[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್‌ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ ಮಾತುಗಳನ್ನು ಬರೆದು ಕಳಿಸುವವನಿದ್ದೆ. ಆ ದಿನವೇ ವಿಕ ತನ್ನ ಲೇಖನಮಾಲೆಯನ್ನು ಮುಗಿಸಿದ ಷರಾ ಪ್ರಕಟಿಸಿತು. ಅನಂತರ ಅದನ್ನು ವಿರಾಮದಲ್ಲಿ ಪರಿಷ್ಕರಿಸಿದ್ದೇನೆ. ಇದನ್ನು ಕೇವಲ ತನ್ನ ಪುಟದ ಹೊಂದಾಣಿಕೆಗಾಗಿ ಸಣ್ಣ ಕತ್ತರಿ ಪ್ರಯೋಗದೊಡನೆ `ಸಂಶೋಧನೆಯ ಸಂಶೋಧನೆ’ ಶೀರ್ಷಿಕೆಯೊಡನೆ ಕನ್ನಡಪ್ರಭ (೧೫-೩-೨೦೦೯ ಸಾಪ್ತಾಹಿಕಪ್ರಭ) ಪ್ರಕಟಿಸಿತು. ಬ್ಲಾಗಿಗರ ಪೂರ್ಣ ಓದು ಮತ್ತು ಮುಕ್ತ ಚರ್ಚೆಗೆ ಅದನ್ನಿಲ್ಲಿ ಒಡ್ಡಿಕೊಳ್ಳುತ್ತಿದ್ದೇನೆ – ಅಶೋಕವರ್ಧನ]

ನಾನೊಬ್ಬ ಪುಸ್ತಕ ವ್ಯಾಪಾರಿ. ವ್ಯಾಯಾಮ, ಸಾಹಸ, ಸಂಶೋಧನೆ ಮುಂತಾದವು ನನಗೆ ಕೇವಲ ನಿಘಂಟಿನ ಪದಗಳಾಗಿದ್ದ ಕಾಲವದು; ೧೯೭೦-೮೦ರ ದಶಕ. ವಾರದ ಆರು ದಿನ ಪೇಟೆಯ ಗದ್ದಲದ ಏಕತಾನತೆ ಮುರಿಯುವುದಕ್ಕೋ `ಅದು’ ಅಲ್ಲಿದೆ ಎಂಬ ಕುತೂಹಲಕ್ಕೋ ಕಾಡು, ಬೆಟ್ಟ, ಬಂಡೆ, ಗುಹೆ, ಝರಿ, ಜಲಪಾತ ಹುಡುಕಿಕೊಂಡು ಹೋದೆ. ಯಕ್ಷಗಾನ, ತಾಳಮದ್ದಳೆ, ನಾಟ್ಯ, ನಾಟಕ, ಸಂಗೀತ, ಸಿನಿಮಾ (ಆಯ್ದ ಮಾತುಭಾರೀ ಸಭೆಗಳನ್ನೂ) ಮುಂತಾದವುಗಳನ್ನು ಅನುಭವಿಸಿದೆ. ವೃತ್ತಿರಂಗದಲ್ಲಂತೂ ಮಾತು, ಕೃತಿಗೆ ಬೇಧವುಳಿಯದಂತೆ ದುಡಿದೆ, ಸಿದ್ಧಿಸಿದ್ದ ಸ್ವಲ್ಪ ಭಾಷಾಬಲದಲ್ಲಿ ಮುಗ್ಧವಾಗಿ ಆದರೆ ಅನುಭವಕ್ಕೆ ಪ್ರಾಮಾಣಿಕವಾಗಿ ಕೆಲವು ಲೇಖನಗಳನ್ನು ಬರೆದೆ, ಪ್ರಕಟಿಸಿದೆ (ಮೂರು ಪುಸ್ತಕಗಳೇ ಪ್ರಕಟವಾಗಿ ಮುಗಿದಿವೆ). ನಾನು ಬಯಸದೇ ಇದ್ದರೂ ಬೆಳೆದ `ಖ್ಯಾತಿ’ಯೊಡನೆ ಸವಾಲುಗಳು ಕಾಡತೊಡಗಿದವು. ಆಗ ಹೋದರೆ ಹೋದೆ, ನೋಡಿದರೆ ಆಯ್ತು, ಬರೆದರೆ ಮುಗೀತು ಎಂದು ಸುಮ್ಮನೆ ಕೂರುವಂತಿರಲಿಲ್ಲ. ಸಾಂಪ್ರದಾಯಿಕ ಮಡಿ ಮತ್ತು ಮುಹೂರ್ತವನ್ನು ಮೀರಿ `ಪವಿತ್ರ ಗುಹೆ’ಗೆ ನುಗ್ಗಿದರು ಎಂದು ಹೊಡೆಯಲು ಮುಂದಾದವರ ಬಳಿ ನಮ್ಮ ನಿಷ್ಠೆಯನ್ನು ಪ್ರಮಾಣಿಸಿದೆವು. ಯಕ್ಷಗಾನದ ಭಾಗವತನೋರ್ವ ಅಭಿಮಾನೀ ಸಂಘದ ಅಮಲಿನಲ್ಲಿ ಅವಹೇಳನಕಾರೀ ಪತ್ರಲೇಖನಕ್ಕಿಳಿದಾಗ, ಯೋಗ್ಯ ವಾಗ್ದಂಡನೆ ಕೊಡಿಸಿ ಅಳತೆಗಿಳಿಸಬೇಕಾಯ್ತು. `ನಂಬಿಕೆಗಳನ್ನು ಕೆಣಕಬೇಡಿ’ ಎಂದು ಎರಡೆರಡು ಲೇಖನಗಳಲ್ಲಿ ತಮ್ಮ ಮುದ್ದಿನ ನಂಬಿಕೆಗಳನ್ನು ಸಾರ್ವತ್ರೀಕರಿಸ ಹೊರಟವರಿಗೆ `ಇದು ಬರಿ ಕೆಣಕಲ್ಲೋ ಅಣ್ಣಾ’ ಎಂದು `ನಂಬಿಕೆ’ಯ ಉದ್ದಗಲವನ್ನು ಹೇಳುತ್ತಾ ನಮ್ಮದೂ ಸಾಚಾ ನಂಬಿಕೆಯೇ ಎಂದು ಗಟ್ಟಿಸಿ ಪರಿಚಯಿಸಿದ್ದೂ ಆಯ್ತು. ಪುಸ್ತಕೋದ್ಯಮದಲ್ಲಂತೂ ಸಾಂಸ್ಥಿಕ ಪ್ರತಿಷ್ಠೆ, ವ್ಯಕ್ತಿತ್ವದ ಹಿರಿತನಗಳ ಪ್ರಭಾವದಲ್ಲಿ ತಪ್ಪುತತ್ವಗಳನ್ನು ಪ್ರತಿಪಾದಿಸುವವರ ವಿರುದ್ಧದ ಹಲವು ಖಾಡಾಖಾಡಿಗಳು `ಪುಸ್ತಕ ಮಾರಾಟ ಹೋರಾಟ’ವೆಂಬ ಸಂಕಲಿತ ಪುಸ್ತಕವಾಗಿಯೂ ಪ್ರಕಟವಾಗಿತ್ತು. “ಆಯ್ತಾಯ್ತು! ಇಷ್ಟೆಲ್ಲಾ ಇಲ್ಲಿ ಯಾಕೇಂತ” ನೀವು ತಾಳ್ಮೆ ಹರಿದು, ಬೊಬ್ಬೆ ಹೊಡೆಯುವ ಮೊದಲು ಹೇಳಿಬಿಡುತ್ತೇನೆ…

ಪ್ರಾಮಾಣಿಕ, ಬುದ್ಧಿಪೂರ್ವಕ ಅನುಭವಗಳು ಸಂಶೋಧನಾತ್ಮಕ ಹದಕ್ಕೆ ನಮ್ಮನ್ನು ಬೆಳೆಸುತ್ತವೆ; ಅವು ಸಮಾಜದ ಅಭಿವೃದ್ಧಿಗೆ ಕೊಡುಗೆಗಳೂ ಆಗುತ್ತವೆ. ಅದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಪ್ರೋತ್ಸಾಹಿಸುವ ಸಲುವಾಗಿ ನಾಮಗೌರವ (ಡಾಕ್ಟರೇಟ್ ಅನ್ನಿ), ಪದೋನ್ನತಿ, ಸವಲತ್ತುಗಳ ಹೆಚ್ಚಳವೆಲ್ಲ ಸೇರಿಕೊಂಡಿವೆ. ನಿಜವಿಶ್ವವಿದ್ಯೆಗೆ ಹೋಲಿಸಿ ವಿವಿನಿಲಯದ ನಾಮಗೌರವದ ವ್ಯಾಪ್ತಿಯ ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನೀಗಿಕೊಳ್ಳುವ ಕ್ರಮವಾಗಿ ಎಲ್ಲಾ ವಿವಿನಿಲಯಗಳೂ ಹೊರಗಿನವರಿಗೆ ಗೌರವ ಡಾಕ್ಟರೇಟ್‌ಗಳನ್ನು ಕೊಡುವ ಸಂಪ್ರದಾಯ ನಡೆದಿದೆ. ಆದರೆ ದುರಂತ ಎಂದರೆ ಇಂದು ಅಧ್ಯಯನ, ಯೋಗ್ಯತೆಗಳನ್ನು ಮೀರಿ ಹಣ, ವಶೀಲಿ ನಡೆಯುತ್ತದೆ; ಎಲ್ಲಕ್ಕೂ ಖರೀದಿ ದರ ಇದೆ! ಸಂಶೋಧನಾ ಪಥಗಮನವನ್ನು ಉಡಾಫೆ ಮಾಡಿ, ಲಕ್ಷ್ಯ ಸಾಧನೆಯ (ಪೀಎಚ್‌ಡೀ) ಕಣ್ಕಟ್ಟು ತೋರಿ, ಪ್ರಯೋಜನಗಳನ್ನಷ್ಟೇ ಗಿಟ್ಟಿಸುವ ಕೆಲವರಿಂದಾಗಿ ಇಂದು, “ಡಾಕ್ಟರೇಟ್” ಎಂದ ಕೂಡಲೇ “ರೇಟ್ ಎಷ್ಟು” ಎಂದು ಕೇಳುವಂತಾಗಿದೆ. ಹೆಚ್ಚಿನ ವಿವರಗಳಿಗೆ ನನ್ನ ಹವ್ಯಾಸಿ ಆಸಕ್ತಿಯಿಂದ ಅಯಾಚಿತವಾಗಿ ನನಗೊದಗಿದ ಹಲವು ಅನುಭವಗಳಲ್ಲಿ ಐದನ್ನು ಗಮನಿಸಿ.

ಒಬ್ಬ ಪ್ರೊಫೆಸರರಿಗೆ ಕಡಲಾಮೆಗಳ ಸಂರಕ್ಷಣಾ ಯೋಜನೆಯಲ್ಲಿ ವಿದ್ಯಾರ್ಥಿಗಳೊಡನೆ ತೊಡಗಿಕೊಳ್ಳುವ ಅನಿವಾರ್ಯತೆ (ಅನುದಾನ) ಬಂತು. ತಿಂಗಳ ಬೆಳಕಿನಲ್ಲಿ, ನಿರ್ಜನ ಕಡಲಕಿನಾರೆಗಳಲ್ಲಿ ಮೊಟ್ಟೆಯಿಡಲು ಬರಬಹುದಾದ ಆಮೆಗಳನ್ನು ಗುರುತಿಸಿ, ಮೊಟ್ಟೆಗಳಿಗೆ ರಕ್ಷಣೆ ಒದಗಿಸುವ ಅವರ ಸಾಹಸಕ್ಕೆ ಹೊರಗಿನವನಾದ ನಾನೂ ಒಲಿದು ಸೇರಿದ್ದೆ. ಬೀಸುಗಾಳಿ, ಕಿರು ಅಲೆಗಳ ಸದ್ದಿನಲ್ಲಿ ನಮ್ಮ ಪಿಸುಮಾತುಗಳು ಹೂತು ಹೋಗುತ್ತಿದ್ದವು. ವ್ಯಾನಿನಲ್ಲಿ ಗೊರಕೆ ಹೊಡೆಯುತ್ತಿದ್ದ ಪ್ರೊಫೆಸರರನ್ನು ನಾನು ಎಬ್ಬಿಸಿ ಕೇಳಿಯೇ ಬಿಟ್ಟೆ “ನಮ್ಮ ಗಟ್ಟಿ ಮಾತು ಆಮೆಗಳನ್ನು ಹೆದರಿಸೀತೇ ಸಾರ್?” ಆಮೆ ಸಂಶೋಧನಾ ಯೋಜನೆಯ ಪ್ರೊಫೆಸರರ ಸಂಗ್ರಹ ಶೂನ್ಯ. ಸ್ವಂತ ಆಸಕ್ತಿಯಿಂದ ಆ ಯೋಜನೆಯನ್ನು ತರಿಸಿದ ಅವರ ಶಿಷ್ಯ ಸವಿನಯವಾಗಿ ಪ್ರೊಫೆಸರರನ್ನೂ ರಕ್ಷಿಸಿದ “ಆಮೆಗಳಿಗೆ ಶ್ರವಣಾಂಗವಿಲ್ಲ. ಭಾರೀ ಗದ್ದಲ, ನಮ್ಮ ಓಡಾಟದ ಕಂಪನಗಳನ್ನು ಗ್ರಹಿಸುವ ಸಾಧ್ಯತೆಯಷ್ಟೇ ಇದೆ.”

ದೇವರ ಕಾಡುಗಳ ಅಧ್ಯಯನ ವಿವಿನಿಲಯದ ಇನ್ನೊಂದು ಮಹತ್ತರ ಅನುದಾನಿತ ಯೋಜನೆ. Field study ಅರ್ಥಾತ್ ಕ್ಷೇತ್ರ ಕಾರ್ಯಕ್ಕಾಗಿ ಆಗೀಗ ಪ್ರೊಫೆಸರರು ಸಕಲ ಗಾಂಭೀರ್ಯದಿಂದ ಎಲ್ಲಾ ಔಪಚಾರಿಕತೆಗಳನ್ನು ಪೂರೈಸಿಕೊಂಡು ಶಿಷ್ಯರ ಹಿಂಡಿನೊಡನೆ ಹೋಗಿ ಬರುವುದಿತ್ತು. ಕೆಟ್ಟ ಕುತೂಹಲದಲ್ಲಿ ಅಲ್ಲಿನ ಅವರ ವಾಸ್ತವದ ಕಲಾಪಗಳ ಬಗ್ಗೆ ಒಮ್ಮೆ ಇಣುಕುನೋಟ ಹಾಕಿದೆ. ಎಂಬತ್ತು ನೂರು ಕಿಮೀ ಪ್ರಯಾಣಿಸಿ (ಒಂದು ತೀರ್ಥ-) ಕ್ಷೇತ್ರಕ್ಕೆ ಇವರು ಭೇಟಿ ಕೊಡುತ್ತಿದ್ದದ್ದು ನಿಜ. ಹೇಗೂ ವ್ಯಾನ್ ಹೋಗುತ್ತಲ್ಲಾಂತ ಪ್ರೊಫೆಸರರ ಹೆಂಡತಿ ಮಕ್ಕಳು ಜೊತೆಗೊಡುತ್ತಿದ್ದರು. ಮತ್ತೆ ಅಲ್ಲಿಗೆ ಹೋಗಿಯೂ ದೇವದರ್ಶನ, ಕನಿಷ್ಠ ಹಣ್ಣುಕಾಯಿ ಮಾಡಿಸದಿದ್ದರೆ ಹೇಗೆ! ಪ್ರಯಾಣದ ಆಯಾಸ ಕಳೆಯಲು ತಿಂಡಿಕಾಫಿಯೋ ಊಟವೋ ಹಿಂಬಾಲಿಸಿದಂತೆ ಸಣ್ಣ ವಿಶ್ರಾಂತಿಗಳಿಗೆಲ್ಲ ಯಾವ ಆಡಿಟರ್ರೂ ಆಕ್ಷೇಪವೆತ್ತಲಾರ. ಅಷ್ಟರಲ್ಲಿ ಸಂಜೆಯಾಗುತ್ತಿತ್ತು. ಮತ್ತೆ ಅಲ್ಲೇ ಉಳಿದು ಇನ್ನೊಂದೇ ದಿನದಲ್ಲಿ ಕೆಲಸ ಮಾಡೋಣವೆಂದರೆ ಕಾಡುವ ವಿಧಿ, ನಿಷೇಧಗಳು ಪಾಪ ಇವರ ಅಧ್ಯಯನಾತ್ಮಕ ಉತ್ಸಾಹವನ್ನೇ ಉಡುಗಿಸಿಬಿಡುತ್ತಿದ್ದವು. ಕನಿಷ್ಠ ಅಂದಿನ (ತೀರ್ಥ) ಕ್ಷೇತ್ರಕಾರ್ಯದ ಬೆಳಕನ್ನು ಮಾರಣೇ ದಿನದ ಮಹತ್ವದ ಸೆಮಿನಾರಿಗೆ ಸಜ್ಜುಗೊಳಿಸಲಾದರೂ ಸಮಯಾಭಾವ ಉಂಟಾಗದಂತೆ ಊರಿಗೆ ತುರ್ತು ಮರಳುತ್ತಿದ್ದರು.

ಸುಮಾರು ಹತ್ತು ವರ್ಷದ ಹಿಂದೆ ನಾನೊಂದು ಎಕ್ರೆ ಪಾಳುಭೂಮಿಯನ್ನು ಕೊಂಡು (ಹೆಸರು – ಅಭಯಾರಣ್ಯ) ಸಸ್ಯ ಪುನರುತ್ಥಾನದ ಕನಸಿಗೆ ನನ್ನ ಹೆಂಡತಿಯೊಡಗೂಡಿ ಅರೆಬರೆ ಕೆಲಸಕ್ಕಿಳಿದೆ. ಅಂದಿನಿಂದಿಂದಿನವರೆಗೂ ಸಿಕ್ಕೆಲ್ಲ ಜೀವಶಾಸ್ತ್ರಾಧ್ಯಾಪಕ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕೆಲಸಕ್ಕೂ ಅಧ್ಯಯನಕ್ಕೂ ಇದು ಮುಕ್ತವೆಂದು ಹೇಳುತ್ತಲೇ ಬಂದೆ. ಆದರೆ ಇತ್ತ ತಲೆಹಾಕಿ ಮಲಗಿದವರೂ ಇಲ್ಲ. ಆದರೂ ಇಲ್ಲಿ ಸಾಕಷ್ಟು ಜೀವ ಸಹಜವಾಗಿ ಕುದುರಿದೆ, ವಿದ್ಯಾ ದೇಗುಲಗಳಲ್ಲಿ ಸಂಪತ್ತು ಸವಲತ್ತುಗಳ ಮಹಾಪೂರದಲ್ಲಿ ಜೀವನಾಡಿ ದಿನೇ ದಿನೇ ಕ್ಷೀಣಿಸುತ್ತಾ ಬರುತ್ತಿದೆ!

ವನ್ಯ ರಕ್ಷಣೆಯ ಅಪೂರ್ವ ಹೆಜ್ಜೆಯಾಗಿ ನಾವಿಬ್ಬರು ಗೆಳೆಯರು ನೇರ ಪಶ್ಚಿಮ ಘಟ್ಟದಲ್ಲಿ ಎರಡು ವರ್ಷದ ಹಿಂದೆ ಹದಿನೈದು ಎಕ್ರೆ ಕಾಡನ್ನು ಖರೀದಿಸಿದೆವು (ಹೆಸರು – ಅಶೋಕವನ). ಇದನ್ನಂತೂ ವಿವಿನಿಲಯಕ್ಕೆ ಲಿಖಿತ ಮನವಿಯೊಡನೆ ಸಂಶೋಧನೆಗೆ ಮುಕ್ತಗೊಳಿಸಿಟ್ಟೆವು. ಜನ ಬಿಡಿ, ಮಾರೋಲೆಯೂ ಬರಲಿಲ್ಲ. ಅನ್ಯ ಕಾರ್ಯಾರ್ಥ ಭೇಟಿಯಾಗಿದ್ದ ಪ್ರೊಫೆಸರರೊಬ್ಬರನ್ನು ಕೆದಕಿ ನೋಡಿದೆ. ವೈಯಕ್ತಿಕವಾಗಿ ಮಾಸಿಕ ಅರ್ಧ ಲಕ್ಷದವರೆಗೂ ಆದಾಯವಿರುವ ಮಾನ್ಯರು ಕನಿಷ್ಠ ಪ್ರಯಾಣ ವ್ಯವಸ್ಥೆ (ನಾವು ನಾಲ್ಕೈದು ಮಂದಿ ಖರ್ಚು ಹಂಚಿಕೊಂಡು ಕಾರಿನಲ್ಲಿ ಹೋಗಿಬರುವಾಗ ರೂಪಾಯಿ ಇನ್ನೂರು ಆದರೆ ಹೆಚ್ಚು), ವಾಸ ವ್ಯವಸ್ಥೆ (ವನ್ಯ ಸಂಶೋಧನೆಗೆ ಪಂಚತಾರಾ ಹೋಟೆಲ್ ನಿರೀಕ್ಷೆಯೇ?) ಸಂಭಾಳಿಸಲು ಆನುದಾನ, ಯೋಜನೆಗಳು ಬೋಳು ಆಕಾಶದಿಂದ ಬಂದು ಬೀಳಲು ಕಾದಿದ್ದರು!

ಈಚೆಗೆ ಅಶೋಕವನದಲ್ಲಿ ಈ ವಲಯಗಳಲ್ಲಿ ಅಳಿದೇ ಹೋಗಿದೆ ಎಂದು ನಂಬಲಾಗಿದ್ದ ಮರನಾಯಿಯ (Nilgiri Marten) ಪತ್ತೆಯಾಯ್ತು. ಅದರ ಕುರಿತು ವಿಡಿಯೋ, ಲೇಖನ, ಅಂತರ್ಜಾಲ ಪ್ರಚಾರಗಳೂ (ಇದೇ ಬ್ಲಾಗಿನಲ್ಲಿ ವನ್ಯ ವಿಭಾಗದಲ್ಲಿ ಲೇಖನ ಓದಿ) ನಡೆದವು. ಆದರೆ ಯಾವುದೇ ವಿದ್ಯಾಸಂಸ್ಥೆಗಳ ಒಂದು ಹುಳವೂ ಸ್ಪಂದಿಸಲಿಲ್ಲ. ಅದೆ ಅದೇ ಯೋಜನೆ, ಅನುದಾನ, ಪ್ರಾಯೋಜಕತ್ವ, ತಜ್ಞವರದಿ, ಸೆಮಿನಾರು, ವಿದೇಶಗಮನ, ಸಲಕರಣೆ ಸವಲತ್ತು ಸಂಗ್ರಹಗಳ ಗೊಂಡಾರಣ್ಯದಲ್ಲಿ ಕಳೆದುಹೋಗಿದ್ದಾರೆ. ಬಹುಶಃ ಇವರಿಗೆ Nilgiri Martenಗೂ Wren & Martenಗೂ ವ್ಯತ್ಯಾಸವೇ ತಿಳಿದಿಲ್ಲ. ಪೀಎಚ್‌ಡೀಗಳನ್ನು ಆ ಕಾಲಕ್ಕೇ ಶಿವರಾಮ ಕಾರಂತರು ಪಚ್ಚಡಿಗಳು (ಕಚ್ಚಾಕಲಸು) ಎಂದು ಗೇಲಿ ಮಾಡಿದ್ದು ನೆನಪಿಗೆ ಬರುತ್ತದೆ. ಇಂಥವರ (ಎಲ್ಲಾ ಭಾಷಾ ಮತ್ತು ವಿಷಯಕ ವಿಭಾಗಗಳನ್ನು ಸೇರಿಸಿ ಹೇಳುವ ಮಾತಿದು) ಕೃಪಾಪೋಷಣೆಯ ತಗಣೆ, ಹೇನುಗಳ ಸಂಪ್ರಬಂಧಗಳ ಭಾರಕ್ಕೆ ನಮ್ಮ ವಿದ್ಯಾವ್ಯವಸ್ಥೆಯೇ ಕುಸಿದುಬೀಳುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಅಮೆರಿಕಾದಲ್ಲಿ ಗೌರವ ಡಾಕ್ಟರೇಟ್ ಪಡೆದು ಮರಳುವ ಮೊದಲು ತನ್ನ ಮನೆಯ ನಾಮಫಲಕದಲ್ಲಿ `ಡಾ|’ ಸೇರುವಂತೆ ನೋಡಿಕೊಂಡ ಜನನಾಯಕರಂಥವರನ್ನು ಊಹಿಸಿಯೇ ಖ್ಯಾತ ಸಂಶೋಧಕರೂ ಪ್ರೊಫೆಸರ್‌ಗಳೂ ಆದ ಸುಬ್ರಹ್ಮಣ್ಯನ್ ಚಂದ್ರಶೇಖರ್ (ನೊಬೆಲ್ ಪುರಸ್ಕೃತ ಭೌತಶಾಸ್ತ್ರದ ವಿಜ್ಞಾನಿ), ಸಿ.ಎನ್.ರಾಮಚಂದ್ರನ್ (ಆಂಗ್ಲ ಅಧ್ಯಾಪಕ, ಖ್ಯಾತ ಕನ್ನಡ ವಿಮರ್ಶಕ) ತಮ್ಮ ಅಂಕಿತನಾಮದ ಆದಿಯಲ್ಲಿ `ಡಾ|’ಗಿಂತ ಯೋಗ್ಯತೆ ಸೂಚಕವಾದ `ಪ್ರೊ|’ ಬಯಸುತ್ತಿದ್ದದ್ದು ಇರಬಹುದೋ ಏನೋ! ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಹೈದ್ರಾಬಾದಿನ ಒಬ್ಬ ರೆಡ್ಡಿ, ಆಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದ ಮಂಗಳೂರು ವಿವಿನಿಲಯಕ್ಕೆ ಐದು ಲಕ್ಷ ದಾನದ ಆಶ್ವಾಸನೆ ನೀಡಿ ಗೌರವ ಡಾಕ್ಟರೇಟ್ ಪಡೆದು ಮಾತು ತಪ್ಪಿಸಿದ್ದೂ ಈ ಪದವಿಯ ನಿಜಮೌಲ್ಯ ತಿಳಿದದ್ದಕ್ಕೇ ಇರಬಹುದೇ?

ನಾನು ಪಶ್ಚಿಮ ಘಟ್ಟದ `ಅಲೆದಾಟ’ ಶುರು ಮಾಡಿದ್ದ ಹೊಸತರಲ್ಲೇ ಒಮ್ಮೆ ಕುಶಿ ಹರಿದಾಸ ಭಟ್ಟರು ಆತ್ಮೀಯ ಗೆಳೆಯ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆತಂದಿದ್ದರು. ಬಾಗಲೋಡಿ ನನ್ನ ತಂದೆಗೂ ಕಾಲೇಜು ವಿದ್ಯಾರ್ಥಿ ದಿನಗಳಿಂದ ಬಲು ಆಪ್ತರು. ಬಾಗಲೋಡಿಯವರ ಅಪ್ರತಿಮ ಬುದ್ಧಿಮತ್ತೆ ಅವರಿಗೆ ಭಾರತ ಸರಕಾರದ ವಿದೇಶೀ ಸೇವೆಯಲ್ಲಿ ಬಲು ದಕ್ಷ ರಾಯಭಾರಿ ಎಂದೇ ಖ್ಯಾತಿ ತಂದಿತ್ತು. ಆದರೆ ಕನ್ನಡಿಗರಿಗೆ ಇವರು ಸುಂದರ ಸಣ್ಣಕತೆಗಳ ಜನಕ ಎಂದೂ ಪರಿಚಿತ. ಕುಶಿಯವರ ಮಾತಿನ ಓಘದಲ್ಲಿ ನನ್ನ ಪರ್ವತಾರೋಹಣದ ಹವ್ಯಾಸ ತಿಳಿದಕೂಡಲೇ ಬಾಗಲೋಡಿ ಗಂಭೀರರಾದರು. ತಡೆಯಲಾಗದ ಒಳತೋಟಿಯ ಅಭಿವ್ಯಕ್ತಿಯಾಗಿ ನನಗೆ ನಾಲ್ಕು ಮಾತು ಹೇಳಿದರು. `ನೀನು ಕಂಡ ಜೀವವೈವಿಧ್ಯ, ಪ್ರಾಕೃತಿಕ ವಿವರಗಳ ವ್ಯವಸ್ಥಿತ ಪಟ್ಟಿ ಮಾಡು. ಕಾರಣ ಏನೇ ಇರಲಿ, ಬ್ರಿಟಿಷರು ಮಾಡಿದ ನಮ್ಮ ನೆಲದ ಮೂಲ ದ್ರವ್ಯಗಳನ್ನು ದಾಖಲಿಸುವ ಮತ್ತು ಕಾಲಕಾಲಕ್ಕೆ ಪರಿಷ್ಕರಿಸುವ ಕಾರ್ಯ ಈಗ ಶೋಚನೀಯವಾಗಿ ನಿಂತೇ ಹೋಗಿದೆ. ನೀನು ಆ ನಿಟ್ಟಿನಲ್ಲಿ ಶಿಕ್ಷಿತನಲ್ಲದಿರಬಹುದು. ಆದರೂ ನಿನ್ನ ಪಟ್ಟಿ (ಕಂಡದ್ದರ ದಾಖಲೆ) ಎಷ್ಟು ಕನಿಷ್ಠವಿದ್ದರೂ ನಿಜ ದೇಶಸೇವೆಯೇ ಇರುತ್ತದೆ’. ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು ಆರು ದಶಕ ಕಳೆದಿದ್ದರೂ ಅಂದಿನ ಹೋರಾಟದ ನೆನಪುಗಳು ಇಂದಿನ ಸೋಮಾರಿತನಕ್ಕೆ ಅಥವಾ ಕಳ್ಳಕೆಲಸಕ್ಕೆ ನೆಪಗಳಾಗಿ ಉಳಿದಿವೆ. ಮತ್ತವು ಬೆಳೆಯುತ್ತಲೂ ಇವೆ! ಅವುಗಳ ವೈಭವೀಕರಣದ ಭರದಲ್ಲಿ ಅನುತ್ಪಾದಕ ದಿನಗಳು, ವಿನಿಕೆಗಳು ದಿನೇ ದಿನೇ ವೃದ್ಧಿಸುತ್ತಿವೆ. ಆರಾಧನೆ ಬೆಳೆದಲ್ಲಿ ವಿಚಾರ ಸೊರಗುತ್ತದೆ.

ನೆರಿಯ ಮಲೆಯ ಕಣ್ಕಟ್ಟುವ ಕಾಡಿನಲ್ಲಿ, ಉಸಿರುಸಿಕ್ಕುವ ಏರಿನಲ್ಲಿ ನಾನೊಬ್ಬ ಗೆಳೆಯನ ಜತೆ ಅಮೆದಿಕ್ಕೆಲ್ ಶಿಖರದೆಡೆಗೆ ಪಾದಬೆಳೆಸಿದ್ದೆ (೧೯೭೭ರ ಸುಮಾರಿನಲ್ಲಿ). ನಮಗಿದ್ದ ಒಂದೇ ಆಧಾರ ಸರ್ವೆ ಆಫ್ ಇಂಡಿಯಾದ ವಿವರವಾದ ನಕ್ಷೆ. ೧೯೭೬ರ ಸುಮಾರಿಗೆ ನಾನದನ್ನು ಬಲು ಪ್ರಯಾಸದಿಂದ ಇಲಾಖೆಯ ಅರ್ಥಹೀನ ಕಾನೂನು ಜಿಡುಕು ಬಿಡಿಸಿ ಖರೀದಿಸಿದ್ದರೂ ಅದರಲ್ಲಿ ನಮೂದಾಗಿದ್ದಂತೆ ಮೂಲ ಸರ್ವೇಕ್ಷಣೆ ನಡೆಸಿದ ವರ್ಷ ೧೯೧೦-೧೧. ಬೆಳ್ತಂಗಡಿಯಿಂದ ಚಾರ್ಮಾಡಿಯತ್ತ ಸಾಗುವ ದಾರಿಯಲ್ಲಿ ಕಕ್ಕಿಂಜೆಯಿಂದ ಕವಲಾದ ಮಣ್ಣುದಾರಿ ನೆರಿಯಾದವರೆಗೆ ಸಾರ್ವಕಾಲಿಕದಂತೆ ಕಾಣುತ್ತಿತ್ತು. ನೆರಿಯ ಏಲಕ್ಕಿ ತೋಟಗಳತ್ತ ಮುಂದುವರಿದಂತೆ ಕಾಡು ತೋಟಗಳ ಅನುಪಾತ ತಿರುಗಾಮುರುಗಾವಾದ್ದು ಸ್ಪಷ್ಟವಾಗಿ ನಕ್ಷೆಯಲ್ಲಿ ನಮೂದಾಗಿತ್ತು. ನಕ್ಷೆಯಲ್ಲಿನ ಮಣ್ಣ ದಾರಿ ನೆರಿಯಾ ಏಲಕ್ಕಿಮಲೆಯಿಂದಾಚೆ ಕಾಲ್ದಾರಿಯಾಗಿ ಮುಂದುವರಿದು ಶಿಖರವನ್ನು ಸ್ಪಷ್ಟವಾಗಿ ತಲಪಿದ್ದೇ ನಮ್ಮ ಆಶಾದೀಪ. ಏಲಕ್ಕಿಮಲೆಯವರೆಗೂ ನೆರಿಯಾದವರ ಸ್ಪಷ್ಟ ಮಾರ್ಗದರ್ಶೀ ಸೂತ್ರಗಳು ಒದಗಿತ್ತು. ಮುಂದೆ ನಡೆನಡೆದಂತೆ ಕಾಡುಕಲ್ಲುಗಳನ್ನು ಒತ್ತೊತ್ತಾಗಿ ಜೋಡಿಸಿ ಹಗುರ ತಿರುವುಮುರುವುಗಳಲ್ಲಿ ಸಾಗುತ್ತಿದ್ದದ್ದು ಬರಿಯ ಸವಕಲು ಜಾಡಲ್ಲ, ಕನಿಷ್ಠ ಗಾಡಿದಾರಿಯಾದರೂ ಹೌದು ಎನ್ನುವಂತಿತ್ತು. ಆದರೆ ನಿರ್ವಹಣೆಯ ಕೊರತೆಯಲ್ಲಿ ಮಾರ್ಗಗುರುತಿನ (ವಾಸ್ತವದಲ್ಲಿ ಮೊದಲು ಮೈಸೂರು ಹಾಗೂ ಮದ್ರಾಸು ಪ್ರಾಂತ್ಯಗಳ ಈಗ ದ.ಕ ಮತ್ತು ಚಿಕ್ಕಮಗಳೂರು ಜಿಲ್ಲಾಗಡಿರೇಖೆ) ಗುಪ್ಪೆಗಳು ಕುಸಿದು, ನೆಲಹಾಸಿನೆಡೆಯಲ್ಲಿ ನಿಷ್ಪಾಪಿಯಂತೆ ಮೊಳೆತ ಕಾಡು-ಬೀಜಗಳು ನೆಲಹಾಸನ್ನೇ ಮಗುಚುವ ಮಹಾವೃಕ್ಷಗಳಾದ್ದು ಕಾಣುತ್ತಿತ್ತು. ಮೊದಲು ಈ ದಾರಿ ಯಾಕಿತ್ತು, ಈಗ ಯಾಕೆ ಉಪೇಕ್ಷೆ?

ನೆರಿಯದ ಹಿರಿಯ ಶ್ರೀ ರಾಘವ ಹೆಬ್ಬಾರ್ ಹೇಳುವಂತೆ ಅಮೆದಿಕ್ಕೆಲ್ ಶಿಖರದ ಮೇಲಿನದು ಬ್ರಿಟಿಷರ ಕಾಲದಲ್ಲಿ ಔನ್ನತ್ಯ ಮಾಪಕ ಸಲಕರಣೆ ಒಯ್ದು ಇದರ ಎತ್ತರದ ಖಾಚಿತ್ಯದೊಡನೆ ಆಸುಪಾಸಿನ ಎಲ್ಲಾ ಶಿಖರ ತೆಮರುಗಳ ನಕ್ಷೆ ತಯಾರಿಸಿದ್ದರಂತೆ. ಮತ್ತೆ ಎರಡು ವರ್ಷಕ್ಕೊಮ್ಮೆ ಸ್ಥಳೀಯ ತಹಸೀಲ್ದಾರ್ ಈ ಗಡಿಕಲ್ಲಿನ ಸಾಲಿನಗುಂಟ ತನ್ನ ಅಧಿಕೃತ ವೀಕ್ಷಣೆ ನಡೆಸಿ, ಶಿಖರದ ಗುಪ್ಪೆಯ ಬಂದೋಬಸ್ತನ್ನು ಖಾತ್ರಿಪಡಿಸಲೇ ಬೇಕಿತ್ತಂತೆ. ಆ ಭೇಟಿಗೆ ಮುನ್ನ ಸ್ಥಳದ ಮಾಲೀಕರ ನೆಲೆಯಲ್ಲಿ ಹೆಬ್ಬಾರ ಬಂಧುಗಳಿಗೆ ಸ್ಥಳೀಯ ವ್ಯವಸ್ಥೆಗೆ ಸೂಚನೆ ಬರುತ್ತಿತ್ತಂತೆ. ಸಹಜವಾಗಿ ಜಮೀನ್ದಾರರು ಕಾಡುಸವರಿ, `ಸಾಹೇಬರ ಸಾರೋಟು’ ಸಾಂಗವಾಗಿ ಸಾಗಲು ದಿಬ್ಬ ಸವರಿ, ತೆಮರು ತುಂಬಿಕೊಡುತ್ತಿದ್ದರಂತೆ. ಭೇಟಿ ಒಂದು ದಿನದ ಔಪಚಾರಿಕತೆಯಲ್ಲ, ಸಾಹೇಬರಾದಿ ಸಿಬ್ಬಂದಿಗಳಿಗೆ ಅಲ್ಲಲ್ಲಿ ಊಟವಸತಿಯ ವ್ಯವಸ್ಥೆಯೊಡನೆ ದಿನಗಟ್ಟಳೆ ಒಂದು ಉತ್ಸವವೇ ಆಗಿಬಿಡುತ್ತಿತ್ತಂತೆ. ಆದರೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ದಾರಿ, ಸೌಕರ್ಯಗಳು ಏರುತ್ತಾ ಬಂದರೂ ಈ ಭೇಟಿ ವಿರಳವಾಗುತ್ತಾ ಹೋಗಿದೆ. ಮೊದಲಿನಂತೆಯೂ ಇಲ್ಲದ ಜಮೀನ್ದಾರರಿಗೆ `ದಾಕ್ಷಿಣ್ಯದ ಬಂಧ’ದಿಂದ ಮುಕ್ತಿ ಸಿಕ್ಕಿದ್ದೇನೋ ಸರಿ. ಆದರೆ ಆ ನೆಪದಲ್ಲಾದರೂ ಆಡಳಿತಕ್ಕೆ ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಪ್ರತಿ ಹಳ್ಳಿಮೂಲೆಯನ್ನು ಪ್ರತ್ಯಕ್ಷ ನೋಡಿ ತಿಳಿಯುವ ಅವಕಾಶ ತಪ್ಪಿಯೇ ಹೋದಂತಾದ್ದು ಅನ್ಯಾಯ. ಈಗಲೂ ಸರಕಾರ ಅಪರೂಪಕ್ಕೆ ಗಡಿರೇಖೆಯುದ್ದಕ್ಕೆ ಪೊದರು ಸವರಿ, ಗುಪ್ಪೆಗಳನ್ನು ನೇರ್ಪುಗೊಳಿಸುವ ಕೆಲಸಗಳನ್ನು ಕೂಲಿಗಳಿಂದ ನಡೆಸುವುದುಂಟು. ಮತ್ತೆ ಸರ್ವೇಕ್ಷಣೆಯ ತಂತ್ರ ಉಪಗ್ರಹದ ಎತ್ತರಕ್ಕೆ ಏರಿದಮೇಲೆ ವಸ್ತುತಃ ರೇಖೆ ಮತ್ತು ಕಲ್ಲಗುಪ್ಪೆಗಳು ಅರ್ಥ ಕಳೆದುಕೊಂಡಿರಲೂಬಹುದು. ಆದರೆ ಆಕಾಶದಲ್ಲಿ ಕುಳಿತ ಕ್ಯಾಮರಾಕಣ್ಣು ತಪ್ಪಿಸುವ ನೂರೆಂಟು ಕಲಾಪಗಳನ್ನು ದಾಖಲಿಸುವುದು ವೈಯಕ್ತಿಕ ಭೇಟಿಯಿಂದಲಷ್ಟೇ ಸಾಧ್ಯ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ವಿಜ್ಞಾನಿಯೊಬ್ಬರು ಪಶ್ಚಿಮ ಘಟ್ಟದ ಒಂದು ವಲಯಕ್ಕೆ ಹೀಗೇ ಮೂರುದಿನದ ಭೇಟಿ ಕೊಟ್ಟಾಗ ಇದುವರೆಗೆ ಗುರುತಿಸದಿದ್ದ ಹದಿಮೂರು ಕಪ್ಪೆ ಪ್ರಬೇಧಗಳನ್ನು ದಾಖಲಿಸಿದ್ದು ಸಣ್ಣದೇ? ಸುಬ್ರಹ್ಮಣ್ಯದಿಂದ ಗಂಟೆ ದೂರದಲ್ಲಿ ಸುಮಾರು ಮೂವತ್ತು ವರ್ಷದಿಂದೀಚೆಗೆ ಕೃಷಿಕರಾಗಿ ನಿಂತ ಗಿರಿಗದ್ದೆ ಭಟ್ಟರ ಸಾಹಸವನ್ನು ಹೊಗಳಿ ಹಾಡುವ ಮಂದಿ ನೆರಿಯ ಮಲೆಯಲ್ಲಿ ಅಂದರೆ ಜನವಸತಿಯಿಂದ ಗಂಟೆಗಟ್ಟಳೆ ದೂರದಲ್ಲಿ ಅದೂ ಐವತ್ತಕ್ಕೂ ವರ್ಷ ಮೊದಲು ನೆಲೆನಿಂತ ಗೋವಿಂದಭಟ್ಟರ ಮನೆಯ ಅವಶೇಷಗಳನ್ನು ವೀರಗಲ್ಲಿಗೆ ಸಮನಾಗಿ ಕಾಣಬಹುದಲ್ಲವೇ? `ಪೂರ್ಣ ಪರಿಸರ ಸ್ನೇಹೀ’ ಹೆಸರಿನಲ್ಲಿ ಈ ವಲಯದ ಮಲೆ ಸೀಳಿ ಸಾಗಿದ ಪೆಟ್ರೋ-ಕೊಳವೆ ಸಾಲು ಮೊದಮೊದಲು ನೆರಿಯ ಹೊಳೆಯನ್ನು ನೆರೆಯ ಹೊಳೆಯಾಗಿಸಿ ಅಪೂರ್ವ ಪ್ರವಾಹವನ್ನು ಕಾಣಿಸಿತ್ತು. ಸದ್ಯ ಪರ್ವತ ಶ್ರೇಣಿಗೇ ಅಂತಃ ಕುಸಿತ ಒದಗಿಸಿದ್ದು ಸಣ್ಣ ಸೇವೆಯೇ!! ನೆರಿಯ ಮನೆಯಿಂದ ಏಲಕ್ಕಿ ಮಲೆಯೊಳಗಿನ ಬಿದಿರು ಬಂಗ್ಲೆಗೆ ಹೋಗಬೇಕಾದರೆ ಎಂದೂ ದರ್ಶನ ಕೊಡಬಹುದಾಗಿದ್ದ ಕಾಡಾನೆಗಳು, ಕಾಳಿಂಗ ಸರ್ಪಗಳು ಇಂದು ಘಟ್ಟದಾಚಿನ ತೋಟಮನೆಗಳಲ್ಲಿ ಠಿಕಾಣಿ ಹೂಡಿದ್ದರ ಹಿಂದೆ ಯಾವೆಲ್ಲಾ ಮಿನಿ-ವಿದ್ಯುದಾಗಾರಗಳ ವಿಕಸನದ ಕಥೆಯಿರಬಹುದು? ಹಿಂದೆಲ್ಲ ಮಲೆಗಳ ದುರ್ಗಮತೆಯ ಪ್ರಚಾರದ ಮುಸುಕಿನಲ್ಲಿ ನೆಲಗಳ್ಳತನವಿರುತ್ತಿತ್ತು, ಕಳ್ಳ ಗಾಂಜಾ ಬೆಳೆಯಿರುತ್ತಿತ್ತು. ಇಂದು ನಕ್ಸಲೈಟ್‌ನಿಂದ ತೊಡಗಿ ಕಳ್ಳಬೇಟೆ, ಕಳ್ಳನಾಟಾ, ಕುರಂದಾ ಗಣಿಗಾರಿಕೆ, ಅಕ್ಷರಶಃ ಕೊಲೆ ದರೋಡೆಗಳೂ ಸಹಜವಾಗುತ್ತಿವೆ. ಆಡಳಿತ ಅನುಸರಿಸುತ್ತಿರುವುದು ಕ್ಷಣಿಕ `ಉಪಶಮನ ವೈದ್ಯಕೀಯ’! “ಹಾಗಲ್ಲ” ಎಂದು ಘಟ್ಟಿಸಿ ಹೇಳಬೇಕಾದ ಸಾಮಾಜಿಕ ಅಧ್ಯಯನ, ಪಾರಿಸರಿಕ ಸಂಶೋಧನೆ, ಅಭಿವೃದ್ಧಿ ಪತ್ರಿಕೋದ್ಯಮವೇ ಮುಂತಾದ ಮೌಲ್ಯಗಳು ಕೇವಲ ಕಾಲೇಜು ವಿಶ್ವವಿದ್ಯಾನಿಲಯಗಳ ತೋಟಶೃಂಗಾರದ ಸರಕುಗಳಾಗಿ ಉಳಿದಿವೆ.