(ಜಿ.ಟಿ.ನಾ ಅವರ ಮಾನವ, ಚಂದ್ರನ ಮೇಲೆ ಪುಸ್ತಕದ ವಿ-ಧಾರಾವಾಹಿ ಕಂತು ಏಳು)

ಮುಂದಿನ ಕತೆಯ ಸ್ಪಷ್ಟತೆಗಾಗಿ ಚಂದ್ರನ ಮೇಲ್ಮೈಯ ಸ್ವಲ್ಪ ಹೆಚ್ಚು ವಿವರ ತಿಳಿದಿರುವುದು ಒಳ್ಳೆಯದು. ದೂರದ ಚಂದ್ರ ಹೇಗೆಯೇ ಕಾಣಲಿ, ಕವಿ ಕಲ್ಪನೆ ಅದನ್ನು ಹೇಗೆಯೇ ವಿವರಿಸಲಿ ವಾಸ್ತವಿಕ, ಚಂದ್ರ ಭಿನ್ನ. ಆಳವಾದ ಕೂಪಗಳು, ಅಸಂಖ್ಯಾತ ಕುಳಿಗಳು, ಕಡಿದಾದ ಪರ್ವತಗಳು, ಕಲ್ಲು, ಬಂಡೆ, ದೂಳಿನ ರಾಶಿ ರಾಶಿ – ಇವು ಚಂದ್ರನ ಹೊರಮೈ ನಿವಾಸಿಗಳು. ಇಂಥ ಅಸಮಾನತೆಗಳ ಪರಿಣಾಮ ನಮಗೆ ಚಂದ್ರನ ಮೇಲೆ ಕಾಣುವ ಕಲೆಗಳು, ಮೊಲ, ಇತ್ಯಾದಿ. ಒಂದು ಕಾಲದಲ್ಲಿ ಬರಿಗಣ್ಣಿಂದ ನೋಡಿ, ದೂರದರ್ಶಕಗಳಿಂದ ಹೆಚ್ಚು ವಿವರ ಸಂಗ್ರಹಿಸಿ, ಅವುಗಳಿಗೆ ಸಾಕಷ್ಟು ಕಲ್ಪನೆಯ ಮೆರುಗು ಮೆತ್ತಿ ಚಂದ್ರ ಲೋಕದಲ್ಲಿ ಸಮುದ್ರ, ಹಚ್ಚ ಹಸುರು ಕಾಡು ಮುಂತಾದ ಭೂಮಿಯ ತದ್ರೂಪಗಳನ್ನೇ ಮನುಷ್ಯ ಕಂಡ. ಅಂದು ನೀಡಿದ ಹೆಸರುಗಳು ವಾಸ್ತವಿಕಾರ್ಥಗಳನ್ನು ಕಳೆದುಕೊಂಡಿದ್ದರೂ ಐತಿಹಾಸಿಕ ಸಂಕೇತಗಳಾಗಿ ಇಂದಿಗೂ ಉಳಿದುಕೊಂಡಿವೆ. ಚಂದ್ರ ಬಿಂಬದಲ್ಲಿ ಕಪ್ಪಾಗಿ ಕಲೆಗಳಂತೆ ತೋರುವ ಪ್ರದೇಶಗಳು ಹೋಲಿಕೆಯಿಂದ ಇತರ ಪ್ರದೇಶಗಳಿಗಿಂತ ತಗ್ಗಿನಲ್ಲಿವೆ. ಮಾರೇ (ಅಂದರೆ ಸಮುದ್ರ ಎಂದರ್ಥ) ಟ್ಯಾಂಕ್ವಿಲ್ಲಿಟ್ಯಾಟಿಸ್, ಮಾರೇ ನೆಕ್ಟಾರಿಸ್, ಮಾರೇ ಇಂಬ್ರಿಯಂ ಮುಂತಾದುವು ಈ ಕಾಲ್ಪನಿಕ ಸಮುದ್ರಗಳು. ಆಲ್ಪ್ಸ್ ಎಪಿನೈನ್, ಕೌಕಸಸ್, ಲೆಬ್‌ನಿಟ್ಸ್ (ಎತ್ತರ ೩೦,೦೦೦ ಅಡಿ) ಮುಂತಾದುವು ಪರ್ವತಗಳು. ಟೈಕೋ, ಕ್ಲೇವಿಯಸ್ ಮುಂತಾದುವು ಕೂಪಗಳು. ಆಕಾಶದಲ್ಲಿ ಕಲ್ಲುಗಳ, ಬಂಡೆಗಳ, ಲೋಹಗಟ್ಟಿಗಳ ಯಾದೃಚ್ಛಿಕ ಚಲನೆಯಿದೆ. ಇವು ವಿಶ್ವದಲ್ಲಿ ಗತಿಸಿಹೋದ ನಕ್ಷತ್ರಗಳ ಗ್ರಹಗಳ ಅವಶೇಷಗಳಾಗಿರಬಹುದೆಂದು ಊಹೆ. ಇಂಥವು ಒಂದು ಗ್ರಹದ ಸಮೀಪ ‘ಅತಿಕ್ರಮ ಪ್ರವೇಶ’ ಮಾಡಿದಾಗ ಆ ಗ್ರಹದ ಗುರುತ್ವಾಕರ್ಷಣ ಬಲದಿಂದ ಪ್ರಭಾವಿತವಾಗುತ್ತವೆ. ಗ್ರಹದ ತಳದೆಡೆಗೆ ಏರುತ್ತಿರುವ ವೇಗದಿಂದ ಧಾವಿಸಿ ಬಡಿದು ನುಚ್ಚುನುರಿಯಾಗುವುವು. ಭೂಮಿಯನ್ನು ಆವರಿಸಿರುವ ವಾಯುಮಂಡಲ ಇಂಥ ಅನಗತ್ಯ ಅನಿರೀಕ್ಷಿತ ಅತಿಥಿಗಳ ಹೊಡೆತದಿಂದ ಮನುಷ್ಯರನ್ನು ರಕ್ಷಿಸುತ್ತದೆ. ಉಲ್ಕೆಗಳು ಉರಿದು ವಾಯುಮಂಡಲದ ಎತ್ತರದಲ್ಲಿಯೇ ನಾಶವಾಗಿ ಹೋಗುತ್ತವೆ. ವಾಯು ಕವಚವಿಲ್ಲದ ಚಂದ್ರನಲ್ಲಿ ಇಂಥ ರಕ್ಷಣೆ ಇಲ್ಲ. ಚಂದ್ರತಲದ ಕುಳಿಗಳು ಕೂಪಗಳು ಉಲ್ಕೆಗಳ ನಿರಂತರ ಪ್ರಹಾರದಿಂದಾಗಿರಬಹುದು. ಒಂದು ಕಾಲದಲ್ಲಿ ಮಿದುವಾಗಿದ್ದ ಚಂದ್ರನ ಮೈಮೇಲೆ ಈ ಕಾರಣದಿಂದ ಶಾಶ್ವತ ಕಲೆಗಳಾಗಿರಬೇಕು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಚಂದ್ರಕಂಪದ ಕೊಡುಗೆಯೂ ಇಲ್ಲಿ ಇದ್ದಿರಬಹುದು. ಇಂದೂ ಎಂದಿನಂತೆ ಉಲ್ಕಾ ಪ್ರಹಾರ ಚಂದ್ರನಿಗೆ ತಪ್ಪಿದ್ದಲ್ಲ.

ಚಂದ್ರ ಕಕ್ಷೆ

೩,೨೦,೦೦೦ ಕಿಮೀ ಗಡಿ (ಅಂದರೆ ಚಂದ್ರನಿಂದ ೬೪,೦೦೦ ಕಿಮೀ ದೂರ), ಇಲ್ಲಿಂದ ಮುಂದೆ ಚಂದ್ರನ ಪ್ರಭಾವ ಅಧಿಕ. ಅಲ್ಲಿ ಒಂದು ಕಲ್ಲನ್ನಿಟ್ಟರೆ ಕ್ಷಣ ಕ್ಷಣ ಏರುವ ವೇಗದಿಂದ ಅದು ಧಾವಿಸಿ ಚಂದ್ರನ ಮೇಲೆ ಬಡಿದಪ್ಪಳಿಸುತ್ತದೆ. ಅಲ್ಲಿಂದ ಹಿಂದೆ ಇಟ್ಟ ವಸ್ತು ಭೂಮಿ ತಳಕ್ಕೆ ಕೆಡೆಯುತ್ತದೆ. ಅಪೊಲೊ ಈ ಲಕ್ಷ್ಮಣನ ಗೀಟನ್ನು ದಾಟಿತು. ವೇಗ ಗಂಟೆಗೆ ೩,೪೦೦ ಕಿಮೀ. ಮುಂದೆ ಅದರ ವೇಗ ಸೆಕೆಂಡು ಸೆಕೆಂಡೂ ಏರತೊಡಗಿತು.

ಜುಲೈ ೧೯, ಭೂಮಿಯಿಂದ ಹೊರಟು ಮೂರನೆಯ ದಿವಸ ಮುಗಿಯುತ್ತಿದೆ. ೧೬೦೨ ಗಂಟೆ. ವಿಶ್ರಾಂತಿಸಿದ್ದ ಯಾನಿಗಳನ್ನು ಹೂಸ್ಟನ್ನಿನ ‘ಉದಯಗಾನ’ (ರಂಗನಾಯಕ ಏಳೋ ರಾಜೀವಲೋಚನ) ಎಬ್ಬಿಸಿತು. ವೇಗ ಏರುತ್ತಿದೆ, ಚಂದ್ರ ಸಮೀಪಿಸುತ್ತಿದೆ. ಹೀಗೆಯೇ ಮುಂದುವರಿದರೆ ಚಂದ್ರನ ಮೇಲೆ ಹರಾಕಿರಿ, ಉಲ್ಕೆಯಾಗಿ ಭಸ್ಮವಾಗುವುದಿಲ್ಲ ಢಿಕ್ಕಿಯಾಗಿ ಚೂರ್ಣ. ಈಗ ಬಲು ಚಾಕಚಕ್ಯದಿಂದ ನಯವಾಗಿ ಚಂದ್ರನ ಸುತ್ತಲೂ ಪರಿಭ್ರಮಿಸುವಂತೆ ಜಾರಬೇಕು. ತಡೆ ರಾಕೆಟ್‌ಗಳನ್ನು ಉರಿಸಿದರು; ಮುಂಭಾಗದಲ್ಲಿ ಚಲಿಸುತ್ತಿದ್ದ ಬುದ್ಧಿವಂತ ಜ್ವಾಲೆ ಕಾರಿತು. ಚಂದ್ರನ ಹಿಂದೆ (ಭೂಮಿಯಿಂದ ಕಾಣದ ಭಾಗದಲ್ಲಿ) ನೌಕೆ ಬಂದಾಗ ಕ್ಲುಪ್ತ ವೇಳೆಯಲಿ ಎರಡು ಸಲ ಇದು ನೆರವೇರಿತು. ಮೊದಲಿನದು (೨೨೫೬ ಗಂ.) ನೌಕೆಯನ್ನು ಚಂದ್ರನ ಸುತ್ತ ದೀರ್ಘವೃತ್ತ ಕಕ್ಷೆಯಲ್ಲಿ ಪರಿಭ್ರಮಿಸುವಂತೆ ವಿಧಿಸಿತು. ಈ ಕಕ್ಷೆಯಲ್ಲಿ ಚಂದ್ರ ಸಮೀಪ ಬಿಂದುವಿನ ದೂರ ೧೧೨ ಕಿಮೀ, ದೂರಬಿಂದುವಿನ ದೂರ ೩೧೪ ಕಿಮೀ. ಎರಡನೆಯದು ಕಕ್ಷೆಯನ್ನು ೧೧೨ ಕಿಮೀ ತ್ರಿಜ್ಯದ (ಚಂದ್ರ ಕೇಂದ್ರ) ವೃತ್ತವಾಗಿ ಪರಿವರ್ತಿಸಿತು (ಜುಲೈ ೨೦, ೦೩೧೨ ಗಂ). ಈಗ ನೂಕುಬಲದ ಆವಶ್ಯಕತೆ ಇಲ್ಲ. ಹೂಸ್ಟನ್ ಇನ್ನೊಮ್ಮೆ ಖಚಿತಪಡಿಸಿಕೊಂಡಿತು ಎಲ್ಲವೂ ಸಮರ್ಪಕವಾಗಿವೆ ದೋಷರಹಿತವಾಗಿವೆ ಎಂದು. ಇಲ್ಲವಾಗಿದ್ದರೆ ಅಲ್ಲಿಂದಲೇ ನೌಕೆಯನ್ನು ಹಿಂದಿರುಗಿಸಬಹುದಿತ್ತು. ಈಗ ಮುಂದಿನ ಮಹಾನಿರ್ಧಾರಕ್ಕೆ ಸಮಯ ಸನ್ನಿಹಿತವಾಗಿದೆ. ಎಸ್ಸೆಮ್ – ಸಿಎಂ- ಎಲ್ಲೆಮ್ (ಇದೇ ಕ್ರಮದ) ಜೋಡಣೆ ಚಂದ್ರಕಕ್ಷೆಯಲ್ಲಿದೆ. ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್‌ರಿನ್ ಸುರಂಗದ ಮೂಲಕ ಎಲ್ಲೆಮ್‌ನ್ನು ಪ್ರವೇಶಿಸಿ ಅದರ ವಿವಿಧ ಭಾಗಗಳು ಕಾರ್ಯ ಸಮರ್ಥವಾಗಿವೆ ಎಂದು ದೃಢಪಡಿಸಿಕೊಂಡರು. ಪುನಃ ಸಿಎಮ್‌ಗೆ ಮರಳಿದರು (೦೮೦೨ ಗಂ). ಮುಂದೆ ಎಂಟು ಗಂಟೆ ಕಾಲ ವಿಶ್ರಾಂತಿ.

ಪ್ರಾಚೀನ ನಾಟಕಗಳಲ್ಲಿ ರಾಜನ ಜೊತೆಗೆ ವಿದೂಷಕ ಇರಬೇಕಾದದ್ದು ಸಂಪ್ರದಾಯ. ಸರ್ಕಸ್ ರಂಗದಲ್ಲಿ ಪ್ರಧಾನ ಪಾತ್ರ ಪ್ರವೇಶಿಸುವಾಗ ಒಬ್ಬ ಕೋಡಂಗಿ ಹಿಂದೆಯೇ ಅನುಕರಿಸುತ್ತ ಅಣಕಿಸುತ್ತ ಬರುವುದನ್ನು ಗಮನಿಸಿದ್ದೇವೆ. ಇಂಥ ಒಂದು ವಿನೋದಶೀಲ ಪ್ರಸಂಗ ಈ ಆಕಾಶ ನಾಟಕದಲ್ಲಿಯೂ ಒದಗಿ ಬಂತು. ಲೂನಾ ೧೫ ಎಂಬ ರಷ್ಯಾ ದೇಶದ (ಪ್ರಾಯಶಃ ಮಾನವರಹಿತ) ಆಕಾಶನೌಕೆಯ ಜೊತೆಹಾರಾಟ. ಮೊದಲು ಇದು ಗುಪ್ತವಾಗಿದ್ದರೂ ವಿಜ್ಞಾನಿಗಳ ಗಮನದಿಂದ ಹೊರಗೆ ಇಂಥ ಹಾರಾಟಗಳು ದೀರ್ಘಕಾಲ ಉಳಿಯಲಾರವು. ಅಪೊಲೊ ಗಮನ ಸಾಕಷ್ಟು ಪ್ರಸಿದ್ಧಿ ಪ್ರಚಾರಗಳ ಉಜ್ವಲ ಬೆಳಕಿನಲ್ಲೇ ನಡೆಯಿತು. ಲೂನಾ ೧೫ರ ಗಮನ ನಿಗೂಢವಾಗಿಯೇ ಇತ್ತು. ಅದರಿಂದ ಅಪೊಲೊ ಯಾನಿಗಳಿಗೆ ಯಾವ ತೊಂದರೆಯೂ ಸಂಭವಿಸದು ಎಂದು ರಷ್ಯಾ ದೇಶ ಭರವಸೆ ನೀಡಿತು. ಅಂತೆಯೇ ನಡೆದುಕೊಂಡಿತು. ಮುಂದೆ ಅಮೆರಿಕಾ ರಾಷ್ಟ್ರವನ್ನು ಮುಕ್ತಕಂಠದಿಂದ ಅಭಿನಂದಿಸಿತು.

ಕೊಲಂಬಿಯಾ – ಈಗಲ್

ಇನ್ನು ಮುಂದಿನ ದೃಶ್ಯದಲ್ಲಿ ಎಸ್ಸೆಮ್ – ಸಿಎಂ ಜೋಡಣೆಗೆ ಕೊಲಂಬಿಯಾ ಎಂದೂ ಎಲ್ಲೆಮ್‌ಗೆ ಈಗಲ್ ಎಂದೂ ಹೆಸರು. ಹೊಸ ನೆಲ ಅನ್ವೇಷಿಸಿದವ ಕೊಲಂಬಸ್; ಗುರಿ ಮೇಲೆ ಎರಗುವುದರಲ್ಲಿ ಗರುಡ (ಗಿಡುಗ, ಹದ್ದು – ಈಗಲ್) ನಿಸ್ಸೀಮ. ಆದ್ದರಿಂದ ಸಾರ್ಥಕವಾದ ಈ ಹೆಸರುಗಳು. ಕೊಲಂಬಿಯಾ ಚಂದ್ರ ಕಕ್ಷೆಯಲ್ಲಿಯೇ ಕಾವಲಾಗಿ ಪರಿಭ್ರಮಿಸುತ್ತಿರುವುದರಿಂದ ಅದು ಮಾತೃ ನೌಕೆಯೂ ಹೌದು. ಈಗಲ್ ಚಂದ್ರನ ಶಿಶು.

ಜುಲೈ ೨೦, ೧೮೨೭ ಗಂಟೆ. ಕೊಲಂಬಿಯಾ-ಈಗಲ್ ಚಂದ್ರ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈಗಲ್ ಚಾಲಕ ಆಲ್ಡ್‌ರಿನ್ ಸುರಂಗದ ಮೂಲಕ ಅದನ್ನು ಪ್ರವೇಶಿಸಿದ. ೧೮೫೨ ಗಂಟೆಗೆ ಆರ್ಮ್‌ಸ್ಟ್ರಾಂಗ್ ಅವನನ್ನು ಕೂಡಿಕೊಂಡ. ಇಬ್ಬರೂ ಆಕಾಶ ಉಡುಪು ತೊಟ್ಟಿದ್ದಾರೆ. ಕೊಲಂಬಿಯಾದಲ್ಲಿ ಕಾಲಿನ್ಸ್ ಒಬ್ಬನೇ. ೨೧೦೫ ಗಂಟೆ. ಈಗಲ್‌ನ್ನು ಚಂದ್ರನ ಮೇಲೆ ಇಳಿಸಲು ಸಿದ್ಧಗೊಳಿಸಿದರು. ೨೩೧೭ ಗಂಟೆ. ಪರಸ್ಪರ ಬಂಧಿತ ಕೊಲಂಬಿಯಾ-ಈಗಲ್‌ಗಳು ಆಲುಗಿದವು, ಬೇರ್ಪಟ್ಟವು. ಈಗಲ್ (ಅಂದರೆ ಎಲ್ಲೆಮ್) ಕಾಲುಗಳು ತೆರೆದುಕೊಂಡವು. ಒಂದು ಜೇಡನಂತೆ ಅದು ಕಂಡಿತು.

“ನೀವು ಹೋಗಿ” ಹೂಸ್ವ್ಟನ್ನಿನಿಂದ ಆದೇಶ. ಮೂರು ಮಿನಿಟ್ ಗತಿಸುವಾಗ ಭೂಮಿಯೊಡನೆ ಸಂಪರ್ಕ ಕಡಿದುಹೋಯಿತು – ನೌಕೆ ಚಂದ್ರನ ಹಿಂಬದಿಯಲ್ಲಿ ಮರೆಯಾಗಿತ್ತು. ಮುಂದಿನ ೪೫ ಮಿನಿಟುಗಳ ಕಾಲ ಹೂಸ್ಟನ್ (ಮತ್ತು ಭೂಮಿಯ ಎಲ್ಲ ವೀಕ್ಷಕರೂ) ಉಸಿರು ಬಿಗಿ ಹಿಡಿದು ಕಾದಿದ್ದರು.

“ಹಲೋ ಹೂಸ್ಟನ್! ಇದು ಈಗಲ್. ನಾವು ಬೇರ್ಪಟ್ಟಿದ್ದೇವೆ.” ಕೊಲಂಬಿಯಾ, ಈಗಲ್‌ಗಳ ನಡುವಿನ ಆಗಿನ ಅಂತರ ಕೇವಲ ಕೆಲವೇ ಅಡಿಗಳು.

ಜುಲೈ ೨೧, ೦೦೦೨ ಗಂಟೆ. ಬೇರ್ಪಟ್ಟ ಅಂತರ ಇನ್ನಷ್ಟು ಆಗಿರಲಿ ಎಂದು ಹೂಸ್ಟನ್ ಆಣತಿ ನೀಡಿತು. ಕೊಲಂಬಿಯಾದಿಂದ ಈಗಲ್‌ನ ಬೇರ್ಪಡಿಕೆ ವೇಗ ಸೆಕೆಂಡಿಗೆ ೨.೫ ಅಡಿ. ಚಂದ್ರ ಸ್ಪರ್ಶಕ್ಕೆ ಮಾನವ ಸಿದ್ಧನಾಗಿದ್ದಾನೆ. ಕೊಲಂಬಿಯಾ ಚಂದ್ರ ಕಕ್ಷೆಯಲ್ಲಿ ಮೈಕಲ್ ಕಾಲಿನ್ಸ್ ಚಾಲಕತ್ವದಲ್ಲಿ ಪರಿಭ್ರಮಿಸುತ್ತಿತ್ತು. ಈಗಲ್ ಪಥ ಚಂದ್ರನೆಡೆಗೆ.

೦೧೪೫ ಗಂಟೆ. ಕೊಲಂಬಿಯಾ ಈಗಲ್‌ನ ಸಂಭಾಷಣೆ.
ಈ – ನಾವು ಹೋಗುತ್ತಿದ್ದೇವೆ.
ಕೊ – ಒಳ್ಳೆಯದಾಗಲಿ.
ಈ – ೧,೬೦೦ ಅಡಿ.
ತಡೆ ರಾಕೆಟ್ ಗಳ ಉರಿಯುವಿಕೆಯಿಂದ ಈಗಲ್ ವೇಗ ಮಿತಿಯಲ್ಲಿತ್ತು.
ಕೊ – ಸನ್ನಿವೇಶ ಅದ್ಭುತ ಹೋಗಿ.
ಈ – ೧೨೦೨ ಅಡಿ, ೩೫ ಡಿಗ್ರಿ ಓರೆ ೭೫೧ ಅಡಿ, ೨೩ ಡಿಗ್ರಿ…

ಈಗಲ್ ವಾಹನ ತಡೆ ರಾಕೆಟ್ ಮತ್ತು ಸ್ವಯಂಚಾಲಿತ ವ್ಯವಸ್ಥೆಯ ನಿಯಂತ್ರಣದಿಂದ ಚಂದ್ರ ತಲಕ್ಕೆ ಜಾರುತ್ತಿದ್ದಂತೆ ಕಂಡದ್ದೇನು? ವಿಕಾರವಾಗಿ ಬಾಯ್ತೆರೆದು ನುಂಗಲು ಸಿದ್ಧವಾಗಿದ್ದ ಬಂಡೆಗಳಿಂದ ತುಂಬಿದ್ದ ಕೂಪ. ಉಳಿದ ಸಮಯ ಕೇವಲ ಕೆಲವೇ ಸೆಕೆಂಡ್‌ಗಳು. ಅರ್ಧ ಮಿನಿಟ್ ಮಾತ್ರ ಉರಿಯುವಷ್ಟು ಇಂಧನ. ಹಾಗೆಯೇ ಮುಂದುವರಿದರೆ ಚಂದ್ರ ಕೂಪದಲ್ಲಿ ಸಮಾಧಿ. ಆ ಕ್ಷಣ ಆರ್ಮ್‌ಸ್ಟ್ರಾಂಗ್ ಸ್ವಯಂಚಾಲಿತ ವ್ಯವಸ್ಥೆಯಿಂದ ಸಾರಥ್ಯವನ್ನು ಸ್ವಂತ ವಶಕ್ಕೆ ತೆಗೆದುಕೊಂಡ, ಪ್ರಪಾತವೇ? ಯಶಸ್ಸೇ? ಶಿಕ್ಷಣ ಲಭ್ಯ ಪ್ರಸಂಗಾವಧಾನತೆಗೇ ಜಯ. ಇಳಿವ ಗತಿ ಬದಲಾಯಿಸಿದ.

ಈ – ೨.೫ ಅಡಿ ಮಾತ್ರ. ದೂಳೆದ್ದಿದೆ ಸ್ವಲ್ಪ ಬಲಕ್ಕೆ ಸರಿದಿದ್ದೇವೆ… ಸ್ಪರ್ಶದ ಬೆಳಕು. ಬಹಳ ಸರಿ. ಇಂಜಿನ್ ನಿಶ್ಚಲ… ಇದು ಟ್ರ್ಯಾಂಕ್ವ್ಲಿಟಿ. ಈಗಲ್ ಇಳಿದಿದೆ (೦೧೪೭ ಗಂಟೆ).
ಕೊ – ಈಗಲ್! ನೀನು ಚಂದ್ರನ ಮೇಲೆ ಇಳಿದಿದ್ದೀಯೇ ಶಾಭಾಸ್. ಎಷ್ಟೊಂದು ಜನ ಈ ಕಡೆ ಮೈಮರೆತು ನೋಡುತ್ತಿದ್ದಾರೆ.

ಇಳಿಯಬೇಕೆಂದು ಗೊತ್ತುಪಡಿಸಿದ್ದ ಸ್ಥಳದಿಂದ ಸುಮಾರು ೬,೦೦೦ ಕಿಮೀ ದೂರ ಸಮತಟ್ಟು ನೆಲದ ಮೇಲೆ ಈಗಲ್ ನಿಂತಿತು. ಅದು ನೆಲ ಮುಟ್ಟುವ ಮೊದಲು ಎದ್ದ ದೂಳು ಇಂಜಿನ್ ಕಂಪನಶಕ್ತಿಯ ಪ್ರಚೋದನೆಯಿಂದ. ಗಾಳಿಯಿಲ್ಲದ ಚಂದ್ರನಲ್ಲಿ ಬೇರೆ ಕಾರಣದಿಂದ ದೂಳು ಹಾರುವುದು ಸಾಧ್ಯವಿಲ್ಲ. ಕೊನೆಯ ೧೨ ಮಿನಿಟ್‌ಗಳು ಯಾನಿಗಳಿಗೆ ಪರಮ ಪರೀಕ್ಷೆಯ ಕಾಲ. ಅವರು ಪರಸ್ಪರ ಹಸ್ತಲಾಘವವಿತ್ತು ಅಭಿನಂದಿಸಿಕೊಂಡರು.

ದಿಟ್ಟನಿಟ್ಟ ಪುಟ್ಟ ಹೆಜ್ಜೆ

ಈಗಲ್‌ನ ಏರುಘಟ್ಟದೊಳಗೆ ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್‌ರಿನ್, ಕೂಡಲೇ ಬಾಗಿಲು ತೆರೆದು ಹೊರಬರುವಂತಿಲ್ಲ. ಒಳಗೆ ಸಂಮರ್ದವಿರುವ ಪ್ರದೇಶ; ಹೊರಗೆ ನಿರ್ವಾತ ಸಂಮರ್ದರಹಿತ ಪ್ರದೇಶ. ಆದ್ದರಿಂದ ಅತಿಯಾದ ಬಲ ಪ್ರಯೋಗ ಮಾಡಿದರೆ ಮಾತ್ರ ಬಾಗಿಲು ತೆರೆಯಬಹುದು ಅಥವಾ ಒಳಗಿನ ಸಂಮರ್ದವನ್ನು ತಗ್ಗಿಸಬೇಕು (ಸೋಡಾ ಬಾಟಲಿಯ ಗೋಲಿ ಈ ಬಾಗಿಲೆಂದೂ ಬಾಟಲಿ ಒಳಗೆ ಯಾನಿಗಳಿದ್ದಾರೆಂದೂ ಊಹಿಸಬಹುದು). ಚಂದ್ರನ ಪರಿಸರದ ಸೂಕ್ಷ್ಮ ಸಮೀಕ್ಷೆ ನಡೆಸಿ, ಅದು ಮನುಷ್ಯ ಪಾದಾರ್ಪಣೆಗೆ ಅಪಾಯರಹಿತ ಎಂದು ದೃಢವಾದ ಮೇಲೆಯೇ ಮುಂದಿನ ಹೆಜ್ಜೆ. ಅಂಥ ಹೆಜ್ಜೆ ಖಂಡಿತವಾಗಿಯೂ ಅಪಾಯ ತರಬಹುದೆಂದು ಯಾನಿಗಳು ಭಾವಿಸಿದರೆ ಅವರು ಏರುಘಟ್ಟ ಸಮೇತ ಮಾತೃ ನೌಕೆಯೆಡೆಗೆ ಜಿಗಿದು ಬಿಡಬಹುದು. ಚಂದ್ರನ ಹಗಲು ಪ್ರಾರಂಭವಾಗುವಾಗ ಇಳಿಯಬೇಕೆಂಬುದು ಇವರ ಯೋಜನೆ. ಚಂದ್ರನ ಹಗಲು ರಾತ್ರಿಗಳು ಪ್ರತಿಯೊಂದೂ ನಮ್ಮ ೧೪ ದಿವಸಗಳು. ಮೊಲ ಕುಳಿತ ಚಂದ್ರಮುಖದ ಮೇಲೆ (“ಮೊಲದ ಶಿಲ್ಪದ ಮೇಲೆ ಮಂದಿರವ ನಿಲಿಸುವನು”) ಕಾಲಿಡಲು ನಿಶ್ಚಯಿಸಿದರು.

ಜುಲೈ ೨೧, ೦೮೨೭ ಗಂಟೆ. ಈಗಲ್ ಇಳಿದು ಆರು ಗಂಟೆ ಕಳೆದಿವೆ. ಯಾನಿಗಳ ಕೋಶದೊಳಗಿನ ಸಂಮರ್ದ ತಗ್ಗಿಸಿ ಅದರ ಬಾಗಿಲು ತೆರೆದರು. ಆರ್ಮ್‌ಸ್ಟ್ರಾಂಗ್ ಹೊರಟ (ಈಗ ಬೇಕಾದದ್ದು ಲೆಗ್‌ಸ್ಟ್ರಾಂಗ್). ಇಳಿಘಟ್ಟದ ಕಾಲಿಗೆ ಜೋಡಿಸಿದ್ದ ಏಣಿಯ ಮೂಲಕ ಇತಿಹಾಸವನ್ನು ನಿರ್ಮಿಸುವ ಮಹಾಹೆಜ್ಜೆಗಳನ್ನು ಲಯಬದ್ಧವಾಗಿ ಊರಿ ಇಳಿದ. . . “ಇಟ್ಟ ಒಂದೊಂದು ಹೆಜ್ಜೆಗಳು ಸಿಂಹದಾ ಗುರುತುಗಳು.” ಎಡಗಾಲನ್ನು ಬಲು ಎಚ್ಚರದಿಂದ ಚಂದ್ರನ ನೆಲದ ಮೇಲೆ ಊರಿದ, ಭದ್ರವಾದ ಹಿಡಿತ ಇನ್ನೂ ಏಣಿಯ ಅಡ್ಡದ ಮೇಲೆಯೇ. ಚಂದ್ರನ ಮೇಲೆ ನಿಂತ, ಇತಿಹಾಸ ಬರೆದ. “ಇದು ಒಬ್ಬ ಮನುಷ್ಯನಿಗೆ ಬಲು ಪುಟ್ಟ ಹೆಜ್ಜೆ. ಆದರೆ ಮಾನವ ಜನಾಂಗಕ್ಕೆ ಹನುಮಂತ ನೆಗೆತ” ಎಂಬರ್ಥ ಬರುವ ಉದ್ಗಾರವೆತ್ತಿದ. ೧೯ ಮಿನಿಟ್‌ಗಳ ಅನಂತರ ಆಲ್ಡ್‌ರಿನ್ ಹೊರಗೆ ಬಂದು ಸಂಗಾತಿಯನ್ನು ಕೂಡಿಕೊಂಡ. ನಡೆಯುವುದನ್ನು ನಿಲ್ಲುವುದನ್ನು ಕಲಿತರು. ಕಂಗಾರುವಿನಂತೆ ಕುಪ್ಪಳಿಸುವುದು ಅನುಕೂಲ ಎಂದು ಕಂಡುಕೊಂಡರು. ವಿಧಿಸಿದ್ದ ಪರೀಕ್ಷಾ ಪ್ರಯೋಗಗಳನ್ನು ನೆರವೇರಿಸಿದರು. ಸ್ಮಾರಕಗಳನ್ನು ಸಂಗ್ರಹಿಸಿದರು. ಅವರು ಅಲ್ಲಿ ಇದ್ದದ್ದು ಎರಡೂವರೆ ಗಂಟೆ ಕಾಲ. ಅವರ ಸಾಹಸಗಳನ್ನು ಟೆಲಿವಿಷನ್ ಮೂಲಕ ಪ್ರಪಂಚವೇ ನೋಡಿ ಸ್ವತಃ ಈ ವಿದ್ಯುದಾಲಿಂಗನ ಸುಖದಲ್ಲಿ ಭಾಗಿಯಾಗಿದ್ದಾಗ ಒಂದು ಆಕಾಶವಾಣಿ ಮಿಡಿಯಿತು “ಊಟದ ವೇಳೆ ಯಾವಾಗ ಎಂದು ನನಗೆ ತಿಳಿಸುವಿರಾ?” ತನ್ನ ಏಕಾಂತ ಕಕ್ಷೆಯಲ್ಲಿ ಗುರುತರ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ, ಎಲ್ಲರೂ ಮರೆತಿದ್ದ, ಚಂದ್ರನ ಸಮೀಪವಿದ್ದರೂ ಸಹ ಯಾನಿಗಳ ಸಾಹಸ ಕಾಣಲಾಗದಿದ್ದ ಕಾಲಿನ್ಸನ ಮಾತದು.

ನಾಯಕ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಒಂದು ಫಲಕವನ್ನು ಅನಾವರಣ ಮಾಡಿದ. “ಇಲ್ಲಿ ಭೂಮಿಗ್ರಹದಿಂದ ಬಂದ ಮನುಷ್ಯರು ಮೊದಲು ಕಾಲಿಟ್ಟರು, ಜುಲೈ ೧೯೬೯ ಕ್ರಿಸ್ತಶಕ. ನಾವು ಮಾನವ ಜನಾಂಗದ ಕಲ್ಯಾಣಕ್ಕಾಗಿ ಬಂದೆವು” ಎಂದು ಅದರ ಮೇಲೆ (ಇಂಗ್ಲಿಷ್ ಭಾಶೆಯಲ್ಲಿ) ಬರೆದಿತ್ತು. ಅಮೆರಿಕಾ ರಾಷ್ಟ್ರಧ್ವಜವನ್ನು ‘ಹಾರಿಸಿದರು’ (ಗಾಳಿಯಿಲ್ಲವಷ್ಟೆ). ಅವರು ಹೇಗೆ ಮಾತಾಡಿದರು? ಚಂದ್ರನಲ್ಲಿ ಹಗುರವಾಗಿದ್ದ ಆಕಾಶ ಉಡುಪಿನೊಳಗೆ ಪ್ರತಿಯೊಬ್ಬನ ವಾಸ. ಅದರ ಸಮೇತ ಅವನ ಚಲನೆ. ಮಾತಾಡಿದ್ದು ಆ ಕ್ಷಣವೇ ರೇಡಿಯೋ ತರಂಗಗಳಾಗಿ ಪ್ರಸಾರಗೊಂಡು ಇನ್ನೊಬ್ಬನಿಗೂ ಭೂಮಿಗೂ ರೇಡಿಯೋ ಮೂಲಕ ಕೇಳಬೇಕು. ಅಷ್ಟು ಹತ್ತಿರ ಆದರೂ ನೇರವಾಗಿ ಮಾತು ಕೇಳುವಂತಿಲ್ಲ! “ನಡೆಯಲು ಕಷ್ಟವೇನೂ ಆದಂತಿಲ್ಲ. ಇಳಿಘಟ್ಟ ಕಾಲೂರಿರುವಲ್ಲಿ ಗುಂಡಿ ಆಗಿಲ್ಲ. ನಾವಿಲ್ಲಿ ಸಮತಟ್ಟು ಪ್ರದೇಶದಲ್ಲಿದ್ದೇವೆ. ಎಲ್ಲೆಮ್‌ನ ನೆರಳಲ್ಲಿ ಮಸಿಗತ್ತಲೆ. ನಾನೆಲ್ಲಿ ಕಾಲಿಡುತ್ತಿದ್ದೇನೆ ಎಂದೇ ತಿಳಿಯುತ್ತಿಲ್ಲ. ಆದರೆ ಕತ್ತೆತ್ತಿ ಮೇಲೆ ನೋಡಿದರೆ ಎಲ್ಲವೂ ಸ್ಪಷ್ಟ. ನೆಲ ನುಣುಪು ಮೆತ್ತಗೆ. ಬೂಟಿಗೆ ಮಣ್ಣು ಹುಡಿ ಮೆತ್ತಿಕೊಳ್ಳುತ್ತದೆ. ನಾನೇನು ಇದರಲ್ಲಿ ಹುಗಿದು ಹೋಗುತ್ತಿಲ್ಲ. ನೆಲ ಅಗೆದರೆ ಗಟ್ಟಿ ತಳ ಇದೆ. ಇಲ್ಲಿ ಕುಪ್ಪಳಿಸುವುದು ಬಲು ಸುಲಭ. ಕಲ್ಲುಗಳು ಹುಡಿಯಿಂದ ಲೇಪನಗೊಂಡಂತಿವೆ. ಬಲು ಜಾರಿಕೆ. ಬಗ್ಗಿ ಕಲ್ಲು ತುಂಡು ಎತ್ತುವುದು ಬಲು ಪ್ರಯಾಸಕರ. ಇಲ್ಲಿ ಹಗಲು. ಆದರೂ ಕಾಣುವಿಕೆ ಅಸ್ಪಷ್ಟ. ಸಮೀಪದಲ್ಲಿ ಚಂದ್ರನ ದಿಗಂತ ಆ ಕಡೆಯನ್ನು ಮರೆಮಾಡುತ್ತಿದೆ. ಇದೊಂದು ಮರುಭೂಮಿ. ಮಹೋಜ್ವಲ ಶೂನ್ಯ” ಇದು ಚಂದ್ರನ ಮೆಲೆ ನಡೆಯುತ್ತ ಅವರಾಡಿದ ಮಾತು. ಅವರು ನಡೆದಲ್ಲೆಲ್ಲಾ ಬೂಟು ಗುರುತುಗಳು ಸ್ಪಷ್ಟವಾಗಿ ಮೂಡಿದುವು.

“ನಾವಿಲ್ಲಿ ತುಂಬ ಸಂತೋಷದಲ್ಲಿದ್ದೇವೆ. ಆದರೆ ನಿಶ್ಚಿತ ವೇಳೆಗಿಂತ ೩೯ ಸೆಕೆಂಡ್ ತಡವಾಗಿ ಇಳಿದು ತಪ್ಪು ಮಾಡಿದ್ದೇವೆ, ಕ್ಷಮಿಸಬೇಕು.” ಆ ದೂರದಲ್ಲಿಯೂ ಪ್ರಥಮದಲ್ಲಿ ಕಾಲಪ್ರಜ್ಞೆ, ಅಷ್ಟು ನಿಖರ. ಹೂಸ್ಟನ್ ಈ ತಪ್ಪೊಪ್ಪಿಗೆಗೆ ಉತ್ತರ ನೀಡಿತು “ಕ್ಷಮಾಯಾಚನೆ ಬೇಡ. ನೀವು ಅದ್ಭುತ ಕಾರ್ಯವೆಸಗಿದ್ದೀರಿ. ಶಾಭಾಸ್!” ಅವರು ಚಂದ್ರನ ಮೇಲೆ ಇದ್ದ ಪ್ರತಿ ಮಿನಿಟಿನ ಖರ್ಚು ಸುಮಾರು ೧೧೨.೫ ಕೋಟಿ ರೂಪಾಯಿ.

ಧರೆಗೆ ಮರಳಿದ ಕತೆ

ಜುಲೈ ೨೧, ೧೦೨೩ ಗಂಟೆ. ಏರು ಘಟ್ಟ ಪ್ರವೇಶಿಸಲು ಯಾನಿಗಳಿಗೆ ಹೂಸ್ಟನ್ ಆಜ್ಞೆ ನೀಡಿತು. ಇನ್ನು ಹೆಚ್ಚು ಕಾಲ ಆಕಾಶ ಉಡುಪಿನೊಳಗೆ ಇರುವುದು ಹಿತಕರವಲ್ಲ, ಅಲ್ಲಿನ ಜೀವಾಧಾರಕ ವಾಯು, ಪರಿಸ್ಥಿತಿ ತಾಳಲಾರವು. ಯಾನಿಗಳು ಚಂದ್ರನ ನೆಲದಿಂದ ಸಂಗ್ರಹಿಸಿದ ವಸ್ತುಗಳ ಸಮೇತ ಏರುಘಟ್ಟ ಸೇರಿದರು. ಚಂದ್ರ ಕಕ್ಷೆಯಲ್ಲಿರುವ ಕೊಲಂಬಿಯಾವನ್ನು ಅವರು ಒಂದುಗೂಡಬೇಕು. ಇದು ಇನ್ನೊಂದು ಮಹಾ ಅಂತರಿಕ್ಷ ವಿನ್ಯಾಸ. ೧೭೫೩ ಗಂಟೆ, ಏರುಘಟ್ಟದ ರಾಕೆಟ್‌ಗಳು ಉರಿದುವು. ಇಳಿಘಟ್ಟ ಉಡಾವಣಾ ಪೀಠವಾಗಿ ಇದು ಮೇಲೇರಿತು. ೧೭ ಕಿಮೀನಿಂದ ೫೪ ಕಿಮೀವರೆಗಿನ ದೀರ್ಘವೃತ್ತ ಕಕ್ಷೆಯಲ್ಲಿ ಪರಿಭ್ರಮಿಸತೊಡಗಿತು. ಇನ್ನೊಂದು ಸಲ ರಾಕೆಟ್ ಸ್ಫೋಟನ. ಏರುಘಟ್ಟದ ಕಕ್ಷೆ ಕೊಲಂಬಿಯಾದ ಕಕ್ಷೆ ಎರಡೂ ಒಂದಾದುವು, ಒಂದರ ಹಿಂದೆ ಇನ್ನೊಂದು ಎರಡೂ ಚಂದ್ರನನ್ನು ಪರಿಭ್ರಮಿಸತೊಡಗಿದ್ದುವು – ಕೊಲಂಬಿಯಾ ಮುಂದೆ, ಏರುಘಟ್ಟ ಹಿಂದೆ. ಬುದ್ಧಿವಂತ ಎಸ್ಸೆಮ್ – ಸಿಎಮ್ ಕ್ರಮದಲ್ಲಿ, ಸುರಂಗದ್ವಾರ ಮುಮ್ಮೊಗವಾಗಿ. ಮುಂದಿನ ವಾಹನದಲ್ಲಿ ಕಾಲಿನ್ಸ್ ಇದ್ದಾನೆ; ಹಿಂದಿನ ವಾಹನದಲ್ಲಿ ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಇದ್ದಾರೆ. ಎರಡು ವಾಹನಗಳ ಯಾನಿಗಳೂ, ವಿಶೇಷವಾಗಿ ಕಾಲಿನ್ಸ್, ಬಹಳ ಪರಿಶ್ರಮಿಸಿ ಅವು ಸುರಂಗದ್ವಾರದಲ್ಲಿ ಒಂದುಗೂಡುವಂತೆ ಮಾಡಿದರು. ಈ ವಿನ್ಯಾಸ ಕಾಲದಲ್ಲಿ ಯಾನಿಗಳಿಗೆ ದುರ್ಧರ ಪ್ರಸಂಗಗಳೆದುರಾದುವು. ಒಂದು ಸಲ ಏರುಘಟ್ಟ ಅನಿರೀಕ್ಷಿತವಾಗಿ ಕಂಪಿಸಲರಾಂಭಿಸಿತು. ಸತ್ತ್ವ ಪರೀಕ್ಷೆಯಲ್ಲಿ ಯಶಸ್ವಿಗಳಾದರು. ಇನ್ನು ಏರುಘಟ್ಟ ಅನಾವಶ್ಯಕವಾದ ಹೊರೆ. ಅದರ ಬಿಡುಗಡೆಯಾದೊಡನೆ ಅದು ಚಂದ್ರ ಕಕ್ಷೆಯಲ್ಲಿ ಪ್ರತ್ಯೇಕವಾಗಿ ಸುತ್ತುತ್ತಿದ್ದು ಕ್ರಮೇಣ ಚಂದ್ರತಲಕ್ಕೆ ಕೆಡೆದು ಬಿತ್ತು.

ಜುಲೈ ೨೨, ೦೩೦೨ ಗಂಟೆ. ಮೂವರು ಯಾನಿಗಳು ಭೂಮಿಯೆಡೆಗೆ ವಾಹನವನ್ನು ತಿರುಗಿಸಬೇಕು. ಈ ವಿನ್ಯಾಸ ಇನ್ನೊಂದು ಮಹತ್ತರವಾದದ್ದು. ನೌಕೆಯ ಈಗಿನ ವೇಗ ಗಂಟೆಗೆ ೫೮೦೦ ಕಿಮೀ. ಅದನ್ನು ಗಂಟೆಗೆ ೮೮೫೦ಕ್ಕೆ ಏರಿಸಿ ಗುರಿ ಬದಲಾಯಿಸಿದರೆ ಮುಂದೆ ಭೂಮ್ಯಭಿಮುಖ ಸುದೀರ್ಘಪಥ. ೧೦೨೭ ಗಂಟೆಗೆ ಎಸ್ಸೆಮ್‌ನ ಮೈಗೆ ಸುತ್ತಲೂ ಜೋಡಿಸಿರುವ ರಾಕೆಟ್ ಗಳನ್ನು ಚಲನೆಯ ವಿರುದ್ಧ ದಿಕ್ಕಿನಲ್ಲಿ ಆಸ್ಪೋಟಿಸಿದಾಗ ಈ ವಿನ್ಯಾಸವೂ ಯಶಸ್ಸು ಪಡೆಯಿತು. ಈಗ ಚಂದ್ರಪ್ರಭಾವದಿಂದ ಬಿಡಿಸಿಕೊಂಡ ನೌಕೆ ಭೂಮಿಯೆಡೆಗೆ ಪ್ರಯಾಣ ಆರಂಭಿಸಿದೆ. ಭೂಮಿಯ ಆಕರ್ಷಣೆಯಿಂದ ವೇಗ ಕ್ಷಣ ಕ್ಷಣ ಏರುತ್ತಿತ್ತು. ಕೊನೆಯ ಅಂತರಿಕ್ಷ ವಿನ್ಯಾಸ ವಾಯುಮಂಡಲ ಸ್ಪರ್ಶಿಸುವ ಮುನ್ನ ಸುಮಾರು ೧೨೨ ಕಿಮೀ ಎತ್ತರದಲ್ಲಿ, ಗಂಟೆಗೆ ೩೯,೨೬೦ ಕಿಮೀ ವೇಗದಲ್ಲಿ ಬಂದ ನೌಕೆ ೬೪ ಕಿಮೀ ಅಗಲದ (ಆ ವೇಗ ಆ ಎತ್ತರದಲ್ಲಿ ಒಂಟೆಯನ್ನು ಸೂಜಿ ಕಣ್ಣಿನಲ್ಲಿ ತೂರಿಸಿದಂಥ ಸಮಸ್ಯೆ) ಕಿಂಡಿಯನ್ನು ನಿರ್ದಿಷ್ಟ ಮರುಪ್ರವೇಶ ಕೋನದಲ್ಲಿ ಪ್ರವೇಶಿಸಬೇಕು. ಎಸ್ಸೆಮ್‌ನ ಸ್ವಯಂಚಾಲಿತ ಸಂಪರ್ಕ ವ್ಯವಸ್ಥೆ ಈ ವಿನ್ಯಾಸವನ್ನು ಬಲು ಯಶಸ್ವಿಯಾಗಿ ನಿರ್ವಹಿಸಿತು. ಆ ಕ್ಷಣದಿಂದ ಅನಗತ್ಯವಾದ ಅದುವರೆಗೆ ಬಹೂಪಯೋಗಿಯಾಗಿ ಯಾನಿಗಳ ಒಡನಾಡಿಯಾಗಿದ್ದ ಎಸ್ಸೆಮ್‌ನ್ನು ಸಿಎಮ್ಮಿನಿಂದ ಬೇರ್ಪಡಿಸಿ ಬಿಡುಗಡೆ ಮಾಡಿದರು. ಎಸ್ಸೆಮ್ ಆಕಾಶದಲ್ಲಿ ಹೇಳಹೆಸರಿಲ್ಲದೆ ಮರೆಯಾಯಿತು. ಸಿಎಮ್‌ನ ಚಪ್ಪಟೆ ಭಾಗ ಮುಂದಾಗಿ ಧಾವಿಸಿತು. ಸಾಧಿಸಿದ ಮರುಪ್ರವೇಶಕೋನ ೬.೪೩ ಡಿಗ್ರಿ. ಸಿಎಮ್ಮಿನ ಹೊರಮೈ ಉಷ್ಣತೆ ೨೬೬೦ ಡಿಗ್ರಿ ಸಿ ಗೆ ಏರಿತು. ಅದು ಧಾವಿಸಿದ ದಾರಿ ಕೆಂಡಲೇಪಿಸಿದ ಹಾದಿಯಂತೆ ಕಂಡಿತು. ಯುಕ್ತವೇಳೆಯಲ್ಲಿ ಅದರ ಹಿಂಭಾಗದಿಂದ (ಚೂಪು ಭಾಗ, ಸುರಂಗದ್ವಾರ) ಪ್ಯಾರಚೂಟ್‌ಗಳು ಬಿಡಿಸಿಕೊಂಡು ಸಿಎಮ್ಮಿನ ವೇಗವನ್ನು ಬಲುಮಟ್ಟಿಗೆ ತಗ್ಗಿಸಿದುವು.

ಜುಲೈ ೨೪, ೨೨೨೦ ಗಂಟೆಗೆ ಪೆಸಿಫಿಕ್ ಸಾಗರದ ನಿಶ್ಚಿತ ಪ್ರದೇಶದಲ್ಲಿ ಸಿಎಂ ಬಂದು ಅಪ್ಪಳಿಸಿತು. ಹೊರಟ ಭಾರ ೩೦೦೦೦ ಟನ್. ಬಂದ ಭಾರ ೫.೫ ಟನ್. ಆದರೆ ತಂದ ಅಮೂಲ್ಯ ವಸ್ತುಗಳು, ಗಳಿಸಿದ ಅಪಾರ ಅನುಭವ ಸಾಧಿಸಿದ ಮಹಾವಿಜಯ ಇವುಗಳಿಗೆ ಭಾರವುಂಟೇ? ಬೆಲೆಯುಂಟೇ?

(ಮುಂದುವರಿಯಲಿದೆ)