ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕನ್ನಡ ಜನಪ್ರಿಯ ಕಾದಂಬರಿಗಳನ್ನು ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ ನವರತ್ನರಾಂ ಅಕ್ಷರಶಃ ಆಳುತ್ತಿದ್ದ ಕಾಲ. ಆಗೊಬ್ಬ ನಗುಮುಖದ, ಮಿನುಗು ಕಣ್ಣಿನ ಹುಡುಗ, ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ನನ್ನಲ್ಲಿಗೆ ಖಾಯಂ ಬರುತ್ತಿದ್ದ. ಪುಸ್ತಕಗಳ ಬಗ್ಗೆ ತುಂಬಾ ಸಂಭ್ರಮಿಸುತ್ತಿದ್ದ ಆತ ಅಲ್ಲಿ ಇಲ್ಲಿ ಸುಳಿಯುತ್ತಿದ್ದ, ಬಿಡಿಬಿಡಿಸಿ ಆಘ್ರಾಣಿಸುತ್ತಿದ್ದನಾದರೂ ರಾಧಾದೇವಿ ಕಾದಂಬರಿಗಳ ಶೆಲ್ಫ್ ಆತನಿಗೆ ಪ್ರಮುಖ ಆಕರ್ಷಣೆ. ಆಗೊಮ್ಮೆ ಈಗೊಮ್ಮೆ ಆಕೆಯ ಕಾದಂಬರಿಗಳನ್ನು ಒಂದೊಂದರಂತೆ ಆತ ಖರೀದಿಸುತ್ತಲೂ ಇದ್ದ. ಆದರೆ ಅಂಗಡಿಯ ಅನುಭವ ಸದಾ ನಮ್ಮನ್ನು  ಎಚ್ಚರಿಸುತ್ತಲೇ ಇದ್ದುದರಿಂದ ಪರಿಚಯ ಸಲುಗೆಯಾಗದಂತೆ ನೋಡಿಕೊಂಡಿದ್ದೆ. ಆತನ ಶಾಲೆ, ತರಗತಿ, ಅಪ್ಪ, ಅಮ್ಮ, ಮನೆ, ಕೊನೆಗೆ ಅವನ ಹೆಸರೂ ನಾವು ತಿಳಿದುಕೊಂಡಿರಲಿಲ್ಲ; ಹಿಂದೆ ಬಿಟ್ಟು ನಮ್ಮ ಮಟ್ಟಿಗೆ ಆತ ರಾಧಾದೇವಿಪ್ರಿಯ, ಕಿರು ರೂಪದಲ್ಲಿ ರಾಪ್ರಿ!

ಅದೊಂದು ದಿನ ರಾಪ್ರಿ ಬಂದು ಹೋದಮೇಲೆ ಇಂಗ್ಲಿಷಿನ ಒಂದೋ ಎರಡೋ ಜನಪ್ರಿಯ ಕಾದಂಬರಿಗಳು ರಾಧಾದೇವಿ ಶೆಲ್ಫಿನ ಮೂಲೆಯಲ್ಲಿ ತುರುಕಿಟ್ಟಂತೆ ಕಾಣಿಸಿತು. ಕೂಡಲೇ ನಮ್ಮೊಳಗಿನ ಪತ್ತೇದಾರಿ ಜಾಗೃತನಾದ.  ಕಡಿಮೆ ಬೆಲೆಯ ಕನ್ನಡ ಪುಸ್ತಕಗಳಿಗೆ ಕಷ್ಟದಲ್ಲಿ ಹಣ ಹೊಂದಿಸಿ ಒಯ್ಯುತ್ತಿದ್ದವ ಹೆಚ್ಚಿನ ಬೆಲೆಯ ಇಂಗ್ಲಿಷ್ ಕಾದಂಬರಿಗಳನ್ನು ಕದ್ದೊಯ್ಯಲು ಸಜ್ಜಾಗಿದ್ದಿರಬೇಕು. ನಮ್ಮ ದೃಷ್ಟಿ ತಪ್ಪಿಸಿ ಸಾಗಿಸಲು ಅನಾನುಕೂಲವಾದಾಗ ಸಂಜೆಗೋ ನಾಳೆಗೋ ಸುಲಭವಾಗಲು ಹೀಗೆ ಮಾಡಿರಬಹುದು. ಈಗ ನನ್ನೊಳಗಿನ ಬೇಟೆಗಾರ ಸೂಚನೆ ಕೊಟ್ಟ, “ಪುಸ್ತಕದ ಎರೆ ಹಾಗೇ ಇರಲಿ. ಇನ್ನೊಮ್ಮೆ ಆತ ಬಂದಾಗ ಮಾಲು ಸಹಿತ ಕಳ್ಳನನ್ನು ಹಿಡಿ!” ಸುಧಾರಕ ಮನಸ್ಸು ಅದನ್ನು ನಿರಾಕರಿಸಿತು. ಇನ್ನೂ ಹುಡುಗುಬುದ್ಧಿ, ಓದುವ ಆಸೆ, ಹಣದ ಕೊರತೆ, ಈ ಸುಲಭದ ದಾರಿ ತೋರಿಸಿರಬಹುದು. ಹೀಗೆಂದು ಅಂದಾಜಿದ್ದೂ ಅವಕಾಶ ಕೊಟ್ಟು ಎಳೆಯನನ್ನು `ಅಪರಾಧಿ’ ಎಂದು ಘೋಷಿಸುವುದು ಕ್ರೌರ್ಯ ಅನಿಸಿತು. ಹಾಗಾಗಿ ಮುಂದಿನ ಸಲ ರಾಪ್ರಿ ಬಂದಾಗ ಬಾಗಿಲ ಬಳಿಯೇ ನಿಲ್ಲಿಸಿ, “ಬೇಕಾದ್ದನ್ನು ಇಲ್ಲೇ ಕೊಡಿಸಬಲ್ಲೆ, ಒಳಗೆ ಪ್ರವೇಶ ಇಲ್ಲ” ಎಂದೆ. ಆತ ಅವಮಾನಿತನಾಗಿ ಹೊರನಡೆದ. ಮತ್ತೆ ಕೆಲವು ವರ್ಷಗಳ ಕಾಲ (ಶಾಲೆ, ಕಾಲೇಜು ದಿನಗಳ ಉದ್ದಕ್ಕೆ) ಆತ ನನ್ನಂಗಡಿಯ ಎದುರು ನಡೆದುಹೋಗುವುದನ್ನು ಹೀಗೇ ಗಮನಿಸಿದ್ದೆ. ಹಾಗೆ ನಾನು ಅವನನ್ನು ಗುರುತಿಸಿದಷ್ಟೂ ಸಲ ರಾಪ್ರಿ ಅಂಗಡಿಯತ್ತ ಮುಖ ಮಾಡಿ, ತಿರಸ್ಕಾರದಲ್ಲಿ ಉಗಿದಂತೆ ಮಾಡುತ್ತಿದ್ದ. ಎನ್.ಸಿ.ಸಿಯ ಉತ್ಸವ ನಡಿಗೆಗಳಲ್ಲಿ ನಾವು ಹಿರಿಯರಿಗೆ ಗೌರವ ಸಲ್ಲಿಸುವುದಕ್ಕೆ `ದೈನೇ ದೇಖ್’ ಅಥವಾ `ಬಾಯೇ ದೇಖ್’ ಮಾಡುವುದಿತ್ತು. ರಾಪ್ರಿಯ ಸ್ಟೈಲ್ ಮಾತ್ರ ಉಲ್ಟಾ – ದೈನೇ ಥೂಕ್, ಬಾಯೇ ಥೂಕ್! ನಾವು ಮಾತ್ರ ಆತನ ಹುಡುಗು ಬುದ್ಧಿಗೆ ನಕ್ಕು ಸುಮ್ಮನಿರುತ್ತಿದ್ದೆವು. ಕಾಲಪ್ರವಾಹದಲ್ಲಿ ಎಂದೋ ರಾಪ್ರಿ ಅಂಗಡಿಯೆದುರು ಓಡಾಡುವುದು ನಿಲ್ಲಿಸಿದ್ದ. ಹಾಗೊಬ್ಬನಿದ್ದ ಎಂಬುದನ್ನೇ ನಾನು ಮರೆತೇ ಬಿಟ್ಟಿದ್ದೆ ಎನ್ನುವ ಕಾಲದಲ್ಲಿ …

“ನಮಸ್ತೇ ಸಾರ್. ನಾನು ಒಳಗೆ ಬರಬಹುದೇ” ಹಳೆಯ ನಗುಮುಖ, ಮಿನುಗು ಕಣ್ಣು, ಹೆಚ್ಚುವರಿ – ತಾರುಣ್ಯದ ಸಿರಿಮೀಸೆ ಹೊತ್ತ ರಾಪ್ರಿ! ನಾನು ಎರಡು ಯೋಚನೆಯಿಲ್ಲದೆ ಒಳಗೆ ಬಿಟ್ಟೆ. ಹಳೆಯ ವಾಸನೆಗಳೇನೂ ಉಳಿಸಿಕೊಳ್ಳದಂತೆ ಕಾಣುತ್ತಿದ್ದ ರಾಪ್ರಿ ಈಗ ಹೆಚ್ಚು ಸರಸ ಮಾತುಗಾರ. ಕೊಣಾಜೆಯಲ್ಲಿ ಸ್ನಾತಕೋತ್ತರ ಪದವೀಧರನಾಗಿ ಆತ ಆಗ ನಿಟ್ಟೆಯಲ್ಲಿ ಅಧ್ಯಾಪಕ.  ನಿಗದಿತ ಪಾಠಪಟ್ಟಿಯ ಹೊರಗೂ ತನ್ನ ವಿದ್ಯಾರ್ಥಿಗಳಿಗೆ ಓದುವ ಹುಚ್ಚು ಹೆಚ್ಚಿಸುವುದು, ನಾಟಕ ಮುಂತಾದ ಲಲಿತಕಲೆಗಳಲ್ಲಿ ಒಲವು ಮೂಡಿಸುವುದು ಆತನ ಬಲುಪ್ರಿಯ ಹವ್ಯಾಸ. ಕೊಣಾಜೆಯಲ್ಲಿದ್ದಾಗ ಆಕಸ್ಮಿಕವಾಗಿ ನೋಡಿದ್ದ ನೀನಾಸಂ ತಿರುಗಾಟದ ನಾಟಕಗಳು ಆತನನ್ನು ಗಾಢವಾಗಿ ಪ್ರಭಾವಿಸಿತ್ತು. ಇಂಥವೆಲ್ಲಕ್ಕೂ ಆತ ನನ್ನಲ್ಲಿ ಒಳ್ಳೆಯ ಗೆಳೆಯನನ್ನು ಹಿಂದಿನಿಂದ ಕಂಡವನೆಂದೇ ಮಾತು ಬೆಳೆಸಿದ. ನನ್ನ ದೃಷ್ಟಿ ತಪ್ಪಿಸದೇ ಒಂದಷ್ಟು ಪುಸ್ತಕಗಳನ್ನು ತನ್ನ ಶಿಷ್ಯಂದಿರಿಗೆ ಬಹುಮಾನವಾಗಿ ಕೊಡಲು ಆಯ್ದು ಕೊಂಡೂ ಹೋದ. ಮತ್ತೆ ಮೇಲೆಂದ ಮೇಲೆ ಹೀಗೇ ಬರುತ್ತಿದ್ದ, ಅಧ್ಯಾಪಕ ಮಿತ್ರರನ್ನೂ ಕರೆತಂದು ನನಗೆ ಗೌರವಪೂರ್ವಕವಾಗಿ ಪರಿಚಯಿಸುತ್ತಿದ್ದ, ನಾಟಕಗಳ ಬಗ್ಗೆ ನನ್ನನ್ನು ಕೇಳಿ ಟಿಕೇಟು ಖರೀದಿಸಿ ಬರುತ್ತಿದ್ದ, ಮತ್ತೆ ಸಿಕ್ಕಾಗ ಚರ್ಚಿಸುತ್ತಿದ್ದ. ಈ ಹೊಯ್ಯಲಿನಲ್ಲಿ `ಅಂದು ನೀನು ಕಳ್ಳತನದ ಸಂಚು ನಡೆಸಿದ್ದು ನಿಜವೇ (ಅಲ್ಲಾ ನನ್ನ ಭ್ರಮೆಯೇ) ನಾನು ಪ್ರವೇಶ ನಿರಾಕರಿಸಿದ್ದಕ್ಕೆ ಅವಮಾನಕಾರಿಯಾಗಿ ನಡೆದುಕೊಂಡದ್ದು ಸರಿಯೇ’ ಎಂಬೆರಡು (ಕೇವಲ ಕುತೂಹಲಕ್ಕಾಗಿ) ಪ್ರಶ್ನೆಗಳು ಅವಕಾಶ ಒದಗದೆ ನನ್ನೊಳಗೇ ಹುದುಗಿದ್ದವು.

ಅದೊಂದು ದಿನ ರಾಪ್ರಿ ಹೀಗೇ ಬಂದಾಗ ತನಗೆ ಮುಂಬೈಯಲ್ಲಿ ನೌಕಾಪಡೆಯೊಂದರ ಅಧ್ಯಾಪಕ ಹುದ್ದೆ ದೊರಕಿದೆ ಎಂದು ತಿಳಿಸಿದ. ಇಲ್ಲಿನ ಸಾಹಿತ್ಯ, ಸಾಂಸ್ಕೃತಿಕ ವಾತಾವರಣವನ್ನು ರಜೆಯಲ್ಲಿ ಬಂದಾಗಾದರೂ ಮರೆಯದೆ ಅನುಭವಿಸುತ್ತೇನೆ ಎಂದೆಲ್ಲ ಕೊರಗು ತೋಡಿಕೊಂಡು, ವಿದಾಯ ಹೇಳಿದ. ಆ ಮಾತುಳಿಸುವಂತೆ ರಜೆಯಲ್ಲಿ ಬಂದಾಗೆಲ್ಲ ಮೊದಲ ಆದ್ಯತೆಯಲ್ಲಿ ನನ್ನನ್ನು ಭೇಟಿಯಾಗಿ ಮಾಹಿತಿ ಪಡೆದು, ಕಾರ್ಯಕ್ರಮಗಳೇನಾದರೂ ಇದ್ದರೆ ಭಾಗಿಯಾಗುತ್ತಲೂ ಇದ್ದ. ನೀನಾಸಂ ತಿರುಗಾಟ, ಮರುತಿರುಗಾಟ, ಕಿರು ತಿರುಗಾಟ ಒಂದನ್ನೂ ಬಿಡದಂತೆ ಅನುಭವಿಸುತ್ತಲೇ ಇದ್ದ. ಆತನ ಪ್ರತಿ ಭೇಟಿಯಲ್ಲೂ ನನ್ನೆರಡು ಪ್ರಶ್ನೆಗಳು ದುರ್ಬಲವಾಗುತ್ತಲೇ ಇದ್ದರೂ ಸಣ್ಣದಾಗಿ ಮೊಳೆತು ಬಾಡುತ್ತಲೇ ಬಂತು.

೨೦೦೮ರ `ಹೆಗ್ಗೋಡು ಜಾತ್ರೆ’ ಮುಗಿದು ನೀನಾಸಂನ ಉತ್ಸವ ಮೂರ್ತಿ ಊರಾಚೆ ತಿರುಗಾಟ ಹೊರಟ ಸುದ್ದಿ ಬಂತು. ಉಡುಪಿಯಲ್ಲಿ ಎರಡು ದಿನದ ಪ್ರದರ್ಶನಗಳ ಜಾಹೀರಾತು ಕಂಡಾಗ `ಹೋ ಕರಾವಳಿಗೇ ಬಂತು’ ಅನ್ನಿಸಿತು. ಮಂಚಿಯ ಬೀವೀಕಾರಂತ ಉತ್ಸವಕ್ಕೆ ಬಂದ ತುಮರಿಯ ಕಿನ್ನರ ಮೇಳ ದಿಢೀರನೆ ಕೇವಲ ಒಂದೂವರೆ ದಿನದ ಪ್ರಚಾರಾವಕಾಶದೊಡನೆ ಮಂಗಳೂರಿಗೆ `ಗುಣಮುಖ’ ತಂದಾಗಲಂತೂ ನಮ್ಮೆಲ್ಲರ ನಾಟಕಸೀಕು (ಸೀಕು (ತುಳು) = sickನ ಅಪಭ್ರಂಶ? ಕಾಯಿಲೆ, ಗೀಳು) ಉತ್ಕಟಕ್ಕೇ ಹೋಯ್ತು. ಪುತ್ತೂರು ಜಾತ್ರೆಯಲ್ಲಿ ಹತ್ತು ಪೈಸೆಗೆ ಇಪ್ಪತ್ತು ಸುತ್ತುವ ಡೊಂಬರ ತೊಟ್ಟಿಲಿನ ಜೀಕು, ರಬ್ಬರ್ ದಾರ ಕಟ್ಟಿದ ನೀರಚೆಂಡಿನ ಪಚಕ್, ಬಿಳಿ ಕಂದಿದ ಸಕ್ಕರೆ ಮಿಠಾಯಿ, ಹೊರಗಿನ ಬಲಿಯಲ್ಲಿ ಚಂಡೆಸುತ್ತಿನ ರೋಮಾಂಚನ, ಒಳಗೆ ಬೆವರಹೊಳೆಯಲ್ಲಿ ಮಿಂದ ಬಡಕಲು ಜೀವವೆಂದು ತಿಳಿದೂ ಅಷ್ಟೆತ್ತರದ ಬೇತಾಳನ ಕಿರುಬೆರಳನ್ನು ಜಗ್ಗುವ ಚಪಲ, ಕೊನೆಯಲ್ಲಿ ಯಕ್ಷಗಾನ ಮೇಳದ ಚಾಪೆಗೆ ಐವತ್ತು ಪೈಸೆಯ ಟಿಕೇಟು ಖರೀದಿಸಿ ಕೇವಲ ಹಗ್ಗದಂತರದ ಆರಾಮಕುರ್ಚಿಗೆ ನುಸಿದು ತೂಕಡಿಸಿದ್ದೆಲ್ಲಕ್ಕೂ ಸಮಭಾವಗಳು ನನಗೆ ನೀನಾಸಂ ರಂಗಯಾತ್ರೆಯೊಡನೆ ತಳುಕು ಹಾಕಿಕೊಂಡು ಸದಾ `ಸಂಬಂಧಿ’ಗಳನ್ನು ಹುಡುಕುತ್ತಿದ್ದೆ. ಈ ಪಟ್ಟಿಯಲ್ಲಿ ದಪ್ಪಕ್ಷರಗಳಲ್ಲಿದ್ದ ನಮೂದು ರಾಪ್ರಿ.

ಡಾ| ಐ.ಜಿ. ಹುಕ್ಕೇರಿ – ಆಕ್ಯುಪ್ರೆಷರ್ ವೈದ್ಯ, ನನ್ನ ಅಸಂಖ್ಯ ಗಿರಾಕಿಗಳಲ್ಲಿ ಒಬ್ಬರು. ಅವರು ಮೊನ್ನೆ ಮೊನ್ನೆ ಬಂದವರೇ “ನನ್ನ ಮಗ ಹರ್ಷವರ್ಧನ, ನಿಮ್ಮ ಗೆಳೆಯ ಇನ್ನಿಲ್ಲ” ಎಂದರು. ನನಗೆ ಹಾಗೆ ಯಾರೂ ಪರಿಚಿತರು ಇದ್ದ ನೆನಪಾಗಲಿಲ್ಲ. ಆದರೆ ಸೌಜನ್ಯಕ್ಕೆ ಏನಾಗಿತ್ತೆಂದು ಕೇಳಿದೆ. “ಗೊತ್ತಲ್ಲಾ ಆತ ಮುಂಬೈಯಲ್ಲಿದ್ದ. ವೃತ್ತಿಯಲ್ಲಿ ತುಂಬಾ ಸಮರ್ಥನೂ ಪ್ರವೃತ್ತಿಯಲ್ಲಿ ತುಂಬಾ ಜನಪ್ರಿಯನೂ ಆಗಿದ್ದ. ವಿದ್ಯಾರ್ಥಿಯೊಬ್ಬನಿಗೆ ಎಲ್ಲಿಗೋ ಡ್ರಾಪ್ ಕೊಟ್ಟು ಮರಳುವಲ್ಲಿ ವಾಹನ ಅಪಘಾತದಲ್ಲಿ ಮರಣಿಸಿದ” ಎಂದಷ್ಟೇ ಹೇಳಿ ಹೋದರು. ನನ್ನ ನೆನಪಿನ ಗವಿಯಲ್ಲಿ ಬೆಳಕು ಸಾಕಾಗಲಿಲ್ಲ. ಆದರೆ ಅಂಗಡಿ ಸಹಾಯಕ ಶಾಂತಾರಾಮ, ಒಂದಕ್ಕೆ ಒಂದು ಕೂಡಿಸಿ ಹರ್ಷವರ್ಧನ ಹುಕ್ಕೇರಿಯನ್ನು ರಾಪ್ರಿಗೆ ಸಮೀಕರಿಸಿದ. ನೀನಾಸಂ ನಾಟಕಗಳು ಮಂಗಳೂರಿನಲ್ಲಿ ಡಿಸೆಂಬರ್ ೨೭, ೨೮ರಂದು ಪ್ರದರ್ಶನ ಕೊಟ್ಟದ್ದೂ ಆಯ್ತು. ರಂಗಸಮಾಜದ ಸಂಬಂಧಿಗಳಲ್ಲಿ ತುಂಬಾ ಜನ ಬಂದಿದ್ದರು, ಬರದವರ ಕ್ಷೇಮ ಸಮಾಚಾರಕ್ಕೇನೂ ಕೊರತೆಯಿರಲಿಲ್ಲ. ಆದರೆ ನಗುಮುಖದ, ಮಿನುಗು ಕಣ್ಣಿನ ರಾಪ್ರಿ ಬರಲೇ ಇಲ್ಲ. ನನ್ನ ಅಸಂಗತ ಎರಡು ಪ್ರಶ್ನೆಗಳಿಗೆ ಉತ್ತರವಿರಲಿ, ಅದರಲ್ಲಿ ನನಗೆ ಪಶ್ಚಾತ್ತಾಪವನ್ನೇ ಉಳಿಸಿ ದೂರನಾದ.