ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ – ೪

ಸದ್ದುಗದ್ದಲ, ದುಃಖ-ದುಮ್ಮಾನಗಳಿಂದ ಕೂಡಿದ್ದು ಜೀವನವಲ್ಲ. ಮೌನವಾಗಿ ನಡೆದ ಪರಿವರ್ತನೆಗಳೂ ಜೀವನದ ಭಾಗವೇ ಆಗಿದೆ. ನನಗೆ ಬುದ್ಧಿ ತಿಳಿಯುವಾಗಿನಿಂದ ಒಂದು ಭಯದ ವಾತಾವರಣದಲ್ಲಿ ಬದುಕಿದ ನನಗೆ ದೊರೆತ ಮೊದಲ ಬಿಡುಗಡೆಯೇ ನಮ್ಮ ಸ್ಥಳಾಂತರ. ಒಂದು ಕೋಳಿಗೂಡಿನಂತಹ ಸಣ್ಣ ಮನೆಗೆ ನಮ್ಮ ಸಂಸಾರ ಸ್ಥಳಾಂತರವಾಯಿತು. ಸ್ವಾತಂತ್ರ್ಯವೇನೆಂದು ಅರ್ಥವಾಗಬೇಕಾದರೆ ಅವರಿಗೆ ಪಾರತಂತ್ರ್ಯದ ನೋವಿನ ಅರಿವಿರಬೇಕು. ಒಂದು ಶುಭದಿನದಲ್ಲಿ ದೊಡ್ಡಮ್ಮ (ದೂಮ ದೊಡ್ಡಪ್ಪನ ಪತ್ನಿ)ನ ಮನೆಯ ಹಿಂದುಗಡೆಯಲ್ಲಿದ್ದ ಸಣ್ಣ ಎರಡು ಕೋಣೆಗಳಲ್ಲಿ ಬಾಡಿಗೆದಾರರಾಗಿ ಪ್ರವೇಶ ಪಡೆದೆವು. ನಾವು ಹೋಗುವ ಮೊದಲ ದಿನ ಚಂದು ಭಾವನಲ್ಲಿ ಅಪ್ಪ ವಿಷಯ ತಿಳಿಸಿದಾಗ ತುಂಬಾ ನೊಂದುಕೊಂಡರಂತೆ. ಅವರ ಕಲ್ಲುಕೋರೆ ಉದ್ದಿಮೆಯೇನೋ ಚೆನ್ನಾಗಿ ನಡೆಯುತ್ತಿತ್ತು. ಆದರೆ ಹಣ ಬಂದಷ್ಟೇ ವೇಗದಲ್ಲಿ ಮಾಯವಾಗುವಂತಹ ವಿಷಯಾಸಕ್ತಿಯುಳ್ಳ ಮಿತ್ರಕೂಟ ಅವರನ್ನು ಕೈವಶ ಮಾಡಿಕೊಂಡಿತ್ತು. ನಾವು ಬಾಡಿಗೆ ಮನೆಗೆ ಹೋಗಿ ವರ್ಷ ಕಳೆಯುವಷ್ಟರಲ್ಲಿ ಆಘಾತದ ಸುದ್ದಿ ಬಂತು. ಚಂದು ಭಾವ ಅವರ ಪ್ರೇಯಸಿಯ ಮನೆಯಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅಲ್ಲಿಂದ ಹೆಣವನ್ನು ಬಿಕರ್ನಕಟ್ಟೆಯ ಮನೆಗೆ ಸಾಗಿಸಲಾಯಿತು. ನಾನು ನೋಡಿದ ಮೊದಲ ಮರಣವದು.

ಪುಟ್ಟ ಮಗುವಿನ ತಾಯಿಯಾದ ಸುಶೀಲಕ್ಕನಿಗೆ ಆಗ ೨೪-೨೫ ವರ್ಷವಷ್ಟೇ. ಅವಳ ತಲೆಗೆ ಹೂ ಮುಡಿಸಲಾಯಿತು. ಕೈಗಳಿಗೆ ಗಾಜಿನ ಬಳೆಗಳನ್ನು ಹಾಕಲಾಯಿತು. ಹೆಣವನ್ನು ಸಿಂಗರಿಸಿದ ಮೇಲೆ ಅವಳ ಕೈಗಳನ್ನು ಹೆಣದ ಎದೆಯ ಮೇಲಿಟ್ಟು ಯಾರೋ ವಿಧವೆ ಹೆಂಗಸೊಬ್ಬರು ಬಳೆಗಳನ್ನು ಒಡೆದರು. ಹೂವನ್ನು ಕಿತ್ತರು. ಕುಂಕುಮವನ್ನು ಅಳಿಸಿದರು. ಅಕ್ಕನ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಪ್ರದಾಯ ನಮ್ಮ ಸಮಾಜದಲ್ಲಿ ಅದೇ ತಾನೇ ಪ್ರಾರಂಭವಾಗಿರಬೇಕು ಎಂದು ಕಾಣುತ್ತದೆ. ನನ್ನ ಅಪ್ಪ ಅಮ್ಮನ ಬಾಲ್ಯದಲ್ಲಿ ಈ ಸಂಪ್ರದಾಯವಿರಲಿಲ್ಲವಂತೆ. ಬ್ರಾಹ್ಮಣರು ವಿಧವೆಯನ್ನು ಅಷ್ಟೆಲ್ಲಾ ವಿರೂಪಗೊಳಿಸುತ್ತಿರುವಾಗ ನಮ್ಮ ಸಮುದಾಯದ ಹೆಂಗಸರು ಸಂಸ್ಕೃತಿಹೀನರಾಗಿ (!) ಬದುಕುವುದು ಅವಮಾನವಾಗಿ ಕಂಡಿತೇ? ವಿಧವಾ ವಿವಾಹಕ್ಕೆ ಆಸ್ಪದವಿರುವ ನಮ್ಮ ಸಮುದಾಯದಲ್ಲಿ ಈ ರೀತಿಯ ಸಂಪ್ರದಾಯ ಯಾವಾಗ ಹೇಗೆ ಸೇರಿಕೊಂಡಿತೋ ತಿಳಿಯದು. ಪಿತೃಪ್ರಧಾನ ವ್ಯವಸ್ಥೆಯುಳ್ಳ ಎಲ್ಲಾ ಸಮುದಾಯಗಳಲ್ಲಿ ಎರಡು ಶತಮಾನಗಳ ಹಿಂದೆ ಸತಿ ಸಹಗಮನವಿತ್ತು. ಆದರೆ ಕರಾವಳಿಯ ಜಿಲ್ಲೆಗಳಲ್ಲಿ ಸತಿಪದ್ಧತಿಯನ್ನು ಹೆಣ್ಣಿನ ಮೇಲೆ ಹೇರಿರಲಿಲ್ಲ. ಕುಟುಂಬಕ್ಕಾಗಿ ತ್ಯಾಗ ಮಾಡಿದ ಇಲ್ಲವೇ ದುರ್ಮರಣ ಹೊಂದಿದವರಿಗಾಗಿ ಅವರ ನೆನಪಿನಲ್ಲಿ ಪೂಜೆ ಸಲ್ಲಿಸುವ ಕ್ರಮವಿತ್ತು. ವಿಧವೆಯನ್ನು ಹೀಗೆ ಹಿಂಸೆ ನೀಡುವ ಕ್ರಮವೇ ಬಹುಶಃ ಕಳೆದ ಶತಮಾನದಲ್ಲಿ ಆರಂಭವಾಗಿರಬೇಕು ಎಂದು ನನ್ನ ಊಹೆ.

ಸಾಹುಕಾರನೆಂದು ಕರೆಸಿಕೊಂಡ ಚಂದುಭಾವ ತನ್ನ ಹೆಸರಿನಲ್ಲಿ ಏನನ್ನೂ ಉಳಿಸಿಕೊಂಡಿರಲಿಲ್ಲವೆಂದರೆ ಯಾರೂ ನಂಬಲಾರರು. ಪ್ರೇಯಸಿಗಾದರೋ ಸ್ವಂತ ಮನೆ ಮಾಡಿಸಿದ್ದರು. ಅಕ್ಕನಿಗೆ ತವರಿನ ಆಸರೆ ಇಲ್ಲದಿರುತ್ತಿದ್ದರೆ ತಿರುಪೆಯೇ ಗತಿಯಾಗುತ್ತಿತ್ತು. ಆ ಕಾಲದ ಕೆಳಮಧ್ಯಮ ಮತ್ತು ಮಧ್ಯಮ ವರ್ಗದ ಸಮುದಾಯದ ಬಹುತೇಕ ಮನೆಗಳಲ್ಲಿ ಹೆಂಗಸರ ಸಹನೆ, ತ್ಯಾಗ ಮತ್ತು ಬುದ್ಧಿವಂತಿಕೆಯಿಂದಾಗಿ ಮಕ್ಕಳು ಒಂದು ನೆಲೆಗೆ ಮುಟ್ಟುವಂತಾಗಿದೆ. ಗಂಡಸರು ಶೋಕಿಲಾಲರಾಗಿ ಕುಟುಂಬಗಳನ್ನು ಗುಂಡಾಂತರ ಮಾಡಿಬಿಟ್ಟಿದ್ದರು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಸಮುದಾಯದಲ್ಲಿದ್ದುವು. ದುಃಖದ ಸಂಗತಿಯೆಂದರೆ ಸಮಾಜದಲ್ಲಿ ಆಕೆಯ ಶ್ರಮವನ್ನು ಗುರುತಿಸುವವರೇ ಇರಲಿಲ್ಲ. ಕ್ರೆಡಿಟ್‌ಗಳೆಲ್ಲಾ ಆ ನಾಲಾಯಕ್ ಗಂಡನಿಗೇ ಸಂದಾಯವಾಗುತ್ತಿತ್ತು. ಈ ಪರಿಸ್ಥಿತಿಯಲ್ಲಿ ಇಂದೂ ವಿಶೇಷ ಬದಲಾವಣೆಯಾಗಿಲ್ಲ. ಅಂತೂ ಚಂದುಭಾವನ ಸಾವಿನ ನೋವಿನ ತೀವ್ರತೆಯು ಶಮನವಾಗಲು ತುಂಬಾ ಸಮಯ ಹಿಡಿಯಿತು. ಮಳೆಗಾಲದಲ್ಲಿ ಸೋರದ ಸ್ಥಳವೆಲ್ಲಿ ಎಂದು ಕಷ್ಟಪಟ್ಟು ಹುಡುಕಬೇಕಾದರೂ ಈ ಹೊಸ ಬಾಡಿಗೆ ಮನೆ ನಮ್ಮ ಪಾಲಿಗೆ ಅರಮನೆಯೇ. ಈಗ ನಿಬಿಡವಾದ ಮನೆಗಳಿಂದ ತುಂಬಿದ ಬಜ್ಜೋಡಿ ಎಂಬ ಆ ಸ್ಥಳ ಆಗ ಒಂದು ಬೋಳುಗುಡ್ಡ. ಅಲ್ಲಿ ಒಂದು ಹುಲಿಯ ಪಂಜರವೂ ಇತ್ತು. ಬಾವಲಿಗುರಿ ಎಂಬಲ್ಲೂ ಹುಲಿಯ ವಾಸಸ್ಥಳವಿತ್ತು. ಆ ಸ್ಥಳದಲ್ಲಿ ಮನುಷ್ಯರ ಆಕ್ರಮಣ ಪ್ರಾರಂಭವಾದುದರಿಂದ ಅವುಗಳು ರಸ್ತೆಯಲ್ಲಿ ಮತ್ತು ಮನೆಯಂಗಳದಲ್ಲಿ ಕಾಣಿಸಿಕೊಳ್ಳತೊಡಗಿದ್ದುವು. ಬಜ್ಜೋಡಿಯಲ್ಲಿ ನೀರಿನ ಒರತೆ ಸದಾ ಹರಿಯುತ್ತಿತ್ತು.

ಆಸುಪಾಸಿನ ಜನರೆಲ್ಲಾ ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ತೊಳೆಯಲು ಅಲ್ಲಿಗೇ ಬರುತ್ತಿದ್ದರು. ಅಲ್ಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಕಕ್ಕುಸು ಗುಂಡಿ ಈ ಬಜ್ಜೋಡಿ. ಒಂದು ದಿನ ಮುದರಣ್ಣ ಸಂಜೆಯ ಹೊತ್ತಿಗೆ ಗುಡ್ಡೆಯಲ್ಲಿ ಶೌಚಕ್ಕೆ ಕೂತಿದ್ದರು. ಹಿಂದಿನಿಂದ ಹುಲಿಯ ಗುರ್ ಎಂಬ ಸದ್ದು ಕೇಳಿ ಓಡಿ ಬಂದು ಅಂಗಳದಲ್ಲಿ ಬಿದ್ದವರಿಗೆ ಸ್ವಲ್ಪ ಹೊತ್ತು ಬೋಧವೇ ಇರಲಿಲ್ಲ. ಗುಡ್ಡೆಗೆ ತಾಗಿಕೊಂಡೇ ಇರುವ ಮನೆಯಲ್ಲಿ ತುಕುರಕ್ಕ ಹಂದಿ ಸಾಕುತ್ತಿದ್ದರು. ಅದನ್ನು ಹಿಡಿಯಲು ಹೊಂಚು ಹಾಕಿ ಬರುತ್ತಿದ್ದ ಹುಲಿಯಿಂದಾಗಿ ಸುತ್ತುಮುತ್ತಲ ಜನರು ಯಾರೂ ಕತ್ತಲಾದ ಮೇಲೆ ಗುಡ್ಡೆಗೆ ಹೋಗುತ್ತಿರಲಿಲ್ಲ. ಇದು ಹೆಂಗಸರಿಗೆ ತುಂಬಾ ಹಿಂಸೆಯಾಯಿತು. ಯಾಕೆಂದರೆ ಹೆಂಗಸರು ಶೌಚಕ್ಕೆ ಹೋಗಲು ರಾತ್ರಿಯಾಗುವುದನ್ನೇ ಕಾಯುತ್ತಿದ್ದರು. ಹುಲಿಯು ಕರುವನ್ನು ಹೊತ್ತೊಯ್ದ, ನಾಯಿಯನ್ನು ಹೊತ್ತೊಯ್ದ ಘಟನೆಗಳು ಸಂಭವಿಸಿದ ಮೇಲೆ ನಮ್ಮೂರ ಪ್ರಸಿದ್ಧ ಡಾಕ್ಟರ್ ಉಮಾನಾಥ ಸುವರ್ಣರಲ್ಲಿ ಜನ ದೂರು ಕೊಟ್ಟರು. ಅವರು ಈ ಹಿಂದೆಯೂ ಹುಲಿ ಕೊಂದ ಶೂರರೆಂದು ಪ್ರಸಿದ್ಧರು. ಅವರ ಕ್ಲಿನಿಕ್‌ನಲ್ಲಿ ಕೊಂದ ಹುಲಿಯೊಂದಿಗೆ ಅವರು ನಿಂತ ಪೋಟೋಗಳಿದ್ದವು. ಒಂದು ದಿನ ಉಮಾನಾಥ ಸುವರ್ಣರು ಕಾದು ನಿಂತು ಹುಲಿಯನ್ನು ಕೊಂದೇಬಿಟ್ಟರು. ಅವರ ಕಾರಿನ ಮೇಲೆ ಅದರ ಹೆಣವನ್ನು ಹಾಕಿ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿದ್ದು, ನಾವೆಲ್ಲಾ ಮಕ್ಕಳು ಭಯಭೀತರಾಗಿ ನೋಡಿದ್ದು ನೆನಪಾಗುತ್ತದೆ.

ನಾವಿದ್ದ ಮನೆಯ ಎಡಗಡೆಯಲ್ಲಿ ಬಾಲಯೇಸುವಿನ ಚರ್ಚ್ ಇದ್ದ ಗುಡ್ಡವಿದೆ. ಬಲಗಡೆಯಲ್ಲಿ ಬಂಗರಪದವು ಎಂಬ ಗುಡ್ಡವಿದೆ. ಈಗ ಅಲ್ಲಿ ರಾಜಗೃಹವೆಂಬ ಮನೆಯಿದೆ. ಆ ಗುಡ್ಡ ಪಾಳು ಬಿದ್ದಂತಿತ್ತು. ಕಲ್ಯಾಣಪ್ಪನ ಕಾಟಕಾಯಿ ಎಂಬ ದಂಗೆಯಲ್ಲಿ ಬಂಗರಸನೂ ಭಾಗಿಯಾಗಿದ್ದ. ಅವನನ್ನು ಸೆರೆ ಹಿಡಿದು ಬ್ರಿಟೀಷರು ಅಲ್ಲಿ ಗಲ್ಲಿಗೇರಿಸಿದ್ದರಿಂದ ಆ ಗುಡ್ಡದಾಚೆ ಯಾರೂ ಇಣುಕುತ್ತಿರಲಿಲ್ಲ. ೫೦ ವರ್ಷದ ಹಿಂದೆ ಅಲ್ಲಿ ದೊಡ್ಡ ಮನೆಯೇನೋ ಕಟ್ಟಿದರು.

ಇಡೀ ಗುಡ್ಡದಲ್ಲಿ ಅದೊಂದೇ ಮನೆಯಾದುದರಿಂದ ಬೂತಬಂಗ್ಲೆಯಂತೆ ಕಾಣುತ್ತಿತ್ತು. ಎರಡೂ ಕಡೆ ಗುಡ್ಡಗಳಿಂದ ಸುತ್ತುವರಿದ ಆ ಬಜ್ಜೋಡಿ ಎಂಬ ಬೈಲು ತೆಂಗು, ಕಂಗು, ಬಾಳೆತೋಟಗಳಿಂದ ಮತ್ತು ಭತ್ತದ ಗದ್ದೆಗಳಿಂದ ನಿತ್ಯ ಹಸುರಾಗಿ ಕಂಗೊಳಿಸುತ್ತಿತ್ತು. ಪಾನನಿಷೇಧ ಜಾರಿ ಇದ್ದಾಗಲೂ ಈ ಬಜ್ಜೋಡಿ ಎಂಬ ಹಸಿರಿನ ತಾಣವು ಸದಾ ಪೊಲೀಸರ ದಾಳಿಗೆ ತುತ್ತಾಗುತ್ತಿತ್ತು. ಕಳ್ಳಭಟ್ಟಿ ಶರಾಬು ದಂಧೆಯಿಂದಾಗಿಯೂ ಅದು ಪ್ರಸಿದ್ಧವಾಗಿತ್ತು. ಒಮ್ಮೊಮ್ಮೆ ದಾಳಿ ಮಾಡಿದಾಗ ಪೊಲೀಸರು ಹಂಡೆಗಳನ್ನು ಹೊತ್ತುಕೊಂಡು ಏದುಸಿರು ಬಿಡುತ್ತಾ ಮೇಲೆ ಬರುವುದನ್ನು, ಅಪರಾಧಿಗಳನ್ನು ಪೊಲೀಸ್ ವ್ಯಾನ್‌ಗಳಿಗೆ ತಳ್ಳುವುದನ್ನು ಮಾಮೂಲು ಸಂಗತಿಯಂತೆ ನೋಡುತ್ತಿದ್ದೆವು.

ನಮ್ಮ ಪುಟ್ಟ ಅರಮನೆಗೆ ಬಂದ ಮೇಲೆ ಅಪ್ಪ ಕೆಲವು ತಿಂಗಳು ವಿದ್ಯುತ್ ಕಂಪೆನಿಯಲ್ಲಿ ವಾಚ್‌ಮೆನ್ ಆಗಿ ಕೆಲಸಕ್ಕೆ ಸೇರಿದರು. ಆಗಾಗ ಉಲ್ಬಣಿಸುವ ಅಸ್ತಮಾದಿಂದಾಗಿ ಕೆಲಸ ಬಿಡಬೇಕಾಯಿತು. ಆಮೇಲೆ ಚರಕದಿಂದ ನೂಲು ತೆಗೆದು ದಾಮೋದರಣ್ಣನ ಮೂಲಕ ಖಾದಿ ಭಂಡಾರಕ್ಕೆ ಕಳಿಸಿ ಬಟ್ಟೆ ತರಿಸಿದ್ದು, ಅದರಿಂದ ನನಗೂ ತಮ್ಮನಿಗೂ ಅಂಗಿ ಹೊಲಿಸಿದ್ದು ನೆನಪಾಗುತ್ತದೆ. ಇದನ್ನು ಕೂಡಾ ದೀರ್ಘಕಾಲ ಮುಂದುವರಿಸಲು ಸಾಧ್ಯವಾಗಲಿಲ್ಲ. ನಾನು ಆರನೇ ತರಗತಿಯಲ್ಲಿದ್ದಾಗಲೇ ಬೀಡಿ ಸುತ್ತುವ ಕೆಲಸ ಕಲಿತಿದ್ದೆ. ಸಂಜೆ ಶಾಲೆಯಿಂದ ಬಂದು ಬೀಡಿ ಕಟ್ಟುವುದು ನನ್ನ ನಿತ್ಯ ಕಾಯಕವಾಯಿತು. ಅಂತೂ ನಮ್ಮದೇ ಮನೆಯಲ್ಲಿ ನಮ್ಮದೇ ಅನ್ನ ಉಣ್ಣುವ ಭಾಗ್ಯ ನಮಗೆ ಲಭಿಸಿತ್ತು.

ಗೇರುಬೀಜ ಕಾರ್ಖಾನೆಯಲ್ಲಿ ಅಮ್ಮನ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿ ಇಷ್ಟವಾಗಿ ನಮ್ಮ ಗೋಪಾಲಣ್ಣನಿಗೆ ಮದುವೆ ಮಾಡುವ ತಯಾರಿ ನಡೆಯಿತು. ವಧೂ ವರರಿಗಾಗಿ ಅತ್ತರ್ ಪಟ್ಟಿಯ ಒಂದು ಕೋಣೆಯನ್ನು ಮಾಡಲಾಯಿತು. ವಿಚಿತ್ರವೆಂದರೆ ವಧು ಮದುವೆಯಾಗಿ ನಮ್ಮ ಮನೆಗೆ ಒಂದು ಸಲ ಮಾತ್ರ ಕಾಲಿರಿಸಿದ್ದಳಷ್ಟೇ. ಮತ್ತೆ ಗೋಪಾಲಣ್ಣನೇ ಅವಳ ಮನೆಯಳಿಯರಾಗಿ ಹೋಗಿಬಿಟ್ಟರು. ಅದೂ ಒಂದು ಮಾತು ಹೇಳದೇ ದೂರವಾದದ್ದು ಎಲ್ಲರ ಮನಸ್ಸನ್ನೂ ಘಾಸಿಗೊಳಿಸಿತು. ಯಾವ ಗಳಿಕೆಯೂ ಇಲ್ಲದ ಈ ಕುಟುಂಬಕ್ಕೆ ಆಧಾರವಾಗಿ ನಿಂತರೆ ತಮ್ಮ ಭವಿಷ್ಯಕ್ಕೆ ತೊಂದರೆಯಾದೀತೆಂದು ಅವರು ಗ್ರಹಿಸಿರಬೇಕು. ಅಮ್ಮ ಸೊಸೆಯ ಬಗ್ಗೆ ಬಹಳ ಕನಸುಗಳನ್ನು ಕಟ್ಟಿಕೊಂಡಿದ್ದಳು. ಅದು ಚೂರು ಚೂರಾಯಿತು. ನಾನು ಹೆತ್ತಮಕ್ಕಳೇ ನಮ್ಮ ಕೈಹಿಡಿಯುವುದಿಲ್ಲವೆಂದ ಮೇಲೆ ಯಾರದೋ ಮಗುವೊಂದನ್ನು ನಮ್ಮ ಜೊತೆಗಿರಿಸಿ ಬೆಳೆಸಿದ್ದೇವೆ ಎಂದ ಮಾತ್ರಕ್ಕೆ ನಮಗೆ ಅವರ ಮೇಲೆ ಯಾವ ಅಧಿಕಾರವಿದೆ? ಯಾರ್‍ಯಾರಿಗೆ ಯಾರ್‍ಯಾರು ಸಹಾಯಕ್ಕೆ ಒದಗಿ ಬರುತ್ತಾರೋ ಬಲ್ಲವರಾರು? ಆಗಾಗ ಯಮನರಮನೆಯ ಬಾಗಿಲು ತಟ್ಟಿ ಬರುವ ನನ್ನಪ್ಪನಿಗೆ ಗೋಪಾಲಣ್ಣ ಹೀಗೆ ಒಮ್ಮೆಲೇ ಬಂಧುತ್ವವನ್ನು ಕಡಿದುಕೊಂಡದ್ದು ಬಹಳ ದೊಡ್ಡ ಆಘಾತವಾಯಿತು. ಎಲ್ಲಾದರೂ ಸುಖವಾಗಿರಲಿ ಎಂದು ಹರಸುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಗೋಪಾಲಣ್ಣನ ಋಣವನ್ನು ನಾವು ತೀರಿಸಲಾರೆವು. ಕವಿಮಾತಿನಂತೆ ‘ತಿಳಿದು ನೋಡಿದರೆ ಬಾಳು ಋಣದ ರತ್ನದ ಗಣಿಯೋ? ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ’ ಎಂದು ಅಪ್ಪ ಅಮ್ಮ ಪರಸ್ಪರರಿಗೆ ಸಾಂತ್ವನ ಮಾಡಿಕೊಂಡು ನಡೆದದ್ದೆಲ್ಲಾ ಕೆಟ್ಟ ಕನಸೆಂದು ಮರೆಯತೊಡಗಿದರು. ಯಾವುದೇ ವೈಮನಸ್ಸಿಲ್ಲದೆ, ವೈಮನಸ್ಸು ಇದೆ ಎಂಬ ಸೂಚನೆಯನ್ನೂ ಕೊಡದೆ ಸದ್ದಿಲ್ಲದೆ ನಮ್ಮನ್ನು ಮರೆತು ದೂರವಾದ ಗೋಪಾಲಣ್ಣನಿಗೆ ನಾನು ಬೇರೆ ಹೋಗುತ್ತೇನೆ ಎಂದು ಮುಖಾಮುಖಿಯಾಗಿ ಹೇಳುವುದು ಅತ್ಯಂತ ನೋವಿನ ಸಂಗತಿಯಾದುದರಿಂದ ಈ ಉಪಾಯ ಮಾಡಿರಬೇಕು ಎಂದು ನನ್ನ ಊಹೆ. ನಮಗೆ ನೋವುಂಟಾಗುವುದು ವ್ಯಕ್ತಿಗಳಿಂದಲ್ಲ. ಆ ವ್ಯಕ್ತಿಯ ಬಗ್ಗೆ ನಾವು ಹೊಂದಿರುವ ಭಾವನೆಗಳಿಂದ. ‘ಹಿರಿಯ ಮಗನಾಗಬೇಡ, ಹಿತ್ತಿಲ ಬಾಗಿಲಾಗಬೇಡ’ ಎಂಬ ಗಾದೆಯಿದೆ ತಾನೆ? ಗೋಪಾಲಣ್ಣ ಹಿರಿಮಗನೆಂಬ ಕಿರೀಟವನ್ನು ಕಳಚಿ ಮುಂದೆ ಸಾಗಿದ್ದು ಒಂದರ್ಥದಲ್ಲಿ ನಮಗೆ ಒಳ್ಳೆಯದೇ ಆಯಿತು. ಕಾಲ ನಮಗೆ ಅನುಕೂಲ ಆಗದಿದ್ದರೆ ನಾವೇ ಕಾಲಕ್ಕೆ ಹೊಂದಿಕೊಳ್ಳಬೇಕಲ್ಲವೇ?

ಸಮಯ, ಸಂದರ್ಭಗಳನ್ನು ತನಗೆ ಬೇಕಾದಂತೆ ಬಗ್ಗಿಸಿಕೊಂಡ ರಾಧಾ ಚಿಕ್ಕಿಯ ವಿವೇಕ ಮೆಚ್ಚುವಂತದ್ದು ಎಂಬುದು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆಕೆ ನಮ್ಮ ದೂರದ ಸಂಬಂಧಿಯೂ ನೆರೆಮನೆಯವಳೂ ಆಗಿದ್ದಳು. ಒಂದು ದಿನ ಚಿಕ್ಕಿ ಇದ್ದಕ್ಕಿದ್ದಂತೆ ಮೈಮೇಲೆ ಆವೇಶ ಬಂದವರಂತೆ ವರ್ತಿಸಿ ಹಾಂ… ಹೂಂ… ಎಂದು ಧ್ವನಿಯೇರಿಸಿದಾಗ ನೆರೆಮನೆಯ ಕಮಲ ಓಡಿಬಂದು ಅಪ್ಪನನ್ನು ಕರೆದಳು. ಅಪ್ಪ ಏನೋ ಅನಾಹುತವಾಗಿದೆಯೆಂದು ಹೋಗಿ ನೋಡಿದರೆ ಚಿಕ್ಕಿ ತಾನು ದೇವಿ ತನ್ನನ್ನು ನಂಬಬೇಕು ಎಂದು ಅಪ್ಪಣೆ ಕೊಡಿಸಿದಳು. ಹೆಂಡತಿಯ ಈ ಅವತಾರವನ್ನು ಕಂಡು ಚಿಕ್ಕಪ್ಪ ಹೆದರಿ ಹೋಗಿದ್ದರು. ಚಿಕ್ಕಿಯ ಅಪ್ಪಣೆಯನ್ನು ಶಿರಸಾ ವಹಿಸಿ ಮಾಡುತ್ತೇವೆಂದು ಕರುಣೆದೋರಬೇಕೆಂದೂ ಅಪ್ಪ ಬೇಡಿಕೊಂಡ ಮೇಲೆ ಒಂದು ತಂಬಿಗೆ ನೀರನ್ನು ಗಟಗಟನೆ ಕುಡಿದು ಹಾಗೆ ಮೆಲ್ಲ ನೆಲದ ಮೇಲೆ ಮಲಗಿದಳು. ಒಂದರ್ಧ ಗಂಟೆಯ ಬಳಿಕ ಎಚ್ಚರಗೊಂಡು ಏನೂ ನಡೆದೇ ಇಲ್ಲವೆಂಬಂತೆ ಅಡುಗೆಕೋಣೆಗೆ ತೆರಳಿದಳು. ಈ ಆಪತ್ತಿನಿಂದ ತಲ್ಲಣಗೊಂಡ ಚಿಕ್ಕಪ್ಪ ಜೋಯಿಸರನ್ನು ಕಂಡು ಕೇಳಿದಾಗ ದೇವಿಯ ಕೃಪೆ ಇದೆ. ಅವಳನ್ನು ಬಹಳ ಭಕ್ತಿಯಿಂದ ಆರಾಧಿಸಿದರೆ ನಿಮ್ಮ ಕುಟುಂಬವನ್ನು ರಕ್ಷಿಸುತ್ತಾಳೆ ಎಂದು ತಿಳಿಯಿತು.

ಅಂದಿನಿಂದ ಚಿಕ್ಕಿಯ ಖದರೇ ಬೇರೆ ಆಯಿತು. ಸದಾ ದೇವರ ಕೋಣೆಯಲ್ಲಿ ಹೆಚ್ಚು ಸಮಯ ಕಳೆಯತೊಡಗಿದಳು. ಅಲ್ಲೇ ಮಲಗತೊಡಗಿದಳು. ಚಿಕ್ಕಪ್ಪನಿಗೆ ಮೊದಲ ಹೆಂಡತಿ ತೀರಿದ ಮೇಲೆ ರಾಧಾಚಿಕ್ಕಿ ಎರಡನೆಯ ಹೆಂಡತಿಯಾಗಿ ಬಂದಿದ್ದಳು. ರಾಧಾ ಚಿಕ್ಕಿಯ ಗಂಡ ಅವರಿಗಿಂತ ೨೦ ವರ್ಷ ಹಿರಿಯರಾದರೂ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ ಆ ಕಾಲದ ಹೆಂಗಸರು ಅಸೂಯೆ ಪಡುವಷ್ಟು. ಸಿಕ್ಕಿದರೆ ಇಂತಹ ಗಂಡ ಸಿಗಬೇಕು ಎಂದು ಯುವತಿಯರು ಹಂಬಲಿಸುವಷ್ಟು. ಬೆಳಗ್ಗೆ ತಾನು ಕೆಲಸಕ್ಕೆ ಹೋಗುವ ಮೊದಲು ಎಲ್ಲಾ ಕೆಲಸಗಳಲ್ಲಿ ಚಿಕ್ಕಿಗೆ ಸಹಾಯ ಮಾಡುತ್ತಿದ್ದರು. ಮದುವೆಯಾಗಿ ೧೫ ವರ್ಷದೊಳಗೆ ೧೦ ಮಕ್ಕಳನ್ನು ಹೆತ್ತಿದ್ದಳು ಚಿಕ್ಕಿ. ಕೆಲವು ಗರ್ಭ ಇಳಿಸಿಕೊಂಡವುಗಳಾದರೆ ಸೊಂಟದಲ್ಲೊಂದು ಹೊಟ್ಟೆಯಲ್ಲೊಂದು ಮಗು ಇದ್ದೇ ಇರುತ್ತಿತ್ತು. ಹೊಟ್ಟೆ ಮತ್ತು ಸೊಂಟ ಖಾಲಿಯಾಗಲು ಚಿಕ್ಕಪ್ಪ ಬಿಡುತ್ತಿರಲೇ ಇಲ್ಲ. ಇಷ್ಟು ಒಳ್ಳೆಯ ಗಂಡನಿಗೆ ಹಾಸಿಗೆ ಪಥ್ಯವನ್ನು ಹೇಳುವುದಾದರೂ ಹೇಗೆ? ಒಂದೇ ಕೋಣೆಯಲ್ಲಿದ್ದು ಅದು ಸಾಧ್ಯವೂ ಇರಲಿಲ್ಲ. ದೇವಿ ಮೈಮೇಲೆ ಬಂದ ಮೇಲೆ ಮಡಿಯ ನೆಪವೊಡ್ಡಿ ಹಾಸಿಗೆ ದೂರವಾಯಿತು. ಇದು ಕಳೆದ ಶತಮಾನದ ೬೦ರ ದಶಕದಲ್ಲಿ ರಾಧಾ ಚಿಕ್ಕಿ ಸಂಶೋಧನೆ ಮಾಡಿ ಯಶಸ್ವಿಯಾದ ಫ್ಯಾಮಿಲಿ ಪ್ಲಾನಿಂಗ್ ತಂತ್ರ. ಈ ತಂತ್ರ ಚಿಕ್ಕಪ್ಪನಲ್ಲಿ ಯಶಸ್ವಿಯಾಯಿತೆಂದು ಉಳಿದ ಗಂಡಸರಲ್ಲೂ ಯಶಸ್ವಿಯಾಗುತ್ತದೆಂದು ಹೇಳಲಾಗದು. ಫಲವಂತಿಕೆಯ ಅವಧಿ ಇರುವಷ್ಟು ಕಾಲ ಹೆರುವುದೊಂದೇ ಮಹಿಳೆಯ ಕೆಲಸವೆಂದು ನಂಬಿದ ಕಾಲವದು. ಕೆಲವು ಮನೆಗಳಲ್ಲಿ ತಾಯಿ ಮಗಳು ಇಬ್ಬರೂ ಬಾಣಂತಿಯರಾಗಿದ್ದ ಘಟನೆಗಳೂ ಇದ್ದುವು. ಕೆಲವು ಮನೆಗಳಲ್ಲಿ ಮಕ್ಕಳಿರಲವ್ವ ಮನೆ ತುಂಬ ಎಂಬ ಹಾರೈಕೆಗೆ ಉದಾಹರಣೆಯಾದ ಕುಟುಂಬಗಳಿದ್ದವು. ಕುಟುಂಬ ನಿಯಂತ್ರಣ ಯೋಜನೆ ಜಾರಿಯಾದಾಗ ಹೆಂಗಸರಿಗೆ ಅರಿವು ಮೂಡಿಸುವುದಕ್ಕೆ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು. ಸಂತಾನಹರಣ ಚಿಕಿತ್ಸೆ ಪಡಕೊಂಡ ಹೆಂಗಸರ ಸಮಸ್ಯೆಗಳೂ ಹೆಚ್ಚಿದ್ದುವು. ಕಷ್ಟಗಳೂ ಬೆಟ್ಟದಷ್ಟಿದ್ದವು. ಪುರುಷರ ಶಸ್ತ್ರಚಿಕಿತ್ಸೆ ಬಹಳ ಸುಲಭದ್ದಾದರೂ ಈ ಯೋಜನೆಗೆ ಅವರ ಸಹಕಾರ ಅಷ್ಟಕ್ಕಷ್ಟೆ. ಸಂಸಾರದ ಎಲ್ಲಾ ಕಾರ್ಪಣ್ಯಗಳಿಗೂ ಅವಳೇ ತಲೆ ಕೊಡಬೇಕೆಂಬುದು ಅಲಿಖಿತ ಶಾಸನವಾಗಿ ಸಮಾಜದಲ್ಲಿ ಜಾರಿಯಲ್ಲಿತ್ತು.

(ಮುಂದುವರಿಯಲಿದೆ.)