ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು ಇವರ ಸಂಗಾತಿ, ಪ್ರತಿ ಬಿರುಕೂ ಜಲ್ಲಿಕಣವೂ ನಿವಾರಿಸಬೇಕಾದ ಅಡ್ಡಿ, ಹಾಗೆಂದು ಲಕ್ಷ್ಯಕ್ಕೆ ಮಿತಿಯಿಲ್ಲ. ಹಾಗೆ ಶತೋತ್ತರ ಕಿಮೀ ಅಂತರದ ಕುದುರೆಮುಖವನ್ನೇ ಮಣಿಸ ಹೊರಟ ಮಹತ್ವಾಕಾಂಕ್ಷಿಗಳು ನಾವು ನಾಲ್ವರು. ಐದು ಗಂಟೆಗೇ ಮನೆ ಬಿಟ್ಟ ನನ್ನನ್ನು ಕೊಟ್ಟಾರದಲ್ಲಿ ಚಿನ್ಮಯ ದೇಲಂಪಾಡಿ, ಅರವಿಂದ ಕುಡ್ಲರೂ ಸುರತ್ಕಲ್ಲಿನಲ್ಲಿ ವೇಣು ವಿನೋದರೂ ಸೇರಿಕೊಂಡಿದ್ದರು. ಅಂಥ ಚಳಿಯೇನೂ ಇರಲಿಲ್ಲ. ನಗರ ಮಿತಿಯಲ್ಲಿ ಬೀದಿದೀಪಗಳ ಅತಿರೇಕದಲ್ಲಿ ದೃಷ್ಟಿಮಂದನೂ ಸಂಭ್ರಮಿಸಬಹುದಿತ್ತು. ಅಲ್ಲಿ ನಮ್ಮ ಗುರುತಿಗೆ, ಉಳಿದಂತೆ ಕತ್ತಲ ಓಟಗಳಲ್ಲಿ ನಮ್ಮ ನೋಟಕ್ಕೂ ಒದಗುವಂತೆ ಬಿಳಿಪ್ರಭೆಯ ಕೋಲು ಎದುರು ಬಿಟ್ಟಿದ್ದೆವು. ಅದಕ್ಕೂ ಮುಖ್ಯವಾಗಿ ಹಿಂಬಾಲಿಸುವವರಲ್ಲಿ ನಮ್ಮ ಕುರಿತು ಜಾಗೃತಿಯನ್ನುಂಟುಮಾಡುವಂತೆ ಹಿಂದೆ ಕೆಂಪು ಮಿನುಗಿನ ದೀಪವನ್ನೂ ಸಿಕ್ಕಿಸಿಕೊಂಡಿದ್ದೆವು. ತಿಂಡಿಗೆ ಕಡಾರಿ, ಮಧ್ಯಾಹ್ನದೂಟಕ್ಕೆ ಕುದುರೆಮುಖ, ರಾತ್ರಿಗೆ ಮರಳಿ ಮಂಗಳೂರು – ಹೆಚ್ಚು ಕಡಿಮೆ ಇನ್ನೂರಿಪ್ಪತ್ತು ಕಿಮೀ ನಮ್ಮ ಲಕ್ಷ್ಯ. ತುಸು ಪಳಗಿದ ಸವಾರನಿಗೆ ಮಟ್ಟಸ ದಾರಿಗಳಲ್ಲಿ ಇದು ದೊಡ್ಡ ಲೆಕ್ಕವೇನಲ್ಲ. ಆದರೆ ಇಲ್ಲಿ ಕೊನೆ ಹಂತದ ಸುಮಾರು ಇಪ್ಪತ್ನಾಲ್ಕು ಕಿಮೀ – ಏಕ ಕಟ್ಟೇರಿನ ಭಗವತೀ ಘಾಟಿ, ನಮಗಿದ್ದ ಸಾಹಸದ ಸವಾಲು.

ಅರವಿಂದ ಕುಡ್ಲ, ಹೆಸರೇ ಹೇಳುವಂತೆ ಮಂಗಳೂರಿನವರೇ. ಆದರೆ ಸಂಸೆಯ ಶಾಲಾ ಅಧ್ಯಾಪಕ ದಿನಗಳಂದು, ಕಳಸ ವಾಸಿಯಾಗಿ ನಿತ್ಯ ಓಡಾಟಕ್ಕೆ ಸಾಮಾನ್ಯ ಸೈಕಲ್ ಇಟ್ಟುಕೊಂಡು ಸಾಕಷ್ಟು ಚಕ್ರ ಸುತ್ತಿದ ಅನುಭವಿ. ತನ್ನ ಕುಟುಂಬ ಮತ್ತು ಬಹುಮುಖೀ ಆಸಕ್ತಿಗಳ ಕಾರಣದಿಂದ ಅರವಿಂದ ಹೆಚ್ಚಿನ ರಜಾ ದಿನಗಳಲ್ಲೆಲ್ಲಾ ಬಸ್ಸಿನಲ್ಲಿ ಘಟ್ಟ ಇಳಿಯುತ್ತಿದ್ದರು. ಹಾಗೆ ಇದ್ದ ಸಂಸೆ, ಕಾಣುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಇವರ ಪ್ರಕೃತಿಪ್ರಿಯತೆಯನ್ನು ಹೆಚ್ಚಿಸಿತ್ತು. ಸಹಜವಾಗಿ ಈತ ಅದೇ ಸೈಕಲ್ಲನ್ನು ಒಂದೆರಡು ಬಾರಿ ಮಂಗಳೂರಿನವರೆಗೂ ಓಡಿಸಿದ್ದಿತ್ತು. ವೃತ್ತಿ ವರ್ಗಾವಣೆಯಲ್ಲಿ ಅರವಿಂದ ಈಚೆಗೆ ಕರಾವಳಿಯ ಮೂಡಂಬೈಲಿಗೇ ಬಂದರು, ವಿವಾಹಿತರೂ ಆದರು. ಈ ಹಂತದಲ್ಲಿ ಅರವಿಂದ ಸಾಮಾನ್ಯರ ಕನಸಿಗೆ ವ್ಯತಿರಿಕ್ತವಾಗಿ ಯಂತ್ರಚಾಲಿತ ವಾಹನಕ್ಕೆ ಬಡ್ತಿ ಬಯಸುವ ಬದಲು, ಹೊಸ ತಲೆಮಾರಿನ ಸೈಕಲ್ ಖರೀದಿಸಿದ್ದು ವಿಶೇಷ. ಈಗ ಅದಕ್ಕೆ ಒರೆಗಲ್ಲೆಂದೇ ನಮ್ಮೊಡನೆ ಸೇರಿಕೊಂಡಿದ್ದರು.

ಸ್ವತಃ ಚಾರಣಪ್ರಿಯ, ಚಿತ್ರಗ್ರಾಹಿ, ವೃತ್ತಿತಃ ಪತ್ರಕರ್ತರಾದ ವೇಣು ವಿನೋದ್, ನನ್ನ ಕೆಲವು ಪ್ರಕೃತಿಪರ ಚಟುವಟಿಕೆಗಳಲ್ಲಿ ಭಾಗಿಯೂ ಸೈಕಲ್ ಸರ್ಕೀಟ್‍ಗಳ ನಿಷ್ಠಾವಂತ ಓದುಗನೂ ಆಗಿದ್ದರು. ಹಾಗೆ ಸಿಕ್ಕಿದಾಗೆಲ್ಲ ಮೊದಮೊದಲು ತಾನೂ ಸೈಕಲ್ವಂತನಾಗುವ ಬಯಕೆ ತೋಡಿಕೊಳ್ಳುತ್ತಿದ್ದರು. ಕೊನೆಗೆ “೨೦೧೫ – ಹೊಸ ಸೈಕಲ್ ವರ್ಷ” ಎಂಬ ತನ್ನದೇ ಹೇಳಿಕೆಯನ್ನು ಮೀರಿ ಹೊಸ ಸೈಕಲ್ಲೇ ಖರೀದಿಸಿದ ಆತುರಗಾರ. ಹಾಗೆಂದು ಕೊಂಡ ಮೇಲೆ ದುಡುಕದೇ ನಿಧಾನಕ್ಕೆ ತನ್ನ ಪೆಡಲ್-ಬಲವನ್ನು ಹೆಚ್ಚಿಸಿಕೊಳ್ಳುತ್ತ ಬಂದರು. ಜತೆಗೆ ಸೈಕಲ್ ಯಾನದ ನಿಜ ಮಹತ್ತ್ವವನ್ನು ತನ್ನ ಪತ್ರಿಕಾ ಬಳಗಕ್ಕೂ (ವಿಜಯವಾಣಿ) ಮನದಟ್ಟು ಮಾಡಿ, ಮಂಗಳೂರಿಗೆ ಪ್ರಥಮವಾಗಿ ಪತ್ರಿಕೆಯದೇ ಒಂದು ಪ್ರದರ್ಶನಯಾನವನ್ನೂ (ನೋಡಿ: ಫೇಸ್ ಬುಕ್ಕಿನಲ್ಲಿ ೮-೧೧-೧೫ರ ನನ್ನ ಸೈಕಲ್ ಸರ್ಕೀಟ್ ೧೬೪) ನಡೆಸಲು ಕಾರಣರಾದರು. ವೇಣುವಿನ ವಾರದ ರಜೆ ಹಾಗೂ ಇತರರ ಮಕರ ಸಂಕ್ರಾತಿಯ ರಜೆಯನ್ನು ಸೇರಿಸಿಯೇ ನಮ್ಮ ಈ ಮಹಾಯಾನ ಶುಕ್ರವಾರವೇ ರಸ್ತೆಗಿಳಿದಿತ್ತು.

ಈಚೆಗೆ ನನಗೆ ಬಾದರಾಯಣ ಸಂಬಂಧಿಯಾಗಿಯೇ ಪರಿಚಿತನಾದ ತರುಣ ಇಂಜಿನಿಯರ್ ಚಿನ್ಮಯ ದೇಲಂಪಾಡಿ. “ಹಾಂ ಹುಡುಕಿ ಹೋದರೆ ಮನುಕುಲವೇ ಒಂದು ಕುಟುಂಬ” ಎಂದು ನಾನು ಪರಿಚಯವನ್ನು ಮರೆಯುತ್ತಿದ್ದೆನೇನೋ. ಆದರೆ ಮತ್ತೆಲ್ಲೋ ಸಿಕ್ಕ ಇವನಪ್ಪ “ನಿಮ್ಮ ಪ್ರೇರಣೆಯಲ್ಲಿ ಮಗ ಸೈಕಲ್ ಕೇಳಿದ್ದಾನೆ” ಎಂದಾಗ ನನ್ನಲ್ಲಿ ಕುತೂಹಲ ಮೂಡಿತ್ತು. ಕೆಲವೇ ದಿನಗಳಲ್ಲಿ ಈತ ಸೈಕಲ್ ಕೊಂಡದ್ದು ಮಾತ್ರವಲ್ಲದೆ, ಗಂಭೀರವಾಗಿ ಮಂಗಳೂರು ಸೈಕಲ್ಲಿಗರ ಸಂಘದ ಬಳಗದೊಡನೆ ನಿಯತಾಭ್ಯಾಸ ನಡೆಸಿ ದಿನದ ಸರಾಸರಿಯನ್ನು ಹತ್ತಿಪ್ಪತ್ತು ಕಿಮೀಯಿಂದ ನೂರರಾಚೆಗೇ ಮುಟ್ಟಿಸಿದ. ಸೈಕಲ್ ಸಾಧಕರಲ್ಲಿ ಅರ್ಹತಾ ಪದವಿಯಾಗಿಯೇ ಪ್ರಚಾರದಲ್ಲಿರುವ `ಬ್ರೆವೆ’ಗಾಗಿ ಮೈಸೂರಿಗೇ ಧಾವಿಸಿ, ಇನ್ನೂರು ಕಿಮೀ ಸಾಧನೆಯಲ್ಲಿ ಯಶಸ್ವಿಯೂ ಆದ. ಸೈಕಲ್ ಸವಾರಿಯ ವೈಯಕ್ತಿಕ ಹಾಗೂ ಸಾಮಾಜಿಕ ಮಹತ್ವವನ್ನು ಚೆನ್ನಾಗಿಯೇ ಮನಗಂಡ ಈ ಮೂವರು ತರುಣ ಮಿತ್ರರ ಪೆಡಲಾವರ್ತದ ಶ್ರುತಿಗೆ ನನ್ನ ಸಂಚಾರಗಳು ಮೇಳೈಸಿದ್ದಕ್ಕೇ ಈ ಮಹಾಯಾನ ತೊಡಗಿತ್ತು.

ನಮ್ಮ ಬಿಸಿಲೆ ಮಹಾಯಾನದಲ್ಲಿ ಭಾಗಿಯಾಗಿದ್ದ ಅಭಿ ಭಟ್ ಪ್ರಸ್ತುತ ಮೈಸೂರುವಾಸಿ. ನಾವು ಕುದುರೆಗೆ ಹೊರಟಂದೇ ಬೆಳಿಗ್ಗೆ ಆತ ಊರಿಗೆ ಬಂದಿಳಿದಿದ್ದ. ಆತನಿಗೆ ಜತೆಗೊಡುವ ಆಸೆಯಿದ್ದರೂ ಅನುಕೂಲವಿರಲಿಲ್ಲ. ಕನಿಷ್ಠ ದಾರಿಯಲ್ಲೊಮ್ಮೆಯಾದರೂ ಭೇಟಿಯಾಗುವ ಸಂತೋಷಕ್ಕೆ ಅಪ್ಪನ ಬೈಕೇರಿ ನಮ್ಮನ್ನು ಬೆನ್ನಟ್ಟಿದ್ದ. ಮೂಲ್ಕಿ ಬಳಿ ನಮ್ಮನ್ನು ಹಿಡಿದು ಫಲನೀಡಿ (ಕಿತ್ತಳೆ ಹಣ್ಣು) ಶುಭ ಹಾರೈಸಿ, ಮರಳುವವನೂ ಇದ್ದ. ಆದರೆ ಸೈಕಲ್ ತುಳಿಯುವ `ದುಷ್ಟಚತುಷ್ಟಯ’ಕ್ಕೆ ಎರಡು ಸಲ ಕಾಫಿಂಡಿಯಾಗಬಾರದೇಕೆ ಎಂದನ್ನಿಸಿತು. ಅಭಿಯನ್ನು ಸೇರಿಸಿಕೊಂಡು ಪಡುಬಿದ್ರೆ ಸೇರಿದೆವು. ಪಡುಬಿದ್ರೆ ಹಳೆಪೇಟೆಯ ಪುಟ್ಟ ಏಕವ್ಯಕ್ತಿ ಹೋಟೆಲ್ ವೇಣುಗೆ ಸೈಕಲ್ ಸರ್ಕೀಟಿನಲ್ಲಿ ಪ್ರಿಯವಾಗಿತ್ತು. ನಾವು ಅದಕ್ಕೇ ನುಗ್ಗಿದೆವು. ಆಗಿನ್ನೂ ಉಪ್ಪಿಟ್ಟು, ಚಾ ಮಾತ್ರ ಸಿದ್ಧವಿತ್ತು. ಅದನ್ನೇ ಅನುಭವಿಸುತ್ತಿದ್ದಂತೆ, ಆಕಸ್ಮಿಕವೆನ್ನುವಂತೆ ಮತ್ತಿಬ್ಬರು ಸುರತ್ಕಲ್ಲಿನ ಸೈಕಲ್ ಹವ್ಯಾಸಿಗಳೂ ಅಲ್ಲಿಗೇ ಬಂದಿಳಿದರು. ಅದರಲ್ಲೂ ಕಟ್ಟಡ ನಿರ್ಮಾಣ ವೃತ್ತಿಯ ಪ್ರವೀಣ್ ನನ್ನ ಮಗ – ಅಭಯಸಿಂಹನ ಸಹಪಾಠಿ ಎಂದು ತಿಳಿದು ಹೆಚ್ಚಿನ ಕುಶಿಯಾಯ್ತು. ಅವರ ಅಂದಿನ ಲಕ್ಷ್ಯ ಪಡುಬಿದ್ರೆಗೆ ಸೀಮಿತವಿದ್ದುದರಿಂದ ನಾವು ನಾಲ್ವರೇ ಮತ್ತೆ ಹೆದ್ದಾರಿ ಸೇರಿ, ಕಾರ್ಕಳದ ಕವಲಿಗೆ ಹೊರಳಿಕೊಂಡೆವು.

ಪಡುಬಿದ್ರೆ – ಕಾರ್ಕಳದ್ದು ಬರಿದೆ ದಾರಿಯಲ್ಲ, ವಿಮಾನದ ಇಳಿದಾಣ ಎಂದರೆ ತಪ್ಪಾಗದು. ನಾಲ್ಕು ದಶಕಗಳ ಹಿಂದೆ ಕುದುರೆಮುಖ ಗಣಿ ಯೋಜನೆಯ ಅನಿವಾರ್ಯ ಪ್ರಾಥಮಿಕ ಅಂಗವಾಗಿ ಈ ದಾರಿ ಹೆದ್ದಾರಿಯನ್ನೂ ಮೀರಿದ ಪರಿಷ್ಕರಣಕ್ಕೆ ಒಳಗಾದದ್ದಿತ್ತು. ಗಣಿ ಯೋಜನೆಯೇ ಕಳಚಿಹೋಗಿ, ಕಾಲಹತಿಯಲ್ಲಿ ಮಂಕಾಗಿದ್ದ ದಾರಿ, ಇಂದು ಅದ್ಭುತ ಪುನರುಜ್ಜೀವನ ಪಡೆದಿದೆ. ಈ ವಿಸ್ತರಣೆಯನ್ನು ಸುಲಭವಾಗಿ ಮುಂದುವರಿಸಿ, ಶೃಂಗೇರಿ ಹಾಯ್ದು ಶಿವಮೊಗ್ಗ ಸಾಧಿಸಿ, ರಾಷ್ಟ್ರೀಯ ಸ್ಥಾನಮಾನಕ್ಕೇರಿಸುವ ಯೋಚನೆ ಕೇಳಿದ್ದೇವೆ. ಇದು ವನಧಾಮಕ್ಕೆ ಭಾರೀ ಕಂಟಕವಾಗುತ್ತದೆ. ಅಲ್ಲದೆ ಬಳಕೆಯಲ್ಲಿ ಹೆಚ್ಚು ಜನಪ್ರಿಯವೂ ಪ್ರಾಚೀನವೂ ಆದ ಆಗುಂಬೆ ಘಾಟಿಯ ಅಭಿವೃದ್ಧಿಯನ್ನು ನಿರಾಕರಿಸಿದಂತೆಯೂ ಆಗುತ್ತದೆ ಎನ್ನುವ ವಾದದಲ್ಲಿ ಹೆಚ್ಚು ಹುರುಳಿದೆ. ಇದು ವನಧಾಮದಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದೂ ಗಮನಿಸಬೇಕಾದ ಅಂಶ.

ಈ ಮಾರ್ಗದ ಅಂಚಿನಿಂದ ತೊಡಗಿದಂತೆ ಕೆಲವು ತೀರಾ ಅಮುಖ್ಯ ಕವಲುಗಳು ಹೋಗುವುದನ್ನು ಕಾಣುತ್ತೇವೆ. ಅಲ್ಲೂ ಕೆಲವಲ್ಲಿ ಪ್ರಾದೇಶಿಕ ಆರಾಧನಾ ಸ್ಥಾನಗಳನ್ನುದ್ದೇಶಿಸಿ ಕಟ್ಟಿದ ಸ್ವಾಗತ ದ್ವಾರಗಳಿರುವುದೂ ಉಂಟು. ಅಂಥಲ್ಲೆಲ್ಲ ಮುಖ್ಯ ದಾರಿಯ ವಿಸ್ತರಣೆ ಹಲವು ತರದ ಸಂಕಟಗಳನ್ನು ತರುವುದಿದೆ. ಅದರಲ್ಲೂ ಒಂದೆಡೆ ಮುಖ್ಯ ದಾರಿ ವಿಪರೀತ ತಗ್ಗಿದ್ದುದರಿಂದ ಅಮುಖ್ಯ ದಾರಿಗೆ ಎರಡನೇ ಸಂಪರ್ಕ ದಾರಿ ಮಾಡುವ ಅನಿವಾರ್ಯತೆ ಬಂತು. ಆಗ ಮೊದಲಿನ ದಾರಿಗೆ ಕಮಾನು ಕಟ್ಟಿಸಿದ ಸೇವಾರ್ಥಿಗಳಿಗೆ ಎರಡನೆಯದಕ್ಕೂ ಕಟ್ಟಿಸುವ ಅನಿವಾರ್ಯ ಹೊರೆ ಹೊರುವ ಕಷ್ಟ ಬಂದಿದೆ. ಮಂಗಳೂರತ್ತಣಿಂದ ಉಡುಪಿ ಪ್ರವೇಶಿಸುವಲ್ಲಿ ಹಿಂದೆ ಯಾವುದೋ ಒಂದು ಮಠ ಕಟ್ಟಿಸಿದ್ದ ಗೀತೋಪದೇಶದ ಚಿತ್ರಣವಿರುವ ಸ್ವಾಗತದ್ವಾರ ಇಂದು ಅನಾಥವಾಗಿ ಗುಡ್ಡದ ತುದಿಯಲ್ಲಿ ನಿಂತಿರುವುದು ಮರೆಯಲುಂಟೇ?

ನಂದಿಕೂರು ಕಳೆಯುತ್ತಿದ್ದಂತೆ ಅರುಣರಾಗ ಪಸರಿಸಿತು. ಅಲ್ಲಿ ಬಹು ಹಿಂದೆ ನಮ್ಮ ಶಿಲಾರೋಹಣ ತರಬೇತಿಗೊಡ್ಡಿಕೊಂಡ ಬಂಡೆಗಳು, ಹಿನ್ನೆಲೆಯ ಉಷ್ಣ ವಿದ್ಯುತ್ ಸ್ಥಾವರದ ಭಾರೀ ಹೊಗೆ ನಳಿಕೆಗಳ ಪ್ರಭಾವದಲ್ಲಿ ಕಳಾಹೀನವಾಗಿದ್ದುವು. ಮುಂದುವರಿದಂತೆ ಗರ್ಭಗುಡಿಯ ಅಂಗವಾಗಿಯೇ ಭಾರೀ ಬಂಡೆ ಹೊಂದಿ ಪುಟ್ಟ ಗುಡಿಯಂತಿದ್ದ ರಚನೆ ಇಂದು `ಅಡ್ವೆ’ಯ ಮಹಾ ಪುಣ್ಯಕ್ಷೇತ್ರವಾಗಿಯೇ ವಿಸ್ತರಣೆಗೊಂಡಿರುವುದನ್ನೂ ಕಂಡೆ. ಅಲ್ಲಿ ಮರುದಿನ ನಡೆಯಲಿದ್ದ ಕಂಬುಳದ ಸಿದ್ಧತೆಗಳು ಭರದಿಂದ ಸಾಗಿದ್ದುವು. ಬೆಳ್ಮಣ್ಣಿಗಾಗುವಾಗ ಬೆಳ್ಕರಿಸಿದ ಸೂರ್ಯನೇ ಪ್ರತ್ಯಕ್ಷನಾಗಿದ್ದ.

ದೂಪದ ಕಟ್ಟೆಯಲ್ಲಿ ಬರಲಿರುವ ಅತ್ತೂರು ಇಗರ್ಜಿಯ ವಾರ್ಷಿಕ ಜಾತ್ರಾ ಸಿದ್ಧತೆಗಳು ಮೆರೆದಿದ್ದುವು. ನಾಲ್ಕು ದಶಕಗಳ ಹಿಂದೆ, ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತರಲ್ಲಿ ಇಲ್ಲಿನ `ಸಾಂತುಮೇರಿ’ ಒಂದು ಲೆಕ್ಕದಲ್ಲಿ ಜಾತ್ಯಾತೀತ ಜನಪ್ರಿಯತೆಯನ್ನೇ ಗಳಿಸಿತ್ತು. ಆ ಜಾತ್ರಾ ದಿನಗಳಲ್ಲಿ (ನಾಲ್ಕೈದು ದಿನ ನಡೆಯುತ್ತದೆ) ಸಂಜೆಯಾಗುತ್ತಿದ್ದಂತೆ ಮಂಗಳೂರಿನ ಹಲವು ಸಿಟಿ ಬಸ್ಸುಗಳೂ ವಿಶೇಷ ಯಾನಗಳನ್ನು ಅತ್ತೂರಿಗೆ ವಿಸ್ತರಿಸುತ್ತಿದ್ದುವು. ಅದರ ತಮಾಷೆ ನೋಡಲು ನಾನೂ ಮಿತ್ರ ಬಳಗ ಕಟ್ಟಿಕೊಂಡು ಒಂದೆರಡು ವರ್ಷ ಹೋಗಿಬಂದಿದ್ದೆ!

ದೂಪದ ಕಟ್ಟೆ ಕಳೆದ ಮೇಲೆ ದಾರಿ ಕಾರ್ಕಳದ ಪರ್ಪಲೆ ಗುಡ್ಡೆಯ ಹಿಮ್ಮೈಯನ್ನು ಏರುತ್ತದೆ. ಅದರ ತಲೆಯ ಪದವಿನಲ್ಲಿ ಐದು ಮಿನಿಟು ವಿರಮಿಸಿ ಮುಂದುವರಿದೆವು. ಕಾರ್ಕಳ ಕಳೆಯುತ್ತಿದ್ದಂತೆ ನಮ್ಮ ದಿಟ್ಟಿಯನ್ನಡ್ಡಗಟ್ಟಬೇಕಿದ್ದ ಪಶ್ಚಿಮಘಟ್ಟ ಶ್ರೇಣಿ ಅಂದು ಪೂರ್ಣ ಮರೆಯಾಗಿತ್ತು. ಆದರೆ ಅಭಿವೃದ್ಧಿಯ ಕಟುಕನಿಗೆ (ಗಣಿಗಾರಿಕಾ ಯೋಜನೆ) ವನರಮಣಿಯ ರಕ್ಷಾಬಂಧನ (ರಾಷ್ಟ್ರೀಯ ಉದ್ಯಾನ) ಬಿಗಿಯಾಗಿಯೇ ಕಟ್ಟಿದ್ದಾಗಿದೆ. ಹಾಗಾಗಿ ನಿಜದಲ್ಲಿ ಮಾಯವಾಗಿರದು, ಕೇವಲ ಮಂಜಿನಾಟ ಎಂಬ ಭರವಸೆಯೊಡನೆಯೇ ಬಜಗೋಳಿಯಲ್ಲಿ ಸರಿಯಾದ ಉಪಾಹಾರ ಸೇವನೆಗೆ ನಿಂತೆವು. ಹಿಂದೆ ಅಜೆಕಾರು ದಾರಿಯ ಓರೆಯಲ್ಲಿದ್ದ ಭುವನೇಶ್ವರಿ ತನ್ನ ವೈವಿಧ್ಯಮಯ ರುಚಿಯ ಬಲದಲ್ಲೇ ಬೆಳೆದು ಮುಖ್ಯದಾರಿಗೇ ತಿರುಗಿ ಹೊಸರೂಪ ತಳೆದು ವರ್ಷಗಳು ಕೆಲವಾಗಿವೆ. ಹಾಗೆಂದು ಶುಚಿ, ರುಚಿಗಳಲ್ಲಿ ಹಿಂದೆ ಬೀಳದಿರುವುದಕ್ಕೇ ನಾವೆಲ್ಲಾ ಮೂರು ಸುತ್ತಿನ ತಿಂಡಿ ಖಾಲಿ ಮಾಡಿದ್ದೆವು. ಏನು ತಿಂದರೂ ಕರಗಿಸಲು ಎದುರಿನ ಘಟ್ಟ ಸಾಲಿದೆ ಎಂಬ ಧೈರ್ಯವೇನೋ ಇತ್ತು. ಆದರೆ ಹೊಟ್ಟೆ ಭಾರ ಹೆಚ್ಚಾಗಿ ಘಟ್ಟ ಏರಲು ಕಷ್ಟವಾದೀತು ಎಂಬ ಭಯವೂ ಇದ್ದುದರಿಂದ ಅಷ್ಟಕ್ಕೆ ಮುಗಿಸಿ ಮತ್ತೆ ದಾರಿಗಿಳಿದೆವು.

ಆರೆಂಟು ಕಿಮೀಯೊಳಗೇ ಮಾಳದ ಕೈಕಂಬ (ಬಲ ಕವಲು) ಸಿಕ್ಕಿತು. ಅಲ್ಲೇ ರಾಷ್ಟ್ರೀಯ ಉದ್ಯಾನದ ವಾಹನ ತನಿಖಾ ಠಾಣೆ ಇದೆ. ಎಲ್ಲ ವಾಹನಗಳಿಗೂ ಇಲ್ಲಿ ಪ್ರವೇಶದ ಸಮಯ ಸೂಚನೆಯ ಚೀಟಿಯನ್ನು ಉಚಿತವಾಗಿಯೇ ನೀಡುತ್ತಾರೆ. ಅದರಲ್ಲವರಿಗೆ ರಾಷ್ಟ್ರೀಯ ಉದ್ಯಾನದ ಗಡಿದಾಟಿ ಹೊರಹೋಗಲು ಸಮಯಮಿತಿ ವಿಧಿಸುತ್ತಾರೆ. ಇದನ್ನು ಮೀರುವುದು ಶಿಕ್ಷಾರ್ಹ ವನ್ಯ ಅಪರಾಧ! ಇದರ ಮೂಲ ಉದ್ದೇಶ – ವನದೊಳಗೆ ಯಾರೂ ಅನುಮತಿ ರಹಿತ ವಾಸ, ವಿಹಾರ ಮಾಡಬಾರದು. ಅಂದರೆ ಉದ್ಯಾನದೊಳಗೆ ಅವಧಿ ಮುಗಿದ ಗಣಿಗಾರಿಕಾ ನಗರಿ ಸಹಿತ ಯಾವುದೇ ನಾಗರಿಕ ಜೀವನ ನಿಷೇಧಿಸಲಾಗಿದೆ. ಇಲಾಖೆಯ ಸಿಬ್ಬಂದಿಯ ವಸತಿ ಮತ್ತು ಅದು ಶಿಸ್ತು ಬದ್ಧವಾಗಿ (?) ನಡೆಸುವ ಪ್ರಕೃತಿ ಶಿಬಿರವಷ್ಟೇ ಇಲ್ಲಿನ ಮನುಷ್ಯ ವಾಸವ್ಯವಸ್ಥೆ. ಆದರೆ ಈ ವನ್ಯ ವಲಯದೊಳಗೆ ಹಿಂದಿದ್ದ ಗಣಿಗಾರಿಕಾ ಉದ್ದಿಮೆಯದ್ದೇ ಒಂದು ವಿಚಿತ್ರ.

ಗಣಿಗಾರಿಕಾ ಸಂಸ್ಥೆ ಅಥವಾ ಕೆ.ಐ.ಸಿ.ಓ.ಎಲ್ ಎಲ್ಲಕ್ಕೂ ಮೂಲವಾದ ಗಣಿಗಾರಿಕೆಯ ಹಕ್ಕನ್ನೇ ಕಳೆದುಕೊಂಡು ಹೊರ ನಡೆದದ್ದಾಗಿದೆ. ಆದರೆ ಆಗ ತನಗೆ ಪೂರಕ ಅನುಕೂಲಗಳಿಗಷ್ಟೇ ಒದಗಿಸಲಾಗಿದ್ದ ನೆಲದ ಮೇಲೆ ಇನ್ನೂ ತನಗೆ `ಹಕ್ಕಿದೆ’ ಎಂಬ ಭ್ರಮೆಯಲ್ಲಿದೆ. ಇದರಿಂದ ಅದು ತನ್ನ ಕಾಲದ ಅನಿವಾರ್ಯ ರಚನೆಗಳನ್ನು ಇಂದಿಗೂ ಪರಭಾರೆ ಮಾಡಲು ಹುಸಿ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಹೀಗೆ ಅದರ ವಸತಿ ಸೌಕರ್ಯದಲ್ಲಿ ಕೆಲವನ್ನು ಮೂಡಬಿದ್ರೆಯ ಡಾ| ಮೋಹನ ಆಳ್ವಾ ವಹಿಸಿಕೊಂಡು, ಜೀರ್ಣೋದ್ಧಾರ ಮಾಡಿ ಹೋಟೆಲ್ ವ್ಯವಸ್ಥೆ ಮುಂದುವರಿಸಿರುವುದು ಅನ್ಯಾಯ ಮತ್ತು ಆಘಾತಕರ.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಖಾಠಾಣೆ ಸೈಕಲ್ ಮತ್ತು ಪಾದಚಾರಿಗಳ (ಚಾರಣಿಗರು) ಮಾರ್ಗ ಬಳಕೆಯನ್ನು ಪ್ರಶ್ನಿಸುತ್ತಿಲ್ಲ. (ಬಂಡಿಪುರ, ಮುದುಮಲೈ ವನಧಾಮಗಳಲ್ಲಿ ಸೈಕಲ್ ಮತ್ತು ಚಾರಣವನ್ನು ಆನೆಗಳ ಭಯದಲ್ಲಿ ನಿಷೇಧಿಸಲಾಗಿದೆ.) ಅಕಸ್ಮಾತ್ ವಾಸದ ಪ್ರಶ್ನೆ ಕೇಳಿದ್ದರೂ ನಾವು ದಿಟ್ಟ ಬೆಟ್ಟದೆತ್ತರಕ್ಕೆ, ದಟ್ಟ ಭೂಭುಜರ ನಡುವಿಗೆ, ಬಿಟ್ಟ ಬಾಣದಂತೆ ಸವಾರಿ ಹೋಗಿ, ಸಟ್ಟ ಸಂಜೆಗೇ ಮರಳುವವರು ಎಂದೇ ಹೇಳುತ್ತಿದ್ದೆವು. ನಮ್ಮನ್ನು ಯಾರೂ ಕೇಳಲಿಲ್ಲ, ಎಂದೇ ಮುಂದುವರಿದೆವು. ತುಸು ಅಂತರದಲ್ಲೇ ಘಟ್ಟದ ಏರುದಾರಿ ಮೊದಲಿಟ್ಟಿತು.

ಪಶ್ಚಿಮಘಟ್ಟ ಏರುವ ಕರ್ನಾಟಕದ ದಾರಿಗಳಲ್ಲಿ ಇದು ತೀರಾ ಕಿರುವಯಸ್ಸಿನದ್ದಾದ್ದರಿಂದ ರೂಢಿಯ ಹೆಸರುಗಳು ಹಲವು. ಮಾಳದಿಂದ ಹೊರಟದ್ದಕ್ಕೆ ಮಾಳ ಘಾಟಿ, ಭಗವತೀ ಅರಣ್ಯದ ಮೂಲಕ ಹಾದದ್ದಕ್ಕೆ ಭಗವತೀ ಘಾಟಿ, ಕುದುರೆಮುಖ ಗಣಿನಗರಿಯತ್ತ ಸಾರುವುದಕ್ಕೆ ಕುದುರೆಮುಖ ಘಾಟಿ, ಇತ್ಯಾದಿ. ಒಟ್ಟಾರೆ ಕಾಡಿನ ನಿಗೂಢ, ಘಟ್ಟದ ಕಾಠಿಣ್ಯಕ್ಕೆಲ್ಲ ಮೇಲು ನೋಟದಲ್ಲಿ ಸವಿ ಸವಿ ಸಕ್ಕರೆ ಸವರಿ ಸವಾರಿವೀರರನ್ನು ಸತಾಯಿಸುವಲ್ಲಿ ಮಾತ್ರ ಇದು ಬಲು ಘಾಟಿ. ಇದಕ್ಕೆ ನಾನು ಬಹಳ ಹಿಂದೆ ಒಮ್ಮೆ ಸಾಮಾನ್ಯ ಸೈಕಲ್ಲಿನಲ್ಲೇ (ನೋಡಿ: ನನ್ನೊಳಗಿನ ಸೈಕಲ್ ಸವಾರ) ಮತ್ತೆ ಹಲವು ಬಾರಿ ಬೈಕು, ಕಾರುಗಳಲ್ಲಿ ಹೋದ ಅನುಭವಗಳೇ ಸಾಕ್ಷಿ. ಮೊದಲ ಸುಮಾರು ಹದಿನೆಂಟು ಕಿಮೀ ಒಂದೇ ಏರುಕೋನದ ಸವಾರಿ.

ಎತ್ತೆತ್ತರಕ್ಕೆ ಕಾಲು ಚಾಚಿ ಮೇಲೆ ಹಸುರಿನ ಕೊಡೆಯರಳಿಸಿದ ಕಾಡು ಮತ್ತು ತಂಪಿನ ದಿನಗಳು ನಮ್ಮ ಅನುಕೂಲಕ್ಕೇನೋ ಇತ್ತು. ಆದರೆ ಸೈಕಲ್ಲಿನ ಗೇರು ಸಂಯೋಜನೆಯಲ್ಲಿ ಮಾತ್ರ ಕನಿಷ್ಠ ವಲಯದಿಂದ – ಅಂದರೆ, ೧ ಗುಣಿಸು ೩ ಅಥವಾ ೨ ಅಥವಾ ೧, ಇದರಿಂದ ಬಿಡುಗಡೆಯೇ ಇರಲಿಲ್ಲ. “ಉಸ್ಸೂಊಊ” ಅಂತ ಐದು ಸೆಕೆಂಡಿಗಾದರೂ ಉದ್ದಕ್ಕೆ ಉಸಿರು ಬಿಟ್ಟು ಕುಳಿತುಕೊಳ್ಳುವ, ತುಳಿತ ಬಿಟ್ಟು ಹಾಗೇ ಪೆಡಲ್ ಮೇಲೆ ನಿಂತು ಅಂಡೆತ್ತಿ ಉರಿ ಕಡಿಮೆ ಮಾಡುವ, ಸ್ನಾಯುಗಳನ್ನು ಸಮಾಧಾನಿಸುವ ಅವಕಾಶವೇ ಇರಲಿಲ್ಲ. ನಮ್ಮ ಶ್ರಮದ ಲೆಕ್ಕಾಚಾರದ ದರವನ್ನು ಹೇಳುವುದಿದ್ದರೆ ಈ ವಲಯ ಕಷ್ಟ, ಕರಕಷ್ಟ, ಕಡುಕಷ್ಟ (ಟಫ್, ಟಫ್ಫರ್, ಟಫ್ಫೆಸ್ಟ್) ಮಾತ್ರ

ಕರ್ನಾಟಕದ ಇತರೆಲ್ಲ ಘಾಟಿ ದಾರಿಗಳಾದರೋ ಚಾರಣಿಗರ, ಗಾಡಿ ಸವಾರರ ರೂಢಿಯ ಜಾಡಿನ ಉತ್ತಮಿಕೆ ಮಾತ್ರ. ಭಗವತಿ ಘಾಟಿ ಹಾಗಲ್ಲ. ಇದು ರೈಲ್ವೇ ಮಾರ್ಗದಷ್ಟೇ ಲೆಕ್ಕಾಚಾರದಲ್ಲಿ ಮತ್ತು ತೀರಾ ಹೊಸದಾಗಿ ಕೇವಲ ದೊಡ್ಡ ವಾಹನಗಳನ್ನಷ್ಟೇ ಉದ್ದೇಶಿಸಿ ಕಾಡು ಹೆರೆದು, ದರೆಗಳನ್ನು ಸಿಗಿದು ರೂಪುಗೊಂಡ `ಕಲಾಕೃತಿ’. ಈ ದಾರಿಗೆ ನಿತ್ಯ ಬಳಕೆಯ ಪಾದಚಾರಿಗಳು ಅಥವಾ ಸಣ್ಣ ವಾಹನಗಳು ಇಲ್ಲವೇ ಇಲ್ಲ. ಇಲ್ಲಿ ಮಾರ್ಗದ ಅಂಚಿನಲ್ಲಿ ಹೆದ್ದಾರಿಯಂತೆ, ದೊಡ್ಡ ವಾಹನಗಳ ಸಾಮಾನ್ಯ ಓಟಕ್ಕೆ ನಿಷೇಧಿತ ಪ್ರದೇಶವಾದ ಬಿಳಿಗೀಟಿನ ವಲಯ ಎನ್ನುವುದೇ ಇಲ್ಲ. ದಾರಿಯಲ್ಲೆಲ್ಲೂ ಹಿಮ್ಮುರಿ ತಿರುವಿನ ತೀವ್ರತೆ ಕಾಣಿಸುವುದಿಲ್ಲ. ಆದರೆ ಬೆಟ್ಟಗಳ ಬಲು ಆಳದ ಸೀಳುಗಳಲ್ಲಿ, ಏಣನ್ನು ಬಳಸಿ ಕಣಿವೆಯಲ್ಲಿ ಬಳುಕುವಲ್ಲೆಲ್ಲ ನಯಗೊಂಡ ತೀವ್ರ ಅಂಕುಡೊಂಕುಗಳೇ ಇವೆ. ಹಾಗೇ ನೆಲದ ವಾಲಿಕೆಯೂ ನಿಖರವಾಗಿರುವುದರಿಂದ ವೇಗ ಸಾಧಕರಿಗೆ ಉತ್ತೇಜನಕಾರಿಯಾಗಿಯೇ ಇದೆ. ಗಣಿನಗರಿಯ ಆಕರ್ಷಣೆಗಳು ಮುಕ್ಕಾಗತೊಡಗಿದ ಮೇಲೆ ಈ ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಕೇವಲ ಋತುಮಾನದ ಅನಿವಾರ್ಯತೆಯಲ್ಲಿ ಅಯ್ಯಪ್ಪ ಭಕ್ತರ ಖಾಸಗಿ ವಾಹನಗಳು ಸ್ವಲ್ಪ ಹೆಚ್ಚು ಬರುತ್ತವೆ, ಅಷ್ಟೆ. ಆದರೆ ಅವೂ ಸೇರಿದಂತೆ ಇಲ್ಲಿ ಓಡಾಡುವ ವಾಹನಗಳು ಬಹುತೇಕ ಈ ಘಾಟಿಯ `ಮೋಹಕ-ಅಪಾಯ’ವನ್ನು ಗುರುತಿಸಿಯೇ ಸ್ಪಷ್ಟ ನಡುರೇಖೆಯನ್ನು ಮೀರದಂತೇ ಧಾವಿಸುತ್ತವೆ. ನಾವೂ ರಸ್ತೆಯ ಅಂಚನ್ನೇ ಹಿಡಿದು, ಪ್ರತಿ ತಿರುಗಾಸಿನಾಚಿನ ವಾಹನ ಸದ್ದುಗಳಿಗೆ ಜಾಗೃತರಾಗಿದ್ದುಕೊಂಡೇ ಮುಂದುವರಿದೆವು. ಇಲ್ಲೇ ಕೆಳ ಉಸುರಿನಲ್ಲಿ ಹೇಳಿಬಿಡುತ್ತೇನೆ: ಹಾಗೂ ಏನಾದರೂ ಅಪಘಾತ ಆಗುವುದಿದ್ದದ್ದನ್ನು ತಪ್ಪಿಸಿದ ಖ್ಯಾತಿ ವೇಣು ಮತ್ತು ಅರವಿಂದರಿಗೇ ಸಲ್ಲುತ್ತದೆ. ಯಾಕೆಂದರೆ ಕೆಲವು ತಿರುವುಗಳಲ್ಲಿ ಎದುರಿನ ಮೋಟಾರ್ ಸದ್ದುಗಳಿಗೆ ಪ್ರತಿಯಾಗಿ ಇವರು ಸೈಕಲ್ ಬೆಲ್ ಕಿಣಿಕಿಣಿಸುತ್ತಿದ್ದರು 🙂

ಸತತ ಏರಿನ ದಾರಿಯಲ್ಲಿ ಕೆಲವು ತುಸು ದೊಡ್ಡ ಸೇತುವೆಗಳು ಮಾತ್ರ ಸಮತಟ್ಟಾಗಿದ್ದುವು. ಅವು ಬಂದದ್ದೇ ತೊರೆ ಇಣುಕುವ ನೆಪದಲ್ಲಿ, ನಮ್ಮ ನಿಜದ ಅಗತ್ಯ – ವಿಶ್ರಾಂತಿಯನ್ನು, ಮರೆಸಿ ನಿಂತೇ ಬಿಡುತ್ತಿದ್ದೆವು. ಅವು ಸಿಗದಿದ್ದರೂ ನೀರು ಕುಡಿಯುವ, ಮೂತ್ರ ಮಾಡುವ, ಹಕ್ಕಿ ನೋಡುವ, ರಸ್ತೆ-ಸಾವಿಗೀಡಾದ ಜೀವಕ್ಕೆ (ಬಹುತೇಕ ಹಾವುಗಳು) ಮರುಗುವ, ಗಿರಿ ದಿಟ್ಟಿಸುವ, ಕಣಿವೆಗಿಣುಕುವ, ಅನೂಹ್ಯ ವಾಸನೆಗಳ ಮೂಲ ಕಾಣುವ, ರಸ್ತೆಯದೇ ರಚನಾ ವೈಭವ ಹೊಗಳುವ, ಚಿತ್ರ ತೆಗೆಯುವುದೇ ಮೊದಲಾದ ನೂರು (ನೆಪ) ಅವಕಾಶಗಳಂತು ಇದ್ದೇ ಇತ್ತು! ಪೆಡಲಿಳಿದರೆ ನೂಕಿ ನಡೆಯುವ, ನಡೆದರೆ ಪೆಡಲೊತ್ತಿ ಸವಾರಿ ಹೊರಡುವ ವಂಚನೆಯಂತೂ ಈ ವ್ಯವಸ್ಥಿತ ಏರಿನಲ್ಲಿ ಸದಾ ಕಾಡುತ್ತಿತ್ತು.

ದಾರಿಯುದ್ದಕ್ಕೂ ಮಾರ್ಗಸೂಚೀ ಸಂಜ್ಞೆಗಳು ಧಾರಾಳ ಇವೆ. ಅಲ್ಲದೆ ವೇಗಚಾಲನೆ, ವಾಹನ ತಂಗಿಸುವುದು, ಕಸ ಎಸೆಯುವುದು, ದಾರಿಯಲ್ಲಿ ಸಿಗಬಹುದಾದ ವನ್ಯಜೀವಿಗಳ ನಿರ್ಲಕ್ಷ್ಯ ಮಾಡುವುದು ಮುಂತಾದವಕ್ಕೆ ನಿಷೇಧಾಜ್ಞೆಗಳನ್ನೂ ಇಲಾಖೆ ಅಲ್ಲಲ್ಲಿ ಜಾಹೀರುಪಡಿಸಿದೆ. ವನ್ಯ ಕಾನೂನುಗಳು ಸಂಕೀರ್ಣಗೊಳ್ಳಲೇ ಬೇಕಾದ ಈ ಕಾಲದಲ್ಲಿ ವೀಕ್ಷಣಾ ಕಟ್ಟೆ ಅಥವಾ ವಿಹಾರತಾಣಗಳು ಅಪ್ರಸ್ತುತವಾಗ ಬೇಕು. ಸಹಜವಾಗಿ ಹಿಂದೆಲ್ಲ ನಾವು `ಜಗ್ ಫಾಲ್ಸ್’ ಎಂದೇ ಸುಂದರ ಜಲಪಾತಕ್ಕೆ ಕಣ್ಣಾಗುತ್ತಿದ್ದ ತಾಣ (ನೋಡಿ: ಗಡಿಬಿಡಿಯಲ್ಲಿ ಗಂಗಡಿಕಲ್ಲು ಮತ್ತು ಜಾಲತಾಣದ ಇತರ ಕುದುರೆಮುಖ ಶೀರ್ಷಿಕೆಯಡಿಯ ಲೇಖನಗಳು) ಮರೆಯಾಗಿವೆ. ಆದರೆ ಹಳೆ ನೆನಪಿನ ವಿಹಾರಬುದ್ಧಿಯ ಮಂದಿ ಈಗಲೂ ಅಲ್ಲಿ ತಂಗುವುದು, ದೃಶ್ಯ ಮರೆಮಾಡಿದ ಹಸಿರು ಭಂಗಿಸಲು ಪ್ರಯತ್ನಿಸುವುದು, ಏನಲ್ಲದಿದ್ದರೂ `ಕುರುಕುಲು ಕುಡಿಯಲು’ ಎಂದಷ್ಟು ಕಸ ಎಸೆದು ಹೋಗುವುದು ಧಾರಾಳ ಇವೆ.

ಹನ್ನೆರಡು ಗಂಟೆಯ ಸುಮಾರಿಗೆ ನಾವು ಹಿಂದೆಲ್ಲ ಪ್ರಸಿದ್ಧವಿದ್ದ ಕವಲು ಕಟ್ಟೆ – ದಕ ಗಡಿ ಸೇರಿದೆವು. ಗಣಿಗಾರಿಕೆಯ ಕಾಲದಲ್ಲಿ ಇಲ್ಲಿ ಜನ, ವಾಹನ ಸಂಚಾರ ಹೆಚ್ಚಿತ್ತು. ಸಹಜವಾಗಿ ಬಸ್ ಬದಲಿಸುವವರು, ಸೋಮಾರಿ ಕಟ್ಟೆ ಎಂದು ಸೇರುತ್ತ ಒಂದೆರಡು ಹೋಟೆಲು, ಅಂಗಡಿ, ವಸತಿಗಳೆಲ್ಲಾ ರೂಢಿಸಿದ್ದುವು. ಸಾಲದ್ದಕ್ಕೆ ಅಲ್ಲೇ ದಾರಿಯಂಚಿಗೆ ಕಣಿವೆಯಿಂದ ನೇರ ಏರಿ ಬರುತ್ತಿದ್ದ ಭಾರೀ ವಿದ್ಯುತ್ ಸ್ತಂಭಸಾಲಿನ ಕಾರಣ ಕಾಡು ಕೀಸಿದ್ದರು. ಅದರಿಂದ ದಕ್ಕುತ್ತಿದ್ದ ಮಾಳ ಕಣಿವೆಯ ಸುಂದರ ಹಕ್ಕಿನೋಟವನ್ನು ವ್ಯವಸ್ಥಿತಗೊಳಿಸುವಂತೆ ವೀಕ್ಷಣಾ ಕಟ್ಟೆಯನ್ನೂ ಕಟ್ಟಿದ್ದರು. ಇದರಿಂದ ಹಾದಿಹೋಕ ವಾಹನಗಳು ನಿಂತು, ವನ್ಯದ ನಡುವೆ ಅನಾವಶ್ಯಕ ಕಸ, ಗದ್ದಲ ಸೇರುತ್ತಿತ್ತು. ಇಂದು ದಕ ಗಡಿ ನಿರ್ಜನ, ನೀರವ, ಉಳಿದೆಡೆಗಳಷ್ಟೇ (ಹೆಚ್ಚಲ್ಲ. ಮಾರ್ಗಹೋಕರು ಕಸ ಎಸೆಯುವುದನ್ನು ನಿಯಂತ್ರಿಸುವುದು ಬಹಳ ಕಷ್ಟ) ಸ್ವಚ್ಛ. ವನ್ಯ ಇಲಾಖೆಯ ಏನೋ ಒಂದು ರಚನೆಯನ್ನುಳಿದು ಎಲ್ಲ ಕಟ್ಟಡಗಳೂ ವಿದ್ಯುತ್ ಸ್ತಂಭ ಸಾಲೂ ವೀಕ್ಷಣಾಕಟ್ಟೆಯೂ ನೆಲಸಮವಾಗಿವೆ. ಕಣಿವೆಯಂಚಿನಲ್ಲಿ ವೀಕ್ಷಣೆಯ ನೆಪದಲ್ಲಿ ಜನ ತಂಗುವುದನ್ನು ನಿರುತ್ತೇಜನಗೊಳಿಸುವಂತೆ ತಡೆಬೇಲಿಯನ್ನೂ ಹಾಕಿದ್ದಾರೆ. ಇವೆಲ್ಲ ಸಾಧ್ಯವಾಗುವಂತೆ ಮಾಡಿ, ವನ್ಯ ಪುನರುತ್ಥಾನಕ್ಕೆ ದುಡಿದ ಶಕ್ತಿಗಳಿಗೆ ವಂದನೆಗಳು!

ದಕ ಗಡಿಯಿಂದ ಮುಂದೆ ದಾರಿ ಶಿಖರಗಳ ವಲಯದಲ್ಲಿ (ನೆತ್ತಿಯಲ್ಲೇ ಅಲ್ಲ) ಸಾಗುವುದರಿಂದ ಅಲ್ಲಲ್ಲಿ ಕಿರು ತೊರೆಗಳೂ ಸುಲಭದಲ್ಲಿ ಮಟ್ಟ ಮಾಡಬಹುದಾದ ನೆಲದ ಹರಹುಗಳೂ ಹುಲ್ಲುಗಾವಲೂ ಕಾಣಸಿಗುತ್ತವೆ. ಅಂಥಲ್ಲಿ ಕನಿಷ್ಠ ಜನಪದ ಆರಾಧನೆಗೆ ಒಡ್ಡಿಕೊಂಡಿದ್ದಿರಬಹುದಾದ ಕೆಲವು ನೆಲೆಗಳು ಇದ್ದಿರಬೇಕು. ಅವುಗಳಲ್ಲಿ ಕೆಲವು, ಗಣಿಗಾರಿಕೆಯ ನೆಪದಲ್ಲಿ ಬಂದ ಹೊಸದಾರಿಯ ಸಂಪರ್ಕದೊಡನೆ ವಾಣಿಜ್ಯ ಆಯಾಮ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದೂ ಉಂಟು. ಅಲ್ಲಿ ಮತ್ತೆ ವನ್ಯಪ್ರೇಮಿಗಳು (ವನ್ಯ ಇಲಾಖೆಯಲ್ಲ!) ಸಕಾಲಿಕ ಜಾಗೃತಿಯನ್ನು ತಳೆದದ್ದರಿಂದ ಅವು ವನ್ಯಕ್ಕೆ ಅಪಾಯಕಾರಿಯಾಗಿ ವಿಕಸಿಸಲಿಲ್ಲ. ಉದಾಹರಣೆಗೆ ವರಾಹತೀರ್ಥ, ಗಂಗಾಮೂಲದಂಥ ಆರಾಧನಾ ಕೇಂದ್ರಗಳು. ಇಂದು ಅಲ್ಲಿನ ಬಲವಾದ ಬೇಲಿಗಳು, ಶಾಸನಗಳು ಯಶಸ್ವಿಯಾದಂತೆ ತೋರುತ್ತವೆ. ಆದರೆ….

ಇಲಾಖೆಯೊಳಗಿನ ಕಾಮಗಾರಿ ಮೋಹಗಳಲ್ಲಿ, ಪರೋಕ್ಷವಾಗಿ ವೈಯಕ್ತಿಕ ಸ್ವಾರ್ಥಗಳು ವಿಕಸಿಸುವಲ್ಲಿ ಈ ವನ್ಯ ನಿಷ್ಠೆ ಪೂರ್ಣ ಲೋಪವಾಗಿದೆ. ಸಣ್ಣ ಉದಾಹರಣೆಯಾಗಿ ದಕ ಗಡಿಯಿಂದ ತುಸು ಮುಂದೆ ಸಿಗುವ ಹನುಮನಗುಂಡಿ ಅಥವಾ ಮತ್ತೂ ಮುಂದೆ ಸಿಗುವ ಭಗವತೀ ಪ್ರಕೃತಿ ಶಿಬಿರವನ್ನೇ ಹೆಸರಿಸುವುದು ಅನಿವಾರ್ಯವಾಗುತ್ತದೆ. ಬೆಟ್ಟದ ಝರಿ, ತತ್ಕಾಲೀನ ವನವಾಸ ಯಾರ ಮನಸೂರೆಗೈಯ್ಯುವುದೂ ನಿಜ. ಆದರೆ ಇಲ್ಲಿನ ಯಾವುದೇ ಸೇತುವೆಯಂಚು, ವೀಕ್ಷಣಾತಾಣಗಳಲ್ಲಿ ನಿಂತು ನೋಡಿದರೆ ಹಾಗೆ ಆಕರ್ಷಿತರಾದ ನಾಗರಿಕರ ದುರ್ವರ್ತನೆಯ ಸಾಕ್ಷಿಗಳು ಎಷ್ಟೂ ಕಾಣುತ್ತವೆ.

ಅಲ್ಲೆಲ್ಲ ಕೊಳೆಯದ ಮತ್ತು ಜೀವವೈವಿಧ್ಯಕ್ಕೆ ವಿಷಕಾರಿಯಾದ ಕಸದ ಸೇರ್ಪಡೆ ಧಾರಾಳ ನಡೆದಿದೆ. ಇಂಥವುಗಳನ್ನು ಹತ್ತಿಕ್ಕುವಲ್ಲೇ ಜನಬಲ ಇಲ್ಲದೇ ಸೋಲುವ ಇಲಾಖೆ ಸ್ವತಃ ಅಂಥದ್ದನ್ನು ಸಾಕುವುದು ಸರಿಯೇ? ಹನುಮಾನ್ ಗುಂಡಿಯ ಬಳಿ `ಟಿಕೆಟ್ಟಿನ ಅಧಿಕಾರ’ದಲ್ಲಿ ಜಲಕೇಳಿಯಾಡಲು, ಬಾಡಿಗೆ ತುಂಬಿದ ಬಲದಲ್ಲಿ ಪ್ರಕೃತಿ ಶಿಬಿರದಲ್ಲಿ ಮೋಜುಮಝಾಕ್ಕೂ ಅವಕಾಶ ಕಲ್ಪಿಸುವ ಇಲಾಖೆಗೆ ಏನನ್ನಬೇಕೋ ತಿಳಿಯುವುದಿಲ್ಲ. ಜಾಗೃತ ನಾಗರಿಕರ ಒತ್ತಡಕ್ಕೆ ಕೆಲಕಾಲ ಮುಚ್ಚಿದ್ದ ಹನುಮನಗುಂಡಿ ಈಗ ಮತ್ತೆ ಮುಕ್ತವಾಗಿರುವುದು, ಜನಪ್ರಿಯವಾಗುತ್ತಿರುವುದು ಚಿಂತಾಜನಕ. ವಾಹನ ತಂಗುದಾಣಕ್ಕಾಗಿ ಅಲ್ಲಿ ಅಗಲ ಕಿರಿದಾದ ದಾರಿಯನ್ನು ಈಗ ಅಗಲಗೊಳಿಸಿದ್ದಾರೆ. ಆದರೂ ನಮ್ಮ ಬಡಕಲು ಸೈಕಲ್ಲು ಹಾಯ್ದು ಹೋಗಲು ಕಷ್ಟವಾಗುವಂತೆ ಅಲ್ಲಿ ಜನ ವಾಹನ ದಟ್ಟಣೆ ಇತ್ತು, ವನ್ಯದ್ದಲ್ಲದ ಗದ್ದಲ ಕೆಳಗಿನ ಕಣಿವೆಯಿಂದ ಬರುತ್ತಿತ್ತು.

ಏರು ದಾರಿಯಲ್ಲಿ ಎಡಮಗ್ಗುಲಿನಲ್ಲಿ ಅಲ್ಲದೊಂದು ಸ್ವಲ್ಪ ದೀರ್ಘವೇ ಆದ ತೆರೆಮೈ. ಅಲ್ಲಿ ತುಸುವೇ ಅಗಲ ಹೆಚ್ಚಿರುವ ಜಾಗಗಳಲ್ಲೆಲ್ಲ ವಾಹನಗಳು ತಂಗಿದ, ಜನ ಹೇಸಿಗೆ ಮಾಡಿದ ಲಕ್ಷಣಗಳು ಧಾರಾಳವಿವೆ. ಇಲಾಖೆ ಒಂದು ಕಸ ತೊಟ್ಟಿಯನ್ನೂ ಸ್ಥಾಪಿಸಿದ್ದಾಗಿದೆ. ಅಲ್ಲಿ ನಾವು ದೃಶ್ಯ ನೋಡುವ ನೆಪದಲ್ಲಿ ನಿಟ್ಟುಸಿರು ಚೆಲ್ಲಿ, ಐದು ಮಿನಿಟೆಂದು ಕುಳಿತೆವು. ಇದೇ ಮುಹೂರ್ತವೆಂಬಂತೆ ವೇಣು ಸೈಕಲ್ಲಿನ ಮುಂಚಕ್ರವೂ ಒಮ್ಮೆಗೇ ಅಲ್ಲಿ ನಿಟ್ಟುಸಿರಿಟ್ಟಿತು! ಆಘಾತ, ಒತ್ತಡ ತಡೆಯದೆ ಸ್ಫೋಟಿಸಿತ್ತು. ಅದೃಷ್ಟಕ್ಕೆ ಚಿನ್ಮಯ ಹೆಚ್ಚುವರಿ ಟ್ಯೂಬ್, ಪಂಪ್ ಸಜ್ಜಾಗಿದ್ದ. ಮತ್ತೀ ಹೊಸ ತಲೆಮಾರಿನ ಸೈಕಲ್ಲುಗಳಲ್ಲಿ ಕಳಚು, ಜೋಡಿಸು ಕ್ರಿಯೆಗಳೆಲ್ಲ ತುಂಬ ಸರಳವೂ ದೃಢವೂ ಇರುವುದರಿಂದ ನಮಗೆ ಹೆಚ್ಚು ವೇಳೆ ಬೇಕಾಗಲಿಲ್ಲ. ಮುಂಬಿರಿಯ (ಫ್ರಂಟ್ ಬ್ರೇಕಿನ) ಕೀಲು ಬಿಡಿಸಿ, ಮುಂಚಕ್ರದ ಕ್ಲಿಪ್ ತೆರೆದದ್ದೇ ಇಡಿಯ ಚಕ್ರ ನಮ್ಮ ಕೈಯಲ್ಲಿತ್ತು. ಕೇವಲ ಹೆಬ್ಬೆರಳ ಒತ್ತಿಗೆ ರಿಮ್ಮಿನಿಂದ ಟಯರು ಬೇರ್ಪಡಿಸಿ, ಟ್ಯೂಬ್ ಕಳಚಿದೆವು. ಮತ್ತೆ ಟಯರಿನೊಳಗಿನ ಎಚ್ಚರದ ನೇವರಿಕೆ ಯಾವುದೇ ಅನಪೇಕ್ಷಿತ ಕಂಟಕ (ಮುಳ್ಳು, ಆಣಿ ಇತ್ಯಾದಿ) ಕಾಣಿಸಲಿಲ್ಲ. ಅಂದರೆ ನಮ್ಮ ಪುಪ್ಪುಸ ಬಿರಿಯುವ, ಹೃದಯ ನಡುಗುವ ಒತ್ತಡದ ಸವಾರಿ ಎಷ್ಟು ಕಠಿಣವಿತ್ತು – ನೀವೇ ಊಹಿಸಿಕೊಳ್ಳಿ. ಬದಲಿ ಟ್ಯೂಬ್ ಕೂರಿಸಿ, ಪಂಪಿಸಿ ಗಾಳಿ ತುಂಬಿ, ಅಷ್ಟೇ ಚುರುಕಾಗಿ ಎಲ್ಲ ಮರುಜೋಡಿಸಿ ಮುಗಿಸಿದೆವು. ಲೆಕ್ಕದ ಐದು ಮಿನಿಟಿನ ವಿಶ್ರಾಂತಿಗೆ ಮತ್ತೆ ಐದು ಮಿನಿಟಷ್ಟೇ ಸೇರಿರಬಹುದು, ಅಷ್ಟೆ.

ಗಂಗಾಮೂಲ, ಗಂಗಡಿಕಲ್ಲಿನ ಗೇಟಿಗೆ ಏಕಮುಖವಾದ ದೀರ್ಘ ಏರಿಕೆ ಒಮ್ಮೆಗೆ ಮುಗಿದಿತ್ತು. ಅಲ್ಲಿ ದಾರಿ ಪ್ರಧಾನ ಶಿಖರ ಶ್ರೇಣಿಯನ್ನು ಪಶ್ಚಿಮಕ್ಕೆ ಬಿಟ್ಟು ಒಳಮೈಯ ವಿಸ್ತಾರ ಬೋಗುಣಿಗೆ ಜಾರುತ್ತದೆ. (ಹೆಚ್ಚಿನ ವಿವರಣೆಗಳಿಗೆ ಅವಶ್ಯ ಈ ಶೀರ್ಷಿಕೆಗಳ ಮೇಲೆ ಚಿಟಿಕೆ ಹೊಡೆದು ಹಿಂದಿನ ನನ್ನದೇ ಅನ್ಯ ಬರಹಗಳನ್ನು ಓದಬಹುದು: ಭಗವತಿ ಘಾಟಿ, ಭಗವತಿ ಕರಡಿಬೆಟ್ಟ, ಪಾಂಡರಮಕ್ಕಿ ಜಾಡಿನಲ್ಲಿ, ನಿಲ್ಲಿ, ಗಡಿಬಿಡಿಯಲ್ಲಿ ಗಂಗಡಿಕಲ್ಲು ಇತ್ಯಾದಿ.) ಅದುವರೆಗಿನ ಶ್ರಮವೆಲ್ಲ ಸಾರ್ಥಕವೆನ್ನುವಂತೆ ಸುಮಾರು ಆರೆಂಟು ಕಿಮೀ ಉದ್ದದ ಇಳಿಜಾರು. ಎಡಕ್ಕೆ ಗಂಗಡಿಕಲ್ಲಿನ ಶ್ರೇಣಿ, ಬಲಕ್ಕೆ ಕುರಿಯಂಗಲ್ಲಿನ ಹಿಮ್ಮೈ.

ಕಡಾಂಬಿ ಅಬ್ಬಿಯ ಬಳಿ ಸಣ್ಣ ಏರು ಮತ್ತೆ ನೇರಾನೇರ ಹರಿದೋಡು ಭಗವತಿ ಪ್ರಕೃತಿ ಶಿಬಿರದ ಗೇಟಿನವರೆಗೂ. ಗೇಟಿನ ಬಳಿ ಅರವಿಂದರ ಸಂಸೆ ಶಾಲಾಶಿಷ್ಯ, ಹೊಸದಾಗಿ ವನ್ಯ ಇಲಾಖೆಯ ಸೇರ್ಪಡೆಯಾಗಿ ಕಾವಲಿಗೆ ನಿಂತಿದ್ದ. ಆತನಿಗೋ ಗುರುಗಳ ಹೊಸ ಅವತಾರ ನೋಡಿ ಸಾಹಿತ್ಯ ಸಂಭ್ರಮ. ಇವರಿಗೋ (ನಮಗೂ) ಇನ್ನೂ ಒಂಬತ್ತು ಹತ್ತು ಕಿಮೀ ಬಾಕಿ ಉಳಿದ ಲೆಕ್ಕದ್ದೇ ಮಂಡೆಬೆಚ್ಚ!

ಮತ್ತೂ ಒಂದೆರಡು ಏರು ಇಳಿತ, ಎಡಕ್ಕೆ ಲಕ್ಯಾ ಅಣೆಕಟ್ಟು, ಬಲಕ್ಕೆ ಭದ್ರಾನದಿಗಳನ್ನೆಲ್ಲ ಕಳೆದು ಗಣಿನಗರಿ ತಲಪುವಾಗ ಗಂಟೆ ಎರಡು ಕಳೆದಿತ್ತು. ಅಲ್ಲಿನ ನಮ್ಮ ಮೊದಲ ಮತ್ತು ಪ್ರಧಾನ ಚಿಂತೆ ಹೊಟ್ಟೆಯದು.

ಶೂನ್ಯದಿಂದೆಂಬಂತೆ ಗಣಿಗಾಗಿ ಹುಟ್ಟಿ, ಇಂದು ಗಣಿಯಿಲ್ಲದೆ ಅರ್ಥ ಕಳೆದುಕೊಂಡ ವ್ಯವಸ್ಥೆ ಕುದುರೆಮುಖ ಪಟ್ಟಣ. ವಾಸ್ತವದಲ್ಲಿ ತುಸು ಆಚಿನ ಮಲ್ಲೇಶ್ವರದ ಭಾಗವಾದ ಈ ನೆಲ ಇಂದು ಹಾಳೂರು. ಮುಖ್ಯ ಮಾರ್ಗದ ಬಲ ಪಾರ್ಶ್ವದ ಬೆಟ್ಟಪ್ರದೇಶ ಅರ್ಥಾತ್ ಗಣಿ ವಲಯ ಪೂರ್ಣ ಶಾಂತವಾಗಿದೆ. ಅದಿರು ಸಂಗ್ರಹಿಸಿ, ತೊಳೆದ ಕೆಸರನ್ನು ಲಕ್ಯಾಕ್ಕೆ ರವಾನಿಸಿ, ಉಳಿದವನ್ನು ಅರೆದು ಕೊಳವೆಸಾಲಿನಲ್ಲಿ ಮಂಗಳೂರಿಗೆ ರವಾನಿಸುತ್ತಿದ್ದ ಇಡಿಯ ಉದ್ದಿಮೆ ವಠಾರ ನಟ್ಟು ಬೋಲ್ಟಿನವರೆಗೂ ಖಾಲಿಯಾಗಿದೆ. ದಾರಿಯ ಎಡ ಮಗ್ಗುಲಿನ ವಸತಿ ಸಮೂಹ, ಶಾಲೆಯೇ ಮುಂತಾದ ಸಾರ್ವಜನಿಕ ಕಟ್ಟಡಗಳು ನ್ಯಾಯಾಲಯದ ಆದೇಶದ ಮೇರೆಗೆ ಮತ್ತು ಸರಣಿ ಪ್ರಕ್ರಿಯೆಯಲ್ಲೂ ಖಾಲಿಯಾಗಿವೆ. ಬಹುತೇಕ ನಿರಚನೆಗೂ ಒಳಪಟ್ಟಿವೆ. ರಸ್ತೆ, ಉದ್ಯಾನಗಳು ಪ್ರಾಕೃತಿಕ ಶಕ್ತಿಗಳಿಗೆ ಶರಣಾಗುತ್ತಿವೆ. ಬಸ್ ನಿಲ್ದಾಣ ಜನ, ಆರ್ಥಿಕ ವಹಿವಾಟುಗಳಿಲ್ಲದೆ ಭಣಗುಟ್ಟುತ್ತಿದೆ. ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ವನ್ಯ ಇಲಾಖೆ ಮಾತ್ರ ಅರ್ಥಪೂರ್ಣ ನಿರುತ್ಸಾಹದಲ್ಲಿ ಮುಳುಗಿದಂತೇ ಕಾಣುತ್ತದೆ. ಗಣಿ ಕಂಪೆನಿ ತಾನೇ ಇನ್ನು ನೆಲದ ಯಜಮಾನ ಎಂಬ ದಾರ್ಷ್ಟ್ಯದಲ್ಲಿ ಹಲವು ಉಪದ್ವ್ಯಾಪಗಳನ್ನು ನಡೆಸುತ್ತಲೇ ಇದೆ. (ಉದಾಹರಣೆಗೆ ನೋಡಿ: ಲಕ್ಯಾದಲ್ಲಿ ಮೃಗಜಲ) ಅದರ ಅಂಗವಾಗಿ ಗಣಿನಗರದ ಗಣನೀಯ ಹೋಟೆಲ್ ಆಗಿಯೇ ನಡೆದಿದ್ದ ಸಹ್ಯಾದ್ರಿ ಅತಿಥಿಗೃಹ ಮತ್ತು ಕೆಲವು ಉನ್ನತ ಅಧಿಕಾರಿಗಳ ವಸತಿಗೃಹಗಳನ್ನು ಕಂಪೆನಿ ಯಾವುದೋ ಒಪ್ಪಂದದ ಮೇರೆಗೆ ಮೂಡಬಿದ್ರೆಯ ಮೋಹನ ಆಳ್ವರ ನಿರ್ವಹಣೆಗೆ ವಹಿಸಿದೆ. ಇದರ ನ್ಯಾಯಿಕ ನೆಲೆ, ತೀರ್ಮಾನ ಏನೇ ಬರಲಿ ಸದ್ಯ ನಮ್ಮ ಹಸಿವಿಗೆ ಇದ್ದ ಒಂದೇ ನೆಲೆ ಎಂಬಂತೆ ನಾವು ಅಲ್ಲಿಗೇ ಧಾವಿಸಿದೆವು. ಅಲ್ಲಿಗೆ ಅಂದು ಆಳ್ವಾಸ್ ವಿದ್ಯಾಸಂಸ್ಥೆಗಳ ಯಾವುದೋ ಒಂದು ವಿಭಾಗದ ಸುಮಾರು ಮೂರು ಬಸ್ ತುಂಬಾ ವಿದ್ಯಾರ್ಥಿಗಳೂ ಊಟಕ್ಕೆ ಬಂದಿದ್ದರು. ಆ ಗೌಜಿಯಲ್ಲಿ ನಮಗೂ ಅರೆಬರೆ ಅಡುಗೆ, ಊಟ ಬಂದು, ಕೈ ಬಾಯಿ ತೊಳೆಯುವಾಗ ಗಂಟೆ ಮೂರೇ ಕಳೆದಿತ್ತು.

ನಮ್ಮ ಮೂಲ ಯೋಜನೆಯಂತೆ ಅಂದೇ ಹಿಂದಿರುಗುವ ಕುರಿತು ಯಾರಲ್ಲೂ ವಿರೋಧವಿರಲಿಲ್ಲ. ಅಂದರೆ ಕೂಡಲೇ ಹೊರಟರೂ (ಸಂಜೆ ನಾಲ್ಕು ಗಂಟೆ) ಗಂಗಾಮೂಲದವರೆಗೆ – ಸುಮಾರು ಎಂಟೊಂಬತ್ತು ಕಿಮೀ, ಕಟ್ಟೇರು ಮುಗಿಸುವಾಗ ಕತ್ತಲಾಗುವುದು ಖಾತ್ರಿ. ಕತ್ತಲಲ್ಲಿ ಪರಿಸರ ವೀಕ್ಷಣೆಯಂತೂ ಅಸಾಧ್ಯ. ಮಾರ್ಗದರ್ಶನಕ್ಕೆ ನಮ್ಮಲ್ಲಿ ದೀಪಗಳೇನೋ ಇದ್ದುವು. ಆದರೆ ಗಾಢಂಧಕಾರದಲ್ಲಿ ಕಪ್ಪಡಿ ಕಟ್ಟಿದ ಕುದುರೆಯಂತೆ, ಬೆಳಕೋಲು ಬಿಟ್ಟು ಆಚೀಚೆ ಏನೂ ಕಾಣದ ಸ್ಥಿತಿಯಲ್ಲಿ, ಬೀಸುವ ಚಳಿಯಲ್ಲಿ ಸುಮಾರು ಹದಿನೆಂಟು ಕಿಮೀ ಏಕರೀತಿಯ ಇಳಿಜಾರು ನಿಭಾಯಿಸುವುದು ಸರಿಯೇ? ಮುಂದೆಯೂ ಹಗಲಿನ ಬಳಲಿಕೆಯೊಡನೆ, ಕನಿಷ್ಠ ಅರವತ್ತು ಕಿಮೀ ಸೈಕಲ್ ಸವಾರಿ ಹೋಗುವುದಿದ್ದರೆ ಸಂತೋಷ ಉಳಿದೀತೇ? ಅದು ಬರಿಯ ಶಿಕ್ಷೆಯಾಗದೇ? ಎಲ್ಲರೂ ಒಮ್ಮತದಿಂದ ರಾತ್ರಿ ಉಳಿದು, ಬೆಳಿಗ್ಗೆ ಸೂರ್ಯೋದಯದೊಡನೆ ಮರಳುವುದೆಂದು ಯೋಜನೆ ಬದಲಿಸಿಕೊಂಡೆವು. ಸಹ್ಯಾದ್ರಿ ಭವನದಲ್ಲೇ ಜೋಡಿ ಕೋಣೆಗಳೇನೋ ಇದ್ದುವು. ಆದರೆ ಹೆಚ್ಚಿನ ಹಾಸಿಗೆ ಹಾಕಲು ಅವಕಾಶವಿಲ್ಲದ ಕೋಣೆಯೊಂದಕ್ಕೆ ಒಂಬೈನೂರು ರೂಪಾಯಿ ಬಾಡಿಗೆ ಎಂದಾಗ ನಾವು ಕಂಗಾಲು. ಹೆಚ್ಚೆಂದರೆ ಅದ್ದೂರಿಯ ತಿಂಡಿ ತೀರ್ಥಗಳಿಗೆ ಸಾಲುವಷ್ಟೇ ಹಣ ಹೊತ್ತಿದ್ದ ನಾವು ಇದ್ದೆಲ್ಲ ಹಣ ಒಟ್ಟು ಮಾಡಿದರೂ ಎರಡು ಕೋಣೆ ಹಿಡಿಯಲಾರದಾಗಿದ್ದೆವು. ಆಗ ನೆನಪಿಗೆ ಬಂದದ್ದು ಭಗವತಿ ಪ್ರಕೃತಿ ಶಿಬಿರ. ಪೇಟೆಯಲ್ಲೇ ಇದ್ದ ವನ್ಯ ಇಲಾಖೆಯ ಕಛೇರಿಗೆ ಹೋದೆವು. ಅಲ್ಲಿ ಎಲ್ಲ ಅರವಿಂದರ ಪರಿಚಯದ್ದೇ ಬಳಗ. ಮೇಸ್ಟ್ರು ಸಂಸೆಯಲ್ಲಿದ್ದಾಗ, ವನ್ಯ ಇಲಾಖೆಯ `ಸಾರ್ವಜನಿಕರನ್ನು ಒಳಗೊಳ್ಳುವ’ ಕಲಾಪ ಒಂದೆರಡರಲ್ಲಿ ತಾವೂ ಶಾಲಾ ಮಕ್ಕಳನ್ನೂ ತೊಡಗಿಸಿ ಜನಪ್ರಿಯರಾಗಿದ್ದರು. ಹಾಗೆ ನಮ್ಮ ಕೆಲಸ ಸುಲಭವಾಯ್ತು. ಭಗವತಿ ಪರಿಸರ ಶಿಬಿರದ ಸಮೂಹ ವಸತಿ ಸೌಕರ್ಯದಲ್ಲಿ, ಅಂದರೆ ಡಾರ್ಮಿಟರಿಯಲ್ಲಿ ತಲಾ ರೂ ಇನ್ನೂರೈವತ್ತರ ನಾಲ್ಕು ಹಾಸಿಗೆ ಹಿಡಿದುಕೊಂಡೆವು. ಊಟ, ಕಾಫಿ ಸ್ಥಳದಲ್ಲಿ ಪ್ರತ್ಯೇಕವಿದೆ ಎನ್ನುವುದು ನಮಗೆ ತಿಳಿದೇ ಇತ್ತು. ಇಷ್ಟಾಗುವಾಗ ಮತ್ತೂ ಸ್ವಲ್ಪ ಸಮಯ ಕಳೆದಿತ್ತು. ಆದರಿನ್ನೇನಿದ್ದರೂ ಎಂಟೊಂಬತ್ತು ಕಿಮೀ ಅಂತರದ ಪೆಡಲಿಕೆ ಎಂಬ ನಿಶ್ಚಿಂತೆಯಲ್ಲಿ, ನೊಣವೂ ಆಡದ ಹಳೆ ಬಸ್ ನಿಲ್ದಾಣಕ್ಕೆ ಹೋಡೆವು. ಸ್ವಲ್ಪ ಬಾಳೆ ಹಣ್ಣು, ಬಿಸ್ಕೆಟ್ ಕೊಂಡು, ಚಾ ಕುಡಿದು, ಆರಾಮವಾಗಿ ಮತ್ತೆ ಬಂದ ದಾರಿಯಲ್ಲೇ ಪೆಡಲಿದೆವು.

ಲಕ್ಯಾ ಅಣೆಕಟ್ಟಿನ ದಾರಿ ಬಂದಾಗ ಕಾಲಾವಕಾಶವೂ ಇದೆ ಎಂದನ್ನಿಸಿದ್ದರಿಂದ ವಿಹಾರದ ಲಹರಿಯಲ್ಲಿ ಅತ್ತ ಹೊರಳಿದೆವು. ಒಂದು ಅಡ್ಡಗೋಲಿನ ಗೇಟು ಹಾಕಿತ್ತು, ಕಾವಲುಗಾರರಿರಲಿಲ್ಲ. ನಾವು ಸೈಕಲ್ಲಿನ ಸರಳತೆಯಲ್ಲಿ ಗೇಟಿನ ಕೆಳಗೆ ನುಸಿದು, ಗುಡ್ಡೆ ಏರಿಸಿದೆವು. ಆದರೆ ಕಟ್ಟೆ ನೆತ್ತಿಯ ತಿರುವ ಕಳೆದಾಗ ಅಲ್ಲಿನ ಗೇಟೂ ಕಾವಲಿನವರೂ ನಮ್ಮನ್ನು ತಡೆದರು. ಅಲ್ಲಿಂದಲೇ ಕಂಡಷ್ಟು, ಮಾತಾಡಿದಾಗ ಸಿಕ್ಕಷ್ಟು ವಿವರಗಳು ಒಟ್ಟಾರೆ ಆ ಗಣಿನಗರಿಯ ಕುರಿತ ಸರಕಾರದ ದ್ವಂದ್ವಕ್ಕೆ ಹಿಡಿದ ಕನ್ನಡಿಯ ಹಾಗೇ ಇತ್ತು.

ಆ ಕಾವಲುಗಾರರು ಗಣಿ ಕಂಪೆನಿಯ ಹೊರಗುತ್ತಿಗೆಯವರು, ಆದರೆ ವನ್ಯ ಇಲಾಖೆಯ ಆಜ್ಞಾವರ್ತಿಗಳು. ಅಂದರೆ, ಮಳೆಗಾಲದ ಪ್ರವಾಹ ಸೇರಿದಂತೆ ಕಟ್ಟೆಯ ಆರೋಗ್ಯದ ನಿಗಾ ಕಾವಲುಗಾರರದು. ಹಾಗೆಂದು ಕಟ್ಟೆಯ ಕುರಿತ ತಾಂತ್ರಿಕ ಜ್ಞಾನ ಅವರಿಗೇನೂ ಇರಲಿಲ್ಲ. ಇತ್ತ ಸಾರ್ವಜನಿಕ ವೀಕ್ಷಣೆಗೆ ಕಟ್ಟೆಯನ್ನು ಮುಕ್ತಗೊಳಿಸುವವರು ವನ್ಯ ಇಲಾಖೆ. ಹಾಗೆಂದು ಕಟ್ಟೆಗೆ ಅಪಾಯವೇನಾದರೂ ಒದಗಿದರೆ ಜವಾಬ್ದಾರಿ ವನ್ಯ ಇಲಾಖೆಯದ್ದಲ್ಲ. ಇಂದು ಕಟ್ಟೆಯ ಪಾತ್ರೆ ಬಲು ವಿಸ್ತಾರದ ಮೈದಾನವೇ ಆಗಿದೆ. ಅದರಲ್ಲಿ ವಿರಳವಾಗಿ ಹರಡಿದ ಗಾಳಿಮರ ಮತ್ತು ಕೆಲವು ಪೊದರುಗಳು ಕೇವಲ ಪ್ರಾಕೃತಿಕ ಸ್ವಾಧೀನತೆಯ ಲಕ್ಷಣ. ಎಂದೋ ಕೆಸರಾಗಿ ತುಂಬಿ ನಿಂತ ಆ ಸ್ಥಳ ಇಂದು ಶುದ್ಧ ಮರುಭೂಮಿಯಂತೆ ಒಣಗಿ ಹೋಗಿದೆ. ಅಲ್ಲಿ ಈಗ ಬಿಡಿ, ಕಾವಲುಗಾರರು ಹೇಳಿದ ಮಾತಿನಂತೆ ಮಳೆಗಾಲದಲ್ಲೂ ನೀರ ಪಸೆ ನಿಲ್ಲುವುದೆಂದು ಇಲ್ಲವಂತೆ. ಸ್ವಭಾವತಃ ಬಡಕಲು ತೊರೆಯೇ ಆದ ಮೂಲ ಲಕ್ಯಾದ ನೀರನ್ನೇ ನೋಡಬೇಕಿದ್ದರೆ ಈ ಬಯಲ ಮೇಲೆ ಸುಮಾರು ಆರು ಕಿಮೀ ನಡೆದು ಹೋಗಬೇಕಿತ್ತು! ವಾಸ್ತವದ ಜಲಸಂಪತ್ತು ಇಷ್ಟು ಬಡಕಲಾಗಿರುವಾಗಲೂ ಕಂಪೆನಿ ಮಂಗಳೂರಿಗೆ ನೀರು ಕೊಡುವ ಮಾತಾಡುವುದು ಎಷ್ಟು ವಿಚಿತ್ರ! ಕಾವಲುಗಾರರಿಗೆ ಮುಜುಗರವುಂಟಾಗದಂತೆ ನಾವು ಚಿತ್ರ ತೆಗೆಯದೆ, ಹೆಚ್ಚು ಮಾತಾಡದೆ ವಾಪಾಸಾದೆವು.

ಕುದುರೆಮುಖ ದಾರಿ ಬದಿಯಿಂದ ಸುಮಾರು ಒಂದು ಕಿಮೀ ಒಳಕ್ಕಿದೆ ಭಗವತಿ ಪರಿಸರ ಶಿಬಿರ. ಗೇಟಿನ ಬಳಿ ಎಲ್ಲ ಅಮೃತಶಿಲೆ ಹೊದ್ದ ಅದ್ದೂರಿ ಸ್ವಾಗತ ಕಛೇರಿ ನೋಡಿ ಒಳಗಿನ ದಾರಿಗಿಳಿದವರಿಗೆ ಅದಿನ್ನೂ ಕಚ್ಚಾವಾಗಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಮಳೆಗಾಲದಲ್ಲಿ ಆ ವಿಸ್ತಾರ ಮೈದಾನದಂಥ ಬಯಲು ಜವುಗಾಗುತ್ತದೆ. ಆಗ ವಾಹನಗಳು ಹೂತುಹೋಗುವುದನ್ನು ತಪ್ಪಿಸುವಂತೆ ಆ ಜಲ್ಲಿ ಮಾರ್ಗದ ಉದ್ದಕ್ಕೂ ಎರಡು ಸಾಲು ಕಲ್ಲಚಪ್ಪಡಿ ಹಾಸಿದ್ದಾರೆ. ಈ ದಾರಿ ಕೇವಲ ನನ್ನ ಸೈಕಲ್ಲಿಗೆ, ಅಂದರೆ ಪರ್ವತಾರೋಹಿ ಸೈಕಲ್ಲಿಗೆ ಮಾತ್ರ ಸ್ವಲ್ಪ ದಕ್ಕುವಂತಿತ್ತು. ಎಲ್ಲರೂ ಸೈಕಲ್ ನೂಕಿ ನಡೆದೇ ಶಿಬಿರ ಸೇರಿದೆವು.

ಪ್ರಾಕೃತಿಕ ಶುದ್ಧ ಸ್ಥಿತಿಯಲ್ಲಿರುವ ಭದ್ರಾ ನದಿ ದಂಡೆಯ ಮೇಲಿನ ಈ ನೆಲ ಒಂದು ಕಾಲಕ್ಕೆ ಕಾಟಿ ಕಡವೆಗಳ ಆಡುಂಬೊಲ. ಸಾರ್ವಕಾಲಿಕ ದಾರಿ ಮತ್ತು ನವನಗರದ ಹಾಲಿನ ಬೇಡಿಕೆ ಈ ಪ್ರಾಕೃತಿಕ ಹುಲ್ಲುಗಾವಲಿಗೆ ಅಸಂಖ್ಯ ಜಾನುವಾರುಗಳೊಡನೆ ಅಕ್ರಮ ವಸತಿ ಹೂಡುವ ಗೋವಳಿಗರನ್ನು ತಂದಿತ್ತು. ಈಚಿನ ವರ್ಷಗಳಲ್ಲಿ ಖಾಸಗಿ ಪರಿಸರಾಸಕ್ತ ಸಂಘಟನೆಗಳು ವನ್ಯಸಂರಕ್ಷಣೆಯ ಆವಶ್ಯಕತೆಗೆ ಈ ಗೋವಳಿಗರೆಲ್ಲರನ್ನು ಒಕ್ಕಲೆಬ್ಬಿಸಿ, ಮಾನವೀಯ ನೆಲೆಯಲ್ಲಿ ಪುನರ್ವಸತಿ ಕಲ್ಪಿಸಿ, ನೆಲವನ್ನು ಇಲಾಖೆಗೆ ಮುಕ್ತಗೊಳಿಸಿದವು. ಆದರೆ ವನ್ಯ ಇಲಾಖೆ, ಅಧಿಕಾರ ಬಲದಲ್ಲಿ ಮುಂದಿನ ದಿನಗಳಲ್ಲಿ ಅಲ್ಲೇ ನಿರ್ವಹಣೆಯ ನೆಪದಲ್ಲಿ ಹೆಚ್ಚು ಸ್ಥಿರವಾದ ಮತ್ತು ತ್ವರಿತ ವಿಸ್ತರಿಸುವ ಕ್ಯಾನ್ಸರಿನಂತೆ ಈ ಶಿಬಿರ ಹೂಡಿದ್ದು ದೊಡ್ಡ ಅನ್ಯಾಯ. ಹಿಂದೆ ಗಣಿಗಾರಿಕೆ ಕೆಳಪಾತ್ರೆಯಲ್ಲಿ ನದಿಗೆ ಕೆಸರೂಡಿದ್ದರೆ ಇಲ್ಲಿ ಈ ಶಿಬಿರ ವ್ಯವಸ್ಥೆ ಎಲ್ಲಾ ಮನುಷ್ಯ ವಿಕಾರಗಳನ್ನೂ ನದಿಯ ಮೇಲೆ ಹೇರುತ್ತಿದೆ.

ಶಿಬಿರದ ಖಾಯಂ ಕಟ್ಟಡಗಳಲ್ಲಿ ಹೊಸದಾಗಿ ಎದ್ದ ತಿಂಡಿ ತೀರ್ಥದ ಬಟವಾಡೆ ಕೇಂದ್ರ – ಗೋಲ್‍ಘರ್ ಕಣ್ಣು ಕುಕ್ಕುವಂತಿತ್ತು. ಹಳಸಿದ ಯೋಜನೆಗಳ ಕೇವಲ ಕುರುಹಾಗಿ ಹುಲ್ಲು ಕಳೆ ಬೆಳೆದ ಮೂಲಿಕಾ ಆವರಣ, ಹಾಳು ಸುರಿಯುವ ವೀಕ್ಷಣಾ ಗೋಪುರ, ಮುಕ್ಕಾಗುತ್ತಿದ್ದ ಕಾಂಕ್-ವುಡ್ಡಿನ ಬೇಲಿ ಬೋರ್ಡು ಆಸನಗಳು, ಅರೆಬರೆ ಜೀವ ಹಿಡಿದ ಸೌರ ವಿದ್ಯುತ್ ವ್ಯವಸ್ಥೆ ವಿಷಾದ ಹುಟ್ಟಿಸುವಂತಿದ್ದುವು. ಕಳ್ಳಬೇಟೆ ನಿಯಂತ್ರಣವೇ ಮೊದಲಾದ ಪ್ರಥಮಾದ್ಯತೆಯ ಕೆಲಸಗಳಿಗೆ ಇಲ್ಲದ ಸಿಬ್ಬಂದಿ ಇಲ್ಲಿ ಪ್ರವಾಸಿಗಳಿಗೆ ಅಡುಗೆ, ಹಾಸುಗೆ ನೋಡಿಕೊಳ್ಳಲು ನಿಯುಕ್ತರಾಗುವುದು ವನ್ಯ ಸಂರಕ್ಷಣೆಯ ಹೆಸರಿನ ಅವಹೇಳನವಲ್ಲವೇ?

ಪ್ರಕೃತಿ ಶಿಬಿರದ ಹಳೆ ಪರಿಚಯದ ಅಡುಗೆಯವ – ರಾಜು, ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು. ಹೋದದ್ದೇ ಚಾ ಕೊಟ್ಟು ಚೇತನ ತುಂಬಿದರು. ಚಾವಿ ಕೊಟ್ಟು ಡಾರ್ಮಿಟರಿ ಮುಕ್ತಗೊಳಿಸಿದರು. ಸದ್ಯ ಎಲ್ಲೆಡೆ ಹುಲ್ಲು ಹಣ್ಣಾಗಿ ಅಗ್ನಿ ಆಕಸ್ಮಿಕಗಳು ನಡೆಯುವ ಅಪಾಯವಿರುವುದರಿಂದ ಇಲಾಖೆ ಪ್ರವಾಸಿಗಳಿಗೆ ಕುರಿಯಂಗಲ್ಲನ್ನು ಮಾತ್ರ ಮುಕ್ತವಾಗಿರಿಸಿತ್ತು. ಅಂದರೆ ಸಮೀಪದ ಗಂಗಡಿ ಕಲ್ಲು, ಪಾಂಡರಮಕ್ಕಿ ಮೊದಲಾದ ಅರಣ್ಯ ಜಾಡುಗಳಿಂದ ತೊಡಗಿ ಕುದುರೆಮುಖ ಶಿಖರದವರೆಗೂ ಚಾರಣ ಸಂಪೂರ್ಣ ತಡೆಹಿಡಿಯಲಾಗಿತ್ತು. ಸಹಜವಾಗಿ ಇಲಾಖೆಗೆ `ಬಿಜಿನೆಸ್ ಡಲ್.’

ಡಾರ್ಮಿಟರಿಯಲ್ಲಿ ಹದಿನಾಲ್ಕಕ್ಕೂ ಮಿಕ್ಕು ಹಾಸಿಗೆಗಳಿದ್ದರೂ ಜನ ನಾವು ಮಾತ್ರ. ಬೆಂಗಳೂರಿನ ನಾಲ್ವರು ಹಿರಿಯರ ತಂಡ, ಮತ್ತೊಂದೆರಡು ಕೌಟುಂಬಿಕ ಬಳಗಗಳೆಲ್ಲ ಅನ್ಯ ವಸತಿ ವ್ಯವಸ್ಥೆಗಳಲ್ಲಿದ್ದುವು. ಅವರೆಲ್ಲ ವನ್ಯದ ಕುರಿತು ಗಂಭೀರ ಆಸಕ್ತರೇ ಇದ್ದುದರಿಂದ ಅಂದಿನ ಊಟ, ವಿಶ್ರಾಂತಿ ಕಾಲದಲ್ಲಿ ನಮಗೇನೂ ಅನಪೇಕ್ಷಿತ ಕಲಾಪಗಳು ಅನುಭವಕ್ಕೆ ಬರಲಿಲ್ಲ. ರಾಜು ಬಳಗ ನಮಗೋಸ್ಕರ ಸ್ನಾನಕ್ಕೆ ಬಿಸಿನೀರು ಒದಗಿಸಿದರೂ ತೊಟ್ಟಬಟ್ಟೆಯಲ್ಲೇ ಮರಳುವ ಸಂಕಲ್ಪದ ನಮಗೆ ಬದಲಿ ಬಟ್ಟೆ ಇಲ್ಲದೇ ಸೋಲಾಯ್ತು. ಊಟ ಹಿತಮಿತವಾಗಿತ್ತು. ವಾತಾವರಣದಲ್ಲಿ ನಾವು ನಿರೀಕ್ಷಿಸಿದ ಚಳಿ ಇರಲಿಲ್ಲವಾದ್ದರಿಂದ ರಾತ್ರಿ ಸುಖಕರವಾಗಿತ್ತು. ಶಿಬಿರತಾಣ ವನ್ಯದ ಹೃದಯಭಾಗದಲ್ಲಿದ್ದರೂ ಮೃಗ ವಿಶೇಷವೇನೂ ಕಾಣಸಿಗದೆ, ರಾತ್ರಿ ಇಲಿಗಳ ಕಲಾಪವಷ್ಟೇ ಪ್ರಧಾನವಾದಾಗ ನಮಗೆ ನಗೆಯೊಂದೇ ಉಳಿದಿತ್ತು!

ರಾತ್ರಿ ಸೂಚಿಸಿದ್ದಂತೇ ಬೆಳಿಗ್ಗೆ ರಾಜು ನಮಗೆ ಬೇಗನೇ ಖಾಲಿ ಚಾ ಕೊಟ್ಟು ಬೀಳ್ಕೊಟ್ಟರು. ನಸು ಚಳಿ ಹರಿಯುವಂತೆ ಸೈಕಲ್ ನೂಕುತ್ತ ದಾರಿ ತಲಪಿದಾಗ ಗಂಟೆ ಏಳಾಗಿತ್ತು. ತೆಳು ಮಂಜಿನ ಮುಸುಕು ಹರಿಯುವಂತೆ ನಮ್ಮ ಎರಡು ದೀಪಗಳನ್ನು ಬೆಳಗಿಕೊಂಡು ಮರಳಿ ಮಂಗಳೂರು ಜಪ ಹಿಡಿದೆವು.

ಹಿಂದಿನ ದಿನದ ಉದ್ದಕ್ಕೂ ವೇಣು ನಮಗೆಲ್ಲ ಧಾರಾಳ ಕೈ ತುತ್ತು ಕೊಡುತ್ತಿದ್ದ ಸಂಕ್ರಾಂತಿಯ ಎಳ್ಳು (ಎಳ್ಳಿನ ಜತೆಗೆ ನೆಲಗಡಲೆ, ಹುರಿಗಡಲೆ, ಕೊಬ್ಬರಿಚೂರು, ಬೆಲ್ಲದಚೂರುಗಳ ಹಿತಮಿಶ್ರಣ) ಎರಡನೇ ದಿನಕ್ಕೂ ನಮಗೆ ರುಚಿಕರವಾಗಿ ಎಲ್ಲ ವೇಳೆಗಳಲ್ಲೂ ಒದಗುತ್ತಲೇ ಇತ್ತು. ಮತ್ತೆ ಗಣಿನಗರಿಯಲ್ಲಿ ಕೊಂಡಿಟ್ಟುಕೊಂಡಿದ್ದ ಬಿಸ್ಕೆಟ್, ಬಾಳೆ ಹಣ್ಣು ಹೆಚ್ಚುವರಿಯಾಗಿ ಒದಗಿ ನಮ್ಮ `ಹೊಟ್ಟೆ ಖಾಲಿ’ ಭಾವ ಕಳೆದಿತ್ತು. ಹಾಗಾಗಿ ಏರು ದಾರಿಯಲ್ಲಿ ನಾವು ಸರ್ವಶಕ್ತರಾಗುವ ಅವಸರಕ್ಕೆ ಬೀಳಲಿಲ್ಲ. ಮತ್ತೆ ಇಳಿದಾರಿಯಲ್ಲಿ ವಾಯುಪುತ್ರರಾಗುವ ಮೋಹಕ್ಕೂ ಒಳಪಡಲಿಲ್ಲ.

ಕಡಾಂಬಿ ಅಬ್ಬಿ ಬಳಿಯ ಒಂಟಿ ಕಾಟಿಯ ಕತೆ, ಕುರಿಯಂಗಲ್ಲಿನ ರಿಪೀಟರ್ ಸ್ಟೇಶನ್ ಕತೆ, ಗಂಗಾಮೂಲದ ಪುರಾಣ, ವರಾಹತೀರ್ಥದ ವರ್ತಮಾನಗಳನ್ನೆಲ್ಲ ಮೆಲುಕು ಹಾಕುತ್ತ ಇಳಿಜಾರಿನ ಸಂತೋಷ ಅನುಭವಿಸಿದೆವು.

ಹಿಂದಿನ ದಿನದ ಕಷ್ಟ, ಅಂದಿನ ಮೊದಲ ಆರೆಂಟು ಕಿಮೀ ಏರಾಟವನ್ನು ಮರೆತವರಂತೆ ಅಲ್ಲಲ್ಲಿ ನಿಂತು, ಸಂತೋಷ ಪಡುತ್ತಾ ಸುಮಾರು ಎಂಟೂವರೆ ಗಂಟೆಯ ವೇಳೆಗೆ ಮತ್ತೆ ಮಾಳಕೈಕಂಬ, ಅಂದರೆ ರಾಷ್ಟ್ರೀಯ ಉದ್ಯಾನದ ಗಡಿ, ಪಾರು ಮಾಡಿದೆವು.

ಕಡಾರಿಯ ಹೋಟೆಲಿನಲ್ಲಿ ಭರ್ಜರಿ ಉಪಾಹಾರ ಮುಗಿಸಿ ಮುಂದುವರಿದೆವು. ಬಿಸಿಲೇರುತ್ತಿದ್ದಂತೆ ನಮ್ಮ ವೇಗವನ್ನೂ ಏರಿಸಿಕೊಂಡೆವು. ಬೆಳ್ಮಣ್ಣಿನಲ್ಲಿ ಕಬ್ಬಿನ ಹಾಲಿಗೊಮ್ಮೆ ಎಲ್ಲ ಒಟ್ಟಾಗಿ ನಿಂತದ್ದೇ ದೊಡ್ಡ ವಿಶ್ರಾಂತಿ.

ಮತ್ತೆ ಅವರವರ ಖಯಾಲಿಯಲ್ಲಿ ಚಿತ್ರಗ್ರಹಣಕ್ಕೋ ಬಾಟಲಿಯ ನೀರಿಗೋ ನಿಲ್ಲುತ್ತ, ಅವಿರತ ಪೆಡಲುತ್ತ ಸಾಗಿದೆವು. ಪಡುಬಿದ್ರೆಯಿಂದ ಮೂಲ್ಕಿಯ ಬಳಿ ಬರಲಿರುವ ಹೊಸ ಸುಂಕದ ಕಟ್ಟೆವರೆಗಿನ ದಾರಿ ಇನ್ನೂ ಹಳತೇ ಉಳಿದಿದ್ದು, ನಮ್ಮನ್ನು ತುಸು ಹೆಚ್ಚೇ ಬಳಲಿಸಿತು. ಆದರೆ ನಿನ್ನಿನಂತಲ್ಲದೆ ಮಧ್ಯಾಹ್ನದ ಊಟಕ್ಕೆ, ನಂನಮ್ಮ ಮನೆಯನ್ನೇ ಸೇರಲಿದ್ದೇವೆಂಬ ಸಂಕಲ್ಪ ದೃಢವಾಗಿದ್ದುದರಿಂದ ಒಬ್ಬರನ್ನೊಬ್ಬರು ಮೀರಿಸುವಂತೆ ಸಾಗಿಯೇ ಇದ್ದೆವು. ಹಿಂದಿನ ದಿನ ಒಬ್ಬೊಬ್ಬರೇ ಸೇರಿಕೊಂಡ ಕ್ರಮದಲ್ಲೇ ಕಳಚಿಕೊಳ್ಳುತ್ತಾ ಸಕಾಲಕ್ಕೆ ಸುಕ್ಷೇಮವಾಗಿ ಮನೆ ಸೇರಿದೆವು.

ಹೋಗುವ ದಾರಿಯಲ್ಲಿ, ನಲ್ವತ್ತು ದಿನ ಕಠಿಣ ವ್ರತ ಹಿಡಿದು, ಅಸಂಖ್ಯ ನಾಮ ಜಪ ಮಾಡಿ ಪಾಪರಾಶಿ ತೊಳೆಯುವವರಿಗೇನೂ ಕಡಿಮೆಯಿಲ್ಲದಂತೆ ನಾವೂ ಹೇಳಿಕೊಂಡದ್ದಿತ್ತು “ನಗರದ ಹೊಗೆದೂಳು, ಅಯ್ಯಪ್ಪಾ, ಜಲಮೂಲದ ದುರ್ನಾತ, ಕಳೆಯಪ್ಪಾ, ಪ್ರಾಕೃತಿಕ ಹಸಿರ, ಕಣ್ತುಂಬಪ್ಪಾ, ಯಾಂತ್ರಿಕ ಝಂಝಾಟ ಕಳಚಪ್ಪಾ, ಕ್ಲೋರಿನ್ ನೀರು, ಯಾಕಪ್ಪಾ, ಬೆಟ್ಟದ ನಿರ್ಮಲ ಝರಿ, ಕೊಡಿಸಪ್ಪಾ….” ಇತ್ಯಾದಿ. ಮರಳುವ ದಾರಿಯಲ್ಲಿ ಅನಿಷ್ಠಗಳೆಲ್ಲ ಒಂದೊಂದೇ ವಕ್ಕರಿಸುತ್ತಿದ್ದಂತೆ ಉಳಿದ ಪಲ್ಲವಿ ಒಂದೇ – “ಅಯ್ಯಯ್ಯಪ್ಪಾ, ಅಯ್ಯಯ್ಯಪ್ಪಾ.”

ಹೆದ್ದಾರಿಯ ಮಟ್ಟಸ ನೆಲದಲ್ಲಿ ದಾಖಲೆಗೋಸ್ಕರ ದೀರ್ಘ ಸವಾರಿಗಿಳಿಯುವವರಿದ್ದಾರೆ. ಯಾವ ಹಂತದಲ್ಲೂ ರಕ್ಷಣೆ, ಸೌಲಭ್ಯಗಳ ನೆರಳಿನಲ್ಲಿ ಕೇವಲ ಕಿಮೀ ಕಲ್ಲಿನ ಲೆಕ್ಕದಲ್ಲಿ ನೂರು ಸಂಭ್ರಮಿಸುತ್ತಾರೆ. ತಪ್ಪೇನಲ್ಲ, ಆದರೆ ನಮ್ಮದು ಭಿನ್ನ. ಅಲ್ಲಿ ಸಾಧನೆಗೆ ಪತ್ರ ಸಾಕ್ಷಿ ಬೇಕೋ ಏನೋ. ಆದರೆ ಇಲ್ಲಿ ನಮಗೆ ನಾವೇ ಪ್ರಮಾಣ (ಆತ್ಮತೃಪ್ತಿ). ಕುದುರೆಯ ಕೆನೆತಕ್ಕೆ ಸೈಕಲ್ ಒಲೆತವನ್ನು ಹೊಂದಿಸಿ, ಅಕ್ಷರಶಃ ತೊಟ್ಟ ಬಟ್ಟೆಯಲ್ಲೇ ಶತೋತ್ತರ ಸವಾಲನ್ನು ಸತತ ಎರಡು ದಿನವೂ ಸಾಧಿಸಿದ ಚಕ್ರ ತಪಸ್ಸು ಮತ್ತು ಸಿದ್ಧಿ ನಮ್ಮದು!

ಹೋಗುವಂದು ಮೀಯಾರಿನಲ್ಲಿ ಕಂಬಳದ ಗದ್ದಲ ಕಂಡಿದ್ದೆವು. ಮರಳುವ ದಾರಿಯಲ್ಲಿ ಅಡ್ವೆಗೆ ಅದರ ಸಂಭ್ರಮ ವರ್ಗಾವಣೆಗೊಂಡಿತ್ತು. ನಮ್ಮದು ಯಾವ ಗದ್ದಲವಿಲ್ಲದ, ಸ್ಪರ್ಧೆಯೂ ಅಲ್ಲದ ಓಟ. ಇಲ್ಲಿನ ಪುರಸ್ಕಾರ ಯಃಕಶ್ಚಿತ್ ಬೆಳ್ಳಿ ಚಿನ್ನಗಳ ಪದಕವಲ್ಲ. ಬದಲು, ಎಲ್ಲವನ್ನೂ ಮೀರಿದ ಆರೋಗ್ಯಪೂರ್ಣ ಜೀವ ಶಕ್ತಿಯ ಮರುಸ್ಥಾಪನೆ.