ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ (ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೩)

“ಸ್ವಾಮೀ ತುಂಬಾ ಒಳ್ಳೆ ಕೆಲಸ ಮಾಡಿದಿರಿ. ಇನ್ನು ನಮ್ಮಲ್ಲಿ ಅರ್ಜಂಟಿಗೆ ಕಾಡು ನೋಡಬೇಕೆಂಬವರನ್ನು ನಿಮ್ಮ ಅಭಯಾರಣ್ಯಕ್ಕೆ ತರಬಹುದಲ್ಲಾ” ಟೂರ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕ ಮಾತು. “ಅಶೋಕಣ್ಣಾ ಇನ್ನು ನಮ್ಮ ಧ್ಯಾನ ಬಳಗದ ಸತ್ಸಂಗಗಳು ನಿಮ್ಮ ಔಷಧೀಯ ತರುಲತೆಗಳ ನೆರಳಲ್ಲಿ” ಎಂದರೊಬ್ಬರು ಅಧ್ಯಾತ್ಮ ಜೀವಿ. “ಹೌದಯ್ಯಾ ಅಲ್ಲೇನೇನು ಪ್ರಾಣಿ ಬಿಟ್ಟಿದ್ದೀರಿ?” ಜನ್ಮದಲ್ಲೊಮ್ಮೆ ಯಾವುದೋ ವನಧಾಮಕ್ಕೆ ಕಾರಿನಲ್ಲಿ ಹೋಗಿ ಬಂದವರ ಪ್ರಶ್ನೆ. “ನಿನ್ನ ಜಮೀನಿನಲ್ಲಿ ಈ ವರ್ಷ ಅಡಿಕೆ ಎಷ್ಟಾದೀತು” ಸಮೀಪದ ಕೃಷಿಕ ಬಂಧು ಒಬ್ಬರ ಕುಹಕವಿಲ್ಲದ ಕುತೂಹಲ. “ಸ್ವಲ್ಪ ನಿಮ್ಮ ಅಭಯಾರಣ್ಯದ ದಾರಿ ಹೇಳಿ. ವಾರಾಂತ್ಯದಲ್ಲೊಮ್ಮೆ ನಮ್ಮ ಶಾಲಾ ಮಕ್ಕಳನ್ನು ಪಿಕ್ನಿಕ್ ಮಾಡಿಸ್ತೇನೆ” ಮುಖ್ಯೋಪಾಧ್ಯಾಯ ಉವಾಚ. (ನಮ್ಮಗ) ಅಭಯ ಅವನ ಆರೇಳು ಸಹಪಾಠಿಗಳನ್ನು ಹೀಗೇ ಒಮ್ಮೆ ಅಭಯಾರಣ್ಯಕ್ಕೆ ಒಯ್ದಿದ್ದ. ಮೃಗಜಲದ (ಗೊತ್ತಲ್ಲಾ, ಇದು ನಮ್ಮ ಬಾವಿಯ ಹೆಸರು!) ಕಟ್ಟೆಯಿಂದ ಇಣುಕಿ, ನಲ್ವತ್ತಡಿ ಆಳದ ನೀರು ಮೇಲೆ ತರುವ ಬಗ್ಗೆ ಒಬ್ಬ ನಾಗರಿಕಳಿಗೆ ಗಂಭೀರ ಸಮಸ್ಯೆ ಎದುರಾಯ್ತು. ಅಭಯ ರಾಟೆ, ಹಗ್ಗ ತೋರಿಸಿ “ವ್ಯಕ್ತಿಯೊಬ್ಬರ ಸೊಂಟಕ್ಕೆ ಹಗ್ಗ ಬಿಗಿದು ಇಳಿಸ್ತೇವೆ. ಅವರು ಜೊತೆಗೊಯ್ದ ಕ್ಯಾನಿನಲ್ಲಿ ನೀರು ತುಂಬಿಕೊಂಡ ಮೇಲೆ ಎಳೀತೇವೆ” ಎಂದ. ಮುಗ್ದೆ ಥಟ್ಟಂಥ “I will go this time” ಎಂದದ್ದೇ ಹಗ್ಗ ಬಿಗಿಸಿಕೊಳ್ಳಲು ಗಂಭೀರವಾಗಿ ತಯಾರಾಗಿಬಿಟ್ಟಳಲ್ಲಾ! ಒಮ್ಮೆ ಮಂಗಳೂರಿನಿಂದ ಸುಮಾರು ಮೂವತ್ತು ಕಿಮೀ ದೂರದ ನಂದಿಕೂರಿನಲ್ಲಿದ್ದ ಬಂಡೆಗಳಲ್ಲಿ ಶಿಲಾರೋಹಣಕ್ಕೆ ಆಸಕ್ತರ ಹಿಂಡನ್ನು (ಅವರವರ ದ್ವಿಚಕ್ರ ವಾಹನಗಳಲ್ಲಿ) ಕರೆದೊಯ್ದಿದ್ದೆ. ಜೊತೆಗೊಟ್ಟಿದ್ದ ತರುಣ ಡಾಕ್ಟರ್ ಒಬ್ಬರು “ಫ಼ಸ್ಟ್ ಟೈಮ್ ನಾನಿಷ್ಟು ಲಾಂಗ್ ಸ್ಕೂಟರ್ ಓಡಿಸಿದ್ದು” ಎಂದು ಸಂತೋಷದಲ್ಲಿ ಬೀಗಿದ್ದರು. ಹೀಗೆ ಪಟ್ಟಿಬೆಳೆಸಿ ನಿಮಗೆ ಪುಡಾರಿ ಭಾಷಣ ನೆನಪಾಗುವ ಮೊದಲು ಸ್ಪಷ್ಟಪಡಿಸುತ್ತೇನೆ. ನಾಗರಿಕತೆ ನಮ್ಮಲ್ಲೆಷ್ಟು ಪಾರಿಸರಿಕ, ಪ್ರಾಕೃತಿಕ ಬಿಡಿ, ಸಾಮಾನ್ಯಜ್ಞಾನದ್ದೂ ಅರಿವಿನ ಕೊರತೆಯನ್ನು ಉಂಟುಮಾಡಿದೆ ಎಂದು ಕಾಣುತ್ತಲೇ ಇತ್ತು. ಅದನ್ನು ಸ್ವಲ್ಪಾದರೂ ತುಂಬಿಕೊಡುವಂತೆ, ಮನುಷ್ಯ ಪ್ರಯತ್ನಕ್ಕೆಷ್ಟು ಸಾಧ್ಯತೆಗಳಿವೆ ಎನ್ನುವುದನ್ನು ಆಯ್ದ ಕೆಲವು ತರುಣರಿಗಾದರೂ ನಮ್ಮ ಮಿತಿಯಲ್ಲಿ ಮಾಡಿಕೊಡಬೇಕೆಂದು ಒಮ್ಮೆ ನಮಗೆ (ದೇವಕಿ, ಅಭಯ ಸೇರಿ) ಅನ್ನಿಸಿತು. (ಪ್ರಕೃತಿ ಪ್ರತಿಯೊಬ್ಬರಲ್ಲಡಗಿಸಿದ ಹನುಮಂತತ್ವಕ್ಕೊಂದು ಜಾಂಬವ ಸನ್ನೆಗೋಲಿಕ್ಕುವ ಪ್ರಯತ್ನ!)

೨೦೦೨ರ ಸೆಪ್ಟೆಂಬರ್ ಸುಮಾರಿಗೆ ಬರಲಿದ್ದ ದಸರಾ ರಜೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಪತ್ರಿಕೆಗಳ ಓದುಗರ ಓಲೆಗಳು ವಿಭಾಗಕ್ಕೆ ಸುದ್ದಿ ಕಳಿಸಿಯೇಬಿಟ್ಟೆ. ‘ಸ್ನಾತಕ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನಗಳ ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ. ಪರಿಚಯಿಸಲು ಉದ್ದಿಷ್ಟ ವಿಷಯಗಳು: ವನ್ಯಜ್ಞಾನ, ಚಾರಣ, ಹ್ಯಾಂ, ಪಕ್ಷಿ- ಕೀಟ- ಸಸ್ಯ- ನಕ್ಷತ್ರ- ವೀಕ್ಷಣೆಗಳು, ವೈಜ್ಞಾನಿಕ ಮನೋಧರ್ಮ, ಬಳಕೆದಾರ ಜಾಗೃತಿ, ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ, ಯಕ್ಷಗಾನ, ಕಾನೂನು, ನಟನೆ, ಚಿತ್ರಕಲೆ ಇತ್ಯಾದಿ ಇತ್ಯಾದಿ. ಎಲ್ಲವೂ ಪ್ರವೇಶಿಕೆಗಳ ಮಟ್ಟದ್ದು ಮಾತ್ರ. ಅನೇಕಾನೇಕ ವಿಷಯ ಪರಿಣತರು (ಖ್ಯಾತನಾಮರೂ ಹೌದು) ಕಲಾಪ ನಡೆಸುತ್ತಾರೆ. ಉಳಿದಂತೆ ಜಿಟಿ ನಾರಾಯಣ ರಾವ್ (- ನನ್ನ ತಂದೆ,) ಪ್ರಧಾನ ನಿರ್ವಾಹಕ ಮತ್ತು ಸಂಪನ್ಮೂಲ ವ್ಯಕ್ತಿ. ಸರಳ ಊಟ, ವಾಸ ಸಹಿತ ಪ್ರವೇಶಧನವಿಲ್ಲದ ಶಿಬಿರ ನಡೆಯುವ ಸ್ಥಳ ಅಭಯಾರಣ್ಯ. ಸ್ಥಳದ ಮಿತಿ ಮತ್ತು ಸಂವಹನತೆಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಇಪ್ಪತ್ತೈದು ಮಂದಿಗಷ್ಟೇ ಅವಕಾಶ. ಆಸಕ್ತರು ಕೂಡಲೇ ಸ್ವಹಸ್ತದಲ್ಲಿ ಸ್ವಪರಿಚಯ ಬರೆದು ಕಳಿಸಿ.’ ಅಂಗಡಿಯ ಹೆಸರು, ವಿಳಾಸ ಮತ್ತು ಯಾವುದೇ ದೂರವಾಣಿ ಪತ್ತೆಯನ್ನೂ ಉದ್ದೇಶಪೂರ್ವಕವಾಗಿ ಕೊಟ್ಟಿರಲಿಲ್ಲ. ನಮ್ಮ ಆಯ್ಕಾ ವ್ಯಾಪ್ತಿಯನ್ನು ವಿಸ್ತೃತ ದಕ ಜಿಲ್ಲೆಗೇ ಸೀಮಿತಗೊಳಿಸಿಕೊಂಡಿದ್ದೆವು. ಕೇವಲ ನನ್ನ ಹೆಸರು ಮತ್ತು ಮನೆ ವಿಳಾಸಕ್ಕೆ ಆದರೂ ಬೆಂಗಳೂರು, ಹುಬ್ಬಳ್ಳಿಯಿಂದ ತೊಡಗಿ ಜಿಲ್ಲೆಯ ವಿವಿಧ ಮೂಲೆಗಳವರೆಗೆ, ಅರವತ್ತೇಳು ಪತ್ರಗಳು ಹತ್ತೇ ದಿನಗಳಲ್ಲಿ ಬಂದವು. ನಮ್ಮ ಘೋಷಿತ ಮಿತಿಯ ಅರಿವಿದ್ದೂ ಸರಕಾರೀ ಅಧಿಕಾರಿ, ವೃತ್ತಿಪರ ಇಂಜಿನಿಯರ್, ಹದಿನೈದು ಎಕ್ರೆ ಕೃಷಿಕ, ಪ್ರೌಢಶಾಲೆ ಅನುತ್ತೀರ್ಣ, ಶಾಲಾ ಕಾಲೇಜು ಅಧ್ಯಾಪಕರೂ ಸೇರಿದಂತೆ ಹಲವು ಹುಡುಗ, ಹುಡುಗಿಯರು ತರಹೇವಾರಿ ಪತ್ರ ಬರೆದಿದ್ದರು. ‘ಇ ಕೆಲಗಿನ ಮಾಹಿತಿಗಳನ್ನೇ ಒದಗಿಸುತ್ತಿದ್ದೇನೆ’, ‘ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದು ಮನೆಯಲ್ಲೇ ಇದ್ದೇನೆ. ಎಲ್ಲಾ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಭಾಗವಹಿಸಬೇಕು ಎನ್ನುವ ಆಸೆ’ (ಈ ಒಕ್ಕಣೆಯ ನಾಲ್ಕು ಪತ್ರ ಬಂದಿತ್ತು. ಬಹುಶಃ ಯಾವುದೋ ಮಾದರಿ ಪತ್ರಲೇಖನ ಪುಸ್ತಕದ ನಕಲು)’, ಮುದ್ರಿತ ಬಯ್ಯೋದ್ಯಾಕಾ (biodata) ಅರ್ಜಿ ನಮೂನೆಯನ್ನೇ ನಕಲು ಮಾಡಿ ಕಳಿಸಿದವರಿಂದ ಹಿಡಿದು, ತಮ್ಮ ಪ್ರಕಟಿತ ಪತ್ರಿಕಾ ಲೇಖನಗಳ ಛಾಯಾಪ್ರತಿಯನ್ನೂ ಲಗತ್ತಿಸಿ ಕಳಿಸಿದವರಿದ್ದರು. ಅದರ ವಿವರಗಳನ್ನು ಇಲ್ಲಿ ವಿಸ್ತರಿಸುವುದಿಲ್ಲ.

ನಾವು ಆರಿಸಿದ ಮಂದಿಗೆ ಶಿಬಿರದ ಇಪ್ಪತ್ತೈದು ಮಂದಿಗೆ ಇನ್ನಷ್ಟು ಬಿಗಿನಿಯಮಗಳನ್ನು ತಿಳಿಸುವ ಪತ್ರ ಬರೆದೆ: ‘ಕಡಪ ಕಲ್ಲು ಹಾಸಿದ ನೆಲವೇ ಮಂಚ. ಕೇವಲ ನಿಮಗಗತ್ಯವಿರುವಷ್ಟೇ ದೊಡ್ಡ ಹಾಸು, ಹೊದಿಕೆ, ಲೋಟ, ತಟ್ಟೆ, ಸರಳ ಉಡುಗೆ ತನ್ನಿ. ವೈದ್ಯರ ಸ್ಪಷ್ಟ ಸೂಚನೆಯ ಹೊರತು ಯಾವುದೇ ಔಷಧಿಗಳನ್ನು, ಹೆಚ್ಚಿನ ಪಾನೀಯ, ತಿನಿಸುಗಳನ್ನು ತರಬೇಡಿ. ಧೂಮಪಾನ, ಅಮಲು ಪದಾರ್ಥಗಳು, ಚ್ಯೂಯಿಂಗ್ ಗಮ್ ಚಾಕಲೇಟು, ಸೊಳ್ಳೇ ನಿವಾರಕಗಳು, ಶಾಂಪೂ ಡಿಟರ್ಜೆಂಟುಗಳು, ಪರಿಮಳಕಾರಕಗಳು, ಮೊಬೈಲ್ ಆದಿ ಯಾವುದೇ ಇಲೆಕ್ಟ್ರಾನಿಕ್ ಸಲಕರಣೆಗಳು, ಸ್ವಂತ ವಾಹನಗಳು ನಿಷೇಧಿಸಲಾಗಿದೆ. ಹೋಗಿಬರುವ ಬಸ್ ವೆಚ್ಚ ಬಿಟ್ಟು ಹೆಚ್ಚಿನ ಹಣ, ಅಲಂಕರಣ ಸಾಮಾಗ್ರಿ ತರಬೇಡಿ. ಬೆಳಿಗ್ಗೆ ಆರರಿಂದ ರಾತ್ರಿ ಹತ್ತರವರೆಗೆ ಕಲಾಪಗಳು ನಿಬಿಡವಾಗಿರಲಿವೆ. ಕೆಲಸದ ಬದಲಾವಣೆಯೇ ವಿಶ್ರಾಂತಿ. (ಆವರೆಗೆ ಖಾತ್ರಿಗೊಂಡ ಸಂಪನ್ಮೂಲ ವ್ಯಕ್ತಿಗಳ ಪಟ್ಟಿ ಲಗತ್ತಿಸಿದ್ದೆ) ಆಯಾ ವಿಷಯ ಮತ್ತು ವ್ಯಕ್ತಿಯ ಬಗ್ಗೆ ನಿಮ್ಮ ತಿಳುವಳಿಕೆ ಹೆಚ್ಚಿಸಿಕೊಂಡು ಬನ್ನಿ. ನಿಮ್ಮ ಅಗತ್ಯಕ್ಕೆ ಟಿಪ್ಪಣಿಸಲು ಪೆನ್ನು, ಸಣ್ಣ ಪುಸ್ತಕ ತನ್ನಿ; ಮುಕ್ತವಾಗಿರುವ ನಿಮ್ಮ ಮಸ್ತಕ ಅವಶ್ಯ ತನ್ನಿ! (ಔಪಚಾರಿಕ ಸಮಾರಂಭ – ಉದ್ಘಾಟನೆ, ಉಪದೇಶ, ಸಮಾರೋಪ ಇತ್ಯಾದಿ, ಕೊನೆಯಲ್ಲಿ ಪರೀಕ್ಷೆ ಮತ್ತು ಯೋಗ್ಯತಾಸೂಚಿ ಪ್ರಮಾಣಪತ್ರ ವಿತರಣೆ ಖಂಡಿತಾ ಇಲ್ಲ!) ಶಿಬಿರದ ಕಲಾಪಗಳಿಗೆ, ಸೀಮಿತ ಊಟೋಪಚಾರಗಳಿಗೆ ಏನೂ ಹೊರೆಯಾಗದಂತೆ ಕ್ಷಣಕಾಲ ಭೇಟಿ ಕೊಡಬಯಸುವ ವೀಕ್ಷಕರಿಗೆ ಸ್ವಾಗತವಿದೆ. ಅಕ್ಟೋಬರ್ ಹನ್ನೆರಡರ ಸಂಜೆಯಿಂದ ಹದಿನಾರರ ಬೆಳಗ್ಗಿನವರೆಗೆ ಸಂಘಟಕರು ಮತ್ತು ಶಿಬಿರಾರ್ಥಿಗಳು ದೂರವಾಣಿ ಸಂಪರ್ಕಕ್ಕೆ ಅಲಭ್ಯರು. ನಿಮ್ಮ ಭಾಗವಹಿಸುವಿಕೆಯನ್ನು ಮೂರೇ ದಿನಗಳೊಳಗೆ ನನಗೆ ದೂರವಾಣಿ ಮೂಲಕ ಖಾತ್ರಿಪಡಿಸಬೇಕು.’ ಸಂಕ್ಷಿಪ್ತವಾಗಿ ಹೇಳುವುದಾದರೆ ಕಡೇ ಗಳಿಗೆಯಲ್ಲಿ ಒಬ್ಬ ಗೈರು ಹಾಜರಾದ್ದರಿಂದ ಹದಿನೇಳು ತರುಣರೂ ಏಳು ಯುವತಿಯರೂ ಪೂರ್ಣ ಶಿಬಿರದಲ್ಲಿ ಭಾಗಿಗಳಾದರು.

ಅಭ್ಯರ್ಥಿಗಳ ಆಯ್ಕೆ ಒಂದು ರೀತಿಯಲ್ಲಿ ನಮ್ಮ ಕೃಪಾಮುಖವಾದ್ದರಿಂದ (ನಾವು ಯಾವುದೇ ಪ್ರಾಯೋಜಕತ್ವ, ಅನುದಾನ ಪಡೆಯಲಿಲ್ಲವಾದ್ದರಿಂದ ಯಾರ ಹಂಗೂ ನಮಗಿರಲಿಲ್ಲ. ಮತ್ತೆ ಪರೋಕ್ಷ ಲಾಭದ ಲಕ್ಷ್ಯವೂ ಇರಲಿಲ್ಲ) ಸುಲಭವೇ ಇತ್ತು. ಆದರೆ ನನ್ನ ಸೀಮಿತ ಆರ್ಥಿಕ ಬಲದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ನಮ್ಮನುಕೂಲಕ್ಕೆ ಸೇರಿಸುವುದು ನನ್ನ ಸುಮಾರು ಇಪ್ಪತ್ತೈದು ವರ್ಷದ ಸಾರ್ವಜನಿಕ ಜೀವನವನ್ನು ಒರೆಗೆ ಹಚ್ಚಿದಂತೇ ಇತ್ತು; ನನ್ನ ನಿರೀಕ್ಷೆ ಮೀರಿ ಯಶಸ್ವಿಯಾಯ್ತು. ನಾನು ಅಂದಾಜಿಸಿಕೊಂಡ ಸಂಪನ್ಮೂಲ ವ್ಯಕ್ತಿಗಳನ್ನು ದೂರವಾಣಿ ಮೂಲಕ ಹಲವರನ್ನು ಪತ್ರದ ಮೂಲಕವೂ ಸಂಪರ್ಕಿಸಿದೆ. ಎಲ್ಲೆಲ್ಲಿನ ಅವರಲ್ಲೆಲ್ಲಾ ನನ್ನ ಖಯಾಲಿಗಾಗಿ ಸುಮಾರು ಒಂದು ಗಂಟೆ ವ್ಯಯಿಸಲು ತಮ್ಮದೇ ವ್ಯವಸ್ಥೆ ಮತ್ತು ಖರ್ಚಿನಲ್ಲಿ ಸೂಚಿತ ಕಾಲಕ್ಕೆ ಬಂದು, ಕಾರ್ಯಕ್ರಮ ನಡೆಸಿಕೊಟ್ಟು, ಯಾವುದೇ ಗೌರವಧನ, ಪ್ರಯಾಣ ಭತ್ತೆಯೂ ಇಲ್ಲದೇ ಮರಳಬೇಕಾಗಿ ಕೇಳಿಕೊಂಡೆ. ಇತ್ತ ಉಡುಪಿಯಿಂದ, ಅತ್ತ ಪುತ್ತೂರು – ವಿರಾಜಪೇಟೆಯವರೆಗೂ ಧನಾತ್ಮಕವಾಗಿ ಸ್ಪಂದಿಸಿದ ಮತ್ತು ಅಷ್ಟೇ ಕಾಳಜಿಪೂರ್ಣವಾಗಿ ಕಲಾಪಗಳನ್ನು ನಡೆಸಿಕೊಟ್ಟ ನಿಜ-ಮಹಿಮರ ವಿವರಗಳನ್ನು ಮುಂದೆ ಘಟನಾಕ್ರಮದಲ್ಲಿ ಸೂಕ್ಷ್ಮವಾಗಿ ಹೇಳುತ್ತೇನೆ. ಈ ಸಂಯೋಜನೆಯನ್ನು ವಿವರಗಳಲ್ಲಿ ಮತ್ತು ಅವರಿಗೆಲ್ಲಾ ನನ್ನ ಅಪಾರ ಕೃತಜ್ಞತೆಯನ್ನು ಇಲ್ಲಿ ಶಬ್ದಗಳಲ್ಲಿ ದಾಖಲಿಸ ಹೊರಟರೆ ಅದೇ ಬೇರೆ ಕಥೆಯಾದೀತು! (ಇಲ್ಲಿ ಬೇಡ)

ನಮ್ಮ ಪರಿಚಯದ ಓರ್ವ ತರುಣ ಅಡಿಗೆಯವನನ್ನು ನಿಗದಿಮಾಡಿಕೊಂಡೆವು. ಉಳಿದಂತೆ ಮುಖ್ಯವಾಗಿ ನನ್ನ ಹೆಂಡತಿ (ದೇವಕಿ), ನನ್ನಮ್ಮ (ಲಕ್ಷ್ಮೀ ದೇವಿ) ಮತ್ತು ಅಭಯ ಸಹಾಯಕರು. ಗೆಳೆಯ ದೇವು ಒಂದೆರಡು ಕಲಾಪ ನಡೆಸಿಕೊಡುವ ಹೊಣೆಯೊಡನೆ ಮೂರೂ ದಿನ ನಮ್ಮೊಡನಿದ್ದುಕೊಂಡು ಪೂರ್ಣಕಾಲಿಕ ನೌಕರನಂತೇ ಸ್ವಯಂಸೇವೆಯಲ್ಲಿ ಎಲ್ಲಕ್ಕೂ ಒದಗಿದ್ದು ಸ್ಮರಿಸಲೇಬೇಕು. (ತನ್ನ ಮನೆ ಮತ್ತು ಕೃಷಿಕೆಲಸದ ಜೊತೆಗೆ ಕಾಡ್ಮನೆಗೆ ಓಡಾಡಿಕೊಂಡು ಸತ್ಯ ಮತ್ತು ಮನೆಯವರ ಬಲ ಇದ್ದೇ ಇತ್ತು.) ಒಂದು ದೊಡ್ಡ ಗ್ಯಾಸ್ ಸ್ಟವ್, ಕೆಲವು ದೊಡ್ಡ ಪಾತ್ರೆಗಳನ್ನು ಮಾತ್ರ ಬಾಡಿಗೆಗೆ ತಂದೆವು. ಸಂಘಟನಾ ಸದಸ್ಯರು + ಇಪ್ಪತ್ತೈದರ ಸ್ನಾನ ಶೌಚಗಳಿಗೆ ಹೆಚ್ಚುವರಿಯಾಗಿ ಒಂದು ತತ್ಕಾಲೀನ ಮರೆಯನ್ನು ಬಾವಿಯ ಬಳಿಯೂ ನೂರಡಿಯಾಚಿನ ಹಾಳುಹೊಂಡದ ಅಂಚಿನಲ್ಲೂ ವ್ಯವಸ್ಥೆ ಮಾಡಿದ್ದೆವು. ಜೀನಸು, ತರಕಾರಿಗಳೇ ಮೊದಲಾದ ಎಲ್ಲ ಹೊರೆಗಳನ್ನು ದಿನ ಮುಂಚಿತವಾಗಿ (ನನ್ನದೇ ಕಾರಿನಲ್ಲಿ) ಸಾಗಿಸಿಟ್ಟಿದ್ದೆವು. ಶನಿವಾರ ಬೆಳಿಗ್ಗೆ ನನ್ನನ್ನುಳಿದು ಮನೆಯವರೆಲ್ಲರೂ ಅಭಯಾರಣ್ಯಕ್ಕೆ ಹೋದರು. ಸಂಜೆಗೆ ಸೇರಲಿದ್ದ ಶಿಬಿರಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಆಕಾಶರಾಯನ ಮಸಲತ್ತು ಬೇರೇ ಇತ್ತು – ಭರ್ಜರಿ ಮಳೆ. ಸಂಜೆಯಾಗುತ್ತಿದ್ದಂತೆ ಎಷ್ಟೋ ಶಿಬಿರಾರ್ಥಿಗಳು (ಹೊರ ಊರಿನಿಂದ ಬಂದವರು) ನನ್ನಂಗಡಿಗೆ ಬಂದು, ಕೆಲವು ಪೋಷಕರು ದೂರವಾಣಿಸಿ ಶಿಬಿರ ನಡೆಯುವುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಯ್ತು. ಕಾಪುವಿನಿಂದ ಬಂದೊಬ್ಬ ತಂದೆಯಂತೂ ತನ್ನ ಶಿಬಿರಾರ್ಥಿ ಮಗಳನ್ನು ಬರಿದೇ ಮೊಂಟೆಪದವಿನ ಬಸ್ಸಿಗೆ ಹತ್ತಿಸಿ ಬಿಡುವಲ್ಲಿ ತೃಪ್ತರಾಗಲಿಲ್ಲ. ಕಳವಳದಲ್ಲೇ ಅಭಯಾರಣ್ಯದವರೆಗೂ ಹೋಗಿ, ನಮ್ಮಿಬ್ಬರು ಮಹಿಳಾಮಣಿಯರಲ್ಲದೆ ಇತರ ಭಾಗಿಗಳನ್ನು ನೋಡಿ ಧೈರ್ಯ ತಾಳಿ, ಮಗಳನ್ನು ಬಿಟ್ಟುಹೋದರು! ಅಲ್ಲಿ ಇಲ್ಲಿ ನೆರೆ ನೀರು ನುಗ್ಗಿದ ಮಾತುಗಳು ತೇಲುತ್ತಿದ್ದಾಗ ನಮ್ಮ ಶಿಬಿರ ಪದವಿನ ಎತ್ತರದಲ್ಲಿ, ಗಟ್ಟಿ ಮನೆಯಲ್ಲೇ ನಡೆಯುತ್ತಿತ್ತು. ವಿದ್ಯುತ್ ಕೈಕೊಟ್ಟು ಊರೆಲ್ಲಾ ತಳಮಳಿಸುತ್ತಿದ್ದಾಗ ನಮ್ಮ ಶಿಬಿರ ಸ್ಪಷ್ಟ ಪೂರ್ವಯೋಜನೆಯಂತೇ ಚಿಮಣಿ ಎಣ್ಣೆ ದೀಪದಲ್ಲೇ ನಡೆಯಲಿದ್ದುದರಿಂದ ವ್ಯತ್ಯಾಸ ಪರಿಣಾಮ ಬೀರಲೇ ಇಲ್ಲ. ಅಂಗಡಿಯ ಅಂದಿನ ಕೆಲಸ ಅವಧಿ ಮುಗಿದ ಮೇಲೆ ನಾನೂ ಅಂಗಡಿ ಮುಚ್ಚಿ, ಕೆಲವು ಕಡೇ ಗಳಿಗೆಗೆ ಸೇರಿದ ಶಿಬಿರಾರ್ಥಿಗಳನ್ನು ಜೊತೆಮಾಡಿಕೊಂಡು ಕಾರಿನಲ್ಲಿ ಆ ಕತ್ತಲಕೂಪಕ್ಕೆ, ಸಂಪರ್ಕರಾಹಿತ್ಯ ಸ್ಥಳಕ್ಕೆ (ಅಂದು ನಮ್ಮ ಯಾರಲ್ಲೂ ಚರವಾಣಿ ಇರಲಿಲ್ಲ) ಸಂದುಹೋದೆ.

ಮೊದಲೇ ಹೇಳಿದಂತೆ ಇಪ್ಪತ್ನಾಲ್ಕು ಮಂದಿ ಶಿಬಿರಾರ್ಥಿಗಳು ಹಾಜರಿದ್ದರು. ಪರಿಸರ ಮತ್ತು ಸಂಘಟನೆಯ ಎಲ್ಲರೊಡನೆ ಬೆರೆತು, ಸುರಿವ ಮಳೆಯನ್ನು ಧಿಕ್ಕರಿಸಿ ಉತ್ಸಾಹದ ಹೊಳೆ ಹರಿಸಿದ್ದರು. ಅನೌಪಚಾರಿಕ ಮಾತುಕತೆಗಳೊಡನೇ ಊಟ ಮುಗಿಸಿ, ಶಿಬಿರದ ಮಿತಿ ಹಾಗೂ ಶಿಸ್ತುಗಳನ್ನು ಸ್ವಲ್ಪ ವಿವರಗಳಲ್ಲಿ ತಿಳಿಸಿ, ಮರುದಿನದ ಕಲಾಪಗಳ ಪಟ್ಟಿಯನ್ನೂ ಬಿಡಿಸಿಟ್ಟಾದ್ದಾಯ್ತು. ನನ್ನ ತಂದೆ (೭೬ ವರ್ಷ) ತಾಯನ್ನು (೭೨ ವರ್ಷ) ಮಾತ್ರ ಎಡೆಂಬಳೆಗೆ ಕಾರಿನಲ್ಲಿ ಬಿಟ್ಟು ಬಂದು ಎಲ್ಲರೂ ಮಲಗಿದೆವು. ಅಭಯನೂ ಸೇರಿದಂತೆ ಹುಡುಗರಷ್ಟೂ ಮಂದಿ ಎದುರು ಹಾಲಿನಲ್ಲಿ, ದೇವಕಿಯ ಸುಪರ್ದಿನಲ್ಲಿ ಹುಡುಗಿಯರಷ್ಟೂ ಮಂದಿ ಒಳ ಹಾಲಿನಲ್ಲಿ, ಅಡುಗೆಯಾತ ಅಲ್ಲೇ ಸ್ಟವ್ ಬಿಟ್ಟುಳಿದ ಜಾಗದಲ್ಲಿ ಚಾಪೆ ಬಿಡಿಸಿಕೊಂಡರು. ನಾನು ಮತ್ತು ದೇವು ಹೊರ ಜಗುಲಿಯಲ್ಲಿ, ಇರಿಚಲು ಹೊಡೆಯದ ಒಳ ಅಂಚಿನಲ್ಲೇ ಮೈಚಾಚಿದೆವು! ಶಿಬಿರಾರ್ಥಿಗಳ ಹೊರ ಉಪಯೋಗಕ್ಕೆ ನೀರು ತುಂಬಿಸಲೆಂದು ಮೆಟ್ಟಿಲಂಚಿನಲ್ಲೊಂದು ಖಾಲಿ ಡ್ರಂ ಇಟ್ಟಿದ್ದೆವು. ಅದನ್ನು ತುಂಬಲು ಸಾಕ್ಷಾತ್ ಜೋಗದ ಖ್ಯಾತ ನಾಲ್ಕು ಜಲಧಾರೆಗಳೇ ಇಲ್ಲಿ ಬಂದಂತೆ ತಾರಸಿಯ ತೂಬುಗಳು ಧುಮುಧುಮಿಸುತ್ತಿದ್ದವು. ಡ್ರಂ ತುಂಬಿ, ಉಕ್ಕಿ ಹರಿಯುತ್ತಲೇ ಇತ್ತು. ಎಲ್ಲರಿಗು ಅದೇ ಜೋಗುಳವಾಗಿ ರಾತ್ರಿಯ ನಿದ್ರೆ ಗಾಢವೂ ವಿಶಿಷ್ಟವೂ ಆಗಿತ್ತು.

ಐದು ಗಂಟೆಗೆ ನಮ್ಮ ಚಾ ಸಮಯ ಅರ್ಥಾತ್ ಎಲ್ಲರಿಗು ಹಾಸಿಗೆಯಿಂದ ಚಾಲನ ಆದೇಶ. ಪಿರಿಪಿರಿ ಮಳೆ ಭೋರೆನ್ನುವ ಗಾಳಿಯಲ್ಲೂ ಕೆಲವು ಹುಡುಗರು ಟಾರ್ಚ್ ಹಿಡಿದುಕೊಂಡು ಬಾವಿಕಟ್ಟೆಯಂಚಿನ ಸ್ನಾನದ ಮನೆಗೂ ಕಲ್ಪಣೆಯಂಚಿನ ಶೌಚಕ್ಕೂ ಭೇಟಿಕೊಟ್ಟು ಆರು ಗಂಟೆಗೆ ಸಜ್ಜಾಗಿದ್ದರು. ಮೊದಲ ಕಲಾಪ ಅನತಿ ದೂರದ ಮುಡಿಪು ಗುಡ್ಡೆಯ ನೆತ್ತಿಗೆ ಚಾರಣ. ಎಡೆಂಬಳೆಯ (ನನ್ನ ಚಿಕ್ಕಮ್ಮನ ಮಗ, ತಮ್ಮ) ಸತ್ಯ ಕೊಡೆಯರಳಿಸಿ, ಶಿಬಿರಾರ್ಥಿಗಳ ಪಡಿಪಾಟಲು ನೋಡುತ್ತಾ ಮುಖವರಳಿಸಿಕೊಂಡು ದಾರಿ ತೋರುತ್ತ ಮುಂದೆ ನಡೆದ. ಕೊಡೆ, ರಾಣಿಕೋಟು (ರೈನ್ ಕೋಟ್), ಬರಿಯ ಟೊಪ್ಪಿಯೊಡನೆಯೂ ಕೆಲವರು ಹಿಂಬಾಲಿಸಿದರು; ಹಿಂದುಳಿದವರಿಲ್ಲ. ಯಾವ್ಯಾವುದೋ ಸೂರಿನಂಚಿನಲ್ಲಿ ಮೈಮುದುಡಿದ್ದ ನಾಯಿಗಳು ವಿಚಾರಿಸಿಕೊಳ್ಳುತ್ತಿದ್ದಂತೆ, ಮಳೆಯ ‘ಬಿಸಿ’ಯಲ್ಲಿ ಬೆಳಕು ಮುಂಚೆ ದಾರಿಗೆ ಬಂದ ಹಳ್ಳಿಗರ ಬೆರಗಿನ ನೋಟದೊಡನೆ “ಸತ್ಯಣ್ಣ ದೂರಾ” ಕೇಳಿಕೊಳ್ಳುತ್ತಿದ್ದಂತೆ ಕೈರಂಗಳದಲ್ಲಿ ದಾರಿ ಬಿಟ್ಟು, ನಾಲ್ಕು ಮನೆಯಂಚಿನ ಕಾಲು ದಾರಿಯಲ್ಲಿ ಕಣಿವೆಗಿಳಿದು, ಉಕ್ಕುಕ್ಕಿ ಹರಿಯುತ್ತಿದ್ದ ಕೆನ್ನೀರ ತೋಡನ್ನು ಪಾಲದಲ್ಲಿ ದಾಟಿ ಗುಡ್ಡೆಯ ಪಾದ ಹಿಡಿದರು. ಮೊದಲ ನಾಲ್ಕೆಂಟು ಮರ-ಮರೆ ಮುಗಿದ ಮೇಲಂತೂ ಬಟ್ಟೆ ಮಗುಚದುಳಿದ ಕೊಡೆಗಳೂ ವ್ಯರ್ಥವೆನ್ನುವಂತೆ ಗಾಳಿ ಬೀಸುತ್ತಿತ್ತು. ನೆಲದಿಂದೆದ್ದ ಮರಳಕಣಗಳಂತೆ ಮಳೆ ಅಪ್ಪಳಿಸುತ್ತಲೇ ಇತ್ತು. ಅನಾಕರ್ಷಕ ಬೋಳು ಗುಡ್ಡೆಯಂದು ಮಳೆಯ ತೊಡವು ಸುತ್ತಿ, ನಲಿಯುವ ನಿರಿಗೆಗಳ ಸಂಭ್ರಮದಲ್ಲಿ ಅಷ್ಟೂ ಜನರನ್ನು ತಲೆಗೇರಿಸಿಕೊಂಡಿತು.

ಮುಡಿಪುಗುಡ್ಡೆ, ಅದರ ಇನ್ನೊಂದೇ ಪಾದದಲ್ಲಿದ್ದ ನೀರಿನೂಟೆ ಪ್ರಾಕೃತಿಕ ಸತ್ಯ. ಮನುಷ್ಯ ಮಿತಿಯಲ್ಲಿ ಆ ಜಲಮೂಲ ‘ಪವಾಡದ ತೀರ್ಥ’ವೇ ಆಗಿ, ಶಿಖರ ಸ್ಮರಣೀಯ ಇಗರ್ಜಿಯಾಗಿ ವಿಕಸಿಸುತ್ತಿತ್ತು. ಆಸುಪಾಸಿನ ಕ್ರಿಸ್ತ ಬಂಧುಗಳ ಸ್ವಯಂಸೇವೆಯಿಂದ, ಅಸಂಖ್ಯ ಭಕ್ತಾಭಿಮಾನಿಗಳ ದಾನದಿಂದ ಮುಡಿಪು ಬದಿಯಿಂದ ವಾಹನ ಯೋಗ್ಯ ಮಣ್ಣದಾರಿ, ನೆತ್ತಿಯಲ್ಲಿ ನವೀಕರಣಗೊಳ್ಳುತ್ತಿದ್ದ ಚರ್ಚ್ ವಠಾರದಲ್ಲಿ ಬಿಸಿಲ ಮರೆಯಾಗಿ ಕಟ್ಟಿದ್ದ ಸೋಗೆ ಚಪ್ಪರ ಬೀಸುವ ಗಾಳಿ ಮಳೆಯಿಂದ ನಮ್ಮ ತಂಡಕ್ಕೆ ಸಣ್ಣ ಮರೆಯನ್ನು ಒದಗಿಸಿತು. [ಪ್ರಾಕೃತಿಕ ಸತ್ಯಗಳನ್ನು ಸಹಜವಾಗಿ ಸ್ವೀಕರಿಸಲಾಗದ ಮನುಷ್ಯ ದೌರ್ಬಲ್ಯಗಳು ಇಂದು ಮುಡಿಪು ಗುಡ್ಡದ ಚಹರೆಯನ್ನೇ ಬದಲಿಸಿಬಿಟ್ಟಿವೆ. ಭರ್ಜರಿ ಚರ್ಚ್ ಮತ್ತದಕ್ಕೆ ಲಗತ್ತಾದ ವಸತಿ ಸೌಕರ್ಯ, ದಾರಿ, ನೀರು, ವಿದ್ಯುತ್ ಒಂದೆಡೆ ವಿಸ್ತರಿಸುತ್ತಲೇ ಇದೆ. ಆರೋಗ್ಯಕರವಲ್ಲದ ಮತೀಯ ಸ್ಪರ್ಧೆಯಲ್ಲಿ, ದೂರದೃಷ್ಟಿಗೆ ಚರ್ಚಿನ ಗೋಪುರವನ್ನು ಮರೆಮಾಡುವಂತೆ ಪಕ್ಕದ ವಠಾರದಲ್ಲೇ ಧ್ಯಾನ ಕೇಂದ್ರವೊಂದರ ಬಲು ಎತ್ತರದ ಗೋಪುರ ಏಳುತ್ತಿದೆ! ಮತ್ತೂ ಈಚೆಗೆ ಇನ್ಫೊಸಿಸ್ ನಗರ, ಮುಡಿಪು ಪದವಿನ ಆಧುನೀಕರಣಕ್ಕೆ ನಾಂದಿ ಹಾಡಿದ ಪೀಯೇ ಕಾಲೇಜಿನ ರಚನೆಗಳನ್ನು ನೋಡನೋಡುತ್ತಾ ಮಂಗಳೂರು ಇಲ್ಲಿಗೂ ತಲಪಿಯಾಯ್ತು ಎಂದು ದುಃಖವಾಗುತ್ತದೆ]

ಪ್ರಾತಃಕಾಲದ ಚಾರಣಿಗರು ಶಿಖರ ಮುಟ್ಟುವ ಮೊದಲು ಯೋಜನೆಯಂತೆ ಗೆಳೆಯ ರೋಹಿತ್ ರಾವ್ ಚರ್ಚಿನ ಹೊರವಲಯದಲ್ಲಿ ತನ್ನ ಕಾರಿನೊಡನೆ ಸಜ್ಜಾಗಿದ್ದ. ರೋಹಿತ್ ಎಂಬಿಎ ಪದವೀಧರನಾಗಿ ಉಪನ್ಯಾಸಕ ವೃತ್ತಿ ನಡೆಸಿದ್ದುಂಟು. ಆದರೆ ಪಿತ್ರಾರ್ಜಿತವಾಗಿ ಬಂದ ಉದ್ದಿಮೆ/ ವ್ಯಾಪಾರ ಬಿಟ್ಟದ್ದಿಲ್ಲ. ಇನ್ನು ಸ್ವಂತ ಗೀಳಿನಲ್ಲಿ ಈತ ರೂಢಿಸಿಕೊಂಡ ಹವ್ಯಾಸಗಳನ್ನು ಕೇಳಿದರೆ, ಜಗತ್ತಿನ ಮೇಲೆ ಇನ್ನೇನೂ ವಿಷಯಗಳು ಬಾಕಿ ಉಳಿದಿಲ್ಲವೋ ಎಂಬ ಸಂಶಯ ಬರದಿರದು! ಸ್ಕೌಟಿನಲ್ಲಿ ‘ರಾಷ್ಟ್ರಪತಿ’ಯವರೆಗೂ ಏರಿದ್ದಲ್ಲದೆ ಈಚೆಗೆ ಯುವ ಸ್ಕೌಟುಗಳಿಗೆ ಕಡಲ ಕಿನಾರೆ ಚಾರಣವನ್ನೂ ನಡೆಸಿಕೊಟ್ಟವ. ಆಕಾಶವೀಕ್ಷಣೆಗಾಗಿ ಹಿರಿಯ ಗೆಳೆಯ ಜಯಂತರ ಜೊತೆಯಲ್ಲಿ ಸಂಘವನ್ನೇ ಕಟ್ಟಿ ಆಸಕ್ತರ ತಲೆ ತಿನ್ನುವುದರೊಡನೆ ಸ್ವತಃ ಉಲ್ಕಾಪಾತಕ್ಕೋ ಗ್ರಹಣಕ್ಕೋ ಸಮೀಪಚಂದ್ರನಿಗೋ ರಾತ್ರಿ ನಿದ್ದೆಗೆಡುತ್ತಲೇ ಇರುವವ. ಹಾರಾಟ ಹೆಚ್ಚಾಗಿ ತುಸು ದುರ್ಬಲಗೊಂಡ ಸೊಂಟಕ್ಕೆ ದಪ್ಪಪಟ್ಟಿ ಬಿಗಿದಾದರೂ ಈತ ಪಾಲ್ಗೊಂಡ ಬೈಕ್ ಮತ್ತು ಕಾರು ರ‍್ಯಾಲೀ, ನಿಧಿಶೋಧಗಳ ಲೆಕ್ಕ ಹಿಡಿಯುವುದು ಕಷ್ಟ. ವನ್ಯಸಂರಕ್ಷಣೆಯಲ್ಲಂತೂ ಈತ ಅಖಿಲ ಭಾರತ ಮಟ್ಟದಲ್ಲಿ (ಉಲ್ಲಾಸ ಕಾರಂತ ನಿರ್ದೇಶಿತ ವೈಜ್ಞಾನಿಕ ಪ್ರಾಣಿ ಗಣನೆ ಕಾರ್ಯಕ್ಕಾಗಿ) ಭೇಟಿಕೊಡದ ವನಧಾಮಗಳಿಲ್ಲ. ಯಾವುದು ಹೆಚ್ಚು ಯಾವುದು ಕಡಿಮೆ ಎನ್ನಲಾಗದಷ್ಟು ಗಾಢವಾಗಿ ಈತ ‘ಹವ್ಯಾಸೀ ರೆಡಿಯೋ’ಪಟುವೂ ಹೌದು ಎನ್ನುವುದಕ್ಕಾಗಿ ನಾನು ನಮ್ಮ ಶಿಬಿರಕ್ಕೆ ಆಹ್ವಾನಿಸಿದ್ದೆ. ಆತ ತನ್ನೆರಡು ಗೆಳೆಯರನ್ನೂ ಒಂದಷ್ಟು ತನ್ನ ರೇಡಿಯೋ ಸಂಪರ್ಕ ಸಾಧನಗಳನ್ನು ಕಾರಿಗೆ ತುಂಬಿಕೊಂಡು ಕತ್ತಲು ಹರಿಯುವ ಮುನ್ನ ಮಂಗಳೂರಿನಿಂದ ಬಂದು ನೆಲೆಸಿಯಾಗಿತ್ತು. ಒಂದು ತುಂಡು ತಂತಿಯನ್ನು ಎರಡು ಆಧಾರಗಳ ನಡುವೆ ಕಟ್ಟಿ ನಿಲ್ಲಿಸಿದ್ದೇ ಆಂಟೆನಾ. ಅದರ ಸಂಪರ್ಕದಲ್ಲಿ ತನ್ನ ಓಮ್ನಿ ಕಾರಿನ ಒಳಗೆ ಕುಳಿತುಕೊಂಡೇ ನಾಲ್ಕೆಂಟು ಮಿಟುಕಲಾಡಿ ದೀಪ ನೋಡಿಕೊಂಡು, ಸ್ಪೀಕರಿನಿಂದ ಹೊರಡುತ್ತಿದ್ದ ಗೊಗ್ಗರು ಧ್ವನಿಗೆ ಉತ್ತೇಜಿತರಾಗಿ ಅವರು ಉತ್ತರಿಸುತ್ತಿದ್ದರು. ನೋಡನೋಡುತ್ತಿದ್ದಂತೆ ತಮ್ಮದೇ ಪ್ರಸರಣ ಮತ್ತು ಗ್ರಹಣ ತಾಕತ್ತಿನಲ್ಲಿ ಅಂದರೆ ಯಾವುದೇ ತಂತಿ ಅಥವಾ ಮೊಬೈಲ್ ತಂತ್ರಜ್ಞಾನದ ಮರುಪ್ರಸರಣ ಸ್ಥಾವರಗಳನ್ನು ನೆಚ್ಚದೇ ಮಂಗಳೂರು, ಮಣಿಪಾಲಗಳೇನು ಜಗತ್ತಿನ ಮೂಲೆಮೂಲೆಗಳಲ್ಲಿರುವ ಇಂಥದ್ದೇ ಉತ್ಸಾಹಿಗಳನ್ನು ಕರೆಕರೆದು ಮಾತಾಡಿಸುತ್ತಾ ಹೋದರು. ಈ ಹವ್ಯಾಸೀ ರೇಡಿಯೋದ ನಿಜ ಪರಿಚಯಕ್ಕೆ ಸರಿಯಾದ ಹವಾಮಾನ (ವಿಪರೀತ ಗಾಳಿ ಮಳೆ) ಮತ್ತು ಪರಿಸರ (ನಾಗರಿಕ ವ್ಯವಸ್ಥೆಗಳೇನೂ ಇಲ್ಲದ ಬೋಳು ಗುಡ್ಡೆ) ಒದಗಿದ್ದಕ್ಕೆ ರೋಹಿತ್‌ನ ‘ಸವಾಲೆದುರಿಸುವ ಛಲ’ ದ್ವಿಗುಣಗೊಂಡಿತ್ತು! ಅವೆಲ್ಲದರ ಪರಿಚಯ ಮತ್ತು ಸಂಶಯ ನಿವಾರಣೆಗಳಿಂದ ನಮ್ಮ ಶಿಬಿರಾರ್ಥಿಗಳ ರೋಮಾಂಚನವೂ ಇಮ್ಮಡಿಯಾಗಿರಲೇಬೇಕು.

ಚಾರಣಿಗರೊಡನೆ ಹೋಗದುಳಿದ ನಾನು ಮತ್ತು ದೇವಕಿ ಸ್ವಲ್ಪ ತಡೆದು ಬಿಸಿಬಿಸಿ ಪುಳಿಯೊಗರೆ, ಬಾಳೆಹಣ್ಣು ಮತ್ತು ಚಾ/ಕಾಫಿ ಕಾರಿಗೆ ಹೇರಿಕೊಂಡು ಬಳಸು ದಾರಿಯಲ್ಲಿ ಮುಡಿಪು ಗುಡ್ಡೆಯ ಶಿಖರ ತಲಪಿದೆವು. ಸರದಿಯಲ್ಲಿ ಕೆಲವರು ಹವ್ಯಾಸೀ ರೇಡಿಯೋ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಉಳಿದವರು ಬೆಳಗ್ಗಿನ ಉಪಾಹಾರವನ್ನು ಮುಗಿಸಿಕೊಂಡರು. (ತಿನ್ನಲು ಬಳಸಿದ ಬಾಳೆಲೆ ತುಣುಕುಗಳು ಪರಿಸರ ಸ್ನೇಹಿಯೇ ಆದರೂ ವಠಾರದಲ್ಲೆಲ್ಲ ಹಾರಾಡದಂತೆ ಸಂಗ್ರಹಿಸಿ, ಕಾಡುಪೊದರಿನೊಳಗೆ ಹುದುಗಿಸಲು ಮರೆಯಲಿಲ್ಲ. ಮತ್ತೆ ಕೈ ಬಾಯಿ ಹಾಗೂ ಕುಡಿದ ಲೋಟ ತೊಳೆಯಲು ಜಲಮೂಲ ಹುಡುಕುವ ಪ್ರಮೇಯವೇ ಬರಲಿಲ್ಲ; ಆಕಾಶಕ್ಕೇ ತೂತು ಬಿದ್ದಿತ್ತಲ್ಲ!) ಆ ಸಮಯದಲ್ಲಿ, ಆ ಸಂಗದಲ್ಲಿ ಇರುವುದೇ ಭಾಗ್ಯವೆಂದು ನಾನು, ಕಾರು ವಾಪಾಸು ಮುಟ್ಟಿಸುವ ಕೆಲಸವನ್ನು ನಡೆದೇ ಬಂದಿದ್ದ ಅಭಯನಿಗೆ ವಹಿಸಿಬಿಟ್ಟೆ! ಎಲ್ಲರೊಡನೆ ನಡೆದೇ ಮರಳಿದ್ದು (ಹತ್ತೂರು ಸುತ್ತಿದ ನನಗೂ) ನಿಜಕ್ಕೂ ಸ್ಮರಣೀಯ ಅನುಭವ. ಕಾಡ್ಮನೆ ಸಕಾಲಕ್ಕೇ ಮುಟ್ಟಿದರೂ ಮೊದಲೇ ಹೇಳಿದಂತೆ ಕೊಡೆ ಮಳೆಕೋಟುಗಳ ವೈವಿಧ್ಯ ಎಲ್ಲರ ಬಳಿ ಇದ್ದರೂ ವಾಯುದೇವರ ಬೆನ್ನೇರಿ ಬಂದ ವರುಣದೇವರ ಕೃಪೆ ಎಲ್ಲರಿಗೂ ನಖಶಿಖಾಂತವಾಗಿತ್ತು. ಕಾಲೇ ಗಂಟೆಯಲ್ಲಿ ಎಲ್ಲ ತಲೆ ಮೈ ಒರೆಸಿಕೊಂಡು, ಒಣ ಬಟ್ಟೆಯಲ್ಲಿ ಸಜ್ಜುಗೊಂಡು, ಮುಂದಿನ ‘ಪಾಠ’ಕ್ಕೆ ಎದುರು ಕೋಣೆಯಲ್ಲೇ ಹರಡಿ ಕುಳಿತರು. ಜಗುಲಿಯ ಕುಂದದಿಂದ ಕುಂದಕ್ಕೆ ಎರಡು ಸ್ತರದಲ್ಲಿ ಕಟ್ಟಿದ್ದ ಹಗ್ಗದಲ್ಲಿ ಎಲ್ಲರ ಒದ್ದೆ ಬಟ್ಟೆಗಳು ಹರವಿಬಿದ್ದಿದ್ದವು. ಅವು ಸತಾಯಿಸುವ ಗಾಳಿ ಇರಿಚಲುಗಳ ನಿರಂತರತೆಯನ್ನು ಮೀರಿ, ಶಿಬಿರ ಕಲಾಪದ ವೈಚಾರಿಕ ಬಿಸುಪಿನಲ್ಲಷ್ಟೇ ಒಣಗಬೇಕಿತ್ತು! ಕಾಡ್ಮನೆಯ ದಬದಬೆ ನಾಲ್ಕು ಧಾರೆಗಳಲ್ಲಿ ಅಖಂಡವಾಗಿ ಸುರಿಯುತ್ತಲೇ ಇತ್ತು. ಸಣ್ಣ ಕುರುಕಲಿನೊಡನೆ ಬಿಸಿ ಚಾ ಶಿಬಿರದ ಮುಂದಿನ ಚರಣಕ್ಕೆ ಎತ್ತುಗಡೆ ಕೊಟ್ಟಿತು.

(ಮುಂದುವರಿಯಲಿದೆ)
[ಬೇಸಿಗೆಯ ಅಕಾಲಿಕ ಮಳೆ ಮುಂದುವರಿದಂತೆ, ಮಳೆಗಾಲ ತೊಡಗಿತು ಎನ್ನುತ್ತಿದ್ದಂತೆ, ಎಲ್ಲ ಬಯಲಾಗಿ ಬಿಸಿಲು ಮೆರೆದಿತ್ತು. ವಾರಕಾಲ ಉರಿಸೆಕೆಯೊಡನೆ ಬರಗಾಲದ ಭಯ ಕಾಡಿಸಿದ ಮಳೆ ಈಗ ಮನಕ್ಕೆ ಬಿಸುಪು ಮೂಡಿಸುವಂತೆ ಬರಲು ತೊಡಗಿದೆ. ಎಂಟು ವರ್ಷದ ಹಿಂದಿನ ನಮ್ಮ ಶಿಬಿರದ ಮನೋಸ್ಥಿತಿಗೆ ಸಂವಾದಿಯಾದ ಈ ನೆಲೆಯಲ್ಲಿ ನಿಮಗೆ ವಾರವೊಂದರ ಮಂಥನದ ಬಿಡುವು. ನಿಮ್ಮ ಚಿಂತನಾ ನವನೀತವನ್ನು ಸ್ಥಳದ ಮಿತಿ ಕಾಡದ, ಭಾಷೆಯ ಕಟ್ಟುಪಾಡು (ಕನ್ನಡವಿದ್ದರೆ ಉತ್ತಮ. ಇಂಗ್ಲಿಷ್ ಲಿಪಿಯ ಕನ್ನಡ ಅಥವಾ ಶುದ್ಧ ಇಂಗ್ಲಿಷ್ ಆದರೂ ಬೇಸರವಿಲ್ಲ) ಇಲ್ಲದೇ ತುಂಬಿಲೊಳ್ಳಲು ಕೆಳಗಿದೆ ಭಾಂಡ!]