(ಜಲಪಾತಗಳ ದಾರಿಯಲ್ಲಿ ಅಂತಿಮ ಮತ್ತು ಆರನೇ ಭಾಗ)

[ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ ಸಮಸ್ಯೆಗಳಿಗೆ ಅಪ್ಪಟ ಪ್ರಜಾಸತ್ತಾತ್ಮಕ ಹೋರಾಟವನ್ನು ಕೊಟ್ಟು ಬಗೆಹರಿಸಿದ್ದು ಯಾರೂ ಮರೆಯುವಂತದ್ದಲ್ಲ. ಒಂದು ಹಂತದಲ್ಲಿ ಇವರಿಗೂ ಎಲ್ಲ ಸಾಕೆನ್ನಿಸಿದಾಗ ದೇಶದ ಉತ್ತರ ತಲೆಯಲ್ಲಿ (ವಾಸ್ತವಾಗಿ ಪರದೇಶಿಯಾಗಿ) ಹೋಗಿ ತಣ್ಣಗೆ ನೆಲೆಸಿದ್ದರು. ಆದರೆ ಇಲ್ಲಿನ ಸಂಕಟಗಳು ಬೇರೊಂದೇ ಆಯಾಮಪಡೆದುಕೊಳ್ಳುತ್ತಿರುವುದನ್ನು ನೋಡಲಾಗದೇ ಮತ್ತೆ (ಗುಜರಾತಿನ ಮೂಲಕ) ಹೋರಾಟದ ಕೆಚ್ಚುಳಿಸಿಕೊಂಡು ಬಂದಿದ್ದಾರೆ. ಹಣ ಸೇವೆಗಳ ಸಮಸ್ಯೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗಗಳನ್ನು ಮೀರಿದ ಪಾರಿಸರಿಕ ಸಮಸ್ಯೆ, ಒಂದು ಜನ್ಮಕ್ಕಲ್ಲ ಹಲವು ತಲೆಮಾರುಗಳಿಗೆ ವ್ಯಾಪಿಸುವ, ಮಾನವ ಮಾತ್ರರಿಗಲ್ಲ ಜೀವಜಾಲಕ್ಕೇ ಕುತ್ತಾಗುವ ಎಂಡೋ ಸಲ್ಫಾನ್ ಹೆಮ್ಮಾರಿಯ ವಿರುದ್ಧ ಇವರು ರಂಗಕ್ಕಿಳಿದರು. ಶಾನುಭಾಗರನ್ನು ಗುರುವೆಂದೇ ಪರಿಗಣಿಸಿ ಬಂದ ಗೆಳೆಯ ಸುಂದರರಾಯರು ತಿರುಗಲಿರುವ ನೇತ್ರಾವತಿಯಲ್ಲಿ ಮುಳುಗಿದ್ದವರೂ ದಡಬಡಿಸಿ ಹೊರಟು ಆದರೆ ಧೃಢವಾಗಿ ಹಿಂಬಾಲಿಸಿದ್ದಾರೆ. (ಅವಶ್ಯ ಇಲ್ಲೇ ಇರುವ ಸುಂದರ ವಸುಂಧರ ಸೇತನ್ನು ಬಳಸಿ ಅವರ ಬ್ಲಾಗಿಗೆ ಹೋಗಿ ನೋಡಿ) ನನಗೋ ಇವರನ್ನು ಅನುಸರಿಸುವ ಉಮೇದು ಆದರೆ ನಾನೇ ನಡೆಸಬೇಕಾದ ಜವಾಬ್ದಾರಿಯನ್ನು ಬಿಡಲಾಗದ ತುರ್ತಿನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳನ್ನು ತುರುಕಿಬಿಟ್ಟೆ. ಈಗ ಬನ್ನಿ, ಜಲಪಾತದೋಟದ ಕೊನೆಯ ಮುಳುಗಿಗೆ ನಿಮ್ಮನ್ನು ಒಯ್ಯುತ್ತಿದ್ದೇನೆ.]

ಸಾಗರದಲ್ಲಿ ಕಾಫಿಂಡಿಯ ನೆಪದ ವಿರಾಮ ಮಾತ್ರ. ನಗರದ ಹೊರವಲಯದ್ದೇ ಹಳ್ಳಿ ಎಂಬಂತೆ ಮುಂದೆ ಸಿಕ್ಕ ಹೆಗ್ಗೋಡಿಗೆ ನಮ್ಮ ನಾಲ್ಕು ಹಗಲಿನ ಓಟದ ಎಲ್ಲ ಉದ್ದಿಷ್ಟಗಳನ್ನೂ ಪೂರೈಸಿದಂತಾಗುತ್ತಿತ್ತು. ನಿಮಗೆಲ್ಲಾ ಗೊತ್ತೇ ಇರುವಂತೆ ಹೆಗ್ಗೋಡು ಕೆ.ವಿ ಸುಬ್ಬಣ್ಣನವರ ಅಸಾಧಾರಣ ಕರ್ಮ ಕ್ಷೇತ್ರ. ಸಾಹಿತ್ಯ ವಿದ್ಯಾರ್ಥಿಯಾಗಿ ನನಗೆ ಮೊದಲು ಇದು ಕಾಣಿಸಿದ್ದು ‘ಸಾಕ್ಷಿ’ಯಂಥಾ ಗುಣಪಕ್ಷಪಾತಿಯಾದ ಪತ್ರಿಕೆಯ ಪ್ರಕಟಣಾ ನೆಲೆಯಾಗಿ. ಇಂಗ್ಲಿಷ್ ಸ್ನಾತಕೋತ್ತರ ತರಗತಿಯಲ್ಲಿ ಸಹಪಾಠಿ ಅಶೋಕ ಕುಲಕರ್ಣಿ ಏನೋ ತುಂಟಾಟ ಮಾಡಿದಾಗ ಪ್ರೊ|ಎಚ್.ಎಚ್ ಅಣ್ಣೇಗೌಡ ಕುಟುಕಿದ್ದರು, “ಐಸೇ, ಒಂದು ಅನುವಾದ ಪ್ರಕಟವಾಯ್ತೂಂತ ನೀನು ದೊಡ್ಡ ಸಾಹಿತೀಂತ ತಿಳೀಬೇಡ!” ತರಗತಿ ಮುಗಿದಮೇಲೆ ವಿವರ ಸಿಕ್ಕಿತು. ಕುಲಕರ್ಣಿ ಅನುವಾದಿಸಿದ ಐರಿಷ್ ಲೇಖಕ ಸಿಂಗನ ನಾಟಕ ಅದೇ ತಾನೆ ಸಾಕ್ಷಿಯಲ್ಲಿ ಪ್ರಕಟವಾಗಿತ್ತು. ತಮಾಷೆ ಎಂದರೆ ಅದೇ ಕಾಲಕ್ಕೆ ಅದೇ ನಾಟಕದ ಬೇರೊಂದು ಅನುವಾದವನ್ನು ಸ್ಟ್ರಾಟ್‌ಫರ್ಡ್ ಅಪಾನ್ ಏವನ್ ರಿಟರ್ನ್ಡ್ (ರಿಜೆಕ್ಟೆಡ್?) ಪ್ರೊಫೆಸರ್ ಸಾಹೇಬರು ಸ್ವಂತ ಹೆಸರಿನಲ್ಲಿ ಸಾಕ್ಷಿಗೆ ಕಳಿಸಿದ್ದು ‘ವಿಷಾದ’ ಚೀಟಿ ಹೊತ್ತು ಮರಳಿತ್ತಂತೆ! (ಗಮನಿಸಿ, ಅನುವಾದದ ಸೋಲು ಸಾಹೇಬರದ್ದೇ ಆಗಬೇಕಿಲ್ಲ – ಹೆಸರು ಖಂಡಿತಾ ಅವರದ್ದೇ!)

ಪುಸ್ತಕ ವ್ಯಾಪಾರಿಯಾದ ಮೇಲೆ (೧೯೭೫) ನನಗೆ ಹೆಗ್ಗೋಡು ಅಕ್ಷರ ಪ್ರಕಾಶನದ ಊರು. ನನ್ನ ತಂದೆಯ (ಜಿಟಿ ನಾರಾಯಣರಾವ್) ಹೆಸರಿನ ಬಲದಲ್ಲಿ ಸುಬ್ಬಣ್ಣ ಅವರ ಪ್ರಕಟಣೆಯ ಯಾವ ಪುಸ್ತಕವಾದರೂ ಎಷ್ಟಾದರೂ ವ್ಯಾಪಾರಿ ರಿಯಾಯ್ತಿಯಲ್ಲಿ ತರಿಸಿಕೊಂಡು ಎಂದಾದರೂ ಪಾವತಿ ಕೊಡುವ ಸೌಕರ್ಯ ಕಲ್ಪಿಸಿದರು. ‘ದಾಸ್ತಾನುಕೋಠಿಯಲ್ಲಿ ವರ್ಷಾನುಗಟ್ಟಳೆ ಕೊಳೆಯುವ ಪುಸ್ತಕ ರಾಶಿಯ ಒಂದು ಸಣ್ಣ ಭಾಗಕ್ಕೆ ಆತಂಕವಿಲ್ಲದೆ ಇನ್ನೊಂದು ಪ್ರದರ್ಶನ ಮಾರಾಟ ಅವಕಾಶ ಸಿಕ್ಕರೆ ಯಾರೂ ಬಳಸಿಕೊಳ್ತಾರೆ’ ಎನ್ನುವವರಿದ್ದಾರು. ಆದರೆ ಹಾಗೆ ಕೊಟ್ಟು ಮಾಲೂ ಗಂಟೂ ಕಳೆದುಕೊಂಡವರ ಲೆಕ್ಕ ಸಣ್ಣದಿಲ್ಲ ಎನ್ನುವುದನ್ನು ನೆನಪಿಡಬೇಕು. ಸುಬ್ಬಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ನಾನು ಬೆಂಗಳೂರು ಸಾಹಿತ್ಯ ಭಂಡಾರವನ್ನು ‘ಪುಸ್ತಕ ಸಾಲ’ಕ್ಕೆ ಸಂಪರ್ಕಿಸಿದ್ದೆ. ಯಜಮಾನ ಮ. ಗೋವಿಂದ ರಾಯರು ಕೂಡಲೇ ಒಪ್ಪಿದ್ದಲ್ಲದೇ ಸುಬ್ಬಣ್ಣ ಶಿಫಾರಸು ಮಾಡಿದ್ದರು ಎಂದೂ ತಿಳಿಸಿ ನನಗೆ ಹೆಚ್ಚಿನ ಸಂಭ್ರಮ ಉಂಟು ಮಾಡಿದ್ದರು.

ಅಂದಿನ ದಿನಗಳಲ್ಲಿ ಪುಸ್ತಕೋದ್ಯಮದ ಸಾಮಾಜಿಕ ಬದ್ಧತೆ ನೂರಕ್ಕೆ ನೂರು ಗಟ್ಟಿ. (ಇಂದು ಅದಕ್ಕೆ ‘ಸರಕಾರೀ ಭದ್ರತೆ’ ನೂರಕ್ಕೆ ಕೋಟಿಯಾಗಿದೆ!) ಡಿವಿಕೆ ಮೂರ್ತಿ, ಕೂಡಲಿ ಚಿದಂಬರಂ, ಜಿ.ಬಿ ಜೋಷಿ, ಭಾಲಚಂದ್ರ ಘಾಣೇಕರ್, ಗೋವಿಂದರಾವ್ ಮುಂತಾದ ಒಂದೊಂದು ಹೆಸರೂ ಇಂದು ನಿಲುಕಲಾಗದ ಆದರ್ಶಗಳು. ಹಿಮಾಲಯ ಶ್ರೇಣಿಯಲ್ಲಿ ಕೆ-೨ ಎಂಬೊಂದು ಶಿಖರವಿದೆ. ಇದು ಉನ್ನತಿಯಲ್ಲಿ ಎವರೆಸ್ಟಿಗೆ ಮಾತ್ರ ಸಣ್ಣ, ಆದರೆ ಏರು ಸವಾಲಿನಲ್ಲಿ ಇಂದಿಗೂ ಅದ್ವಿತೀಯ. ಪುಸ್ತಕ ಶೃಂಗಶ್ರೇಣಿಯಲ್ಲಿ ಕೆವಿಸು ಕೆ-೨! ಸುಬ್ಬಣ್ಣನವರ ಕುರಿತ ಜೀವನ ವೃತ್ತಾಂತ, ಹೊಗಳು ಸಾಹಿತ್ಯ ರಚನೆಗೆ ನಾನು ಸಮರ್ಥನೂ ಅಲ್ಲ ಉದ್ದೇಶಪಟ್ಟವನೂ ಅಲ್ಲ. ನನ್ನ ಸಣ್ಣ ನೆನಪಿನ ಸುಬ್ಬಣ್ಣನ್ನಷ್ಟೇ ಇಲ್ಲಿ ಬಿಡಿಸಿಡುತ್ತೇನೆ.

ಯಕ್ಷಗಾನ, ನಾಟಕಗಳಿಗೆಲ್ಲಾ ಒಂದೊಂದು ಕಾಲದಲ್ಲಿ ಇದ್ದ ಸಾಮಾಜಿಕ ಕೀಳು ದೃಷ್ಟಿ ಸಿನಿಮಾಕ್ಕೂ ಬಿಟ್ಟಿರಲಿಲ್ಲ. ತುಂಬಾ ಸಿನಿಮಾ ನೋಡುವವನು ಅಪಾಪೋಲಿ ಎನ್ನುವ ಕಾಲದಲ್ಲಿ ಹೆಗ್ಗೋಡಿನ ಹಳ್ಳಿಮೂಲೆಯಲ್ಲಿ ಚಲನಚಿತ್ರ ರಸಗ್ರಹಣಕ್ಕೆ ಪಣ ತೊಟ್ಟವರು ಸುಬ್ಬಣ್ಣ. (ಇವರು ದಾಖಲೆಗಳ ಕಡೆಗೆ ಕಿರುಗಣ್ಣ ನೋಟವನ್ನೂ ಇಟ್ಟವರಲ್ಲ ಆದರೂ ನನ್ನ ತಿಳುವಳಿಕೆಯಲ್ಲಿ ಅದು ಕರ್ನಾಟಕಕ್ಕೆ ಪ್ರಥಮ ಸಾಧನೆಯೇ ಇರಬೇಕು!) ಅಲ್ಲಿ ಇವರದೇ ಶ್ರಮದ ಸಾಧನೆಯಾದ ‘ಶಿವರಾಮ ಕಾರಂತ ರಂಗಮಂದಿರ’ವನ್ನು ಅಷ್ಟೇ ಸರಳವಾಗಿ ಪರಿಷ್ಕರಿಸಿಕೊಂಡು, ಭಾರತ ಹಾಗೂ ಹೊರದೇಶಗಳ ಮೌಲಿಕ ಸಿನಿಮಾಗಳ ಗಂಭೀರ ವೀಕ್ಷಣೆಗೂ ಆ ಕುರಿತ ಕನ್ನಡದ ವಿಚಾರ ಗೋಷ್ಠಿಗಳಿಗೂ ತೆರೆದಿಟ್ಟರು. ಅವರು ವರ್ಷಕ್ಕೊಮ್ಮೆ ಸಾಹಿತ್ಯ, ನಾಟಕವೇ ಮುಖ್ಯವಾಗಿ ನಡೆಸ ತೊಡಗಿದ್ದ ಸಂಸ್ಕೃತಿ ಶಿಬಿರದ (ವಾರ-ಹತ್ತುದಿನ) ಅವಿಭಾಜ್ಯ ಅಂಗವಾಗಿ ಸಿನಿಮಾ ರಸಗ್ರಹಣವನ್ನೂ ಬೆಸೆದುಬಿಟ್ಟರು. ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನೂ ಪುಣೆಯ ಸಿನಿಮಾ ಸಂಗ್ರಹಾಗಾರದಿಂದ ಅಸಂಖ್ಯ ಸಿನಿಮಾಗಳನ್ನೂ ನಿಯತವಾಗಿ ತರಿಸುವುದರೊಡನೆ, ಔಪಚಾರಿಕ ಭಾಷಣ ಮೀರಿ ದಿನಪೂರ್ತಿ ಗಟ್ಟಿ ಕಮ್ಮಟಗಳನ್ನೆ ನಡೆಸುತ್ತಿದ್ದರು. ಅವು ನಾಕುದಿನದ ಕನಸಾಗಿ ಮರೆಯಾಗದಂತೆ ಒಟ್ಟಾರೆ ಸಿನಿಮಾಗಳ ಕುರಿತು ಗಂಭೀರ ಸಾಹಿತ್ಯ ರಚನೆ ಹಾಗೂ ಪ್ರಸರಣವನ್ನು ಸುಬ್ಬಣ್ಣ ತನ್ನ ಅಕ್ಷರಪ್ರಕಾಶನದ ಭಾಗವಾಗಿಸಿದರು. ರಶೋಮಾನ್, ಬೈಸಿಕಲ್ ಥೀವ್ಸ್, ಚಲನಚಿತ್ರದ ಮಹಾನೌಕೆಯಂಥ ಅನುವಾದಗಳೂ ಸ್ವತಂತ್ರ ಕೃತಿಗಳೂ ಕನ್ನಡವನ್ನು ಸಮೃದ್ಧಗೊಳಿಸಿದವು. (ಇಂದು ಸಿನಿಮಾದ ಬಗ್ಗೆ ತೀರಾ ವಿರಳವಾಗಿ ಅದೂ ಸಾಮಯಿಕ ಪತ್ರಿಕಾ ಅಂಕಣ ಬರಹದ ಸಂಕಲನ ಅಥವಾ ಹಳಬರ ಆತ್ಮಕಥಾನಕಗಳಷ್ಟೇ ಬರುತ್ತಿವೆ – “ಜೈ ಕನ್ನಡ,” ಬರಿ ಮಾತೇ!) ಮೊದಮೊದಲು ಅವನ್ನು ನೀನಾಸಂ ಶಿಬಿರಕ್ಕೆ ಪೂರಕ ಸಾಹಿತ್ಯ ಎನ್ನುವಂತೆ ಕಂಡವರೂ ಮತ್ತೆ ಹುಡುಕಿ ಬಂದು ‘ಸಿನಿಮಾ ಹುಚ್ಚು’ ಹಿಡಿಸಿಕೊಂಡದ್ದು ನಿರ್ವಿವಾದ ಸತ್ಯ.

ಹೆಗ್ಗೋಡಿನ ಪ್ರಭಾವದಲ್ಲಿ ಅಂದು (೧೯೮೦ರ ದಶಕ) ನಮ್ಮಲ್ಲೂ ‘ಮಂಗಳಾ ಫಿಲಂ ಸೊಸಾಯಿಟಿ’ ಸಂಘಟಿತವಾಗಿ ನಡೆಯತೊಡಗಿತ್ತು. ಎಲ್ಲೆಲ್ಲಿಂದಲೋ ರೈಲಿನಲ್ಲಿ, ಬಸ್ಸಿನಲ್ಲಿ, ಕೆಲವೊಮ್ಮೆ ಯಾರೋ ಪ್ರತಿನಿಧಿಗಳ ಮೂಲಕವೂ ಬರುತ್ತಿದ್ದ ಕೊಳಕು ಕಬ್ಬಿಣ ಟ್ರಂಕುಗಳೊಳಗಿನ ಸುಂದರ ಕನಸುಗಳು ನನ್ನ ಅಂಗಡಿಯಲ್ಲೂ ವಿನಿಮಯ ಆಗುತ್ತಿತ್ತು. ರೆಡ್ಡಿ, ತಿಲಕನಾಥ್, ಲಕ್ಷ್ಮಣ್, ಶಂಕರ ಭಟ್ ಮುಂತಾದವರು ಎಲೋಶಿಯಸ್ ಕಾಲೇಜಿನ ಯುವ ಪಾದ್ರಿಯೊಬ್ಬರ ಮುತುವರ್ಜಿಯಲ್ಲಿ ಅವರ ಪ್ರೌಢಶಾಲೆಯ ಮರದ ಅಟ್ಟದಲ್ಲಿ (ಕೆಲವೊಮ್ಮೆ ಬಾಲಾಜಿ ಥಿಯೇಟರಿನಲ್ಲೂ) ಪ್ರದರ್ಶನ ನಡೆಸುತ್ತಿದ್ದದ್ದು ಯಾರೂ ಅಳಿಸಲಾಗದ ಮೊದಲ ಹೆಜ್ಜೆಗಳು. ಇವರು ಮುಂದುವರಿಕೆಯಾಗಿ ಒಂದೋ ಎರಡೋ ದಿನದ ಸಿನಿಮಾ ರಸಗ್ರಹಣ ಶಿಬಿರ ನಡೆಸುವ ಉಮೇದೂ ಹಚ್ಚಿಕೊಂಡಾಗ ಸುಬ್ಬಣ್ಣನವರನ್ನೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕರೆಸಿಕೊಂಡರು. (ಅಂಗಡಿಯ ಬಂಧನದಲ್ಲಿ ನನಗೆ ಭಾಗಿಯಾಗಲು ಸಾಧ್ಯವಾಗಲಿಲ್ಲ, ಹಾಗಾಗಿ ಅದರ ವಿವರಗಳನ್ನೂ ಹೇಳಿ ನಿಮ್ಮನ್ನು ಸತಾಯಿಸುವುದಿಲ್ಲ!) ಸಾಗರದಿಂದ ಸಿಕ್ಕ ಬಸ್ಸು ಹಿಡಿದು ಬಂದ ಸುಬ್ಬಣ್ಣ ಇಲ್ಲಿನವರು ಕೊಟ್ಟ ಯಾವುದೋ ಹೋಟೆಲಿನಲ್ಲಿ ರಾತ್ರಿ ಮಾತ್ರ ಉಳಿದು ಶಿಬಿರದುದ್ದಕ್ಕೂ ಪ್ರಭಾವೀ ಮೊದಲ ವೇಷವಾಗಿ ನಡೆದುಕೊಂಡರು. ಕೊನೆಯಲ್ಲಿ ನಮ್ಮ ಗೆಳೆಯರು ಅವರಿಗೊಂದು ಕವರು ಕೊಟ್ಟು, ಸಾಗರದ ಬಸ್ಸು ಹತ್ತಿಸಿದರು. ಆದರೆ ಮುಗಿಯಲಿಲ್ಲ – ನಾಲ್ಕೇ ದಿನದಲ್ಲಿ (ಅಂಚೆ ಅವಧಿ ಮಾತ್ರ) ಸುಬ್ಬಣ್ಣನಿಂದ ಮಂಗಳಾದ ಕಾರ್ಯದರ್ಶಿಗೊಂದು ಕವರು. ‘ನೀವು ಕೊಟ್ಟ ಹಣ. ನನ್ನ ಊಟವಾಸ ನೀವು ನೋಡಿಕೊಂಡಿದ್ದೀರಿ. ಮತ್ತೆ ಹೋಗಿಬರುವ ಬಸ್ಸಿನ ವೆಚ್ಚ ಕಳೆದು ಉಳಿದದ್ದು ವಾಪಾಸ್’. ಚೀಟಿ ಜೊತೆಗೊಂದು ಚೆಕ್. (ಈಚಿನ ವಿಶ್ವಕನ್ನಡ ಸಮ್ಮೇಳನದಲ್ಲಿ ಯಾವುದೋ ಪ್ರಬಂಧಕ್ಕೆ ಎರಡು ಮಾತಿನ ಪ್ರತಿಕ್ರಿಯೆ ನುಡಿದವರಿಗೂ ಆರು ಸಾವಿರ ರೂಪಾಯಿಯ ‘ಗೌರವ’ ಸಂದದ್ದು ಕೇಳಿದ್ದೇನೆ. ಆದರೆ ಯಾರೂ ಸಕಾರಣ ಮರಳಿಸಿದ್ದು ಕೇಳಿಲ್ಲ. ಬದಲು ಹುಡುಕಿ ಹೋದರೆ ಕಂಪ್ಯಾರೇಟಿವ್ ಸ್ಟೇಟ್ಮೆಂಟ್ ಹಾಕಿ ತನಗೆ ಇಂಥವರಿಂದ ಇಷ್ಟು ಕಡಿಮೆ ಬಂತು ಯಾಕೆ ಎಂದು ಪ್ರಶ್ನಿಸುವವರು ಸಿಕ್ಕುತ್ತಿದ್ದರೋ ಏನೋ! ಆದರೆ ‘ಬ್ರಹ್ಮಪುರಿಯ ಭಿಕ್ಷುಕ’ – ಡಿವಿ ಗುಂಡಪ್ಪನವರು, ಸುಬ್ಬಣ್ಣನಿಂದಲೂ ಒಂದು ಹೆಜ್ಜೆ ಮುಂದಿದ್ದರೆಂದು ಈಚೆಗೆ ಶತಾವಧಾನಿ ಗಣೇಶ್ ಬರೆದ ಪುಸ್ತಕ ಓದಿದದ್ದನ್ನು ಇಲ್ಲಿ ನೆನಪಿಸಿಕೊಂಡರೆ ಯಾರೂ ತಪ್ಪು ತಿಳಿಯುವಂತಿಲ್ಲ)

ನನ್ನ ಕಾಡು ಸುತ್ತುವ ಗೀಳಿಗೆ ಅದೊಮ್ಮೆ ಲಿಂಗನಮಕ್ಕಿ ಅಣೆಕಟ್ಟಿನ ಮುಳುಗಡೆ ವಲಯವನ್ನೊಮ್ಮೆ ಸುತ್ತಬೇಕೆಂಬ ಬಯಕೆ ಬಂತು. ಅದೂ ಹೀಗೇ ಮಳೆಬಿಟ್ಟ ಹೊಸ ಕಾಲವಿದ್ದಿರಬೇಕು. ನಮ್ಮ ಬೈಕ್ ಸೈನ್ಯವನ್ನು ಕೊಲ್ಲೂರು ಬದಿಯಿಂದ ನಡೆಸಿ ತುಮರಿಗೆ ಹೋಗಿ ಮುಂದೆ ಲಾಂಚೇರಿ ರಾತ್ರಿಗೆ ಹೆಗ್ಗೋಡು ತಲಪುವ ಅಂದಾಜು ಹಾಕಿದೆ. ರಾತ್ರಿ ಸರಳ ಊಟ, ವಾಸದ ವ್ಯವಸ್ಥೆ (ಉಚಿತ ಅಲ್ಲ, ಖರ್ಚಾದರೂ ಖಂಡಿತ ತೆಗೆದುಕೊಳ್ಳಬೇಕು ಎಂದೇ ಒಕ್ಕಣೆ ಹಾಕಿ) ಸಾಧ್ಯವೇ ಎಂದು ಸುಬ್ಬಣ್ಣನವರಿಗೆ ಪತ್ರ ಹಾಕಿದೆ. ನಾನು ನಿರೀಕ್ಷಿಸಿದಂತೆ “ಹಣಕಾಸು ಮತ್ತೆ ನೋಡುವಾ. ಧಾರಾಳ ಬನ್ನಿ” ಎಂದೇ ಉತ್ತರಿಸಿದರು. ಆ ಪ್ರತ್ಯೇಕ ಪ್ರವಾಸ ಕಥನವನ್ನು ಇಲ್ಲಿ ಸೇರಿಸುವುದಿಲ್ಲ. ಆದರೆ ಬೆಳಿಗ್ಗೆ ಐದು ಗಂಟೆಗೆ ಮಂಗಳೂರು ಬಿಟ್ಟವರು ವೈವಿಧ್ಯಮಯ ಓಟ, ವೀಕ್ಷಣೆ ಎಲ್ಲಾ ಮುಗಿಸಿ, ಚಿರಿಪಿರಿ ಮಳೆಯೊಡನೆ ಹೆಗ್ಗೋಡು ತಲಪುವಾಗ ಗಂಟೆ ರಾತ್ರಿ ಎಂಟು ಕಳೆದಿದ್ದಿರಬೇಕು. ಸುಬ್ಬಣ್ಣ ಮಗ, ಸೊಸೆ ಮತ್ತು ಮೊಮ್ಮಗುವಿನೊಂದಿಗೆ ಸಂಜೆಯೇ ಬರಬೇಕಾಗಿದ್ದ ನಮ್ಮನ್ನು ಕಾದೇ ಇದ್ದರು. ಹೊಸತಾಗಿ ಕಟ್ಟಿಸಿದ್ದ ಅತಿಥಿ ಗೃಹದಲ್ಲಿ ನಮಗೆ ಬಿಸಿಯೂಟ, ಹಾಸಿಗೆ ಕಂಬಳಿಗಳ ವ್ಯವಸ್ಥೆ ಬಯಸಿದ್ದಕ್ಕಿಂತ ಹೆಚ್ಚು ಪರಿಷ್ಕಾರವಾಗಿಯೇ ಕಾದಿದ್ದವು. ಹಗುರ ಮಾತು ಎಸೆಯುವವರು ಹೇಳಬಹುದು “ಒಂದ್ನಾಲ್ಕು ಕಾಸು ಎಸೆದಿದ್ದರೆ ಹತ್ತಿರದ ಸಾಗರದಲ್ಲಿ ಇದರಪ್ಪನಂತ ವ್ಯವಸ್ಥೆಯೇ ಸಿಗುತ್ತಿತ್ತು.” ಆದರೆ ಸುಬ್ಬಣ್ಣ ಅಷ್ಟಕ್ಕೆ ಅವಕಾಶ ಕೊಟ್ಟವರೇ ಅಲ್ಲ. ನಮ್ಮೂಟ ಆಗುತ್ತಿದ್ದಂತೆ ಎಲ್ಲರನ್ನೂ ಶಿವರಾಮ ಕಾರಂತ ರಂಗಮಂದಿರಕ್ಕೆ ಒಯ್ದು ಅದ್ಭುತ ಕಿರು ಸಿನಿಮಾಗಳನ್ನಷ್ಟು ಪ್ರದರ್ಶಿಸಿದರು. ಮತ್ತೆ ನಾವು ಹಾಸಿಗೆ ಸೇರುವವರೆಗೆ ಸುಬ್ಬಣ್ಣ ಪರಿಸರ, ಪ್ರವಾಸಗಳ ಕುರಿತು ಎತ್ತಿಹಾಕಿದ ಅನೌಪಚಾರಿಕ ಚರ್ಚೆ ತುಂಬಾ ಅರ್ಥಪೂರ್ಣವಿತ್ತು. ಅದರ ವಿವರಗಳನ್ನು ವಾಕ್ಯಗಳಲ್ಲಿ ಹಿಡಿದಿಡಲು ಇಂದು ನಾನು ಸೋಲುತ್ತೇನೆ. ಆದರೆ ಇಂದೂ ಸುಬ್ಬಣ್ಣ ನಾಮ ಮಾತ್ರದಿಂದ ಮೈಮನಗಳಲ್ಲೇಳುವ ಪುಳಕಕ್ಕೆ ನಿಸ್ಸಂದೇಹವಾಗಿ ಇದೂ ಒಂದು ಕಾರಣ ಹೌದು.

ಮತ್ತೊಂದೇ ಕಾಲದಲ್ಲಿ ನಾನು ಬಾಡಿಗೆ ಕಾರಿನಲ್ಲಿ ದೇವಕಿ ಅಭಯರಲ್ಲದೆ (ನನ್ನ ಹೆಂಡತಿ ಮತ್ತು ಮಗ) ತಂದೆತಾಯಿಯರನ್ನೂ (ಜಿಟಿ ನಾರಾಯಣ ರಾವ್ ಮತ್ತು ಲಕ್ಷ್ಮಿದೇವಿ) ಕೂಡಿಕೊಂಡು ಎಲ್ಲೆಲ್ಲೋ ಸುತ್ತಿ, ಮರಳುವ ದಾರಿಯಲ್ಲಿ ಹೀಗೇ ಹೆಗ್ಗೋಡಿಗೆ ನುಗ್ಗಿದ್ದೆವು. ನಾವು ತಿಥಿಯಿಲ್ಲದೆ ಹೋದವರೇ ಆದರೂ ಸುಬ್ಬಣ್ಣ ಸಿಕ್ಕರು. ನಮಗೆ ಬಿಸಿಬಿಸಿ ಉಸ್ಲಿ, ಕಷಾಯಗಳ ಉಪಚಾರ ಕೊಟ್ಟು ಅವರು ತಂದೆಯೊಡನೆ ನಡೆಸಿದ ಮಾತುಕತೆಗಳಂತೂ ನೀನಾಸಂನ ಸದಾ ವಿಸ್ತರಿಸುವ ದಿಗಂತಕ್ಕೆ ಒಪ್ಪುವಂತಿತ್ತು. ತಂದೆಗೆ ಖ್ಯಾತ ರಂಗ ಕಲಾವಿದ ಲೋಕನಾಥರ ಗೆಲಿಲಿಯೋ (ಬ್ರೆಕ್ಟನ ಒಂದು ನಾಟಕದ ನಾಯಕ) ಸ್ಥಾನದಲ್ಲಿ ಸದಾ ಆಲ್ಬರ್ಟ್ ಐನ್ಸ್‌ಟೈನರನ್ನು ಕಾಣುವ ತವಕ. ಋಶಿ ಸದೃಶ ಐನ್ಸ್ಟೈನ್ ಕಥನಗಳನ್ನು ಕೇಳುತ್ತಿದ್ದ ಸುಬ್ಬಣ್ಣರಿಗೂ ಹೊಸ ಸವಾಲು ಸ್ವೀಕರಿಸುವ ಉಮೇದು. ಮಾತು ಮಥಿಸಿ ನವನೀತ ಬರಬೇಕಿತ್ತು ಆದರೆ ಅದು ಕಾಲವಲ್ಲ. ಕತ್ತಲಾಗಿತ್ತು, ನಾವಲ್ಲಿ ಉಳಿಯುವವರಿರಲಿಲ್ಲ ಮತ್ತೆ ಮುಂದಿನ ದಾರಿಯೋ ದೇವರಿಗೇ ಪ್ರೀತಿ! ನಾನು ಪಲ್ಲವಿ ಗಾಯನಕ್ಕಿಳಿದವನಂತೆ ಮತ್ತೆ ಮತ್ತೆ ಗುನುಗಿದೆ – ಮಂಗಳೂರ ದಾರಿ ಬಲು ದೂರಾ. ಹಾಗೆ ಬೀಳ್ಕೊಡುವ ಅನಿವಾರ್ಯತೆಯಲ್ಲೂ ಅವರೀರ್ವರೊಳಗೊಂದು ಸಂಕಲ್ಪವಿತ್ತು. ಮುಂದೆಂದಾದರೂ ಎರಡು ದಿನ ಬಿಡುವು ಮಾಡಿಕೊಂಡು ತಂದೆ ಹೆಗ್ಗೋಡಿಗೆ ಹೋಗಿ ಕುಳಿತುಕೊಳ್ಳಬೇಕು. ಸುಬ್ಬಣ್ಣಾದಿಗಳೊಡನೆ ವಿಚಾರ ವಿನಿಮಯ ನಡೆಸಿ ಐನ್ಸ್‌ಟೈನ್ ಕುರಿತು ಅದ್ಭುತ ನಾಟಕ ರೂಪಿಸಬೇಕು. ಆದರೆ ಅದಕ್ಕೂ ಕಾಲ ಕೂಡಿ ಬರಲೇ ಇಲ್ಲ; ಕನಸಿನ ಮರಕ್ಕೆ ವಾಸ್ತವದ ಇಳುವರಿ ಕಡಿಮೆ.

ನಮ್ಮ ಉತ್ತರ ಕನ್ನಡದ ಜಲಪಾತದ ಬೆಂಬತ್ತಿದ ಓಟದ ಕೊನೆಯಲ್ಲಿ ನಾವು ಅಂದಾಜಿಸಿದಂತೇ ಆ ಸಂಜೆ ನಾವು ಹೆಗ್ಗೋಡಿಗೆ ಹೋಗುವಾಗ ಪರಿಸರಕ್ಕೆ ಹಬ್ಬದ ಕಳೆ. ಹಾಗೆಂದ ಕೂಡಲೇ ನಮಗಿಲ್ಲಿ ನಿತ್ಯ ಕಾಣುವ ‘ಪ್ರಾಯೋಜಿತ’ ಉತ್ಸವಗಳ ಅಂಧಾದುಂಧಿ ಕಲ್ಪಿಸಿಕೊಳ್ಳಬೇಡಿ, ಇಲ್ಲಿ ಜನ ಸಂಭ್ರಮವೇ ಮುಖ್ಯ. ರಂಗಮಂದಿರದ ಎದುರು ಯಾರೋ ಉತ್ಸಾಹಿಗಳು ವಿಶಿಷ್ಟ ರಂಗವಲ್ಲಿ ಹಾಕುತ್ತಿದ್ದರು. ಖಾಯಂ ಸ್ವಾಗತ ಕಛೇರಿಯ ಜಗುಲಿಯ ಬೆಂಚಿನ ಮೇಲೆ ಅನಂತಮೂರ್ತಿ ಓಲಗ ನಡೆಸಿದ್ದರು. ಅಲ್ಲಲ್ಲಿ ಸಣ್ಣ ದೊಡ್ಡ ಗುಂಪುಗಳಲ್ಲಿ ಕರ್ನಾಟಕವೇ ಕಿರಿದುಗೊಂಡು ಸೇರಿದಂತಿತ್ತು. ಶಿಬಿರದ ‘ಹಳೆಹುಲಿಗಳು’ ಮಸುಕು ಪರಿಚಯಗಳ ದೂಳು ಹೊಡೆಯುತ್ತಾ ಹೊಸಾ ಪರಿಚಯಗಳಿಗೆ ಕೈ ಚಾಚುತ್ತಾ ಒಟ್ಟಾರೆ ಮರುದಿನದಿಂದ ತೊಡಗುವ ಆ ವರ್ಷದ ಸಂಸ್ಕೃತಿ ಶಿಬಿರಕ್ಕೆ ವಠಾರವನ್ನೇ ಜಾಗೃತಗೊಳಿಸಿತ್ತು. ಯಜಮಾನನ ಯಾವ ಪೋಸುಗಳಿಲ್ಲದೇ ಸುಬ್ಬಣ್ಣ ಸಿಕ್ಕಿದರು. ನಮ್ಮ ತಂಡದಿಂದ ಅವರ ಶಿಬಿರಕ್ಕೆ ಮೊದಲೇ ನಿಶ್ಚೈಸಿದ್ದಂತೆ ಸೇರಲಿದ್ದವರು ಕೃಷ್ಣಮೋಹನ್ ಮಾತ್ರವಾದರೂ ಎಲ್ಲರಿಗೂ ಆ ಮಿನಿಟಿನಲ್ಲೂ ಬಾಯಾರಿಕೆ ಹಸಿವುಗಳ ವಿಚಾರಣೆಯೊಡನೆ ಶಿಬಿರಕ್ಕೆ ಮುಕ್ತ ಆಮಂತ್ರಣವನ್ನೂ ಅಕೃತ್ರಿಮವಾಗಿ ಸುಬ್ಬಣ್ಣ ಕೊಟ್ಟರು. ಎರಡು ದಿನದ ಹಿಂದೆ ವಾನಳ್ಳಿ ಮನೆಯಿಂದ ಹರಿದುಕೊಂಡಂತೆ, ಬೆಳಿಗ್ಗೆ ತಾನೇ ಹುಲಿಮನೆಯಿಂದ ಕಳಚಿಕೊಂಡಂತೆ ಮನಸ್ಸಿಲ್ಲದ ಮನಸ್ಸಿನಲ್ಲಿ ನಾವು ಕೃಶಿಯನ್ನು ಬಿಟ್ಟು ಮುಂದಿನ ದಾರಿ ಹಿಡಿದೆವು. (ಪ|| ಮಂಗಳೂರ ದಾರಿ ಬಲು ದೂರಾ ಕತ್ತಾಲ ದಾರಿ ಬಲು ಬಲು ದೂರಾ)

ಹೊಸನಗರ (ಇಂದಿನ ‘ವೈಭವ’ ಇರಲಿಲ್ಲ), ನಗರಗಳು ನಮಗೆ ದಾರಿ ಬದಿಯ ಮಿಣುಕು ದೀಪದ ಪೆಟ್ಟಿಗೆ ಅಂಗಡಿಗಳು. ಘಟ್ಟದ ಮೇಲಿನ ಮಟ್ಟದ ಓಟಕ್ಕೆ ಕೊನೆ ಹಾಕಿತು ಮಾಸ್ತಿಕಟ್ಟೆ. ಹುಲಿಕಲ್ ಘಾಟಿಯ ಮೊದಲ ಹಿಮ್ಮುರಿ ತಿರುವಿನ ಬದಿಯಲ್ಲೇ ಗುಹಾಂತರ್ಗತ ವರಾಹಿ ಜಲವಿದ್ಯುತ್ ಯೋಜನೆಯ ಮೇಲಿನ ಕೊನೆಯ ತಟ್ಟು ಕಾಣಿಸುತ್ತದೆ. ಅಲ್ಲಿ ಐದು ಮಿನಿಟು ವಿರಮಿಸಿ ವಿಸ್ತಾರ ಕರಾವಳಿಯತ್ತ ಗೂಗೆ ನೋಟ (ಹಗಲಾಗಿದ್ದರೆ ಹದ್ದಿನ ಕಣ್ಣು ಎನ್ನುತ್ತಿದ್ದೆ! ಎಂಥಾ ಅಜ್ಞಾನದ ಕತ್ತಲನ್ನೂ ಹರಿಯುವ ಗೂಗಲ್ ನಮ್ಮ ಗೂಗೆಯದೇ ಸಂಬಂಧಿಯಿರಬಹುದೇ?) ಹಾಕಿದೆವು. ಅಲ್ಲಿಲ್ಲಿ ಕಿರುದೊರೆಗಳು, ಸಣ್ಣ ಮಡುಗಳು, ದೂರದಲ್ಲೆಲ್ಲೋ ಸರಸಿ ಸಾಗರಗಳಂತಿತ್ತು ಬೀದಿ ದೀಪ, ಪೇಟೆ ಬೆಳಕು, ಉಡುಪಿ ಕುಂದಾಪುರಗಳ ಗಗನ ಬೆಳಗುವ ಭ್ರಮೆ. ನಗರ ಮಾಸ್ತಿಕಟ್ಟೆಗಳಲ್ಲಿ ಮುಳುಗಿದ ಜೀವನಕ್ಕೆ ಕರಾವಳಿ ಹಚ್ಚಿಟ್ಟ ಹಣತೆಗಳನ್ನು ಹೆಚ್ಚು ನಿಟ್ಟಿಸುವಲ್ಲಿ ಸುಖ ಕಾಣದೆ ನಾವು ಮತ್ತೆ ದಾರಿಗಿಳಿದೆವು. ಇತರ ವಾಹನ ಸಂಚಾರ ವಿರಳವೇ ಇದ್ದರೂ ದಾರಿಯ ದುಸ್ಥಿತಿ ನಮ್ಮನ್ನು ನಿಧಾನಕ್ಕೇ ಘಟ್ಟ ಇಳಿಸಿತು. ಇಲ್ಲೊಂದು ಸಿದ್ಧಾಪುರ (ಮೇಲೆ ಶಿರಸಿ-ಸಿದ್ಧಾಪುರವಿದ್ದ ಹಾಗೆ ಇದನ್ನು ಉಡುಪಿ-ಸಿದ್ಧಾಪುರ ಎನ್ನಬಹುದು) ಮತ್ತೆ ಸಾಯಬ್ರ ಕಟ್ಟೆ ತಲಪುವಾಗ ಗಂಟೆ ಹತ್ತು ಕಳೆದಿತ್ತು. ಹೊಟ್ಟೆಪಾಡಿಗೆ ಹೋಟೆಲ್ ಬಿಡಿ, ಚಾ ಬ್ರೆಡ್ಡು ಬಾಳೇಹಣ್ಣಿನ ಜೋಪಡಿಗಳೂ ಸಿಗದ ಹಳ್ಳಿ ಮೂಲೆ. ಆದರೂ ನಮ್ಮೊಂದು ಬೈಕಿಗೆ ಒದಗಿದ ಪಂಚೇರಿಗೆ ರಿಪೇರಿ ಜನ ಸಿಕ್ಕಿದ್ದಕ್ಕೆ ಅದೃಷ್ಟವನ್ನು ಹೊಗಳಲೇ ಬೇಕು (ಯಾಕೆ, ದೇವರೂಂತ ಅನ್ನಬಾರದಾಂತ ಮಠತಡ್ಕದ ಮೂಲೆಯಿಂದ ನನ್ನ ಚಿಕ್ಕಮ್ಮ ಸೀತೆ ಕೆಣಕುತ್ತಿದ್ದಾಳೆ!).

ಸಾಯಬ್ರ ಕಟ್ಟೆ ಅದೃಷ್ಟ ಬ್ರಹ್ಮಾವರ, ಉಡುಪಿಗಳಲ್ಲಿ ನಮ್ಮ ಹೊಟ್ಟೆಯ ಕಿಚ್ಚು ತಣಿಸುವಲ್ಲಿ ನಡೆಯಲಿಲ್ಲ (ಸೀತೇ ದೇವರು ಹೀಗ್ಮಾಡುವ ಕ್ರಮ ಉಂಟಾ?). ಮೂರು ದಿನದ ಹಿಂದೆ ಲಗಾಮು ಕಿತ್ತ ಕುದುರೆಯಂತೆ ಓಡುತ್ತಿದ್ದ ಕಿಶೋರ್ ಬೆನ್ನಿಗೆ ಹೆಗ್ಗೋಡಿನಿಂದ (ಹತ್ತರ ಹುಡುಗ) ಅಭಯನನ್ನು ಹಾಕಿದ್ದೆವು. ಹಿಂದೆ ಕೂತು ಅವರ ಹೊಟ್ಟೆ ಬಿಗಿದ ಅಭಯನ ಕೈಗಳು ಜೋತು ಬಿದ್ದಾಗೆಲ್ಲಾ “ಏಳಭಯಾ” ರಾಗ ಹಾಡಿ ಅವರಿಗೆ ಸಾಕೋಸಾಕು. ಕಡೆಗೆ ಮೂಲ್ಕಿಯಲ್ಲೆಲ್ಲೋ ಒಂದು ಗಡಂಗ್ ಕಟ್ಟೆಯಲ್ಲಿ ಸಿಕ್ಕ ಚಕ್ಕುಲಿ ಕಟ್ಟು ಹಸಿವಿಗೂ ಜಾಗೃತಿಗೂ ಒದಗಿ ಬಂತು! ಬಾಗಿ ಕುಳಿತ ಬಾಲಣ್ಣನ ಹಿಂದೆ ಕೊಡಂಜೆಯ ನಿಮಿರುಗಲ್ಲಿನಂತೆ ಕುಳಿತ ಅರವಿಂದ ಶೆಣೈ ಈ ಹಂತದಲ್ಲಿ ತಲೆದೂಗಿರಬಹುದೇ? ಒಮ್ಮೆ ಪಂಚೆ ಸಾವರಿಸುತ್ತಾ ಇನ್ನೊಮ್ಮೆ ಮುಂದೊತ್ತುವ ಮುಂಗುರುಳು ನೇವರಿಸುತ್ತಾ ಬೈಕೋಡಿಸುವ ನಾರಾಯಣಮೂರ್ತಿ, ಅವರ ಬೆನ್ನಿಗಿದ್ದರೂ ಎದ್ದು ಕಾಣದ ವಾಮನಮೂರ್ತಿ ಶಶಿಧರರ ಜೋಡಿ, ಪ್ರಸನ್ನ ಪ್ರವೀಣ ಸೋದರರ ಜೋಡಿ, ಅರವಿಂದ ಗಾಯತ್ರಿಯರ ದಂಪತಿ ಜೋಡಿ ಹಸಿವು ನಿದ್ರೆಗಳಿಗೆ ಏನೆಲ್ಲಾ ಮಾಡಿರಬಹುದೋ ಇಂದು ಊಹಿಸಲಾರೆ. ನನಗಂತೂ ಇಂಥಲ್ಲೆಲ್ಲಾ ‘ಪತ್ನಿ ಪೀಡೆ’ ಬಯಸಿ ಪಡೆಯುವುದು ರೂಢಿಯಾಗಿತ್ತು. ಆಗಿಂದಾಗ್ಗೆ ದೇವಕಿ ಮೊಂಡು ಮುಷ್ಠಿ ಕಟ್ಟಿ ನನ್ನ ಬೆನ್ನಿಗೆ ನಾಲ್ಕು ಗುದ್ದು ಕೊಡದೇ ಹೋದರೆ ಅವಳಿಗೆ ಕುಳಿತಲ್ಲೇ ಕುಸಿದ ಅನುಭವ, ನನಗೋ ದಾರಿ ಉದ್ದಕ್ಕಿಂತ ಅಗಲ ಹೆಚ್ಚಿದ ಭ್ರಮೆ. ನಾಲ್ಕು ದಿನದ ಉತ್ತರಕನ್ನಡದ ಜಲಪಾತಗಳ ಬೆಂಬತ್ತಿ ಹೊರಟ ನಮ್ಮ ಓಟದ ಕಥನವೂ ಹೀಗೆ ನಡುರಾತ್ರಿ ಒಂದೂ ಕಾಲಕ್ಕೆ ಮಂಗಳೂರಲ್ಲಿ ಮುಗಿದಾಗುವಾಗ ಆಳಕ್ಕೆ ಮೀರಿದ ಹರಹು ಕಾಣಿಸಿದ್ದರೆ ಕ್ಷಮೆ ಇರಲಿ. ನಾವಂದು ಮನೆ ತಲಪಿದ ಮೇಲೆ ಮಾಡಿದ ನಿದ್ರೆಯ ಸೊಗಸಾದರೂ ನಿಮಗೆ ದಕ್ಕಲಿ.

(ಉಕ ಜಲಪಾತದೋಟ ಮುಗಿಯಿತು)