[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಆರನೇ ಕಂತು]

ತಾಂತ್ರಸ್ಥಾಪಕರು ವಿನಾಶಪ್ರವಾಚಕರು, ಮಧ್ಯವರ್ತಿಗಳು: ಭವಿಷ್ಯ ವಿಜ್ಞಾನಿಗಳ ಪ್ರಕಾರ ಇಂದು ಮಾನವ ಅಖಂಡವಾದ ಒಂದೇ ಭೂಮಿಯಲ್ಲಿ ಬಾಳುತ್ತಿಲ್ಲ. ಬದಲು, ತಂತ್ರವಿದ್ಯೆಯ ಕಾರಣವಾಗಿ ಮೈದಳೆದಿರುವ ತಾಂತ್ರಗೋಳದಲ್ಲಿಯೂ ಆತನ ನೈಸರ್ಗಿಕ ನೆಲೆಯಾದ ಜೈವಿಕಗೋಳದಲ್ಲಿಯೂ ಏಕಕಾಲದಲ್ಲಿ ಬಾಳುತ್ತಿದ್ದಾನೆ.

ಯಂತ್ರ ಸ್ಥಾವರಗಳು, ಇವನ್ನು ಪೋಷಿಸುವ ಕೈಗಾರಿಕೆಗಳು ಇವೆಲ್ಲವೂ ಸೇರಿ ಉತ್ಪಾದಿಸುವ ಉಪಯುಕ್ತ ಹಾಗೂ ಮಲಿನ ವಸ್ತುಗಳು ಮುಂತಾದವು ಒಟ್ಟಾಗಿ ತಾಂತ್ರಗೋಳವನ್ನು ರೂಪಿಸುತ್ತವೆ. ಜೀವಿಗಳ ಉಗಮ ಹಾಗೂ ವಿಕಾಸಕ್ಕೆ ಕಾರಣವಾದ ಭೂ ತೊಗಟೆಯ ತೀರ ಮೇಲು ಭಾಗವೇ (ವಾಯುಮಂಡಲವನ್ನೂ ಒಳಗೊಂಡಂತೆ) ಜೈವಿಕಗೋಳ. ಈ ಸೀಮಿತ ಪ್ರದೇಶದಲ್ಲಿ ಸಸ್ಯ, ಪ್ರಾಣಿ ಹಾಗೂ ಅಜೈವಿಕ ಪದಾರ್ಥಗಳಾದ ನೆಲ ಜಲ ಮತ್ತು ವಾಯುಮಂಡಲ ಇವುಗಳ ನಡುವೆ ಅನ್ಯೋನ್ಯ ಅವಿಭಾಜ್ಯ ಸಂಬಂಧ ಹಾಗೂ ಅಂತರಕ್ರಿಯೆ ಬೆಸೆಯಲ್ಪಟ್ಟಿವೆ. ಸಸ್ಯ, ಪ್ರಾಣಿ ಮತ್ತು ಅಜೈವಿಕ ಪದಾರ್ಥಗಳು ಇವು ಜೈವಿಕಗೋಳದ ಮೂರು ಘಟಕಗಳು. ಇವುಗಳ ಪೈಕಿ ಯಾವುದೇ ಒಂದಕ್ಕೆ ಗಾಸಿ ಉಂಟಾದರೂ ಅದು ಇಡೀ ಜೈವಿಕಗೋಳದ ಮೇಲೆಯೇ ಮಾರಕ ಪರಿಣಾಮ ಬೀರದಿರದು. ಸದ್ಯದಲ್ಲಿ ತಾಂತ್ರಗೋಳ ಜೈವಿಕಗೋಳವನ್ನು ಅತಿಯಾಗಿ ಶೋಷಿಸಿ ಶಕ್ತಿಯನ್ನು ಚೂಷಿಸಿ ನೆಲ ಜಲ ಗಗನಗಳಿಗೆ ವ್ಯಾಪಿಸಿ ತ್ರಿವಿಕ್ರಮಾವತಾರ ತಳೆದಿದೆ. ಇದರಿಂದಾಗಿ ಮೂರು ದುಷ್ಪರಿಣಾಮಗಳು ತಲೆದೋರಿವೆ. ನೈಸರ್ಗಿಕ ಸಂಪನ್ಮೂಲಗಳ ನಾಶ, ಪರಿಸರ ಮಾಲಿನ್ಯ, ಬಹುಸಂಖ್ಯಾತರ ಬದುಕಿನ ಮಟ್ಟದಲ್ಲಿ ಕ್ರಮಶಃ ಕುಸಿತ.

ಇಂಥ ಪ್ರಪಂಚದ ಭವಿಷ್ಯವೇನು? ಭವಿಷ್ಯ ವಿಜ್ಞಾನಿಗಳ ಪೈಕಿ ಮುಖ್ಯವಾಗಿ ಎರಡು ವ್ಯಾಸೀಯ ವಿರುದ್ಧ (ಅಂದರೆ ಎದುರು ಬದಿರು) ಚಿಂತನಶೀಲರ ತಂಡಗಳನ್ನು ಗುರುತಿಸಬಹುದು: ತಾಂತ್ರ ಸ್ಥಾಪಕರು, ವಿನಾಶ ಪ್ರವಾಚಕರು.

ತಾಂತ್ರಸ್ಥಾಪಕರು – ತಂತ್ರವಿದ್ಯೆ ಮತ್ತು ಅದರ ಫಲಗಳ ಬಗ್ಗೆ ಅಪಾರ ವಿಶ್ವಾಸ ಇರುವಾತ, ಆಧುನಿಕ ಮಾನವನಿಗೆ ಬಲು ಪ್ರಿಯರಾದವರು. ಇವರು ಆಶಾವಾದಿಗಳು. ತಂತ್ರವಿದ್ಯೆ ಅಗಾಧವಾಗಿ ಸಾಧಿಸಿರುವ ಐಹಿಕಾಭ್ಯುದಯದಲ್ಲಿ ಅಪಾರ ಶ್ರದ್ಧೆ ಉಳ್ಳವರು. ಪ್ರಪಂಚದ ಐಹಿಕ ಸಂಪನ್ಮೂಲಗಳನ್ನು ಆಧರಿಸಿ ಅಭಿವರ್ಧಿಸಿರುವ ಆಧುನಿಕ ವಿಜ್ಞಾನ ಎಂದೂ ವಿಫಲವಾಗದು. ತನ್ನಲ್ಲಿರಬಹುದಾದ ದೋಷಗಳನ್ನು ಇದು ಚೆನ್ನಾಗಿ ಅರಿತು ಅವುಗಳ ನಿವಾರಣೆಗೆ ತಿದ್ದುಪಡಿಗಳನ್ನೂ ಉಪಾಯಗಳನ್ನೂ ಕೈಗೊಳ್ಳಬಲ್ಲದು ಎನ್ನುತ್ತಾರೆ ತಾಂತ್ರಸ್ಥಾಪಕರು. ಪ್ರಪಂಚದ ಐಹಿಕ ಸಂಪನ್ಮೂಲಗಳ ಬೆಳೆವಣಿಗೆ ಈ ತನಕ ನಡೆದು ಬಂದಿರುವಂತೆ ಮುಂದೆಯೂ ಬೆಳೆಯುತ್ತದೆ. ಭೂಮಿಯಲ್ಲಿ ವಿಪುಳವಾಗಿ ನಿಕ್ಷೇಪಗೊಂಡಿದ್ದು ಇನ್ನೂ ಮಾನವಾನ್ವೇಷಣೆಗೆ ಒಳಪಡದಿರುವ ಮೀಸಲು ಸಂಪನ್ಮೂಲಗಳು ಇಂತಿಷ್ಟೆ ಇವೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗದು. ಇಂದು ನಿರುಪಯುಕ್ತ ವಸ್ತುಗಳೆಂದು ಪರಿಗಣಿತವಾದವು ತಂತ್ರವಿದ್ಯೆ ಅಭಿವರ್ಧಿಸಿದಂತೆ ನವಸಂಪನ್ಮೂಲಗಳೇ ಆಗಬಹುದು. ಇತಿಹಾಸಪೂರ್ವ ದಿನಗಳಲ್ಲಿ ಕಬ್ಬಿಣ ಮಾತು ತೀರ ಈಚಿನ (ಅಂದರೆ ಪ್ರಸಕ್ತ ಶತಮಾನದ) ದಿನಗಳಲ್ಲಿ ಅಲ್ಯೂಮಿನಿಯಮ್ ಲೋಹ ಖನಿಜಗಳು ಈ ತೆರನಾದ ಮಾರ್ಪಡಿಕೆಗಳಿಗೆ ನಿದರ್ಶನಗಳು. ಪ್ರಪಂಚದಲ್ಲಿ ಅತ್ಯಂತ ಸಮೃದ್ಧವಾಗಿ ಹರಡಿರುವ ಬಾಕ್ಸೈಟಿನ (ಅಲ್ಯೂಮಿನಿಯಮ್ಮಿನ ಖನಿಜ) ಅನ್ವೇಷಣೆ ಹಾಗೂ ಲೋಹ ಸಂಸ್ಕರಣೆ ಆದದ್ದು ತಂತ್ರವಿದ್ಯೆ ಇಪ್ಪತ್ತನೆಯ ಶತಮಾನದ ಮಜಲನ್ನು ತಲಪಿದ ಮೇಲೆಯೇ. ಇನ್ನಷ್ಟು ಎತ್ತರದ ಮಜಲುಗಳಿಗೆ ಏರಿದಂತೆ ಮರಳರಾಶಿಯಿಂದ ಸಂಪತ್ತನ್ನು ಹಿಂಡುವ ತಂತ್ರ ಸಿದ್ಧಿ ಕೈಗೂಡಲೂಬಹುದು.

ಇತ್ತ ಲೋಹ ಪದಾರ್ಥಗಳ ಹರಕು ಮುರುಕುಗಳನ್ನು ಪುನಃ ಲೋಹ ಸಂಸ್ಕರಣೆಗೆ ಒಳಪಡಿಸಿ ಇನ್ನೊಮ್ಮೆ ಶುದ್ಧ ಲೋಹವನ್ನು ಉಪಯೋಗಕ್ಕೆ ಗಳಿಸುವ ಪುನಶ್ಚಕ್ರೀಕರಣ ಈಚೆಗೆ ಪ್ರಾರಂಭವಾಗಿ ಬಳಕೆಗೆ ಬರುತ್ತಿದೆ. ತಂತ್ರವಿದ್ಯೆ ಅಭಿವರ್ಧಿಸಿದಂತೆ ಪುನಶ್ಚಕ್ರೀಕರಣ ಪ್ರಕ್ರಿಯೆಯಲ್ಲಿಯೂ ಸಾಕಷ್ಟು ಸುಧಾರಣೆ ಮತ್ತು ಮಿತವ್ಯಯ ಸಾಧಿಸಲ್ಪಟ್ಟು ಅನೇಕ ಕ್ಷೇತ್ರಗಳಲ್ಲಿ ಕಚ್ಚಾ ಸಾಮಗ್ರಿಗಳ ಕೊರತೆ ನಿರ್ಮೂಲವಾಗಬಹುದು. ಉದಾಹರಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ೧೯೦೦ರಲ್ಲಿ, ಕೇವಲ ಶೇಕಡ ೧೦ರಷ್ಟು ತಾಮ್ರವನ್ನು ಪುನಶ್ಚಕ್ರೀಕರಿಸುತ್ತಿದ್ದರು. ೧೯೭೦ಕ್ಕಾಗುವಾಗ ಇದು ಶೇಕಡ ೩೫ಕ್ಕೆ ಏರಿತು. ಹಾಗೆಯೇ ಸೀಸದ ಪುನಶ್ಚಕ್ರೀಕರಣ ೧೯೧೦ರಲ್ಲಿ ಶೇಕಡ ೮ ಇದ್ದದ್ದು ೧೯೭೦ರಲ್ಲಿ ಶೇಕಡ ೪೦ ಆಗಿತ್ತು. ಅಲ್ಯೂಮಿನಿಯಮ್ಮಿನ ಲೋಹ ಸಂಸ್ಕರಣೆಗೆ ಬಳಕೆ ಆಗುತ್ತಿದ್ದ ಶಕ್ತಿ ಹೊಸ ಪ್ರಕ್ರಿಯೆಯ ಶೋಧನೆ ಆದ ಬಳಿಕ ಶೇಕಡ ೩೦ರಷ್ಟು ಕಡಿಮೆ ಆಯಿತು. ಇದೇ ಉಳಿತಾಯ ಹಾಗೂ ಪುನಶ್ಚಕ್ರೀಕರಣ ತಂತ್ರಗಳು ವ್ಯಾಪಕವಾಗಿ ಬಳಕೆಗೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಖನಿಜಗಳು ಮುಗಿದು ಹೋಗಿ ಭೂಮಿ ಬರಡಾಗುತ್ತಿದೆ ಎಂದು ಕೂಗುವವರಿಗೆ ತಾಂತ್ರಸ್ಥಾಪಕರ ಸಮಾಧಾನದ ಸಮಜಾಯಿಷಿ ಇದ್ದೆ ಇದೆ. ಭೂವೈಜ್ಞಾನಿಕಾನ್ವೇಷಣೆಗಳು ಇನ್ನಷ್ಟು ಪರಿಷ್ಕಾರವಾಗಿಯೂ ವ್ಯಾಪಕವಾಗಿಯೂ ಸಾಗಿದಂತೆ ಹೊಸ ಖನಿಜಮೂಲಗಳು ಪತ್ತೆ ಆಗಬಹುದು. ಆಣವಿಕ ಬೆಸೆತವನ್ನು ಮರಳಿನಂಥ ಬೇಕಾಬಿಟ್ಟಿ ಹರಡಿಹೋಗಿರುವ ಪದಾರ್ಥದ ಮೇಲೆ ಪ್ರಯೋಗಿಸಿದುದರ ಪರಿಣಾಮವಾಗಿ ಹೊಸ ಪದಾರ್ಥಗಳ ನಿರ್ಮಾಣ ಕೈಗೂಡಿದೆ. ಈ ಯಶಸ್ಸು ನವಸಾಧ್ಯತೆಗಳತ್ತ ಕೈ ತೋರಿಸುತ್ತಿದೆ. ಸಾಗರಾಂತರ್ಗತ ಸಂಪತ್ತು ಎಣಿಕೆಗೆ ನಿಲುಕದಷ್ಟು ಸಮೃದ್ಧವಾಗಿದೆ. ಇದರಿಂದ ೪೦ ಕೋಟಿ ಮೆಟ್ರಿಕ್ ಟನ್ ಖನಿಜಗಳನ್ನು ಹೆಚ್ಚು ಕಡಿಮೆ ಆಚಂದ್ರಾರ್ಕವಾಗಿ ‘ಕೊಯ್ಲು’ ಮಾಡಬಹುದೆಂದು ಸ್ಥೂಲ ವೈಜ್ಞಾನಿಕಾನ್ವೇಷಣೆಗಳಿಂದ ತಿಳಿದುಬಂದಿದೆ.

ಖನಿಜಮೂಲಗಳೇನೋ ಸರಿ. ಶಕ್ತಿ ಸಂಪಾದಿಸಲು ಏನು ಮಾಡೋಣವೆಂದು ಗೋಗರೆಯುವವರಿಗೂ ತಾಂತ್ರಸ್ಥಾಪಕರ ಭರವಸೆ ಉಂಟು. ಖನಿಜತೈಲ ಮತ್ತು ನೈಸರ್ಗಿಕಾನಿಲ ಸಂಗ್ರಹಣೆಗಳು ಈಗಿನ ವೆಚ್ಚದ ದರದಲ್ಲಿ ಇನ್ನು ಕೆಲವೇ ದಶಕಗಳ ತರುವಾಯ (ಸ್ಥೂಲವಾಗಿ ೨೦೨೦ರ ಸುಮಾರಿಗೆ) ಬತ್ತಿಹೋಗಬಹುದೆಂದು ನಿರೀಕ್ಷಿಸಲಾಗಿದೆ. ಕಲ್ಲಿದ್ದಲಿನ ಕೊರತೆ ಇಷ್ಟು ಶೀಘ್ರವಾಗಿ ತಲೆದೋರದು. ಇನ್ನೊಂದು ಶತಮಾನದ ತನಕ (೨೦೯೦ರ ಅಂದಾಜು) ಇದು ಉಪಯೋಗಕ್ಕೆ ಲಭಿಸಬಹುದು. ಆದರೆ ಈಗಾಗಲೇ ಪ್ರಾಯೋಗಿಕ ಸಾಫಲ್ಯಕ್ಕಿಂತಲೂ ಮೇಲಿನ ಸಾರ್ವತ್ರಿಕ ಉಪಯೋಗದ ಹಂತ ಏರಿರುವ ಬೈಜಿಕಾಗ್ನಿ ಅಗ್ಗವಾಗಿಯೂ ಮಾಲಿನ್ಯರಹಿತವಾಗಿಯೂ ಒದಗುವುದು ಸಾಧ್ಯವಿದೆ. ಜನ್ಮಕಾರಿ – ಕ್ರಿಯಾಕಾರಿಗಳು ಈ ದಿಸೆಯತ್ತ ಸಾಗುತ್ತಿವೆ.

ಇನ್ನು ಜನಸಂಖ್ಯೆ. ಅಭಿವರ್ಧಿತ ರಾಷ್ಟ್ರಗಳು ಸಂಖ್ಯಾವೃದ್ಧಿಯಲ್ಲಿ ಸ್ಥಿರತೆಯನ್ನು, ಅನೇಕ ರಾಷ್ಟ್ರಗಳು ಇಳಿತಾಯವನ್ನು ಕೂಡ, ಸಾಧಿಸಿವೆ. ತಂತ್ರವಿದ್ಯೆಯ ಕಾರಣವಾಗಿ ಜೀವನಮಟ್ಟ ಸುಧಾರಿಸಿರುವುದರಿಂದ ಕಂಡು ಬರುವ ಬದಲಾವಣೆ ಇದೆಂದು ತಾಂತ್ರಸ್ಥಾಪಕರು ಹೇಳುತ್ತಾರೆ. ಅಭಿವೃದ್ಧಿಶೀಲ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಸದ್ಯ ವೃದ್ಧಿ ಕಂಡುಬರುತ್ತಿದೆ ನಿಜ. ಆದರೆ ತಂತ್ರವಿದ್ಯೆಯ ಫಲಗಳು ಆ ರಾಷ್ಟ್ರಗಳಿಗೂ ಎಟುಕಿದಂತೆ ಅವುಗಳಲ್ಲಿಯೂ ಜನಸಂಖ್ಯಾವೃದ್ಧಿದರ ಶೂನ್ಯವಾಗಿ ಜನಸಂಖ್ಯೆ ನಿರ್ದಿಷ್ಟ ಮಟ್ಟದಲ್ಲಿ ಸ್ಥಗಿತವಾಗುವುದು ಖಂಡಿತ.

ಪರಿಸರಮಾಲಿನ್ಯದ ಪ್ರಶ್ನೆಯಾದರೂ ಅಷ್ಟೆ. ಯಾವ ವಿಜ್ಞಾನ ಮತ್ತು ತಂತ್ರವಿದ್ಯೆಯ ಅನಗತ್ಯ ಉಪೋತ್ಪನ್ನವಾಗಿ ಪರಿಸರಮಾಲಿನ್ಯ ಮೈದಾಳಿದೆಯೋ ಅವೇ ವಿಜ್ಞಾನ ಮತ್ತು ತಂತ್ರವಿದ್ಯೆ ಇದನ್ನು ಯಶಸ್ವಿಯಾಗಿ ನಿವಾರಿಸಲು ಶಕ್ತವಾಗುತ್ತವೆ. ಆದ್ದರಿಂದ ಇದೊಂದು ಸಮಸ್ಯೆಯೇ ಅಲ್ಲ. ಸದ್ಯ ಚಿಂತನೆಯ ಹಂತದಲ್ಲಿರುವ ಸಂಲಯನಜ್ವಾಲೆ ವಾಸ್ತವ ಸಲಕರಣೆಯ ರೂಪಕ್ಕೆ ಇಳಿದದ್ದಾದರೆ ಇದು ಯಾವುದೇ ಪದಾರ್ಥವನ್ನೂ ಅದರ ಮೂಲಧಾತುವಿನ ಅಣುಗಳಾಗಿ ಒಡೆದು ಮತ್ತೆ ಬೇಕಾದಂತೆ ಸಂಲಯನಮಾಡಲು ನೆರವಾಗಬಹುದು.

ವಿಜ್ಞಾನ ಮತ್ತು ತಂತ್ರವಿದ್ಯೆಗೆ ಇರುವ ಸಾಮರ್ಥ್ಯವನ್ನು ವಿನಾಶ ಪ್ರವಾಚಕರು ತತ್ತ್ವಶಃ ಒಪ್ಪಿಕೊಳ್ಳುತ್ತಾರೆ. ಆದರೆ ಇವರು ಮಾನವನ ದೌರ್ಬಲ್ಯ ಮತ್ತು ಅದರ ಪರಿಣಾಮವಾಗಿ ಕಂಡುಬರುವ ಅತಿರೇಕ ವರ್ತನೆಯತ್ತ ನಮ್ಮ ಲಕ್ಷ್ಯ ಸೆಳೆಯುತ್ತಾರೆ. ಪ್ರಪಂಚದಾದ್ಯಂತ ಜನ ಬೇರೆ ಬೇರೆ ರಾಜಕೀಯ ವ್ಯವಸ್ಥೆಗಳ ಸುಪರ್ದೆಯಲ್ಲಿ ಹಂಚಿಹೋಗಿದ್ದಾರೆ. ರಾಷ್ಟ್ರಗಳ ಸಂಪನ್ಮೂಲಗಳೂ ತಂತ್ರವಿದ್ಯಾಸಿದ್ಧಿ ಸಾಧನೆಗಳೂ ಬೇರೆ ಬೇರೆ; ಎಂದೇ ಒಂದೊಂದು ರಾಷ್ಟ್ರದ ಇಷ್ಟಾನಿಷ್ಟಗಳೂ ಆಸೆ ಆಕಾಂಕ್ಷೆಗಳೂ ಬಗೆ ಬಗೆಯವಾಗಿವೆ. ಈ ತೆರನಾದ ಮಾನವೀಯ ಸಮಸ್ಯೆಗಳ ಜೊತೆಗೆ ಅತಿ ಸಂಕೀರ್ಣವಾಗಿ ಹೆಣೆದುಕೊಂಡಿರುವ ತಂತ್ರವಿದ್ಯೆಯ ದುಷ್ಪರಿಣಾಮಗಳನ್ನು ಕೇವಲ ಮಾನವನ ಒಳ್ಳೆಯತನಕ್ಕೆ ಅಥವಾ ಸಭ್ಯತೆಗೆ ಅರಿಕೆ ಸಲ್ಲಿಸುವುದರ ಮೂಲಕ ನಿವಾರಿಸಬಹುದೆಂಬುದು ಅತ್ಯಾಶಾವಾದವಾದೀತು. ಭವಿಷ್ಯ ದುರಂತಗಳ ಸಂಭಾವ್ಯತೆಯ ಬಗ್ಗೆ ಭಯ ಹುಟ್ಟಿಸುವುದರಿಂದಲೂ ಇದು ಕೈಗೂಡದು.

ಜನಸಂಖ್ಯೆಯಲ್ಲಿ ಕಂಡುಬರುತ್ತಿರುವ ಅಭೂತಪೂರ್ವ ಅತಿವೃದ್ಧಿಯೇ ವರ್ತಮಾನ ಜೀವನದ ಕಷ್ಟಕಾರ್ಪಣ್ಯಗಳ ಪ್ರಾರಂಭ ಬಿಂದು. ನಗರಗಳಿಗೆ ಇಂದು ವಲಸೆಹೋಗಿ ಬೀಳುತ್ತಿರುವ ನಿರ್ಗತಿಕ ಜನರ ಪ್ರವಾಹ, ಅವರ ಸಂಖ್ಯೆಯಲ್ಲಾಗಲೀ ಅವರು ಅನುಭವಿಸುವ ಸಂಕಷ್ಟದಲ್ಲಾಗಲೀ ಹತ್ತೊಂಬತ್ತನೆಯ ಶತಮಾನದ ಇಂಥದೇ ಪ್ರವಾಹದೊಡನೆ ಒಂದಿಷ್ಟೂ ಸಾದೃಶ್ಯ ಹೊಂದಿಲ್ಲ. ಈ ಮಹಾ ಜನಸ್ತೋಮ ಅತಿ ಕ್ಷಿಪ್ರವಾಗಿ ವೃದ್ಧಿಗೊಂಡು ಆಹಾರ ಮತ್ತು ನೀರು, ಆರೋಗ್ಯ ಮತ್ತು ನೈರ್ಮಲ್ಯ, ಸ್ಥಳ ಮತ್ತು ಅವಕಾಶ ಒಂದೊಂದರಲ್ಲೂ ದಂಡೆಮೀರಿ ಹರಿದು ಇಡೀ ಪ್ರಪಂಚವನ್ನೇ ದೊಡ್ಡ ರೊಚ್ಚೆಗುಂಡಿಯಾಗಿ ಮಾಡದಿರದು. ಈ ಮಂದಿಯ ಭಗ್ನ ಆಶೋತ್ತರಗಳು ಖಂಡಿತ ಪ್ರಪಂಚದ ಏಳ್ಗೆಗೆ ಸಹಕಾರಿಗಳಾಗವು. ಇಂಥವರ ಬಾಳಿಗೆ ನೆಮ್ಮದಿ ಕೊಡಲು ವ್ಯಾಪಕ ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಿ ರೂಢಿಸಬೇಕಾಗುತ್ತದೆ. ಇವು ಅತಿ ಪ್ರಸರಣಕ್ಕೆ ಕಾರಣವಾಗಿ ಹಿಂದೆಂದೂ ಕಂಡುಬರದಿದ್ದಂಥ ತೀವ್ರ ಸಮಸ್ಯೆಗಳನ್ನು ಮಾನವ ಎದುರಿಸಬೇಕಾಗುತ್ತದೆ. ಸನ್ನಿವೇಶ ವಿಕೋಪ ಸ್ಥಿತಿಯನ್ನೈದಿದಾಗ ಲಭ್ಯ ಪದಾರ್ಥಗಳು ಅತ್ಯಲ್ಪವಾಗಿರುತ್ತವೆ. ಆದರೆ ಅವನ್ನು ಬೇಡುವ ಕೈಬಾಯಿಗಳು ಅಮಿತವಾಗಿರುತ್ತವೆ. ಇಂಥಲ್ಲಿ ವ್ಯವಸ್ಥಿತ ವಿತರಣೆಯ ಎಲ್ಲ ಪ್ರಯತ್ನಗಳೂ ಕುಸಿದು ಬೀಳುವುದು ಖಾತ್ರಿ. ಯುದ್ಧ ಕ್ಷಾಮ ಪಿಡುಗು ಮುಂತಾದವು ಆಗ ಸರ್ವವ್ಯಾಪಿ ಆಗಬಹುದು. ಆಫ್ರಿಕಾ ಖಂಡದ ಹಲವಾರು ಆಂತರಿಕ ಪ್ರದೇಶಗಳಲ್ಲಿ ಈಗಾಗಲೇ ಈ ದುರ್ಲಕ್ಷಣಗಳು ಪ್ರಕಟವಾಗಿವೆ. ಇವು ಸಾಕ್ಷಾತ್ ಬೈಜಿಕ ಯುದ್ಧಕ್ಕೆ ಎಡೆ ಮಾಡಿಕೊಡಬಹುದು. ಅದರಲ್ಲಿ ಮಡಿಯದೇ ಉಳಿಯುವವರೂ ಅವರ ಪೀಳಿಗೆಯವರೂ ವಿಕಿರಣದಿಂದ ಉಂಟಾಗುವ ಗಾಸಿಗಳ ಪರಿಣಾಮವಾಗಿ ಜೀವಂತ ನರಕ ಅನುಭವಿಸುತ್ತ ನವೆದು ನವೆದು ಸಾಯಬೇಕಾದೀತು.

ಭವಿಷ್ಯ ಕುರಿತಂತೆ ತಾಂತ್ರಸ್ಥಾಪಕರ ಅತ್ಯಾಶಾವಾದವನ್ನೂ ವಿನಾಶಪ್ರವಾಚಕರ ಅತಿ ನಿರಾಶಾವಾದವನ್ನೂ ಬದಿಗೊತ್ತಿ ಮಧ್ಯವರ್ತಿಯಾದ ಚಿಂತನೆಯನ್ನು ಕೆಲವು ಪರಿಣತರು ಹರಿಸಿದ್ದುಂಟು. ಮಧ್ಯವರ್ತಿಗಳ ಪ್ರಕಾರ ಮೇಲೆ ವಿಶ್ಲೇಷಿಸಿದ ಅತಿವಾದಿಗಳಿಬ್ಬರ ವಾದಗಳಲ್ಲಿಯೂ ಹುರುಳಿದೆ. ಆದರೆ ಇಬ್ಬರೂ ತಮ್ಮ ನಿಲವನ್ನು ವೃಥಾ ಉತ್ಪ್ರೇಕ್ಷಿಸಿದ್ದಾರೆ. ವಿನಾಶದ ಪ್ರಪಾತದೆಡೆಗೆ ಪ್ರಪಂಚ ಹೋಗದಂತೆ ತಡೆಯಬಲ್ಲ ವಿವೇಕ ಮಾನವನಲ್ಲಿ ಖಂಡಿತ ಇದೆ. ಈಗ ಪ್ರಪಂಚದ ಶೇಕಡ ೭೫ ಭಾಗ ಸಂಪತ್ತು ಶೇಕಡ ೨೫ ಮಂದಿ ಜನರಿಗೆ ಮಾತ್ರ ಲಭ್ಯವಾಗಿದ್ದು ಇದರಿಂದ ಉಂಟಾಗಿರುವ ಬದುಕಿನ ಏರುಪೇರನ್ನು ಮಾನವ ಖಂಡಿತ ಸರಿಪಡಿಸಿ ಸರ್ವರಿಗೆ ಸಮಪಾಲು ಸುಖಬಾಳು ಇವನ್ನು ಸಾಧಿಸುತ್ತಾನೆ, ಪರಿಸ್ಥಿತಿ ಹೀಗೆ ಮಾಡಲು ಅವನನ್ನು ಒತ್ತಾಯಿಸುತ್ತದೆ ಎನ್ನುತ್ತಾರೆ ಮಧ್ಯವರ್ತಿಗಳು. ಸರ್ವೇಜನಾಸ್ಸುಖಿನೋಭವಂತು ಎಂಬ ಆದರ್ಶವನ್ನು ಕಾರ್ಯಗತಗೊಳಿಸುವುದರಲ್ಲಿ ಇವರಿಗೆ ಅಪಾರ ಭರವಸೆ ಉಂಟು.

ನಾಲ್ಕನೆಯ ಕ್ರಾಂತಿ. ಜೀವಿಪ್ರಪಂಚದ ಎರಡು ಮುಖ್ಯ ವಿಭಾಗಗಳು ಸಸ್ಯಲೋಕ, ಪ್ರಾಣಿಲೋಕ ಮತ್ತು ಪ್ರಾಣಿಲೋಕದ ಒಬ್ಬ ಸದಸ್ಯ ಮಾನವ. ಮಾನವನನ್ನು ಇತರ ಎಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿ ಕಾಣಿಸುವ ಹಲವಾರು ಲಕ್ಷಣಗಳ ಪೈಕಿ ಒಂದೆಂದರೆ ಸಂವಹನತೆಯ ಸಾಮರ್ಥ್ಯ. ಸಂವಹನತಾಮಾಧ್ಯಮದ ಅಭಿವರ್ಧನೆಯ ಹಾದಿಯಲ್ಲಿ ಮೊದಲ ಕ್ರಾಂತಿ ಲಿಪಿ ಶೋಧನೆ. ಕ್ರಿ.ಪೂ ಸುಮಾರು ೩೦೦೦ದ ಅಂದಾಜಿಗೆ ಇದು ಸಿದ್ಧಿಸಿರಬಹುದೆಂದು ಅಂದಾಜು. ಆ ವೇಳೆಗೆ ವ್ಯವಸ್ಥಿತ ಕೃಷಿ, ಜೀವನದ ಅವಿಭಾಜ್ಯ ಅಂಗವಾಗಿತ್ತು. ಅಂದಿನ ಪಟ್ಟಣಗಳಲ್ಲಿ ಒಟ್ಟಾಗಿ ಬಾಳುತ್ತಿದ್ದು ಸಾಕಷ್ಟು ವಿರಾಮ ಗಳಿಸಿದ್ದ ಜನ ಬರವಣಿಗೆಯನ್ನು ಶೋಧಿಸಿರಬೇಕು. ಬರವಣಿಗೆ ಇಲ್ಲದೆಯೂ ನಾಗರಿಕತೆ ಅಭಿವರ್ಧಿಸುವುದು ಸಾಧ್ಯ. ಆದರೆ ಇದರ ಗತಿ ಅತಿ ಮಂದ. ಇಂಥ ನಾಗರಿಕತೆ ಸಂಕೀರ್ಣ ಸಂಶೋಧನೆಗಳನ್ನೇನೂ ನಡೆಸದು. ಮಾತು ಮತ್ತು ನೆನಪು ಮಾತ್ರ ಜ್ಞಾನವನ್ನು ಯಾವ ಎತ್ತರಕ್ಕೆ ಒಯ್ಯಬಲ್ಲವೋ ಅಲ್ಲಿವರೆಗೆ ಮಾತ್ರ ಈ ನಾಗರಿಕತೆ ತನ್ನ ಆಸೆ ಆಕಾಂಕ್ಷೆಗಳನ್ನು ಚಾಚಬಲ್ಲದು. ಪೆರುವಿನಲ್ಲಿ ಕೊನೆಗೊಂಡ ಇನ್ಕಾ ನಾಗರಿಕತೆ (ಕ್ರಿ.ಶ ಹದಿನೈದನೆಯ ಶತಮಾನ) ಇದಕ್ಕೊಂದು ನಿದರ್ಶನ. ಮಾತು ಬರವಣಿಗೆಯಾಗಿ ಘನೀಭವಿಸಿದೊಡನೆ ಜ್ಞಾನ ಸಂವಹನತೆಗೊಂದು ಯೋಗ್ಯ ಮಾಧ್ಯಮ ಲಭಿಸಿದಂತಾಯಿತು. ಹೀಗಿದ್ದರೂ ಬರವಣಿಗೆ ಸುಲಭ ಕ್ರಿಯೆ ಏನೂ ಆಗಿರಲಿಲ್ಲ. ಪುಸ್ತಕಗಳ ಪ್ರಕಟಣೆ ಮಹಾ ಸಾಹಸವೇ ಆಗಿತ್ತು – ತಾಳ ಯಾ ಭೂರ್ಜಪತ್ರದ, ಇಲ್ಲವೇ ಕಡತಿಯ (ಚರ್ಮಕಾಗದ) ಇಲ್ಲವೇ ಲೋಹಪತ್ರದ ಮೇಲೆ ಕೈಬರಹದಿಂದ ಲಿಖಿಸುವುದೂ ಹೀಗೆ ಬರೆದ ಪತ್ರಗಳನ್ನು ಸಂಗ್ರಹಿಸಿಟ್ಟು ಆಸಕ್ತ ಅಧ್ಯಯನಶೀಲರಿಗೆ ಒದಗಿಸುವುದೂ ವಿಶೇಷ ಪರಿಶ್ರಮ ಬೇಡುವ ಕ್ರಿಯೆಗಳಾಗಿದ್ದುವು. ಹೀಗಾಗಿ ಜ್ಞಾನ ಸಂವಹನತೆ ಮಂದಗಾಮಿಯಾಗಿತ್ತು. ಅಶೋಕನ ಚಕ್ರಾಧಿಪತ್ಯದಂಥ ನಾಗರಿಕತೆಯ ಮಟ್ಟವನ್ನು ಮಾನವ ಎರಡನೆಯ ಕ್ರಾಂತಿಯ ಫಲವಾಗಿ ತಲಪಬಲ್ಲವನಾಗಿದ್ದ.

ಮೂರನೆಯ ಕ್ರಾಂತಿ ಸಂಭವಿಸಿದ್ದು ಹದಿನೈದನೆಯ ಶತಮಾನದಲ್ಲಿ: ಯಾಂತ್ರಿಕವಾಗಿ (ಅಂದರೆ ಲೆಕ್ಕಣಿಕೆ ಹಿಡಿದು ಬಿಡಿಬಿಡಿಯಾಗಿ ಬರೆಯುವಾತನ ನೆರವಿಲ್ಲದೆ) ಬರವಣಿಗೆಯನ್ನು ಮುದ್ರಿಸುವುದು ಆಗ ಸಿದ್ಧಿಸಿತು. ಮುದ್ರಣ ಯಂತ್ರ ಅತಿ ಕ್ಷಿಪ್ರವಾಗಿ ಸಾವಿರಾರು ಪುಟಗಳನ್ನೇ ಮುದ್ರಿಸಬಲ್ಲದಾಗಿತ್ತು. ಹೀಗಾಗಿ ಜ್ಞಾನ ಸಂವಹನತೆ ಪ್ರಪಂಚದಾದ್ಯಂತ ತ್ವರಿತವಾಯಿತು. ಜ್ಞಾನದಿಂದ ಬಲ, ಬಲದಿಂದ ಅಧಿಕ ಜ್ಞಾನ ಒದಗುತ್ತಿದ್ದುದರಿಂದ ಮುದ್ರಣಕ್ರಾಂತಿ ಸರ್ವವ್ಯಾಪಿ ಹಾಗೂ ಸರ್ವಗ್ರಾಹಿ ಆಯಿತು. ಆಧುನಿಕ ಯುಗದ ಒಳ್ಳೆಯವು ಕೆಟ್ಟವು ಎಲ್ಲವೂ ಒಂದು ರೀತಿಯಲ್ಲಿ ಮುದ್ರಣ ಕ್ರಾಂತಿಯ ಫಲಗಳು. ನಗರಗಳ ಅತಿಲಂಬನೆ ಹಾಗೂ ತತ್ಪರಿಣಾಮವಾದ ಬದುಕಿನ ಮಟ್ಟದ ಕುಸಿತವನ್ನು ಭವಿಷ್ಯದಲ್ಲಿ ಸರಿಪಡಿಸಬೇಕಾದರೆ ನಾಲ್ಕನೆಯ ಕ್ರಾಂತಿ ಸಂಭವಿಸುವುದು ಅಗತ್ಯ. ಅದಕ್ಕೀಗ ಕಾಲ ಮಾಗಿದೆ ಎಂಬುದಾಗಿ ಭವಿಷ್ಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದೇ ಎಲೆಕ್ಟ್ರಾನಿಕ್ ಕ್ರಾಂತಿ.

ಎಲ್ಕ್ಟ್ರಾನಿಕ್ ಕ್ರಾಂತಿ ಈಗಾಗಲೇ ಆರಂಭವಾಗಿ ಹಲವಾರು ವರ್ಷಗಳು ಸಂದಿವೆ. ನಮ್ಮ ದೈನಂದಿನ ಕ್ರಿಯಾಕಲಾಪಗಳು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಇಂದು (೧೯೯೩) ಎಲೆಕ್ಟ್ರಾನಿಕ್ ಕ್ರಾಂತಿಯಿಂದ ಪ್ರಭಾವಿತವಾಗಿವೆ. ದೂರದರ್ಶನ, ಮುದ್ರಣ, ಗಣಕ ಕೇವಲ ಮೂರು ಸುಲಭ ಗೋಚರ ನಿದರ್ಶನಗಳು. ಇಂತಿದ್ದರೂ ಈ ಕ್ರಾಂತಿ ಇನ್ನೂ ಏರು ಮಜಲಿನಲ್ಲಿಯೇ ಇದೆ. ಇದರ ಪೂರ್ಣ ಫಲ ಮಾನವನಿಗೆ ಒದಗಲು ಹಲವಾರು ದಶಕಗಳೇ ಬೇಕಾಗಬಹುದು ಎನ್ನುತ್ತಾರೆ ಆ ಕ್ಷೇತ್ರದ ಮುಂಚೂಣಿಯಲ್ಲಿರುವ ಸಂಶೋಧಕರು ಮತ್ತು ಪರಿಣತರು. ಎಲೆಕ್ಟ್ರಾನಿಕ್ ಕ್ರಾಂತಿ ವ್ಯಾಪಕವಾಗಿ ಪಸರಿಸಿದಾಗ ಜನರಿಗೆ ಅವಶ್ಯವಾಗುವ ಜ್ಞಾನ ಬೇಕಾದಲ್ಲಿ ಬೇಕಾದಾಗ ದೊರೆಯುತ್ತದೆ. ಪರಿಣಾಮವಾಗಿ ಜನ ವೃಥಾ ನಗರಗಳಲ್ಲಿ ದಟ್ಟಯಿಸುವುದು ಅನವಶ್ಯವಾಗುತ್ತದೆ. ಆಗ ಅವರು ದೂರ ದೂರ ಹರಡಿ ಹೋಗುತ್ತಾರೆ. ಸಾರಿಗೆ ಸಂಪರ್ಕಗಳು ಈಗಿನ ಮಟ್ಟದಲ್ಲಿ ಬೇಕಾಗವು. ಒಟ್ಟಾರೆ ಜನಜೀವನದ ಗುಣಮಟ್ಟ ಸುಧಾರಿಸುವುದು. ಎಲೆಕ್ಟ್ರಾನಿಕ್ ಕ್ರಾಂತಿ ನಾಗರಿಕತೆಗೆ ಹೊಸ ತಿರುವನ್ನೂ ಆಯಾಮವನ್ನೂ ಕೊಡಬಲ್ಲದು.

ಆಕಾಶ ಯೋಜನೆ: ಸೀಮಿತ ನೆಲ ಪರಿಸರ ಸಾಕಾಗದಾಗ ಮಾನವ ಹೊಸ ಹಸುರುಗಳನ್ನು ಅರಸಿ ಭೂಮಿಯ ಉದ್ದಗಲ ವ್ಯಾಪಿಸಿದ. ಅಮೆರಿಕ ಖಂಡಗಳ ಆವಿಷ್ಕಾರ ಹೀಗಾಯಿತು. ಈಗ ಭೂಮಿಯೇ ಆತನ ಚಟುವಟಿಕೆಗಳಿಗೆ ಸಾಕಾಗದಿರುವಂಥ ಸನ್ನಿವೇಶ ತಲೆದೋರಿದೆ. ಮೇರೆ ಇರದ ಗಗನದತ್ತ ಮಾನವ ನಾಗರಿಕತೆಯ ವಿಸ್ತರಣೆ ಆಗುವುದರ ಸಾಧ್ಯತೆಗಳನ್ನು ಭವಿಷ್ಯ ವಿಜ್ಞಾನಿಗಳು ಈಗ ಯೋಚಿಸುತ್ತಿದ್ದಾರೆ. ಇಂಥ ಎಲ್ಲ ಮೊದಲ ಭಾವನೆಗಳೂ ಹೆಪ್ಪುಗಟ್ಟುವುದು ಚಂದ್ರನ ಸುತ್ತ.

ಆಕಾಶಯಾನ ಮಾಡಲು ಮಾನವನಿಗೆ ಸುಲಭವಾಗಿ ಒದಗುವ ಪ್ರಥಮ ನೈಸರ್ಗಿಕ ನಿಲ್ದಾಣ ಚಂದ್ರ. ಚಂದ್ರಲೋಕದಲ್ಲಿ ಸ್ಥಾಪಿಸಲಾಗುವ ಯಂತ್ರ ಸ್ಥಾವರಗಳು ಅಲ್ಲಿ ಯಥೇಚ್ಛವಾಗಿಯೂ ತೀಕ್ಷ್ಣವಾಗಿಯೂ (ಚಂದ್ರನಲ್ಲಿ ವಾಯುಮಂಡಲವಿಲ್ಲ) ಲಭಿಸುವ ಸೌರಶಕ್ತಿಯನ್ನು ಬಳಸುತ್ತವೆ. ಹೀಗಾಗಿ ಪರಿಸರಮಾಲಿನ್ಯವಾಗಲಿ ಶಕ್ತಿ ಬಿಕ್ಕಟ್ಟಾಗಲಿ ಎಂದೂ ತಲೆದೋರವು. ಭೂಮಿಯಲ್ಲಿ ಸಾಧಿಸಲಾಗದ ನಿರ್ವಾತ ಚಂದ್ರನಲ್ಲಿ ಸಹಜಸ್ಥಿತಿಯಾದ್ದರಿಂದ ಲೋಹಗಳ ಎರಕ, ಬೆಸೆತ, ರೂಪಣೆ ಎಲ್ಲವೂ ಅಲ್ಲಿ ಅತಿ ಸುಲಭ ಕ್ರಿಯೆಗಳಾಗಬಹುದು. ವಾಸ್ತವವಾಗಿ ಚಾಂದ್ರತಂತ್ರ ವಿದ್ಯೆ ಎಂಬ ನೂತನ ಅಧ್ಯಯನ ವಿಭಾಗವನ್ನು ಆಗ ಉಜ್ಜುಗಿಸಬೇಕಾಗುತ್ತದೆ. ಹೀಗೆ ಕಡಿಮೆ ವೆಚ್ಚದಿಂದಲೂ ಹಗುರ ದುಡಿಮೆಯಿಂದಲೂ ತಯಾರಿಸಲಾಗುವ ಉತ್ಪನ್ನಗಳನ್ನು ಭೂಮಿಗೆ ತಂದು ಬಳಸುವುದು, ಸಾರಿಗೆಯ ಖರ್ಚನ್ನು ಭರಿಸಿಯೂ ಲಾಭದಾಯಕವಾದೀತೆಂದು ವಿಜ್ಞಾನಿಗಳು ಎಣಿಕೆ ಹಾಕಿರುವರು. ಭೂಮಿಯ ಎಡೆಬಿಡದ ಸಂಗಾತಿಯಾದ ಚಂದ್ರ ಈ ತೆರನಾಗಿ ಮಾನವ ವಿಕಾಸದ ಹಾದಿಯಲ್ಲಿ ನವಕ್ರಿಯಾತ್ಮಕ ಪಾತ್ರ ನಿರ್ವಹಿಸುವ ದಿನ ಪ್ರಸಕ್ತ ಶತಮಾನ ನೇಪಥ್ಯಕ್ಕೆ ನಿರ್ಗಮಿಸುವ ಮುನ್ನವೇ ಮೂಡಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ.

ಚಂದ್ರನಲ್ಲಿ ಯಂತ್ರಸ್ಥಾವರಗಳನ್ನು ಸ್ಥಾಪಿಸಿ ಪ್ರವರ್ತಿಸಲು ಚಾಂದ್ರ ತಂತ್ರವಿದ್ಯಾವಿದರ ತಂಡವೇ ಅಲ್ಲಿ ನೆಲಸುವುದು ಅಗತ್ಯವಾಗುತ್ತದೆ. ಇವರ ಧೃತಿ ಹಿರಿಯಮಟ್ಟದಲ್ಲಿದ್ದು ದುಡಿಮೆ ಸಾರ್ಥಕವಾಗಬೇಕಾದರೆ ಕುಟುಂಬ ಜೀವನ, ನಾಗರಿಕ ಸೌಕರ್ಯ, ಭೂಮಿಗೆ ಹಿಂತಿರುಗುವ ಅವಕಾಶ ಎಲ್ಲವನ್ನೂ ಇವರಿಗೆ ಒದಗಿಸಿಕೊಡಬೇಕು. ಅಂದರೆ ಚಂದ್ರನಲ್ಲಿ ಮಾನವ ತಾಂಡೆಗಳನ್ನು ಸ್ಥಾಪಿಸಬೇಕೆಂದಾಯಿತು. ಇವು ಭೂಮಿಯ ಮೇಲಿನ ತಾಂಡೆಗಳಂತಲ್ಲದೆ ಅಲ್ಲಿಯ ನೆಲದಡಿಯಲ್ಲಿರುವುವು. ಆ ನೆಲಮಾಳಿಗೆಯ ಬಡಾವಣೆಗಳು ಬಾಹ್ಯ ಪರಿಸರಕ್ಕೆ ಪೂರ್ಣ ವಾಯುಬಂಧಿತವಾಗಿರುತ್ತವೆ. ಒಳಗಡೆ ಭೂಮಿಯ ಸಹಜ ಪರಿಸರ ಇರುವುದು. ಯುಕ್ತವಾಗಿ ಮೇಳೈಸಿದ ಕನ್ನಡಿಗಳ ನೆರವಿನಿಂದ ಬೆಳಕು ಬಿಸಿಲುಗಳನ್ನು ಒಳಗಡೆಗೆ ಪ್ರವೇಶಗೊಳಿಸಲಾಗುವುದು. ಭೂಮಿಯಿಂದ ಮೊದಲ ಬಾರಿಗೆ ಒಯ್ದ ಹೈಡ್ರೋಜನ್ನನ್ನೂ ಚಂದ್ರನಲ್ಲಿ ದೊರೆಯುವ ಖನಿಜಗಳಿಂದ ಸಂಸ್ಕರಿಸಿ ಪಡೆದ ಆಕ್ಸಿಜನ್ನನ್ನೂ ರಾಸಾಯನಿಕವಾಗಿ ಸಂಯೋಗಿಸಿ ನೀರನ್ನು ತಯಾರಿಸಿ ಪೂರೈಸಲಾಗುವುದು. ಇದೇ ಆಕ್ಸಿಜನ್‌ಯುತ ವಾಯುಮಂಡಲ ಆ ಬಡಾವಣೆಯ ಜನರಿಗೆ ಉಸಿರಾಡಲು ವಾಯುವನ್ನು ಕೂಡ ಒದಗಿಸುವುದು. ಮಲಿನವಾಯು, ನೀರು, ತ್ಯಾಜ್ಯವಸ್ತು ಮೊದಲಾದವನ್ನು ರಾಸಾಯನಿಕವಾಗಿ ವಿಭಜಿಸಿ ಘಟಕಗಳಾಗಿ ಒಡೆದು ಉಪಯುಕ್ತ ವಸ್ತುಗಳಾಗಿ ಪುನಸ್ಸಂಯೋಜಿಸಿ ಮರುಬಳಸಲಾಗುವುದು. ವಾಯು, ನೀರು, ಬಿಸಿಲು ವಿಪುಳವಾಗಿ ದೊರೆತ ಬಳಿಕ ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಕೃಷಿಮಾಡಿ ಆಹಾರ ಪದಾರ್ಥಗಳನ್ನು ಅಲ್ಲಿಯೇ ತಯಾರಿಸಿಕೊಳ್ಳುವುದು ಮುಂದಿನ ಹೆಜ್ಜೆ.

ಇದು ಹೇಗೆಯೇ ಇರಲಿ. ಚಂದ್ರನಲ್ಲಿ ಶಾಶ್ವತ ನಗರಗಳನ್ನು ಕಟ್ಟಿ ಚಾಂದ್ರಸಂಸ್ಕೃತಿಯನ್ನು ಅಭಿವರ್ಧಿಸುವುದರತ್ತ ವಿಜ್ಞಾನಿಗಳ ಒಲವು ಮೂಡಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾದವೆಂದರೆ ಅಲ್ಲಿಯ ಶಕ್ತಿ ಬಿಕ್ಕಟ್ಟು ಮತ್ತು ನಿಮ್ನ ಗುರುತ್ವ. ಚಂದ್ರನಲ್ಲಿ ಹಗಲು ಇರುಳು ತಲಾ ಹದಿನಾಲ್ಕು ಭೂದಿವಸಗಳಾಗುವುದರಿಂದ ಯಾವುದೇ ನಗರಕ್ಕೆ ಅದು ಎದುರಿಸುವ ದೀರ್ಘರಾತ್ರಿಯ ವೇಳೆ ಸೌರಶಕ್ತಿಯನ್ನು ಪೂರೈಕೆ ಮಾಡಲು ಜಟಿಲ ತಂತ್ರವಿದ್ಯೆಯನ್ನು ಆಶ್ರಯಿಸಬೇಕಾಗುತ್ತದೆ. ಇದರ ಮೇಲೆ ಹೂಡುವ ಬಂಡವಾಳ ಲಾಭದಾಯವಾಗದು. ಚಂದ್ರನ ನಿಮ್ನ ಗುರುತ್ವ ಮಾನವಸಂತತಿಯ ವಿಕಾಸಕ್ಕೆ ಶ್ರೇಯಸ್ಕರವಲ್ಲ. ಚಂದ್ರ ಏನಿದ್ದರೂ ಆಕಾಶದಲ್ಲಿ ನಮ್ಮ ನೆರೆ ಒಕ್ಕಲು, ಸೌರವ್ಯೂಹದ ಯಾತ್ರೆಗೆ ಸುಲಭವಾಗಿ ಒದಗುವ ತರಬೇತಿ ಕೇಂದ್ರ, ಆಕಾಶ ವಸಾಹತುಗಳನ್ನು ನಿರ್ಮಿಸಲು ಕಚ್ಚಾ ಸಾಮಗ್ರಿಯನ್ನು ನೀಡಬಲ್ಲ ಗನಿ – ಅಷ್ಟು ಮಾತ್ರ.

ಆಕಾಶದಲ್ಲಿ ಮಾನವ ವಸಾಹತುಗಳನ್ನು ಕಟ್ಟುವುದರತ್ತ ಚಿಂತನೆ ಹರಿಯುತ್ತಿದೆ. ಅಮೆರಿಕದ ಪ್ರಸಿದ್ಧ ಬೌತವಿಜ್ಞಾನಿ ಗೆರಾರ್ಡ್ ಕೆ. ಓನೈಲ್ ಎಂಬವರು ಇಂಥ ನಿರ್ಮಾಣ ಸಾಧ್ಯವಾಗಬಹುದು ಎನ್ನುತ್ತಾರೆ. ಪ್ರಚಲಿತ ತಂತ್ರವಿದ್ಯೆಯ ಸಿದ್ಧಿಗಳನ್ನೂ ವಿಭವಗಳನ್ನೂ ಗಮನಿಸಿರುವ ಇವರ ಪ್ರಕಾರ ಆಕಾಶ ವಸಾಹತುಗಳ ಸ್ಥಾಪನೆ ಮುಂದಿನ ಶತಮಾನದಲ್ಲಿ ಸಾಧ್ಯ ಸಾಹಸವಾದೀತು ಎಂದಿದೆ. ಆ ವೇಳೆಗೆ ಭೂಗ್ರಹದಿಂದ ‘ಹೊರಕ್ಕೆ’ ತುಳುಕುವ ಜನಸಂಖ್ಯೆಯನ್ನು ಆಕಾಶವಸಾಹತುಗಳಲ್ಲಿ ನೆಲೆಗೊಳಿಸುವುದು ಸಾಧ್ಯವಾದೀತು.

ಭೂಮಿಯ ಸುತ್ತ ಚಂದ್ರ ಸಾಗುವ ಕಕ್ಷೆ ಇದೆಯಷ್ಟೆ. ಇದು ಚಾಂದ್ರ ಕಕ್ಷೆ. ಇದರಲ್ಲಿ ಚಂದ್ರನಿಂದ ಹಿಂದಕ್ಕೂ ಮುಂದಕ್ಕೂ ಭೂಮಿ – ಚಂದ್ರ ಅಂತರದಷ್ಟು ದೂರಗಳಲ್ಲಿ ಎರಡು ಬಿಂದುಗಳನ್ನು ಗುರುತಿಸಬೇಕು. ಇವುಗಳಿಗೆ ಲಗ್ರಾಂಜ್ ಬಿಂದುಗಳೆಂದು ಹೆಸರು. ಮುಂದಿನದು L4 ಹಿಂದಿನದು L5. ಇವು ಕೇಂದ್ರಗಳಾಗಿರುವ ಗೋಳಗಳ ಅಥವಾ ವಲಯಗಳ ಒಳಗೆ ಇಡಲಾಗುವ ವಸ್ತು ಬೇರೆ ಯಾವ ಬಾಹ್ಯ ಕಾರಕದ ಪ್ರಭಾವ ಇಲ್ಲದೆಯೂ ಸದಾ ಅಲ್ಲೇ ಇರಬಲ್ಲದು. ವಿಶೇಷವಾಗಿ ಭೂಮಿ, ಚಂದ್ರ ಹಾಗೂ ಸೂರ್ಯ ಇವುಗಳ ಪರಸ್ಪರ ಗುರುತ್ವ ಬಲಗಳು ಈ ತೆರನಾದ ಗತ್ಯಾತ್ಮಕ ಸಮತೋಲವನ್ನು ಆ ವಲಯಗಳಲ್ಲಿ ಸಾಧಿಸುವುದಾಗಿದೆ.

ಚಂದ್ರನ ಲಗ್ರಾಂಜ್ ವಲಯಗಳಲ್ಲಿ ಮಾನವ ವಸಾಹತುಗಳನ್ನು ನಿರ್ಮಿಸುವುದು ಸಾಧ್ಯವಿದೆ. ಪ್ರಚಲಿತ ತಂತ್ರವಿದ್ಯೆ ಇದನ್ನು ಕೈಗೂಡಿಸಬಲ್ಲದೆಂಬುದಾಗಿ ಓನೈಲ್ ಹೇಳುತ್ತಾರೆ. ಪ್ರತಿಯೊಂದು ಲಗ್ರಾಂಜ್ ವಲಯದಲ್ಲಿಯೂ ಹತ್ತು ಸಾವಿರ ಯಾ ಹೆಚ್ಚು ಜನರನ್ನು ಒಳಗೊಳ್ಳಬಲ್ಲ ಹಲವರು ಆಕಾಶ ದ್ವೀಪಗಳನ್ನು ಸ್ಥಾಪಿಸಬಹುದು. ಇಂಥ ಒಂದೊಂದು ದ್ವೀಪವೂ ಆಯಾ ಲಗ್ರಾಂಜ್ ಬಿಂದುವಿನ ಸುತ್ತ ಸುಮಾರು ಎಂಬತ್ತೊಂಬತ್ತು ದಿವಸಗಳಲ್ಲಿ ಒಂದು ಪರಿಭ್ರಮಣೆಯನ್ನು ಮುಗಿಸುತ್ತದೆ. ಯಾವುದೇ ಲಗ್ರಾಂಜ್ ವಲಯದಲ್ಲಿ ದ್ವೀಪಗಳು ಭರ್ತಿ ಆದಾಗ ಅವುಗಳ ಒಟ್ಟು ಜನಸಂಖ್ಯೆ ಇಂದಿನ ಪ್ರಪಂಚದ ಜನಸಂಖ್ಯೆಗಿಂತ ಹಲವು ಪಟ್ಟು ಹೆಚ್ಚಿದ್ದೀತೆಂದು ಓನೈಲ್ ಅವರ ಗಣನೆಗಳಿಂದ ತಿಳಿದಿದೆ.

ಓನೈಲ್ ವೈಜ್ಞಾನಿಕವಾಗಿ ಬೆಂಬಲಿಸಿರುವ ಆಕಾಶದ್ವೀಪ ೧೦೦೦ ಮೀ ಉದ್ದ ಮತ್ತು ೨೦೦೦ ಮೀ ವ್ಯಾಸದ ಹಲವಾರು ಉರುಳೆಗಳ ಸಮುಚ್ಚಯ. ಇದರಲ್ಲಿ ೧೦,೦೦೦ ಮಂದಿ ಭೂಮಿಯಲ್ಲಿಯ ನಗರವೊಂದರ ಯಾವುದೇ ಸುಸಜ್ಜಿತ ಬಡಾವಣೆಯಲ್ಲಿರುವಂತೆ ಸುಖವಾಗಿ ಇರಬಲ್ಲರು. ಸುಲಭವಾಗಿ ವಿಪುಳವಾಗಿ ಮತ್ತು ಸತತವಾಗಿ ದೊರೆಯುವ ಸೌರಶಕ್ತಿಯೇ ಈ ದ್ವೀಪಗಳಿಗೆ ಶಕ್ತಿಯ ಆಕರ. ಇಂಥ ದ್ವೀಪಗಳಿಗೆ ಭೂಮಿಯಿಂದ ಹೋಗಿಬರಲು ಅಂತೆಯೇ ಇವುಗಳ ನಡುವೆ ಸಂಚರಿಸಲು ಸಾಕಷ್ಟು ಆಕಾಶಲಾಳಿಗಳು (space shuttle) ಆ ವೇಳೆಗೆ ಬಳಕೆಗೆ ಬಂದಿರುತ್ತವೆ. ಆಕಾಶಲಾಳಿಗಳ ಪ್ರಾಯೋಗಿಕ ಹಾರಾಟ ೧೯೭೯ ರಲ್ಲಿ ಪ್ರಾರಂಭವಾಯಿತು ಎಂಬುದನ್ನಿಲ್ಲಿ ಸ್ಮರಿಸಬಹುದು.

ಮುಕ್ತಾಯ – ಇಪ್ಪತ್ತೈದು
ವರ್ತಮಾನಯುಗದಲ್ಲಿ ಪ್ರಪಂಚದ ಧುರೀಣರೂ ಪ್ರಜೆಗಳೂ ಆಗಿರುವ ನಮ್ಮ ಮೇಲೆ ಈಗ ಇದರ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿಕೆ ಬಂದು ಕುಳಿತಿದೆ. ಗತಯುಗಗಳ ಯಾವುದೇ ಮಾನವ ಸಮುದಾಯದ ಮೇಲೆಯೂ ಇಂಥ ಜವಾಬ್ದಾರಿಕೆ ಬಿದ್ದಿರಲಿಲ್ಲ. ಈ ಜವಾಬ್ದಾರಿಕೆಯನ್ನು ನಾವು ಹೇಗೆ ನಿರ್ವಹಿಸಬಲ್ಲೆವು? ಎರಡು ಪರ್ಯಾಯ ಮಾರ್ಗಗಳು ನಮ್ಮೆದುರಿಗಿವೆ:

ಮೊದಲನೆಯದು, ನಮ್ಮ ಪೀಳಿಗೆಯ ಬಗ್ಗೆ ಪೂರ್ತಿ ಕಾಳಜಿಯಿಂದ ವರ್ತಿಸುವುದು. ಭವಿಷ್ಯದ ಅಜಾತ ಜೀವಿಗಳೆಲ್ಲವೂ ಈ ಗ್ರಹದ ಸದ್ಯೋಜಾತ ಜೀವಿಗಳಷ್ಟೇ ಇದರ ಸಂಪನ್ಮೂಲಗಳನ್ನು ಅನುಭವಿಸಲು ಹಕ್ಕುಳ್ಳವೆಂದು ತಿಳಿದು ತದನುಗುಣವಾಗಿ ನಡೆದುಕೊಳ್ಳುವುದು. ಈ ಭೂಮಿಯನ್ನು ನಮಗೆ ಸುಖಪ್ರದಾಯಕ ಗ್ರಹವಾಗಿ ಬಳುವಳಿಕೊಟ್ಟು ಹೋದುದಕ್ಕಾಗಿ ನಾವು ಹೇಗೆ ನಮ್ಮ ಪೂರ್ವಜರಿಗೆ ಕೃತಜ್ಞರಾಗಿರುವೆವೋ ಅಥವಾ ಇರಬೇಕೋ ಹಾಗೆ ನಮ್ಮ ಪೀಳಿಗೆ ನಮಗೆ ಕೃತಜ್ಞರಾಗಿರುವಂತೆ ಇಂದು ನಾವು ಬದುಕನ್ನು ಸಾಗಿಸುವುದು ಅಗತ್ಯ.

ಎರಡನೆಯದು, ನಮ್ಮ ಪೀಳಿಗೆಯ ಬಗ್ಗೆ ಪೂರ್ತಿ ಅಲಕ್ಷ್ಯದಿಂದ ವರ್ತಿಸುವುದು. ಭವಿಷ್ಯದ ಅಜಾತ ಮತ್ತು ಅಜ್ಞಾತ ಜೀವಿಗಳ ಗೊಡವೆ ನಮಗೇಕೆ, ನಮ್ಮ ದಿನಗಳು ಸಮೃದ್ಧವಾಗಿಯೂ ವೈಭವಯುತವಾಗಿಯೂ ಉರುಳಿಹೋದರೆ ಸಾಕೆಂಬ ದಾರ್ಷ್ಟ್ಯದ ನಿಲವನ್ನು ತಳೆಯುವುದು. ಸದ್ಯ ಪ್ರಪಂಚ ಈ ಹಾದಿಯನ್ನು ಹಿಡಿದಿರುವಂತೆ ತೋರುತ್ತದೆ. ಎಲ್ಲರಿಗೂ ಮುಕ್ತ ಪ್ರವೇಶವಿರುವ ವಾಯು ಹಾಗೂ ಜಲಮಂಡಲಗಳನ್ನು ವಿಶೇಷವಾಗಿ ಸೂರೆಮಾಡಿ ಮಲಿನಗೊಳಿಸುತ್ತಿರುವ ಬೇಜವಾಬ್ದಾರಿಕೆಯ ನಡತೆ ಗಾಬರಿ ಹುಟ್ಟಿಸುವಂತಿದೆ. ಇದರ ವಿಷಫಲಗಳು ಈಗಾಗಲೇ ನಮ್ಮ ದೇಹ ಸೇರಿ ಬದುಕಿನ ಮಟ್ಟದ ಮೇಲೆ ದುಷ್ಪರಿಣಾಮ ಬೀರಿವೆ. ಇದೇ ಹಾದಿಯಲ್ಲಿ ಮುನ್ನಡೆದದ್ದಾದರೆ ಸಮೀಪ ಭವಿಷ್ಯದಲ್ಲೇ ವರ್ತಮಾನ ಪೀಳಿಗೆ ಉಸಿರುಗಟ್ಟಿ ನೀರಡಕೆ ಬಡಿದು ಅಸುನೀಗಿದರೆ ಆಶ್ಚರ್ಯವೇನೂ ಇಲ್ಲ.

ವರ್ತಮಾನ ಕಾಲದ ಪ್ರಭುಗಳಾಗಿರುವ ನಮ್ಮ ಹೊಣೆ ಏನೆಂಬುದರತ್ತ ಭವಿಷ್ಯವಿಜ್ಞಾನ ನಮ್ಮ ಲಕ್ಷ್ಯ ಸೆಳೆಯುತ್ತದೆ. ಪ್ರಪಂಚದ ಭವಿಷ್ಯದಲ್ಲಿ ಆಸಕ್ತರಾದವರೆಲ್ಲರೂ ಭವಿಷ್ಯ ವಿಜ್ಞಾನದ ಬಗ್ಗೆ ಗಂಭೀರವಾಗಿ ಚಿಂತಿಸುವುದು ಅಗತ್ಯ.

[ಭವಿಷ್ಯ ವಿಜ್ಞಾನ ಪುಸ್ತಕದ ಆಶಯವನ್ನು ಜಿಟಿನಾ ವೈಜ್ಞಾನಿಕ ರೂಪಕವಾಗಿ ಬರೆದು ಇದೇ ಪುಸ್ತಕಕ್ಕೆ ಮೊದಲ ಅನುಬಂಧವಾಗಿ ಪ್ರಕಟಿಸಿದ್ದರು. ಆ ರೂಪಕದೊಡನೆ ಮುಂದಿನ ಮಂಗಳವಾರ ಈ ಸರಣಿಯ ಕೊನೆಯ ಕಂತು ಬರಲಿದೆ. ನಿಮ್ಮ ಪ್ರತಿಕ್ರಿಯೆ, ಚರ್ಚೆಯ ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]