ಪ್ರವಾಸೋದ್ದಿಮೆಯ ಸಣ್ಣ ವಂಚನೆಗೆ ಬಲಿಯಾದ ದಿನ!

Jun 8, 2026 | 0 comments

(ರಾಜಸ್ತಾನದ ಪ್ರಸಂಗಗಳು -೫)

ಬೈಸಿಕಲ್ ಏರಿ ಕಂಡ ರಾಜಸ್ತಾನ…

೨೦೧೮ರಲ್ಲಿ ಸೈಕಲ್ ಮಿತ್ರ ಹರಿಪ್ರಸಾದ್ ಶೇವಿರೆ ರಾಜಸ್ತಾನದ ಹೊಸದೇ ಸವಾಲೊಡಿದ್ದರು. ನಾನೊಪ್ಪಿಕೊಂಡೆ, ಜತೆಗೆ ಇನ್ನೋರ್ವ ಸೈಕಲ್ ಗೆಳೆಯ ಅನಿಲ್ ಶಾಸ್ತ್ರಿ ಕೂಡಾ ಸೇರಿಕೊಂಡರು. ಅದು ರಾಜಸ್ತಾನ ಅರಣ್ಯ ಇಲಾಖೆಯದ್ದೇ ವ್ಯವಸ್ಥೆ – ಪೆಡಲ್ ಟು ಜಂಗಲ್. ಅದರಲ್ಲಿ ಉದಯ್ ಪುರದಿಂದ ತೊಡಗಿದಂತೆ ಮೂರು ದಿನಗಳ ಕಾಲ, ಮೂರು ವನಧಾಮ – ಭಾಗ್ಡೋರಾ, ಜೈಸಮಂಡ್ ಮತ್ತು ಸೀತಾಮಾತಾಗಳನ್ನು ಹೊಕ್ಕು ಹೊರಟಿದ್ದೆವು. ಅಲ್ಲಿ ಕಚ್ಚಾ ದಾರಿಗಳೂ ಸೇರಿದಂತೆ, ಒಟ್ಟಾರೆ ಸೈಕಲ್ ಮೆಟ್ಟಿದ ಅಂತರ ಸುಮಾರು ನೂರೆಂಬತ್ತು ಕಿಮೀ. ಅದು ಪೂರ್ತಿ ರಣಗುಡುವ ಬಿಸಿಲಿನಲ್ಲೇ ಇತ್ತು. (ನೋಡಿ: ಸೈಕಲ್ಲೇರಿ ವನಕೆ ಪೋಗುವಾ… ) ಅದರ ನೆನಪಿನಲ್ಲಿ, ಈ ವರ್ಷವೂ ಸಮಶೀತೋಷ್ಣದ ಮಾಸ, ಅಂದರೆ ಸೆಪ್ಟೆಂಬರ್, ಅಕ್ಟೋಬರ್ ಕಳೆಯಿತೆಂಬ ಸಣ್ಣ ನಿರಾಶೆಯಲ್ಲಿದ್ದಾಗ….

ಅಭಯನಿಗೆ ಉದ್ದಿಮೆ (ಫಾರ್ ಸ್ಕೀನ್ಸ್) ಒತ್ತಡದಿಂದ ಸಣ್ಣ ಬಿಡುಗಡೆ ಬೇಕೆನ್ನಿಸಿತ್ತು. ಜತೆಗೇ ಸೊಸೆ ರಶ್ಮಿ, ಟೀವಿ ಸೀರಿಯಲ್ಲಿನ (ಸೀತಾರಾಮ) ಉಸಿರುಗಟ್ಟಿಸುವ ಬರವಣಿಗೆಯ ಬಂಧ ಹರಿದುಕೊಂಡದ್ದೂ ಮೊಮ್ಮಗಳು ಆಭಾಳಿಗೆ (ಮೂರನೇ ತರಗತಿ) ಕ್ರಿಸ್ಮಸ್ ರಜೆ ಸಿಕ್ಕುವುದೂ ಸೇರಿಕೊಂಡಿತು. ಸ್ಥಳಗಳ ಆಯ್ಕೆ ನನ್ನದು, ಪ್ರವಾಸದ ಸೂತ್ರ ಅಭಯನದು. ಆತನ (ಪುಣೆ) ಸಿನಿಮಾ ಕಲಿಕೆಯ ಕಾಲದ ಆತ್ಮೀಯ ಗೆಳೆಯ – ರಾಕೇಶ್, ಜೋಧ್ ಪುರದವ. ಆತ ವೀಕ್ಷಣೆ, ಪ್ರಯಾಣ, ವಾಸ್ತವ್ಯಗಳ ಸಮರ್ಥ ಸಂಯೋಜನೆ ಮಾಡಿಕೊಟ್ಟ. ಆ ಪ್ರಕಾರ ಅಭಯ ಅಂತರ್ಜಾಲದ ಸೌಲಭ್ಯದಲ್ಲಿ ವಾಸ ಮತ್ತು ಪ್ರಯಾಣ ಸೌಕರ್ಯಗಳ ಸಂಸ್ಥೆಗಳನ್ನು ಸಂಪರ್ಕಿಸಿ, ಅಗತ್ಯವಿದ್ದಲ್ಲಿ ಮುಂಗಡ ಸಹಿತ ಎಲ್ಲವನ್ನೂ ಪಕ್ಕಾ ಮಾಡಿದ್ದ. ಅದರಂತೆ….

ಖದೀಮ ಚಾಲಕ    

ಬಾಡಿಗೆ ಕಾರ್ ಸಂಸ್ಥೆಯೊಂದು ನಮ್ಮ ಪ್ರವಾಸಕ್ಕೆ ಎರಡು ಹಂತದಲ್ಲಿ ಕಾರುಗಳನ್ನು ಕೊಡುವುದಿತ್ತು. ಅದರ ಮೊದಲ ಪಾದ, ನೀವು ತಿಳಿದಂತೆ ಸಣ್ಣದು, ಜೈಪುರ ವಿಮಾನದಲ್ಲಿ ನಮ್ಮನ್ನು ಸ್ವಾಗತಿಸಿದ ಕಾರು, ಜೋಧಪುರ ರೈಲಿಗೆ ಬಿಡುವಲ್ಲಿಗೆ ಚೆನ್ನಾಗಿಯೇ ನಡೆದಿತ್ತು. ಎರಡನೇದು ನಾಲ್ಕು ದಿನಗಳ ಒಪ್ಪಂದ – ಜೋಧಪುರದ ರೈಲ್ವೇ ನಿಲ್ದಾಣದಿಂದ ಉದಯಪುರದ ವಿಮಾನ ನಿಲ್ದಾಣದವರೆಗಿನದು. ಇದಕ್ಕೆ ಬಂದ ಚಾಲಕ ಮಹಾ ಖದೀಮ. ನಮಗೆ ಅವನ ಪೂರ್ಣಾವತಾರದ ಅರಿವಾಗುವಾಗ ಪ್ರವಾಸವೇ ಮುಗಿಯುತ್ತ ಬಂದಿತ್ತು. ಮುಂದೆ ಪ್ರವಾಸ ಹೊರಡುವವರ ಅನುಕೂಲಕ್ಕೆ ಅವನ್ನೆಲ್ಲ ಇಲ್ಲಿ ಒಂದೇ ಕಟ್ಟಿನಲ್ಲಿ ಸಂಕಲಿಸಿದ್ದೇನೆ.

ಜೋಧಪುರದ ಓಡಾಟ ಮುಗಿದ ಸಂಜೆ, ಕಾರಿನ ಚಾಲಕನಿದ್ದಂತೇ ಅಭಯ ಸ್ಥಳೀಯ ಮಿತ್ರ ಉದಯರೊಡನೆ, ಮರುದಿನದ ಕಲಾಪ ಚರ್ಚಿಸಿದ್ದ. ಗೂಗಲ್ ಹೇಳಿದಂತೆ, ಜೈಸಲ್ಮೇರ್ ನಾಲ್ಕು ಗಂಟೆಯ ದಾರಿ. ಅಂದರೆ ಆರು ಗಂಟೆಗೆ ಊರು ಬಿಡುವುದು, ಜೈಸಲ್ಮೇರಿನಲ್ಲಿ ಉದಯರ ಗೆಳೆಯ, ಅನುಭವೀ ಮಾರ್ಗದರ್ಶಿ, ನಮಗೆ ಹತ್ತೂವರೆಯ ಅಂದಾಜಿಗೆ ಸಿಕ್ಕುವುದೆಂದೂ ನಿಶ್ಚಯವಾಗಿತ್ತು. ಆ ಪ್ರಕಾರ,  ಜೋಧ್ ಪುರದವನೇ ಆದ ಚಾಲಕನಿಗೆ ನಾವು ಬೆಳಿಗ್ಗೆ ಬೇಗ ಬರಲು ಸೂಚನೆ ಕೊಟ್ಟಿದ್ದೆವು. ಆ ಪ್ರಕಾರವೇ ನಾವು ಬೆಳಿಗ್ಗೆ ಸಾಕಷ್ಟು ಮುಂಚಿತವಾಗಿಯೇ ಸಜ್ಜಾಗಿ, ಹೋಟೆಲ್ ಸ್ವಾಗತ ಕಚೇರಿಯಲ್ಲಿ ಕಾದಿದ್ದೆವು. ಆದರೆ ಕಾರಿರಲಿ, ಚರವಾಣಿ ಸಂಪರ್ಕಕ್ಕೂ ಚಾಲಕ ಮಹಾಶಯ ಸುಮಾರು ಹೊತ್ತು ನಮಗೆ ಸಿಗಲೇ ಇಲ್ಲ. ಸಿಕ್ಕ ಮೇಲೂ ಹಿಂದಿನ ನಾವು ಅಷ್ಟಾಗಿ ಕಿವಿಗೊಡದಿದ್ದ ಆತನ ಗೊಣಗನ್ನು, ಸ್ವಲ್ಪ ವಿವರದಲ್ಲೇ ಅಲವತ್ತುಕೊಂಡ. “ಉದಯರು ಸೂಚಿಸಿದ್ದಕ್ಕಿಂತಲೂ ವೃತ್ತಿಪರ ಗೈಡ್ ನನ್ನ ಬಳಿ ಇದ್ದ….. ಜೈಸಲ್ಮೇರಿಗೆ ಅಷ್ಟೆಲ್ಲಾ ಬೇಗ ಹೋಗಬೇಕಿಲ್ಲ….. ಮೊನ್ನೆ ನಾನು ೨೨ ಗಂಟೆಯಲ್ಲೇ ದಿಲ್ಲಿಗೆ ಹೋಗಿ ಬಂದ ಸುಸ್ತಿನಲ್ಲಿ ಸ್ವಲ್ಪ ಹೆಚ್ಚೇ ನಿದ್ರೆ ಮಾಡಿಬಿಟ್ಟೆ….. ಈಗ ಕಾಲರ್ಧ ಗಂಟೆಯಲ್ಲಿ ಬರ್ತೇನೇ….”

ಸಿಡಿಮಿಡಿಗುಟ್ಟಿದರೆ ದಾರಿಯುದ್ದ ಕಡಿಮೆಯಾದೀತೇ ಎಂದು ನಾವು ಮೌನದಲ್ಲೇ ಕಾರೇರಿ ಜೋಧಪುರ ಬಿಟ್ಟೆವು. ಊರಿನಿಂದ ಹೊರ ಬಂದ ಮೇಲೆ, ನಾವು ತಿಂಡಿಯ ಬಯಕೆಯಲ್ಲಿ, ಆಗೀಗ ಸಿಗುತ್ತಿದ್ದ ಹೋಟೆಲುಗಳನ್ನು ಸೂಚಿಸತೊಡಗಿದೆವು. ಚಾಲಕ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ನಿಧಾನಿಸಿ, ಕೊನೆಗೂ (ಬಹುಶಃ ಅವನಿಗೆ ಕಮೀಶನ್ ಇರುವ) ಹೋಟೆಲೊಂದರಲ್ಲಿ ನಿಲ್ಲಿಸಿದ. ದರಗಳು ದುಬಾರಿ ಅಂತನ್ನಿಸಿದರೂ ತಿನಿಸುಗಳು ಚೆನ್ನಾಗಿಯೇ ಇದ್ದವು. ಆದರೆ ಸೇವಾ ನಿಧಾನವೂ ನಮ್ಮ ಸಮಯಕ್ಕೆ ಹೊರೆಯೇ ಆಯ್ತು. ಅಂತೂ ಇಂತೂ ಹನ್ನೊಂದೂವರೆಯ ಸುಮಾರಿಗೆ, ಅಂದರೆ ಸುಮಾರು ಒಂದೂವರೆ ಗಂಟೆ ವ್ಯರ್ಥ ಮಾಡಿ, ಜೈಸಲ್ಮೇರ್ ನಗರ ಪ್ರವೇಶಿಸಿದೆವು. ರಜಾ ಅವಧಿಯ ಪ್ರವಾಸೀ ಒತ್ತಡದೊಡನೆ ಕ್ರಿಸ್ಮಸ್ ಗದ್ದಲವೂ ಸಂಗಮಿಸಿ, ನಗರವನ್ನು ಪೋಲೀಸ್ ಕಟ್ಟುಪಾಡುಗಳೂ ಬಗೆಹರಿಯದ ಸಂಚಾರಗೊಜ್ಜುಗಳೂ ಕಾಡಿದಂತಿತ್ತು. ಆಗ ಚಾಲಕನ ಸೂಚನೆಯ ಮೇರೆಗೆ, ನಾವು ಮುಖ್ಯ ದಾರಿಯಲ್ಲೇ ಕಾರಿಳಿದೆವು. ಮತ್ತೆ ಒಂದು ಕಿಮೀ ಆಚೆ, ಅಂದರೆ ಕೋಟೆ ಬಾಗಿಲಿನಲ್ಲಿ ನಮ್ಮನ್ನು ಕಾದಿದ್ದ ಮಾರ್ಗದರ್ಶಿಯನ್ನೇ ಫೋನ್ ಮಾಡಿ ನಮ್ಮಲ್ಲಿಗೆ ಕರೆಸಿಕೊಂಡೆವು. ನಮಗೆ ಹೆಚ್ಚುವರಿ ನಡಿಗೆಯಾದರೂ ಕೋಟೆ ಹೊರಗಿನ ನೋಟ, ಊರಿನ ವೀಕ್ಷಣೆಗಳ ಲಾಭವೇ ಆಯ್ತು. ಆದರೆ ಇದೂ ಸೇರಿ…

ನಾವು ಜೈಸಲ್ಮೇರ್ ಕೋಟೆ ಒಳಗೆಲ್ಲ ಸುತ್ತಾಡಿ ಮುಗಿಯುವಾಗ, ಬಹುತೇಕ ಸಂಜೆಯೇ ಆಗಿತ್ತು. ಊಟವೂ ಆಗಿರಲಿಲ್ಲ. “ಜೋಧ್ ಪುರ ಆರು ಗಂಟೆಗೇ ಬಿಟ್ಟಿದ್ದರೇ…” ಎಂಬ ನಮ್ಮ ಒಳಗುದಿಯನ್ನು, ಚಾಲಕನೊಡನೆ ನಾಲ್ಕು ದಿನ ಸುಧಾರಿಸುವ ನೆನಪಿನಲ್ಲಿ ನುಂಗಿಕೊಂಡಿದ್ದೆವು. (ಹಾಗೇ ಕಾರಿನಲ್ಲಿ ಆತನ ಸುಪರ್ದಿಯಲ್ಲೇ ಉಳಿಯುವ ನಮ್ಮ ಗಂಟು ಗದಡಿಗಳನ್ನೂ ಮರೆಯಬಾರದಲ್ಲಾ!) ಕೋಟೆ ಹೊರಗಿನ ವಾಹನ ತಂಗುದಾಣ ಸಾಕಷ್ಟು ಖಾಲೀ ಇತ್ತು. ಆದರೆ ನಾವಿತ್ತ ಪೂರ್ವಸೂಚನೆಯಂತೆ ಅಲ್ಲಿರಬೇಕಿದ್ದ ನಮ್ಮ ಕಾರು ಕಾಣಿಸಲಿಲ್ಲ. ಅಭಯ ಚಾಲಕನಿಗೆ ಹಚ್ಚಿದ ಫೋನೂ ಸುಮಾರು ಪ್ರಯತ್ನಗಳವರೆಗೆ ಆತನನ್ನು ತಲುಪಲೇ ಇಲ್ಲ. ಅಂತೂ ಸಿಕ್ಕಾಗ “ಪೋಲಿಸರ ನಿರ್ಬಂಧದಲ್ಲಿ ನಾನು ನಿಮ್ಮನ್ನು ಇಳಿಸಿದ ಜಾಗದಿಂದ ಸ್ವಲ್ಪವೇ ಮುಂದುವರಿಯುವುದು ಸಾಧ್ಯವಾಗಿದೆ. ಹತ್ತಿರದಲ್ಲೇ ಇದ್ದೇನೆ, ನೀವೇ ಇಲ್ಲಿಗೆ ಬಂದು ಬಿಡಿ…” ಎಂದು ನಕ್ಷೆಯನ್ನೇ ಕಳಿಸಿಬಿಟ್ಟ. ನಾವು ನೂರಿನ್ನೂರು ಮೀಟರ್ ನಡಿಗೆಯ ನಿರೀಕ್ಷೆಯಲ್ಲಿದ್ದರೆ, ಕಾರು ಸೇರುವಾಗ ಭರ್ತಿ ಒಂದೂವರೆ ಕಿಮೀ ಆಗಿತ್ತು. ಇನ್ನೂ ವಿಚಿತ್ರವೆಂದರೆ, ದಾರಿಯುದ್ದಕ್ಕೆ ಬೆಳಿಗ್ಗೆ ಕಂಡ ಜನ ಸಂಮರ್ದ, ವಾಹನಗಳ ಉಬ್ಬರ ಮತ್ತು ಪೋಲೀಸರೂ ಇರಲಿಲ್ಲ. ಚಾಲಕನಾದರೂ ಅನ್ಯ ಟ್ಯಾಕ್ಸೀವಾಲ ಮಿತ್ರರೊಡನೆ ಗುಟ್ಖಾ ತೀಡುತ್ತಾ ಸುಖ ಕಥಾ ಕಾಲಕ್ಷೇಪದಲ್ಲಿದ್ದ! ನಮ್ಮೆಲ್ಲರ ಮನದಲ್ಲೂ ಮಸೆಯುತ್ತಿದ್ದ ಕೋಪ, ಘಟಸ್ಫೋಟಕ್ಕೇರದ ಎಚ್ಚರಿಕೆಯಲ್ಲೇ ಅಭಯ ಚಾಲಕನಿಗೆ ಸಾಕಷ್ಟು ವಾಗ್ದಂಡನೆಯನ್ನಷ್ಟೇ ವಿಧಿಸಿದ. (ನಡುನೀರಿನಲ್ಲಿ ದೋಣಿ ಬದಲಾಯಿಸುವವರ ಸ್ಥಿತಿ ನಮ್ಮದಾಗಬಾರದಲ್ಲಾಂತ!) ಆತ ಪೆಟ್ಟಾದ ನಾಯಿಯಂತೆ ಕಂಯಿ ಕುಂಯಿಗುಟ್ಟುತ್ತ “ನೀವು ರಿಕ್ಷಾ ಮಾಡಿಕೊಂಡು ಬರಬಹುದಿತ್ತೂ…” ಎಂದೆಲ್ಲಾ ಕೊಟ್ಟ ಸಮಜಾಯಿಶಿಯನ್ನು ನಾವು ನಿರ್ಲಕ್ಷಿಸಿ, ಊಟದ ಹೋಟೆಲಿಗೆ ಹೋಗಲು ಆದೇಶಿಸಿದ್ದೆವು.

 

ನಮ್ಮ ಯೋಜನೆಯಂತೆ ಐದನೇ ದಿನ ಮರಳುಗಾಡಿನ ಗುಡಾರ ನಗರಿಯಲ್ಲಿ ತಿಂಡಿ ಮುಗಿಸಿದರೆ ಸಂಜೆಯ ಚಾ ಉಪಚಾರಕ್ಕೆ ಉದಯಪುರ (ಸುಮಾರು ೫೭೦ ಕಿಮೀ) ಸೇರುವವರಿದ್ದೆವು. ಹಾಗೆ ಕೇವಲ ಪಯಣವನ್ನು ತಪ್ಪಿಸುವ ಸಲುವಾಗಿ ನಾವು ಬೆಳಿಗ್ಗೆ ಬಲು ಬೇಗನೇ ಹೊರಟಿದ್ದೆವು. ಹತ್ತಿಪ್ಪತ್ತು ಕಿಮೀಯ ತುಸು ಬಳಸು ದಾರಿಯಲ್ಲಿ ಹೋಗಿ, ಅಪರಾಹ್ನ ಮೂರು ಗಂಟೆಗೇ ಕುಂಬಳಘಡ ಕೋಟೆ ತಲಪಲು ಚಾಲಕನಿಗೆ ಸೂಚನೆ ಕೊಟ್ಟಿದ್ದೆವು. ಅದನ್ನು ದಿನ ಮುಂಚಿತವಾಗಿ ನೋಡಿ, ಉದಯಪುರ ಕತ್ತಲಲ್ಲಿ ತಲಪುವ ಅಂದಾಜು ನಮ್ಮದು. ಚಾಲಕ ಸಣ್ಣದಾಗಿ ಅಪಸ್ವರ ತೆಗೆದ, ಅಷ್ಟೆ. ಸಮಯದ ಉಳಿತಾಯಕ್ಕಾಗಿ ದಾರಿಯಲ್ಲಿ ನಾವು ತಿಂಡಿ, ಊಟಗಳನ್ನೂ ಚುರುಕಾಗಿಯೇ ಮುಗಿಸಿದ್ದೆವು. ಆದರೂ ಕುಂಬಳಘಡ ನಮಗೆ ಮರುಭೂಮಿಯ ಮೃಗಜಲವೇ ಆಯ್ತು. ಕುಂಬಳಘಡದ ಕೋಟೆ ಬಿಡಿ, ಅಲ್ಲಿನ ರಾತ್ರಿ ಎಂಟು ಗಂಟೆಯ ಲೈಟ್ ಅಂಡ್ ಸೌಂಡ್ ಕಲಾಪಕ್ಕೂ ನಾವು ತಲಪುವುದು ಆಗಲೇ ಇಲ್ಲ. ಅಂದು ಯೋಚಿಸಲಿಲ್ಲ, ಎಲ್ಲ ಮುಗಿದ ಮೇಲೆ ಹಾಕಿಕೊಂಡ ಪ್ರಶ್ನೆ ಒಂದೇ – ಯಾಕೆ?

ಬಾಡಿಗೆ ವಾಹನವಾದರೂ ಚಾಲಕರನ್ನು ‘ನಮ್ಮಂತೇ’ ಕಾಣುವುದು ನಮಗೆ ರೂಢಿಯಾಗಿದೆ. ಅವರ ಪ್ರವರ ಕೇಳಿ, ಊಟವಾಯ್ತೇ, ನಿದ್ರೆ ಬಂತೇ ಎಂದಿತ್ಯಾದಿ ವಿಚಾರಿಸದಿದ್ದರೆ ತೃಪ್ತಿಯಿರುತ್ತಿರಲಿಲ್ಲ. ಆದರೆ ಜೋಧಪುರದಲ್ಲೇ ಕಾರ್ ಏಜನ್ಸೀಯವರು, ಚಾಲಕನಿಗೆ ನಿಗದಿಸಿದ ಬಾಟಾ ಕೊಟ್ಟರೆ ಮುಗೀತು. ಆತನ ಖಾನಾ ಪೀನಾ ಸೋನಾ ನಿಮ್ಮ ಚಿಂತೆಯಲ್ಲ, ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ನಾವು ‘ಜೋಧಪುರದ ಕಾರ್ ಚಾಲಕ’ ಎಂದಷ್ಟೇ ಉಳಿಸಿಕೊಂಡ ಚರವಾಣಿ ಸಂಖ್ಯೆ ಬಿಟ್ಟರೆ, ಇಂದು ಆತನ ಹೆಸರೂ ನಮಗೆ ತಿಳಿದಿಲ್ಲ!! ಆತನ ವೃತ್ತಿಯೇ ತಿರುಗೂಳಿಯದು. ಸಹಜವಾಗಿ ಕಡಿಮೆ ವೆಚ್ಚದ ಖಾನಾ ಪೀನಾ ಮಾಡಿ, ಪ್ರವಾಸಿಗಳನ್ನು ಕೊಡುವ ಚಾಲಕರಿಗೆ ಹೋಟೆಲಿಗರು ಕೊಡುವ ಉಚಿತ ಸೋನಾ ಬಳಸಿ, ಬಾಟಾದಲ್ಲೂ ಗರಿಷ್ಠ ಉಳಿತಾಯ ಸಾಧಿಸುತ್ತಿದ್ದದ್ದು ನಮಗೆ ತಿಳಿದಿತ್ತು, ತಪ್ಪೇನೂ ಅಲ್ಲ. ಅದನ್ನು ಮೀರಿ, ನಾವು ಆತನನ್ನು ವಿಚಾರಿಸುವುದಾಗಲೀ ಕಣ್ಣಿಡುವುದಾಗಲೀ ಮಾಡಲೇ ಇಲ್ಲ. ಆದರೆ…

 

ಒಂದೆಡೆ ಆತನೇ ಚಾ ಎಂದು ನಿಲ್ಲಿಸಿದಲ್ಲೂ ಇನ್ನೊಂದೆಡೆಯೂ ಆತ ಮುಗುಮ್ಮಾಗಿ ಅಪರಿಚಿತರೊಡನೆ ಏನೋ ವಸ್ತು ವಿನಿಮಯ ನಡೆಸಿದ್ದನ್ನು ಹಗುರವಾಗಿಯೇ ಗಮನಿಸಿದ್ದೆವು. ಅದಷ್ಟೇ ಇರಲಾರದು ಎಂದು ಅನಂತರದ ದಿನಗಳಲ್ಲಿ ಅನ್ನಿಸಿತು. ಈಗಲೂ ಹಳೆಯ ರೇಷ್ಮೇ ದಾರಿಯಲ್ಲಿ (ಚೀನಾ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನಾದಿಗಳನ್ನು ಹಾಯುವ ಭಾರೀ ಅಂತಾರಾಷ್ಟ್ರೀಯ ವಹಿವಾಟಿನ ಮಾರ್ಗ)  ಅಮಲುಕಾರಕಗಳ ದಂಧೆ, ವ್ಯಾಪಕವಾಗಿಯೇ ನಡೆದಿದೆಯಂತೆ. ನಮ್ಮೀ ಜೋಧಪುರದ ಚಾಲಕನೂ ಅದರ ಸಕ್ರಿಯ ಸದಸ್ಯನೇ ಇದ್ದಿರಬೇಕು. ಹಾಗಾಗಿ ನಾವು ದಿಢೀರನೆ ದಾರಿ ಬದಲಾಯಿಸುವುದು, ಸಮಯ ತಪ್ಪಿಸುವುದು ಆತನ ಅಕ್ರಮ ವಹಿವಾಟಿಗೆ ಸರಿಹೊಂದಿರಲಾರದು. ಅಲ್ಲದಿದ್ದರೂ….

ನಮ್ಮ ಚಾಲಕ ಗುಟ್ಕಾ ಮಾಸ್ಟರ್. ಕಾರು ನಿಂತಲ್ಲೆಲ್ಲ ಪುಟ್ಟ ಪೊಟ್ಟಣ ಹರಿಯುವುದು, ಅಂಗೈಗೆ ಪುಡಿಕೆ ಹಾಕಿ ಹೊಸೆಯುವುದು ಮತ್ತೆ ಸ್ವಲ್ಪ ಬಾಯಿಗೆ ಸುರಿದು ಉಳಿದವನ್ನು ಮತ್ತೆ ಪೊಟ್ಟಣ ಸೇರಿಸುವುದು ನೋಡಿದ್ದೆವು. ದಾರಿಯಲ್ಲಿ (ಎಸಿಯಾದ್ದರಿಂದ ಕಿಟಕಿ ಮುಚ್ಚಿದ) ಕಾರೋಡುತ್ತಿದ್ದಂತೆ ಈತ ರಪಕ್ಕ ಬಾಗಿಲು ತೆರೆದು – ಮುಚ್ಚುವ ನಡುವೆ, ಬಾಯ್ದುಂಬಿದ ಲಾಲಾಜಲ ಕಾರಂಜಿಯನ್ನು ರಸ್ತೆಗೆ ಸಿಡಿಸುತ್ತಿದ್ದ. ನಮಗೆ ಆತಂಕವೇನೋ ಆಗುತ್ತಿತ್ತು. ಆದರೆ ಬಹುತೇಕ ವೃತ್ತಿಪರ ಚಾಲಕರು ನಿದ್ರೆ ದೂರ ಮಾಡಲು ಏನಾದರೊಂದು ಜಗಿಯುತ್ತಲೇ ಇರುವುದು ನಮಗೆ ತಿಳಿಯದ್ದೇನಲ್ಲ. ಬಾಗಿಲು ತೆಗೆಯುವ ಮುನ್ನ ಆತ, ಹಿಂದುಮುಂದಿನ ಅನ್ಯ ವಾಹನ ಸಂಚಾರ ನೋಡಿಕೊಳ್ಳುತ್ತಾನೆ ಎಂದು ಸಮಾಧಾನಿಸಿಕೊಂಡಿದ್ದೆವು. ಆದರೀ ಅರೆ ಎಚ್ಚರದ ಸ್ಥಿತಿಯಲ್ಲಿ ….

ಮಾರ್ಗ ಎಷ್ಟೇ ಉತ್ತಮವಾಗಿತ್ತು. ನಮಗೆ ಸಮಯ ಅಮೂಲ್ಯವೆಂಬ ಮಾತು ಚಾಲಕನಿಗೆ ತಿಳಿದಿದ್ದೂ ಕಾರಿನ ವೇಗ ಎಲ್ಲೂ ೭೦- ೮೦ರ ಮಿತಿ ಮೀರಿದ್ದೇ ಇಲ್ಲ. ಚಾ, ಊಟವೆಂದು ನಿಂತಲ್ಲೂ ನಮ್ಮನ್ನು ಮೀರಿದ ಸಮಯವನ್ನು ಈ ಚಾಲಕ ಹಗುರಾಗಿ ಕಳೆದುಬಿಡುತ್ತಿದ್ದ. ಅತಿವೇಗಕ್ಕೆ ಉತ್ತೇಜಿಸುವುದಾಗಲೀ ಮಿನಿಟುಗಳ ಲೆಕ್ಕದಲ್ಲಿ ಕಳೆದುಹೋದ ಸಮಯಕ್ಕೆ ಆತನಲ್ಲಿ ಮುನಿಸು ತೋರುವುದಾಗಲೀ ನಮಗೆ ಸಾಧ್ಯವಾಗಲೇ ಇಲ್ಲ. ಸಹಜವಾಗಿ ನಮಗೆ ಕುಂಬಳಘಡದ ಭೇಟಿ ತಪ್ಪುವುದು ಖಾತ್ರಿಯಾಗಿತ್ತು. ಆ ಹೊತ್ತಿನಲ್ಲಿ…

ಎಂದೂ ವಿಶೇಷ ಮಾತಾಡದ ಚಾಲಕ, ಕಾರಿನ ಡ್ಯಾಶ್ಬೋರ್ಡಿನ ಮೇಲಿದ್ದ ಪುಟ್ಟ ಆದಿಯೋಗಿ (ಶಿವ) ವಿಗ್ರಹವನ್ನು ತೋರಿಸಿ, ” ಸ್ವಲ್ಪ ಮುಂದೆ ನಾಥ್ ದ್ವಾರ್ ಇದೆ. ಅದಕ್ಕೆ ಈಗಲೂ ಭೇಟಿ ಕೊಡಬಹುದು” ಎಂದ. ನಾವು ಕೊಯಂಬತ್ತೂರು ಮತ್ತು ಬೆಂಗಳೂರಿನಲ್ಲಿರುವ ಆದಿಯೋಗಿ ವಿಗ್ರಹ, ಜಗ್ಗಿಯ ಸರ್ಕಸ್ ನೋಡಿ ಬೇಸತ್ತವರು, ಬೇಡವೆಂದೆವು. ಆತ ಅದಲ್ಲ, ಇಲ್ಲಿನ ವಿಗ್ರಹದ ಸೆಟ್ಟಪ್ಪೂ ಗೆಟ್ಟಪ್ಪೂ ಬೇರೇ ಅಂದ. ಭಾರೀ ದೊಡ್ಡದಿದೆ, ಲೈಟಿಂಗೂ ಗಾರ್ಡನ್ನೂ ಫೌಂಟೇನೂ… ಹಾಗಿದೆ, ಹೀಗಿದೆ ಎಂದೆಲ್ಲಾ ಕೊಂಡಾಡಿದ. ನಮ್ಮ ಆಸಕ್ತಿ ಕುದುರಲಿಲ್ಲ. ಆತ ಮುಂದುವರಿಸಿ ನಾಥದ್ವಾರ ಸುಮಾರು ಒಂಬತ್ತು ಗಂಟೆಯವರೆಗೂ ತೆರೆದಿರುತ್ತದೆ.  ಅದರ ವಠಾರದ ಪ್ರವೇಶಕ್ಕೆ, ವಿಗ್ರಹದ ಸಮತಲಕ್ಕೆ, ಭುಜದ ಎತ್ತರಕ್ಕೆ ಮತ್ತು ಶಿರದ ಎತ್ತರಕ್ಕೂ ನಿಂತು ನೋಡಬಹುದು. ಮೂರ್ತಿಯನ್ನು ಕೈಯಾರೆ ಅರ್ಚಿಸುವುದನ್ನೂ ಸೇರಿ ಎಲ್ಲಕ್ಕೂ ವಿವಿಧ ಆಕರ್ಷಕ ದರಗಳಿವೆ, ಎಂದೆಲ್ಲಾ ಹೆಚ್ಚಿನ ಆಮಿಷ ಒಡ್ಡಿದ. ಅಲ್ಲಿ ಇವನಿಗೆ ಕಮಿಶನ್ನಿದ್ದಿರಬೇಕು, ನಾವು ಮನಸಾ ನಕ್ಕು, ತಿರಸ್ಕರಿಸಿದೆವು. ಭಕ್ತ್ಯೋದ್ದಿಮೆಗೆ ಬಲಿ ಬೀಳುವ ಬಕ್ರಾಗಳು ನಾವಲ್ಲವೆಂದು ಅವನಿಗೆ ಹೇಳಲಿಲ್ಲ. ಆದರೆ ಇಡಿಯ ದಿನ ಕೇವಲ ಪಯಣದಲ್ಲಿ, ವಿಶೇಷ ಏನೂ ನೋಡದೆ, ಪ್ರವಾಸೋದ್ದಿಮೆಯ ವಂಚನೆಗೆ ನಾವು ಬಲಿಯಾದ್ದನ್ನು ಮೌನವಾಗಿ ಸಹಿಸಿಕೊಳ್ಳುತ್ತ,  ಉದಯಪುರ ತಲಪಿದಾಗ ರಾತ್ರಿ ಗಂಟೆ ಒಂಬತ್ತು ಕಳೆದಿತ್ತು.

ಅರಾವಳೀ ತೆಕ್ಕೆಯೊಳಗಿನ ಜಗ್ಗ!

ಉದ್ಯೋಗಪರ್ವದಲ್ಲಿ ಅಭಯನಿಗೆ ಉದಯಪುರದ ಹೋಟೆಲಿಗರ ಸಂಘ ವಸತಿ ವ್ಯವಸ್ಥೆ ಒದಗಿಸಿತ್ತು. ಅವರ ನಿಯಮದಂತೆ ಪೂರ್ಣ ಮುಂಗಡವನ್ನೂ ಕೊಟ್ಟದ್ದಾಗಿತ್ತು. ಹಾಗೆ ಸಿಕ್ಕ ನಕ್ಷೆಯಾಧಾರದಲ್ಲಿ,  ಉದಯಪುರದ ಗಲ್ಲಿಯಾತಿಗಲ್ಲಿ ಒಂದಕ್ಕೆ ನುಗ್ಗಿದೆವು. ಅಲ್ಲೂ ಕೊನೆಯ ಐವತ್ತಡಿ ಅಂತರಕ್ಕೆ, ದಾರಿಯಲ್ಲೇ ತಂಗಿದ ಕಾರುಗಳ ಸಂಮರ್ದ ಪಾರುಗಾಣಿಸುವುದು ಆಗಲೇ ಇಲ್ಲ. ಕಾರಿಳಿದ ಅಭಯ (ಬೆನ್ನಿಗೆ ನಾನೂ) ನಡೆದೇ ಹೋಗಿ “ನಮ್ಮ ಕಾರಿಗೆ ಏನು ನಿಮ್ಮ ವ್ಯವಸ್ಥೆ” ಎಂದೇ ಕೇಳುವವರಿದ್ದೆವು. ಆದರೆ ಆ ನಾಲ್ಕು ನಕ್ಷತ್ರ ಸ್ಥಾನದ ಹೋಟೆಲಿನ ಸ್ವಾಗತಕಾರ ವಿನಯದಲ್ಲೇ ನಮ್ಮ ಮೂಲಕ್ಕೇ ಕೈಯಿಟ್ಟ “ಕ್ಷಮಿಸಿ, ಇಲ್ಲಿ ನಿಮ್ಮನ್ನು ಯಾವುದೇ ಕೋಣೆ ಕಾದಿಲ್ಲ. ಹೋಟೆಲ್ ಭರ್ತಿಯೂ ಆಗಿದೆ.” ಅದಕ್ಕೆ ಪ್ರತಿಕ್ರಿಯೆಯಾಗಿ ಅಭಯ ತನ್ನಲ್ಲಿದ್ದ ಡಿಜಿಟಲ್ ದಾಖಲೆಗಳನ್ನು ಮುಂದೂಡಿದಾಗ, ಆಶ್ಚರ್ಯ ಪಡುವ ಸರದಿ ಸ್ವಾಗತಕಾರನದ್ದಾಗಿತ್ತು. ಸಮಾಧಾನದಲ್ಲೇ ಆತ ವಿಶ್ಲೇಷಣೆ ನಡೆಸಿದಾಗ, ಏಜನ್ಸೀ ವಹಿಸಿಕೊಂಡ ಹೋಟೆಲಿಗರ ಸಂಘ ಎಡವಿದ್ದು ಸ್ಪಷ್ಟವಾಯ್ತು. ಕೂಡಲೇ ಆತ ಸಂಘದ ಕಾರ್ಯದರ್ಶಿಗೆ ಫೋನ್ ಹಚ್ಚಿದ. ಕಾರ್ಯದರ್ಶಿ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಲ್ಲದೆ, “… ನಮ್ಮ ಸಂಘಟನೆಗೆ ಮೀಸಲಾಗಿ ಈ ನಗರದ ವಿವಿಧ ಹೋಟೆಲುಗಳಲ್ಲಿ ೧೩೦೦ಕ್ಕೂ ಮಿಕ್ಕು ಕೋಣೆಗಳಿವೆ. ನಿಮ್ಮ ಆಯ್ಕೆಗೆ ಕಡಿಮೆಯಾಗದಂತೆ ಒಂದೆರಡು ಮಿನಿಟಿನಲ್ಲಿ ವ್ಯವಸ್ಥೆ ಮಾಡುತ್ತೇನೆ….” ಎಂದ. ಮತ್ತು ನಿಜಕ್ಕೂ ಚುರುಕಾಗಿಯೇ ಕೊಟ್ಟ ಬದಲೀ ಹೋಟೆಲ್ – ಜಗ್ ಅರಾವಳೀ.

ಜಗ್ ಅರಾವಳಿಯ ರಸ್ತೆಯ ನಕ್ಷೆಯೊಡನೆ ಹೋಟೆಲಿನ ಮಣೆಗಾರನ (ಮ್ಯಾನೇಜರ್) ಫೋನ್ ಸಂಪರ್ಕವೂ ಆಯ್ತು. ಆತ “ಬೆಟ್ಟದ ಕಿಬ್ಬಿಯಲ್ಲಿರುವ ನಮ್ಮಲ್ಲಿಗೆ ಹೆಚ್ಚಿನ ಫೋನುಗಳೂ ಗೂಗಲ್ ನಕ್ಷೆಯೂ ಸಿಕ್ಕುವುದಿಲ್ಲ. ಹಾಗಾಗಿ ನಕ್ಷೆಯ ಕೊನೆಯ ತಾಣ – ಹೋಟೆಲ್ ಅನಂತಾದವರೆಗೆ ಬಂದು, ನನಗೆ ಕರೆ ಮಾಡಿ” ಎಂದ. ಗಂಟೆ ಒಂಬತ್ತೂವರೆಯ ಆಸುಪಾಸು. ಮೊದಲು ಹಾಗೂ ಹೀಗೂ ನುಗ್ಗಿದ್ದ ನಮ್ಮ ಕಾರನ್ನು ಹಿಂದ್ ಹಿಂದಕ್ಕಾಗಿ ಮುಖ್ಯ ದಾರಿಗೆ ತರುವುದೇ ಒಂದು ಸಾಹಸವಾಯ್ತು. ಮತ್ತೆ ಹಲವು ಗಲ್ಲಿ ದಾರಿಗಳನ್ನು ಹಾಯುತ್ತಾ ಆರೆಂಟು ಕಿಮೀ ಊರ ಕೇಂದ್ರದಿಂದ ದೂರ ಸರಿಯುತ್ತಾ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತ, ಭರ್ಜರಿಯಾಗಿಯೇ ಕಾಣಿಸಿದ ಅನಂತ ಹೋಟೆಲ್ ಗೇಟ್ ಮುಟ್ಟಿದೆವು. ಪ್ರಯಾಣದಿಂದ ಬೇಸತ್ತು ಹೋಗಿದ್ದ ಆಭಾ “ಅಪ್ಪಾ ನಮಗೆ ಇದರಲ್ಲೇ ವಾಸಕ್ಕೆ ಕೊಡ್ಬಹುದಿತ್ತಲ್ಲಾ…” ಎಂದು ಕೇಳುವವಳೇ ಇದ್ದಳು. ಅವಳಿಗೂ ಸಮಾಧಾನ  ಹೇಳುವಂತೇ ಅಭಯನ ಫೋನಿನ ಧ್ವನಿವರ್ಧಕದಲ್ಲಿ ಜಗ್ ಅರಾವಳಿಯ ಮಣೆಗಾರನ ಧ್ವನಿ ಮೊಳಗಿತು. “ಸೂಪರ್! ಇನ್ನು ಎರಡು ಕಿಮೀ ಮುಖ್ಯ ರಸ್ತೆಯಲ್ಲೇ ಬನ್ನಿ. ಅಲ್ಲಿನ ಕೈಕಂಬದ ಬುಡದಲ್ಲಿ ನಮ್ಮ ಜನಾ ನಿಮ್ಮನ್ನು ಸ್ಕೂಟರ್ ಸಮೇತ ಕಾಯ್ತಾ ಇರ್ತಾನೆ…..” ನಮಗೆ ಆಯ್ಕೆ ಇರಲಿಲ್ಲವಾದ್ದರಿಂದ ಅನುಸರಿಸಿದೆವು.

ಅಂಕುಡೊಂಕು ಸುಂಕ ಬಾಲಾ ಸುತ್ತಾಡಿ, ಒಂದೆಡೆ ತುಸು ಹಿಂದೆ ಮುಂದೆಯೂ ಹೋಗಿ, ಕೈಕಂಬ ಮುಟ್ಟಿದೆವು. ಆ ನಿರ್ಜನ ನೀರವ ಸ್ಥಳದಲ್ಲಿ, ಮಂಕು ದೀಪದಡಿಯಲ್ಲಿ ನಮ್ಮನ್ನೇ ಕಾದು ನಿಂತಿದ್ದ ಸ್ಕೂಟರ್ ಸವಾರ. ಅವನು ಶಿಸ್ತಿನ ಸಲಾಮ್ ಕೊಟ್ಟು, ನಮ್ಮನ್ನು ಪರಿಚಯಿಸಿಕೊಂಡ. ಮತ್ತೆ “ಇನ್ನು ಸ್ವಲ್ಪೇ ದೂರ…” ಎಂದವನೇ ಹಿಂಬಾಲಿಸಲು ತಿಳಿಸಿ, ಬೀದಿ ದೀಪಗಳೂ ಇಲ್ಲದ, ಬಲ ಪಕ್ಕದ ಕಾಡು ಮುಚ್ಚಿದ ದಾರಿಯಲ್ಲಿ ಕರಗಿಯೇ ಹೋದ. ಸಪುರವಾದರೂ ಡಾಮರ್ ಮಾರ್ಗ ಎನ್ನುವುದನ್ನು ಬಿಟ್ಟರೆ, ಯಾವುದೇ ಮನುಷ್ಯ ಸಂಪರ್ಕ ಅಥವಾ ರಚನೆಗಳು ಇಲ್ಲದ ಘಾಟಿ ದಾರಿ. ಹಾವಾಡುತ್ತಾ ಸಾಗಿದೆವು. ಮಾರ್ಗದರ್ಶಿ ಆಗೀಗ ಮರೆಯಾದರೂ ನಮಗೆ ದಿಕ್ಕೆಡಲು ಅಲ್ಲಿ ಕವಲು ದಾರಿಗಳೇನೂ ಇರಲಿಲ್ಲ. ಕೆಲವೊಮ್ಮೆ ಘಟ್ಟದ ಮುಂದಿನ ಒಳ ತಿರುವುಗಳಲ್ಲಿ ಆಚಿನ ಬದಿಯಲ್ಲಿ ಮಿಂಚಿ, ಏಣಿನಲ್ಲಿ ಮರೆಯಾಗುತ್ತಿದ್ದ ಬೆಳಕೋಲನ್ನು ಸ್ಕೂಟರ್ ಸವಾರನೆಂದೇ ನಂಬಿ ಹಿಂಬಾಲಿಸಿದೆವು. ಕತೆಗಳಲ್ಲಿ ಓದಿದ ಚಂಬಲ್ ಕೊಳ್ಳದ ಢಕಾಯಿತರ ಕತೆ ನೆನಪಾಗದಿರಲಿಲ್ಲ. ಅವರು ಅನಿವಾರ್ಯತೆಗೆ ವೈದ್ಯರನ್ನೋ ಅಪರೂಪಕ್ಕೆ ಪತ್ರಕರ್ತರನ್ನೋ ತಮ್ಮ ನಿಗೂಢ ಕೇಂದ್ರಗಳಿಗೆ ಕಣ್ಕಟ್ಟಿ ಕರೆಸಿಕೊಳ್ಳುತ್ತಿದ್ದರಂತೆ. ನಮ್ಮ ಸ್ಥಿತಿಯೂ ಅದೇ! ಒಂದೆರಡು ಕಿಮೀ ಏರಿ, ತೀವ್ರ ಕೊಳ್ಳಕ್ಕೆ ಜಾರಿ, ಅಂಚುಗಟ್ಟೆಗಳಿಲ್ಲದ ಬೋಳು ಸೇತುವೆಯಲ್ಲಿ, ಕಾಡು ಹೊಳೆಯೊಂದನ್ನು ಅಡ್ಡ ಹಾಯ್ದು, ಇನ್ನೊಂದು ದಿಬ್ಬ ಏರಿದಾಗ, ಮತ್ತೆ ಮನೆ, ಕಟ್ಟಡ ಕಂಡು ನಿಟ್ಟುಸಿರು ಬಿಟ್ಟೆವು. ಅಲ್ಲಿ ಕಾದಿದ್ದ ಸ್ಕೂಟರ್ ಸವಾರ, ಡಾಮರ್ ಬಿಟ್ಟು, ಬಲದ ತೀರಾ ಕಚ್ಚಾ ದಾರಿಯಲ್ಲಿ ಹೀಗೆ ಸುತ್ತಿಸಿ, ಹಾಗೆ ತಿರುಗಿಸಿ, ಭರ್ಜರಿ ಗೇಟ್ ದಾಟಿಸಿದಾಗ, ಜಿಗ್ಗನೆದ್ದು ತೋರಿತು ಹೋಟೆಲ್ ಜಗ್ ಅರಾವಳಿ!

ತೀರಾ ಹೊಸ ಹೋಟೆಲ್ಲಾದರೂ ಋತುಮಾನದ ಒತ್ತಡದಲ್ಲಿ ಬಹುತೇಕ ಭರ್ತಿಯೇ ಆಗಿತ್ತು. ನಮ್ಮನ್ನು ಕ್ಷಮಾಪೂರ್ವಕವಾಗಿಯೇ ಬೇರ್ಪಡಿಸಿ, ಕೆಳಗೊಂದು, ಎರಡನೇ ಮಾಳಿಗೆಯಲ್ಲೊಂದು ಕೋಣೆ ಕೊಟ್ಟರು. ಹೋಟೆಲಿಗೆ ಎತ್ತುಗದ (ಐ ಮೀನ್ ಲಿಫ್ಟೂ) ಜೋಡಣೆ ಇನ್ನೂ ಆಗಿರಲಿಲ್ಲ. ನಾನು ದೇವಕಿ ಕೆಳಗಿನ ಕೋಣೆಯಲ್ಲೇ ಉಳಿದೆವು. ಕೋಣೆಯೇನೋ ಭಾರಿಯೇ ಇತ್ತು ಮತ್ತು ಒಳಗಿನ ಸೌಕರ್ಯಗಳ ಸೂಚನೆಗಳು ಭರ್ಜರಿಯೇ ಇದ್ದವು. ಆದರೆ ಒಂದು ದೀಪ, ಒಂದು ಪ್ಲಗ್ ಪಾಯಿಂಟ್ ಬಿಟ್ಟು ಉಳಿದವು ವಿದ್ಯುತ್ ಸಂಪರ್ಕ ಪಡೆದೇ ಇರಲಿಲ್ಲ. ವಿಪರೀತ ಚಳಿಯ ದಿನವಾದ್ದರಿಂದ ನಾವು ಎಸಿ, ಫ್ರಿಜ್ಜುಗಳನ್ನು ಪರೀಕ್ಷಿಸಲು ಹೋಗಲಿಲ್ಲ. ಬಿಸಿ ಚಾ/ ಕಾಫಿ ಹೀರೋಣವೆಂದರೆ ಕೋಣೆಯ ಕೆಟಲ್ ಕೆಟ್ಟಿತ್ತು. ಕಕ್ಕೂಸಿನ ತೊಳೆ-ನಲ್ಲಿ ಯೋಗಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಎಡ ಮಗ್ಗುಲಿಗೆ ಕೊಟ್ಟಿದ್ದರು. (ಅಥವಾ ನಮಗೆ ಸಿಕ್ಕಿದ್ದು ಎಡಚರಿಗೇ ಮೀಸಲಾದ ಕಕ್ಕೂಸೋ ಏನೋ!!) ಅದೃಷ್ಟಕ್ಕೆ ತಾರಸಿಯ ಸೌರ-ಒಲೆ ಸರಿಯಿದ್ದುದರಿಂದ ನಮ್ಮ ಬಿಸಿನೀರ ಸ್ನಾನಕ್ಕೆ ತೊಂದರೆಯಾಗಲಿಲ್ಲ. ಇವು ಬಗೆ ಹರಿಯುವುದರೊಳಗೆ ಗಂಟೆ ಹತ್ತು ಕಳೆದಿತ್ತು. ಹೋಟೆಲಿನ ಊಟದ ಮನೆ ಮುಚ್ಚಿದ್ದರೂ ನಿಯಮ ಮೀರಿ, ನಾವು ಕೇಳಿದ ಊಟವನ್ನು ಕೋಣೆಗೇ ಕಳಿಸಿಕೊಟ್ಟರು. ಶುಭ ರಾತ್ರಿ ಹಾರೈಕೆಗೆ ಮಾತ್ರ ಕೊರತೆ ಮಾದಲಿಲ್ಲ!

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *