ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು ಉದುರಲಿಲ್ಲ, ಮರವೇ ಬಿದ್ದುಹೋಯ್ತು! ಈ ಬಾರಿ ಅದೇ ನಿರ್ದೇಶನದಲ್ಲಿ (ಸಿ ಬಸವಲಿಂಗಯ್ಯ) ಬೆಂಗಳೂರಿನಲ್ಲಿ ಹೊಸತೇ ತಯಾರಿ ಮತ್ತು ಪ್ರದರ್ಶನ ಸುರುವಾದಾಗ ನನಗೆ ಅಳಿದ ಮರದ ಬೇರಿನಲ್ಲಿ ಚಿಗುರು ಬಂದಂತಾಯ್ತು. ಪ್ರಚಾರಗಳಲ್ಲಿ ಮೇ ತಿಂಗಳ ಕೊನೆಯವರೆಗೆ ಪ್ರತಿ ಮಂಗಳ, ಗುರು, ಶನಿ ಮತ್ತು ಆದಿತ್ಯವಾರಗಳಂದು ಪ್ರದರ್ಶನ ಎಂದೇ ಇತ್ತು. ಆ ಲೆಕ್ಕದಲ್ಲಿ ೧೪ರ ಮಂಗಳವಾರ ರಾತ್ರಿಯ ಪ್ರದರ್ಶನಕ್ಕೆ ಸಮಯ ಹೊಂದಿಸಿಕೊಂಡಿದ್ದೆ. ಅಂತರ್ಜಾಲದಲ್ಲಿ ಟಿಕೆಟ್ ಕಾದಿರಿಸುವಾಗಲೇ ತಿಳಿದದ್ದು – ಯಾಕೋ ಮಂಗಳವಾರ ರದ್ದುಪಡಿಸಿ, ಬುಧವಾರಕ್ಕಿಟ್ಟುಕೊಂಡಿದ್ದರು!) ಲೆಕ್ಕಾಚಾರ ಹಾಕಿ ಬೆಂಗಳೂರಿಸಿದ್ದರೂ ಹೆಚ್ಚಿನ ದಿನ ಹೊಂದಿಸಿಕೊಂಡು ಇಂದು (ಮೇ ೧೫, ೨೦೧೩ರ ರಾತ್ರಿ) ನೋಡಿ ಬಂದೆ. ಕುವೆಂಪು ಅವರ ಮಹಾಕಾದಂಬರಿ ತೆರೆದಿಡುವ ಮಲೆನಾಡಿನ ಹಳ್ಳಿಮೂಲೆಯನ್ನು ಸಣ್ಣದಾಗಿಯಾದರೂ ದೃಶ್ಯದ ಭಾಗವಾಗಿಸುವಂತೆ ಕಲಾಗ್ರಾಮದ ವಠಾರದೊಳಗೆ ಬಂದಿರುವ ಪುನಾರಚನೆಗಳು ನಿತ್ಯ ನಾಟಕಗಳಲ್ಲಿ ಖಂಡಿತಕ್ಕೂ ಅಲಭ್ಯ. ಅವನ್ನು ಪ್ರದರ್ಶನದಲ್ಲಿ ಸಾರ್ಥಕಗೊಳಿಸುವಂತೆ ಸಜ್ಜುಗೊಂಡ ದೀಪ, ಧ್ವನಿವರ್ಧಕ, ಹಿಮ್ಮೇಳ, ಹರಿದು ಬಂದ ನಟಸಮೂಹ (ಎಲ್ಲಕ್ಕೂ ಮಿಗಿಲಾಗಿ ವಿವಿಧ ಮಾಧ್ಯಮಗಳಲ್ಲಿನ ಪ್ರಚಾರ) ನನ್ನ ನೀರೀಕ್ಷೆಯನ್ನು ತುಂಬ ಎತ್ತರದಲ್ಲೇ ಇಟ್ಟಿತ್ತು.

ಆದರೆ ನಾಲ್ಕು ರಂಗ (ಕೆರೆಯಂಗಳ, ಬಯಲುರಂಗ, ಬಿದಿರುಮೆಳೆ ರಂಗ, ಹೊಂಗೆರಂಗ) ಸುತ್ತಿ, ಒಂಬತ್ತು ಗಂಟೆಗಳನ್ನೇ ಕಳೆದ ಮೇಲೆ ಪ್ರದರ್ಶನ ಮಹಾನ್ ಕೃತಿಯ ಪೇಲವ ಅನುಕರಣದ ಮಟ್ಟದಲ್ಲೇ ಉಳಿಯಿತು ಎನ್ನಲು ನಿಜಕ್ಕೂ ವಿಷಾದವಾಗುತ್ತದೆ. ಕಾದಂಬರಿಯ ವಿಸ್ತಾರವನ್ನು ದುಡಿಸಿಕೊಳ್ಳುವಲ್ಲಿ ಪ್ರದರ್ಶನ ತುಂಬಿ ಬರಲೇ ಇಲ್ಲ. ಸಂಭಾಷಣೆಗಳು, ಕಲಾಪಗಳು ಕಥಾ ಮುಂದುವರಿಕೆಯ ಅಗತ್ಯಕ್ಕಷ್ಟೇ ಪ್ರಸ್ತುತಿಗೊಳ್ಳುತ್ತಿತ್ತು, ಪ್ರೇಕ್ಷಕರನ್ನು ನಂಬಿಸಬೇಕಾದ ಒಟ್ಟು ಪರಿಸರದ ಅಭಿವ್ಯಕ್ತಿಯಾಗಿ ಮೂಡಲಿಲ್ಲ. ಕೆರೆ, ಕೆರೆಯೇರಿ, ಬಿದಿರ ಸೇತುವೆ, ಅಟ್ಟಳಿಗೆ, ಜೋಪಡಿಗಳು, ಮನೆಗಳು, ತೋಟ, ಕಾಡು, ವಿವಿಧ ಸ್ತರಗಳ ನೆಲಗಳೆಲ್ಲ ನಾಟಕದ ಕಲ್ಪಕತೆಯನ್ನು ದುರ್ಬಲಗೊಳಿಸಿತು, ವಾಸ್ತವದ ಅನುಭವಕ್ಕೆ ದಕ್ಕದಾಯಿತು; ಪ್ರದರ್ಶನ ಅವನ್ನು ಜೀರ್ಣಿಸಿಕೊಳ್ಳಲೇ ಇಲ್ಲ. (ಯಕ್ಷಗಾನರಂಗದಲ್ಲಿ ಹಂದಿಮರಿ ತಂದದ್ದನ್ನು ಆಕ್ಷೇಪಿಸಿ ನಿಜದ ಆನೆ ತಂದು ಸಮರ್ಥಿಸಿಕೊಂಡ ಹಾಗಾಯ್ತು.) ಇಂಥವ್ಯಾವವೂ ಇಲ್ಲದ ಇತರ ಪ್ರಯೋಗಶೀಲ ನಾಟಕಗಳನ್ನು ಮೀರಿದ ಅನುಭವವನ್ನು ಮಮಮಗಳು ನಾಟಕ ಕಟ್ಟಿ ಕೊಡಲಿಲ್ಲ.

ಹಿಮ್ಮೇಳದ ಧ್ವನಿಗಳಲ್ಲಿ ಬಹುತೇಕ ಸ್ಪಷ್ಟ ಗಾಯನಗಳೆಲ್ಲ ಮಧುರವಾಗೇನೋ ಇತ್ತು. ಆದರೆ ಅವು ಧ್ವನಿಮುದ್ರಿತವೂ ಸಿನಿಮೀಯವೂ ಆಗಿ ಪ್ರದರ್ಶನದ ಸ್ತರಕ್ಕೆ ಹೊಂದಲಿಲ್ಲ. ಮರ, ಕೆರೆ, ತಗ್ಗು, ದಿಣ್ಣೆ ಮತ್ತು ವೇಷಭೂಷಣ, ಸಂಭಾಷಣೆಗಳನ್ನೆಲ್ಲ ಮೂಲಕ್ಕೆ ನಿಷ್ಠವಾಗಿ (ವಾಸ್ತವಿಕವಾಗುವಂತೆ) ಮಾಡಲು ಯತ್ನಿಸಿದವರು ಶಬ್ದ-ವಾತಾವರಣವನ್ನು ಕಟ್ಟುವಲ್ಲಿ ಖಚಿತವಿಲ್ಲದ್ದು ಆಶ್ಚರ್ಯವಾಯ್ತು. ಇದಕ್ಕೆ ಸಜೀವ ಹಿಮ್ಮೇಳವನ್ನು ಮರೆಸಿ ಮೆರೆದ ಈ ಹಾಡುಗಳು ದೊಡ್ಡ ಸಾಕ್ಷಿ. ಸಜೀವ ಹಿಮ್ಮೇಳವೂ ದೃಶ್ಯ ಬದಲಾವಣೆಯನ್ನು ಸಾರಿದಷ್ಟು ಶಕ್ತವಾಗಿ, ನಾಟಕದ ನಡೆಗೆ ಬಲ ಕೊಡಲಿಲ್ಲ. ಆಗೊಮ್ಮೆ ಈಗೊಮ್ಮೆ ಜೀರುಂಡೆ, ನೀರಹರಿವಿನ ಸದ್ದು, ಹಕ್ಕಿಗಳುಲಿ, ನಾಯಿಯ ಬೊಗಳು (ಎಲ್ಲ ಧ್ವನಿಮುದ್ರಿಕೆಗಳೇ) ಸರಿಯಾಗಿಯೇ ಕೇಳಿಸಿದರೂ ಪರಿಣಾಮ ಗಾಢವಾಗುವಷ್ಟು ಪ್ರಕಟವಾಗಲಿಲ್ಲ. ಮೂಲ ಕೃತಿ ಹಾಗೂ ಪಾತ್ರಗಳ ಮಾತಿನಲ್ಲಿ ಅಷ್ಟೆಲ್ಲಾ ಉಲ್ಲೇಖಗಳಿರುವ ಮಲೆನಾಡಿನ ಗಾಳಿ ಮಳೆಯ ಪರಿಣಾಮವನ್ನು ಕನಿಷ್ಠ ಸದ್ದಿನಲ್ಲಾದರೂ ಕಟ್ಟಿಕೊಡಲಾಗದಿದ್ದುದಂತೂ ಎದ್ದು ಕಾಣುವ ಕೊರತೆ. ಹೊರಾಂಗಣ ಮತ್ತು ರಂಗಸಜ್ಜಿಕೆಗಳ ಸಾಕಷ್ಟು ಮರೆಮುಸುಕಿನ ಅನುಕೂಲವಿದ್ದಾಗ ಕೃತಕ ಮಳೆಗಾಳಿಯನ್ನು ತರುವುದು ಕಷ್ಟವಾಗಬಾರದಿತ್ತು. ಪ್ರದರ್ಶನಾವಧಿಯ ಉದ್ದ ಮತ್ತು ನಟನೆಯ ಸೌಲಭ್ಯಕ್ಕೆಂದು ನಿಜ ನೀರು ಬಳಕೆಗೆ ರಿಯಾಯಿತಿ ಇರಲಿ. ಆದರೆ ಧ್ವನಿ ಪರಿಣಾಮದಲ್ಲಾದರೂ ಅದನ್ನು ಬಿಂಬಿಸಬೇಕಿತ್ತು. ಇಲ್ಲಿ ಸದಾನಂದ ಸುವರ್ಣರ ನಿರ್ದೇಶನದ ‘ಮಳೆನಿಲ್ಲುವವರೆಗೆ’ ನಾಟಕದ ಹೋಲಿಕೆ ಕೊಡದಿರಲಾರೆ. ಆ ನಾಟಕ ಮುಗಿಯುವಾಗ ಕೇವಲ ಹಿನ್ನೆಲೆಯ ಧ್ವನಿ – ಭೋರ್ಗರೆವ ಗಾಳಿ ಮತ್ತು ಅಲೆಯಲೆಯಾಗಿ ಅಪ್ಪಳಿಸುವ ಮಳೆಯ ಸದ್ದು, ಪರಿಣಾಮದಲ್ಲಿ ಪ್ರೇಕ್ಷಕರಿಗೆ ಮಂಗಳೂರಿನ ನೈಜ ಸೆಕೆಯಲ್ಲೂ ಚಳಿ ಹಿಡಿಸಿಬಿಟ್ಟಿತ್ತು!

ಕಥಾನಕಕ್ಕೆ ಪರೋಕ್ಷ ಪರಿಣಾಮಗಳನ್ನು ದಟ್ಟವಾಗಿ ಕಟ್ಟಿಕೊಡುವ ಹಲವು ಸೌಕರ್ಯಗಳನ್ನು ಪ್ರಯೋಗ ದುರ್ಬಲವಾಗಿಯೇ ಬಳಸಿಕೊಂಡಿತು. ಸಾಮಾನ್ಯವಾಗಿ ರಂಗದ ಗಾತ್ರದಲ್ಲಿ ಪ್ರೇಕ್ಷಕನಿಗೆ ಅಗೋಚರವಾಗಿಯೇ ಉಳಿಯುವ ಜಿಗಣೆಯ ಬಗ್ಗೆ ನಾಯಿ – ಹುಲಿಯ, ಮತ್ತು ಗುತ್ತಿಯ ನಟನೆ ಕಟ್ಟಿಕೊಟ್ಟ ಪರಿಣಾಮವನ್ನು ಗೂಳಿ ಗಾತ್ರದ ಜಿಗಣೆಯ ಪ್ರತಿರೂಪ ಹೊಡೆದು ಹಾಕಿತು. ನಿಜ ಜಿಗಣೆ ಕಂಡವರಿಗೆ ಈ ಕೆಂಪು ಬಣ್ಣದ, ಬಲು ವಿಸ್ತೃತರೂಪ ನಗೆಯ ವಸ್ತುವಾದರೆ, ಉಳಿದವರಿಗೆ ಭಾವಸ್ಫುರಿಸದ ನಿಗೂಢ ಸಂಕೇತ! ಸೆಗಣಿ ಹುಳುಗಳೂ ಇನ್ನೊಂದು ವ್ಯರ್ಥ ಕಸರತ್ತು. ನಾಯಿ ಪಾತ್ರ ಇದ್ದುದರಲ್ಲಿ ಸಮರ್ಥವಾಗಿ ದುಡಿಯಿತು. ಹಂದಿ, ಹುಲಿ ಅಡ್ಡಿಯಿಲ್ಲ. ಸಾಬ್ರಕುದುರೆ ತೀರಾ ಕಳಪೆ. ಬಂಗಾಳದ ಛಾವ್ ನೃತ್ಯನಾಟಕದ ಪ್ರಭಾವದಲ್ಲಿ ಕೇವಲ ವಿದ್ಯಾಸಂಸ್ಥೆಗಳ ನಾಟಕ ಸಂಘಗಳೂ ಇಂದು ಸಿಂಹ, ಕರಡಿಗಳ ಅದ್ಭುತ ಪ್ರತಿರೂಪ, ನೃತ್ಯಾಭಿನಯಗಳನ್ನು ರಂಗದ ಮೇಲೆ ತರುತ್ತಿರುವಾಗ ಇಲ್ಲಿನ ಸಾಬ್ರಕುದುರೆ ನೋಟದಲ್ಲೂ ಕ್ರಿಯೆಯಲ್ಲೂ ಸೋತಿತು. ಉಕ್ಕುಸೊಕ್ಕಿನ ತುಂಗೆಯನ್ನು ದೋಣಿ ಹಾಯುವಲ್ಲಿ ಹುಲಿಯ ಕೊಚ್ಚಿ ಹೋಗುವ ಸನ್ನಿವೇಶ ಕೇವಲ ಗುತ್ತಿಯ ಅಪಲಾಪದಲ್ಲಿ ಸಂದುಹೋದದ್ದು ಇನ್ನೊಂದು ದೊಡ್ಡ ಸೋಲು. ಇಲ್ಲಿ, ಜೀವನ್ರಾಂ ಸುಳ್ಯರ ನಿರ್ದೇಶನದ ‘ಧಾಂಧೂಂ ಸುಂಟರಗಾಳಿ’ ಯಾರನ್ನೂ ಕಾಡದಿರದು. ಅವರು ಮಂಗಳೂರ ಡಾನ್‌ಬಾಸ್ಕೋ ಹಾಲಿನ ಕಿಷ್ಕಿಂಧೆಯಲ್ಲೂ ಒಂದು ಹಡಗೇ ಪ್ರಕ್ಷುಬ್ದ ಸಾಗರದಲ್ಲಿ ಮೆರೆಯುವ, ನರಳುವ, ಒಡೆದು ಮುಳುಗುವ ಪರಮಾದ್ಭುತ ದೃಶ್ಯ ಕಟ್ಟಿಕೊಟ್ಟಿದ್ದರು.

ಮೊನ್ನೆಯಷ್ಟೆ ‘ಡಾಗ್‌ವಿಲ್ಲೆ’ ಎಂಬೊಂದು ಸಿನಿಮಾ ನೋಡಿದೆ. ಅದು ಕೇವಲ ಗೀಟು ಹಾಕಿ ಗೋಡೆಗಳನ್ನು ಸೂಚಿಸುವ ಪಕ್ಕಾ ನಾಟಕರಂಗದ ಮಿತಿಯನ್ನು ಉದ್ದೇಶಪೂರ್ವಕವಾಗಿ ಹೇರಿಕೊಂಡ ಒಂದು ಕಥಾಚಿತ್ರ. ಡಾಗ್‌ವಿಲ್ಲೆ ಎಂಬ ಬಡ ಹಳ್ಳಿಮೂಲೆಯ ಏಳೆಂಟು ವಠಾರ, ಕುಟುಂಬಗಳು, ಜೀವನಾಸಕ್ತಿಗಳು, ಚಟುವಟಿಕೆಗಳೆಲ್ಲ ಸದಾ ಪ್ರೇಕ್ಷಕನ ಒಂದೇ ನೋಟಕ್ಕೆ ದಕ್ಕುವಂತೆಯೇ ನಡೆಯುತ್ತದೆ. ಸಿನಿಮಾಶಕ್ತಿ ಬಿಟ್ಟು ನಾಟಕರಂಗದ ಸಾಧ್ಯತೆಗಳನ್ನೂ ಈ ಚಿತ್ರ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದಿಲ್ಲ. ಪೀಠಿಕೆ ಮತ್ತು ಒಂಬತ್ತು ಅಧ್ಯಾಯಗಳು ಎಂದೇ ಸರಳವಾಗಿ ವಿಂಗಡಿಸಿಕೊಂಡು, ಅಷ್ಟೇ ಸರಳ ನಿರೂಪಣೆಯೊಡನೆ ಸಿನಿಮಾ ನಡೆಯುತ್ತದೆ. ನಾವು ಗಮನಿಸಬೇಕಾದ ಚಟುವಟಿಕಾ ಕೇಂದ್ರಗಳಲ್ಲಿ ಬೆಳಕು ಉಜ್ವಲಗೊಳ್ಳುತ್ತಾ ಉಳಿದಂತೆ ಮಂಕಾಗುತ್ತ ಇಡಿಯ ಸಿನಿಮಾ ಬಿತ್ತರಗೊಳ್ಳುತ್ತದೆ. ಓರ್ವ ಮಾಫಿಯಾ ದೊರೆ ಮತ್ತು ಆತನ ಮಗಳ ನಡುವೆ ಬರುವ ಬಹಳ ಸೂಕ್ಷ್ಮ ಮನುಷ್ಯ ಭಾವವೊಂದನ್ನು ಶೋಧಿಸುವಲ್ಲಿ ಈ ಹಳ್ಳಿ ಆಕಸ್ಮಿಕವಾಗಿ ತೊಡಗಿಕೊಳ್ಳುತ್ತದೆ. ಸತ್ಯದ ಅರಿವಿನೊಡನೆ ಹಳ್ಳಿ ಒಂದು ಯಃಕಶ್ಚಿತ್ ಉದಾಹರಣೆಯಂತೆ ಅಳಿಸಿಯೂ ಹೋಗುತ್ತದೆ. ಹೀಗೆ ಸರ್ವಶಕ್ತ ಮಾಧ್ಯಮವಾದ ಸಿನಿಮಾ ವಾಸ್ತವದ ಸೌಕರ್ಯಗಳನ್ನು ನಿರಾಕರಿಸಿ ಯಶಸ್ವೀ ಅಭಿವ್ಯಕ್ತಿ ಕೊಡುವುದು ಸಾಧ್ಯವಾದಾಗ, ನಾಟಕದ ಮಿತಿಗೆ ಹೆಚ್ಚೇ ಎನ್ನುವ ವಾಸ್ತವದ ಸೌಕರ್ಯಗಳನ್ನು ಕಲ್ಪಿಸಿಕೊಂಡೂ ಮಮಮಗಳು ನಾಟಕರೂಪ ಸೋತದ್ದು ತೀರಾ ವಿಷಾದನೀಯ.

ಬೆಳಕು, ಧ್ವನಿಗಳ (ಲೈಟ್ ಆಂಡ್ ಸೌಂಡ್) ಮೇಳನವಾಗಿ ಒಂದೇ ವಠಾರದ ವಿವಿಧ ಕೇಂದ್ರಗಳನ್ನು ಬಳಸಿಕೊಂಡು ನಡೆಯುವ ರಂಗ ಕಲಾಪಗಳನ್ನು ನಾವೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಕಂಡವರೇ ಇದ್ದೇವೆ. (ಕರ್ನಾಟಕ ವೈಭವ, ವಿಜಯನಗರ ವೈಭವ, ಮೈಸೂರು ವೈಭವ ಇತ್ಯಾದಿ.) ಎಷ್ಟೋ ಬಾರಿ ಒಂದೇ ರಂಗಮಂಚದ ಮೇಲೂ ವಿವಿಧ ಬೆಳಕಿನ ವಲಯಗಳನ್ನು ಮಾಡಿಕೊಂಡು ಪ್ರದರ್ಶನ ಕೊಡುವ ಆಧುನಿಕ ನಾಟಕಗಳೂ ಕನಿಷ್ಠ ರಂಗಪರಿಕರಗಳನ್ನು ಬಳಸಿಕೊಂಡು ಅದೇ ತತ್ತ್ವವನ್ನು ಶಕ್ತವಾಗಿ ದುಡಿಸಿಕೊಳ್ಳುತ್ತವೆ. ಮಮಮಗಳು ಒಂದು ಹೆಜ್ಜೆ ಮುಂದೆ ಹೋಗಿ, ಒಂದೇ ಪ್ರದರ್ಶನದಲ್ಲಿ ಪ್ರೇಕ್ಷಕರನ್ನೇ ನಾಲ್ಕು ರಂಗಗಳ ಎದುರಿಗೆ ನಡೆಸುತ್ತದೆ. ಅಷ್ಟಾಗಿಯೂ ಬರಿಯ ಕಾಣಿಸುವುದು, ಕೇಳಿಸುವುದರಿಂದ ನಾಟಕ ಮೇಲೇಳುವುದಿಲ್ಲ. ಕಾದಂಬರಿ ಕೇವಲ ಮುದ್ರಿತ ಅಕ್ಷರಗಳಲ್ಲಿ ಕಟ್ಟಿಕೊಡುವ ಅದ್ಭುತ ಸನ್ನಿವೇಶಗಳು, ಚಿಂತನೆಗೆ ಹಚ್ಚುವ ಹಲವು ವೈಚಾರಿಕ ಮಜಲುಗಳು ಇಲ್ಲಿ ವಿಸ್ತೃತ ಆಯಾಮ ಪಡೆಯುವುದು ಬಿಟ್ಟು ಅಣಕ, ತೀರಾ ವಾಚ್ಯ ಮಟ್ಟದಲ್ಲೇ ಉಳಿದು ಬಿಡುತ್ತವೆ. ಕಾದಂಬರಿಗೆ ನಾಟಕಕಾರರು ಎಷ್ಟು ಋಣಿಯಾದರೂ ತಪ್ಪಿಲ್ಲ. ಆದರೆ ಅದನ್ನು ಜೋಗಿಗಳ ಜೋಳಿಗೆಯಲ್ಲಿ ಆರಾಧನೀಯ ವಸ್ತುವನ್ನಾಗಿ ಮೆರೆಸಿದ್ದು ರುಚಿಸಲಿಲ್ಲ.

ನಾಟಕದ ಕೊನೆಯಲ್ಲಿ ಸ್ವತಃ ನಿರ್ದೇಶಕ ಬಸವಲಿಂಗಯ್ಯನವರೇ ಅನೌಪಚಾರಿಕವಾಗಿ ಮಾತಾಡುತ್ತ, ಯಾರೋ ಒಟ್ಟು ವ್ಯವಸ್ಥೆ ಬಗ್ಗೆ (ಮುಖ್ಯವಾಗಿ ಹಣಹೂಡಿಕೆಯ ಕುರಿತಂತೆ) ಅಪಸ್ವರ ತೆಗೆದುದನ್ನು ಅಯಾಚಿತವಾಗಿ ಆದರೆ ವಿಷಾದಪೂರ್ವಕವಾಗಿ ಪ್ರಸ್ತಾವಿಸಿದರು. ಆದರೆ ಪ್ರದರ್ಶನದ ಕೊನೆಯಲ್ಲಿ ನಾನೂ ಅಷ್ಟೇ ವಿಷಾದಪೂರ್ವಕವಾಗಿ ಆ ಅಪಸ್ವರಕ್ಕೇ ಧ್ವನಿಗೂಡಿಸಬೇಕಾಗಿ ಬಂದಿದೆ. ಸುಲಭದಲ್ಲಿ ವರ್ಗಾಯಿಸುವ ರಂಗಪರಿಕರಗಳನ್ನು ನಿರಾಕರಿಸಿ, ನೆಲವನ್ನೇ ಒಲಿಸುವ ಈ ಕ್ರಮ ಸಾಧಿಸಿದ್ದೇನು? ನಿರ್ದಿಷ್ಟ ಕಥಾನಕದ ಹೊರಗಿನ ಪ್ರಯೋಗಕ್ಕೆ ಒಡ್ಡಿಕೊಳ್ಳದ ಕಲಾಗ್ರಾಮದೊಳಗಿನ ಕಾಮಗಾರಿ, ಅಂದರೆ ಸಾರ್ವಜನಿಕ ಹಣದ ಹೂಡಿಕೆಯನ್ನು ಮಮಮಗಳು ನಾಟಕ ಪ್ರದರ್ಶನ ಏನೇನೂ ಸಮರ್ಥಿಸುವುದಿಲ್ಲ. ನಾಟಕರಂಗಕ್ಕೆ ಕೊಡುಗೆಯಾಗುವ, ಕನಿಷ್ಠ ಕಾದಂಬರಿಯ ಮಹತ್ತಿಗೆ, ಹೆಚ್ಚಿನ ಓದಿಗೆ ಕೈಕಂಬವಾಗಬಹುದಾಗಿದ್ದ ಅವಕಾಶಗಳನ್ನೂ ಈ ಪ್ರಯೋಗ ವ್ಯರ್ಥಗೊಳಿಸಿದೆ.