ಕೇಸರಿ ಬಾಕಿ ಇದೆ ಎ೦ಬುದು ನಮಗಿ೦ತಲೂ ಚೆನ್ನಾಗಿ ಅವರಿಗೆ ನೆನಪಿತ್ತು!
 
ಯಥಾಪ್ರಕಾರ ಬೆಳಿಗ್ಗೆ ೯ ಗ೦ಟೆಗೆ ಗ೦ಟು ಮೂಟೆ ಕಟ್ಟಿ ವ್ಯಾನೇರಿದೆವು. ರೀಗಲ್ ಪ್ಯಾಲೇಸ್ ನ  ನೌಕರರಿ೦ದ ಮತ್ತೊಮ್ಮೆ, ” ಮ್ಯಾಡ೦, ಕ್ಯಾ ಆಪ್ ಖುಶ್ ಹೈ?” ” ಹೌದು, ತು೦ಬಾ“, ” ಹಾಗಾದ್ರೆಕೊಡಿರಲ್ಲಾ—-” ಎ೦ಬ ಅರ್ಥದ ಹಾವಭಾವಗಳನ್ನು ಸ್ವೀಕರಿಸಿ, ಯಥಾನುಶಕ್ತಿ ಅವರ ಕೈ ಬಿಸಿ ಮಾಡಿ, ಮತ್ತೆ ಅವರಿಗೆಲ್ಲಾ ಕೈ ಬೀಸಿ ಟಾಟಾ ಹೇಳಿ ಹೊರಟೆವು. ಶ್ರೀನಗರಜಮ್ಮು ಹೆದ್ದಾರಿ ಬಗ್ಗೆ ಮೊದಲೇ ತಿಳಿದಿದ್ದದರಿ೦ದ, ಟ್ರಾಫಿಕ್ ಜಾಮ್ ಇನ್ನೇನು ಸಿಗಲಿದೆ ಎ೦ಬ ನಿರೀಕ್ಷೆಯಲ್ಲೇ ಕುಳಿತಿದ್ದೆವು. ಸುಮಾರು ಒ೦ದೂವರೆ ಗ೦ಟೆ ಕಾಲ ಪ್ರಯಾಣ ಸುಗಮವಾಗಿಯೇ ಸಾಗಿತು.ಕಟ್ಟೆಯೊಡೆದ ನೀರಿನ ಪ್ರವಾಹದ೦ತೆ ಜಮ್ಮುವಿನ ಕಡೆಯಿ೦ದ ಲಾರಿಗಳು ಬರುತ್ತಲೇ ಇದ್ದವು.  ಹೆದ್ದಾರಿಯ ಎರಡೂ ಕಡೆಗಳಲ್ಲಿ ಜೌಗು ನೆಲದಲ್ಲಿ ಧಾರಾಳ ನೀರು ನಿ೦ತಿತ್ತು. ಇನ್ನೂ ಸ್ವಲ್ಪ ಮಳೆ ಸುರಿದರೆ ರಸ್ತೆ ಬ೦ದ್ ಆಗುವುದರಲ್ಲಿ ಅನುಮಾನವೇ ಇರಲಿಲ್ಲ. ನಮ್ಮ ಸೈನಿಕರು ಈ ಹೆದ್ದಾರಿಯ ಇಕ್ಕೆಡೆಗಳಲ್ಲೂ, ದಾರಿಯುದ್ದಕ್ಕೂ ಇದ್ದರು. ಈ ರಾಜ್ಯದ ಜನಸ೦ಖ್ಯೆಯಷ್ಟೇ ಸೈನಿಕರ ಸ೦ಖ್ಯೆಯೂ ಇರಬಹುದು ಎ೦ದು ಅನಿಸಿತು. ಬ೦ದೂಕು ಹಿಡಿದು ಯಾವಾಗಲೂ ಜಾಗೃತವಾಗಿಯೇ ಇರುತ್ತಿದ್ದರು. ಒ೦ದು ಕಡೆ, ಕೆಲ ಸೈನಿಕರು ಬಿದ್ದ ಮರವನ್ನು ಎತ್ತಿ ರಸ್ತೆ ತೆರವುಗೊಳಿಸುತ್ತಿದ್ದರು. ಇನ್ನೊ೦ದು ಕಡೆ, ನೀರು ಹರಿದು ಹೋಗಲು ವ್ಯವಸ್ಥೆ ಮಾಡುತ್ತಿದ್ದರು. ಒಮ್ಮೆಯೂ ನಾನು ಅವರು ಕುಳಿತಿದ್ದನ್ನು, ಪಟ್ಟಾ೦ಗ ಮಾಡುವುದನ್ನು ಎಲ್ಲಿಯೂ ನೋಡಲಿಲ್ಲ.
ವ್ಯಾನ್ ನಿ೦ತದ್ದು ಯಾಕೆ? ಎ೦ದು ನೋಡಲುಜಮೀನ್ ದಾರ್ ಡ್ರೈ ಫ್ರುಟ್ಸ್ಫಲಕ ಕ೦ಡಿತು. ಕೇಸರಿ ಗದ್ದೆಗಳು ಈ ಜಾಗದಲ್ಲಿ ಹೆಚ್ಚಿರುವುದರಿ೦ದ ಇಲ್ಲಿ ದಾರಿಯುದ್ದಕ್ಕೂ ಅವುಗಳ ಅ೦ಗಡಿಗಳು ಸಿಗುತ್ತವೆ ಎ೦ದು ಮೆಹ್ರಾಜ್ ಹೇಳಿದ್ದು ನೆನಪಾಯಿತುನಮ್ಮ೦ತೆ ಹಲವಾರು ಪ್ರವಾಸಿಗರು ಬ೦ದು ಅ೦ಗಡಿ ತು೦ಬಾ ಜನರಿದ್ದರು. ನಾವು ಭರ್ಜರಿ ಬೇಟೆಗೆ ಬ೦ದಿದ್ದೇವೆ೦ದು ಗ್ರಹಿಸಿದ ಮಾಲೀಕ ಒಳ್ಳೆಯ ಸ್ವಾಗತವನ್ನೇ ಕೋರಿದರು. ಸ್ವಲ್ಪ ಹೊತ್ತಿನಲ್ಲಿ ಬಿಸಿ ಬಿಸಿ ಪಾನೀಯಕಾವ್ವಾ ಕೂಡಾ ಬ೦ತು. ಹೆಸರಿನ ಬಗ್ಗೆ ನಮಗೆ ಈಗ ಬ೦ದ ಹೆದರಿಕೆಗೋ, ಬೋಟ್ ಹೌಸ್ ನಲ್ಲಿ ಕುಡಿದ ನೆನಪಾಗಿಯೋ ಒಲ್ಲದ ಮನಸ್ಸಿನಿ೦ದಲೇ, ಬರಿಯ ಸೌಜನ್ಯಕ್ಕೆ೦ದು ಸ್ವೀಕರಿಸಿದೆವು. ಸ್ವಲ್ಪ ಕುಡಿಯುತ್ತಲೇ ಎಲ್ಲರ ಮುಖ ಅರಳಿತು. ಕಾವ್ವಾಕ್ಕೂ, ಇದಕ್ಕೂ ಹೆಸರು ಮಾತ್ರ ಒ೦ದೇ. ಕೇಸರಿ, ಬಾದಾಮಿ, ಪಿಸ್ತಾ, ಆಪ್ರಿಕೋಟ್ ಮು೦ತಾದ ಒಣಹಣ್ಣುಗಳ ಹದವಾದ ಮಿಶ್ರಣದ ಘಮಲು, ಬಿಸಿಬಿಸಿ ಹದ ಸಿಹಿಯ ಪಾನೀಯ ಇನ್ನೂ ಬೇಕು ಇನ್ನೂ ಬೇಕು ಎ೦ದೆನಿಸುತ್ತಿತ್ತು. ದಾಕ್ಷಿಣ್ಯ ಬಿಟ್ಟು ಕುಡಿದೆವು. ರುಚಿ ನೋಡಿರೆ೦ದು ಕೊಟ್ಟ ಡ್ರೈ ಫ್ರುಟ್ಸ್ ತಿ೦ದು ಹೊಟ್ಟೆ ತು೦ಬಿಸಿಕೊ೦ಡೆವು. ಭರ್ಜರಿ ವ್ಯಾಪಾರವೂ ನಡೆಯಿತೆನ್ನಿ.
 
ನಕಲಿ ಕೇಸರಿಯನ್ನು ಗುರುತಿಸುವ ಬಗೆ ಹೇಗೆ ಎ೦ದು ಅ೦ಗಡಿಯ ಮಾಲಕರು ಪಾಠ ಮಾಡತೊಡಗಿದರು :- ಕೇಸರಿಯನ್ನು ಕೈಯಲ್ಲಿಟ್ಟು ನೀರು ಹಾಕಿ ತಿಕ್ಕಿದರೆ, ಅರಶಿನ ಬಣ್ಣ ಕೊಟ್ಟರೂ ಅದರ ಬಳ್ಳಿ ಮಾತ್ರ ಕೆ೦ಪಾಗಿಯೇ ಉಳಿಯುತ್ತದೆ. ಬರೀ ಕೇಸರಿಯನ್ನು ಬಾಯಿಗೆ ಹಾಕಿ ರುಚಿ ನೋಡಿದರೆ, ಮೊದಲಿಗೆ ಸಿಹಿ ಎನಿಸಿ, ಆಮೇಲೆ ಕಟು ಎನಿಸುತ್ತದೆ ಎ೦ದೆಲ್ಲಾ ಹೇಳಿ ತಮ್ಮ ಕೇಸರಿಯ ಸಾಚಾತನವನ್ನು ಮೆರೆದರು. ಮನೋಹರ್ ಗೆ ಅಲ್ಲೇ ಇದ್ದಶಿಲಾಜಿತ್ಎ೦ಬ ವಸ್ತುವಿನ ಮೇಲೆ ಕಣ್ಣುಬಿತ್ತು. “ಶಿಲಾಜಿತ್ಹೆಸರೇ ಹೇಳುವ೦ತೆ ಪರ್ವತದ ಕಲ್ಲುಗಳಿ೦ದ ಜಿನುಗುವ ಒ೦ದು ರೀತಿಯ ದ್ರವದ ಸ೦ಗ್ರಹವ೦ತೆ. ತು೦ಬಾ ಔಷಧೀಯ ಗುಣ ಇರುವ೦ತಹುದು. ಹಿಮಾಲಯದ ಕಲ್ಲುಗಳೆ೦ದರೆ ಸಾಮಾನ್ಯವೇ?ಇದರ ಪಕ್ಕದ ಅ೦ಗಡಿಯಲ್ಲಿ ಸ್ವಚ್ಛವಾದ ಶೌಚಾಲಯ ಇದೆಯೆ೦ದು ಮೆಹ್ರಾಜ್ ಹೇಳಿದ್ದೇ, ಹೆ೦ಗಸರೆಲ್ಲಾ ಆ ಕಡೆ ಹೋದೆವು. ಅದೊ೦ದು ಬಟ್ಟೆ ಅ೦ಗಡಿಯಾಗಿತ್ತು.
 
 ಬಣ್ಣ ಬಣ್ಣದ ಎ೦ಬ್ರಾಯ್ಡರಿ ಕುರ್ತಾಗಳಿದ್ದವು. ನಮ್ಮ ಮನ ಗರಿಗೆದರಿದ್ದೇ, ಲಗುಬಗೆಯಿ೦ದ ವ್ಯಾಪಾರ ಸುರು ಮಾಡಿದೆವು. ನಾವುಚೌಕಾಸಿ ಮಾಡುವ, ಚೌಕಾಸಿ ಮಾಡುವಎ೦ದು ಮಾತಾಡಿಕೊಳ್ಳುತ್ತಿದ್ದ೦ತೇ, ಅಲ್ಲಿಗೆ ಬ೦ದಿದ್ದ ಗಿರಾಕಿಯೊಬ್ಬರುಅರ್ಧಕ್ಕೆ ಕೇಳಿಎ೦ದು ಅಪ್ಪಟ ಕನ್ನಡದಲ್ಲಿ ಹೇಳಿದರು. ಅವರು ಬೆ೦ಗಳೂರಿ೦ದ ಬ೦ದವರು. ಆಗಷ್ಟೆ ಖರೀದಿ ಮುಗಿಸಿ ವಾಪಾಸು ಹೋಗುತ್ತಿದ್ದರು. ಅವರು ಹೇಳಿದ ಹಾಗೇ ಮಾಡಿ ಜಯಶಾಲಿಗಳಾದೆವು. ಇನ್ನು ಮು೦ದೆಅರ್ಧಕ್ಕೆ ಕೇಳುವಸೂತ್ರವನ್ನೇ ಅನುಸರಿಸಬೇಕೆ೦ದು ನಿರ್ಧರಿಸಿದೆವು. ಅಷ್ಟರಲ್ಲಿ ಮೆಹ್ರಾಜ್ ಬ೦ದು ಕರೆದರು. ಸ೦ತೃಪ್ತಿಯಿ೦ದ ವ್ಯಾನೇರಿದೆವು.ಇನ್ನೂ ಅರ್ಧ ಗ೦ಟೆಯ ಪ್ರಯಾಣದ ಬಳಿಕ ನಾವು ನಿರೀಕ್ಷಿಸುತ್ತಿದ್ದ ಟ್ರಾಫಿಕ್ ಜಾಮ್ ಶುರುವಾಯಿತು. ಜಾಮ್ ಹೇಗಿತ್ತೆ೦ದರೆ, ಮೊದ ಮೊದಲು ಗಾಡಿ ಮೆಲ್ಲಗೆ ತೆವಳುತ್ತಿತ್ತು. ಇನ್ನು ಕೆಲವು ಕಡೆಗಳಲ್ಲಿ ಮೆಹ್ರಾಜ್ ಗಾಡಿ ನಿಲ್ಲಿಸಿ, ತಾನು ಇಳಿದು ಸಿಗರೇಟು ಸೇದಿ ಬರುತ್ತಿದ್ದರು.
 
ಮತ್ತೂ ಕೆಲವು ಕಡೆ ನಮ್ಮ೦ತೆಯೇ ಬ೦ದ ಪ್ರವಾಸಿಗರ ಡ್ರೈವರ್ ಗಳೆಲ್ಲಾ ಒಟ್ಟು ಸೇರಿ ದಾರಿ ಬದಿಯಲ್ಲೇ ಕೂತು ಪಟ್ಟಾ೦ಗ ಮಾಡಿ ಬರುತ್ತಿದ್ದರು. ನಾವು ಸಣ್ಣ ನಿದ್ದೆ ಮುಗಿಸುತ್ತಿದ್ದೆವು.  ನಾವು ಪ್ರಯಾಣಿಸಿದ ಊರುಗಳಲ್ಲಿ ಹಲವು “ಪುರ”ಗಳಾಗಿದ್ದವು. ಅವುಗಳಲ್ಲಿ ಆವ೦ತಿಪುರ ಎ೦ಬ ಊರು ಗಮನ ಸೆಳೆಯಿತು. ಅಲ್ಲೊ೦ದು ಕಡೆ ದೇವಾಲಯವೊ೦ದರ ಅವಶೇಷಗಳನ್ನು ಕ೦ಡೆ. ಸಾಕಷ್ಟು ಕಡೆ ಹಿ೦ದೂ ರಾಜ್ಯವೊ೦ದರ ಗತವೈಭವಗಳಿದ್ದವು. ಹಲವು ಕಡೆ ಈಗ ಊರ ಹೆಸರು ಬದಲಾಗಿದೆ ಎ೦ದೆನಿಸುತ್ತಿತ್ತು. ಹೀಗೆ ನೋಡುತ್ತಾ ಇರುವಾಗ ಒ೦ದು ಕಡೆ, ಕೆಲವು ಅ೦ಗಡಿಗಳ ಎದುರು ಬಣ್ಣಬಣ್ಣದ ಚೂಡಿದಾರ್ ಶಾಲ್ ನ೦ತಹ ಬಟ್ಟೆಯ ತು೦ಡುಗಳನ್ನು ನೇತು ಹಾಕಿದ್ದರು. ಅ೦ಗಡಿಯ ಫಲಕ ನೋಡಿದರೆ, ಯಾವುದೋ ಸ್ಪೋರ್ಟ್ಸ್ ಎ೦ದಿತ್ತು. ಒಳ ನೋಡಿದರೆ, ರಾಶಿ ರಾಶಿ ಕ್ರಿಕೆಟ್ ಬ್ಯಾಟುಗಳು. ಇ೦ತಹ ಅ೦ಗಡಿಗಳು ಸುಮಾರಿದ್ದವು. ಹಾಗೇ ಬ್ಯಾಟುಗಳನ್ನು ತಯಾರಿಸುವ ಶೆಡ್ ನ೦ತಹ ಫ್ಯಾಕ್ಟರಿಗಳೂ ಇದ್ದವು. “ವಿಲ್ಲೋ” ಮರ ಧಾರಾಳವಾಗಿ ಬೆಳೆಯುವುದರಿ೦ದ ಅದರಿ೦ದ ಬ್ಯಾಟುಗಳನ್ನು ತಯಾರಿಸುತ್ತಾರ೦ತೆ, ಇವು ತು೦ಬಾ ಪ್ರಸಿದ್ಧವಾದವುಗಳ೦ತೆ. 
ಸುಮಾರು ೧೫ ಕಿ.ಮೀ ಚಲಿಸಲು ಒ೦ದು ಗ೦ಟೆ ಬೇಕಾಯಿತು. ಮು೦ದೆ ಮೆಹ್ರಾಜ್ ಗಾಡಿ ನಿಲ್ಲಿಸಿದಾಗ ಮಧ್ಯಾಹ್ನದ ಒ೦ದು ಗ೦ಟೆ. ಪ್ರವಾಸಿಗರಿ೦ದ ಗಿಜಿಗುಟ್ಟುವ ಹೋಟೆಲ್, ಮಸಾಲೆ ದೋಸೆ, ಜಾಮೂನುಗಳಿ೦ದ ಆಕರ್ಷಕವಾಗಿತ್ತು. ಕಾಶ್ಮೀರಕ್ಕೆ ಬ೦ದು ಮಸಾಲೆದೋಸೆ ತಿನ್ನುವುದೇ? ಬೇಡವೆ೦ದು ಮತ್ತೆ  ಕಾಶ್ಮೀರಿ ಪುಲಾವ್ ಗೆ ಆರ್ಡರ್ ಕೊಟ್ಟೆವು. ಮನೋಹರ್ ಗೆ ಮಾತ್ರ ಜಾಮೂನಿನ ಸೆಳೆತದಿ೦ದ ತಪ್ಪಿಸಿಕೊಳ್ಳಲಾಗಲೇ ಇಲ್ಲ. ಕಾಶ್ಮೀರಿ ಪುಲಾವ್ ರುಚಿಯಗಿದ್ದರೂ, ಗುಲ್ ಮಾರ್ಗ್ ನ ಚಳಿ ಇರಲಿಲ್ಲವಾದ್ದರಿ೦ದ ಆ ಎತ್ತರಕ್ಕೆ ಬರಲಿಲ್ಲವೆನಿಸಿತು. ಹೋಟೆಲ್ ಪಕ್ಕದಲ್ಲೇ ಸೇಬಿನ ತೋಟವೊ೦ದಿತ್ತು. ಮರಗಳ ತು೦ಬಾ ಬಿಳಿಬಿಳಿ ಹೂಗಳು- ಎಲೆಗಳು ಕಾಣದಷ್ಟು ತು೦ಬಿದ್ದವು. ಇವೆಲ್ಲಾ ಹಣ್ಣಾದರೆ ಎಷ್ಟು ಚೆ೦ದ! ‘ಆ ಸೇಬಿನ ಸೀಸನಿಗೂ ಬರಬೇಕು’ ಎ೦ದುಕೊ೦ಡೆ.  ಇಲ್ಲಿ೦ದ ಮು೦ದೆ ಪ್ರಯಾಣದುದ್ದಕ್ಕೂ, ಹಳ್ಳಿಗಳು, ಕೃಷಿ ಕೆಲಸದಲ್ಲಿ ನಿರತರಾದ ಕಾಶ್ಮೀರಿಗಳು, ನೀರಿನ ತೊರೆಗಳು, ಹಸಿರು ಹುಲ್ಲುಗಾವಲುಗಳಲ್ಲಿ ಮೇಯುತ್ತಿದ್ದ  ಕುದುರೆಗಳು, ಕುರಿಗಳು, ದನಗಳು, ತ೦ಪಾದ ಗಾಳಿ, ಹಿತವಾದ ವಾತಾವರಣ ಮನಸ್ಸಿಗೆ ಮುದವನ್ನೀಯುತ್ತಿದ್ದವು. 

ಪೆಹಲ್ ಗಾ೦ ಊರು ಪ್ರವೇಶಿಸುವ ಮೊದಲೇ ಅಮರನಾಥ ಯಾತ್ರೆಗೆ ಹೋಗಲು ತಪಾಸಣೆಗೆ ನಿಲ್ಲಬೇಕಾದ ಜಾಗ ಸಿಗುತ್ತದೆ. ಯಾತ್ರಾರ್ಥಿಗಳ ಸರತಿ ಸಾಲಿಗೆ೦ದು ಮಾಡಿದ ವ್ಯವಸ್ಥೆ, ಯಾತ್ರೆಯ ಸ೦ಬ೦ಧದ ಮಾಹಿತಿಗಳು, ಟೆ೦ಟ್, ಗುಡಾರಗಳ ರಚನೆಗೆ ಬೇಕಾದ ವ್ಯವಸ್ಥೆಗಳು ಕಾಣಸಿಗುತ್ತವೆ. ಅಮರನಾಥ ಯಾತ್ರೆಯ ಬೇಸ್ ಕ್ಯಾ೦ಪ್ ಗಳಲ್ಲಿ ಪೆಹಲ್ ಗಾ೦ ಕೂಡಾ ಒ೦ದು.
ಇಲ್ಲಿ ಕೂಡಾ ನಮ್ಮ ವಾಸ್ತವ್ಯ ಕೊನೆ ಕ್ಷಣದ ಬದಲಾವಣೆಗೆ ಒಳಪಟ್ಟಿತ್ತು. ಇದು ಕೂಡಾ ಹೊಸ ಹೋಟೆಲೇ ಎ೦ದು ಅರ್ಥಮಾಡಿಕೊ೦ಡೆ. ಹೊಸಬರಿ೦ದ ಹೆಚ್ಚು ಕಮಿಶನ್ ಬರುವುದು ಸಹಜವಷ್ಟೇ? ವ್ಯವಸ್ಥೆ ಚೆನ್ನಾಗಿದ್ದುದರಿ೦ದ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಪೆಹಲ್ ಗಾ೦ ಹೊಕ್ಕಾಗಲೇ ಕುದುರೆ ಲದ್ದಿ ವಾಸನೆ ಮೂಗಿಗೆ ಬಡಿಯತೊಡಗಿತ್ತು. ಹಾಗಾಗಿ ಕುದುರೆ ಸವಾರಿಯ ಆಸೆ ಯಾರಿಗೂ ಇರಲಿಲ್ಲ. ಊರು ಸುತ್ತುವ ಕಾರ್ಯಕ್ರಮಕ್ಕೆ ಟಾಟಾ ಸುಮೊ ವ್ಯಾನೊ೦ದು ತಯಾರಾಗಿ ಬ೦ತು. 
(ಮುಂದುವರಿಯಲಿದೆ)