(ಕುಮಾರಪರ್ವತದ ಆಸುಪಾಸು -೧೦)

ನಾನು ಸುಮಾರು ಹದಿಮೂರು ವರ್ಷಗಳ ಹಿಂದೆ, ಮಂಗಳೂರ ಸಮೀಪ ಹಾಳು ಭೂಮಿಯಲ್ಲಿ ಪ್ರಾಕೃತಿಕ ಪುನರುತ್ಥಾನದ ಪ್ರಯೋಗಕ್ಕಾಗಿ ‘ಅಭಯಾರಣ್ಯ’ ಕಟ್ಟಿದ್ದು ಈ ಹಿಂದೆಯೇ ಅಲ್ಲಿ ಇಲ್ಲಿ ಹೇಳಿದ್ದೇನೆ. ಅದರ ಆಶಯವನ್ನು ಸಾರ್ವಜನಿಕಗೊಳಿಸಬೇಕೆಂದೇ ಅಲ್ಲೊಂದು ಕಾರ್ಯಕ್ರಮ ಇಟ್ಟುಕೊಂಡು ನಾಗರಹೊಳೆಯ ಕೆ.ಎಂ. ಚಿಣ್ಣಪ್ಪ (ವನ್ಯದ ಆವಶ್ಯಕತೆಯನ್ನು ಪ್ರಸ್ತುತಪಡಿಸಲು), ಶತಾವಧಾನಿ ಗಣೇಶ್ (ವನ್ಯದ ಕುರಿತ ಭಾರತೀಯ ಪೌರಾಣಿಕ ಉಲ್ಲೇಖಗಳನ್ನು ನೆನಪಿಸಲು) ಮತ್ತು ಪೂರ್ಣಚಂದ್ರತೇಜಸ್ವಿಯವರನ್ನೂ (ತನ್ನ ಬರಹ, ಚಟುವಟಿಕೆಗಳಿಂದ ಪರಿಸರಪ್ರೀತಿಯನ್ನು ಸಾರ್ವಜನಿಕದಲ್ಲಿ ವಿಶೇಷವಾಗಿ ಪ್ರೇರಿಸಿದವರು) ಆಹ್ವಾನಿಸಿದ್ದೂ ನಿಮಗೆ ಗೊತ್ತು. (ಗೊತ್ತಿಲ್ಲದವರು ಇಲ್ಲೇ ಹಿಂದಿನ ಪುಟಗಳಲ್ಲಿ ನೋಡಿ – ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ. . .) ಆಗ ತೇಜಸ್ವಿ ಮೊದಲ ಮಾತಿಗೇ ನನ್ನನ್ನು ಗೇಲಿ ಮಾಡಿದ್ದು ನೆನೆಪಿಸಿಕೊಳ್ಳಿ. ‘ಪ್ರಾಕೃತಿಕ ಅವಹೇಳನ ಬಲುದೊಡ್ಡ ಪ್ರಮಾಣದಲ್ಲಾಗುತ್ತಿರುವ ಪಶ್ಚಿಮಘಟ್ಟದಲ್ಲಿ ಕನಿಷ್ಠ ಐವತ್ತು, ನೂರು ಎಕ್ರೆ ಕಾಡು ನಮ್ಮಂಥ ಸಮಾನಮನಸ್ಕರು ಸೇರಿ ಕೊಂಡು ಉಳಿಸಬೇಕು.’ ಅದರ ಪೂರ್ಣ ಅರಿವು ನನಗಿದ್ದರೂ ನನ್ನ ವೃತ್ತಿರಂಗದಿಂದ ದೂರದ ಸ್ಥಳಗಳನ್ನು ಕೊಂಡು, ನನ್ನ ಸಂಪರ್ಕದಲ್ಲಿ ಉಳಿಸಿಕೊಳ್ಳಲು ಅಸಮರ್ಥನೆಂದು ಹೆದರಿದ್ದೆ. ಅಲ್ಲದೆ ನನ್ನ ಕನಸುಗಳನ್ನು ನನ್ನದೇ ಆರ್ಥಿಕ ತಾಕತ್ತಿನಲ್ಲಿ ನಡೆಸುವ ಹಠ ನನ್ನದು. ಹೊರಗಿನ ಸಹಾಯ ಸಹಕಾರಗಳನ್ನು ತತ್ವದಲ್ಲಿ ಪಡೆಯಬಲ್ಲೆ, ಹಣದಲ್ಲಲ್ಲ. ಸರಕಾರದ ಸಹಾಯ, ಉದ್ದಿಮೆದಾರರ ಪ್ರಾಯೋಜಕತ್ವ ಮುಂತಾದ ಎರೆಗಳ ಮರಸಿನ ಕೊಕ್ಕೆ ನನಗೆ ಒಗ್ಗದು. ಮತ್ತೆ ಸ್ವತಃ ನಾನೇ ತೊಡಗಿಕೊಳ್ಳಲಾಗದ ಆದರ್ಶವನ್ನು ಇನ್ನೊಬ್ಬರಿಗೆ ಹೇರುವ ಪ್ರವಚನ ಪಾಂಡಿತ್ಯವೂ ನನ್ನಲ್ಲಿಲ್ಲ.

ನಾನು ಮೂಲತಃ ಪರ್ವತಾರೋಹಿ. ವಾರದ ಆರುದಿನ ನಗರದ ಹೊಗೆ ದೂಳು ತಿಂದುಕೊಂಡು, ಫ್ಯಾನ್ ಗಾಳಿಯಲ್ಲಿ ತಲೆ ತಂಪಾಗಿಸಿಕೊಳ್ಳುತ್ತಿದ್ದ ನನಗೆ ಕಾಡುಬೆಟ್ಟಗಳು ದೊಡ್ಡ ಬಿಡುಗಡೆ. ಆದರೆ ಅಲ್ಲಿಗೂ ನಾಗರಿಕತೆಯ ಶಾಪ ವಿಸ್ತರಿಸುವುದು ಕಂಡಾಗ ಪಶ್ಚಿಮ ಘಟ್ಟ ಉಳಿಸಿ ಅಭಿಯಾನದಲ್ಲಿ ಗಂಟಲು ಹರಿದುಕೊಂಡೆ. ಗಣಿಗಾರಿಕೆ ಬೇಡವೆನ್ನುವವರ ಕೂಟ ಸೇರಿಕೊಂಡೆ. ನೇತ್ರಾವತಿ ತಿರುಗಿಸುವ ಹಂಬಲದ ಹುಂಬರ ವಿರೋಧ ಕಟ್ಟಿಕೊಂಡೆ. ಇವೆಲ್ಲ ಮತ್ತೂ ಹೆಚ್ಚಿನ ಸಂಗತಿಗಳು ‘ವನ್ಯ’ ಎಂಬ ಸರಳ ಹೆಸರಿನಲ್ಲಿ ಗ್ರಹಿಸಿಕೊಂಡು ಅದರ ಉಳಿವಿಗಾಗಿ ಮುಖ್ಯವಾಗಿ ನಮ್ಮಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅನೇಕ ಚಟುವಟಿಕೆಗಳನ್ನು ನಡೆಸುತ್ತಿರುವ ಡಾ| ಉಲ್ಲಾಸ ಕಾರಂತರ ಬಳಗ ನನಗೆ ಅತ್ಯಂತ ಆಪ್ತವೂ ಆಯ್ತು. ಆ ಹೊಸತರಲ್ಲಿ ನನಗೆ ಒಂದು ವಾರ ಕಾಲದ ನಾಗರಹೊಳೆ ವನ್ಯಮೃಗ ಗಣತಿಯಲ್ಲಿ ಭಾಗವಹಿಸಲು ಅವಕಾಶ ಒದಗಿದ್ದಂತೂ ಸ್ಪಷ್ಟ ವನ್ಯ ದೀಕ್ಷಾ ವಿಧಿಯೇ ಆಯ್ತು, ಎಂದರೆ ಅತಿಶಯೋಕ್ತಿಯಾಗದು!

ನಾಗರಹೊಳೆಯಲ್ಲಿ ಸಿಕ್ಕ ವನ್ಯ ನಾಡಿ

ಪರ್ವತಾರೋಹಣ ನನ್ನ ಹವ್ಯಾಸ ಎಂದಂತೇ ವಾರ ಕಾಲದ ಬಂಧನದಿಂದ ಬಿಡುಗಡೆಯೂ ಹೌದು. ಅಂಗಡಿಯೊಳಗೆ ಆರು ದಿನ ಎಳೆದು ಹಿಡಿದ ಶ್ವಾಸವನ್ನು ಒಂದು ದಿನ ಪೂರ್ತಿ ಬಿಡುವ ಈ ಧಾವಂತದಲ್ಲಿ ಬಂಡೆ, ಶಿಖರ, ಕಾಡು, ಜಲಪಾತದಂಥ ದೊಡ್ಡದಾಗಿ ತಟ್ಟುವ ವಿಷಯಗಳು ಮಾತ್ರ ನನ್ನಲ್ಲಿ ದಾಖಲಾಗುತ್ತಿದ್ದವು. ಗೆಳೆಯರು ನನ್ನನ್ನು ‘ಕಬಡ್ಡಿ ಟೀಮಿನ ಕ್ಯಾಪ್ಟನ್’ ಎಂದೇ ತಮಾಶೆ ಮಾಡುತ್ತಿದ್ದರು (ಎದುರು ಪಕ್ಷದ ರೇಖೆ ಮುಟ್ಟುವುದೊಂದೇ ಗುರಿ). ಯಾವುದೋ ಶಿಖರ, ಬಂಡೆಯ ಕೊಡಿ, ಜಲಪಾತದ ಎತ್ತರ, ಗುಹೆಯ ತಾರ್ಕಿಕ ಕೊನೆ ಇತ್ಯಾದಿ ಮುಟ್ಟುವುದು, ಮರಳುವುದು. ಅರ್ಜುನನ ಲಕ್ಷ್ಯಬೇಧನದ ಹಾಗೆ – ಸಾಧನೆ ಮೊದಲು, ವಿರಾಮದಲ್ಲಿ ನೆನಪಿನಿಂದ ಹೆಕ್ಕಿದ್ದಷ್ಟೇ ದಕ್ಕುವ ಪಾಠಗಳು. (ಗುರು ದ್ರೋಣ ಶಿಷ್ಯರಿಗೆ ಹೇಳಿದನಂತೆ “ಮರದ ಮೇಲಿನ ಹಕ್ಕಿ ಹೊಡೆಯಿರಿ.” ಉಳಿದವರಿಗೆ ಗುರುಗಳೂ ಕುತೂಹಲಿ ಸಹಪಾಠಿಗಳೂ ಮರವೂ ಕೊಂಬೆಯೂ ಕೊನೆಯ ಗಿಳಿಯೂ ಕಾಣಿಸಿ ಹೊಡೆದ ಬಾಣ ದಿಕ್ಚ್ಯುತಿಯಾಗುತ್ತಿತ್ತಂತೆ. ಅರ್ಜುನನಿಗೆ ಹಕ್ಕಿಯ ಕಣ್ಣೊಂದೇ ಕಾಣಿಸಿತಂತೆ.) ನನ್ನೊಡನೆ ಬರುತ್ತಿದ್ದವರಲ್ಲಿ ಕೆಲವರು ಕಪ್ಪೆ, ಹಾವು, ಚಿಟ್ಟೆ, ಹಕ್ಕಿ, ಸಸ್ಯ, ಕ್ಯಾಮರಾ, ದುರ್ಬೀನು, ದೃಶ್ಯ ಎಂದು ಏನೆಲ್ಲಾ ಕಾರಣಕ್ಕೆ ಉತ್ತೇಜಿತರಾಗುವಾಗ ನಾನೂ ಧಾರಾಳ ಸಂತೋಷಿಸಿದ್ದೇನೆ. ಆದರೆ ಅದನ್ನು ಮುಂದಿನದ್ದಕ್ಕೆ ಅಳವಡಿಸಿಕೊಳ್ಳುವಲ್ಲಿ, ಅನುಸರಿಸುವಲ್ಲಿ ಸೋಲುತ್ತಿದ್ದೆ. ಅವಸರ ಬಿಟ್ಟು ಪ್ರಾಕೃತಿಕ ಸೂಕ್ಷ್ಮಗಳನ್ನು ಗುರುತಿಸುವಂತೆ ಸುತ್ತಾಡಬೇಕೆಂದು ಬಯಕೆ ಇತ್ತು, ಬಿಡುವಾಗುತ್ತಿರಲೇ ಇಲ್ಲ. ಉಲ್ಲಾಸ ಕಾರಂತರು ನಾಗರಹೊಳೆಗೆ ಆಹ್ವಾನ ಕೊಟ್ಟಾಗ ಒಮ್ಮೆಯಾದರೂ ಅದನ್ನು ಈಡೇರಿಸಿಕೊಳ್ಳುವ ಅವಕಾಶ ದೊರೆಯಿತೆಂದು, ವಾರಕಾಲದ ಬಿಡುವು ಮಾಡಿಕೊಂಡು, ಗೆಳೆಯ ಕೃಶಿಯನ್ನು ಬೈಕಿನಲ್ಲಿ ಜೊತೆಮಾಡಿಕೊಂಡು ಹೊರಟೇಬಿಟ್ಟೆ.

ಭೂಮಿಯಲ್ಲಿ ಮನುಷ್ಯನೊಬ್ಬನೇ ಜೀವಿಸುವುದು ಅಸಾಧ್ಯ. ಆದರೂ ಹೆಚ್ಚಿನವರು ಮನುಷ್ಯ ಸ್ವಾರ್ಥವನ್ನು ಸಹಬಾಳ್ವೆ ಎಂದು ಮುಖವಾಡ ತೊಡಿಸುತ್ತಾರೆ. ಇಂದು ಈ ಸೋಗಿನಲ್ಲಿ ಪ್ರಾಕೃತಿಕ ಸತ್ಯಗಳನ್ನು ಮನುಷ್ಯನ ಅನುಕೂಲಕ್ಕೆ ಬಣ್ಣಿಸಿದ್ದೂ ದುಡಿಸಿಕೊಂಡದ್ದೂ ವಿಪರೀತವಾಗಿದೆ. ಬಯಲಿಗೆ ಕೃಷಿ, ನದಿಗೆ ಅಣೆಕಟ್ಟು, ಬೆಟ್ಟಕ್ಕೆ ಗಣಿಗಾರಿಕೆ. ಕಾಡನ್ನು ಬೇಕಾಬಿಟ್ಟಿ ಬಳಸಿದ, ಹುಲ್ಲ ಹರಹುಗಳನ್ನು ವ್ಯರ್ಥವೆಂದ, ಖನಿಜ ಸಂಪತ್ತಿಗೆ ಊರಿಗೂರನ್ನೇ ಮರುಭೂಮಿ ಮಾಡಿದ್ದು ಈಗಿನ ಬಳ್ಳಾರಿ ತಿಳಿದವರಿಗೆ ಹೇಳಲೇಬೇಕಿಲ್ಲ. ನೇರ ಉಪಯೋಗಕ್ಕೆ ಒದಗಿದವನ್ನು ಉಳಿಸಿ, ಸಂವರ್ಧನೆ ಮಾಡಿದೆವು, ಉಳಿದವನ್ನು ಕಸ, ಪೀಡೆ ಎಂದೆಸೆದೆವು. ಮರುಭೂಮಿಯೋ ಕಸತೊಟ್ಟಿ, ನೀರೆಲ್ಲಾ ಬಚ್ಚಲಹೊಂಡ, ಭೂಗರ್ಭ ವಿಷದಮೂಟೆ, ಆಗಸಕ್ಕೆ ಅಳಿಸಲಾಗದ ಮಸಿ! ನಿಲ್ಲಲು ನೆಲೆಯಿಲ್ಲ, ಕುಡಿಯಲು ನೀರಿಲ್ಲ, ಉಸಿರಾಟಕ್ಕೆ ಕೊಸರಾಟ. ವಿಸ್ತರಿಸುವ ಮರುಭೂಮಿ, ವಿಷಪೂರಿತ ನೀರು ಆಹಾರ, ಸಂಕೀರ್ಣ ಕಾಯಿಲೆಗಳ ದಾಳಿ ಅನಿವಾರ್ಯವಾಗಿ ಪಾರಿಸರಿಕ ಜಾಗೃತಿಯನ್ನು ಮುನ್ನೆಲೆಗೆ ತರುತ್ತಿದೆ. ಜೀವವೈವಿಧ್ಯದ ಆರೋಗ್ಯಪೂರ್ಣ ಉಳಿವು ಮನುಷ್ಯನ ಉಳಿವಿಗೆ ತೀರಾ ಅವಶ್ಯ. ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅನುಸರಿಸುವ ಪ್ರಯತ್ನಗಳ ಫಲವಾಗಿ ವರ್ಷದಲ್ಲಿ ಜೂನ್ ಐದನ್ನು ವಿಶ್ವ ಪಾರಿಸರಿಕ ದಿನವನ್ನಾಗಿಯೇ ನಾವು ಒಪ್ಪಿಕೊಂಡಿದ್ದೇವೆ (೨೯-೧೨-೧೯೯೨). ಕತ್ತಿ ಕೊಡಲಿಗಳಿಗೆ ತುಕ್ಕು ಹಿಡಿಯಲಿ – ಕಾಡು ಬೆಳೆಯಲಿ, ಉರುಲು ಕೋವಿಗಳಿಗೆ ಒರಲೆ ಹತ್ತಲಿ – ಪ್ರಾಣಿಪಕ್ಷಿಗಳು ವೃದ್ಧಿಸಲಿ, ರಸಗೊಬ್ಬರ ವಿಷದುಬ್ಬರ ಇಳಿಯಲಿ – ನೈಜ ಆಹಾರ ಸರಪಳಿ ಅಖಂಡವಾಗಲಿ ಎಂಬಿತ್ಯಾದಿ ಹಾರೈಕೆಗಳಿಗೆ ಸಾಕ್ಷಿಯಾಗಿ ನಾಗರಹೊಳೆಯಂಥಾ ಅಭಯಾರಣ್ಯಗಳು ಬಲಗೊಂಡವು.

ಪ್ರಾಣಿ ಸಂಗ್ರಹಾಲಯದ ಇಕ್ಕಟ್ಟಿನ ಗೂಡುಗಳಲ್ಲಿ ಜನ ಒಡ್ಡಿದ ಒಣಗರಿಕೆಗೂ ಮೇಲಾಟವಾಡುವ ಜಿಂಕೆ ಕಡವೆಗಳು, ಹುಳುಕು ಕಡಲೆಗೂ ಹುಸಿ ಬೆದರಿಕೆ ಹಾಕಿ ಗೋಗರೆಯುವ ವಾನರಗಳನ್ನು ಕಂಡಿದ್ದೇವೆ. ಇದರ ಸ್ವಲ್ಪೇ ಉಲ್ಟಾ ಚಿತ್ರ – ಸಫಾರಿಪಾರ್ಕ್‌ಗಳದ್ದು; ನಿಶ್ಚಿತ ಆವರಣದೊಳಗೆ ಪ್ರಾಣಿಗಳು ಮುಕ್ತವಾಗಿರುತ್ತವೆ, ಜನ ಪಂಜರದಂಥ ವ್ಯಾನುಗಳಲ್ಲಿ ಓಡಾಡುತ್ತಾರೆ. ಆವರಣದೊಳಗಿನ ತುಂಡು ನೆರಳುಗಳಲ್ಲಿ ಮೈಚಾಚಿ ಬಿದ್ದುಕೊಂಡು, ಎಲ್ಲೋ ಮೂಲೆಯಲ್ಲಿನ ಆಹಾರ ವಿತರಣ ಆವರಣದತ್ತ ದಿಟ್ಟಿಯಿಟ್ಟು, ಹೊತ್ತುಹೊತ್ತಿಗೆ ಸಿಗುವ ತುಂಡು ಮಾಂಸಕ್ಕಾಗಿಯೇ ಉಸಿರಾಡುವಂತಿರುವ ವನರಾಜ, ರಾಣಿಯರನ್ನೂ ಕಂಡಿದ್ದೇವೆ. ಇನ್ನು ತೋಟ ಹೊಲಕ್ಕೆ ನುಗ್ಗುವ ಹಂದಿ ಆನೆ, ಇತ್ತ ಕಳ್ಳ ಬೇಟೆಗೆ ಬಲಿಯಾಗುವ ಜಿಂಕೆ ಕಡವೆ, ಹಿತ್ತಿಲ ನಾಯಿಕಳ್ಳ ಚಿರತೆ ಎಲ್ಲಾ ವಿಚಾರವಂತರಲ್ಲಿ ಅಪಾರ ಕನಿಕರ ಮೂಡಿಸುತ್ತವೆ. ಆದರೆ ಸ್ಪಷ್ಟ ನಿವಾರಣೆಗೆ ಒಂದೇ ದಾರಿ ಸ್ವಸ್ಥ ಅಭಯಾರಣ್ಯಗಳು. ಹಾಗೆ ರೂಪುಗೊಂಡು, ವಿಶ್ವಖ್ಯಾತಿಯನ್ನೂ ಗಳಿಸಿದ ನಾಗರಹೊಳೆಯನ್ನು ಆಪ್ತವಾಗಿ ನೋಡುವ ಅವಕಾಶ ನಿಜಕ್ಕೂ ಅಸಾಮಾನ್ಯ.

ಯಶಸ್ವೀ ವನಧಾಮದ ಮೂರು ಮುಖ್ಯ ಆವಶ್ಯಕತೆಗಳು – ರಕ್ಷಣೆ, ಸಂಶೋಧನೆ ಮತ್ತು ಸಮತೋಲನೆ. ಸುಮಾರು ಇಪ್ಪತ್ತಕ್ಕೂ ಮಿಕ್ಕು ವರ್ಷ ನಾಗರಹೊಳೆಯ ಮುಖ್ಯ ಅರಣ್ಯಾಧಿಕಾರಿಯಾಗಿದ್ದು ಸಮರ್ಥ ರಕ್ಷಣೆ ಮತ್ತುನಿಭಾವಣೆ ನಡೆಸಿ, ಸಂಶೋಧನೆಗೆ ಇನ್ನಿಲ್ಲದಂತೆ ಬೆಂಬಲ ಕೊಟ್ಟವರು ಕೆ.ಎಂ ಚಿಣ್ಣಪ್ಪ. ಕಳ್ಳಬೇಟೆ, ಕಳ್ಳ ನಾಟಾ ಮತ್ತು ನೆಲಗಳ್ಳತನವೆಂಬ ತಾಪತ್ರಯಗಳನ್ನು ಭಾರೀ ಬಿಗು ಕೈಯಿಂದ ನಾಗರಹೊಳೆಯಿಂದ ದೂರವಿಟ್ಟ ಸಾಧನೆ ಚಿಣ್ಣಪ್ಪನವರದು. ಕಾಡನ್ನು ಕಾಡುವ ಸುತ್ತುವರಿದ ಕೆಲವು ಕೃಷಿಕರ, ಒಳದಾರಿಗಳಲ್ಲೇ ಮೆರೆಯುವ ಹಲವು ರಾಜಕಾರಣಿಗಳ ಸ್ವಾರ್ಥಗಳ ವಿರುದ್ಧ ಅಕ್ಷರಶಃ ಯುದ್ಧವನ್ನೇ ಚಿಣ್ಣಪ್ಪ ನಡೆಸಿದ್ದರು. (ಅದು ಒಂದು ಜೀವಮಾನದ ಮಿತಿ ದಾಟಿದ್ದು ಎಂದು ಕಂಡಮೇಲೆ) ಇಂದು ಚಿಣ್ಣಪ್ಪ ನಿವೃತ್ತರಾಗಿ ನಾಗರಹೊಳೆಯಿಂದ ಸ್ವಲ್ಪ ದೂರದ ಸ್ವಂತ ಕೃಷಿಭೂಮಿಯಲ್ಲಿ ನೆಲೆಸಿದ್ದಾರೆ. (ಕಾಡಿನೊಳಗೊಂದು ಜೀವ – ಚಿಣ್ಣಪ್ಪನವರ ಆತ್ಮಕಥೆ, ಪರಿಸರಾಸಕ್ತರೆಲ್ಲ ಓದಲೇಬೆಕಾದ ಕೃತಿ. ನವಕರ್ನಾಟಕದ ಪ್ರಕಟಣೆ, ಬೆಲೆ ರೂ ನೂರಾ ಅರವತ್ತು ಮಾತ್ರ) ಅಲ್ಲಿ ಯಾರೋ ಚಿಣ್ಣಪ್ಪನವರ ಸಂದರ್ಶನ ನಡೆಸುತ್ತಾ “ಈಗ ವನಗಳ್ಳ ಸಿಕ್ಕರೆ ಏನು ಮಾಡ್ತೀರಿ” ಕೇಳಿದರಂತೆ. ಕಾಡಿನ ರಕ್ಷಣೆಗಾಗಿ ಅವರು ತೊಟ್ಟ ಶಸ್ತ್ರ ಈಗಲೂ ಅವರು ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ. ಅವರುತ್ತರ ಥಟ್ಟನೆ ಬಂತು “ಶೂಟ್ ಮಾಡ್ತೀನಿ.”

ಪ್ರಕೃತಿಯಲ್ಲಿ ಇರುವೆಯಿಂದ ಆನೆಯವರೆಗೆ, ಗರಿಕೆಯಿಂದ ಹೆಮ್ಮರದವರೆಗೆ ಇರುವ ಎಲ್ಲಾ ಜೀವಿಗಳೂ ಅವಕ್ಕೊದಗುವ ಎಲ್ಲ ನಿರ್ಜೀವಿಗಳೂ ವನ್ಯ. ಇಲ್ಲಿ ಆನೆ ಮರ ಉರುಳಿಸಿ, ಹಿಸಿದು ತಿನ್ನುವುದು ನ್ಯಾಯ. ಕಾಟಿಯನ್ನು ಹುಲಿ ಹೊಂಚಿ ಹೊಡೆಯುವುದು ಸಹಜ. ಹೀಗೆ ದೊಡ್ಡದಾಗಿ ಕಾಣುವ ನ್ಯಾಯಗಳಷ್ಟೇ ಒಣಮರವಿಲ್ಲದೆ ಗೆದ್ದಲಿಲ್ಲ, ಹುಳಸುರಿಯುವ ಮರವಿಲ್ಲದೆ ಮರಕುಟಿಗನೆಲ್ಲಿ, ಎಂಬಿತ್ಯಾದಿ ಸುಲಭವಾಗಿ ಗಮನಕ್ಕೆ ಬಾರದ, ಅಂದರೆ ಸಣ್ಣದಾಗಿರುವ ನ್ಯಾಯಗಳೂ ವನ್ಯದಲ್ಲಿ ಪ್ರಮುಖವೇ. ಈ ಪ್ರಾಕೃತಿಕ ಸತ್ಯಗಳನ್ನು ಬಹುಶ್ರಮದ ವೀಕ್ಷಣೆ, ಜಾಣ್ಮೆ ಮತ್ತು ಅಧ್ಯಯನದಿಂದ ಅರ್ಥೈಸಿಕೊಂಡು ಸಾಮಾನ್ಯೀಕರಿಸುವ (ಸೀಮಿತ ಅರ್ಥದಲ್ಲಿ ಹೇಳುವುದಾದರೆ ಸಾರ್ವಜನಿಕ ಭಾಷೆಗೆ ಪರಿವರ್ತಿಸುವ) ಸಾಹಸ ವನ್ಯ ಸಂಶೋಧಕನದು, ತಜ್ಞನದು. ನಾಗರಹೊಳೆಯಲ್ಲಿ ಹಲವು ವರ್ಷಗಳಿಂದ ಖಾಸಗಿ ವನ್ಯ ಸಂಶೋಧಕನಾಗಿ ದುಡಿದು, ಒಟ್ಟು ಸಮಾಜಕ್ಕೆ ಅದ್ವಿತೀಯ ಕೊಡುಗೆಗಳನ್ನು ಕೊಟ್ಟವರು ಉಲ್ಲಾಸ ಕಾರಂತ. ಸಾಮಾನ್ಯರ ತಿಳುವಳಿಕೆಯಲ್ಲಿ ಅವರು ಕೇವಲ ಹುಲಿ ತಜ್ಞ. ವಾಸ್ತವದಲ್ಲಿ ನಾಗರಹೊಳೆಯ (ಈ ವಲಯದ ಯಾವುದೇ ವನ್ಯ ವಿಭಾಗದ) ಜೀವವೈವಿಧ್ಯದ ಆರೋಗ್ಯ ಸೂಚಕಾಂಕ ಮಾತ್ರ ಹುಲಿ ಎಂದು ತೋರಿಕೊಟ್ಟವರು ಇವರು. ಹುಲಿ ಇದ್ದರೆ ನಾಗರಹೊಳೆ ಉಂಟು, ಸ್ವಸ್ಥ ನಾಗರಿಕತೆಯೂ ಉಂಟು!

ಅದೊಂದು ಕಾಲವಿತ್ತು – ಭಾರತದ ನೆಲದಲ್ಲಿ ಶೇಕಡಾ ಅರವತ್ತು ಕಾಡೇ. ಆಗ ಕಾಡು ಜನಾಂಗಗಳು ಸಣ್ಣ ವಿಭಾಗಗಳಲ್ಲಿ ಕಾಡು ಕಡಿದು, ಸೌದೆ ದರಗು ಸುಟ್ಟು ಕೃಷಿ ಮಾಡುತ್ತಿದ್ದರು. ಒಂದೆರಡು ಬೆಳೆಗಳನಂತರ ಆ ಭಾಗವನ್ನು ಮತ್ತೆ ವನ್ಯಕ್ಕೆ ಬಿಟ್ಟು ಹೊಸದೇ ಕಾಡು ಅರಸಿಕೊಂಡು ಹೊರಡುತ್ತಿದ್ದರು. ಈ ಪದ್ಧತಿಗೆ ‘ಕುಮರಿ ಬೆಳೆ’ ಎನ್ನುತ್ತಿದ್ದರು. ಸಹಜಾರಣ್ಯದ ಭಾರೀ ಹರಹಿನಲ್ಲಿ ಈ ತುಣುಕುಗಳು ವಿಶೇಷ ಕೊರಗಿಲ್ಲದೆ ಮತ್ತೆ ಸೇರಿಹೋಗುತ್ತಿದ್ದವು. ಹಾಗೇ ಆ ದಿನಗಳಲ್ಲಿ ವನ್ಯಮೃಗಗಳನ್ನು ನಿಯಮಿತವಾಗಿ ಬೇಟೆಯಾಡಿ ನಾಗರಿಕತೆಯನ್ನು ಕಾಪಾಡಿಕೊಳ್ಳುವುದೂ ಆಡಳಿತದ ಕರ್ತವ್ಯವೂ ಆಗಿತ್ತು. ಆದರೆ. .

ಇಂದು ಕಾಡು ಯಾರೂ ಊಹಿಸದ ಶೇಕಡಾ ಮೂರಕ್ಕೆ ಇಳಿದಿದೆ. ಕುಮರಿ ಕೃಷಿ, ನಿರ್ವಹಣೆಗಾಗಿ ಬೇಟೆ ಎಂಬ ಶಬ್ದಗಳಿಗೆಲ್ಲಾ ಅರ್ಥವೇ ಇಲ್ಲ. ಜಾರುಗುಪ್ಪೆಯ ಕೊನೆಯ ಅಂಕದಲ್ಲಿರುವ ವನ್ಯಸ್ಥಿತಿಗಿಂದು ಕೇವಲ ಶಾಸನಾತ್ಮಕ ನಿಲುವುಗಳು ಸಾಕಾಗದು. ಮೂಲ ಏನು, ಸದ್ಯ ಎಲ್ಲಿದ್ದೇವೆ ಎಂಬುದನ್ನು ಆಧುನಿಕ ವಿಚಾರಧಾರೆ ಮತ್ತು ತಂತ್ರಜ್ಞಾನಗಳ ಬಳಕೆಯಲ್ಲಿ ಮತ್ತೆ ಮತ್ತೆ ಕಂಡುಕೊಳ್ಳುತ್ತಲೇ ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳು ವಿಕಸಿಸುತ್ತಿರಬೇಕು. ಈ ನಿಟ್ಟಿನಲ್ಲಿ ಅಗ್ರಮಾನ್ಯ ಸಂಶೋಧನಾ ಕಾರ್ಯ ನಡೆಸುತ್ತಿದ್ದವರು ಉಲ್ಲಾಸ ಕಾರಂತ. ಜೊತೆಜೊತೆಗೆ ತಾನು ಕಂಡ ಸತ್ಯಗಳನ್ನು ಪ್ರಜಾಸತ್ತಾತ್ಮಕ ದಾರಿಯಲ್ಲಿ ಅನುಷ್ಠಾನಕ್ಕೆ ತರಲು ಮುಂಚೂಣಿಯ ಕಾರ್ಯಕರ್ತನೂ ಇವರಾದರು. ನಾಗರಹೊಳೆಯ ಒಳಿತಿಗೇನಾಗಬೇಕು ಎಂದು ಹೇಳಿದವರೇ ಅಂದು ಕೇವಲ ಕಾಯ್ದಿರಿಸಿದ ಕಾಡಾಗಿದ್ದ ಕುದುರೆಮುಖ ಪುಷ್ಪಗಿರಿಯಂಥವು ಕೂಡಾ ವನ್ಯರಕ್ಷಣಾ ತಾಣವಾಗಬೇಕು ಎನ್ನುವುದನ್ನು ಅಧ್ಯಯನಾಧಾರಗಳಿಂದ ಪ್ರತಿಪಾದಿಸಿದರು. ಇಂದು ಏಷ್ಯಾ ಖಂಡದಲ್ಲೇ ವನ್ಯ ರಕ್ಷಣಾ ಚಟುವಟಿಕೆಗಳ ಖ್ಯಾತ ಸಂಚಾಲಕರೂ ಆಗಿದ್ದಾರೆ.

ಯಾವುದೇ ನೆಲದ ಭೌಗೋಳಿಕ ವಿವರಗಳು ಇಂದು ಹಲವು ಮುಖದ (ಉಪಗ್ರಹದ ಮೂಲಕವೂ) ಸರ್ವೇಕ್ಷಣ ವರದಿಗಳಲ್ಲಿ ಧಾರಾಳ ಲಭ್ಯ. ಅವು ದಿನ ರಾತ್ರಿಯಲ್ಲಿ ಬದಲಾಗುವವೂ ಅಲ್ಲ. ಉದಾಹರಣೆಗೆ ನಾಗರಹೊಳೆಯ ಉದ್ದಗಲ, ಅಲ್ಲಿನ ನೆಲ ಜಲ ಹಸಿರಿನ ಹಂಚಿಕೆಗಳು, ಋತುಮಾನದ ಬದಲಾವಣೆಗಳು, ಇನ್ನೂ ಮುಂದುವರಿದು ಸಾಮಾನ್ಯ ಮನುಷ್ಯ ಹಸ್ತಕ್ಷೇಪದ ವಿವರಗಳೂ (ಕಟ್ಟಡಗಳು, ದಾರಿ, ವಾಹನ ಮತ್ತು ಮನುಷ್ಯ ವಸತಿ ಹಾಗೂ ಸಂಚಾರದ ದಾಖಲೆ ಇತ್ಯಾದಿ) ಖಚಿತವಾಗಿ ದಾಖಲುಗೊಳಿಸುವ ವ್ಯವಸ್ಥೆಯಿದೆ. ಆದರೆ ಮುಕ್ತವಾಗಿರುವ ಮತ್ತು ಸದಾ ಚಲನಶೀಲವಾಗಿರುವ ವನ್ಯ ಜಾನುವಾರುಗಳ ಸಮೀಕ್ಷೆಗೆ ಪರೋಕ್ಷ ದಾರಿಗಳಿಲ್ಲ. ನಾಗರಿಕ ವಲಯಗಳಲ್ಲಿ ಜನನ, ಮರಣ, ಪ್ರವಾಸ, ವಲಸೆಗಳೆಲ್ಲಕ್ಕೂ ದಾಖಲಾತಿಯ ವ್ಯವಸ್ಥೆಯಿದೆ. ಆದರೂ ಯೋಜನೆ ಮತ್ತು ಸವಲತ್ತುಗಳ ವಿಸ್ತರಣೆಗೆ, ನಿಯಮಿತ ವಾಸ್ತವ ಜನಗಣತಿ ನಡೆಯಲೇ ಬೇಕಾಗುವುದನ್ನು ನಾವು ಕಂಡವರೇ ಇದ್ದೇವೆ. ಅಂಥ ಯಾವುದೇ ಶಾಸನಾತ್ಮಕ ವ್ಯವಸ್ಥೆ ಸಾಧ್ಯವಿಲ್ಲದ ವನ್ಯದಲ್ಲಿ ಜಾನುವಾರು ಗಣತಿ ಸದಾ ದೊಡ್ಡ ಸವಾಲು.

ಬ್ರಿಟಿಷರ ಕಾಲದಿಂದ ಅರಣ್ಯ ಇಲಾಖೆಯಲ್ಲಿ ವಿಕಾಸಗೊಂಡು ಬಂದ ಗಣತಿ ಅಪರಿಪೂರ್ಣವಾಗಿತ್ತು. ಉತ್ಸಾಹ ಒಂದೇ ಬಂಡವಾಳವಾದ ತೀರಾ ಕಚ್ಚಾ ಆಸಕ್ತಿಗಳ ಸ್ವಯಂಸೇವಕರ ಸಹಾಯದೊಡನೆ ಇಲಾಖೆ ಯಾವುದೋ ಒಂದು ಋತುವಿನಲ್ಲಿ ಗಣನೆ ನಡೆಸುತ್ತಿತ್ತು. ಅದೂ ಲಭ್ಯ ದಾರಿಗಳಲ್ಲಿ ಮತ್ತು ಕೇವಲ ಕಣ್ಣಂದಾಜಿನಲ್ಲಿ ನಡೆಯುತ್ತಿದ್ದ ಕ್ರಿಯೆ. ಇದೂ ವಿವಿಧ ವಲಯಗಳಲ್ಲಿ ಏಕಕಾಲಕ್ಕೆ ನಡೆಯುತ್ತಿರಲಿಲ್ಲ. ಅಂದರೆ ಸಹಜವಾಗಿ ವಲಸೆ ಹೋಗುವ ಪ್ರಾಣಿಗಳು ಎಲ್ಲೂ ಲೆಕ್ಕಕ್ಕೆ ಸಿಗದೇ ಹೋಗುವ ಅಥವಾ ಹಲವು ಬಾರಿ ಗಣನೆಗೆ ಒಳಗಾಗುವ ಅವಕಾಶವಿತ್ತು. ಇನ್ನು ಮಾಂಸಾಹಾರಿ ಪ್ರಾಣಿಗಳಾದ ಹುಲಿ ಚಿರತೆಯಂಥವು, ತೀರಾ ಸಣ್ಣ ಪ್ರಾಣಿಗಳು ಗೋಪ್ಯ ಸಾಧಿಸುವುದರಿಂದ ಲೆಕ್ಕ ಅಸ್ಪಷ್ಟವಾಗಿಯೇ ಉಳಿಯುತ್ತಿತ್ತು. ಇನ್ನು ಬರಿಯ ಹುಲಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯಲ್ಲಿ ಬಹುಪ್ರಚಾರದಲ್ಲಿದ್ದ ಹುಲಿಗಳ ಹೆಜ್ಜೆ ಗುರುತುಗಳನ್ನು ಪ್ರತಿಮಾಡಿ ಎಣಿಸುತ್ತಿದ್ದ ಕ್ರಮವನ್ನಂತೂ ಉಲ್ಲಾಸ್ ಬಹಳ ಹಿಂದೆಯೇ ಅಪರಿಪೂರ್ಣವೆಂದು ಸಾಧಿಸಿ ತೋರಿದ್ದರು. (ಪ್ರಾಣಿಸಂಗ್ರಹಾಲದಲ್ಲಿದ್ದ ನಾಲ್ಕು ಹುಲಿಗಳ ಬರಿಯ ಹಿಂಗಾಲಿನ ಹೆಜ್ಜೆಯಚ್ಚುಗಳನ್ನು ಇವರು ವೈವಿಧ್ಯಮಯ ನೆಲಗಳಿಂದ ಸಂಗ್ರಹಿಸಿದರಂತೆ. ಆ ಮೂವತ್ಮೂರು ಚಿತ್ರಗಳನ್ನು ಇವರು ಇಲಾಖೆಯ ಹೆಜ್ಜೆಗುರುತು ತಜ್ಞರ ಎದುರು ಒಡ್ಡಿದ್ದರಂತೆ. ತಜ್ಞರು ಅವರ ಅನುಭವಕ್ಕೆ ಪ್ರಾಮಾಣಿಕರಾಗಿ ಹೆಣ್ಣು, ಗಂಡು, ಮರಿ ಎಂದೆಲ್ಲಾ ‘ಸ್ಪಷ್ಟ’ವಾಗಿ ವಿಂಗಡಿಸಿಯೇ ಕೊಟ್ಟ ಗಣನೆಯ ಮೊತ್ತ ಆರರಿಂದ ಇಪ್ಪತ್ಮೂರರವರೆಗೂ ಬೆಳೆದಿತ್ತಂತೆ!)

ಉಲ್ಲಾಸ್ ತನ್ನ ಸಂಶೋಧನಾ ಮಾರ್ಗದರ್ಶಿ – ಜಾರ್ಜ್ ಶಾಲರ್, ಸಹಕಾರದಲ್ಲಿ ನಾಗರಹೊಳೆಯಲ್ಲಿ ನಡೆಸಿದ್ದ ಜಾನುವಾರು ಗಣತಿಯನ್ನು ಸರಳವಾಗಿ ‘ಸೀಳು ಜಾಡಿ’ನ ಗಣತಿ (line transact) ಎಂದೇ ಹೇಳಬಹುದು. ಇದಕ್ಕೆ ಮೂಲಭೂತವಾಗಿ ನಾಗರಹೊಳೆಯ ಸಮಗ್ರ ಭೌಗೋಳಿಕ ವಿವರಗಳ ಭೂಪಠವನ್ನು ಎದುರು ಇಟ್ಟುಕೊಂಡು ನೆಲ ಮತ್ತು ಸಸ್ಯವೈವಿಧ್ಯಗಳ ವಲಯಗಳನ್ನು ಗುರುತಿಸಿದರು. ಉದಾಹರಣೆಗೆ ಏರಿಳಿತಗಳ ನೆಲ, ಜವುಗು ಪ್ರದೇಶ, ಮನುಷ್ಯ ಚಟುವಟಿಕೆಗಳ ಸಮೀಪದ ನೆಲ ಇತ್ಯಾದಿ ಒಂದು ಗುಂಪು. ಮತ್ತೊಂದರಲ್ಲಿ ಸಹಜಾರಣ್ಯ, ನೆಡುತೋಪು, ನಿತ್ಯಹರಿದ್ವರ್ಣ ಕಾಡು, ಎಲೆ ಉದುರಿಸುವ ಕಾಡು, ಹುಲ್ಲುಗಾವಲು, ಬಯಲು ಇತ್ಯಾದಿ ಇನ್ನೊಂದು ಗುಂಪು. ಮತ್ತೆ ಇವೆಲ್ಲವುಗಳಿಗೆ ವ್ಯಾಪ್ತಿಯ ಬಲದಲ್ಲಿ ಖಚಿತ ಪ್ರಾತಿನಿಧ್ಯ ದೊರಕುವಂತೆ ಆರು (ಅಂದು) ಗೀಟು ಹಾಕಿದರು. ಹೆಚ್ಚು ಕಡಿಮೆ ನೇರವಾದ ಈ ಗೀಟುಗಳು ನೆಲಕ್ಕಿಳಿಸಿದಲ್ಲಿ ತಲಾ ಸುಮಾರು ಮೂರರಿಂದ ಐದು ಕಿಮೀ ಉದ್ದ ಮೀರುತ್ತಿರಲಿಲ್ಲ. ಅವನ್ನು ತುಂಬಾ ಸಂಯಮದಿಂದ ನಾಗರಹೊಳೆಯ ಭೂಮಿಗಿಳಿಸಿ, ‘ಸೀಳುಜಾಡು’ಗಳನ್ನಾಗಿ ರೂಪಿಸಿಕೊಂಡರು. ಈ ಜಾಡಿನಲ್ಲಿ ಒಬ್ಬ ಮನುಷ್ಯ ಸುಲಭವಾಗಿ ನಡೆದು ಹೋಗುವಷ್ಟೇ ಅಗಲಕ್ಕೆ ಕುರುಚಲು ಗಿಡಗಳನ್ನೂ ದೃಷ್ಟಿಗಡ್ಡವಾಗುವ ಪೊದರುಗೈಗಳನ್ನೂ ಸವರಿದರು. ಸಹಜ ನಡಿಗೆಗೆ ಒಗ್ಗುವಷ್ಟು ಹಸನುಗೊಳಿಸಿದರು. ಈ ಜಾಡಿನ ಪ್ರತಿ ನೂರು ಮೀಟರಿಗೆ ಅಳತೆಗಲ್ಲು, ಉಳಿದಂತೆ ಜಾಡು ಅನುಸರಿಸುವವರ ಅನುಕೂಲಕ್ಕೆ (ತಪ್ಪಿಹೋಗದಂತೆ) ಲಭ್ಯ ಮರ, ಕಲ್ಲಿನ ಮೇಲೆ ಎದ್ದು ಕಾಣುವಂತೆ ಪೈಂಟಿನ ಗುರುತುಗಳನ್ನೂ ಹಾಕಿದ್ದರು. (ನಾಗರಹೊಳೆಯ ಭೂಪಟ ಹಾಗೂ ಸೀಳು ಜಾಡಿನಲ್ಲಿ ಒಂದು ಜೋಡಿ ಗಣತಿದಾರರು ನಡೆದಿರುವ ಚಿತ್ರಗಳ ಕೃಪೆ ರೋಹಿತ್ ರಾವ್)

ಅತ್ತ ಮಳೆಗಾಲದ ಸಂತ್ರಸ್ತ ದಿನಗಳೂ ಅಲ್ಲ, ಇತ್ತ ತೀವ್ರ ಬೇಸಗೆಯ ಜಡ ದಿನಗಳೂ ಅಲ್ಲದ ಋತುವಿನಲ್ಲಿ ಹೆಚ್ಚಾಗಿ ವನ್ಯ ಜಾನುವಾರು ಗಣತಿ ವರ್ಷಕ್ಕೊಮ್ಮೆ, ತಿಂಗಳು ಪೂರ್ತಿ ಉಲ್ಲಾಸ್ ಬಳಗ ನಡೆಸತೊಡಗಿತು. (ಇಂದು ವಿಸ್ತೃತ ನಾಗರಹೊಳೆಯಲ್ಲಿ ಇಪ್ಪತ್ತಕ್ಕೂ ಮಿಕ್ಕು ಜಾಡುಗಳಲ್ಲಿ ಗಣತಿ ವಾರ್ಷಿಕ ಬಹುಶಿಸ್ತಿನ ಕವಾಯತಿನಂತೆ ನಡೆಯುತ್ತಿದೆ. ಅಷ್ಟೇ ಅಲ್ಲ, ರಾಷ್ಠ್ರಮಟ್ಟದಲ್ಲೂ ಬಹುತೇಕ ವನಧಾಮಗಳಲ್ಲೂ ನಿಯತವಾಗಿ ನಡೆಸುತ್ತಿದ್ದಾರೆ!) ಇದನ್ನು ನಡೆಸಿಕೊಡುವ ಸ್ವಯಂಸೇವಕನಿಗೆ (ಅಕ್ಷರಶಃ ಸ್ವಯಂಸೇವೆ. ಊಟ, ವಾಸ ಮಾತ್ರ ಉಚಿತ. ಯಾವುದೇ ಸೇವಾಶುಲ್ಕ ಬಿಡಿ, ಹೋಗಿಬರುವ ಖರ್ಚೂ ವನ್ಯಪ್ರೇಮಿಗಳು ಸ್ವತಃ ಹಾಕಿಕೊಂಡು ಮಾಡುತ್ತಿದ್ದಾರೆ) ಮೂಲತಃ ಕಾಡು ನೋಡಿದ, ನಡೆದ ಮತ್ತು ಈ ವಲಯದ ವನ್ಯ ಪ್ರಾಣಿಗಳ ಸಾಮಾನ್ಯ ಜ್ಞಾನ ಅವಶ್ಯ. ಅಂಥವರಿಗೆ ಮೊದಲಲ್ಲಿ ಗಣತಿಯ ಸರಳ ಸಲಕರಣೆಗಳ (ದಿಕ್ಸೂಚಿ, ಕೋನಮಾಪಕ, ದಾಖಲಾತಿಗಾಗಿ ಸಿದ್ಧಪಡಿಸಿದ ಪತ್ರಹೊತ್ತ ಕ್ಲಿಪ್ ಬೋರ್ಡ್ ಮತ್ತು ಪೆನ್ ಆವಶ್ಯಕ ವಸ್ತುಗಳು. ದೂರದರ್ಶಕ ಇದ್ದರೆ ಒಳ್ಳೆಯದು) ಬಳಕೆ ಮತ್ತು ದಾಖಲಾತಿಯ ಶಿಸ್ತುಗಳ ಕುರಿತು ಸಣ್ಣ ತರಬೇತು ನೀಡುತ್ತಾರೆ.

ಮತ್ತೆ ವನ್ಯ ಮೃಗಗಳ ಮುಖಾಮುಖಿಯಲ್ಲಿ ಭದ್ರತಾ ಸಲಹೆಗಾಗಿ ಅನುಭವೀ ಸ್ಥಳೀಯನೊಬ್ಬನನ್ನು (ಹೆಚ್ಚಾಗಿ ಜೇನುಕುರುಬ) ಜೊತೆ ಮಾಡಿ ಬಿಡುತ್ತಾರೆ. ಭದ್ರತೆ ಎಂದ ಕೂಡಲೇ ನಾಗರಿಕ ಮನಸ್ಸು ತಪ್ಪು ತಿಳಿಯುವಂತೆ ಅಲ್ಲಿ ಯಾವುದೇ ವಿಧವಾದ ಆಯುಧಗಳು, ಕನಿಷ್ಠ ಒಂದು ಬಡಿಗೆಯೂ ಇರುವುದಿಲ್ಲ. ಗಣತಿಕಾರ ಬರಿಯ ದಾಖಲಾತಿಯಲ್ಲಿ ಮುಳುಗಿರುವಾಗ ಜೊತೆಗಾರ ಒಟ್ಟು ಪರಿಸರದ ಚಲನವಲನಗಳ ಬಗ್ಗೆ ಕಣ್ಣಾಗಿರುತ್ತಾನೆ. ಅಪಾಯಕಾರೀ ಸನ್ನಿವೇಶಗಳಿದ್ದರೆ ಆದಷ್ಟು ನಿಶ್ಶಬ್ದವಾಗಿ ಅದನ್ನು ನಿವಾರಿಸಲು ಬಳಸು ದಾರಿ ಅನುಸರಿಸುವುದೋ ಹಿಂದೆ ಸರಿಯುವುದೋ ಮುಂತಾದ ಸಲಹೆ ಮತ್ತು ಮಿತಿಯಲ್ಲಿ ಸಹಾಯಕ್ಕೂ ಆತ ಒದಗುತ್ತಾನೆ. (ತಮ್ಮತ್ತಲೇ ಬರುತ್ತಿದ್ದ ಕರಡಿಯ ಬಗ್ಗೆ ಗಣತಿದಾರನಿಗೆ ಪಿಸಿಪಿಸಿ ಹೇಳಿ, ಆತ ಪರಿಸ್ಥಿತಿ ಗ್ರಹಿಸುವ ಮೊದಲು ಮರ ಏರಿ ಕೂತ ಕುರುಬ ರೂಲಿಗೊಂದು ಎಕ್ಸಪ್ಷನ್! ಮತ್ತೇನಾಯ್ತೂಂತ ಕೇಳಿದ್ರಾ? ಗಣ್ತಿದಾರ ಸತ್ತೋನಂತ್ ಬಿದ್ಕಂಡ. ಕಲ್ಡಿ ಅವ್ನ್ ಕಿವಿಯತ್ರ ಮೂತಿಟ್ಟು “ಮಿತ್ರದ್ರೋಹೀನಾ ನಂಬ್ಬೇಡಾ”ಂತ ನೀತಿ ಮಾತ್ಯೋಳ್ಬುಟ್ಟೂ ಹೊಂಟೋಯ್ತು!)

ದಿನಕ್ಕೆ ಎರಡು ಹೊತ್ತಿನಂತೆ ಸತತ ಮೂವತ್ತು ದಿನ ಸೀಳು ಜಾಡಿನ ಜಾನುವಾರು ಗಣತಿ ನಡೆಯುತ್ತಿತ್ತು. ಹಗಲಿನ ಬೆಳಕು ಹರಿಯುವ (ಬೆಳಿಗ್ಗೆ) ಮತ್ತು ನಂದಿಹೋಗುವ (ಸಂಜೆ) ಸಮಯದಲ್ಲಿ ಸಾಮಾನ್ಯವಾಗಿ ವನ್ಯ ಪ್ರಾಣಿಗಳ ಚಟುವಟಿಕೆಗಳು ಹೆಚ್ಚಿರುತ್ತವೆ. ಅದರಲ್ಲಿ ಸುಮಾರು ಎರಡು ಗಂಟೆಯ ಅವಧಿ ಸಿಗುವಂತೆ ಆರೂ ಜಾಡುಗಳಲ್ಲಿ ಏಕಕಾಲಕ್ಕೆ ಸ್ವಯಂಸೇವಕರು ಎಣಿಕೆಯ ನಡಿಗೆಗೆ ತೊಡಗುತ್ತಾರೆ. ಬೇಟೆಗಾರ ಪ್ರಾಣಿಗಳು ಅರ್ಥಾತ್ ಮಾಂಸಾಹಾರಿ ಮೃಗಗಳು (ಹುಲಿ, ಚಿರತೆ ತಮ್ಮ ಗೋಪ್ಯ ಕಾಪಾಡಿಕೊಳ್ಳುವುದರಿಂದ ಸಾಮಾನ್ಯವಾಗಿ ದರ್ಶನ ಅಸಾಧ್ಯ. ಸಹಜವಾಗಿ ಗಣತಿಯ ಮುಖ್ಯ ಲಕ್ಷ್ಯ – ಆನೆ, ಕಾಟಿ, ಕಡವೆ, ನಾಲ್ಕು ಕೊಂಬಿನ ಕಡವೆ, ಜಿಂಕೆ, ಬರ್ಕ, ಮಂಗಗಳ ಎರಡು ವಿಧ, ಹಂದಿ ಎಂಬ ಒಂಬತ್ತು ವಿಧದ ಬಲಿಪಶುಗಳು. ಹೆಸರು, (ಅಂದಾಜು)ಸಂಖ್ಯೆ, ಜಾಡಿನಿಂದ ದಿಕ್ಕು ಮತ್ತು (ಅಂದಾಜು) ದೂರ ದಾಖಲಿಸಬೇಕು. ಸರದಿಯಲ್ಲಿ ಎಲ್ಲ ಜೋಡಿಗಳು ಎಲ್ಲ ಜಾಡನ್ನೂ ಎಲ್ಲ ಹೊತ್ತುಗಳಲ್ಲೂ ನೋಡುವಂತೆ ಬದಲಾಯಿಸುತ್ತಾರೆ.

ಸಾಮಾನ್ಯವಾಗಿ ಪ್ರತಿ ಸ್ವಯಂಸೇವಕ ಕನಿಷ್ಠ ಒಂದು ವಾರವಾದರೂ ದುಡಿಯುತ್ತಾನೆ. ಇದರಿಂದ ತಿಂಗಳ ಕೊನೆಯಲ್ಲಿ, ಆರು ವರದಿ ಗುಣಿಸು ಎರಡು ಹೊತ್ತು ಗುಣಿಸು ಮೂವತ್ತು ದಿನವೆಂದು (೩೬೦) ಬಹುವಿಸ್ತೃತ ಮಾಹಿತಿ ಲಭಿಸುತ್ತವೆ. ಲಭಿಸುವ ಸಂಖ್ಯೆಗಳನ್ನಷ್ಟೇ ಸರಾಸರಿ ಲೆಕ್ಕಕ್ಕೆ ಒಳಪಡಿಸಿದರೆ ವನಧಾಮದ ಮುಖ್ಯ ಸಸ್ಯಾಹಾರಿ ಜಾನುವಾರುಗಳ ಬಹುತೇಕ ನಿಖರ ಲೆಕ್ಕ ಸಿಗುತ್ತದೆ. ಇದರ ಆಧಾರ, ಹೆಚ್ಚಿನ ಲೆಕ್ಕಾಚಾರ ಹಾಗೂ ವನ್ಯ ಜೀವಿಗಳ ಸಹಜ ಆಹಾರ ಸರಪಳಿಯ ತಿಳುವಳಿಕೆಗಳನ್ನು ಬೆಸೆಯುತ್ತಾರೆ. ಆಗ ವನಧಾಮದ ಇತರ ಮೃಗಗಳ, ಮುಖ್ಯವಾಗಿ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಮತ್ತು ಹಂಚೋಣವನ್ನು ನಿಖರತೆಗೆ ಅತ್ಯಂತ ಹತ್ತಿರವಾಗಿ ಅಂದಾಜಿಸಬಹುದು.

ನಾನು ಜಾನುವಾರು ಗಣತಿಗೆ ಹೋದ ದಿನಗಳಲ್ಲಿ ಸ್ವತಃ ಉಲ್ಲಾಸ್, ಚಿಣ್ಣಪ್ಪ ಸಲಕರಣೆ ಬಳಕೆಯ ಪಾಠ ಮಾಡಿದ್ದಿತ್ತು. ಗಣತಿ ನಡಿಗೆಗೆ ಕೆಲವು ಜಾಡುಗಳಲ್ಲಿ ಕುರುಬನನ್ನು ಕಳಚಿ ಅವರೇ ಜೊತೆ ಕೊಟ್ಟದ್ದೂ ಉಂಟು. ಆ ವೇಳೆಗೆ ಅವರ ಕುರಿತು ಪ್ರಚಲಿತವಿದ್ದ ವೈಜ್ಞಾನಿಕ ಮೂಢನಂಬಿಕೆಗಳಲ್ಲಿ ಒಂದನ್ನು ಮಾತ್ರ ಸ್ವಲ್ಪ ವಿಸ್ತರಿಸಿ ಇಲ್ಲೇ, ಬೇಡ ಮುಂದಿನವಾರದ ಕಂತಿನಲ್ಲಿ ಹೇಳಿ ಮುಂದುವರಿಯುತ್ತೇನೆ.

(ಮುಂದಿನವಾರಕ್ಕೆ – ಉಲ್ಲಾಸ್ ಹೇಳಿದಲ್ಲಿ ಹುಲಿ ಬರುತ್ತೆ!)