ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೇಳು
ಅಧ್ಯಾಯ ಮೂವತ್ತೊಂದು

೧೯೬೫ರ ಬೇಸಗೆ ರಜೆ ಆರಂಭದಲ್ಲೇ ನಾನು ಬೆಂಗಳೂರು ನಿವಾಸಿಯಾದುದು ಎಲ್ಲ ರೀತಿಗಳಲ್ಲಿಯೂ ಅನುಕೂಲವಾಯಿತು: ಮಕ್ಕಳ ಶಿಕ್ಷಣ, ಮಹಾನಗರದ ಬಿರುಸು ಬದುಕಿಗೆ ನಮ್ಮ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ, ನನ್ನ ಸಂಗೀತಾಸಕ್ತಿಯ ಪೋಷಣೆ ಮುಂತಾದವು. ಕಾಲೇಜಿನ ಹೆಸರು Government Arts and Science College, ಸಂಕ್ಷೇಪವಾಗಿ GAS College, ಕಟಕಿಗಳ ಮಾತಿನಲ್ಲಿ ಗ್ಯಾಸ್ ಕಾಲೇಜ್! ಅಂದಾಜು ೨೦೦೦ ವಿದ್ಯಾರ್ಥಿಗಳು, ಸುಮಾರು ೧೨೦ ಮಂದಿ ಉಪನ್ಯಾಸಕರು ಮತ್ತು ಇತರ ಸಿಬ್ಬಂದಿ, ಇದರ ವ್ಯಾಪ್ತಿ ‘ಕಾವೇರಿಯಿಂದಮಾ ಗೋದಾವರಿ’ವರೆಗೆ ಹಬ್ಬಿತ್ತು: ಎದುರಿಗೆ ವಿಧಾನವೀಥಿ, ಹಿಂದಕ್ಕೆ ನೃಪತುಂಗಮಾರ್ಗ, ಎಡಕ್ಕೆ ಜಿಲ್ಲಾ ನ್ಯಾಯಾಲಯ ಮತ್ತು ಬಲಕ್ಕೆ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜ್. ಶುದ್ಧ ಹಳ್ಳಿ ಮನೋಧರ್ಮದವನಾದ ನನಗೆ ಈ ‘ದಿಲ್ಲಿ’ಯಲ್ಲಿ ಮೊದಲು ಮೂಡಿದ್ದು ಭಯ. ಆದರೆ ಈಸಲೇ ಬೇಕು, ಮತ್ತು ಈಸಿ ಜೈಸಲೇ ಬೇಕಲ್ಲವೇ?

ಪ್ರಾಂಶುಪಾಲ ಆರ್.ಆರ್. ಉಮರ್ಜಿಯವರ ಎದುರು ಮೊದಲ ಬಾರಿಗೆ ಕುಳಿತು ನನ್ನ ಹಾಜರಿ ವರದಿ ಸಲ್ಲಿಸಿದಾಗ ಅವರಾಡಿದ ನುಡಿ ತುಂಬ ಉತ್ತೇಜಕವಾಗಿತ್ತು, “ನಿಮ್ಮ ವಿಚಾರ ಪೂರ್ತಿ ಮಾಹಿತಿ ತಿಳಿದು ಸಂತೋಷವಾಗಿದೆ. ಆರ್ಮಿಯಲ್ಲಿಯ ಉಚ್ಚ ಅಧಿಕಾರ ತೊರೆದು ಮತ್ತೆ ಶಿಕ್ಷಕ ವೃತ್ತಿಗೆ ಮರಳಿ ಬಂದಿರುವಿರಿ. ಈ ಕಾಲೇಜನ್ನು ಉನ್ನತ ಶೈಕ್ಷಣಿಕ ಮಟ್ಟಕ್ಕೆ ಒಯ್ಯುವಲ್ಲಿ ನಿಮ್ಮ ಅನುಭವ ಮತ್ತು ಸಕ್ರಿಯ ಪಾತ್ರ ಖಂಡಿತ ಉಪಯೋಗಕ್ಕೆ ಒದಗಲಿವೆ. ಹೊಸ ಯೋಜನೆಗಳಿಗೆ ಮುಕ್ತ ಸ್ವಾಗತವಿದೆ.”

“ಮುಖ್ಯ ವೃತ್ತಿಗೆ ಸಂಬಂಧಿಸಿದ ಎಲ್ಲ ಹೊಣೆಗಳ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗಿಯಾಗಬೇಕೆಂಬ ಬಯಕೆ ಇದೆ. ಏನು ಹಾದಿ?” “ಇಂಗ್ಲಿಷ್ ಪ್ರಾಧ್ಯಾಪಕ ಎಚ್.ಜಿ. ಸೂರ್ಯನಾರಾಯಣರಾಯರನ್ನು ನೋಡಿ ಮುಂದಿನ ಯೋಜನೆ ತಯಾರಿಸಿ.”

ಪ್ರಾಂಶುಪಾಲರ ಈ ಹರಕೆ ನುಡಿಗಳಿಂದ ಹುರುಪುಗೊಂಡು ಎಚ್‌ಜಿಎಸ್‌ರನ್ನು ಅವರ ‘ಗುಹೆ’ಯಲ್ಲೇ ಕಂಡೆ. It was a case of love at first sight! ಪ್ರಥಮ ದರ್ಶನದಲ್ಲೇ ಪ್ರೇಮೋತ್ಸರ್ಜನೆ. ಹಿಂದೆ ಎನ್‌ಸಿಸಿಯಲ್ಲಿ ಬಾಳಿಗರ ಒಡನಾಟದಂತೆ ಇಲ್ಲಿ ಎಚ್‌ಜಿಎಸ್‌ರ ಸಾಹಚರ್ಯ ನನಗೊದಗಿದ್ದೊಂದು ವಿಶೇಷ ಯೋಗ. ಗೋಪಾಲಕೃಷ್ಣ ಅಡಿಗರ ಅಮರ ನುಡಿಗಳಲ್ಲಿ “ಅದೃಶ್ಯ ಲೋಕದ ಅನೂಹ್ಯ ರೂಪದ ಅನಂತ ಕಾಲದ ಯಾತ್ರಿಕರೇ! ಮಣ್ಣಿನ ಮನದಲಿ ಹೊನ್ನನೆ ಬೆಳೆಯುವ ಅಪೂರ್ವ ತೇಜದ ಮಾಂತ್ರಿಕರೇ!”

ತತ್ಪೂರ್ವ ನಾನು ಬಳ್ಳಾರಿಯಲ್ಲಿದ್ದಾಗ ಸೇನಾಜೀವನದ ಕೃತಕತೆ ಮತ್ತು ಅಂತರ್ಗತ ಸೂಕ್ಷ್ಮ ಭ್ರಷ್ಟಾಚಾರಗಳಿಂದ ರೋಸಿಹೋಗಿ ಉಚ್ಚ ಅಧಿಕಾರಿಗಳಿಗೆ “ಈ ಹುದ್ದೆಯಲ್ಲಿ ಮುಂದುವರಿಯಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ” ಎಂದು ನೇರ ಚುಚ್ಚುನುಡಿಯ ಪತ್ರ ಬರೆದು ಅದರ ಧೃತರಾಷ್ಟ್ರಾಲಿಂಗನದಿಂದ ವಿಮೋಚಿತನಾಗಿದ್ದೆ. ಬೆಂಗಳೂರಿನ ಎನ್‌ಸಿಸಿ ವರಿಷ್ಠರ ವಲಯದಲ್ಲಿ ಈ ಬಿಚ್ಚುನುಡಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿತ್ತೆಂದು ಮುಂದೊಂದು ದಿನ ತಿಳಿಯಿತು. ನಮ್ಮ ಕಾಲೇಜಿಗೆಂದೇ ಒಂದು ಎನ್‌ಸಿಸಿ ತುಕ್ಕಡಿ ನಿಯೋಜಿತವಾಗಿತ್ತು: 12 Mysore Battalion NCC, ಸಂಕ್ಷೇಪವಾಗಿ ‘೧೨ನೇ ಮೈಸೂರು.’ ಮೇಜರ್ ಎಂ.ಆರ್. ನಾರಾಯಣಸಿಂಗ್ ಎಂಬ ದ್ವಿತೀಯ ಮಹಾಯುದ್ಧದ ಯೋಧ ಇದರ ಕಮಾಂಡರ್. ಅನುಭವ, ದರ್ಜೆ, ದೃಷ್ಟಿ ವೈಶಾಲ್ಯ, ದೈಹಿಕ ಗಾತ್ರ ಒಂದೊಂದರಲ್ಲಿಯೂ ಇವರು ಬಲು ಎತ್ತರದ ವ್ಯಕ್ತಿ. ಇವರ ಆಡಳಿತಾಧಿಕಾರಿ ನನ್ನ ಮಿತ್ರ ಕ್ಯಾಪ್ಟನ್ ಎಚ್.ಎನ್. ಅಶ್ವತ್ಥನಾರಾಯಣ, ಕಾಲೇಜ್ ಸೇವೆಯಿಂದ ಪೂರ್ಣಕಾಲೀನ ಎನ್‌ಸಿಸಿ ಅಧಿಕಾರಿಯಾಗಿ ಹೋದವರು. ಅಶ್ವತ್ಥರನ್ನು ನೋಡಲೆಂದು ಅವರ ಕಚೇರಿಗೆ ಹೋದೆ. ಬಳ್ಳಾರಿಯಲ್ಲಿದ್ದಾಗ ಹಿಂದೊಮ್ಮೆ ಪರಿಚಯವಾಗಿದ್ದ ನಾರಾಯಣಸಿಂಗ್‌ರಿಗೂ ಸೌಹಾರ್ದ ಭೇಟಿ ನೀಡಿದೆ.

“ನಾನೇ ನಿಮ್ಮನ್ನು ಬಂದು ನೋಡಬೇಕೆಂದಿದ್ದೆ. ಎರಡನೇ ಯೋಚನೆ ಮಾಡದೆ ನೀವು ನಮ್ಮ ೧೨ನೇ ಮೈಸೂರಿಗೆ ಹಿರಿಯ ಭಾಗಕಾಲೀನ ಎನ್‌ಸಿಸಿ ಅಧಿಕಾರಿಯಾಗಿ ಸೇರಲು ದಯವಿಟ್ಟು ಸಮ್ಮತಿಸಬೇಕು. ದೇಶಕಟ್ಟುವ ಈ ಪವಿತ್ರ ಕರ್ತವ್ಯದಲ್ಲಿ ನಾವಿಬ್ಬರು ನಾರಾಯಣರ ಜೊತೆಗೆ ನೀವು ಮೂರನೆಯ ನಾರಾಯಣರಾಗಿ ಸೇವಾನಿರತರಾಗಬೇಕು.” ಸಿಂಗ್‌ರ ಕಳಕಳಿ, ಅಶ್ವತ್ಥರ ಒತ್ತಾಯ ಮತ್ತು ಅಯಾಚಿತವಾಗಿ ನನ್ನೆದುರು ತೆರೆದುಕೊಂಡಿದ್ದ ಹೊಸ ಹಸುರು ಎಲ್ಲ ಸೇರಿ ಆ ಗಳಿಗೆ ನಾನು ಮತ್ತೆ ಕಪ್ಪಕ್ಕೆ ಕೆಡೆದೆ? ಅಥವಾ ಗಲ್ಲು ಕಂಬಕ್ಕೆ ಕೊರಳು ಒಡ್ಡಿದೆ? ಇಲ್ಲ. ಇದು ಮನುಕುಲದ “ದಾರಿ ಯಾವುದಯ್ಯಾ ವೈಕುಂಠಕೆ” ಎಂಬ ಚಿರಂತನ ಪ್ರಶ್ನೆಗೆ ಉತ್ತರವಿತ್ತಿತೆಂದು ಆಗ ನನಗೆ ಗೊತ್ತಿರಲಿಲ್ಲ. ‘ಮುಗಿಯದ ಪಯಣ’ದ ಇನ್ನೊಂದು ಸೋಪಾನದ ಆರಂಭವದು.

ಆ ನಾಲ್ಕು ವರ್ಷಗಳಂದು, ೧೯೬೫-೬೯, ನಾರಾಯಣತ್ರಯರು ಎನ್‌ಸಿಸಿಯಲ್ಲಿ ಏನು ಸಾಧಿಸಿದರೆಂಬುದರ ವಿವರಗಳನ್ನು ತಿಳಿಯಲು ಓದಿ ‘ಎನ್‌ಸಿಸಿ ದಿನಗಳು’ ಪುಸ್ತಕ. ಒಂದು ನಿದರ್ಶನ ಮುಂದಿನ ಕೆಲವು ಅಧ್ಯಾಯಗಳ ವಸ್ತು.

ಭೌತ ಶಿಖರಾರೋಹಣ
ಅಧ್ಯಾಯ ಮೂವತ್ತೆರಡು

೧೯೬೯ರಿಂದ ಮುಂದಕ್ಕೆ ನನ್ನೆದುರು ಅನಾವರಣಗೊಳ್ಳಲಿದ್ದ ಜ್ಞಾನಶಿಖರಾರೋಹಣ ಪಂಥ ಸ್ವೀಕರಿಸಲು ತಯಾರಾಗಲೆಂದೋ ಎಂಬಂತೆ ೧೯೬೭ರಲ್ಲಿ ನಮ್ಮ ಎನ್‌ಸಿಸಿ ಘಟಕದ ಎದುರು ಕುದುರೆಮುಖ ಭೌತಶಿಖರಾರೋಹಣದ ವಿನೂತನ ಕಲ್ಪನೆ ದಿಟ್ಟನೆ ನಿಂತಿತು. ಆಗ ಗಳಿಸಿದ ಅನುಭವವನ್ನು ‘ಕುದುರೆಮುಖದೆಡೆಗೆ’ ಎಂಬ ಹೊತ್ತಗೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಪ್ರಕಾಶಿಸಿದ್ದೆ. ಅದರ ಪೂರ್ಣ ಪಾಠವನ್ನು ಇಲ್ಲಿ ಉದ್ಧರಿಸಿದೆ.

[ಇದು ಅನಂತರದ ದಿನಗಳಲ್ಲಿ ಜಿಟಿನಾ ಅವರದೇ ಎನ್‌ಸಿಸಿ ದಿನಗಳು ಮತ್ತು ಸವಾಲನ್ನು ಎದುರಿಸುವ ಛಲ ಎಂಬೆರಡು ಪುಸ್ತಕಗಳಲ್ಲೂ ಸಾಂದರ್ಭಿಕ ಸಣ್ಣಪುಟ್ಟ ಬದಲಾವಣೆಗಳೊಡನೆ ಸೇರಿ ಪ್ರಕಟವಾಗಿದೆ. ಸವಾಲನ್ನು ಎದುರಿಸುವ ಛಲ ಪುಸ್ತಕದಲ್ಲಿ ಇಲ್ಲೇ ಮೊದಲು ಪ್ರಕಟವಾದ ಮಡಿಕೇರಿ ಕಾಲೇಜಿನ ಸಹಕಾರ ಸಂಘದ ಕಥನವೂ ಸೇರಿತ್ತು. ಮೂಲ ‘ಮುಗಿಯದ ಪಯಣ’ದಲ್ಲಿ ಅಧ್ಯಾಯ ಮೂವತ್ತೆರಡು – ಭೌತ ಶಿಖರಾರೋಹಣವೆಂದು ಸುಮಾರು ೭೮ ಪುಟಗಳ ಉದ್ದದಲ್ಲಿ ಹರಿಯುವಾಗ ಕೈ ಬಿಟ್ಟಿದ್ದ ಅಧ್ಯಾಯ ವಿಂಗಡಣೆ ಮತ್ತು ಅವುಗಳ ಶೀರ್ಷಿಕೆಗಳನ್ನು ಇಲ್ಲಿ ಮೂಲ ‘ಕುದುರೆಮುಖದೆಡೆಗೆ’ ಪುಸ್ತಕದಿಂದ ಅಳವಡಿಸಿಕೊಂಡಿದ್ದೇನೆ – ಅಶೋಕವರ್ಧನ]

ನಮ್ಮ ಸರಕಾರೀ ಕಾಲೇಜಿನ ವಿದ್ಯಾರ್ಥಿಗಳಿಗೆ ಎನ್‌ಸಿಸಿ ಶಿಕ್ಷಣವೀಯುವ ಸಂಸ್ಥೆಯ ಹೆಸರು ೧೨ನೇ ಮೈಸೂರು ಬೆಟಾಲಿಯನ್ ಎನ್‌ಸಿಸಿ ಎಂದು ಹಿಂದೆ ಹೇಳಿದ್ದೇನೆ. ಸುಮಾರು ೧೨೦೦ ಕ್ಯಾಡೆಟ್ಟುಗಳಿರುವ ಈ ಬೆಟಾಲಿಯನ್ ದಕ್ಷ ಮತ್ತು ಸಮರ್ಥ ವ್ಯವಹಾರಕ್ಕೆ ಮತ್ತು ನವಸಾಹಸ ಪ್ರದರ್ಶನಕ್ಕೆ ರಾಜ್ಯದಲ್ಲಿಯೇ ಪ್ರಸಿದ್ಧವಾಗಿತ್ತು. ಕಾಲೇಜು ಮತ್ತು ಎನ್‌ಸಿಸಿ ಸಂಸ್ಥೆ ಇವುಗಳ ಅಧಿಕಾರಿಗಳ ಸುಮಧುರ ಬಾಂಧವ್ಯ ಸಹಕಾರಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಸಾಧ್ಯವಾಗಿತ್ತು. ಈ ಬೆಟಾಲಿಯನ್ನಿನಲ್ಲಿ ವಿವಿಧ ಅಖಿಲ ಭಾರತೀಯ ಎನ್‌ಸಿಸಿ ಕ್ಯಾಂಪುಗಳಿಗೆ ಹೋಗಿ ಶಿಕ್ಷಣ ಪಡೆದು ವಿಜಯಶಾಲಿಗಳಾಗಿ ಕೀರ್ತಿ ತಂದ ಕ್ಯಾಡೆಟ್ಟುಗಳು ಬಲುಮಂದಿ ಇದ್ದರು. ಇಂಥ ಕ್ಯಾಂಪುಗಳಲ್ಲಿ ಸುಪ್ರಸಿದ್ಧವಾದದ್ದು ಡಾರ್ಜಿಲಿಂಗ್ ಮತ್ತು ಮನಾಲಿಯಲ್ಲಿಯ ಹಿಮಾಲಯ ಪರ್ವತಾರೋಹಣ ಸಂಸ್ಥೆಗಳು ನಡೆಸುವ ಪರ್ವತಾರೋಹಣ ಶಿಬಿರಗಳು.

ನಮ್ಮ ಬೆಟಾಲಿಯನ್ನಿನಲ್ಲಿ, ಇಂಥ ಶಿಬಿರ ಭಾಗಿಗಳಾಗಿ ಮರಳಿದವರ ಸಂಖ್ಯೆ ಹತ್ತನ್ನು ಮೀರಿತ್ತು. ಇತರ ಯಾವ ಬೆಟಾಲಿಯನ್ನಿನಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಕ್ಯಾಡೆಟ್ಟುಗಳು ಕೇಂದ್ರೀಕೃತವಾಗಿರಲಿಲ್ಲ. ಇವರೆಲ್ಲರೂ ಚೈತನ್ಯದ ಬುಗ್ಗೆಗಳು. ಇವರು ತಮ್ಮ ಸಾಹಸ ಪ್ರದರ್ಶನ ಕತೆಗಳನ್ನು ರಂಗುರಂಗಾಗಿ ವರ್ಣಿಸುತ್ತಿದ್ದಾಗ ಸೋಮಾರಿಗಳೂ ನಿದ್ದೆಗಣ್ಣರೂ ಕಿವಿನಿಮಿರಿಸಿ ಆಲಿಸುತ್ತಿದ್ದರು. ಹಿಮಾಲಯದ ಪ್ರಕೃತಿ ಸೌಂದರ್ಯ, ಹಿಮಗಡ್ಡೆಗಳ ಚಿರನೂತನ ರುದ್ರ ಗಾಂಭೀರ್ಯ, ಆ ಪ್ರಪಾತಗಳ ಗಭೀರತೆ, ಅವನ್ನು ಇಳಿದು ಏರಿ ಎತ್ತರ ಎತ್ತರಕ್ಕೆ ಹೋಗುವ ಪ್ರತಾಪ, ಪ್ರಪಾತಗಳನ್ನು ನೈಲಾನ್ ಹಗ್ಗಗಳ ಸಹಾಯದಿಂದ ಜಿಗಿದಿಳಿಯುವ ರೋಮಾಂಚಕ ಅನುಭವ – ಒಂದೇ ಎರಡೇ – ಹಿಮಾಲಯ ಎಷ್ಟು ಎತ್ತರವೊ ಬಿತ್ತರವೊ ಅಲ್ಲಿಯ ಅನುಭವವೂ ಅಷ್ಟೇ.

“ನಾನೆಂದು ಅಲ್ಲಿಗೆ ಹೋಗುವುದು?” ಈ ಪ್ರಶ್ನೆ ಪ್ರತಿಯೊಬ್ಬನ ಮುಂದೆಯೂ ಎದ್ದು ನಿಲ್ಲುತ್ತಿತ್ತು. ಆದರೆ ನಮಗೆ ದೊರೆಯುತ್ತಿದ್ದ ಅವಕಾಶ ಮತ್ತು ಸ್ಥಾನಗಳು ವರ್ಷಕ್ಕೆ ಮೂರು ಅಥವಾ ನಾಲ್ಕು. ಹೋಗಲು ಬಯಸುತ್ತಿದ್ದವರ ಸಂಖ್ಯೆ ನೂರಾರು. ಏನೇ ಇರಲಿ, ಸಾಹಸಪ್ರವೃತ್ತಿ ನಮ್ಮ ಹುಡುಗರಲ್ಲಿ ಭದ್ರವಾಗಿ ಬೇರೂರಿತ್ತು. ಪಂಗುಗಳೂ ಗಿರಿಲಂಘನ ಮಾಡಲು ಉತ್ಸುಕರಾಗಿದ್ದರು! ‘ಪಂಗುಂ ಲಂಘಯತೇ ಗಿರಿಂ!’ ಆಡಳಿತೆಯ ಮತ್ತು ಶಿಕ್ಷಣದ ಸೌಕರ್ಯಕ್ಕಾಗಿ ನಮ್ಮ ಬೆಟಾಲಿಯನ್ನನ್ನು ಎಂಟು ತಂಡಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ತಂಡದ ಹೆಸರು ಕಂಪೆನಿ. ಕಂಪೆನಿಯ ಮೇಲಧಿಕಾರಿ ಒಬ್ಬ ಎನ್‌ಸಿಸಿ ಆಫೀಸರ್ (ಈತ ಕಾಲೇಜಿನಲ್ಲಿ ಲೆಕ್ಚರರೂ ಹೌದು). ಇವರೆಲ್ಲರ ಮೇಲೆ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್. ಇವರು ಸೈನ್ಯದಿಂದ ಈ ಕೆಲಸ ನಡೆಸಲು ನಿಯೋಜಿತರಾಗಿ ಬಂದವರು.

ಪ್ರತಿ ಆರೋಗ್ಯವಂತ ಕಾಲೇಜು ವಿದ್ಯಾರ್ಥಿಯೂ ಕಡ್ಡಾಯವಾಗಿ ಎನ್‌ಸಿಸಿ ಶಿಕ್ಷಣ ಪಡೆಯಲೇಬೇಕೆಂಬುದು ಅಂದಿನ (೧೯೬೬) ನೀತಿ. ಕಡ್ಡಾಯದ ಗುಡಿಯಲ್ಲಿ ಮೊದಲ ಬಲಿ ಕುತೂಹಲ. ಮನುಷ್ಯ ಅಲ್ಲಿ ಯಾಂತ್ರಿಕತೆಯ ನೀರಸ ಕ್ರಿಯೆ ನಡೆಸಲು ತೊಡಗುತ್ತಾನೆ. ಪೆರೇಡಿನಲ್ಲಿ ನನ್ನ ಅನುಭವ ಇದು – ಕುತೂಹಲವಿರುವ ಕೆಲವರನ್ನು ಇಲ್ಲದಿರುವ ಹಲವರ ಜತೆಗೆ ಸೇರಿಸಿ ಶಿಕ್ಷಣವೀಯುವಾಗ ಇಲ್ಲದವರು ಇದ್ದವರನ್ನೂ ಕೆಡಿಸುತ್ತಿದ್ದ ಸಂದರ್ಭಗಳೇ ಹೆಚ್ಚು. ಗ್ರೆಷಾಮ್ ನಿಯಮ ಪ್ರತ್ಯಕ್ಷವಾಗುತ್ತಿತ್ತು. “ಕಪ್ಪು ಹಣ ಬಿಳಿ ಹಣವನ್ನು ಮಲಿನಗೊಳಿಸುತ್ತದೆ.” ಆದ್ದರಿಂದ ಕುತೂಹಲಿಗಳಿಗೆ ಪ್ರತ್ಯೇಕವಾದ, ಕಡ್ಡಾಯವಲ್ಲದ, ವಿಶೇಷ ಶಿಕ್ಷಣವೀಯಲು ಒಂದು ಸ್ಪೆಶಲ್ ಕಂಪೆನಿ ತೊಡಗಬೇಕು ಎಂದು ಮೇಲಧಿಕಾರಿಗಳು ಮನಗಂಡರು. ಹೀಗೆ ನಮ್ಮ ಬೆಟಾಲಿಯನ್ನಿನಲ್ಲಿಯೂ ಸ್ಪೆಶಲ್ ಕಂಪೆನಿ ಆರಂಭವಾಯಿತು. ಸ್ವಂತ ಇಚ್ಛೆಯಿಂದ ಬರುವವರಿಗೆ ಮಾತ್ರ ಇಲ್ಲಿ ಪ್ರವೇಶ. ಇಲ್ಲಿಯ ಶಿಕ್ಷಣವೂ ಹೊಸತು, ಹುಡುಗರ ಸಹಜ ಸಾಹಸ ಪ್ರವೃತ್ತಿಯನ್ನು ವಿಕಾಸಗೊಳಿಸಲು ಪ್ರೇರಕವಾಗುವಂಥದು.

ಪ್ರತಿ ಆದಿತ್ಯವಾರ ಬೆಳಗ್ಗೆ ಪೆರೇಡು. ಹುಡುಗರೇನೋ ಬಂದರು. ಆದರೆ ಅವರಿಗೆ ಕುತೂಹಲಜನಕ ನೂತನ ಉಪಯುಕ್ತ ಶಿಕ್ಷಣ ಏನನ್ನು ನೀಡುವುದು? ಇದು ನಮ್ಮ ಎದುರಿದ್ದ ದೊಡ್ಡ ಪ್ರಶ್ನೆ. ಬೇಡ ಎಂದು ಅವರನ್ನು ನಿವಾರಿಸುವುದು ಬಲು ಸುಲಭ; ಬೇಕು ಎಂದು ನಡೆಸುವುದು ಪ್ರಯಾಸಕರ. ಸ್ವಲ್ಪ ಕಾಲ ಪೌರ ರಕ್ಷಣೆಯನ್ನು ಬೋಧಿಸಿದೆವು. ಆದರೆ ಏಕೋ ಜೀವಸ್ಪಂದನವಾಗಲಿಲ್ಲ. ಒಂದೆರಡು ವಾರ ಬಯಲು ಗುಡ್ಡ ಅಲೆದು ಬಂದೆವು. ಆದರೆ ಎಲ್ಲೆಲ್ಲಿಯೂ ಜನಪ್ರವಾಹ, ಕೊಳಕು ಹರಿಯುತ್ತಿದ್ದ ನಗರದಲ್ಲಿ ಇದೂ ರುಚಿಸಲಿಲ್ಲ. ಕ್ರಮರಹಿತ ಅಲೆದಾಟ ದಣಿವಿಗೆ ಆಹ್ವಾನ. ಇಷ್ಟಾಗುವಾಗ ಆಗಸ್ಟ್ ೧೯೬೬ ಉರುಳುತ್ತಿತ್ತು. ನಮ್ಮ ಹಿರಿಯ ಹುಡುಗರು ಪಿಂಟೋ, ಬಾಬಾ, ಶ್ರೀಧರನ್ ಮೊದಲಾದವರು ಒಂದು ಬೆಳಗ್ಗೆ ನನ್ನನ್ನು ಕಂಡು ಸೂಚಿಸಿದರು, “ನಮ್ಮ ಸ್ಪೆಶಲ್ ಕಂಪೆನಿ ಶಿಲಾರೋಹಣ ಶಿಲಾವರೋಹಣ ಕಲೆಯನ್ನೇಕೆ ಕಲಿಸಬಾರದು?” ಇಂಗ್ಲಿಷಿನಲ್ಲಿ ಮಾತಾಡಿದ ಅವರು ಬಳಸಿದ ಪದಗಳು ದೊಡ್ಡವು: rock climbing and rock rappling. ಸರಳ ಕನ್ನಡದಲ್ಲಿ ಬಂಡೆ ಏರುವುದು, ಬಂಡೆ ಇಳಿಯುವುದು. ಬಂಡೆಯೂರಿನವ ನಾನು. ದಿನಬೆಳಗಾದರೆ ಎರಡು ಬಂಡೆಗಳ ಮಂಡೆ ಏರಿ ತುಳಿದು ಇಳಿಯದೇ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವಂತಿರಲಿಲ್ಲ. ಅಷ್ಟೇಕೆ ಮನೆ ಹಂಡೆಗೆ ನೀರು ತರಬೇಕಾದರೆ ಬಂಡೆಯ ಬುಡಕ್ಕೆ ಇಳಿಯಲೇಬೇಕಿತ್ತು.

“ಅದೂ ಒಂದು ಕಲೆಯೇ?” ಎಂದು ಸ್ವಾಭಾವಿಕ ಆಶ್ಚರ್ಯದಿಂದ ಕೇಳಿದೆ. “ಈ ಆದಿತ್ಯವಾರ ಪ್ರಯತ್ನಿಸೋಣ ಸರ್. ನಾವು ಕೆಲವರು ಹಿಮಾಲಯದಲ್ಲಿ ಕಲಿತವರಿದ್ದೇವೆ. ನಮಗೂ ಒಂದು ರಿಫ್ರೆಶರ್ ಆದ ಹಾಗಾಯಿತು” ಎಂದು ಪಿಂಟೋ ಹೇಳಿದ. “ಯಾವುದನ್ನೂ ನಾವು ಕ್ರಮಬದ್ಧವಾಗಿ ಮಾಡಬೇಕು. ಆದ್ದರಿಂದ ಯಾರಿಗೆಲ್ಲ ಈ ವಿಚಾರದಲ್ಲಿ ಕುತೂಹಲವಿದೆಯೋ ಅವರೆಲ್ಲ ನಾಳೆ ಸಾಯಂಕಾಲ ಕಾಲೇಜಿನ ಹಿಂದಿರುವ ಕಲ್ಲು ಬಂಡೆಗಳ ಮೇಲೆ ಸಭೆ ಸೇರಬೇಕು. ಮುಂದಿನ ಮಾರ್ಗ ಯೋಚಿಸೋಣ” ಎಂದೆ.

ಮರುದಿನ ಸಾಯಂಕಾಲ ಬಂಡೆಗಳ ಮೇಲೆ ಕುಳಿತವರು ನಾವೊಂದಿಪ್ಪತ್ತು ಜನ. ಮಾತುಭಾರಿ ಪಿಂಟೋ ಶಿಲಾರೋಹಣವನ್ನು ಕುರಿತು ಪದ ಉರುಳಿಸಿದ. ಉಳಿದವರಿಗೆ ಅರ್ಥವಾಯಿತೋ ಇಲ್ಲವೋ ನನಗಂತೂ ಆಗಲಿಲ್ಲ. ತಲೆದೂಗಿದರು. ಏನಾದರೂ ಮಾಡಲೇಬೇಕೆಂಬ ಉತ್ಸಾಹದ ಅಮಲಿನಲ್ಲಿ ಅವರಿಗೆ ಹಿಮಾಲಯ ಪರ್ವತವೊಂದೇ ಎಲ್ಲ ಮಾತಿನ ಹಿನ್ನೆಲೆಯಲ್ಲಿಯೂ ಕಾಣುತ್ತಿತ್ತು. ಅಂತೂ ಮುಂದಿನ ಆದಿತ್ಯವಾರದಿಂದ ನಾವು ಶಿಲಾರೋಹಣ ಸಾಹಸ ಕಾರ್ಯ ತೊಡಗುವುದೆಂದು ನಿರ್ಧರಿಸಿದೆವು. “ಹಾಗಾದರೆ” ಎಂದು ನಾನು ಸಮಾರೋಪ ಭಾಷಣ ಬಿಗಿದೆ, “ಮುಂದಿನ ಆದಿತ್ಯವಾರ ಬೆಳಗ್ಗೆ ೬.೪೫ ಗಂಟೆಗೆ ನಾವಿಲ್ಲಿ ಸೇರುವುದು, ಮುಂದುವರಿಸುವುದು. ಪಿಂಟೋ, ಬಾಬಾ, ಶ್ರೀಧರನ್ ಮುಂದಾಳುಗಳು. ಉಳಿದವರು ಅವರ ಅನುಯಾಯಿಗಳು. ನಾನು ನಿಮ್ಮೆಲ್ಲರ ಹಿಂದೆ; ಮುಂದೆ ಅಲ್ಲ. ಇಲ್ಲಿ ಸೇರಿರುವ ನಾವೆಲ್ಲರೂ ಸ್ವಯಂಸ್ಫೂರ್ತಿಯಿಂದ ಬಂದವರು ಎಂದು ಚೆನ್ನಾಗಿ ನೆನಪಿನಲ್ಲಿರಲಿ. ಆದ್ದರಿಂದ ನಮ್ಮ ಶಿಸ್ತು, ವರ್ತನೆ ಸದಾ A-1ಆಗಿರಬೇಕು.” ಇದಕ್ಕೆ ಮೊದಲು ನಾನು ನಮ್ಮ ಬೆಟಾಲಿಯನ್ ಮುಖ್ಯಾಧಿಕಾರಿ ಮೇಜರ್ ನಾರಾಯಣ್ ಸಿಂಗ್ ಅವರಿಗೆ ಸ್ಥೂಲವಾಗಿ ಇದರ ವಿಚಾರ ತಿಳಿಸಿದ್ದೆ. “ಬಹಳ ಸಂತೋಷ. ನನ್ನ ಬೆಂಬಲ ಸದಾ ಇದೆ. ಆದರೆ ಸುವ್ಯವಸ್ಥಿತವಾಗಿ ಮುಂದುವರಿಯಬೇಕು. ವೈಮಾನಿಕ ತಿಳಿಯದ ಎತ್ತರದಲ್ಲಿ ಹಾರುವಾಗ ಹೇಗೆ ಹೋಗುತ್ತಾನೆ? ಪ್ರತಿ ಅಂಗುಲದಲ್ಲಿಯೂ ಹೊಸ ರೋಮಾಂಚಕ ಅನುಭವವಿರುವುದರ ಜೊತೆಗೆ ಅಪಾಯದ ತೀವ್ರತೆಯೂ ಏರಿರುವುದು ಎಂದು ತಿಳಿದು ಮುಂದೆ ನುಗ್ಗುತ್ತಾನೆ. ನಾವು ಹೊಸದಾರಿ ತುಳಿಯುವಾಗ, ಎನ್‌ಸಿಸಿಯಲ್ಲಿ ಹೊಸ ಸಂಪ್ರದಾಯ ಸ್ಥಾಪಿಸುವಾಗ ನಮ್ಮ ಒಂದು ಪುಟ್ಟ ತಪ್ಪು ಕೂಡ ಇಡೀ ಉದ್ದೇಶವನ್ನು ನಾಶಮಾಡಿಬಿಡಬಹುದು, ಮಾತ್ರವಲ್ಲ, ಭವಿಷ್ಯದಲ್ಲಿ ಬೇರೆ ಯಾರೂ ಇಂಥ ಸಾಹಸಕ್ಕೆ ಪುನಃ ತೊಡಗದಂತೆ ದೊಡ್ಡ ಆತಂಕವಾಗಿಯೂ ಪರಿಣಮಿಸಬಹುದು” ಎಂದು ಎಚ್ಚರಿಕೆಯ ಮಾತಾಡಿದ್ದರು.

ಸಾಹಸಗಳ ಮೊತ್ತವೇ ಅವರ ಜೀವನ. ಅರವತ್ತೈದು ಪ್ರಾಯ ಮೀರಿದ ಈ ದೀರ್ಘ ಆಜಾನುಬಾಹು ವ್ಯಕ್ತಿತ್ತ್ವದ ಕಣಕಣವೂ ಮಿಲಿಟರಿಯ ಶಿಕ್ಷಣ ರಂಗದಲ್ಲಿ, ಯುದ್ಧ ಕ್ಷೇತ್ರದಲ್ಲಿ, ಹಿಮಾಲಯದ ಎತ್ತರದಲ್ಲಿ, ಬರ್ಮಾ ಮಲಯಗಳ ದಟ್ಟ ಕಾಡುಗಳಲ್ಲಿ ಪ್ರದರ್ಶಿಸಿದ ದೈಹಿಕ ಮತ್ತು ಮಾನಸಿಕ ಸಾಹಸ ಕಾರ್ಯಗಳಿಗೆ ಸಾಕ್ಷಿಯಾಗಿತ್ತು. ಎರಡನೆಯ ಮಹಾಯುದ್ಧ, ಅನಂತರ ಹೈದರಾಬಾದ್ ಪೊಲಿಸ್ ಆಚರಣೆ ಇವುಗಳಲ್ಲಿ ಭಾಗವಹಿಸಿದ ವೀರರಿವರು. ಹೊಸಪೇಟೆಯಿಂದ ಮುಂದೆ ತುಂಗಭದ್ರೆಗೆ ಇರುವ ರೈಲ್ವೇ ಸೇತುವೆಯನ್ನು ಇವರು ಪೊಲಿಸ್ ಆಚರಣೆ ಸಂದರ್ಭದಲ್ಲಿ ರಕ್ಷಿಸಿದ ಸಾಹಸ ಕೇಳಿದವರಿಗೆ ಮರೆಯಲಾಗದ ವಿದ್ಯುದನುಭವ.

“ಸೈನಿಕರಾದರೆ ಅದೇ ಅವರ ವೃತ್ತಿ. ಆದ್ದರಿಂದ ಎಷ್ಟೋ ಸಂದರ್ಭಗಳಲ್ಲಿ ಜನ ನಷ್ಟವಾದರೂ ನಾವು ಗುರಿ ಸಾಧಿಸಲೇಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ಕ್ಯಾಡೆಟ್ಟುಗಳು ಸೈನಿಕರಲ್ಲ. ಇಲ್ಲಿ ಸಾಹಸಪ್ರದರ್ಶನವಾಗಬೇಕು. ಆದರೆ ಯಾವ ಅಪಾಯವನ್ನೂ ನಾವು ಎದುರಿಸಲು ತಯಾರಿಲ್ಲ.” ಇದು ಅವರ ತರ್ಕಸರಣಿ.

ಕಲ್ಲು ಕೊನರಿತು
ಅಧ್ಯಾಯ ಮೂವತ್ತಮೂರು

ಮುಂದಿನ ಆದಿತ್ಯವಾರ. ಬೆಳಗ್ಗಿನ ೬.೪೫ ಗಂಟೆ. ನಾವೆಲ್ಲರೂ ಸುಮಾರು ಹದಿನೈದು ಮಂದಿ ಕಾಲೇಜಿನ ಹಿಂಬದಿಯಲ್ಲಿ ಸೇರಿದೆವು. ಮಳೆಗಾಳಿ ಬೀಸಿ ನಮಗೆ ನವಚೇತನ ಊಡುತ್ತಿತ್ತು. ಆದರೆ ೭ ಗಂಟೆಯಾದರೂ ನಾಯಕತ್ರಯರ ಸುಳಿವೇ ಇಲ್ಲ. ಕನ್ನಡಿಗರು ಆರಂಭಶೂರರೇ? ಆರಂಭವೇ ಆಗಲಿಲ್ಲವಲ್ಲ. ಕಾರಣವನ್ನು ಊಹಿಸಲು ನನಗೆ ಕಷ್ಟವಾಗಲಿಲ್ಲ. ನಮ್ಮ ಹಿಂದಿನ ಕಲ್ಲ ಮೇಲಿನ ಸಭೆಯಾದ ಮರುದಿವಸ ಹಿಮಾಲಯದ ಪರ್ವತಾರೋಹಣ ಶಿಬಿರ ಸೇರಲು ಒಬ್ಬ ಕ್ಯಾಡೆಟ್ಟನನ್ನು ಆಯ್ದು ಕಳಿಸಬೇಕೆಂದು ನನಗೆ ಆದೇಶ ಬಂದಿತು. ಶ್ರೀಧರನ್ ತನ್ನನ್ನು ಆಯಬೇಕೆಂದು ಕೋರಿಕೆ ಸಲ್ಲಿಸಿದ್ದ. ಆದರೆ ನಾನವನಿಗೆ ಸ್ಪಷ್ಟವಾಗಿ ನನ್ನ ನಿಲವನ್ನು ಹೇಳಿದ್ದೆ. “ನೀನು ಬಿಎಸ್ಸಿ ಕೊನೆಯ ವರ್ಷದಲ್ಲಿದ್ದೀಯೆ. ನನ್ನ ವಿದ್ಯಾರ್ಥಿ ಕೂಡ. ತಿಂಗಳು ನಾಲ್ಕು ದಿನ ಪಾಠ ಬಿಟ್ಟು ಬಲುದೂರ ಹೋಗುವುದು ಶ್ರೇಯಸ್ಕರ ಅಲ್ಲ. ಅದೂ ಅಲ್ಲದೆ ಮುಂದಿನ ವರ್ಷ ನೀನು ನಮ್ಮೊಡನೆ ಇಲ್ಲದಿರುವುದರಿಂದ ಇಂಥ ವಿಶೇಷ ಅಪೂರ್ವ ಶಿಕ್ಷಣ ಒಬ್ಬ ಜೂನಿಯರ್ ಹುಡುಗನಿಗೆ ಕೊಡಿಸುವುದು ಸರಿಯೆಂದು ತಿಳಿದಿದ್ದೇನೆ.”

ಅವನಿಗೆ ಸ್ವಾಭಾವಿಕವಾಗಿಯೇ ಈ ವಾದ ಹಿತವಾಗಲಿಲ್ಲವೆಂದು ಅವನ ಮುಖಭಾವದಿಂದ ವ್ಯಕ್ತವಾಯಿತು. ಬಾಬಾ ಅವನ ಮಿತ್ರ. ಆದರೆ ಪಿಂಟೋನಿಗೇನಾಯಿತು? ಏನೇ ಇರಲಿ. ನಾವು ಹಿರಿಯರು ತೆಗೆದುಕೊಂಡ ನಿರ್ಧಾರ ಬೆಟಾಲಿಯನ್ನಿನ ಅಧಿಕೃತ ನಿರ್ಧಾರ. ಅದರ ಗೌರವ ಆ ನಿರ್ಧಾರವನ್ನು ಕಾರ್ಯಗತಗೊಳಿಸುವುದರಲ್ಲಿದೆ. ಎಡರು ತೊಡರುಗಳನ್ನು ನಾವು ಎದುರಿಸದಿದ್ದರೆ ಇನ್ನಾರು ಎದುರಿಸುವವರು? ಬಂದ ಹುಡುಗರನ್ನು ಕಟ್ಟಿಕೊಂಡು ನಾನೇ ಅಲೆದೆ. ಶಿಲಾರೋಹಣ ಅವರೋಹಣಗಳನ್ನು ಕುರಿತು ಒಂದು ಕಿರುಹೊತ್ತಗೆಯನ್ನು ಓದಿಕೊಂಡು ಹೋಗಿದ್ದುದು ಸ್ವಲ್ಪ ಪ್ರಯೋಜನ ನೀಡಿತು. ಲಾಲ್ ಬಾಗಿನ ಹೊರವಲಯದ ಕಡಿದಾದ ಬಂಡೆಗಳನ್ನು ಕ್ರಮಬದ್ಧವಾಗಿ ಏರಿ, ಇಳಿದು – ಅದಕ್ಕಿಂತ ಹೆಚ್ಚಾಗಿ ಕೈಕಾಲು ಮೈಗಳನ್ನು ಕಲ್ಲಿಗೆ ತರಿದುಕೊಂಡು – ಕಲ್ಲುಬಂಡೆ ಕಾಣುವಷ್ಟು ನುಣ್ಣಗಲ್ಲ, ಮೃದು ಖಂಡಿತ ಅಲ್ಲ ಎಂದು ಅರಿತುಕೊಂಡೆವು. ಗೆಲುವಿನ ಸೂಚನೆಯಿಂದ ಮರಳಿದೆವು.

ಸೋಮವಾರ ನಾನು ನಾಯಕತ್ರಯರನ್ನು ನೋಡಿದೆ. ಪಿಂಟೋನಿಗೆ ಬಹುಶಃ ಏಳಲು ತಡವಾಗಿರಬೇಕು. ಆದ್ದರಿಂದ ಬರದಿದ್ದುದಕ್ಕೆ ಸರಿಯಾದ ಕಾರಣ ಕೊಡದೇ “ಸಾರಿ ಸರ್. ಇನ್ನು ಮುಂದೆ ಹೀಗಾಗದು” ಎಂದ. ಅಂತೆಯೇ ನಡೆದುಕೊಂಡ. ಉಳಿದಿಬ್ಬರು, “ನಮಗೇನೋ ಮನಸ್ಸಿಗೆ ನೋವಾಯಿತು ಸರ್” ಎಂದು ಅರೆಹಲ್ಲು ಗೀರಿದರು. ನಾನು ಬಿರುಸಾಗಿಯೇ ಅಂದೆ “೧೨ನೇ ಮೈಸೂರು ನಮ್ಮೆಲ್ಲರಿಗಿಂತಲೂ ದೊಡ್ಡದು ಎಂದು ನಾವೆಲ್ಲರೂ ತಿಳಿದಿರತಕ್ಕದ್ದು. ಅದರ ನಿರ್ಧಾರ ಕಾರ್ಯಗತವಾಗಿಯೇ ಆಗುವುದು. ನಿಮ್ಮ ಕ್ರಮ ಸರಿಯಲ್ಲ.”

ಮುಂದೆ ಎಂದೂ ಇಂಥ ಸನ್ನಿವೇಶ ಪುನರಾವರ್ತಿಸಲಿಲ್ಲ. ವಿದ್ಯಾರ್ಥಿಗಳೊಡನೆ ನಿಕಟ ಮತ್ತು ದೀರ್ಘಕಾಲದ ಸಂಬಂಧದಿಂದ ಒಂದು ವಿಚಾರ ಅರಿತಿದ್ದೇನೆ: ನಮ್ಮ ಧ್ಯೇಯ ಧೋರಣೆಗಳು ನ್ಯಾಯಸಮ್ಮತವಾಗಿ ಸ್ಪಷ್ಟವಾಗಿ ಇರಬೇಕು. ಅವುಗಳ ನಿರ್ವಹಣೆಯಲ್ಲಿ ಖಚಿತತೆ ದೃಢತೆ ಇರಬೇಕು. ಆಗ ಸಮಸ್ಯೆಗಳು ವೈಯಕ್ತಿಕ ಒಲವು ತಿರಸ್ಕಾರಗಳ ಸಮತಳದಿಂದ ಉನ್ನತ ಮಟ್ಟದಲ್ಲಿರುವ, ನಿಷ್ಪಕ್ಷಪಾತವಾಗಿ ಗುಣಾವಗುಣಗಳನ್ನು ನಿಷ್ಕರ್ಷೆ ಮಾಡುವ, ಉದಾತ್ತ ಸಮತಳಕ್ಕೆ ವರ್ಗಾಯಿಸಲ್ಪಡುವುವು. ಅಲ್ಲಿ ಪರಿಹಾರ ಸುಲಭ. ನಾವು ನಿರ್ಲಿಪ್ತರಾಗಿ ಉಳಿಯಬಹುದು.

ಮುಂದಿನ ಎರಡು ಮೂರು ಭಾನುವಾರ ಮುಗಿಯುವಾಗ ನಮ್ಮ ಹುಡುಗರ ಸಂಖ್ಯೆ ಮೂವತ್ತಕ್ಕೇರಿತು. ಇನ್ನೂ ಬರುವವರಿದ್ದರು. ಆದರೆ ಕೂಟದಲ್ಲಿ ಶಿಸ್ತು ಕಾಪಾಡಿಕೊಳ್ಳುವ ಉದ್ದೇಶದಿಂದ ಉಳಿದವರನ್ನು ಸೇರಿಸಿಕೊಳ್ಳಲಿಲ್ಲ. “೧೨ನೇ ಮೈಸೂರಿನ ಟೈಮ್ ಎಂದರೆ ರೆಡಿಯೋ ಟೈಮ್” ಎಂಬುದು ಹುಡುಗರಿಗೆ ಆ ಅಲ್ಪಾವಧಿಯಲ್ಲಿ ಚೆನ್ನಾಗಿ ಮನವರಿಕೆ ಆಯಿತು. ಪ್ರತಿ ಆದಿತ್ಯವಾರ ೭ ಗಂಟೆಗೆ ನಾವು ಹೊರಡಬೇಕು, ೧೫ ಮಿನಿಟು ಮೊದಲೇ ಕಾಲೇಜಿನ ಹಿಂದೆ ಸೇರಬೇಕು. ಈ ೧೫ ಮಿನಿಟಿನ ಅವಕಾಶ ಅನಿವಾರ್ಯ ಕಾರಣಗಳಿಂದ ತಡವಾಗಿ ಬರುವವರಿಗಾಗಿ ಮತ್ತು ನಮ್ಮ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಿಕ್ಕಾಗಿ. ಏಳು ಗಂಟೆಗೆ ಸರಿಯಾಗಿ ನಮ್ಮ ನಡಿಗೆ ತೊಡಗಿಯೇ ಬಿಡುತ್ತಿತ್ತು. ತಡವಾಗಿ ಬಂದವರಿಗೆ ಒಂದೇ ಉತ್ತರ, “ಸಾರಿ, ನೀವು ಮುಂದಿನವಾರ ಬನ್ನಿ.”

“ಸೈಕಲ್ ಪಂಚರ್ ಆಯಿತು ಸರ್, ಬಸ್ ದೊರೆಯಲಿಲ್ಲ ಸರ್…” “ನೀವು ಯಾಕೆ ತಡವಾಗಿ ಬಂದಿರಿ ಎಂಬುದನ್ನು ಸಮರ್ಥಿಸಲು ನೂರೆಂಟು ನಿಜ ಕಾರಣಗಳಿರಬಹುದು. ಇನ್ನೂ ಅಷ್ಟು ಕಾರಣಗಳನ್ನು ಸೃಷ್ಟಿಸಲು ನೀವು ಶಕ್ತರು ಎಂದು ನನಗೆ ತಿಳಿದಿದೆ. ಆದರೆ ಅವೆಲ್ಲವನ್ನೂ ನಿವಾರಿಸಿ ಕ್ಲುಪ್ತವೇಳೆಯಲ್ಲಿ ಬರುವುದರಲ್ಲಿಯೇ ನಿಮ್ಮ ಹಿರಿಮೆಯಿದೆ. ಮುಂದಿನ ವಾರ ಸರಿಯಾಗಿ ಬನ್ನಿ. ತಡವಾದರೆ ಬರಲೇಬೇಡಿ.”

ಕಾಲನಿಷ್ಠೆಯ ಸಮಸ್ಯೆ ಮುಂದೆಂದೂ ನಮಗೆದುರಾಗಲಿಲ್ಲ. ಇಲ್ಲಿ ಎರಡು ವಿಚಾರ ಉಂಟು: ಒಂದು, ಅದರಿಂದ ಆತ್ಮಸಂಸ್ಕಾರವಾಗುವುದು; ಇನ್ನೊಂದು, ಅದು ನಾವು ಇತರರಿಗೆ, ಅವರ ಸಂವೇದನಾಶಕ್ತಿಗೆ ಪ್ರಕಟಿಸುವ ಗೌರವ, ನಮ್ಮ ಆಂತರಂಗಿಕ ಸಂಸ್ಕೃತಿಯ ಬಾಹಿರಂಗಿಕ ರೂಪ. ಜೀವನದ ಎಲ್ಲ ರಂಗಗಳಲ್ಲಿಯೂ ಇದು ಸ್ವಾಭಾವಿಕವಾಗಿಯೇ ಬರುವಂತಾಗಬೇಕು. ನಮ್ಮ ಶಿಕ್ಷಣದ ಒಂದು ಉದ್ದೇಶ ಕಾಲನಿಷ್ಠೆಯ ಪ್ರಜ್ಞೆ ಹುಡುಗರಿಗೆ ಬರುವಂತೆ ಮಾಡುವುದು. ಪೆರೇಡ್ ಗ್ರೌಂಡಿನಲ್ಲಿ ಈ ಕುರಿತು ನಾವು ಕರುಣಾವಂತರಾಗುವುದು ಕರುಣೆಯ ದುರುಪಯೋಗ ಮಾಡಿದಂತೆ. ಅದರಿಂದ ಕ್ಯಾಡೆಟ್ಟುಗಳ ಭವಿಷ್ಯವನ್ನು ಅಷ್ಟು ಹಾಳು ಮಾಡಿದಂತೆ.

೧೨ನೇ ಮೈಸೂರಿನ ಶಿಲಾರೋಹಿಗಳು
ಅಧ್ಯಾಯ ಮೂವತ್ನಾಲ್ಕು

ಲಕ್ಷ್ಮೀನಾರಾಯಣ (ಲಕ್ಷ್ಮಿ) ನಮ್ಮ ವಿದ್ಯಾರ್ಥಿ, ಕ್ಯಾಡೆಟ್. ಒರತೆ ಉಗಮಿಸುವ ಕಾಲದಲ್ಲಿ ಅವನು ಹಿಮಾಲಯದ ಮಂಜುಗಡ್ಡೆಗಳ ಮೇಲೆ ಏರಿ ಏರಿ ಹೋಗುತ್ತಿದ್ದ. ಅಲ್ಲಿ ಶಿಕ್ಷಣ ಪಡೆಯುತ್ತಿದ್ದ. ಸೆಪ್ಟೆಂಬರ್ ತರುಣದಲ್ಲಿ ಅವನು ಅಲ್ಲಿಂದ ಯಶಸ್ವಿಯಾಗಿ ಮರಳಿ ಬಂದ. ಅವನಿಗೆ ಅತ್ಯುಚ್ಚ ಪ್ರಶಸ್ತಿ ದರ್ಜೆ ಬಂದಿದ್ದುವು. ಹಿಂದೆ ಯಾವ ಕ್ಯಾಡೆಟ್ಟೂ ಸಾಧಿಸದ ವಿಕ್ರಮವನ್ನು ಅವನು ಅಲ್ಲಿ ಸಾಧಿಸಿ ತೇನ್ಸಿಂಗ್ ಮೊದಲಾದವರಿಂದ ಮೆಚ್ಚುಗೆ ಪತ್ರ ಪಡೆದು ಮರಳಿದ್ದ. ಅವನು ಬಂದಂದಿನಿಂದ ನಮ್ಮ ಶಿಲಾರೋಹಿಗಳ ಕೂಟಕ್ಕೆ ಒಂದು ಸ್ಪಷ್ಟ ಆಕಾರ ಮಾತು ಧೋರಣೆ ಒದಗಿದುವು.

ಲಕ್ಷ್ಮಿ ಮರಳಿದ ಪ್ರಥಮ ಆದಿತ್ಯವಾರ ನಾವು ಆರೇಳು ಮೈಲು ದೂರ ಕಲ್ಲು ಬಂಡೆಗಳನ್ನರಸಿ ನಡೆಯುತ್ತ ಹೋದೆವು. ಹೆಬ್ಬಾಳದ ಸಮೀಪದಲ್ಲಿ ಒಂದು ದೇವರ ಗುಡಿಯಿದೆ. ಅದರ ಆವರಣದಲ್ಲಿರುವ ಕಲ್ಲು ಬಂಡೆ ನಮ್ಮ ಶಿಕ್ಷಣಕ್ಕೆ ಸರಿಯಾಗಿ ಕಡೆದಂತಿತ್ತು. ಇದಕ್ಕೆ ವಿಶ್ವೇಶ್ವರಯ್ಯ ಬಂಡೆ ಎಂಬ ಹೆಸರಿತ್ತು. ದಿವಾನ್ ವಿಶ್ವೇಶ್ವರಯ್ಯ ಪ್ರತಿ ಸಂಜೆ ಇಲ್ಲಿವರೆಗೆ ನಡೆದು ಬಂದು ಇದರ ಮೇಲೆ ವಿರಮಿಸಿ ಹಿಂತಿರುಗುತ್ತಿದ್ದರಂತೆ. ಇದು ೨೦ ಅಡಿ ಎತ್ತರದ ಕಡಿದಾದ ಕಲ್ಲು. ಇದನ್ನು ನೆಟ್ಟಗೆ ಏರುವುದು ಸಾಧ್ಯವೇ ಇಲ್ಲ ಎಂದು ನಮಗೆ ತೋರಿತ್ತು. ಆದರೆ ಲಕ್ಷ್ಮಿ ಇದನ್ನು ಮಂಗ ಏರುವಷ್ಟು ಸುಲಭವಾಗಿ ಹಗುರವಾಗಿ ಏರಿದ. ಅಷ್ಟೇ ಸುಲಭವಾಗಿ ಅಲ್ಲಿಂದ ಇಳಿದೂ ಬಿಟ್ಟ! ಮುಂದೆ ಕಲ್ಲು ಹತ್ತುವ ಕಲೆಯನ್ನು ಹೆಜ್ಜೆ ಹೆಜ್ಜೆಯಾಗಿ ವಿವರಿಸತೊಡಗಿದ.

“ಕಲ್ಲುಗಳಲ್ಲಿ ಎರಡೇ ವಿಧ: ಹತ್ತಿರುವ ಕಲ್ಲು, ಹತ್ತದಿರುವ ಕಲ್ಲು. ಹತ್ತಲಾಗದ ಕಲ್ಲೆಂಬುದು ಇಲ್ಲ. ಕಲ್ಲುಗಳು ನಿಸರ್ಗದಲ್ಲಿ ಹಲವಾರು ಬಗೆಯಲ್ಲಿ ರೂಪುಗೊಂಡಿರುವುವು. ಅವು ನಮ್ಮ ಸೌಕರ್ಯಕ್ಕನುಗುಣವಾಗಿ ನಿರ್ಮಾಣವಾಗಿರುವುದಿಲ್ಲ. ಆದ್ದರಿಂದ ನಾವು ಹತ್ತಬೇಕಾದ ಕಲ್ಲಿನ ಸೂಕ್ಷ್ಮಾವಲೋಕನ ಬಲು ಅಗತ್ಯ. ಕಲ್ಲಿನ ಪ್ರತಿ ಗೀರು, ಬಿರುಕು, ಉಬ್ಬು, ತಗ್ಗು ನಮಗೆ ಒಂದೊಂದು ಅರ್ಥ ನೀಡುವುದು. ಅದನ್ನನುಸರಿಸಿ ನಮ್ಮ ಹತ್ತುವ ಮತ್ತು ಇಳಿಯುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.” ಇದು ಅವನು ಕಲಿಸಿದ ಪ್ರಥಮ ಪಾಠ.

ಈ ಸಿದ್ಧಾಂತದ ಪ್ರಕಾರ ಆ ಕಲ್ಲನ್ನು ಅವನು ವಿವರಿಸಿ, ನಿಧಾನವಾಗಿ ಹತ್ತಿ ಮೇಲೆ ಹೋಗಿ, ಇತರರನ್ನೂ ಹತ್ತುವಂತೆ ಹುರಿದುಂಬಿಸಿ ಒಂದು ಹೊಸ ದೃಷ್ಟಿ ನಮಗಿತ್ತ. ಹಲವಾರು ಹುಡುಗರು ತುದಿಗೇರಿದರು. ಅವರ ಅಭಿಮಾನಕ್ಕೆ ಪಾರವೇ ಇಲ್ಲ. ಆಗದಿದ್ದವರು, ಸ್ಥೂಲಕಾಯರು ಪುನಃ ಪುನಃ ಮೇಲೇರಿ ಜಾರಿದವರು ಕಲ್ಲಿನಲ್ಲಿಯೇ ದೋಷ ಹುಡುಕತೊಡಗಿದರು. ಆ ದಿನ ನಮ್ಮ ಶಿಕ್ಷಣ ತುಂಬ ಯಶಸ್ವಿಯಾಯಿತು. ನಿಜವಾಗಿಯೂ ಶಿಲಾರೋಹಿಗಳ ಕೂಟವಾಯಿತು.

ಬಳಸುದಾರಿಗಾಗಿ ಅಥವಾ ಏಣಿಯಿಟ್ಟು ಬಂಡೆ ತುದಿಗೇರಿದವರಿಗೆ, ಅಥವಾ ನೆರಳಿನಲ್ಲಿ ಆರಾಮವಾಗಿ ಒರಗಿ, “ಕಲ್ಲೇರುವುದೇಕೆ? ಅದರಲ್ಲಿಯೂ ಒಂದು ಆಟವಿದೆಯೇ?” ಎನ್ನುವ ನಿರಾಶಾವಾದಿಗಳಿಗೆ, ನಿಷ್ಕ್ರಿಯಾವಂತರಿಗೆ, “ದೇವರೇ! ಅವರಿಗೆ ತಾವೇನೆನ್ನುತ್ತೇವೆ ಎಂಬುದರ ಪರಿವೆಯೇ ಇಲ್ಲ” ಎನ್ನಬೇಕಾಗುತ್ತದೆ. ನಮ್ಮ ಯಾವ ಆಟವಾದರೂ ಇಷ್ಟೇ ಅಲ್ಲವೇ? ಕ್ರಿಕೆಟ್ ಆಡದಿದ್ದರೆ, ನೋಡದಿದ್ದರೆ ಏನು? ಈಸದಿದ್ದರೆ ಏನು? ನಾವು ಸಾಯುತ್ತೇವೆಯೇ? ಸಾಹಸ ಭಾಗಿತ್ವದಿಂದ ಲಭಿಸುವ ಆತ್ಮತೃಪ್ತಿ, ಆತ್ಮವಿಶ್ವಾಸವೇ ಅದರ ಫಲ. ಪರೋಕ್ಷವಾಗಿ ಅದು ಜೀವನದ ಇತರ ರಂಗಗಳಲ್ಲಿಯೂ ಸಹಾಯಕವಾಗುವುದು.

ಮುಂದಿನವಾರ ಲಕ್ಷ್ಮಿ ಸೂಚಿಸಿದ, “ಕಡಿದಾದ ಆಳವಾದ ಬಂಡೆಯನ್ನು ಜಿಗಿಯಲು ಅಥವಾ rapple ಮಾಡಲು ನಮಗೆ ನೈಲಾನ್ ಹಗ್ಗ ಮತ್ತು ಇತರ ಹಲವಾರು ಸಾಧನಗಳು ಬೇಕು. ನೀವು ತರಿಸಿಕೊಡಬೇಕು ಸರ್.” ಬೆಂಗಳೂರಿನಲ್ಲೆಲ್ಲಿಯೂ ಶಿಲಾರೋಹಣ, ಅವರೋಹಣಗಳಿಗಾಗಿಯೇ ತಯಾರಾದ ವಿಶೇಷ ತರದ ನೈಲಾನ್ ಹಗ್ಗ ದೊರೆಯಲಿಲ್ಲ. ತಾತ್ಕಾಲಿಕ ಉಪಯೋಗಕ್ಕೆಂದು ದಪ್ಪದ ಹತ್ತಿ ಹಗ್ಗಗಳನ್ನು ಖರೀದಿಸಿದೆವು. ವಿಶ್ವೇಶ್ವರಯ್ಯ ಬಂಡೆಯನ್ನೇ ಪ್ರಾರಂಭಿಕರಿಗೆ ಶಿಕ್ಷಣವೀಯಲು ಆಯ್ದುಕೊಂಡೆವು. ಇಲ್ಲಿ ಪ್ರತಿ ಆದಿತ್ಯವಾರವೂ ನಾನಾ ನಮೂನೆಯ ರ‍್ಯಾಪ್ಲಿಂಗ್ (ಹಗ್ಗಗಳ ಸಹಾಯದಿಂದ ಬಂಡೆ ಇಳಿಯುವುದು) ಕ್ರಮಗಳನ್ನು ಅಭ್ಯಸಿಸತೊಡಗಿದೆವು.

(ಮುಂದುವರಿಯಲಿದೆ)