ಲದ್ದಾಕ್ ಕೇಂದ್ರ – ಲೇಹ್ ದರ್ಶನ

Aug 10, 2026 | 0 comments

ಅಧ್ಯಾಯ ಮೂರು – ಲೇಹ್ ಲದ್ದಾಕ್ ದಾರಿಯಲ್ಲಿ….)

ಸಮುದ್ರ ಮಟ್ಟದ ಮಂಗಳೂರಿಗರು, ಮೊದಲ ದಿನ ದಿಲ್ಲಿ (ಸ.ಮ ೭೫೩ ಅಡಿ) ಮುಟ್ಟಿ, ರಾತ್ರಿಗೆ ಚಂದೀಘಡಕ್ಕೇರಿದ್ದೆವು (ಸ.ಮ ೧೦೫೩ ಅಡಿ). ಎರಡನೇ ದಿನದ ವಸತಿ – ಮನಾಲಿಯದ್ದು (ಸಮ ೬೭೩೦ ಅಡಿ). ಮೂರನೇ ದಿನ ಅತ್ಯುನ್ನತಿಯಲ್ಲಿ ಅಟಲ್ ಗುಹಾ ವಲಯ (ಸ,ಮ ೧೩,೦೬೦ ಅಡಿ) ಮುಟ್ಟಿದರೂ ರಾತ್ರಿಗೆ ಜಿಸ್ಪಾ ಕಣಿವೆಗೆ (ಸಮ ೧೦,೫೦೦ ಅಡಿ) ಇಳಿದು ತಂಗಿದ್ದೆವು. ಇಂದು ಅಂದರೆ, ನಾಲ್ಕನೇ ದಿನಾಂತ್ಯಕ್ಕೆ ೩೩೩ ಕಿಮೀ ಓಟದಲ್ಲಿ, ಲಚಂಗ್ಲಾ ಪಾಸನ್ನು (ಸಮ ೧೬,೬೧೭ ಅಡಿ) ಹಾಯ್ದು, ಲೇಹ್ (ಸಮ ೧೧,೫೬೨ ಅಡಿ) ಮುಟ್ಟಲಿದ್ದೆವು. ಹೀಗೆ ನಾಲ್ಕು ದಿನಗಳ ಏರಿಳಿತಗಳ ಓಟದಲ್ಲಿ ಎತ್ತರದ ಯಾತನೆಗಳನ್ನು ಪಳಗಿರುತ್ತೇವೆಂಬ ವಿಶ್ವಾಸ ನಮ್ಮದು. ಅದು ಎಷ್ಟು ಸರಿ ಎನ್ನುವುದನ್ನು ಕಾಣಲು….

ವಿಸ್ತಾರ ಕಣಿವೆಗಳಲ್ಲಿ ಬರಿಯ ಗುಂಡುಕಲ್ಲುಗಳದೇ ಒಟ್ಟಣೆ, ಕಿಮೀಗಟ್ಟಳೆ ಉದ್ದಕ್ಕೂ ಹಾಸಿಕೊಂಡಿದ್ದವು, ಅವುಗಳ ನಡುವೆ ಸಾಕಷ್ಟು ದೃಢ ಜಾಡು ಗುರುತಿಸಿ, ಬಂಡೆಗಳನ್ನು ಬಿಗಿ ಪಡಿಸಿ, ಒಂದು ವಾಹನ ಸಾಲಿಗಾದರೂ ಸರಾಗ ಓಡಲಾಗುವಂತೆ ಕಾಂಕ್ರೀಟ್ ಹಾಸು ಕೊಟ್ಟಿದ್ದರು. ಅಲ್ಲಲ್ಲಿ ಹಾಸನ್ನು ತುಸುವೇ ವಿಸ್ತಾರಗೊಳಿಸಿ, ಎದುರು ಬದಿರಾಗುವ ವಾಹನಗಳಿಗೆ ಸುಧಾರಿಸಿಕೊಳ್ಳಲೂ ಅವಕಾಶ ಕಲ್ಪಿಸಿದ್ದರು. ಕಾಲಕ್ರಮೇಣ ಮಾರ್ಗ ವಿಸ್ತರಣೆಗೆ ಸಾಕಷ್ಟು ಅವಕಾಶ ಉಳಿಸಿಕೊಂಡು, ದಾರಿಯುದ್ದಕ್ಕೆ ಕಲ್ಲಗುಪ್ಪೆಗಳ ಮೋಟು ಗೋಡೆಯನ್ನೇ ನಿಲ್ಲಿಸುತ್ತಿದ್ದರು. ಬೇಸರದ ಸಂಗತಿ ಎಂದರೆ ಇದಕ್ಕೆ ಒಂದೆರಡು ಜೆಸಿಬಿ, ಎತ್ತುಗ ಬಿಟ್ಟರೆ, ಕೂಲಿಯಾಳುಗಳ ಬೆವರು, ರಟ್ಟೇ ಬಲವನ್ನೇ ನೆಚ್ಚಿದ್ದರು! ರಣ ಬಿಸಿಲಿದ್ದಂತೇ ಹಾರಿಸಿಕೊಂಡೇ ಹೋಗಬಲ್ಲ ಶೀತಗಾಳಿ ಬೀಸುವ ಪರಿಸರದಲ್ಲಿ (ಮರೆಯದಿರಿ, ಲದ್ದಾಕ್ ಅಂದರೆ ಶೀತಲ ಮರುಭೂಮಿ) ಭಾರೀ ಉಕ್ಕಿನ ಬಲೆಗಳಲ್ಲಿ, ಗುಂಡು ಕಲ್ಲುಗಳನ್ನು ಜಡಿದು, ಗುಪ್ಪೆ ಸಾಲುಗಳಾಗುತ್ತಿದ್ದವು. ದಾರಿ ಒಮ್ಮೊಮ್ಮೆ ಸಣ್ಣ ಬಳುಕಾಟದಲ್ಲಿ ತುಸು ಉದ್ದಕ್ಕೆ ಇಳಿದೋಡುವುದೋ ಏರುವುದೋ ಇತ್ತು. ಉಳಿದಂತೆ ಬೆಟ್ಟದ ಮೈಯ ಅಡ್ಡಕ್ಕೆ (ಇಂಗ್ಲಿಷ್ ಕೊನೆಯಕ್ಕರ) Z ನ ಮೇಲೆ, ಅಸಂಖ್ಯ Z ಗಳನ್ನು ಹೇರಿದಂತೆ, ಅಸಂಖ್ಯ ಹಿಮ್ಮುರಿ (ಘಟಾ ಚೌಕ್) ತಿರುವುಗಳನ್ನು ಉತ್ತರಿಸುತ್ತಾ ಓಡುತ್ತಿದ್ದೆವು.

ಕೂಲಿಯಾಳುಗಳು ಬೆವರಿಳಿಸಿದರೂ ದಪ್ಪನ್ನ ಅಂಗಿ ಕಡ್ಡಾಯ ಎನ್ನುವಂತೆ ಧರಿಸಿದ್ದರು ಅಥವಾ ಬಗಲಲ್ಲಿ ಇಟ್ಟುಕೊಂಡಿದ್ದರು. ಹತ್ತಿಪ್ಪತ್ತು ಕಿಲೋ ತೂಕದ ಒರಟು ಕಲ್ಲುಗಳನ್ನು ನಿಭಾಯಿಸುವಲ್ಲಿ ಒಬ್ಬಿಬ್ಬ ಕೈ ಗವುಸು ತೊಟ್ಟವರನ್ನು ಬಿಟ್ಟರೆ, ಬಹುಮಂದಿ ಖಾಲಿ ಕೈಯವರು! ಅವರ ಅಪಾರ ಶ್ರಮ ಮತ್ತು ನೋವುಗಳ ಫಲವಾಗಿ, ಬೆಚ್ಚನೆ ಟೀಟೀಯೊಳಗೆ, ಮಿದುವಾದ ಆಸನದಲ್ಲಿ ಕುಳಿತ ನಮಗೆ ಪಾಪ ಪ್ರಜ್ಞೆ ಕಾಡುತ್ತಲೇ ಇತ್ತು, ಒಂದೆರಡು ಕಡೆ ಒಬ್ಬಿಬ್ಬ ಕೂಲಿಯವರು ಕುಡಿಯುವ ನೀರಿನ ಬೇಡಿಕೆ ಇಟ್ಟಾಗ, ಇನ್ನೆಲ್ಲೋ ಬುತ್ತಿಯೂಟಕ್ಕೆ ಕುಳಿತದ್ದು ಕಂಡಾಗ, ನಾವು ನೀರ ಬಾಟಲಿಯೊಡನೆ ಬಿಸ್ಕತ್ ಪ್ಯಾಕೂ ಕೊಟ್ಟದ್ದಿತ್ತು.

ದಾರಿ ಔನ್ನತ್ಯ ಗಳಿಸುತ್ತಿದ್ದಂತೆ, ಬೆಳ್ಳಿ ಶಿಖರಗಳು ಇಳಿದು ಬರುವಂತೆ ತೋರುತ್ತಿತ್ತು. ಅಲ್ಲೇ ಮೊದಲಲ್ಲಿ, ನೀಲಾಕಾಶದ ತುಣುಕೇ ಕಳಚಿ ಬಿದ್ದಂತೆ ಒಂದು ಪುಟ್ಟ ಸರೋವರ ಥಳಥಳಿಸಿತು. ಇದರ ಅನ್ವರ್ಥನಾಮವಾದರೂ ಸೂರಜ್ ತಾಲ್ (ಸೂರ್ಯ ಸರಸಿ). ಸಮ ೧೬,೦೧೪ ಅಡಿ ಎತ್ತರದ ಇದನ್ನು ಸ್ಥಳಪುರಾಣಿಕರು, “ವಿಶ್ವದ ಅತ್ಯುನ್ನತಿಯ ಸರೋವರಗಳಲ್ಲಿ ಮೂರನೇದು” ಎಂದೇ ಕೊಂಡಾಡುವುದು ನಿಜವಲ್ಲ. ಹಾಗೆಂದ ಮಾತ್ರಕ್ಕೆ ಸೂರಜ್ ತಾಲಿನ ತಾಜಾ ಸೌಂದರ್ಯ ಮೆಚ್ಚಿಕೊಳ್ಳುವುದಕ್ಕೇನೂ ಕೊರತೆ ಇಲ್ಲ. ಸಮಯಾಭಾವದಲ್ಲಿ ನಾವು ಅಲ್ಲಿ ನಿಲ್ಲಲಿಲ್ಲ. ಆದರೆ ಮುಂದೆ ದಾರಿಯ ಅಂಚುಗಳಿಗೆ ಹಿಮವೇ ಜಾರಿ ಬಂದು, ಕಟ್ಟೆ ಕಟ್ಟಿರುವುದನ್ನು ನೋಡಿದಾಗ, ಐದು ಮಿನಿಟಿನ ಮೋಜಿಗೆಂಬಂತೇ ನಿಂತಿದ್ದೆವು. ಹೀಗೆ ಹೆಚ್ಚಿಸಿಕೊಂಡ ಚಳಿಗೆ, ಮುಂದೊಂದು ಧಾಬಾ ಸಾಲಿನ ಗರ್ಭ ಸೇರಿ, ಗರಂ ಚಾಯ್, ಕುರುಕಲಿನ ಉಪಚಾರ ಕೊಟ್ಟು, ತುಸು ಹುರುಪು ಕಂಡು ಕೊಂಡೆವು. ಆದರೆ ಅಷ್ಟಕ್ಕೆ ಮುಗಿಯಲಿಲ್ಲ.

ಮುಂದೆ ಅಂತಾರಾಜ್ಯ ಗಡಿ ಠಾಣೆಯ ಬಳಿ, ವಾಹನಗಳ ದಾಖಲೆ ತನಿಖೆಗೆ ತುಸು ಸಮಯ ಕೊಡುವ ಅನಿವಾರ್ಯತೆ ಬಂದಿತ್ತು, ಅಲ್ಲಿ ಅದುವರೆಗೆ ತುಟಿ ಕಚ್ಚಿ ಕುಳಿತ ಒಬ್ಬಿಬ್ಬರು ಸಣ್ಣ ತಲೆನೋವು ಎನ್ನುತ್ತ, ವಾಂತಿ ಮಾಡಲು ಅವಕಾಶ ಕಂಡುಕೊಳ್ಳುವಾಗ, ಔನ್ನತ್ಯದ ಪರಿಣಾಮ ಜಾಹೀರಾಗಿತ್ತು. ನನಗೋ ವಾಹನ ಇಳಿದಲ್ಲೆಲ್ಲ, ಆಚೀಚೆ ಓಡಾಡುವುದು, ಸುತ್ತಣ ದೃಶ್ಯಗಳಲ್ಲಿ ಕಳೆದುಹೋಗುವುದು ಅಭ್ಯಾಸವೇ ಆಗಿದೆ. ಮನಾಲಿ ಘಟ್ಟ ಏರುವಲ್ಲಿಂದ ತೊಡಗಿ ನನಗೂ ಉತ್ಸಾಹ ತುಸು ಕುಗ್ಗಿತ್ತು, ಆಗೀಗ  ಸಣ್ಣ ತಲೆ ನೋವು ಕಾಡುತ್ತಲೇ ಇತ್ತು. ಈ ಗಡಿ ಠಾಣೆಯಲ್ಲಿ ಒಮ್ಮೆಲೇ ವಾಂತಿಯೂ ಬಂದಿತ್ತು! ಎಲ್ಲೋ ಕೇಳಿದ ಮಾತು “ಹೆಂಗುಸ್ರು ಗಟ್ಟಿ ಗುರೂ” ನಿಜವೆನ್ನುವಂತೆ, ದೇವಕಿ ಆರಕ್ಕೇರಲಿಲ್ಲ, ಮೂರಕ್ಕಂತೂ ಇಳಿಯಲೇ ಇಲ್ಲ!!

ಸೇತುವೆಗಳು, ಸಂಪರ್ಕ ದಾರಿ ಸಹಿತ ಅಕಾಲ ಪ್ರವಾಹದಲ್ಲಿ ಕೊಚ್ಚಿಯೋ, ಭೂ ಕುಸಿತದಲ್ಲಿ ಮುಚ್ಚಿಯೋ ಹೋದ ಅವಶೇಷಗಳು, ಧಾರಾಳ ಸಿಗುತ್ತಿದ್ದವು. ಭಾರತ ಸೈನ್ಯದ ಒಂದು ಪ್ರಬಲ ಅಂಗವೇ ಆದ ಬೀಯಾರ್ವೋ, ಸಕಾಲಿಕ ಮತ್ತು ಹೊಸ ಸಾಮರ್ಥ್ಯದ ದಾರಿ ಮತ್ತು ಸೇತವೆಗಳನ್ನು ಕೊಡುತ್ತಲೇ ಬಂದುದಕ್ಕೆ ನಮ್ಮಂಥವರು ಸುಗಮ ಪ್ರವಾಸಗಳನ್ನು ಮಾಡುವಂತಾಗಿದೆ. (ಬೀಯಾರ್ವೋ ಅಂದರೆ ಬಾರ್ಡರ್ ರೋಡ್ ಆರ್ಗನೈಜೇಶನ್. ಇವರೇ ನಮ್ಮ ಕುದುರೆಮುಖ ಗಣಿಗಾರಿಕಾ ಕಂಪೆನಿಗೆ ಭಗವತೀ ಘಾಟಿ ದಾರಿ ನಿರ್ಮಿಸಿಕೊಟ್ಟವರು. ಅದು ಇಂದಿಗೂ ಸ್ಥಿರವಾಗುಳಿದಿದೆ) ಅವರು ಅವುಗಳಲ್ಲಿ ಕೆಲವಕ್ಕೆ ವೈನ್, ಬೀರ್, ರಂ ಎಂದಿತ್ಯಾದಿ ಅಮಲುಕಾರಕಗಳ ಹೆಸರಿಟ್ಟು ಬೋರ್ಡು ಹಾಕಿದ್ದಾರೆ. ಇಲ್ಲಿ ಅವರ ಹಾಸ್ಯಪ್ರಜ್ಞೆಯನ್ನಷ್ಟೇ ನಾನು ಕಂಡರೆ, ಮೆಟಾಯಾಂಬು ತುಸು ಮುಂದುವರಿದು ಹೇಳಿದ ಮಾತು ಚೆನ್ನಾಗಿದೆ. ಅಮಲುಕಾರಕಗಳು ಔನ್ನತ್ಯದ ಸಂಕಟಗಳನ್ನು (ಮಂಕು, ತಲೆನೋವು, ವಾಂತಿ…) ಹೆಚ್ಚಿಸುತ್ತವೆ. ಸಾಮಾನ್ಯವಾಗಿ ಅವುಗಳಿಂದ ಬಳಲುವ ಮಂದಿ ಇವನ್ನು ನೋಡಿ ನಕ್ಕು ಹಗುರಾಗುವುದರೊಂದಿಗೆ, ಅಮಲುಕಾರಕಗಳ ಅಪಾಯದ ಎಚ್ಚರಿಕೆಯನ್ನೂ ಪಡೆಯುತ್ತಾರೆ!

ಬಹಳ ದೂರಕ್ಕೆ ಸಿಕ್ಕ ತಟ್ಟು – ಟುಂಡುಪ್ ಟ್ಸೋಕರ್. ಅಲ್ಲಿ ತತ್ಕಾಲೀನ ಎಂಬಂತೆ ಮರ ಸಿಲ್ಪಾಲೀನ್ ಶೀಟುಗಳಲ್ಲೇ ನಿರ್ಮಿಸಿದ್ದ ಧಾಬಾದಲ್ಲಿ ಮುಂದಾಗಿ ತಲಪಿದ್ದ ನಮ್ಮ ಅಡಿಗೆ ತಂಡ (ಬಹುತೇಕ ಬೆಳಿಗ್ಗೆಯೇ ತಯಾರಿಸಿ ತಂದ) ಊಟವನ್ನು ಬಿಸಿಬಿಸಿಯಾಗಿಯೇ ಬಡಿಸಲೇನೋ ಸಜ್ಜಾಗಿದರು. ಆದರೆ ನಮ್ಮಲ್ಲಿನ ಬಹುಮಂದಿ ವಾಂತಿ, ತಲೆ ನೋವಾದಿ ಸಂಕಟಗಳಲ್ಲಿ ಉಪವಾಸದಿಂದ ಹಗುರ ತಿನಿಸುಗಳಾದ ಗಂಜಿ, ತಿಳಿಸಾರು, ಮಜ್ಜಿಗೆಗಳಲ್ಲೇ ಸುಧಾರಿಸುವಂತಾಗಿತ್ತು, ನಾನಂತೂ ಅಕ್ಷರಶಃ ಉಪವಾಸವೇ ಉಳಿದೆ. ನಮ್ಮ ಆಶ್ಚರ್ಯಕ್ಕೆ, ಆ ಕಠಿಣ ಪರಿಸರದಲ್ಲೂ ಇಬ್ಬರು ತರುಣರು, ದೀರ್ಘ ಸವಾರಿಗೆ ಸಜ್ಜಾದ ಸೈಕಲ್ಲುಗಳೊಡನೆ ಬಂದರು. ಅವರಲ್ಲಿ ಒಬ್ಬ ತಮಿಳು ನಾಡಿನ ಹಳ್ಳಿ ಮೂಲೆಯವ! ದಾರಿಯಲ್ಲಿ ಭಿಕ್ಷೆ ಬೇಡದೇ ಸಿಗಬಹುದಾದ ಬಿಟ್ಟಿ ಊಟ, ತತ್ಕಾಲೀನ ವಸತಿ, ಉದಾರಿಗಳ ಸಣ್ಣ ಕಾಸು ನಂಬಿಯೇ ಹೊರಟಿದ್ದ ಮತ್ತು ತಿಂಗಳುಗಳ ಸಾಧನೆಯಲ್ಲಿ (ಕನಿಷ್ಠ ಮೂರು ಸಾವಿರ ಕಿಮೀ) ಈ ಎತ್ತರಕ್ಕೆ ಬಂದ್ದಿದ್ದ. ಇನ್ನೊಬ್ಬ ಹರ್ಯಾಣದ ತರುಣ, ಆಕಸ್ಮಿಕವಾಗಿ ಸಿಕ್ಕ ತಮಿಳನ ಪ್ರೇರಣೆಯಲ್ಲಿ, ತನ್ನದೇ ಸೈಕಲ್ ಸಜ್ಜು ಮಾಡಿಕೊಂಡು (ಕನಿಷ್ಠ ಮುನ್ನೂರು ಕಿಮೀ) ಜತೆಗೊಟ್ಟಿದ್ದ. ಇಂದು ರಾಷ್ಟ್ರವೇ ತಲ್ಲಣಿಸುತ್ತಿರುವ ಊರು, ಭಾಷೆ, ಜಾತಿ ಮುಂತಾದ ಕಾರಣಗಳನ್ನು ಮೀರಿದ ಈ ಒಗ್ಗಟ್ಟೇ ನಿಜ ಭಾರತದ ಸಂಸ್ಕೃತಿ ಎಂದು ನಾನು ನಂಬಿದ್ದೇನೆ. ಅವರು ನಮ್ಮಲ್ಲಿ ಎರಡೂಟ ಸಿಕ್ಕೀತೇ ನಮ್ರವಾಗಿಯೇ ಕೇಳಿದರು. ಕೇಳಿದ್ದೇ ಸಾಕೆಂಬಂತೆ ನಮ್ಮವರು ಒತ್ತಾಯದ ಬಡಿಸಿಕೆಯಲ್ಲೇ ಅವರನ್ನು ಉಪಚರಿಸಿ, ಶುಭ ವಿದಾಯ ಕೋರಿದೆವು,

ಅಲ್ಲಿನ ಸೂರ್ಯನ ಲೆಕ್ಕದಲ್ಲಿ (ಸುಮಾರು ಏಳು ಗಂಟೆ) ಮುಸ್ಸಂಜೆಗೆ ಲೇಹ್ ಸಮೀಪಿಸಿದ್ದೆವು. ಸುವಿಸ್ತಾರ ಸೈನ್ಯದ ಶಿಬಿರ, ಕವಾಯತು ಮೈದಾನ, ಕೆಲವು ಬೌದ್ಧ ಆರಾಧನ ಸ್ಥಳಗಳೆಲ್ಲವನ್ನೂ ದಾಟಿ ನಗರದ ಹೊರವಲಯ ಮುಟ್ಟಿದೆವು. ಅಲ್ಲಿ ಮಾರ್ಗ ಲೆಕ್ಕಕ್ಕೆ ಚತುಷ್ಪಥಗೊಂಡಿದ್ದರೂ ನಾವು ಕಂಡ ಅಳತೆಗಳಲ್ಲಿರಲೇ ಇಲ್ಲ. ಸಹಜವಾಗಿ ಅಲ್ಲಿದ್ದ ಸಾರಿಗೆ ನಿಯಮಗಳು ಟೆಂಪೋ ಟ್ರಾವೆಲ್ಲರುಗಳನ್ನು ಘನವಾಹನಗಳಂತೇ ಕಾಣುತ್ತಿದ್ದವು, ಇದರಿಂದ ನಾವು ನಗರದ ಹೊರವಲಯದ ಬಳಸುದಾರಿಗಳಲ್ಲಿ ಬಳಲಿ, ಒಂದೆಡೆ ಅಸಾಧ್ಯ ಸಂಚಾರಗೊಜ್ಜಿನಲ್ಲಿ ನರಳಿದ್ದಾಯ್ತು. (ಆ ಬೆಳಗ್ಗೆ ಬೆಂಗಳೂರಿನಿಂದ ಮಗ ಫೋನಿಸಿ, ಕುಶಲ ವಾರ್ತೆಗಳನ್ನು ವಿಚಾರಿಸುತ್ತಿದ್ದಾಗ, “ನಿನ್ನೆ ಲದ್ದಾಕಿನಲ್ಲಿ ಎರಡು ಗಂಟೆ ಟ್ರಾಫಿಕ್ ಜಾಮ್ ಆಗಿತ್ತಂತೆ, ಇಂದು ನಿಮಗೆ ಹೇಗೋ” ಎಂದ್ದು ಉದ್ಗರಿಸಿದ್ದು ನೆನಪಾಯ್ತು) ಕೊನೆಯ ಗುಟುಕೆಂಬಂತೆ, ನಮ್ಮ ತಂಡ ಕಾಯ್ದಿರಿಸಿದ್ದ ಹೋಟೆಲಿನವರು ಸರಿಯಾಗಿಯೇ ಕೊಟ್ಟಿದ್ದ ಗೂಗಲ್ ನಕ್ಷೆಯೂ ಗೊಂದಲಿಸಿಬಿಟ್ಟಿತು. ಗಲ್ಲಿಗಳ ಗೋಜಲಿನಲ್ಲಿ ಒದ್ದಾಡಿ ಕೊನೆಗೂ ರೈಸಿಂಗ್ ಮತ್ತು ರಾಯಲ್ ಎಂಬ ಅವಳೀ ‘ಹಿಮಾಲಯ ಹೋಟೆಲ್’ ಸೇರುವಾಗ ಗಂಟೆ ಎಂಟೂ ಕಾಲಾಗಿತ್ತು.

ನಮ್ಮಲ್ಲಿ ಬಹುಮಂದಿ ಗುರಿ ತಲಪಿದ ಸಂತೋಷಕ್ಕಿಂತಲೂ ಹೆಚ್ಚಿಗೆ (ಔನ್ನತ್ಯದ ಸಂಕಟದಲ್ಲಿ) ಜಡ ಹೊತ್ತೇ ಅನಿವಾರ್ಯ ವಿಧಿಗಳಿಗೆ ಒಪ್ಪಿಸಿಕೊಂಡೆವು. ನಾವು ಮಲಗುವಾಗ ರಾತ್ರಿ ಹನ್ನೊಂದು ಕಳೆದಿತ್ತು.

ನಗರದ ಅನೌಪಚಾರಿಕ ದರ್ಶನ!

ಲೇಹಿನ ಹೊಸ ಬೆಳಗು, ಆರೋಗ್ಯದಲ್ಲಿ ನಮಗೆ ಲೇಸನ್ನೇ ಹಾರೈಸಿತು. ಸಣ್ಣದಾಗಿ ಸುರಿಯುತ್ತಿದ್ದ ಮಂಜಿನಲ್ಲಿ, ನಾವಿಬ್ಬರು ಸಣ್ಣ ತಿರುಗಾಟಕ್ಕೆ ಹೋಟೆಲ್ ಎದುರಿನ ‘ಮುಖ್ಯ ರಸ್ತೆ’ಯನ್ನೇ ಆಯ್ದುಕೊಂಡೆವು. ನಿಜದಲ್ಲಿ ಇದು ಎರಡು ಕಾರು ಎದುರು ಬದಿರಾದರೆ, ಒಂದು ತುಸು ಹಿಂದೋ ಮುಂದೋ ಸರಿದು, ಮೈ ಒರೆಸಿದಂತೇ ದಾಟುವ ಸ್ಥಿತಿಯಷ್ಟು ಸಪುರದ್ದು ಮತ್ತು ಅಂಕಾಡೊಂಕು. ಸಾಲದ್ದಕ್ಕೆ ಬಿಗಿಯಿಲ್ಲದ ಅಂಚುಗಳು, ಕುಶಿ ಬಂದಂತೆ ವಿರಮಿಸಿದ ವಾಹನಗಳು… ಅವ್ಯವಸ್ಥೆಗಳು ಅಸಂಖ್ಯ. ಎಲ್ಲಿಗೋ ಹೊರಟು ಎಲ್ಲಿಗೋ ತಲಪುವಂತೆ, ಆ ರಸ್ತೆ ನಮ್ಮನ್ನು ಪೇಟೆಯ ಹೃದಯ ಭಾಗದ ಭಾರೀ ವಹಿವಾಟು ಕೇಂದ್ರಕ್ಕೇ (ಮಾಲ್ ರೋಡ್?) ಮುಟ್ಟಿಸಿತ್ತು. ಅಲ್ಲಿ ನಗರಾಡಳಿತ ಬುದ್ಧಿ ಉಪಯೋಗಿಸಿ, ಆ ವಲಯಕ್ಕೆ ಸುಂದರ ಕಟ್ಟೆ, ಮೆಟ್ಟಿಲು, ಬೇಲಿ ಮಾಡಿ, ವಾಹನ ಪ್ರವೇಶ, ತಂಗುದಾಣಗಳನ್ನೇ ನಿರಾಕರಿಸಿತ್ತು. ಮಳಿಗೆಗಳು (ತೆರೆದಿರಲಿಲ್ಲ) ಮತ್ತು ನಡೆಮಡಿಗಳನ್ನು ಸಾಕಷ್ಟೂ ವಿಸ್ತಾರವಾಗಿಯೂ ಜನಸ್ನೇಹಿಯಾಗಿಯೂ ರೂಪಿಸಿದ್ದರು, ಅಲಂಕಾರಗೊಳಿಸಿದ್ದರು. ಎರಡೂ ಮಗ್ಗುಲಿನ ಮಳಿಗೆಗಳ ನಡುವೆ ಸಾಕಷ್ಟು ವಿಸ್ತಾರದ ಅಂಗಳ, ಆಸನ ಉಳಿಸಿ ಜನ ಸಂಚಾರ, ವಿರಾಮಗಳಿಗೂ ಅವಕಾಶ ಕಲ್ಪಿಸಿತ್ತು. ಆ ವಲಯದ ಒಂದು ಅಂಚಿನಲ್ಲಿ ಅಲಂಕಾರಿಕವಾಗಿ ನಿಲ್ಲಿಸಿದ್ದ ಚಿತ್ರ ಫಲಕವನ್ನು (ಸೆಲ್ಫೀ ಪಾಯಿಂಟ್ ಅನ್ನಿ!) ನಾವು ಪೂರ್ಣ ಕುಶಿಯಿಂದ (ಚಿತ್ರ ನೋಡಿ) “ವಿ ಟೂ ಲವ್ ಲೇಹ್” ಎಂದೇ ಓದಿಕೊಂಡೆವು.

ಮಾಲ್ ವಲಯಕ್ಕೆ ಹಗಲಿರುಳು ಪಕ್ಕಾ ಬಂದೂಕುಧಾರಿ ಸೈನಿಕರ ಪಹರೆ ಇತ್ತು. ಇದಕ್ಕೆ ನನಗೆರಡು ಮುಖ್ಯ ಕಾರಣಗಳು ಕಾಣುತ್ತಿವೆ: ೧. ಲದ್ದಾಕ್ ಪಾಕಿಸ್ತಾನ ಮತ್ತು ಚೀನಾಗಳ ಗಡಿ ಪ್ರದೇಶದಲ್ಲಿದೆ ಮತ್ತು ಸದಾ ವಿದೇಶೀ ಭಯೋತ್ಪಾದಕರ ನೆರಳಿನಲ್ಲೂ ಇದೆ.  ಕಾರ್ಗಿಲ್, ಸಿಯಾಚಿನ್ ಗಳ ದೊಡ್ಡ ಮಟ್ಟದ ಕತೆಯೆಲ್ಲ ನಿಮಗೆ ತಿಳಿದಿರುವುದೇ ಇದೆ.

೨. ಲದ್ದಾಕ್ ಮೊದಲು ಜಮ್ಮು ಕಾಶ್ಮೀರಗಳ ಭಾಗವಾಗಿತ್ತು. ಬಹು ದೀರ್ಘ ಹೋರಾಟದ ಮೇಲೆ ಇದು ಜ.ಕಾ ದಿಂದ ಕಳಚಿಕೊಂಡರೂ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯ್ತು. ಈಚಿನ ದಿನಗಳಲ್ಲಿ ಲದ್ದಾಕ್ ಕೇಂದ್ರಾಡಳಿತ ಪ್ರದೇಶವಾಗಿ, ದಿಲ್ಲಿಯಿಂದಲೇ ಶೋಷಣೆಗೊಳಗಾಗಿದೆ. ಇದರಿಂದಲೂ ಮುಕ್ತಿ ಪಡೆಯುವ ಹೋರಾಟದಲ್ಲಿ, ಎರಡು ವರ್ಷಗಳ ಹಿಂದೆಯೇ ಸೋನಾಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಮತ್ತಿಂದು (೨೧-೭-೨೬), ಅದರದ್ದೇ ಮುಂದುವರಿಕೆಯಾಗಿ, ಉತ್ತಮ ಶೈಕ್ಷಣಿಕ ಬೇಡಿಕೆಯೊಡನೆ, ಅದೇ ವಾಂಗ್ಚುಕ್ ದಿಲ್ಲಿಯ ಜಂತರ್ ಮಂತರಿನಲ್ಲಿ ಮತ್ತೆ ಉಪವಾಸ ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೆ ‘ಜಿರಳೆ’ (ಸಿಜೆಪಿ) ಹೆಸರಿನಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಭಾರೀ ಬೆಂಬಲವೂ ಬೆಳೆಯುತ್ತಿದೆ. ಅದರಿಂದ ಭಯಗೊಂಡ ಕೇಂದ್ರ ಸರಕಾರ ವಾಂಗ್ಚುಕ್ ಹುಟ್ಟೂರಿನಲ್ಲಿ ಜನ ದಂಗೆ ಏಳದಂತೆ ಮಾಡಿದ ಬಂದೋಬಸ್ತೂ ಇದ್ದಿರಬಹುದು….

ಹಿಂದಿರುಗಲು ನಾವು ಅವರಿವರಲ್ಲಿ ವಿಚಾರಿಸಿ, ಭಾರೀ ಕಟ್ಟಡಗಳ ನಡುವಣ ಒಳದಾರಿ ಅನುಸರಿಸಿದೆವು. ಭವ್ಯ ಮಸೀದಿಯೊಂದರ ಒತ್ತಿನ ಗಲ್ಲಿ ನುಗ್ಗಿ, ಬಳುಕಾಡುವ ಗಲ್ಲಿಗಳಲ್ಲಿ, ಅಸಂಖ್ಯ ಕವಲುಗಳಲ್ಲಿ ದಿಕ್ಕಿನ ಅಂದಾಜು ಉಳಿಸಿಕೊಂಡು ನಡೆದೆವು. ಪಾಗಾರ, ಪ್ರತ್ಯೇಕತೆಗಳ ಹಂಗಿಲ್ಲದೇ ಮಸೀದಿಗೆ ತಾಗಿದಂತೆ ಮನೆಗಳು, ಗುರುದ್ವಾರ, ಹತ್ತೆಂಟು ರಿಪೇರೀವಾಲರು… ಇದರೊಡನೆ ಅಡ್ಡಾದಿಡ್ಡೀ ಆಡುತ್ತಾ ಸಾಗಿತ್ತು ತೆರೆದ ಚರಂಡಿ. ಆದರೆ ಅದನ್ನು ಉದ್ದಕ್ಕೂ ಬಲವಾದ ಸರಳುಗಳ ಬಲೆಯಲ್ಲಿ ಮುಚ್ಚಿದ್ದರು. ಆದರೆ ಯಾವುದೇ ಆಕಸ್ಮಿಕದಲ್ಲಿ (ಕಸ ಕಟ್ಟುವುದೋ, ಕೈಜಾರಿ ಅಗತ್ಯದ ವಸ್ತುಗಳು ಬೀಳುವುದೋ…) ಅವನ್ನು ಯಾರೂ ತೆರೆದು ಮುಚ್ಚುವ ವ್ಯವಸ್ಥೆಯೂ ಇತ್ತು. ಹಾಗೆಂದು ಮುಚ್ಚಳಗಳ್ಳರು ವಂಚಿಸದಂತೆ, ಅವನ್ನು ಒಂದು ಮಗ್ಗುಲಿನ ಚೌಕಟ್ಟಿಗೆ ಬಲವಾದ ಬಿಜಾಗರಿಗಳೊಡನೆ (ಹಿಂಜಸ್) ಬೆಸೆದಿದ್ದರು! ನೆನಪಿಸಿಕೊಳ್ಳಿ, ಹಿಂದೆಲ್ಲ ನಮ್ಮ ನಗರಗಳ ಕೊಳಚೆವಾಹಿನಿಯ ಮಾನವಗುಂಡಿಗಳನ್ನು ಮುಚ್ಚುತ್ತಿದ್ದ ಬೀಡುಗಬ್ಬಿಣದ ಮುಚ್ಚಳಗಳನ್ನು ಕದ್ದು ಮಾರುವುದು ದೊಡ್ಡ ದಂಧೆಯೇ ಆಗಿತ್ತು. ಈಗ ಅದಕ್ಕೇ ಕಾಂಕ್ರೀಟ್ ಮುಚ್ಚಳಗಳು ಬಂದಿವೆ.

ರೊಟ್ಟಿಯಂಗಡಿ ಕಿಟ್ಟಪ್ಪಾ | ನನಗೊಂದು ರೊಟ್ಟಿಯ ತಟ್ಟಪ್ಪಾ | ದಪ್ಪಗೆ ತಟ್ಟೀ ಕೆಂಪಗೆ ಸುಟ್ಟೂ | ನನಗೊಂದು ರೊಟ್ಟಿಯ ಕಟ್ಟಪ್ಪಾ…. ಬಾಲ್ಯದಲ್ಲಿ ನಿಮ್ಮಲ್ಲಿ ಕೆಲವರು ಕೇಳಿರಬಹುದು. ನಾವು ಈ ಗಲ್ಲಿ ಸಾಲಿನಲ್ಲಿ ಎರಡು ಮೂರು ದೊಡ್ಡ ಭಟ್ಟಿಯಿಟ್ಟುಕೊಂಡ (ಚೂಲಾ) ರೊಟ್ಟಿಯಂಗಡಿಗಳನ್ನೂ ಕಂಡೆವು. ಹಿಂದೆ ಶ್ರೀನಗರದಲ್ಲಿ ಇಂಥದ್ದೇ ಒಂದು ಅಂಗಡಿಯಿಂದ ಸುಡುಸುಡು ರೊಟ್ಟಿ ಕೊಂಡು ತಿಂದ ಸವಿನೆನಪು ಬಂದರೂ ಎತ್ತರದ ಯಾತನೆಗೆ ಇದು ಸೇರುವುದು ಬೇಡವೆಂದು ಕಾಲು ಬೆಳೆಸಿದ್ದೆವು. ಒಂದೆಡೆ ಗುರುದ್ವಾರ ಗುರುದ್ವಾರದ ಭಾರೀ ಮರವೊಂದು ತನ್ನ ಅಷ್ಟೇ ಭಾರೀ ಕೊಂಬೆಯೊಂದನ್ನು ಗಲ್ಲಿಯ ಈ ಗೋಡೆಯಿಂದ ಇನ್ನೊಂದು ಬದಿಯ ಗೋಡೆಗೆ ಆನಿಸಿ, “ಸಮ್ಜೋ ಬಂಧೇ (ತಿಳಿದಿರು ಮನುಜಾ) ನಾವೆಲ್ಲರೂ ಒಂದೇ…” ಎಂದು ಸಾರಿದಂತಿತ್ತು. ಕಿತ್ತು ಹೋದ ನೆಲ ಹಾಸೂ ಮೋರಿ ಮುಚ್ಚಳ, ಕಸ, ಕಂಬಾದಿಗಳನ್ನೆಡವದಂತೆ ನೆಲ ನೋಟ ಹೆಚ್ಚಾದ ಎಷ್ಟು ಮಂದಿಯ ತಲೆ ಇದಕ್ಕೆ ಹೆಟ್ಟಿ ಶಾಪ ತಿಂದಿದೆಯೋ ಎಂದು ದೇವಕಿಯಲ್ಲಿ ಪಿಸು ನುಡಿದಿದ್ದೆ. ಅಷ್ಟರಲ್ಲಿ ದಾರಿಹೋಕ ಸರ್ದಾರ್ಜೀಯೊಬ್ಬ ಆ ಪವಿತ್ರ ಬೊಡ್ಡೆಗೆ ತಲೆ ಮುಟ್ಟಿಸಿ, ಧ್ಯಾನಿಸುವುದು ಕಂಡು ಮಾತು ನುಂಗಿಕೊಂಡೆ. ಅಂದಿನ ಅಧಿಕೃತ ಕಲಾಪವ ಲೇಹ್ ನಗರ ದರ್ಶನವೇ ಆದ್ದರಿಂದ, ನಾವು ಬೇಗನೆ ಹೋಟೆಲಿಗೆ ಮರಳಿ ತಿಂಡಿ ತಿಂದು ಸಜ್ಜಾದೆವು.

ಲೇಹ್ ಅರಮನೆ

ತೀರಾ ಒರಟು ಬಂಡೆಗಳದೇ ಬೆಟ್ಟ ಗುಡ್ಡಗಳಿಗೆ ಹೊಂದಿಕೊಂಡೇ ಮೈ ತಳೆದಿದೆ ಲೇಹ್ ಅರಮನೆ. ಆಯ್ದ ಬೆಟ್ಟದಲ್ಲಿ ಕ್ರಿಶ ಹದಿನೇಳನೇ ಶತಮಾನದ ಬೌದ್ಧ ಅರಸ, ಅನುಕೂಲ ಮತ್ತು ಸ್ವಲ್ಪ ಅಲಂಕಾರ ಹೊಂದಿಸಿಕೊಂಡು ಕಟ್ಟಿದ ಈ ಅರಮನೆ, ಹೊರನೋಟಕ್ಕೆ ಬಹು ಮಾಳಿಗೆಗಳ ಮನೆಯಂತೇ ತೋರುತ್ತದೆ. ವಾಸ್ತವದಲ್ಲಿ ಇದು ಒಂಬತ್ತು ಸ್ತರದ ಒಂದೇ ಕಟ್ಟಡ. ಬಹುತೇಕ ಬೆಟ್ಟ ಗುಡ್ಡಗಳ ನಾಡಿನ ಮಜಲು ಕೃಷಿಯಂತೇ ಇದನ್ನು ಒಂಬತ್ತು ಮಜಲಿನ ಮನೆ ಎಂದೂ ಹೇಳಬಹುದು. ಇದರ ಒಳಗಿಂದೊಳಗೇ ಅಗತ್ಯ ಮತ್ತು ಅವಕಾಶಕ್ಕೆ ತಕ್ಕಂತೆ ರಚಿಸಿದ ಹಳೆಗಾಲದ್ದೇ ಮೆಟ್ಟಿಲ ಸರಣಿಗಳೂ ಇವೆ (ಕಲ್ಲು, ಗಚ್ಚು, ಮರ). ಕೆಲವು ಪ್ರದರ್ಶಿಕೆಗಳು, ಬಾಲ್ಕನಿಗಳು, ಮುಕ್ತ ಜಗಲಿಗಳು, ಕೆಲವು ಖಾಸಾ ಉಪಯೋಗದಲ್ಲಿದ್ದು ಸಾರ್ವಜನಿಕರಿಗೆ ಮುಚ್ಚಿಕೊಂಡಿದ್ದವು, ಸಣ್ಣ ಪುಟ್ಟ ಹರಕು ಮುರುಕುಗಳನ್ನು ಕಳೆದು ಏಳನೇ ಸ್ತರದವರೆಗೂ ನಾವು ಏರಿದ್ದೆವು. ಎಂಟು ಮತ್ತು ಒಂಬತ್ತನೇ ಸ್ತರಗಳನ್ನು, ಭದ್ರತೆಯೋ ಶೈಥಿಲ್ಯವೋ ನೆಪ ಮಾಡಿ, ಸಾರ್ವಜನಿಕರಿಗೆ ನಿರ್ಬಂಧಿಸಿದ್ದಾರೆ.

ಅಂದು ವಿಶ್ವಯೋಗ ದಿನದ ಪ್ರಯುಕ್ತ ಅರಮನೆ ಪ್ರವೇಶ ಸಾರ್ವಜನಿಕರಿಗೆ ಉಚಿತವಿತ್ತು. ಒಂದು ಹಂತದ ತಾರಸಿಯಲ್ಲಿ ಯೋಗಾಚಾರ್ಯ ಒಬ್ಬರು ಉಚಿತ ಯೋಗ ಪಾಠವನ್ನೂ ನಡೆಸಿದ್ದರು. ನಮ್ಮ ಕೆಲ ಉತ್ಸಾಹಿಗಳು ಐದು ಹತ್ತು ಮಿನಿಟು ಅದರಲ್ಲಿ ಪಾಲ್ಗೊಂಡದ್ದೂ ಆಯ್ತು. ಉಳಿದಂತೆ ರಾಜಸತ್ತೆಯ ಇತಿಹಾಸ, ಕಡತ ಸಂಗ್ರಹ, ಪ್ರದರ್ಶಿಕೆಗಳನ್ನೆಲ್ಲ ಕ್ರಮವಾಗಿ ನೋಡಿ, ಹೊರಬಿದ್ದೆವು. ಅರಮನೆ ಬೆಟ್ಟದ ಎದುರಿನ ಬೆಟ್ಟದಲ್ಲೂ  ಇಂಥದ್ದೇ ಕೆಲವು ಮಹಾ ರಚನೆಗಳು ಮೆರೆದಿದ್ದವು. ಅವೂ ಈ ಅರಮನೆಯದ್ದೇ ಭಾಗವೇ? ಒಟ್ಟಾರೆ ಅರಮನೆಯ ಅಂಶದಲ್ಲಿ ಇಂದೂ ರಾಜಮನೆತನದವರು ವಾಸಿಸುತ್ತಿದ್ದಾರೆ ಎಂದೂ ಕೇಳಿದ್ದೆ, ಹಾಗಾದರೆ ಅವರು ಅಲ್ಲಿರಬಹುದೇ? … ನನಗೆ ಉತ್ತರ ಸಿಗಲಿಲ್ಲ!

ಒಂದು ಬೌದ್ಧ ಮಠ

ಹೆಮಿಸ್ – ಒಂದು ಬೆಟ್ಟದ ಒಳಮೈಯಲ್ಲಿ, ವಿಸ್ತಾರ ರಚನೆಗಳೊಡನೆ ಹಬ್ಬಿಕೊಂಡ ಭಾರೀ ಮಠ ಸಂಕೀರ್ಣ. ಅದರ ಸಾಂಪ್ರದಾಯಿಕ ವಾಸ್ತುವಿನ ಭವ್ಯ ಕೇಂದ್ರ ಆರಾಧನಾ ಸ್ಥಳ ಒಂದನ್ನುಳಿದು ಬೇರೆಡೆ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧವಿದ್ದಂತಿತ್ತು. ನಮಗೆ ಬೌದ್ಧ ಮಠ, ಆರಾಧನೆಗೆಳ ಕುರಿತು ಸಂಕ್ಷಿಪ್ತ ಪರಿಚಯ ಮಾಡಲು ಮಾರ್ಗದರ್ಶಿಯನ್ನೂ ಬಾಲಕೃಷ್ಣ ವ್ಯವಸ್ಥೆ ಮಾಡಿದ್ದರು. ನಾವು ಹೋದಾಗ ಆರಾಧನೆ ನಡೆದಿತ್ತು. ಓರ್ವ ಹಿರಿಯನ ಮಂದ್ರ ಧ್ವನಿಯ (ಮೈಕಿನ) ಪಠಣವನ್ನು, ಆರಾಧನಾ ಮೂರ್ತಿಯ ಸುತ್ತು ಎರಡು ಮೂರು ಸುತ್ತಿನಲ್ಲಿ ಕುಳಿತ ಆಬಾಲ ವೃದ್ಧ (ಮಹಿಳೆಯರನ್ನುಳಿದು!) ಕಾಷಾಯ ವಸ್ತ್ರ ಧಾರಿಗಳು, ಮೆಲು ದನಿಯಲ್ಲಿ ಮರುಪಠಿಸಿದ್ದರು. ಆಗೀಗ ಅವರ ಸಾಂಪ್ರದಾಯಿಕ ಜಾಗಟೆಯೋ ಢೋಲೋ ಕೊಂಬೋ ಗಾಂಭೀರ್ಯವನ್ನು ಎತ್ತಿ ಕೊಡುತ್ತಿದ್ದವು. ಬಹುಮಂದಿ ತಾಳೆ ಗರಿಗಳ ಕಡತವನ್ನೋ ಪುಸ್ತಕಗಳನ್ನೋ ಅನುಸರಿಸಿದ್ದರೆ, ಚರವಾಣಿ, ಟ್ಯಾಬ್ಲೆಟ್ಟಿನಂಥ ಡಿಜಿಟಲ್ ಸಲಕರಣೆಗಳೂ ಮಡಿಯಿಲ್ಲದೆ ಬಳಕೆಯಲ್ಲಿದ್ದವು. ಇಷ್ಟಿದ್ದೂ ಅವರ ಸಾಲುಗಳ ನಡುವೆ ಸಾರ್ವಜನಿಕರು ಮೌನವಾಗಿ ಪ್ರದಕ್ಷಿಣೆ ಹಾಕಿ ಹೊರನಡೆಯುವ ಅವಕಾಶವನ್ನು ಮುಕ್ತವಾಗಿಟ್ಟಿದ್ದರು, ಶಿಸ್ತನ್ನು ಸೌಮ್ಯ ಆಂಗಿಕಗಳಲ್ಲೇ ಚೆನ್ನಾಗಿ ನಿಭಾಯಿಸಿದ್ದರು.

ಮುಂದೆ ತಿಕ್ಸೆ, ಶೈ ಪ್ಯಾಲೇಸ್ ಎಂಬ ಬೌದ್ಧ ಕೇಂದ್ರಗಳಿಗೂ ಹಾಗೇ ಅನೇಕ ಸ್ತೂಪಗಳನ್ನೂ ಪ್ರಾಸಂಗಿಕವಾಗಿ ನೋಡಿದೆವು. ಎಲ್ಲವೂ ಪರಿಸರದ ಆಯ್ಕೆ, ರಚನಾ ಬಂಧಗಳಲ್ಲಿ ಸರಳವಿದ್ದರೂ ಭವ್ಯ ಹಾಗೂ ದೃಢವಾಗಿಯೂ ಇದ್ದವು. ಅಲ್ಲಿನ ಪತಾಕೆ, ಫಲಕಗಳ ಭಾಷೆ ನಮಗೆ ಅಪರಿಚಿತ. ಒಟ್ಟಾರೆ ಲದ್ದಾಕ್ ವಲಯದಲ್ಲಿ ಮಠ ಮಂದಿರಗಳಿಲ್ಲದೆಯೂ ಬೌದ್ಧರದೇ ಅಸಂಖ್ಯ ಸ್ತೂಪಗಳನ್ನು ಕಾಣುತ್ತೇವೆ. ಅವುಗಳ ಬುಡದಲ್ಲಿ, ಸಂಪರ್ಕ ಕಟ್ಟೆಗಳಲ್ಲಿ ಅಸಂಖ್ಯ, ವಿವಿಧ ಗಾತ್ರಗಳ ಶಿಲಾ ಫಲಕಗಳ ಒಟ್ಟಣೆ ಇರುತ್ತಿತ್ತು. ಅದರ ಮೇಲೂ ಅವರದೇ ಭಾಷೆಯಲ್ಲೇನೋ (ಶ್ಲೋಕವೋ ಹರಕೆದಾರರ ಹೆಸರೋ…) ಕೆತ್ತಿರುತ್ತಿದ್ದರು. ಆ ಕುರಿತ ಪೂರ್ವ ತಿಳುವಳಿಕೆಯಿಲ್ಲದೇ ನಾವು ತತ್ಕಾಲೀನ ಪ್ರಶ್ನಿಸುವುದಾಗಲೀ ಬರಹಗಳನ್ನು ಅರ್ಥೈಸಿಕೊಳ್ಳುವುದಾಗಲೀ ಮುಂದೆ ಮರೆಯುವುದಕ್ಕಷ್ಟೇ ಎಂಬ ಅರಿವಿನೊಡನೆ ನಾನು ದೂರ ಉಳಿದೆ. (ಖಂಡಿತಾ ತಿರಸ್ಕಾರವಲ್ಲ)

ಸಿನಿಮಾ ಹುಚ್ಚು

‘ಫೈವ್ ಪಾಯಿಂಟ್ ಸಮ್ ಒನ್’ ಎಂಬ ಹೆಸರಿನೊಡನೆ, ಮಿಲಿಯಾಂತರ ಪ್ರತಿಗಳ ಮಾರಾಟ ಭಾಗ್ಯ ಕಂಡ, ಭಾರತೀಯ ಇಂಗ್ಲಿಷ್ ಕಾದಂಬರಿಯೋ ಲೇಖಕ ಚೇತನ್ ಭಗತ್ ಹೆಸರೋ ನಮ್ಮಲ್ಲಿ ಬಹುಮಂದಿಗೆ ತಿಳಿದೇ ಇಲ್ಲ. ಆದರೆ ಅದನ್ನು ಆಧರಿಸಿ, ಆಮಿರ್ ಖಾನ್ ನಟಿಸಿ, ನಿರ್ಮಿಸಿದ ಹಿಂದೀ ಸಿನಿಮಾ ತ್ರೀ ಈಡಿಯಟ್ಸ್ ಕುರಿತು (ಸಿನಿಮಾ ಚೆನ್ನಾಗಿಯೇ ಇದೆ) ಹುಚ್ಚು ಹತ್ತಿಸಿಕೊಂಡವರು ಇಲ್ಲವೆಂದರೆ ತಪ್ಪಾದೀತು! ಮೂಲ ಕತೆಯ ನೆಲೆಯೆಂದೇ ಸಿನಿಮಾದಲ್ಲಿ ಬರುವ ಲದ್ದಾಕ್ ಹೊರವಲಯ ಚಿತ್ರೀಕರಣದ ಆಕರ್ಷಣೆ ಹೆಚ್ಚಿನ ಪ್ರವಾಸಿಗಳು ಕಟ್ಟಿಕೊಂಡೇ ಬಂದಂತಿತ್ತು. ಸಿನಿಮಾಕ್ಕೆ ಮಾಡಿದ್ದ ಕೆಲವು ತೋರಿಕೆಯ ಸಲಕರಣೆಗಳನ್ನು ಒಂದೆಡೆ ಒಟ್ಟೈಸಿ, ಸಿನಿ-ನಾಯಕನ ಹೆಸರಂಟಿಸಿ (ರ್ಯಾಂಚೋ ಶಾಲೆ!) ಪ್ರವಾಸೀ ಸಂಗತಿ ಮಾಡಿದ್ದಕ್ಕೆ ನಾವು ಭೇಟಿ ಕೊಟ್ಟಿದ್ದೆವು. ಬೇಸರದ ಸಂಗತಿ ಎಂದರೆ…

ತ್ರೀ ಈಡಿಯಟ್ಸ್ ಸಿನಿಮಾ ಪ್ರತಿಪಾದಿಸಿದ ಸತ್ಯವನ್ನು ಗಂಭೀರವಾಗಿ ಸ್ವೀಕರಿಸಿದವರು ತುಂಬಾ ಕಡಿಮೆ. ಅದಕ್ಕೆ  ಸರಿಯಾಗಿ, ಸಿನಿಮಾದ ರಮ್ಯ ಭಾಗಗಳನ್ನಷ್ಟೇ ಸಂದರ್ಶಿಸಿದ ನಮ್ಮ ಲದ್ದಾಕ್ ಭೇಟಿ, ಅಪೂರ್ಣ ಎಂದೇ ನನಗನ್ನಿಸಿತು. ಕಾದಂಬರಿ ಅಥವಾ ಸಿನಿಮಾಕ್ಕೆ ಮೂಲಪ್ರೇರಣೆಯಾದ ಸೋನಾಂ ವಾಂಗ್ಚುಕ್ (ಸಿನಿಮಾದ ರಣಛೋಡ್ ದಾಸ್ ಶಾಮಲದಾಸ್ ಚಂಚಡ್ – ಗೆಳೆಯರ ಬಾಯಲ್ಲಿ ರ್‍ಯಾಂಚೋ ಅಥವಾ ಫುನ್ಸುಕ್ ವಾಂಗ್ಡೂ) ಅವರ ಒಂದೆರಡಾದರೂ ನಿಜ ಸಾಧನೆಗಳನ್ನು ನಾವು ನೋಡಬೇಕಿತ್ತು, ಉದಾಹರಣೆಗೆ…

ಶೀತಲ ಮರುಭೂಮಿ ಎಂದೇ ಕುಖ್ಯಾತವಾದ ಲದ್ದಾಕಿನ ನೀರ ಕೊರತೆಗೆ, ಯಾವುದೇ ಬಹುಕೋಟಿ ರೂಪಾಯಿಯ ನಿರ್ಮಾಣ, ಪರಿಸರ ಹಾನಿ ಮಾಡದೇ ಸೋನಾಂ ವಾಂಗ್ಚುಕ್ ಕೊಟ್ಟ ಬಹು ಪರಿಣಾಮಕಾರಿ ಪರಿಹಾರ – ಬರ್ಫದ ಸ್ತೂಪ (Ice stupas). ಅಲ್ಲದೇ ಲದ್ದಾಕಿನ ಶೈಕ್ಷಣಿಕ ಕೊರತೆಯನ್ನು ತುಂಬಲು ಕೈಗೊಂಡ ಯೋಗ್ಯ ಕಟ್ಟಡ ಸಹಿತ ಬಹುವ್ಯಾಪ್ತಿಯ ಕಲಾಪಗಳದೇ ವಿಸ್ತರಣೆಯೇ ವಾಂಗ್ಚುಕ್ ಅವರ ಜಂತರ್ ಮಂತರ್ ನಿರಶನ ಪ್ರತಿಭಟನೆ. ಆ ಸಂಸ್ಥೆಗಳ ನಿತ್ಯ ಕಲಾಪಕ್ಕೆ (ಅವು ಪ್ರವಾಸೀ ಪ್ರದರ್ಶನಕ್ಕಿರುವವಲ್ಲ ಎಂಬ ಅರಿವಿನೊಡನೇ) ಅಡ್ಡಿಯಾಗದಂತೆ ನೋಡಬಹುದುತಿತ್ತು, ಲದ್ದಾಕಿನ ಅತಿ ಚಳಿಗಾಲಕ್ಕೆ (ಅಲ್ಲಿನ ಸಾರ್ವಕಾಲಿಕ ದಾಖಲೆ -೬೦ ಡಿಗ್ರಿ ಸೆಲ್ಶಿಯಸ್) ಜನಸಾಮಾನ್ಯರ ವಸತಿಗಳನ್ನು ಬೆಚ್ಚನ್ನ ಗೂಡುಗಳಾಗುಳಿಸಿದ ಸಾಧನೆ. ಗಡಿರಕ್ಷಕರಿಗೆ ಬರ್ಫದ ಮೇಲೂ ಬೆಚ್ಚನ್ನ ವಸತಿ ಕಲ್ಪಿಸಿದ ಸೌರ ಗುಡಾರ… ಒಂದನ್ನೂ ನಾವು ನೋಡಲೇ ಇಲ್ಲ. ಇಂದು ಲದ್ದಾಕ್ ವಲಯ ಮೀರಿ, ಕೇವಲ ಭಾರತದ ಶೈಕ್ಷಣಿಕ ಸಮಸ್ಯೆಯನ್ನು (ಗಮನಿಸಿ, ರಾಜಕೀಯವಲ್ಲ) ಶಾಂತಿಯುತವಾಗಿ ದಮನಿಸಲು ತ್ರಿವಿಕ್ರಮನಾಗಿ ಬೆಳೆಯುತ್ತಿರುವ ಸೋನಾಂ ವಾಂಗ್ಚುಕ್ ಅವರಿಗೆ ನಮ್ಮ ಬಳಗದಿಂದ ಕನಿಷ್ಠ ಮಾತಿನ ಗೌರವವೂ ಸಂದಂತೆ ಕಾಣಲಿಲ್ಲ. ತ್ರಗಳ ಪೊರೆ ಹರಿದು (ರ್ಯಾಂಚೋ ಶಾಲೆ, ಕುಂಡೆ-ಕುರ್ಚಿ, ಹಳದಿ ಸ್ಕೂಟರ್….), ಅಂಧ ಭಕ್ತಿಯ ಎದೆ ಸೀಳಿ, ವ್ಯಕ್ತಿ, ಪಕ್ಷ, ನಿರ್ಜೀವದ ನೆಲವನ್ನು ಮೀರಿದ ಜವಾಬ್ದಾರಿಯುತ ಭಾರತೀಯ ಜನತೆ ನಾವು ಎಂದು ನನಗನ್ನಿಸಲೇ ಇಲ್ಲ.

ಸೈನ್ಯ, ದೇಶಭಕ್ತಿಯ ಪರಮ ಸಂಕೇತವಲ್ಲಾ

ಲೇಹ್ ನಗರದರ್ಶನದಿಂದ ಮಧ್ಯಾಹ್ನದೂಟಕ್ಕೆ ಮತ್ತೆ ‘ಹಿಮಾಲಯ’ಗಳಿಗೇ ಮರಳಿದ್ದೆವು. ಹೋಳಿಗೆ ಸಹಿತ ಹಬ್ಬದೂಟವನ್ನೇ ಕೊಟ್ಟು, ಅಪೂರ್ವವಾಗಿ ಸಣ್ಣ ನಿದ್ದೆಗೂ ಅವಕಾಶ ಸಿಕ್ಕಿತ್ತು. ಅಪರಾಹ್ನದ ಮುಖ್ಯ ಸಂದರ್ಶನ ಲೇಹಿನ ಸೇನಾ ನೆಲೆಯ ಎರಡು ಹಂತದ ಭೇಟಿ. ಹಾಲ್ ಆಫ್ ಫೇಮ್ ಅರ್ಥಾತ್ ಲದ್ದಾಕ್ ಸೇನಾ ವಲಯದ ಕೀರ್ತಿಶೇಷರ ಪ್ರದರ್ಶನಾಲಯಕ್ಕೆ ಮೊದಲು ಹೋಗಿದ್ದೆವು. ನನ್ನ ಚಿಕ್ಕಪ್ಪಂದಿರಿಬ್ಬರು, ಸೈನಿಕ ಹಾಗೂ ಕಿರಿಯ ಅಧಿಕಾರಿಯಾಗಿ ಭಾರತೀಯ ಸೇನೆಯಲ್ಲಿ ಕೆಲ ವರ್ಷಗಳ ‘ಹೊಟ್ಟೆಪಾಡು’ ಮಾಡಿ ಬಂದ ಅನುಭವಿಗಳು. ಆಪ್ತ ಮಾತುಗಳಲ್ಲಿ ಅವರೆಂದೂ ಸೇನಾ ಸೇವೆಯೇ ದೇಶಸೇವೆ ಎಂದು ಹೇಳುತ್ತಿರಲಿಲ್ಲ. ೧೯೬೨ರಲ್ಲಿ ನನ್ನ ತಂದೆ, ಮಡಿಕೇರಿ ಸರಕಾರೀ ಕಾಲೇಜ್ ಅಧ್ಯಾಪಕತನದ ಜತೆಗೆ ಅರೆಕಾಲಿಕ ಎನ್ಸಿಸಿ ಅಧಿಕಾರಿಯಾಗಿದ್ದರು. ಅಂದು ಸಮನಿಸಿದ ಚೀನಾ ಯುದ್ಧದ ತುರ್ತಿನಲ್ಲಿ ಸೇನೆ ಕೊಟ್ಟ ಕರೆಗೆ ಓಗೊಟ್ಟು ತಂದೆ, ಮೂರು ವರ್ಷದ ಪೂರ್ಣಾವಧಿ ಸೇನಾ ಸೇವೆಗೆ ಧುಮುಕ್ಕಿದ್ದರು. ಆದರೆ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ತೋರಿಕೆಯ ಹಿಂದಿನ ಕೊಳಕಿಗೆ ಹೇಸಿ, ಎರಡೇ ವರ್ಷದಲ್ಲಿ ಆರ್ಥಿಕ ನಷ್ಟದೊಡನೆ ರಾಜೀನಾಮೆ ಕೊಟ್ಟು, ಮೂಲವೃತ್ತಿಗೆ ಮರಳಿದರು. (ಓದಿ ಪುಸ್ತಕ : ಎನ್ಸಿಸಿ ದಿನಗಳು) ಕಾಲೇಜ್ ವಿದ್ಯಾರ್ಥಿ ದೆಸೆಯ ನನ್ನ ಐದು ವರ್ಷಗಳ ಎನ್ಸಿಸಿ ಅನುಭವವೂ ಸೇನೆಯ ಕುರಿತು ನನ್ನಲ್ಲಿ ಸದಭಿಪ್ರಾಯ ಮೂಡಿಸಿಲ್ಲ. ಅವುಗಳ ಮೊತ್ತದಲ್ಲಿ ನನ್ನ ಅಭಿಪ್ರಾಯ ಹೇಳುವುದಿದ್ದರೆ….

ದೇಶದ ರಕ್ಷಣೆಗೆ ನಿಸ್ಸಂದೇಹವಾಗಿ ಸೇನೆ ಬೇಕು. ಆದರದು ನಮ್ಮ ಅತಿ ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದೇನೂ ಭಿನ್ನವಿಲ್ಲ. ರಾಜಕಾರಣಿಗಳಾದರೋ, ಪರೋಕ್ಷ ಭಯದಲ್ಲೇ ಸೇನೆಯ ಅಗತ್ಯವನ್ನು ಸದಾ ಉತ್ಪ್ರೇಕ್ಷಿಸಿ, ಹಣ ಮತ್ತು ಸವಲತ್ತುಗಳನ್ನು, ಪಕ್ಷಾತೀತವಾಗಿ ಮತ್ತು ಧಾರಾಳವಾಗಿಯೇ ಹರಿಸುತ್ತಾರೆ. ಹಾಗಾಗಿ ಹೊರನೋಟಕ್ಕೆ ಸೇನೆ, ಸದಾ ಧೈರ್ಯ, ಶಿಸ್ತು, ಸೌಂದರ್ಯದಲ್ಲೂ ಮಾತಿನ ಚಮಕುಗಳಲ್ಲೂ ರಾಜಕೀಯ ವ್ಯವಸ್ಥೆಯನ್ನೂ ಪ್ರಜಾಪ್ರಭುಗಳನ್ನೂ ಅವಕಾಶ ಸಿಕ್ಕಲ್ಲೆಲ್ಲ ಓಲೈಸುತ್ತದೆ. ಆ ನಿರೀಕ್ಷೆಗೆ ಸರಿಯಾಗಿ, ಹಾಲ್ ಆಫ್ ಫೇಮ್ ಶಿಸ್ತುಬದ್ಧವಾಗಿಯೂ ಸುಂದರವಾಗಿಯೂ ಇತ್ತು. ಅಲ್ಲಿನ ಪ್ರದರ್ಶಿಕೆಗಳಲ್ಲಿ ಹುತಾತ್ಮರ ಪಟಗಳು, ಗೋರಿಗಳು, ಶಸ್ತ್ರಾಸ್ತ್ರಗಳು…. ಒಮ್ಮೆ ಕಣ್ಣಾಡಿಸುವಂತೇ ಇದ್ದವು.

ಸೇನೆಯ ಎರಡನೇ ಹಂತದ ಬೆಳಕು-ಧ್ವನಿಗಳ ಪ್ರದರ್ಶನ ಕತ್ತಲಾದ ಮೇಲೆ ನಡೆಯಿತು. ಸಾರ್ವಜನಿಕರಿಗೆ ಬಯಲಿನಲ್ಲೂ ನೆತ್ತಿಗೆ (ಬಿಸಿಲು/ ಮಳೆ) ಮರೆಕೊಟ್ಟು, ಮೂರ್ನಾಲ್ಕು ಮೆಟ್ಟಿಲುಗಳಲ್ಲಿ ಆರಾಮಾಸನ ಕೊಟ್ಟಿದ್ದರು. ಸರಳ ಸುಂದರ ಸ್ಮಾರಕ, ಉದ್ಯಾನ, ಅಲಂಕಾರಿಕ ಕೊಳಗಳ ಮಗ್ಗುಲುಗಳಲ್ಲಿ ಎರಡೆರಡು ಪರದೆಗಳನ್ನು ನಿಲ್ಲಿಸಿದ್ದರು. ಉಳಿದಂತೆ ಲೇಸರ್, ಬಣ್ಣದ ಬೆಳಕು, ಕಿವಿದುಂಬುವ (ಕರ್ಕಶವಲ್ಲ) ವೀರವಾಕ್ಕುಗಳು, ಭಾವಪೂರ್ಣ ನುಡಿಗಳು, ಉದಾತ್ತ ಘೋಷಣೆಗಳೊಡನೆ ಕೆಲವು ಆಖ್ಯಾಯಿಕೆಗಳನ್ನು ಬಿತ್ತರಿಸಿದರು. ಎಲ್ಲಾ ಜನಪ್ರಿಯ ಕಲಾಪಗಳಂತೇ (ಹರಿಕಥೆ, ಭಜನೆ, ಚುನಾವಣಾ ಭಾಷಣಗಳು…) ಪ್ರೇಕ್ಷಕರ ಪೂರಕ ಘೋಷ, ಜೈಕಾರಗಳನ್ನು ಧಾರಾಳ ಮೊಗೆದುಕೊಂಡರು. ಕಲಾಪ ಮುಗಿದಾಗ, ನಮಗೆ ಹೋಟೆಲಿಗೆ ಮರಳಿ, ಉಂಡು ಮಲಗುವುದಕ್ಕೆ ಸಮಯವಾಗಿತ್ತು. ಸೈನ್ಯದ ಎರಡು ಹಂತಗಳ ನಡುವೆ ಸಿಕ್ಕ ಬಿಡುವಿನಲ್ಲಿ ನಾವು…

ಇನ್ನೊಂದೇ ಬೌದ್ಧ ಮಂದಿರ ಸಂದರ್ಶನ ಮಾಡಿ ಬಂದಿದ್ದೆವು, ಅಲ್ಲಿ ಎಂದಿನಂತೆ, ಬೆಟ್ಟದ ನೆತ್ತಿಯ ಸುಂದರ ಪರಿಸರ, ಸಾಂಪ್ರದಾಯಿಕ ಕಟ್ಟಡಗಳು, ಬೌದ್ಧ ಪ್ರದರ್ಶಿಕೆಗಳನ್ನು ವಿರಾಮದಲ್ಲೇ ನೋಡುತ್ತ ನಡೆದಿದ್ದೆವು. ಆದರೆ ಒಂದು ಉಪವಿಭಾಗದಲ್ಲಿ ಮಾತ್ರ ಸೀಮಿತ ಪ್ರವೇಶ, ಸಣ್ಣ ಮುಚ್ಚು ಮರೆ ನಡೆದಿತ್ತು. ತುಸು ಕುತೂಹಲದಲ್ಲಿ ಕೆದಕಿದಾಗ, ಒಳಗಿನ ಪ್ರಾಕೃತಿಕ ಕಗ್ಗಲ್ಲ ಭಿತ್ತಿಯಲ್ಲಿ ಕಾಳೀ ಬಿಂಬವಿದೆ. ಜನಪದದಲ್ಲಿ ಆ ನೆಲೆಗೆ ಕಾಳೀಮಂದಿರ ಎಂದೂ ಹೆಸರಿದೆ ಎಂದೇ ಕೇಳಿದೆವು. ಆದರೆ ‘ಧರ್ಮ ರಾಜಕಾರಣ’ ಮಂದಿರವನ್ನು ಮಂಕು ಬೆಳಕು ಮತ್ತು ಪರದೆಯಲ್ಲಿಟ್ಟು, ಮುನ್ನೆಲೆಯ ಬುದ್ಧ ಬಿಂಬವನ್ನಷ್ಟೇ ಪ್ರದರ್ಶಿಸ ಬಯಸಿದಂತಿತ್ತು. ಕುರಿತು ಪ್ರಶ್ನಿಸಿದಾಗ ಅಲ್ಲಿನ ಉಸ್ತುವಾರಿ ಮಂದಿ, ಹೆಗಲು ಮುಟ್ಟಿಕೊಂಡ ಕುಂಬಳ ಕಾಯಿ ಕಳ್ಳರಂತೆ, “ಇದು ಕಾಳೀ ಮಂದಿರವಲ್ಲ, ಬುದ್ಧ ಮಂದಿರ…” ಎಂದೇ ತೊದಲಿದರು.  ಇಂದು ದೇಶದ ನಿಜ ಸಂಸ್ಕೃತಿಯನ್ನೇ ಮುಕ್ಕುತ್ತಿರುವ ಧರ್ಮ ರಾಜಕಾರಣ ಲದ್ದಾಕಿನ ಇಂಥ ನೆಲೆಗಳನ್ನು ಮುಂದೇನು ಮಾಡೀತೋ ಎಂಬ ಆತಂಕ ನನಗುಳಿಯಿತು. ಇದಕ್ಕೆ ಹೆಚ್ಚು ಪೂರಕವಾದ ಇನ್ನೊಂದೇ ಪ್ರಸಂಗವನ್ನು ಮುಂದೆ ವಿಸ್ತರಿಸುತ್ತೇನೆ, ಬಿಡಿ.

ಮರು ಬೆಳಿಗ್ಗೆ ರೈಸಿಂಗ್ ಹಿಮಾಲಯದ (ನಮ್ಮ ಹೋಟೆಲ್) ದೊಡ್ಡ ಕಿಟಕಿಯ ಸುಂದರ ಚೌಕಟ್ಟನ್ನು ಚಿತ್ರವತ್ತಾಗಿ ತುಂಬಿ, ರೈಸಿಂಗ್ ಸನ್ನಿನ (ಉದಯ ಸೂರ್ಯ) ಬೆಳಕಿನಲ್ಲಿ ಮೀಯುತ್ತಿದ್ದ ಸಮೀಪದ ಕಾಳಿಕಾ ಬೆಟ್ಟ ನಮ್ಮನ್ನು ಮತ್ತೊಂದು ಬೆಳಗ್ಗಿನ ನಡಿಗೆಗೆ ಎಳೆದಿತ್ತು. ಈ ಬಾರಿ ಎದುರಿನ ಮುಖ್ಯ ರಸ್ತೆಯಲ್ಲಿ ಎಡದ ಕಟ್ಟೇರು ದಾರಿ ಅನುಸರಿಸಿದೆವು, ಬೆಟ್ಟವೇರಲು ದಾರಿಯೋ ಮೆಟ್ಟಿಲ ಸಾಲೋ ಸಿಕ್ಕೀತೇ ಎಂದು ಸ್ವಲ್ಪ ಹುಡುಕಾಟ ನಡೆಸಿದೆವು. ಆದರೆ ಮಾರ್ಗದಲ್ಲೇ ಸಣ್ಣ ಏದುಬ್ಬಸ ಬರುವಾಗ, ಮೂರೂ ದಿನದಿಂದ ಇದ್ದೂ ಇಲ್ಲದಂತೆ ಕಾಡುತ್ತಿದ್ದ ತಲೆಭಾರವೂ ನೆನಪಾಗಿ, ಎತ್ತರದ ಯಾತನೆಗೆ (ಔನ್ನತ್ಯದ ಸಂಕಟ) ಹೆದರಿ, ತಣ್ಣಗೆ ಹೋಟೆಲಿಗೆ ಮರಳಿದೆವು. ಅಲ್ಲಿ ರುಚಿಕರ, ಬಿಸಿ ತಿಂಡಿ ಕಾಫಿ ಸೇವಿಸುತ್ತಿದ್ದಂತೇ, ಬಾಲಕೃಷ್ಣರು ಅಂದಿನ (೨೨-೬-೨೬, ಸೋಮವಾರ) ಅಧಿಕೃತ ಕಾರ್ಯಕ್ರಮವನ್ನು ಘೋಷಿಸಿದರು….

 

“ಎರಡು ರಾತ್ರಿಯ ವಾಸಕ್ಕಷ್ಟೇ ಬೇಕಾದ ಕನಿಷ್ಠ ಸಾಮಾನುಗಳನ್ನು ಪ್ರತ್ಯೇಕಿಸಿ, ವ್ಯಾನುಗಳಿಗೆ ಹೇರಲು ಕೊಡಿ. ಮತ್ತೆ ಕೋಣೆ ಖಾಲಿ ಮಾಡಿ, ಉಳಿದ ಲಗ್ಗೇಜನ್ನು ಹೋಟೆಲಿನದೇ ರಕ್ಷಣಾ ವ್ಯವಸ್ಥೆಗೆ ಒಪ್ಪಿಸಿ. ಮತ್ತೆ  ವ್ಯಾನೇರಿ ಹೊರಡೋಣಾ – ಕಾರ್ಡೂಂಗ್ಲಾ ಚಲೋ…”

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *