(ಚಕ್ರವರ್ತಿಗಳು – ಎಂಟನೆಯ ಸುತ್ತು)

ಶನಿವಾರ ಸಂಜೆ ಹಿಡಿದ ಮಳೆ ರಾತ್ರಿ ಪೂರಾ ಹೊಡೆದೇ ಹೊಡೆಯಿತು. ಬೆಳಿಗ್ಗೆ ಅಲಾರಾಂ ಟ್ರೀಈಈಈಣ್‌ನಿಂದ ಹೇಮಾವತಿ ಎಕ್ಸ್‌ಪ್ರೆಸ್ ಬ್ರೇಏಏಏಏಂವರೆಗೆ ಸಣ್ಣ ಸಂದೇಹ, ನನಗೆ ಮೊದಲೇ ಹೆಸರು ಕೊಟ್ಟವರೆಲ್ಲ ಬಂದಾರೇ? ಮತ್ತು ದೊಡ್ಡ ಆತಂಕ ಹಾಸನ ಮಾರ್ಗದಲ್ಲಿ ಅಂದು ರೈಲೋಡೀತೇ? ಬಂದವರನ್ನು ಗಣಿಸದೇ ಬಾರದವರಿಗೆ ದುಃಖಿಸದೇ ಭೋಗಿಗಳೆಲ್ಲಾ ಕ್ರೀಂ ಕ್ರೀಂ ಆಲಾಪ್‌ದಿಂದ ತೊಡಗಿ, ಟಕ್-ಟಕ್.. .. .. ಟಕ್-ಟಕ್ ವಿಲಂಬಿತ್ ಗತಿಗಿಳಿದು, ಜಟ್-ಪಟ್, ಜಟ್-ಪಟ್ ದ್ರುತ್‌ಗೆ ವಿಸ್ತರಿಸುತ್ತಿದ್ದಂತೆ ಹನಿಮಳೆಯಲ್ಲೂ ನಮ್ಮ ಉತ್ಸಾಹ ಹನಿಕೊಡಹಿ ರೆಕ್ಕೆ ಬಿಡಿಸಿತು. ಹಳಿಪಕ್ಕದ ಮಂಗಳೂರು ಮಾಜಿ ಶ್ರೀಮಂತರ ಮನೆಯ ಅಂಗಳದಂತಿತ್ತು. ಅಸಡ್ಡಾಳ ಪೊದರು, ವಿರಳ ಮತ್ತು ಬೋಳು ಮರಗಳು, ಎಲ್ಲೆಂದರಲ್ಲಿ ಅಗೆದು ಮಣ್ಣು ತೆಗೆದ ಹೊಂಡ ದರೆಗಳು, ನಿಗಿದ ಚರಂಡಿ ತೋಡು, ಮಡುಗಟ್ಟಿ ಕೊಳೆತ ನೀರು, ಜೊಂಡುಕಳೆಗಳ ನಡುವೆ ಕಷ್ಟದಲ್ಲಿ ದಾರಿ ಬಿಡಿಸಿಕೊಂಡು ಹರಿಯುವ ಕೆನ್ನೀರ ತೋಡು ಒಂದೊಂದೂ ಪ್ರಕೃತಿಯ ಚಿಕಿತ್ಸಕ ಶಕ್ತಿಗೆ ದೀರ್ಘ ಕಾಲೀನ ಸವಾಲು. ನಗರ ಕಳೆದು ಹಳ್ಳಿ ವಾತಾವರಣ ಬರುತ್ತಿದ್ದಂತೆ ನಮ್ಮ ದುಗುಡ ತುಸುವಾದರೂ ಹರಿಯಿತು, ದಿನವೂ ಬೆಳಗಿತು. ಸುತ್ತಣ ಹಳ್ಳಿಗರಿಗೆ ಎಂಜಿನ್ನಿನ ಶ್ರುತಿಯಲ್ಲಿ ಹಾರನ್ನಿನ ಆಲಾಪಗಳಲ್ಲಿ ಸುಪ್ರಭಾತ ಕೋರುತ್ತ ಸಾಗಿದೆವು. ಮಂಗಳೂರಿನ ನಮ್ಮ ಹನ್ನೆರಡರ ತಂಡಕ್ಕೆ ಜೋಡುಮಾರ್ಗದಲ್ಲಿ ಮೂವರು ಸೇರಿಕೊಂಡರು. ಆದರೆ ಪುತ್ತೂರು, ಸುಬ್ರಹ್ಮಣ್ಯಗಳ ‘ಅರ್ಜಿದಾರರು’ ಬಾರದವರ ಲೆಕ್ಕಕ್ಕೆ ಸೇರಿಕೊಂಡರು. [ಹೇಳಿಯೂ ಬಾರದವ ಮೇಧಿನಿಯೊಳಧಮ ತಾ ಎಂದೇ ತಂದೆ ಟಿಪ್ಪಣಿಸಿದ್ದರು!]

ಮಂಗಳೂರು – ಹಾಸನ ರೈಲುಮಾರ್ಗದಲ್ಲಿ ಸಕಲೇಶಪುರವೇ ಘಟ್ಟದ ಮೇಲ್ಕೊನೆ. ಸುಬ್ರಹ್ಮಣ್ಯ ಕೆಳಕೊನೆ. ಸಹಜವಾಗಿ ಸುಬ್ರಹ್ಮಣ್ಯದಲ್ಲಿ ನಮ್ಮ ಗಾಡಿಯನ್ನು ವಿಶೇಷ ತಪಾಸಣೆಗೆ ಒಳಪಡಿಸಿ ಬಿಟ್ಟರು. ಮುಂದೆ ಒಂದೇ ಏರುಕೋನದ ಯಾನ. ತೋಟ ಕಾಡಾಗಿ, ವಿರಳ ಗಿಡ ಪೊದರುಗಳು ಆಕಾಶಕ್ಕೇರುತ್ತಾ ದಟ್ಟವಾಗುತ್ತಾ ಬಂದುವು. ಸಣ್ಣಪುಟ್ಟ ಗುಡ್ಡ ಸೀಳಿ, ತೋಡು ತೊರೆ ನಿರ್ಲಕ್ಷ್ಯದಲ್ಲಿ ಹಾಯ್ದು ಬಂದ ಅವೆಲ್ಲ ಸೇರಿ ಮಸಲತ್ತು ನಡೆಸುವಂತೆ ಎತ್ತೆತ್ತರದ ಗುಡ್ಡಬೆಟ್ಟಗಳು ಆವರಿಸತೊಡಗಿದವು, ಆಳದ ಕಣಿವೆಗಳು ತೆರೆದುಕೊಳ್ಳತೊಡಗಿದವು. ಸಾಲುಕಾಲಿನ ಸಗಣಿ ಹುಳ ಅಟಕಾಯಿಸುವ ಹುಡುಗನ ಕಾಲಿನೆದುರು ಮೊದಮೊದಲು ಅತ್ತಿತ್ತ ದಿಕ್ಕುತಪ್ಪಿಸಲು ನೋಡಿದರೂ ಅನಿವಾರ್ಯತೆಯಲ್ಲಿ ಆತನ ಬೆರಳ ಸಂದಿಗೇ ನುಸುಳುವಂತೆ ರೈಲೂ ಧುತ್ತನೆ ಮೊದಲ ಗುಹೆ ನುಗ್ಗಿತು. ಒಮ್ಮೆಲೆ ತಲೆಗೆ ಬಾಲ್ದಿ ಬೋರಲು ಹಾಕಿಕೊಂಡು ಹಾಡಿದ ಅನುಭವ. ರೈಲಿನ ಸದ್ದೆಲ್ಲ ಗೋಡೆಗೆ ಬಡಿದು ಗೊಂಯ್ ಗುಟ್ಟಿ, ಚಕ್ರದ ಕೀಚಲು ಹೆಚ್ಚಿದಂತಾಗಿ, ಹೆಪ್ಪುಗಟ್ಟಿದ ಕತ್ತಲಲ್ಲಿ ಬಾಲ್ಯದ ಭೂತಗಳೆಲ್ಲ ಎದ್ದು ನಲಿದಂತನ್ನಿಸಿ ರೈಲಿನುದ್ದಕ್ಕೂ ಜನ ಹುಯ್ಲಿಟ್ಟರು. ಅದುವರೆಗೆ ಮುಕ್ತವಾಗಿ ಚದುರುತ್ತಿದ್ದ ಡೀಸೆಲ್ ಹೊಗೆ ಒಮ್ಮೆಗೆ ಎಲ್ಲವೂ ನಮ್ಮನ್ನಾವರಿಸಿದ ಅಪಕಲ್ಪನೆಯೂ ಮೂಡಿ ಎಲ್ಲರೂ ಕಿಟಕಿ ಬಾಗಿಲುಗಳತ್ತ ಕತ್ತು ಚಾಚಿದ್ದರು. ಹಾಗೇ ಮತ್ತೆ ಬಯಲಾಗುವಾಗ ರೈಲಿಗೆ ರೈಲೇ ನಿಟ್ಟುಸಿರು ಬಿಟ್ಟ ಭಾವ!

[ಎಲ್ಲೋ ಓದಿದ ನೆನಪು – ರೈಲು ಒಮ್ಮೆಗೆ ಗುಹೆ ನುಗ್ಗಿ, ಗಾಢಾಂಧಕಾರ ಕಳೆದು ಬರುವಾಗ ನವವಿವಾಹಿತ ಹೇಳಿದ್ನಂತೆ “ಇದು ಅಂದಾಜಾಗಿದ್ದರೆ ನಿನಗೊಂದು ಮು…” ವಿವಾಹಿತೆ ನಾಚಿಕೆಯಲ್ಲಿ ಕೆಂಪಾಗಿ “ಅಂದ್ರೆ ಈಗ ಕೊಟ್ಟದ್ದು ಯಾರು?” ಬಹುಶಃ ಇದನ್ನು ರೈಲ್ವೇ ಇಲಾಖೆಯೂ ಓದಿದ್ದಕ್ಕೇ ಇರಬೇಕು – ಸುಬ್ರಹ್ಮಣ್ಯ ರೋಡ್ ಬಿಡುವಾಗಲೇ ಎಲ್ಲ (ರೈಲ್ವೇ) ಭೋಗಿಗಳ ಒಳಗೂ (ಕಾಮ ಅಲ್ಲ,) ದೀಪ ಉರಿಸಿಬಿಟ್ಟಿದ್ದರು. ಅದೇ ನಾವು ಕೊಂಕಣ ರೈಲು – ತುಂಬಾ ಆಧುನಿಕ ವ್ಯವಸ್ಥೆ – ಬಳಸಿದಾಗ, ಗುಹೆಗಳ ಒಳಗೆ ಸೌರದೀಪದ ವ್ಯವಸ್ಥೆಯನ್ನೇ ಮಾಡಿದ್ದು ಗಮನಿಸಿದ್ದೆ. ಹಾಸ್ಯ ಪ್ರತ್ಯೇಕ, ಒಮ್ಮೆಗೇ ಆವರಿಸುವ ಈ ಪೂರ್ಣಾಂಧಕಾರಕ್ಕೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಸಾಧ್ಯತೆಯಿರುವುದನ್ನು ನಿರಾಕರಿಸಲಾಗದು]

ಮುಂದಿನ ಸರದಿ ದೊಡ್ಡ ಸೇತುವೆಯದು. ಅಣುವೆ ಹಳ್ಳದಲ್ಲಿ ನೀರು ವಿಶೇಷ ಇರಲಿಲ್ಲವಾದರೂ ತುಂಬ ಎತ್ತರದಲ್ಲೇ ಬಂದ ಹಳಿಗೆ ದಾಟಲು ಕಣಿವೆ ಸುವಿಸ್ತಾರವಿತ್ತು. ಇಲ್ಲಿ ಗುಹಾ ಪರಿಣಾಮದ ತದ್ವಿರುದ್ಧ ಅನುಭವ. ಓಟದ ಸದ್ದಿನ ತತ್ಕ್ಷಣದ ಅನುರಣನಕ್ಕೆ ಗಟ್ಟಿ ನೆಲವೂ ಇಲ್ಲದೆ ಎಲ್ಲ ಗೋಳೆ ಗೋಳೆ! ಸೇತುವೆಯ ದೃಢ ರಚನೆಗಳೆಲ್ಲ ನಮ್ಮ ಡಬ್ಬಿಗಳ ಅಗಲದಲ್ಲಿ ಮರೆಯಾಗಿ, ಹೊರಗಿಣುಕಿದಾಗ ತೊರೆಯಾಳವೇ ತೋರಿ ಗಗನಯಾನದ ಭ್ರಮೆಯೂ ಮೂಡುತ್ತಿತ್ತು. ಹೀಗೆ ದಟ್ಟ ಕಾಡಿನ ನಡುವೆ ವಿಹರಿಸಿ, ಬೆಟ್ಟ ಸಾಲಿನ ಬಗಲಿನಲ್ಲಿ ಹಾವಾಡಿ, ಘನ ಗಹ್ವರಗಳಲ್ಲಿ ನುಸುಳಿ ಸಾಗಿತ್ತು ನಮ್ಮ ಓಟ. ಕತ್ತಲನ್ನು ಬೇಧಿಸಿ, ಕೊಳ್ಳದಾಳವನ್ನು ದಿಟ್ಟಿಸಿ, ಅಗಾಧ ದರೆಯ ನೆರಳಿನಲ್ಲಿ ಧುಮುಗುಡುತ್ತ, ಪ್ರಪಾತದಂಚಿನಲ್ಲಿ ಸಿಳ್ಳಿಕ್ಕುತ್ತಾ, ಮಲೆಯಣ್ಣನಿಗೆ ಜೈಕಾರ ಹಾಕಿ ಏರುದಾರಿಯ ಮೊದಲ ಹನ್ನೆರಡು ಕಿಮೀ ಕಳೆದು ನಿಂತ ತಾಣ ಶ್ರೀವಾಗಿಲು (ಮಲಯಾಳೀಕರಣ?) ಉರುಫ್ ಸಿರಿಬಾಗಿಲು; ಅಂದಿಗೆ ನಮಗೆ ಇಳಿದಾಣ.

ಘಟ್ಟದಾರಿಯಲ್ಲಿ ಜನವಸತಿ ಅಥವಾ ವಾಹನ ದಾರಿಯ ಸಾಮೀಪ್ಯ ಈ ರೈಲಿಗಿಲ್ಲ. ಆದರೆ ಏರುದಾರಿಯಲ್ಲಿ ಒಂದೇ ಸಮನೆ (ದಮ್ಮು ಕಟ್ಟಿ?) ಎಳೆಯುವ ಎಂಜಿನ್ನಿಗೆ ವಿಶ್ರಾಂತಿ ಕೊಡಲು ಅಥವಾ ಇಳಿದಾರಿಯಲ್ಲಿ ಸತತ ಬಿರಿಬಿಗಿದು ಬಿಸಿ ಏರುವ ಚಕ್ರಗಳನ್ನು ತಣಿಸಲು, ತಾಂತ್ರಿಕ ಸಹಾಯ ಅಗತ್ಯಬಿದ್ದರೆ ಒದಗಿಸಲು ಎರಡು ನಿಲ್ದಾಣ ನಿರ್ಮಿಸಿದ್ದಾರೆ. ಆ ಪೈಕಿ ಕೆಳಗಿನದು ಈ ಶ್ರೀವಾಗಿಲು. ಇದು ಅಂದು ನಮಗೆ ಇಳಿದಾಣ ಮಾತ್ರವಲ್ಲ ಚಾರಣಕ್ಕೆ ಆರಂಭ ಬಿಂದುವೂ ಹೌದು. ಎರಡನೆಯ ನಿಲ್ದಾಣ – ಮೇಲಿನದು, ಎಡಕುಮೇರಿ ಅಂದಿನ ನಮ್ಮ ಚಾರಣದ ಲಕ್ಷ್ಯ. ರೈಲು ಹತ್ತು ಮಿನಿಟಿನ ವಿಶ್ರಾಂತಿ ಪಡೆದು ಮುಂದೋಡಿತು. ನಾವು ಸ್ಟೇಶನ್ ಮಾಸ್ತರರಲ್ಲಿ ಮುಂದಿನ ದಾರಿ ಬಗ್ಗೆ, ದಿನದ ರೈಲು ಓಡಾಟಗಳ ಬಗ್ಗೆ ವಿಚಾರಣೆ ನಡೆಸಿ, ಒಂಬತ್ತೂವರೆಗೆ ಹಳಿಗಿಳಿದೆವು.

ಶಿರಾಡಿ ಘಟ್ಟದ ರೈಲುಯಾನದಲ್ಲಿ ಅರಸಿಕರು ಕವಿಗಳಾಗುವ ಅಪಾಯವಿದೆ! ಚಾರಣಕ್ಕಿಳಿದರಂತೂ ಪಾರಲೌಕಿಕರೇ ಆಗುತ್ತಾರೆಂದು ಕೇಳಿಯೇ ನಾವು ಚಾರಣ ಬಯಸಿದ್ದೆವು. ಮಳೆಗಾಲ ಘಾಟಿಯಲ್ಲಿ ಹಸುರು, ನೀರನ್ನು ಹೆಚ್ಚಿಸುವುದರೊಡನೆ ರುದ್ರ ಸೌದರ್ಯಕ್ಕೆ ಮೆರುಗು ತರುತ್ತದೆ. ಮಳೆ ಬಿಟ್ಟಿತ್ತು, ಸೂರ್ಯತಾಪ ತಟ್ಟದಂತೆ ಮೋಡದ ಛತ್ತು ಬಿಗಿಯಾಗೇ ಇತ್ತು. ಹಾಸನಕ್ಕೆ ೮೫ ಕಿಮೀ ಕಾಣಿಸುತ್ತಿದ್ದ ಕಲ್ಲಿನೊಡನೆ ಅಂದರೆ ಹಾಸನದೆಡೆಗೆ ೪೫ನೆಯ ಬಾಯ್ದೆರೆದ ಗುಹಾಪ್ರವೇಶದೊಡನೆ ನಮ್ಮ ನಡಿಗೆಯಾರಂಭಿಸಿದೆವು. ನೇರ ಎದುರು ಕೊಂಬಾರು ಬೆಟ್ಟದ ಬೋಳುಮಂಡೆ ನಮಗೆ ಗುರುತಿಸಲು ಸಾಧ್ಯವಾಯ್ತು. ಆದರೆ ಮುಂದೆ ಕಾಣಸಿಗಬೇಕಿದ್ದ ದೂಸಿಗುಡ್ಡೆ, ಮೋಹದ ಗುಡ್ಡೆ, ಹರೇಬೆಟ್ಟ ಇತ್ಯಾದಿ ನಮಗೆ ಕೇವಲ ಭೂಪಟದ ಹೆಸರುಗಳು ಮಾತ್ರ. ಕಾರಣ – ಸತತ ದಿಕ್ಕು ಬದಲುವ ಜಾಡು ಮತ್ತು ಅಲ್ಲಲ್ಲಿ ದೃಶ್ಯಗಳಿಗೆ ತೆರೆ ಹಾಕುವ ಕಾಡು. ಇದಕ್ಕೊಂದು ನಿದರ್ಶನ.

ಶ್ರೀವಾಗಿಲು ಬಿಟ್ಟು ಒಂದು ಕಿಮೀ ಕಳೆದಿತ್ತಷ್ಟೆ. ಹಾಗೂ ಹೀಗೂ ತಿರುಗಿ, ಎರಡು ಗುಹೆ ನಾಲ್ಕೆಂಟು ಸೇತುವೆ ದಾಟಿ ‘ಎದುರಿನ’ ಕೊಳ್ಳ ದೃಷ್ಟಿಸಿದವರಿಗೆ ಕಟ್ಟಡಗಳ ಸಾಲು ಕಾಣಿಸಿತು. ನಮ್ಮ ಅಂದಾಜುಗಳು ಹುಸಿಯಾದಂತೆ “ಗುಂಡ್ಯ”, “ಶಿರಾಡಿಗಡಿ” ಎಂದೆಲ್ಲಾ ಹೇಳಿದ್ದಾಯ್ತು. ಭಾರೀ ಉತ್ಸಾಹಿಗಳು ನಮ್ಮ ವೇಗವನ್ನೂ ಹಿರಿದಂದಾಜಿಸಿ “ಎಡಕುಮೇರಿಯೇ” ಬಂತೆಂದದ್ದೂ ಆಯ್ತು. ದುರ್ಬೀನು ಹಿಡಿದವರು ಎಲ್ಲರನ್ನು ಸೋಲಿಸುವಂತೆ ಅಪಸ್ವರ ತೆಗೆದರು “ಅದು ನಾವೀಗ ಬಿಟ್ಟ ಶ್ರೀವಾಗಿಲು.” ನನಗೆ ಸುಲಭದಲ್ಲಿ ಸೋಲೊಪ್ಪಿಕೊಳ್ಳಲು ಮನಸ್ಸಾಗದೇ ದಿಕ್ಸೂಚೀ ತೆಗೆದೆ. ಅದರಲ್ಲಿ ನಾನು ಪೂರ್ವದಲ್ಲಿ ಕಾಣಬಯಸಿದ್ದ ಆ ಕಟ್ಟಡ ಸಾಲು ಪಶ್ಚಿಮದಲ್ಲೇ ಇದ್ದು ಅಣಕದ ನಗೆ ಬೀರಿತು. ವಾಸ್ತವದಲ್ಲಿ ರೈಲ್ವೇ ಸುಮಾರು ಒಂದು ಕಿಮೀ ಹಳಿ ಬಿಚ್ಚಿದ್ದರೂ ಶ್ರೀವಾಗಿಲಿನ ಹಿತ್ತಿಲನ್ನು ನೂರು ಮೀಟರ್ ಅಂತರದಲ್ಲೇ ಉಳಿಸಿಕೊಂಡಿತ್ತು. ಸುರುಳೇಣಿ ಏರಿ ನಿಂತವರು ನೆಲವನ್ನೇ ಸಂಶಯಿಸಿದ ಸ್ಥಿತಿ ನಮ್ಮದಾಗಿತ್ತು!

ಹಳಿಗಳಿಗೊಡ್ಡಿದ ಜಲ್ಲಿ ಹಾಸಿನ ಪಕ್ಕದ ನೆಲದಲ್ಲಿ ನಡೆದೆವು. ಅದರೆ ಅಲ್ಲಿಯ ಚರಂಡಿ ಅಂಚು ಗಟ್ಟಿಯಿಲ್ಲದೆ ಅಡಿ ಕುಸಿಯುತ್ತಿತ್ತು. ಜಲ್ಲಿ ಜರಿದು, ಕೆಸರು ತುಳಿದು, ಪಟ್ಟಿಯ ಮೇಲಕ್ಕೆ ಬೇಗನೆ ಮರಳಿದೆವು. ನೇರ ದಾರಿಯಲ್ಲಿ ಹಳಿ ಜೋಡಿಸಿದ ಮರದ ದಿಮ್ಮಿಗಳು ಸುಮಾರು ಅಡಿಗೊಂದರಂತೆ, ಹತ್ತು ಹನ್ನೆರಡೂ ಹೆಜ್ಜೆಯವರೆಗೆ ಒಂದೇ ಅಂತರದಲ್ಲಿರುತ್ತಿದ್ದವು. ಹಾಗೆಯೇ ನಮ್ಮ ಹೆಜ್ಜೆಗಾರಿಕೆಗೆ ಖಚಿತ ‘ಒಂದಡಿ – ಒಂದಡಿ – ಒಂದಡಿ’ ಲಯ ಒದಗುತ್ತಿತ್ತು. ಕಂಬಿಗಳೆರಡರ ಜೋಡಣೆ ಇದ್ದಲ್ಲಿ ದಿಮ್ಮಿಗಳು ಜೋಡಿಯಲ್ಲಿ ಬಂದು ನಮ್ಮ ಲಯ ಕೆಡುತ್ತಿತ್ತು; ಅರ್ಧಡಿ – ಅರ್ಧಡಿ. [ಈಳೆ, ತ್ರಿಪದಿ, ಚೌಪದಿ, ಷಟ್ಪದಿ, ಅಷ್ಟಪದಿ ಎಂದೆಲ್ಲಾ ಛಂದೋಬಂಧಗಳನ್ನು ಲೀಲಾಜಾಲವಾಗಿ ಅಳವಡಿಸಿ ವಸ್ತು ಏನು ಕೊಟ್ಟರೂ ಕಾವ್ಯ ಹೆಣೆಯುವ ಶತಾವಧಾನಿ ಗಣೇಶರ ಬಳಿ ಈ ದಶಪದಿಗೊಂದು ಪ್ರಕೃತಿಯನ್ನು ಕೀರ್ತಿಸುವ, ಚಾರಣಿಗರಿಗೆ ಸ್ಫೂರ್ತಿ ಕೊಡುವ ಕಾವ್ಯ ಕೇಳಬೇಕು. ಎರಡು ಸಾಲು ಪಲ್ಲವಿ, ಹತ್ತು ಚರಣ!] ಹತ್ತರ ಖಂಡ ಬದಲಿಸಬೇಕಾದಲ್ಲಿ, ಪಲ್ಲವಿ ಮರೆತವನು ಎಡವುತ್ತಿದ್ದ. ಎಲ್ಲೋ ನೋಡುತ್ತ ಕಾಲೆಳೆದವರು ತಕಧಿಮಿಯಲ್ಲಿ ದಿಮ್ಮಿ ತಪ್ಪಿ, ಜಲ್ಲಿ ಮೆಟ್ಟಿ, ಮುಂದಿನ ದಿಮ್ಮಿಗೆ ಕಾಲುಹೆಟ್ಟಿ ಅಕಾವ್ಯ ಒದರಿದ್ದುಂಟು. ಮಳೆಗಾಲದ ಪಾಚಿಯೋ ರೈಲಿನಿಂದ ಸೋರಿದ ಎಣ್ಣೆಯೋ ನಮ್ಮ ಎಚ್ಚರದ ನಡೆಯನ್ನೂ ಆಗೀಗ ಕದಲಿಸಿದ್ದು ಉಂಟು. ನಡೆವರೆಡವದೆ ಕುಳಿತವರೆಡಹುವರೇ! ಕೆಲವರು ಕೈ ಎರಡೂ ಪಕ್ಕಕ್ಕೆ ಚಾಚಿ, ಓಲಾಡಿಸುತ್ತ, ಒಂಟಿಕಂಬಿಯ ಮೇಲೆ ಬಿಗಿಸರಿಗೆ ನಡಿಗೆಯ ಅಣಕಕ್ಕಿಳಿದರು. ಇದರಲ್ಲಿ ಹನಿ ಮಳೆಗೂ ಹೆದರಿ ಕೊಡೆ ಬಿಡಿಸಿದವರದಂತೂ ಸಾಕ್ಷಾತ್ ಸರ್ಕಸ್ ಸುಂದರಿಯರದೇ ಬಿನ್ನಾಣ. ಎಲ್ಲ ನಾಲ್ಕು ಹೆಜ್ಜೆಯಲ್ಲಿ ಜಾರಿ, ಮುಗ್ಗರಿಸಿ ಮತ್ತೆ ಒಚಿದಡಿ – ಒಂದಡಿ ಲಯಕ್ಕೆ ಬಿದ್ದವರೇ. (ಆಗಿನ್ನೂ ಮೀಟರ್ ಗೇಜ್ ಇದ್ದುದರಿಂದ) ಒಂದೆರಡು ಜೋಡಿ ಆಚೀಚೆ ಕಂಬಿಗಳ ಮೇಲೆ ಸಮಾನಾಂತರದಲ್ಲಿ ನಿಂತು ಕೈ ಬೆಸೆದು ನಡಿಗೆಗಿಳಿದದ್ದು ಮಾರ್ಗಕ್ರಮಣಕ್ಕೆ ಯಶಸ್ವೀ ತಂತ್ರವೇ ಸರಿ. ಆದರೆ ಸ್ವತಂತ್ರ ವೀಕ್ಷಣೆಗೆ, ಅನ್ಯ ಧ್ಯಾನಗಳಿಗೆ ಅವಕಾಶವಿಲ್ಲದ ಯಾಂತ್ರಿಕ ನಡೆಯಾಗುತ್ತಿತ್ತು. ಇಷ್ಟಾಗಿಯೂ ಗುಹಾ ಪ್ರಪಂಚಕ್ಕಾಗುವಾಗ ಬೇರೆಯೇ ವ್ಯವಸ್ಥೆ ಬೇಕಾಗುತ್ತಿತು.

ಕಗ್ಗಲ್ಲ ಗೋಡೆಯಲ್ಲಿ ಕೊರೆದ ಸುರಂಗ, ಜರಿಯುವ ದರೆ ತಡೆಯಲು ಕಟ್ಟಿದ ಕಾಂಕ್ರೀಟ್ ಗುಹೆ, ಪಡುಬೆಟ್ಟ ಸಾಲುಗಳ ಮೈಬದಲಿಸಲು ತೋಡಿದ ಮಹಾಮಾಟೆ ಇತ್ಯಾದಿ ಸುಮಾರು ಇಪ್ಪತ್ತೊಂಬತ್ತು ನಮೂನೆಯ ಬಿಲ ಮಾರ್ಗಗಳನ್ನು ನಾವು ಒಟ್ಟು ನಡಿಗೆಯಲ್ಲಿ ಹೊಕ್ಕು ಹೊರಟೆವು. (ಇವುಗಳ ಹೊರಗೆ ನಮೂದಿಸಿದ್ದ ಕ್ರಮ ಸಂಖ್ಯೆ ಮತ್ತು ಅವುಗಳ ಉದ್ದವನ್ನು ನಾನು ಅಂದೇ ಮಾಡಿಟ್ಟ ನಕ್ಷೆಯಲ್ಲಿ ನೀವು ನೋಡಬಹುದು) ಕಿಚಗುಡುವ ಬಾವಲಿಗಳು, ಕಿರು ಒರತೆಗಳ ಸಿಂಪರಣೆ ಕೆಲವು ಗುಹೆಗಳಲ್ಲಿದ್ದವು. ಹಲವು ಗುಹಾಗೋಡೆಗಳಲ್ಲಿ ಕಡಿದ ಪ್ರಾಕೃತಿಕ ಅಂತರ್ಜಲ ನಾಳಗಳಿಂದ ಸ್ಪಟಿಕ ನಿರ್ಮಲ ಜಲ ಚಿಮ್ಮಿ ಹರಿಯುತ್ತಿತ್ತು. ಆದರೆ ಚೊಕ್ಕ ಕಾಂಕ್ರೀಟ್ ಚರಂಡಿ ಮತ್ತು ಹಳಿಗೊಡ್ಡಿದ ಜಲ್ಲಿ ಜರಿದು ಅದನ್ನು ತುಂಬದಂತೆ ಕಟ್ಟಿದ್ದ ಮೋಟುಕಟ್ಟೆ ನಮಗೆ ಸ್ಪಷ್ಟ ನಡೆ ನಿರ್ದೇಶಿಸುತ್ತಿದ್ದವು. ಕಿರುಗುಹೆಗಳಲ್ಲಿ ಹೊರಬೆಳಕು ಸಾಕಷ್ಟು ಸಿಗುವಂಥಲ್ಲಿ ಆ ಕಟ್ಟೆಗಳ ಮೇಲಿನ ನಡಿಗೆಯೇ ನಮಗೆ ಅನುಕೂಲ. ಗುಹೆ ತಿರುವುಳ್ಳದ್ದು ಅಥವಾ ಸ್ವಲ್ಪ ಉದ್ದದ್ದೋ ಆಗಿ, ಹೊರಬೆಳಕು ಸಾಕಷ್ಟಿಲ್ಲವಾದಲ್ಲಿ ನಮಗೆ ಇಬ್ಬಂದಿ. ಗುಹೆಗಳು ಹೊರಬೆಳಕನ್ನೇನೂ ಹೆಚ್ಚಿಸುತ್ತಿರಲಿಲ್ಲ. ಆದರೆ ಅದು ನಮ್ಮ ಕಣ್ಣನ್ನಂತೂ ತುಂಬಿ, ಕಾಲಬುಡದ ನಿಜವನ್ನು ಮರೆಮಾಡುತ್ತಿತ್ತು. ಸರಿಯಾದ ಟಾರ್ಚುಗಳನ್ನೇ ನಾವು ಒಯ್ದಿದ್ದರೂ ಅವೂ ನಿಸ್ತೇಜವಾದಂತೇ ಭಾಸವಾಗುತ್ತಿತ್ತು. ಕೆಲವು ಗುಹೆಯಗಳಲ್ಲಿ ಜಾಡಿನ ನಡುವೆ, ತೇಲುಗಾಲನ್ನು ಬಿಟ್ಟು, ಕೆಲವೊಮ್ಮೆ ಪರಸ್ಪರ ಕೈ ಹಿಡಿದೂ ನಡೆದದ್ದಿತ್ತು. ಇಲ್ಲೂ ಪಾಚಿ ಪರಿಣಾಮವೂ ಕೆಲವೆಡೆಗಳಲ್ಲಿ ನಮ್ಮನ್ನು ಹೈರಾಣಗೊಳಿಸಿತ್ತು. ಅದೇನಿದ್ದರೂ ಗುಹೆಗಳ ಒಳಗೆ ಪೂರ್ಣ ಕಟ್ಟೆ ನಡಿಗೆಗಿಳಿದರೆ ಆತ ಕೆಟ್ಟನೆಂದೇ ಅರ್ಥ. ಕಟ್ಟೆಯಿಂದ ಉರುಳಿದವರಲ್ಲಿ ತಂಡದ ಕಿರಿಯ ಸದಸ್ಯ ನೇಸರ (ಏಳು ವರ್ಷ) ಮೊದಲಿಗ ಮಾತ್ರ. ಅವನು ತನ್ನಳುವಿನಿಂದ ಎಲ್ಲರ ದಾಖಲೆಗೆ ಸಿಕ್ಕಿದ. ಆದರೆ ಇನ್ನೂ ಕೆಲವು ‘ಮರ್ಯಾದಸ್ಥ’ರು, ನಾಜೂಕಯ್ಯಗಳು ‘ಬಿದ್ದ ಹಾಗೆ’ ಆಗಿರುವ ವರದಿಗಳು ಅವಶ್ಯ ನಂಬಲರ್ಹವೇ ಆಗಿವೆ.

ಡಾಮರು ದಾರಿಯಲ್ಲಿ (ಸಾರಿಗೆ ಸೌಕರ್ಯಕ್ಕಾಗಿರುವ ಮೇಲ್ಸೇತುವೆಗಳನ್ನು ಹೊರತುಪಡಿಸಿ) ತೊರೆ ನದಿಗಳನ್ನು ದಾಟಲು ಮಾತ್ರ ಸೇತುವೆಗಳ ಬಳಕೆಯಾದರೆ ಇಲ್ಲಿ ಇರುಕುಗಳನ್ನು ನಿವಾರಿಸಲು, ರೈಲಿನ ಮಿತಿಯಾದ ಔನ್ನತ್ಯಕೋನವನ್ನು ಕಾಪಾಡಿಕೊಳ್ಳಲು ಎಷ್ಟೋ ಕಡೆಗಳಲ್ಲಿ ಭಾರೀ ಸೇತುಬಂಧವಾಗಿದೆ. ಸಹಜವಾಗಿ ಅಂಕುಡೊಂಕಿನ, ಕಾಡುಪೊದರುಗಳ ನೆತ್ತಿ ಹಾಯುವ ಸೇತುವೆಗಳು ಇಲ್ಲಿ ಸಾಮಾನ್ಯ. ಈ ಸೇತುವೆಗಳು ಚಾರಣಿಗರ ದೃಷ್ಟಿಯಿಂದ ಅಷ್ಟೇನೂ ಸ್ನೇಹಿಗಳಲ್ಲ. ಯಾಕೆಂದರೆ ಇವು ತಳದಿಂದ ಎಷ್ಟು ಭಾರೀ ಇದ್ದರೂ ಮೇಲೆ ಬಳಕೆಯ ದೃಷ್ಟಿಯಲ್ಲಿ ಕೇವಲ ಎರಡು ಸಾಲು ಕಂಬಿಯನ್ನಷ್ಟೇ ಒಡ್ಡುತ್ತವೆ. ಇಲ್ಲಿ ನೆಲದ ಮೇಲಿನಂತೆ ಕಂಬಿಗಳಿಗೆ ಜಲ್ಲಿ ಹಾಸಿನ ಅಗತ್ಯ ಬಾರದಿರುವುದರಿಂದ ಕೊಳ್ಳದಾಳದ ಪೂರ್ಣ ದರ್ಶನವಾಗುತ್ತದೆ. ಇದು ಔನ್ನತ್ಯದ ಭಯ ಇರುವವರಿಗಂತೂ ಕೆಲವೊಮ್ಮೆ ಅಸಾಧ್ಯ ಸವಾಲೇ ಆಗಿ ಉಳಿದರ ಆಶ್ಚರ್ಯವಿಲ್ಲ. ಕೇವಲ ಕಂಬಿಗಳ ತಪಾಸಣೆ ಮಾಡುವವರ ನಿಯತ ನಡಿಗೆಯ ಅನುಕೂಲಕ್ಕೆಂದು ನಡುವೆ ಹಾಸಿದ ಉಕ್ಕಿನ ಹಾಳೆಗಳು ನಮಗೂ ಒದಗಿದವು. ಈ ತನಿಖೆದಾರರು ಅಥವಾ ರಿಪೇರಿ ಮಾಡುವವರು ಬಲುದೀರ್ಘ ಸೇತುವೆಗಳ ನಡುವೆ ಇರುವಾಗಲೇ ರೈಲು ಬರುವ ಅನಿವಾರ್ಯ ಸನ್ನಿವೇಶಗಳನ್ನು ಪರಿಗಣಿಸಿ ಕೆಲವೆಡೆ ಗಾಡಿಯ ನಿಲುಕನ್ನು ಮೀರುವಂತೆ ಬೇರೆ ಬೇರೆ ನಮೂನೆಯ ಬಾಲ್ಕನಿಗಳನ್ನೂ ಕಟ್ಟಿಕೊಟ್ಟಿರುತ್ತಾರೆ. (ಉದ್ದದ ಗುಹೆಗಳೊಳಗೂ ರೈಲಿನ ಅಗತ್ಯದಷ್ಟೆ ಬಲು ಉದ್ದಕ್ಕೆ ಭೂಮಿ ಸೀಳಿ ಮಾಡಿದ ಚರಂಡಿಯಂಥಾ ಜಾಡುಗಳಲ್ಲೂ ಈ ಬಾಲ್ಕನಿಯಂಥಾ ರಚನೆಗಳನ್ನು ಗಮನಿಸಬಹುದು) ಈ ಅನಿವಾರ್ಯತೆಯನ್ನು ನಾವೂ ಬಳಸಿಕೊಳ್ಳಲೇಬೇಕಾದ ರೋಚಕ ಸನ್ನಿವೇಶವನ್ನು ನಾನಿಂದು ಮತ್ತೆ ನೆನೆಸಿಕೊಳ್ಳಲೇಬೇಕು. [ಮೂಲದಲ್ಲಿ ನಾನು ಈ ಬರಹವನ್ನು ಸುಧಾ ವಾರಪತ್ರಿಕೆಗೆ ಇನ್ನಷ್ಟು ಸಂಕ್ಷಿಪ್ತವಾಗಿಯೇ ಕೊಟ್ಟಿದ್ದೆ. ವಿಷಯದ ಮಹತಿಗಿಂತಲೂ ಸ್ಥಳಾವಕಾಶದ ಮಿತಿ ನಮ್ಮೆಲ್ಲಾ ಮುದ್ರಣ ಮಾಧ್ಯಮವನ್ನು ಕಾಡುವುದು ತಿಳಿದೇ ಇದ್ದುದರಿಂದ ನಾನೀ ಘಟನೆಯನ್ನು ಅಂದು ದಾಖಲಿಸಿರಲೇ ಇಲ್ಲ. ಮುಂದೆ ಚಕ್ರವರ್ತಿಗಳು ಪುಸ್ತಕ ತರುವ ಕಾಲದಲ್ಲಿ ನಾನು ಸಂಕಲನಕ್ಕಷ್ಟೇ ಮನ ಮಾಡಿದೆ, ವಿಸ್ತರಣೆ ಅಥವಾ ಪರಿಷ್ಕರಣೆಗಲ್ಲ! ಇದನ್ನೇ ಅಂದು ಮುರಳೀಧರ ಉಪಾಧ್ಯ, ಹಿರಿಯಡಕ ಇವರು ತಮ್ಮ ಉದಯವಾಣಿ ವಿಮರ್ಶೆಯಲ್ಲಿ ಸರಿಯಾಗಿಯೇ ಟೀಕಿಸಿದ್ದರು.]

ಶ್ರೀವಾಗಿಲು ಬಿಡುವಾಗಲೇ ಸಂಜೆಯವರೆಗೆ ಯಾವುದೇ ರೈಲು ಓಡಾಡುವುದಿಲ್ಲ ಎಂದು ನಾವು ಖಾತ್ರಿಪಡಿಸಿಕೊಂಡಿದ್ದೆವು. ಸಹಜವಾಗಿ ಆತಂಕಕಾರಿಯಾದ ಸನ್ನಿವೇಶವೇನೂ ಬಾರದು ಎಂಬ ಧೈರ್ಯದಲ್ಲಿ ನಮ್ಮ ತಂಡ ಐವತ್ತು ನೂರಡಿ ಅಂತರದಲ್ಲಿ ಚದುರಿ ಮುಂದುವರಿದಿತ್ತು. ತೀರಾ ಆತಂಕಕಾರಿಯಾದ ಸನ್ನಿವೇಶ ಅಲ್ಲವಾದಲ್ಲಿ ಎಲ್ಲ, ಮುಖ್ಯವಾಗಿ ಸಣ್ಣವರಿಬ್ಬರೂ (ಸುಂದರರಾಯರ ಮಗ ನೇಸರ ಮತ್ತು ತುಸು ದೊಡ್ಡವ, ನಮ್ಮ ಅಭಯ) ಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಿಕೊಂಡಿದ್ದೆವು. ಅದೊಂದು ಸುಮಾರು ನೂರಡಿ ಉದ್ದಕ್ಕೆ ಕೊಳ್ಳ ಹಾಯ್ದು ಗುಹೆ ಬಾಯಿಗೆ ತಲಪಿಸುತ್ತಿದ್ದ ಸೇತುವೆ. ಬಾಲರಿಬ್ಬರು ಮುಂದಿದ್ದ ಹಿರಿಯರಿಂದ ಕನಿಷ್ಠ ಮೂವತ್ತು ಅಡಿ ಅಂತರದಲ್ಲಿ ಮುಂಚೂಣಿಯಲ್ಲಿದ್ದರು. ಒಮ್ಮಿಂದೊಮ್ಮೆಗೆ ಕಂಬಿ ನೆಟಿಕೆ ಮುರಿದಂತೆ ರೈಲು ಓಡುವಾಗಿನ ಸದ್ದು – ಲಟಕ್ ಪಟಕ್, ಎಂದಂತಾಯ್ತು. ಆ ವಲಯದಲ್ಲಿ ರೈಲುಗಳು ಸಂಚರಿಸುವುದೇ ಇದ್ದರೆ ಪ್ರತ್ಯಕ್ಷವಾಗುವ ಕನಿಷ್ಠ ಹತ್ತು ಮಿನಿಟು ಮೊದಲಾದರೂ ಅದರ ಓಟ, ಇಂಜಿನ್ ಮತ್ತು ಬಿಟ್ಟು ಬಿಟ್ಟು ಬಜಾಯಿಸುವ ಹಾರ್ನ್ ಸದ್ದು ಕೇಳಲೇ ಬೇಕು. “ಹಾಗಾದರೆ…” ಎಂದು ನಮಗೆ ಯೋಚಿಸಲು ಸಮಯ ಕೊಡದೆ ಒಮ್ಮೆಲೆ ಎದುರಿನ ಓರೆಯ ಗುಹೆಯ ಕತ್ತಲನ್ನು ಹರಿದು ನಮ್ಮತ್ತ ಸಾಕಷ್ಟು ವೇಗವಾಗಿಯೇ ಓಡಿ ಬರುತ್ತಿತ್ತೊಂದು ಟ್ರಾಲಿ!

ಮೂರೋ ನಾಲ್ಕೋ ಜನ ಕುಳಿತು, ಆವಶ್ಯಕತೆಯಂತೆ ಪುಟ್ಟ ಮೋಟಾರಿನ ಬಲವನ್ನು ಬೇಕಾದರೂ ಬಳಸಿಕೊಂಡು ಕಂಬಿಯ ಮೇಲೆ ಧಾವಿಸುವ ಪುಟ್ಟ ಗಾಡಿಯೇ ಟ್ರಾಲಿ. ಆ ಕ್ಷಣದಲ್ಲಿ ಅದು ನಮಗೆಲ್ಲ ಒಮ್ಮೆಲೇ ಪುಟ್ಟ ರೈಲೇ ಆಗಿ ಕಾಣಿಸಿತು. ಮಕ್ಕಳಿಬ್ಬರೂ ಒಮ್ಮೆ ಮರವಟ್ಟಂತೆ ಕಂಡರು. ಮರುಕ್ಷಣದಲ್ಲಿ ಹತ್ತಿಪ್ಪತ್ತಡಿ ಹಿಂದಕ್ಕೋಡಿ, ಪಕ್ಕದ ಬಾಲ್ಕನಿ ಸೇರುತ್ತಾರೋ ಸ್ವಲ್ಪ ಮುಂದಕ್ಕೋಡಿ, ಕಂಬಿಯ ಪಕ್ಕದಲ್ಲಿ ಕೆಳಗೆ ನೇತುಬಿಟ್ಟಂತಿದ್ದ ಇನ್ನೊಂದೇ ರೂಪಿನ ಬಾಲ್ಕನಿಗಿಳಿಯುತ್ತಾರೋ – ನಮಗೆಲ್ಲ ಉಸಿರು ಸಿಕ್ಕಿಹೋಗಿತ್ತು. ಇನ್ನು ಗಾಬರಿಯಲ್ಲಿ ಅಥವಾ ಧಾವಂತದಲ್ಲಿ ಎಡವಿ ಕೊಳ್ಳಕ್ಕೇ ಕೆಡೆದರೂ ಹೋಯ್ತು ಎಂಬ ಆತಂಕದಲ್ಲಿ ನಾವೆಲ್ಲರೂ ತಲೆಗೊಂದು ಸಲಹೆ ಬೊಬ್ಬೆ ಹೊಡೆಯುವುದಷ್ಟೇ ಉಳಿಯಿತು. ಆದರೆ ಅದೃಷ್ಟವಶಾತ್ ಟ್ರಾಲಿಯಲ್ಲಿದ್ದ ಅಧಿಕಾರಿಗಳು ಹೆಚ್ಚು ತಿಳುವಳಿಕಸ್ಥರೂ ಇಂಥ ಆಕಸ್ಮಿಕದ ನಿರೀಕ್ಷೆ ಇದ್ದವರೂ ಆದ್ದರಿಂದ ಅವಘಡವೇನೂ ಘಟಿಸಲಿಲ್ಲ. ಇಳಿಜಾರಿನ ಓಟದಲ್ಲಿ ಟ್ರಾಲಿ ಇಂಜಿನ್ ಬಳಸಿರದಿದ್ದರೂ ಅದಕ್ಕೆ ಶಕ್ತ ಸ್ವತಂತ್ರ ಬಿರಿಯಿತ್ತು; ಸೇತುವೆಯ ಆ ತುದಿಯಲ್ಲೇ ನಿಲ್ಲಿಸಿದರು. ಮತ್ತು ನಮ್ಮೆಲ್ಲ ಸೂಚನೆಗಳಿಗಿಂತಲೂ ಪ್ರಭಾವಿಯಾಗಿ ಕೈಕರಣದಲ್ಲೂ ಬೊಬ್ಬೆ ಹೊಡೆದೂ ಮಕ್ಕಳನ್ನು ಇದ್ದಲ್ಲೇ ನಿಲ್ಲುವಂತೆ ಮಾಡಿದರು. ಮುಂದೆ ನಾವೆಲ್ಲ ಅವರನ್ನು ಅಪರಾಧೀ ಭಾವದಲ್ಲೇ ಸಮೀಪಿಸಿದಾಗಲೂ ಪ್ರೀತಿಯಿಂದಲೇ ವಿಚಾರಿಸಿ, ಎಚ್ಚರಿಕೆ ಹೇಳಿ ಬೀಳ್ಕೊಂಡರು.

[ಚಾರಣಿಗರ ಸಂಖ್ಯೆ ಮತ್ತು ಅಶಿಸ್ತು ಹೆಚ್ಚಿದ್ದರಿಂದಲೋ ಏನೋ ಈಚಿನ ದಿನಗಳಲ್ಲಿ ಮತ್ತೆ ಮತ್ತೆ ಇಲಾಖೆ ‘ರೈಲ್ವೇ ದಾರಿಯಲ್ಲಿ ನಡೆಯುವುದು ಶಿಕ್ಷಾರ್ಹ ಅಪರಾಧ’ ಎನ್ನುವುದನ್ನು ಪತ್ರಿಕಾ ಜಾಹೀರಾತುಗಳಲ್ಲಿ ಪ್ರಚುರಿಸುತ್ತಲೇ ಇದೆ. ಗಮನಿಸಿ: ರೈಲ್ವೇ ಹಳಿಗಳ ಗುಂಟ ಎಲ್ಲಿ ನಡೆಯುವುದೂ ಅಪರಾಧವೇ. ಮತ್ತೆ ಆ ಘಾಟಿ ವಲಯದಲ್ಲಿ ತುಸು ಮುಂದುವರಿದ ಕಾಲದಲ್ಲಿ ಕಾಡಾನೆಗಳ ಸಂಚಾರವೂ ಸೇರಿಕೊಂಡದ್ದನ್ನು ಕೇಳಿದ್ದೆ. ದುರಂತವೆಂದರೆ ಆಗಲೂ ಇಂದಿನಂತೇ ಪರಿಸರ ಛಿದ್ರೀಕರಣ, ಆನೆಗಳ ಸಾಂಪ್ರದಾಯಿಕ ಜಾಡಿನಲ್ಲೆಲ್ಲೋ ಅಕಾರ್ಯವಾಗಿದೆ ಎಂದೆಲ್ಲಾ ಯೋಚಿಸುವ ಪ್ರೌಢತೆ ಸಾಮಾನ್ಯರೇನು ಇಲಾಖಾ ಬುದ್ಧಿವಂತರಿಗೂ ಬಂದಿರಲಿಲ್ಲ. ಕಾಡಾನೆಗಳ ದಾಂಧಲೆ, ದಾಳಿ, ಹಾವಳಿ, ಮುಗ್ಧ ಹಳ್ಳಿಗರ ಜೀವಹರಣ, ಸೊತ್ತು ನಷ್ಟಗಳಷ್ಟೇ ವರದಿಯಾಗುತ್ತಿದ್ದವು, ಪರಿಹಾರದ ಮಾತುಗಳು ತೇಲುತ್ತಿದ್ದವು]

ಶಿರಾಡಿ ಮಾರ್ಗದ ಅತಿ ಉದ್ದದ ಸೇತುವೆ. ಭಾರೀ ಕಾಂಕ್ರೀಟ್ ಕುಂದಗಳ ಮೇಲೆ ಅಷ್ಟೇ ಭಾರೀ ಉಕ್ಕಿನ ಹಂದರ ಹೇರಿ, ನೆತ್ತಿಯಲ್ಲಿ ಹೀಗೆ ಡೊಂಕಿ, ಹಾಗೆ ಬಳುಕಿ ಕಂಬಿಸಾಲು ಓಡಿತ್ತು. ನಡುವೆ ಹಾಸಿದ ತುಂಡು ತಗಡುಗಳಲ್ಲಿ ಒಂದೊಂದು ಆಣಿ ಕಳಚಿದವೂ ಇರುತ್ತಿತ್ತು. ಅವುಗಳ ಆಚೀಚೆ ಕೊಳ್ಳ ಇಣುಕುವುದು, ಪ್ರತಿ ಕುಂದಕ್ಕೂ ಇಳಿಯಲು ಕೊಟ್ಟ ಏಣಿಯ ‘ಪರೀಕ್ಷೆ’ ಮಾಡುವುದು, ಬಾಲ್ಕನಿಗಳ ಕೈತಾಂಗಿನ ತುಕ್ಕು ಸವರುವುದು, ಆಳದಲ್ಲಿ ಹರಿಯುತ್ತಿದ್ದ ಝರಿಗಳ ನಿರಂತರ ಘೋಷಕ್ಕೆ ನಮ್ಮ ಪಲುಕು ಸೇರಿಸುವುದು, ಹಳಸಲು ಹಾಸ್ಯ ಹಂಚುವುದು ನಡೆದೇ ಇತ್ತು. ನೇರ ಕೊಳ್ಳ ದಿಟ್ಟಿಸಲಾಗದ ಮಾನಸಿಕ ತಡೆಯವರದು ಉಭಯ ಸಂಕಟ. ಕೆಳಗೆ ನೋಡಿದರೆ ನುಂಗು ಬಾಯಿ ತೆರೆದ ಕಣಿವೆ, ದಿಟ್ಟಿ ದಿಗಂತಕ್ಕೆತ್ತಿದರೆ ಹೆಜ್ಜೆ ತಪ್ಪುವ ಭಯ. ತಂಡದಲ್ಲಿದ್ದದ್ದು ಒಂದೋ ಎರಡೋ ಕ್ಯಾಮರಾ. ಆದರೂ ಎಲ್ಲಿ ನೋಡಿದರೂ ಕ್ಯಾಮರಾದಲ್ಲಿ ಅಮರವಾಗುವ ಚಟುವಟಿಕೆಗಳು, ದೃಶ್ಯಗಳು. ಅದು ಇಂದಿನಂತೆ (೨೦೧೨) ಡಿಜಿಟಲ್ ಚಿತ್ರೀಕರಣ, ಕ್ಯಾಮರಾಯುಕ್ತ ಚರವಾಣಿಗಳೆಲ್ಲ ಗೊತ್ತೇ ಇಲ್ಲದ, ಹಾಗೇ ಪ್ರತಿ ಕ್ಲಿಕ್ಕಿಗೂ ಬೆಲೆ, ಮರ್ಯಾದೆ ಇದ್ದ ಕಾಲ. ಸನ್ನಿವೇಶ ಮರೆತು, ಎಲ್ಲೂ ಸಿಗುವ ನಮ್ಮದೇ ಮುಖ, ಭಂಗಿಗಳಿಗಿಂತಲೂ ಹೊಸತು ಹುಡುಕುತ್ತಾ ಪ್ರಸನ್ನ ಸಾಲಿನ ಕೊನೆಯಲ್ಲಿದ್ದ. ಪ್ರತಿ ಕ್ಷಣದಲ್ಲು ಹೊಸತು ಅನುಭವಿಸುತ್ತ, ವಯ್ಯಾರ ಸೇತುವಿನುದ್ದ ಹಂಚಿಹೋದ ಮಿತ್ರರನ್ನೊಮ್ಮೆ ಚಿತ್ರಿಸಿದ. ಅನಂತರ ಸೇತುವೆಯ ಎಡ ಅಂಚಿಗೆ ಸರಿದು, ಕೆಳ ಕೊಳ್ಳವನ್ನು ನೋಡುತ್ತ ನಿಧಾನವಾಗಿ ಹೆಜ್ಜೆ ಹಾಕಿದ್ದ. ಒಮ್ಮೆಲೆ ಎರಡು ದಿಮ್ಮಿಗಳ ನಡುವೆ, ಸೇತುವೆಯ ಉಕ್ಕಿನ ತೊಲೆಯ ಮೇಲೇ ವಿವಿಧ ವರ್ಣರಂಜಿತ ಮಣಿಮಾಲೆಯೇ ಒಂದು ಕಳಚಿ ಬಿದ್ದಂತೆ ಕಂಡ. ಕಿತ್ತ ಹೆಜ್ಜೆ ಹಿಂದಿಟ್ಟು ನೋಡಿದ, ಬಗ್ಗಿ ನೋಡಿದ, ಅರ್ಥವಾಗದ್ದಕ್ಕೆ ಚಿಟಿಕೆ ಹೊಡೆದೂ ನೋಡಿದ. ಅಪೂರ್ವ ಜೀವಿ ಮಿಸುಕಲಿಲ್ಲ. ಬಗಲಿನಿಂದ ಕ್ಯಾಮರಾ ತೆಗೆದು ಕ್ಲಿಕ್ಕಿಸಿದ. ಅದು ಸ್ವಲ್ಪ ತಲೆ ಎತ್ತಿತು. ಹವಳದೊಳಗಿನ ಕುಸುರಿಯಂತೆ ಕಣ್ಣು ಮಿನುಗಿರಬೇಕು. ಪ್ರಸನ್ನ ಪ್ರಾಣಿ ಪಕ್ಷಿಗಳ ವರ್ತನೆ ಬಗ್ಗೆ ಏನೂ ತಿಳಿದವನಲ್ಲ. ಸಹಜವಾಗಿ ಅದು ತನ್ನ ಮೇಲೆರಗಿದರೆ, ವಿಷ ಕಾರಿದರೆ ಎಂದೇನೆಲ್ಲ ಗೊಂದಲದಲ್ಲಿ ಬಳಸು ಹೆಜ್ಜೆ ಹಾಕಿ ತಂಡ ಸೇರಿಕೊಂಡ. ಒಬ್ಬಿಬ್ಬರಲ್ಲಿ ಹೇಳಿಯೂ ಹೇಳಿದ – ವಿಶೇಷ ಮನ್ನಣೆಯೇನೂ ಬರಲಿಲ್ಲ. ಆದರೆ ಮಂಗಳೂರು ಸೇರಿ, ಆತನ ರೀಲು ಶುದ್ಧವಾಗಿ ಮುದ್ರಿತ ಪ್ರತಿಗಳು ಬಂದಾಗ ಎಲ್ಲರ ಕಣ್ಣಲ್ಲಿ ಪ್ರಶ್ನೆ ಏನಿದೇನಿದು?

ರೊಮುಲಸ್ ವಿಟೇಕರ್ ಅವರ ಕಾಮನ್ ಇಂಡಿಯನ್ ಸ್ನೇಕ್ಸ್ ಪುಸ್ತಕದಲ್ಲಿ ಸ್ಪಷ್ಟ ಸಚಿತ್ರ ಉಲ್ಲೇಖವಿತ್ತು. ‘ಹಾರುವ ಹಾವು’ ಅಥವಾ ಗೋಲ್ಡನ್ ಟ್ರೀ ಫ್ಲಯಿಂಗ್ ಸ್ನೇಕ್, ವ್ಶೆಜ್ಞಾನಿಕವಾಗಿ ಕ್ರಿಸೊಫೆಲಿಯಾ ಓರ್ನೇಟಾ – ಪಶ್ಚಿಮ ಘಟ್ಟಗಳಲ್ಲಿ ವಿರಳವಾಗಿಯೂ ಬಿಹಾರ ಒರಿಸ್ಸಾಗಳ ಕಾಡುಗಳಲ್ಲಿ (ಕೆಲವು ವಿದೇಶಗಳಲ್ಲೂ) ಧಾರಾಳವಿರುವ ನಿರುಪದ್ರವಿ, ನಿರ್ವಿಷಕಾರಿ ಹಾವು ಪ್ರಸನ್ನನ ಕಾಲು ಕಟ್ಟಿತ್ತು. ತನ್ನ ತಿಳಿಹಸಿರು ಹೊಟ್ಟೆಯ ಅಂಚಿನ ನಿರಿಗೆಗಳ ಸಹಾಯದಿಂದ ಸುಲಭವಾಗಿ ಮರಗಳನ್ನೇರಿ ಪುಟ್ಟ ಪಕ್ಷಿ, ಹಲ್ಲಿ, ಹಕ್ಕಿಮೊಟ್ಟೆ ಬೇಟೆಯಾಡಿ ಹೊಟ್ಟೆ ಹೊರೆಯುವ ಸರಳ ಜೀವಿ. ಹೊಂಚಿ ಕಾಡುವ ವೈರಿಗಳಿಂದ ತಪ್ಪಿಸಿಕೊಳ್ಳುವಲ್ಲಿ, ಪ್ರಯಾಣದ ಆತುರದಲ್ಲಿ ಮಾತ್ರ ಇದು ಹೊಟ್ಟೆಯನ್ನು ಇದು ಒಳಕ್ಕೆಳೆದು ಪಕ್ಕೆಯನ್ನು ಹಿಗ್ಗಿಸಿ ಎತ್ತರದ ಜಾಗಗಳಿಂದ ದೇಹವನ್ನು ಚಿಮ್ಮುವುದಿದೆ. ಕಾಗದದ ವಿಮಾನ ತೇಲಿದಂತೆ ಇದು ಐವತ್ತು ಮೀಟರ್ ಅಂತರವನ್ನೂ ಕ್ರಮಿಸಿದ್ದನ್ನು ದಾಖಲಿಸಿದವರಿದ್ದಾರೆ. ಇದು ಪ್ರಬುದ್ಧತೆಯಲ್ಲಿ ನೂರೆಪ್ಪತ್ತೈದು ಸೆಂಟಿ ಮೀಟರ್ ಬೆಳೆದದ್ದು, ಪಾರಿಸರಿಕ ಅಗತ್ಯಗಳನ್ನನುಸರಿಸಿ ವಿವಿಧ ಛಾಯೆಗಳಲ್ಲಿ ಮೆರೆಯುವುದುಂಟು. ಇದರ ಸುಂದರ ರೂಪಿನಿಂದಾಗಿ ಹವ್ಯಾಸಿ ಸಾಕಣೆದಾರರ ಸಂಗ್ರಹಕ್ಕಿದು ಇದು ರತ್ನಕಂಠಿ. ಹಾವಾಡಿಗರ ಹೇಳಿಗೆಗಂತೂ (ಬುಟ್ಟಿ) ಇದು (ಭಕ್ಷ್ಯರಾಜ) ಹೋಳಿಗೆ! ಯಾವುದೇ ಜೀವಿಯ ಬಣ್ಣ ಢಾಳಾದಷ್ಟು ವಿಷ ಜಾಸ್ತಿ ಎಂಬ ಭ್ರಮೆಗೆ ಈ ಹಾವು ಬಲಿಯಾಗುತ್ತಲೇ ಇದೆ; ಅಳಿವಿನಂಚಿಗೆ ಬಂದಿದೆ. ಇದರ ಚಿತ್ರ, ವಿವರಣೆ ಕೇಳಿದ ಮೇಲೆ ನನ್ನ ಭಾವ – ಕೊಂದ್ಲಕಾನ ಮಹಾಲಿಂಗ ಭಟ್, ವಿಷಾದದಲ್ಲೇ ತನ್ನನುಭವವನ್ನು ಹೇಳಿದ್ದ.

ತೋಟದ ನೀರಾವರಿ ಕಟ್ಟೆ ಕೆಲಸ ನಡೆದಿತ್ತು. ತೆಂಗಿನಮರದಿಂದ ಇಂಥಾ ಒಂದು ಹಾವು ತೇಲಿಬಂದು ಕೂಲಿಕಾರರ ನಡುವೆ ಸಶಬ್ದ ಬಿತ್ತಂತೆ. ಬೆಚ್ಚಿ ಬಿದ್ದವರು, ‘ಪುಲ್ಲಿಪುತ್ರ’ನನ್ನು (ಸ್ಥಳೀಯ ಹೆಸರು. ಅನಂತರ ‘ಮೃಗಯಾ ಸಾಹಿತಿ’ ಬಿರುದಾಂಕಿತ ಕೆದಂಬಾಡಿ ಜತ್ತಪ್ಪ ರೈಗಳು ಹೇಳಿದಂತೆ ‘ಪೊರ್ಲು ಪುತ್ರ’ = ಒಳ್ಳೆಯ ಮಗ. ಕನ್ನಡದ ಕೋಗಿಲೆ ಮುದ್ದಣ ಇದನ್ನು ಪಾರುಂಭೊಜಗ ಎಂದೂ ಹೆಸರಿಸಿರುವುದನ್ನು ಡಾ| ನಾದಾ ಶೆಟ್ಟಿ ಗುರುತಿಸಿದ್ದಾರೆ.) ಅವರ ನಂಬಿಕೆಗನುಸಾರ ಸರಿಯಾಗಿಯೇ ಗುರುತಿಸಿ, ಹೊಡೆದು ಕೊಂದು, ಹುಲ್ಲು ಸೇರಿಸಿ ಕಿಚ್ಚಿಕ್ಕಿ ವಿಷಪ್ರಸರಿಸದ ಜಾಗೃತಿ ಪ್ರದರ್ಶಿಸಿದರಂತೆ! ಸಾರಿಬಳಯ, ಕೊಡ್ಯಕಣ್ಣ, ಹಸುರು ಹಾವು, ಒಳ್ಳೆ, ಇರ್ತಲೆ, ಕೇರೆ, ಹೆಬ್ಬಾವು ಮುಂತಾದವುಗಳ ಪಟ್ಟಿಯಲ್ಲೇ ಬರುವ ಈ ‘ಒಳ್ಳೆಯ ಮಗ’ ಮೂಢನಂಬಿಕೆಗೆ ಬಲಿಯಾಗುವುದಾದರೂ ಎಲ್ಲಿ – ಕಲ್ಲ ನಾಗರ ಕಂಡರೆ ಕೈಮುಗಿಯುವವರ ನಡುವೆ. ವಿಷಾದದಿಂದಲೇ ನನ್ನ ತಂದೆ ಪುಸ್ತಕದಲ್ಲಿ ಸಂಪಾದಕೀಯ ಟಿಪ್ಪಣಿ ಸೇರಿಸಿದ್ದರು – ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!

ಹಾರು ಹಾವಿನ ಬಾಲ ಹಿಡಿದು ಕಥನದ ದಿಕ್ಚ್ಯುತಿಯಾಯ್ತೆಂದು ಭಾವಿಸಬೇಡಿ. ಝರಿ ಸಿಂಪರಣೆಯಿಂದ ಪಾಚಿಹಿಡಿದ ದಿಮ್ಮಿಗಳ ಮೇಲೆ ಧಿಗಿಣ ಹಾಕಿ (ಕಾಲು ಜಾರಿದ್ದಕ್ಕೆ!), ಎದೆಗುಂದಿಸುವ ಕಡು ಅಬ್ಬರದ ತೊರೆಗಳ (ಮಾತು ಕೇಳದ್ದಕ್ಕೆ) ಅಬ್ಬರಿಸಿ ಮಾತಾಡಿ ಸಾಗಿದ್ದಂತೆ ಮಧ್ಯಾಹ್ನ ಬಂತು. ಯಾವುದೋ ಝರಿ ದಂಡೆಯ ಮೇಲೆ ಬುತ್ತಿಯೂಟಕ್ಕೆ ಕುಳಿತದ್ದು ಬಿಟ್ಟು ವಿಶ್ರಾಂತಿಗೆಂದು ನಾವು ನಿಂತದ್ದಿಲ್ಲ. ಹಾಲ್ಗಡಲಿನಲ್ಲದ್ದಿದ ಕಡೆಗೋಲು-ಮೇರಿನಂತೆ ಮೋಡರಾಶಿಯ ನಡುವೆ ಮೊಳೆತಂತೆ ತೋರುವ ಶಿಖರಾಗ್ರಗಳು, ಹಸುರು ಬೆಟ್ಟದ ಬೆಳ್ಳಿ ತೊಡವಿನಂತೆ ದೂರಕ್ಕೆ ಕಂಗೊಳಿಸುವ ಜಲಪಾತಗಳು ಮನೋಹರ. ಆಗೀಗ ಕಣಿವೆಯಲ್ಲಿ ಕಾಣುತ್ತಿದ್ದ ಶಿರಾಡಿ ರಸ್ತೆಯ ಡಾಮರು, ಮಲೆರಕ್ಕಸನ ಮಲಿನ ರಕ್ತವಾಹಿನಿ. ಹೀಗೇ ೬೮ನೇ ಕಿಮೀ ಕಲ್ಲು ದಾಟಿ, ಗುಹಾಸಂಖ್ಯೆ ೧೭ ಎ ಹಾಯ್ದು ಬೆಳಕು ಕಂಡವರು ಎಡಕುಮೇರಿ ನಿಲ್ದಾಣ ತಲಪುವಾಗ ಸಂಜೆಯಾಗಿತ್ತು; ಆಗ ಸಂಜಿಯಾಗಿತ್ತಾ! ನಮ್ಮಾಟಕ್ಕಾಗಿ ತನ್ನಾಟಕ್ಕೆ ತೆರೆಯೆಳೆದು ಕೂತ ಮಳೆ ಮತ್ತೆ ಹನಿಯತೊಡಗಿತೋ ನಮ್ಮನುಭವದ ಆನಂದಾಶ್ರುಗಳೇ ಕಣ್ಣ ಮುಸುಕಿತೋ ಹೇಳಲಾರೆ. ಕ್ಯಾಂಟೀನಿನ ಬಿಸಿ ತಿನಿಸುಗಳೆಲ್ಲವೂ ರುಚಿಯಾಗಿದ್ದದ್ದೂ ಹೀಗೇ ಇರಬೇಕು. ನಮಗೆ ಮರಳಿ ಹೋಗಲು ಐದೂ ಕಾಲಕ್ಕೆ ಬರಬೇಕಿದ್ದ ಹೇಮಾವತಿ ಎಕ್ಸ್‌ಪ್ರೆಸ್ ಒಂದೂವರೆ ಗಂಟೆ ತಡ. ಇಲಾಖೆ ಕ್ಷಮೆ ಕೇಳಲಿಲ್ಲ, ನಾವು ವಿಷಾದಿಸಲೂ ಇಲ್ಲ. ನಾವು ದಿನಪೂರ್ತಿ ನಡೆದ ಹದಿನೆಂಟು ಕಿಮೀ ಅಂತರವನ್ನು ಸಂಗ್ರಹಿಸಿ ನೋಡಿದಂತೆ ಹತ್ತೆಂಟು ಮಿನಿಟುಗಳಲ್ಲಿ ಹಾಯ್ದು ಶಿರಿವಾಗಿಲು. ಮುಂದೆ ಜಗದಂಧಕಾರದಲ್ಲಿ ನೆನಪಿನ ರೈಲೋಡಿಸಿ ಮಂಗಳೂರು ತಲಪುವಾಗ ಗಂಟೆ ಹನ್ನೊಂದು.

ಶಿರಾಡಿ ಘಾಟಿಯಲ್ಲಿ ಮೊದಲ ರೈಲು ಓಡಿದಲ್ಲಿನ ನಮ್ಮ ಸವಾರಿಯಂತೇ ಅನಂತರ ಈ ಮಾರ್ಗಕ್ಕೇ ಬೈಕ್ ನುಗ್ಗಿಸಿದಂತೇ ಮತ್ತೂ ಕೆಲವು ಸಾಹಸ ಯಾನಗಳನ್ನು ನಾನು ಆಯೋಜಿಸಿದ್ದಿತ್ತು. ಅದರಲ್ಲಿ ಸಿರಿಬಾಗಿಲು ನಿಲ್ದಾಣ ಕಳೆದ ಮೇಲೆ ದಕ್ಷಿಣದ ಶಿಖರ ಶ್ರೇಣಿಯ ಮಕುಟ ಮುಟ್ಟಲು ನಡೆದ ಯತ್ನ ಸ್ಮರಣೀಯ. ರೋಶನಿ ನಿಲಯದ ಸಮಾಜಸೇವಾ ವಿಭಾಗದ ಶಿಕ್ಷಕ, ವಿದ್ಯಾರ್ಥಿನಿಯರನ್ನು ರೈಲಿನಲ್ಲಿ ಎಡಕುಮೇರಿಗೆ ಒಯ್ದು, ಪಿಕ್ನಿಕ್ಕಿಸಿ, ಕೆಂಪೊಳೆಗೆ ನಡೆಸಿ, ಬಸ್ಸಿನಲ್ಲಿ ತಂದ ಅನುಭವ ‘ಇನ್ನೊಂದೇ’ ಮುಖದ ಅನಾವರಣಕ್ಕಾಗಿಯೂ ಸ್ಮರಣೀಯ. ಇಂಥ ಹಲವನ್ನು ರುಚಿಗೆಡದ ಪಾಕದಲ್ಲಿ ಮುಂದೆಂದಾದರೂ ಉಣಿಸಿಯೇನು. ಅದುವರೆಗೆ ಚಕ್ರವರ್ತಿಗಳು ಪುಸ್ತಕದ ಅಧ್ಯಾಯಗಳನ್ನಷ್ಟು ಪೂರೈಸುವಲ್ಲಿ ಮುಂದಿನ ಕಂತಿನಲ್ಲಿ ಪರೀಕ್ಷಿಸೋಣ – ಪ್ರಕೃತಿ, ಸಂಸ್ಕೃತಿ.