ದೇವಕಿ ಹಾಗೂ ನಾನು

ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ. ಹೆಚ್ಚು ಕಡಿಮೆ ಶೂನ್ಯ ಬಂಡವಾಳದಿಂದ ತೊಡಗಿದ ಈ ಮಳಿಗೆಗೆ ಡಿವಿಕೆ ಮೂರ್ತಿಯವರು ಪ್ರಧಾನ ಪ್ರೇರಕರು ಮತ್ತು ಶುದ್ಧ ವ್ಯಾವಹಾರಿಕವಾಗಿ ಪೋಷಕರು. ಉಳಿದಂತೆ ನನ್ನ ತಂದೆಯ ನಾಮದ ಬಲದಲ್ಲಿ ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಮತ್ತು ಇಂಗ್ಲಿಷಿನ ಕೆಲವು ಪ್ರಕಾಶಕರೂ ವಿತರಕರೂ ಬೇಕಾದ ಪುಸ್ತಕಗಳನ್ನು ಕೊಟ್ಟು, ನಾನು ಅನಿರ್ದಿಷ್ಟ ಕಾಲಾನಂತರ ಪಾವತಿ ಕೊಟ್ಟಂತೆ ಒಪ್ಪಿಸಿಕೊಂಡು ಸಹಕರಿಸಿದ್ದಾರೆ. ಮೈಸೂರಿನಲ್ಲಿ ಕುಳಿತು, ಕರ್ನಾಟಕ ಮಟ್ಟದಲ್ಲಿ ಯೋಚಿಸಿ ನಾನು ಮಂಗಳೂರು ಆಯ್ದುಕೊಂಡಾಗ ನೆನಪಾದ ಏಕೈಕ ಹೆಸರು ಬಿ.ವಿ ಕೆದಿಲಾಯರದ್ದು. ಅವರು ಮತ್ತು ಹಾಗೇ ಪ್ರೀತಿಯೊಂದೇ ಕಾರಣವಾದ ಪುತ್ತೂರಿನ ಅಜ್ಜನ ಮನೆಯ ಸಂಬಂಧಿಕರು, ತಂದೆಯ ಅಸಂಖ್ಯ ಗುರು, ಮಿತ್ರ ಮತ್ತು ಶಿಷ್ಯ ಬಳಗ (ತಂದೆ ಹಿಂದೆ ಇಲ್ಲಿ ವಿದ್ಯಾರ್ಥಿಯಾಗಿಯೂ ಅಧ್ಯಾಪಕನಾಗಿಯೂ ಸ್ವಲ್ಪ ಕಾಲ ದುಡಿದಿದ್ದರು), ನನ್ನದೇ ಮಿತ್ರ ಬಳಗ, ಸಂಬಂಧಿಕರೆಲ್ಲ ನನಗೊದಗಿದ ವಿಶೇಷವರ್ಗವೆಂದೇ ಹೇಳಬೇಕು. ಇತ್ತ ಹೊರಳಿದರೆ, ನಾಲ್ಕಾಣೆ ಸ್ತೋತ್ರಕ್ಕಾಗಿ ಬಂಗಾಡಿ ಮೂಲೆಯಿಂದ ಅಂಗಡಿಗೆ ಧಾವಿಸಿ ಬರುವವರಿಂದ ಹಿಡಿದು, ಇಂದು ಇಡಿಯ ಅಂಗಡಿ ಕೊಳ್ಳುವವರವರೆಗೆ ವ್ಯಕ್ತಿ, ಸಂಸ್ಥೆಗಳು ಪ್ರೋತ್ಸಾಹಿಸಿದ್ದಾರೆ. ಒಳಗೆ ನೋಡಿದರೆ ಇದ್ದು, ಬಿಟ್ಟ, ಮುರಳೀಧರ, ಮಂಜುನಾಥ, ದಿವಾಕರ, ಪ್ರಕಾಶರಾದಿ ಮಸಕು ಮುಖಗಳ ಎದುರು ಹಲವು ವರ್ಷಗಳಿಂದ ಇಂದಿನವರೆಗೂ ವಿಶೇಷವಾಗಿ ನಿಂತಿರುವ ಶಾಂತಾರಾಮನವರೆಗೆ ಸಹಾಯಕರ ಪ್ರೀತಿಯ ದುಡಿಮೆ ಕಾಣುತ್ತದೆ. ನನ್ನಷ್ಟೇ ಅತ್ರಿಯ ಮತ್ತು ನನ್ನ ಜೀವನದ ಭಾಗವೇ ಆಗಿರುವ ನನ್ನ ಅಪ್ಪ, ಅಮ್ಮ, ವಿಶೇಷವಾಗಿ ಹೆಂಡತಿ – ದೇವಕಿ, ಮತ್ತೆ ಮಗ – ಅಭಯರ ಬಗ್ಗೆ ಹೇಳಿದರೆ ಆತ್ಮಸ್ತುತಿಯಾದೀತು, ಹೇಳದಿದ್ದರೆ ಸ್ವಾರ್ಥವಾದೀತು! ಅವರೆಲ್ಲರ ಸವಿವರ ಸ್ಮರಣೆ ಒಂದು ಉದ್ಯಮದ ಆರೋಗ್ಯಪೂರ್ಣ ಬೆಳವಣಿಗೆಯ ದಾಖಲೀಕರಣಕ್ಕೆ ಅವಶ್ಯವೆಂಬ ಅರಿವು ನನಗಿದೆ. ಸಮಯಾನುಕೂಲ ನೋಡಿಕೊಂಡು ಮುಂದೆಂದಾದರೂ ಇಲ್ಲೇ ಕಂತುಗಳಲ್ಲೋ ಇಡಿಯಾಗಿಯೋ ಕೊಡಲು ಪ್ರಯತ್ನಿಸುತ್ತೇನೆ ಎಂಬ ಆಶ್ವಾಸನೆ ಮಾತ್ರ ಕೊಡುತ್ತಾ ೩೧-೩-೨೦೧೨ರಂದು ಅತ್ರಿ ಬುಕ್ ಸೆಂಟರ್ ಅನ್ನು ಖಾಯಂ ಮುಚ್ಚುತ್ತಿದ್ದೇನೆ.

ಜಿ.ಟಿ. ನಾರಾಯಣ ರಾವ್ ಹಾಗೂ ಲಕ್ಷ್ಮೀ ದೇವಿ

ಸ್ನಾತಕೋತ್ತರ ಪದವೀಧರನಾಗಿಯೂ ತಾಪೇದಾರಿಯನ್ನು (ಸಂಬಳಕ್ಕಾಗಿ ಇನ್ಯಾರದೋ ಕೆಳಗೆ ದುಡಿಯುವುದು) ನಿರಾಕರಿಸಿ ಸ್ವೋದ್ಯೋಗ ಆರಿಸಿಕೊಂಡೆ; ಪುಸ್ತಕ ವ್ಯಾಪಾರಿಯಾದೆ. “ನಾರಾಯಣ ರಾಯರಿಗೆ ಮಗನಿಗೊಂದು ಲೆಕ್ಚರರ್ ಕೆಲಸ ಕೊಡಿಸಕ್ಕಾಗಲಿಲ್ಲವೇ” ಎಂದವರಿಗೇನೂ ಕೊರತೆಯಿಲ್ಲ. ಅಂಥ ಮಾತುಗಳಿಂದೇನೂ ವಿಚಲಿತರಾಗದೆ ಅವರು “ಎಂದೂ ಸೋತೆ ಎನಿಸಿದರೆ ತಿಳಿಸು. ನಿನ್ನ ಪದವಿಗೆ ತಕ್ಕ ಕೆಲಸ ಕೊಡಿಸಿಯೇನು” ಕೊಟ್ಟ ಆಶ್ವಾಸನೆ ನನ್ನ ಬೆನ್ನಿಗೆ ಇದ್ದೇ ಇತ್ತು! ದಿನದ ಹನ್ನೆರಡು ಗಂಟೆ, ವಾರದ ಆರೂ ದಿನ ಪಟ್ಟು ಹಿಡಿದು ರೂಢಿಸಿದೆ. ಇಡೀ ದಿನ ಕುಳಿತು ಕೇವಲ ಹದಿಮೂರು ರೂಪಾಯಿ ವ್ಯಾಪಾರ ಮಾಡಿದ್ದಿತ್ತು. (ಈಚೆಗೆ ಕಡ್ಡಾಯ ರಜಾದಿನಗಳಲ್ಲೂ ಅನ್ಯ ಕೆಲಸಗಳಿಗೆಂದು, ಅರ್ಧ ಗಂಟೆ ಅರೆ ಬಾಗಿಲು ತೆರೆದರೂ ಸಾವಿರ ರೂಪಾಯಿ ವ್ಯಾಪಾರ ಆಗುವಲ್ಲಿಯವರೆಗೆ ವಿಕಸಿಸಿದೆ.) ಪುಸ್ತಕದ ಅಂಗಡಿ ಎಂದರೆ ಶಿಕ್ಷಣ ಸಂಸ್ಥೆಗಳ ಎಲ್ಲಾ ಅಗತ್ಯಗಳನ್ನು ಪೂರೈಸುವ ಮಳಿಗೆ ಎನ್ನುವ ಈ ವಲಯದ ಕಲ್ಪನೆಯನ್ನು ಮೀರಿ ನಿಂತೆ. ಸಾಮಾನ್ಯ ಓದಿಗೆ ಒದಗುವ ವೈವಿಧ್ಯಮಯ ಪುಸ್ತಕಗಳನ್ನು ಮುಖ್ಯವಾಗಿ ಕನ್ನಡ, ಇಂಗ್ಲಿಶ್ ಭಾಷೆಗಳಲ್ಲಿ ಆಯ್ದು ಸೇರಿಸುತ್ತಲೇ ಅವಶ್ಯಕತೆ ನೋಡಿಕೊಂಡು ಮರುಪೂರಣ ನಡೆಸುತ್ತಲೇ ವೈಯಕ್ತಿಕ ಬೇಡಿಕೆಗಳನ್ನು ಶೋಧಿಸಿ ಪೂರೈಸುವ ಪ್ರಯತ್ನ ಮಾಡುತ್ತಲೇ ಬೆಳೆದೆ. ಹಾಗೇ ಬಂದವರ ಇಷ್ಟಾನಿಷ್ಟಗಳನ್ನು ವಿಚಾರಿಸಿ, ಪುಸ್ತಕಗಳನ್ನು ಸೂಚಿಸುವ ಕೆಲಸವನ್ನೂ ಪ್ರೀತಿಯಿಂದ ಸ್ವಲ್ಪ ಸ್ವಲ್ಪ ಮಾಡಿದ್ದೇನೆ. ಗೈಡುಗಳು, ಪಠ್ಯ ಪುಸ್ತಕಗಳು, ಪಾಠಪಟ್ಟಿಗಳಲ್ಲೇ ಉಲ್ಲೇಖಿತ ನೇರ ಗ್ರಂಥಾಲಯ ತುಂಬುವ ಆಕರ ಗ್ರಂಥಗಳು ಇತ್ಯಾದಿ ಸುಲಭ ವ್ಯಾಪಾರದ ದಾರಿ ನಾನು ಅನುಸರಿಸಲಿಲ್ಲ. (ಈ ಧೋರಣೆಯ ಮುಂದುವರಿಕೆಯಾಗಿಯೇ ಬಹುಶಃ ನಾನು ಪ್ರಕಾಶನಕ್ಕಿಳಿದಾಗ ಸರಕಾರದ ಸಗಟು ಖರೀದಿಯನ್ನು ಸ್ವಂತಕ್ಕೆ ನಿರಾಕರಿಸಿದೆ, ಸಾರ್ವಜನಿಕದಲ್ಲಿ ಖಂಡಿಸಿದೆ) ಮತ್ತೆ ಮಳಿಗೆಯಲ್ಲಿ ವ್ಯಾಪಾರದ ಮಾತನ್ನು ಮೀರಿ ನನ್ನ ಹವ್ಯಾಸಿ ಆಸಕ್ತಿಗಳಿಂದ ಹಿಡಿದು, ಲೋಕದ ಎಲ್ಲಾ ವಿಚಾರಗಳನ್ನೂ ನೈಜ ಆಸಕ್ತಿಯಿಂದ ಚರ್ಚೆಗೆ ತರುತ್ತಿದ್ದೆ. ಬಿಡುವಿನ ವೇಳೆಗಳಲ್ಲಿ, ಎಷ್ಟೋ ಬಾರಿ ಏನೆಲ್ಲಾ ಸರ್ಕಸ್ ಮಾಡಿ ಸಮಯ ಹೊಂದಿಸಿಕೊಂಡು ಅನ್ಯ ಚಟುವಟಿಕೆ ಮತ್ತು ಬರವಣಿಗೆಗಳಲ್ಲಿ ತೊಡಗಿಕೊಳ್ಳುತ್ತಲೂ ಬಂದೆ. ಸಹಜವಾಗಿ ವ್ಯಾಪಾರ ವಿಕಸಿಸಿತು, ನಾನೂ ಬೆಳೆದೆ.

ಕೆದಿಲ್ಲಾಯರು ಅಂಗಡಿ ತೆರೆದ ಹೊಸದರಲ್ಲಿ ಊರಿನವರ ತಿಳುವಳಿಕೆಗೆ ಅಗತ್ಯವೆಂದು ಕೆಲವು ಪತ್ರಿಕಾ ಜಾಹೀರಾತು ಕೊಟ್ಟದ್ದಿದೆ, ಕೆಲವು ನಮೂನೆಯ ಕರಪತ್ರಗಳನ್ನು ಮಾಡಿ ವಿತರಿಸಿದ್ದೂ ಇತ್ತು. ತಮ್ಮ ಅನಿವಾರ್ಯ ಪ್ರಸರಣ ಸಂಖ್ಯೆಯನ್ನೇ ಓದುಗ ವ್ಯಾಪ್ತಿ ಎಂಬಂತೆ ಬಿಂಬಿಸುತ್ತಾ (“ನಿಮಗೆ ವೈಲ್ಡ್ ಪಬ್ಲಿಸಿಟಿ ಕೊಡ್ತೇವೆ”) ಬರುವ ವಿವಿಧ ಶಾಲೆ ಕಾಲೇಜುಗಳ ವಾರ್ಷಿಕ ಹರಿಕೆಗಳು ಜಾಹೀರಾತು ಕೋರಿ ಮನವಿಗಳನ್ನು ಕಳಿಸುತ್ತಲೇ ಇರುತ್ತವೆ. ಈಚೆಗಂತೂ ವಿಪರೀತಕ್ಕೆ ಮುಟ್ಟಿರುವ ಪ್ರಾಯೋಜಕತೆಗಳು ಮಳಿಗೆಯ ಮಿತಿಯನ್ನು ತಿಳಿಯುವ ಗೋಜಿಗೂ ಹೋಗದೆ (ಕರಾವಿನ ಹಸುವಿನ ಕುರಿತು ಹೇಳಿದಂತೆ) ರಕ್ತವನ್ನೇ ಹಿಂಡುವವರೆಗೂ ಮುಂದುವರಿಯುವುದು ಕಾಣುತ್ತಿದ್ದೇನೆ. ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮ ಪುಸ್ತಕಾವಶ್ಯಕತೆಗಳನ್ನು ನಾವು ಕೊಡುವ ‘ಸವಲತ್ತಿಗೆ’ (ಜಾಹೀರಾತೋ ಪುಸ್ತಕ ಉಡುಗೊರೆಯೋ ಪ್ರಾಯೋಜಕತ್ವವೋ ಇತ್ಯಾದಿ) ತಳುಕು ಹಾಕುವುದನ್ನು ನಾನು ಭ್ರಷ್ಟಾಚಾರವೆಂದೇ ಖಂಡಿಸಿದ್ದೇನೆ. ನನ್ನಲ್ಲಿ ಬಂದ ಪ್ರಾಂಶುಪಾಲ, ಗ್ರಂಥಪಾಲರಾದಿ ‘ಪ್ರಭಾವಿ’ಗಳನ್ನು ನಾನು ಸಮಾನರನ್ನಾಗಿ ನಡೆಸಿಕೊಂಡಿದ್ದೇನೆ, ಓಲೈಸಿದ್ದಿಲ್ಲ. ಕಾಪಿ ಊಟ ಬಿಡಿ, ಒಂದು ಡೈರಿ ಕ್ಯಾಲೆಂಡರ್ ಕೂಡಾ ಕೊಟ್ಟದ್ದಿಲ್ಲ (ಜಿಪುಣ?). [ನನ್ನ ಪೂರೈಕೆದಾರರಿಗೂ ನಾನು ಸದಾ ತಾಕೀತು ಮಾಡುತ್ತ ಬಂದದ್ದು ಇದನ್ನೇ – ಒಳ್ಳೇ ಪುಸ್ತಕ ಕೊಡಿ, ನ್ಯಾಯದ ವ್ಯಾಪಾರೀ ವಟ್ಟಾ ಕೊಡಿ.] ನಮ್ಮ ಕೆಲಸದಲ್ಲಿನ ಶ್ರದ್ಧೆ ಮತ್ತು ಜನರ ಬಾಯ್ದೆರೆ ಪ್ರಚಾರವೇ ಹೆಚ್ಚು ಪರಿಣಾಮಕಾರಿ ಎಂದು ಈಚಿನ ದಿನಗಳಲ್ಲಿ ಧಾರಾಳ ಕಂಡುಕೊಂಡಿದ್ದೇನೆ. ಆದರೂ ವಿವಿಧ ಸಂಸ್ಥೆಗಳಲ್ಲಿ ನನ್ನ ಸ್ನೇಹಿತ ಬಳಗ ಬೆಳೆದಿರುವುದು ನೋಡುವಾಗ, ಅತ್ರಿ ಆರ್ಥಿಕವಾಗಿ ಎಂದೂ ದುರ್ಬಲವಾಗದೇ ಸೋಲದೇ ನಡೆದದ್ದು ನೋಡುವಾಗ ಲೋಕದ ಒಳ್ಳೆತನದ ಬಗ್ಗೆ ನಂಬಿಕೆ ಗಟ್ಟಿಯಾಗುತ್ತದೆ. ನನ್ನ ತಂದೆಯ ಸಹಪಾಠಿಗಳು, ಗೆಳೆಯರು, ವಿದ್ಯಾರ್ಥಿಗಳು ಪ್ರಭಾವೀ ವ್ಯಕ್ತಿಗಳು ಈ ವಲಯದಲ್ಲಿ ಸಾಕಷ್ಟು ಇದ್ದರೂ ನನ್ನ ವ್ಯಾಪಾರ ವಿಸ್ತರಣೆಗೆ ಎಂದೂ ಅವರನ್ನು ಬಳಸಿಕೊಳ್ಳಲಿಲ್ಲ. ನನ್ನ ಪ್ರಕಾಶನಗಳನ್ನು ಗುಣೈಕ ಬಲದಿಂದ ಮಾರಲು ಪ್ರಯತ್ನ ನಡೆಸಿದಂತೆಯೇ ಪುಸ್ತಕ ಮಾರಾಟವನ್ನೂ ಅಂಗಡಿಯ ದಾಸ್ತಾನು (ಸಂಖ್ಯೆಯಿಂದಲ್ಲ) ವೈವಿಧ್ಯದಿಂದ, ಮರ್ಯಾದೆಯ ವ್ಯವಹಾರವನ್ನಾಗಿಯೇ ಉಳಿಸಿದ ತೃಪ್ತಿ ನನಗಿದೆ.

ತುರ್ತುಪರಿಸ್ಥಿಯ ಕಾಲದಲ್ಲಿ ಆಕಾಶವಾಣಿ ನನ್ನನ್ನು ಯಶಸ್ವೀ ಸ್ವೋದ್ಯೋಗಿಯಾಗಿ ಸಂದರ್ಶನ ಪಡೆದುಕೊಂಡರು. ಆದರೆ ಪ್ರಸರಿಸುವಲ್ಲಿ ಇಂದಿರಾಗಾಂಧಿಯ ಟ್ವೆಂಟಿ ಪಾಯಿಂಟ್ ಪ್ರೋಗ್ರಾಮ್‌ನ ಯಶಸ್ವೀ ಫಲಾನುಭವಿ ಎಂದು ಸುಳ್ಳೇ ಬಳಸಿಕೊಂಡರಂತೆ! (ವಾಸ್ತವದಲ್ಲಿ ನಾನೆಂದೂ ಯಾವುದೇ ಸರಕಾರೀ ಸಹಾಯ, ಸೌಲಭ್ಯಗಳನ್ನು ಬಳಸಿಕೊಂಡಿಲ್ಲ) ಮುಂದೆ ಉದ್ಯಮದಲ್ಲಿ ನನ್ನ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಿಸಿ, ಪತ್ರಿಕೆಗಳ ಓದುಗರ ಅಂಕಣಗಳಿಗೆ ಕಳಿಸುತ್ತ ಬಂದೆ. ಮೈಸೂರು ವಿವಿನಿಲಯ ಪ್ರಸಾರಾಂಗದ ಸುವರ್ಣ ಮಹೋತ್ಸವದ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧ ‘ಪುಸ್ತಕ ಮಾರಾಟಗಾರನ ಸಮಸ್ಯೆಗಳು’ ನನ್ನ ಲೆಕ್ಕಕ್ಕೆ ಅರ್ರಂಗೇಟ್ರಂ! ಮುಂದೆ ಪ್ರಥಮ ವಿಶ್ವ ಕನ್ನಡ ಸಮ್ಮೇಳನ (ಮೈಸೂರು) ಸೇರಿದಂತೆ ಕೆಲವು ಸಮ್ಮೇಳನಗಳಲ್ಲೂ ಕಮ್ಮಟಗಳಲ್ಲೂ ಸಂಪನ್ಮೂಲ ವ್ಯಕ್ತಿಯೆಂದೇ ಗೌರವ ಕಂಡೆ. ಇವೆಲ್ಲ ಪ್ರಾಮಾಣಿಕವಾಗಿ ನನಗೊಂದು ಆದರ್ಶವನ್ನು ಕಂಡುಕೊಳ್ಳಲು ಅವಕಾಶ ಒದಗಿಸಿತು. ಮಾತು, ಪತ್ರವ್ಯವಹಾರಗಳಲ್ಲಿ ಮಾಡದೇ ಆಡುವವರ ನಡುವೆ, ನಾನು ಸರಳವಾಗಿ ಆಡಲಾಗುವವನ್ನೇ ಮಾಡುತ್ತಾ ಪರಿಷ್ಕರಿಸಿಕೊಳ್ಳುತ್ತಾ ತಾರ್ಕಿಕವಾಗಿ ಹೋರಾಟಗಾರನೇ ಆಗಿಬಿಟ್ಟಿದ್ದೆ. (ಕುಶಿ ಹರಿದಾಸ ಭಟ್ಟರು ಮುಂದಿನ ದಿನಗಳಲ್ಲಿ ಬಂದ ನನ್ನ ಪುಸ್ತಕ ಓದುತ್ತಾ ಓದುತ್ತಾ ಸಂತೋಷ ತಡೆಯಲಾಗದೇ ದಿನಕ್ಕೆರಡು ಬಾರಿ ದೂರವಾಣಿಸಿ “ಒಳ್ಳೇ ಕಾನೂನು ಪುಸ್ತಕದ ಹಾಗೇ ಬರ್ದಿದ್ದೀ.”) ಅಂಥ ನುಡಿ, ಪತ್ರ, ಟಿಪ್ಪಣಿ ಹರಳುಗಟ್ಟಿ, ಲೇಖನವಾಗಿ ಬೆಳೆದು, ಸಂಕಲನದ ಗಾತ್ರಕ್ಕೆ ತಲಪಿದಾಗ, ಈ ವಿಷಯದ ಮೇಲೆ ಇನ್ನೊಂದಿಲ್ಲ ಎನ್ನುವಂತೆ ‘ಪುಸ್ತಕ ಮಾರಾಟ, ಹೋರಾಟ’ ಪುಸ್ತಕವನ್ನೇ ಪ್ರಕಟಿಸಿಬಿಟ್ಟೆ! (ಅಳಿದೂರಿಗೆ ಉಳಿದವನೇ ಗೌಡ!!)

ಆದರ್ಶಕ್ಕೂ ಅನುಷ್ಠಾನಕ್ಕೂ ವ್ಯತ್ಯಾಸ ಬಂದದ್ದು ನನ್ನ ಗಮನಕ್ಕೆ ಅಡ್ಡಿಯಾದಾಗ ಯಾರ ಮುಲಾಜೂ ಇಟ್ಟುಕೊಳ್ಳದೆ ನಾನು ನಡೆಸಿದ ಹೋರಾಟಗಳು ಹುಸಿಯಾದದ್ದಿಲ್ಲ! ಆದರೆ ಈ ಹೋರಾಟಗಳು ನೇರ ನನ್ನ ದಾರಿಯಲ್ಲಿ ಬಾರದಾಗ ಅವುಗಳನ್ನು ನಾನು ಹುಡುಕಿಕೊಂಡು ಹೋಗಿ ಸಾಮಾಜಿಕ ಹೋರಾಟಗಾರನ ಮಟ್ಟದಲ್ಲಿ ತುಡುಕಿದ್ದೂ ಇಲ್ಲ. ಕಾರಣ ಸ್ಪಷ್ಟ – ನನ್ನ ಸುತ್ತಮುತ್ತಲಿದ್ದ ಬಹುತೇಕ ‘ಸಮಾಜ ಸೇವಕರು’ ಒಂದೋ ಕೌಟುಂಬಿಕವಾಗಿ ಬೇಜವಾಬ್ದಾರರೂ ಇಲ್ಲವೇ ಹೋರಾಟದಲ್ಲಿ ‘ವೃತ್ತಿಪರರೂ’ ಆಗಿ ಕಾಣುತ್ತಿದ್ದರು. ಇದಕ್ಕೊಂದು ದೊಡ್ಡ ಕಥೆಯನ್ನು ನಾಲ್ಕೇ ವಾಕ್ಯಗಳಲ್ಲಿ ಹೇಳಿಬಿಡುತ್ತೇನೆ.

ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಪುಸ್ತಕ ನೀತಿಯನ್ನು ರೂಪಿಸಲು ಪ್ರಾಥಮಿಕವಾಗಿ ಅಂಕೋಲದಲ್ಲೊಂದು ಕಮ್ಮಟ ನಡೆಸಿತು. ಅದಕ್ಕೆ ನನಗೆ ಬಂದಿದ್ದ ಔಪಚಾರಿಕ ಆಮಂತ್ರಣವನ್ನು ನಾನು ಉಪೇಕ್ಷಿಸಿಯೇನು ಎಂಬಂತೆ ಸಂಘಟಕರು ನನಗೆ ವೈಯಕ್ತಿಕ ಒತ್ತಾಯವನ್ನೂ ತಂದರು, ನಾ ಭಾಗಿಯಾದೆ. (ಕಲಾಪಗಳ ವಿವರಗಳೆಲ್ಲವನ್ನೂ ಇಲ್ಲೆ ನನ್ನ ಹಳೆಯ ಕಡತ ೩೦-೮-೨೦೧೧ ರ ‘ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ’ಯಲ್ಲಿ ಅವಶ್ಯ ಓದಿ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ) ಅಲ್ಲಿ ಬಾಯ್ದೆರೆ, ಉತ್ತರೋತ್ತರವಾಗಿ ನಾನು ಸವಿವರ ಬರೆದೂ ಕೊಟ್ಟ ಅಭಿಪ್ರಾಯಗಳು ಎಲ್ಲೂ ಚರ್ಚೆಗೆ, ಪ್ರತಿಕ್ರಿಯೆಗೆ ಒಳಗಾಗಲೇ ಇಲ್ಲ. ನಾನು ಪತ್ರ ಮುಖೇನ ಒತ್ತಡ ಹೆಚ್ಚಿಸಿದಾಗ ಅಯಾಚಿತವಾಗಿ ನನಗೆ ‘ಪುಸ್ತಕ ನೀತಿ ಸಲಹಾ ಉಪಸಮಿತಿ’ಯ ಸದಸ್ಯತ್ವ ಪ್ರದಾನಿಸಿದರು. ನಾನದನ್ನು ವಿಷಯಾಂತರವೆಂದೇ ಸಕಾರಣ ತಿರಸ್ಕರಿಸಿ, ನನ್ನ ಶಿಫಾರಸುಗಳ ಬಗ್ಗೆಯೇ ಒತ್ತಡ ಮುಂದುವರಿಸಿದೆ. ಕನಿಷ್ಠ ಅದನ್ನು ಕಪುಪ್ರಾದ ಮುಖವಾಣಿಯಾದ ‘ಪುಸ್ತಕ ಲೋಕ’ದಲ್ಲಿ ಪ್ರಕಟಿಸಿ ಸಾರ್ವಜನಿಕ ಚರ್ಚೆಗಾದರೂ ತೆರೆದಿಡಲು ಕೇಳಿಕೊಂಡೆ. ನಾನೇ ಪತ್ರಿಕೆಗಳಲ್ಲಿ ಅದನ್ನು ಲೇಖನವನ್ನಾಗಿಯೂ ಪ್ರಕಟಿಸಿದೆ. ಏನೂ ಮಾಡದೆ, ನನ್ನನುಕೂಲ ಕೇಳದೆ, ಎರಡೇ ದಿನದ ಮುನ್ಸೂಚನೆಯಲ್ಲಿ ಅದೊಂದು ಕೆಲಸದ ದಿನ ಬೆಂಗಳೂರಿನಲ್ಲಿ ನಡೆಯಲಿದ್ದ ಉಪಸಮಿತಿಯ ಸಭೆಗೆ ಕರೆ ಕಳಿಸಿದರು! ಜೊತೆಗೆ ಪ್ರಯಾಣ, ಊಟ, ವಾಸದ ಖರ್ಚನ್ನೂ ಕೊಡಲಾಗುವುದಿಲ್ಲ ಎಂದೂ ಒಕ್ಕಣಿಸಿದ್ದರು!! ನಾನು ಇತರ ಭಾಗಿಗಳ ವಿವರ ಮತ್ತು ಕೂಟದ ಮುನ್ನೋಟ ಕೇಳಿದೆ. ಏನೂ ಪ್ರತಿಕ್ರಿಯೆ ಬರಲಿಲ್ಲ. ನಾ ಹೋಗಲಿಲ್ಲ.

ವ್ಯಾಪಾರವೆಂದರೆ ಲಾಭ ಅಲ್ಲ. ಅದು ಲಾಭವೇ ಆದರೆ ಇಷ್ಟದ ಪುಸ್ತಕ ಪಡೆದವ ನಷ್ಟಿಗನೇ? ಇದು ಪರಸ್ಪರ ಉತ್ತಮಿಕೆಗಾಗಿರುವ ವಹಿವಾಟು; ಅವರಿಗೆ ಮಾಲು, ನಮಗೆ ಹಣ, ಅಷ್ಟೆ. ಲಾಭ ಎಂದು ಗುರುತಿಸಲ್ಪಡುವ ಅಂಶ ವಾಸ್ತವದಲ್ಲಿ ವ್ಯಾಪಾರಿಯ ಪ್ರತಿಫಲ, ಸಂಬಳ, ನ್ಯಾಯದ ಆದಾಯ ಎಂದಿತ್ಯಾದಿ ಹೇಳಬೇಕು. ಗಿರಾಕಿಗಳಿಗೆ ಅಮಿತ ಸವಲತ್ತು ಒದಗಿಸುವುದು ವ್ಯಾಪಾರಿಯ ಕರ್ತವ್ಯ ಎನ್ನುವುದೂ ಸರಿಯಲ್ಲ. ವ್ಯಾಪಕ ಆಸಕ್ತಿಗಳನ್ನು ತಣಿಸುವ ಪುಸ್ತಕಗಳನ್ನು ಸಕಾಲದಲ್ಲಿ ತರಿಸಿ, ಸರಳವಾಗಿ ಪ್ರದರ್ಶಿಸಿ, ಕೊಳ್ಳಲು ಅವಕಾಶ ಮಾಡಿಕೊಡುವುದು ನಿರ್ವಿವಾದವಾಗಿ ಆತನ ಕರ್ತವ್ಯ. ಆಚೆಗೆ ಏನಿದ್ದರೂ ವ್ಯಾಪಾರಿಯ ಔದಾರ್ಯ; ಗಿರಾಕಿಯ ಹಕ್ಕಲ್ಲ. ರಿಯಾಯ್ತಿಯೋ ವಿಶೇಷ ಅಲಂಕರಣಗಳೋ ಮನೆಬಾಗಿಲಿಗೆ ತಲಪಿಸುವುದೋ ಇತ್ಯಾದಿ ಏನನ್ನೂ ಕೇಳುವುದು ತಪ್ಪಲ್ಲ; ಕೊಡದಿದ್ದರೆ ಧರ್ಮಚ್ಯುತಿಯಾದಂತೆ ಭಾವಿಸುವುದು ತಪ್ಪು. ಇವನ್ನೆಲ್ಲ ತಿಳಿಯುವ ಕುತೂಹಲ ಮತ್ತು ತಾಳ್ಮೆ ಇದ್ದವರಿಗೆ ನಾನು ವಿವರಣೆ ಕೊಟ್ಟದ್ದುಂಟು, ಪರ್ಯಾಯ ವ್ಯವಸ್ಥೆ ಸೂಚಿಸುವುದೋ ನನ್ನ ಮಿತಿಯಲ್ಲಿ ಒದಗಿಸುವುದೋ ಮಾಡಿದ್ದೂ ಉಂಟು.

ಈಚಿನ ದಿನಗಳಲ್ಲಿ ಸರಕಾರೀ ಮತ್ತು ಖಾಸಗಿ ಪ್ರಕಾಶನ ರಂಗದ ಬಹುತೇಕರು ವ್ಯಾಪಕವಾಗಿ ವ್ಯಕ್ತಿಗಳನ್ನು ಮುಟ್ಟುವ ವ್ಯವಸ್ಥೆ ಬಗ್ಗೆ ಉದಾಸೀನ ತಾಳುತ್ತಿದ್ದಾರೆ. ಜಾಹೀರಾತಿನ ಬೊಂಬಾಟದಲ್ಲಿ, ಮೇಳಗಳ ಹೆಸರಿನಲ್ಲಿ, ಅಂಕಿಸಂಕಿಗಳ ಡೊಂಬರಾಟದಲ್ಲಿ ಕೊಳ್ಳುಗ ಸಮೂಹವನ್ನು ಸೆರೆ ಹಿಡಿಯುವ, ಓದುಗರನ್ನು ಬಲಿಹಾಕುವ, ತನ್ಮೂಲಕ ರಾತ್ರಿ ಹಗಲಿನೊಳಗೆ ಸಾವಿರಾರು ಪ್ರತಿಗಳನ್ನು ಎತ್ತಿಹಾಕುವ ಉನ್ಮಾದದಲ್ಲಿವೆ. (ಕನ್ನಡ ವಿವಿ ನಿಲಯ, ಹಂಪಿಯವರು ತುಳು ಸಾಹಿತ್ಯ ಚರಿತ್ರೆಯನ್ನು ರೂ ಒಂದು ಸಾವಿರದ ಮುದ್ರಿತ ಬೆಲೆಯಲ್ಲಿ ಪ್ರಕಟಿಸಿದರು. ಮತ್ತೆ ಬೇರೆ ಬೇರೆ ನೆಪ ಹಿಡಿದು ೫೦% ರಿಯಾಯ್ತಿ ದರದಲ್ಲಿ ಮಾರುತ್ತಲೇ ಬಂದಿದ್ದಾರೆ. ಅದಕ್ಕೆ ಮುದ್ರಿತ ಬೆಲೆಯನ್ನೇ ಐದುನೂರು ಇಡಬಹುದಿತ್ತಲ್ಲಾ ಎಂಬ ನನ್ನ ಬೊಬ್ಬೆಗೆ ಎಲ್ಲರದೂ ಜಾಣ ಕಿವುಡು) ಕಪುಪ್ರಾ ನಡೆಸುವ ಯಾವ ಮೇಳದಲ್ಲೂ ಸಾಮಾನ್ಯವಾಗಿ ಎಲ್ಲ ಇಲಾಖಾ ಪ್ರಕಟಣೆಗಳು ಶೇಕಡ ಐವತ್ತರ ರಿಯಾಯ್ತಿ ದರದಲ್ಲಿ ಮಾರಾಟವಾಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಾದಿ ಹಲವು ಸಾಹಿತ್ಯ ಜಾತ್ರೆಗಳ ಸಂಘಟಕರು ಕನಿಷ್ಠ ಶೇಕಡಾ ಇಪ್ಪತ್ತರ ಸಾರ್ವಜನಿಕ ರಿಯಾಯಿತಿ ಘೋಷಣೆ ನಿರೀಕ್ಷಿಸುತ್ತಾರೆ. ಸಗಟು ಖರೀದಿಯ ಎಲ್ಲಾ ಮೂಲಗಳಲ್ಲೂ ಮುದ್ರಿತ ಬೆಲೆ ಏನೇ ಇರಲಿ, ಸರ್ಕಾರೀ ಮೌಲ್ಯಮಾಪನ ಬೇರೆ ಆಗುತ್ತದೆ. ಮತ್ತದರ ಮೇಲೆ ಶೇಕಡಾ ೨೭ರವರೆಗೂ ರಿಯಾಯ್ತಿ ಹೊಡೆತ. ಕಳೆದೆರಡು ವರ್ಷಗಳಿಂದ ಬಹುತೇಕ ಶಾಲೆಗಳಿಗೆ ವಿಶೇಷ ಅನುದಾನ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಮತ್ತದಕ್ಕೆ ಸರಿಯಾಗಿ ಸರಕಾರೀ ಪ್ರಣೀತ ಖಾಸಗಿ ಪ್ರಕಾಶಕರ ಪುಸ್ತಕ ಮೇಳ ಊರೂರಿನಲ್ಲಿ ನಡೆಯುತ್ತದೆ. ಅಲ್ಲಿ ಕಡ್ಡಾಯ ಶೇಕಡಾ ಇಪ್ಪತ್ತರ ದರದಲ್ಲಿ ಶಾಲೆಗಳು ಪುಸ್ತಕ ಖರೀದಿಸುವುದು ಕಡ್ಡಾಯ. ಈ ಪ್ರಪಾತದತ್ತಣ ಧಾವಂತದಲ್ಲಿ ಇಂದು ಖಾಸಗಿ ಪ್ರಕಾಶಕರೂ ಧಾರಾಳ ತೊಡಗಿಕೊಂಡಿದ್ದಾರೆ. ಇಂಗ್ಲಿಷ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್‌ನಿಂದ ತೊಡಗಿ ಹಲವು ಅಂತರ್ಜಾಲ ವ್ಯಾಪಾರಸ್ಥರು ಒಂದು ಪ್ರತಿಯನ್ನೂ ದಾಸ್ತಾನು, ಪ್ರದರ್ಶನ ಮಾಡದೆ ಯಾವುದೋ ಊರಿನ, ಮೂಲೆ-ಮನೆಯ ಗಣಕದ ಒಂದು ಚಿಟಿಕೆಗೆ ೪೦% ರಿಯಾಯ್ತಿ ದರದಲ್ಲಿ, ಉಚಿತ ಸಾಗಣೆಯಲ್ಲಿ, ಅದ್ಭುತ ಪ್ಯಾಕಿಂಗಿನಲ್ಲಿ ಕೈಯಾರೆ ಪುಸ್ತಕ (ಏನೆಲ್ಲವನ್ನೂ) ತಲಪಿಸಿ, ಅನಂತರ ನಗದು ಪಡೆದು ಹೋಗುತ್ತಾರೆ. ಈ ನೇರ ಓದುಗನನ್ನು ತಲಪುವ ಉತ್ಸಾಹದಲ್ಲಿ ಕನ್ನಡದ ಪ್ರಕಾಶಕ/ವಿತರಕರೂ ಹಿಂದುಳಿದಿಲ್ಲ. ದಿನದ ಹನ್ನೆರಡು ಗಂಟೆ, ಸ್ಥಳಬಾಡಿಗೆಯಿಂದ ತೊಡಗಿ ಎಲ್ಲಾ ಮೂಲಭೂತ ಖರ್ಚುಗಳ ಮೇಲೆ ಕೊಳ್ಳುಗರ ಖಯಾಲಿಯನ್ನು ಅಂದಾಜಿಸಿ ಪ್ರತಿಗಳನ್ನು ತರಿಸಿ, ಪ್ರದರ್ಶಿಸಿ, ದಿನಗಟ್ಟಳೆ ಕಾಯುವ ಬಿಡಿ ಮಾರಾಟಗಾರನಿಗೆ ಪ್ರತಿಯೊಂದರ ಮೇಲೆ ಸರಾಸರಿಯಲ್ಲಿ ಬರುವ ವ್ಯಾಪಾರಿ ವಟ್ಟ ೩೦% ಮಾತ್ರ. ದೇಶದ ಪ್ರಧಾನರನ್ನೇ ಅತೀತರನ್ನಾಗುಳಿಸಿ ಭ್ರಷ್ಟಾಚಾರ ವಿರೋಧೀ ಸಂಸ್ಥೆ ಕಟ್ಟಲು ಹೊರಟ ಹಾಗೇ ಪುಸ್ತಕಲೋಕದ ಈ ಅಸಮಾನತೆಯನ್ನು ಮುಟ್ಟಲೂ ಧೈರ್ಯ ಮಾಡದೆ, (ಸರಕಾರದ ಪರವಾಗಿ) ಕಪುಪ್ರಾ ಪುಸ್ತಕ ನೀತಿ ರೂಪಿಸಿರುವುದು ನಿಜ ಸದಭಿರುಚಿಯ ದುರಂತವೇ ಸರಿ.

ನಾನು ಜೀವನ ನಿರ್ವಹಣೆಗೆ ಇಷ್ಟಪಟ್ಟು ಪುಸ್ತಕೋದ್ಯಮಕ್ಕೆ ಇಳಿದೆ. ಅದಿಂದು ನನ್ನ ಬಹುತೇಕ ಆರ್ಥಿಕ ಜವಾಬ್ದಾರಿಗಳನ್ನು ನೀಗಿಸಿದೆ. ಜೊತೆಗೆ ನಾನು ಬಯಸಿದ ಮತ್ತು ಧಾರಾಳ ಪಡೆದ ಸಾರ್ವಜನಿಕ ಉಪಯುಕ್ತತೆ, ಇಂದು ಕಾಲಧರ್ಮದಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಈಚೆಗೆ ದಿನದಿನವೂ ನಾನಿಲ್ಲಿ ಹನ್ನೆರಡು ಗಂಟೆ ವ್ಯರ್ಥವಾಗುತ್ತಿದ್ದೇನೆ ಎಂಬ ಭಾವ ಬಲಿಯುತ್ತಿದೆ. ಇಲ್ಲೇನಿದೆ ಎಂದು ನೋಡುವ ಕುತೂಹಲ ಮತ್ತು ಸಮಯ ಇಟ್ಟುಕೊಂಡ ಜನಗಳು ಕಳೆದುಹೋಗಿದ್ದಾರೆ. ಬರುವ ಬಹುತೇಕರೂ ಬೇರೆಲ್ಲೂ ಸಿಗದ ನಿರ್ದಿಷ್ಟ ಕೃತಿಯನ್ನಷ್ಟೇ ಅರಸುತ್ತಿರುತ್ತಾರೆ. ಅವರಲ್ಲೂ ಹಲವರು ಕೇವಲ ಚರವಾಣಿ ಹಿಡಿದ ಸೂತ್ರದ ಗೊಂಬೆಗಳು; “ಹಾಂ, ನಾ ಅತ್ರಿಯಲ್ಲಿದ್ದೇನೆ. ಯಜಮಾನರಿಗೆ ಕೊಡ್ತೇನೆ…” ಎಂಬ ಸಂಪರ್ಕ ಸೇತುಗಳು! (ನನ್ನಲ್ಲಿ ಚರವಾಣಿ ಇಲ್ಲ ಮತ್ತು ಅನ್ಯರದ್ದನ್ನು ನಾನು ಬಳಸುವುದಿಲ್ಲ) ಅಂಗಡಿಯ ನಾವು ಉಂಟು, ಇಲ್ಲ ಎಂದರೆ ಸುಲಭದಲ್ಲಿ ನಂಬುವವರಲ್ಲ. ‘ಕಂಪ್ಯೂಟರಿಗೆ ಹಾಕಿ’ (ನನ್ನ ಗಣಕದಲ್ಲಿ ಲೆಕ್ಕಾಚಾರದ ದಾಖಲೆಗಳು ಮಾತ್ರ ಇವೆ), (ಇವರ ಒಂದು ಪ್ರತಿಯ ಅಗತ್ಯಕ್ಕೆ) ‘ಮರುಮುದ್ರಣ ಮಾಡಿ’, (ಬೆಲೆ ಹೆಚ್ಚು ಎಂದನ್ನಿಸಿದಾಗ) ‘ಹಳೇ ಪ್ರಿಂಟ್ ಇಲ್ವಾ’ ಅಥವಾ ‘ಆನ್ ಲೈನ್ ದರ…’ ಉಲ್ಲೇಖಿಸುವ ಮೋಸ್ಟ್ ಮಾಡರ್ನ್‌ಗಳು! ಔಟ್ ಡೇಟೆಡ್ ವ್ಯವಸ್ಥೆಯಾಗಿ, ಕೇವಲ ಹಳಬರ ಸ್ವೀಟ್ ಮೆಮೊರೀಸ್ ಸಂಕೇತವಾಗಿ ಉಳಿಯುವ ಬದಲು, ಸಾರ್ವಜನಿಕ ವೃತ್ತಿರಂಗದಲ್ಲಿರುವ ‘ಸ್ವಯಂ ನಿವೃತ್ತಿ’ಯನ್ನು ನಾನೂ ಬಯಸಿದ್ದೇನೆ!

ನಿವೃತ್ತಿ ಎನ್ನುವುದು ನಿಷ್ಕ್ರಿಯೆಗೆ ಸಮಾನ ಪದವೆಂದು ನಾನು ತಿಳಿದಿಲ್ಲ. ಪರ್ವತಾರೋಹಣವೇ ಮುಂತಾದ ಸಾಹಸ ಕ್ರೀಡೆಗಳ ಹವ್ಯಾಸದಲ್ಲಿದ್ದ ನನಗೆ ಉಲ್ಲಾಸ ಕಾರಂತರ ‘ಸಂಪರ್ಕ ದೋಷ’ದಲ್ಲಿ ವನ್ಯ ಸಂರಕ್ಷಣೆಯ ಒಲವು ಹೆಚ್ಚುತ್ತಾ ಬಂತು. ಸುಮಾರು ಹದಿಮೂರು ವರ್ಷದ ಹಿಂದೆ ಶುರು ಮಾಡಿದ ‘ಅಭಯಾರಣ್ಯ’, ಹಾಗೇ ನಾಲ್ಕು ವರ್ಷದ ಹಿಂದಣ ‘ಅಶೋಕವನ’ ಇನ್ನಿಲ್ಲದ ಆನಂದ ನೀಡುತ್ತಲೇ ಇದ್ದವು. ಗೆಳೆಯ ನಿರೇನ್ ಜೈನ್ (ಆರ್ಕಿಟೆಕ್ಟ್) ತನ್ನ ತೀವ್ರ ವೃತ್ತಿ ಒತ್ತಡದ ನಡುವೆಯೂ ಅಸಾಧಾರಣವಾಗಿ ವನ್ಯ ಸಂರಕ್ಷಣೆಯ ಕೆಲಸ ನಡೆಸಿದ್ದಾರೆ. ಆತ ಪ್ರಾಯದಲ್ಲಿ ನನಗೆ ಕಿರಿಯನಾದರೂ ವನ್ಯ ಸಂರಕ್ಷಣೆಯ ಪ್ರಾವೀಣ್ಯದಲ್ಲಿ ಮತ್ತು ದುಡಿಮೆಯಲ್ಲಿ ತುಂಬಾ ಮುಂದೆ ಇದ್ದಾರೆ. ಅವರ ಜೊತೆ ಚೂರುಪಾರು ಕೈಜೋಡಿಸುತ್ತಿದ್ದ ನಾನು ಸುಮಾರು ಮೂರು ವರ್ಷದ ಹಿಂದೆ ಮೊದಲ ಬಾರಿಗೆ ಪುಸ್ತಕ ವ್ಯಾಪಾರದಿಂದ ನಿವೃತ್ತನಾಗುವ, ಪೂರ್ಣಾವಧಿ ವನ್ಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಮಾತಾಡಿದ್ದೆ. ಈಗ ಅದನ್ನು ನಿಜ ಮಾಡುವ ಅವಕಾಶ ತಂದುಕೊಳ್ಳುತ್ತಿದ್ದೇನೆ. ಸರಕಾರ ಪ್ರಣೀತ ಅಭಿವೃದ್ಧಿಗಿಂದು ಗಾಂಧಾರಿ ಕುರುಡು. ಸಹಜವಾಗಿ ವನ್ಯಕ್ಕೂ (ಅದಕ್ಕೂ ಮಿಕ್ಕು ಆವಶ್ಯಕವಾದ) ಕೃಷಿಗೂ ಮುಗಿಯದ ಹುರುಡು. ಬಿಸಿಲೆ ಘಾಟಿಯಲ್ಲಿ ವನ್ಯದ ಅಖಂಡತೆ ಉಳಿಸಿಕೊಳ್ಳಲು ನಾವು ‘ಸ್ಥಾಪಿಸಿದ’ ಅಶೋಕವನದ (ವಿವರಗಳಿಗೆ ಹಳೆ ಕಡತ ‘ಕಾನನದೊಳಗಿಂದೆದ್ದು ಬಂದವನಾವನಿವನ್’ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ) ಸಾಂಕೇತಿಕತೆಯನ್ನು ವಿಸ್ತರಿಸುವ ನೆಲೆಯಲ್ಲಿ ನಾನೊಬ್ಬ ಸ್ವಯಂಸೇವಕನಾಗಲಿದ್ದೇನೆ.

ಅಂಗಡಿ ಮುಚ್ಚಬಾರದು. ಪಾಲುದಾರಿಕೆಯಲ್ಲೋ ನಿರ್ವಾಹಕನನ್ನಿಟ್ಟೋ ಮುಂದುವರಿಯ ಬೇಕು ಎನ್ನುವ ಎಷ್ಟೂ ಸಲಹೆಗಳು, ಒತ್ತಾಯಗಳು ಬರುತ್ತಲೇ ಇವೆ. ನನ್ನಿಂದಲೂ ಮೊದಲು, ಅನಂತರವೂ ಸ್ಥಳೀಯ ಪುಸ್ತಕ ಅಗತ್ಯಗಳ ಪೂರೈಕೆ ನಡೆದಿದೆ, ನಡೆಯುತ್ತದೆ. ಹೆಸರಿನ ಮೋಹ ನನಗೆ ಎಂದೂ ಇರಲಿಲ್ಲ (ಅತ್ರಿ, ಪುಸ್ತಕಪ್ರೇಮಿಗಳ ಕಿಸೆಗೆ ಕತ್ರಿ’ ಎಂದು ನಾನೇ ಕೆಲವೊಮ್ಮೆ ಲಘುವಾಗಿ ಹೇಳುವುದಿದೆ). ಬ್ರಹ್ಮಕಪಾಲದ ನೋವು ಅನುಭವಿಸಿ ಈಶ್ವರನಂತೆ ನಟಿಸುವ ಮೇಳದ ಯಜಮಾನನಿಗೆ (ಕೆರೆಮನೆ ಶಂಭು ಹೆಗಡೆಯವರನ್ನು ಸ್ಮರಿಸಿ) ಸ್ಫೂರ್ತಿ ಭಾವುಕ ಪ್ರೇಕ್ಷಕ ಎಸೆದ ನಾಣ್ಯಕ್ಕೆ ಹುಡಿಯಾದ ಹ್ಯಾಲೋಜೆನ್ ಲೈಟ್, ಎಂಬಂತಿದೆ ನನ್ನ ಸ್ಥಿತಿ. ಕ್ಷಮಿಸಿ, ವೇಷ ಕಳಚುವ ಸಮಯ ಬಂದಿದೆ. ಕನ್ನಡ ಪುಸ್ತಕೋದ್ಯಮದ ಒಂದು ಸಂಕ್ರಮಣ ಕಾಲದಲ್ಲಿದ್ದ ನಾನು ದೃಢ ನಿರ್ಧಾರದಲ್ಲಿ ವೃತ್ತಿ ರಂಗದ ಮೌಲ್ಯಗಳ ಶೈಥಿಲ್ಯದ ಎದುರು ಪ್ರತಿಭಟಿಸುತ್ತ, ಓದುಗ ಸಂಸ್ಕೃತಿ ನಶಿಸುತ್ತಿರುವ ಬಗ್ಗೆ ಆತಂಕದಿಂದ, ಸಾಮಾಜಿಕ ಹಿತ ಸಾಧಿಸಬೇಕಾದ ಸರಕಾರ ವ್ಯಕ್ತಿ ಸ್ವಾರ್ಥಗಳಿಗಾಗಿ ಸಮಷ್ಟಿಯ ಹಣ ಪೋಲು ಮಾಡುವ ಪರಿಗೆ ಹೇವರಿಕೆಯಿಂದ, ಪ್ರಶಸ್ತಿ ಸಮ್ಮಾನಗಳ ಬಟವಾಡೆಯ ಕುರಿತು ತಿರಸ್ಕಾರದಿಂದ, ಬೆಳೆದು ಬಂದ ಆತ್ಮೀಯ ಸಂಬಂಧಗಳ ಕುರಿತು ಸಂತೋಷದಿಂದ, ಅನಿವಾರ್ಯವಾಗಿ ಗಳಿಸಿದ ವೈರಗಳ ನೆನಪಿನಲ್ಲಿ ಮುದುಡುತ್ತ, ಭವಿಷ್ಯದ ಯೋಜನೆಗಳ ಕನಸಿನಲ್ಲಿ ಮುದಗೊಳ್ಳುತ್ತ, ಕೌಟುಂಬಿಕವಾಗಿ ಸಂತೃಪ್ತಿಯಿಂದ, (ಉಕ್ತಿ ಸೌಂದರ್ಯದ ಚಾಪಲ್ಯದಲ್ಲಿ ಲೇಖನ ಉದ್ದವಾದ್ದಕ್ಕೆ ಸಂತಪಿಸುತ್ತ!) ಅತ್ರಿ ಬುಕ್ ಸೆಂಟರನ್ನು ಖಾಯಂ ಮುಚ್ಚುತ್ತಿದ್ದೇನೆ; ವಿರಮಿಸುತ್ತಿಲ್ಲ, ಹೊಸ ಆವೇಶದ ವಾನಪ್ರಸ್ಥಕ್ಕೆ ಇಳಿಯುತ್ತಿದ್ದೇನೆ.

ಹೊಗಳಿಕೆಯ ಭಾರದಲಿ ತಿಣುಕಿದನು ಅಶೋಕರಾಯ
“ನಾನು ತಪ್ಪು ದಾರಿಯಲ್ಲಿ ನಡೆದಿಲ್ಲ ಎಂದು ಸುಂದರವಾಗಿ ಪ್ರಮಾಣಿಕರಿಸಿದ್ದಕ್ಕೆ ಕೃತಜ್ಞತೆಗಳು” ಎಂದು ಇಂಥ ಸಂದರ್ಭದಲ್ಲಿ ನನ್ನ ತಂದೆ ಹೇಳುತ್ತಿದ್ದದ್ದನ್ನು ಮರುಜಪಿಸುವುದು ಬಿಟ್ಟು ಬೇರೇನೂ ಹೇಳಲಾಗುತ್ತಿಲ್ಲ ನನಗೆ. ಅತ್ರಿ ಬುಕ್ ಸೆಂಟರ್ ಮುಚ್ಚುವ ಸುದ್ದಿ ತಿಳಿದಾಗ ಬಂದ ಪ್ರೀತಿಯ, ವಿಶ್ಚಾಸದ ನುಡಿಗಳಲ್ಲಿ ಕೆಲವು ಇಲ್ಲಿ…
The Hindu ಪತ್ರಿಕಾ ವರದಿ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಕರಾವಳಿ ಅಲೆ
Deccan Herald (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಸಂವರ್ಥನ ಬ್ಲಾಗು ಬರಹ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
That’s kannada ಅಂತರ್ಜಾಲ ಪುಟದ ವರದಿ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಪ್ರೊ| ಬಿ.ಎ. ವಿವೇಕರೈ ಅವರ ಬ್ಲಾಗು ಬರಹ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಎಲ್ಲ ಮಹನೀಯರುಗಳಿಗೆ, ಸಂವಹನ ಮಾಧ್ಯಮಗಳಿಗೆ, ಹೇಳಲಾಗದ ಎಲ್ಲಾ ಓದುಗರಿಗೂ ಅನಂತ ಧನ್ಯವಾದಗಳು.