[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ ‘ಬಹುಹುಚ್ಚುಗಳ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ – ಅಶೋಕವರ್ಧನ]

ಪ್ರಿಯ ಆನಂದಾ,

ಆದ್ಯತೆಯಲ್ಲಿ ಕಳೆದ ವಾರ ಯಕ್ಷಗಾನ ಗೋಷ್ಠಿ ಬಂದು ನಿನ್ನ ಕಥೆ ತಡೆ ಹಿದಿದಿದ್ದೆ. ಅಲ್ಲಿ ವಿಡಿಯೋ ಚಿತ್ರಗಳನ್ನು ಅಳವಡಿಸುತ್ತಾ ಅಭಯ ನನಗೆ ‘ಯೂಟ್ಯೂಬ್ ಕಾರ್ಯಾಚರಣೆಯ ಕ್ರಮ ವಿವರಿಸಿದ್ದು ನೆನಪಿಗೆ ಬರುತ್ತದೆ. (ಹಿಂದೆಲ್ಲ ನಾನು ಯೂಟ್ಯೂಬಿನಲ್ಲಿ ಬೇಕಾದ ಚಿತ್ರ ಆರಿಸಿಕೊಂಡು, ಕ್ಲಿಕ್ ಮಾಡುತ್ತಿದ್ದೆ. ಮತ್ತದು ಚೂರುಚೂರೇ ಲೋಡಾಗುತ್ತ ಚರೆಪರೆಗುಟ್ಟುತ್ತಾ ತುಂಡು ತುಂಡಾದ ಟೇಪಿನಂತೆ ತಡವರಿಸುತ್ತಾ ಸಾಗುವ ಉದ್ದಕ್ಕೂ ಸಹಿಸಿಕೊಳ್ಳುತ್ತಿದ್ದೆ. ಎಷ್ಟೋ ಬಾರಿ ಅರ್ಧದಲ್ಲೇ ಸ್ವಾರಸ್ಯ ಕಳೆದುಕೊಂಡು ರದ್ದುಪಡಿಸಿದ್ದೂ ಇದೆ. ಇಲ್ಲವಾದರೆ ಒಮ್ಮೆ ಪೂರ್ಣ ಲೋಡಾದ ಮೇಲೆ ರೀಪ್ಲೇ ಮಾಡುತ್ತಿದ್ದೆ.) ಅಪ್ಪಾ ನೀವು ಒಮ್ಮೆ ಕ್ಲಿಕ್ ಮಾಡುವುದು ಸರಿ. ಮತ್ತೆ ಪಾಜ್ ಕ್ಲಿಕ್ ಮಾಡಿ. ಮತ್ತದರಲ್ಲೇ ಕಾಣುವ ಚಿತ್ರದ ಅವಧಿಯವರೆಗೆ ಅದನ್ನು ಕೆಳಸಾಲಿಗೆ ಸಂಕ್ಷಿಪ್ತಗೊಳಿಸಿಬಿಡಿ ಮತ್ತು ಬೇರೆ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಪ್ರದರ್ಶನ ನಿಂತರೂ ಲೋಡಿಂಗ್ ನಡೆದೇ ಇರುತ್ತದೆ. ಅಲ್ಲೇ ಪೂರ್ಣತೆಗೆ ತಗಲುವ ಅವಧಿಯ ಇಳಿಗಣನೆ ಮಾಪಕ ನೋಡಿಕೊಂಡು ಒಟ್ಟು ವ್ಯವಸ್ಥೆಯನ್ನು ಮಿನಿಮೈಸ್ ಮಾಡಿ, ನಿಶ್ಶಬ್ದವಾಗಿ ಬೇರೇ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಹಾಗೇ ಆಯ್ತು, ತಲೆಯೊಳಗೆ ಅಂಡಮಾನ್ ಕಥನ ಪಾಜ್‌ಗೆ ಹಾಕಿದಂತೆ ಲೋಡಾಗುತ್ತಲೇ ಇತ್ತು. ತಗೋ ಮತ್ತೆ ಹರಿಬಿಡುತ್ತೇನೆ.

ಅಂಡಮಾನಿನಲ್ಲಿ ಮುಖ್ಯ ಭೂಮಿಯಲ್ಲಿ ಮಾಡಿದಂತೆ ಆಡಳಿತ ನೆಲ ಕಂಡಲ್ಲೆಲ್ಲ ಬಿಡಾರ ಹೂಡುವ ಕಲ್ಪನೆ ಅಸಾಧ್ಯ. ಪ್ರತಿ ನೆಲವೂ ಮೊದಲು ಜಲ-ಸ್ವತಂತ್ರವಾದರಷ್ಟೇ ವಿಸ್ತರಣೆ ಸಾಧ್ಯ, (ಕೊಳಾಯಿ ಸಾಲೆಳೆಯಲು ಕಾವೇರಿ ಇಲ್ಲ, ತಿರುಗಿಸಲು ನೇತ್ರಾವತಿ ಇಲ್ಲ!) ಇಲ್ಲಿನ ನವನಾಗರಿಕತೆ ಬಾನಿಗೊಂದು ಆಲಿಕೆ ಒಡ್ದುವುದು, ಟಾಂಕಾ ಕಟ್ಟುವುದು ಅನಿವಾರ್ಯ, ಎಂದಿತ್ಯಾದಿ ಲಹರಿ ಬೆಳೆಯುತ್ತಿದ್ದಾಗ ನಗ್ರಿಮೂಲೆ ಗೋವಿಂದ ಅವನ ಬ್ಲಾಗಿನ ಹೊಸ ಲೇಖನಕ್ಕೆ ( www.halliyimda.blogspot.com) ಆಹ್ವಾನಿಸಿದ. ಕೊಲರಡೋ ಕಣಿವೆಯಲ್ಲಿ ಮಳೆನೀರು ಸಂಗ್ರಹ, ನೀರಿಂಗಿಸುವ ಯೋಜನೆಗಳು ಕಾನೂನುಬಾಹಿರವಂತೆ! ಒಮ್ಮೆಗೆ ಆಶ್ಚರ್ಯವಾಯ್ತಾದರೂ ಇಂದು ಇಲ್ಲಿ ನಗರಗಳು ಬೆಳೆಯುವ ವರಿಸೆ, ಅದಕ್ಕೆ ಸವಲತ್ತು ಒದಗಿಸುವ ಹುನ್ನಾರಗಳು ನೋಡಿದರೆ ಏನೂ ತಪ್ಪಲ್ಲಾಂತವೂ ಅನ್ನಿಸುತ್ತದೆ. ಬಿಡು, ಸದ್ಯ ಅಂಡಮಾನ್ ಮೀರಿದ ವಿಚಾರಗಳನ್ನು ಕ್ಲಿಕ್ ಮಾಡಿ, ಲೋಡಿಂಗಿಗೆ ಪಾಜ್ ಕೊಟ್ಟು ಮುಖ್ಯ ಕಥನಕ್ಕೆ ಮರಳುತ್ತೇನೆ.

ಅಂಡಮಾನಿನಲ್ಲಿ ನೀರಿನ ಸಂಕಟಕ್ಕೆ ಗೊಣಸು ತಗುಲಿಸಿದಂತೆಯೇ ಇದೆ ಜಾನುವಾರು ಸಾಕಣೆ. ಹವಳ ದ್ವೀಪಗಳಾದ ಈ ನೆಲದಲ್ಲಿ ಸುಣ್ಣದ ಅಂಶದ ಪ್ರಭಾವ ಹೆಚ್ಚಿರುವುದರಿಂದ ಹುಲ್ಲು ಸದಾ ಅಭಾವ. ಆದರೂ ಇರುವ ಹೇರಿಕೆಯ ಹೈನುಗಾರಿಕೆ ‘ಸುಣ್ಣದಕಾವಿನಲಿ ಬಳಲುತ್ತದಂತೆ. ಸಿಗುವ ಹಾಲು ಮತ್ತು ಜೀವ-ಮರುಉತ್ಪತ್ತಿ ಪ್ರೋತ್ಸಾಹದಾಯಕವಲ್ಲವಂತೆ. ಇಲ್ಲಿರುವ ವನ್ಯಜೀವಿಗಳಲ್ಲಿ ಪ್ರಕೃತಿಯೂ ಹಸಿರು ಮೇವು ಅರಸುವ ಗೊರಸಿನ ಪ್ರಾಣಿಗಳನ್ನು ಪೋಷಿಸಿಲ್ಲ ಎಂಬುದು ಗಮನಾರ್ಹ. ಬ್ರಿಟಿಷರ ಕಾಲದಲ್ಲಿ ಮುಖ್ಯ ಭೂಮಿಯಿಂದ ಅಲಂಕಾರಕ್ಕೆ ತಂದು ಸಾಕಿದ್ದ ಜಿಂಕೆಗಳು, ಅವರು ಹೋದಮೇಲೆ ಬಂಧನ ಕಳಚಿಹೋಗಿ ವನ್ಯದಂತೇ ಆಗಿರುವುದನ್ನು ಮುಂದೊಂದು ದ್ವೀಪದಲ್ಲಿ ನಾವು ನೋಡಿದ್ದು ಉಂಟು. ಆದರೆ ಅವೆಷ್ಟಿದ್ದರೂ ಮಂಗಳೂರು ಬೀದಿಯಲ್ಲಿ ಬಿಟ್ಟ ಬಸವನಷ್ಟೇ ಸ್ವತಂತ್ರ. ಸಹಜವಾಗಿ ಆಹಾರ ಸರಪಣಿಯ ಕೊನೆಯಲ್ಲಿರುವ ಮಾಂಸಾಹಾರಿ ಪ್ರಾಣಿಗಳೂ ಇಲ್ಲಿ ವಿಕಸಿಸಿಲ್ಲ. (ಮನುಷ್ಯನನ್ನು ಬಿಟ್ಟರೆ) ಹಲ್ಲಿ, ಹಾವು, ಅರಣೆಗಳದ್ದೇ ದೊಡ್ಡಪ್ಪ ( Monitor Lizard) ಬಹುಶಃ ಇಲ್ಲಿನ ದೊಡ್ಡ ಮಾಂಸಾಹಾರಿ ಪ್ರಾಣಿ ಎಂಬಲ್ಲಿಗೆ ಪ್ರಕೃತಿ ಪಾಠ ಮುಗಿಸಿ ವಂಡೂರಿಗೇ ಹೋಗುತ್ತೇನೆ.

ನಾವು ಜಾಲಿಬಾಯಿಂದ ಮರಳುವಾಗಲೇ ವಂಡೂರಿನ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ, ಅದಕ್ಕೂ ಮಿಗಿಲಾಗಿ ನಮ್ಮ ಆತಿಥೇಯ ವೇಣು ಯಾವುದೋ ತಂಡಕ್ಕೆ ಮಾರ್ಗದರ್ಶಿಸಲು ಹೋಗಿದ್ದಾರೆ ಎಂದು ಭಯ್ಯಾ ಹೇಳಿದ್ದ. ಆ ತಂಡದವರನ್ನು ಕರೆತಂದಿದ್ದ ಎರಡು ವ್ಯಾನುಗಳನ್ನು ಅಲ್ಲಿ ಬಿಟ್ಟು, ದೋಣಿಯೇರಿ ಹೋಗಿದ್ದರು. ಆ ಚಾಲಕರು ಭರ್ಜರಿ ‘ಮೂಜಿಕ್ (music) ಹಾಕಿ ವೇಳೆ ಕಳೆಯುತ್ತಾ ಬಿದ್ದುಕೊಂಡಿದ್ದರು. ಸ್ವಲ್ಪ ಕಿವಿ ಇದ್ದವರಿಗೆ ಶಬ್ದಮಾಲಿನ್ಯದ ಈ ಸಣ್ಣ ಕಾಯಿಲೆಯನ್ನು ಹುಟ್ಟಡಗಿಸಿಬಿಡಬೇಕು ಎಂಬ ರೋಷ ಒಮ್ಮೆಗೆ ಬರುವಂಥದ್ದೇ. ಆದರೆ ಇದು ರೋಗಲಕ್ಷಣ, ಇದಕ್ಕೆ ಮದ್ದು ಸಲ್ಲ ಎಂದನ್ನಿಸಿತು. ವ್ಯವಸ್ಥೆಯನ್ನೇ ಗಟ್ಟಿ ಮಾಡುವ ಅವಕಾಶವಿದ್ದರೆ ಮಾತ್ರ ಮಾತಾಡಬೇಕು ಎಂದು ತಾಳ್ಮೆ ತಂದುಕೊಂಡು ನಮ್ಮಷ್ಟಕ್ಕೇ ಕಿನಾರೆಯುದ್ದಕ್ಕೆ ನಡೆದೆವು. ಸುನಾಮಿಯ ಹೊಡೆತಕ್ಕೆ ಒರಗಿದ್ದ ಧರಾಮರರ ಲೆಕ್ಕ ತೆಗೆಯುವವರಂತೆ, ಮಗುಚುವ ಅಲೆಗಳ ಸೌಂದರ್ಯ ಸಾರ್ಥಕಗೊಳಿಸುವ ಉಮೇದಿನಲ್ಲಿ (ಮೂಸುವವರಿಲ್ಲದೆ ಎಷ್ಟೊಂದು ವನಸುಮಗಳು ಉದುರಿಬೀಳುತ್ತವೆ ಎಂದೊಬ್ಬ ಕವಿ ಗರ್ವಿಸಿದ್ದು ಸುಮ್ಮನೆಯೇ) ಸುಮಾರು ನಡೆದೆವು. ಪ್ರ್ರಾಕೃತಿಕ ವಿಕೋಪದಲ್ಲೂ ಏನೋ ಒಂದು ಸೌಂದರ್ಯಾನುಭೂತಿ ನಮಗಾಗುತ್ತಿತ್ತು! ಬಿದ್ದ ಮರಗಳ, ಅವುಗಳ ಬೊಡ್ಡೆಗಳಿಗೆ ಕ್ಷಮಾಪೂರ್ವ ನೇವರಿಕೆ ಕೊಡುತ್ತಿರುವ ತೆಳು ಅಲೆಗಳ, ಹಿನ್ನೆಲೆಯಲ್ಲಿ ಕಂತುತ್ತಿದ್ದ ಸೂರ್ಯನ ಹತ್ತೆಂಟು ಬಿಂಬಗಳ ವಿವಿಧ ಕೋನಗಳ ದೃಶ್ಯ ನೋಡಿದಷ್ಟೂ ಮುಗಿಯದು. ಆದರೆ ದಿನದ ಪಾಳಿ ಮುಗಿಸುತ್ತಿದ್ದ ಸೂರ್ಯ ಬಣ್ಣದ ಮನೆಗೆ ನುಗ್ಗಿ ಹತ್ತೆಂಟು ರಂಗಿನ ಟ್ರಯಲ್ ನೋಡಿ, ಬಿಟ್ಟು, ಮಾಸಲು ಚಾದರ ಬಿಡಿಸುತ್ತಿದ್ದಂತೆ ನಾವು ಕುಟೀರಕ್ಕೆ ಮರಳಲೇಬೇಕಾಯ್ತು. ರಾತ್ರಿ ಮುಗಿಸಿ ಮತ್ತೆ ಪೋರ್ಟ್ ಬ್ಲೇರ್ ದಾರಿ ಹಿಡಿದೆವು.

ಬ್ಲೇರ್ ತಲಪಿದ್ದೇ ಹುಡುಕುಡುಕಿ ಅನ್ನಪೂರ್ಣ ಹೋಟೆಲಿನ ಪಕ್ಕದ ಗಲ್ಲಿಯಲ್ಲೇ ಒಂದು ಹೋಟೆಲಿನ ದೊಡ್ಡ ಕೋಣೆಯನ್ನು ಬಾಡಿಗೆಗೆ ಹಿಡಿದೆವು. ನಮ್ಮ ಗಂಟು ಗದಡಿಗಳನ್ನು ಅಲ್ಲಿ ಬಿಸಾಡಿ, ಇನ್ನೇನು ಮಾಸಲು ಬಟ್ಟೆಗಳ ಗಂಟಿಗೆ ಧೋಬಿ ಶಾಟ್ ಕೊಡುವವರಿದ್ದೆವು. ಆಗ ಮತ್ತೆ ಪೂರ್ವಸೂರಿಗಳ (ಬಹುಶಃ ರಹಮತ್ ತರೀಕೆರೆಯವರ ಪುಸ್ತಕದ) ಅನುಭವ ಎಚ್ಚರಿಸಿತು. ಬ್ಲೇರ್ ನಮ್ಮ ಹಳ್ಳಿಮೂಲೆಯ ಪೇಟೆಯಂತೇ ಇದ್ದರೂ ಧೋಬಿ ದರಗಳು ದುಬಾರಿ! ಕಾರಣ ಸರಳ – ಶ್ರಮ, ಸಾಬೂನು, ವಿದ್ಯುತ್‌ಗಳಿಗೆ ಇಲ್ಲಿ ನೀರಿನ ಬೆಲೆಯೂ ಸೇರುತ್ತದೆ. ಮುಖ್ಯ ಭೂಮಿಯಲ್ಲಿ ದೊಡ್ಡ ಬಟ್ಟೆ ಕೊಟ್ಟು ಸಣ್ಣದು ಬಿಟ್ಟಿ ಅನುಭವಿಸಿದ ಬಲದಲ್ಲಿ ನಮ್ಮ ಕಟ್ಟೂ ಸಾಕಷ್ಟು ದೊಡ್ಡದೇ ಇತ್ತು. (ಹಳಸಲು ಜೋಕ್ ಒತ್ತಿಕೊಂಡು ಬರ್ತಾ ಇದೆ, ಹೇಳಿಬಿಡ್ತೇನೆ. ಒಗೆಯಕ್ಕೆ ಶರ್ಟ್ ಹಾಕಿದರೆ ಕರವಸ್ತ್ರ ಉಚಿತ ಎಂದೊಂದು ಲಾಂಡ್ರಿ ಹೇಳಿತಂತೆ. ಕಾಲು ಸೋತ ಪರ್ವತಾರೋಹಿಯೊಬ್ಬ ಭಾರೀ ಬೆಟ್ಟ ಇಳಿಯುವಲ್ಲಿ ಪ್ಯಾಂಟ್ ಕುಂಡಿ ಹರಕೊಂಡು ಬಂದಾಗ ದೋಬಿಯ ಬಳಿ ಕಾಚಾ ಫ್ರೀ ಮಾಡೋ ಎಂದು ದುಂಬಾಲು ಬಿದ್ದನಂತೆ!) ಇಲ್ಲಿ ಉಚಿತ ಇಲ್ಲ, ಉಳಿದವಕ್ಕೂ ದರ ಕೇಳಿದ ಮೇಳೆ ದೊಡ್ಡಸ್ತಿಕೆ ಮೆರೆದವರೆಲ್ಲ ಊರಿಗೊಯ್ಯುವ ನೆನಪಿನ ಕಟ್ಟಿಗೆ ಸಾಕಷ್ಟು ಕೊಳೆ ಬಟ್ಟೆ ಕಟ್ಟು ಸೇರಿಸಿಕೊಂಡರು!

ಚಲೋ ಚಿಡಿಯಾ ಟಾಪ್ ಎಂದೇರಿದೆವು ಬೈಕ್. ಮೊದಮೊದಲು ಸಪಾಟಾಗಿ, ವಿಹಾರದೋಟಕ್ಕೆ ಕಡಲ ಕಿನಾರೆಯೇ ಸರಿ ಎಂಬಂತೆ ದೀರ್ಘ ತಿರುವುಗಳಲ್ಲಿ ಸಾಗಿತು ದಾರಿ. ಅಲ್ಲೊಂದೆರಡು ಕಡೆಯಂತೂ ಅಲೆಯಪ್ಪಳಿಕೆಯ ಸೌಂದರ್ಯ ನಿಂತು ನೋಡುವಷ್ಟು ಆಕರ್ಷಕವಾಗಿತ್ತು. ಮತ್ತೆ ಘಟ್ಟದಾರಿಯಲ್ಲಿ ಏರೇರುತ್ತ ದಟ್ಟ ಕಾಡೇ ಸುತ್ತುವರಿಯಿತು. ದ್ವೀಪಸ್ತೋಮದ ತಮಾಷೆ ಎಂದರೆ ಎಲ್ಲೂ ನೀವು ದೀರ್ಘ ಕಾಲ ಕಳೆದುಹೋಗುವುದು ಅಸಾಧ್ಯ! ನಾವು ಬೆಟ್ಟ ಏರುತ್ತ, ಕಾಡಿನ ಗಾಳಿ ಕುಡಿಯುತ್ತ ಎಲ್ಲೋ ಚಾರ್ಮಾಡಿಯದೋ ಶಿರಾಡಿಯದೋ ಲಹರಿಯಲ್ಲಿರುವಾಗ ತೀರಾ ಲಘು ಇಳಿಜಾರು ಬಂದು ಇನ್ನೊಂದೇ ಮಗ್ಗುಲಿನ ಕಡಲಕಿನಾರೆ ತಲುಪಿದ್ದೆವು. ಅಷ್ಟೇ ಅನಿರೀಕ್ಷಿತವಾಗಿ ಚಿಡಿಯಾಟಾಪಿನ ಪುಟ್ಟ ಪೇಟೆಯೂ ಅಲ್ಲೇ ಇತ್ತು.

ಅದುವರೆಗೆ ಸುನಾಮಿಯ ಪ್ರಾಕೃತಿಕ ನಾಶದ ಕುರುಹುಗಳನ್ನಷ್ಟೇ ನೋಡಿದ್ದ ನಮಗಿಲ್ಲಿ ನಾಗರಿಕ ಬವಣೆಗಳ ಕಿರು ಕುರುಹುಗಳೂ (ಕೆಲವು ಕಥೆಗಳೂ) ಸಿಕ್ಕವು. ಈಗ ಅಲ್ಲಿ ಕಾರ್ಯಾಚರಿಸುತ್ತಿದ್ದ ಮಳಿಗೆಗಳೆಲ್ಲ ಸುನಾಮಿಯೋತ್ತರ ಕಾಲದಲ್ಲಿ ಹೊಸದಾಗಿ ರೂಪುಗೊಂಡವು. ಕೆಲವು ಕಟ್ಟಡ ಹಳತೇ ಉಳಿದಿದ್ದರೂ ಹಿಂದಿನ ಮಳಿಗೆ ಮಾಲೀಕರುಗಳು ನಾಮಾವಶೇಷರಾಗಿದ್ದಾರೆ. ಅಂಥಾ ಒಂದು ಹಿಟ್ಟಿನ ಗಿರಣಿಯಲ್ಲಿ ಯಂತ್ರೋಪಕರಣಗಳು, ಒಂದು ಸ್ಕೂಟರ್, ಒಂದು ಬೈಕ್ ಸುನಾಮಿಯ ಭೀಕರ ಸ್ನಾನ ಮುಗಿಸಿ ಅವಶೇಷಗಳ ಮಟ್ಟದಲ್ಲಿ ಉಳಿದಿದ್ದದ್ದು ಹಾಗಾಗೇ ನಿಂತುಕೊಂಡಿರುವುದು ಮನಕಲಕುವಂತಿತ್ತು. ಅಲ್ಲಿನ ಹೊಸ ಅರ್ಧ ಚಂದ್ರಾಕೃತಿಯ ಸಮುದ್ರ ತಡೆಗೋಡೆ, ದೋಣಿಕಟ್ಟೆ, ವಾಹನ ತಂಗುದಾಣದ ಕೆಲಸಗಳು ಎಲ್ಲ ಸಾರ್ವಜನಿಕ ಕಾಮಗಾರಿಗಳ ಅವ್ಯವಸ್ಥೆಯನ್ನು ಬಿಂಬಿಸುತ್ತಿತ್ತು. ಯಾರಿಗ್ಗೊತ್ತು, ಕಡಲುರಿಯ ಕರಾಳ ಹಸ್ತ ನಾಳೆಯೇ ಬರಬಹುದು. ಆಗ ಕಾಮಗಾರಿ ಪೂರ್ಣಗೊಳ್ಳದ್ದರಿಂದ ತಮ್ಮನ್ನು ದೂರುವಂತಿಲ್ಲ. ಮತ್ತೆ ಕಳ್ಳಕೆಲಸದ ಸುಳಿವೂ ಉಳಿಯದಂತೆ ನೋಡಿಕೊಳ್ಳುವ ಕೆಲಸ ಸುನಾಮಿ ಮಾಡಿಯೇ ಮಾಡುತ್ತದೆ. ಚುರುಕು, ಚೊಕ್ಕ? ಪ್ರಪೋಜಲ್ಲು, ಪ್ರಾಜೆಕ್ಟುಗಳ ಸರಣಿಯನ್ನು ದಿಢೀರನೆ ಕಡಿದರೆ, ಕೆಲಸವನ್ನು ಕರಕ್ಟಾಗಿ ಕಂಪ್ಲೀಟ್ ಮಾಡ್ದ್ರೇ ನಾವು ಬದುಕಬೇಡ್ವೇ ಸರೂ ಅಂತ ಸೀಜನ್ಡ್ ಸರಕಾರೀ ಕಂತ್ರಾಟುದಾರನೊಬ್ಬ ಪ್ರಾಮಾಣಿಕವಾಗಿ ಹೇಳಿದ್ದು ನೆನಪಿಗೆ ಬಂತು.

ನಾವು ಬಂದ ದಾರಿ ಎದುರಿನ ಪುಟ್ಟ ಗುಡ್ಡೆ ನೆತ್ತಿಯ ಭಾರೀ ಬಂಗ್ಲೆಗೂ ಅಸ್ಪಷ್ಟ ಕವಲಿನಲ್ಲಿ ಎಡಕ್ಕೆ ಹೊರಳಿ ಕಾನನಾಂತರಕ್ಕೂ ಹೋಗುವುದು ಕಾಣುತ್ತಿತ್ತು. ಅರಣ್ಯ ಇಲಾಖೆ ಆ ಕಾಡುದಾರಿಗೆ ಬೈಕೂ ನುಸುಳದಂತೆ ಅಡ್ಡ ಸರಪಳಿ ಕಟ್ಟಿದ್ದರು. ನಡೆದು ಹೋಗುವವರಿಗೆ ಯಾವ ಕಟ್ಟುಪಾಡೂ ಇಲ್ಲವೆಂದು ತಿಳಿದ ಮೇಲೆ ನಾವು ಬೈಕ್ ಅಲ್ಲೇ ಬಿಟ್ಟು ಮುಂದುವರಿದೆವು. ಅನುಮತಿ ಪಡೆದು ಮತ್ತೂ ಬೈಕಿನಲ್ಲೇ ಮುಂದುವರಿಯುವ ತುರ್ತು ನಮಗೇನೂ ಇರಲಿಲ್ಲ. ಬಂಗ್ಲೆ ದಾರಿ ಗುಡ್ಡೆಯ ಇನ್ನೊಂದು ಮಗ್ಗುಲಿನ ಕಡಲಕಿನಾರೆಯ ಉದ್ದಕ್ಕೆ ಇದ್ದದ್ದು ಸುನಾಮಿಯ ಆಘಾತದಲ್ಲಿ ಹರಿದು ಹೋಗಿತ್ತು. ಸದ್ಯ ಮಾರಿ ಹಲಗೆಗಳೂ (earth movers), ಕಾಂಕ್ರೀಟ್ ಕಲಸುಗಗಳೂ ನೂರೆಂಟು ಕೂಲಿಗಳು ಕೆಲಸ ನಡೆಸಿದ್ದರು. ತಮಾಷೆ ಅಂದರೆ, ಅಂದು ಯೋಚನೆ ಮಾಡಿಯೇ ಇರಲಿಲ್ಲ. ಈಗ ಕಾಡುತ್ತಿದೆ ಪ್ರಶ್ನೆ – ಕಾಂಕ್ರೀಟ್ ಕೆಲಸಕ್ಕೆ ನೀರೆಲ್ಲಿಂದ? ನೆನಪಿನ ವಿವರಗಳಿಗೆ ಝೂಂ-ಇನ್ ಮಾಡುವ ಸೌಲಭ್ಯವಿಲ್ಲದೆ ಸೋತೆ! ಮೊರೆದು ನೊರೆಯುತ್ತಿದ್ದ ಮತ್ತು ಮೊಗೆದು ಮುಗಿಯದ ಉಪ್ಪುನೀರಲ್ಲೂ ಕಾಂಕ್ರೀಟ್ ಕೆಲಸ ಸಾಧ್ಯವಾಗುವ ತಂತ್ರ ಜ್ಯಾರಿಯಲ್ಲಿತ್ತೇ ಅಸಾಧ್ಯವೇ – ಬಲ್ಲವರು ಹೇಳಬೇಕು!

ಅಭಿವೃದ್ಧಿ ಕಾಮಗಾರಿಗಳ ಗದ್ದಲ, ವಾಸನೆ ಮೀರಿ ದಾರಿ ಸ್ವಲ್ಪ ಒಳನಾಡಿನತ್ತ ತಿರುಗಿ ಗುಡ್ಡೆಯ ಏರು ಮೈ ತೋರಿಸಿತು. ಮುಂದುವರಿದಂತೆ ಡಾಮರು ಚೆನ್ನಾಗಿದ್ದರೂ ಸಂಪರ್ಕ ತಪ್ಪಿದ್ದರಿಂದ ನಿರ್ಜನ, ನೀರವ ನಡಿಗೆಗೆ ಅನುಕೂಲವಿತ್ತು. ದಾರಿಯ ನೆತ್ತಿ ಪೂರ್ತಿ ತೆರವಾಗಿದ್ದು ನಮ್ಮ ಮಂಡೆ ಚುರುಗುಟ್ಟಿದರೂ ಅಕ್ಕಪಕ್ಕಗಳ ಮರಗಳ ದಟ್ಟಣೆ, ಮುಚ್ಚಿ ಬಂದ ಕುರುಚಲು ಸಾಂತ್ವನ ಹೇಳಿತು. ದಪ್ಪ ಬೀಜ ಹೊತ್ತ ದೊಡ್ಡ ಗಿರಿಗಿಟಿಯ ಇರಿಪು ಮರ ನನ್ನನ್ನು ಬಹಳ ಆಕರ್ಷಿಸಿತು. ನಾನು ಕೆಲವು ಬೀಜ ಸಂಗ್ರಹಿಸಿಟ್ಟುಕೊಂಡು ಊರಿಗೆ ಮರಳಿದಮೇಲೆ ಗಿಡ ಮಾಡಿ ಬಿಸಿಲೆಯ ನಮ್ಮ ಕಾಡಿನಲ್ಲಿ (ಅಶೋಕವನ) ನೆಟ್ಟುಬಿಡುವ ಯೋಚನೆಯನ್ನೂ ಮಾಡಿದ್ದೆ. ಆದರೆ ಇಂಥಲ್ಲೆಲ್ಲ ನಿರೇನ್ ವೈಜ್ಞಾನಿಕತೆ ಹೆಚ್ಚು ನಿಖರ ಮತ್ತು ಅಂದು ಕಠೋರ ಎಂದೂ ಅನ್ನಿಸಿತು! ಇಲ್ಲ ಅಶೋಕರೇ ದ್ವೀಪದ ವೈಶಿಷ್ಟ್ಯವನ್ನು ಬುದ್ಧಿಪೂರ್ವಕವಾಗಿ ನಾವು ಪಶ್ಚಿಮಘಟ್ಟದ ಪರಿಸರಕ್ಕೆ ಹೇರುವುದು ಪರಿಸರ ರಕ್ಷಣೆಯ ವ್ಯಾಪ್ತಿಯಲ್ಲಿ ಸರಿಯಲ್ಲ ಎಂದುಬಿಟ್ಟರು. ಅಡಿಗೆ ಬಿದ್ದರೂ ಮೀಸೆ ಮೇಲೆಂದು (ನಿರೇನ್‌ಗೆ ಮೀಸೆಯೇ ಇಲ್ಲವಾದ್ದರಿಂದ ಮೇಲೆ ಬಿದ್ದರೂ ಗೊತ್ತಾಗುವುದು ಕಷ್ಟ!) ನಾನು ಇಲ್ಲ, ಪೇಟೆಯೊಳಗಿನ ಪಾಳುಭೂಮಿ ಪುನರುತ್ಥಾನ ಪ್ರಯೋಗನೆಲೆಯಾದ ನಮ್ಮದೇ ಇನ್ನೊಂದು ನೆಲದಲ್ಲಿ (ಅಭಯಾರಣ್ಯ) ನಡುತ್ತೇನೆ ಎಂದು ಜಾರಿಸಿದೆ. ನಿಜಾ ಹೇಳುತ್ತೇನೆ, ಊರಿಗೆ ಮರಳಿದಮೇಲೆ ಅದನ್ನೇನು ಮಾಡಿದೆ ಎಂದೇ ಮರೆತುಹೋಗಿದೆ! ದ್ವೀಪಸ್ತೋಮಕ್ಕೇ ವಿಶಿಷ್ಟವಾದ ತಿಳಿಹಸುರು ಹಲ್ಲಿ ಕಾಣಿಸಿದ್ದು ಚಿಡಿಯಾಟಾಪಿನ ಈ ದಾರಿಯಲ್ಲೆ; ಕಾಡುಮರದ ಕಚ್ಚಾ ಕಾಂಡಕ್ಕೆ ಯಾರಂಟಿಸಿದ್ದು ಈ ಆಟಿಕೆ (ಪ್ಲ್ಯಾಸ್ಟಿಕ್ ಹಲ್ಲಿ)? ಯಾವುದೋ ಹದ್ದು ಗಸ್ತು ಹೊಡೆಯುತ್ತಿತ್ತು. ಇನ್ಯಾವುದೋ ಹಕ್ಕಿ ಅಶರೀರವಾಣಿ ಕೊಡುತ್ತಿತ್ತು. ಸುದೂರದ ಮರದೆತ್ತರದಲ್ಲಿ ಹಕ್ಕಿಗಳೆರಡರ ಬೇಟದಾಟಕ್ಕೆ ನಾವೂ ವಾಲ್ಮೀಕಿ ಕಣ್ಣು ಕೀಲಿಸಿದೆವು. ಸನ್ನಿವೇಷದಲ್ಲೇನೂ ಬದಲಾವಣೆ ಬರಲಿಲ್ಲ (ನಿನ್ನ/ನಿಮ್ಮೆಲ್ಲರ ಪುಣ್ಯ), ಹುತ್ತಗಟ್ಟಲಿಲ್ಲ ಮನಸ್ಸು (ಬರುತ್ತಿಲ್ಲ ಇನ್ನೊಂದು ರಾಮಣ್ಯ). ಮತ್ತೆ ದುರ್ಬೀನಿಟ್ಟು ನೋಡಿದರೆ ಎಲ್ಲೆಲ್ಲೂ ಎಲೆ ಎಲೆ ಎನ್ನುತ್ತಿರುವಾಗಲೇ ಹಕ್ಕಿಯ ತಲೆ ಮೂಡಿಸಿ ನಗುತ್ತಿತ್ತು ಚಿಡಿಯಾ ಟಾಪ್ ಅರ್ಥಾತ್ ಹಕ್ಕೀ ದಿಬ್ಬ.

ದಾರಿ ಮತ್ತೆ ಇಳಿದು ಸಮುದ್ರದ ಮಟ್ಟಕ್ಕೆ ಬರುವಲ್ಲಿಗೆ ಒಂದೆರಡು ಕಾರುಗಳು, ಕೆಲವು ವಿಹಾರಿಗಳು ಇನ್ಯಾವುದೋ ಕಾಡು ದಾರಿ ಹಿಡಿದು ಬಂದು ಹರಡಿಕೊಂಡಿದ್ದರು. ವಾಸ್ತವದಲ್ಲಿ ಪಕ್ಷಿ, ಪರಿಸರ ವೀಕ್ಷಣೆಗೆ ನಡಿಗೆಯೇ ಸರಿಯಾದ ಕ್ರಮ. ಆದರೆ ಆ ಕಾರುಗಳ ಜನರನ್ನು ಕಂಡಾಗ, ತಲೆ ತೂತಾಗುವ ಬಿಸಿಲಿದ್ದರೂ ಹೊಟ್ಟೆಯೊಳಗೆ ಉರಿ ಎದ್ದದ್ದು ಸುಳ್ಳಲ್ಲ. ಬಂದದ್ದಂತೂ ಆಯ್ತು, ಮತ್ತೆ ಅಷ್ಟನ್ನೂ ಮರಳಿ ನಡೆಯಲೇ ಬೇಕೆನ್ನುವ ಸ್ಥಿತಿಗೆ ಎಲ್ಲರೂ ಬೈಕ್ ತರಬಹುದಿತ್ತು ಎಂದು ಗೊಣಗಿಕೊಂಡೆವು! ಮುಂದೆ ದಾರಿಯೇ ಇರಲಿಲ್ಲವೋ ಅಥವಾ ಇದ್ದ ದಾರಿಯನ್ನೂ ಸೇರಿಸಿ ನೆಲದ ಬಹ್ವಂಶವನ್ನು ಸಮುದ್ರ ನುಂಗಿರಬಹುದೇ ಎಂಬ ಸಂಶಯ ಬರುವ ಸ್ಥಿತಿ. ಒಂದು ಪುಟ್ಟ ತೊರೆಯಂಥ ಹಿನ್ನೀರ ಸೆರಗು ದಾಟಿದ ಮೇಲಂತೂ ಉರುಳಿಬಿದ್ದ ಒಂದೆರಡು ಭಾರೀ ಮರ ರೂಢಿಯ ಜಾಡೂ ಉಳಿಸಿರಲಿಲ್ಲ. ಸಮುದ್ರ ತೊಳೆಯುತ್ತಿದ್ದ ನುಣ್ಣನೆ ಮರಳ ಹಾಸಿನ ಮೇಲೆ ಸ್ವಲ್ಪ ನಡಿಗೆ. ಅಲ್ಲೊಬ್ಬ ಬೆಸ್ತ ತನ್ನ ಪುಟ್ಟದೋಣಿಯನ್ನು ಮುಳುಗಿ ನಿಂತ ಮರಗಳೆಡೆಯಲ್ಲಿ ಕಟ್ಟಿ, ಎದೆ ಮಟ್ಟದ ಅಲ್ಲೋಲಕಲ್ಲೋಲದಲ್ಲಿ ಮುಳುಗುತ್ತೇಳುತ್ತ ನಡೆದು ದಡ ಸೇರುತ್ತಲಿದ್ದ. ನಿರೇನ್‌ಗೋ ಅವನ ಸಂಗ್ರಹದ ಮೀನುಗಳ ಬಗ್ಗೆ ತಿಳಿಯುವ ಕುತೂಹಲ. ಅಂದಿನ ಸಮುದ್ರ, ಒಟ್ಟಾರೆ ಮೀನುಗಾರಿಕೆ, ಅಂದಿನ ಕೊಳ್ಳೆ ಇತ್ಯಾದಿ ಮಾತಿನ ಕಟ್ಟಡ ನಿಲ್ಲಿಸುವ ಪ್ರಯತ್ನಕ್ಕೆ ಪರಸ್ಪರ ಭಾಷಾ ಅಡಿಪಾಯವೇ ಬೇರೆಯಿದ್ದದ್ದು, ತುಂಬಿಕೊಡಲು ನಾವೆಲ್ಲರೂ ಅಸಹಾಯಕರಾದದ್ದು ತಮಾಷೆಯಾಗಿತ್ತು. ಮುಂದೆ ಸ್ಪಷ್ಟ ಸವಕಲು ಕಾಲುದಾರಿ ಗುಡ್ಡೆಯ ಕುರುಚಲು ಕಾಡಿನ ನಡುವೆ ಏರಿ ಸಾಗಿತ್ತು. ನಾವು ಅನುಸರಿಸಿದಂತೆ ಒಂದೆರಡು ಕವಲು ಜಾಡು ಸ್ವಲ್ಪ ಕಾಡಿತು. ಆದರೆ ಯಾವುದು ಆರಿಸಿದ್ದರೂ ಭಾರೀ ಮೋಸವಾಗದಷ್ಟು ಸಣ್ಣದಿತ್ತು ಮುಂದಿನ ನೆಲ. ನೂರಿನ್ನೂರು ಹೆಜ್ಜೆಗಳಲ್ಲೇ ಗುಡ್ಡದ ನೆತ್ತಿ ಸೇರಿದ್ದೆವು. ಅಲ್ಲಿ ಚದುರಿದಂತಿದ್ದರೂ ಸಾಕಷ್ಟು ದೊಡ್ಡ ಮರಗಳ ತೋಪೇ ಇತ್ತು. ಆಚಿನ ಮೈಯ್ಯ ಇಳುಕಲಿನ ಕೊನೆಯಲ್ಲಿ ಸಮುದ್ರ ಭೋರ್ಗರೆಯುತ್ತಿತ್ತು.

ಅದೊಂದು ಅರ್ಧ ಚಂದ್ರಾಕೃತಿಯ ದಂಡೆ. ನಾವು ಅತ್ತ ಇಳಿದು ನಿರಪಾಯದ ಎತ್ತರದಲ್ಲಿ ನಿಂತು ಅದರ ಚಂದ ಅನುಭವಿಸಿದೆವು. ಶುದ್ಧ ಕಲ್ಲಿನ ಆ ಕಿನಾರೆ ನೀರಿಗೂ ಒಂದಿಷ್ಟು ಪಾದೆ ಚಾಚಿತ್ತು. ನಮ್ಮ ಸೋಮೇಶ್ವರದ ರುದ್ರಪಾದೆಯಲ್ಲಿ ಕಂಡಂತದ್ದೇ ಆಟ. ಈ ಕೊರಕಲಿನಿಂದ ಒಂದು ಮಹಾ ಅಲೆ ನುಗ್ಗಿ ಬಡವಾಗುವುದರೊಳಗೆ ಆ ಸಂದಿನಿಂದೊಂದು ಹೆದ್ದೆರೆ ನುಗ್ಗುತ್ತಿತ್ತು. ಇದನ್ನು ಅಳಿಸಿ ಅದು ನಗುವ ಮೊದಲು ಮೂರನೆಯದು ಮತ್ತೆ ನಾಲ್ಕನೆಯದು ಹೀಗೆ ಬಿಳಿನೊರೆಯ ಉಕ್ಕು, ಸೊಕ್ಕು ನೋಡನೋಡುತ್ತಾ ಕ್ಷೀರಸಾಗರ ಮಥನದ ರಮ್ಯ ನಮ್ಮೆದುರು ನಿರಂತರವಾಗಿತ್ತು. ಬಂಡೆ ಹಾಸಿನ ಉನ್ನತ ಕೇಂದ್ರದಲ್ಲಿ ಪ್ರಕೃತಿಯ ಶಕ್ತಿಗಳು ಒಂದಾಗಿ ಒಂದಾಳು ಸುಲಭದಲ್ಲಿ ನುಗ್ಗಬಹುದಾದಷ್ಟು ದೊಡ್ಡ ಗವಿಯನ್ನೇ ಮಾಡಿದ್ದವು. ಅಲ್ಲಿವರೆಗೂ ನುಗ್ಗಿದ ಬೆಳ್ದೆರೆಗಳನ್ನು ಅದು ಕುಡಿದದ್ದೇ ಕುಡಿದದ್ದು. ಆದರೂ ಅದು ತುಂಬಿದ ಸ್ಥಿತಿ ಕಾಣದಾಗ ತಳವಿಲ್ಲದ ಸರಕಾರೀ ಖಜಾನೆಯ ನೆನಪಾದದ್ದು ಸುಳ್ಳಲ್ಲ! ಅಷ್ಟ ಗ್ರಹ ಕೂಟ ಎಂದು ಕೇಳಿದ್ದುಂಟು (ಕಣಿನುಡಿಯುವ ಢೋಂಗಿಗಳ ಮಾತು. ನಿಜ ಆಗಸದಲ್ಲಿ ಅದೊಂದು ಸುಳ್ಳು. ನಿಂತ ನೆಲದ ಬಲದಲ್ಲೇ ಸಾಧಿಸುವುದಾದರೆ ನೂರೆಂಟು ಗ್ರಹಕೂಟವಾದರೂ ಆಶ್ಚರ್ಯವಲ್ಲ ಎಂದು ಇದ್ದಿದ್ದರೆ ನಮ್ಮಪ್ಪ ಕೂಡಲೇ ಹೇಳುತ್ತಿದ್ದರು). ಆದರಿಲ್ಲಿ ಅಷ್ಟೂ ಧಾರೆಗಳ ಕೂಟ ಒಮ್ಮೆ ಆದಾಗ ಗವಿಯ ತಳದಿಂದಲೂ ಬೆಳ್ಳಿ ಉಕ್ಕಿ, ಪೂರ್ಣ ಕಲ್ಲನ್ನು ಮರೆಸಿ ಮೆರೆಯುವುದು ಹೊಸತೇ ಅದ್ಭುತ ನೋಟ.

ಹೊಟ್ಟೆ ತಾಳ ಹಾಕುತ್ತಿತ್ತು, ಕುಡಿನೀರೆಲ್ಲರಲ್ಲೂ ಅಂಡೆಗಳ ತಳ ಸೇರಿದ್ದವು. ಅಂದರೆ ವಾಸ್ತವ ನಮ್ಮನ್ನು ವಾಪಾಸಾಗಲು ನೆನಪಿಸಿತು. ಬಾಲ, ಕರೆಕುಚ್ಚುಗಳಲ್ಲಿ ಸಂಭ್ರಮಿಸುತ್ತ, ಪ್ರತಿ ಸೆಳೆತಕ್ಕೂ ಒಲ್ಲೆ ಒಲ್ಲೆನೆನ್ನುವಂತೆ ಆಚೀಚೆ ತೊನೆಯುವ ಗಾಳಿಪಟದಂಥ ನಮ್ಮ ಮನಸ್ಸನ್ನು ಜಗ್ಗುತ್ತ ಬೈಕಿನವರೆಗೆ ಮರಳಿದೆವು. ಅಲ್ಲಿನ ತಮಿಳರ ಹೋಟೆಲಿನಲ್ಲಿದ್ದ ಅನ್ನ ಮತ್ತು ಏಕೈಕ ಸಸ್ಯಾಹಾರಿ ಸಾಂಬಾರಿಗೆ ನಾವು ದೊಡ್ಡ ಗಿರಾಕಿಗಳಾದೆವು. ಮುಕ್ತಾಯಕ್ಕೆ ಊರಿನ ನೆನಪಿನಲ್ಲಿ ಮಜ್ಜಿಗೆ ಕಲಸಿ ಉಣ್ಣುವ ಭ್ರಮೆಗೆ ಅಲ್ಲಿನ ಅಂಗಡಿಯಲ್ಲಿದ್ದ ಯಾವುದೋ ಕಂಪೆನಿಯ ಸೀಲ್ಡ್ ಪ್ಯಾಕೇಟ್ ಕೊಂಡು ಕಲಸಿಯೂ ಬಿಟ್ಟೆವು. ಆದರದು ನಮ್ಮ ರುಚಿಗೆ ಅಪರಿಚಿತವಾದ ಜೀರಿಗೆ ಮಸಾಲೆಯ ಮಜ್ಜಿಗೆಯಾಗಿ, ಪಥ್ಯದ ಆಹಾರವೇ ಆಯ್ತು. ಒಬ್ಬರಿಗೊಬ್ಬರು ಕ್ಕಳುಹಿಸು ಹೇಳಿಕೊಂಡು ಊಟ ಮುಗಿಸಿದೆವು. ನಿನಗೆ ಕುತೂಹಲ ಮೂಡಿರಬಹುದು, ಈ ‘ಕ್ಕಳುಹಿಸು ಏನು?

ನಿನಗ್ಗೊತ್ತೋ ಇಲ್ಲವೋ ನಮ್ಮ ಮನೆಯಲ್ಲಿ ಏನೇ ತಿನ್ನುವಾಗ ಒತ್ತಾಯದ ಮಾತು ಬಂದರೆ ‘ಮಿನಾಕ್ಷಿಗಂಡನ* ನೆನಪಾಗಿಯೇ ಶುದ್ಧ!

* ಈ ಸಂಬೋಧನೆ ಆನಂದನಿಗೆ ಸಹಜವಾಗಿಯೇ ಕೇಳಬಹುದು. ಆದರೆ ಇತರರಿಗೆ ವಿಚಿತ್ರವಾಗಿ ಕೇಳಬಹುದು ಎಂಬುದಕ್ಕೆ ಸಣ್ಣ ವಿವರಣೆ:

ನಮ್ಮ ಕುಟುಂಬದ ತೀರಾ ಸಣ್ಣ ವೃತ್ತದಲ್ಲಿ ಪ್ರಾಯ, ಸಂಬಂಧ ಅಬಾಧಿತವಾಗಿ ಹೆಚ್ಚಿನವರು ಪರಸ್ಪರರನ್ನು ಅಂಕಿತನಾಮದಲ್ಲಿ ಅನ್ನಬಹುದು ಅಥವಾ ರೂಢನಾಮದಲ್ಲಿ ಎಂದರೂ ಸರಿ, ಸಂಬೋದಿಸುವುದೇ ಸಂಪ್ರದಾಯವಾಗಿದೆ! ನನ್ನ ತಂದೆ ಅವರ ತಂದೆಯ ಕುರಿತು ಯಾವುದೇ ಸಂಬಂಧಸೂಚಕ ಬಿಡಿ, ಸಂಬೋಧನಾಪದವನ್ನೂ ಬಳಸಿದವರಲ್ಲವಂತೆ. ತಮಾಷೆ ಎಂದರೆ ನಾವು ಮೂರೂ ಮಕ್ಕಳು ನಮ್ಮ ತಂದೆಯನ್ನೂ (ಅಪ್ಪ, ಅಣ್ಣ, ಡ್ಯಾಡಿ ಇತ್ಯಾದಿ) ಸಹಜವಾಗಿ ಏನೂ ಸಂಬೋಧಿಸದೇ ಸುಧಾರಿಸಿಬಿಟ್ಟೆವು! ನಾನು ನನ್ನ (ತಾಯಿಯ ಕಡೆಯಿಂದ) ಎಲ್ಲಾ ಚಿಕ್ಕಮ್ಮಂದಿರನ್ನು, ಸೋದರ ಮಾವಂದಿರನ್ನು (ತಂದೆಯ ಕಡೆಯಿಂದ) ಚಿಕ್ಕಪ್ಪಂದಿರನ್ನು, ಅತ್ತೆಯನ್ನು ಮಾತು ಬಂದಂದಿನಿಂದ ಹೆಸರು ಹಿಡಿದೇ ಮಾತಾಡಿಸಿದವನು. ಹೆಚ್ಚುಕಡಿಮೆ ಅವರೂ ಅಷ್ಟೇ! ಹೀಗಾಗಿ ಕುಟುಂಬಕ್ಕೆ ಹೊರಗಿನ ಸಂಸ್ಕಾರದವರು ಯಾರು ಬಂದರೂ (ಚಿಕ್ಕಮ್ಮಂದಿರ ಗಂಡಂದಿರು, ಚಿಕ್ಕಪ್ಪಂದಿರ ಹೆಂಡಂದಿರು ಮತ್ತವರ ಸಂಬಂಧಿಗಳು) ರೂಢಿಸಿರುವ ಅನೌಪಚಾರಿಕೆಯನ್ನು ಉದಾರಮನಸ್ಸಿನಿಂದ ಸ್ವೀಕರಿಸಿದ್ದಾರೆ. ಇಲ್ಲಿ ಯಾರನ್ನೇ ಆಗಲಿ ಕೀಳ್ಗಳೆಯುವ ಯೋಚನೆಗಳು ಇಲ್ಲ. ಅದಿರಲಿ. ಮೀನಾಕ್ಷಿ ನನ್ನ ಒಬ್ಬ ಚಿಕ್ಕಮ್ಮ. ವಾರಣಾಸಿ ಕೃಷ್ಣ ಭಟ್, ಚುಟುಕದಲ್ಲಿ ವಿಕೆ ಭಟ್ ಆಕೆಯ ಗಂಡ.

ಆಗೆಲ್ಲಾ ಕುಂಬಳೆಯ ಹವ್ಯಕ ಸಮಾಜದಲ್ಲಿ ಕೃಷಿ ಪ್ರಧಾನ. ಬಿಟ್ಟರೆ ಶಾಲಾಮಾಸ್ತರಿಕೆ, ವಕೀಲತನ. ಅವರ ನಡುವೆ ರಜೆಯಲ್ಲಿ ಬರುತ್ತಿದ್ದ ಬೊಂಬಾಯಿಯ ಕಿಟ್ಟಣ್ಣ ಅಪರೂಪದ ಇಂಜಿನಿಯರ್ ಎಂದೇ ವಿಕೆ ಭಟ್ಟರನ್ನು ನೆನಪಿಸಿಕೊಳ್ಳುತ್ತಾರೆ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ. ತಿಂಗಳ ತಲಬಿನ ವೃತ್ತಿಯಲ್ಲೇ ಇವರು ಮುಂಬೈ ಪ್ರವೇಶಿಸಿದರೂ ಬೇಗನೆ ಸ್ವತಂತ್ರ ಕಂಪೆನಿ ಸ್ಥಾಪಿಸಿ, ವಿಶಿಷ್ಟ ಎಲೆಕ್ಟ್ರಾನಿಕ್ ಸರಕುಗಳ ಆಮದು, ವ್ಯವಹಾರಗಳಲ್ಲಿ ದೃಢವಾಗಿ ಬೆಳೆಯುತ್ತಿದ್ದರು. ಆ ಕಾಲದಲ್ಲಿ ನಾನು ಪುಸ್ತಕವ್ಯಾಪಾರಿತನದಲ್ಲಿ ಅಂಬೆಗಾಲಿಡುತ್ತ ಸುಮಾರು ಒಂದೂವರೆ ತಿಂಗಳು ಇವರ ಮನೆಯಲ್ಲಿದ್ದೆ (೧೯೭೩). ಮಾತು ಕಡಿಮೆ, ಆಡಿದರೂ ಸೌಮ್ಯ, ಎಲ್ಲ ಗೆಲ್ಲುವ ನಗೆ ಇವರ ಮುಖ್ಯ ಅಭಿವ್ಯಕ್ತಿ. ಮುಂಬೈಯ ಕಿಷ್ಕಿಂಧೆಯಂಥಾ ಇವರ ಮನೆಯಲ್ಲಿ ಅನಂತ, ಅನಿತರ (ಅವರೆರಡು ಮಕ್ಕಳು) ಅಣ್ಣನ ಹಕ್ಕಿನಲ್ಲಿ ವಕ್ಕರಿಸಿದ್ದ ನನ್ನನ್ನೂ ಹದಿನೈದಿಪ್ಪತ್ತು ಕಟ್ಟು ತುಂಬಾ ಬಂದು ಬಿದ್ದ ನನ್ನ ಪುಸ್ತಕರಾಶಿಯನ್ನೂ ಇವರು (ಚಿಕ್ಕಮ್ಮ ಸಹಿತ) ಕಿಂಚಿತ್ತೂ ಕೊರತೆ ಬಾರದ ಪ್ರೀತಿಯಲ್ಲಿ ನಡೆಸಿಕೊಂಡಿದ್ದರು. ಅದೇ ಪ್ರಥಮ ಮುಂಬೈಗೆ ಕಾಲಿಡುತ್ತಿದ್ದ ನನ್ನನ್ನು ಮನೆಗೆ ಬರಮಾಡಿಕೊಳ್ಳುವಲ್ಲಿ, ಲಾರಿಯಾಫೀಸಿಗೆ ಬಂದು ಬಿದ್ದಿದ್ದ ಪುಸ್ತಕ ಬಂಡಲುಗಳನ್ನು ಸಂಗ್ರಹಿಸಿಕೊಳ್ಳುವಲ್ಲಿ, ಮನೆಯಲ್ಲದನ್ನು ಓಣಿಯ ಉದ್ದಕ್ಕೆ ಬಿಡಿಸಿ ಜೋಡಿಸಿಕೊಳ್ಳುವಲ್ಲಿ, ಸಂಪರ್ಕ ವ್ಯಕ್ತಿಗಳೂ ಗಿರಾಕಿಗಳೂ ಆಗಬಹುದಾದ ವ್ಯಕ್ತಿಗಳನ್ನು ಪಟ್ಟಿ ಮಾಡುವಲ್ಲಿ, ಪ್ರತಿ ದಿನದ ನನ್ನ ಕಲಾಪವನ್ನು ಮುನ್ನೂಡಿಯುವಲ್ಲಿ ಮತ್ತು ದಿನದ ಕೊನೆಗೆ ವರದಿ ಕೇಳುವಲ್ಲಿ ಅವರ ಉತ್ಸಾಹ ನೆನೆಸಿಕೊಂಡರೆ ನನಗಾಗ ಅವರಿಗೊಂದು ಪ್ರತ್ಯೇಕ ಜವಾಬ್ದಾರಿ ಇತ್ತು ಎನ್ನುವುದೇ ತಿಳಿಯದಂತಿತ್ತು! ನಾನಲ್ಲಿದ್ದ ಅವಧಿಯಲ್ಲೇ ಬಹುಶಃ ಎರಡು ವಾರಾಂತ್ಯಗಳಲ್ಲಿ ಸಣ್ಣ ಪುಸ್ತಕ ಪ್ರದರ್ಶನ ಮಾರಾಟ ನಡೆಸಿದೆ. ಅಲ್ಲಿ ನನಗೊದಗಿದ ಸಂಬಳರಹಿತ ಸಹಾಯಕನೂ ದಿನದ ಕೊನೆಯಲ್ಲಿ ಎಲ್ಲವನ್ನು ಮನೆಗೆ ಮತ್ತೆ ಮುಟ್ಟಿಸುವ ಅನುಭವೀ ಹಿರಿಯನೂ ಇವರೇ.

ಊಟ ತಿಂಡಿಗಳಲ್ಲಿ ನನಗೆಂದೂ ಸಂಕೋಚ ಕಾಡದಂತೆ ಚಿಕ್ಕಪ್ಪ ನಡೆಸಿಕೊಳ್ಳುತ್ತಿದ್ದರು. ಸ್ವತಃ ಬಡಿಸಲು ನಿಂತು ತಿನ್ನುವವರಿಗೆ ಅನಾವಶ್ಯಕ ಹೊರೆಯಾಗುತ್ತಿರಲಿಲ್ಲ, ಭಾರೀ ಮಾತುಗಳ ಅಬ್ಬರವೂ ಇವರ ಉಪಚಾರದಲ್ಲಿರುತ್ತಿರಲಿಲ್ಲ. ಅದೇ ಮನಗೆಲ್ಲುವ ನಗುವಿನೊಡನೆ ಅವರಿಗೆ ಬರುತ್ತಿದ್ದದ್ದು ಒಂದೇ ಒತ್ತಾಯದ ನುಡಿ ಕ್ಕಳುಹಿಸು. (ಅವರ ಮಕ್ಕಳಾದ) ಅನಂತ ಅನಿತರು ಬೆಳೆದು, ವೃತ್ತಿ ಸಂಸಾರ ಕರ್ಮಗಳ ಅನುಕೂಲದಲ್ಲಿ ಬೆಂಗಳೂರಿನಲ್ಲಿ ನೆಲೆಸಿದರು. ಇವರೂ ಪರೋಕ್ಷ ನಿವೃತ್ತಿಯೊಡನೆ ತಮ್ಮದೇ ಕಂಪನಿಯ ಶಾಖೆನೋಡಿಕೊಳ್ಳುವ ಜವಾಬ್ದಾರಿಯೊಡನೆ ಬೆಂಗಳೂರಿಗೆ ವಲಸೆ ಬಂದರು. ಪ್ರಾಯ, ಆನುವಂಶಿಕ ದೈಹಿಕ ಮಿತಿಗಳು ಚಿಕ್ಕಪ್ಪನನ್ನು ಬಳಲಿಸುತ್ತಿದ್ದ ಕಾಲದಲ್ಲಿ ತೀರಾ ಕ್ಷುಲ್ಲಕ ರಸ್ತೆ ಅಪಘಾತಕ್ಕೆ ಸಿಕ್ಕಿಕೊಂಡರು; ವಾಕ್ ಹೋಗುತ್ತಿದ್ದವರಿಗೆ ಯಾರದೋ ಸ್ಕೂಟರ್ ಕುಟ್ಟಿ ಕೈ ಮುರಿಯಿತು. ಜೊತೆಗೆ ತಲೆಗಾಗಿದ್ದ ಆಘಾತ ಮೊದಲು ಅವಗಣನೆಗೊಳಗಾದರೂ ಗುರುತಿಸಿ, ಚಿಕಿತ್ಸೆಗೊಳಪಟ್ಟರೂ ಕಾಲಪುರುಷಂಗೆ ಗುಣಮಣಮಿಲ್ಲ. ಚಿಕ್ಕಪ್ಪನನ್ನೇ ಹತ್ತು ದಿನದ ಹಿಂದೆ ನಾವೆಲ್ಲಾ ತೀವ್ರ ವಿಷಾದದೊಡನೆ ಅನೂಹ್ಯ ಆಯಾಮಕ್ಕೆ ‘ಕ್ಕಳುಹಿಕೊಟ್ಟೆವು. ಈಗಷ್ಟೇ ಅಡ್ಯನಡ್ಕದ ಸಮೀಪದ ಮರಕಿಣಿಯಲ್ಲಿ ಅಂದರೆ ಅವರ ಮೂಲ ಮನೆಯಲ್ಲಿ (ಸದ್ಯ ಅವರಣ್ಣ ವಾರಣಾಸಿ ಸುಬ್ರಾಯಭಟ್ಟರ ನಿವಾಸ) ಕರ್ಮಾಂತರದ ಊಟ ಮುಗಿಸಿ ಬಂದು ಕುಳಿತವನಿಗೆ ಚಿಡಿಯಾಟಾಪಿನ ಊಟದ ಅರುಚಿ ಮರೆಸುವ ಅಥವಾ ಅಂಥಾ ಊಟಕ್ಕೂ ಸ್ಮರಣೆ ಮಾತ್ರದಿಂದ ರುಚಿಮೂಡಿಸುವ ಚಿಕ್ಕಪ್ಪನಿಗೆ ವಂದಿಸಿ ಇಂದಿಗೆ ವಿರಮಿಸುವೆ.

ಇಂತು ನಿನ್ನ ಏಕಮಾತ್ರ ಅಣ್ಣ
ಅಶೋಕವರ್ಧನ