ಜೈಸಲ್ಮೇರ್ ಮತ್ತು ಮರಳಿನಲ್ಲಿ ಮರುಳುಗಟ್ಟುವುದು

Jun 1, 2026 | 0 comments

(ರಾಜಸ್ತಾನದ ಪ್ರಸಂಗಗಳು – ೪)

(ನಾಲ್ಕನೇ ದಿನ)

ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ ನಾನೇ ವೈಯಕ್ತಿಕ ಹಂಗು ಬೇಡವೆಂದು, ವೃತ್ತಿಪರ ಮಿತ್ರರಾದ ವಿಕ್ರಮ್ ಟ್ರಾವೆಲ್ಸ್ ಮತ್ತು ನಿರ್ಮಲಾ ಟ್ರಾವೆಲ್ಸ್ ಸಂಪರ್ಕಿಸಿ ನೋಡಿದೆ. ಅವರ ನಿಯತ ಪ್ಯಾಕೇಜುಗಳಲ್ಲಿ ರಾಜಸ್ತಾನವೇನೋ ಇತ್ತು. ಆದರೆ ಅವುಗಳ ‘ರೆಸ್ಟ್, ಮಾರ್ಕೆಟಿಂಗ್, ಪಿಲ್ಗ್ರಿಮೇಜ್’ಗಳೆಲ್ಲ ನನ್ನ ರುಚಿಯವಲ್ಲ. ಟ್ರಾವೆಲ್ಸಿನವರು “ಬಿಡಿ, ನಿಮ್ಮ ಆಯ್ಕೆಯ ಸ್ಥಳಗಳದ್ದೇ ಖಾಸಾ ಟೂರಿಗೆ ಕಾರು, ಹೋಟೆಲ್ ವ್ಯವಸ್ಥೆ ಮಾಡಿಕೊಡುತ್ತೇವೆ…” ಎಂದೂ ಹೇಳಿದ್ದಿತ್ತು. ಆದರೆ ವಿಶಿಷ್ಟಗಳನ್ನು ಕಾಣುವಲ್ಲಿ ಅವರ ಅನುಭವದ ಕೊರತೆ ನೋಡಿ ನಾನೇ ಹಿಂಜರಿದೆ. ಎರಡು ಮೂರು ದಶಕಗಳ ಹಿಂದಿನ ಕೆಲವು ದೀರ್ಘ ಪ್ರವಾಸಗಳನ್ನು ನಡೆಸಿದ ನನ್ನ ಅನುಭವಕ್ಕೆ ಇಂದಿನ ವಿದ್ಯುನ್ಮಾನ ಸವಲತ್ತುಗಳ ಜಾಲ ಒಗ್ಗುವಂತೆ ಕಾಣಲಿಲ್ಲ. ಈ ಕಾಲಕ್ಕೆ ತಕ್ಕ ಕೋಲ ಕಟ್ಟಲು ಮಗ ಅಭಯನಿಗೆ ನೀನೇ ಸಮರ್ಥ ಎಂದು ಬಿಟ್ಟೆ. ಆತ ಸೂತ್ರ ಕೈಗೆತ್ತಿಕೊಂಡದ್ದರಿಂದ ನಾನು ನಿಸೂರಾಗಿ ಪ್ರವಾಸಾನಂದವನ್ನಷ್ಟೇ ಅನುಭವಿಸುತ್ತಾ….

ಜೈಸಲ್ಮೇರ್ ಕೋಟೆ  

ನಾಲ್ಕನೇ ದಿನ ಬೆಳಿಗ್ಗೆ ನಾವು ಸಮಯಕ್ಕೆ ಸರಿಯಾಗಿಯೇ ಹೊರಟು ನಿಂತಿದ್ದೆವು. ಆದರೆ ಕಾರು ಚಾಲಕ ವಿಳಂಬಿಸಿದ್ದ (ವಿವರಗಳು ಮುಂದಿನ ಅಧ್ಯಾಯದಲ್ಲಿ). ಆಗ ಸಿಕ್ಕ ಸಮಯದಲ್ಲಿ ಸಣ್ಣ ನಗರ ದರ್ಶನವೆಂಬಂತೆ, ನಾನೊಬ್ಬನೇ ಹೋಟೆಲಿನಿಂದ ಹೊರಬಿದ್ದೆ. ಮೊದಲೇ ಇದ್ದ ಚಳಿಗೆ ಹೊರಗಿನ ಮಂಜು ಸೇರಿ, ನನ್ನ ಎರಡು ಸ್ವೆಟ್ಟರ್, ಮಂಗನತೊಪ್ಪಿಯ ರಕ್ಷಣೆಯನ್ನು ಅಣಕಿಸಿತು. ಮಾರ್ಗ ಬದಿಯಲ್ಲೇ ಕಸ ಸೇರಿಸಿ ಬೆಂಕಿ ಕೊಟ್ಟು ಚಳಿಕಾಯಿಸುತ್ತಿದ್ದ ಕಾವಲಿನವರು “ಇಧರ್ ಆಯಿಯೇ ಸಾಬ್…” ಎಂದು ಆಮಿಷವನ್ನೂ ಒಡ್ಡಿದರು. ಅದನ್ನು ನಿರಾಕರಿಸಿ, ವಿಮಾನ ನಿಲ್ದಾಣ ರಸ್ತೆಯ ಉದ್ದಕ್ಕೆ ಸುಮಾರು ಒಂದು ಕಿಮೀ ನಡೆದೆ. ಒಂದು ನರ ಹುಳು ದರ್ಶನವೂ ಆಗಲಿಲ್ಲ ಎಂದೇ ಹೇಳಬೇಕು. ಮತ್ತೆ ನಮ್ಮ ಕಾರೆಲ್ಲಾದರೂ ಬಂದು ಬಿಟ್ಟರೆ ಎಂಬ ಆತಂಕದಲ್ಲಿ ಹಾಗೇ ವಾಪಾಸಾದೆ. ಕಾರು ಬರುವಾಗ ಗಂಟೆ ಏಳೂವರೆ ಕಳೆದಿತ್ತು!

ಉದಯರ ಇನ್ನೊಬ್ಬ ಚಡ್ಡಿದೋಸ್ತನ ತಮ್ಮ, ಇನ್ನೂ ಮೂವತ್ತರೊಳಗಿನ ತರುಣ, ಸ್ನೇಹಶೀಲ, ಹೆಸರು ತಮ್ಮಯ್ಯಾಂತಿಟ್ಟುಕೊಳ್ಳಿ (ನಿಜ ಹೆಸರು ಮರೆತಿದ್ದೇನೆ), ನಮಗೊದಗಿದ ಸಮರ್ಥ ಮಾರ್ಗದರ್ಶಿ. ಆತ ಕೋಟೆ ಗುಡ್ಡೆಯ ತಪ್ಪಲಿನಲ್ಲೇ ನಮ್ಮನ್ನು ಮುಖ್ಯ ದ್ವಾರದತ್ತ ನಡೆಸುತ್ತಾ ಸ್ಥಳ ಪುರಾಣ ಬಿಚ್ಚಿದ. ಜೈಸಲ್ಮೇರ್ ಕೋಟೆಗೆ ಕನಿಷ್ಠ ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲೇ ತೀರಾ ವಿರಳವಾಗಿರುವ ‘ಜೀವಂತ ಕೋಟೆ’ಗಳ ಪಟ್ಟಿಯಲ್ಲೂ ಇದು ಖ್ಯಾತವೇ ಇದೆ. ಇಲ್ಲಿ ಐತಿಹಾಸಿಕ ಕಾಲದಿಂದಲೇ ನಡೆದು ಬಂದಂತೆ, ಇಂದು ಸುಮಾರು ನಾಲ್ಕು ಸಾವಿರದಷ್ಟು ಮಂದಿ, ತಮ್ಮ ಜೀವನ ವ್ಯಾಪಾರವನ್ನು ಕೋಟೆಯೊಳಗೇ ನಡೆಸುತ್ತಿದ್ದಾರೆ. ಅವರಲ್ಲಿ ಹಿಂದಿನಿಂದಲೇ ಬಂದ ಮತೀಯ ವಿಭಾಗೀಕರಣ ಇಂದಿಗೂ ಉಳಿದಿರುವುದು ಒಂದು ವಿಚಿತ್ರವೇ ಸರಿ. ಕೋಟೆಯ ಒಂದು ವಲಯದಲ್ಲಿ ೪೦% ಬ್ರಾಹ್ಮಣರು, ಇನ್ನೊಂದೇ ವಲಯದಲ್ಲಿ ೬೦% ಕ್ಷತ್ರಿಯರಿದ್ದಾರೆ. ಅನ್ಯರು ನಗಣ್ಯ. ಕಾಲಗತಿಯಲ್ಲಿ ಜನಸಂಖ್ಯೆಯ ಹೆಚ್ಚಳ, ವೃತ್ತಿಯ ಮುಖಗಳು ಮತ್ತು ಭದ್ರತೆಯ ಆಯಾಮಗಳು ಬದಲಿದ್ದರಿಂದ, ಇಂದು ಕೋಟೆಯ ಹೊರಕ್ಕೂ ವಸತಿ, ವಹಿವಾಟು ವಿಸ್ತರಿಸಿದರೂ ತಾಯಿಬೇರು ಕೋಟೆಯೊಳಗೇ ಇದ್ದಂತಿದೆ….

ಮಾರ್ಗದರ್ಶಿ ತಮ್ಮಯ್ಯನನ್ನು ಅಭಯಾದಿಗಳು ಹೆಚ್ಚು ಅನುಸರಿಸಿದರು. ವೈಯಕ್ತಿಕವಾಗಿ ನಾನು (ಹಿಂದೆ ಹೇಳಿದಂತೇ) ಮಾರ್ಗದರ್ಶಿಯ ವಿಸ್ಟೃತ ವಿವರಣೆಗಳಿಗೆ ಕಿವಿಯಾದದ್ದು ಕಡಿಮೆ. ಕಾರಣ ಸರಳ – ನನ್ನ ಆಸಕ್ತಿಗಳ ಹರಹು ಭಿನ್ನ ಮತ್ತು ಆತ ಕೊಡುವ ವಿವರಗಳನ್ನು ಹಿಡಿಟ್ಟುಕೊಳ್ಳುವ ಸಾಮರ್ಥ್ಯವೂ ಸಣ್ಣದು. ಹೀಗೆ ಕೇಳಿ ಹಾಗೆ ಮರೆತೇ ಬಿಡುತ್ತೇನೆ. ಹಾಗಾಗಿ ನಮ್ಮವರನ್ನು ಕಣ್ಣಳವಿಯಲ್ಲೇ ಉಳಿಸಿಕೊಂಡು, ನನ್ನ ಆಸಕ್ತಿ ಎಳೆದಂತೆ ನೋಡುತ್ತ,  ಅಲ್ಲಿಲ್ಲಿ ನಮ್ಮದೇ ಮಾರ್ಗದರ್ಶಿಯನ್ನೋ ಸಿಕ್ಕವರನ್ನೋ ವಿಚಾರಿಸುತ್ತ ಮುಂದುವರಿದೆ.

ಕೋಟೆಯ ಮಹಾದ್ವಾರ ಪ್ರವೇಶಿಸಿದಲ್ಲಿಂದ ಹಿಂದಿನಗಳಂತೇ ಹಲವು ಮಹಾ ಗೋಡೆಗಳು, ಮಹಾದ್ವಾರಗಳನ್ನು ಗಲ್ಲಿ ದಾರಿಗಳಲ್ಲಿ ನೋಡುತ್ತ ನಡೆದೆವು. ಎರಡೂ ಪಕ್ಕಗಳಲ್ಲಿ ಮನೆ, ಸಣ್ಣಪುಟ್ಟ ಅವಕಾಶಗಳಲ್ಲೇ ಬಗೆತರದ ವಾಣಿಜ್ಯ ವಹಿವಾಟು – ಬಟ್ಟೆ, ಮಣಿಸರಕು, ತಿನಿಸಿನ ಅಡ್ಡೆಗಳು, ಪುಸ್ತಕ ಮಳಿಗೆ…. ನಡೆದೇ ಇದ್ದವು. ಕಟ್ಟೆಯೊಂದರ ಮೇಲೆ ಹರವಿದ್ದ ಜಮಖಾನೆ ಮಳಿಗೆಯಾತ/ಕೆ ಮೊಬೈಲ್ ಗುರುಟುವ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದುದು, ಗಲ್ಲಿಯ ಗೋಡೆಯುದ್ದಕ್ಕೆ ಮೊಳೆ ಹಗ್ಗ ಬಳಸಿ ವ್ಯಾಪಾರಿಗಳು ಶೋಕೇಸ್ ವಿಸ್ತರಿಸಿಕೊಂಡದ್ದು, ಕೊಳಚೆ ಚರಂಡಿಯೊಂದಿಗೆ ಕುಡಿನೀರ ಕೊಳವೆಗಳು ರಾಜಿ ಮಾಡಿಕೊಂಡದ್ದು, ಎಲ್ಲೆಂದರಲ್ಲಿ ವಿದ್ಯುತ್ ಕಂಬ, ಪರಿವರ್ತಿತ ಟೆಲಿಫೋನ್ ಕಂಬ, ಅಡ್ಡಾದಿಡ್ಡಿ ಎಳೆದ ವಯರ್ರು, ಟೀವೀ ಕೇಬಲ್ಲುಗಳು, ಮೇಲಾಡುವ ಮತ್ತು ಆಗೀಗ ಕೆಳಗಿನ ಮಂದಿಗೆ ಪ್ರಸಾದ ವಿತರಿಸುವ ಪಾರಿವಾಳಗಳು, ಬೋರ್ಡುಗಳು, ಜಾಹೀರಾತು ಫಲಕಗಳು… ಹೇಳಿದಷ್ಟೂ ಮುಗಿಯದು. ಆಧುನಿಕ ಆವಶ್ಯಕತೆಗಳು ಆ ಸಂತೆಯಲ್ಲೂ ಹಳೆಗಾಲದ ಕಟ್ಟಡ ಮತ್ತು ಅಲಂಕಾರಗಳ ಜತೆಗೂ ಅಪೂರ್ವ ಮೈತ್ರಿ ಸಾಧಿಸಿದ್ದವು. ಊರ ಜನರು, ಪ್ರವಾಸಿಗಳು, ದ್ವಿಚಕ್ರ ವಾಹನಗಳ ಓಡಾಟ, ತಂಗಾಟ, ತುಸು ಅಗಲದ ಗಲ್ಲಿಗಳಲ್ಲಿ ಧಗ್ ಧಗ್ ಎಂದು ಮೈಯೆಲ್ಲ ಕುಲುಕುತ್ತಾ ಸಾಗುವ ಆಟೋರಾಕ್ಷಸರ ದಾಂಧಲೆಗಳೆಲ್ಲ ನಿರ್ಭಿಡೆಯಿಂದ ಸಾಗಿತ್ತು. ಎಲ್ಲೂ ಪೋಲಿಸ್ ಅಥವಾ ವಾಹನ ಸಂಚಾರ ನಿರ್ಬಂಧಗಳು ಕಾಣಲಿಲ್ಲ. ಬಹುಶಃ ನೂರಾರು ವರ್ಷಗಳ ರೂಢಿಯನ್ನು ಯಾವ ಪೋಲಿಸ್ ಹೇರುವ ಶಿಸ್ತೂ ಊರ್ಜಿತವಾಗಲು ಬಿಡುವುದೇ ಇಲ್ಲ.

ಒಂದೆಡೆ ಗಲ್ಲಿಯೊಂದರ ಮುಕ್ತ ಛತ್ತಿಗೆ ಅಡ್ಡಕ್ಕೆ ಮರದ ತೊಲೆಗಳನ್ನು ಜೋಡಿಸಿ ಮೇಲೆ ಯಾರೋ ಹೆಚ್ಚುವರಿ ನೆಲ ಮಾಡಿಕೊಂಡಿದ್ದರು. ಇದು ನವ-ನಗರಗಳ ಗಲ್ಲಿಗಳಲ್ಲಿ ಮೋರಿ/ ರಾಜಕಾಲುವೆಗಳ ಮೇಲೆ ಕಾಂಕ್ರೀಟ್ ಮುಚ್ಚಿಗೆ ಹಾಕಿ ಮಾರ್ಗ ವಿಸ್ತರಿಸಿದಂತೇ ಇತ್ತು. ಆ ಮರಗಳು ಕುಂಬಾದ ಕಾಲಕ್ಕೆ, ಮೇಲಿನ ವಹಿವಾಟೆಲ್ಲ ಕರ್ಪಿಗೆ ಬಿದ್ದ ಆನೆಯ ಅನುಭವ ಗಳಿಸೀತೋ ಏನೋ! ಈ ಗಲ್ಲಿ ರಾಜ್ಯದಲ್ಲೇ ಒಂದು ವೀಕ್ಷಣೀಯ ಜೈನ ಮಂದಿರದ ಬಳಿ ತಮ್ಮಯ್ಯ ನಮ್ಮನ್ನು ತುಸು ತಡೆದ. ಆದರೆ ಪಾದರಕ್ಷೆ ಕಳಚಿ ‘ಸಂಪಾದಿಸುವ’ ಪುಣ್ಯಕ್ಕಿಂತ, ಉಳಿಸಿದ ಸಮಯವೇ ದೊಡ್ಡದು ಎಂಬಂತೆ ನಾವು ಮುಂದೆ ಸಾಗಿದೆವು.

ಒಂದು ಏರುಗಲ್ಲಿಯ ಮೂಲೆಯ ಕಟ್ಟೆಯ ಮೇಲೊಂದು ಹಳೆಗಾಲದ ಫಿರಂಗಿ ಕುಳಿತಿತ್ತು. ಅದಿಂದು ನಗರ ರಕ್ಷಣೆಯ ಕಾಯಕದಿಂದ ನಿವೃತ್ತವಾದರೂ ಪ್ರವಾಸೀ ಪ್ರದರ್ಶನ ಯೋಗ್ಯತೆಯನ್ನು ಹೆಚ್ಚಿಸಿಕೊಂಡಿತ್ತು. ಅದಕ್ಕೇರುವ ಕಿಷ್ಕಿಂಧಾ ಮೆಟ್ಟಿಲ ಸಾಲಿನಲ್ಲಿ ಅಸಾಧ್ಯ ವೀಕ್ಷಕರ ಸಂದಣಿಯಿತ್ತು. ಹಾಗೆಂದು ‘ತುಳಿತದ ಸಾವಿಗೆ ಸಿಕ್ಕುವ’ ಸ್ಥಳಾವಕಾಶವೇ ಅಲ್ಲಿರದುದರಿಂದ, ನಾವೂ ಸುಧಾರಿಸಿಕೊಂಡು ಮೇಲೇರಿ, ದಿಟ್ಟಿ ಹಾಯಿಸಿ ಇಳಿದೆವು. ಕ್ಷಣಾರ್ಧದಲ್ಲಿ ನಗರದ ಸಿಂಹಾವಲೋಕನವೇನೋ ಸಿಕ್ಕಿತ್ತು. ಆದರೆ ಅದಕ್ಕೇರುವ ಹೆಚ್ಚಿನವರು, ಉಳಿದವರ ಸಮಯಕ್ಕೇನೂ ಬೆಲೆ ಕೊಡದೆ, ಹತ್ತಿಪ್ಪತ್ತು ಮಿನಿಟುಗಳ ಕಾಲ ಸ್ವಂತೀ, ಸ್ವಮಂದೆಯ ಪಟಗಳಿಗಾಗಿ ತಿಣುಕಾಡುತ್ತಿದ್ದದ್ದು ತೀರಾ ಬೇಸರ ಹುಟ್ಟಿಸಿತು.

ಅಂತಿಮವಾಗಿ ಕೋಟೆಯ ಬಹುತೇಕ ಕೇಂದ್ರ ಅಥವಾ ಉನ್ನತ ಭಾಗದಲ್ಲೋ ಇದ್ದ ಅರಮನೆಯನ್ನು ಮುಟ್ಟಿದೆವು. ಅದನ್ನಿಂದು ಉಳಿದ ಹೆಚ್ಚಿನ ಅರಮನೆಗಳಂತೇ ರಾಜಯುಗದ ವಸ್ತು ಸಂಗ್ರಹಾಲಯವನ್ನಾಗಿಸಿದ್ದಾರೆ. ಅದಕ್ಕೂ ಹೆಚ್ಚಿನ ವೀಕ್ಷಣಾ ಸ್ವಾರಸ್ಯ ಅಲ್ಲಿನ ಕೆಲವು ಪರಿವರ್ತಿತ ಹವೇಲಿಗಳಲ್ಲಿ ಅರ್ಥಾತ್ ಶ್ರೀಮಂತರ ಮನೆಗಳಲ್ಲಿವೆ, ಎಂದು ತಮ್ಮಯ್ಯ ನಮಗೆ ಸೂಚಿಸಿದ. ಆ ಪ್ರಕಾರ ಇದ್ದುದರಲ್ಲಿ ಒಂದು ಹವೇಲಿಯನ್ನು ನಾವು ಟಿಕೆಟ್ ಸಹಿತ ಹೊಕ್ಕು, ಸುತ್ತಾಡಿ ಸಂತೋಷಿಸಿದೆವು. ಹವೇಲಿ ರಾಜ ವೈಭವ, ಸೈನ್ಯ ಸಂಗ್ರಹಗಳನ್ನು ಮೀರಿ, ಜನಜೀವನದ ಹಲವು ಮುಖಗಳನ್ನು (ಒಂದು ಮುಖದ ಕುರಿತು ಪ್ರತ್ಯೇಕ ಟಿಪ್ಪಣಿ ಹಾಕುತ್ತೇನೆ, ನಿರೀಕ್ಷಿಸಿ) ಚೆನ್ನಾಗಿಯೇ ಸಂಗ್ರಹಿಸಿದ್ದವು. ನಾವು ಹೊಕ್ಕ ಹವೇಲಿಯ ಯಜಮಾನ, ಕಟ್ಟಡದ ಆಯಕಟ್ತಿನ ಜಾಗಗಳಲ್ಲಿ ಸಿಸಿ ಟಿವಿ ಜೋಡಿಸಿ, ಉಸ್ತುವಾರಿ ಜನ ಇಟ್ಟು, ಬರುವ ಅಪಾರ ಆದಾಯದಲ್ಲಿ ಹೊರಗೆಲ್ಲೋ (ಅಥವಾ ಜೈಪುರದಲ್ಲೋ) ವಿಲಾಸೀ ಜೀವನ ನಡೆಸಿದ್ದಾನಂತೆ! ಹೀಗೆ….

ಸುಮಾರು ಮೂರು ಗಂಟೆಯ ಸುತ್ತಾಟದ ಮೇಲೆ ನಾವು ಹೊರಗಿನ ದಾರಿಗೆ ಬಂದೆವು. ಥಾರ್ ಮರುಭೂಮಿಯ ಕೇಂದ್ರದಲ್ಲಿರುವ ಜೈಸಲ್ಮೇರಿನಲ್ಲಿ ಸಹಜ ಕಲ್ಲೂ ಮರಳಿನಂತೇ ಚಿನ್ನದ ಬಣ್ಣದಲ್ಲಿದೆ. ಈ ಕೋಟೆಗೆ ಅನ್ವರ್ಥಕವಾಗಿ ಸೋನಾರ್ ಖಿಲ್ಲಾ (ಚಿನ್ನದ ಕೋಟೆ) ಎಂದೇ ಹೆಸರು. ಇದನ್ನಾಧರಿಸಿಯೇ ಸತ್ಯಜಿತ್ ರೇ ತೆಗೆದ ಸಿನಿಮಾದ ಹೆಸರೂ ಸೋನಾರ್ ಖಿಲ್ಲ. ಬಹುತೇಕ ಖಂಡಾಂತರ ವಹಿವಾಟುಗಳ ಐತಿಹಾಸಿಕ ಮಾರ್ಗ – ರೇಷ್ಮೆ ದಾರಿಯಲ್ಲಿ ಜೈಸಲ್ಮೇರ್ ಒಂದು ಪ್ರಮುಖ ಸ್ಥಳವೇ ಆಗಿತ್ತು. ಸಹಜವಾಗಿ ಇಂದಿಗೂ ಹೊಂಬಣ್ಣದ ಕೋಟೆಯ ನಗರಿ, ವಿವಿಧ ಕಲ್ಲು ಹರಳುಗಳ ಕುಸುರಿ ಕೆಲಸಕ್ಕೂ ಜವಳಿಯ ಆಕರ್ಷಕ ಕಲಾಬತ್ತಿಗೂ ವಿಶ್ವಪ್ರಸಿದ್ಧವೇ ಆಗಿದೆ. ಹಿಂದೆಲ್ಲ ಕೋಟೆಯ ಒಳಗೇ ನಡೆಯುತ್ತಿದ್ದ ಈ ಕಾಮಗಾರಿಗಳು ಇಂದು ಹೊರವಲಯದ ಮನೆಗಳಿಗೂ ತುಂಬ ವಿಸ್ತರಿಸಿದೆ. ಅವನ್ನೆಲ್ಲ ವಿವರಗಳಲ್ಲಿ ನೋಡುವುದಕ್ಕೆ ಮತ್ತು ನೇರ ಖರೀದಿಸುವುದಕ್ಕೆ ಸಮಯ ಎಷ್ಟಿದ್ದರೂ ಸಾಕಾಗದು ಎಂದ ತಮ್ಮಯ್ಯ. ಬದಲಿಗೆ, “ನಿಮಗೆ ಬೇಕಿದ್ದರೆ, ಎಲ್ಲಕ್ಕೂ ಇದೊಂದು ಸಾಕು…” ಎಂದು ದೂರದಿಂದಲೇ ಒಂದು ಮಳಿಗೆಯನ್ನೂ ತೋರಿಸಿದ. ಆತ ಬಹುತೇಕ ಮಾರ್ಗದರ್ಶಿಗಳಂತೆ, ನಮ್ಮನ್ನು ಮಳಿಗೆ ಒಳಕ್ಕೇ ಒಯ್ದು ದಾಕ್ಷಿಣ್ಯಕ್ಕೆ ಕಟ್ಟಿ ಹಾಕುವುದಾಗಲೀ, ಪರೋಕ್ಷವಾಗಿ ಮಳಿಗೆಯವರಿಂದ ಸ್ವಂತಕ್ಕೆ ಹೆಚ್ಚಿನ ಲಾಭ ಹೊಡೆದುಕೊಳ್ಳುವುದಾಗಲೀ ಮಾಡಲಿಲ್ಲ. ಅದಕ್ಕೂ ಮಿಗಿಲಾಗಿ “ನನ್ನಣ್ಣನ ಆಪ್ತರ ಸಹಕಾರಕ್ಕೆ ಒದಗುವ ಅವಕಾಶ ಕೊಟ್ಟದ್ದಕ್ಕೆ ಧನ್ಯವಾದಗಳು” ಎಂದು ನಮಗೇ ಹೇಳಿ, ನಾವು ಒತ್ತಾಯಿಸಿದರೂ ಕನಿಷ್ಠ ಮಾರ್ಗದರ್ಶಿ ಶುಲ್ಕವನ್ನೂ ಪಡೆಯದೇ (ನಯವಾಗಿ ನಿರಾಕರಿಸಿ) ನಡೆದು ಬಿಟ್ಟ!

ಗಮನಿಸಿ, ಸರಕಾರ ಪ್ರವಾಸೀ ಕೇಂದ್ರಗಳಲ್ಲೆಲ್ಲ ಯೋಗ್ಯ ಮಾರ್ಗದರ್ಶಿಗಳಿಗೆ ಅಧಿಕೃತ ಪರವಾನಗಿ ಪತ್ರವನ್ನು ಕೊಟ್ಟಿದೆ. ಹಾಗೆಂದು ಅವರಿಂದ ಪ್ರವಾಸಿಗಳು ಶೋಷಿತರಾಗದಂತೆ ಶುಲ್ಕದ ಪಟ್ಟಿಯನ್ನೂ ಅಲ್ಲಲ್ಲಿ ಬೋರ್ಡುಗಳಲ್ಲಿ ಪ್ರಕಟಿಸಿದ್ದಾರೆ. ನಮಗೆ ಅಮೇರ್ ಕೋಟೆ ತೋರಿದ ಮಾರ್ಗದರ್ಶಿಗೆ, ಆ ಲೆಕ್ಕದಲ್ಲೇ ನಾವು ಐನೂರು ರೂಪಾಯಿ ಕೊಟ್ಟಿದ್ದೆವು. ಆತ ಮುಂದುವರಿದು, ಜವುಳಿ ಮಳಿಗೆಗೆ ನಮ್ಮನ್ನು ಪರಿಚಯಿಸಿದ್ದು ಮಾತ್ರ ನಗದಾಗಲಿಲ್ಲ

[ ಹವೇಲಿ ಹೊಕ್ಕ ಡೈನೋಸಾರ್ಗಳು

ಎಲ್ಲ ಪ್ರದರ್ಶನಾಲಯಗಳಂತೆ ಜೈಸಲ್ಮೇರ್ ಹವೇಲಿಯಲ್ಲೂ ನಾವು ಶೌರ್ಯ ಸಾಹಸಗಳ ಮತ್ತು ಶ್ರೀಮಂತಿಕೆಯ ಸಂಗ್ರಹಗಳ ಉದ್ದಕ್ಕೆ ಯಾಂತ್ರಿಕವಾಗಿ ಕಾಲೆಳೆದಿದ್ದೆವು. ಆಗ  ನಮ್ಮ ದಂಡಿಗೆ ಅನಿರೀಕ್ಷಿತ ಆಶ್ಚರ್ಯ ಮೂಡಿಸಿದ್ದು ಈ ಪ್ರದರ್ಶಿಕೆಗಳು. ಹಳೆಗಾಲದ ಖಗೋಳಶಾಸ್ತ್ರಾಭ್ಯಾಸಿಗಳ ಯಂತ್ರಗಳು, ಡೈನೋಸಾರ್ ಮೊಟ್ಟೆ ಮತ್ತು ಕೆಲವು ಪಳೆಯುಳಿಕೆಗಳು. ಹೌದು, ಜೈಸಲ್ಮೇರ್ ನೆಲ ಸಾವಿರ ವರ್ಷಗಳ ಲೆಕ್ಕದಲ್ಲಿ ರಜಪುತಾನರ ಶೌರ್ಯ, ರೇಷ್ಮೆ ದಾರಿಯ ಖ್ಯಾತಿಗಳಿಗೇ ಮುಗಿಯಲಿಲ್ಲ. ಬಹಳಾ ಬಹಳಾ ಹಿಂದೆ ಇಲ್ಲಿ ಹೆಗ್ಗೌಳಿಗಳು (ಡೈನೋಸಾರುಗಳು) ನಡೆದಾಡುತ್ತಿದ್ದವೆಂದು ಅವಶೇಷಗಳೂ ಆ ಕಾಲದ ಹಲವು ಪಳೆಯುಳಿಕೆಗಳೂ ಪತ್ತೆಯಾಗಿವೆ. ಅವುಗಳ ಕುರಿತ ಕೆಲವು ಸಾಕ್ಷಿ ಸಹಿತ  ವಿವರಣೆಯ ಪಟವನ್ನೂ ಈ ಶ್ರೀಮಂತ ಪ್ರದರ್ಶನಕ್ಕಿಟ್ಟದ್ದು, ಆತನ ಬೌದ್ಧಿಕ ಶ್ರೀಮಂತಿಕೆಗೂ ದೊಡ್ಡ ಸಾಕ್ಷಿ ಎಂದೇ ನನಗನ್ನಿಸಿತು. ]

ಎಂಥಾ ಮರಳಯ್ಯ ಇದು ಎಂಥಾ ಮರಳೂ…

ಜೈಸಲ್ಮೇರಿನಲ್ಲೂ ನಮ್ಮ ಮಧ್ಯಾಹ್ನದೂಟ ಮುಗಿಸಿ ಕೈಬಾಯಿ ತೊಳೆಯುವಾಗ ಗಂಟೆ ಮೂರೂವರೆಯಾಗಿತ್ತು. ಅದರ ನೀರಪಸೆ ಆರುವ ಮುನ್ನ ನಾವು ಪಶ್ಚಿಮಕ್ಕೆ, ಅಂದರೆ ಇನ್ನಷ್ಟು ಮರುಭೂಮಿಯೊಳಗೇ ಹುದುಗಿದ ಸ್ಯಾಮ್ ಎಂಬ ಊರಿನತ್ತ ಧಾವಿಸಿದ್ದೆವು. ಎಲ್ಲಿ ನೋಡಿದರೂ ಹೊಂಬಣ್ಣದ ಮರಳ ಹಾಸು, ವಿರಳ ಕುರುಚಲು. ಮೊದಮೊದಲಿಗೆ ಪವನ ವಿದ್ಯುತ್ ತಯಾರಿಯ ಅಸಂಖ್ಯ ಗಿರಿಗಿಟಿಗಳು, ವಿದ್ಯುಚ್ಛಕ್ತಿಯನ್ನು ರವಾನಿಸುವ ತಂತಿ ಜಾಲಗಳು ಕಾಣಿಸಿದವು. ಮುಂದುವರಿದಂತೆ ಆಗಸದಲ್ಲಿ ಅಲ್ಲೊಂದು ಇಲ್ಲೊಂದು ತೇಲುವ ರೆಕ್ಕೆಗೋ ಅರೆ-ಬುಗ್ಗೆಗೋ ನೇತುಬಿದ್ದವರ (ಪ್ಯಾರಾ ಸೇಲಿಂಗ್) ಆಟದ ಸಂಭ್ರಮ ಕಾಣಿಸುತ್ತಿತ್ತು. ಆ ಹಾರು-ಸಾಧನಗಳಿಗೆ ಕಟ್ಟಿದ ಹಗ್ಗವನ್ನು ಎಳೆದಾಡಿಸುವ ಜೀಪುಗಳ ದೌಡಂತೂ ಸಾಮಾನ್ಯದ್ದಲ್ಲ. ಅವನ್ನು ಮೀರಿದಂತೆ ಒಂದೊಂದೇ ಭಾರೀ ಬಿಗಿ ರೆಕ್ಕೆಗಳಡಿಯಲ್ಲಿ, ಮೋಟಾರ್ ಸೈಕಲ್ ಇಂಜಿನ್ (ಪವರ್ ಗ್ಲೈಡಿಂಗ್) ಬಲದಲ್ಲಿ ಹಾರುವವರೂ ಕಾಣಿಸಿದರು. ಅಲ್ಲಲ್ಲಿ ಈ ಕ್ರೀಡೆಗಳ ತೀರಾ ಅನೌಪಚಾರಿಕ ಉಡಾವಣಾ ತಾಣಗಳು, ಕೆಲವೇ ಜನ ವಾಹನಗಳು ಮುಕುರಿದ್ದನ್ನೂ ಕಂಡೆವು. ಇವೆಲ್ಲ ಹೆಚ್ಚಿದಂತೆ…

ಅಲ್ಲಲ್ಲಿ ಮಾರ್ಗಬದಿಯಲ್ಲಿ ಗುಡಾರ ಪೇಟೆಗಳೆದ್ದು ಪ್ರವಾಸಿಗಳನ್ನುದ್ದೇಶಿಸಿಯೇ ತಿಂಡಿ ತೀರ್ಥಗಳ ವಹಿವಾಟು ನಡೆಸಿದ್ದವು. ಇನ್ನೂ ಒಳ ಮೈಯ ವಿಸ್ತಾರದಲ್ಲಿ ಯಥಾನುಶಕ್ತಿ ಮಣ್ಣು ಸುರಿದೋ ಇಂಟರ್ಲಾಕ್ ಬೆಸೆದೋ ಸಾಮಾನ್ಯ ವಾಹನಗಳ ದಾರಿ ಮಾಡಿ ಬೇರೆ ಬೇರೆ ಗುಡಾರ ನಗರಿಗಳೂ ಹರಡಿಕೊಂಡಿದ್ದವು. ತಯಾರಿಯ ದಿನಗಳಲ್ಲಿ ಅಭಯ ಸಾಕಷ್ಟು ಜಾಲಾಡಿ, ಸಾಕಷ್ಟು ಒಳ್ಳೇ ಗುಣಾಂಕ (ಸ್ಟಾರ್) ಮತ್ತು ಸಾಮಾನ್ಯ ವೆಚ್ಚದಲ್ಲಿ ಹೆಚ್ಚಿನ ಕ್ರೀಡೆ ಮತ್ತು ತಂಗುವ ವ್ಯವಸ್ಥೆ ಕೊಡುವ ಸಂಸ್ಥೆಯೊಂದನ್ನು ಹಿಡಿದು, ನಮಗೆರಡು ಗುಡಾರ ಕಾಯ್ದಿರಿಸಿದ್ದ. ಆದರೆ ವಾಸ್ತವದಲ್ಲಿ ನಮ್ಮ ಚಾಲಾಕೀ ಚಾಲಕ “ನಿಮ್ಮ ಬುಕ್ಕಿಂಗಿನಲ್ಲಿ ಮರಳಾಟ, ಒಂಟೆ ಸವಾರಿ ಇಲ್ಲ. ಇದ್ದರೂ ನನ್ನ ಪರಿಚಯದವರು ಕೊಡುವಷ್ಟು ಮಝಾಕಾರಿಯಲ್ಲ…” ಎಂದೇನೋ ಮಂಕಾಡಿಸಿದ. (ಹಿಂದಿನಿಂದ ತಿಳಿಯಿತು, ಕಾಯ್ದಿರಿಸಿದ ಶುಲ್ಕದಲ್ಲಿ ಹೆಚ್ಚುವರಿ ಕ್ರೀಡೆಗಳಿರಲಿಲ್ಲ ನಿಜ. ಆದರೆ ಹಣ ಕೊಟ್ಟಲ್ಲಿ ಅವು ಖಂಡಿತಕ್ಕೂ ಹೆಚ್ಚು ಚೆನ್ನಾಗಿಯೇ ಇದ್ದವು!) ಮತ್ತೆ ಒಂದು ತಂಬುವಿನ ಮಾಲಿಕನಲ್ಲಿ ಭಾರೀ ಪ್ರಭಾವೀ ಮಾತುಗಳ ನಾಟಕ ಮಾಡಿ, ‘ಮರಳ ಸವಾರಿ’ಗೆಂದೇ ಜಿಪ್ಸಿಯೊಂದನ್ನು ಹಿಡಿದು, ನಮ್ಮನ್ನೇರಿಸಿ ಅಟ್ಟಿಯೂ ಬಿಟ್ಟ.

 

ಜಿಪ್ಸಿ ಸ್ವಲ್ಪ ದೂರ ಮಾತ್ರ ಡಾಮರ್ ದಾರಿಯಲ್ಲೋಡಿ, ಆಯಕಟ್ಟಿನ ಜಾಗದಲ್ಲಿ ಮರಳ ಬಯಲಿಗೇ ನುಗ್ಗಿತು. ಮತ್ತದರ ವೇಗ ಏರುತ್ತಿದ್ದಂತೇ, ಎದುರು ಮುಚ್ಚಿದ ಭಾಗದಲ್ಲಿದ್ದ ಚಾಲಕ ನಮ್ಮ ಕಿವಿಗಡಚಿಕ್ಕುವಂತೆ “ಢಂಗ್ ಡಿಷ್ಕುಂ…” ಸಂಗೀತ ಹಾಕಿ ಸಂಪರ್ಕ ದೂರನೇ ಆಗಿ ಬಿಟ್ಟ. ವಾಹನಕ್ಕೆ ಹಿಂದೆ ಕೆಳಗಿನ ತಡೆಬೇಲಿ ಇರಲಿಲ್ಲ, ಅಕಸ್ಮಾತ್ ಅದು ಅಡ್ಡಕ್ಕುರುಳಿದರೆ ರಕ್ಷಣಾ ಹಂದರವೂ ಇರಲಿಲ್ಲ. ಸೀಟ್ ಬೆಲ್ಟ್, ಶಿರಸ್ತ್ರಾಣ ಬಿಡಿ, ಗಟ್ಟಿಯಾಗಿ ಹಿಡಿದುಕೊಳ್ಳಲು ಯೋಗ್ಯ ಹಿಡಿಕೆ, ಕೈ ತಾಂಗುಗಳೂ ಇರಲಿಲ್ಲ. ಧಡಧಡ ಕುಕ್ಕುಲೋಟದೊಡನೆ, ಆಗೀಗ ಭಾರೀ ಎಡ ಬಲ ಓಲಾಡುತ್ತಾ ಜಿಪ್ಸಿ ಧಾವಿಸುವಾಗ, ಅಪಾಯಗಳ ಅರಿವಿಲ್ಲದ ಆಭಾ ಭಾರೀ ನಗು ಕೇಕೆಯೊಡನೆ ಸಂತೋಷಿಸಿದಳು. ಆದರೆ ದೊಡ್ಡವರೆಲ್ಲ ವಾಹನದೊಳಗೇ ನಾವು ಉಳಿಯುವುದರೊಡನೆ ಆಭಾಳನ್ನೂ ಉಳಿಸಿಕೊಳ್ಳುವ ಸಂಕಟದಲ್ಲಿ ಪರೋಕ್ಷ ಬೊಬ್ಬೆಯನ್ನೇ ಹೊಡೆದೆವು. ಚಾಲಕ ತುಸು ನಿಧಾನಿಸಿದರೂ ಸುಳ್ಳು ಸುಳ್ಳೇ “ತುಂಬ ನಿಧಾನಿಸಿದರೆ ಅಥವಾ ನಡುವೆ ಎಲ್ಲಾದರೂ ನಿಂತರೆ ಜಿಪ್ಸಿ ಹೂತು ಹೊಗುತ್ತದೆ…” ಎನ್ನುತ್ತಾ ಮತ್ತಷ್ಟು ಓಡಿಸಿ, ಅದೊಂದು ಕೇಂದ್ರಕ್ಕೆ ಮುಟ್ಟಿಸಿದಾಗ ನಾವೆಲ್ಲ ಹಣ್ಣುಗಾಯಿ ನೀರುಗಾಯಿಯಾಗಿದ್ದೆವು. ನಮಗೆ ವಾಹನ ಇಳಿದ ಸಂತೋಷಕ್ಕಿಂತಲೂ ಹೆಚ್ಚಿಗೆ “ಬದುಕಿದೆವು..” ಎನ್ನುವ ಭಾವ ಮೂಡಿತ್ತು!

ಅದೊಂದು ಮರಳ ಸವಾರಿಯ ವಾಹನಗಳ ಮತ್ತು ಒಂಟೆಗಳ ತತ್ಕಾಲೀನ ಉಡಾವಣ ಕೇಂದ್ರ. ಅಲ್ಲಿ ಯಾವುದೇ ಖಾಯಂ ಕಟ್ಟಡ ಅಥವ ವ್ಯವಸ್ಥೆ ಇಲ್ಲ. ಸವಾರಿ ಕೇಳುವ ಮಂದಿಯನ್ನು ಕಾದು ಒಂದಷ್ಟು ಒಂಟೆಗಳು ಬಿಟ್ಟರೆ ಮರಳೋಟದ ಸವಾರಿ ಕೊಡುವ ಅಸಂಖ್ಯ ವಾಹನಗಳು. ಒಂದೆರಡು ಗುಡಾರಗಳು ಕೊಳಚೆ ಹೆಚ್ಚಿಸುವ ಕಾರ್ಯವನ್ನು (ಸಾಫ್ಟ್ ಡ್ರಿಂಕ್ಸ್, ನೂಡಲ್ಸ್, ಆಮ್ಲೆಟ್ಚಾ, ಜೂಶೂ….) ಅವಿರತ ನಡೆಸಿದ್ದವು. ಸುತ್ತ ಕಣ್ಣೆಟಕುವವರೆಗೂ ಹಾಸಿಕೊಂಡಂತಿದ್ದ ಮರಳ ದಿಣ್ಣೆ ತಗ್ಗುಗಳ ಹರಹಿನಲ್ಲಿ ಕುಶಿಬಂದಂತೆ ಗೀಟೆಳೆಯುತ್ತಾ ಓಡುವ, ವಿರಳ ಮರ ಪೊದರುಗಳ ಸಂದುಗೊಂದಿನಲ್ಲಿ ತೂರಾಡುವ ವಾಹನಗಳೋಟ ತಾನೇ ತಾನಾಗಿ ಮೆರೆದಿತ್ತು. ನಮ್ಮನ್ನು ಅಲ್ಲಿಗೆ ಕೇವಲ ಮುಟ್ಟಿಸಿದ ‘ಜಾಣ’, ಸೂರ್ಯಾಸ್ತದ ವೇಳೆ ಸಿಕ್ತೇನೆ ಎಂದು ಜಾರಿಕೊಂಡು, ಹೆಚ್ಚಿನ ಹಣಕ್ಕೆ ಇನ್ನೆಲ್ಲೋ ಮಾಯವಾದ.

ಆಭಾ ಮತ್ತು ರಶ್ಮಿಯಷ್ಟೇ ಒಂಟೆ ಸವಾರಿ ಬಯಸಿ ಅನುಭವಿಸಿದರು. ರಶ್ಮಿಯಾದರೂ ಭಾವನೆಗಳ ಲಹರಿಗೆ ಕಡಿವಾಣ ಹಾಕಿಟ್ಟಿದ್ದಳು. “ಹೊಸ ಅನುಭವ” ಎಂದೇ ಸಂತೋಷ ಪಟ್ಟಳು. ಎಳೆಯ ಆಭಾ ಹಾಗಲ್ಲವಲ್ಲ. ಮಹಾಕಾಲುಗಳನ್ನು ಒತ್ತರೆ ಮಡಚಿ, ದೇಹವನ್ನು ಮುದ್ದೆ ಮಾಡಿದಂತೇ ಕುಳಿತಿದ್ದ ಒಂಟೆಯನ್ನು ಹಿಮ್ಮಗ್ಗುಲಿನಿಂದ ಸಮೀಪಿಸಿ, ಮುಖ ಮುಟ್ಟಿದಳು. ಧ್ಯಾನಸ್ಥ ಯೋಗಿಯಂತೆ, ಅರೆನಿಮೀಲಿತ ದೃಷ್ಟಿಯನ್ನು ಶೂನ್ಯದಲ್ಲಿ ನೆಟ್ಟ ಒಂಟೆ ಸ್ಪಂದಿಸಲೇ ಇಲ್ಲ. ಆಭಾ ತನ್ನಷ್ಟಕ್ಕೇ ಕಳ್ಳ ನಗುವಿನೊಡನೆ, ಒಂಟೆ ಮುಟ್ಟಿದ ಆನಂದದಲ್ಲಿದ್ದಂತೆ, ಕಾಸ್ತಾರ ಬಂದು, ಇವಳನ್ನೆತ್ತಿ ಆ ಒಂಟೆಯ ಡುಬ್ಬದ ಹಿಂಬದಿಯ ಮೆತ್ತೆಯ ಮೇಲೆ ಕೂರಿಸಿಬಿಟ್ಟ. ಆಭಾಳ ಭಯಮಿಶ್ರಿತ ಸಂಭ್ರಮ ದಿಕ್ಕರಿಯುವ ಮುನ್ನ, ಕಾಸ್ತಾರನ ಸೂಚನೆಯಂತೇ ಒಂಟೆ ನಿಲ್ಲುವ ಕಾರ್ಯದಲ್ಲಿ ಮುಂಗಾಲು ಸೆಟೆಸಿತು. ಸಹಜವಾಗಿ ಅದರ ‘ಹೊರೆ’ (ಆಭಾ) ಒಮ್ಮೆಲೇ ಪೂರ್ಣ ಹಿಂದೆ ವಾಲಿಕೊಂಡಿತು. ಆಭಾ ಕಿಟಾರನೆ ಕಿರುಚಿ, ಮುಂಬಾಗಿ, ಎರಡೂ ಕೈಗಳಲ್ಲಿ ಡುಬ್ಬ ಅವಚಿಕೊಂಡಳು. ಮರಳುಗಾಡಿನ ಸಂತ ಏನೂ ಆಗಲಿಲ್ಲವೆನ್ನುವಂತೆ, ಮರುಕ್ಷಣದಲ್ಲಿ ಹಿಂಗಾಲುಗಳನ್ನೂ ಚಾಚಿದ. ಈಗ ಆಭಾಳಿಗೆ ಮುಂದಕ್ಕೆಸೆದ ಅನುಭವ. ಭೋರೆಂಬ ಅಳುವ ಕಡಲಲ್ಲೇ ಮುಳುಗಿ ಹೋದಳು. ಪಕ್ಕದಲ್ಲೇ ನಿಂತು ತಮಾಷೆ ನೋಡುತ್ತಿದ್ದ ನಾವು, ನಗು ತಡೆದುಕೊಂಡು ಕೊಟ್ಟ ಸಮಾಧಾನಗಳು, ಒಂಟೆಯ ದೀರ್ಘ ವೃತ್ತವೊಂದರ ನಡಿಗೆಯ ಉದ್ದಕ್ಕೆ ಬಗಲಲ್ಲೇ ನಡೆದು ಹೋದ ಅಭಯನ ಮಾತುಗಳು ಆಕೆಗೆ ಸಾಕಾಗಲೇ ಇಲ್ಲ! ಬಹುಶಃ ಸುತ್ತು ಮುಗಿದ ಮೇಲೆ ಅದು ಕೂರುವಾಗಿನ ಇನ್ನೊಂದೇ ಭಯಾನಕ ಸನ್ನಿವೇಶವನ್ನು ನೆನೆಸಿಯೇ ದುಃಖ ಉಮ್ಮಳಿಸುತ್ತಿದ್ದಿರಬೇಕು….

ಒಂಟೆ ಇಳಿದ ಮೇಲೆ, ಸ್ವತಂತ್ರ ಮರಳಾಟವೇ  ಚಂದ ಎಂದು ಸಾರಿದಳು. ವಾಹನ ಸಂಚಾರ ಹೆಚ್ಚಿಲ್ಲದ ಮರಳ ದಿಬ್ಬವೊಂದರ ಜಾರಿಗೆ ಹೋದೆವು. ಈಕೆ ಅಮಿತಾನಂದದೊಡನೆ ಓಡಿದಳು, ದೊಪ್ಪನೆ ಬಿದ್ದಳು, ಜಾರಿದಳು, ಹೊರಳಿದಳು, ಉರುಳಿದಳು, ಕೊನೆಗೆ ನಿಲದ ಕೇಕೆಯೊಡನೇ ಅಪ್ಪನ ಕೈಯಲ್ಲಿ ಎಳೆದಾಡಿಸಿಕೊಂಡದ್ದೂ ಆಯ್ತು. ಮಂಗಳೂರ ಕಡಲ ಕಿನಾರೆಯ ನೆನಪಿನಲ್ಲಿ ನಿಶ್ಚಲ ಮಲಗಿ ಕಂಠ ಮಟ್ಟ ಹೂಳಿಸಿಕೊಂಡ ನೆನಪಿನೊಡನೆ ಇಲ್ಲೂ ಹುಗಿಸಿಕೊಂಡಳು. ಆಗ ಪಕ್ಕದಲ್ಲೇ ಆಡುತ್ತಿದ್ದ ಇನ್ನೊಂದು ಸಮಪ್ರಾಯದ (ಪೂರ್ಣ ಅಪರಿಚಿತ) ಹುಡುಗಿ ಇವಳಿಗೆ ಜತೆಗೊಟ್ಟು ಗೆಳತಿಯೇ ಆದಳು. ಮತ್ತಿಬ್ಬರ ಮರಳಾಟದ ವೈಖರಿ ಹೆಚ್ಚಿದಾಗೆಲ್ಲ ಎಲ್ಲಿ ಸವಾರಿ ವಾಹನಗಳ ಜಾಡಿಗೆ ಬೀಳುತ್ತಾರೋ ಎಂದು ನೋಡಿಕೊಳ್ಳುವುದೇ ನಮಗೆಲ್ಲ ದೊಡ್ಡ ಕೆಲಸವಾಯ್ತು.

ನೀರ ಪಸೆ ಅಥವಾ ದೂಳಕಣವೂ ಇಲ್ಲದ ಅಲ್ಲಿನ ಮರಳ ಅನುಭವ ನಮಗೆ ಹೊಸತು. ಹಾಗಾಗಿ ಆಭಾಳ ಆಟಕ್ಕೆ ಸಣ್ಣಪುಟ್ಟದಾಗಿ ಸಹಕರಿಸಿದ ನಾವೂ ದಿನದ ಕೊನೆಗೆ ಸಾಕಷ್ಟು ಬಸವಳಿದರೂ ಕೊಳೆಯ ಅನುಭವ ಬರಲೇ ಇಲ್ಲ. ಅದೇ ಕಡಲ ಕಿನಾರೆಯ ಆಟದ ಕೊನೆಗಳಲ್ಲಿ. ನಾವೆಷ್ಟು ಬಟ್ಟೆ ಒದರಿ, ಕಾಲುಕೈ ತೊಳೆದು, ಒರೆಸಿಕೊಂಡರೂ ಪಾದರಕ್ಷೆಗಳಿಗಂಟಿಯೋ ಪ್ಯಾಂಟಿನ ಕೆಳ ಅಂಚುಗಳ ಸಂದಿನಲ್ಲೋ ಅನಿರೀಕ್ಷಿತ ತೆರೆ ಹೊಡೆದು  ನಖಶಿಖಾಂತ ತೊಯ್ದ ಫಲವಾಗಿ ಜೇಬುಗಳ ತಳದಲ್ಲೋ ಒಂದಷ್ಟು ಮರಳ ಕಳ್ಳಸಾಗಣೆ ನಡೆದೇ ಹೋಗುತ್ತದೆ. ಮರುಭೂಮಿಯ ಉಸುಕು ಯಾವ ಅಂಟಿನ ನೆಂಟೂ ಸಾಧಿಸುವುದಿಲ್ಲ!

ಸಂದ ಅಷ್ಟೂ ದಿನಗಳಂತೆ ವಾತಾವರಣದ ಮಬ್ಬು, ಚಳಿ ಮುಂದುವರಿದೇ ಇತ್ತು. ಸೂರ್ಯ ನಿಜದ ದಿಗಂತ ಸಮೀಪಿಸುವುದಕ್ಕಿಂತಲೂ ಮೊದಲೇ ಯಾವ ವರ್ಣವೈಭವವನ್ನೂ ಕಾಣಿಸದೇ ಪೇಲವವಾಗಿ ಕಣ್ಮರೆಯಾಗಿಬಿಟ್ಟ. ಮತ್ತೆ ನಮಗಲ್ಲಿ ಸ್ವಾರಸ್ಯವುಳಿಯಲಿಲ್ಲ. ಜಿಪ್ಸಿ ಚಾಲಕನನ್ನು ಚರವಾಣಿಯಲ್ಲಿ ಕರೆಸಿಕೊಂಡೆವು. ಆತ ನಮ್ಮ ಜೀವಪ್ರೀತಿ ಇನ್ನಷ್ಟು ಹೆಚ್ಚಿಸುವಂತೇ ಸವಾರಿ ಕೊಟ್ಟು ಮಾರ್ಗ ಮುಟ್ಟಿಸಿದ. ನಮ್ಮ ಜೋಧಪುರದ ಚಾಲಕನ ಜೇಬು ಭಾರ ಹೆಚ್ಚಿಸಿಕೊಂಡಿರಬೇಕು. ಖದೀಮ ಒಳಗೊಳಗೇ ನಕ್ಕು, ನಮ್ಮನ್ನೇರಿಸಿಕೊಂಡು  ವಸತಿ ಸಮೂಹದ ಹುಡುಕಾಟಕ್ಕೆ ಮುಂದುವರಿದ.

ಗುಡಾರಗಳ ನಗರಿಯಲ್ಲಿ …

ಜೈಸಲ್ಮೇರ್ – ಸಾಮ್ ದಾರಿಯ ಅಪ್ಪಟ ಮರುಭೂಮಿಯಲ್ಲಿ, ಪ್ರವಾಸಿ ಋತುಗಳಲ್ಲಿ, ವಸತಿ ಮತ್ತು ರಂಜನೆಗಾಗಿ ನೂರಾರು ಸಂಘಟಕರು, ತಮ್ಮವೇ ತತ್ಕಾಲೀನ ಅಂಕಣಗಳಲ್ಲಿ, ಗುಡಾರಗಳ ನಗರಿ ಎಬ್ಬಿಸುತ್ತಾರೆ. ಒಂದಂದಾಜಿನಂತೆ ಈ ಬಾರಿ ಸುಮಾರು ಹದಿನೇಳು ಸಾವಿರ ಗುಡಾರಗಳರಳಿವೆಯಂತೆ. ನಾವು ಆ ಸಂತೆಯನ್ನು ಸಮೀಪಿಸಿದಾಗ ಗೂಗಲ್ ನಕ್ಷೆಗೂ ದಿಕ್ಕು ತಪ್ಪಿ ಹೋಗಿತ್ತು! ಸಂಜೆಗತ್ತಲು, ಎಲ್ಲಾ ದಿಕ್ಕುಗಳಿಂದ ಹುಚ್ಚುಚ್ಚಾರ ಬೆಳಕು, ಅರಬ್ಬಾಯಿ ಕೊಡುವ ಮೈಕುಗಳು ಗೊಂದಲವನ್ನು ಹೆಚ್ಚಿಸಿದವು. ಸ್ಪಷ್ಟ ಓಣಿ, ಬೇಲಿ, (ಕೆಲವಕ್ಕೆ) ನಾಮಫಲಕಗಳೂ ಇಲ್ಲದಲ್ಲಿ ಅವರಿವರನ್ನು ಕೇಳಿ, ಹೇಗೋ ನಮ್ಮ ವಠಾರ ಸೇರಿಕೊಂಡೆವು.

ಚೌಕಾಕಾರದ ವಠಾರದ ಎದುರು ಭಾಗದಲ್ಲಿ ವ್ಯವಸ್ಥಾಪನೆಯ ಆವಶ್ಯಕತೆಗೆ ತಕ್ಕಂತೆ ಸಾಮಾನ್ಯ ದೃಢ ಕಟ್ಟಡವೇ ಇತ್ತು. ಉಳಿದಂತೆ ಒಳಮೈಯಲ್ಲಿ ಆಯತಾಕಾರದ ಮೂರೂ ಮಗ್ಗುಲುಗಳಲ್ಲಿ ಸುಮಾರು ಮೂವತ್ತು ಸುಂದರ ಗುಡಾರಗಳು, ವಿದ್ಯುದ್ದೀಪಗಳ ಬೆಳಕಿನಲ್ಲಿ ಶೋಭಿಸಿದ್ದವು. ನಡುವಣ ಸಾಕಷ್ಟು ದೊಡ್ಡದೇ ಅಂಗಳದಲ್ಲಿ ಪುಟ್ಟ ಅರೆ ಗೋಲಾಕಾರದ ಪ್ರೇಕ್ಷಾಂಗಣ, ಎದುರೊಂದು ಪುಟ್ಟ ರಂಗಮಂಚ. ಎಲ್ಲೆಡೆ ರಂಗುರಂಗಾದ ಬೇಗಡೆ, ಪರದೆ, ದೀಪಮಾಲೆಯ ಅಲಂಕಾರ. ಕೆಲವು ಅತಿ ಪ್ರಖರ ದೀಪಗಳು ಬೆಳಕೋಲುಗಳನ್ನು ಕುಶಿ ಬಂದಂತೆ ಆಡಿಸುತ್ತ, ಆಗಸದಲ್ಲಿ ಅಸಂಗತ ಚಿತ್ತಾರಗಳನ್ನು ಬರೆಯುತ್ತಲೂ ಇದ್ದವು. ಕೊನೆಯದಾಗಿ ಮಾಯಾನಗರಿಯ ಭ್ರಮೆ ಹೆಚ್ಚಿಸುವಂತೆ ಕಿವಿ ಹೊಟ್ಟಿಹೋಗುವ ರೆಕಾರ್ಡೆಡ್ ಸಂಘೀತ ಕೇಳುತ್ತಿದ್ದಾಗ, ಏನೂ ಇಲ್ಲದಲ್ಲಿ ಏನೋ ಮಹತ್ತಿನದೇ ನಡೆಯುತ್ತಿದೆ ಎಂದೇ ಭ್ರಮಿಸುವಂತಾಗಿತ್ತು. ನಮಗೆಲ್ಲಾ ಸ್ವಾಗತದ ತಿಲಕ ಹಚ್ಚಿ, ಕಾರಿನಿಂದ ನಮ್ಮ ಗಂಟು ಗದಡಿಗಳನ್ನು ಹೊತ್ತ ನೌಕರರು ಎರಡು ಗುಡಾರಗಳಿಗೆ ಮುಟ್ಟಿಸಿದಾಗ ಜಗುಲಿ, ಒಳಗಿನ ಜೋಡು ಹಾಸುಗೆ, ಬಚ್ಚಲು ಕಕ್ಕೂಸಿನ ವ್ಯವಸ್ಥೆಗಳನ್ನೆಲ್ಲ ನೋಡಿ ಮಾರುಹೋಗಿದ್ದೆವು!

ಕತ್ತಲು ಕುದುರುತ್ತಿದ್ದಂತೆ ಆಗಾಗ ಮೈಕಾಸುರನಿಗೆ ಕಡಿವಾಣ ಹಾಕಿ, ಸಂಜೆಯ ‘ರಿಫ್ರೆಶ್ ಮೆಂಟ್’ ಈಗ ಬರುತ್ತೆ…., ಇನ್ನೇನು ಬಂತು…., ಬಂತೇ ಬಂತೂ ಎಂದೆಲ್ಲ ಪುಸಲಾಯಿಸಿ ಏಳೂವರೆಯವರೆಗೂ ಸತಾಯಿಸಿದರು. ಆಮೇಲಾದರೂ ಸಿಕ್ಕಿದ್ದೇನು – ನಾಲ್ಕು ಮಸಾಲೆ ಕಡಲೆ, ಎರಡು ಸಂಡಿಗೆ ಮತ್ತು ಒಂದಿಂಚು ಕಾಗದದ ಲೋಟದಲ್ಲಿ ಅರ್ಧ ಇಂಚು ಚಾ! ಅನಂತರ ‘ಗೌರವಾರ್ಹ ಅತಿಥಿ’ಗಳನ್ನೆಲ್ಲ (ಹೆದರಬೇಡಿ, ಸಾಹಿತಿ, ಪುಡಾರಿಗಳ್ಯಾರೂ ಅಲ್ಲಿಗೆ ಬಂದಿರಲಿಲ್ಲ) ಅಂದರೆ ನಮ್ಮನ್ನೇ ಸಭಾವಲಯಕ್ಕೆ ಆವಾಹಿಸಿದರು. ಮತ್ತೆ ಒಂದು ‘ಶುಭ ಮುಹೂರ್ತ’ದಲ್ಲಿ, ಕಲಾರಂಗದ ನಡುವಣ ಪುಟ್ಟ ಕುಂಡದಲ್ಲಿ, ಸಾಂಕೇತಿಕ ಶಿಬಿರಾಗ್ನಿ ಸ್ಥಾಪಿಸಿದರು. ವೇದಿಕೆಗೆ ಪೇಟಿ (ಹಾರ್ಮೋನಿಯಂ) ಸಹಿತ ನಿರೂಪಕ/ ಗಾಯಕ ಮತ್ತು ಧೋಲಕ್ ಬಂದು ಜೀವಂತ ಸಂಘೀತ ತೊಡಗಿತು. ಆ ಮೊದಲೇ ಪ್ರೇಕ್ಷಾಂಗಣದ ಹೊರ ಸುತ್ತಿನಲ್ಲಿ ಕುರ್ಚಿ ಎಳೆದುಕೊಂಡು ಸಣ್ಣದಾಗಿ ಶುರುವಾಗಿದ್ದ ಕುಡುಕರ ಕೂಟಕ್ಕೆ, ಸಭೆಯಲ್ಲೂ ಇದ್ದ ಕೆಲವು ತೀರ್ಥರೂಪರು ಸೇರಿಕೊಂಡರು. ಜನಪದವೋ ಸಿನಿಯೋ ರಂಗದ್ದೋ ಗೀತೆಗಳು ಸಾಕೆನ್ನುವಾಗ ಕಳೆ ಏರಿಸುವಂತೆ ಮೂವರು ನಾಚ್ವಾಲಿಗಳು ವೇದಿಕೆಯಿಂದಲೂ ಮುಂದೆ ಬಂದು ಬಳುಕಾಡತೊಡಗಿದರು. ಸಹಜವಾಗಿ ಸಭಿಕರಲ್ಲೂ ಸ್ಫೂರ್ತಿಯ ಸಂಚಾರ ಹೆಚ್ಚತೊಡಗಿತು. ಕುಡುಕರ ಕೂಟ ಕುರ್ಚಿ ನೂಕಿ, ನೆಲ ದಮ್ಮಾಸ್ ಶುರು ಹಚ್ಚಿದಾಗ ಒಬ್ಬಿಬ್ಬ ಸಭಿಕರೂ ರಂಗಕ್ಕಿಳಿಯ ತೊಡಗಿದ್ದರು. ಆದರೆ ಅನುಭವೀ ವ್ಯವಸ್ಥಾಪಕ ಕಟ್ಟಾಳೊಬ್ಬನನ್ನು ಉಸ್ತುವಾರಿಗೆ ಬಿಟ್ಟಿದ್ದ. ಕಾಲಕಾಲಕ್ಕೆ ಆತ ಅವರನ್ನೆಲ್ಲ ಅಕ್ಷರಶಃ ತೋಳು ಹಿಡಿದು, ನಯವಾಗಿ ಕೂರಿಸುತ್ತ “ಮಿಲ್ ಜಾಯೆಗಾ ಮಿಲ್ ಜಾಯೆಗಾ…” ಎಂದು ಸಮಾಧಾನಿಸುತ್ತಿದ್ದ. ಒಂದು ಹಂತದಲ್ಲಿ…

ಪೇಟಿ ಮಾಸ್ಟರ್ “ಈಗ ಕೌಟುಂಬಿಕ ಸುತ್ತು, ಅಂದರೆ ಮಕ್ಕಳು ಮತ್ತು ಮಹಿಳೆಯರು ಕುಣಿತಕ್ಕೆ ಜತೆಗೊಡಬಹುದು…” ಎಂದ. ಸಹಜವಾಗಿ ಹಲವು ಮಕ್ಕಳೂ ಮಹಿಳೆಯರೂ ಸೇರಿಕೊಳ್ಳತೊಡಗಿದರು. ಈ ಉದ್ದಕ್ಕೂ ಕುಳಿತಲ್ಲೇ ತಲೆ ಕೊಡಹಿ, ಕಾಲಾಡಿಸುತ್ತಿದ್ದ ನಮ್ಮ ‘ಕುಣಿಪ್ಪೆ’, (ಮೊಮ್ಮಗಳು) ಆಭಾ ಮೊದಲು ಸೇರಿಕೊಂಡಳು. ಹತ್ತಿಪ್ಪತ್ತು ಮಿನಿಟಿನ ಮೇಲೆ, ಕುಣಿವ ಭಾಗ್ಯ ಸಾರ್ವಜನಿಕಕ್ಕೆ ಮುಕ್ತವಾಗುತ್ತಿದ್ದಂತೆ, “ಊಟಾ ತಯಾರ್…” ಘೋಷಣೆ ನಮ್ಮ ರಕ್ಷಣೆಗೆ ಬಂತು. ಆಭಾಳನ್ನು ಅವಳಿಗೆ ತಿಳಿಯದ ‘ಕುಡಿವ ಭಾಗ್ಯ’ದವರ ಸಂಗದಿಂದ ಸೆಳೆದುಕೊಂಡು, ಊಟದ ಮನೆಯತ್ತ ಜಾರಿಕೊಂಡೆವು. ಎಂದಿನಂತೆ ನಾನು ಊಟ ಮಾಡಲಿಲ್ಲವಾದರೂ ಹೋದವರು ಕೆಟ್ಟ ಮುಖ ಹೊತ್ತು ಬಂದರು!

ಚಳಿ, ಮಂಜು ತೀವ್ರಗೊಳ್ಳುತ್ತಿತ್ತು. ವಿದ್ಯುತ್, ನೀರು ಪೂರೈಕೆಗಳು ಆಗಿಂದಾಗ್ಗೆ ಕೈ ಕೊಡುತ್ತಿದ್ದವು. ಸ್ವಿಚ್ಚ್, ನಲ್ಲಿಗಳ ಜೋಡಣೆಗಳು ಅಪಾಯಕಾರಿಯಾಗಿದ್ದವು. “ಗರಂ ಪಾನೀ”ಗೆ ಉಷಃ ಕಾಲದ ಮುಹೂರ್ತ ನಿಕ್ಕಿ ಮಾಡಿದ್ದರು. ಕೊನೆಯಲ್ಲಿ ಏರಿದ ಚಳಿಗೆ ಕೊಟ್ಟ ಹೊದಿಕೆ ಸಾಲದಾಗುವ ಭಯ ಹೇಳಿಕೊಂಡಾಗ, ಹೆಚ್ಚುವರಿ ‘ಕಂಬಳ್’ ಸಿಕ್ಕಿದ್ದೇ ನಮ್ಮ ಅದೃಷ್ಟ ಎಂದು ಮಲಗಿಕೊಂಡೆವು. ಇತ್ತ ಕಲಾರಂಗದ ಪೇಟಿ ಮಾಸ್ಟರ್ ರೆಕಾರ್ಡೆಡ್ ಸಂಘೀತಕ್ಕೆ ಸೂತ್ರ ಕೊಟ್ಟು, ಜಾರಿಕೊಂಡಿದ್ದ. ಆದರೆ ಸ್ಫೂರ್ತಿಯ ಸಾಂಗತ್ಯ ಕಡಿಯದಂತೆ ನರ್ತಕಿಯರು ಉಳಿದೇ ಇದ್ದರು. ನಿಶೆ, ನಶೆ ಏರುತ್ತಿದ್ದಂತೆ, ಕೂರಲು ನೆಲಕ್ಕೆ ಹಾಕಿದ್ದ ಫೋಮ್ ಹಾಸುಗೆಯನ್ನೇ ಒಬ್ಬ ಕುಡುಕ ಶಿಬಿರಾಗ್ನಿಗೆ ಅರ್ಪಿಸಲು ಮುಂದಾಗಿದ್ದ. ಸಕಾಲಕ್ಕೆ ಕಟ್ಟಾಳು ತಡೆದು, ಸಂಘೀತ ನಿಲ್ಲಿಸಿ (ನನ್ನ ಕಿವಿಗಳೆರಡೂ “ಓಹ್, ಮಹಾಶಾಂತಿ ಮಹಾಶಾಂತಿ ಮಹಾಶಾಂತಿ” ಎಂದೇ ಜಪಿಸಿತು), ಒಟ್ಟಾರೆ ಕಲಾಪವನ್ನೇ ಬರ್ಖಾಸ್ತು ಮಾಡಿದ. ನಾವೆಲ್ಲ ಸುಖ ನಿದ್ರೆಗೆ ಶರಣಾದೆವು.

ಮರು ಬೆಳಿಗ್ಗೆ ಮಂಜಿನ ಅಲೆ ಹರಿಯತೊಡಗಿದ ಮುಹೂರ್ತಕ್ಕೆ ಒಬ್ಬ ಉಚ್ಚ ಕಂಠದಲ್ಲಿ ಘೋಷಿಸತೊಡಗಿದ್ದ “ನಲ್ ನಲ್ಮೇ ಗರಂ ಪಾನೀ..ಗರಂ ಪಾನೀ”. (ಊರಲ್ಲಿ ಎರಡು ವರ್ಷಕ್ಕೂ ಹಿಂದೆ ಹೀಗೇ ಕೇಳಿದ ಘೋಷಣೆ “ಘರ್ ಘರ್ ಮೇ ಗಂಗಾ” ಇನ್ನೂ “ಖಾಲೀ ನಲ್” ಮಾತ್ರ ತೋರಿಸುತ್ತಿರುವುದರ ನೆನಪಿನಲ್ಲಿ ವಿಷಾದದ ನಗೆ ಬಂತು.) ನಿಜದಲ್ಲಿ ನಾವು ನಲ್ಲಿ ತಿರುಗಿಸಿ ಇಲ್ಲವೆಂದಾಗ ಮರು ಆಶ್ವಾಸನೆ ಸಿಕ್ಕಿತ್ತು “ಆ ಜಾಯೇಗಾ ಆ ಜಾಯೇಗಾ…” ಮತ್ತೆಷ್ಟೋ ಹೊತ್ತಿಗೆ ಮೂಲ ಒಪ್ಪಂದದಂತೆ ಉಚಿತವಾಗಿಯೇ ಸಿಗಬೇಕಿದ್ದ “ಸ್ವಾದಿಷ್ಟ್ ನಾಶ್ತಾ…” ಕರೆಯೂ ಬರುವುದಿತ್ತು. ಆದರೆ ನಾವು ಎರಡನ್ನೂ ತಿರಸ್ಕರಿಸಿ, ಜಾಗ ಖಾಲಿ ಮಾಡಿದೆವು!

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *