ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ!

ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ ಅತಿಥಿ’ಗಳನ್ನು ಸೇರಿಸಿಕೊಳ್ಳುವ ಅವಕಾಶವಿದ್ದುದರಿಂದ ನಮ್ಮಿಬ್ಬರಿಗೆ ಪರಿಚಯ ಬಿಲ್ಲೆ ಮತ್ತು ರಹದಾರಿ ಪತ್ರ ಸಂಗ್ರಹಿಸಿಕೊಂಡೆವು. ಒಟ್ಟಾರೆ ವಠಾರ ಪ್ರವೇಶದಲ್ಲೇ ಅತಿಥಿ ಪತ್ರದ ತಪಾಸಣೆ, ವೈಯಕ್ತಿಕ ಚೀಲ ಹಾಗೂ ದೇಹ ತಡಕುವುದು, ಲೋಹ ಪರೀಕ್ಷಕ ಯಂತ್ರಕ್ಕೆ ಒಡ್ಡುವುದೆಲ್ಲ ಇತ್ತು. ಮುಂದೆ `ನಮ್ಮ’ ಗುರುತಿನ ಪದಕವಿದ್ದರೂ ವಿಸ್ತಾರ ವಠಾರದಲ್ಲಿ ಹರಡಿದ್ದ ಪ್ರತಿ ಕಛೇರಿ, ಪ್ರದರ್ಶನಾಲಯ, ಥಿಯೇಟರ್‌ಗಳ ದ್ವಾರಗಳಲ್ಲೂ ತಡಕು ಸೇವೆ, ಲೋಹ ಪರೀಕ್ಷಕ ಚೌಕಟ್ಟು ಕಡ್ಡಾಯವಾಗಿ ನಡೆದಿದ್ದು ಹರ್ಷದ ಹೊಳೆಯಾಳದ ಅನೂಹ್ಯ ಭಯಗಳನ್ನು ನೆನಪಿಸುತ್ತಲೇ ಇತ್ತು. ಹೆಚ್ಚುವರಿಯಾಗಿ ಥಿಯೇಟರ್ ಪ್ರವೇಶದಲ್ಲಿ ನಮ್ಮ ನೀರಬಾಟಲಿಗಳನ್ನು ಹೊರಗಿಡಿಸುತ್ತಿದ್ದರು. ಇದು ಭದ್ರತೆಯ ಕ್ರಮವಲ್ಲ, ಶುಚಿತ್ವದ ಆವಶ್ಯಕತೆ ಎಂದು ತಿಳಿದಾಗ ನಮ್ಮ `ಸಂಸ್ಕೃತಿ’ಯ ಬಗ್ಗೆ ನಾಚಿಕೆಯೂ ಆಯ್ತು.

ಉತ್ಸವದ ಪ್ರಧಾನ ವಠಾರದಲ್ಲಿ ನಾಲ್ಕು ಪ್ರದರ್ಶನಾಂಗಣಗಳನ್ನೊಳಗೊಂಡ ಥಿಯೇಟರ್ ಸಮುಚ್ಚಯ ಅಥವಾ ಮಲ್ಟಿಪ್ಲೆಕ್ಸ್ – ಇನಾಕ್ಸ್ ಇತ್ತು. ಅದರ ಹೊರಗಿನ ವಿಸ್ತಾರ ಅಂಗಳದ ವ್ಯವಸ್ಥಿತ ಮರಗಿಡಗಳ ನೆರಳಿನ ಕಟ್ಟೆಗಳಲ್ಲಿ, ಚದರಿದಂತಿದ್ದ ಕಲ್ಲ ಮಂಚಗಳಲ್ಲಿ, ಉತ್ಸವಕ್ಕಾಗಿ ಬಂದ ಕಾಫಿ, ಕುರುಕಲುಗಳ ಹಲವು ಮಳಿಗೆಗಳ ಕುರ್ಚಿಗಳಲ್ಲಿ ಅಸಂಖ್ಯ ಪರಿಚಯಗಳು, ಮಾತುಗಳು, ಸಂಬಂಧಗಳು ಬೆಳೆಯುತ್ತಿದ್ದವು. ಇಲ್ಲೇ ಸುರೇಶರ ಜಂಗಮವಾಣಿ ರಿಂಗಣಿಸಿ “ಅರೆ! ಅಮ್ಮ (ಡಾ| ವಿಜಯಾ) ಬಂದಿದ್ದಾರೆ” ಉದ್ಗಾರ ಹೊರಡಿಸಿತು. ತಮಿಳ ಹಿರಿಯರೊಬ್ಬರ ಚಹರೆಪಟ್ಟಿಗೆ ಹತ್ತಿರತ್ತಿರವಿದ್ದ ತಪ್ಪಿಗೆ ಅವರು ನನ್ನ ಬೆನ್ನು ತಡವಿದರೂ ಮತ್ತೆ ಆತ ಶ್ರೀಲಂಕಾದ ಹಿರಿಯ ಸಿನಿ-ವಿಮರ್ಶಕನೆಂಬ ಪರಿಚಯ ಲಾಭವಾದದ್ದು ಇಲ್ಲೇ. ಪಣಜಿಯೊಳಗೆ ನಾಗತಿಹಳ್ಳಿ, ತಾರಾಗಡಣದೊಳಗೂ ಕನ್ನಡಕ್ಕೊಬ್ಬಳೇ ತಾರಾ, ಪ್ರವೇಶಪತ್ರದ ಸಾಲಿನಲ್ಲಿ ಅಡ್ಡೂರು ಹೀಗೇ ಬಹು ಪರಿಚಿತರಿದ್ದಂತೆ ಎಲ್ಲೋ ನೋಡಿದ್ದೇವಲ್ಲಾ ಎನ್ನುವ ಅಸಂಖ್ಯ ಮುಖಗಳು (ಯಾವ್ಯಾವುದೋ ಸಿನಿಮಾಗಳ ಕಲಾವಿದರು) ಅಲ್ಲೆಲ್ಲ ಹರಿದಾಡುತ್ತಿದ್ದವು. ಇನಾಕ್ಸ್ ಹೊರಜಗುಲಿಯ ಒಂದಂಚಿಗೆ ಒಂದು ಮೇಜಿಟ್ಟು ಎರಡೆರಡು ಮಾದರಿಯ ದಿನದರ್ಶಿ ಉಚಿತ ವಿತರಣೆಗೆ ಪೇರಿಸಿದ್ದರು. ಒಂದು ಕೇವಲ ಸಿನೆಮಾದ ಹೆಸರು, ವೇಳೆ, ಥಿಯೇಟರ್ ಕೋಷ್ಠಕ. ಇನ್ನೊಂದು ಭರ್ಜರಿ ವರ್ಣರಂಜಿತ ನಾಲ್ಕು ಪುಟದ IFFI Daily. ಇದರಲ್ಲಿ ಆಯಾ ದಿನದ ಉತ್ಸವದ ಇತರ ಕಾರ್ಯಕ್ರಮಗಳ ಬಗ್ಗೆ, ಸಂದ ಕಲಾಪಗಳ ವರದಿಯಲ್ಲದೆ ದಿನದ ಮುಖ್ಯ ಚಿತ್ರಗಳ ಕಿರು ಪರಿಚಯಾತ್ಮಕ ಟಿಪ್ಪಣಿಗಳೂ ಇರುತ್ತಿದ್ದವು. ಜಗುಲಿಯ ಉದ್ದಕ್ಕೂ ಗೋಡೆಯ ಮೇಲೆ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಚಿತ್ರಗಳ ಮೂರಡಿ ಎತ್ತರದ ಪೋಸ್ಟರುಗಳನ್ನು ಎರಡು ಸಾಲಿನಲ್ಲಿ ಪ್ರದರ್ಶಿಸಿದ್ದರು. ಇತ್ತ ಯಾವುದೋ ಜರ್ಮನ್, ಅತ್ತ ಯಾವುದೋ ಇರಾನಿಯನ್ ಮಧ್ಯದಲ್ಲಿ `ಗುಬ್ಬಚ್ಚಿಗಳು’, ಅದೂ ಎರಡೆರಡು ಕಡೆ; ಉಡ್‌ಲ್ಯಾಂಡ್ಸ್ ಹೋಟೆಲಿನಲ್ಲಿ ಪುತ್ತಪ್ಪ ಬ್ಯಾರಿ! [ಉಪಕಥೆಗೆ ಕ್ಷಮಿಸಿ: ನನ್ನ ಬಾಲ್ಯದಲ್ಲಿ ಅಜ್ಜನ ಮನೆಯ ಎತ್ತಿನ ಗಾಡಿಹೊಡೆಯುತ್ತಿದ್ದವ ಈ ಪುತ್ತಪ್ಪ ಬ್ಯಾರಿ. ನಾನು ಅಂಗಡಿ ತೆರೆಯುವ ತಯಾರಿಯಲ್ಲಿ (೧೯೭೫) ಒಮ್ಮೆ ಕಾರ್ಯಾರ್ಥ ಈತನನ್ನು ಮಂಗಳೂರಿಗೆ ಕರೆತಂದಿದ್ದೆ. ಮಧ್ಯಾಹ್ನದೂಟಕ್ಕೆ ನನಗೆ ಬಳಕೆಯಿದ್ದ ಉಡ್‌ಲ್ಯಾಂಡ್ಸ್‌ಗೆ ಸಹಜವಾಗಿ ಕರೆದೊಯ್ದೆ. ಒಳಗೆ ಅರ್ಧ ದಾರಿ ಬಂದ ಆತ ಸುತ್ತ ನೋಡುತ್ತ ಒಮ್ಮೆಲೇ ನಿಂತ. ಕೆಳಧ್ವನಿಯಲ್ಲಿ ತುಳುವಿನಲ್ಲೇ ಹೇಳಿದ “ಅಣ್ಣಾ ಇದು ನನಗೆ (ನನ್ನಂಥ ಬಡವರಿಗೆ) ಹೇಳಿದ್ದಲ್ಲ. ಸುಮ್ಮನೇ ಎರಡು ರೂಪಾಯಿ ಕೊಡಿ, ನಾನು ಹೊರಗೆಲ್ಲಾದರೂ ಹುಡುಕಿಕೊಳ್ಳುತ್ತೇನೆ!”). ಅಭಯನಿಗೆ ಆಗಲೇ ನ್ಯೂಯಾರ್ಕಿನಲ್ಲಿ ಇಂಥದ್ದನ್ನು ಅನುಭವಿಸಿದ ನೆನಪಲ್ಲಿ ವಿಶೇಷ ಅನ್ನಿಸಿರಲಾರದೋ ಏನೋ, ಆದರೆ ಅವನಪ್ಪನಿಗೆ! ಸಿನಿಮಾರಂಗದ ತೀರಾ ಸಾಮಾನ್ಯ ಪ್ರೇಕ್ಷಕಿಯ ಮಟ್ಟದಿಂದ ಮೇಲಿನ ಯಾವ ಕಲ್ಪನೆಯೂ ಇಲ್ಲದೇ ತಿಂಗಳ ಹಿಂದಷ್ಟೇ ಕಣ್ಣರಳಿಸಿದ ಅವನ ಹೆಂಡತಿ ರಶ್ಮಿಗೋ?!!

ರಾಣೀ ಮಂಚದ ಕೆಳಗೇ ಕಂಡೆನು

IFFI Dailyಯ ಅಂದಿನ ಸಂಚಿಕೆ ಇಟ್ಟುಕೊಂಡು ಅಭಯ ನಮ್ಮ ಕಾರ್ಯಕ್ರಮದ ಹಂಚಿಕೆಯೇನೋ ಹಾಕಿದ. ಉತ್ಸವದಲ್ಲಿ ಸಿನಿಮಾ ವೃತ್ತಿಪರರಿಗೆ ದಿನಕ್ಕೆ ಐದು, ಇತರರಿಗೆ ಮೂರು ಪ್ರದರ್ಶನಗಳಿಗೆ ಅವಕಾಶವಿತ್ತು. ಆದರೆ ಸಾರ್ವಜನಿಕ ಸರತಿ ಸಾಲಿನಲ್ಲಿ ಹೋದಾಗ ಎರಡು ಚಿತ್ರ ಬಯಸಿದ್ದು, ಮತ್ತೊಂದರ ಮಂದಿರ ಭರ್ತಿಯಾದ ಕಾರಣ ಬದಲಿಗೂ ಪಾಸ್ ದಕ್ಕಿತು. ಥಿಯೇಟರ್‌ಗಳು ತೆರೆಯಲು ಇನ್ನೂ ಹೊತ್ತಿದ್ದುದರಿಂದ ಒಟ್ಟು ವ್ಯವಸ್ಥೆಯ ಪರಿಚಯ ಮಾಡಿಕೊಳ್ಳುವಂತೆ ಸುತ್ತು ಹಾಕಿದೆವು. ಒಂದೆಡೆ ಸಿನಿಮಾ ವೃತ್ತಿಪರರಿಗೆ ಹೆಚ್ಚಿನ ಮಾಹಿತಿ, ಸೌಕರ್ಯ ಕಲ್ಪಿಸಲು ಪ್ರತ್ಯೇಕ ಗೂಡು ತೆರೆದಿಟ್ಟದ್ದು ಸಿಕ್ಕಿತು. ಅಲ್ಲಿ ನಮಗೆ ಸಿಕ್ಕ ಬದಲಿ ಚಿತ್ರದ ಪಾಸನ್ನೂ ಬೇಕಾದ್ದಕ್ಕೆ ಬದಲಿಸಿಕೊಳ್ಳಲು ಅವಕಾಶವಾಯ್ತು. ಒಂದೆಡೆ ಅಂಗಳದಲ್ಲಿ `ಚಿತ್ರ ಮಾರುಕಟ್ಟೆ’ ಎಂಬ ಬೋರ್ಡು ಹಚ್ಚಿದ್ದು ರಶ್ಮಿಯ ಕುತೂಹಲ ಸೆಳೆಯಿತು. ಜೋತು ಬಿದ್ದ ಬಗಲಚೀಲದಲ್ಲಿ ಕರಪತ್ರಗಳು, ಪೋಸ್ಟರುಗಳು, ವಿವಿಧ ಪತ್ರಿಕಾ ವರದಿ/ವಿಮರ್ಶೆಗಳ ಛಾಯಾಪ್ರತಿಗಳು ಮತ್ತು ನಮ್ಮ `ಮಾಲಿನ’ ಸೀಡಿ/ಡೀವೀಡಿ ಗೌರವ ಪ್ರತಿಗಳನ್ನು ತುಂಬಿಕೊಂಡು ಸುರೇಶ ಮತ್ತು ಅಭಯ “ಹಾಂ ಬನ್ನೀ ಸಾರ್, ಇದನ್ನ್ ಕೊಳ್ಳೀ ಸಾರ್! ಒಳ್ಳೇ ಮಾಲು, ಸಸ್ತಾ ಮಾಲು…” ಎಂದಿತ್ಯಾದಿ ರಾಗ ತೆಗೆಯಲಿರುವುದನ್ನು ವಿವರಿಸಿದಾಗ ಅಕ್ಷರಶಃ ನಂಬಿಬಿಟ್ಟಿದ್ದಳು! “ನನಗ೦ತೂ ಇದು ತೀರ ಎ೦ದರೆ ತೀರಾ ಹೊಸದಾದ ಪ್ರಪ೦ಚ. ಗೋವಾವೂ ಹೊಸದು, ಚಿತ್ರೊತ್ಸವವೂ ಹೊಸದು, ಮಾವನವರೂ ಹೊಸಬರು, ಗ೦ಡನ೦ತೂ ಮತ್ತೂ ಹೊಸಬರು !! (ಮದುವೆ ಅದ ಮೇಲೆ ನಾನೊ೦ದು ತೀರ ಅವರೊ೦ದು ತೀರ !!). ಮೊದಲ ಬಾರಿಗೆ ಅಪರಿಚಿತ ಪ್ರಪ೦ಚದೊಳಗೆ ಹೊಕ್ಕ ಭಾವ. ಕುತೂಹಲವನ್ನು ಕೆರಳಿಸುತ್ತಿದ್ದ ಜನಗಳು, ಮಾತುಗಳು, ವಿಷಯಗಳು… ಹೇಗೆ ಅರಗಿಸಿಕೊಳ್ಳಲಿ ಈ ರಾಕ್ಷಸ ಅನುಭವಗಳನ್ನು.. ಹೇಗೆ ಬೆರೆಯಲಿ ಹೊಸ ಜನರೊಡನೆ.. ಹೇಗೆ.. ಹೇಗೆ..” (ಅವಳ ಪ್ರಕಟಣೆಗಿಲ್ಲದ ಪ್ರವಾಸಕಥನದಿಂದ ಉದ್ಧೃತ)

ನಮ್ಮ ದಿನದ ಮೊದಲ ಚಿತ್ರ ಇನಾಕ್ಸ್‌ನ ಮೂರನೇ ವಿಭಾಗದಲ್ಲಿತ್ತು. ಒಳ ಹೋಗಿ ಕೂರುತ್ತಿದ್ದಂತೆ ಅಭಯನ ವೀಕ್ಷಕ ವಿವರಣೆ “ನಮ್ಮ ಹಿಂದೆ ಬಂದು ಕೂತವರು ಭಾರತದ ಅತ್ಯುತ್ತಮ ಚಿತ್ರಕಥೆ ಬರಹಗಾರ. ನಮಗೆ ಎರಡನೇ ವರ್ಷದಲ್ಲಿ (ಎಫ.ಟಿ. ಐ.ಐನಲ್ಲಿ) ಒಂದು ಕಮ್ಮಟ ನಡೆಸಿದ್ದರು. ಎದುರು ಸಾಲಿನಲ್ಲಿ ನಿಧಾನಕ್ಕೆ ಕುರ್ಚಿ ಆಯುತ್ತಿದ್ದರೆ ನೋಡಿ, ಅಡೂರ್ ಗೋಪಾಲಕೃಷ್ಣನ್. ಅವರು ಇಲ್ಲಿ ಬರಿಯ ಪ್ರೇಕ್ಷಕ. ಅರೆ, ಅಲ್ಲಿ ಛಾಬ್ರಿಯಾ ಸಾರ್, ಜೊತೆಗೆ ಮಣಿಕೌಲ್!!” ಎಂದವನೇ ತನ್ನ ಜೋಳಿಗೆ ಪರಡಿ ಗುಬ್ಬಚ್ಚಿ ಕರಪತ್ರಗಳು ಹಿಡಿದುಕೊಂಡು ಅವರನ್ನು ಭೇಟಿಯಾಗಲು ಓಡಿದ. ಮಣಿಕೌಲ್ ಕೂಡಾ ಪುಣೆಯಲ್ಲಿ ಇವನ ತರಗತಿಗೆ ವಿಶೇಷ ಕಮ್ಮಟ ನಡೆಸಿದ್ದರಂತೆ. ಅಭಯ ಅವರನ್ನು ಅಸಾಧಾರಣ ಬುದ್ಧಿವಂತ ಮತ್ತು ಮನುಷ್ಯ ಎಂದು ಹೇಳುತ್ತಿದ್ದದ್ದಕ್ಕೆ ಸರಿಯಾಗಿ ಇವನನ್ನು ಕಂಡಕೂಡಲೇ ಹೆಸರಿನೊಂದಿಗೆ ಗುರುತು ಹಿಡಿದರಂತೆ! (ಸುಮಾರು ಮೂರು ವರ್ಷದ ಹಿಂದೆ ಕೇವಲ ಮೂರು ವಾರಕಾಲ ಕಮ್ಮಟ ನಡೆದಾಗ ಇದ್ದ ಹನ್ನೊಂದರಲ್ಲಿ ಅಭಯ ಒಬ್ಬ. ಅನೇಕ ವರುಷಗಳಿಂದ ಹಾಲೆಂಡಿನಲ್ಲಿ ಸಂಗೀತ ಪಾಠ ಮಾಡಿಕೊಂಡಿರುವವರು. ಹೌದು! ಇವರು ಸಿನೆಮಾ ನಿರ್ದೇಶಕರಾದರೂ ಇವರಿಗೆ ಇರುವ ಅನೇಕ ಆಸಕ್ತಿಗಳಲ್ಲಿ ಉತ್ತರಾದಿ ಸಂಗೀತವೂ ಒಂದಂತೆ! ಭಾರತೀಯ ಚಿತ್ರರಂಗದ ಅತ್ಯಪೂರ್ವ ರತ್ನಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಇವರು ಈ ಚಿತ್ರೋತ್ಸವಕ್ಕಾಗಿ ಬಂದಿದ್ದರಂತೆ!) ಇತರ ಸಹಪಾಠಿಗಳಲ್ಲೂ ಕೆಲವರನ್ನು ವಿಚಾರಿಸಿದ್ದಲ್ಲದೆ ಅವಶ್ಯ ಗುಬ್ಬಚ್ಚಿ ನೋಡಲು ಇರುವುದಾಗಿ ಹೇಳಿದರು.