ಚಿತ್ತೋರ್ ಘಡ್ ಮತ್ತು ಉದಯಪುರ

Jun 15, 2026 | 0 comments

(ರಾಜಸ್ತಾನದ ಪ್ರಸಂಗಗಳು – ೬)

ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ ಪ್ರದರ್ಶನವನ್ನೂ ಅನುಭವಿಸಬೇಕು. ಕತ್ತಲಲ್ಲಿ ತ್ರಿಕೋನಪೂರ್ಣಗೊಳ್ಳುವಂತೆ ಉದಯಪುರಕ್ಕೆ (೮೪ ಕಿಮೀ) ಮರಳಬೇಕು. ಯೋಜನೆಯನ್ನು ಕಾರು ಚಾಲಕನಿಗೆ ಹೇಳಿ, ಏಳು ಗಂಟೆಗೆ ಹೊರಡಲು ಆದೇಶ ಕೊಟ್ಟೆವು. ಆದರೆ ಆತ ನಮ ಅಜ್ಞಾನವನ್ನು ನಗದು ಮಾಡಿಕೊಂಡು “ಹತ್ತು ಗಂಟೆಯಲ್ಲದೇ ಚಿತ್ತೋರ್ ಘಡ್ ಪ್ರವೇಶ ಚೀಟಿ ಸಿಗೋಲ್ಲಾ. ನಾವು ಎಂಟು ಗಂಟೆಗೆ ಹೊರಟರೆ ಧಾರಾಳವಾಯ್ತು…” ಜೈಪುರದ ನಹರ್ ಘಡ್ ಅನುಭವ ಬಲದಲ್ಲಿ ಇರಬಹುದೇನೋ ಎಂದು ಒಪ್ಪಿದೆವು. ಹಾಗಾಗಿ ನಾನು, ದೇವಕಿ ನಿತ್ಯ ರೂಢಿಯಂತೆ…

ಬೆಳಿಗ್ಗೆ ಆರು ಗಂಟೆಗೇ ಎದ್ದವರು ಪ್ರಾತರ್ವಿಧಿಗಳನ್ನು ಮುಗಿಸಿದೆವು. ಪರಿಸರದ ವಿಹಂಗಮ ನೋಟಕ್ಕಾಗಿ ಹೋಟೆಲಿನ ತಾರಸಿಗೇರಿದೆವು. ಹೋಟೆಲಿನ ಅಂಗಳದಲ್ಲಿ ಒಂದಷ್ಟು ಖಾಲೀ ಬಾಟಲ್ ದಿಕ್ಕೆಟ್ಟು ಬಿದ್ದ ಕುರ್ಚಿ, ಕುಂಡದೊಳಗೆ ಬೂದಿಯಾಗಿದ್ದ ಶಿಬಿರಾಗ್ನಿ ಕಂಡೆವು, ಇದೇನೂ ಡಿಸೆಂಬರ್ ಮೂವತ್ತೊಂದರ ನಡುರಾತ್ರಿಯ ಸ್ವಾತಂತ್ರ್ಯದ ಚಿತ್ರವಲ್ಲ! ಈಚಿನ ದಿನಗಳಲ್ಲಿ ಬಹುತೇಕ ಎಲ್ಲಾ ರೆಸಾರ್ಟ್ ಹೋಟೆಲುಗಳ ಸುಂದರ ಅಂಗಳಗಳಲ್ಲಿ ನಿತ್ಯ ಮುಂಜಾನೆ ಕಾಣುವ ದೃಶ್ಯದ್ದೇ ತುಣುಕು. ಕುಡುಕರ ಸಂತೆಯ ಪುಣ್ಯಫಲ. ಏನಿದ್ದರೇನು ಎಂಬಂತೆ ಸುತ್ತ ಅರಾವಳಿ ಪರ್ವತಗಳ ಪ್ರಾಕೃತಿಕ ಸೌಂದರ್ಯ ಅನಾವರಣಗೊಳ್ಳುವದನ್ನು ಕಣ್ದುಂಬಿಕೊಂಡೆವು. ಮತ್ತೆ ಕೊರೆಯುವ್ ಚಳಿಗೆ ಸಕಲ ಕವಚಗಳನ್ನೂ ಧರಿಸಿ, “ಚಳಿಚಳಿ ಎನ್ನುವ ಮುದುಕ…” ಹಾಡು ಗುನುಗುತ್ತ ಡಾಮರ್ ದಾರಿ ನಡಿಗೆಗಿಳಿದೆವು.

‘ನಯಾಗೃಹ’ ಹೆಸರಿನ ಹಳ್ಳಿ. ಅಲ್ಲಿನ ಹನೂಮಾನ್ ಮಂದಿರ್, ಬಾಲವಾಡಿಗಳೆಲ್ಲ ಮುದುಡಿಕೊಂಡೇ ಇದ್ದವು. ಪಕ್ಕದ ಪುಟ್ಟ ಹೊಲದಲ್ಲಿ, ಬಹುಶಃ ಸಾಸಿವೆ ಸಸಿಗಳು, ಅರಶಿನದ ಹೂ ಮುಡಿದು ಮೋಹಕವಾಗಿತ್ತು.  ಹಿಂದಿನ ಬಂದ ದಾರಿಯಲ್ಲೇ ಸ್ವಲ್ಪ ಕಾಲು ಉದ್ದ ಮಾಡಿದೆವು. ರಾತ್ರಿ ದಾಟಿದ ಸಪುರ ಸೇತುವೆಯ ಕೆಳಗಿನ ತೊರೆ ಬತ್ತಿತ್ತು. ಈ ಋತುಮಾನಕ್ಕೆ ಸಹಜವಾಗಿ ಅದರ ಒಣ ಪಾತ್ರೆಯಲ್ಲೇ ಕಚ್ಚಾ ಮೋಟಾರ್ ದಾರಿ ಏರ್ಪಟ್ಟಿತ್ತು. (ಹೀಗೇ ನಮ್ಮ ಕೆಲವು ವಿಸ್ತಾರದ ಬಯಲು ಗದ್ದೆಗಳು ಬಿಸಿಲ ದಿನಗಳಲ್ಲಿ, ಅಲ್ಲಿನ ಫಸಲು ಸಾಗಣೆಯ ವಾಹನಗಳಿಗೆ ದಾರಿಯಾಗುವುದರೊಡನೆ ಜಾತ್ರೆ ಆಟಗಳಿಗೆ ನೆಲೆಯಾಗುವುದೂ ಕಂಡಿದ್ದೇವೆ.) ಹಾಗೆಂದು ಮಳೆಗಾಲದಲ್ಲಿ ಈ ತೊರೆ ತಳೆಯುವ ಭೀಷಣ ಸ್ವರೂಪಕ್ಕೆ ಕನ್ನಡಿ ಹಿಡಿದಂತೆ ದಂಡೆಯಲ್ಲಿ ಎಚ್ಚರಿಕೆಯ ಫಲಕ ಘೋಷಿಸಿತ್ತು “ಹವಾಮಾನದ ಬದಲಾವಣೆಯಲ್ಲಿ ಮಿಂಚಿನ ಪ್ರವಾಹ ಬಂದೀತು, ಜಾಗ್ರತೆ!” ಮುಂದುವರಿದಲ್ಲಿ…

ಒಂದು ಕಚ್ಚಾ ದಾರಿ ಎಡ ಮಗ್ಗುಲಿನ ಶಿಖರಕ್ಕೇ ಏರುವುದನ್ನು ಕಂಡೆವು. ಮತ್ತೆ ಸುಮ್ಮನಿರಲಾಗಲಿಲ್ಲ. ಉದಯಪುರದ ಉದಯರವಿಯ ಕಿರಣಗಳು ಅರಾವಳಿ ಪರ್ವತಶ್ರೇಣಿಯನ್ನು ಮುತ್ತಿಕ್ಕುವಾಗ ನಾವು ಆ ಶಿಖರದಲ್ಲಿ ಪಾದ ಊರಿದ್ದೆವು. ಅಲ್ಲಿಂದ ಸುದೂರದಲ್ಲಿ ಹೋಟೆಲ್ ಜಗ್ ಅರಾವಳಿಯ ತಾರಸಿ ಕಾಣಿಸಿತು. ಆಗ ಅಲ್ಲಿ ಇನ್ನೂ ಮಲಗಿಯೇ ಇರಬಹುದಾದ ಇತರ ಮೂವರಿಗೆ ಕೀಟಲೆ ಕೊಡುವ ಸಂತೋಷಕ್ಕೆ ಫೋನಾಯಿಸಿ, ತಾರಸಿಗೇ ಕರೆಸಿಕೊಂಡೆ. ಎರಡು ಖಂಡಗಳವರು ಭಾರೀ ಕಾಲದ ಮೇಲೆ ಕಂಡವರಂತೆ ಕೈ ಭಾಷೆ ಅಂಗವಿನ್ಯಾಸ ಮಾಡಿ ಕುಶಿಪಟ್ಟೆವು.

ಸರಿಯುವ ಸಮಯದೊಂದಿಗೆ ದಿನದ ಕಲಾಪಗಳ ಎಚ್ಚರ ಚುಚ್ಚಿದ್ದಕ್ಕೆ, ಚುರುಕಾಗಿಯೇ ಹೋಟೆಲಿಗೆ ಮರಳಿದೆವು. ಸಕಾಲಕ್ಕೆ “ನಾಶ್ತಾ ರ್ರೆಡೀ” ಗಂಟೆ ಕೇಳಿದ್ದೇ ಭೋಜನ ಶಾಲೆಗೆ ಬೋಣಿ ಮಾಡಿದ್ದೂ ಆಯ್ತು. ಮತ್ತೆ ಕಾಲು ಗಂಟೆ ಬೇಗವಾದರೆ ಬೇಗ ಎಂದು ಅಂಗಳದಲ್ಲೇ ಇದ್ದ ಕಾರಿಗೆ ಧಾವಿಸಿದ್ದೆವು. ಆದರೆ ಅಲ್ಲಿ ಚಾಲಕ ನಾಪತ್ತೆ. ಫೋನ್ ಸ್ವಿಚ್ಚಾಫ್! “ಅಯ್ಯೋ ಅಯೋಗ್ಯಾ..” ಎಂದು ಹೋಟೆಲಿನಲ್ಲೇ ಹುಡುಕಿದೆವು. ಆತ ಚಾಲಕರ ರೆಸ್ಟ್ ಹೌಸಿನಲ್ಲಿ. ಫೋನ್ ಸ್ವಿಚ್ಚಾಫ್ ಮಾಡಿ, ಗೊರಕೆಯ ಆರೋಹಣ ಅವರೋಹಣ ಅಭ್ಯಾಸ ನಡೆಸಿದ್ದ! ಕಟ್ಟಿಕೊಂಡ ತಪ್ಪಿಗೆ ಅವನನ್ನು ಎಬ್ಬಿಸಿ, ಅವಸರದಲ್ಲೇ ಸಜ್ಜುಗೊಳ್ಳಲು ಸಮಯ ಕೊಟ್ಟರೂ ಹೋಟೆಲ್ ಬಿಡುವಾಗ ಗಂಟೆ ಎಂಟೂವರೆ.

ಚಿತ್ತೋರ್ ಘಡದ ಕೊನೆಯಲ್ಲಿ ಕಲಕಿದ ಚಿತ್ತ!

ಅಲ್ಲಾವುದೀನ್ ಖಿಲ್ಜಿಯ ಅಪರಿಮಿತ ರಾಜ್ಯದಾಹ ಮತ್ತು ಕಾಮಾಂಧತೆಯ ಉರಿಗೆ, ಚಿತ್ತೋರ್ ಘಡದ ರಾಜಪರಿವಾರ ಸಹಿತ ಪ್ರಜಾಕೋಟಿ ರಕ್ತ ಹರಿಸಿದರೆ, ರಾಣಿ ಪದ್ಮಿನಿ, ಸಂಗಾತಿಗಳೊಡನೆ ಆತ್ಮಾಹುತಿ ಮಾಡಿಕೊಂಡ ಕತೆ ನಿಮಗೆ ತಿಳಿದೇ ಇದೆ. ಅದು (ಕ್ರಿಶ ೧೩೦೩) ಏಳು ಶತಮಾನಗಳ ಉದ್ದಕ್ಕೂ ಜನಮನದಲ್ಲಿ ಹರಿದು, ಪೌರಾಣಿಕ ಆಯಾಮವನ್ನೇ ಪಡೆದಿದೆ. ಅದೇ ಚಿತ್ತೋರ್ ಘಡದ ಕೋಟೆ ಮತ್ತು ರಜಪುತಾನರ ಆಡಳಿತ ಮತ್ತೆ ಎರಡು ಶತಮಾನಗಳ ಕಾಲ ನಿಧಾನವಾಗಿ ಪುನಃಸ್ಥಾಪನೆಗೊಳ್ಳುತ್ತಿದ್ದ ಕಾಲದಲ್ಲಿ, (೧೫೮೭) ಮತ್ತೊಂದೇ ಭಾರೀ ಆಘಾತವನ್ನು ಮೊಗಲರ ಅಕ್ಬರನ ಕೈಯಲ್ಲೂ ಅನುಭವಿಸುತ್ತದೆ. ಮುಂದೆ, ಅಂದರೆ ಇಂದಿನವರೆಗೂ ಆ ಕೋಟೆ ಚೇತರಿಸಿಕೊಳ್ಳಲೇ ಇಲ್ಲ. ಇಂದು ವಿಸ್ತೃತ ಚಿತ್ತೋರ್ ನಗರದ ಲೆಕ್ಕ ಹಿಡಿದೋ ಏನೋ ದಾಖಲೆಗಳು ಇದನ್ನೂ ‘ಜೀವಂತ ಕೋಟೆ’ಯ ಪಟ್ಟಿಗೇ ಹಚ್ಚಿವೆ. ಆದರೆ ನಾನು ಕಂಡಂತೆ, ಚಿತ್ತೋರ್ ಕೋಟೆಯ ಮುಖ್ಯ ಪ್ರೇಕ್ಷಣೀಯಗಳಷ್ಟೂ ಜನ ವಸತಿ ಮತ್ತು ವ್ಯಾಪಾರಗಟ್ಟೆಗಳಿಂದ ದೂರವೇ ಉಳಿದಿವೆ. (ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ, ಜೈಸಲ್ಮೇರಿನಂತಿಲ್ಲ.) ಅವು ಚೂರುಪಾರು ಕಳಪೆ ಜೀರ್ಣೋದ್ಧಾರ ಕಂಡಿದ್ದರೂ ಇಂದಿನ ಪ್ರವಾಸಿಗಳ ರಕ್ಷಣಾ ಉದ್ದೇಶಕ್ಕೆ ಮಾತ್ರ, ವಸತಿ ಜೀವನ ವ್ಯವಹಾರಗಳಿಗಲ್ಲ.

ಚಿತ್ತೋರ್ ನವನಗರ ಕಳೆದು, ಕೋಟೆಯೊಳಗಿನ ಹಲವು ದ್ವಾರಗಳಲ್ಲಿ ಹೊಕ್ಕು, ದೀರ್ಘ ದಾರಿಗಳನ್ನು ಸವೆಸಿ ಆಂತರ್ಯದ ಟಿಕೆಟ್ ಗೂಡಿನ ಎದುರು ನಾವು ಕಾರಿಳಿಯುವಾಗ ಗಂಟೆ ಹನ್ನೊಂದೂವರೆ. ಹತ್ತು ಗಂಟೆಗೆ ಮುಟ್ಟಿಸುತ್ತೇನೆಂದ ನಮ್ಮ ಕಾರು ಚಾಲಕನ ನಿಧಾನ ದ್ರೋಹ ಮುಂದುವರಿದಿತ್ತು! ವಾಹನಗಳು, ಜಂಗುಳಿ ವಿಪರೀತವೇ ಇತ್ತು. ಅದನ್ನು ಹೆಚ್ಚಿಸುವಂತೆ ನಾವೂ ಸೇರಿಕೊಂಡು, ಪ್ರಧಾನ ಭಗ್ನಾವಶೇಷಗಳ ನಡುವೆ ಸುತ್ತಾಡಿದೆವು. ಜೀರ್ಣೋದ್ಧಾರ ಎಷ್ಟು ಕಳಪೆ ಎಂದರೆ, ದಾರಂದದ ತುಣುಕು ಗೋಡೆಯ ಉದ್ದಕ್ಕೆ ಸೇರಿಸಿ, ಹೊರಗೋಡೆಯ ದಪ್ಪ ಕಲ್ಲನ್ನು ಕಿಟಕಿಯ ಕಂಡಿಗೆ ಇಟ್ಟು ಸಿಮೆಂಟ್ ಮೆತ್ತಿದ್ದರು. ಕೊಳ ಅಲ್ಲ ಕೊಳಕು ಎಂದೇ ನೀರ ಬಣ್ಣ, ಕಸದ ಸಾರುತ್ತಿತ್ತು. ಆದರೆ ಹೆಚ್ಚಿನ ಕಮಾಯಿಗೆ ಸುಲಭ ದಾರಿ ಎಂಬಂತೆ, ಅವಶೇಷಗಳ ಅಂಗಳದಲ್ಲಿ ರಾತ್ರಿಯ ಧ್ವನಿ-ಬೆಳಕುಗಳ ಪ್ರದರ್ಶನಕ್ಕೆ ಬಯಲು ಮಂದಿರವನ್ನು ಮಾತ್ರ ಸರಿಯಾಗಿಯೇ ರಚಿಸಿಕೊಂಡಿದ್ದರು. ಇವೆಲ್ಲವುಗಳಿಂದ ಬೇಗನೆ ಹೊರ ಬಿದ್ದವರಿಗೆ…

ಉಳಿದ ಬಹು ವಿಸ್ತಾರದಲ್ಲಿ (ಕಣ್ಣಿಗೆ ಕಾಣದಷ್ಟು) ಹಂಚಿ ಹೋದ ಅವಶೇಷಗಳಲ್ಲಿ ನೋಡble ಯಾವವು, ಬಿಡble ಯಾವವು, ಓಡಾಟ ಹೇಗೆ ಎಂಬೆಲ್ಲ ಪ್ರಶ್ನೆಗಳಿಗೆ ಸಮಾಧಾನ ಕೊಡುವಂತೆ ಯಾವ ಫಲಕ, ಕೈಮರಗಳೂ ಇರಲಿಲ್ಲ, ಉತ್ತರಿಸ ಬಲ್-lover ಸಿಗಲೂ ಇಲ್ಲ. ಅನ್ಯ ಹಲವು ಕಾರೊಂದಿಗರು, ಏನೇನೋ ಸ್ಥಳನಾಮ ಹೇಳಿಕೊಂಡು, ಸ್ವಂತ ಕಾರೇರಿಯೇ ಹೋಗುತ್ತಿದ್ದದ್ದನ್ನು ನಾವು ಗಮನಿಸಿದ್ದೆವು. ನಮ್ಮವನನ್ನು ಕೇಳಿದೆವು. ಆದರೆ ಹೊಸಾ ಗುಟ್ಕಾ ಪ್ಯಾಕೇಟ್ ಬಾಯಿ ನಾಜೂಕಾಗಿ ಹರಿದ ಅಯೋಗ್ಯ, “ಗಲ್ಲಿ ದಾರಿಗಳಲ್ಲಿ ಜನ, ವಾಹನ ಸಂದಣಿ ಜಾಸ್ತಿ. ಕಾರ್ ಚಾಲನೆ ಅಸಾಧ್ಯ. ಬದಲಿಗೆ ನೀವೊಂದು ಕೆಲ್ಸಾ ಮಾಡಿ…” ಎಂದವನೇ ‘ರಿಕ್ಷಾ-ಗೈಡ್’ ಸೂಚನೆ ಕೊಟ್ಟು, ಗುಟ್ಕಾ ತೀಡ ತೊಡಗಿದ.

ನಮಗೆ ದಕ್ಕಿದ ಡೀಸೆಲ್ ರಿಕ್ಷಾವಾಲ ಜಾಕೀರ್ ಹುಸೇನ್, ಅಧಿಕೃತ ಮಾರ್ಗದರ್ಶಿ ಪರವಾನಗಿ ಇದ್ದವ. ಬಹುಶಃ ಚಿತ್ತೋರಿನ ಬಹುತೇಕ ರಿಕ್ಷಾವಾಲರು ಮುಸ್ಲಿಮರೇ. (ನಮ್ಮ ಕಾರ್ ಚಾಲಕ ಉಗ್ರ ಹಿಂದೂವಾದಿ ಎಂದು ನಮಗೆ ಗುಡಾರಗಳ ನಗರಿಯಲ್ಲೇ ಅರಿವಾಗಿತ್ತು. ಹಾಗಾಗಿ ನೇರ ವಕಾಲತ್ತು ವಹಿಸಲಿಲ್ಲ.) ಜಾಕೀರ್ ತುಂಬ ಸಮಾಧಾನದಲ್ಲೇ ಒಂದೆರಡು ದೇವಳ, ವಿಜಯ ಸ್ತಂಭ, ವಿಜಯ ಮಹಲ್ಲು, ಕೊಳ, ಸರಸು, ಉದ್ಯಾನ, ಅಲ್ಲಲ್ಲಿ ಕೋಟೆಯ ಅಂಚುಗಟ್ಟೆ ಮೀರಿದಂತೆ ಕಾಣುವ ವಿಹಂಗಮ ನೋಟಕ್ಕೆಲ್ಲಾ ಪಾಲುದಾರರನ್ನಾಗಿಸಿದ. ಮುಖ್ಯವಾಗಿ ಪದ್ಮಿನಿಯ ಅಂತಃಪುರ, ಜೋಹರ್ ನಡೆದ ಸ್ಥಳಗಳನ್ನು ಆತ್ಮೀಯವಾಗಿಯೇ ವಿವರಿಸಿ ತೋರಿಸಿದ್ದ. ಎಲ್ಲ ಸ್ಥಳಗಳಲ್ಲೂ ವಾಹನ ಮಿತಿಯವರೆಗೆ (ಕಾರೂ ಧಾರಾಳ ಹೋಗಬಹುದಿತ್ತು) ಹೋದ ಮೇಲೆ ನೋಡಬೇಕಾದ್ದೇನು ಎಂಬ ಸಂಕ್ಷಿಪ್ತ ವಿವರಣೆ, ಕೊನೆಯಲ್ಲಿ ನೋಡಲು ಬೇಕಾಗುವ ಅಂದಾಜು ಸಮಯವನ್ನೂ ಹೇಳಿ ಬಿಡುತ್ತಿದ್ದ. ನಾವು ಮರಳುವುದನ್ನೇ ಕಾದು ಮುಂದಿನದ್ದರತ್ತ ಒಯ್ಯುತ್ತಿದ್ದ. ಆತನೇ ಹೇಳಿದ್ದು “ಕೋಟೆಯೊಳಗೆ ಮುನ್ನೂರಕ್ಕು ಮಿಕ್ಕು, ಅಂದರೆ ಒಂದೆರಡು ದಿನಗಳಲ್ಲೂ ನೋಡಿ ಪೂರೈಸದಷ್ಟು ದೇವಳಗಳ ಭಗ್ನ ರೂಪಗಳಿವೆ”. ಇಂದು ಚಿತ್ತೋರಿಗೆ ಬರುವ ಬಹು ಮಂದೆಗೆ ಪದ್ಮಿನಿ ಸ್ಥಳ ಮುಖ್ಯವಾದ್ದರಿಂದ…

ಜಾಕೀರ್ ಹುಸೇನ್ ಹೇಳಿದ “ಪದ್ಮಿನಿಯ ಆತ್ಮಾಹುತಿಯ (=ಜೋಹರ್, ಪತಿಯೊಡನೆ ಚಿತೆಗೇರುವುದು ಸತಿ/ಸಹಗಮನ) ಕೊಂಡದಲ್ಲಿ ಹದಿನೆಂಟು ದಿನ ಬೆಂಕಿ ಉರಿದೇ ಇತ್ತಂತೆ. ಸುಟ್ಟ ಶವಗಳ ದುರ್ನಾತ ತಿಂಗಳುಗಟ್ಟಳೆ ಮಾಸಿರಲಿಲ್ಲವಂತೆ. ಸಿನಿಮಾ, ಟೀವಿಗಳ ರಂಗಿನಲ್ಲಿ, ಆ ಸ್ಥಳ ಅನ್ಯ ರಂಗು ಪಡೆಯದಂತೆ, ಇಂದು ಪ್ರಾಚ್ಯ ಇಲಾಖೆ, ಕೊಂಡಕ್ಕೆ ಮಣ್ಣು ತುಂಬಿ, ಬರಿಯ ಹಸಿರು ಹುಲ್ಲ ಹಾಸು ಮಾಡಿದ್ದಾರೆ.” ಐತಿಹಾಸಿಕವಾಗಿ (ನನ್ನ ಅಂತರ್ಜಾಲ ಶೋಧದಲ್ಲಿ ಕಂಡಂತೆ) ರಾಣಿ ಪದ್ಮಿನಿಯ ದುರಂತದ ಚಿತ್ರಣ ಏನೂ ಸ್ಪಷ್ಟವಿಲ್ಲ. ೧೬ನೇ ಶತಮಾನದ ಮಾಲಿಕ್ ಮುಹಮದ್ ಜಯಾಸೀ ಎನ್ನುವಾತ ಪದ್ಮಿನಿಯನ್ನು ವೈಭವೀಕರಿಸಿ ಬರೆದ ಪದ್ಮಾವತ್ ಎಂಬೊಂದು ಗೀತಕಾವ್ಯವೇ (ಲಾವಣಿ?) ನಮ್ಮ ಬಹುತೇಕ ನಾಟಕ, ಸಿನಿಮಾ ಮತ್ತು ಟೀವೀ ಸರಣಿಗಳ ಮೂಲವಸ್ತು. ಇನ್ನೂ ತಮಾಷೆ ಎಂದರೆ ಪದ್ಮಾವತಿಯ ಗಂಡ – ರತನ್ ಸೇನ್ (/ರಾಣಾ ರತನ್ ಸಿಂಗ್) ಅಲ್ಲಾವುದೀನ್ ಖಿಲ್ಜಿಯ ರಾಜಕೀಯ ಖೈದಿಯಾಗಿದ್ದ. ಆಗ ಚಿತ್ತೋರಿನ ನೆರೆ ರಾಜ್ಯ – ಕುಂಬಳನೇರಿನ ತುಂಡರಸ ದೇವಪಾಲ್, ಪದ್ಮಾವತಿಯ ಮೋಹದಲ್ಲಿ ಚಿತ್ತೋರಿಗೆ ದಾಳಿ ನಡೆಸಿದ್ದ. (ಗಮನಿಸಿ – ದೇವಪಾಲ್ ‘ಹಿಂದೂ’ ಮಾತ್ರವಲ್ಲ, ಅಪ್ಪಟ ರಜಪುತಾಣೀ!) ರತನ್ ಸೇನ್ ಸಕಾಲಕ್ಕೆ ಖಿಲ್ಜಿ ಸೆರೆಯಿಂದ ಪಾರಾಗಿ ಬಂದವ ಆತನೊಡನೆ ದ್ವಂದ್ವ ಯುದ್ಧಕ್ಕಿಳಿದ. ಕೊನೆಯಲ್ಲಿ ಇಬ್ಬರೂ ಹತರಾದರು. ಇಷ್ಟರಲ್ಲಿ ಇದನ್ನರಿಯದ ಅಲ್ಲಾವುದೀನ್ ಖಿಲ್ಜಿ, ಚಿತ್ತೋರ್ನೊಂದಿಗೆ ಪದ್ಮಿನಿಯನ್ನೂ ಬಯಸಿ ಮರು ದಾಳಿ ನಡೆಸುತ್ತಾನೆ. ಸೇನೆ, ಊರು ದೂಳೀಪಟವಾಗುತ್ತದೆ, (ಅದುವರೆಗೆ ಸತೀ ಹೋಗದ) ಪದ್ಮಿನಿ ಸ್ತ್ರೀಪರಿವಾರದೊಡನೆ ಜೋಹರ್ ನಡೆಸಿ ಖಿಲ್ಜಿಗೆ ದಕ್ಕದಾಗುತ್ತಾಳೆ.

ಜಾಕೀರ್ ಹುಸೇನ್ ವಿಸ್ತೃತ ತಿರುಗಾಟದ ಕೊನೆಯಲ್ಲಿ, ಕೋಟೆಯ ಹೊರ ಅಂಚಿನಲ್ಲಿದ್ದ ಕರಕುಶಲ ಮಳಿಗೆ ಒಂದರ ಬಳಿ ನಿಲ್ಲಿಸಿ, “ನಿಮಗೆ ಬೇಕಾದರೇ ಚಿತ್ತೋರಿನ ಸರ್ವಶ್ರೇಷ್ಟ…” ಎಂದು ಪರೋಕ್ಷ ಕಮೀಶನ್ ದಂಧೆಯ ಪ್ರಸ್ತಾವನೆ ತೆಗೆದಿದ್ದ. ನಾವು ರಿಕ್ಷಾ ಇಳಿಯದೇ ನಮ್ಮ ಮಾರ್ಕೆಟಿಂಗ್ ನಿರಾಸಕ್ತಿ ಹೇಳಿ, ಕಾರು ಸೇರಿಕೊಂಡೆವು.

ಗಂಟೆ ಎರಡೂವರೆಯಾಗಿದ್ದುದರಿಂದ ಮೊದಲು ಪೇಟೆಯ ಉತ್ತಮ ಹೋಟೆಲೊಂದಕ್ಕೆ ಊಟಕ್ಕೆ ಹೋದೆವು. ಹಾಗೆಯೇ ಹಿಂದಿನ ಅಂದಾಜಿಸಿದ್ದ ತ್ರಿಕೋನ ಭೇಟಿಯ ಎರಡನೇ ಕಲಾಪ – ಕುಂಬಳಘಡ್ ಭೇಟಿಯನ್ನು ನಮ್ಮಲ್ಲೇ ವಿಮರ್ಶಿಸಿಕೊಂಡೆವು. ಬೆಳಿಗ್ಗೆ ಎರಡು ಗಂಟೆಯ ದಾರಿಗೇ ಮೂರು ಗಂಟೆ ಮಾಡಿದ ಚಾಲಕ ಮಹಾಶಯ, ಇನ್ನು ನಾಲ್ಕು ಗಂಟೆಯ ದಾರಿಗೆ ಆರು ಗಂಟೆ ಕಳೆಯುವುದು ನಿಶ್ಚಿತ. ಅಂದರೆ ರಾತ್ರಿ ಒಂಬತ್ತು ಗಂಟೆಗೆ ಕುಂಬಳ ಘಡವಲ್ಲ, ಅಲ್ಲಿನ ಧ್ವನಿ, ಬೆಳಕಿನ ಕಲಾಪವೂ ದಕ್ಕದು. ಅದರ ಮೇಲಿನಿಂದ ಮತ್ತೆ ಉದಯಪುರಕ್ಕೆ ಮೂರು ಗಂಟೆಯ ಪ್ರಯಾಣ! ನಮ್ಮದೇ ಚಿತ್ತ ಸ್ವಾಸ್ಥ್ಯಕ್ಕಾಗಿ ವಿವರಣೆ ಏನೂ ಕೊಡದೆ ಚಾಲಕನಿಗೆ “ಉದಯಪುರ್ ಚಲೋ” ಆದೇಶ ಕೊಟ್ಟು ಕಾರೇರಿದೆವು.

ಉದಯಪುರ 

ಇಬ್ಬರು ಗೆಳೆಯರೊಂದಿಗೆ ಸೈಕಲ್ಲೇರಿ ಮೂರು ದಿನಗಳ ರಾಜಸ್ತಾನೀ ವನ್ಯ ಸುತ್ತಾಟಕ್ಕೆಂದೇ (ಹೆಚ್ಚಿನ ವಿವರಗಳಿಗೆ ನೋಡಿ ಭಾಗ್ಡೋರಾ, ಜೈಸಮಂಡ್ ಮತ್ತು ಸೀತಾಮಾತಾ…. ) ಏಳು ವರ್ಷಗಳ ಹಿಂದೊಮ್ಮೆ ನಾನು ಬಂದಿದ್ದೆ. ಆಗ  ನಮ್ಮ ಪ್ರಧಾನ ನೆಲೆ ಉದಯಪುರವೇ ಇತ್ತು. ಅಂದು ನಗರದೊಳಗೆ ಕಾರೇರಿ ಹೋಗುವಾಗ, ಅಲ್ಲಿನ ಅರಮನೆ ನನಗೆ ಕ್ಷಣದ ಮಿಂಚಾಗಿತ್ತು. ಆದರೆ ಈ ಬಾರಿ ಹಾಗಾಗಬಾರದು. ಕುಂಬಳ ಘಡ ತಪ್ಪಿದ ಬೇಸರ ಹೊತ್ತ ನಾವು ಇದನ್ನಾದರೂ ಮನಸೋ ನೋಡುವ ಕಾತರದಲ್ಲಿದ್ದೆವು. ನಿಧಾನ ವಿಷ ಕೊಡುತ್ತಿದ್ದ ಚಾಲಕ “ಅದು ಐದು ಗಂಟೆಗೇ ಮುಚ್ಚುವುದಿರಬೇಕು. ಆದರೂ…” ಭಾರೀ ಪ್ರಯತ್ನ ಮಾಡಿದವನ ತೋರಿಕೆಯಲ್ಲಿ ನಾಲ್ಕೂಮುಕ್ಕಾಲಕ್ಕೆ ಅರಮನೆಯ ಬಾಗಿಲಿನಲ್ಲಿಳಿಸಿದ. ನಮ್ಮ ಅದೃಷ್ಟಕ್ಕೆ, ಅದರ ಮುಚ್ಚುವ ವೇಳೆ ರಾತ್ರಿ ಒಂಬತ್ತು ಗಂಟೆ.

ವಿದ್ಯಾಸಂಸ್ಥೆಗಳ ದೀರ್ಘ ರಜೆಯೊಡನೆ, ವಾರಾಂತ್ಯದ ಸಂಜೆಯೂ ಬಂದದ್ದರಿಂದ ಅರಮನೆಯ ಮೇಲೆ ಭಾರೀ ಪ್ರವಾಸಿಗರ ದಾಳಿ ನಡೆದಿತ್ತು. ವಿಸ್ತಾರ ವಾಹನ ತಂಗುದಾಣ ಭರ್ತಿಯಾಗಿದ್ದುದರಿಂದ, ನಮ್ಮನ್ನಿಳಿಸಿದ ಚಾಲಕ (ಅವನ ಆಶಯದಂತೆ ?) ಹೊರಗೆಲ್ಲೋ ತಂಗುವುದಾಗಿ ಕಣ್ಮರೆಯಾದ. ಟಿಕೆಟ್ ಗಲ್ಲಾಗಳು ನಾಲ್ಕಿದ್ದರೂ ಸರತಿಸಾಲನ್ನು ಶಾಸ್ತ್ರಕ್ಕಷ್ಟೇ ಉಳಿಸಿ, ಮೇಲಾಟ ನಡೆಸಿದ್ದ ‘ಸಭ್ಯ’ರ ಉತ್ಪಾತ ನೋಡುತ್ತ, ಅಭಯ ಜನ ಕಡಿಮೆ ಇದ್ದ ಸಾಲು ಹಿಡಿದ. ಅಲ್ಲಿನ ಕೊಸರಾಟಗಳೆಲ್ಲ ಸುಧಾರಿಸಿಕೊಂಡು ಅಭಯ, ಗಲ್ಲಾ-ಗಣ್ಯನಿಗೆ ಪ್ರವರ ಒಪ್ಪಿಸಿದ. ಆತ ಎರಡು ನಾನೂರರ, (ಹಿರಿಕಿರಿಯ ರಿಯಾಯ್ತಿಯಂತೆ) ಮೂರು ಇನ್ನೂರರ ಟಿಕೆಟ್ ಹರಿದು, ಚರವಾಣಿ ಮುಂದೆ ಹಿಡಿದ ಅಭಯನ ಕೈ ನೂಕಿ, “೧೪೦೦ ಕ್ಯಾಷ್” ಎಂದ; ಆ ಸಾಲು ನಗದು! (ಉಳಿದ ಮೂರೂ ವಿದ್ಯುನ್ಮಾನ ಪಾವತಿಯವು) ಆರತಿ ತಟ್ಟೆ ಕಾಸೂ ಇಟ್ಟುಕೊಳ್ಳದ ಅಭಯ ಒಮ್ಮೆ ತಡವರಿಸಿದ. ಪುಣ್ಯಕ್ಕೆ ಹಳೆತಲೆಯ ನಮ್ಮಿಬ್ಬರ ಬಳಿ ಇದ್ದ ಕಡ್ಲೆ ಕಾಸು ರಕ್ಷಿಸಿತು. ಅಲ್ಲಿಂದ ಅರಮನೆಯ ಪ್ರವೇಶದ್ವಾರಕ್ಕೆ ಸುಮಾರು ಒಂದು ಕಿಮೀ ಇತ್ತು. ಅದನ್ನು ಹೆಚ್ಚಿನ ಶುಲ್ಕ ಕೊಟ್ಟು ಹೋಗುವವರಿಗೆ ವಿದ್ಯುತ್ ರೋಡ್ ರೈಲುಗಳೂ ಇದ್ದವು. ಆದರೆ ಅದಕ್ಕೂ ಮುಕುರಿದ ಮಂದಿ ಕಂಡು, ನಾವು ಆರೋಗ್ಯಕರ ನಡಿಗೆಯನ್ನೇ ನೆಚ್ಚಿದೆವು.

ದಿನದ ಬಳಲಿಕೆಯಲ್ಲಿ ನಮಗೆ ಊದ್ದ ಅನ್ನಿಸಿದ ನಡಿಗೆಯಲ್ಲಿ ಜನ, ರಸ್ತೆ ರೈಲು, ಆಡಳಿತಗಾರರ ವಾಹನಗಳ ನಡುವೆ ನುಸಿದುಕೊಂಡೇ ಹೋದೆವು. ವಿಶಾಲ ಸರಸಿನಲ್ಲಿ ಜಳಕಕ್ಕೆ ಇಳಿಯಲಿದ್ದ ಸೂರ್ಯನಿಗೆ ಕ್ಯಾಮರಾ ಕಣ್ಣು ಹೊಡೆದು ಅರಮನೆ ಪ್ರವೇಶಿಸಿದೆವು. ಒಳಗೆ ಮತ್ತದೇ ಬಾಣ, ಕತ್ತಿ, ಗುರಾಣಿ, ಆಭರಣವೇ ಮೊದಲಾದ ಕುಸುರಿ ಕಲೆಗಳು, ವರ್ಣ ಚಿತ್ರಗಳು, ವಿಶಿಷ್ಟ ನಿಲಿಕೆಗಳ ಮೇಲಿಟ್ಟ ವಾದ್ಯ ವಿಶೇಷಗಳು, ಜೀವ ಗಾತ್ರದ ಸಾಲಂಕೃತ ಪಟ್ಟದಾನೆ ಹಾಗೂ ಕುದುರೆಯ ಪ್ರತಿಕೃತಿಗಳು, ಶೀಷ ಮಹಲ್, ಸ್ನಾನ ತೊಟ್ಟಿ… ಇಲ್ಲಿನ ಪ್ರದರ್ಶಿಕೆಗಳು ಹೆಚ್ಚು ಶ್ರೀಮಂತಿಕೆಯವೇ (ಚಿನ್ನ, ಬೆಳ್ಳಿ, ಹರಳುಗಳೆಲ್ಲ ಪ್ರದರ್ಶನದಲ್ಲಿದ್ದಂತಿತ್ತು) ಇದ್ದುದಕ್ಕೆ ಅಲ್ಲಲ್ಲಿ  ಬೀಗ ಮುದ್ರೆಯ ಗಾಜಿನ ಕಪಾಟುಗಳು, ಕಾವಲುಗಾರರೂ ಅಲ್ಲದೆ ದ್ವಾರದಲ್ಲಿ ಟಿಕೆಟ್ಟುಗಳನ್ನು ಪ್ರವೇಶ ಮತ್ತು ನಿಷ್ಕ್ರಮಣಗಳಲ್ಲಿ ಸ್ಕ್ಯಾನ್ ಮಾಡಿ ಲೆಕ್ಕದಲ್ಲಿ ಪಕ್ಕಾ ಇದ್ದರು. ಸುಮಾರು ಎರಡೂವರೆ ಗಂಟೆಗಳ ಅವಧಿಯಲ್ಲಿ, ಎರಡು ಮಹಡಿಗಳ ಎತ್ತರಕ್ಕೆ, ನಾಲ್ಕೂ ದಿಕ್ಕುಗಳಿಗೆ ಚಾಚಿಕೊಂಡ ಉದ್ದಾನುದ್ದ ಜಗುಲಿ, ಕೋಣೆ, ಬಾಲ್ಕನಿ ಎಂದು ಕಾಲೆಳೆದು ಹೆಚ್ಚೇ ಭಾರ ಎನ್ನಿಸಿದ ದೇಹ ಜಗ್ಗೀ ಜಗ್ಗೀ ಬಸವಳಿದು ಹೋಟೆಲ್ ಜಗ್ಗೀಗೆ ಮರಳುವಾಗ ಗಂಟೆ ಒಂಬತ್ತಾಗಿತ್ತು.

ಮೂಲ ಯೋಜನೆಯಲ್ಲಿ ಕೊನೆಯ ದಿನ ಚಿತ್ತೋರ್ ಘಡ ಮತ್ತೆ ಕುಂಬಳ್ ಘಡ ನೋಡಿ ಹೋಟೆಲ್. ಮರುದಿನ ವಿಮಾನ ಅಪರಾಹ್ನದ್ದಾದ ಕಾರಣದಿಂದ, ಉದಯಪುರದರಮನೆ ನೋಡಿ ನಿಲ್ದಾಣ ಎಂದೇ ಹಾಕಿಕೊಂಡಿದ್ದೆವು. ಆದರೆ ಚಾಲಕ ದ್ರೋಹಕ್ಕೂ ಬೇಸತ್ತು ಇಂದೊಳ್ಳೆ ನಿದ್ರೆ, ನಾಳೆ ಆರಾಮದಲ್ಲಿ ವಿಮಾನ ನಿಲ್ದಾಣ ಎಂದಷ್ಟೇ ನಿಕ್ಕಿ ಮಾಡಿ, ಉಂಡು ಮಲಗಿದೆವು.

ಚಾಲಾಕೀ ಚಾಲಕನಿಂದ ಮುಕ್ತಿ 

ರಾಜಸ್ತಾನದ ಪ್ರವಾಸದಲ್ಲಿ ಇದೇ ಮೊದಲು ಎನ್ನುವಂತೆ ಆರಾಮವಾಗಿ ಎದ್ದು, ಸ್ವಲ್ಪ ಹಳ್ಳಿ ನೋಡಿ, ಹತ್ತು ಗಂಟೆಯ ಸುಮಾರಿಗೆ ಹೋಟೆಲ್ ಬಿಟ್ಟೆವು.

ಆರಾಮದಲ್ಲಿ ದಾರಿಯ ಒಂದು ಚಾ ದುಕಾನಿನಲ್ಲಿ ಹೆಚ್ಚಿನ ಚಾ ಕುಡಿದು, ಸುಮಾರು ಐವತ್ತು ಕಿಮೀ ಅಂತರದ ವಿಮಾನ ನಿಲ್ದಾಣವನ್ನು ಅಗತ್ಯಕ್ಕಿಂತ ಸುಮಾರು ಎರಡು ಗಂಟೆ ಮೊದಲೇ ತಲಪಿಕೊಂಡೆವು. ಅಭಯ ಕಾರಿನ ಮೀಟರ್ ನೋಡಿ, ಒಪ್ಪಂದದಂತೇ ಲೆಕ್ಕ ಹಾಕಿ, ಚಾಲಕನ ಅನುಮೋದನೆ ಪಡೆದು, ಏಜನ್ಸಿಯ ಧಣಿಯ ಖಾತೆಗೆ ಚರವಾಣಿ ವರ್ಗಾವಣೆ ಮಾಡಿದ. ಮತ್ತೆ ಚಾಲಕನಲ್ಲಿ……. ಒಂದೂ ಮಾತಾಡದೆ, ಭಕ್ಷೀಸು ಬಿಟ್ಟು ಆತನ ಮುಖವನ್ನು ತಿರುಗಿ ನೋಡದೇ ಒಳ ನಡೆದೆವು. ಅಂದು ಪ್ರವಾಸದ ಒತ್ತಡದಲ್ಲಿ ಚಾಲಕನ ದ್ರೋಹ ನಾವು ಹೆಚ್ಚು ಹಚ್ಚಿಕೊಳ್ಳಲಿಲ್ಲ. ಇಂದು ವಿರಾಮದಲ್ಲಿ ಲೇಖನ ಬರೆಯುವಾಗ, ‘ಚಾಲಾಕೀ ಚಾಲಕ’ ಎಂಬ ದುರಂತ ಕಾವ್ಯ ನಾಲ್ಕು ಮತ್ತು ಹೆಚ್ಚು ಖಂಡಗಳಲ್ಲಿ ಹರಿದದ್ದಿದ್ದರೆ, ಅದಕ್ಕೆ ಮಹಾಕವಿ ವರ್ಡ್ಸ್ವರ್ತನೇ ಕಾರಣ. ಆತ ಕಾವ್ಯ ರೂಪುಗೊಳ್ಳುವುದನ್ನು emotions recollected in tranquility ಎಂದಿಲ್ಲವೇ ಮತ್ತೇ!

ನಾವು ಬೆಂಗಳೂರಿಸಿದ ಮೇಲೆ, ಅಭಯ ರಾಕೇಶನಲ್ಲಿ, ಆತನಿಗೇನೂ ನೋವಾಗದಂತೆ, ಚಾಲಕನ ಕುರಿತು ತಿಳಿಸಿದ್ದ. ಆಗ ರಾಕೇಶ್ “ಛೆ, ನೀನು ಅಂದೇ ಹೇಳಬೇಕಿತ್ತು, ಈತನನ್ನು ಕಿತ್ತು ಬದಲಿ ಹಾಕಿಸುತ್ತಿದ್ದೇ…” ಎಂದೇ ಕೊರಗಿದ, ಬಿಡಿ. ಅಲ್ಲಿನ ಆರು ದಿನಗಳ ತುರುಸಿನ ಓಟದಲ್ಲಿ, ನಮಗೆ ವ್ಯಾಜ್ಯ, ಪರ್ಯಾಯ ವ್ಯವಸ್ಥೆಗಳಲ್ಲಿ ಸಮಯ ಕಳೆಯುವುದು ಬೇಕಿರಲಿಲ್ಲ, ಹೇಗೂ ಮುಗಿದ ಮೇಲೆ ಅನ್ಯರಿಗೆ ದಾರಿದೀಪವಾಗಲಿ ಎಂಬುದಕ್ಕೆ ಇಲ್ಲಿ ತುಸು ವಿಸ್ತರಿಸಿದ್ದೇನೆ.

ಬಿಟ್ಟೂ ಬಿಡದ ಅರಮನೆ, ಬೆಟ್ಟ!

ವಿಮಾನ ನಿಲ್ದಾಣದ ಔಪಚಾರಿಕತೆಗಳನ್ನೆಲ್ಲ ಪೂರೈಸಿಕೊಂಡು, ಕಾಯಂಗಣಕ್ಕೆ ಹೋದೆವು. ನಮ್ಮೆದುರು ಕನಿಷ್ಠ ಒಂದೂವರೆ ಗಂಟೆಯ ಸಮಯ ಖಾಲಿ ಬಿದ್ದಿತ್ತು. ಜನ ತುಂಬಾ ಕಡಿಮೆ ಇದ್ದರು. ಕನ್ನಡಿಯಾಚಿನ ವಿಮಾನ ಇಳಿಯಂಗಣವೂ ಖಾಲಿ. ನಾನೊಬ್ಬನೇ ಕಾಯಂಗಣದ ಉದ್ದಗಲ, ಒಂದು ಮಾಳಿಗೆಯನ್ನೂ ಸುತ್ತಿ ಬಂದೆ. “ವೆನ್ ಐವಾಸ್ ಇನ್ ಇಂಡ್ಯಾ…” ಎನ್ನಬಹುದಾದ ವಿದೇಶೀ ಗರ್ವಗಳಿಗೆ ಒಡ್ಡಿಕೊಂಡಂತೆ, ಒಂದಕ್ಕೆಂಟು ಬೆಲೆ ಏರಿಸಿದ ವಿವಿಧ ಕುಶಲ ಕಲಾ ವಸ್ತುಗಳ ಮಳಿಗೆ, ತಿನಿಸುಗಳ ಅಡ್ಡೆಗಳನ್ನು ಹೊರ ನೋಟದಲ್ಲೇ ಅಳೆದೆ. ಉತ್ಪ್ರೇಕ್ಷಿತ ಬೆಳಕು, ಪೂರಕ ಬಣ್ಣ, ಹವಾನಿಯಂತ್ರಿತ ಮತ್ತು ಆರೋಗ್ಯ ಸೂತ್ರಾನುಸಾರ ನಿಷ್ಕ್ರಿಯಗೊಳಿಸಿದ ವಾತಾವರಣದಲ್ಲಿ ಅವೆಲ್ಲ ನೊಣ ಬಿಟ್ಟು, ದೂಳೂ ಮುಟ್ಟಿದಂತಿರಲಿಲ್ಲ. ನಿರ್ವಾಹಕ ಜನಗಳೋ ಲೆಪ್ಪ ಒಪ್ಪಗಳ ಬಿಗಿಯಲ್ಲೇ ನನ್ನನ್ನು ಅಳೆದಿರಬಹುದು. ಅರೆನೆರೆತ ಮಂಡೆ, ಆರೇಳು ದಿನ ಹೆರೆಯದ ಗಡ್ಡ, ಮುದುರಿ ಮಾಸಿದ ಬಟ್ಟೆಯ ಮುದಿಯನನ್ನು ಓರೆ ನೋಟದಲ್ಲೇ ‘ನಗೆಯೂ ವಿನಿಮಯಕ್ಕಿಲ್ಲ’ ಎಂಬಂತೇ ಕಂಡಿದ್ದರು. ಉಚಿತ ಪತ್ರಿಕಾ ನಿಲಿಕೆಯಲ್ಲಿ ಹಿಂದಿ ಪತ್ರಿಕೆಗಳು ಮಾತ್ರ ಇದ್ದವು. ಅದರಲ್ಲಿ ಒಂದನ್ನು ಹಿಡಿದುಕೊಂಡು, ಪಟಗಳನ್ನಷ್ಟು ನೋಡಿದೆ, ಸುಡೊಕು ಮಾಡುತ್ತ ತೂಕಡಿಸಿದೆ.

ಪ್ರವಾಸದಲ್ಲಿ ಆಭಾ…

ವಿಮಾನ ನಿಲ್ದಾಣದೊಳಗೆ (ನಮ್ಮ ನಾಲ್ವರ ಅದೃಷ್ಟಕ್ಕೆ) ಒಂದು ಪುಟ್ಟ ಮಕ್ಕಳ ಆಟದ ಕಳ ಇತ್ತು. ಅದರಲ್ಲಿ ಆಭಾಳಿಗಿಂತ ತುಸು ಸಣ್ಣ ಮೂರ್ನಾಲ್ಕು ಮಕ್ಕಳು ಉರುಳಾಡಿಕೊಂಡಿದ್ದರು. ಸಹಜವಾಗಿ ಆಭಾ ಅಲ್ಲಿ ‘ಹಿರಿಯಕ್ಕ’ನೇ ಆಗಿ, ನಮಗೆ ‘ಬೇಬೀ ಸಿಟ್ಟಿಂಗ್’ ಹೊರೆ ಇಲ್ಲದಂತೆ ಮಾಡಿದಳು. ಹಾಗೆಂದ ಮಾತ್ರಕ್ಕೆ ಪ್ರವಾಸದುದ್ದಕ್ಕೆ ಆಭಾಳ ನಿರ್ವಹಣೆಯ ಬಗ್ಗೆ ಯಾರೂ ಶಂಕಿಸಬೇಕಿಲ್ಲ. ಆಭಾಳಿಗೆ ರಾಜಸ್ತಾನದ್ದು ಜೀವಮಾನದ ಪ್ರಥಮ ‘ನಿಜ ಪ್ರವಾಸ’. ದೀರ್ಘ ರಜಾವಧಿಗಳಲ್ಲಿ ಅವಳ ಏಕೈಕ ಪ್ರಯಾಣ ‘ಬೆಂಗರೂಳು – ಮಂಗರೂಳು’, ಸದಾ ಒಂದಲ್ಲಾ ಒಂದು ವಾಹನಗಳ ಇಷ್ಟ ಬಂಧನಗಳಲ್ಲೇ ಕಳೆದಿದ್ದವು. ಉಳಿದಂತೆ ಶಾಲೆ ಮತ್ತು ಸ್ಕೇಟಿಂಗ್ ಮೈದಾನಗಳ ಓಡಾಟ ಅಪ್ಪಮ್ಮರ (ಅನಿವಾರ್ಯ) ಉಸ್ತುವಾರಿಯಲ್ಲೇ ನಡೆಯುತ್ತದೆ. ಅಭಯ, ರಶ್ಮಿಯರು ವೃತ್ತಿ ಒತ್ತಡದಲ್ಲಿ ಸಮಯ ಹೊಂದಿಸಿಕೊಳ್ಳಲು ಇ-ಮಾರ್ಕೆಟಿಂಗನ್ನೇ ಹೆಚ್ಚು ನೆಚ್ಚಿದ್ದಾರೆ. ಹಾಗಾಗಿ ಆಭಾಳಿಗೆ ಮನೆಯಿಂದ ಹೊರಗೆ ಸಾರ್ವಜನಿಕದಲ್ಲಿ ಅಡ್ಡಾಡುವ, ಒಡನಾಡುವ ಅವಕಾಶ ಸಿಕ್ಕಿದ್ದೇ ಇಲ್ಲ. ಹಾಗಾಗಿ ಆಭಾ ಇದುವರೆಗೆ ಗಳಿಸಿದ ಅನುಭವಕ್ಕೆ, ರಾಜಸ್ತಾನದ ಪ್ರವಾಸ ಹೋಲಿಸಿದ್ದೇ ಆದರೆ ಅಂತರ ಅಜ – ಗಜದ್ದಲ್ಲ, ಇರುವೆ ತಿಮಿಂಗಿಲಕ್ಕೂ ದೊಡ್ಡದೇ! ಹೊರಡುವ ಮುನ್ನ ಅಭಯ ರಶ್ಮಿಯರು ಏನೇ ಪಾಠ ಮಾಡಿದ್ದರೂ ಆರೂ ದಿನಗಳುದ್ದಕ್ಕೆ ಜತೆಗಿದ್ದ ನಾಲ್ಕು ಹಿರಿಯರು ಎಷ್ಟೇ ಕಿವಿ ಕಚ್ಚಿದರೂ ಆಕೆ ಗಳಿಸಿದ ಅನುಭವ ಅಮೂಲ್ಯ ಮತ್ತು ತೋರಿದ ತಾಳ್ಮೆ ಅಪಾರ. ಅವುಗಳಲ್ಲಿ ಕೆಲವನ್ನಷ್ಟೇ ವಿಸ್ತರಿಸುವುದಾದರೆ….

ಮರಳ ಹಾಸಿನ ಜೀಪೋಟದಲ್ಲಿ ನಾವೆಲ್ಲ ಒಂದು ಮಟ್ಟದ ಜೀವಭಯದಲ್ಲಿದ್ದೆವು. ಆದರೆ ಸ್ವತಃ ಸ್ಕೇಟಿಂಗಿನಲ್ಲಿ ದಿಟ್ಟವಾಗಿ ಭಾರೀ ವೇಗ ಸಾಧಿಸಿದ ಆಭಾ, ಕೇಕೆ ಹೊಡೆದು ಸಂತೋಷಿಸಿದಳು. ಹಾಗೆಂದು ಆಕೆಯೇ ಬಯಸಿ ಏರಿ ಕುಳಿತ ಒಂಟೆ, ನಿಲ್ಲುವಾಗ ಇವಳು ಬೊಬ್ಬೆ ಹೊಡೆದು ಅತ್ತಿದ್ದಳು. ಮತ್ತದು ಸವಾರಿಯುದ್ದಕ್ಕೆ ಹರಿದು, ಇಳಿಯುವಲ್ಲೂ ಜೋರಾದ್ದು ನಮಗೆ ನಂಬಲಾಗಲಿಲ್ಲ.

ಆನೆ ಹಳ್ಳಿಯಲ್ಲಿ, ನಮ್ಮ ಪ್ರಾಣಿದಯಾ ಭಾವವನ್ನು ಅವಳು ಒಪ್ಪಿಕೊಂಡು, ಸವಾರಿಯ ಅವಕಾಶಕ್ಕೆ ಒತ್ತಾಯಿಸದಿದ್ದದ್ದು ಇನ್ನೊಂದು ಆಶ್ಚರ್ಯ.

ದೇಶ, ರಾಜ, ಕೋಟೆ, ಯುದ್ಧ, ಹಳೆಗಾಲದ ಸೌಕರ್ಯಗಳು, ಮೌಲ್ಯಗಳು…ಏನೇನೂ ಪರಿಚಯವಿಲ್ಲದ ಮುಗ್ಧೆ ಆಭಾ. ಸಹಜವಾಗಿ ಪ್ರದರ್ಶನಾಲಯಗಳು ಮತ್ತಲ್ಲಿನ ಲಕ್ಷಾಂತರ ವಸ್ತುಗಳನ್ನು ನಿರ್ಭಾವದಿಂದ ನಡೆದೇ ನೋಡಿದಳು. ಹಿರಿಯರಿಗೇ “ಸಾಕಪ್ಪಾ” ಎನ್ನಿಸುವ ಹಂತಗಳಲ್ಲಿ, ಕೆಲವೊಮ್ಮೆ ಆಕೆ ಸಣ್ಣದಾಗಿ ಅಸಹನೆ ತೋರಿದ್ದುಂಟು. ಆದರೆ ಆ ಕ್ಷಣಕ್ಕೆ ಅಪ್ಪನೋ ಅಜ್ಜನೋ ತುಸು ದೂರಕ್ಕೆ ಅವಳನ್ನು ‘ಉಪ್ಪಿನಮೂಟೆ’ ಮಾಡಿದಷ್ಟಕ್ಕೇ ಸುಧಾರಿಸಿಕೊಳ್ಳುತ್ತಿದ್ದಳು.

ಬೆಂಗಳೂರಿನ ನಿತ್ಯದಲ್ಲಿ ವಸತಿಸಮೂಹದ್ದೇ (ನಾಲ್ಕೈದು) ಮಕ್ಕಳ ಕೂಟ, ಏನಾದರೂ ತಿನ್ನು, ಕುಡಿ, ಟೀವೀ ನೋಡು, ಚರವಾಣಿಯಲ್ಲಾಡು ಎಂದೇ ‘ಬೋರ್’ ಕಳೆಯುವ ಆಭಾ ಇಲ್ಲೆಲ್ಲೂ ಮನೆಗೆ/ ಹೋಟೆಲಿಗೆ ಹೋಗುವ, ಏನಾದರೂ ತಿನ್ನುವ ಎಂದೇನೆಲ್ಲ ರಚ್ಚೆ ಹಿಡಿಯಬಹುದಿತ್ತು. ಎಡೆ ತಿನಿಸು ಪಾನೀಯಗಳಿರಲಿ ಊಟವೇ ಅಕಾಲದಲ್ಲಾಗುತ್ತಿದ್ದರೂ ನಮಗೆ ಮಾನಸಿಕ ಹೊರೆ ಆಗಲೇ ಇಲ್ಲ. ಪ್ರಾಯ ಸಹಜ ಉಬ್ಬಾಳಿಗೆ, ನಾವು ಕಾಲಕಾಲಕ್ಕೆ ಕೊಟ್ಟ  ಸೂಪರ್, ಗುಡ್ ಗರ್ಲ್, ಎಂಥಾ ಗಟ್ಟಿ… ಮಾತುಗಳೇ ಧಾರಾಳ ಸಾಕಾದವು.

ಉಳಿದಂತೆ ನಮ್ಮಲ್ಲಿ ಪ್ರವಾಸಾನುಭವದ ಸಣ್ಣ ಕೊರತೆ (ಮತ್ತು ತುಂಬಿ ಕೊಳ್ಳುವ ಅಪಾರ ಬಯಕೆ) ಇದ್ದದ್ದು ರಶ್ಮಿಗೆ ಮಾತ್ರ. ಅಭಯ ವೃತ್ತಿ ಸಂಬಂಧ (ದೇಶ ವಿದೇಶಗಳಲ್ಲೂ) ವಿಪರೀತವೇ ಸುತ್ತಾಡಿದವ. ನಮ್ಮಿಬ್ಬರ ಕನಿಷ್ಠ ನಾಲ್ಕೂವರೆ ದಶಕಗಳ ತಿರುಗೂಳಿತನವಂತೂ (ನನ್ನ ಜಾಲತಾಣ ಮತ್ತು ಫೇಸ್ ಬುಕ್ ಪುಟಗಳಿಂದ) ಜಗಜ್ಜಾಹೀರೇ ಇದೆ. ಅಭಯರಶ್ಮಿಯರು ವೃತ್ತಿ ಒತ್ತಡಗಳಿಗೆ ಹೊರತಾಗಿ ಪ್ರವಾಸ ಹೋಗಬೇಕೆಂದು ಹೇಳಿಕೊಳ್ಳುತ್ತಲೇ ಇದ್ದರು. ನಾವೋ ಬಹಳ ಹಿಂದಿನಿಂದಲೇ ರಾಜಸ್ತಾನದ ಕೋಟೆಗಳ ಕನಸು ಕಾಣುತ್ತಲೇ ಇದ್ದೆವು. ನಾವು ಮುಂದುವರಿದು, ಅನ್ಯ ಅನುಭವಿಗಳನ್ನು ವಿಚಾರಿಸಿ, ಸುಡು ಬೇಸಗೆ ಮತ್ತು ಕಡು ಚಳಿಗಳ ದಿನಗಳನ್ನು ಬಿಟ್ಟ ಅಕ್ಟೋಬರ್ – ನವೆಂಬರ್ ಪ್ರಶಸ್ತ ಎಂದೂ ತಿಳಿದಿದ್ದೆವು. ಆದರೆ ನಮಗೆ ಒಗ್ಗದ ವಿದ್ಯುನ್ಮಾನ ಸವಲತ್ತುಗಳ ಸಂಘಟನೆಗೆ ಹೆದರಿ ಹಿಂದುಳಿದಿದ್ದೆವು. ಆಭಾಳ ಕ್ರಿಸ್ಮಸ್ ರಜೆ ನಮ್ಮೆರಡೂ ಬಯಕೆಗಳಿಗೆ ಶುಭ ಮುಹೂರ್ತವನ್ನೇ ಕೊಟ್ಟಿತು. ದಿನಮಾನದ ಲೆಕ್ಕದಲ್ಲಿ ತಡವಾದರೂ ಚಳಿಗಾಲ ಉಳಿದೇ ಇದ್ದರೂ ಕೌಟುಂಬಿಕ ಪ್ರವಾಸ ಸುಂದರವಾಗಿ ನಡೆಯಿತು. ಎಲ್ಲರ ಆರೋಗ್ಯ, ಹವಾಮಾನ ಆಹಾರ ಮತ್ತು ಶ್ರಮಗಳನ್ನು ನಗಣ್ಯ ಮಾಡಿ, ಯೋಜನೆಯನ್ನು ಅಕ್ಷರಶಃ ಯಶಸ್ವಿಗೊಳಿಸಿತು.

ವೇಳಾ ಪಟ್ಟಿಯಂತೇ ಅಪರಾಹ್ನ ೧.೩೫ರ ವಿಮಾನವೇರಿ ಸಂಜೆ ಬೆಂಗಳೂರು. ಮೇವಾಡದ ರಾಣಾ ಪ್ರತಾಪ್ ಸಿಂಹ ಬೀಳ್ಕೊಂಡ, ಘಟ್ಟ ಏರಿ ಬಂದ ಬಾಲಗೋಪಾಲರು ಸ್ವಾಗತಿಸಿದರು. ಆರು ದಿನಗಳ ಕಾಲ ವಿವಿಧ ಅರಮನೆಗಳ ಸುತ್ತಾಟದ ಅನುಭವವನ್ನು, ನಮ್ಮದೇ ಅರಮನೆಗೆ {ಅ(ಭಯ)ರ(ಶ್ಮಿ)ಮನೆ, ಇಂಗ್ಲಿಷಿನಲ್ಲಿ ಹೇಳುವುದಾದರೆ A(bhaya)R(ashmi)A(abha) ಮನೆಗೆ} ತುಂಬಿಕೊಂಡೆವು! ಹಾಗೇ ಹಲವು ಬೆಟ್ಟಗಳನ್ನು (ಘಡ್) ಏರಿದ ಪುಳಕವನ್ನು, ಮರುದಿನ ಬಸ್ಸೇರಿ ಮಂಗಳೂರಿನ ನಮ್ಮದೇ ಬೆಟ್ಟ – ಅಭಯಾದ್ರಿಗೂ ಮುಟ್ಟಿಸಿದೆವು! ಹೊಸ ಭಾವಲಹರಿಯ ಬೆನ್ನು ಹಿಡಿದು ಅನುಭವಾಮೃತಕ್ಕೆ ಅಕ್ಷರದ ಅಲಂಕಾರ ಕೊಟ್ಟು ಅಕ್ಷಯವಾಗಿಸಿದ್ದೇವೆ.

ಫಲಶ್ರುತಿ

ಹುಟ್ಟಿನ ಆಕಸ್ಮಿಕದಲ್ಲಿ ನಮ್ಮದು ಗುಡ್ಡೇಹಿತ್ತಲು ಮನೆತನ. ನಿಮಗೆಲ್ಲ ತಿಳಿದಂತೆ, ನನ್ನ ಪ್ರಧಾನ ಹವ್ಯಾಸವೂ ಗುಡ್ಡೆ ಹತ್ತುವುದೇ. ಈ ಪ್ರವಾಸದಲ್ಲಿ ಬಹುತೇಕ ಅನುಭವಿಸಿದ್ದೆಲ್ಲ ಗುಡ್ಡ ಬೆಟ್ಟಗಳೇ. ಪಶ್ಚಿಮ ಘಟ್ಟದ ಮಡಿಲಿನಿಂದ ಹೋದ ನಮ್ಮನ್ನು ಕೊನೆಯಲ್ಲಿ ಬೀಳ್ಕೊಂಡದ್ದು ಅರಾವಳಿ (ಜಗ್ ಹೋಟೆಲ್) ಬೆಟ್ಟ ಮಾಲೆಯ ನಯಾಗಡ್ (ಹಳ್ಳಿಯ ಹೆಸರು); ಭಾಷಾಬೇಧವನ್ನು ಮೀರಿ ಹೇಳಬಹುದೇ – ಹೊಸ ಗುಡ್ಡೇ!!

ಜೈಪುರದಲ್ಲಿಳಿದಂದಿನಿಂದ ಉದಯಪುರ ಬಿಡುವವರೆಗೂ ಮೋಡ, ಮಬ್ಬು, ಚಳಿ, ರಾತ್ರಿಗಳಲ್ಲಿ ತೀವ್ರ ಚಳಿ ಕಾಡುತ್ತಲೇ ಇತ್ತು. ಆದರೆ ನಮ್ಮ ಸಿದ್ಧತೆ ಮತ್ತು ಒದಗಿದ ಸೌಕರ್ಯಗಳ ಬಲ ಅದನ್ನು ಹಿಮ್ಮೆಟ್ಟಿಸಿತು. ಮರುಭೂಮಿಯ ತಲೆ ತೂತಾಗುವ ಬಿಸಿಲು, ಬಳಲಿಕೆಗಳಿಲ್ಲದೆ ನೋಡಲು ಅನುಕೂಲಿಸಿತು. ಅಪರೂಪಕ್ಕೆ ದರ್ಶನ ಕೊಡುತ್ತಿದ್ದ ಸೂರ್ಯನಾದರೂ ಹಗಲಿನ ಚಂದ್ರನಂತೇ ಮಂಕಾಗಿರುತ್ತಿದ್ದ. ಕೊರತೆಯಾದದ್ದು ಒಂದೇ – ಜೈಸಾಲ್ಮೇರಿನ ಮರಳ ದಿಬ್ಬಗಳ ದಿಗಂತದಲ್ಲಿ ಸೂರ್ಯಾಸ್ತದ ವರ್ಣಲೋಕ.

ರಾಜಸ್ತಾನದ (ಸರಕಾರ ಏನಾದರೂ ಸಾಯಲಿ!) ಜನ ಪ್ರವಾಸೋದ್ಯಮ ರಂಗದಲ್ಲಿ ತುಂಬ ಬೆಳೆದಿದ್ದಾರೆ. ಅಲ್ಲಿನ ಪ್ರವಾಸ ಕಥನಗಳು ಕನ್ನಡದಲ್ಲೂ ಸಾಕಷ್ಟು ಬಂದಿವೆ. ಅಂತರ್ಜಾಲದಲ್ಲಂತೂ ಅಲ್ಲಿನ ಸ್ಥಳ, ಇತಿಹಾಸ, ಮಾಹಿತಿಗಳ ಮಹಾಪೂರವೇ ಹರಿದಿದೆ. ಹಾಗಾಗಿ ನನ್ನ ಕಥನ ಅವುಗಳಿಂದ ತುಸು ಭಿನ್ನವಾಗಿ, ಘಟನಾಕ್ರಮದ ಓಟದಲ್ಲೇ ತುಸು ಹಿಂದುಮುಂದಾಡಿ, ನಮ್ಮನುಭವಕ್ಕೆ ನಿಲುಕಿದ ಪ್ರಸಂಗ ಮಾಲೆಯಾಗಿ ಹರಿಯಿತು. ನಿಮಗೇನಾದರೂ ಮಾಹಿತಿ ಕೊರತೆಯಾದರೆ ನೀವೇ ಅಂತರ್ಜಾಲದಿಂದ ತುಂಬಿಕೊಳ್ಳಿ.

(ಸರಣಿ ಮುಗಿಯಿತು)

0 Comments

Submit a Comment

Your email address will not be published. Required fields are marked *