ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ ಬೆಟ್ಟ ಸಾಲಿನ ನೆತ್ತಿಯಿಂದ ಹಾಲಹೊಳೆ, ಹೌದು ಹೆಸರೇ ಹಾಗೆ – ದೂದ್ ಸಾಗರ್, ಅಕ್ಷರಶಃ ನೊರೆಯುಬ್ಬಿಸಿ ಧುಮುಗುಡುತ್ತಿತ್ತು. ಆ ಎತ್ತರದಿಂದ ನಮ್ಮ ಪಾದಮೂಲದವರೆಗೆ ಮತ್ತೂ ಕೆಳಕ್ಕೆ ಮಿಂದ ಬಂಡೆಯನ್ನೆ ಮತ್ತೆ ಮೀಯಿಸುವಂತೆ, ಒತ್ತಿನ ಹಸುರಿಗೆ ಪ್ರತಿ ಕ್ಷಣದ ಬೆರಗು ಹೊಸದೇ ಅನ್ನಿಸುವಂತೆ ‘ಉಧೋ’ ಹೇಳುತ್ತಲೇ ಇತ್ತು. ನೊರೆ ಚೆಂಡು ಮುಕ್ಕುಳಿಸಿ, ವಾತಾವರಣದಲ್ಲೆಲ್ಲ ಹುಡಿ ಹಾರಿಸಿ, ಮಳೆಯನ್ನೂ ತಾನೇ ವಹಿಸಿಕೊಂಡು ಸಂಭ್ರಮಿಸುತ್ತಿದ್ದ ದೂದ್ ಸಾಗರ್ ಹೊಳೆಯ ಜಲಪಾತ ಅತಿಶಯೋಕ್ತಿಗಳೆಲ್ಲವನ್ನೂ ಅನ್ವರ್ಥಗೊಳಿಸಿಕೊಂಡಿತ್ತು. ನನ್ನ ನೆನಪಿನ ಮಸುಕು ಎಳೆ ಹಿಡಿದು, ಕನಿಷ್ಠ ಸೌಕರ್ಯಗಳ ಕೊರತೆ ಮೀರಿ, ನಿರುತ್ತೇಜಕ ಮಳೆ ಮಬ್ಬುಗಳ ಪೊರೆ ಹರಿದು ಹದಿಮೂರು ಕಿಮೀ ನಡೆದು ಬಂದ ನಮಗೆ ಪರಮ ಧನ್ಯತೆಯ ಸನ್ನಿವೇಶ. ದೇಶ ಸ್ವಾತಂತ್ರ್ಯ ಸ್ವರ್ಣ ಸಂಭ್ರಮದ ಔಪಚಾರಿಕತೆಗಳಲ್ಲಿ ಸಿಕ್ಕಿಕೊಂಡಿದ್ದಾಗ ನಮಗಿಲ್ಲಿ ನಿಜ ಹಬ್ಬ. ಪಶ್ಚಿಮ ಘಟ್ಟದ, ಗೋವಾ ವಲಯದ, ಕಗ್ಗಾಡಮೂಲೆಯ, ಯುಗಾಂತರಗಳ ರುದ್ರ ನಾಟ್ಯಕ್ಕೆ ಐದು ಮಿನಿಟಿಗಾದರೂ ಪ್ರೇಕ್ಷಕರಾಗುವ ಅವಕಾಶ. ಈ ಸಾಹಸ ಯಾತ್ರೆಯ ರಮ್ಯ ಕಥಾಮೃತವನ್ನಿನ್ನು ಸಾದ್ಯಂತ ಬಣ್ಣಿಸುತ್ತೇನೆ (“…ಬಣ್ಣಿಪೆನೀ ಕಥಾಮೃತವಾ” ಇಲ್ಲಿ ಚಂಡೆ ಬಡಿಬೇಕು!).

ಆ ಬೆಳಿಗ್ಗೆ, ಅಂದರೆ ೧೯೯೭ರ ಆಗಸ್ಟ್ ಹದಿನೈದರ ಶುಭ ಪ್ರಾತಃ ಕಾಲದಲ್ಲಿ ಮಂಗಳೂರು – ಮಡ್ಗಾಂವ್ ರೈಲಿನಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ಯಾನ-ಸಂತೋಷಿಗಳೇ ಇದ್ದಂತಿತ್ತು. ಕೊಂಕಣ ರೈಲ್ವೇಯವರ ಪ್ರಾಥಮಿಕ ಓಡಾಟಗಳ ದಿನಗಳವು. ಕರಾವಳಿಯ ಗದ್ದೆ ಬಯಲುಗಳನ್ನು ದಿಬ್ಬ ಸಾಲಿನಲ್ಲೂ ಹೊಳೆ ಹಿನ್ನೀರುಗಳನ್ನು ಕುಂದ ಮಾಲೆಯಲ್ಲೂ ಹಿಂದೆ ಜಾರಿಸುತ್ತಲೇ ಇತ್ತು. ಅಸ್ಥಿರ ದಿಣ್ಣೆ ಗುಡ್ಡಗಳನ್ನು ವಿಸ್ತಾರವಾಗಿ ಇಕ್ಕಡಿಗೈದು, ಅನಿವಾರ್ಯವಾಗಿ ಬೆಟ್ಟವೇ ಎದುರಾದಲ್ಲಿ ಸುರಂಗದಲ್ಲಿ ನುಸುಳಿ ಹಾಯುವ ಸುಂದರ ಓಟದಲ್ಲಿ ಭಾಗಿಗಳೂ ವೀಕ್ಷಕರೂ ಆಗ ಬಂದವರೇ ಅಧಿಕ. ಆರೋಹಣ ಪರ್ವತಾರೋ(ಗಿ/)ಹಿಗಳು ಸಾಹಸಿಗಳು ಎಂಬ ಬಿ(ದಿರಾ/)ರುದಾಂಕಿತರಾದ ನಾವಾರು ಮಂದಿಯಾದರೋ ಇದಕ್ಕೆ ಹೊರತಲ್ಲ. ರೈಲ್ವೇ ಸಂಪ್ರದಾಯಕ್ಕೆ ತಪ್ಪದಂತೆ ಆರಂಭ ವಿಳಂಬವೇ ಆಗಿತ್ತು. (ಒಮ್ಮೆ ಆರು ಗಂಟೆಗೆ ಸರಿಯಾಗಿ ರೈಲು ಹೊರಟಾಗ ಏದುಸಿರು ಬಿಟ್ಟು ಹತ್ತಿದವನೊಬ್ಬ ಪಕ್ಕದವನಲ್ಲಿ ಉದ್ಗರಿಸಿದ “ಅಬ್ಬ! ಇಂದಾದರೂ ಸಮಯಕ್ಕೆ ಸರಿಯಾಗಿ ಹೊರಟಿತಲ್ಲ.” ಗಂಟುಮೋರೆಯ ಪಕ್ಕದವ “ಹಾಂ! ಇದು ನಿನ್ನೆಯ ರೈಲು.”) ಆದರೆ ಇದ್ದ ಇಲ್ಲದ ಸಿಗ್ನಲ್ ನೆಪಗಳು, ಒಂದು ಅರ್ಧ ಟಿಕೇಟಿಗೂ ಗತಿಯಿಲ್ಲದ ಪುಟಗೋಸಿ ನಿಲ್ದಾಣಗಳ ಕಟ್ಟೆಪೂಜೆ ಇಲ್ಲದೇ ಉಡುಪಿ, ಕುಂದಾಪುರ, ಬೈಂದೂರುವರೆಗಿನ ಓಟ ಲವಲವಿಕೆಯಲ್ಲೇ ಸಾಗಿತು. ಪ್ರಕೃತಿಯ ಈ ಮೇಲ್ಮೈ ಅಡ್ಡ ರೇಖೆ ತರುವ ಸಾಮಾಜಿಕ ಮತ್ತು ಜೈವಿಕ ಸ್ಥಿತ್ಯಂತರಗಳನ್ನು ಎಣಿಸುವ ಕಾಲ ನಾವೆಂದೋ ದಾಟಿದ್ದೇವೆ. [ನನ್ನ ಬಾಲ್ಯದಲ್ಲಿ, ಮಡಿಕೇರಿಯಲ್ಲಿ ಕಳ್ಳತನ ಹೆಚ್ಚಾದಾಗ ಮೈಸೂರಿನವರೆಗೆ ಬರುವ ರೈಲನ್ನು ಆಪಾದಿಸುತ್ತಿದ್ದರು; ರೈಲಿನಲ್ಲಿ ಕಳ್ಳರು ಜಾಸ್ತಿ!] ಪ್ರಯಾಣಿಕರಿಗೆ ಸಂಸ್ಕೃತಿಗಳ ವಿಶಿಷ್ಟ ಪೋಣಿಕೆಯ ದರ್ಶನದಂತೆ ಸ್ಥಳೀಯವಾಗಿಯೂ ಸಂಸ್ಕೃತಿಗಳು ಹೊಸ ಪ್ರಭಾವಗಳಿಗೆ ವಿಕಸಿಸುವುದನ್ನು ಗಮನಿಸುವುದೂ ಉಲ್ಲಾಸದಾಯಕ ಅನುಭವ.
[೧೯೬೦ರ ದಶಕದಲ್ಲಿ, ಪುತ್ತೂರಿನ ಹಳ್ಳಿ ಮೂಲೆ – ಸಂಟ್ಯಾರಿನಲ್ಲಿ ನಾವು (ತಮ್ಮ ಅಮ್ಮನೊಡನೆ) ಅಜ್ಜನೊಡನೆ ದಾರಿ ಬದಿಗೆ ಬಂದೆವೆಂದರೆ ಏಕೈಕ ಗೂಡು ಹೋಟೆಲಿನ ಶೇಷ ನಮಗಾಗಿ ಒಂದು ಬೆಂಚು ಹೊರಗೆ ಹಾಕುತ್ತಿದ್ದ. ಮತ್ತೆ ಮಾತೆಲ್ಲಾ ಆ ದಾರಿಯಲ್ಲಿದ್ದ ಬಸ್ಸಿನದೇ, “ಒಂಬತ್ತು ಗಂಟೆಗೆ ಮಡಿಕೇರಿಯಿಂದ ಬರಬೇಕಾಗಿದ್ದ ಇಬ್ರಾಹಿಂ (ಕೂರ್ಗ್ ಟ್ರಾನ್ಸ್ಪೋರ್ಟಿನ ಚಾಲಕನ ಹೆಸರು) ಇವತ್ತು ಹತ್ತು ಮಿನಿಟು ತಡ. ಆದರೆ ವಾಪಾಸು ಹೋಗುವಾಗ ಐದು ಮಿನಿಟು ಹೆಚ್ಚು ಕಡಿಮೆ, ಇನ್ನೇನು ಬರುವ ಹೊತ್ತಾಯ್ತು. ಅಕೋ ಸದ್ದು….” ಎಲ್ಲೋ ಆಗೊಮ್ಮೆ ಈಗೊಮ್ಮೆ ಹಾದು ಹೋಗುವ ಲಾರಿಗೋ ಕಾರಿಗೋ ಕಿವಿ, ಕಣ್ಣು, ಅರ್ಥ ಕಟ್ಟುವ ತವಕ. ನಾನಂಗಡಿ ಮುಚ್ಚುವ ಕಾಲದಲ್ಲೂ ಕೆಲವೊಮ್ಮೆ ತೀರಾ ಹಳ್ಳಿಮೂಲೆಯಿಂದ ಬಂದವರು ಕೇಳುವುದಿತ್ತು – “ಬಾಕ್ರಬೈಲು-ಕನ್ಯಾನ ಬಸ್ಸು ಹೋಯ್ತಾ?”]

ಗದ್ದೆಯಲ್ಲಿ ಕಳೆ ಕೀಳುತ್ತಿದ್ದಲ್ಲಿಂದ ಸೊಂಟ ನೆಟ್ಟಗೆ ಮಾಡಿದ ಹಸನ್ಮುಖಿ ಶೇಷನ ಹೆಂಡತಿಯೇ ಇರಬೇಕು. ರೈಲು ನೋಡುವ ಭರದಲ್ಲಿ ಕಟ್ಟಪುಣಿ ಹೆಜ್ಜೆ ತಪ್ಪಿ ಗೊಸರಲ್ಲೊಂದು ಕಾಲಿಟ್ಟು ನಿಂತವನು ಅಣ್ಣನ ಕೆರೆ ತುಂಡುಗುತ್ತಿಗೆ ಮಮ್ಮದೆ ಅಲ್ವಾ! ಸ್ವಾತಂತ್ರ್ಯೋತ್ಸವದ ಸಿಹಿ ಮುಖಕ್ಕೆ, ಉರುಡಾಟದ ಕೆಸರು ಸಮವಸ್ತ್ರಕ್ಕೆ ಹತ್ತಿಸಿಕೊಂಡ ಹಲವು ಚಿಗುರುಗಳು ಟಾಟಾ ಬೈಬಾಯಿಗಳನ್ನು ಅರಚುವಾಗ, ಗೋಪಿಕರು ಅಮ್ಮನೊಡನೆ ಬಾಲ ಎತ್ತಿ ದೌಡುವಾಗ, ಧ್ಯಾನಸ್ಥ ಬೆಳ್ಳಕ್ಕಿ ಹಿಂಡು ಮತ್ಸ್ಯಧ್ಯಾನ ಮರೆತು ಚಿಮ್ಮುವಾಗ, ತಲೆದೂಗುವ ಹಸುರಿನಲ್ಲಿ, ತಡೆದು ತೀಡುವ ಗಾಳಿಯಲ್ಲಿ, ಬಿಸಿಲು ಮಳೆಗಳ ವಿನಿಮಯದಲ್ಲಿ ಎಲ್ಲರೂ ಅವರವರ ಸಂಟ್ಯಾರ್ ಕಂಡಿರಬಹುದು. ಡೀಸೆಲ್ ಎಂಜಿನ್ನಿನ ಶ್ರುತಿಗಾರಿಕೆ, ಹಳಿಚಕ್ರಗಳ ಮೇಳದ ಲಯಗಾರಿಕೆ (ಕಿವಿಗೊಟ್ಟಿದ್ದೀರಾ? ಕೊಂಕಣ ರೈಲ್ವೇ ಮಾರ್ಗದಲ್ಲಿ ಲಟಕ್ ಪಟಕ್ ಇಲ್ಲ!) ಮೋಜಿನ ಯಾತ್ರಿಕರಿಗೆ ಪ್ರಚೋದನೆ ಕೊಡುವುದು ಸಹಜ. ಎಲ್ಲೋ ಕೇಳಿದ ಶರೀಫರ ಹಾಡು, ಅಣ್ಣಾವ್ರ ಕಣ್ಣುಡಿ, ರೆಹ್ಮಾನನ ಬೀಟುಗಳು, (ಸ್ವಾತಂತ್ರ್ಯೋತ್ಸವದ ಅಮಲಿನಲ್ಲಿ) ‘ಸಾರೇ ಜಹಾಂಸೇ ಹುಚಾ’ ಒರಲುಗಳು, ಗುಂಪಿನ ಒದರಾಟಗಳಲ್ಲಿ ಅರ್ಥ ಕಳೆದುಕೊಂಡ ‘ಸುರಾಂಗನಿಕಾ ಮಾಲು’ಗಳು ವಿವಿಧ ತರಂಗಾಂತರಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಂತು ಬೈಂದೂರ ಗುಹೆ.

ಹಳೆ ತಲೆಮಾರಿನ ರೈಲುಮಾರ್ಗಗಳಲ್ಲಿ ಶಿರಾಡಿ ಒಂದು ದಾಖಲೆ. ಅಲ್ಲಿನ ಅಸಂಖ್ಯ ಗುಹೆ ಸೇತುವೆಗಳನ್ನು ರಚನಾ ಕಾಲದಲ್ಲೂ ಅನಂತರವೂ ನಡೆದೂ ರೈಲಿನಲ್ಲಿ ಕುಳಿತೂ (ಹಳಿಯ ಮೇಲೆ ಬೈಕೋಡಿಸಿಯೂ) ನಮ್ಮ ಬಳಗ ಅನುಭವಿಸಿತ್ತು. ರೈಲಿನ ಏರುಕೋನದ ಮತ್ತು ತಿರುವಿನ ಮಿತಿಗಳ ಅರಿವಿನೊಡನೆ ನೇರ ಘಟ್ಟ ನಿಭಾಯಿಸಲು ಹೊರಟ ತಂತ್ರಜ್ಞರಿಗೆ ಐವತ್ತೂ ಚಿಲ್ಲರೆ ಗುಹೆಗಳನ್ನೂ ಅಸಂಖ್ಯ ಸೇತುವೆಗಳನ್ನೂ ರಚಿಸುವುದು ಅನಿವಾರ್ಯವಾಗಿತ್ತು. (ನಿಮಗೆ ಗೊತ್ತೇ? ಆಗ ಕೊರೆದ ಅತ್ಯಂತ ಉದ್ದದ ಸುರಂಗ ಮಂಗಳೂರಿನ ಕುಲಶೇಖರದಲ್ಲಿದೆ) ಅದೇ ಪಶ್ಚಿಮ ಘಟ್ಟದ ತಪ್ಪಲಲ್ಲಿದ್ದರೂ ಕೊಂಕಣ ರೈಲ್ವೇಯ ಸವಾಲುಗಳು ಬೇರೇ. ನೇರ ಘಟ್ಟಕ್ಕಿದು ಮುಖ ಕೊಡುವುದಿಲ್ಲ. ಅಲ್ಲಿಂದ ಕರಾವಳಿಗೆ ಇಳಿಯುವ ಏಣುಗಳು, ಅಸಂಖ್ಯ ತೊರೆಗಳು ಮತ್ತೂ ಸಮುದ್ರ ಸಮೀಪಿಸುವುದರಿಂದ ಒದಗುವ ವಿಸ್ತಾರ ಹಿನ್ನೀರು ಅಥವಾ ಜವುಗು ನೆಲ ಸುಧಾರಿಸುವುದು ಪ್ರಾಥಮಿಕ ಕೆಲಸ. ದೇಶದ ಪಶ್ಚಿಮ ವಲಯದಲ್ಲಿ ಒಂದು ದೀರ್ಘ ಹಾಗೂ ಮುಖ್ಯ ಸಂಪರ್ಕ ಸಾಧನವಾಗುವುದರಿಂದ ಎಲ್ಲ ಋತುಮಾನಗಳಲ್ಲೂ ವೇಗ ಇಲ್ಲಿ ಹೆಚ್ಚಿನ ಆದ್ಯತೆ ಪಡೆಯುತ್ತದೆ. (ಇಲ್ಲಿನ ಲಕ್ಷ್ಯ ಗಂಟೆಗೆ ೧೬೦ ಕಿಮೀ) ಸಹಜವಾಗಿ ಇಲ್ಲಿ ಬಳಸು ದಾರಿಗಳೂ ಕಡಿಮೆ. ತಗ್ಗಿನ ಏಣುಗಳನ್ನು ಸ್ಪಷ್ಟವಾಗಿ ಇಬ್ಭಾಗಿಸಿ, ದುರ್ಬಲ ಹಾಗೂ ಎತ್ತರದ ಏಣುಗಳ ಒಳಕ್ಕೆ ಸುರಂಗಗಳನ್ನು ಕೊರೆಯುತ್ತ ಸಾಗಿದ್ದಾರೆ. ಸ್ಪಷ್ಟ ಹೊಳೆ ನದಿಗಳಲ್ಲದೆ ಉಸುಕು ನೆಲ, ಜವುಗು ಭೂಮಿ ಹಾಗೂ ನೇರ ಸಮುದ್ರದ ಅಬ್ಬರಕ್ಕೆ ಸಿಲುಕದ ಅಂತರಗಳನ್ನು ಗಮನದಲ್ಲಿಟ್ಟುಕೊಂಡು ಅಸಂಖ್ಯ ಸೇತುವೆಗಳೂ ಇಲ್ಲಿವೆ. ಗುಹೆಗಳ ಉದ್ದಕ್ಕೆ ಇಲ್ಲಿ ಮಿತಿ ಹಾಕಿಕೊಂಡಿಲ್ಲ. ಬದಲಿಗೆ ಆವಶ್ಯಕತೆಯಿದ್ದಲ್ಲಿ ನಡುವೆ ಗವಾಕ್ಷಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕಿತ್ತಳೆ ವರ್ಣದ ವಿದ್ಯುದ್ದೀಪಗಳಿಂದ ಬೆಳಗುವ ಇಲ್ಲಿನ ಗುಹೆಗಳೊಳಗಿನ ಓಟ ನಮ್ಮಲ್ಲಿ ಉತ್ಸವದ ಭಾವ ಮೂಡಿಸುತ್ತದೆ. ಆದರೆ ಈ ಭಾವ, ಖಾಸಾ ಉದ್ಗಾರಗಳ ಮಟ್ಟ ಮೀರಿ ಪ್ರತೀ ಗುಹೆಯುದ್ದಕ್ಕೂ ಕಿವಿಗಡಚಿಕ್ಕುವ ಗದ್ದಲವಾಗುವ ಪರಿ ಮಾತ್ರ ಅಸಹ್ಯ. ಸ್ವಾತಂತ್ರ್ಯ ಸ್ವಚ್ಛಂದತೆಗೆ ರಹದಾರಿ ಅಲ್ಲ. ಸಾರ್ವಜನಿಕವೆನ್ನುವುದು ಗೌರವಿಸಬೇಕಾದ್ದು, ಖಾಸಾ ವಿಕಾರಗಳ ಪ್ರದರ್ಶನ ರಂಗ ಖಂಡಿತಾ ಅಲ್ಲ.

[ಮುಧೋಳ ಸಾಹಿತ್ಯ ಸಮ್ಮೇಳನ ವಠಾರ. ಸ್ವತಂತ್ರ ಭಾರತದ ಓರ್ವ ಪ್ರಜಾಪ್ರಭು ಹಲ್ಲಿನ ಸಂದಿನಲ್ಲಿ ಅಮೇಧ್ಯ ಇಟ್ಟುಗೊಂಡು, ನಿಯತವಾಗಿ ಸುತ್ತಣ ನೆಲಕ್ಕೆ ಕಾರಂಜಿ ಸಿಡಿಸುತ್ತಾ ಗೆಳೆಯ ಪಂಡಿತಾರಾಧ್ಯರ ‘ಕನ್ನಡ ಅಂಕಿ ಬಳಸಿ’ ಪ್ರದರ್ಶಿಕೆ ಪ್ರವೇಶಿಸಿದ. ಕ್ರಮದಂತೆ ಅವನು ಮುಖ ತಿರುವಿ, ತುಟಿ ಚೂಪು ಮಾಡಿ, ಇನ್ನೇನು ಬಾಯ್ಕಾರಂಜಿ ಸಿಡೀಬೇಕು. ಆರಾಧ್ಯರು ತಣ್ಣಗೆ “ಹೊರಗೆ ಉಗೀಬೇಡಿ” ಅಂದರು. ಸ್ವಾತಂತ್ರ್ಯ ಹರಣವಾದ ಗರ್ವದಲ್ಲಿ ಆತ ಕೇಳಿದ “ಇನ್ನೆಲ್ಲಿ ಉಗೀಲೀ?” ಆರಾಧ್ಯರು ಅಷ್ಟೇ ಥಣ್ಣಗೆ “ನಿಮಗೆ ಕಿಸೆಯಿದೆಯಲ್ಲಾ” ಅಂದರು.]

ಮಂಗಳೂರು ವಲಯದಲ್ಲಿ ಅಂತರ ಹೆಚ್ಚಿದ್ದದ್ದಕ್ಕೋ ಮಳೆಗಾಲದ ಕಾವಳ ಮುಸುಕಿದ್ದಕ್ಕೋ ಕುದುರೆಮುಖ ಶೃಂಗ ಶ್ರೇಣಿ ನಮ್ಮ ಪೂರ್ವಭಿತ್ತಿಯನ್ನು ಅಲಂಕರಿಸಿರಲಿಲ್ಲ. ಆದರೆ ಉತ್ತರಕ್ಕೆ ಸರಿದಂತೆ ಚಿತ್ರ ಬದಲಿತು. ಕೊಡಚಾದ್ರಿ ವಲಯದಿಂದ ಆಚೆಗೆ ಪಶ್ಚಿಮ ಘಟ್ಟ ಕರಾವಳಿ ಸಮೀಪಿಸಿದ್ದಕ್ಕೆ ಸಹಜವಾಗಿ ದಟ್ಟ ಕಾಡು ಹೊತ್ತ ಶಿಖರ ಚೂಪುಗಳು ದಿಗಂತದಲ್ಲಿ ಮೂಡತೊಡಗಿದವು. ಕೆರೆ ಕೊಳಚೆಗಳಂತಿದ್ದ ನೀರು ಕಳೆದು ಝರಿ ಜಲಪಾತಗಳು, ಶರಾವತಿ, ಅಘನಾಶಿನಿ, ಕಾಳಿಯರಾದಿ ನದ ನದಿಗಳು, ಮಳೆಗಾಲದ ಮೊದಲ ಬಣ್ಣ ಕಳೆದು, ನಿರ್ಮಲ ಸಲಿಲಗಳೇ ಆಗಿ ಕಣ್ದುಂಬಿದವು. ಸೇತುವೆಗಳ ಮೇಲೆ ಸೇತುವೆ ದಾಟುತ್ತಾ ಅಲ್ಲೆಲ್ಲ ಜನ ಗುಂಪುಗೂಡಿ ನಿಂತು ಕೈಬೀಸುವಾಗ, ಬೀಸು ಗಾಳಿಗೆ ಸುತ್ತಣ ಹಸಿರು ತೊನೆದಾಡುವಾಗ, ನಮ್ಮ ರೈಲು-ಗಾನಕ್ಕೆ ಮಂಗಳವಾದ್ಯದ ಕಳೆ. ನಮಗೋ ಪ್ರಭಾತ ಫೇರಿಯ ಹುರುಪು. ಅದೇ ರೈಲಿನ ಮೊಳಗು, ಗುಹಾ ಪ್ರವೇಶದಲ್ಲಿ ಭಯ ಭಕ್ತಿ ಉದ್ದೀಪಿಸುವ ಶಂಖನಾದ. ಕೊಂಕಣ ರೈಲಿನ ಪ್ರತಿ ಕುಲುಕೂ ನಮಗೆ ಉದ್ದಕ್ಕೂ ಭಾವ ಸಂಗಮದ ಪಲುಕು.

‘ಕೊಂಕಣ ರೈಲು ಕುಂದಾಪುರದವರೆಗೆ ಮಾತ್ರ’, ‘ರೈಲು ಕಾಣಕೋಣಕ್ಕಷ್ಟೇ’, ‘ಮಳೆಗೆ ದರೆ ಬಿದ್ದು ಕೊಂಕಣ ರೈಲು ಕಾರವಾರದವರೆಗೆ’ ಇತ್ಯಾದಿ ಸುದ್ದಿ ತುಣುಕುಗಳನ್ನು ನಿತ್ಯ ಪತ್ರಿಕೆಗಳಲ್ಲಿ ಹೆಕ್ಕುತ್ತಾ ನಮ್ಮ ಪ್ರವಾಸದ ಹೊಳಹು ಹಾಕಿದ್ದೆವು. ಯೋಜನೆಯಂತೇ ನಾವು ಹೊರಟ ದಿನ ಆಕಾಶ ಕಳಚಿ ಬಿದ್ದು ರೈಲು ಎಲ್ಲೇ ನಿಂತರೂ ಜೊತೆಗೊಯ್ಯುವ ಮೋಟಾರ್ ಸೈಕಲ್ಲುಗಳನ್ನು ಇಳಿಸಿ, ದಾರಿಯಲ್ಲಾದರೂ ಓಡಿಸಿ ಗುರಿ ತಲಪಿಯೇ ಸಿದ್ಧವೆಂದೇ ಹೊರಟಿದ್ದೆವು. ಹಲವೆಡೆಗಳಲ್ಲಿ ದಿಬ್ಬಗಳ ಅಂಚು ದುರ್ಬಲವಾಗಿದ್ದದ್ದು, ಜಲ್ಲಿ ಹಾಸು ತುಸು ಜಗ್ಗಿ ಕಂಬಿ ಸಮತೆ ಸಂಶಯಾಸ್ಪದವಾದದ್ದು ಗೋಚರಿಸುತ್ತಿತ್ತು. ಸಣ್ಣಪುಟ್ಟ ದರೆ ಕುಸಿತ, ಅಂಚಿನ ಚರಂಡಿಗಳು ನಿಗಿದುಹೋಗಿ ಜಲ್ಲಿ ಹಾಸಿನವರೆಗೂ ನೀರಕೊರೆತ, ಹಲವು ಭಾರೀ ಕುಸಿತಗಳ ಮಣ್ಣು ಜಲ್ಲಿಹಾಸನ್ನೇ ಹೂತುಹಾಕಿದ್ದನ್ನೂ ನಾವು ನಿಧಾನಕ್ಕೆ ಹಾಯ್ದೆವು. ಒಂದೆರಡು ಕಡೆಯಂತೂ ೬೦-೭೦ ಅಡಿ ಎತ್ತರದ, ತೋರಿಕೆಗೆ ದೃಢ ಮುರಕಲ್ಲ ದರೆಗಳು ಭಾರೀ ಬಂಡೆಗಳನ್ನು ಉರುಳಿಸಿ, ಸಾಲು ಸಾಲೇ ಕಂಬಿಗಳ ಮೇಲೆ ಕವುಚಿದ್ದನ್ನು ಕರೆಗೆ ಸರಿಸಿದ್ದು ನೋಡುವಾಗ ನಮ್ಮೆದೆ ಢವ ಢವ! (ನಾವು ಹೋಗುತ್ತಿದ್ದಂತೇ ಬಿದ್ದರೆ?) ಅಂಥ ಹಲವು ಕಡೆಗಳಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆದೇ ಇತ್ತು. ತತ್ಕಾಲೀನವಾಗಿ ರೈಲು ದಾಟುವಷ್ಟೇ ಬಿಡಿಸಿಟ್ಟದ್ದು ಸ್ಪಷ್ಟವಿತ್ತು. ಅಂಥದ್ದರಲ್ಲೂ ಎಲ್ಲೋ ಸಣ್ಣದಾಗಿ ಕಲ್ಲೋ ಮಣ್ಣೋ ನಮ್ಮ ಡಬ್ಬಿಯನ್ನು ಅಡಿಯಿಂದ ಸವರಿದ ಸದ್ದು ಕೇಳಿದರೆ ನಮ್ಮ ಹೃದಯದ ಒಂದೊಂದು ಮಿಡಿತ ತಪ್ಪುತ್ತಿತ್ತು! ಆರೆಂಟು ಅಡಿ ಎತ್ತರಕ್ಕೆ ವಿವಿಧ ಗುಣಮಟ್ಟದ ಗೋಡೆಗಳು, ಸಾವಿರಾರು ಮರಳ ಮೂಟೆಗಳ ಪೇರಿಕೆ, ಉಕ್ಕಿನ ಬಲೆಯ ಹೊಲಿಗೆ, ಹೀಗೆ ರಕ್ಷಣಾ ಕ್ರಮ ವೈವಿಧ್ಯಮಯವಾಗಿ ಸಾಗಿತ್ತು. ಇನ್ನೂ ಅಪಾಯಕಾರಿ ಅನ್ನಿಸುವ, ಆಯಕಟ್ಟಿನ ಜಾಗಗಳಲ್ಲೆಲ್ಲಾ ರೈಲಿನ ಯಾನ ವೇಗ ನಿರ್ಧರಿಸಿ ನಿಶಾನಿ ತೋರಿಸುವವರನ್ನು ಕಾಣುವಾಗ ಕೃತಜ್ಞತೆಯೊಡನೆ ಹಳೆಯ ಮಾತು ನೆನಪಿಗೆ ಬರುತ್ತಿತ್ತು. ಉದ್ದ ರೈಲಿನ ಡಬ್ಬಿ ಮತ್ತವುಗಳ ಚಕ್ರಗಳ ಅಂದಾಜು ಲೆಕ್ಕ ತೆಗೆದವ ಹೇಳಿದನಂತೆ “ರೈಲು ಶತಪದಿ.” ಇಷ್ಟೆಲ್ಲ ರಚಿಸಿ, ಕಾಲಕಾಲಕ್ಕೆ ಉಳಿಸಿದವರನ್ನು ನೆನೆಯುತ್ತ ನಾನು ಹೇಳುತ್ತೇನೆ “ಇಲ್ಲ, ರೈಲು ಲಕ್ಷಪದಿ, ಕೋಟಿಪದಿ. . .”

ನಿಲ್ದಾಣಗಳಲ್ಲಿ ಹತ್ತಿಳಿಯುವವರ ಭರಾಟೆ ಏನೂ ಇರಲಿಲ್ಲ. ಹಾಗೇ ಕ್ಯಾಂಟೀನು, ಕೂಗಿಮಾರುವವರೂ (ಕೂಗುಮಾರಿ?) ವಿಶೇಷ ಇರಲಿಲ್ಲ; ಇದ್ದವರೂ ಪಳಗಿರಲಿಲ್ಲ. ಪುಟ್ಟ ನಿಲ್ದಾಣ ಒಂದರ ಬಡ ಕಾಫಿ ಮಾರುವವ ಸ್ಟೀಲ್ ಲೋಟಾ ಬಳಸಿದ್ದ. ಆತನ ಸರಬರಾಜು ಮತ್ತು ಹಣ ವಹಿವಾಟಿನ ಗೊಂದಲಕ್ಕೆ ಯಾರೋ ಗಣ್ಯ ಗಿರಾಕಿಯ ಉಡಾಫೆ ಸೇರಿ ಒಂದು ಲೋಟಾವಂತೂ ನಮ್ಮ ಭೋಗಿಯಲ್ಲಿ ಪ್ರಯಾಣ ನಡೆಸಿತ್ತು. ಇನ್ನೊಂದೂರಲ್ಲಿ ಬಿಸಿ ಬೋಂಡಾಕ್ಕೆ ಬಿದ್ದ ಮುತ್ತಿಗೆಯಲ್ಲಿ ‘ಅಶೋಕ ಚಕ್ರವರ್ತಿ’ ಆರು ಬೋಂಡಾ ಗೆದ್ದ. ರೈಲು ಹೋಗುತ್ತಿದ್ದಂತೆ ತಂಡದೊಡನೆ ಅದರ ಮೆದ್ದ. ಕೊನೆಯಲ್ಲಿ ನೆನಪಾಯ್ತು ಅಲ್ಲಿ ಚಿಲ್ಲರೆ ಪಡೆಯಲು ಮರೆತಿದ್ದ; ಪೆದ್ದ!

ಕೋಮು ಗಲಭೆಯ ಬಿಸಿಯಲ್ಲಿ (ಅಂದು) ಇದ್ದ ಭಟ್ಕಳ ಬರುತ್ತಿದ್ದಂತೆ ರೈಲೊಳಗಿನ ಕೆಟ್ಟ ಮನಸ್ಸೊಂದು ಜಾತಿವಾಚಕ ಅವಾಚ್ಯವೊಂದನ್ನು ಸಾಕಷ್ಟು ದೊಡ್ಡದಾಗಿಯೇ ಒದರಿತು. ವೈಯಕ್ತಿಕ ಆಚಾರಗಳು ಯಾವುವು (ಜಾತಿ), ಸಾಮಾಜಿಕ ಜವಾಬ್ದಾರಿ ಏನು (ಜಾತ್ಯಾತೀತತೆ), ಸಾರ್ವತ್ರೀಕರಣದ ಅಪಾಯ ಏನು (ವ್ಯಕ್ತಿ ದೋಷವನ್ನು ಜಾತಿಗೋ ಊರಿಗೋ ಅಂಟಿಸುವುದು) ಎಂದು ಆ ಕ್ಷುದ್ರ ಮನಸ್ಸಿಗೆ ತಿಳಿಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆದರೆ ಮನುಷ್ಯತ್ವ ಪ್ರೀತಿಸುವ ಊರಿನವರು ಸ್ವಾತಂತ್ರ್ಯೋತ್ಸವದ ನೆಪದಲ್ಲಿ ನಿಲ್ದಾಣದಲ್ಲೆರಡು ವೇಷ ಬಿಟ್ಟಿದ್ದರು – ಕೈ ಬೆಸೆದ ಬ್ರಾಹ್ಮಣ ಮತ್ತು ಮುಸಲ್ಮಾನ. ಸಾಮಾನ್ಯರ ಮಟ್ಟದಲ್ಲಿ ಪರಿಣಾಮಕಾರಿಯಾಗಲು ತೀರಾ ವಾಚ್ಯ ಮಾಡಿದ್ದಿರಬೇಕು. ಆದರೆ ಅದರ ಸಂದೇಶ ವ್ಯಕ್ತಿ ವಿಕೃತಿಯನ್ನು ಕೋಮಿನ ಮೇಲೆ ಆರೋಪಿಸಿ ಹಾಳಾಗುತ್ತಿರುವ ಪುತ್ತೂರೂ ಕೇಳಿಸಿಕೊಳ್ಳಬೇಕು. [ಆ ಕಾಲದಲ್ಲಿ ಪುತ್ತೂರಿನ ಮುಗ್ಧ ಕಾಲೇಜು ಹುಡುಗಿಯೊಬ್ಬಳನ್ನು ಪಕ್ಕಾ ರೌಡಿಯೊಬ್ಬ ಅತ್ಯಾಚಾರಕ್ಕೆಳಸಿ ಕೊಲೆ ಮಾಡಿದ್ದ. ಮಾಮೂಲಿನಂತೆ ಜಾತ್ರೆ, ಕೋಲ, ಪರಬ್, ಉರೂಸ್‌ಗಳಲ್ಲಿ ಕಳೆದು ಹೋಗಿದ್ದ ಪುತ್ತೂರು ಇಡೀ ಯಾರೂ (ಕ್ಷಮಿಸಿ, ಕುಹಕಿ ರಾಜಕಾರಣಿಗಳನ್ನು ಬಿಟ್ಟು) ಬಯಸದೆ ಎರಡು ಹೋಳಾಗಿತ್ತು!]

ನಿಗದಿತ ಸಮಯಕ್ಕೆ (ಮಧ್ಯಾಹ್ನ ಒಂದೂವರೆಗಂಟೆ) ಒಂದೂ ಕಾಲು ಗಂಟೆ ತಡವಾಗಿ ರೈಲು ಮಡ್ಗಾಂವ್ ತಲಪಿತು. ಹಳೇ ನಿಲ್ದಾಣದಿಂದ ಕೊಂಕಣ್ ರೈಲ್ವೇಯ ವ್ಯವಸ್ಥೆಗಳು ತುಸು ದೂರವಿದ್ದುದರಿಂದ ಎಲ್ಲ ಕುದುರಿರಲಿಲ್ಲ. ಪರೋಕ್ಷವಾಗಿ ಇದು ನಮಗೆ ಅನುಕೂಲವೇ ಆಯ್ತು. ನೀವೀಗಾಗಲೇ ಅಂದಾಜಿಸಿದಂತೆ ನಾವು ನಮ್ಮದೇ ರೈಲಿನ ಬ್ರೇಕ್ ವ್ಯಾನಿನಲ್ಲಿ ನಮ್ಮ ಮೋಟಾರ್ ಬೈಕ್‌ಗಳನ್ನು ತಂದಿದ್ದೆವು. ಮಂಗಳೂರಿನಿಂದ ಹೊರಡುವಾಗ ಕೂಟಸ್ಥ ಕೂಲಿಗಳು ಅದನ್ನೇರಿಸುವಲ್ಲಿ ನಮ್ಮನ್ನು ಸತಾಯಿಸಿದ್ದರು. ಅವರು ‘ಪ್ಯಾಕಿಂಗ್’ ಆಕ್ಷೇಪಣೆ ಮಾಡುವುದು ನಮಗೆ ತಿಳಿದೇ ಇತ್ತು. ನಾವು ಗೋಣಿ ಹರಕು, ಹುಲ್ಲು, ಹಗ್ಗ, ಬೋರ್ಡು ಸಜ್ಜಿತರಾಗಿಯೇ ಬಂದು ಅವುಗಳನ್ನು ಅಲಂಕರಿಸಿದ್ದೆವು. ಇಲ್ಲವಾದರೆ ಕೂಲಿಗಳಿಗೆ (ಅನಧಿಕೃತವಾಗಿ) ಬೈಕಿಗೆ ನೂರಿನ್ನೂರು ರೂಪಾಯಿ ಖರ್ಚು ಮಾಡಿ ಅವರ ‘ಸಾಮಾನು ಮತ್ತು ಸೇವೆ’ಗೆ ದಂಡ ಕೊಡಬೇಕಾಗುತ್ತಿತ್ತು. ಪೆಟ್ರೋಲ್ ಟ್ಯಾಂಕ್ ಬಹುತೇಕ ಖಾಲಿ ಮಾಡಿ ತಂದೂ ಸೋಲಿಸಿದ್ದೆವು. ಗಂಟೆಗೆ ಮೊದಲೇ ರಸೀದಿ ಮಾಡಿಸಿ ನಮ್ಮ ಜೊತೆಗೇ ಪಯಣಿಸುವಂತೆ ಜಾಗವನ್ನೂ ಖಾತ್ರಿಗೊಳಿಸಿದ್ದೆವು. ಕೊನೆಗೆ “ಬ್ರೇಕ್ ವ್ಯಾನ್ ಲೋಡಿಂಗ್ ಕೂಲಿಗಳ ಹಕ್ಕು” ಎಂದು ಪಟ್ಟು ಹಿಡಿದರು. ಚೌಕಾಸಿ ಮಾಡಿ, ಹಾಳಾಗಿ ಹೋಗಲಿ ಎಂದು ಮೂರು ಬೈಕ್‌ಗಳ ಬಾಬ್ತು ಒಟ್ಟು ಒಂದು ನೂರು ರೂಪಾಯಿ ಒಪ್ಪಂದ ಮಾಡಿಕೊಂಡೆವು. ಮತ್ತು ನಿಜ ಲೋಡಿಂಗ್ ಬಯಸಿ, ನಾವೇ ಮಾಡಿದ್ದೆವು! ಈ ಕುರಿತು ಸಣ್ಣ ಉಪಕಥೆ ಹೇಳದೆ ಮುಂದುವರಿಯಲಿ ಹ್ಯಾಗೆ. ಒಂದಾನೊಂದು ಊರಿನಲ್ಲೀಈಈ ಅಲ್ಲಲ್ಲ, ಒಂದಾನೊಂದು ಕಾಲದಲ್ಲೀಈಈ

ಅದು ನಮ್ಮ ಎರಡನೇ – ಭಾರತ, ಮೋಟಾರ್ ಸೈಕಲ್ ಮೇಲೆ (೧೯೯೬), ಸಾಹಸಯಾನದ ಮೊದಲ ಹಂತ. ಮಂಗಳೂರಿನಿಂದ ನಮ್ಮ ಎರಡು ಬೈಕ್‌ಗಳನ್ನು ನಮ್ಮ ಜೊತೆಗೇ ರೈಲಿಗೇರಿಸಿ (ಚೆನ್ನೈಯಲ್ಲಿ ರೈಲ್ ಬದಲಿಸುವುದೂ ಸೇರಿ) ನಲ್ವತ್ತೆಂಟು ಗಂಟೆ ಪ್ರಯಾಣ ಮುಗಿಸಿ ಕೊಲ್ಕತ್ತಾ ಮುಟ್ಟಿದ್ದೆವು. ಆ ಬೆಳಗಿನ ಜಾವದಲ್ಲಿ (ಗಂಟೆ ಐದಿದ್ದರಬೇಕು) ಬ್ರೇಕ್ ವ್ಯಾನ್ ಎದುರು ನಾವು ಬೈಕ್ ಇಳಿಸಿಕೊಳ್ಳಲು ರಸೀದಿ ಸಮೇತ ಹಾಜರಾದೆವು. ಬಂಗಾಳಿ ಬಾಬು ನಮ್ಮ ಮುಖ ಹೆಚ್ಚು ನೋಡಿ “ಎರಡು ಬೈಕಿಗೆ ನಾಲ್ಕು ಸಾವಿರ” ಎಂದ. ನಾವು ಸಾಗಣೆ ವೆಚ್ಚ ಹೊರಡುವಲ್ಲೇ ಕೊಟ್ಟಾಗಿರುವುದನ್ನು ತೋರಿಸಿದೆವು. “ಪ. ಬಂಗಾಳದ ಎಂಟ್ರಿ ಟ್ಯಾಕ್ಸ್” ಎಂದ. “ಅದು ಹೊಸತು ಅಥವಾ ಮಾರಾಟ/ಖರೀದಿ ಮಾಡುವ ಮಾಲಿಗಿರಬಹುದು. ಇದು ಸ್ವಂತ ಬಳಕೆಯದು” ಎಂದು ಖಾತ್ರಿ ಪಡಿಸಿದೆವು. ಆ ಖದೀಮ, “ಹಾಗಾದರೆ ನಮ್ಮ ಡೆಲಿವರಿ ಆಫೀಸಿನಿಂದಲೇ ಬಿಡಿಸಿಕೊಳ್ಳಿ” ಎಂದು ಸತಾಯಿಸಿದ. ತಲೆಹಿಡುಕನೊಬ್ಬ ನಡುವೆ ಬಂದು ‘ಇಳಿಸಿದ ದರಗಳ’ ಕುರಿತು ನನ್ನನ್ನು ಒಪ್ಪಿಸಲು ಪ್ರಯತ್ನಿಸಿ ವಿಫಲನಾದ. ನಾನೊಂದು ಸುತ್ತು ಹೊಡೆದು ಬಂದೆ. ಭಾಂಗಿ ಬಟವಾಡೆ ಕಛೇರಿ ಪ್ಲ್ಯಾಟ್ ಫಾರಂಗಳಲ್ಲಿ ಸುತ್ತು ಬಳಸಿ ಸುಮಾರು ಅರ್ಧ ಕಿಮೀ ಅಂತರದಲ್ಲಿತ್ತು. ಮತ್ತದು ಗಂಟೆ ಎಂಟಲ್ಲದೇ ತೆರೆಯುವ ಲಕ್ಷಣಗಳೂ ಇರಲಿಲ್ಲ. ಬೈಕ್‌ಗಳ ಜೊತೆ ಬಂದ ಇತರ ಭಾಂಗಿಗಳು ‘ಮಾಮೂಲಿ’ನಂತೆ ನಮ್ಮೆದುರೇ ಕರಗುವುದನ್ನು ನಾವು ನೋಡುತ್ತ ಕುಳಿತೆವು.

ಎರಡನೇ ಸುತ್ತಿನಲ್ಲಿ ಮೊದಲು ಕೂಲಿಯವರ ಸರದಿ. ತಮ್ಮನ್ನು ನೋಡಿಕೊಳ್ಳದಿದ್ದರೆ ಬಟವಾಡೆ ಕಛೇರಿಗೆ ಮುಟ್ಟುವ ದಾರಿಯಲ್ಲಿ ‘ಆಕಸ್ಮಿಕಗಳು’ ಸಂಭವಿಸಬಹುದು, ಎಂಬ ಸೂಚನೆ ಬಂತು. (ಎಲ್ಲೂ ಅದು ಬಿದ್ದೋ ಕುಟ್ಟಿಯೋ ಅಂಗ ಊನವಾಗಬಹುದು!) ಅಧಿಕೃತ ಮುದ್ರೆ ಬೀಳದೆ ನಾವು ಬೈಕ್ ಮುಟ್ಟಿದರೆ ಕಾಯುತ್ತಾ ಕೂತ ‘ಕಾನೂನು ನಾಯಿ’ ನಮ್ಮನ್ನು ಖಂಡಿತಾ ಕಚ್ಚುತ್ತಿತ್ತು. ತಲಾ ಹತ್ತು ರೂಪಾಯಿ ಕೂಲಿ ಒಪ್ಪಿದೆವು. ವಾಸ್ತವದಲ್ಲಿ (ಕೂಲಿಗಳು ಕೇವಲ ಹಿಂಬಾಲಿಸಿದರು) ನಾವೇ ಬೈಕ್ ನೂಕಿಕೊಂಡು ಕಛೇರಿ ಬಾಗಿಲು ಮುಟ್ಟಿಸಿದೆವು. ಪ್ರಾತರ್ವಿಧಿಗಳನ್ನು ರೈಲಿನಲ್ಲಿಯೇ ಮುಗಿಸಿಕೊಂಡಿದ್ದೆವು. ಹಾಗಾಗಿ ಕಛೇರಿ ಬಾಗಿಲು ಕಾಯುತ್ತಿದ್ದಂತೆ ಸರದಿಯಲ್ಲಿ ಇಬ್ಬಿಬ್ಬರು ಕ್ಯಾಂಟೀನ್ ಹುಡುಕಿ ಹೊಟ್ಟೆಪಾಡು ಮುಗಿಸಿಕೊಂಡೆವು.

ಎಂಟು ಗಂಟೆಯ ಸುಮಾರಿಗೆ ಹೊಸ ಬಾಬುವಿನ ‘ನ್ಯಾಯಾಲಯ’ ತೆರೆಯಿತು. ಕೂಲಿಗಳು ಇವನ ಕಿವಿ ಕಚ್ಚಿದ್ದರಿಂದ, ಎಂಟ್ರಿ ಟ್ಯಾಕ್ಸ್ ಅಥವಾ ಭಾಂಗಿ ಕಛೇರಿಯ ‘ಕರ ಮುಕ್ತಿ ಮುದ್ರೆ’ ಬೇಕೆಂದು ಪಟ್ಟು ಹಿಡಿದ. ಹೌರಾ ನಿಲ್ದಾಣದ ಜಿಡ್ಡು ಹಿಡುಕಲು ಚಕ್ರವ್ಯೂಹದೊಳಗೆ ‘ನೇರ ದೊರೆತನಕ ದೂರು’ ಒಯ್ಯೋಣವೆಂದು ಸ್ವಲ್ಪ ಹುಡುಕಿದೆ. ಅಷ್ಟು ಬೆಳಿಗ್ಗೆ ಅಂಥವರನ್ನು ನಿರೀಕ್ಷಿಸುವುದು ತಪ್ಪು ಎಂದು ನಿಧಾನಕ್ಕೆ ಅರಿವಿಗೆ ಬಂತು. ಅನಿವಾರ್ಯವಾಗಿ ಭಾಂಗಿ ಕಛೇರಿಯಲ್ಲಿ ಸಿಕ್ಕ ಇದ್ದುದರಲ್ಲಿ ದೊಡ್ಡ ಅಧಿಕಾರಿಗೇ ಅಂಟಿಕೊಂಡೆ. ಮೂಲತಃ ಒಳ್ಳೆಯವನೋ ನನ್ನ ಜಿಗುಟು ನೋಡಿ ಬೇಸತ್ತನೋ ಅಂತು ಬ್ರಹ್ಮಲಿಪಿಯಲ್ಲಿ ಏನೋ ಒಂದು ಷರಾ ಹಾಕಿದ. ಅಜ್ಜಿಪುಣ್ಯಕ್ಕೆ ಬಟವಾಡೆ ಬಾಬುವಿಗೆ ಅದೇನೆಂದು ಅರ್ಥ ಮಾಡಿಸುವ ಕೆಲಸ ನನಗೇ ಬಂತು. ಆತ ಹೊಸ ಪಟ್ಟು ಹುಡುಕುವ ಮೊದಲು ನಾವು ಪೈಸೆ ಬಿಚ್ಚದೆ ಬೈಕ್ ಬಿಚ್ಚಿದೆವು. ನೂಕುತ್ತಾ ನಿಲ್ದಾಣದ ಕೊನೇ ಗೇಟು ದಾಟುವಾಗಲೂ ಇನ್ಯಾರೋ “ಕೊಮೊರ್ಶಿಯಲ್ ಟ್ಯಾಕ್ಸ್” ಎಂದ. ನಾವು ವಿವರ ಮಾತಾಡಲು ನಿಲ್ಲದೆ “ಆಲ್ ಪೇಡ್, ಆಲ್ ಪೇಡ್” ಎಂದು ಉಡಾಫೆ ಹೊಡೆದು ಬೈಕ್ ಹಾರಿಸಿಯೇಬಿಟ್ಟಿದ್ದೆವು!

ಮಡ್ಗಾಂವ್ ನಿಲ್ದಾಣದಲ್ಲಿ ಬಟವಾಡೆ ಗುಮಾಸ್ತನನ್ನು ನಾವೇ ಹುಡುಕಿ ತಂದು, ಬ್ರೇಕ್‌ವ್ಯಾನ್ ತೆರೆಸಿ, ರಸೀದಿ ಕೊಟ್ಟು, ನಾವೇ ಬೈಕ್ ಇಳಿಸಿಕೊಂಡೆವು; ನಿಷ್ಕಂಟಕವಾಗಿ! ಮತ್ತಲ್ಲೇ ತೋರಿಕೆಯ ತೊಡವುಗಳನ್ನು ಕಳಚಿ, ಕಂಬಿಗಳ ಮೇಲೇ ನಮ್ಮ ಇಂಜಿನ್ ಚಲಾಯಿಸಿಯೇ ಹೊರಬಿದ್ದೆವು.

ಸಾಮಾನ್ಯರಲ್ಲಿ ಮಝಾ ಉಡಾಯಿಸುವವರ ಸ್ವರ್ಗ ಗೋವಾ. ಅಂದು ನಮಗಾದರೋ ಕೊಂಕಣ ರೈಲ್ವೇ ನೋಡುವ ಉತ್ಸಾಹದಲ್ಲಿ ಅನಿವಾರ್ಯ ಕೊನೆಯ ನಿಲ್ದಾಣ ಗೋವಾ. (ಮುಂಬೈವರೆಗೆ ಪೂರೈಸಿರಲಿಲ್ಲ) ಎರಡನೆಯ ಆಕರ್ಷಣೆ ದೂದ್ ಸಾಗರ್ ಜಲಪಾತ. ಬೀಚುಗಳ ಬಗ್ಗೆ ಗಮನವಿರುವವರಿಗೆ ಸಾಗರ ಅರ್ಥವಾದೀತು. ಆದರೆ ‘ದೂದ್’ ಎಲ್ಲಿನದು? ಕ್ಷಮಿಸಿ, ಮೂವತ್ತೊಂಬತ್ತು ವರ್ಷಗಳ ಹಿಂದಣ ನೆನಪಿನ ಕಡತ ಬಿಡಿಸುತ್ತೇನೆ. ನಾನಾಗ ಮೈಸೂರಿನಲ್ಲಿ ವಿದ್ಯಾರ್ಥಿ. ಸಹಪಾಠಿಗಳೊಡನೆ ಪ್ರವಾಸಕ್ಕಾರಿಸಿದ್ದು ಇದೇ ಗೋವಾ. ಮೈಸೂರು ಬಿಟ್ಟ ನಮ್ಮ ಚಕುಬುಕು ಬಂಡಿ ಹುಬ್ಬಳ್ಳಿ, ಲೋಂಡಾ ಮತ್ತೆ ಕ್ಯಾಸಲ್ ರಾಕ್‌ವರೆಗೂ ಮಾಮೂಲೀ ಸಿಳ್ಳೆ, ತಾಳ ಮೇಳದಲ್ಲೇ ಬಂತು. ಬೆಳಗಿನ ಜಾವ, ಘಟ್ಟದ ಇಳಿದಾರಿ. ಧೂಮಶಕಟಕ್ಕೆ ನಿವೃತ್ತಿ ಕೊಟ್ಟು, ಹಿಂದೊಂದು ಮುಂದೊಂದು ಡೀಸೆಲ್ ಇಂಜಿನ್ ಕಚ್ಚಿಸಿದ್ದರು. ಮಂದ್ರ ಶ್ರುತಿಯೊಡನೆ, ಕಾಡು ಕಣಿವೆಯೆಡೆಗೆ ಪಯಣ. ಚಳಿ, ನಿದ್ರೆ, ಭಯ ಅಮರಿದ್ದ ಸಹಪಾಠಿಗಳ ಗೋಠಾಳೆ ಕಳಚಿಕೊಂಡು ನಾನು ಎರಡು ಡಬ್ಬಿಗಳ (ಭೋಗಿಗಳ?) ನಡುವಣ ಏಣಿಯಲ್ಲಿ ನೇತುಕೊಂಡು ಸುತ್ತಣ ವಿಶೇಷಗಳಿಗೆ ಕಣ್ಣು, ಕಿವಿಯಾಗಿದ್ದೆ. ತೀವ್ರ ತಿರುವುಗಳಲ್ಲಿ ಧಾವಿಸಲು ಎಳಸುವ ಡಬ್ಬಿಗಳು ಕೀಂಚ್, ಕ್ರೀಚ್‌ಗಳೊಡನೆ ನರಳುತ್ತಿದ್ದರೆ ಜವಾಬ್ದಾರಿಯುತ ಹಿರಿಯರಂತೆ ಇಂಜಿನ್ನುಗಳ ಏಕನಾದ ಕಣಿವೆಯ ಉದ್ದಗಲದಲ್ಲಿ ಅನುರಣಿಸುತ್ತಿತ್ತು. ಆಕಸ್ಮಿಕವಾಗಿ ಕಂಬಿಗಳಿಗೆ ಅಡ್ಡ ಬರಬಹುದಾದ ವನ್ಯ ಮೃಗಗಳನ್ನೂ ಆಯಕಟ್ಟಿನ ಜಾಗಗಳಲ್ಲಿ ಹಳಿಗಳ ದೃಢತೆಯನ್ನು ನಿತ್ಯನಿತ್ಯ ಶ್ರುತಪಡಿಸಬೇಕಾದ ಸಂಜ್ಞಾಸೂಚಕರನ್ನೂ ಎಚ್ಚರಿಸುವಂತೆ ಹಿಂದು, ಮುಂದಿನ ಇಂಜಿನ್ನುಗಳು ಬಿಟ್ಟು ಬಿಟ್ಟು ಹಾರನ್ ಮೊಳಗಿಸುತ್ತಲೇ ಇದ್ದವು. ಸುರಂಗಗಳಲ್ಲಿ ಕವಿದು ಬಂದಂತ ಧ್ವನಿ, ಸೇತುವೆಗಳ ಮೇಲೆ ನೀರಾಳವಾಗುವ ಪರಿಯೊಡನೆ ತಿಂಗಳ ಬೆಳಕಿನಲ್ಲಿ ತೊಯ್ದ ಒಟ್ಟು ಪರಿಸರ ಅಂದು ನನಗೆ ವಿಶ್ವಾಮಿತ್ರ ಸೃಷ್ಟಿಯೇ ಇರಬೇಕು ಅನ್ನಿಸಿತ್ತು. (ಇಂದು ಆ ವಲಯ ಮಹಾವೀರ ವನಧಾಮವಾಗಿದೆ.)

ಒಮ್ಮೆಗೇ ನಿಲ್ದಾಣ ಬಂದಂತೆ ಬಿರಿ ಕಾಯಿಸಿದ ಸದ್ದು. ಡಬ್ಬಿಗಳ ಅಸಹನೆಯ ಕುಲುಕಾಟ ಶಾಂತವಾಗುತ್ತಿದ್ದಂತೆ, ರೈಲು ನಿಲುಗಡೆಗೆ ಬರುತ್ತಿದ್ದಂತೆ, ಎಡಪಕ್ಕದ ಕಾಡು ಹಿಂಜರಿದು ಕಗ್ಗಲ್ಲ ಭಿತ್ತಿಯಾಯ್ತು. ಅಲ್ಲಿ ಶಿಖರದೆತ್ತರದಲ್ಲಿ ಮಸಕು ಬಿಳಿಯ ಆಕಾಶವೇ ಕಲ್ಲ ಸಂದಿನಲ್ಲಿ ಭುವಿಗಿಳಿಯುತ್ತಿರುವಂತೆ, ಕೆಳ ಬರುತ್ತ ಮೊಸರುಮೊಸರಾಗಿ ಕಣಿವೆಯನ್ನು ವ್ಯಾಪಿಸುತ್ತಿರುವಂತೆ, ರೈಲ್ವೇ ರಚನೆಗಳನ್ನೇ ನುಂಗುವಂತೆ ಧುಮುಗುಡುತ್ತಿತ್ತು – ದೂದ್ ಸಾಗರ್! ಪೂರ್ಣ ಒಂದೇ ಬೀಳಲ್ಲ. ಒಂದು ಹತ್ತಾಗಿ, ಹತ್ತು ಹಲವಾಗಿ ಕೊರಕಲನ್ನೇ ಬಿಡಿಸಿಡುವಂತೆ, ಮುಂಚಾಚಿದ ಬಂಡೆಗಳನ್ನು ಮಟ್ಟ ಹಾಕುವಂತೆ, ಒರಟು ಹಾಸುಗಲ್ಲನ್ನು ನಯಗೊಳಿಸುವಂತೆ ಧಾವಿಸಿತ್ತು. ಮೇಲಿನೊಂದು ಭಾರೀ ಹತ್ತಿ ಮುದ್ದೆ ನೂರೊಂದು ಎಳೆಯಾಗಿ ಹುರಿಗೊಂಡಂತೆ ನೋಟ, ಒರಳಲ್ಲಿ ಒನಕೆ ಸರಣಿ ಮಿದಿದಂತೆ (ಬಹು ಮಹಡಿಯ ಕಟ್ಟಡ ಜವುಗು ನೆಲದಲ್ಲಿ ನೆಲೆಗೊಳ್ಳಲು ಅಡಿಪಾಯಕ್ಕೆ “ಧೋಂಕ್, ಧೋಂಕಿದಂತೆ”) ಆರ್ಭಟೆ, ಗಾಳಿಯ ಸುಳಿ, ಸೀರ್ಪನಿಗಳ ಆವೇಶ ನನ್ನನ್ನಾವರಿಸಿ ಬೆರಗು ವಾಸ್ತವಗಳ ಲೆಕ್ಕ ಹಿಡಿಯುವ ಮುನ್ನ ರೈಲು ದೀರ್ಘ ಹೂಂಕಾರ ಹಾಕಿ ಮುಂದುವರಿದಿತ್ತು.

ವಿಸೂ: ವಿಡಿಯೋ ತುಣುಕುಗಳು – ಈಚೆಗೆ ಶಿರಾಡಿ ಘಾಟಿಯದ್ದು.

(ನೆನಪಿನ ಹಳಿಯ ಮೇಲೆ ಮುಂದಿನ ಗಾಡಿ ಮುಂದಿನ ವಾರ! ಅದಕ್ಕೆ ಹಸಿರು ನಿಶಾನಿ ಏರಿಸುವವರು ನೀವು. ಕೂಡಲೇ ಕೆಳಗಿನ ಪ್ರತಿಕ್ರಿಯಾ ಅಂಕಣದಲ್ಲಿ ಧುಮುಕಲಿ ನಿಮ್ಮ ವಾಗ್ಝರಿ)