ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ ಯಥಾಪ್ರತಿ: ಯಾವುದೇ ಪುಸ್ತಕದ ಚರಮಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಂಗ್ರಹಿಸುವ ಕೊಳ್ಳುಗನನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ. ‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ, ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು, ಅರೆ ಬೆಂದ ಬರಹಗಳನ್ನೆಲ್ಲ ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಕ್ಷಮಿಸಿ, ವಿವರಗಳನ್ನು ಬರೆಯಲು ಇಲ್ಲಿ ಅವಕಾಶ ಸಾಲದು. ಆಸಕ್ತರು www.athree.wordpress.com ನೋಡಬಹುದು) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.

ಗಾತ್ರದಲ್ಲಿ ಇಷ್ಟು ಸಣ್ಣದನ್ನೂ ಪ್ರಜಾವಾಣಿ ತನ್ನ ೧೩-೭-೨೦೧೧ರ ವಾಚಕರ ವಾಣಿಯಲ್ಲಿ ಕತ್ತರಿಸಿ ಪ್ರಕಟಿಸಿತು. ಇಂದು ಬಹುತೇಕ ಪತ್ರಕರ್ತರು – ಕಟ್ ಆಂಡ್ ಪೇಸ್ಟ್ ಕಲಾವಿದರು. ಆದರೆ ಪದನಿಮಿತ್ತದಿಂದ (ಮತ್ತು ಮಾಧ್ಯಮಕ್ಕಿರುವ ಜನಸಂಪರ್ಕದ ಬಲದಲ್ಲಿ) ತಾವು ಸಕಲವಿಷಯ ಪಾರಂಗತರು ಎಂಬ ಹಮ್ಮು ಬಿಡದವರು. ದಿನಪತ್ರಿಕೆಯೊಂದರ ಓದುಗ ಓಲೆಯ ಸೀಮಿತ ಅವಕಾಶದ ಅರಿವಿದ್ದೇ ನಾನು ಬರೆದ ನಾಲ್ಕೇ ನಾಲ್ಕು ವಾಕ್ಯಗಳನ್ನೂ ವಿಕಲಾಂಗಗೊಳಿಸಿದರು. ಕನಿಷ್ಠ ಅಷ್ಟು ಸೂಕ್ಷ್ಮವಾಗಿ ಯಾಕೆ ಬರೆದೆ ಎಂಬುದಕ್ಕೆ ನಾನೇ ಕೊಟ್ಟಿದ್ದ ಪರೋಕ್ಷ ವಿವರಣೆ ಮತ್ತು ಹೆಚ್ಚಿನ ಓದಿಗೆ ಆಕರದ ಉಲ್ಲೇಖವನ್ನೂ ಪತ್ರಿಕೆ ಉಳಿಸಿಕೊಡಲಿಲ್ಲ. ಆದರೂ ನಾನು ಉಲ್ಲೇಖಿಸಿದ ವಿಷಯದ ಹಿಂದುಮುಂದಿನ ಅರಿವಿದ್ದ ಮತ್ತು ನನ್ನ ಹೋರಾಟದ ಜಾಡು ಚೆನ್ನಾಗಿ ತಿಳಿದಿದ್ದ ಪತ್ರಕರ್ತ ಗೆಳೆಯನೊಬ್ಬ ದೂರವಾಣಿಸಿ, ಪುಸ್ತಕ ನೀತಿಯ ರೂವಾರಿಗಳು ನನ್ನ ತಲೆಯ ಮೇಲೆ ಕವುಚಿಬೀಳುವ ಆತಂಕ ತೋಡಿಕೊಂಡರು. ಆದರೆ ನನಗೆ ಸ್ಪಷ್ಟವಿತ್ತು – ಬಹುಸಂಖ್ಯಾತರಾದ ಆ ರೂವಾರಿಗಳು ಎಂದೂ ನನ್ನ ತಾತ್ತ್ವಿಕ ನಿಲುವುಗಳಿಗೆ ಮುಖ ಕೊಟ್ಟದ್ದೇ ಇಲ್ಲ. ಅವರು ‘ಸಾರ್ವಜನಿಕದ ನೆನಪು ಕ್ಷಣಿಕ’ ಎಂಬ ಸ್ಪಷ್ಟ ಅರಿವಿನೊಡನೆ ನನ್ನ ಟೀಕೆಗಳನ್ನು ಸಗಟಾಗಿ ಉಪೇಕ್ಷಿಸಿಬಿಡುತ್ತಾರೆ. ಸಾಲದ್ದಕ್ಕೆ ವಿಶ್ಲೇಷಣೆ ಇಲ್ಲದೆ ಮುಖವಾಣಿಯಾಗಲು ಹೆಣಗುವ ಮಾಧ್ಯಮಗಳಲ್ಲಿ ಇನ್ನಷ್ಟು ಪ್ರಖರವಾಗಿ ಬೆಳಗುತ್ತಾ ಸಾಗುತ್ತಾರೆ.

ಪ್ರೊ| ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ ನನಗೆ ತಿಳಿದಂತೆ ಕಪುಪ್ರಾ ‘ಪುಸ್ತಕಲೋಕ’ ಎನ್ನುವ ತನ್ನದೇ ಮುಖವಾಣಿಯನ್ನು (ನಿಯತಕಾಲಿಕ) ಪ್ರಕಟಿಸತೊಡಗಿತು. ಕಸಾಪ, ಕನ್ನಡ ವಿವಿ ಹಂಪಿ ಕೂಡಾ ಹೀಗೆ ತಮ್ಮದೇ ಬಣ್ಣದ ತಗಡಿನ ತುತ್ತೂರಿಗಳನ್ನು ಮಾಡಿಕೊಂಡಿವೆ. ಎಲ್ಲಾ ಪ್ರಾಧಿಕಾರ, ಅಕಾಡೆಮಿಗಳೂ ಈ ನಿಟ್ಟಿನಲ್ಲಿ ಅರೆಬರೆ ಪ್ರಯತ್ನ ನಡೆಸುತ್ತಲೂ ಇರುತ್ತವೆ. ಪತ್ರಿಕೋದ್ಯಮ ಸಂಶೋಧಕರು ಯಾರಾದರೂ ಇಂಥ ಪರಪುಟ್ಟಗಳನ್ನು ಸಾರ್ವಜನಿಕ ಉಪಯುಕ್ತತೆಯ ಒರೆಗಲ್ಲಿಗೆ ಹಚ್ಚಿದರೆ ರದ್ದಿ ಮೌಲ್ಯವೇ ಎದ್ದು ಕಂಡೀತು. ಅದಕ್ಕೂ ಮಿಗಿಲಾಗಿ ಅಂಥ ಪ್ರಕಟಣೆಗಳ ಖರ್ಚಿನ ಲೆಕ್ಕ ತೆಗೆದರೆ ಇನ್ನೊಂದೇ ‘ಗಣಿಹಗರಣ’ ಮೇಲೇಳುವುದು ಖಂಡಿತ! ನಿಜದಲ್ಲಿ ‘ಪುಸ್ತಕಲೋಕ’ ಎಂಬುದನ್ನು ಎಷ್ಟೋ ದಶಕಗಳ ಹಿಂದೆ ಮೈಸೂರು ಪ್ರಸಾರಾಂಗದ ಉಪ-ನಿರ್ದೇಶಕರಾಗಿದ್ದ ಪ್ರೊ| ಆರ್.ಎಲ್. ಅನಂತರಾಮಯ್ಯನವರು ಪೂರ್ತಿ ವೈಯಕ್ತಿಕ ನೆಲೆಯಲ್ಲೇ ಆದರೂ ಬಹು ವ್ಯಾಪಕವಾಗಿ ಮತ್ತು ನಿಜಪುಸ್ತಕಲೋಕಕ್ಕೆ ಉಪಯುಕ್ತವಾಗುವಂತೆ ಹಲವು ವರ್ಷಗಳ ಕಾಲ ನಡೆಸಿದ್ದರು. (ಆ ಕಾಲದಲ್ಲೇ ಸ.ರ. ಸುದರ್ಶನ ತಮ್ಮ ಚೇತನ ಕನ್ನಡ ಸಂಘದಿಂದಲೂ ಇಂಥದ್ದೇ ಒಂದು ಪ್ರಯತ್ನ ನಡೆಸಿದ್ದು ಅಷ್ಟೇ ಗಮನಾರ್ಹ) ಮುಂದೆ ಅದರ ಆಶಯವನ್ನು ಉಲ್ಲೇಖಿಸುತ್ತಾ ಎಲ್ಲ ಇಲಾಖೆಗಳೂ ಕೇವಲ ತಂತಮ್ಮ ಶಂಖ ಊದಿಕೊಳ್ಳಲು ಪುಸ್ತಕಲೋಕದ ಅಪಭ್ರಂಶಗಳನ್ನು ಪ್ರಕಟಿಸುತ್ತಲೇ ಬಂದಿವೆ. ಅದೇ ಹೆಸರಿನಲ್ಲಿ ಮತ್ತೆ ಪ್ರಕಟಣೆಗಿಳಿದ ಖ್ಯಾತಿಯನ್ನಷ್ಟು ಪ್ರೊ| ಸಿದ್ಧರಾಮಯ್ಯನವರಿಗೆ ಕೊಡಬಹುದಿತ್ತು. ಆದರೆ ಇವರು ಸಾರ್ವಜನಿಕ ಮರೆವನ್ನು ಇನ್ನಷ್ಟು ಅಲ್ಪಕಾಲೀನ ಮಾಡಿಕೊಂಡು ಪುಸ್ತಕಲೋಕ ಕನ್ನಡದಲ್ಲೇ ಪ್ರಥಮ ಪ್ರಯೋಗವೆಂದು ಅದರದೇ ಸಂಪಾದಕೀಯದಲ್ಲಿ ಸಾರಿಕೊಂಡರು. ವಾಸ್ತವದಲ್ಲಿ ಈ ‘ಪ್ರಥಮ’ ಕಪುಪ್ರಾಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದು ಹೆಚ್ಚಿನವರಿಗೆ ಹೊಳೆಯಲಿಲ್ಲ. ವಿಚಾರಿಸಿದ್ದರೆ ಕೆಳಧ್ವನಿಯಲ್ಲಿ “ಹತಃ ಕುಂಜರ” ಹೇಳುತ್ತಿದ್ದರೋ ಏನೋ!

‘ಪುಸ್ತಕಲೋಕ’ ಕಪುಪ್ರಾಕ್ಕೂ ಪ್ರಥಮವಲ್ಲ ಎನ್ನುವ ಪ್ರಯತ್ನ ಈಗ ನಡೆದಿದೆ! ಇಂದು ಪುಸ್ತಕಲೋಕವನ್ನು ಮತ್ತೆ ಸುರುವಿನಿಂದ ಎಂಬಂತೆ, ಕಾಲಕ್ಕೆ ತಕ್ಕಂತೆ ಹೊರಗುತ್ತಿಗೆಯ ಬಲದಲ್ಲಿ ಬಹಳ ಅದ್ದೂರಿಯಿಂದ ಡಾ| ಸಿದ್ಧಲಿಂಗಯ್ಯವರು ತರುತ್ತಿದ್ದಾರೆ. ತಮಾಷೆ ಎಂದರೆ ಇವರು ಈ ಅವತಾರವನ್ನೇ ಅದ್ವಿತೀಯ ಎಂದು ಪ್ರಚುರಿಸಿಕೊಂಡಿದ್ದಾರೆ. ಮುಂದೆ ಬರಬಹುದಾದ ಅಧ್ಯಕ್ಷರುಗಳು ಭರತ ಚಕ್ರಿಯಂತೆ ಹಿಂದಿನೆಲ್ಲವನ್ನು ಅಳಿಸಿ, ಪ್ರಪ್ರಪ್ರಥಮ ಎಂದೇ ಸಾರಿಕೊಂಡರೆ ಆಶ್ಚರ್ಯವೂ ಇಲ್ಲ!

ಪತ್ರಿಕಾಲೋಕದವರೇ ಆಗಿದ್ದು, ಅದರೊಳಗಿನ ಹುಳುಕುಗಳ ಅರಿವಿರುವ ಮತ್ತು ಹಲವು ವರ್ಷಗಳಿಂದ ನನ್ನ ಸಾಕಷ್ಟು ಪರಿಚಯವಿರುವ ಮಿತ್ರರೊಬ್ಬರು ಪ್ರಜಾವಾಣಿಯಲ್ಲಿ ನನ್ನ ಪ್ರಕಟಿತ ಪತ್ರ ನೋಡಿ, “ಇವರು ಹೀಗ್ಯಾಕೆ ಬರೀತಾರೆ” ಎಂದು ಉದ್ಗರಿಸಿದರಂತೆ. ಅವರಿಗೆ ನೇರ ಉತ್ತರ ಅಲ್ಲ. ಆದರೆ ಅವರು ಧ್ವನಿಸಿದ ನನ್ನದೂ ಸಂಕಟಕ್ಕೆ ಇಲ್ಲಿ ಪತ್ರದ್ದೇ ವಿಚಾರದಲ್ಲಿ ಹೆಚ್ಚಿನ ವಿವರಗಳನ್ನು ಕೊಡಲು ಪ್ರಯತ್ನಿಸುತ್ತೇನೆ.

ತಾಳೆಗರಿಯ ಕಾಲದಲ್ಲಿ ಪ್ರತಿ ಮಾಡುವವರಿಂದ ತೊಡಗಿ ಮುದ್ರಣ ಯಂತ್ರದವರೆಗೆ ಬರಹಗಳು ಬಹುಸಂಖ್ಯೆಯಲ್ಲಿ ಬಂದಲ್ಲೆಲ್ಲಾ ಪುಸ್ತಕ ಹೆಚ್ಚೆಚ್ಚು ಓದುಗರನ್ನು ಮುಟ್ಟುವ ಹಂಬಲವೇ ಕೆಲಸ ಮಾಡುತ್ತಿತ್ತು. ಈ ವ್ಯವಸ್ಥೆಯ ಅನಿವಾರ್ಯ ವಾಣಿಜ್ಯ ಹೊರೆಯನ್ನು ಮನಗಂಡೇ ಐತಿಹಾಸಿಕ ಕಾಲದಲ್ಲಿ ಸ್ಥಿತಿವಂತರು ಹಣಕೊಟ್ಟು ಪ್ರತಿಕಾರರನ್ನು ಸಾಕಿದ್ದು ಓದಿದ್ದೇವೆ. ಆ ಪರಂಪರೆಯಲ್ಲೇ ಹಿಂದೆ ಮೈಸೂರಿನ ಮಹಾರಾಜರು ವೇದಪುರಾಣಗಳನ್ನೂ ಮತ್ತೆ ಪ್ರಜಾಸತ್ತಾತ್ಮಕ ಸರಕಾರ ಬಂದ ಮೇಲೆ ನನಗೆ ತಿಳಿದಂತೆ ಮೊದಲ ಬಾರಿಗೆ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕುಮಾರವ್ಯಾಸ ಭಾರತದಂಥ ಬಹುಜನ ಅಪೇಕ್ಷಿತ ಕೃತಿಗಳನ್ನೂ ಕಡಿಮೆ ಬೆಲೆಗೆ ಪ್ರಕಟಿಸಿದ್ದು ಕಾಣುತ್ತೇವೆ. ಇವರಿಗೆಲ್ಲ ಇದ್ದ ಏಕೈಕ ಲಕ್ಷ್ಯ ಸರಸ್ವತೀ ಪೂಜೆ ಅಂದರೆ ವಿದ್ಯಾಪ್ರಸರಣ; ಓದುಗನ ಕೈಗೆ ಮುಟ್ಟಿಸುವುದು.

[ಉಪಕಥೆಗೆ ಕ್ಷಮೆಯಿರಲಿ: ಹೆಚ್ಚಾಗಿ ತಾವೇ ಬರೆದು, ಅಲ್ಲದಿದ್ದರೂ ತಮ್ಮದೇ ಸೀಮಿತ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲೋ ಮುದ್ರಿಸಿ, ಪ್ರಕಟಿಸಿ, ಪುಸ್ತಕದ ಹೊರೆ ಹೊತ್ತು ಊರೂರಿನ, ಮನೆಮನೆಯ ತಿರುಗಾಟ ನಡೆಸಿದ ಮೊದಲ ತಲೆಮಾರಿನ ‘ಪ್ರಕಾಶಕ’ರಾದ ಗಳಗನಾಥ, ಜಿಬಿ ಜೋಶಿ, ಗೋವಿಂದರಾವ್, ಡಿವಿಕೆ ಮೂರ್ತಿ, ಕೂಡಲಿ ಚಿದಂಬರರೇ ಮುಂತಾದವರು ತಮ್ಮ ಕನಿಷ್ಠ ಖರ್ಚನ್ನು ಮರಳಿ ಗಳಿಸುತ್ತಾ ಆಧುನಿಕ ಪುಸ್ತಕರಂಗದ ಅಡಿಪಾಯ ಇಟ್ಟದ್ದು ಸದಭಿರುಚಿಯ ಓದುಗರ ಮಹಾಮನೆ ಕಟ್ಟುವ ಆಶಯದಲ್ಲೇ. ಇವರು ಯಾರೂ ಬಹುಸ್ಥಿತಿವಂತರಾಗಿರಲಿಲ್ಲ. ಆದರೆ ಅನ್ಯ ಉದ್ಯಮಶೀಲತೆಗಿಳಿದಿದ್ದರೆ ಕೈ ಸೋಲಬಹುದಾಗಿದ್ದ ಹೆಡ್ಡರೂ ಅಲ್ಲ. ತೋರಗಾಣ್ಕೆಯಲ್ಲಿ ಪುಸ್ತಕರಂಗದ ಆ ಆರಂಭಿಕರಿಗೆ ಓದಿನ ಪರಿಣಾಮದ ಹೊರತು (ಭಾಷೆ, ಸಂಸ್ಕೃತಿ, ದೇಶದ ಕುರಿತು ಜಾಗೃತಿ ಇತ್ಯಾದಿ) ಅನ್ಯ ಉದ್ದೇಶಗಳೇನೂ (ಮುಖ್ಯವಾಗಿ ವಾಣಿಜ್ಯಮುಖ) ಇದ್ದಂತಿರಲಿಲ್ಲ. ಹಾಗೆಂದು ಅವರ ಆದರ್ಶಗಳನ್ನು ಮುಂದುವರಿದ ತಲೆಮಾರಿಗೆ ಅನ್ವಯಿಸಲಾಗುವುದಿಲ್ಲ ಎನ್ನುವುದನ್ನು ಸಖೇದ ಹೇಳಲೇ ಬೇಕು ಮತ್ತು ಇದನ್ನು ಒಂದು ಮಿತಿಯಲ್ಲಿ ಕಾಲಧರ್ಮ ಎನ್ನಲೂಬಹುದು. ವಿವರಗಳು ಇಲ್ಲಿ ಅಪ್ರಸ್ತುತ.]

ನನಗೆ ತಿಳಿದಂತೆ ೧೯೭೦ರ ದಶಕದವರೆಗೂ ಪ್ರಜಾಸತ್ತಾತ್ಮಕ ಸರಕಾರಕ್ಕೆ ಸಾರ್ವಜನಿಕ ವಿದ್ಯೆ ಕೊಡುವುದು ಪ್ರಥಮಾದ್ಯತೆಯಲ್ಲಿತ್ತು. ಅದಕ್ಕೆ ಪೂರಕವಾಗಿ ಒದಗುವ ಪುಸ್ತಕಗಳ ಕುರಿತಂತೆ ಗುಣ ಮತ್ತು ಧನ ಮಟ್ಟದಲ್ಲಷ್ಟೇ ಎಚ್ಚರವನ್ನು ತಾಳಿತ್ತು. ಸರಕಾರದ ಅಂಗೀಕೃತ ಪುಸ್ತಕ ಮಾರಾಟಗಾರ, ಪಠ್ಯ ಆಯ್ಕೆಗೊಂದು ಸಮಿತಿ, ಗ್ರಂಥಾಲಯಗಳ ವಿಸ್ತರಣೆ, ದೊಡ್ಡ ಖರೀದಿ ನೆಲೆಯಲ್ಲಿ ರಿಯಾಯ್ತಿ ದರಪಡೆದು ಹೆಚ್ಚಿನ ಪುಸ್ತಕ ಸಂಗ್ರಹಿಸುವ ಉದ್ದೇಶಗಳೆಲ್ಲಾ ಚೂಪು ಪಡೆಯುತ್ತಿದ್ದದ್ದು ಓದುಗನ ಉಪಯುಕ್ತತೆಗೇ. ಅಲ್ಲಿ ಭ್ರಷ್ಟತೆ ಇರಲಿಲ್ಲವೆಂದಲ್ಲ. ಆದರೆ ಪ್ರಕಾಶಕನ ನೈತಿಕತೆ ಪುಸ್ತಕದ ಚರಮ ಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಪುಸ್ತಕ ಸಂಗ್ರಹಿಸುವ ಕೊಳ್ಳುಗನನ್ನೂ ಉಪೇಕ್ಷಿಸುವಷ್ಟು ಬೆಳೆದಿರಲಿಲ್ಲ. ‘ವೆಚ್ಚಕ್ಕೆ ಹೊನ್ನುಂಟು, ಚಚ್ಚಿ ಹಾಕಲು ಅಚ್ಚುಕೂಟಗಳುಂಟು, ಕಚ್ಚಿ ಹಿಡಿಯಲು ನೂರೆಂಟು ಸ್ಕೀಮುಗಳುಂಟು, ನೀನ್ಯಾರಿಗಾದೆಯೋ ಎಲೆ ಓದುಗಾ’ ಎನ್ನುವ ವರ್ತಮಾನದ ಸೂತ್ರ ರೂಪುಗೊಂಡಿರಲಿಲ್ಲ!

ಮೊನ್ನೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಹೀಗೇ ನನ್ನಂಗಡಿಗೆ ಬಂದಾಗ ತೋಡಿಕೊಂಡರು, “ಏಳು ತರಗತಿಗಳಿಗೆ ಅಧಿಕೃತವಾಗಿ ನಾವು ಮೂವರು ಶಿಕ್ಷಕರಿದ್ದೆವು. ನಾನು ಊರ ದಾನಿಗಳನ್ನು ಹಿಡಿದು, ಕೈಯಿಂದಲೂ ಹಣ ಹಾಕಿ ತತ್ಕಾಲೀನ ಹೆಚ್ಚುವರಿ ಟೀಚರುಗಳನ್ನು ಗೊತ್ತುಮಾಡಿಕೊಂಡು ಸುಧಾರಿಸುತ್ತಿದ್ದೆ. ಈಗ ‘ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು’ ಎಂಬ ನಿಯಮ ಜ್ಯಾರಿಗೊಳಿಸಿ, ಇಬ್ಬರನ್ನು ವರ್ಗಾಯಿಸಿದ್ದಾರೆ. ಈಗ ಏಳಕ್ಕೂ ನಾನೊಬ್ಬನೇ ಉಪಾಧ್ಯಾಯ!” ಇಂದು ನಿಸ್ಸಂದೇಹವಾಗಿ ಮೌಲ್ಯಗಳಲ್ಲಿ ಶೈಥಿಲ್ಯ ಬಂದಿದೆ. ಪ್ರಜಾಸತ್ತಾತ್ಮಕ ಸರಕಾರ ಎಂದೆನ್ನಿಸಿಕೊಂಡರೂ ಸಮಷ್ಟಿಯ ವಿದ್ಯೆಗಾಗಿ ಘನ ನಿಲುವುಗಳನ್ನು ತಳೆಯುವುದಕ್ಕಿಂತ ಜನಪ್ರಿಯ ಅದೂ ತತ್ಕಾಲೀನ ಸಲಕರಣೆಗಳಲ್ಲೇ ಕಳೆದುಹೋಗಿವೆ. ಹಾಲು, ಮೊಟ್ಟೆಯಿಂದ ತೊಡಗಿದ್ದು ಬಿಸಿಯೂಟದ ಹೊರಗುತ್ತಿಗೆವರೆಗೆ ಬೆಳೆದು ನಿಂತಿದೆ. ಬಸ್ ಪಾಸಿನಿಂದ ತೊಡಗಿದ್ದು ಸೈಕಲ್ ಕಾರ್ಖಾನೆಗಳನ್ನೇ ಖರೀದಿಸುವ ಮಟ್ಟಕ್ಕೆ ಮುಟ್ಟಿದೆ. ಸಾಕಷ್ಟು ಸಂಖ್ಯೆಯಲ್ಲಿ ಯೋಗ್ಯ ಉಪಾಧ್ಯಾಯರುಗಳು ಮತ್ತು ಕಲೆತು ಕಲಿಯಲು ಸೂಕ್ತ ಆಶ್ರಯದಂತ ಮೂಲಭೂತ ಸವಲತ್ತುಗಳನ್ನು ಒದಗಿಸುವುದಿರಲಿ, ಇದ್ದವನ್ನು ಊರ್ಜಿತದಲ್ಲಿಡಲೂ ಸರಕಾರಕ್ಕೆ ಯೋಜನೆಗಳೇ ಇಲ್ಲ. ಈ ಬೆಳಕಿನಲ್ಲಿ ಪುಸ್ತಕಲೋಕಕ್ಕೊಂದು ಇಣುಕುನೋಟ ಹಾಕಿ.

ಶಾಲೆಗಳಲ್ಲಿ ಎರಡೋ ಮೂರೋ ಭಾಷಿಕ (ಕನ್ನಡ, ಇಂಗ್ಲಿಶ್ ಮತ್ತು ಹಿಂದಿ) ಹಾಗೇ ಎರಡೋ ಮೂರೋ ವಿಷಯಕ (ಗಣಿತ, ವಿಜ್ಞಾನ ಮತ್ತು ಸಮಾಜ) ಪಠ್ಯಗಳಿಗೆ ಸೀಮಿತವಾಗಿದ್ದ ಪುಸ್ತಕರಂಗ ಅಸಾಧ್ಯ ಬೆಳವಣಿಗೆ ಕಂಡಿದೆ. ಸಕಾಲದಲ್ಲಿ ಮೂಲಭೂತ ಪಠ್ಯಗಳನ್ನು ಒದಗಿಸುವುದೊಂದು ಬಿಟ್ಟು, ಪೂರಕ ಪಠ್ಯ, ಗ್ರಂಥಾಲಯ, ಗಣಕ, ಅಂತರ್ಜಾಲ ಸಂಪರ್ಕ ಇತ್ಯಾದಿ ವಾಣಿಜ್ಯ ಆಸಕ್ತಿಗಳು ಇಲ್ಲಿ ಹೆಚ್ಚುತ್ತಲೇ ಇವೆ. ಹೀಗೆ ವಿದ್ಯಾರಂಗವೂ ಸೇರಿದಂತೆ ಪುಸ್ತಕ ಜಗತ್ತಿನ ಎಲ್ಲಾ ಅವಕಾಶಗಳ ಅರಿವಿದ್ದೂ ಅವನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಕಪುಪ್ರಾ ಪ್ರಣೀತ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ.

‘ಅಸಹಾಯಕ ಲೇಖಕ-ಪ್ರಕಾಶಕ’ರಿಗೆ ಅಂದರೆ ಸೃಜನಶೀಲ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಸದಭಿರುಚಿಯ ಓದುಗರಿಗೆ ಮುಟ್ಟಿಸುವ ಉದಾತ್ತ ಉದ್ದೇಶಗಳೇ ಎಲ್ಲಾ ಪ್ರಸಾರಾಂಗ, ಇಲಾಖೆ, ಅಕಾಡೆಮಿ, ಪ್ರಾಧಿಕಾರ, ಪರಿಷತ್ತುಗಳ (ಹುಟ್ಟು, ಅನುದಾನ, ಪುರಸ್ಕಾರ, ಬಹುಮಾನ, ಸಗಟು ಖರೀದಿ ಮುಂತಾದ ಕಲಾಪಗಳದ್ದೂ) ಅಡಿಪಾಯ. ಅವುಗಳನ್ನು ಮೌಲಿಕ ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತೆ, ಪಾರದರ್ಶಕವಾಗಿಯೂ ಇರುವಂತೆ ಸಮಿತಿಗಳು ಮತ್ತವುಗಳ ನಿರ್ಧಾರಗಳು ಪ್ರಾಥಮಿಕ ಹಂತದಲ್ಲಿ ಕಂಗೊಳಿಸುವುದೂ ಉಂಟು. ಆದರೆ ಮುಂದುವರಿಕೆಯಲ್ಲಿ ಪುಢಾರೀಕರಣ ಒಂದೇ ಊರ್ಜಿತವಾಗಿ ಸಾರ್ವಜನಿಕ ವಿನಿಯೋಗಕ್ಕೆ ಈ ಎಲ್ಲಾ ಸಂಸ್ಥೆಗಳೂ ಮದ್ದಿಲ್ಲದ ಮಹಾಸೋರು ಹುಣ್ಣುಗಳಾಗಿವೆ. ಇದಕ್ಕೆರಡು ಉದಾಹರಣೆಗಳು.

ಕಪುಪ್ರಾ ರೂಪುಗೊಳ್ಳುವ ಮುನ್ನ ಮತ್ತು ಪ್ರಥಮಾಧ್ಯಕ್ಷರಾಗಿಯೂ ಕಂಗೊಳಿಸಿದವರು ಪ್ರೊ|ಎಲ್ಲೆಸ್ ಶೇಷಗಿರಿರಾವ್. ಆದರೆ ಅವರ ತಂಡ ಆಶಯಗಳಿಗೆ ಖಚಿತ ರೂಪು ಕೊಡುವ ಮುನ್ನ, ಅಂದರೆ ಅಕಾಲಿಕವಾಗಿ ರಾಜೀನಾಮೆ ಕೊಟ್ಟು ಹೊರನಡೆಯುವಲ್ಲಿಂದ ಕಪುಪ್ರಾ ಇನ್ನೊಂದೇ ರಾಜಕೀಯ ಸಂತ್ರಸ್ತರ ಗಂಜಿಕೇಂದ್ರವಾಗಿ, ಇನ್ನೂ ಸೌಮ್ಯವಾಗಿ ಹೇಳುವುದಾದರೆ ಪರೋಕ್ಷ ಓಲೈಕೆಯ ನೆಲೆಯಾಗಿ ಖಾಯಂ ಆಯಿತು! ಸಹಜವಾಗಿ ಮತ್ತೆ ಬಂದ ಐದಾರು ಅಧ್ಯಕ್ಷರು ಮತ್ತು ಅವರ ಸದಸ್ಯ ತಂಡಗಳು ವೈಯಕ್ತಿಕ ನೆಲೆಯಲ್ಲಿ ಏನಿದ್ದರೂ ಕಾರ್ಯರಂಗದಲ್ಲಿ ಯಥಾಸ್ಥಿತಿವಾದದಿಂದ ಎಂದೂ ಮೇಲೆ ಏಳಲೇ ಇಲ್ಲ! (ಇದರ ಕುರಿತು ಕೆಲವು ಉದಾಹರಣೆಗಳಿಗೆ ಇಲ್ಲೇ ನನ್ನ ಹಳೇ ಕಡತಗಳನ್ನೂ ನನ್ನದೇ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕವನ್ನೂ ನೋಡಬಹುದು)

ಕಪುಪ್ರಾದ ಸಗಟು ಖರೀದಿಯ ಕುರಿತಂತೆ ಅಹವಾಲುಗಳು ಹೆಚ್ಚಿದ ಕಾಲಕ್ಕೆ ಸತ್ಯನಿಷ್ಠುರಿ ಪ್ರೊ| ಜಿ.ಎಚ್ ನಾಯಕರ ಹೆಸರಿನಲ್ಲಿ ಆಯ್ಕಾಸಮಿತಿಯನ್ನು ಹೊರಡಿಸಿದರು. ಸಮಿತಿಯ ನಿರ್ಧಾರ ಪುಸ್ತಕ-ಮಾಫಿಯಾದ ಹಿತಾಸಕ್ತಿಗೆ ಸಹಜವಾಗಿ ಮಾರಕವಾದಾಗ ಅಧಿಕೃತ ಕಲಾಪಗಳಿಂದ ಹೊರಗೆ ಅಸಾಂವಿಧಾನಿಕ ಘೇರಾವೋ ಮತ್ತು ಬೊಬ್ಬೆಗಳೆದ್ದವು. ಪ್ರೊ|ನಾಯಕರ ಬೆನ್ನಿಗೆ ಕಪುಪ್ರಾ ನಿಲ್ಲಲಿಲ್ಲ. ಅವರು ಹೇಸಿಕೊಂಡು ರಾಜೀನಾಮೆ ಕೊಟ್ಟು ಹೊರ ಬಂದರು. ಕಪುಪ್ರಾ ಪಾರದರ್ಶಕತೆ, ಪ್ರಾಮಾಣಿಕತೆ ಕೇಳಿದವರ ತಾಳ್ಮೆ ಖರೀಸಿತ್ತು. ಮತ್ತೆ ‘ವ್ಯವಹಾರಜ್ಞಾನ’ ಇರುವ ಆಯ್ಕಾ ಸಮಿತಿಯೇ ರೂಪುಗೊಂಡಿರಬೇಕು. ಭಕ್ತಿ ಇಲ್ಲದ ಭಜನೆಯಂತೆ, ಗುಣವಿಲ್ಲದ ಪೋಷಣೆಯಂತೆ ಕಪುಪ್ರಾ ಸಗಟು ಖರೀದಿ ನಡೆದೇ ಇದೆ; ಸಾಮಾಜಿಕ ವೆಚ್ಚದಲ್ಲಿ!

ಪ್ರೊ| ಜಿ.ಎಸ್. ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ, ಅಂಕೋಲದಲ್ಲಿ ಕಪುಪ್ರಾ ನಡೆಸಿದ ಒಂದು ದಿನದ ಕಮ್ಮಟಕ್ಕೆ ನನ್ನನ್ನು ಒತ್ತಾಯಪೂರ್ವಕವಾಗಿ ಕರೆಸಿಕೊಂಡಿದ್ದರು. (ನನಗೆ ಕಟುಟೀಕಾಕಾರನೆಂಬ ಹೆಸರಿತ್ತು) ನನಗೆ ತಿಳಿದ ಮಟ್ಟಿಗೆ ಅದು ‘ಪುಸ್ತಕ ನೀತಿ’ಯ ಅಂಕುರಾರ್ಪಣ ಸಭೆ. ಆದರೆ ಬಂದವರಾದರೂ ಎಂಥವರು! ಎರಡು ಕಾಲವಿಹಾರಿಗಳು – (double standard ?) ಐತಿಹಾಸಿಕ ಕಾಲದಲ್ಲಿ ರಾಜಮಹಾರಾಜರುಗಳು ಕವಿ ಕಲಾವಿದರ ಪೋಷಣೆ (ಏನು ಅನಿವಾರ್ಯತೆಯೋ ಪಾಪ!) ಮಾಡಿದಂತೇ ಸರಕಾರ ಮಾಡಬೇಕು ಎನ್ನುವುದು ಇವರ ಸ್ವಾರ್ಥದ ಸ್ತರ. ಅಕಾಲಿಕ ಮೌಲ್ಯಪೋಷಣೆಯನ್ನೇ ಒಪ್ಪಿ ವರ್ತಮಾನಕ್ಕೆ ಅಳವಡಿಸುವಾಗ ವ್ಯಕ್ತಿ ಸ್ವಾತಂತ್ರ್ಯದ (‘ನಮ್ಗೂ ಹಕ್ಕಿಲ್ವಾ’ ಎನ್ನುವ ಸ್ವಾರ್ಥಮೂಲವಾದ ಪ್ರಜ್ಞೆ) ಮಾತು ಎಸೆಯುವುದು ಅವರ ಎರಡನೇ ಮುಖ! ಭಾಗವಹಿಸಿದವರಲ್ಲಿ ಹೆಚ್ಚಿನವರು ಲೇಖಕ-ಪ್ರಕಾಶಕರು ಅಥವಾ ಸರಕಾರೀ ಪುಸ್ತಕೋದ್ಯಮದಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಹೊಂಚುವವರೇ ಆಗಿದ್ದರು; ಸಗಟು ಖರೀದಿಗೆ ಹುಟಿದವರು! ಇವರು ಡೊಂಕುಬಾಲದ ನಾಯಕನನ್ನು ಕನಕದ ಕನಸಿನೊಡನೇ ಅನುಸರಿಸುತ್ತಾರೆ. ರಾಜಪೋಷಾಕಿನ ಮೇಲೆ ಹರಕು ಶಾಲು ಹೊದ್ದವರನ್ನು ಓಲೈಸುವಲ್ಲಿ ಇವರು ಅತ್ಯುತ್ಸಾಹಿಗಳು. ನಿತ್ಯದಲ್ಲಿ ಎಂಜಲು ಕೈಯಲ್ಲಿ ಕಾಗೆ ಓಡಿಸದಿದ್ದರೂ ಹೆಲಿಕಾಪ್ಟರಿನಲ್ಲಿ ಬಂದವರಿಗೆ ಚಾಪೆ ಹಾಸಿ, ಗಂಗಾಳದಲ್ಲಿ ರಾಗಿ ಮುದ್ದೆ ತಿನ್ನಿಸುವವರು – ಭಡವರು. ಸಹಜವಾಗಿ ಅಂಕೋಲದ ಕಮ್ಮಟದಲ್ಲಿ ಉಲ್ಲೇಖಗೊಂಡ ಮುಖ್ಯ ವಿಚಾರಗಳೆಲ್ಲಾ ಸಗಟು ಖರೀದಿಯ ಪರಿಧಿಯನ್ನು ಮೀರಿ ಬೆಳೆಯಲೇ ಇಲ್ಲ.

ಕಮ್ಮಟದ ಮೊದಲ ಗೋಷ್ಠಿಗಳು ಸರಕಾರೀ ಯಂತ್ರದ ನಟ್ಟುಬೋಲ್ಟುಗಳಾದ (ಸ್ವತಂತ್ರವಾಗಿ ಯೋಚಿಸುವುದನ್ನೂ ಮರೆತ) ಇಲಾಖಾ ವರಿಷ್ಟರ, ಪ್ರಸಾರಾಂಗದ ಮುಖ್ಯರ ‘ಪ್ರಬಂಧ’ ಮಂಡನೆಗೆ ಸೀಮಿತವಿತ್ತು. ಸವಲತ್ತುಗಳಿಗೆ ಹೊಂಚುವಲ್ಲಿ ಇವರ ಆಯಾಮ ಬೇರೆಯಾದುದರಿಂದ, ಮಂಡನೆಯ ಬಹ್ವಂಶ ಖಾಸಗಿ ಕಂಪೆನಿಗಳ ಸರ್ವಸದಸ್ಯರ ಸಭೆಯಲ್ಲಿ ವಿಸ್ತರಿಸಿಕೊಳ್ಳುವ ‘ಸಾಧನಾಪಟ್ಟಿಯೇ’ ಆಗಿರುತ್ತಿತ್ತು. ಏಕಮುಖ ಕೊರೆತಗಳ ಕೊನೆಯಲ್ಲಿ ಚರ್ಚೆಗೆ ಅವಕಾಶವೇನೋ ಕೊಡುತ್ತಿದ್ದರು. ಆದರೆ ಆ ಮಂಡನೆಗಳು ಪುಸ್ತಕೋದ್ಯಮದ ಮೂಲ ಆಶಯವಾದ ‘ಓದುಗನಿಗೆ ಪುಸ್ತಕ’ವನ್ನು ಮುಟ್ಟುತ್ತೇ ಇರಲಿಲ್ಲವಾಗಿ ನನಗೆ ಪ್ರತಿಕ್ರಿಯಿಸಲು ಅವಕಾಶವೇ ಒದಗಲಿಲ್ಲ. ಹಾಗೇ ನಾನು ಮೀಸೆ ತೂರಿದ್ದರೆ ಸಭಾ ಮರ್ಯಾದೆಯನ್ನು ಭಂಗಪಡಿಸಿದಂತೋ ದುರುದ್ದೇಶಪೂರಿತ ವಿಷಯಾಂತರವಾಗಿಯೋ ಕಾಣಿಸುವ ಅಪಾಯವಿತ್ತು. ಚೌಕಟ್ಟೇ ಡೊಂಕಾದರೆ ಚಿತ್ರ ಶೋಭಿಸುವುದುಂಟೇ!

ದಿನದ ಕೊನೆಯಲ್ಲಿ, ಮುಕ್ತ ಅಭಿಪ್ರಾಯ ಮಂಡನೆಗೊಂದು ಔಪಚಾರಿಕ ಅವಕಾಶ ಇತ್ತು. ಆದರೆ ಎಲ್ಲಾ ಪ್ರಾಯೋಜಿತ ಅಥವಾ ಅನುದಾನಿತ ಗೋಷ್ಠಿಗಳಿಗೆ ಮಂಡೆಗಿಂತ ಮುಂಡಾಸು ದೊಡ್ಡ ಎಂಬಂತೆ ಬಡಿದ ಶಾಪ – ಉದ್ಘಾಟನೆ ಮತ್ತು ಸಮಾರೋಪ ಎಂಬ ನವವೈದಿಕಗಳು. ಸಹಜವಾಗಿ ಇಲ್ಲಿ ಸಮಾರೋಪ ಸಮಾರಂಭಕ್ಕೆ ಮುಹೂರ್ತ ಮೀರುವ ಭಯ ಭಜಕರನ್ನು ಕಾಡುತ್ತಿತ್ತು! ಸಹಜವಾಗಿ ಅಭಿಪ್ರಾಯ ಮಂಡಿಸಲು ಮುಂದೆ ಬಂದವರಿಗೆ ಸೂಕ್ಷ್ಮವಾಗಿ ಮಾತಾಡುವ ಒತ್ತಡದೊಡನೆ, ಚರ್ಚೆಯ ಅವಕಾಶವನ್ನೇ ನಿರಾಕರಿಸಲಾಗಿತ್ತು! ಆಗ ನಾನು ನೇರ ಅಲ್ಲಿನ ಕಲಾಪದ ಔಚಿತ್ಯವನ್ನೇ ಪ್ರಶ್ನಿಸಿದೆ. (ವಿವರಗಳಿಗೆ ಇಲ್ಲೇ ಜೂನ್ ೧೮, ೨೦೦೮ರ ಶೀರ್ಷಿಕೆ, ‘ಅನ್ಯತ್ರ ಮೋಸಹೋಗಬೇಡಿ, ನಮ್ಮಲ್ಲಿಗೆ ಬನ್ನಿ’ ನೋಡಿ) ನನ್ನ ಮಾತುಗಳು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪಕ್ಷ ರಾಜಕಾರಣದ ಫಲವಾಗಿ ರೂಪುಗೊಂಡ ಸರಕಾರದ ಅಧೀನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಅಡಿಯಾಳಾದ ಒಂದು ಇಲಾಖೆಯಷ್ಟೇ ಆಗಿರುವ ಕಪುಪ್ರಾ ರೂಪಿಸುವ ‘ಪುಸ್ತಕ ನೀತಿ’ಗೆ ಕಚ್ಚಲು ಹಲ್ಲಿಲ್ಲ, ಒಟ್ಟಾರೆ ಕನ್ನಡ ಪ್ರಪಂಚವನ್ನು ಮುಟ್ಟುವ ವ್ಯಾಪ್ತಿ ಮೊದಲೇ ಇಲ್ಲ. (ಸಂಸ್ಕೃತಿ ಇಲಾಖೆಯ ಗುಮಾಸ್ತನೆದುರು ಹಲ್ಲುಗಿಂಜುವ ಕಪುಪ್ರಾ ಅಧ್ಯಕ್ಷರನ್ನು ಕಂಡವರಿದ್ದಾರೆ. ನನ್ನಂಗಡಿಗೆ ಬಂದಾಗ ಏನೂ ಅಲ್ಲದ ನನ್ನ ಬಳಿಯೂ “ಕ್ಯಾಬಿನೆಟ್ ದರ್ಜೆಯಿಂದ ಕಪುಪ್ರಾ ಅಧ್ಯಕ್ಷಪದವಿಯನ್ನು ಇಳಿಸಿಬಿಟ್ಟರು ಸಾರ್” ಎಂದು ಗೋಳಾಡಿದ ಅಧ್ಯಕ್ಷರನ್ನು ನಾನೇ ಕಂಡಿದ್ದೇನೆ. ಕಪುಪ್ರಾದೊಳಗೂ ಅಧ್ಯಕ್ಷನೋ ಸಮಿತಿಯೋ ಉದಾತ್ತತೆಯಲ್ಲಿ ತೆಗೆದುಕೊಂಡ ಯಾವುದೇ ನಿಲುವನ್ನು ಬಗಲಲ್ಲಿ ಕೂತ ರಿಜಿಸ್ಟ್ರಾರ್ ಎನ್ನುವ ಕುಲಪುರೋಹಿತ ‘ಆಡಿಟ್ ಆಬ್ಜೆಕ್ಷನ್’ ಎಂಬ ಮಂತ್ರದಂಡದಿಂದ ಯಾವತ್ತೂ ನಿರ್ವೀರ್ಯಗೊಳಿಸಬಲ್ಲ ಎನ್ನುವುದೂ ಮರೆಯಲಾಗದು) ‘ಮುಕ್ತ ವಿಚಾರ’ ಮಂಡನೆಯ ಮಾತುಗಳಿಗೊಂದು ತಾರ್ಕಿಕ ಕೊನೆ ಕೊಡುವ ಅಧ್ಯಕ್ಷ ಭಾಷಣವನ್ನು ಸ್ವತಃ ಕಪುಪ್ರಾದ ಅಧ್ಯಕ್ಷರೇ ಮಾಡಿದರು. ಆದರೆ ಅವರು ನಾನೆತ್ತಿದ ವಿಷಯದ ಹತ್ತಿರವೂ ಸುಳಿಯಲಿಲ್ಲ ಎನ್ನುವುದು ಅಜ್ಞಾನವೋ ಜಾಣತನವೋ ಅಂದು ನನಗೆ ತಿಳಿಯಲಿಲ್ಲ.

ಅಂಕೋಲದಲ್ಲಿ ನಾನು ಹೇಳಿದ ವಿಚಾರಗಳು ಗಾಳಿಗೆ ಸೇರಿಹೋಗದಂತೆ ಮುಂದೆ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಹೆಸರಿಸಿ, ವಿಸ್ತಾರ ಲೇಖನವನ್ನೇ ಮಾಡಿ, ಅಧ್ಯಕ್ಷರಿಗೂ ಹಲವು ವಿಚಾರವಂತರಿಗೂ ಪತ್ರಿಕೆಗಳಿಗೂ ಕಳಿಸಿಕೊಟ್ಟೆ. ಕಪುಪ್ರಾದ ಮುಖವಾಣಿಯಾಗಿ ಹೊರಟ ಪುಸ್ತಕಲೋಕದಲ್ಲಿ ಪ್ರಕಟಿಸಿ ಚರ್ಚೆಗೆ ಒಡ್ಡಲೂ ಸೂಚಿಸಿದೆ. ಬುದ್ಧಿಪೂರ್ವಕವಾಗಿ ಪುಸ್ತಕೋದ್ಯಮವನ್ನೇ ವೃತ್ತಿಯಾಗಿ ನೆಚ್ಚಿ, ಅದನ್ನು ಮೂವತ್ತಕ್ಕೂ ಮಿಕ್ಕು ವರ್ಷ ಸಾಮಾಜಿಕ ಜವಾಬ್ದಾರಿಯೊಡನೇ ನಡೆಸಿದವನಿಗೆ ಕೇವಲ ಪದನಿಮಿತ್ತದಲ್ಲಿ ಪುಸ್ತಕೋದ್ಯಮದ ಆಗುಹೋಗುಗಳನ್ನು ನಿರ್ದೇಶಿಸುವವರಿಂದ ಎಲ್ಲಕ್ಕೂ ಜಾಣ ಮೌನವೇ ಉತ್ತರ. ಜಾಹೀರಾತುಗಳು, ವಾರಕ್ಕೊಮ್ಮೆ (ಕೆಲವರು ಪಕ್ಷಕ್ಕೊಮ್ಮೆ) ಬಲವಂತದ ಬಸಿರಿಳಿಸುವವರ ಅಂಕಣ ಮತ್ತು ಪ್ರಾಯೋಜಿತ ಸುದ್ದಿಗಳ ನಡುವೆ ಪ್ರಜಾಪ್ರಭುತ್ವದ ಕಾವಲುಗಾರರೆಂದೇ ಕರೆಸಿಕೊಳ್ಳುವ ಪತ್ರಿಕೆಗಳಿಗೆ ಈ ಲೇಖನ ಹಾಕುವುದಕ್ಕೆ ಜಾಗ ಉಳಿದಿರಲಾರದು ಅಥವಾ ಗ್ರಹಿಕೆ ಮೀರಿದ ಕಗ್ಗವಾಗಿಯೂ ಕಾಣಿಸಿ ಅವಕಾಶ ಕಳೆದುಕೊಂಡಿರಬಹುದು. (ಸಾಮಾಜಿಕ ಬದ್ಧತೆಯೆಂಬುದಿಂದು ಹಲವು ಪತ್ರಕರ್ತ ಮಿತ್ರರಲ್ಲಿದೆಯಾದರೂ ಯಾವುದೇ ಪತ್ರಿಕೆಗದು ಧೋರಣೆಯಾಗಿ ಉಳಿದಿಲ್ಲ. ಪ್ರಸಾರ ಸಂಖ್ಯೆ, ತತ್ಪರಿಣಾಮವಾಗಿ ಸಿಗುವ ಜಾಹೀರಾತುಗಳ ಮೂಲಕ ವಾಣಿಜ್ಯ ಯಶಸ್ಸನ್ನೇ ಗಮನದಲ್ಲಿಡುವ ಯಜಮಾನರುಗಳಿಂದ ಇಂದು ಪತ್ರಿಕೆಗಳು ಸಂಪಾದಕನ ಖಯಾಲಿಗನುಗುಣವಾಗಿ ‘ಬಣ್ಣ’ ಬದಲಿಸುವುದು ಎಲ್ಲರಿಗೂ ತಿಳಿದದ್ದೇ.)

‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ (ಅಕ್ರಮ ಸಕ್ರಮ?), ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು ಅಥವಾ ಅರೆ ಬೆಂದ ಬರಹಗಳನ್ನು (ಪದವಿಟ್ಟಳುಪದೊಂದಗ್ಗಳಿಕೆ?) ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಇನ್ನಷ್ಟು ವಿವರಗಳಿಗೆ ಇಲ್ಲಿನ ಆಯ್ಕಾ ಕಿಂಡಿಯಲ್ಲಿ ‘ಪುಸ್ತಕಲೋಕ’ ಕ್ಕೆ ಚಿಟಿಕೆ ಹೊಡೆದು ಹಳೆಯ ಕಡತಗಳನ್ನು ಅವಶ್ಯ ನೋಡಿ) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.