ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ ನಮ್ಮ ಹಸಿವು, ಬಾಯಾರಿಕೆಗಳ ಅಗತ್ಯಕ್ಕೆ ಸಾಕಷ್ಟು ‘ದಂಡ’ ಹಾಕಿದ್ದನ್ನು ಸಂತೋಷದಲ್ಲೇ ಒಪ್ಪಿ ಮುಂದುವರಿದೆವು. ದಾರಿ ನಮ್ಮ ಶಿರಾಡಿ ಘಾಟಿಯನ್ನೇ ಹೋಲುತ್ತಿತ್ತು. ಡಾಮರೂ ಮೊದಲೇ ಹೇಳಿದಂತೆ ನುಣ್ಣಗೇ ಇತ್ತು. ಆದರೆ ಅದಕ್ಕೆ ತಕ್ಕಂತೆ (ಇಂದು ನಾವು ಹೊಸ ಚತುಷ್ಪಥಗಳಲ್ಲಿ ಕಾಣುತ್ತಿರುವ) ಏರು, ತಿರುವುಗಳ ವ್ಯವಸ್ಥೆಯಲ್ಲಿ ವೈಜ್ಞಾನಿಕ ಕೊರತೆಯಿಂದ ಸಾಕಷ್ಟು ಅಪಘಾತಗಳು ಆಗುತ್ತಿದ್ದುದನ್ನು ಗಮನಿಸಿದೆವು. ಒಂದು ತೀವ್ರ ಏರಿನ ತಿರುವಿನಲ್ಲಿ ದಾರಿಯಲ್ಲಿ ಭಾರೀ ಮೀನುಗಳ ರಾಶಿ. “ಅರೆ, school of fish ಘಾಟಿಯ ಚಂದ ನೋಡಲು ಚಾರಣ ಬಂದಿರಬೇಕು” ಎಂದು ಉದ್ಗರಿಸಿಹೋಯ್ತು! ಸ್ವಲ್ಪ ಮುಂದೆ ಯಾವುದೋ ಗುದ್ದಿ ಜಖಂಗೊಂಡ ಟೆಂಪೋ ಕಂಡ ಮೇಲೆ ಮಾತನ್ನು ಸಂಜೆ ಪತ್ರಿಕಾ ಕಾಲಂಗೆ ಪರಿಷ್ಕರಿಸಿಕೊಂಡೆ: ‘ವಿಹಾರಕ್ಕೆ ಹೊರಟ ಮೀನುಗಳ ದುರ್ಮರಣ! ಕೊಲೆಗಾರ ಲಾರಿ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ!!’ ಅನುಬಂಧ – ಆರೋಹಣ ಸಾಹಸಿಗಳ ಅಶ್ರು ತರ್ಪಣ!!!

ಔನ್ನತ್ಯ ಗಳಿಸುತ್ತಿದ್ದಂತೆ ಮಂಜಿನ ಅವಗುಂಠನ ದೃಶ್ಯಗಳನ್ನೆಲ್ಲ ಮೋಹಕಗೊಳಿಸತೊಡಗಿತು. ಎದುರಿನವರಿಗೂ ಈ ಭ್ರಮೆ ಬಂದು ವಾಹನಗಳು ಪರಸ್ಪರ ಅಪ್ಪಿಕೊಳ್ಳದಂತೆ ಕುರುಡ ಹಿಡಿದ ದೀಪದಂತೆ ನಮ್ಮ ಹೆದ್ದೀಪ ಬೆಳಗಿಕೊಂಡು ಮುಂದುವರಿದೆವು. ಅನ್ಮೋಡ್ ಕಳೆದು ಲೋಂಡಾ ಸಮೀಪಿಸುತ್ತಿದ್ದಂತೆ ಘಟ್ಟ ಏರುವುದು ಮುಗಿದಿತ್ತು. ಕರಾವಳಿಯ ವಲಯದಲ್ಲಿ ಮಳೆಯಲ್ಲಿ ಒದ್ದೆಯಾದರೂ ಬಾಧಿಸದ ಚಳಿ ಒಮ್ಮೆಲೆ ನಮ್ಮನ್ನು ತೀವ್ರವಾಗಿ ಅಮರಿ ಗದಗುಟ್ಟಿಸಿತು. ಕೊಲೆಮ್ಮಿನಲ್ಲಿ ತಡವಾದಾಗಲೇ ನಾವು ಸಮಯದೊಡನೆ ಸ್ಪರ್ಧೆಗಿಳಿದ ಅರಿವು ಕಾಡಿತ್ತು. ಚಾ, ಕಾಫಿ ಮಾತು ಕಟ್ಟಿಟ್ಟು, ಅವಸರವಸರವಾಗಿ ನಮ್ಮಲ್ಲಿದ್ದ ಮತ್ತಷ್ಟು ಬಟ್ಟೆಗಳನ್ನು ಮಳೆಕೋಟಿನೊಳಗೆ ಸುತ್ತಿಕೊಂಡು “ಉಹುಹು, ಅಹಹ” ಪಲುಕಿಕೊಂಡೇ ಸಾಗಿದೆವು. ಲೋಂಡಾ ಹೊರವಲಯದ ರಾಮನಗರದಲ್ಲೆ ಬಲ ತಿರುವು ತೆಗೆದು, ಸುಪಾ ಅಣೆಕಟ್ಟಿನ ನವನಗರ ಗಣೇಶಗುಡಿ ನಮ್ಮ ಲಕ್ಷ್ಯ. ಕಿಮೀ ಕಲ್ಲುಗಳು ಇನ್ನೇನು ಬಂತು ಬಂತು ಎಂದರೂ ಬಲ ಆಳದ ಕಾಳಿ ಕಣಿವೆಗಿಳಿಯುವಲ್ಲಿ ಲಗಾಮು ಬಿಗಿ ಹಿಡಿಯುವುದು ಅನಿವಾರ್ಯ. ಜಲಾಶಯದ ನೀರಮಟ್ಟ ಸಮೀಪಿಸುತ್ತಿದ್ದಂತೆ, ವೀಕ್ಷಣಾ ಕಟ್ಟೆಯ ಪ್ರವೇಶದ್ವಾರವೂ ಬಂತು. ಗಂಟೆ ಆರುಕಾಲು, ಬೆಳಕು ಸಾಕಷ್ಟಿತ್ತು. ಆದರೆ ಕಾನೂನು ಕತ್ತೆ – ಸರಾಸರಿಯಲ್ಲಿ ಗೇಟ್ ಬಂದಾಗುವ ಸಮಯ ಆರು ಗಂಟೆ! ಪಹರೆಯವರು ನಕಾರ ಹೇಳಿಬಿಟ್ಟರು. ‘ಅನ್ಯ ಮಾರ್ಗ’ಗಳ ಸೂಚನೆ ಏನೋ ಸಿಕ್ಕಿತು, ಆದರೆ ಬಳಸುವ ಉತ್ಸಾಹ ನಮ್ಮದಲ್ಲ!ತಂಡದಲ್ಲಿದ್ದ ಗೆಳೆಯ ಕಿಶೋರ್ ಗಣೇಶಗುಡಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವಿ. ಅವರ ಪರಿಚಯ

ಬಲದಲ್ಲಿ ನಮಗೆ ಕೆಪಿಸಿಯ ಅತಿಥಿ ಗೃಹ ರಾತ್ರಿ ವಾಸಕ್ಕೆ ಒದಗಿತು. ಮಾಮೂಲೀ ದಿನಗಳಲ್ಲಿ ಬಂಗ್ಲೆ ಒಳ್ಳೇ ಅಡುಗೆಗೂ ಪ್ರಸಿದ್ಧವೇ ಇತ್ತು. ಆದರೆ ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಯಾರೂ ಬರುವುದಿಲ್ಲವೆಂದು ಅಂದು ಅಡುಗೆ ಇರಲಿಲ್ಲ. ಪುಟ್ಟ ಗುಡ್ಡದ ತಲೆಯನ್ನೇ ತಟ್ಟಿ ನಿಲ್ಲಿಸಿದ್ದ ಬಂಗ್ಲೆ ಮನಸ್ಸಿಗೇನೋ ಮುದಕೊಡುವ ದೃಶ್ಯಾವಳಿಯನ್ನೇ ಕೊಡುತ್ತಿತ್ತು. ಆದರೆ ಹೊಟ್ಟೆ ತಣಿಸಲು ದಣಿವು ಮರೆತು, ಬಟ್ಟೆಬದಲಿಸಿ, ಕೆಳಪೇಟೆಗೆ ಹೋಗಿ ಬರಬೇಕಾಯ್ತು. ಅದಂತಿರಲಿ, ಜಲಾಗರದ ‘ಯಜಮಾನ’(ಕೆ.ಪಿ.ಸಿ), ವಿದ್ಯುತ್ತಿನ ತವರ್ಮನೆಯಲ್ಲಿ ನೀರು, ಬೆಳಕಿಗೇನೂ ಕೊರತೆ ಬಾರದು ಎಂದವರು ಹಲವರು. ಆದರೆ ಅಪ್ಪಟ ಸರಕಾರೀ ವ್ಯವಸ್ಥೆ ತಿಳಿದವರಿಗೇ ಗೊತ್ತು – ಸೋರು ದಾರಿ ಇರುವುದೇ ಸಮೃದ್ಧಿಯ ಬಸಿರಿನಲ್ಲಿ. ನಮಗೆ ಕೊಟ್ಟ ಎರಡೂ ಕೋಣೆಗಳಲ್ಲಿ ನಲ್ಲಿಗಳು ಸೋರುತ್ತಿದ್ದವು. ಅಳವಡಿಸಿದ್ದ ಭಾರೀ ಗೀಸರುಗಳು ಕೆಟ್ಟುಹೋಗಿದ್ದವು. ಮೇಟಿ ಬೇರೊಂದು (ಉಚ್ಚ ಮಟ್ಟದ್ದು) ಕೋಣೆಯಲ್ಲಿ ನೀರು ಬಿಸಿ ಮಾಡಿಕೊಟ್ಟ. ಆದರೆ ಆ ಕೋಣೆಯನ್ನೇ ನಮಗೆ ಕೊಡುವ ಅಧಿಕಾರ ಅವನಿಗಿರಲಿಲ್ಲ. ಅದು ಎಂದಾದರೂ ಬರಬಹುದಾದ ಉನ್ನತ ಅಧಿಕಾರಿ/ ಮಂತ್ರಿಗಳಿಗೇ ಮೀಸಲಂತೆ. (ಸರಕಾರೀ ಬಸ್ಸುಗಳಲ್ಲಿ ನಿರ್ವಾಹಕರಿಗೆ ಹೆಚ್ಚಿನ ಆದಾಯಕ್ಕೆ ದಾರಿ ಮಾಡಿಕೊಡುವ ಎಮ್ಮೆಲ್ಲೆ ಸೀಟುಗಳಂತೆ, ಎಂದೂ ತಿನ್ನದ ದೇವರಿಗೆ ಇಟ್ಟ ನೈವೇದ್ಯದಂತೆ!) ಮರುದಿನ ಬೆಳಿಗ್ಗೆ ನೋಡುತ್ತೇವೆ – ನಲ್ಲಿಗಳು ಬತ್ತಿಯೇ ಹೋಗಿದ್ದವು. ಕಾರಣಗಳಿಗೇನು – ಮೇಟಿ ಹತ್ತು ಕೊಟ್ಟ. ಅಂತೂ ನೀರು ಸಿಕ್ಕಿ ನಾವು ಹೊರಬೀಳಬೇಕಾದರೆ ಅರ್ಧ ಗಂಟೆ ವ್ಯರ್ಥ.ಪೇಟೆಯಲ್ಲೇ ತಿಂಡಿ ಮುಗಿಸಿ, ಅಣೆಕಟ್ಟೆಯ ಕೆಳದಂಡೆ ದಾರಿ ಹಿಡಿದೆವು. ಪಹರೆಯವ ಉದಾರವಾಗಿ ಬಿಟ್ಟ. ಆ ವರ್ಷ ಅನ್ಯ ಅಣೆಕಟ್ಟುಗಳು ಪೂರ್ಣ ಸಾಮರ್ಥ್ಯಕ್ಕೆ ತುಂಬಿಕೊಂಡಿದ್ದರೂ ಸುಪಾ ಐವತ್ತಡಿ ಕೊರತೆ.

ಸಹಜವಾಗಿ ಗೇಟುಗಳೆಲ್ಲ ಬಿಗಿಯಿತ್ತು. ಇಲ್ಲಿ ಕಟ್ಟೆ ಎದುರು ಭಾರೀ ಪ್ರಪಾತವೇನೂ ಇಲ್ಲದಿದ್ದರೂ ನದಿಯ ಸಹಜಪಾತ್ರೆಗೆ ಬಿಡುವ ಲೆಕ್ಕದ ನೀರಿನ ಒತ್ತಡವನ್ನೇ ಬಳಸಿ ವಿದ್ಯುತ್ ಬಸಿಯುವ ವ್ಯವಸ್ಥೆಯಿದೆ. ಹಾಗೆ ಬಂದ ನೀರಿನಲ್ಲಿ ಕೇವಲ ಅಶನಾಂಶ ಪಡೆದವರಂತೆ ನದಿ ಬಡವಾಗಿತ್ತು. ಕಣಿವೆಯ ನೀರ ಭೋರ್ಗರೆತಕ್ಕೆ ಮೇಳೈಸುವ (ಹಕ್ಕಿ, ಬಿಬ್ಬಿರಿಯಾದಿ) ಕಾಡಿನ ಕಲಾವಿದರ ಗಾನ ಶೂನ್ಯವಾಗಿತ್ತು. ಅದುಮಿಟ್ಟ ಮೌನದಂತೆ ವಿದ್ಯುದಾಗರದ ಮಂದ್ರ ಗುಂಜನ. ಈ ಹಗಲಾದರೂ ಕಟ್ಟೆಯ ಮೇಲಿನ ದೃಶ್ಯ ನಮಗೆ ದಕ್ಕೀತೇ ಎಂದು ಪ್ರಯತ್ನಿಸಿದೆವು. ಅದೇ ಪಹರೇದಾರ ಜಾಗೃತನಾದ, “ಒಂಬತ್ತು ಗಂಟೆಗೆ ಆಫೀಸ್ ತೆರೀತಾರೆ. ಪರ್ಮೀಸನ್ ಹಿಡ್ಕಂಬನ್ನಿ.” ತಿಳಿದವರು ಹೇಳಬೇಕು – ಕಟ್ಟೆಯ ಭದ್ರತೆಗೆ ತೊಂದರೆ ಮಾಡುವವರು (ಬಾಂಬು ಇಡುವವರೂ ಅನ್ನಿ) ಮೇಲಕ್ಕಿಡುತ್ತಾರೋ ಬುಡಕ್ಕೋ? ವಿವೇಚನೆಯಿಲ್ಲದ ಕಾನೂನು ಪ್ರಶ್ನಿಸಲು ಸಮಯ ಸಾಲದ ಕಾರಣ, ಶಾಪ ಹಾಕಿ, ಸುಪಾ ಉಪೇಕ್ಷಿಸಿ, ಅಂಬಿಕಾ ನಗರದತ್ತ ಬೈಕ್ ದೌಡಾಯಿಸಿದೆವು.ಕಾಳಿ ದಟ್ಟ ಕಾಡಿನ ಭಾರೀ ಕಣಿವೆಯಲ್ಲಿ ತೀವ್ರ ಇಳಿದು ಕಾರವಾರದ ಸಮೀಪ ಸಾಗರಸಂಗಮಿಸುವ ನದಿ. ಇದರ ಮೊದಲ ಹಂತದಲ್ಲಿ ಸುಪಾ ಬಂದರೆ,

ಉಪನದಿಗಳ ಲೆಕ್ಕವೂ ಸೇರಿ ಅಸಂಖ್ಯ ಕಿರು-ಹಿರಿ ಅಣೆಕಟ್ಟೆಗಳೂ ವಿದ್ಯುದಾಗರಗಳೂ ತುಂಬಿವೆ. ಪ್ರತಿ ಹಂತದಲ್ಲೂ ‘ವ್ಯರ್ಥ’ ಹರಿದು ಹೋಗಬಹುದಾದ ಮಳೆನೀರಿಗೆ ತಡೆಯಾಗುವುದರೊಡನೆ ಮೇಲಿನ ಹಂತದಲ್ಲಿ ಬಳಕೆಯಾದ ನೀರಿಗೆ ಮರುಬಳಕೆಯ ಯೋಗವನ್ನು ಕಲ್ಪಿಸುವುದೂ ಇಲ್ಲಿನ ಯೋಚನೆ. ಪ್ರತಿ ಕಟ್ಟೆಯೂ ಬರಿಯ ಜಲಾಗರವಲ್ಲ, ಹಿಡಿದಿಟ್ಟ (ವಿದ್ಯುತ್) ಶಕ್ತಿ. ಈ ಕಣಿವೆಯ ಪ್ರಮುಖ ವಿದ್ಯುದಾಗರಗಳಲ್ಲಿ ಮೇಲಿನದ್ದು ಅಂಬಿಕಾ ನಗರದ ನಾಗಝರಿಯಾದರೆ ಕೆಳಗಿನದ್ದು ಕದ್ರಾ. [ಅಂದು ಕದ್ರಾ ಬಾಲಗ್ರಹದಲ್ಲಿ ನರಳುತ್ತಿತ್ತು. ಸುಪಾಕ್ಕೆ ನೀರ ಕೊರತೆಯಾದರೆ ಕದ್ರಾಕ್ಕೆ ಕಟ್ಟೆಯದ್ದೇ ಕೊರಗು! ನಿಜ ಹೇಳಬೇಕೆಂದರೆ ನಮ್ಮಲ್ಲಿನ ಬಹುತೇಕ ಯೋಜನೆಗಳು ಮೊದಲಿಗೆ ಬಿಕ್ಕು ಮತ್ತೆ ತುಕ್ಕು; ನುಂಗಿದ ಕೋಟ್ಯಂತರದ (ಹರಕೆ? ಹಣ?) ಲಜ್ಜೆಯಿಲ್ಲದ ಕುಲಾಂತರಿಗಳು]

ದಾಂಡೇಲಿ ಅಭಯಾರಣ್ಯದೊಳಗೆ ನಮ್ಮ ಓಟ. ದಾರಿ ಬದಿಯಲ್ಲಿ ಅರಣ್ಯ ಇಲಾಖೆ ನಿಲ್ಲಿಸಿದ್ದ ಒಂದು ಮಚಾನ್ ಏರಿ ಸುತ್ತಣ ದೃಶ್ಯವನ್ನು ಮನದುಂಬಿಕೊಂಡೆವು. ಹೆಚ್ಚು ಕಡಿಮೆ ಮಟ್ಟಸ ಭೂಮಿ. ದೂರದೃಷ್ಟಿ ಇಲ್ಲ, ಬಿದಿರು ಮತ್ತು ಸಾಗುವಾನಿ ಮರಗಳದ್ದೇ ದಟ್ಟ ನೋಟ. ದೇಶ ತಿಂದರೂ ಅಭಿವೃದ್ಧಿ ಎಂದೇ ಸಾಧಿಸುವ ‘ಕಲಾವಿದರು’ ಯಾರೋ ಈ ನೆಡುತೋಪಿಗೆ ಅಭಯಾರಣ್ಯದ ಪಟ್ಟ ಕಟ್ಟಿಬಿಟ್ಟಿದ್ದರು. ಈಚಿನ ‘ಹೆಚ್ಚಿನ-ಬುದ್ಧಿಯವರು’ ಅದನ್ನೀಗ ಮಾನವೈಕ ಲೋಕಕ್ಕೆ ಚೂರುಚೂರಾಗಿ ಬಿಡುಗಡೆಗೊಳಿಸುತ್ತಿದ್ದಾರೆ. (ಹೆಚ್ಚಿನ ವಿವರಗಳಿಗೆ ಇಲ್ಲೇ ಈಚೆಗೆ ಅನುಭವಿಸಿ ಬರೆದ ‘ದಾಂಡೇಲಿಯ ದಂಡಯಾತ್ರೆ’ ಓದಬಹುದು) ಇವರೇ ಕರಾವಳಿ ವಲಯದಲ್ಲೂ ಜನ ಅಡಿಗೆ ಬಿದ್ದರೂ ಸರಿ ಎಂದು ‘ಅಬಿವೃದ್ಧಿಯ ರಥ’ ಓಡಿಸಿ ಸೌಲಭ್ಯಗಳನ್ನು (ಯಾರಿಗೆ?) ಮುಟ್ಟಿಸಲು ಕಟಿಬದ್ಧರಾಗಿದ್ದಾರೆ! ದಾಂಡೇಲಿಯ ಬಿದಿರು ನಂಬಿಯೇ ತೊಡಗಿದ್ದು ದಾಂಡೇಲಿ ಕಾಗದ ಕಾರ್ಖಾನೆ. ಇಲ್ಲಿ ಸಾಗುವಾನಿ ತೋಪು ರೂಢಿಸಿದವರು ಎಲ್ಲೆಲ್ಲಿ ರೈಲ್ವೇ ವಿಸ್ತರಣೆ (ಸ್ಲೀಪರ್‌ಗಳು), ಯಾವ್ಯಾವ ಗೃಹಾಲಂಕರಣ (ನೆನಪಿರಲಿ, ಕುಳಗಿ ಪ್ರಕೃತಿ ಶಿಬಿರದ ಗೋಡೆ, ಮಾಡೆಲ್ಲಾ ಸುಂದರ ಮರದ ಸೀಳುಗಳ ಜೋಡಣೆ. ಅಲ್ಲಿನ ಪ್ರದರ್ಶನಾಲಯದಲ್ಲಿ ನೆಲವೂ ಮರ. ಅರಣ್ಯ ಇಲಾಖೆಯ ವರಿಷ್ಠರುಗಳ ಬಹುತೇಕ ಕಛೇರಿಗಳ ಒಳಾಲಂಕಾರಕ್ಕಂತೂ ರಂಗಿನ, ಬಳುಕುವ ಬಲುಧಾರೆಗಳ, ಪಾಲಿಷ್‌ಗೆ ಥಳಥಳಿಸುವ ಹಲಿಗೆಗಳು ಕಡ್ಡಾಯ. ರಾಜಸತ್ತೆ ಚಿರಾಯುವಾಗಲಿ!) ಯೋಜಿಸಿದ್ದರೋ ಏನೋ. ಇಲ್ಲಿನ ‘ಪಾಳು ಭೂಮಿ’ಗಳಲ್ಲಿ ವ್ಯರ್ಥ ಮಲಗಿರುವ ಖನಿಜ ಸಂಪತ್ತನ್ನು (ಕೆಲವು) ಜನಹಿತಕ್ಕಾಗಿ ಎಬ್ಬಿಸುವ ಕಾರ್ಯದ್ದು ಇನ್ನೊಂದೇ ದುರಂತ. (ಮುಂದೆಂದಾದರೂ ಹೇಳುತ್ತೇನೆ) ಇಷ್ಟೆಲ್ಲದರ ನಡುವೆ ಉಳಿದು, ಅಳಿಯಲಿರುವ ಆನೆ, ಹುಲಿಯಾದಿ ವನ್ಯಜೀವಿಗಳನ್ನು ನೋಡಲು ಅದೆಷ್ಟು ವ್ಯವಸ್ಥೆ! ವರ್ಷಕ್ಕೊಮ್ಮೆ ಪಕ್ಷಿಯಜ್ಜನ, ಕಾರ್ಬೆಟ್ ದೇವರ ಪುತ್ಥಳಿಗಳ ಸಮಕ್ಷಮದಲ್ಲಿ ಪರಿಸರದಿನ, ವನಮಹೋತ್ಸವ, ವನ್ಯದಿನ ಮುಂತಾದ ದಿವ್ಯ ಮುಹೂರ್ತದ ರಂಗೀನ್ ಕಲಾಪಗಳಲ್ಲಿ ತಳೆಯುವ ಪ್ರತಿಜ್ಞೆಗಳಾದರೂ ಎಂಥವು!!

ಕಾಗದ ಕಾರ್ಖಾನೆ ನೋಡುವ ಉತ್ಸಾಹ ನಮಗಿತ್ತು. ಆದರೆ ಅದು ಆದಿತ್ಯವಾರ, ರಜಾದಿನ. ಹಾಗಾಗಿ ಸೀದಾ ಮುಂದುವರಿದು ಅಂಬಿಕಾನಗರ ಸೇರಿದೆವು. ಅಲ್ಲಿ ಕಿಶೋರರ ಗೆಳೆಯ – ದಿನೇಶ್ ಬಾಳಿಗಾ, ಎಲ್ಲ ವ್ಯವಸ್ಥೆ ಮಾಡಿ ಕಾದಿದ್ದರು. ಮೊದಲ ಭೇಟಿ – ಕಾಳೀನದಿಯ ಒಂದು ವಿಹಂಗಮ ನೋಟ ಕಲ್ಪಿಸುವ ಸೈಕ್ಸ್ ಪಾಯಿಂಟ್. ಸಣ್ಣ ಏರಿಳಿತಗಳ ನೇರ ಐದು ಕಿಮೀ ಓಟ. ಎರಡೂ ಪಕ್ಕದಲ್ಲಿ ಸುಮಾರು ಇಪ್ಪತ್ತು ಮೀಟರ್ ವ್ಯಾಪ್ತಿಯಲ್ಲಿ ದಟ್ಟ ಕುರುಚಲು, ಅನಂತರ ಶಿಸ್ತಿನಲ್ಲಿ ನಿಂತ ನೆಡುತೋಪು. ಕೊನೆಯಲ್ಲಿ ಒಮ್ಮೆಲೆ ಕಣ್ಣು, ಕಿವಿ ಬಿಚ್ಚಿದ ಅನುಭವ. ನೂರಾರು ಅಡಿ (ಸಾವಿರ ಮಿಕ್ಕಿಯೂ ಇರಬಹುದು) ಆಳಕ್ಕೂ ಸುಮಾರು ಅಷ್ಟೇ ಅಗಲಕ್ಕೂ ತೆರೆದು ಬಿದ್ದಿತ್ತು ಕಾಳೀ ಕಣಿವೆ. ನಮ್ಮ ನೇರ ತಳದಲ್ಲಿ ನಾಗಝರಿ ವಿದ್ಯುದಾಗರ ಮತ್ತದರ ಒತ್ತಿನಲ್ಲಿ ಸಾಕ್ಷಾತ್ ಕಾಳಿ. ಎರಡೂ ದಂಡೆಗಳಲ್ಲಿ ಕೆಲವು ಭೀಮ ಪಾದಗಳ ಸರಣಿ (ಹೈ ಟೆನ್ಶನ್ ಟವರ್ಸ್), ಸರಿಗೆ ಜಾಲದೊಡನೆ ದಿಗಂತಗಳನ್ನು ಬೆಳಗಲು ಧಾವಿಸಿದ್ದವು. ಬೈಕ್ ಬಿಟ್ಟು, ಇಳುಕಲಿನಲ್ಲಿ ನೂರಿನ್ನೂರು ಅಡಿವರೆಗೂ ಮೆಟ್ಟಿಲ ಸಾಲು, ಕೈತಾಂಗು, ವೀಕ್ಷಣಾ ಕಟ್ಟೆ – ಅಟ್ಟಳಿಗೆ ಸುವ್ಯವಸ್ಥಿತವಾಗಿತ್ತು. ನಾವು ನಿಂತ ಬೆಟ್ಟದಲ್ಲಿ ತತ್ಕಾಲೀನ ಕುರುಚಲು, ಹುಲ್ಲು ಇತ್ತು. ಭಾರೀ ಬೇರಿನ ಸನ್ನೆಹಾಕಿ ಮುಂದೊಂದು ಕಾಲಕ್ಕೆ ನೆಲ ಮಗುಚುವ ಮರಗಳಿಗೆ ಆಸ್ಪದವಿರಲಿಲ್ಲ. ಸಡಿಲ ಕಲ್ಲುಗಳನ್ನು ಎತ್ತಂಗಡಿ ಮಾಡಿರಬೇಕು, ಮಣ್ಣಿಗೆ ಹೊಲಿಗೆ ಹಾಕಿದ್ದಂತೂ ಸ್ಪಷ್ಟವಿತ್ತು. ಎಲ್ಲ ಸುತ್ತಾಡಿ, ಸುತ್ತಲಾಗದ ಹಸಿರು ಚಾಪೆ, ನೋಡಿ ದಣಿಯದ ದೃಶ್ಯಗಳ ಕಿಂಚಿತ್ ನೆನಪನ್ನಷ್ಟೇ ಕಟ್ಟಿಕೊಂಡೆವು. ಅಲ್ಲೇ ಸಾಮಾನ್ಯರ ವಲಯ ಮೀರಿದ ಕೆಲವು ರಚನೆಗಳಿದ್ದವು. ವಿಶೇಷ ಅನುಮತಿ ಮೇರೆಗೆ ಅಲ್ಲೂ ತಿರುಗಾಡಿದೆವು. ನೆಲ ಮಟ್ಟದಿಂದ ಕೆಳಗೆ ಆಯತಾಕಾರದ ಭಾರೀ ಟ್ಯಾಂಕು, ಅದಕ್ಕಷ್ಟೇ ಭಾರೀ ಗೇಟು.

ಎಲ್ಲ ಖಾಲಿ. ಗೇಟಿನಿಂದಾಚೆ ಮತ್ತೆ ಭಾರೀ ಬಾವಿ ಕೆಳಗೆಲ್ಲೋ ನೀರು, ಅದೇ ತಳ ಎನ್ನಲಾಗದ ನಿಗೂಢ. ಜೋಗದಲ್ಲಿ ಈಜುಕೊಳ ಕಂಡ ನೆನಪಲ್ಲಿ ಇದೂ ‘ಜನಪ್ರಿಯ’ ಹುಚ್ಚೇ ಎಂದು ಸಂಶಯಿಸಲು ಸಾಧ್ಯವೇ ಇಲ್ಲ. ಈಜು ಸೌಕರ್ಯಗಳು ಒಂದೂ ಇರಲಿಲ್ಲ. ಅವರಿವರಲ್ಲಿ ವಿಚಾರಿಸಿದಾಗ ಸಿಕ್ಕ ಚೂರುಪಾರು ವಿವರಗಳಂತೆ ಇದು ಜಲಶಕ್ತಿಯ ಆರಂಭ ಬಿಂದು. ಸುಪಾ ಮತ್ತು ಕೆಲವು ಜಲಾಗರಗಳ ನೀರು ಸುರಂಗ ಮಾರ್ಗಗಳಲ್ಲಿ ಇಲ್ಲಿಗೆ ಸರದಿಯಲ್ಲಿ ಬರುತ್ತವಂತೆ. ಮತ್ತೆ ಅಕ್ಷರಶಃ ಅಧಃಪತನ. ಮೊದಲು ಎರಡು ಅತಿ ಭಾರೀ ಕೊಳವೆಗಳಲ್ಲಿ ಧುಮುಕಿ, ಎಲ್ಲೋ ಆರು ಭಾರೀ ಕೊಳವೆಗಳಿಗೆ ಹಂಚಿಹೋಗಿ ಅಭಿನವ ಭಗೀರಥ ವ್ಯವಸ್ಥೆಗೆ ಘಟ್ಟಿಸುತ್ತವೆ. ಆಗ ಸಂಜನಿಸುವ ಮಿಂಚೇ ವಿದ್ಯುತ್. ಕೆಳಗಿನ ಕೊಳವೆಗಳಲ್ಲೇನಾದರೂ ಆಕಸ್ಮಿಕಗಳಿಂದ ನೀರ ತಡೆಯುಂಟಾದರೆ ಇಲ್ಲಿನ ಭಾರೀ ಟ್ಯಾಂಕಿಗೆ ಉಕ್ಕುತ್ತದಂತೆ; ತಲಕಾವೇರಿಯ ಕುಂಡಿಗೆಯಲ್ಲಿ ಕಾವೇರಿ ಉದ್ಭವಿಸಿದಂತೆ. ಮತ್ತೆ ಆ ಕ್ಷಣದಲ್ಲಿ ಇಲ್ಲಿನ ಗೇಟು ಬಂದ್ ಮಾಡುವುದರಿಂದ ಹೆಚ್ಚಿನ ಹಾನಿಗಳನ್ನು ತಡೆಯುತ್ತಾರೆ! ನಾಗಝರಿ ವಿದ್ಯುದಾಗರ ಅಭಿನವ ಶಿವನೇ ಸರಿ. ಒತ್ತಡವನ್ನು ಧರಿಸಿ, ಲೋಕ ಮಂಗಳಕಾರಕವಾದ ಅದನ್ನು ಕಣ್ದುಂಬಿಕೊಳ್ಳಲು ಸಜ್ಜಾದೆವು. ಮೊದಲ ಭಾವ ಸ್ಫುರಣೆಗೆ (ಎಫ್. ಐ. ಆರ್ ಅಂದಂತೆ) ಇದೆಲ್ಲ ಮನುಷ್ಯನ ತಂತ್ರಜ್ಞಾನದ ಸಾಧನೆಯೆಂದು ಹೆಮ್ಮೆಯಾಗುತ್ತದೆ. ಆದರೆ ಗರ್ಭದಲ್ಲಿ ವಿದ್ಯುದಾಗರವನ್ನು ಇಟ್ಟುಕೊಂಡ ಬೆಟ್ಟ ಎದುರು ಬೆಟ್ಟಕ್ಕಿಂತ ಪಾಕೃತಿಕವಾಗಿ ಊನ ಎನ್ನುವ ತಿಳಿವು ನಮ್ಮನ್ನು ಗೊಂದಲದಲ್ಲೂ ಉಳಿಸುತ್ತದೆ.

ಅಂಬಿಕಾ ನಗರಿಗೆ ಮರಳಿ, ಬೇರೊಂದೇ ತೀವ್ರ ಇಳುಕಲಿನ ದಾರಿಯಲ್ಲಿ ಎಂಟು ಕಿಮೀಗೆ ನಾಗಝರಿ. (ನನ್ನ ಅಸ್ಪಷ್ಟ ನೆನಪಿನಂತೆ, ಅಲ್ಲಿಗೆ ಬೈಕ್ ಒಯ್ಯುವುದನ್ನು ಇಲಾಖೆ ಅನುಮತಿಸುತ್ತಿರಲಿಲ್ಲ. ಹಾಗಾಗಿ ಗೆಳೆಯರು ಯಾವುದೋ ಚತುಷ್ಚಕ್ರಿಯಲ್ಲಿ ಒಯ್ದಿರಬೇಕು) ಸುಪಾ ಅಣೆಕಟ್ಟೆಯದೇ ಮಂದ್ರ ಗುಂಜನ. ಬಲಕ್ಕೆ ತುಸು ಆಳದಲ್ಲಿ ಕಾಳೀ ಪಾತ್ರೆ ಅಥವಾ ಖಾಲೀ ಪಾತ್ರೆ! ಎಡದೆತ್ತರದ ಸೈಕ್ಸ್ ಪಾಯಿಂಟನ್ನು ಈಗ ನಖಶಿಖಾಂತ ಕಂಡ ಕುಶಿ ನಮ್ಮದು. ಅದರ ಪಾದದಲ್ಲಿ ಉಕ್ಕಿನ ಜಾಲರಿ ಬೇಲಿಯಿಂದಾವೃತ್ತ ಭಾರೀ ಆವರಣದಲ್ಲಿ ಎಡಕ್ಕೆ ಗುಹಾಮುಖ. ಬೆಟ್ಟದ ಪ್ರಾಕೃತಿಕ ಕಗ್ಗಲ್ಲ ಹೊಟ್ಟೆಯನ್ನು ಅಗತ್ಯಕ್ಕೆ ತಕ್ಕಂತೆ ಕೊರೆದು, ಭದ್ರಪಡಿಸಿದ ವಿದ್ಯುದಾಗರ. ಬಲಕ್ಕೆ ಹೊರವಲಯದಲ್ಲಿ ಮುಳ್ಳಮಂಚಗಳ ಮೇಲೆ ನಿಂತ ಹಠಯೋಗಿಗಳಂತೆ ಶುದ್ಧ ದಪ್ಪ ಜಲ್ಲಿ ರಾಶಿಯ ಮೇಲೆ ನಿಂತ ಅಸಂಖ್ಯ ಟ್ರಾನ್ಸ್‌ಫರ್ಮರ‍್ಗಳು, ಸಾಮಾನ್ಯ ಭಾಷೆಯಲ್ಲಿ ಹೇಳುವ ವಯರು ಅರ್ಥವನ್ನು ಬಹಳ ಮೀರುವ ಉಕ್ಕಿನ ಮಿಣಿಗಳು. (ನನ್ನ ವಿವರಣೆ ಕೇವಲ ಸಾಮಾನ್ಯನ ತೋರಿಕೆಗೆ ನಿಲುಕಿದ್ದು ಮಾತ್ರ. ಇವಕ್ಕೆ ತಂತ್ರಜ್ಞಾನದ ಹೆಸರೂ ಕ್ರಿಯೆಯೂ ಬೇರೆಯೇ ಇರಬಹುದು) ಯಾವುದೇ ಜಲವಿದ್ಯುದಾಗರಗಳಲ್ಲಿ ಸಾಮಾನ್ಯ ಪ್ರವಾಸಿಗೆ ದಕ್ಕುವ ಗುಮ್ಮಟಗಳ (ಟರ್ಬೈನ್ಸ್) ದರ್ಶನ, ಅವುಗಳ ಮೊರೆತ, ಮಾಡಿನೆತ್ತರದಲ್ಲಿ ಕಟ್ಟಡದುದ್ದಕ್ಕೂ ಸರಿದು ಕೆಲಸ ಮಾಡಬಲ್ಲ ಭಾರೀ ಕ್ರೇನ್, ಮೀಟರ‍್ಗಳ ಬೊಂತೆ, ತಲೆಗವಚ ಹಾಕಿದ ನೌಕರರ ಸಂತೆ. ಆದರಿಲ್ಲಿ ದೃಶ್ಯಕ್ಕೆ ಸಾಮಾನ್ಯರ ಭಾಷೆ ಕೊಟ್ಟು, ನಮ್ಮ ತಿಳುವಳಿಕೆಯನ್ನು ಎತ್ತಿಕೊಟ್ಟರು ಓರ್ವ ತರುಣ ಇಂಜಿನಿಯರ್ (ಕ್ಷಮಿಸಿ, ಅವರ ಹೆಸರು ಮರೆತಿದ್ದೇನೆ.)

ಗುಮ್ಮಟದ ಒತ್ತಿನ ಸಪುರ ಮೆಟ್ಟಿಲ ಸಾಲಿನಲ್ಲಿ ನಮ್ಮನ್ನು ಮೂರು ಅಂತಸ್ತು ಕೆಳಕ್ಕಿಳಿಸಿ ಆರು ಭಾರೀ ಕೊಳವೆಗಳಿಂದ ವಿವರಣೆ ತೊಡಗಿತು. ರಾಜ್ಯ ಶಕ್ತಿ ವಿತರಣಾ ಕೇಂದ್ರದಿಂದ ಕಾಲಕಾಲಕ್ಕೆ ಬರುವ ಸೂಚನೆಗಳಂತೆ ಇಲ್ಲಿ ಗುಮ್ಮಟಗಳು (ಒಂದೊಂದೇ ಅಥವಾ ಎಲ್ಲಾ) ತೊಡಗಿಕೊಳ್ಳುವುದು, ವಿಶ್ರಾಂತಿಯಲ್ಲಿರುವುದು ಮತ್ತು ನಿಧಾನಗತಿಯಲ್ಲಿರುವುದೂ ನಡೆಯುತ್ತಿರುತ್ತದೆ. ನಾವು ಹೋದಂದು ಮಳೆಗಾಲ ಮತ್ತು ಆದಿತ್ಯವಾರವಾದ್ದರಿಂದ ಆರನೇ ಗುಮ್ಮಟ ನಿದ್ರಿಸಿತ್ತು. ಚಿಮ್ಮೂತಿಗಳಿಂದ ನೀರಪೆಟ್ಟನ್ನು ಪೂರ್ಣ ತನ್ನರಗಳಿಗೆ ತೆಗೆದುಕೊಂಡು ಅಸಾಧ್ಯ ವೇಗದಲ್ಲಿ ತಿರುಗುವ ಭಾರೀ ಚಕ್ರಗಳ ಚಿತ್ರ ನಮ್ಮನ್ನು ಸುಲಭದಲ್ಲಿ ಸಮುದ್ರ ಮಥನದ ಪೌರಾಣಿಕ ಕಲ್ಪನೆಯಲ್ಲಿ ಸಾಮ್ಯ ಕಂಡುಕೊಂಡಿತು. ಅಂದು ಗುಂಭದ ಆಧಾರಕ್ಕೆ ನಿಂತ ಕೂರ್ಮಾವತಾರ ಇಲ್ಲಿ ಹೇಗಿರಬಹುದು ಎಂಬ ಲಹರಿ ಒಂದು ಕ್ಷಣಕ್ಕಾದರೂ ಮೂಡಿ ಮರೆಯಾಯ್ತು. ಅದರ ಪ್ರಚಂಡ ಅಡಿಪಾಯ, ಬೇರಿಂಗು, ಕೀಲೆಣ್ಣೆ ಪೂರೈಕೆ, ಘರ್ಷಣೆಯ ಬಿಸಿ ನಿಯಂತ್ರಣ, ಕೊನೆಗೆ ರಿಪೇರಿ ಅಗತ್ಯಗಳವರೆಗೆ ಎಲ್ಲವನ್ನೂ ಇಂಜಿನಿಯರ್ ಸುಂದರವಾಗಿ ವಿವರಿಸಿದರು. ಮುಂದುವರಿದು ಸೋರು ನೀರಿನ ವಿಲೇವಾರಿ, ಆವಾಹಿತ ಮಹಾಶಕ್ತಿಯನ್ನು ಮಾಯಾದೀಪದ ರಕ್ಕಸನಂತೆ ವಿಧೇಯವಾಗುಳಿಸಿಕೊಳ್ಳುವ ಪರಿಗಳನ್ನು ನಾನಂತೂ ಬಿಟ್ಟ ಬಾಯಿಯಿಂದ ಕೇಳಿದೆ. ದೂರದೂರಿಗೆ ರವಾನಿಸುವಲ್ಲಿ ಶಕ್ತಿ ಹ್ರಾಸವಾಗುವುದು, ಅದನ್ನು ವಿವಿಧ ಹಂತಗಳಲ್ಲಿ ಪದೋನ್ನತಿಗೊಳಿಸುವುದೂ ಅಷ್ಟೇ ರೋಚಕ ಸಂಗತಿಗಳು. [ನನ್ನೀ ಬ್ಲಾಗ್ ಬರಹಗಳನ್ನು ವಿವರಗಳಲ್ಲಿ ಎಷ್ಟು ಜನ ಓದುತ್ತಾರೋ ಎಂಬ ಸಂಶಯ ನನ್ನನ್ನು ಕಾಡುವಾಗ, ನಮಗೊದಗಿದ ಈ ತರುಣನಂತವರು ನೆನಪಿಗೆ ಬರುತ್ತಾರೆ. ಜೀಎಸ್ಸೆಸ್ ಹೇಳಿದ ಮಾತು – ಹಾಡುವುದು ಇಂಥವರಿಗೆ, ನನಗೆ ಅನಿವಾರ್ಯ ಕರ್ಮವಿರಬಹುದೋ ಏನೋ]

ಮಹಾಗವಿಯ ಮೇಲೆ ಒಂದು ಮೂಲೆಯಲ್ಲಿರುವ ವಿಸ್ತಾರ ನಿಯಂತ್ರಣ ಕೊಠಡಿ ಪೂರ್ಣ ಹವಾನಿಯಂತ್ರಿತ. ಅಲ್ಲಿನ ಇಂಜಿನಿಯರ್ ಕೂಡ ನಮ್ಮನ್ನು ಆತ್ಮೀಯವಾಗಿ ನಡೆಸಿಕೊಂಡರು. ಅಸಂಖ್ಯ ಮೀಟರು, ಬಟನುಗಳ ಮಹಾ ನಿಯಂತ್ರಕದಲ್ಲಿ ರಾಜ್ಯದ ಸಮಗ್ರ ವಿದ್ಯುಜ್ಜಾಲದ ಸ್ಪಷ್ಟ ಚಿತ್ರ ಕಿರಿದಾಗಿ ಕಾಣುವಾಗ (ಮತ್ತೆ ಪೌರಾಣಿಕಕ್ಕೆ ಹೋಗಲೇಬೇಕು) ವಾಮನಾವತಾರದ ಕಲ್ಪನೆ ಮೂರ್ತಗೊಳ್ಳುತ್ತದೆ. ಹಾಗೇ ಜಲಪಾತದಡಿಯಲ್ಲಿ ಗಿರಿಗಿಟ್ಲೆ ತಿರುಗಿಸಿದರೆ ಸೈ, ವಿದ್ಯುತ್ ಜೈ ಎನ್ನುವ ಸರಳೀಕರಣಕ್ಕೂ ಇಲ್ಲಿ ನಮಗೆ ತ್ರಿವಿಕ್ರಮ ಒದೆತ ಸಿಕ್ಕಿದ್ದೂ ಅಷ್ಟೇ ನಿಜ.

ವಿದ್ಯುದಾಗರದ ಹೊರವಲಯದಲ್ಲಿ ‘ಬಸವಳಿದ’ ನೀರು ಮತ್ತೆ ಕಾಳಿಯ ಮಡಿಲು ಸೇರುತ್ತದೆ. ಅಲ್ಲೇ ಮೇಲಿನ ಪಾತ್ರೆಯಲ್ಲಿ ಬಂಡೆಗಳು ಎಲ್ಲೋ ಮಳೆಗಾಲದಲ್ಲಿ ಮೆತ್ತಿಕೊಂಡ ಕೆಸರನ್ನು ಒಣಗಿಸಿಕೊಂಡಿರುವುದನ್ನು ಕಂಡೆವು. ಕೆಳ ಪಾತ್ರೆಗೆ ಇಲ್ಲಿ ಒದಗಿದ ನೀರು ಮುದಿಕಾಳಿಗೆ ನಿಯತ ಅಂತರಕ್ಕೊದಗುವ ಜೀವನಾಂಶ. ಅದು ಮತ್ತಿನ್ನೊಂದು ಕಟ್ಟೆಯಲ್ಲಿ ಬಂಧಿಯಾಗಿ, ಇನ್ನೆಲ್ಲೋ ಕೊಳ್ಳ ಹಾರಲೇಬೇಕು. ಹಿಂದಿನ ಮಡಿನೀರ ಪ್ರಚಂಡ ಚಂಡಿ, ಇಂದು ಸರ್ವದಾ ಬಡಕಲು ಚರಂಡಿ. ಕಾಳಿಗೆ ನೀರು ಹಿಡಿದು ಕೊಟ್ಟು, ಅದರ ಸೊಕ್ಕಿನ ಪ್ರತಿನಿಧಿಗಳೇ ಆಗಿದ್ದ ಶಿಖರ ಸಾಲುಗಳು ಇಂದು ಏನೇನೋ ತಿದ್ದುಪಾಡುಗಳಿಗೆ ಒಳಗಾಗಿವೆ. ಅವುಗಳನ್ನೇ ಆಧಾರವಾಗಿಟ್ಟುಕೊಂಡು ಸಹಸ್ರಮಾನಗಳಲ್ಲಿ ವಿಕಸಿಸಿದ ಸ್ಥಿರ, ಚರ ಜೀವವೈವಿಧ್ಯದ ನಿಜ ನಷ್ಟವನ್ನು ಗಣಿಸಲು ಸವಲತ್ತುಗಳ ಹಾದಿಯಲ್ಲಿ ತುಂಬಾ ಮುಂದೆ ನಡೆದುಬಿಟ್ಟಿರುವ ನಮಗೆ ಆಸಕ್ತಿಯಿಲ್ಲ! [ವರ್ಷಗಟ್ಟಳೆ ಶುದ್ಧ ನ್ಯಾಯಿಕ ಹೋರಾಟದಲ್ಲಿ ಎಬ್ಬಿಸಿದ ಕುದುರೆಮುಖ ಗಣಿಗಾರಿಕೆಯನ್ನು ಮತ್ತೆ ಜಿಐಎಮ್‌ನಲ್ಲಿ ಪುನರುಜ್ಜೀವಗೊಳಿಸುವ ಮಾತಾಡುವವರನ್ನು ಏನನ್ನೋಣ? ¤ðå¥àèóûïéâß?] ಆದದ್ದು ಹೋಯ್ತು ಎನ್ನಲೂ ಅವಕಾಶವಿಲ್ಲದಂತೆ ವಿವೇಚನಾ ಶೂನ್ಯರು ನೂರೆಂಟು ಕಿರು ವಿದ್ಯುತ್, ಎತ್ತಿನ ಹಳ್ಳ ನೇತ್ರಾವತಿಗಳಂಥ ನದಿ ತಿರುವು ಯೋಜನೆಗಳನ್ನು ಪೋಷಣೆಯ ಮಾತಾಡುತ್ತಿದ್ದಾರೆ. ರಾಜ್ಯಕ್ಕೆ, ದೇಶಕ್ಕೆ ಭವಿಷ್ಯ ಇದೆ, ಆದರೆ ಖಂಡಿತವಾಗಿಯೂ ಅದು ಭವ್ಯವಲ್ಲ; ದುರಂತ!

ಕವಳ ಗುಹೆ, ಬೊಮ್ಮನಹಳ್ಳಿ, ತಟ್ಟಿಹಳ್ಳ, ಕದ್ರಾ, ಕೈಗಾ ಎಂದು ಕಾಳಿ ಕಣಿವೆಯ ಉದ್ದಕ್ಕೆ ನಾವು ನೋಡಬೇಕಾದ ಸ್ಥಳಗಳ ಪಟ್ಟಿಯೇನೋ ನಮ್ಮಲ್ಲಿ ಉದ್ದವಿತ್ತು. ಆದರೆ ಸಮಯ ಮತ್ತು ಮರಳಿ ಮನೆ ಸೇರಲಿರುವ ದೂರದ ಲೆಕ್ಕಾಚಾರದಲ್ಲಿ ನಾವು ಹನ್ನೆರಡೂವರೆಗೆ ಅಂಬಿಕಾ ನಗರ ಬಿಟ್ಟದ್ದೇ ತಡ ಅನ್ನಿಸಿತು. ಹಾಗಾಗಿ ಕಣಿವೆ ಅನುಸರಿಸುವುದು ಬಿಟ್ಟು ಯಲ್ಲಾಪುರ ಸೇರಿದೆವು. ಹೋಟೆಲಿನಲ್ಲಿ ಊಟದ ಚಿಂತೆ ಚೆನ್ನಾಗಿಯೇ ಪರಿಹಾರವಾಯ್ತು. ಘಟ್ಟ ಇಳಿಯುವ ದಾರಿಯೂ ಚೆನ್ನಾಗಿಯೇ ಇತ್ತು. [ತಿಂಗಳ ಹಿಂದೆ ದಾಂಡೇಲಿ ದಂಡಯಾತ್ರೆಯಲ್ಲೂ ಕುಶಿಕೊಟ್ಟ ದಾರಿಯಿದು] ಆದರೆ ಹಿಂದೆ ಗೋವಾದಲ್ಲಿ ಕಂಡಂತೇ ಇಲ್ಲೂ ವಾಹನಗಳ ಸರಣಿ ಅಪಘಾತಗಳು ಕಾಣುವಾಗ ‘ಭ್ರಷ್ಟತೆಯಲ್ಲೂ ಸುಖವುಂಟು’ ಎಂದನ್ನಿಸಿದರೆ ಆಶ್ಚರ್ಯವಿಲ್ಲ. (ಹಾಳು ದಾರಿಯಲ್ಲಿ ವೇಗವರ್ಧನೆ ಸಾಧ್ಯವಿಲ್ಲವಲ್ಲ) ಹೆದರಿಕೆಯವನ ಮೇಲೆ ಹಾವೆಸೆದಂತೆ ಪಿರಿಪಿರಿ ಮಳೆಯೂ ಸೇರಿ ಹೆದ್ದಾರಿಯನ್ನು ಅಂಕೋಲದಲ್ಲಿ ಮುಟ್ಟುವಾಗ ಸಂಜೆಯಾಗಿತ್ತು. ಅಲ್ಲಿ ತುಸು ಬಿಸಿಲರಳಿದ್ದರಿಂದ ಐದೇ ಮಿನಿಟಿನ ಕಾಫಿ ವಿರಾಮವೇನೋ ತೆಗೆದುಕೊಂಡೆವು. ಆದರೆ ಮುಂದೆ ನಮ್ಮ ಎಲ್ಲ ಅಂದಾಜುಗಳೂ ವಾಸ್ತವದ ಎದುರು ಸೋಲಲೇ ಬೇಕಾಯ್ತು. ಹೊನ್ನಾವರದಲ್ಲಿ ಹನಿ ಮಳೆ, ಭಟ್ಕಳಕ್ಕಾಗುವಾಗ ಜಡಿಮಳೆ. ಮುಖಕ್ಕೆ ಸೂಜಿಯಿಟ್ಟಂತೆ ಹನಿಗಳ ಹೊಡೆತ. ಗಾಳಿಯಲೆಯ ವಿಪರೀತಕ್ಕೆ ದೂದ್ ಸಾಗರ್ರೇ ಇಷ್ಟು ದೂರಕ್ಕೆ ಒಲೆಯಿತೋ ಎಂಬ ಭ್ರಮೆ. ಮೋಡ ಮುಚ್ಚಿದ ಅಕಾಲಿಕ ಕಾವಳದೊಡನೆ ಭೂಮಿಯೂ ಬಾಯಿಬಿಟ್ಟು ನಮ್ಮನ್ನು ನುಂಗಲು ಹೊಂಚಿದೆಯೋ ಎಂಬಂಥ ಹೊಂಡಗಳೂ ಕಾಡತೊಡಗಿದವು. ಈ ವಿಪರೀತಗಳೊಡನೆ ಹೆಚ್ಚಿದ ವಾಹನ ಸಂಚಾರದಲ್ಲಿ ನಾವು ಒಂದೋ ಯಾವುದೋ ಲಾರಿಯೋ ಬಸ್ಸೋ ಹಿಂಬಾಲಿಸಿವುದು ಅನಿವಾರ್ಯವಾಗುತ್ತಿತ್ತು. ಅವುಗಳ ಚಕ್ರ ಎಬ್ಬಿಸುವ ಕೆಸರು ನೀರ ಸೀರಣಿಯಲ್ಲಿ ದಿಕ್ಕೆಟ್ಟು ಹೊಂಡ ಗುಂಡಾಡುವುದು ಹೆಚ್ಚಾಯಿತು. ಬೇಡ ಎಂದು ತರಾತುರಿ ಕಾಣಿಸಿದರೆ ಇನ್ನೊಂದೇ ಲಾರಿಯೋ ಬಸ್ಸಿನದೋ ‘ಮುಂದಾಳು’ಗಳಾಗಿ ಅದರ ಕರ್ಕಶ ಹಾರನ್ನಿಗೆ ತೂರಾಡಿ ಹೋಗುತ್ತಿದ್ದೆವು. ಮತ್ತೆ ಅವೂ ನಮ್ಮಂತೆ ಹೊಂಡ ತಪ್ಪಿಸುವಲ್ಲಿ ಇತರ ವಾಹನಗಳನ್ನು ಸುಧಾರಿಸಿಕೊಳ್ಳುವಲ್ಲಿ ತಪ್ಪಿ ನಮ್ಮನ್ನು ಮುಟ್ಟಿದರೂ ನಮ್ಮ ಗತಿ ನೆಟ್ಟಗಿರುವುದಿಲ್ಲ ಎಂಬ ಭಯವೂ ಆಪ್ತವಾಗಿ ಹಿಂಬಾಲಿಸುತ್ತಿತ್ತು. ಅನಿವಾರ್ಯವಾಗಿ ಒಂದೆಡೆ ಹತ್ತೇ ಮಿನಿಟು ನಿಂತದ್ದು ದಾರಿಯ ಮೇಲೆ ರಾತ್ರಿಯ ಪೂರ್ಣ ಕತ್ತಲನ್ನು ತಂದುಕೊಳ್ಳುವುದನ್ನಷ್ಟೇ ಸಿದ್ಧಿಸಿತು. ಮಳೆಯಲ್ಲೇ ಮುಂದುವರಿದೆವು.

‘ಬೈಂದೂರು’ ನೀರ ತೆರೆ ಜಗ್ಗಿ, ಬಣ್ಣದ ವೇಷದ ಅಬ್ಬರ ತಾಳಕ್ಕೆ ಹೆಜ್ಜೆ ಹಾಕುತ್ತಿತ್ತು. ಮರವಂತೆ ಮರೆತಂತೇ ಸರಿ. ಅಲೆ ನೆಕ್ಕೀತೋ ಹೊಳೆ ಉಕ್ಕೀತೋ ಎಂದು ಹೆಚ್ಚುವರಿ ಭಯ ಕಟ್ಟಿಕೊಳ್ಳದಂತೆ ಮಳೆ ಎರಡನ್ನೂ ಏಕಕಾಲಕ್ಕೆ ನಮ್ಮ ಮೇಲೆ ಪ್ರಯೋಗಿಸಿ ಪರೀಕ್ಷೆ ನಡೆಸಿತ್ತು. ಮುಂದಿನೂರಿನ ಹೆಸರು ದೊಡ್ಡದೇನೂ ಅಲ್ಲ. ಆದರೆ ನಮ್ಮನ್ನು ತಳುವಿದೂರು ಎನ್ನುವುದರಿಂದ ಅನ್ವರ್ಥನಾಮವಾಗಿ ತಲ್ಲೂರು ಬಂದಾಗ ನಮ್ಮಲ್ಲಿ ಒಂದು ಬೈಕ್ ಪಂಚೇರು. ಹೊಂಡಗಳ ಸರಣಿ ದಾಳಿಗೆ ಪ್ರಸನ್ನನ ಹಿಂದಿನ ಚಕ್ರ ಉಸಿರು ಕಳೆದುಕೊಂಡಿತ್ತು. ಮಳೆಗೆಲ್ಲಿಯ ಭಾವ, ‘ಧೋ’ ಗಾನದ ಶ್ರುತಿ ಕಡಿಯಲೇ ಇಲ್ಲ. ನಮ್ಮಲ್ಲಿ ಚಕ್ರ ಕಳಚುವ, ಸಾಮಾನ್ಯ ಟ್ಯೂಬ್ ತೊಂದರೆಗಳಿಗೆ ತೇಪೆ ಹಚ್ಚುವ ವ್ಯವಸ್ಥೆಯೇನೋ ಇತ್ತು. ಆದರೆ ಕಣ್ಣಿನಿಂದ ನೀರು ಸೀಟುತ್ತಾ ಬಾಯಿಯಿಂದ ಜೊಲ್ಲಮಾಲೆ ಸುರಿಸುತ್ತಾ ನಾವು ಟಾರ್ಚ್, ಟೂಲ್ ಕಿಟ್ ಎನ್ನುತ್ತ ಪಳಗದ ಕೈಯಲ್ಲಿ ಪರಡುವುದು ಕಂಡು ಅಲ್ಲಿದ್ದ ರಿಕ್ಷಾ ಚಾಲಕರು ಕನಿಕರಿಸಿದರು. ಕೇವಲ ನೂರಡಿ ಮುಂದಿದ್ದ ಮೆಕ್ಯಾನಿಕ್ ಅಂಗಡಿಯ ಸೂಚನೆ ಕೊಟ್ಟದ್ದರಿಂದ ಬೇಗನೇ ಚೇತರಿಸಿಕೊಂಡೆವು. ಅಲ್ಲಿವರೆಗೆ ಗಾಡಿ ನೂಕಿ, ಆತನ ಮರ್ಜಿ ಕಾದು (ಕಾರ್ಯವಾಸಿಗಳು ಕತ್ತೆ ಕಾಲಾದರೂ ಸರಿ, ಕಟ್ಟಲೇ ಬೇಕಲ್ಲಾ), ರಿಪೇರಿ ಮುಗಿಸಿ ಹೊರಡುವಾಗ ಇನ್ನೊಂದರ ಹೆದ್ದೀಪ ಠುಸ್. ಅದನ್ನೂ ಏನೆಲ್ಲಾ ಹೊಂದಿಸಿಕೊಂಡೆವು. (ಮಳೆಗಾಲದ ಒಂದು ರಜಾದಿನ ಮತ್ತು ತಡ ರಾತ್ರಿಯ ವೇಳೆ ಬಿಡಿಭಾಗಗಳ ಅಂಗಡಿಗಳು ತೆರೆದಿರುವುದು ಸಾಧ್ಯವಿರಲಿಲ್ಲ.) ಮುಂದೆ ಮಳೆ, ಹೊಂಡಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾ ಅವಿರತ (ವಿಶ್ರಾಂತಿ, ಊಟ ಬಿಡಿ, ಬರಿಯ ಚಾಯಕ್ಕೂ ನಿಲ್ಲದೇ) ಬೈಕೋಡಿಸಿ ಮಂಗಳೂರು ತಲಪುವಾಗ ಗಂಟೆ ರಾತ್ರಿಯ ಹನ್ನೊಂದು!