[ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು]

ಅದೊ೦ದು ಮಧ್ಯಾಹ್ನ ಅ೦ಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು – ವಿದುಷಿ ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸುವ ‘ಕುಮಾರವ್ಯಾಸ ನೃತ್ಯ ಭಾರತ. ಬೆ೦ಬತ್ತಿದ೦ತೆ ಭ್ರಮರಿಯವರ ದೂರವಾಣಿ ಕರೆಯೂ ಬ೦ತು. ಹೆಚ್ಚಿನ ಒತ್ತಡ ತರುವಂತೆ ಕಾರ್ಕಳದಿ೦ದ ಪ್ರೊ| ಎ೦. ರಾಮಚ೦ದ್ರರ ದೂರವಾಣಿ ಅ೦ದು ನಿಮ್ಮಲ್ಲಿ ಮರುದಿನ ನಮ್ಮಲ್ಲಿ. ಅವಶ್ಯ ನೋಡಿ ಕುಮಾರವ್ಯಾಸ ನೃತ್ಯ ಭಾರತ. ಅಧ್ಯಾಪಕ, ಕವಿ, ಕತೆಗಾರ, ನಾಟಕಕಾರ, ನಟ, ರಂಗನಿರ್ದೇಶಕ ಎಂಬಿತ್ಯಾದಿ ಬಹುಮುಖೀ ಆಸಕ್ತಿಗಳ ಮತ್ತು ಸದಾ ಕ್ರಿಯಾಶೀಲ ಪ್ರೊ| ಉದ್ಯಾವರ ಮಾಧವಾಚಾರ್ಯರ ಮಗಳು ಈ ಭ್ರಮರಿ ಎನ್ನುವುದು ನನಗೆ ತಿಳಿದೇ ಇತ್ತು. ಅವೆಲ್ಲದರ ಮೇಲೆ ನನ್ನ ನೆನಪಿನಾಳದ ನೂರೊಂದು ರಮ್ಯ ಪೌರಾಣಿಕ ರಂಗಪ್ರಸ್ತುತಿಗಳೂ ಮೇಲೆದ್ದು ಪ್ರಭಾವಿಸಿದವು ಎನ್ನುವುದನ್ನೂ ಇಲ್ಲೇ ಹೇಳಿಬಿಡಬೇಕು. ಸುಮಾರು ಎರಡು ದಶಕಗಳ ಹಿಂದೆ ಪದ್ಮಾಸುಬ್ರಹ್ಮಣ್ಯಂ ಕೊಟ್ಟ ರಾಮಾಯ ತುಭ್ಯಂ ನಮಃ ಮತ್ತು ಕೃಷ್ಣಾಯ ತುಭ್ಯಂ ನಮಃ ಉಂಟುಮಾಡಿದ ಧನ್ಯತೆ ಚಿರಂಜೀವಿ. ಮುಂದುವರಿದ ದಿನಗಳಲ್ಲಿ ನೀನಾಸಂ ಕೊಟ್ಟ ಕುಮಾರವ್ಯಾಸ ಭಾರತದ್ದೇ ರಂಗಪ್ರಸ್ತುತಿ – ಸೀಮಿತ ಅವಧಿಯಲ್ಲಿ, ಸಮಗ್ರ ಕಥಾನಿರೂಪಣೆಗೆ ಕೊರತೆ ಬಾರದಂತೆ ಆಯ್ದ ಕಾವ್ಯ ಭಾಗಗಳನ್ನು ಒಂದೂ ಪ್ರಕ್ಷಿಪ್ತ ತಾರದೆ ರಂಗಕ್ಕಳವಡಿಸಿದ್ದು, ನೆನೆಸಿದರೆ ಇಂದೂ ಮೈಮನ ನಲಿಯುವುದು! ‘ಇದು ರಂಗಪ್ರಯೋಗಕ್ಕಲ್ಲ ಎಂದು ಸ್ವತಃ ಲೇಖಕ ಕುವೆಂಪು ಘೋಷಿಸಿಯೇ ಪ್ರಕಟಿಸಿದ ಶೂದ್ರತಪಸ್ವಿ ನಾಟಕವನ್ನು ರಂಗಸೂಚನೆಗಳೂ ಸೇರಿದಂತೆ ಸಾರಾಸಗಟಾಗಿ ತೆಗೆದುಕೊಂಡು ರಂಗಾಯಣ ಕೊಟ್ಟ ಪ್ರದರ್ಶನ ಇನ್ನೊಂದೇ ಅದ್ಭುತ ಅನುಭವ. ಈಗಲೂ ನಡೆಯುತ್ತಲೇ ಇರುವ (ನನ್ನೆದುರು ಡೀವೀಡೀಯಲ್ಲಿಯೂ) ‘ಗಣೇಶ್-ಮಂಟಪ ಕಂಬೈನ್ಸ್ ಯಕ್ಷಗಾನ ಏಕವ್ಯಕ್ತಿ ಪ್ರಯೋಗಗಳೂ ವಿಚಾರಪರವಾಗಿ ನೋಡುವ ಯಾರೂ ಮೆಚ್ಚಿ ಅಹುದಹುದೆನ್ನಬೇಕು. ಇನ್ನೂ ಇಂತಹ ಅನೇಕರು ಅವರವರ ಸಿದ್ಧಿಗನುಗುಣವಾಗಿ ನಾಟ್ಯ, ನಾಟಕ, ಕಾವ್ಯ, ಜಾನಪದ, ಸಂಗೀತ, ಮಟ್ಟು ಮುಂತಾದವನ್ನು ಭಾವಸಂವಹನದ ಮಾಧ್ಯಮವಾಗಿ ಬಳಸಿ ಶಿಖರ ದರ್ಶನ ಮಾಡಿಸಿದ್ದಾರೆ. ಈ ಸರಕ್ಕೆ ಹೊಸತೊಂದು ಮುತ್ತು ಪೋಣಿಸುವ ಉತ್ಸಾಹದಲ್ಲಿ ನಾನು ಕೆನರಾ ಹೆಮ್ಮಕ್ಕಳ ಶಾಲೆಯ ಸಭಾಂಗಣಕ್ಕೆ ಅಂದು (೧೮-೧೨-೧೧) ಹೋಗಿದ್ದೆ.

ಭಾವಗಾಯಕ, ಗಮಕಿ ಚಂದ್ರಶೇಖರ ಕೆದ್ಲಾಯರು ಪ್ರದರ್ಶನದ ಪೀಠಿಕೆಯಿಂದ ಮಂಗಳದವರೆಗೆ ಸೂಕ್ತ ನಿರೂಪಣೆಯನ್ನು ಕೊಟ್ಟರು, ಎಂದರೆ ತೀರಾ ಗದ್ಯವಾಗುತ್ತದೆ. ಪ್ರತಿ ಸನ್ನಿವೇಶದ ಕಾವ್ಯ ಖಂಡವನ್ನು ಅರ್ಥ ಸ್ಫುಟವಾಗುವಂತೆ ಗಮಕದಲ್ಲಿ ಅರ್ಥ ಸ್ಫುಟತೆಯನ್ನೂ ರಾಗದಲ್ಲಿ ಭಾವ ಸ್ಫುಟತೆಯನ್ನೂ ತುಂಬಿದರು . ಇದು ಸಹಜವಾಗಿ ಕೇಳುಗರ ಮನೋಭೂಮಿಕೆಯನ್ನು ಮತ್ತೆ ಮತ್ತೆ ನಿರೀಕ್ಷೆಯ ಉತ್ತುಂಗಕ್ಕೊಯ್ಯುತ್ತಿತ್ತು. ನೃತ್ಯಗಾತಿಗೆ ಆವಶ್ಯಕವಾದ ಮಧ್ಯಂತರದ ವೇಳೆಯಲ್ಲಿ ಕೆದ್ಲಾಯರು ಕುವೆಂಪು ಕಂಡ ಕುಮಾರವ್ಯಾಸನಿಗೆ (ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ…) ಭಾವಗಾನದಲ್ಲಿ ಮರುಹುಟ್ಟು ಕೊಟ್ಟದ್ದಂತೂ ನಿಜಕ್ಕೂ ಸ್ಮರಣೀಯ. ಆದರೆ ಇವರೆಲ್ಲ ಕಲಾಪಗಳು ನೇರ ರಂಗಪ್ರಸ್ತುತಿಗೆ ಬಳಕೆಯಾಗದೇ ಉಳಿದದ್ದು ಸಂಯೋಜನೆಯ ಕೊರತೆಯಂತೇ ಅನಿಸಿತು.

ಭ್ರಮರಿ, ಶಿವಪ್ರಕಾಶ್ (ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಪೂರ್ಣ ಮಗಳು, ಅಳಿಯರದೇ ಎಂದು ಸ್ವತಃ ಮಾಧವಾಚಾರ್ಯರು ಕೊನೆಯಲ್ಲಿ ಘೋಷಿಸಿದ್ದರು.) ಕುಮಾರವ್ಯಾಸ ಭಾರತದಿಂದ ಕಥಾಕ್ರಮದಲ್ಲೇ ಐದು ತುಣುಕುಗಳನ್ನು ಆಯ್ದುಕೊಂಡಿದ್ದರು; ಪೂರ್ವಾರ್ಧಕ್ಕೆ ಎರಡು, ಉತ್ತರಾರ್ಧದಲ್ಲಿ ಮೂರು. ಮೊದಲು ದಾಯಾದಿ ದ್ವೇಷದ ಮೊಳಕೆ ತೋರುವಂತೆ ಭೀಮ ದುರ್ಯೋದನರ ಬಾಲ ಜಗಳ ಮತ್ತು ಹಿಡಿಂಬೆಯ ಕಾಮುಕ ನೋಟ (ಸಂವಾದದ ಮಟ್ಟಕ್ಕೇರಲಿಲ್ಲ). ಮುಂದಿನ ಭಾಗದಲ್ಲಿ ಕೀಚಕನ ಪ್ರಣಯ ಭಿಕ್ಷೆ, ಕೃಷ್ಣ ಸಂಧಾನದ ವಿಶ್ವರೂಪ ಮತ್ತು ಯುದ್ಧಾನಂತರದ ಗಾಂಧಾರಿ ವಿಲಾಪ. ಇವುಗಳೆಷ್ಟು ಪ್ರಾತಿನಿಧಿಕ ಎನ್ನುವ ಪ್ರಶ್ನೆ ಹಾಗಿರಲಿ. ಅದಕ್ಕೂ ಮಿಗಿಲಾಗಿ ಆ ತುಣುಕುಗಳೂ ಸ್ವತಂತ್ರ ಸನ್ನಿವೇಶವೊಂದನ್ನು (ಯಕ್ಷ ಭಾಷೆಯಲ್ಲಿ ಹೇಳುವುದೇ ಆದರೆ ಪ್ರಸಂಗದ ವ್ಯಾಪ್ತಿ) ಕಟ್ಟಿಕೊಡುವುದರಲ್ಲಿ ಸೋತವು. ಬಾಲಜಗಳವನ್ನು ಕರ್ಣನ ಅಂಗರಾಜ್ಯಾಭಿಷೇಕದವರೆಗಾದರೂ ಒಯ್ದಿದ್ದರೆ ಒಂದು ತಾರ್ಕಿಕ ಕೊನೆ ಸಿಗುತ್ತಿತ್ತು. ಮತ್ತಿನದರ ಹಿನ್ನೆಲೆ (ಅರಗಿನ ಮನೆ) ಬಿಡಿ, ಕನಿಷ್ಠ ರಕ್ಕಸವಧೆ, ಹಿಡಿಂಬಾ ಕಲ್ಯಾಣಕ್ಕಾದರೂ ವಿಸ್ತರಿಸಿದ್ದರೆ ಪರ್ಯಾಪ್ತವಾಗುತ್ತಿತ್ತು. ಅದು ಕಲ್ಯಾಣವಿಲ್ಲದೆ ಸೋತಂತೆ, ಕೀಚಕನ ತುಣುಕು ವಧೆಯ ನಾಟಕೀಯತೆ ಮುಟ್ಟದೆ ರಸಹೀನ ಗದ್ಯದ ಮಟ್ಟದಲ್ಲುಳಿಯಿತು. ಭಾರತದಲ್ಲಿ ಕೃಷ್ಣ ತೋರುವ ವಿಶ್ವರೂಪದರ್ಶನಗಳಲ್ಲಿ ಗೀತೋಪದೇಶದ ಕೊನೆಯಲ್ಲಿ ಬರುವುದೇ ಹೆಚ್ಚಿನ ಮಹತ್ತ್ವದ್ದು. ಸಂಧಾನ ಕಾಲದ್ದು ಪ್ರಚೋದನೆಯ ಪರಾಕಾಷ್ಠೆಯಲ್ಲಿ ಬೆದರಿಕೆಯ ತಂತ್ರವಾಗಿ ಬರುತ್ತದೆ. ಕುಮಾರವ್ಯಾಸನೇ ಹೇಳಿಕೊಂಡ ಭಾರತ ಎಂದರೆ ಕೃಷ್ಣಕಥೆ ಎಂಬ ಸರ್ವ ವ್ಯಾಪೀ ಭಾವ ಇಲ್ಲಿ ಬರುವುದಿಲ್ಲ. ಗೆದ್ದವ ಸೋತ (ಸೋತವ ಸತ್ತ) ಎಂಬ ಭಾವ ಉದ್ದೀಪಿಸುವ ಗಾಂಧಾರಿ ವಿಲಾಪ ಕೊನೆಯ ತುಣುಕಾಗಿ ಕಾಣಿಸಿದ್ದು ಸರಿಯೇ. ಆದರೆ ಕಥೆಯೇ ನಡೆಯದೆ ಫಲಿತಾಂಶ ಕೇಳಿದ ಹಾಗಾಯ್ತು.

ಕುಮಾರವ್ಯಾಸ ಕಾವ್ಯವನ್ನು ಶಾಸ್ತ್ರೀಯ ನೃತ್ಯಕ್ಕೆ ಹೊಂದಿಸಿದ್ದರಲ್ಲಿ (ರಾಗ ಸಂಯೋಜನೆ ಮತ್ತು ಗಾಯನ ವಿದ್ವಾನ್ ರಮೇಶ ಚಡಗ) ಕವಿಯ ಆಶಯ ಅಥವಾ ಕಾವ್ಯ ಬಂಧದ ಸೌಂದರ್ಯ ದಕ್ಕಲಿಲ್ಲ. ಜತಿಸ್ವರ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನವೇ ಮೊದಲಾದ ನೃತ್ಯ ಪರಿಕರಗಳನ್ನು ಪರಿಣಾಮಕಾರಿಯಾಗಿಸುವಲ್ಲಿ ನಟ್ಟುವಾಂಗದಲ್ಲಿ ಪಾವನಾ ರಾಜೇಂದ್ರ, ಮೃದಂಗದಲ್ಲಿ ಮನೋಹರ ರಾವ್, ವಯೊಲಿನ್ನಿನಲ್ಲಿ ಶರ್ಮಿಳಾ ಕೆ. ರಾವ್ ಮತ್ತು ಕೊಳಲಿನಲ್ಲಿ ಬಾಲಕೃಷ್ಣರ ಸಹಕಾರ ಚೆನ್ನಾಗಿಯೇ ಇದ್ದಿರಬೇಕು. ಇವಕ್ಕೆ ಅಳತೆಗೋಲು ನನ್ನಲ್ಲಿಲ್ಲ, ಕ್ಷಮಿಸಿ. ಆದರೆ ಒಟ್ಟು ಪ್ರದರ್ಶನ ಕುಮಾರವ್ಯಾಸ ಭಾರತವನ್ನು ಮೆರೆಸಲಿಲ್ಲ, ಕನಿಷ್ಠ ಕಥಾಶ್ರವಣದ ಸುಖವನ್ನೂ ಕೊಡಲಿಲ್ಲ. ಕುಮಾರವ್ಯಾಸನ ದೊಡ್ಡ ಹೆಸರಿನ ಬಲದಲ್ಲಿ ಸಾಮಾನ್ಯ ನೃತ್ಯಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಂಡ ಹಾಗೇ ಅನ್ನಿಸಿತು. ದಪ್ಪ ಚೌಕಟ್ಟಿನೊಳಗೆ ಕುಬ್ಜ ಚಿತ್ರ ಕೂರಿಸಿದ ಹಾಗನ್ನಿಸಿ ತೀವ್ರ ನಿರಾಶೆಯುಂಟು ಮಾಡಿತು. ಭ್ರಮರಿ, ಶಿವಪ್ರಕಾಶರ ಉತ್ಸಾಹದ ಬುಗ್ಗೆ ಮಾಧವಾಚಾರ್ಯರ ಅಪರಿಮಿತ ಪ್ರಯೋಗಗಳ ಮುನ್ನೆಲೆಯಲ್ಲಿ ಖಂಡಿತವಾಗಿಯೂ ಇದಕ್ಕಿಂತಲೂ ಎತ್ತರದ ರಸಸ್ಥಾನಗಳಿಗೆ ಚಿಮ್ಮಬೇಕೆಂದು ಆಶಿಸುತ್ತೇನೆ.