೨೦೧೧ರ ಅಕ್ಟೋಬರ್ ಮೊದಲವಾರದಲ್ಲಿ ನಾನು ಅಂತರ್ಜಾಲದಲ್ಲಿ ಮಿಂಚಂಚೆ ತನಿಖೆ ನಡೆಸಿದ್ದಂತೆ ಎಡಪಕ್ಕದ ‘ದೇಶಕಾಲ’ದ ಹಸಿರು ದೀಪ ಮಿನುಗಿ, ಬಲಪಕ್ಕದಲ್ಲಿ ಸಂವಾದ ಕಿಂಡಿ ಮೊಳೆದು ಸಾರಿತು – ‘೨೮ನೇ ಸಂಚಿಕೆಗೆ ದೇಶಕಾಲ ನಿಲ್ಲಿಸುತ್ತಿದ್ದೇನೆ’. ಮತ್ತೆ ಎರಡನೇ ವಾರದಲ್ಲಿ ೨೭ನೇ ಸಂಚಿಕೆ ಬಂದಾಗ ಸಂಪಾದಕೀಯದಲ್ಲಿ ಚುಟುಕಾಗಿ ಬರೆದುಕೊಂಡಿದ್ದರು – ಪತ್ರಿಕೆಯ ನಿರ್ವಹಣಾ ಹರಹು ಹೆಚ್ಚಿದ್ದರಿಂದ ತನಗೆ ತೊಡಗಿಕೊಳ್ಳಲು ವ್ಯವಧಾನ ಸಾಲದ್ದರಿಂದ ದೇಶಕಾಲವನ್ನು ಮುಂದಿನ ಸಂಚಿಕೆಗೆ ನಿಲ್ಲಿಸುತ್ತಿದ್ದೇನೆ. ಅದರಲ್ಲೂ ಈಗಷ್ಟೇ ಬಂದಿರುವ ೨೮ನೇ ಸಂಚಿಕೆಯಲ್ಲೂ ತತ್ಕಾಲೀನ ನಿಲುಗಡೆ, ಅರ್ಥಾತ್ ಅನಿರ್ದಿಷ್ಟ ವಿರಾಮದ ಕುರಿತಷ್ಟೇ ಬರೆದಿರುವುದು ಇದ್ದುದರಲ್ಲಿ ಸಮಾಧಾನದ ವಿಷಯ. ಸಂಪಾದಕ (ಮಾಲಿಕನೂ ಹೌದು) ವಿವೇಕ ಶಾನಭಾಗ ಏಳು ವರ್ಷಗಳ ಉದ್ದಕ್ಕೂ ‘ತಾನು ಬಿಡುವಿಲ್ಲದ ಕೆಲಸಗಳ ನಡುವೆ ಕನ್ನಡ ಸೇವೆ ಮಾಡುತ್ತಿರುವ’ ಮಾತು ಆಡಿದ್ದಿಲ್ಲ. ಚಂದಾದಾರರಿಗೆ ಸಕಾಲದಲ್ಲಿ ಸಂಚಿಕೆ ಮುಟ್ಟಿಸುವಲ್ಲಿ, ಅವಧಿ ಮುಗಿದದ್ದನ್ನು ಕೊನೆಯ ಸಂಚಿಕೆಯೊಡನೆ ತಿಳುವಳಿಕೆ ಪತ್ರ ಹಾಗೂ ಎಂ.ಓ ಅರ್ಜಿ ಕಳಿಸುವಲ್ಲಿ ವಿಳಂಬಿಸಿದ್ದಲ್ಲ. ಆದರೆ ಅದನ್ನು ಮರೆವಿನಲ್ಲೋ ನಿರಾಸಕ್ತಿಯಲ್ಲೋ ಬಳಸದೇ ಉಳಿದವರಿಗೆ ಸಂಚಿಕೆಯನ್ನು ಸಾಲದಲ್ಲಿ ಕಳಿಸಿ, ಬಾಕಿ ವಸೂಲಿಗೆ ಒತ್ತಾಯಿಸುವ, ಗಿಂಜುವ ಪ್ರಸಂಗ ತಂದುಕೊಂಡದ್ದೂ ಇಲ್ಲ. ಮತ್ತೆ ಇಂಥ ಸಂಪಾದಕೀಯ ಟಿಪ್ಪಣಿಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಆರ್ಥಿಕ ಬಿಕ್ಕಟ್ಟಿನ ಉಲ್ಲೇಖ, ಚಂದಾ ನವೀಕರಣದ ಕೊರತೆಯ ಕೊರಗು ಇತ್ಯಾದಿ ತೋಡಿಕೊಂಡದ್ದೂ ಇಲ್ಲ. ಬದಲಿಗೆ, ಕೊನೆಯೆರಡೂ ಸಂಚಿಕೆಗಳಲ್ಲಿ ಚಂದಾದಾರರಿಗೆ ತಾವೇ ಬಾಕಿಯುಳಿಸುವ ಹಣ ಮರಳಿಸುವ ಸ್ಪಷ್ಟ ಮಾತಿತ್ತು. ಇನ್ನೂ ಮುಖ್ಯವಾದದ್ದು ಮತ್ತು ಅವರು ಹೇಳದ ಉಳಿದದ್ದು – ತಾನು ಉದ್ದೇಶಿಸಿದ ಗುಣಮಟ್ಟದ ಹರಕೆಯನ್ನು ಇನ್ನೊಬ್ಬರ ಮೇಲೆ ಹೇರದ ನಿಲುವು. (“ಸಾರ್, ನೀವು ಬರ್ಬೇಕೂಂತಿಲ್ಲಾ. ನಿಮ್ಮೆಸ್ರಾಕ್ಕಂಡಿರ್ತೀವಿ” ಎನ್ನುವ ಎಷ್ಟೂ ಸಂಕಟಕರನ್ನೂ ‘ಕೀರ್ತಿಶೇಷ’ರಾಗಲು ಬಯಸುವವರನ್ನೂ ನಾನು ಕಂಡ ಬೆಳಕಿನಲ್ಲಿ.) ವಿವೇಕ ಇವರಿಗೆ ಅನ್ವರ್ಥನಾಮ!

ದೇಶಕಾಲ ಹೊರಟ ಹೊಸತರಲ್ಲಿ ವಿವೇಕ್ ಮಿತ್ರ ಬಳಗದೊಡನೆ (ಜಯಂತ ಕಾಯ್ಕಿಣಿ, ಕೆವಿ ಅಕ್ಷರ ಬಿಟ್ಟು ಇತರರು ನನಗೆ ನೆನಪಾಗುತ್ತಿಲ್ಲ) ಕರ್ನಾಟಕದ ಕೆಲವು ಮುಖ್ಯ ಸಾಹಿತ್ಯಿಕ ನೆಲೆಗಳಿಗೆ ಭೇಟಿ ಕೊಟ್ಟಿದ್ದರು. ಹಾಗೇ ಮಂಗಳೂರಿಗೆ ಬಂದಾಗ ಇವರು ದಾಸಜನದ ಸಹಕಾರದಲ್ಲಿ ಸಮಾನಮನಸ್ಕರೊಡನೆ ಒಂದು ಸಂವಾದ ಸಭೆಯನ್ನೂ ನಡೆಸಿದ್ದರು. ಅಲ್ಲಿ ತಮ್ಮ ಪ್ರಯೋಗದ ರೂಪರೇಖೆಗಳನ್ನು ಹೇಳಿಕೊಂಡಿದ್ದರು. ಈ ಏಳು ವರ್ಷ ಅದಕ್ಕೆ ತಪ್ಪದೆ ನಡೆದುಕೊಂಡಿದ್ದಾರೆಂದೂ ಬಂದಷ್ಟೂ ಸಂಚಿಕೆಗಳು ಸಾರುತ್ತವೆ. ಹೆಚ್ಚುವರಿಯಾಗಿ ಅವರದೇ ಒಂದು ಸಂಚಿಕೆಯಲ್ಲಿ ಬಂದ ಕವನ ಪುಟಗಳ ಮಹತ್ತ್ವ ಮನಗಂಡು, ಅದನ್ನು ಪ್ರತ್ಯೇಕ ಪುಸ್ತಕವನ್ನಾಗಿಯೂ ಪ್ರಕಟಿಸಿ ಮಾರಾಟಕ್ಕೆ ಬಿಟ್ಟಿದ್ದರು. (ಮುಂದುವರಿದು ಚಂದಾದಾರರಿಗೆ ವರ್ಷಕ್ಕೊಂದು ಉಚಿತ ಪುಸ್ತಕವನ್ನು ಕೊಡುವ ಯೋಚನೆಯನ್ನೂ ನನ್ನೊಂದಿಗೆ ಒಮ್ಮೆ ಹಂಚಿಕೊಂಡಿದ್ದರು. ಆದರೆ ನಡೆಯಲಿಲ್ಲ, ಯಾಕೇಂತ ನಾ ಕೇಳಲಿಲ್ಲ) ಐದನೇ ವರ್ಷಕ್ಕೆ ತಂದ ವಿಶೇಷ ಸಂಚಿಕೆಯಂತೂ ಅಪೂರ್ವ ದಾಖಲೆಯನ್ನೇ ಮಾಡಿತು. ಯಾವುದೇ ಮಾರ್ಕೆಟಿಂಗ್ ತಂತ್ರಗಳಿಲ್ಲದೆ ನಿಯತಕಾಲಿಕ ಒಂದರ ವಿಶೇಷ ಸಂಚಿಕೆ ಮರುಮುದ್ರಣ ಕಂಡಿತ್ತು!

ಸ್ವಾರ್ಥಕ್ಕೆ ಸಮುದಾಯದ ಮುಖವಾಡ ತೊಡಿಸುವವರು ದೇಶಕಾಲದ ವಿರುದ್ಧ ಅಪಸ್ವರ ತೆಗೆದದ್ದನ್ನು ನಾನು ಎರಡು ಬಾರಿ ಕಂಡೆ. ಮೊದಲ ಎರಡೋ ಮೂರೋ ಸಂಚಿಕೆಗಳು ಬಂದಾಗಲೇ ಇಲ್ಲೊಬ್ಬ ಚುಟುಕು ಕವಿ ನನ್ನಂಗಡಿಯಲ್ಲಿ ಚಡಪಡಿಸಿದ “ದಕ ಜಿಲ್ಲೆಗೆ ಪ್ರಾತಿನಿಧ್ಯ ಕೊಟ್ಟದ್ದು ಸಾಲದು.” ತನ್ನಲ್ಲೇ ಜಿಲ್ಲೆಯನ್ನು ಪ್ರಾತಿನಿಧಿಸುವ ಯೋಗ್ಯತೆ ಇದೆ ಎಂಬಂತೆ ಸೂಚಿಸಿದ ಆತನ ದಾರ್ಷ್ಟ್ಯ ನೋಡಿ, “ಈ ಖಾಸಗಿ ಪ್ರಯತ್ನದಲ್ಲಾದರೂ ಬೌದ್ಧಿಕ ಪ್ರಾತಿನಿಧ್ಯಕ್ಕಷ್ಟೇ ಬೆಲೆ ಕೊಟ್ಟರೆ ಸಾಕು” ಎಂದು ನಾನು ಸಿಡುಕಿದೆ. ನಗೆಹನಿಗಳಿಗೆ ಪ್ರಾಸ ಹೊಂದಿಸುವಲ್ಲೇ ತಿಣುಕುತ್ತಿದ್ದ ಆ ಪ್ರತಿಭಾವಂತ ಬಾಲ ಮುದುರಿಕೊಂಡ. ಆದರೆ ದೇಶಕಾಲದ ಐದನೇ ವರ್ಷದ ವಿಶೇಷ ಸಂಚಿಕೆ ಬಂದಾಗ ಬೇರೆ ಕೆಲವು ಬುದ್ಧಿವಂತರು ಮತೀಯ ಪ್ರಾತಿನಿಧ್ಯದ ಕ್ಯಾತೆ ತೆಗೆದರು! ಅದರ ಲೇಖಕರ ಜಾತಿಯ ಎಳೆಗಳನ್ನು ಹುಡುಕಿ ಅಪಸ್ವರ ತೆಗೆದರು. ‘ವಾಚಕತ್ವ’ ಏರಿಸಿಕೊಳ್ಳುವ ಚಪಲದಲ್ಲಿ ಒಂದೆರಡು ಅಂತರ್ಜಾಲ ಪತ್ರಿಕೆಗಳೂ ಮುದ್ರಣ ಮಾಧ್ಯಮದ ನಾಮಖ್ಯಾತರೂ ವರ್ಣರಂಜಿತವಾಗಿ ವಾಂತಿಮಾಡಿಕೊಂಡರು. ದೇಶಕಾಲದ ಸಂಪಾದಕೀಯ ಮಿತ್ರರು ಯಾರೂ ಪ್ರತಿಕ್ರಿಯಿಸಲಿಲ್ಲ. ಆದರೆ ಸ್ವಂತ ಉಮೇದಿನಲ್ಲಿ ಸಮಯ, ಶ್ರಮ ಮತ್ತು ಹಣ ಹಾಕಿ ಪ್ರಕಟಿಸುವವರನ್ನು, ಯಾರನ್ನೂ “ಕೊಳ್ಳಿ, ಓದಿ” ಎಂದು ಜುಲುಮೆ ಮಾಡದೇ ಗಟ್ಟಿ ಓದುಗ ವರ್ಗ ಗಳಿಸಿದವರನ್ನು (ನನ್ನಲ್ಲಿ ಒಂದು ಅವಧಿಗೆ ಸರಾಸರಿ ಹತ್ತು ಮಂದಿ ಚಂದಾ ನವೀಕರಣಕ್ಕೆ ಬರುತ್ತಿದ್ದರು. ಪ್ರತಿ ಸಂಚಿಕೆಯ ಮೂವತ್ತರಿಂದ ನಲ್ವತ್ತು ಪ್ರತಿಗಳು ಬಿಡಿಯಾಗಿ ಮಾರಿಹೋಗುತ್ತವೆ.) ನಡೆಸಿಕೊಳ್ಳುವ ಕ್ರಮ ಇದಲ್ಲ ಎಂದು ನನ್ನ ಸಹನೆ ಕಟ್ಟೆಯೊಡೆಯಿತು. ಅಂತರ್ಜಾಲದಲ್ಲೊಂದು ಟಿಪ್ಪಣಿಸಿದೆ – ಹಿಂದೆ ಶಿವರಾಮ ಕಾರಂತರ ರಂಗಪ್ರಯೋಗ ನೋಡಿದವರೊಬ್ಬರು, ಪತ್ರಿಸಿ, ಸಲಹೆಗಳ ಮಹಾಪೂರ ಹರಿಸಿದರಂತೆ. ಪ್ರತಿಕ್ರಿಯೆಯಲ್ಲಿ ಕಾರಂತರು ಎಂದೂ ನಿಧಾನಿಸಿದವರಲ್ಲ. ಠಪ್ಪೆಂದು ಕಾರ್ಡಿಸಿದರಂತೆ, ‘ನಿಮ್ಮ ಪತ್ರ. ಆ ಸಲಹೆಗಳನ್ನು ಅಳವಡಿಸಿ ನೀವೇ ಒಂದು ರಂಗಪ್ರಯೋಗ ನಡೆಸಿ.’ ಹೀಗೆ ಬರೆದ ನನ್ನ ಟಿಪ್ಪಣಗೆ ಸಟ್ಟೆಂದು ಅನಾಮಧೇಯನೊಬ್ಬ ಕಟಕಿಯಾಡಿದ – ‘ಸಂಸ್ಕೃತ ಭೂಯಿಷ್ಟ ವಿಜ್ಞಾನ ಸಾಹಿತ್ಯ ಪ್ರಚುರಿಸುವವರಿಂದ ಏನು ತಿಳಿಯಬೇಕಿಲ್ಲ.’ ಎಲ್ಲೆಲ್ಲಿನ ಲೆಕ್ಕ ಇಲ್ಲಿ ತೀರಿಸಹೊರಟದ್ದು ತಿಳಿದ ಮೇಲೆ ನಾನೂ ಮೌನಿಯಾದೆ.

ಇಪ್ಪತ್ತು ವರ್ಷಗಳ ಹಿಂದೆ ನಾನು ಪುಸ್ತಕ ಪ್ರಕಾಶನಕ್ಕೆ ತೊಡಗಿದಾಗ ಸ್ಪಷ್ಟವಾಗಿ ಓದುಗರನ್ನೇ ಉದ್ದೇಶಿಸಿದ್ದೆ. ಯಾರನ್ನೂ ಯಾಚಿಸದೆ, ಸುಲಭ ಬೆಲೆಯಲ್ಲಿ, ಉತ್ತಮ ಸಾಹಿತ್ಯ ಕೊಡುವ ಸಂಕಲ್ಪದಲ್ಲಿ ಪುಸ್ತಕಗಳನ್ನು ಸರಳವಾಗಿ ಪ್ರಕಟಿಸುತ್ತಿದ್ದೆ. ಆದರೆ ವಿವೇಕ ಶಾನಭಾಗ್ (ಸ್ವತಂತ್ರವಾಗಿ) ಇದರಿಂದಲೂ ಮುಂದುವರಿದು ದೇಶಕಾಲ ಹೊರನೋಟಕ್ಕೂ ಸುಂದರವಾಗುವಂತೆ, ದೀರ್ಘಕಾಲ ಬಾಳುವಂತೆ ತಮ್ಮ ಹಣ ತೊಡಗಿಸಿದರು. ಸಾಮಾನ್ಯವಾಗಿ ಎಲ್ಲ ಪತ್ರಿಕೆಗಳು ಬಳಸುವ ಜಾಹೀರಾತಿನ ಆದಾಯವನ್ನೂ ಇವರು ನಿರಾಕರಿಸಿದರು. ಚಂದಾದಾರರಿಗೆ ರಿಯಾಯ್ತಿ ದರದಲ್ಲಿ ಕೊಡುವುದರೊಡನೆ, ತಲಪಿಸುವ ವೆಚ್ಚ ಮತ್ತು ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡರು. (ಬಿಡಿ ಸಂಚಿಕೆಗೆ ರೂ ಒಂದು ನೂರು. ವಾರ್ಷಿಕ ಚಂದಾ ಅಂದರೆ ನಾಲ್ಕು ಸಂಚಿಕೆಗೆ ಮುನ್ನೂರು; ಸಾಗಣೆ ಉಚಿತ.) ಇವರ ಘನ ಉದ್ದೇಶದ ಅರಿವಾಗಿ ನಾನು ನನ್ನ ಮಳಿಗೆಯ ಮಟ್ಟದಲ್ಲಿ ಸಂಚಿಕೆಗಳ (ಉಚಿತ) ವಿತರಣೆಗೆ ಮುಂದಾಗಿದ್ದೆ. ಆದರೆ ವಿವೇಕ್ ಬಿಡಿಸಂಚಿಕೆಗಳಿಗೆ ನ್ಯಾಯವಾದ ವ್ಯಾಪಾರೀ ವಟ್ಟಾವನ್ನು ಕಡ್ಡಾಯವಾಗಿ ಕೊಟ್ಟೇ ನಡೆಸಿಕೊಂಡರು. ಇವರೇ ಆಹ್ವಾನಿಸಿ, ಪ್ರಕಟಿಸಿದ ಲೇಖನಗಳಿಗೆ ಅಯಾಚಿತ (ಮತ್ತು ಅನಿರೀಕ್ಷಿತ) ಗೌರವಧನ ಮತ್ತು ಪ್ರತಿ ಕೊಡುವುದನ್ನು ನಾನೂ ಮಗ ಅಭಯಸಿಂಹನೂ ಅನುಭವಿಸಿದ್ದೇವೆ. ಕುಹಕಿಗಳು ದೇಶಕಾಲದ ಶಿಸ್ತನ್ನು “ಕಾರ್ಪೊರೇಟ್ ಜಗತ್ತಿನ ಥಳಕು” ಎಂದು ಗೇಲಿ ಮಾಡಿದ್ದಿದೆ. ಆದರೆ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿಯಂಥವರು ಸ್ವತಃ ನಿಯತಕಾಲಿಕಗಳನ್ನು ನಡೆಸಲು ಇಳಿದಾಗ ಸೋತದ್ದೇ ಈ ಶಿಸ್ತಿನ ಕೊರತೆಯಲ್ಲಿ ಎಂದು ನಾನೇ ಅನುಭವಿಸಿದ್ದೇನೆ. ಇಲ್ಲಿ ಒಳ್ಳೆಯದನ್ನು ಕೊಟ್ಟೂ ಸರಿಯಾಗಿರುವುದನ್ನು ಗೇಲಿ ಮಾಡಿದವರ ಮನಸ್ಥಿತಿ ಬಗ್ಗೆ ಕನಿಕರ ಮೂಡುತ್ತದೆ. (ಅಶಿಸ್ತು ಅಥವಾ ವಿಕ್ಷಿಪ್ತತೆ ಸೃಜನಶೀಲ ಮನಸ್ಸಿನ ಇನ್ನೊಂದು ಮುಖವೆಂದೇ ಭಾವಿಸುವುದು ತಪ್ಪು.) ವಿವೇಕರ ಶಿಸ್ತಿಗೆ ಕೇವಲ ಎರಡು ಉದಾಹರಣೆಗಳು.

ಪ್ರತಿ ಮೂರನೇ ತಿಂಗಳ ಹದಿನೈದನೇ ತಾರೀಕಿನೊಳಗೆ ದೇಶಕಾಲದ ಹೊಸ ಸಂಚಿಕೆ ಓದುಗರನ್ನು ಮುಟ್ಟುತ್ತಲೇ ಬಂದಿದೆ. ಇದಕ್ಕಾಗಿ ಚಂದಾದಾರರ ಊರಿನ ಅನುಕೂಲ ನೋಡಿಕೊಂಡು ಕೊರಿಯರ್ರೋ ಅಂಚೆಯ ಮೂಲಕವೋ ಎರಡು ಮೂರು ದಿನ ಮೊದಲೇ ವ್ಯವಸ್ಥೆ ಮಾಡುತ್ತಿದ್ದರು. ಮಂಗಳೂರಿನ ಗೆಳೆಯರೊಬ್ಬರು ಒಮ್ಮೆ, ಕಾಲಮಿತಿಯಾಚೆ ಮೂರು ದಿನದ ಮೇಲೆ, “ಇನ್ನೂ ಬರಲಿಲ್ಲ” ಎಂದು ದೂರು ಗಂಟೆ ಜಗ್ಗಿದರು (ವಿವೇಕರ ಚರವಾಣಿಗೆ ಕರೆ ಕೊಟ್ಟರು). ವಿವೇಕ್ ನನ್ನಲ್ಲಿಗೆ ಮಾರಾಟಕ್ಕೆ ಬಂದಿದ್ದ ಸಂಚಿಕೆಯಿಂದ ಉಚಿತ ಪ್ರತಿ ಕೊಡಲು ನನಗೂ ಪಡೆದುಕೊಳ್ಳಲು ಅವರಿಗೂ ಮರುಕ್ಷಣದಲ್ಲೇ ಸೂಚನೆ ಕೊಟ್ಟರು. (ನ್ಯಾಷನಲ್ ಜಿಯಾಗ್ರಫಿಕ್ ಅಂಥಾ ಘನ ನಿಯತಕಾಲಿಕಗಳು ಹೀಗೆ ಮಾಡುವುದನ್ನು ಕೇಳಿದ್ದೆ. ನಿಜ ಓದುಗರು ಅನಾವಶ್ಯಕ ಎರಡನೇ ಸಂಚಿಕೆಗಾಗಿ ಸುಳ್ಳು ಹೇಳರು.) ಇನ್ನೊಮ್ಮೆ ಹೊರ ಊರಿನ ಚಂದಾದಾರ – ಪಾದೇಕಲ್ಲು ಸುಬ್ರಹ್ಮಣ್ಯರಿಗೆ, ಹೀಗೇ ಆಯ್ತು. ಅವರೂ ದೂರು ದಾಖಲಿಸಿದರು. ವಿವೇಕ್ ಅವರಿಗೆ ಮಂಗಳೂರಿಗೆ ಹೋಗಿ ಪ್ರತಿ ಸಂಗ್ರಹಿಸಲು ಹೇಳಲಿಲ್ಲ. ಕೂಡಲೇ ಮತ್ತೊಂದೇ ಪ್ರತಿಯನ್ನು ಅಂಚೆಯಲ್ಲಿ ಕಳಿಸಿದರು. ಎರಡು ದಿನ ಬಿಟ್ಟು ರಾತ್ರಿ ಸುಬ್ರಹ್ಮಣ್ಯ ಮನೆಯಲ್ಲಿರುವ ಹೊತ್ತು ನೋಡಿ, ದೂರವಾಣಿಸಿ, ಪ್ರತಿ ಸಿಕ್ಕಿತೇ ಎಂದು ವಿಚಾರಿಸಿಕೊಂಡರು. ಇದರ ಮೇಲೂ…

ದೇಶಕಾಲ ನಿಲ್ಲುತ್ತದೆ ಎಂದಾಕ್ಷಣ, “ಛೆ, ಲಾಸಾಗಿರಬೇಕು, ಜಾಹೀರಾತೋ ಸ್ಪಾನ್ಸರೋ ಹಿಡೀಬೇಕಿತ್ತು” ಎಂದವರಿದ್ದಾರೆ. ಆದರೆ ನನ್ನ ತಿಳುವಳಿಕೆಯಂತೆ ಇದು ಎಂದೂ ವಾಣಿಜ್ಯ ಸರಕಾಗಿರಲೇ ಇಲ್ಲ! ದೊಡ್ಡ ಹಣದ ಗಂಟಿನೊಡನೆ ಇಳಿದು, ನಾಳೆ ದ್ವಿಗುಣ ತೆಗೆಯುವ ಕನಸು ಇಂಥಾ ಸಾಪ್ತಾಹಿಕಕ್ಕೆ ದೂರದ ಮಾತು. ಹೊಸ ಸಾಪ್ತಾಹಿಕವೊಂದು ಮೊದಲ ಹೆಜ್ಜೆಗಳನ್ನು ಚೆನ್ನಾಗಿಯೇ ಇಡುತ್ತಿದ್ದಂತೆ “ಇದು ಗಿಟ್ಟಲ್ಲಾ” ಅಂತ ಮುಚ್ಚುಗಡೆ ಮಾಡಿದ ಅಥವಾ ತದ್ವಿರುದ್ಧವಾಗಿ ಭರದಿಂದ ಸಾಗುವ ದಿನಪತ್ರಿಕೆಯನ್ನು ಒಳ್ಳೇ ಬೆಲೆ ಬಂತೂಂತ ಇನ್ಯಾರಿಗೋ ಮಾರುವವರ ಧೋರಣೆಯೇ ವಿವೇಕರದ್ದಲ್ಲ. ವಾಸ್ತವದಲ್ಲಿ ಇವರ ಸಂಪಾದಕೀಯಗಳು ಎಂದೂ ನಿರ್ವಹಣೆಯ ಕುರಿತು ಮಾತಾಡಿದ್ದೇ ಇಲ್ಲ. ಸದ್ಯದ ೨೮ನೇ ಸಂಚಿಕೆಯಲ್ಲಿ ಸ್ವಲ್ಪ ಹೇಳಿಕೊಂಡಿದ್ದರೂ “ಜೊತೆ ನಿಂತವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಮತ್ತು ಇಚಿಥಾ ಹೊಸ ಪತ್ರಿಕೆ ಹುಟ್ಟು ಹಾಕಲು ಹೊರಡುವವರಿಗೆ ಮಾರ್ಗದರ್ಶಿಸಲು” ಸೀಮಿತಗೊಳಿಸಿದ್ದಾರೆ. ಇನ್ನು ಪುರುಸೊತ್ತಿನ ಮಾತು…

“ಅವರಿಗೆ ಟೈಮ್ ಇಲ್ಲದಿದ್ದರೆ ಇನ್ಯಾರಿಗಾದರೂ (ಸಂಬಳಕ್ಕೋ, ಕ್ರಯಕ್ಕೋ) ವಹಿಸಿಕೊಡಬೇಕಿತ್ತು” ಎನ್ನುವವರಿಗೂ ಕೊರತೆಯಿಲ್ಲ. ಈ ಸಮಯ ಎನ್ನುವುದು ಅಷ್ಟು ಸರಳ ವಿಷಯವಲ್ಲ. ಮೊದಮೊದಲ ಉತ್ಸಾಹದಲ್ಲಿ ವಿವೇಕರಿಗೆ ಮೂರು ತಿಂಗಳು ತುಂಬ ದೊಡ್ಡ ಸಮಯವೆಂದೇ ಕಂಡಿರಬೇಕು. ಪ್ರಜಾವಾಣಿಯ ಸಹಯೋಗದಲ್ಲಿ ಪ್ರತ್ಯೇಕ ಮಾಸಿಕ ಸಾಹಿತ್ಯಕ ಪುರವಣಿಯೊಂದನ್ನೂ ಸಂಪಾದಿಸ ತೊಡಗಿದ್ದರು. ಅದರ ಮೇಲೆ, ಎಷ್ಟೋ ಬಾರಿ ನಾನವರನ್ನು ಅಂತರ್ಜಾಲದಲ್ಲಿ ಕಂಡು, ಲೋಕಾಭಿರಾಮವಾಗಿ ಸಂವಾದಕ್ಕೆ ಎಳೆದಾಗ ‘ಜಪಾನಿನಲ್ಲಿದ್ದೇನೆ, ಅಮೆರಿಕಾದಲ್ಲಿದ್ದೇನೆ’ ಎಂದೆಲ್ಲಾ ಹೇಳುತ್ತಿದ್ದರು. ಇವೆಲ್ಲಾ ಅವರ ವೃತ್ತಿ ಸಂಬಂಧದ ಪ್ರವಾಸಗಳೇ ಇರಬಹುದು. ಆದರೆ ಅವರ ದಿನಕ್ಕೂ ಇಪ್ಪತ್ನಾಲ್ಕೇ ಗಂಟೆಗಳು! ಮತ್ತೆ ತನ್ನೆಲ್ಲಾ ಅಭಿವ್ಯಕ್ತಿಗೆ ಮಾಧ್ಯಮ ದೇಶಕಾಲ ಎಂದೂ ವಿವೇಕ್ ತೊಡಗಿದವರಲ್ಲ. ಇನ್ಯಾವನೇ ಸಂಪಾದಕ ಅಂಥ ವಿದೇಶೀ ಅನುಭವಗಳನ್ನು ತನ್ನ ಪತ್ರಿಕೆಯಲ್ಲಿ ಹಿಂಜದೆ ಬಿಡುತ್ತಿರಲಿಲ್ಲ. ಗುಣಪಕ್ಷಪಾತಿಯಾದ ವಿವೇಕ್, ದೇಶಕಾಲದಲ್ಲಿ ಎಂದೂ ಆತ್ಮಕಥನಕ್ಕೆ ಇಳಿದವರಲ್ಲ! ತನ್ನ ವಾಣಿಜ್ಯರಂಗದ ಅನುಭವಗಳನ್ನು ಸಾಹಿತ್ಯ, ಕಲೆಗಳ ಒಲವಿಗೆ ಬೆರಕೆ ಮಾಡಲಿಲ್ಲ. ಆದರೆ ಇನ್ನು ಯಾವುದೋ ಪ್ರಕಟಣೆ ತಮ್ಮ ಓದುಗರಿಗೆ ಶಿಫಾರಸು ಯೋಗ್ಯವಾಗಿ ಕಾಣಿಸಿದಾಗ ದೇಶಕಾಲದಲ್ಲಿ (ಉಚಿತ) ಜಾಹೀರಾತಿನಂತೇ ಪ್ರಕಟಿಸಿದ್ದನ್ನು ನೋಡಿದ್ದೇನೆ. ಹೀಗೆ ಖಡಕ್ ಧೋರಣೆಯ ಪತ್ರಿಕೆಯನ್ನು ಯಾವುದೋ ಕೌಟುಂಬಿಕ ನಿಯತಕಾಲಿಕದ ನೆಲೆಯಲ್ಲಿ ಮಾತಾಡಿದವರ ಕಾಳಜಿ ಎಷ್ಟೇ ದೊಡ್ಡದಿರಲಿ, ನಗೆ ತರಿಸುತ್ತದೆ. ಮೊದಲು ಪ್ರಜಾವಾಣಿಯಿಂದ ಕಳಚಿಕೊಂಡು, ಈಗ ಮೂಲ ಪತ್ರಿಕೆಯನ್ನೇ ನಿಲ್ಲಿಸುವ ಅವರ ದಿಟ್ಟ ನಿಲುವಿಗೆ ನಾನು ಹೇಳಬಹುದಾದ್ದು ಇಷ್ಟೇ – ಸಖೇದ ಅಭಿನಂದನೆಗಳು. ಅನಿರ್ದಿಷ್ಟ ವಿರಾಮವನ್ನು ಬೇಗ ಮುಗಿಸಿ, ಇನ್ನಷ್ಟು ಮಾಗಿ ಬರಲಿ.

[ವಿಶೇಷ ಸೂಚನೆ: ದೇಶಕಾಲದ ಸದ್ಯದ ಕೊನೆಯ ಸಂಚಿಕೆ (ಇಪ್ಪತ್ತೆಂಟನೆಯದು) ನನ್ನಲ್ಲಿಗೆ ನಲ್ವತ್ತು ಪ್ರತಿಗಳು ಬಂದಿವೆ. ಉಳಿದಂತೆ ೧೭,೧೯,೨೦,೨೪,೨೫,೨೭ನೇ ಸಂಚಿಕೆಗಳ ಕೆಲವು ಪ್ರತಿಗಳು ಉಳಿದಿವೆ. ಅಗತ್ಯ ಇದ್ದವರು ತಲಾ ರೂ ಒಂದು ನೂರು + ಅಂಚೆ ವೆಚ್ಚ ಕಳಿಸಿ]

******

ಮೂವತ್ತಾರು ವರ್ಷಗಳ ಹಿಂದೆ ಹೊಟ್ಟೆಪಾಡಿಗೇ ಆದರೂ ಒಂದು ಆದರ್ಶದೊಡನೆ ಅತ್ರಿ ಬುಕ್ ಸೆಂಟರ್ ಕಟ್ಟುತ್ತ ಹೊರಟವ ನಾನು. ಸುಮಾರು ಮೂರು ವರ್ಷಗಳ ಹಿಂದೆ ಮೊಳೆದ ಯೋಚನೆಯಂತೆ, ಈಗ ಅದನ್ನು ಮುಚ್ಚುವ ಯೋಜನೆ ಗಟ್ಟಿ ಮಾಡಿದ್ದೇನೆ. ಅದರ ಬೆಳಕಿನಲ್ಲಿ, ದೇಶಕಾಲ ಮುಚ್ಚುವ ವಿವೇಕ್ ಶಾನಭಾಗ್ ನಿರ್ಧಾರ ತುಂಬಾ ಅರ್ಥಪೂರ್ಣವಾಗಿ ಕಂಡದ್ದರಿಂದ ಇಷ್ಟು ಬರೆಯಲೇ ಬೇಕಾಯ್ತು. ಮುಂದಿನ ಲೇಖನ
ಅತ್ರಿ ಮುಚ್ಚುಗಡೆ