ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ – ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ ಜವಾಬ್ದಾರಿಗಳನ್ನು ಮತ್ತು ಬಹುತೇಕ ಬರವಣಿಗೆಗಳನ್ನೂ ಕೊಟ್ಟ ನನ್ನ ತಂದೆ – ಜಿಟಿ ನಾರಾಯಣ ರಾವ್, ನನ್ನ ಪ್ರಕಾಶನದ ಅಘೋಷಿತ ಬಹುಮುಖ್ಯ ಪಾಲುದಾರ. ಅವರು ತಮ್ಮ ಬರಹಗಳಿಗೆ (ಗೌರವಧನ), ಮುದ್ರಣ ಕಾರ್ಯದ ಸಂಪೂರ್ಣ ನಿರ್ವಹಣೆಗೆ (ಓಡಾಟ, ಅಂಚೆವೆಚ್ಚ ಇತ್ಯಾದಿ) ಚಿಕ್ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆದರ್ಶದ ಮಾತುಗಳನ್ನೇ ನಾನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತ “ಪುಸ್ತಕಗಳ ಬಿಡಿ ಮಾರಾಟವೇ ನನ್ನ ಪ್ರಧಾನ ವೃತ್ತಿ. ಪ್ರಕಾಶನವೇನಿದ್ದರೂ ನನ್ನ ಮತ್ತು ಮುಖ್ಯವಾಗಿ ತಂದೆಯ ಒಲವಿನ ಬರಹಗಳನ್ನು (ಅದರಲ್ಲೂ ಜನಪ್ರಿಯ ವಿಜ್ಞಾನ ಸಾಹಿತ್ಯ), ಕೇವಲ ಸಾಮಾಜಿಕ ಋಣ ಸಂದಾಯದ ನೆಲೆಯಲ್ಲಿ ಮಾಡುತ್ತೇನೆ. ಓದುಗ ಪ್ರಕಾಶನದ ಪರಮ ಲಕ್ಷ್ಯ. ಕಾಗದ, ಮುದ್ರಣಗಳಲ್ಲಿ ಆವಶ್ಯಕತೆಯನ್ನಷ್ಟೇ ನೋಡಿ ಬಳಸಿದರೂ ಸರಳ ಸೌಂದರ್ಯಕ್ಕೆ ಕೊರತೆ ಮಾಡುತ್ತಿಲ್ಲ” ಎಂದೇ ಘೋಷಿಸಿಕೊಂಡೆ.

ಡಿವಿಕೆ ಮೂರ್ತಿ ಐನ್ಸ್ಟೈನ್ ಜನ್ಮ ಶತಾಬ್ದಿಯನ್ನು ಮುಂಗಂಡು, ನನ್ನ ತಂದೆಗೆ ಒತ್ತಡ ಹೇರಿ, ಅವರು ಬರೆದ ಮೇಲೆ ಪ್ರಕಟಿಸಿದ ಪುಸ್ತಕ ಐನ್ಸ್ಟೈನ್ ಬಾಳಿದರಿಲ್ಲಿ (ಇಂದು ನಾಲ್ಕನೇ ಪರಿಷ್ಕೃತ ಮುದ್ರಣ, ನನ್ನದೇ ಪ್ರಕಟಣೆಯಲ್ಲಿ ಲಭ್ಯ). ಡಿವಿಕೆ ಹೀಗೆ ಒಬ್ಬಿಬ್ಬರನ್ನಲ್ಲ, ಒಂದೆರಡು ವಿಷಯಗಳಲ್ಲೂ ಅಲ್ಲ – ಸದಾ ಸಮರ್ಥ ವ್ಯಕ್ತಿಗಳನ್ನು ಹಿಡಿಯುತ್ತಲೇ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಲೇ ಇದ್ದದ್ದು ನನಗೆ ಎಂದೂ ಮರೆಯದ ಆದರ್ಶವಾಗಿ ಕಾಣುತ್ತಿತ್ತು. ಅದನ್ನು ನನ್ನದೇ ಪ್ರಕಾಶನದಲ್ಲಿ ಅನುಸರಿಸುವಲ್ಲಿ ನನಗೆ ವಿದ್ವತ್ ಬಂಡವಾಳ ಮತ್ತು ಸಂಪರ್ಕಗಳು ಏನೇನೂ ಸಾಲದಿತ್ತು. ಅಲ್ಲೆಲ್ಲಾ ನನಗೆ ನನ್ನ ತಂದೆ ನೂರಾನೆ ಬಲ. ಪಾವೆಂ ಆಚಾರ್ಯರು ಕಸ್ತೂರಿಯ ತಿಂಗಳು ತಿಂಗಳು ಪುಟ ತುಂಬುವ ಸಾಹಸದಲ್ಲಿ ಬರೆದು ಮೂಲೆ ಸೇರಿಸಿದ್ದ ಪದಾರ್ಥ ಚಿಂತಾಮಣಿಯನ್ನು ಮೊದಲು ಪುಸ್ತಕ ರೂಪದಲ್ಲಿ ‘ನಾನು’ ಪ್ರಕಟಿಸಿದೆ. ತಮ್ಮ ವಿದ್ವತ್ತಿಗೆ ತಕ್ಕಷ್ಟು ಬರವಣಿಗೆಗಿಳಿಯದ ಜೆ. ಆರ್ ಲಕ್ಷ್ಮಣರಾಯರಿಂದ ಬರೆಯಿಸಿ, ಬೈಜಿಕ ವಿದ್ಯುತ್ ಪ್ರಕಟಿಸಿದ ಖ್ಯಾತಿಯೂ ‘ಅತ್ರಿ’ಗೆ ದಕ್ಕಿತು. ಮುರಳೀಧರರಾಯರ ಉದ್ಗ್ರಂಥ ‘ನೃತ್ಯಲೋಕ’ದ್ದಂತೂ ಭಾರೀ ಕಥೆ. ತಂದೆಯ ವಿಶ್ವಕೋಶ ಯೋಜನೆಗೆ ಹೊರಗಿನ ಚಿತ್ರಕಾರನ ಮಟ್ಟದಲ್ಲಷ್ಟೇ ಒದಗಿದವರು ಮುರಳೀಧರರಾಯರು. ತಂದೆಯ ವಿಭಿನ್ನ ಆಸಕ್ತಿಗಳ ಬಲದಲ್ಲಿ ಅವರೊಬ್ಬ ನಾಟ್ಯಾಚಾರ್ಯನೂ ಹೌದೆಂದು ತಿಳಿದದ್ದು, ಅವರ ತರಗತಿ ನಡೆಸುವ ಅನುಕೂಲಕ್ಕೆ ನಮ್ಮ ಮೈಸೂರು ಮನೆಯ ಶೆಡ್ ಉಚಿತವಾಗಿ ಒದಗಿದ್ದು, ಲೋಕಾಭಿರಾಮ ಮಾತಿನಲ್ಲಿ ಅವರ ವಿದ್ವತ್ತು ಪುಸ್ತಕ ರೂಪಕ್ಕೆ ಇಳಿಯುವಂತಾದದ್ದು, ‘ನೃತ್ಯಲೋಕ’ದ ಪ್ರಕಟಣಪೂರ್ವ ಸಂಚಲನ ಮತ್ತು ಮುರಳೀಧರರಾಯರ ಸಮ್ಮಾನದೊಡನೆ ಅದು ಅತ್ರಿ ಪ್ರಕಾಶನದಲ್ಲೇ ಅರಳಿದ್ದು ಬಹುದೊಡ್ಡ ಭಾವಲಹರಿ. ಹೀಗೇ ‘ನನ್ನಲ್ಲಿ’ ಬೆಳಕು ಕಂಡ ಇನ್ನೊಂದು ಮಹಾಕೃತಿ ಸ.ಜ ನಾಗಲೋಟಿಮಠರ ಬಿಚ್ಚಿದ ಜೋಳಿಗೆ. ಕುರಿತು ಯೋಚಿಸಿದರೆ ಅತ್ರಿ ಪ್ರಕಾಶನದ ಒಂದೊಂದು ಪ್ರಕಟಣೆಯ ಹಿಂದೆಯೂ ತಂದೆಯ ನೀತಿಯುಕ್ತ ಪ್ರೀತಿಯ ಸಾಧನೆ ಎದ್ದು ತೋರುತ್ತದೆ.

ವೃತ್ತಿಪರ ಪ್ರಕಾಶನದಲ್ಲಿ ಅನಿವಾರ್ಯವಾದ ಬೆಲೆ ನಿಷ್ಕರ್ಷೆಯ ಅಂಶಗಳು ನನ್ನನ್ನು ಬಾಧಿಸಲಿಲ್ಲ. ಬೆಲೆ ನಿರ್ಧಾರದಲ್ಲಿ ಮುದ್ರಣ ವೆಚ್ಚ ಮತ್ತು ವೃತ್ತಿಪರ ಪುಸ್ತಕ ಮಾರಾಟಗಾರರಿಗೆ ಕೊಡಬೇಕಾದ ವ್ಯಾಪಾರೀ ವಟ್ಟಾ (ನ್ಯಾಯವಾದ ಮೂರನೇ ಒಂದು) ಮಾತ್ರ ನನ್ನ ಗಮನದಲ್ಲಿರುತ್ತಿತ್ತು. ಅನ್ಯ ಲೇಖಕರಿದ್ದರೆ ಗೌರವಧನದ ಮೊತ್ತ ಸೇರಿಕೊಳ್ಳುತ್ತಿತ್ತು (ನನ್ನ ಹರಕೆಗೆ ಇತರರು ಕುರಿಗಳಾಗಬಾರದು). ಪ್ರಕಾಶಕನಾಗಿ ನನಗೆ ಲಾಭಾಂಶ ಬಿಡಿ, ಸಮಯ ಸಂದಂತೆ ತೊಡಗಿಸಿದ ಹಣಕ್ಕೆ ಸರಳ ಬಡ್ಡಿಯೂ ದಕ್ಕದಷ್ಟು ಕಡಿಮೆ ಬೆಲೆ ಇಡುತ್ತಿದ್ದೆ. (ನನ್ನದೇ ಅಂಗಡಿಯಲ್ಲಿ ಬಿಡಿಯಾಗಿ ಮಾರಿಹೋದದ್ದಷ್ಟೇ ನನಗೆ ಆದಾಯ ತರುತ್ತಿತ್ತು) ಸಹಜವಾಗಿ ಕೊಳ್ಳುಗನಿಗೆ ನಮ್ಮ ಪ್ರಕಟಣೆಗಳು ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ. ನನ್ನ ಈ ‘ವ್ರತ’ಕ್ಕೆ ಅನ್ಯ ಮೂಲಗಳಿಂದ ಅನುದಾನ, ಸಹಾಯಧನವನ್ನು ಸ್ವೀಕರಿಸದಿರುವುದೂ ನನ್ನ ಅಚಲ ನಿರ್ಧಾರಗಳಲ್ಲಿ ಒಂದು. ಮತ್ತೆ ಹಣ ಹಾಕಿ ಅವಸರದಲ್ಲಿ ಹಣ ತೆಗೆಯುವ ಯಾವುದೇ ಒಳದಾರಿಗಳನ್ನು ಅಂದರೆ – ಸಗಟು ಖರೀದಿ, ಗ್ರಂಥಾಲಯ ಖರೀದಿ, ಪಠ್ಯ ಮಾಡಿಸುವುದು, ಮೇಳಗಳಲ್ಲಿ ಭಾಗವಹಿಸುವುದು, ದರಕಡಿತದ ಮಾರಾಟ ಇತ್ಯಾದಿ ಪುಸ್ತಕವನ್ನು ಕೇವಲ ಒಂದು ಮಾಲು ಮಾಡುವ ಪ್ರಯತ್ನವನ್ನು ನಾನು ಘೋಷಿಸಿಯೇ ತಿರಸ್ಕರಿಸುತ್ತ ಬಂದಿದ್ದೇನೆ.

ಶೇಕಡಾ ಐವತ್ತೋ ಅರುವತ್ತೋ ರಿಯಾಯ್ತಿ ದರದಲ್ಲಿ ದಳ್ಳಾಳಿಗಳಿಗೆ ತಮ್ಮ ಪ್ರಕಟಣೆಗಳನ್ನು ದಾಟಿಸಿ, ಅವರ ಮೂಲಕ ಸಗಟು ಖರೀದಿ ದಕ್ಕಿಸಿಕೊಳ್ಳುವ, ಪರೋಕ್ಷವಾಗಿ ತಾವು ಶುದ್ಧಾತ್ಮರಾಗಿ ಉಳಿಯುವವರು ಅನೇಕರಿದ್ದಾರೆ. ನಾನು ಇದನ್ನೂ ನಿರಾಕರಿಸಿದ್ದೇನೆ. ನೆಲಮನೆ ದೇವೇಗೌಡರೆಂದೇ ಖ್ಯಾತರಾದವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನನ್ನ ತಂದೆಯ ಮೇಲಿನ ಗೌರವದಿಂದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಪುಸ್ತಕದ ಸಣ್ಣ ಸಗಟು ಖರೀದಿ ನಡೆಸಿದ ಪ್ರಸಂಗವನ್ನು ನಾನೀಗಾಗಲೇ ‘ಪುಸ್ತಕ ಮಾರಾಟ ಹೋರಾಟ’ದಲ್ಲಿ ಬರೆದಿದ್ದೇನೆ. ಕಾಲೇಜಿನ ನನ್ನ ಐದು ವರ್ಷಗಳ ಸಹಪಾಠಿ, ಆತ್ಮೀಯ ಗೆಳೆಯನೊಬ್ಬ (ಎಂ.ಕೆ. ಶಂಕರಲಿಂಗೇ ಗೌಡ) ವೃತ್ತಿಜೀವನದ ಆಕಸ್ಮಿಕದಲ್ಲಿ ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕನಾದ. ಆ ಕಾಲಕ್ಕೆ ನನ್ನ ಮೋಟರ್ ಸೈಕಲ್ ಸಾಹಸ ಯಾನಗಳ ಸಂಕಲನ – ‘ಚಕ್ರವರ್ತಿಗಳು’, ನನ್ನ ಯಾವ ಪ್ರಯತ್ನಗಳೂ ಇಲ್ಲದೆ ಆತನ ಗಮನಕ್ಕೆ ಬಂತು. ಆತ ಪುಸ್ತಕವನ್ನು ತನ್ನ ಇಲಾಖೆಯ ಎಲ್ಲಾ ಶಾಖೆಗಳಿಗೆ ವಿತರಿಸುವ ಉತ್ಸಾಹದಲ್ಲಿ ಎರಡು ಸಾವಿರ ಪ್ರತಿಗಳವರೆಗೆ ಖರೀದಿಸಲು ಮುಂದಾದ. ಪ್ರವಾಸೋದ್ಯಮ ಇಲಾಖೆಗೆ ಅದರ ಉಪಯುಕ್ತತೆ ಸಹಜವಾಗಿ ಒದಗುತ್ತಿತ್ತಾದರೂ ಲೋಕದ ಕಣ್ಣಿಗೆ ನಮ್ಮ ಸ್ನೇಹಾಚಾರವೂ ಕಾಣುತ್ತಿತ್ತಲ್ಲ; ನಾನು ಚಕ್ರವರ್ತಿ ಮಾರಲಿಲ್ಲ. ನನ್ನೀ ನಿಲುವುಗಳಿಗೆ ಪೂರಕವಾಗುವ ಎರಡೇ ಆಖ್ಯಾಯಿಕೆಗಳನ್ನು ಇಲ್ಲಿ ಸ್ವಲ್ಪ ವಿವರದಲ್ಲಿ ಹೇಳುವುದು ಅಪ್ರಸ್ತುತವಾಗದು ಎಂದು ಭಾವಿಸುತ್ತೇನೆ.

ಪುಸ್ತಕ ಒಂದು ಮಾಲು: ನನ್ನ ಪ್ರಕಟಣೆಗಳಲ್ಲಿ ಮೂರು ಇಂಗ್ಲಿಶ್ ಪುಸ್ತಗಳಿವೆ. ಎಲ್ಲ ತಂದೆಯದೇ ಬರವಣಿಗೆ. ೧. Scientific Temper (viii +110 pages, Rs 15), ೨. With the great minds (viii+88 pages, Rs. 30), ೩. Crossing the dateline (viii+ 144 pages, Rs. 40). ತಂದೆ ವೈಜ್ಞಾನಿಕ ಚಿಂತನೆಯ ಕುರಿತು ಎಲ್ಲಂದರಲ್ಲಿ ಮಾತಾಡಿದ್ದಾರೆ, ದಣಿವರಿಯದೇ ದಾಕ್ಷಿಣ್ಯಕ್ಕೆ ಬಲಿ ಬೀಳದೇ ಲೇಖನಗಳನ್ನೂ ಬರೆದಿದ್ದಾರೆ. ಜಾತಕ ಭವಿಷ್ಯ, ಭವಿಷ್ಯ ವಾಚನದಂಥ ಕನ್ನಡ ಕಿರು ಪುಸ್ತಕಗಳು ನೇರವಾಗಿ ಉಳಿದ ಪುಸ್ತಕಗಳಲ್ಲಿ ಧಾರಾಳವಾಗಿ ಆ ಚಿಂತನೆಯನ್ನು ವಿಸ್ತರಿಸಿದ್ದಾರೆ. ಆ ಕಾಲಕ್ಕೆ ಅವರ ಹಿರಿಯ ಮಿತ್ರ ಬಿ.ವಿ ಕಕ್ಕಿಲ್ಲಾಯರು ಕೊಟ್ಟ ಪ್ರೇರಣೆಯಲ್ಲಿ ವಿಸ್ತೃತವಾಗಿ ‘ವೈಜ್ಞಾನಿಕ ಮನೋಧರ್ಮ’ ಎಂಬ ಪುಸ್ತಕವನ್ನೇ ಬರೆದದ್ದು, ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು (೧೯೯೦), ಅಸಂಖ್ಯ ಮರುಮುದ್ರಣ ಮಾಡಿ (೨೦೦೭ ಏಳನೇ ಪರಿಷ್ಕೃತ ಮುದ್ರಣ) ಈಗಲೂ ಮಾರುತ್ತಿರುವುದು ನಿಮಗೆ ತಿಳಿದೇ ಇದೆ. ಆಗ ಅಜ್ಞಾತದಿಂದ ಎದ್ದ ಪ್ರಭಾನಂದ ಅತ್ತಾವರ ಎನ್ನುವ ತಂದೆಯ ಹಳೇ ಶಿಷ್ಯ, ತಂದೆಯನ್ನು ವೈಜ್ಞಾನಿಕ ಮನೋಧರ್ಮದ ಇಂಗ್ಲಿಶ್ ಆವೃತ್ತಿಗೆ ನಕ್ಷತ್ರಿಕನಂತೆ ಕಾಡಿದರು. ಅದಕ್ಕೊಲಿದು ತಂದೆ ೧೯೯೭ರಲ್ಲಿ ಸ್ವತಂತ್ರವಾಗಿ ಇಂಗ್ಲಿಶ್ನಲ್ಲಿ ಬರೆದು, ನನ್ನ ಪ್ರಕಟಣೆಗಳಲ್ಲಿ ಪ್ರಥಮವಾಗಿ ಬಂದ ಇಂಗ್ಲಿಶ್ ಪುಸ್ತಕ ಈ Scientific temper. ಇದನ್ನು ಅತೀವ ಸಂಭ್ರಮದಲ್ಲಿ, ಅಕ್ಷರಶಃ ತಲೆಯ ಮೇಲೆ ಹೊತ್ತು, ದಾರಿಯಲ್ಲಿ ಸಿಕ್ಕ ಅರೆಪರಿಚಿತರಿಗೆ, ಪರಿಚಿತರ ಮನೆಮನೆಗೆ ನುಗ್ಗಿ ಮಾರಿ, ಎಷ್ಟೋ ಬಾರಿ ಉಚಿತವಾಗಿ ಕೊಟ್ಟು ಓದಿಸಿದ ಖ್ಯಾತಿಯೂ ಪ್ರಭಾನಂದರಿಗೇ ಸಲ್ಲುತ್ತದೆ.

With the great minds – ಇದು ತಂದೆ ಬರೆದ ಐದು ಮಹಾಮೇಧಾವಿಗಳ ಸಾಧನೆ ಪ್ರಧಾನವಾದ ಜೀವನ ಚರಿತ್ರೆ. ತಂದೆಯ (ಒಂದು) ಪ್ರೀತಿ ಮತ್ತು ವೃತ್ತಿ ಸಮನ್ವಯಗೊಂಡದ್ದು ಗಣಿತ ವಿಜ್ಞಾನದಲ್ಲಿ. ಸಹಜವಾಗಿ ತಂದೆ ಶ್ರೀನಿವಾಸ ರಾಮಾನುಜನ್ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿ ೧೯೮೮ರಲ್ಲೇ ಸಾಕಷ್ಟು ದೊಡ್ಡದೇ ಪುಸ್ತಕ ಪ್ರಕಟಿಸಿದ್ದರು. (ಇಂದು ಅದು ‘ರಾಮಾನುಜನ್ ಬಾಳಿದರಿಲ್ಲಿ’ ಎಂಬ ಹೆಸರಿನಲ್ಲಿ ಪರಿಷ್ಕೃತ ನಾಲ್ಕನೇ ಆವೃತ್ತಿಯಲ್ಲಿ ಲಭ್ಯ) ಆದರೂ ಅದರ ಸೂಕ್ಷ್ಮವನ್ನು ಪ್ರಸ್ತುತ ಇಂಗ್ಲಿಶ್ ಸಂಕಲನಕ್ಕೆ ತರುವಲ್ಲಿ ಅವರು ಸ್ವಲ್ಪ ಸಂಕೋಚಪಟ್ಟಂತಿದೆ. ತನಗೆ ಅನಿವಾರ್ಯವಾಗಿ ಶ್ರೀನಿವಾಸ ರಾಮಾನುಜನ್ ಅವರೊಡನೆ ಮುಖಾಮುಖಿ ಸಾಧ್ಯವಾಗದ್ದಕ್ಕೋ ಏನೋ (ರಾಮಾನುಜನ್ ದೇಹಾಂತ್ಯ ೧೯೨೦. ನನ್ನ ತಂದೆಯ ದೇಹಧಾರಣೆ ೧೯೨೬) ‘ಸುಬ್ರಹ್ಮಣ್ಯನ್ ಚಂದ್ರಶೇಖರ್ ಕಂಡಂತೆ’ ಎಂಬ ಆತ್ಮೀಯ ಮತ್ತು ಸ್ವತಂತ್ರ ಚಿತ್ರಣವನ್ನೇ ಇಲ್ಲಿ ಕೊಟ್ಟಿದ್ದಾರೆ. ಇನ್ನುಳಿದ ನಾಲ್ಕೂ ಜನರನ್ನು ತಂದೆ ತನ್ನ ಆಪ್ತ ಸಂಬಂಧದ ನೆಲೆಯಲ್ಲೇ ಲೇಖಿಸಿದ್ದಾರೆ. ತಂದೆ ಸಿ.ವಿ ರಾಮನ್ನರನ್ನು ಮೊದಲು ಭಂಡತನದಿಂದ ಸಂದರ್ಶಿಸಲು ಹೋಗಿ ಉಚ್ಚಾಟಿಸಿ ಕೊಂಡದ್ದು, ಅನಂತರ ಯೋಗ್ಯತೆ ಗಳಿಸಿ ಅವರನ್ನು ಸಂದರ್ಶಿಸಿದ್ದು ಈಗ ಇತಿಹಾಸ. ಅದು ಮೊದಲು ದೀರ್ಘ ಲೇಖನವಾಗಿ ಅನಂತರ ಪುಸ್ತಕ ರೂಪದಲ್ಲಿ ಬಂದದ್ದು, ಸದ್ಯ ಕನ್ನಡಿಗರಿಗೆ ‘ವಿಜ್ಞಾನ ಸಪ್ತರ್ಷಿಗಳು’ ಸಂಕಲನದಲ್ಲಿ ಲಭ್ಯವಿದೆ. ಅದರ ಇಂಗ್ಲಿಶ್ ಅವತರಣಿಕೆಯೂ ಇಲ್ಲಿದೆ (ಗಮನಿಸಿ, ಇದು ಅನುವಾದವಲ್ಲ). ನೊಬೆಲ್ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ತನ್ನ ಜೀವಿತ ಕಾಲದಲ್ಲಿ ಸಾಮಾನ್ಯರಿಗೆ ಎಲ್ಲ ರೀತಿಯಲ್ಲೂ ಅಲಭ್ಯರಾಗಿದ್ದರು. ಆದರೆ ಅದು ಗರ್ವದಿಂದಲ್ಲ, ನಿರಂತರ ಅಧ್ಯಯನ ಮತ್ತು ಅದಕ್ಕಡ್ಡಿಯಾಗುವ ಪ್ರಚಾರದಿಂದ ದೂರವಿರುವ ತಂತ್ರ ಅಷ್ಟೇ. ಶಿಕಾಗೋದ ದೂರದಲ್ಲಿದ್ದ ಅವರನ್ನು ಒಲಿಸಿಕೊಂಡು ತಂದೆ ಬರೆದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ (ವೈಜ್ಞಾನಿಕ ಜೀವನ ವೃತ್ತಾಂತ) ಕನ್ನಡ ಪುಸ್ತಕ ಲೋಕದಲ್ಲೇ ಅನನ್ಯ. ಇದನ್ನು ರಾಮನ್ಸ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರ ಮಾತುಗಳಲ್ಲಿ ನೋಡಿ: When no other Indian language had thought of bringing out a book on Chandrashekhar, you have done it in Kannada. ಅದರ ಸಾರ ಸಂಗ್ರಹವನ್ನು ತಂದೆಯೇ ಇಂಗ್ಲಿಶ್ನಲ್ಲಿ ಪರಿಭಾವಿಸಿ ಕೊಟ್ಟದ್ದೂ ಇಲ್ಲಿದೆ. ಈ ಸಂಕಲನಕ್ಕೆ ಗೌರವ ತಂದ ಮತ್ತಿಬ್ಬರು ಕಲಾಮೇರುಗಳು – ಕೊಳಲ ಮಾಂತ್ರಿಕ ಬಿಎನ್ ಸುರೇಶ್ ಮತ್ತು ನಾಟ್ಯ ಸರಸ್ವತಿ ಕೆ. ಮುರಳೀಧರ ರಾವ್.

Crossing the dateline – ಈಗಾಗಲೇ ಹೇಳಿದಂತೆ ತಂದೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದ ಮೇಲೆ ಅದನ್ನು ಖುದ್ದು ಚಂದ್ರಶೇಖರರಿಗೆ ಕೊಡುವ ಉತ್ಸಾಹದಲ್ಲಿ (ತಾಯಿಯ ಜೊತೆಗೇ) ಅಮೆರಿಕಾ ಯಾತ್ರೆ ಕೈಗೊಂಡರು. (ಲಘು ಲಹರಿಯಲ್ಲಿ ತಂದೆ ಸದಾ ಹೇಳುತ್ತಿದ್ದ ಮಾತು – ದೇವರು ಮತ್ತು ಪ್ರವಾಸ ನನ್ನ ವೈರಿಗಳು! ಅದು ಅವರ ಪ್ರಥಮ ಮತ್ತು ಏಕೈಕ ವಿದೇಶಗಮನವೂ ಹೌದು) ಅಮೆರಿಕಾದ ಪ್ರಜೆಗಳೇ ಆಗಿರುವ ನನ್ನ ತಮ್ಮ ಆನಂದವರ್ಧನನ ಕುಟುಂಬದ ಒತ್ತಾಯ, ಆಕರ್ಷಣೆ, ಒಡನಾಟ ಮತ್ತು ಓಡಾಟದ ಸ್ವಾರಸ್ಯಕರ ಕಥನದೊಡನೆ, ಅಲ್ಲಿ ಚಂದ್ರಶೇಖರರನ್ನು ಭೇಟಿಯಾಗಿ ಪುಸ್ತಕ ಕೊಟ್ಟದ್ದಲ್ಲದೆ, ಎರಡು ದಿನ ನಡೆಸಿದ ಅನೌಪಚಾರಿಕ ಮತ್ತು ಅಪೂರ್ವ (ಮತ್ತು ಅಂತಿಮ ಎಂದೂ ಹೇಳುವಂತಾದ್ದು ಕೇವಲ ಕಾಕತಾಲೀಯ. ಅದಾಗಿ ಕೆಲವೇ ದಿನಗಳಲ್ಲಿ ಚಂದ್ರಶೇಖರ್ ದೇಹಾಂತ್ಯವಾಯ್ತು) ವಿವರಗಳೆಲ್ಲ ‘ಸಪ್ತಸಾಗರದಾಚೆಯೆಲ್ಲೋ’ ಪುಸ್ತಕದಲ್ಲಿ ದಾಖಲಾಗಿದೆ. ಆ ಪುಸ್ತಕದ ತಯಾರಿಯ ಜೊತೆಜೊತೆಗೆ, ತಂದೆಯ ಹಳೆಯ ವಿದ್ಯಾರ್ಥಿ, ಪ್ರಸ್ತುತ ಮೈಸೂರಿನ ಇಂಗ್ಲಿಶ್ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಇದರ ಸಂಪಾದಕ ಕೆಬಿ ಗಣಪತಿ ಅವರ ಒತ್ತಾಯದ ಮೇರೆಗೆ ಅದನ್ನೇ ಇಂಗ್ಲಿಶಿನಲ್ಲಿ ಧಾರಾವಾಹಿಸಿದರು. ಹಾಗೆಂದು Crsossing the dateline ಅನುವಾದವಲ್ಲ, ಭಾಷೆಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡೇ ಮೂಡಿದ ಸ್ವತಂತ್ರ ಕೃತಿ.

[ತಂದೆ ತನ್ನನ್ನೆಂದೂ ‘ಅನುವಾದಿಸಿಕೊಳ್ಳಲು’ ಅವಕಾಶ ಕೊಡಲಿಲ್ಲ! ಪೈಗಳ ಆಹ್ವಾನದ ಮೇರೆಗೆ ತರಂಗದ ಪ್ರಥಮ ಸಂಚಿಕೆಗೆ ಇವರು ಕನ್ನಡದಲ್ಲೇ ಬರೆದಿದ್ದ ಲೇಖನವನ್ನು ಸಂತೋಷ ಕುಮಾರ ಗುಲ್ವಾಡಿ ‘ಸಾಮಾನ್ಯರಿಗಾಗಿ ಸರಳಗೊಳಿಸುತ್ತೇನೆ’ ಎಂದಾಗ ತಿರಸ್ಕರಿಸಿ, ವಾಪಾಸು ತರಿಸಿಕೊಂಡಿದ್ದರು. ಖ್ಯಾತ ಭಾಷಾಶಾಸ್ತ್ರಜ್ಞ ಡಿ.ಎನ್ ಶಂಕರ ಭಟ್ಟರು ತಮ್ಮ ವಾದಕ್ಕೆ ತಂದೆಯ ಶೈಲಿಯನ್ನು ತಿದ್ದಲು ಹೊರಟಾಗ ಸಾಕಷ್ಟು ಚರ್ಚೆ ನಡೆಸಿದ್ದರು. ಕೊನೆಯಲ್ಲಿ, ಸರಳತೆಯೆಂಬ ಕಲಗಚ್ಚನ್ನು ತನ್ನಿಂದ ನಿರೀಕ್ಷಿಸದಿರಿ. ತನ್ನದೇನಿದ್ದರೂ ಕುಂಕುಮಕೇಸರೀ ಮಿಶ್ರಿತ ಕೆನೆಹಾಲು ಎಂದೇ ಮುಗಿಸಿದ್ದರು. ಛಲ ಬಿಡದ ಭಟ್ಟರು ತನ್ನ ‘ಕನ್ನಡ ಬರಹವನ್ನು ಸರಿಪಡಿಸೋಣ’ ಪುಸ್ತಕದಲ್ಲಿ ಚರ್ಚೆಯ ವಿವರಗಳನ್ನು ಬಿಟ್ಟು, ತನ್ನ ವಾದಕ್ಕೆ ಪೂರಕವಾಗಿ ತಂದೆಯ ವಾಕ್ಯಗಳನ್ನು ಉದ್ಧರಿಸಿಕೊಂಡರು. ತಂದೆ ನಿರುಮ್ಮಳವಾಗಿ ನಕ್ಕು “ನೋಡಿ ಸ್ವಾಮೀ ನಾನಿರುವುದೇ ಹೀಗೆ. He is entitled to his opinion” ಎಂದುಬಿಟ್ಟಿದ್ದರು. ತಂದೆಯ ವಿಚಾರ ಬಂದಾಗ ಭಾವುಕನಾಗಿ ದಾರಿ ತಪ್ಪಿದೇಂತನ್ನಿಸಿತೇ – ಕ್ಷಮಿಸಿ.]

ದಿಲ್ಲಿಯ ಖ್ಯಾತ ಪ್ರಕಾಶಕ ಮತ್ತು ವಿತರಕನೊಬ್ಬ ನನ್ನ ಈ ಮೂರೂ ಇಂಗ್ಲಿಶ್ ಪ್ರಕಟಣೆಗಳನ್ನು ನೋಡಿ ಆಕರ್ಷಿತನಾದ. ಇವುಗಳ ಕುರಿತು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಂ ಅವರ ಮೆಚ್ಚುಗೆಯ ಮಾತುಗಳೂ ಆತನಿಗೆ ಹೆಚ್ಚಿನ ಪ್ರೇರಣೆ ಕೊಟ್ಟವು. ಆತ ಅವನ್ನು ಅಖಿಲ ಭಾರತ ಮಾರುಕಟ್ಟೆಗೇರಿಸಲು ಅಪೂರ್ವ ಖರೀದಿ ಯೋಜನೆ ಮುಂದಿಟ್ಟ. “ಮೂರೂ ಪುಸ್ತಕಗಳನ್ನು ಕೂಡಲೇ ತಲಾ ಎರಡು ಸಾವಿರ ಪ್ರತಿಗಳ ಸಂಖ್ಯೆಯಲ್ಲಿ, ಶೇಕಡಾ ಒಂದೂ ರಿಯಾಯ್ತಿ ಬಯಸದೇ ಈಗಿನ ಮುದ್ರಿತ ಬೆಲೆಯಲ್ಲೇ ನಗದು ಕೊಟ್ಟು ಕೊಳ್ಳುತ್ತೇನೆ. ಆದರೆ ಎರಡೇ ನಿಬಂಧನೆ. ೧. ಸರಳ ಮುಖಪುಟಗಳನ್ನು ನನ್ನದೇ ವೆಚ್ಚದಲ್ಲಿ ಬದಲಿಸುತ್ತೇನೆ. ೨. ಸಹಜವಾಗಿ ನನ್ನದೇ ಮುದ್ರಿತ ಬೆಲೆ ನಮೂದಿಸುತ್ತೇನೆ.” ಮುಂದುವರಿದು ಪರೋಕ್ಷವಾಗಿ ನನ್ನ ಪ್ರಕಾಶನದ ಧೋರಣೆಯನ್ನೆ ಗೇಲಿಮಾಡುವಂತೆ “ಯಾವುದೇ ವ್ಯಾಪಾರಿ ಈ ಗಾತ್ರದ ಪುಸ್ತಕವನ್ನು ದಾಸ್ತಾನಿಟ್ಟು ಮಾರುವಲ್ಲಿ ಕೇವಲ ರೂ ಐದೋ ಹತ್ತೋ ಗಳಿಸುವುದನ್ನು ತಿರಸ್ಕರಿಸುತ್ತಾನೆ. ಅದೇ ಸ್ಥಾನದಲ್ಲಿ ಮೂವತ್ತೋ ನಲ್ವತ್ತೋ ಬರುವುದಿದ್ದರೆ ಖಂಡಿತಾ ಐದೋ ಹತ್ತೋ ಪ್ರತಿಗಳಿಗೆ ಅವಕಾಶ ಕೊಡುತ್ತಾನೆ! ಇಂದು ಇಂಗ್ಲಿಷ್ ವೈಚಾರಿಕ ಪುಸ್ತಕಗಳಲ್ಲಿ ಪುಟಕ್ಕೆ ರೂ ಒಂದರಂತೆ ದರವಿದ್ದರೆ ಗಿರಾಕಿ ಗೊಣಗುವುದಿಲ್ಲ ಎನ್ನುವುದನ್ನು ಗಮನಿಸಿದರೆ ನಿಮ್ಮ ಹದಿನೈದು ರೂಪಾಯಿ ಬೆಲೆಯ Scientific temperಗೆ ನಾನು ನಿಗದಿಸುವ ಕನಿಷ್ಠ ಬೆಲೆ ನೂರು ರೂಪಾಯಿ” ಎಂದೇ ಆತ ಮುಗಿಸಿದ. ಆದರೆ ಅಂತಿಮವಾಗಿ ಕೊಳ್ಳುಗರ ಕಿಸೆಗೆ ಎಂಬತ್ತೈದು ರೂಪಾಯಿ ಹೆಚ್ಚುವರಿ ಹೊರೆಯಾಗಲು ನಾನು (ತಂದೆಯೂ ಸೇರಿದಂತೆ ಹೇಳುವುದಾದರೆ ನಾವು) ಒಪ್ಪಲಿಲ್ಲ!

ಜಾತಿ ಕೆಡುವ ಭಯಕ್ಕೆ ಜನಿವಾರ ಕಳಚಿಟ್ಟು ಬನ್ನಿ! ಕನ್ನಡದ ಬಲು ಪ್ರಚುರಿತ ಪುಸ್ತಕ ಮಳಿಗೆ (‘ಬಪುಮ’ ಎಂದಿಟ್ಟುಕೊಳ್ಳಿ) ಒಂದರೊಡನೆಯೂ ಇಂಥದ್ದೇ ಇನ್ನೊಂದು ಅನುಭವ ಕೇಳಿ. ಆಗ ಸಗಟು ಖರೀದಿಯ ಯಾವುದೋ ಒಂದು ಮುಖದಲ್ಲಿ ನನ್ನ ತಂದೆಯ ಅಭಿಮಾನೀ ಶಿಷ್ಯರೊಬ್ಬರು ಅಧಿಕಾರಿಯಾಗಿದ್ದರು. ಅವರು ಜಿಟಿನಾ ಕೃತಿಯನ್ನು ಎಷ್ಟೂ ಕೊಳ್ಳುತ್ತಾರೆಂಬ ವಿಶ್ವಾಸ ಬಪುಮಕ್ಕೆ ಬಂತು. ನನಗೆ ಅದರ ಯಜಮಾನರ ದೂರವಾಣಿ, “ಸ್ವಾಮೀ ನಮಗೆ ನಿಮ್ಮ ‘ನೋಡೋಣ ಬಾರಾ ನಕ್ಷತ್ರ’ ಸ್ವಲ್ಪ ಪ್ರತಿಗಳು ಬೇಕಿತ್ತು, ಹೇಗೆ ಕೊಡ್ತೀರಿ?” ನಾನು ಎಂದಿನ ಮೂರನೇ ಒಂದು ರಿಯಾಯ್ತಿ ಮಾತಾಡಿದೆ. ಬಪುಮ ಕೂಡಲೇ “ಇಲ್ಲ ಇಲ್ಲ. ಅದಾಗುವುದಿಲ್ಲ ನೀವು ಕನಿಷ್ಠ ೫೦% ಕೊಡಬೇಕು. ನಾವು ಎಂಟು ಹತ್ತು ಕೇಳ್ತಿಲ್ಲ, ಇನ್ನೂರು ಮುನ್ನೂರು ಪ್ರತಿ ನಗದು ಕೊಟ್ಟು ಕೊಳ್ತೇವೆ” ಎಂದರು. ನಾನು ವಾಸ್ತವವನ್ನು ಬಿಡಿಸಿಡುತ್ತಾ “ಸದ್ಯ ಕೊಡುತ್ತೇನೆಂದರೂ ನನ್ನಲ್ಲಿರುವುದು ನೂರೇ ಪ್ರತಿ. ಮತ್ತೆ ಅದನ್ನು ಯಾವ ಕಾರಣಕ್ಕೂ ಹೆಚ್ಚಿನ ರಿಯಾಯ್ತಿ ದರದಲ್ಲಿ ಕೊಡುವ ಯೋಚನೆ ನನಗಿಲ್ಲ.” ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಬಪುಮ “ತಿಂಗಳೊಳಗೆ ಮರುಮುದ್ರಿಸಿ ಕೊಡಿ, ಬೆಲೆ ನಮ್ಮ ೫೦%ಗೆ ಸರಿ ಹೊಂದುವಂತೆ ಹೆಚ್ಚೇ ಇಡಿ” ಎಂದರು. ನಾನೊಪ್ಪಲಿಲ್ಲ. ಪ್ರತಿ ಸಂಖ್ಯೆಯನ್ನು ಸಾವಿರದ ಮೇಲಕ್ಕೂ ಏರಿಸಿ ಆಮಿಷ ಒಡ್ಡಿದರು, ನಮ್ಮ ಪ್ರಕಾಶನ ತತ್ತ್ವದ ಉಲ್ಲಂಘನೆಯಾಗುವುದೆಂಬ ಭಯವಿದ್ದರೆ ತಮ್ಮದೇ ಹೆಸರಿನಲ್ಲಿ ಒಂದು ಮುದ್ರಣಕ್ಕೆ ಅವಕಾಶ ಕೊಟ್ಟರೂ ಸಾಕೆಂದು ಒತ್ತಾಯವನ್ನೂ ಹೇರಿದರು. ನಾನು ಯಾವುದಕ್ಕೂ ಜಗ್ಗಲಿಲ್ಲ!

ಸೋಲಿನ ಆಟ: ನನ್ನ ಪ್ರಕಟಣೆಗಳ ಸಂಪರ್ಕಕ್ಕೆ ಬಂದ ಸಣ್ಣ ಸಂಖ್ಯೆಯ ಪುಸ್ತಕ ಪ್ರೇಮಿಗಳಲ್ಲಿ ‘ಅತ್ರಿ ಪ್ರಕಟಣೆ ಎಂದರೆ ಗಟ್ಟಿ ಸಾಹಿತ್ಯ ಮತ್ತು ಸುಲಭ ಬೆಲೆಯದ್ದು’ ಎಂಬ ಉದ್ಗಾರವೇನೋ ತೆಗೆಯುತ್ತಿದ್ದರು. ಆದರೆ ಇಂದು ಪುಸ್ತಕೋದ್ಯಮ ಬೆಳೆದ ಕ್ರಮದಲ್ಲಿ ನಾನ್ಯಾಕೋ ಸೋಲಿನ ಆಟ ಆಡುತ್ತಿದ್ದೇನೆ ಎಂಬ ಭಾವವೂ ನನ್ನೊಳಗೆ ಬೆಳೆಯುತ್ತಲೇ ಬಂತು. ನಾನು ಬಿಡಿ ಪುಸ್ತಕ ವ್ಯಾಪಾರಿಯಾಗಿ ಮಂಗಳೂರು ಪರಿಸರದಲ್ಲಿ, ನನ್ನ ತಾಕತ್ತಿನಲ್ಲಿ ಮಾರಿಹೋಗಬಹುದಾದ್ದೆಲ್ಲವನ್ನು ಎಲ್ಲಿಂದಲೂ ನಗದು ಕೊಟ್ಟು ಕೊಂಡು, ಪ್ರದರ್ಶಿಸಿ, ಮಾರುವಲ್ಲಿ ನಿರಂತರ ತೊಡಗಿದ್ದೇನೆ. ಇದಕ್ಕೆ ಕರ್ನಾಟಕದ ಯಾವ ಮೂಲೆಯ ಪ್ರಕಾಶನವನ್ನೂ ನಾನು ಬಳಸದೇ ಬಿಟ್ಟಿಲ್ಲ. ಆದರೆ ರಾಜ್ಯದ ಇತರ ಪುಸ್ತಕ ಮಳಿಗೆಗಳು (ತೀರಾ ಕೆಲವರನ್ನು ಬಿಟ್ಟು), ಸ್ವತಂತ್ರ ಬಿಡಿ-ಮಾರಾಟದ ಮಳಿಗೆಯೂ ಇರುವ ಅನ್ಯ ಪ್ರಕಾಶಕರು (ನನ್ನ ಪೂರೈಕೆದಾರರು) ನನ್ನ ಪ್ರಕಟಣೆಗಳ ಬಗ್ಗೆ ನನ್ನದೇ ಧೋರಣೆ ತಾಳಲಿಲ್ಲ. ಕೆಲವರು ಸ್ಥಳೀಯವಾಗಿ ಅನಿವಾರ್ಯತೆ ಬಂದಾಗ ಆ ಒಂದೊಂದು ಶೀರ್ಷಿಕೆಯನ್ನು, ಬೇಡಿಕೆ ಇರುವಷ್ಟೇ ತರಿಸಿಕೊಂಡರು. ಓರ್ವ ಖ್ಯಾತಿವೆತ್ತ ಪ್ರಕಾಶಕ/ ಮಾರಾಟಗಾರರಂತೂ ಎಂದೋ ತರಿಸಿಕೊಂಡ ನನ್ನ ಕೆಲವೇ ಪುಸ್ತಕಗಳನ್ನು, ಅವರಂಗಡಿಯ ಅವ್ಯವಸ್ಥೆಗೆ ಬಣ್ಣ ಕಳೆದು ಮುಕ್ಕಾದ ಸ್ಥಿತಿಯಲ್ಲಿ, ‘ಕ್ಷಮಿಸಿ, ಮಾರಾಟವಾಗೋಲ್ಲ’ ಎಂಬ ಪುಟ್ಟ ಷರಾ ಸಹಿತ ಮರಳಿಸಿ, ನಿರ್ಲಜ್ಜವಾಗಿ ಅವರ ಪುಸ್ತಕಗಳ ಬಿಲ್ಲಿನ ಜೊತೆ ಹಣ ಕೇಳಿಕೊಂಡಿದ್ದರು! ಅವರು ಕಳಿಸುವ ಮೊದಲು ನನ್ನನ್ನು ವಿಚಾರಿಸುವ ಸೌಜನ್ಯವನ್ನೂ ತೋರಲಿಲ್ಲ. (ನಾನು ಮಾರಿ ಇಲ್ಲವೇ ಮರಳಿಸಿ ಕರಾರಿನಲ್ಲಿ ಅವನ್ನು ಕೊಟ್ಟದ್ದಲ್ಲ. ಮತ್ತವರು ತಮ್ಮ ಪ್ರಕಟಣೆಗಳ ಬಗ್ಗೆ ಬಿಲ್ಲಿನಲ್ಲಿ ಸ್ಪಷ್ಟವಾಗಿ ಘೋಷಿಸಿಕೊಂಡಿದ್ದಾರೆ – ಒಮ್ಮೆ ಮಾರಾಟವಾದ ಪುಸ್ತಗಳನ್ನು ಹಿಂದೆ ಪಡೆಯುವುದಿಲ್ಲ!). ‘ನೀ ನನಗಿದ್ದರೆ ನಾ ನಿನಗೆ’ ಎಂಬ ಬಾಲಪಾಠದಲ್ಲಿ ಬರುವ ಕತ್ತೆಯ ವಿವೇಚನೆಯೂ ಬಹುತೇಕ ಪುಸ್ತಕೋದ್ಯಮಿಗಳಿಗಿಲ್ಲ.

ಜನಪರ ಎಂದು ಹೇಳಿಕೊಳ್ಳುವ ಸರಕಾರಗಳು (ಪಕ್ಷಾತೀತವಾಗಿ) ಮತ, ಭಾಷೆ, ನೆಲ, ಜಲವೆಂದು ಜನರ ಭಾವನೆಗಳಲ್ಲಿ ಆಡುತ್ತಲೇ ಇರುತ್ತವೆ. ಎಲ್ಲದರ ಬಗ್ಗೆ ಟೀಕಾಸ್ತ್ರ ಎಸೆಯುವುದು ಇಲ್ಲಿ ಹೆಚ್ಚಾಗಬಹುದು. ಆದರೆ ಕನ್ನಡದ ಘೋಷಣೆ ಮಾಡುತ್ತಾ ಇಂಗ್ಲಿಷ್ ಮಾಧ್ಯಮದ ಹುಚ್ಚುಚ್ಚು ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿವೆ ಎನ್ನುವುದನ್ನಂತೂ ಸಾವಿರನೇ ಬಾರಿ ಪುನರುಚ್ಚರಿಸದಿರಲಾರೆ. ಶಿಕ್ಷಣ, ಸಂಸ್ಕೃತಿಗಳ ಪೂರಕಾಂಗವಾಗಿ ಸಹಜ ವಿಕಸನದಲ್ಲಿದ್ದ ಕನ್ನಡ ಪುಸ್ತಕೋದ್ಯಮವಂತೂ ವನಮಹೋತ್ಸವದ ಸಂಭ್ರಮದಲ್ಲಿ ತಾವೇ ನೆಟ್ಟ ಸಸಿಯನ್ನು ತೊತ್ತಳ ತುಳಿಯುವ ಉಡಾಫೆಯಲ್ಲಿ ನರಳುತ್ತಿದೆ. ಕನ್ನಡದ ಓದನ್ನು ಬಯಸುವ ಯುವ ಪೀಳಿಗೆಯೇ ಬರುತ್ತಿಲ್ಲ. ಪ್ರೇರಣೆ ನೀಡಬೇಕಾದ ಮನೆ, ಶಾಲೆ ಮತ್ತು ಪರಿಸರಗಳು ಯೋಜನೆಯಿಲ್ಲದೆ ಅಭಿವೃದ್ಧಿಯ ಶಾಪಕ್ಕೊಳಗಾಗಿರುವ ನಮ್ಮ ದಾರಿಗಳಂತೇ ಆಗಿದೆ. ಇಂಥಲ್ಲಿ ನನ್ನ ಪ್ರಕಟಣೆಗಳು ಯಾವುದೇ ಪಾಠಪಟ್ಟಿಯನ್ನು ನೇರ ಮುಟ್ಟುವುದಿಲ್ಲ. ಕೇವಲ ರೋಚಕ ಓದಿಗೆ ಅಥವಾ ವಿಚಾರಹೀನ ಭಾವುಕತೆಗೆ ಅವಕಾಶ ಇವುಗಳಲ್ಲಿಲ್ಲ. ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿರುವ ಸಾವಿರಾರು (ಲಕ್ಷಾಂತರವೂ ಇರಬಹುದು) ಸಂಸ್ಥೆಗಳ ಕೇವಲ ಪ್ರಾತಿನಿಧಿಕ ಖರೀದಿಗೊಳಗಾಗಲೂ ಇವಕ್ಕೆ ಜನಪ್ರಿಯತೆಯ ಮುಖವಾಡವಿಲ್ಲ. ಮುದ್ರಣ ಪ್ರಾವೀಣ್ಯ ಮೆರೆಯುವ ಮತ್ತು ಹೊಸ ಓದು, ಬೆಸ್ಟ್ ಆಫ್, ಸಮಗ್ರ, ಅಂಕಣ ಸಂಕಲನ ಇತ್ಯಾದಿ ಚರ್ವಿತಚರ್ವಣಗಳ ಅಡ್ಡೆಯಲ್ಲಿ ನನ್ನ ಪ್ರಕಟಣೆಗಳು ಎದ್ದು ಕಾಣುವುದು ಸಾಧ್ಯವೇ ಇಲ್ಲ! ಎತ್ತಿ ಆಡಬಹುದಾದ ಮಾಧ್ಯಮದ ಅಂಕಣಗಳು, ಅಂಕಣಕಾರರು ನನ್ನ ಲೆಕ್ಕಕ್ಕೆ ತುಂಬಾ ಕಡಿಮೆ ದಕ್ಕಿದ್ದನ್ನು ಅದೃಷ್ಟದ ತಲೆಗೆ ಕಟ್ಟಲು ನನ್ನ ಮನ ಒಪ್ಪದು. ಇದಕ್ಕೆ ಪೂರಕವಾಗಿ ಒಂದೆರಡು ಉದಾಹರಣೆಗಳು.

ಬೆನ್ನೆಲುಬಿಲ್ಲದ ಪತ್ರಿಕೋದ್ಯಮ: ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿತ ಪುಸ್ತಕಗಳ ಪಟ್ಟಿಯಾಗಲೀ (ಸಾದರ ಸ್ವೀಕಾರ ಎನ್ನಿ), ಕನಿಷ್ಠ ಹಾಗೆ ಬಂದವುಗಳ ಶಿಸ್ತುಬದ್ಧ ಪರಿಚಯವೋ ವಿಮರ್ಶೆಯೋ ಒಂದು ತತ್ತ್ವವಾಗಿ ಎಂದೂ ಬಂದದ್ದಿಲ್ಲ. ಮೊದಮೊದಲು ನಾನು ಎಲ್ಲಾ ಪತ್ರಿಕೆಗಳಿಗೂ ತಲಾ ಎರಡು ಪ್ರತಿಗಳನ್ನು ‘ವಿಮರ್ಶೆಯ ಕೃಪೆಗಾಗಿ’ ಎಂದು ಷರಾ ಹಚ್ಚಿಯೇ ಕಳಿಸುತ್ತಿದ್ದೆ. ಎಷ್ಟೋ ಪುಸ್ತಕಗಳಿಗೆ ವಿಮರ್ಶೆಯಿರಲಿ, ‘ಸ್ವೀಕಾರ’ ಪಟ್ಟಿಯಲ್ಲೂ ಅವಕಾಶ ಸಿಗದಿದ್ದುದು ಒಂದು ಕಥೆ. ಮತ್ತೆಷ್ಟೋ ಬಾರಿ ವಿಮರ್ಶಕನ ಅಸಾಮರ್ಥ್ಯ ಕೃತಿಯ ಕೊರತೆಯಾಗಿಬಿಡುತ್ತಿತ್ತು. ‘ರಾಮಾನುಜನ್ ಬಾಳಿದರಿಲಿ’ ಕೃತಿಪರೀಕ್ಷಕನೊಬ್ಬ ಗಣಿತೀಯ ವಿವರಣೆಗಳನ್ನು ಕಬ್ಬಿಣದ ಕಡಲೆ ಎಂದ. ಕಪ್ಪುಕುಳಿ, ಕಪ್ಪು ರಂಧ್ರಗಳು ಯಾಕೇ ಬ್ಲ್ಯಾಕ್ ಹೋಲೇ ಇದ್ದರೇನು ಎನ್ನುವವರು ‘ಕೃಷ್ಣವಿವರ’ ಎಂಬ ಪದವನ್ನು ತಂದೆ ಬಳಸಿದಾಗಲಂತೂ (ಗಮನಿಸಿ, ಇದನ್ನು ಠಂಕಿಸಿದ್ದು ತಂದೆ ಅಲ್ಲ, ಖ್ಯಾತ ಖಭೌತ ವಿಜ್ಞಾನಿ ಜಯಂತ್ ನಾರಳೀಕರ್) ‘ಸಂಸ್ಕ್ರುತ ಭೋ ಇಷ್ಟ’ ಎಂದು ಗೇಲಿ ಮಾಡಿದರು. ಎಲ್ಲ ಮಕ್ಕಳಿಗೂ ಒಂದೇ ಅಳತೆಯ ಚಡ್ಡಿ ಹೊಲಿಯುವುದಲ್ಲ ಎನ್ನುತ್ತಿದ್ದರು ತಂದೆ. ಗಡ್ಡ ಹೆರೆಸಲು ಬ್ಲೇಡು, ಗೆಲ್ಲು ಕಡಿಯಲು ಕತ್ತಿ, ಮರದ ಬುಡಕ್ಕಾದರೆ ಕೊಡಲಿಯೇ ಸರಿ ಎಂದೂ ವಿವರಿಸಿದ್ದುಂಟು. ಪರ್ಯಾಯ ಪದಗಳ ವಿಪುಲತೆಯಲ್ಲಿ ವಿಜ್ಞಾನದ ಭಾಷೆಯನ್ನು ಸರಳಗೊಳಿಸಿದ್ದೇವೆ ಎನ್ನುವುದು ಅಪಕಲ್ಪನೆ, ಗೊಂದಲಕ್ಕೆ ದಾರಿ. ಇದು ಒಂದು ಕ್ಷಣದ, ಶಬ್ದದ, ವಾಕ್ಯದ ಅಗತ್ಯವಲ್ಲ, ಒಂದು ಪರಂಪರೆಯ ಒಂದು ಜೀವಮಾನದ ಚಿಂತನೆಯ ಫಲ. ಮೆಟ್ಟಲಿನಲ್ಲಿ ಎಡವಿದವರನ್ನು ಉಪಚರಿಸಿ, ಸೌಧದ ಸೌಂದರ್ಯದತ್ತ ಸೆಳೆಯಲು ತಂದೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಅಡ್ಡಕಸಬಿಗೆ ಇಟ್ಟಿಗೆಯ ಮೇಲೆ ಇಟ್ಟಿಗೆಯಿಟ್ಟರೆ ಗೋಡೆ. ಪರಿಣತ ಮೇಸ್ತ್ರಿಗೆ ನೆಲದ ಹದ, ಅಡಿಪಾಯದ ದೃಢತೆಯೂ ಕಾಡುತ್ತದೆ. ಮುಂದುವರಿದು ಸಾಲಿಗೆ ಹಗ್ಗ, ಪ್ರತಿ ಕಲ್ಲಿಗೂ ಮಟ್ಟಗೋಲು, ತೂಕದ ಗುಂಡು, ಜಲಮಟ್ಟವೂ ಬಳಕೆಯಾದರಷ್ಟೇ ಶಿಲ್ಪ (ಇಲ್ಲವಾದರೆ ಬಳಕೆದಾರನ ಗೋರಿ!). ತಂದೆ ಇದು ತನ್ನದು, ಸರ್ವಪ್ರಥಮ ಸಾಧನೆ ಎಂಬಿತ್ಯಾದಿ ಹಮ್ಮು ಎಂದೂ ತೋರಿದ್ದಿಲ್ಲ. ಭಾಷೆಯನ್ನು ವಿಜ್ಞಾನಕ್ಕೆ ದುಡಿಸುವಲ್ಲಿ ಅವರಿಗೆ ಇಂಗ್ಲಿಷಿನಲ್ಲಿ ಅಸಿಮೋವ್ ಗ್ಯಾಮೋವ್‌ಗಳು ಆದರ್ಶ. ಕನ್ನಡಕ್ಕೆ (ತಾನಲ್ಲ) ಆರ್.ಎಲ್ ನರಸಿಂಹಯ್ಯ, ಸಿ.ಎನ್ ಶ್ರೀನಿವಾಸ ಅಯ್ಯಂಗಾರ್ ಹಾಕಿಕೊಟ್ಟಿದ್ದಾರೆ ದಾರಿ ಎಂದು ಪ್ರಚುರಿಸುತ್ತಿದ್ದದ್ದು ಜಾಣ ಕಿವುಡಿನ ಮೇಲೆ ಬೀಳುತ್ತಿತ್ತು. ದುರಂತವೆಂದರೆ ನಮ್ಮ ಬಹುತೇಕ ಪತ್ರಿಕಾ ವಿಮರ್ಶಕರು ಕೇವಲ ಸಾಹಿತ್ಯ ವಿದ್ಯಾರ್ಥಿಗಳು! ಪತ್ರಿಕಾ ಬ್ರಹ್ಮರುಗಳ ಇಸ್ಪೀಟ್ ಆಟದಲ್ಲಿ ಜೋಕರುಗಳಿಗೇ ಪ್ರಾಧಾನ್ಯ. ವಿವಿಧ ಶಿಸ್ತುಗಳಿಗೆ ಸಮರ್ಥರನ್ನು ಆಯ್ದು, ಬಳಸುವುದು ಅವರಿಗೆ ಅನಾವಶ್ಯಕ ವೈಭವ! ಮೊನ್ನೆ ಸಿಕ್ಕ ಗೆಳೆಯ ಪಿ.ಮಹಮ್ಮದ್ (ಪ್ರಜಾವಾಣಿ ಬಳಗದ ವ್ಯಂಗ್ಯಚಿತ್ರಕಾರ) ಹೇಳಿದ ಮಾತು – ದಿನಕ್ಕೆ ನಾಲ್ಕೋ ಎಂಟೋ ಗೀಟು ಹಾಕುವ ನರೇಂದ್ರ (ಇನ್ನೋರ್ವ ಹಿರಿಯ ವ್ಯಂಗ್ಯಚಿತ್ರಕಾರ) ಉಳಿದ ಹೊತ್ತಿನಲ್ಲಿ ಕಛೇರಿಯ ದೂಳು ಯಾಕೆ ಹೊಡೆಯಬಾರದು ಎಂದು ಶ್ಯಾಮರಾಯರ ಮನಸ್ಸು ತರ್ಕಿಸುತ್ತಿತ್ತು!

ಬದ್ಧತೆಯಿಲ್ಲದ ಬುದ್ಧಿಗಳು: ತಂದೆಯ ಬರಹಗಳಿಗೆ ನನ್ನ ವಕಾಲತ್ತೇನೂ ಬೇಕಿಲ್ಲ. ನನ್ನದೇ ಒಂದು ಪುಸ್ತಕವನ್ನು ಮೊದಲು ವಿಚಾರಪರವಾದ್ದೊಂದು ಮತ್ತೆರಡು ತೋರಿಕೆಯ ‘ಬುದ್ಧಿ’ಗಳು ಸ್ವೀಕರಿಸಿದ ಪರಿಯನ್ನು ನಾನು ಹೇಳಲೇಬೇಕು.

೧೯೯೯ರಲ್ಲಿ ನನ್ನ ‘ಪುಸ್ತಕ ಮಾರಾಟ ಹೋರಾಟ’ (ಪುಮಾಹೋ ಎನ್ನಿ) ಪ್ರಕಟವಾಯ್ತು. ಆ ಹೊಸತರಲ್ಲೇ ಅನ್ಯ ಕಾರ್ಯನಿಮಿತ್ತ ಉಡುಪಿಗೆ ಹೋದವನು ಕೇವಲ ವೈಯಕ್ತಿಕ ಗೌರವದಲ್ಲಿ ಕುಶಿ ಹರಿದಾಸ ಭಟ್ಟರಿಗೆ ಒಂದು ಪ್ರತಿ ಕೊಟ್ಟು ಬಂದೆ. ಆ ರಾತ್ರಿಯಿಂದ ತೊಡಗಿ ಎರಡೋ ಮೂರೋ ದಿನದವರೆಗೆ ನನಗೆ ಬಿಟ್ಟು ಬಿಟ್ಟು ಕುಶಿಯವರಿಂದ ದೂರವಾಣಿ. ಅವರ ದಣಿವರಿಯದ ಕೆಲಸಗಳ ನಡುವೆ ನನ್ನ ಪುಸ್ತಕದ ಓದಿನ ವಿವಿಧ ಹಂತಗಳ ಸಂತೋಷ ಹಂಚಿಕೊಳ್ಳುತ್ತಲೇ ಹೋದರು. ಹತ್ತೇ ದಿನದಂತರದೊಳಗೆ (ತಮ್ಮ ಮೊಮ್ಮಗಳಿಂದಲೇ ಚಿತ್ರ ಬರೆಸಿ, ಸೇರಿಸಿ) ತಮ್ಮ ಖ್ಯಾತ ಲೋಕಾಭಿರಾಮ ಅಂಕಣದಲ್ಲಿ ಪುಮಾಹೋವನ್ನು ಕಣಕಣಾ ಹಿಂಜಿ ನನಗೆ ಪ್ರಶಂಸಾ ಮಾಲಿಕೆ ತೊಡಿಸಿಬಿಟ್ಟಿದ್ದರು. ಎಲ್ಲಾ ಪುಸ್ತಕ ಪ್ರೇಮಿಗಳ, ಉದ್ಯಮಿಗಳ, ಸರಕಾರದ ಕಣ್ತೆರೆಸುವ ಕೆಲಸವನ್ನು ಗಟ್ಟಿಯಾಗಿ ಮಾಡಿದ್ದರು.

ಹೀಗೇ ಮೈಸೂರಿನ ನನ್ನ ಮುದ್ರಕರಲ್ಲಿಗೆ ಹೋಗಿದ್ದ ಹಾಮಾ ನಾಯಕರು ವಾಸ್ತವದಲ್ಲಿ ಪುಸ್ತಕ ಮಾರಾಟ ಹೋರಾಟದ ಮೊದಲ ಪ್ರತಿಯ ಗೌರವವನ್ನು ದಕ್ಕಿಸಿಕೊಂಡಿದ್ದರು. ಅದನ್ನು ನೋಡಿ (ಖಂಡಿತವಾಗಿ ಪೂರ್ಣ ಓದಿ ಅಲ್ಲ) ಅವರು ಸುಧಾ ವಾರಪತ್ರಿಕೆಯ ಅಂಕಣದಲ್ಲಿ ಬರೆದ ಲೇಖನ ತೀರಾ ನಿರಾಶಾದಾಯಕವಾಗಿತ್ತು. ಅವರು ಆರೋಪ ಹೊರಿಸಿದ್ದರೆ ನಾನು ಉತ್ತರಿಸಬಹುದಿತ್ತು. ಜೀವಮಾನದುದ್ದಕ್ಕೂ ಸಾರ್ವಜನಿಕ ವ್ಯವಸ್ಥೆಯ ಭಾಗವಾಗಿಯೇ ನಿಂತ ಅವರ ಅಪಾರ ಅನುಭವದ ಬೆಳಕಿನಲ್ಲಿ ಖಂಡಿತವಾಗಿಯೂ ಭಿನ್ನಾಭಿಪ್ರಾಯವನ್ನು ದಾಖಲಿಸುವ ಅವಕಾಶವಿತ್ತು. ಇಲ್ಲ, ಜಾಣತನ ಮೆರೆದರು. ೧೫೮ ಪುಟ ಮತ್ತು ೧೭ ಮುಖ್ಯ ಶೀರ್ಷಿಕೆಗಳ ಪುಸ್ತಕದಲ್ಲಿ ಮುನ್ನುಡಿ ಒಂದು ಚೂರು, ಮತ್ತೆ ೨೦ ಪುಟಗಳಲ್ಲಿದ್ದ, ಒಂದು ಶೀರ್ಷಿಕೆಯಡಿಯಲ್ಲಿದ್ದ ಪುಸ್ತಕೋದ್ಯಮದ ರಸಪ್ರಸಂಗಗಳನ್ನು ಸ್ವಲ್ಪ ನೋಡಿ, ಒಂದು ಘಟನೆಯನ್ನಂತೂ ಹಾಗೇ ಉದ್ಧರಿಸಿ ವಾರದ ಪುಟ ತುಂಬಿಕೊಂಡಿದ್ದರು. ಇಂದಿಗೂ ಹಾಮನಾ ಬರಹಗಳ ಅಭಿಮಾನಿಗಳು ಎಷ್ಟೋ ಜನ ಪುಮಾಹೋ ಅಂದರೆ ಪುಸ್ತಕೋದ್ಯಮದ ಹಾಸ್ಯ ಬರಹಗಳ ಸಂಕಲನವೆಂದೇ ತಿಳಿದಿದ್ದಾರೆ!

ನಾನು ಅದುವರೆಗೆ ಲಂಕೇಶರನ್ನು ಭೇಟಿಯಾದವನಲ್ಲ. ಅನ್ಯ ಕಾರ್ಯಾರ್ಥ ಬೆಂಗಳೂರಿಸಿದವನು, ತುಂಬು ವಿಶ್ವಾಸದಿಂದ ಪುಮಾಹೋದ ಪ್ರತಿ ಹಿಡಿದುಕೊಂಡು ಅವರ ಕಛೇರಿಗೆ ಹೋದೆ. ಶೂದ್ರ ಶ್ರೀನಿವಾಸರಿಗೆ ನಿತ್ಯದ ಸಭೆ ಕೊಟ್ಟಂತಿದ್ದ ಲಂಕೇಶರೆದುರು ನಾನು ಸ್ವಪರಿಚಯ ಹೇಳಿಕೊಂಡು, ಪುಸ್ತಕ ಕೊಡುವುದರಲ್ಲಿದ್ದೆ. “ಓ, ಮಂಗ್ಳೂರಾ! ಪತ್ರಿಕೇ ಇಡ್ತೀರೇನ್ರೀ?” “ಇಲ್ಲ ಸಾರ್. ನನ್ನದು ಪುಸ್ತಕ ಮಾತ್ರ…” “ಪತ್ರಿಕೆ ಇಡ್ರೀ. ನಿಮ್ಮ ಬಸ್ ಸ್ಟ್ಯಾಂಡ್ ಬೋಳಿ ಮಗ ಏನು ಸುಖವಿಲ್ಲಾ.” ಕುಸಿದ ಧೃತಿಯಲ್ಲೇ ನಾನು ಪುಸ್ತಕ ತೋರಿಸಿದೆ, ಕೊಟ್ಟೆ. ಪುಟ ಬಿಡಿಸುವ ಸೌಜನ್ಯವನ್ನೂ ತೋರದೆ, ಪಕ್ಕಕ್ಕಿಟ್ಟು, ಸಹಾಯಕನನ್ನು ಕರೆದು ತನ್ನ ಅದೇ ಬಂದ ಹೊಸ ಪುಸ್ತಕ – ‘ಅಕ್ಕ’ ಕೊಟ್ಟು, ‘ಲೆಕ್ಕ ಚುಕ್ತಾ’ ಮಾಡಿದವರಂತೆ ಮುಖಭಾವ ಮಾಡಿದರು. ನಾನು ಎದ್ದು ಬಂದೆ. ಮುಂದೆಂದೋ ಯೋಗಪ್ಪ ಎನ್ನುವವರು ಕಾಟಾಚಾರಕ್ಕೆ ಪುಸ್ತಕದ ಕುರಿತು ಒಂದಷ್ಟು ಪತ್ರಿಕೆಯಲ್ಲಿ ಗೀಚಿದರು.

ಅನ್ಯರ ಸ್ನೇಹ ಸರಿ, ಔದಾರ್ಯದಲ್ಲಿ ಬದುಕುವುದು ನನಗೆ ಎಂದೂ ಹಿಡಿಸಿಲ್ಲ. ವಿವಿಧ ಕೇಂದ್ರಗಳಲ್ಲಿ ನನ್ನದೇ ವಿತರಣಾ ಜಾಲ ಬೆಳೆಸುವ (big business) ಅರ್ಥಾತ್ ನನ್ನ ವೈಯಕ್ತಿಕತೆಯನ್ನು ಅಡವಿಟ್ಟು ಅಂಗಡಿಯನ್ನು ಬೆಳೆಸುವ ಹುಚ್ಚು ನನಗೆ ಎಂದೂ ಬಂದದ್ದಿಲ್ಲ. ಅತ್ರಿ ಅಂಗಡಿಗೆ (ನನ್ನ ಕಾಲಾನಂತರ) “ಮುಂದೇನು” ಎಂದು ಕೇಳುವವರಿಗೆ ನಾನು ಲಘುವಾಗಿಯೇ ಆದರೆ ವಾಸ್ತವವನ್ನು ಹೇಳುತ್ತೇನೆ. “ನನ್ನಜ್ಜ ಕೃಷಿಕ. ಅಪ್ಪ ಅಧ್ಯಾಪಕ. ನಾನು ಎರಡೂ ಬಿಟ್ಟ ವ್ಯಾಪಾರಿ. ಮಗ ಮೂರೂ ಬಿಟ್ಟಾಗ (ಸಿನಿಮಾ ನಿರ್ದೇಶಕ) ನನ್ನನಂತರ ಅತ್ರಿ ಮುಚ್ಚಿದರೆ ನನಗೆ ಆಶ್ಚರ್ಯವೂ ಇಲ್ಲ, ದುಃಖ ಖಂಡಿತಾ ಇಲ್ಲ”. ಹಾಗಿರುವಾಗ ಇಪ್ಪತ್ತೇ ವರ್ಷ ಪ್ರಾಯದ ಪ್ರಕಾಶನದ ಬಗ್ಗೆ ಯಾಕೆ ಮೋಹ! ಅಶೋಕ, ಆನಂದ, ಅನಂತಗಳ (ನಾವು ಮೂವರು ಸೋದರರು) ಆದ್ಯಕ್ಷರ ತ್ರಯಗಳ ಸೂಚನೆಯಾಗಿ ಬಂದದ್ದು ಅತ್ರಿ (ಇಂಗ್ಲಿಶಿನಲ್ಲಿ A-three). ಇದರ ಹೃಸ್ವ ರೂಪ ಇಂಗ್ಲಿಶಿನಲ್ಲಿ ಜ್ಞಾನಪ್ರಪಂಚದ ವ್ಯಾಪಕತ್ವ ಸೂಚಿಸುವಂತೆ (ABC) Book Centre ಸೇರಿಸಿದ್ದೆ. ಅತ್ರಿಯಿಂದ ದತ್ತವಾದದ್ದು ಎಂಬರ್ಥದಲ್ಲಿ ಪ್ರಕಾಶನವನ್ನು ನಾನು ಮೊದಲು ‘ದತ್ತಾತ್ರೇಯ’ ಎಂದೇ ತೊಡಗಿದ್ದೆ. ಸಾಂಸ್ಥಿಕ ರೂಪದಲ್ಲಿ ಅತ್ರಿಯಿಂದ ಏನೂ ಭಿನ್ನವಲ್ಲದ ಪ್ರಕಾಶನಕ್ಕೆ ಹೆಸರಿನ ಬೇಧದಿಂದ ಸರಕಾರೀ ನೋಂದಾವಣೆ ಇತ್ಯಾದಿ ಅನಾವಶ್ಯ ಆಡಳಿತ ವೆಚ್ಚಗಳು ಏರುತ್ತವೆ ಎಂದು ಕಂಡಾಗ ಅತ್ರಿಗೇ ಮರಳಿದ್ದ ಪ್ರಕಾಶವನ್ನು ಈಗ ಮುಚ್ಚಿದ್ದೇನೆ. ಲೋಕೋಪಯೋಗಿಯಾಗಬಹುದಾದ ನನ್ನನುಭವದ ಹಂಚಿಕೆಗಷ್ಟೇ ನಾನು ಲೇಖನಗಳನ್ನು ಬರೆದದ್ದುಂಟು, ತೀರಾ ಕಡಿಮೆ ಸಂಖ್ಯೆಯಲ್ಲಿ ಪುಸ್ತಕವಾಗಿ ಸಂಕಲಿಸಿದ್ದೂ ಆಗಿದೆ. ಉಳಿದವಕ್ಕೆ ಈಗ ಈ ಅಂತರ್ಜಾಲದ ಪುಟಗಳು ದಕ್ಕಿ ಅಪಾರ ಸ್ವಾತಂತ್ರ್ಯವನ್ನೂ ಸಂತೋಷವನ್ನೂ ಕಾಣುತ್ತಿರುವಾಗ ‘ಚಿಂತೆಯಾತಕೋ ಮನುಜಾ ಪುಸ್ತಕೋದ್ಯಮದ ಭ್ರಾಂತಿಯಾತಕೋ’ ಎಂದು ಪ್ರಕಾಶನವನ್ನು ಮುಚ್ಚಿದ್ದೇನೆ. ಅಭಿನವ ಪ್ರಕಾಶನದ ಅತ್ಯುತ್ಸಾಹೀ ಗೆಳೆಯ ರವಿ ಕುಮಾರ್ ಹಿಂದೆಂದೋ “ನಿಮ್ಮ ಒಂದು ಪುಸ್ತಕವನ್ನಾದರೂ ನನಗೆ ಪ್ರಕಟಿಸಲು ಕೊಡಿ” ಎಂದದ್ದು ನೆನಪಿನಲ್ಲಿತ್ತು. ಹಾಗಾಗಿ ನಾನಿಲ್ಲಿ ಅಂಡಮಾನ್ ಪ್ರವಾಸ ಕಥನ ನಡೆಸಿದ್ದಂತೆ ರವಿಗೆ ‘ಇದು ಬೇಕೇ’ ಎಂದು ಸೂಚನೆ ಕೊಟ್ಟಿದ್ದೆ. ಅವರು ತುಂಬು ಮನಸ್ಸಿನಿಂದ ‘ಹೂಂ’ ಎಂದದ್ದಕ್ಕೆ ಈಗ ಲಕ್ಷದ್ವೀಪ ಕಥನವನ್ನೂಸೇರಿಸಿ ಕೊಟ್ಟಿದ್ದೇನೆ. ಕಾಲದ ಹಕ್ಕೊತ್ತಾಯಗಳು ಬಂದರೆ, ನನಗೆ ಒಪ್ಪಿಗೆಯಾದರೆ (ನನ್ನದೂ ಇನ್ನಷ್ಟು ಬರಹಗಳು ಸೇರಿದಂತೆ) ತಂದೆಯವರ ಎಲ್ಲಾ ಕೃತಿಗಳು ಅನ್ಯ ಪ್ರಕಾಶನಗಳಲ್ಲಿ ಹೊಸ ರೂಪಗಳಲ್ಲಿ ಬಂದಾವು.

ನಾ ನಡೆದಷ್ಟು ದಾರಿ ಚೆನ್ನಾಗಿತ್ತು (ಇಲ್ಲವಾದರೆ ಖಂಡಿತವಾಗಿ ಯಾಕೆ) ಎಂಬ ನಿಮ್ಮ ಮಾತು ಕೇಳಲು ಕಾತರನಾಗಿದ್ದೇನೆ.