ನನ್ನ ತಂದೆ (ಜಿ.ಟಿ. ನಾರಾಯಣ ರಾವ್) ತಾಯಿಯರು (ಲಕ್ಷ್ಮಿ ದೇವಿ) ವೈದಿಕ ಸಂಸ್ಕಾರಗಳು ಮತ್ತು ಸಾಂಪ್ರದಾಯಿಕ ಆಚರಣೆಗಳು ಇರುವ ಕುಟುಂಬಗಳಿಂದಲೇ ಬಂದವರು. ತಂದೆಗೆ ಬಾಲ್ಯದಲ್ಲಿ ವೇದಪಾಠವೂ ಆಗಿತ್ತು (ನೋಡಿ ಅವರ ಆತ್ಮಕಥೆ – ಮುಗಿಯದ ಪಯಣ*). ತಂದೆ ವೃತ್ತಿ ಜೀವನಕ್ಕೆ ಇಳಿದು ಆರ್ಥಿಕ ಸ್ವಾತಂತ್ರ್ಯಪಡೆದ ಮೇಲೆ ವೈಚಾರಿಕ ಸ್ವಾತಂತ್ರ್ಯವನ್ನು ಸ್ಪಷ್ಟಗೊಳಿಸಿರಬೇಕು ಎಂದು ಕಾಣುತ್ತದೆ. ಅನಂತರ ಕೇಳಿದವರಿಗೆ ಬೋಧಿಸಿದ್ದು, ಅವಕಾಶ ಒದಗಿದಲ್ಲಿ ಬರೆದದ್ದು (ನೋಡಿ ಅವರ ಪುಸ್ತಕಗಳು: ವೈಜ್ಞಾನಿಕ ಮನೋಧರ್ಮ, Scientific Temper ಮತ್ತು ಜಾತಕ ಮತ್ತು ಭವಿಷ್ಯ) ಮತ್ತು ಅಂತರಂಗ ಬಹಿರಂಗಗಳಲ್ಲಿ ಎರಡಿಲ್ಲದಂತೆ ಬಾಳಿದ್ದು ವೈಜ್ಞಾನಿಕ ಮನೋಧರ್ಮದಲ್ಲೇ. ತಾಯಿ ಕೇವಲ ಆತ್ಮ ಸಂತೋಷಕ್ಕಾಗಿ (ಯಾವುದೇ ಪ್ರದರ್ಶನಕ್ಕಲ್ಲ) ತಮ್ಮದೇ ಪಾರಾಯಣ, ಪೂಜೆಗಳನ್ನು ಉಳಿಸಿಕೊಂಡಿದ್ದರೂ ಅವಕ್ಕೆ ಶುಭಾಶುಭಗಳ ಶಾಸ್ತ್ರಾಶಾಸ್ತ್ರಗಳ ಬಾಧೆಯಾಗಲೀ ಮಧ್ಯವರ್ತಿಯನ್ನು (ಪುರೋಹಿತರು) ಬಯಸುವ ಔಪಚಾರಿಕತೆಗಳಾಗಲೀ ಇರಲಿಲ್ಲ. ಹಾಗಾಗಿ ತಂದೆಗೆ ಸದಾ ಅನುಕೂಲೆಯಾಗಿದ್ದರು. ತಂದೆ ತಾಯಿಯರು, ಕೌಟುಂಬಿಕ ಸಾಮರಸ್ಯಕ್ಕಾಗಿ ಮತ್ತು ಹೆಣ್ಣು ತರುವ ಕುಟುಂಬಗಳ ಬಯಕೆ ಹಾಗೂ ಗೌರವಕ್ಕೆ ಚ್ಯುತಿಬಾರದಂತೆ ನಮಗೆ – ಮಕ್ಕಳು ಮೂವರಿಗೂ (ಹಿರಿಯವ ನಾನು. ಮತ್ತಿನವ ಅಮೆರಿಕಾದಲ್ಲಿರುವ ಆನಂದ ವರ್ಧನ. ಕೊನೆಯವ ತಂದೆ ತಾಯರೊಟ್ಟಿಗೆ ಮೈಸೂರಲ್ಲೇ ಇರುವವ ಅನಂತ ವರ್ಧನ) ಸಾಂಪ್ರದಾಯಿಕ ವಿವಾಹವನ್ನೇ ಮಾಡಿಸಿದರು. ಆದರೆ ಅವು ಆಡಂಬರರಹಿತವಾಗಿದ್ದು, ಸಾಮಾಜಿಕವಾಗಿ ಅರ್ಥಪೂರ್ಣವಾಗಿರುವಂತೆ ನೋಡಿಕೊಂಡದ್ದೂ ಹೌದು.

ಪತ್ರಿಕೆಗಳಲ್ಲಿ ನನ್ನ ತಂದೆಯ ದೇಹದಾನದ ಸುದ್ದಿ ಓದಿ, ಪ್ರಭಾವಿತರಾಗಿ, ಅನುಸರಿಸಲು ಮುಂದಾದ ತೀರಾ ಅಪರಿಚಿತ ಹಿರಿಯರೊಬ್ಬರು ನನಗೆ ಪತ್ರಿಸಿದರು. ಅವರ ಸಂದೇಹಕ್ಕೆ ಸಮಾಧಾನವಾಗಿ ನಾನು ಎರಡು ಪುಟದುದ್ದಕ್ಕೆ ಬರೆದದ್ದನ್ನು ಸ್ವಲ್ಪ ಪರಿಷ್ಕರಿಸಿ ಪ್ರಸ್ತುತ ಪಡಿಸುತ್ತಿದ್ದೇನೆ.

ಕಾಲಧರ್ಮದಲ್ಲಿ ತಂದೆ ತಾಯಿಯರ ದೇಹಗಳು ಬಳಲಿದವು. ವೈಚಾರಿಕ ಪ್ರಜ್ಞೆ ತಾಯಿಯಲ್ಲೂ ಜಾಗೃತವಾಗಿಯೇ ಇದ್ದುದಕ್ಕೆ ಸಹಜವಾಗಿ ಇಬ್ಬರು ಸೇರಿ ಮರಣೋತ್ತರ ವ್ಯವಹಾರ (ಅಂದರೆ ಉಯಿಲು ಚೊಕ್ಕ ಮಾಡಿ) ಮತ್ತು ದೇಹದಾನದ ನಿರ್ಧಾರಕ್ಕೆ ಬಂದರು. ಮೊದಲು ಶ್ರೀ ಶಿವರಾತ್ರೀಶ್ವರ ವೈದ್ಯಕೀಯ ಕಾಲೇಜಿನವರೊಡನೆ ಮಾತಾಡಿ ಮತ್ತೆ ಪರೋಕ್ಷವಾಗಿ ಮಕ್ಕಳು ಮೂವರ ಒಪ್ಪಿಗೆ ಪಡೆದು ಅಂತಿಮವಾಗಿ ಒಪ್ಪಂದ ಪತ್ರವನ್ನು ಸಹಿ ಮಾಡಿಕೊಟ್ಟರು. ಅವರ ಜೊತೆಗೇ ಇದ್ದ ತಮ್ಮ ಅನಂತವರ್ಧನನ ಕುಟುಂಬಕ್ಕೆ ಇದನ್ನು ನಡೆಸಿಕೊಡುವ ಜವಾಬ್ದಾರಿಯೂ ಸಹಜವಾಗಿ ಪ್ರಾಪ್ತವಾಯ್ತು.

ಅದೊಂದು ಸಂಜೆ ಎಂದಿನಂತೆ ವಾಕಿಂಗ್ ಹೋದ ತಂದೆ, ಗೆಳೆಯರೊಬ್ಬರ ಮನೆಯಲ್ಲಿ ಮಾತಾಡುತ್ತಿದ್ದಂತೆ ಮೂರ್ಛಾಗತರಾದರು. ಆ ಮನೆಯವರು ಪ್ರಥಮ ಚಿಕಿತ್ಸಾದಿಗಳನ್ನು ನಡೆಸುವುದರೊಡನೆ ಅನಂತನಿಗೆ ತಿಳಿಸಿದರು. ಆತ ಇವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ (ಮಿದುಳಲ್ಲಿ ರಕ್ತಸ್ರಾವ) ಕೋಮಾ ತಲಪಿದ್ದಿರಬೇಕು. ರಾತ್ರಿಯೇ ನನಗೆ ಸುದ್ದಿ ಮುಟ್ಟಿದ್ದರಿಂದ ಮರು ಬೆಳಿಗ್ಗೆ ವೈದ್ಯರು ತಂದೆಯ ಪ್ರಾಣ ಹೋದ್ದನ್ನು ಘೋಷಿಸುವ ಕಾಲಕ್ಕೆ ನಾನೂ ಆಸ್ಪತ್ರೆಯಲ್ಲಿ ಹಾಜರಿದ್ದೆ. ಅನಂತ ಕೂಡಲೇ ವೈದ್ಯಕೀಯ ಕಾಲೇಜಿನವರನ್ನು ಸಂಪರ್ಕಿಸಿದ. ಶವವನ್ನು ವಶಕ್ಕೆ ತೆಗೆದುಕೊಳ್ಳಲು ಅವರು ಸಕಾಲಕ್ಕೆ ಆಗಮಿಸಿದರೂ ಸಣ್ಣ ಎರಡು ಭಾವನಾ ಕ್ರಿಯೆಗಳನ್ನು ಗೌರವಿಸಲು ಮುಂದಾದರು. ೧. ಮೃತರ ಅಂತಿಮ ದರ್ಶನಕ್ಕೆ ಬರುವವರ ಅನುಕೂಲಕ್ಕಾಗಿ ಸಾಕಷ್ಟು ಸಮಯ ಶವವನ್ನು (ಕೆಡದಂತೆ ಸಂಸ್ಕಾರಗೊಳಿಸಿ) ನಮ್ಮ ವಶಕ್ಕೆ ಬಿಟ್ಟು ಕೊಡಲು ತಯಾರಿದ್ದರು. ೨. ಮೃತ ದೇಹದಲ್ಲಿ ಅನ್ಯರಿಗೆ ಅಳವಡಿಸುವುದಕ್ಕೆ ಅತಿ ಸುಲಭ ಲಭ್ಯ ಮತ್ತು ಅಷ್ಟೇ ಮುಖ್ಯ ಅಂಗ ಕಣ್ಣಂತೆ. ಆದರೆ ಅದರ ನಿಜ ಉಪಯುಕ್ತತೆ ಉಳಿಸಿಕೊಳ್ಳಬೇಕಾದರೆ ಜೀವ ಹೋದ ಒಂದೆರಡು ಗಂಟೆಗಳಲ್ಲೇ ತೆಗೆಯುವುದು ಅವಶ್ಯ. ಕಣ್ಣು ತೆಗೆದದ್ದರಿಂದ ಖಾಲಿ ಉಳಿಯುವ ಜಾಗವನ್ನು ಶಸ್ತ್ರಚಿಕಿತ್ಸೆಯಿಂದ ಮರೆಮಾಡಿದರೂ ಅಂತಿಮ ದರ್ಶನಕ್ಕೆ ಬರುವವರಿಗೆ `ನೋವಿನ ಅನುಭವ’ ಆಗುವ ಸಾಧ್ಯತೆ ಇತ್ತು. ಹಾಗಾಗಿ ಕಾನೂನು ರೀತ್ಯಾ ಅನಗತ್ಯವಾದರೂ ಕಣ್ಣು ತೆಗೆಯಲು ನಮ್ಮ ಪ್ರತ್ಯೇಕ ಅನುಮತಿ ಕೇಳಿದರು. ತಂದೆ ಲಿಖಿತ ಅಂತಿಮ ಆಶಯಗಳಲ್ಲಿ `ಶವ ಪ್ರದರ್ಶನ’ ಆದಿಯಾಗಿ ಎಲ್ಲಾ ಔಪಚಾರಿಕ ವಿಧಿಗಳನ್ನು ನಿರಾಕರಿಸಿದ್ದರು. ಹಾಗೇ ದಾನದ ಗರಿಷ್ಠ ಉಪಯುಕ್ತತೆಯನ್ನೂ ಆಶಿಸಿದ್ದರು. ನಾವು ಸಣ್ಣ ರಿಯಾಯ್ತಿ ಮಾಡಿ ಸಂಬಂಧಿಕರುಗಳ ಮತ್ತು ತೀರಾ ಆತ್ಮೀಯರ ಭಾವನೆಗಳಿಗೆ ನೋವಾಗದಂತೆ ಸುಮಾರು ಸಂಜೆ ನಾಲ್ಕರವರೆಗೆ ಮನೆಯಲ್ಲಿ ಶವ ಪ್ರದರ್ಶನಕ್ಕೆ ವ್ಯವಸ್ಥೆಯೇನೋ ಮಾಡಿದೆವು. ಆದರೆ “ಕ್ಷಣಿಕ ಭಾವುಕತೆಗಳಿಗಾಗಿ ಯಾರಿಗೋ ಇಬ್ಬರಿಗೆ ದೃಷ್ಟಿ ಲಾಭವಾಗುವ ಅವಕಾಶ ಮಾತ್ರ ಖಂಡಿತಾ ತಪ್ಪಿಸಬೇಡಿ” ಎಂದೂ ಹೇಳಿ ಶವವನ್ನು ಒಪ್ಪಿಸಿದೆವು.

ಕಾಲೇಜಿನವರು ಅವರದೇ ವೆಚ್ಚದಲ್ಲಿ ಶವವನ್ನು ಒಯ್ದು, ಕಣ್ಣು ಸಂಗ್ರಹಿಸಿಕೊಂಡರು. ಆದರೆ ಅದರ ಕೊರತೆ ಕಾಣದಂತೆ ಚಿಕಿತ್ಸೆ ಮಾಡಿ, ದೇಹಕ್ಕೆ ರಾಸಾಯನಿಕ ಸಂಸ್ಕರಣ (ಎಂಬಾಮಿಂಗ್) ಕೊಟ್ಟು, ಸರಳ ಅಲಂಕಾರ ಸಹಿತ ಮತ್ತವರದೇ ಖರ್ಚಿನಲ್ಲಿ ನಮ್ಮ ಮನೆಗೆ ಕಳಿಸಿಕೊಟ್ಟರು. ಸಂಜೆ ನಾವು ಕೇವಲ ದೂರವಾಣಿಸಿ ತಿಳಿಸಿದಾಗ ಬಂದು ಒಯ್ದರು. ಮಾರಣೇ ದಿನವೇ ದೇಹವನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ ಕುರಿತು ಒಂದು ಅಧಿಕೃತ ಪತ್ರ ಕೊಟ್ಟರು. ಆಸ್ಪತ್ರೆಯ `ಮೃತ್ಯು-ಪತ’ದೊಡನೆ ಇದರ ಪ್ರತಿಯನ್ನು ಲಗತ್ತಿಸಿ ಜನನ ಮರಣಗಳ ನೋಂದಣಿ ಕಛೇರಿಗೆ ಕೊಟ್ಟು ಪ್ರಮಾಣಪತ್ರ ಪಡೆಯುವಲ್ಲಿ ಅನಂತನಿಗೆ ಏನೂ ತೊಂದರೆಯಾಗಲಿಲ್ಲ. ದೇಹದಾನದ ಬಗ್ಗೆ ನನಗೆ ಪತ್ರ ಬರೆದಿದ್ದ ಹಿರಿಯರು ಒಂದೆಡೆ, ದಾನಪಡೆವರು ಶವದ `ಉಪಯೋಗದ’ ಅನಂತರ ಕೊನೆಯ ತುಣುಕಿನವರೆಗೆ ವಿಲೇವಾರಿ ಸರಿಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ದೇಹದಾನದನಂತರ ಶವಸಂಸ್ಕಾರದ ಯೋಚನೆಯೇ ನನ್ನ ಲೆಕ್ಕಕ್ಕೆ ತೀರಾ ಅಪ್ರಸ್ತುತ. ಇಲ್ಲಿ ಸಂಸ್ಕಾರ ಬರಿಯ ಜೀವವಿಲ್ಲದ ದೇಹಕ್ಕಲ್ಲ ಪೂರ್ವಭಾವೀ ನಿರ್ಧಾರ ಕೈಗೊಳ್ಳುವವರ ಮತ್ತು ಬದುಕುಳಿದ ಆತ್ಮೀಯರ ಮನಸ್ಸಿಗಗತ್ಯ ಎಂದು ನನಗನ್ನಿಸಿತು. ನಾನು ತೀರಾ ವ್ಯಾವಹಾರಿಕ ಉದಾಹರಣೆ ಕೊಡುತ್ತಿದ್ದೇನೆಂದು ಬೇಸರಿಸಬೇಡಿ – ನಾವೊಂದು ಮನೆಯೋ ಜಾಗವೋ ವಾಹನವೋ ಬೇರೊಬ್ಬರಿಗೆ ಕಾನೂನು ರೀತ್ಯಾ (ಮಾರಿ) ವಹಿಸಿಕೊಟ್ಟೆವೆನ್ನಿ. ಆಮೇಲೆ ನಮ್ಮ ಗಿರಾಕಿ ಅದರ ಯಜಮಾನ. ಅವನ ಮೇಲೆ ನಮ್ಮ ತೀರ್ಮಾನ ಹೇರುವುದು ಸಾಧ್ಯವೇ? ಪೌರಾಣಿಕ ಉದಾಹರಣೆ ಒಂದನ್ನು ಹೆಕ್ಕಿ ನೋಡಿ: ಹರಿಶ್ಚಂದ್ರ ತನ್ನ ಪ್ರಿಯ ಪತ್ನಿಯನ್ನು ಪರಿಸ್ಥಿತಿಯ ಒತ್ತಡದಲ್ಲಿ ಮಾರಿದ. ಹಾಗೇ ತನ್ನನ್ನೂ ಮಾರಿಕೊಂಡ. ಮುಂದುವರಿದ ಸ್ಥಿತಿಯಲ್ಲಿ ಸ್ಮಶಾನದ ಶುಲ್ಕ ಕೊಡಲಾಗದ ತನ್ನ ಪತ್ನಿಯನ್ನೇ ಪೂರ್ಣ ಅರಿವಿನೊಡನೆ ತಲೆಗಡಿಯಲು ನಿಂತ. ಭಾವನೆಗಳ ಅತಿರೇಕವನ್ನು ಹದ್ದುಬಸ್ತಿನಲ್ಲಿಡಲೂ ಇಲ್ಲಿ ಸೂಚನೆ ಇಲ್ಲವೇ? ಇಡೀ ದೇಹವನ್ನೇ ದಾನ ಮಾಡುವಷ್ಟು ದೊಡ್ಡ ಮನಸ್ಸಿನವರಿಗೆ, ಮರಣೋತ್ತರದಲ್ಲಿ ಅದರ ತುಣುಕುಗಳ ವಿಲೇವಾರಿಯ ಚಿಂತೆ ಕಾಡಿದ್ದು ಪರಮಾಶ್ಚರ್ಯ. ಉಪಕೃತರ ಕುರಿತ ತಿಳುವಳಿಕೆ ಎಷ್ಟೋ ಬಾರಿ ದುರುದ್ದೇಶಪೂರಿತರ ಅಸ್ತ್ರಗಳೂ (black-mailing?) ಆಗುವ ಸಾಧ್ಯತೆಯಿದೆ. ಬಹುಶಃ ಅದಕ್ಕೇ ನೇತ್ರದಾನದ ಕರಾರು ಪತ್ರದಲ್ಲಿ ಸ್ಪಷ್ಟವಾಗಿ ಉಪಕೃತನ/ರ ಪರಿಚಯಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ನನಗೆ ಕಂಡ ಪ್ರಾಕೃತಿಕ ಸತ್ಯ ಮಾತ್ರ ಹೇಳುತ್ತೇನೆ – ಜನನದಲ್ಲಿ ತೊಡಗಿದ `ನಾನು’ ಎಂಬ ಸಂಘಟನೆಗೆ ಮರಣದಲ್ಲಿ ಮುಕ್ತಾಯ. ಹಿನ್ನೆಲೆಯ ರೂಪಣೆಯ ಸ್ವಾತಂತ್ರ್ಯವಿಲ್ಲದ ನಾನು (ಮರಣದ) ಮುಂದಿನ ಬಗ್ಗೆ (ಸೂಚನೆಯನ್ನು ಕೊಡುವ ಅವಕಾಶವನ್ನು ಮೀರಿ) ಚಿಂತೆ ಕಟ್ಟಿಕೊಳ್ಳುವುದು ಅತಿಯಾದೀತು.

ನನ್ನ ಪರಿಚಯದ ಒಬ್ಬ ವೈದಿಕರು, ವೃತ್ತಿಯಿಂದ ಸಾಂಪ್ರದಾಯಿಕ (ಬಡ) ಪುರೋಹಿತ, ತಮ್ಮ ತೀರಿಹೋದ ತಾಯಿಯ ಬಗ್ಗೆ ತಾನು ಕೈಗೊಂಡ ಕ್ರಿಯೆಗಳ ಬಗ್ಗೆ ತಿಳಿಸಿದ್ದು ನೆನಪಿಗೆ ಬರುತ್ತದೆ. ಮೊದಲು ಅವರು ಸಂತೋಷಪಟ್ಟರಂತೆ; ದೀರ್ಘ ಕಾಲ ಅನಾರೋಗ್ಯದಿಂದ ನರಳಿದ ತಾಯಿಗೆ ಸಿಕ್ಕ ನೋವಿನ ಬಿಡುಗಡೆಗೆ! (ಜೈನರಲ್ಲಿ ಜನನಕ್ಕೆ ಶೋಕ, ಮರಣಕ್ಕೆ ಸಂಭ್ರಮ ಎಂಬ ಶಾಸ್ತ್ರವೇ ಇದೆಯೆಂದು ಕೇಳಿದ್ದೇನೆ.) ಅನಂತರ ಆದಷ್ಟು ಬೇಗನೆ ಶವವನ್ನು ಸ್ಮಶಾನಕ್ಕೊಯ್ದು ಅಗ್ನಿಗರ್ಪಿಸಿದರು; ಮನೆ, ವಠಾರದ ಆರೋಗ್ಯಕ್ಕಾಗಿ (ಹೆಣ ಕೊಳೆಯುತ್ತದಲ್ಲ). ಕೊನೆಯದಾಗಿ ದೂರದ, ಅಪ್ರಸಿದ್ಧ ಕ್ಷೇತ್ರಕ್ಕೆ ಹೋಗಿ ಅಂತ್ಯೇಷ್ಟಿಗಳನ್ನು ಮಾಡಿದರು; ಕಾರಣ ಸಮಾಜದ ಟೀಕೆ (ತಾಯಿಗೆ ಕರ್ಮಾಂತರಗಳನ್ನು ಮಾಡಲಿಲ್ಲ) ತಪ್ಪಿಸುವುದರೊಂದಿಗೆ ತನ್ನ ಆರ್ಥಿಕತೆಯ ರಕ್ಷಣೆಗಾಗಿ (ಬಾಳಿದ ವಠಾರದಲ್ಲಿ ನಡೆಸಿದರೆ ನಾನೂರು ಐನೂರು ಜನರಿಗೆ ಊಟ ಹಾಕುವುದಾದರೂ ಹೇಗೆ?). ವೃತ್ತಿಯಿಂದ ಸಾವಿರಾರು ಮೃತರಿಗೆ `ಸಾಂಪ್ರದಾಯಿಕವಾಗಿ ಮೋಕ’ ಕಾಣಿಸಿದ ಪುರೋಹಿತರು ಕೊನೆಯಲ್ಲಿ ಹೇಳಿದರು, “ನಿಜವಾಗಿ ಹೇಳುತ್ತೇನೆ, ಗತಿಸಿದ ಅಮ್ಮನಿಗೆ ಕೊನೆಯದೆರಡರ ಹಂಗೇನೂ ಇಲ್ಲ!”

ನಾವು (ತಾಯಿ ಮತ್ತು ಮಕ್ಕಳು ಮೂವರು) ಮರಣ ಸಂಬಂಧೀ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಾಗಲೀ (ಕೇಶಕರ್ತನ, ಕರಿಮಣಿ, ಕುಂಕುಮಾದಿ ವರ್ಜನ) ಉತ್ತರಕ್ರಿಯಾದಿಗಳನ್ನು ನಡೆಸುವುದನ್ನಾಗಲೀ ತಂದೆ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದಕ್ಕೆ ಮಕ್ಕಳು ಮೂವರ ಪೂರ್ಣ ಅನುಮೋದನೆ ಇತ್ತು. ಆದರೆ ತಾಯಿಯದು ಸಣ್ಣ ಭಿನ್ನಮತವಿತ್ತು. ಹನ್ನೊಂದನೇ ದಿನಕ್ಕೆ ಕ್ರಿಯಾ ಮಟ್ಟದಲ್ಲಿ `ಏನಾದರೂ’ ಮಾಡಬೇಕು ಎಂಬ ಆಶಯವಿತ್ತು. ಹೋದವರ ಸಂತೋಷದ ಹೆಸರಿನಲ್ಲಿ ಇದ್ದವರ ಸರಳ ಭಾವನೆಗಳನ್ನು ಅವಗಣಿಸುವುದು ನಮಗೆ ಸರಿ ಕಾಣಲಿಲ್ಲ. ಮೈಸೂರಿನ ಸಂಸ್ಕೃತ ಮಹಾವಿದ್ಯಾಲಯದ ಅಧ್ಯಾಪಕ ವಿದ್ವಾಂಸ ಶ್ರೀ ಗಂಗಾಧರ ಭಟ್ಟ, ನಮ್ಮ ಕುಟುಂಬದ ಗೆಳೆಯ, ಅನುಕೂಲಕ್ಕೆ ಒದಗಿದರು. ಹನ್ನೊಂದನೇ ದಿನ ನಮ್ಮ ಮೈಸೂರು ಮನೆಗೆ ಬರಲು ಅನುಕೂಲವಿದ್ದ ಕುಟುಂಬಸ್ಥರನ್ನಷ್ಟೇ ಸೇರಿಸಿ ಭಟ್ಟರ ನಿರ್ದೇಶನದಲ್ಲಿ ಕೇವಲ `ಪಿತೃಪೂಜೆ’ ನಡೆಯಿತು. ಅದರ ಕೊನೆಯಲ್ಲಿ ಭಟ್ಟರು ಪುಟ್ಟ `ಭಾಷಣ’ವನ್ನೇ ಮಾಡಿ ಉತ್ತರಕ್ರಿಯಾದಿಗಳ ಮೂಲ ಆಶಯವನ್ನು ತಿಳಿಸಿದರು. ಅದು ಕೇವಲ ಪಂಚಭೂತಾತ್ಮಕವಾದ ಶರೀರವನ್ನು ಮತ್ತೆ ಅವುಗಳಲ್ಲೇ ಲೀನಗೊಳಿಸುವ ಕ್ರಿಯೆ. ನದಿಯಲ್ಲಿ ಕೊಚ್ಚಿ ಹೋದವರ, ಭೂಕುಸಿತ ಮುಂತಾದ ಭಾರೀ ಅವಘಡಗಳಲ್ಲಿ ಕಾಣೆಯಾದವರ, ಒಟ್ಟಾರೆ ದೇಹದ ಯಾವ ಅಂಶವೂ ಉಳಿಸದವರಿಗೆ ಈ `ಮರಳಿ ಸೇರಿಸುವಿಕೆ’ಯ ಕ್ರಿಯೆಯನ್ನು ಶಾಸ್ತ್ರಗಳೇ ಅನಗತ್ಯ ಎಂದು ಹೇಳಿರುವುದನ್ನು ಬಿಡಿಸಿ ಹೇಳಿದರು. ಇಲ್ಲಿ ದಾನಗಳಲ್ಲಿ ಶ್ರೇಷ್ಟವಾದ ದೇಹ-ದಾನವನ್ನೇ ಮಾಡಿದ ಮೇಲೆ ಯಾವುದೇ ಕ್ರಿಯೆ ಪರೋಕ್ಷವಾಗಿ (ಅಪರಿಗ್ರಹ?) ದೋಷವೇ ಆಗುತ್ತದೆ.

ಇಂದು ತಾಯಿ ಮೊದಲಿನ ಯಾವುದೇ ವೇಷಭೂಷಣಗಳನ್ನು ಕಳಚಿಲ್ಲ. ನಾವು ಆ ಹನ್ನೊಂದನೇ ದಿನದನಂತರ ಮತ್ತು ಮುಂದೆ `ಮಾಸಿಕ, ವರ್ಷಾಂತಿಕಾದಿ’ ಯಾವುದೇ ಕ್ರಿಯೆಗಳನ್ನೂ ನಡೆಸುತ್ತಿಲ್ಲ. ನನಗೆ ಇಷ್ಟನ್ನು ನಿವೇದಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಹಿರಿಯರಿಗೆ “ನೀವು ಸ್ವಯಂ ಪ್ರೇರಣೆಯಿಂದ ತಳೆದ ನಿರ್ಧಾರ ಮತ್ತದಕ್ಕೆ ಪೂರಕವಾಗಿ ನನ್ನ ಹಿರಿಯರನ್ನು ಸ್ಮರಿಸಿದ್ದು ಸರಿಯೇ ಇದೆ. ಇನ್ನು ಯಾವುದೇ ಗೊಂದಲಗಳನ್ನು ಉಳಿಸಿಕೊಳ್ಳದೆ ಮುಂದುವರಿಯಿರಿ. ಮಾನಸಿಕವಾಗಿಯೂ ದೈಹಿಕವಾಗಿಯೂ ನಿಮಗೂ ನಿಮ್ಮವರಿಗೂ ಶುಭವಾಗಲಿ” ಎಂದು ಮುಗಿಸಿದೆ.