ಜಿ.ಟಿ. ನಾರಾಯಣ ರಾಯರ ‘ಮುಗಿಯದ ಪಯಣ’
ವಿ-ಧಾರಾವಾಹಿಯ ಕಂತು ಇಪ್ಪತ್ತು | ಅಧ್ಯಾಯ ನಲ್ವತ್ನಾಲ್ಕು

ಫೆಬ್ರುವರಿ ೧೦ರ ಸಂಜೆ (೧೯೬೭) ಬೆಂಗಳೂರಿನ ಹೆದ್ದಾರಿಗಳಲ್ಲಿ “ಬೆಂಗಳೂರು ಯೂನಿವರ್ಸಿಟಿಗೆ ಜಯವಾಗಲಿ, ಸರಕಾರಿ ಕಾಲೇಜಿಗೆ ಜಯವಾಗಲಿ, ೧೨ನೇ ಮೈಸೂರಿಗೆ ಜಯವಾಗಲಿ, ಕುದುರೆಮುಖ ಆರೋಹಣ ಸಾಹಸಕ್ಕೆ ಜಯವಾಗಲಿ” ಎನ್ನುವ ಘೋಷಣೆಗಳು ಎಲ್ಲರ ಗಮನವನ್ನು ಓಡುತ್ತಿದ್ದ ಎರಡು ಎನ್‌ಸಿಸಿ ಲಾರಿಗಳೆಡೆಗೆ ಸೆಳೆದುವು. ಸಮವಸ್ತ್ರ ಧರಿಸಿದ, ನವಹರ್ಷ ಹರಿಸುವ, ನಗುಮೊಗದ ಆ ೩೭ ಕ್ಯಾಡೆಟ್ಟುಗಳು ಅತಿ ದೂರದ ಅತಿ ಎತ್ತರದ ಕುದುರೆಮುಖದೆಡೆಗೆ ಆಗ ಸಾಹಸ ಪ್ರದರ್ಶನಕ್ಕಾಗಿ ಧಾವಿಸುತ್ತಿದ್ದರು. ಬೆಂಗಳೂರು ನಗರ ವಿದ್ಯುದ್ದೀಪದ ಕಡಲಿನಲ್ಲಿ ಕಂತಿದ್ದಾಗ, ಈ ಕಡಲಿನ ಸಾರವೇ ಪಶ್ಚಿಮಾಕಾಶದಲ್ಲಿ ಅತ್ಯಂತ ಪ್ರಭಾನ್ವಿತ ಶುಕ್ರ, ಬುಧ, ಚಂದ್ರ ಆಗಿ ಸಾಲಾಗಿ ಕಂಗೊಳಿಸುತ್ತಿದ್ದಾಗ ನಮ್ಮ ಲಾರಿಗಳು ಕತ್ತಲೆಯ ಮೊತ್ತವನ್ನು ಸೀಳಿ ಮುಂದುವರಿದುವು. ಲಾರಿಯ ಒಳಗೆ ಎಲ್ಲರೂ ಕುಳಿತಿರಬೇಕು, ಬದಿಯ ಚೌಕಟ್ಟಿನ ಮೇಲೆ ಪರಂಗಿ ಮಣೆಯಂತೆ ಕುಳಿತರಲೇಬಾರದು. ಹೀಗೆ ಕುಳಿತಿದ್ದರೆ ಬೆನ್ನು ಲಾರಿಯ ರೇಖೆಯಿಂದ ಹೊರಗೆ ಚಾಚಿರುತ್ತದೆ. ಎರಡು ವಾಹನಗಳು ಸಂಧಿಸುವಾಗ ಅಥವಾ ಒಂದನ್ನು ಇನ್ನೊಂದು ಹಿಂದೆ ಹಾಕಿ ಓಡುವಾಗ ಅಪಾಯ ಸಂಭವಿಸಬಹುದು.

ರಾತ್ರಿಯ ೮ ಗಂಟೆ ದಾಟಿದಾಗ ಕುಣಿಗಲ್ಲಿನ ಪ್ರವಾಸೀ ಮಂದಿರ ತಲಪಿದೆವು. ನಾವು ತಂದಿದ್ದ ಮೊಸರನ್ನ, ಚಿತ್ರಾನ್ನ ಎಲ್ಲವನ್ನೂ ಅಲ್ಲಿ ತಿಂದು ಪುನಃ ಲಾರಿಗಳನ್ನೇರಿದೆವು. ಮಿಣುಕು ದೀಪಗಳಂತೆ ಲಾರಿಗಳು ಕತ್ತಲೆಯ ಗರ್ಭವನ್ನು ಹರಿದುವು. ಎಷ್ಟೋ ಮೈಲುಗಳಿಗೊಮ್ಮೆ ಎದುರಿನಿಂದ ಬರುತ್ತಿದ್ದ ಯಾವುದೋ ಲಾರಿ, ಹಳ್ಳಿಯ ಸಮೀಪದ ಪೋಲಿನಾಯಿಗಳ ಬೊಗಳುವಿಕೆ ಅಲ್ಲದಿದ್ದರೆ ನಮ್ಮ ಲಾರಿಗಳು ಒಂದೇ ಶ್ರುತಿ ಮಿಡಿಯುತ್ತ ಧಾವಿಸಿದುವು. ದಾರಿ ನೆಟ್ಟಗೆ. ನಾನೂ ದೊರೆಗಳೂ ಹಿಂದಿನ ಲಾರಿಯ ಮುಂದಿನ ಸೀಟಿನಲ್ಲಿದ್ದೆವು. ಇದ್ದಕ್ಕಿದ್ದ ಹಾಗೆ ನಮ್ಮನ್ನು ಎದುರಿನಿಂದ ಇದ್ದಲು ಮೂಟೆ ಹೇರಿದ್ದ ಒಂದು ಭಾರೀ ಲಾರಿ ದಾಟಿ ಹೋಯಿತು. ಅದರಿಂದ ವಿಪರೀತ ಮಸಿ, ಮಸಿಹುಡಿ ಸುರಿಯುತ್ತಿದ್ದುವು. ಮಾತ್ರವಲ್ಲ, ಅಲ್ಲೆಲ್ಲ ಮಸಿಯ ಧೂಳು ತುಂಬಿ ನಮಗೆ ದಾರಿ ಕಾಣಿಸದಂತಾಯಿತು. ಇಷ್ಟರಲ್ಲಿಯೇ ನಮ್ಮ ಮುಂದಿನ ಲಾರಿ ರಸ್ತೆ ಬದಿಗೆ ನಿಂತಿತ್ತು. “ಆಕ್ಸಿಡೆಂಟ್” ಎಂದು ಅಲ್ಲಿಂದ ಯಾರೋ ಕೂಗಿದರು. ನಮಗೆ ನೆತ್ತರು ಹೆಪ್ಪುಗಟ್ಟಿತು. ಲಾರಿಯ ಬದಿಯ ಚೌಕಟ್ಟಿನ ಮೇಲೆ ಸುತ್ತಿದ್ದ ಟಾರ್ಪಾಲಿನ್ನಿಗೆ ಇದ್ದಲು ಲಾರಿಯಿಂದ ಹೊರಗೆ ಚಾಚಿದ್ದ ಮೂಟೆಗಳು ಢಿಕ್ಕಿ ಹೊಡೆದು ಟಾರ್ಪಾಲಿನ್ ಹರಿದು ಹೋಗಿತ್ತು. ಅದರ ಮೂಲಕ ಒಳಗೆ ಕುಳಿತವರಿಗೆ ಸಾಕಷ್ಟು ಮಸಿಯ ಅಭಿಷೇಕವಾಗಿತ್ತು. ಢಿಕ್ಕಿ ಹೊಡೆದ ಲಾರಿ, ನಿಂತರೆ ಅಪಾಯವೆಂದು, ಚೆಲ್ಲುತ್ತಿದ್ದ ಮಸಿಯನ್ನು ಲೆಕ್ಕಿಸದೇ ಓಡಿಯೇ ಹೋಗಿತ್ತು. ಸದ್ಯ ಯಾರಿಗೇನೂ ಅಪಾಯವಾಗಿರಲಿಲ್ಲ. ಚೌಕಟ್ಟಿನ ಮೇಲೆ ಯಾರಾದರೂ ಕುಳಿತಿದ್ದರೆ ಆ ಗಳಿಗೆಯಲ್ಲಿ ಭೀಕರ ದುರಂತ ಸಂಭವಿಸಿರುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.

ಚಳಿಗಾಳಿ ಕೊರೆಯುತ್ತಿತ್ತು. ರಾತ್ರಿ ಏರುತ್ತಿತ್ತು. ಲಾರಿಯೊಳಗೆ ಕುಳಿತವರಿಗೇನೂ ಸುಖವಲ್ಲ. ಸಾಮಾನು ಸರಂಜಾಮುಗಳ ನಡುವೆ ಹೇಗೆ ಕುಳಿತರೂ ಮೈ ಕೈ ನೋವು ತಪ್ಪಿದ್ದಲ್ಲ. ಅಂತೂ ೧ ಗಂಟೆಗೆ ಯಾವುದೋ ಒಂದು ಪಟ್ಟಣ ಸೇರಿದೆವು. ರಸ್ತೆ ದೀಪಗಳು ಉರಿಯುತ್ತಿದ್ದುವು. ಇತಿಹಾಸ ಪ್ರಸಿದ್ಧ ಬೇಲೂರು ಪಟ್ಟಣವದು. ಅಲ್ಲಿಯ ಪ್ರವಾಸೀ ಮಂದಿರದ ಅಂಗಳದಲ್ಲಿ ಲಾರಿಗಳನ್ನು ನಿಲ್ಲಿಸಿ ಮಂದಿರದ ಜಗಲಿ, ಕೋಣೆ ಎಲ್ಲ ನಾವೇ ವ್ಯಾಪಿಸಿಕೊಂಡೆವು. ಚಳಿ, ನಿದ್ರೆ, ಆಯಾಸ ಮುಪ್ಪುರಿಗೊಂಡು ಹುಡುಗರನ್ನು ಕಾಡುತ್ತಿದ್ದುವು. ಕಿಟ್ ಬ್ಯಾಗ್ ಬಿಡಿಸಿದೆವು. ಡರಿ, ಬ್ಲಾಂಕೆಟ್ ಹರಡಿದೆವು. ಕಾಲು ಚಾಚಿದ್ದೊಂದೇ ಗೊತ್ತು. ಪ್ರವಾಸೀ ಮಂದಿರದ ಹೊರವಲಯದಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಆ ರಾಕ್ಷಸರ ಗರ್ಜನೆ, ಚಂಡೆ ಮದ್ದಳೆಗಳ ಸಿಂಹನಾದ ಯಾವುದೂ ನಮ್ಮನ್ನು ಎಚ್ಚರದಿಂದಿಡಲು ಶಕ್ತವಾಗಲಿಲ್ಲ. ಮಲಗುವ ಮುನ್ನ ಸೀನಿಯರ್ ಅಂಡರ್ ಆಫೀಸರ್ (ಕ್ಯಾಡೆಟ್ಟುಗಳಲ್ಲಿ ಪರಮೋನ್ನತ ಪದವಿ – ಅವರ ಮುಂದಾಳು) ಬಾಬಾ ಪ್ರಸಾದನಿಗೆ ಆದೇಶ ಕೊಟ್ಟೆ. “೬ ಗಂಟೆಗೆ ಹಾಸಿಗೆ ಚಾ, ೬-೩೦ ಗಂಟೆ ತನಕ ದೇವಾಲಯ ದರ್ಶನ. ಕೂಡಲೇ ಉಪಾಹಾರ. ೮ ಗಂಟೆಗೆ ಮುಂದಿನ ಪ್ರಯಾಣ.” ‘ಹಾಸಿಗೆಯಿಂದ ಚಾಲನ ಮಾಡಿಸುವಂಥಾದ್ದು ಇಂತೆಂದು ಹಾಸಿಗೆ ಚಾ’ ಇದು ಇಂಗ್ಲಿಷಿನ ಬೆಡ್ ಟೀಯ ತದ್ಭವದ ವ್ಯುತ್ಪತ್ತಿ. ಬೆಳಗ್ಗೆ ಬೇಗ ಏಳಿ ಅಂದರೆ ಆಗಿನ ಮನಸ್ಥಿತಿಯಲ್ಲಿ ಯಾರಿಗೂ ಇಷ್ಟವಾಗಲಾರದು. ಹಾಸಿಗೆ ಚಾ ಎನ್ನುವ ಸಕ್ಕರೆ ಗುಳಿಗೆಯೊಳಗೆ ಇದೇ ಕಹಿ ವಿಚಾರವನ್ನು ತುಂಬಿದರೆ ಅದರ ಪರಿಣಾಮ ಅಷ್ಟೊಂದು ಅಹಿತಕರವಾಗದು. ನಮ್ಮ ಯಾತ್ರೆಯ ಪ್ರಥಮ ಪ್ರಾತಃಕಾಲ ಬೇಲೂರಿನ ಶಿಲಾಸಂಗೀತ ಶ್ರವಣದಿಂದ ಪ್ರಾರಂಭವಾಯಿತು.

“ಜಕಣಾಚಾರಿಯ ಕಲೆಯ ಬಲೆಯಲ್ಲಿಯೇ ಹತ್ತು ದಿವಸಗಳನ್ನೂ ಕಳೆಯಬಾರದೇ?” ಎಂದನು ಮುಕುಂದ.
“ವಿಶ್ವಕರ್ಮನ ಕವಿತೆಯೇ ನಮಗೆ ಕುದುರೆಮುಖದ ಮೇಲೆ ಕಾದಿರುವಾಗ. . .” ಎಚ್ಚರಿಸಿದನು ಚಂದ್ರಶೇಖರ.
ಹುಡುಗರೇನೋ ಮರಳಿದರು. ಆದರೆ ಕವಿದ್ವಯರನ್ನು ಕಲ್ಪನೆಯ ಭಾವನಾಪ್ರಪಂಚದಿಂದ ಉಪಾಹಾರದ ಮೃತ್ತಿಕಾಪ್ರಪಂಚಕ್ಕೆ ಎಳೆದು ತರಲು ಎರಡೆರಡು ಸಲ ಜನರನ್ನು ಅಟ್ಟಬೇಕಾಯಿತು. ಭಾವಪಾರವಶ್ಯದಲ್ಲಿ ಕಾಲ ಕಾಲವಾಗಿರುತ್ತದೆ.

ಬೇಲೂರಿನಿಂದ ಮುಂದೆ ಮಲೆನಾಡಿನ ತಂಪು. ಹಚ್ಚ ಹಸುರಿನ ಹರವು. ಬಿಸಿಲು ಬೆಳದಿಂಗಳು. ಡೊಂಕು ಡೊಂಕಾದ ದಾರಿ ಕಾಫಿ ತೋಟಗಳನ್ನು ಬಳಸಿ ಕಿತ್ತಳೆ ಮರಗಳ ಸಾಲಿನೆಡೆಗಾಗಿ ಸಾಗುವ ಮೇಖಲೆ. ಸಮೀಪದ ದಾರಿ ಎಂದು ಎಡಗಡೆಯ ಕವಲು ದಾರಿಗಾಗಿ ಹೋದದ್ದು ಹಳ್ಳಿಗಾಡಿನ ಧೂಳರಾಶಿಗಾಗಿ ಮುಂದುವರಿಯಿತು. ಧೂಳು ತಿಂದ ಹಿಂದಿನ ಲಾರಿಯವರಿಗೆ ಹಸುರು ಅರಸಿನವಾಯಿತು. ಟಾರ್ಪಾಲಿನ್ ಮುಚ್ಚಿದ್ದ ಲಾರಿಯ ಹಿಂಭಾಗ ಗಾಳಿ ಸಂಚಾರವಿಲ್ಲದೇ ಕುಳಿತಿರಲು ಕಷ್ಟವೆಂದೆನ್ನಿಸಿತು. ಬಯಲು ಸೀಮೆಯ ಹುಡುಗರು ವಾಂತಿ ಮಾಡಿದರು! ಪ್ರಕೃತಿ ಸೌಂದರ್ಯ ಹುಚ್ಚು ಹೊಳೆ ಹರಿದಿರುವಾಗ ಮುಸುಕೆಳೆದು ಕೂರುವುದುಂಟೇ! ಟಾರ್ಪಾಲಿನ್ ಬಿಚ್ಚಿದ ಮೇಲೆ ಅದೆಷ್ಟೋ ಸುಖವಾಯಿತು. ಅತಿ ದೂರದ ಬಾನಿನ ನೀಲಿಯ ಮೇಲೆ ರೇಖಾಚಿತ್ರಗಳಾಗಿ ಕಾಣುತ್ತಿದ್ದ ಪರ್ವತಶ್ರೇಣಿಗಳು ಕ್ರಮೇಣ ಸ್ಪಷ್ಟವಾಗತೊಡಗಿದುವು. ಚಾರ್ಮಾಡಿ ಘಾಟಿನ ಮೇಲೆ ನಾವಿದ್ದೆವು. ಒಂದೊಂದು U ತಿರುಗಾಸಿಗೂ ನಡುವೆ ಮಹಾ ಪ್ರಪಾತ. ಮಲೆನಾಡಿನ ತೊರೆ ದುಮುಕುವ ಹಿಸ್‌ನಾದ. ಒಂದು ಸಲ ಬಲಗಡೆಗೆ ಎತ್ತರದ ಬೆಟ್ಟ, ಎಡಗಡೆಗೆ ಆಳವಾದ ಕಣಿವೆ ಇದ್ದರೆ ಇನ್ನೊಂದು ಸಲ ಇದು ತಿರುಗಾಮುರುಗಾ ಆಗುವುದು. ಹೀಗೆ ಹದಿನಾರೋ ಹದಿನೇಳೋ U ತಿರುಗಾಸುಗಳು ಮುಗಿದಾಗ ನಾವು ಚಾರ್ಮಾಡಿಯ ತಳ ಸೇರಿದ್ದೆವು.

ಮುಂದಿನ ದಾರಿ ದಕ್ಷಿಣ ಕನ್ನಡ ಜಿಲ್ಲೆಯ ತೆಂಗುಕಂಗುಗಳ ಗೇರುಬಾಳೆಗಳ ನಡುವಿನ ಹಾಡು. ‘ಪಡುವಣ ಕಡಲಿನ ತೆಂಗಿನ ಮಡಲಿನ ಮರೆಯಲಿ ಮೆರೆಯುವ’ ನಾಡು. ಎಲ್ಲೆಂದರಲ್ಲಿ ದಟ್ಟವಾಗಿ ಬೆಳೆದಿದ್ದ ಕಾಡು. ಮರಗಳೆಡೆಯಿಂದ ಸೂರ್ಯ ಕೊರೆಯುತ್ತಿದ್ದ. ನಮ್ಮ ಲಾರಿಗಳ ನಿನದದ ವಿನಾ ಬೇರೆಲ್ಲೆಲ್ಲೂ ನೀರವ ಶಾಂತಿ. ಬೆಂಗಳೂರಿನ ಹುಡುಗರನ್ನು ದಕ್ಷಿಣ ಕನ್ನಡದ ಕಡಲತಡಿಯ ಸೆಕೆ ಬೇಯಿಸುತ್ತಿತ್ತು. ಲಾರಿ ನಿಂತಾಗಲೆಲ್ಲ ಇದರ ಅರಿವು ಹೆಚ್ಚಾಗುತ್ತಿತ್ತು. ಮುರಕಲ್ಲಿನ ಆ ಕೆಮ್ಮಣ್ಣು ಈ ಸೆಕೆಯ ಭಾವನೆಯನ್ನು ಹೆಚ್ಚು ಮಾಡುತ್ತಿತ್ತು. ರಸ್ತೆ ಬದಿಯ ಗಿಡ ಮರಗಳ ಎಲೆಗಳು ಕೆಂಧೂಳಿನಿಂದ ಅದೇ ಬಣ್ಣಕ್ಕೆ ತಿರುಗಿದ್ದುವು. ನೀರು ಹರಿಯುವುದು ಕಂಡಲ್ಲೆಲ್ಲ ನಾವಿಲ್ಲಿಯೇ ತಂಗಬಾರದೇ, ಈ ನೀರಿನೊಳಗೇ ಬಿದ್ದುಕೊಂಡು ಇರಬಾರದೇ ಎಂಬ ಭಾವನೆ ಬರುತ್ತಿತ್ತು.

ಸೂರ್ಯ ನೆತ್ತಿಗೇರುವ ಮೊದಲೇ ಉಜಿರೆ ಸೇರಿದೆವು. ಬೆಂಗಳೂರು – ಚಾರ್ಮಾಡಿ – ಮಂಗಳೂರು ಮಾರ್ಗದಲ್ಲಿ ಉಜಿರೆಯೊಂದು ‘ಜಂಕ್ಷನ್’. ಅಲ್ಲಿಂದ ಎಡಗಡೆಗೆ ೬ ಮೈಲು ಮುಂದೆ ಹೋದರೆ ಪವಿತ್ರ ಕ್ಷೇತ್ರ ಧರ್ಮಸ್ಥಳ ಬರುವುದು. ಉಜಿರೆಯಿಂದ ಸೀದಾ (ಮಂಗಳೂರಿನೆಡೆಗೆ) ಮುಂದೆ ಹೋದರೆ ೨ ಮೈಲು ದೂರದಲ್ಲಿ, ಬೆಳ್ತಂಗಡಿ ತಲಪುವ ಮೊದಲೇ ಬಲಗಡೆಗೆ ಒಂದು ಹಳ್ಳಿ ದಾರಿಯಿದೆ. ಇದರಲ್ಲಿ ೭ ಮೈಲು ದೂರ ಸಾಗುವಾಗ ನಾವೂರು ಎನ್ನುವ ಕುಗ್ರಾಮ ಬರುವುದು. ಅದು ಕುದುರೆಮುಖದ ತಳ. ಉಜಿರೆಯಿಂದ ನಾವೂರಿಗೆ ಕಾಲುದಾರಿಗಾಗಿಯೂ ಹೋಗಬಹುದು. ಧರ್ಮಸ್ಥಳ, ಕುದುರೆಮುಖ ಶ್ರೇಣಿ ಎದುರು ಬದಿರಾಗಿವೆ.

ಉಜಿರೆಯಲ್ಲಿ ಧರ್ಮಸ್ಥಳದ ಹೆಗಡೆಯವರೊಂದು ಗುರುಕುಲಾಶ್ರಮ, ಒಂದು ಬೋರ್ಡಿಂಗ್, ಒಂದು ಕಾಲೇಜ್ ಎಲ್ಲವನ್ನೂ ಸ್ಥಾಪಿಸಿದ್ದಾರೆ. ಇವೆಲ್ಲ ಇರುವ ಆವರಣದ ಹೆಸರು ಸಿದ್ಧವನ. ಸಿದ್ಧವನದ ಮುಂದೆ ಲಾರಿಗಳು ಓಡುತ್ತಿದ್ದಾಗ ಒಬ್ಬ ಜೂನಿಯರ್ ಡಿವಿಶನ್ ಎನ್‌ಸಿಸಿ ಸಮವಸ್ತ್ರಧಾರಿ ಬಾಲಕ ಸುಟಿಯಾಗಿ ನಿಂತು ಕೈ ಅಡ್ಡ ಹಿಡಿದು ಲಾರಿಗಳನ್ನು ನಿಲ್ಲಿಸಿದ. ಸೆಲ್ಯೂಟ್ ನೀಡಿ, “ಮೇಜರ್ ಮುತ್ತಪ್ಪನವರು ಇಲ್ಲಿಯೇ ಒಳಗೆ ನಿಮಗಾಗಿ ಕಾಯುತ್ತಿದ್ದಾರೆ, ಸರ್! ಬರಬೇಕಂತೆ” ಎಂದ.

ಮೇಜರ್ ಮುತ್ತಪ್ಪನವರು ಮಂಗಳೂರಿನ ಎನ್‌ಸಿಸಿಯ ಮುಖ್ಯಾಧಿಕಾರಿಗಳು, ನನಗೆ ಕಳೆದ ೧೨-೧೩ ವರ್ಷಗಳಿಂದಲೂ ಪರಿಚಿತರು, ಮಿತ್ರರು. ಅವರು ಬೆಂಗಳೂರಿನ ಎನ್‌ಸಿಸಿ ಮುಖ್ಯ ಕಚೇರಿಯಲ್ಲಿ ವರಿಷ್ಠಾಧಿಕಾರಿಗಳಾಗಿದ್ದಾಗ ತಮ್ಮ ದಕ್ಷತೆ, ಕಾರ್ಯ ಧುರಂಧರತೆಗಳಿಂದ ಸರ್ವಜನಪ್ರಿಯರಾಗಿದ್ದರು. ಮೇಜರ್ ನಾರಾಯಣ್ ಸಿಂಗ್ ಮತ್ತು ಮೇಜರ್ ಮುತ್ತಪ್ಪ ಇವರ ಗೆಳೆತನ ಎಷ್ಟೋ ದಶಕಗಳದು. ನಾವು ಬರುವ ವಿಚಾರ ತಿಳಿದು ಮುತ್ತಪ್ಪನವರು ತಾವಾಗಿಯೇ ಉಜಿರೆಗೆ ಬಂದಿದ್ದರು. ಹಳೆಯ ಮಿತ್ರರ ಅಪೂರ್ವ ಸಮಾಗಮ. ಸಂತೋಷವೋ ದುಃಖವೋ ತಿಳಿಯದು. ದೊರೆಗಳ ಸಂಕಟ ಮುತ್ತಪ್ಪನವರಿಗೆ ಗೊತ್ತಿತ್ತು.

ಮುತ್ತಪ್ಪನವರೊಂದಿಗೆ ಇನ್ನೂ ಮೂವರು ತರುಣರಿದ್ದರು. ಟೆರಿಲಿನ್ ಪ್ಯಾಂಟ್, ಷರ್ಟ್, ಟೈಧಾರಿಗಳು. ಸುಟಿಯಾಗಿ ನಿಂತು ಹಸನ್ಮುಖದಿಂದ ನಮ್ಮನ್ನು ನೋಡುತ್ತಿದ್ದರು. “ಬನ್ನಿ, ಇವರು ಮಿ. ಪ್ರಭಾಕರ್, ಈ ಕಾಲೇಜಿನ ಪ್ರಿನ್ಸಿಪಾಲ್, ಇವರು ಮಿ. ಶೆಣೈ ಇಲ್ಲಿಯ ಎನ್‌ಸಿಸಿ ಆಫೀಸರ್, ಇವರು ಡಾ. ಪೂಜಾರರು, ಮಂಗಳೂರಿನಿಂದ ಬಂದಿದ್ದಾರೆ. ನಿಮ್ಮೊಡನೆಯೇ ಇರಲೆಂದು ಸರಕಾರ ಇವರನ್ನು ಕಳಿಸಿದೆ. ಆರ್ಡರ್ಲೀ ಬಂದಿದ್ದಾನೆ, ಔಷಧಿಗಳೂ ಬಂದಿವೆ” ಮೇಜರ್ ಮುತ್ತಪ್ಪನವರು ಪರಿಚಯಿಸಿದರು.

ಅಲ್ಲಿ ಹೆಚ್ಚು ಹೊತ್ತು ಕಳೆಯದೇ ಕೂಡಲೇ ಧರ್ಮಸ್ಥಳದೆಡೆಗೆ ಲಾರಿ ಓಡಿಸಿದೆವು. ದಾರಿಯಲ್ಲಿ ನೇತ್ರಾವತಿ ನದಿಯಲ್ಲಿ ಹತ್ತು ಮಿನಿಟಿದ್ದು ಕೈಕಾಲು ಮುಖ ತೊಳೆದುಕೊಂಡು ಶುಚಿರ್ಭೂತರಾಗಿ ಹೋದೆವು. ಮಹಾಪೂಜೆಗೆ ತಡವಾಯಿತೋ ಏನೋ ಎಂಬ ತವಕದಿಂದ ತ್ವರೆಯಿಂದ ಓಡಿದ ನಮಗೆ ಪೂಜೆ ಮಂಗಳಾರತಿ ದರ್ಶನ ಲಭಿಸಿದುವು. ನಾವು ಬರುವ ವಿಚಾರ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರಿಗೆ ಮೊದಲೇ ಬರೆದಿದ್ದೆವು. ಅವರ ಚಿರಂಜೀವಿ ವೀರೇಂದ್ರ ಕುಮಾರರು ನಮ್ಮ ಕಾಲೇಜಿನ ವಿದ್ಯಾರ್ಥಿ ಆಗಿದ್ದುದು ನಮಗೆ ಹೆಚ್ಚಿನ ಆತ್ಮೀಯತೆ ತಂದುಕೊಟ್ಟಿತ್ತು.

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರಸ್ವಾಮಿ ದೇವಾಲಯ. ಆ ಪವಿತ್ರ ಕ್ಷೇತ್ರ ಹಿಂದೂಗಳಿಗೂ ಜೈನರಿಗೂ ಸಮಾನವಾಗಿ ಪುಣ್ಯ ಕ್ಷೇತ್ರವಾಗಿದೆ. ಜೈನ ಪರಂಪರೆಯ ಹೆಗ್ಗಡೆಯವರ ಖಾಸಗಿ ಸಂಸ್ಥೆ ಈ ದೇವಾಲಯ ಮತ್ತು ಇದಕ್ಕೆ ಸಂಬಂಧಿಸಿದ ವಿಶಿಷ್ಟ ಆಸ್ತಿಪಾಸ್ತಿ. ಲಕ್ಷಾಂತರ ಭಕ್ತಾದಿಗಳು ವರ್ಷವಿಡೀ ಬಂದು ಹೋಗುವ ಈ ಪವಿತ್ರ ಕ್ಷೇತ್ರದ ಆಡಳಿತವನ್ನು ಹೆಗ್ಗಡೆಯವರು ಸ್ವತಃ ನಿರ್ವಹಿಸುತ್ತಾರೆ. ಉಳಿದುಕೊಳ್ಳಲಿಕ್ಕೆ ಬೇಕಾದ ಛತ್ರಗಳು, ಕಟ್ಟಡಗಳು ಮುಂತಾದವು ಇಲ್ಲಿವೆ. ಮಹಾಪೂಜೆಯ ಕಾಲದಲ್ಲಿಯೂ ಬೇರೆ ನಿಶ್ಚಿತ ವೇಳೆಗಳಲ್ಲಿಯೂ ಹೆಗ್ಗಡೆಯವರು ಭಕ್ತರಿಗೆ ದರ್ಶನವೀಯುತ್ತಾರೆ. ಅವರ ಹಾಲೆ ಅಹವಾಲೆಗಳನ್ನು, ಕಷ್ಟ ಸಂಕಟಗಳನ್ನು ಆಲಿಸುತ್ತಾರೆ. ಯುಕ್ತ ಪರಿಹಾರ ಸೂಚಿಸುತ್ತಾರೆ. ಇಲ್ಲಿ ನಾವು ಕಾಣುವುದು ಭಕ್ತರಿಗೆ ಆ ಸ್ಥಳದಲ್ಲಿ, ದೇವರಲ್ಲಿ, ದೇವರ ಮೂರ್ತ ಹೆಗ್ಗಡೆಯವರಲ್ಲಿರುವ ಅನನ್ಯ ಭಕ್ತಿ. ಆ ಗಳಿಗೆಯಲ್ಲಿ ಭಕ್ತರಿಗೆ ಹೆಗ್ಗಡೆಯವರ ವಾಣಿ ಶ್ರೀ ಮಂಜುನಾಥಸ್ವಾಮಿಯ ಆಜ್ಞೆ. ಅದನ್ನು ಅವರು ಶಿರಸಾವಹಿಸುತ್ತಾರೆ, ಕಲ್ಯಾಣ ಹೊಂದುತ್ತಾರೆ. ಭಕ್ತಿ, ಶ್ರದ್ಧೆ, ನಂಬಿಕೆ ಎನ್ನುವ ಗುಣಗಳ ಸಮತಳದಲ್ಲಿ ನಡೆದು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತೃಪ್ತಿ, ಸಂತೋಷ ಹೊಂದುವ ಈ ಜನತೆಯ ವಿಶ್ವಾಸ ಅಪಾರವಾದದ್ದು, ಅಚಲವಾದದ್ದು. ಅಂತೆಯೇ ಅವರ ಭಕ್ತಿಯ ಪ್ರತೀಕವಾಗಿ ಆ ದೇವಲಯ ಅತಿ ಪುರಾತನವಾದದ್ದೂ ಮಹಿಮಾಪೂರ್ಣವಾದದ್ದೂ ಆಗಿದೆ. ಇಂಥ ಪುನೀತ ದಿವ್ಯ ಸ್ಥಳ, ಅಲ್ಲಿಯ ಚಿರಂತನ ಚೇತನ ನಮ್ಮ ಸಾಹಸ ಕೃತ್ಯದ ಮೇಲೆ ಒಂದು ದೈವಿಕ ಪ್ರಭೆ ಬೀರಿದುವು. ದೇವರ ಪ್ರಸಾದವಾದ ಊಟವನ್ನು ಮುಗಿಸಿಕೊಂಡು ನಾವೂರಿಗೆ ಹೊರಟೆವು. ಮುತ್ತಪ್ಪನವರು ಮಂಗಳೂರಿಗೆ ಮರಳಿದರು. ಡಾಕ್ಟರರೂ ಅವರ ಆರ್ಡರ್ಲಿಯೂ ನಮ್ಮ ಪಂಗಡ ಸೇರಿದರು. ಈಗ ನಮ್ಮ ಸಂಖ್ಯೆ ೫೩ಕ್ಕೇರಿತು.

ನಮ್ಮ ನಾವೂರು ಪ್ರಯಾಣ ಅಥವಾ ಕುದುರೆಮುಖದೆಡೆಗಿನ ಲಾರೀ ಪಯಣದ ಕೊನೆಯ ಅಂಕ, ಸುಮಾರು ೧೫ ಮೈಲುಗಳಷ್ಟು ದೂರ. ಪ್ರಾರಂಭವಾದದ್ದು ನಡುಹಗಲಿನ ೨ ಗಂಟೆಗೆ. ನಾವು ೪ ಗಂಟೆಗೆ ಮೊದಲೇ ನಾವೂರು ಸೇರಿ ಶಿಬಿರ ಹೂಡಬೇಕು ಎನ್ನುವುದು ನಮ್ಮ ಕಾರ್ಯಕ್ರಮ. ಅಲ್ಲಿ ಮೆಂಗಿಲ ಶೇಣವ ಎನ್ನುವ ಮಾರ್ಗದರ್ಶಿಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ನಮ್ಮನ್ನು ಕಾದಿರಲು ಕಾಗದ ಬರೆದಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವುದು ಎರಡೇ ಋತುಗಳು: ಬೇಸಗೆ, ಬಿರುಬೇಸಗೆ. ಫೆಬ್ರುವರಿಯ ನಡು ಹಗಲಿನ ಬಿಸಿಲ ಝಳ ತೀವ್ರವಾಗಿತ್ತು. ಧರ್ಮಸ್ಥಳ – ಉಜಿರೆಯ ಹಾವು ಹರಿವಂಥ ಹಳ್ಳಿ ಮಾರ್ಗ, ಎದುರಿಗೆ ದೂರದಲ್ಲಿ ಆಕಾಶವನ್ನೇ ಎತ್ತಿ ಹಿದಿದಿರುವ ಪರ್ವತಶ್ರೇಣಿ. ಈಶ್ವರ ದೇವಾಲಯದ ಮುಂದಿರುವ ನಂದಿಯಂತೆ ಈ ಶ್ರೇಣಿಯ ಎದುರು ನಮಗೆ ಕೈದೂರದಲ್ಲಿ ನೀಳವಾಗಿ ಸೆಟೆದು ನಿಂತಿರುವ ಹೆಬ್ಬಂಡೆ ಜಮಾಲಾಬಾದ್. ಅದೊಂದು ಗಿರಿದುರ್ಗ. ಪರ್ವತ ಶ್ರೇಣಿಯಲ್ಲಿ ಅತಿ ಎತ್ತರವಾಗಿರುವೆಡೆಯಲ್ಲಿ ಕತ್ತರಿಯಿಂದ ಕತ್ತರಿಸಿ ಇಟ್ಟಂಥ ಸ್ಪಷ್ಟಾಕೃತಿಯ ಶಿಖರ ಕುದುರೆಮುಖ. ಆ ಭವ್ಯನೋಟ ನಮ್ಮನ್ನು ಪುಳಕಿತಕಾಯರನ್ನಾಗಿಸಿತು. ಕುದುರೆಮುಖದ ಗೆರೆ ಅಲ್ಲಿಂದ ಬೆನ್ನಿನವರೆಗೆ ಇಳಿದು ಕೇಸರದ ರೇಖೆ ಸ್ಪಷ್ಟವಾಗಿ ಕಾಣುವುದು. ಆಕಾಶದ ನೀಲಿ ಪರದೆಯ ಮೇಲೆ ಕುಂಚಿಸಿದ್ದ ಚಿತ್ರವಿದು. ಲಾರಿ ಸಾಗಿದಂತೆ ಕಲ್ಪನೆಯ ಲಂಗುಲಗಾಮಿಲ್ಲದ ಕುದುರೆ ಆ ‘ಹಯವದನ’ದ ಮೆಲೆ ನಾಗಾಲೋಟದಿಂದ ವಿಹರಿಸಿ, ಆಗಲೇ ಹಾರಿಹೋಗಿ ಕುಳಿತಂತೆ ಊಹಿಸಿತು. ಹೀಗೆ ಕಲ್ಪನೆ ಗಗನವೇರಿದಾಗ ವಾಸ್ತವತೆ ರಸ್ತೆಯಲ್ಲಿ ಕುಂಟುತ್ತಿತ್ತು. ಲಿಂಗೋಜಿಯ ಲಾರಿ ನಿಂತೇ ಬಿಟ್ಟಿತು. ಧರ್ಮಸ್ಥಳದಿಂದ ಮೂರು ಮೈಲು ಬಂದಿದ್ದೆವಷ್ಟೆ. ಇನ್ನೂ ೧೨ ಮೈಲು ಉಳಿದಿದ್ದುವು.

ಲಾರಿ ಚಾಲೂ ಆಗುತ್ತದೆ. ಆದರೆ ಗಿಯರ್ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಅದು ಓಡುವುದಿಲ್ಲ. ಗಿಯರ್ ಸ್ಟಕ್-ಅಪ್ ಆಯಿತು. ಅಂದರೆ ಗಿಯರ್ ಅಲ್ಲಾಡದ ಕೊರಡಾಯಿತು. ಅನ್ಸಾರಿ, ಲಿಂಗೋಜಿ ಸೇರಿ ಗಿಯರ್ ಪೆಟ್ಟಿಗೆ ಬಿಚ್ಚಿದರು. ಒಳಗೆ ಗಿಯರ್-ಲಿವರ್ ಮುರಿದೇ ಹೋಗಿದೆ. ದೊಡ್ಡದಾಗಿಯೇ ಪೆಟ್ಟು ಹೊಡೆದಿತ್ತು. ಅಲ್ಲಿ ಆಗ ದುರಸ್ತಿಗೊಳಿಸಿ ಹೊರಡುವ ಪರಿಸ್ಥಿತಿ ಅಲ್ಲ. ಮಂಗಳೂರಿನಿಂದಲೇ ಮೆಕಾನಿಕ್ ಬರಬೇಕೋ ಏನೋ. ಉಜಿರೆ ಹತ್ತಿರವೇ ಇದೆಯಷ್ಟೆ. ಅಲ್ಲಿಯೂ ಮೆಕಾನಿಕ್ ಇದ್ದರೆ ಬೇಗನೆ ಸರಿಪಡಿಸಬಹುದು ಎಂಬ ಆಸೆ. ಹೇಗೂ ವೇಳೆಯ ಪ್ರಶ್ನೆ. ಆದ್ದರಿಂದ ಲಿಂಗೋಜಿ ಲಾರಿಯ ಜನ ಮತ್ತು ಸಾಮಾನನ್ನು ಅಲ್ಲಿಯೇ ಬಿಟ್ಟು ಅನ್ಸಾರಿ ಲಾರಿಯನ್ನು ನಾವೂರಿಗೆ ಓಡಿಸಿದೆವು. ಅದರಲ್ಲಿ ದೊರೆಗಳು, ನಾನು, ಶಿವಪ್ಪ, ಖಾನ್ವೀಲ್ಕರ್ ಇದ್ದೆವು. ನಿಸಾರ್, ಕೆಂಡಗಣ್ಣ ಸ್ವಾಮಿ, ಹರೂನ್ ಎಲ್ಲರೂ ಅಲ್ಲಿಯೇ ನಿಂತರು. ಅನ್ಸಾರಿ ಲಾರಿಯ ಹುಡುಗರಿಗೆ ಹೇಗೂ ತಾವು ಬಚಾವು ಎಂಬ ಸಂತೋಷ. ಲಿಂಗೋಜಿಯ ಹುಡುಗರಿಗೆ ದುಃಖ. “ಬೇಗನೆ ಹಿಂದೆ ಬರುತ್ತೇವೆ. ನಿಮ್ಮನ್ನೂ ಕೊಂಡೊಯ್ಯುತ್ತೇವೆ. ಮೊದಲು ಹೋದವರಿಗೆ ಕ್ಯಾಂಪು ಪ್ರಾರಂಭಿಸುವ ಕೆಲಸ ಬೇಕಾದಷ್ಟು ಇರುವುದು. ನೀವಿಲ್ಲಿ ಆರಾಮವಾಗಿದ್ದರಾಯಿತಲ್ಲ” ಎಂದು ಸಮಾಧಾನ ಹೇಳಿ ನಾವು ಮುಂದುವರಿದೆವು. ದೊರೆಗಳು (ತಾತ) ಧರ್ಮಸ್ಥಳದಲ್ಲಿ ಪ್ರಾರ್ಥನೆ ಮಾಡಿಯೂ ಹೀಗಾಯಿತಲ್ಲ ಎಂದು ಸ್ವಾಮಿಯವರು ಒಂದು ಚುಟುಕ ಗೀಚಿದರು:

ಧರ್ಮಸ್ಥಳದ ಮಂಜ್ನಾಥಾ
ಕಾಪಾಡಪ್ಪಾ ಅನವರತಾ!
ಅಂದ್ಕಂಡ್ ಹೊರಟ್ರೆ ನಮ್ತಾತಾ
ಲಾರೀ ಕೊಟ್ತು ದೊಡ್ಲಾತಾ

ನಾವೂರಿನ ತಳ ಶಿಬಿರ
ಅಧ್ಯಾಯ ನಲ್ವತ್ತೈದು

ನಾವು ಧೂಳಿನ ಕಿರುದಾರಿಯಾಗಿ ಹೋಗಿ ನಾವೂರನ್ನು ತಲಪಿದಾಗ ಸಾಯಂಕಾಲದ ೫ ಗಂಟೆಯಾಗಿತ್ತು. ಯಾವೂರು? ನಾವೂರು! ಊರೆಲ್ಲಿ ಬಂತು. ಕುದುರೆಮುಖ ಶ್ರೇಣಿಯ ಬುಡದ ತಪ್ಪಲು ಪ್ರದೇಶ. ನಡು ಮಧ್ಯಾಹ್ನವೂ ಬೆಟ್ಟದ ಕಾಡುಗಳ ಮರೆಯಲ್ಲಿರುವ ಈ ‘ಊರಿ’ನಲ್ಲಿ ಕತ್ತಲು. ಇನ್ನು ಊರೆಂದರೆ ಅಲ್ಲಿದ್ದ ಅರಣ್ಯ ಇಲಾಖೆಯ ನಿರ್ಜನ ಪ್ರವಾಸಿ ಮಂದಿರ ಒಂದೇ. ಅದರಿಂದ ಆರೇಳು ಫರ್ಲಾಂಗ್ ದೂರದಲ್ಲಿ ಬಯಲಿನಲ್ಲಿ ಹರಡಿದ್ದ ನಾಲ್ಕೈದು ಗುಡಿಸಲುಗಳು. ಇಂಗ್ಲಿಷ್ ಹೆಸರು ಕೇಳಿ ಸುಂದರ ಪ್ರವಾಸೀ ಮಂದಿರ, ಆಧುನಿಕ ನಲ್ಲಿ ನೀರಿನ ಸೌಕರ್ಯ, ವಾಷ್ ಬೇಸಿನ್, ವಿದ್ಯುದ್ದೀಪಗಳ ಮೆರುಗು, ಬಟ್ಲರುಗಳ ಸಮೂಹ ಎಂದೆಲ್ಲ ಯೋಚಿಸಿದರೆ ಕುದುರೆಮುಖ ಕೆನೆದೀತು, ನಿಮಗೇನೂ ಅನುಭವವಿಲ್ಲವೆಂದು. ಹಳ್ಳಿಯವರ ಸರಳ ಭಾಷೆಯಲ್ಲಿ ಹಂಚು ಹಾಕಿದ ಮನೆ ಬಂಗ್ಲೆ. ಆದ್ದರಿಂದ ನಾವೂರಿನ ಈ ಕಟ್ಟಡ ಬಂಗ್ಲೆ. ಹಿಂದಿನ ಕಾಲದಲ್ಲಿ ಸಾರಿಗೆ ಸಂಪರ್ಕ ತೀರ ಕಡಿಮೆ ಇದ್ದಾಗ ಬೆಳ್ತಂಗಡಿಯಿಂದ ನಾವೂರಿಗೆ ಒಂದು ದಿವಸದಲ್ಲಿ ಹೋಗಿ ಕೆಲಸ ಮುಗಿಸಿ ಮರಳುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾವೂರಿನಲ್ಲಿಯೇ ಠಾಣ್ಯ ಹೂಡುವುದು ಅವಶ್ಯವಾಗುತ್ತಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳ ತಾತ್ಕಾಲಿಕ ತಂಗುದಾಣವಿದು. ಆದ್ದರಿಂದ ಒಂದು ಕಾಲದಲ್ಲಿ ವೈಭವದಿಂದ ಮೆರೆದಿರಬಹುದಾದ ಈ ದೊಡ್ಡ ಹಂಚಿನ ಮನೆ (ಬಂಗ್ಲೆ) ಇಂದು ಹಾಳು ಹಾಳುಗರೆಯುತ್ತಿತ್ತು:

ಅರೆಮುರಿದು ಒರಗಿಹವು ಗುಡಿಸಲುಗಳೆಲ್ಲ
ಸರಿಮಾಡಿ ಹುಲ್ಲು ಹೊದಿಸುವವರೊಬ್ಬರಿಲ್ಲ – ಕುವೆಂಪು

ನಾವು ಡಿಸೆಂಬರಿನಲ್ಲಿ ಸ್ಥಳ ಪರಿಶೀಲನೆಗಾಗಿ ಬಂದಿದ್ದಾಗ ಇಲ್ಲಿ ಯಾರೂ ಇರಲಿಲ್ಲ. ಆದರೂ ಬಾಗಿಲುಗಳ ಚಿಲಕ ಭದ್ರವಾಗಿ ಹಾಕಿ ಬೀಗಗಳು ಜಡಿಯಲ್ಪಟ್ಟಿದ್ದುವು. ಒಂದೆರಡು ದಶಕಗಳ ತುಕ್ಕು, ಗೆದ್ದಲು ಅಲ್ಲೆಲ್ಲ ವ್ಯಾಪಿಸಿದ್ದುವು. ಬಾಗಿಲನ್ನು ಮುಟ್ಟುವುದೇ ತಡ ಅರೆಬಿಯನ್ ನೈಟ್ಸ್ ಕತೆಯಲ್ಲಿ ಕುಪ್ಪಿಯ ದಿಮ್ಮಿ ತೆಗೆದೊಡನೆ ಬೃಹದಾಕಾರದ ಭಯಂಕರ ರಾಕ್ಷಸ – ಜಿನೈ, ನೆಗೆಯುವಂತೆ ಕದದ ಹಲಗೆ ಮುರಿದು ಬಿತ್ತು. ಶಿಶುನಾಳ ಶರೀಫರು ಹಾಡಿದಂತೆ

ಮುರುಕು ಜಂತಿ ಹುಳುಕು ತೊಲೆಯು
ಮುರಿದು ಕೊರಿದು ಕೀಲಸಂದು
ಮುರಕಚಪ್ಪರ ಜೇರುಗಿಂಡಿ
ಮೇಲಕೇರಿ ಮೆಟ್ಟಲಾರೆ
ಸೋರುತಿಹುದು ಮನೆಯಮಾಳಿಗೆ ಅಜ್ಞಾನದಿಂದ

ಒಳಗೆ ಹಿಂದಿನ ಶತಮಾನದ ನಾಲ್ಕೆಂಟು ಮೇಜು, ಕುರ್ಚಿ, ಮೇಲೆ ಜೋಲುತ್ತಿದ್ದ ಪಂಖಾ, ಒಂದಿಂಚು ದಪ್ಪದ ಧೂಳು ಕಾಲಿಟ್ಟಲ್ಲೆಲ್ಲ. ಗೋಡೆಯ ಮೇಲೆ ಆಧುನಿಕ ಚಿತ್ರಕಲೆಯನ್ನು ಗೆದ್ದಲು ಹುಳುಗಳು ಕೊರೆದಿದ್ದುವು. ಜೇಡರ ಹುಳುಗಳ ತಂತಿಗಳು ಅಖಂಡವಾಗಿ ಹೆಣೆದುಕೊಂಡಿದ್ದುವು. ಮಾಡಿನ ಹಂಚುಗಳು ಒಂದು ಕಾಲದಲ್ಲಿ ಬಿಡಿಬಿಡಿಯಾಗಿ ಜೋಡಿಸಲ್ಪಟ್ಟಿದ್ದರೂ ಮಳೆಬಿಸಿಲು ಅವುಗಳ ಮೇಲೆ ಬಿದ್ದು ಪಾಚಿ, ಕಸ, ಧೂಳು ಮುಂತಾದವುಗಳ ಅಖಂಡ ಲೇಪ ಅವುಗಳಿಗೆ ಹಚ್ಚಿದಂತಾಗಿ ಇಡಿಯ ಮಾಡೇ ಮಸಿಯ ಒಂದು ಹಲಗೆಯಾಗಿತ್ತು. ಹೀಗೆ ಎರಕಗೊಂಡ ಆ ಹಂಚುಗಳ ‘ಹಲಗೆ’ ಕೆಳಗಿನ ಬಾರಿಪಟ್ಟಿ, ಪಕಾಸು, ದಾರವಂದಗಳನ್ನು ಭದ್ರವಾಗಿ ಹಿಡಿದಿತ್ತು. ಏಕೆಂದರೆ ಮರದ ಬಹ್ವಂಶ ಒಂದೋ (ಗೆದ್ದಲೆ ತಿಂದು) ಕುಷ್ಠರೋಗಗ್ರಸ್ತವಾಗಿತ್ತು, ಇಲ್ಲ ಮಾಯವಾಗಿತ್ತು. ಕಾಡಿನ ಬುಡವಾದರೂ ಕದಿವವನಿಗೆ ಕೈಗೆ ಸಿಕ್ಕಿದ ಬಾರಿಪಟ್ಟಿ, ಕೊಯ್ದ ಮರ ಕೈಯಲ್ಲಿರುವ ಒಂದು ಹಕ್ಕಿಯಂತೆ, ಕಾಡಿನ ಪೊದೆಯಲ್ಲಿರಬಹುದಾದ ಎರಡು ಹಕ್ಕಿಗಳ ಆಸೆ ಅವನಿಗಿಲ್ಲ. ನಮ್ಮ ಈ ‘ಪ್ರಥಮ ಚುಂಬನ’ದ ಅನುಭವದಿಂದ ಒಂದು ಸಂಗತಿ ನಿರ್ಧರಿಸಿದ್ದೆವು – ಬಂಗ್ಲೆ ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಅಪ್ರವೇಶ್ಯ – out of bounds. ಈ ಬಂಗ್ಲೆಗೆ ಒಂದು ಔಟ್ ಹೌಸೂ ಉಂಟು! ಪೀಸಾನಗರದ ಮಾಲುಗೋಪುರವನ್ನೇ ಥೇಟ್ ಮೀರಿಸುವಂತಿದ್ದ ಇದರ ಗೋಡೆಗಳು ಮಾಡಿನ ಆಧಾರದಿಂದಲೇ ಒತ್ತಟ್ಟಿಗೆ ನಿಂತಿದ್ದುವು. ನೀರಿನ ಆಸರೆ ಅಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿ – ಬೆಟ್ಟದಿಂದ ಹರಿದು ಬರುತ್ತಿದ್ದ ಝರಿ. ಫೆಬ್ರುವರಿ ಮಾರ್ಚ್ ತನಕವೂ ಅದು ಆರಲಾರದೆಂದು ಊಹಿಸಿದ್ದೆವು. ಆದರೆ ಅದರ ಪಕ್ಕದಲ್ಲಿ ಶಿಬಿರ ಹೂಡಲು ಸರಿಯಾದ ಸ್ಥಳವಿರಲಿಲ್ಲ. ಹೀಗಾಗಿ ಬಂಗ್ಲೆಯ ಅಂಗಳದಲ್ಲಿ ಶಿಬಿರ, ನೀರನ್ನು ಝರಿಯಿಂದ ಹೊತ್ತು ತರುವುದು ಎಂದು ನಮ್ಮ ಪೂರ್ವ ಯೋಜನೆಯಿತ್ತು. ಡಿಸೆಂಬರಿನಲ್ಲಿ ನಾವು ಬಂಗ್ಲೆಯ ಪರಿಶೀಲನೆಯಿಂದ ಮರಳಿದ ಅನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅದರ ಸ್ಥಿತಿಯನ್ನು ಕುರಿತು ಪತ್ರ ಬರೆದಿದ್ದೆವು. ಮತ್ತು ಸಾಧ್ಯವಾದರೆ ಅದನ್ನು ದುರಸ್ತಿಗೊಳಿಸಬೇಕೆಂದೂ ಕೋರಿದ್ದೆವು.

ಬಂಗ್ಲೆಯ ಹಿಂದೆ ಅನ್ಸಾರಿ ನಿಂತ: ನಾವೆಲ್ಲ ಲಾರಿಯಿಂದ ದುಮುಕಿದೆವು. ನಮ್ಮನ್ನು ಸ್ವಾಗತಿಸಲು ಯಾರೂ ಇಲ್ಲ. ಕಾಡು ಹಾಳುಗರೆಯುತ್ತಿತ್ತು. ನಮ್ಮ ಕೆಲಸವನ್ನು ನಾವೇ ಮಾಡಬೇಕು. ಒಂದಿಷ್ಟು ಟೀ ಕಾಸೋಣವೆಂದರೆ ಚಹಾ ಪುಡಿಯೂ ಅಡುಗೆಯವರೂ ಲಿಂಗೋಜಿ ಲಾರಿಯಲ್ಲಿ. ಸಕ್ಕರೆ ಮಾತ್ರ ಈ ಲಾರಿಯಲ್ಲಿ. ಇನ್ನು ಅವರು ಬಂದ ಮೇಲೆಯೇ ಮುಂದಿನ ದಾರಿ. ನೀರು ತಂದು ಕುಡಿಯೋಣವೆಂದರೆ ಬಕೆಟುಗಳೆಲ್ಲ ಆಚೆ ಲಾರಿಯೊಳಗೆ. ಧರ್ಮಸ್ಥಳದಾ ಮಂಜ್ನಾಥಾ, ಕಾಪಾಡಪ್ಪಾ ಅನವರತಾ! ಉಳಿದ ದಾರಿಯೊಂದೇ – ಆದಷ್ಟು ಬೇಗ ಅನ್ಸಾರಿಯನ್ನು ಹಿಂದಿರುಗಿಸಿಕೊಂಡು ಹೋಗಿ ಅವರೆಲ್ಲರನ್ನು ತರುವುದು.

ಮೆಂಗಿಲ ಶೇಣವ ಎನ್ನುವ ಸ್ಥಳೀಯನೊಬ್ಬನ ಮನೆಯ ದಾರಿಯನ್ನು ತೋರಿಸಿ ಅವನನ್ನು ಕರೆತರಲು ಹುಡುಗರನ್ನು ಕಳಿಸಿಯಾಯ್ತು. ನಾನು ಅನ್ಸಾರಿ ಲಾರಿಯಲ್ಲಿ ಹಿಂದಕ್ಕೆ ಹೊರಟೆ. ದೊರೆಗಳೂ ಡಾಕ್ಟರರೂ ಶಿಬಿರದಲ್ಲಿಯೇ ಉಳಿದರು. ಲಿಂಗೋಜಿ ಲಾರಿಯಿದ್ದ ಸ್ಥಳವನ್ನು ನಾನು ತಲಪಿದಾಗ ಸಂಜೆ ೭ ಗಂಟೆಯಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಅವರೆಲ್ಲರೂ ಆ ಮಾರ್ಗ ಮಧ್ಯೆ ಗಾಳಿಗೋಳಗಳನ್ನು ಹಾರಿಸುತ್ತ ಕಾಲ ಕಳೆದಿದ್ದರು. ನಾನು ತಲಪಿದೊಡನೆಯೇ ಹುಡುಗರ ಕೂಡಿಟ್ಟಿದ್ದ ಹತಾಶೆ, ಆಯಾಸ ಪ್ರವಾಹ ಕಟ್ಟೆಯೊಡೆದು ಹರಿದುವು. ಉದ್ದುದ್ದ ಮೋರೆ ಮಾಡಿ ಗೋಗರೆದರು. ತಪ್ಪು ನನ್ನದೆಂದು ಅದರ ಅರ್ಥವಲ್ಲ. ಕೇಳುವವನು ನಾನಿದ್ದೇನೆಂದು ಇಂಗಿತ. “ಇದೂ ಶಿಕ್ಷಣದ ಒಂದಂಗವೆಂದು ತಿಳಿಯಬೇಕು. ನೀವು ಮೊದಲೇ ಅಲ್ಲಿಗೆ ಹೋಗಿ ಏನು ಪಟೇಲ್ತಿಕೆ ಮಾಡಬೇಕಿತ್ತೇ? ಅದಿರಲಿ – ಮಾರ್ಗಮಧ್ಯೆ ಬಿಸಿಲಿನ ತಂಪು ಕೃಪೆಯಲ್ಲಿ ಕಲ್ಪನೆಯನ್ನು ಅದುಮಿಟ್ಟು ಶೂನ್ಯವಾಗಿ ದಿಗಂತವನ್ನು ನೋಡುವ ಅನುಭವ ಬೇಕೆಂದರೂ ಲಭಿಸೀತೇ?” ಎಂದು ನಾನು ಪಾಟೀಸವಾಲು ಹಾಕಿದೆ.

“ಬೆಂಗಳೂರು ಸಿಟಿ ಬಸ್ ಕಾಯುವಾಗ, ಸರ್?”
“ಆದರೆ ಅಲ್ಲಿ ದಿಗಂತವೆಂದರೆ ಮುಂದಿನ ಮನೆಯ ಕಕ್ಕಟ್ಟು ಅಥವಾ ಹೆಚ್ಚೆಂದರೆ ಅದರೊಳಗಿರುವ…”
ನಗೆಗಡಲು ಮೊಗೆಯಿತು. ಸ್ವಾಮಿಯವರ ಪ್ರತಿಭೆ ಮಿಂಚಿತು:
ಒಂದು ಲಾರಿಯು ದೂರ ಸಾಗಿರಲು ಮುಂದೆ
ಕೆಲಸವಿಲ್ಲದೆ ಕುಳಿತೆ ನಾನಿಲ್ಲೆ ಹಿಂದೆ
ಕೇಪಳೆಯ ಹಣ್ಣು ಮುರಕಲ್ಲಿನಾ ಮಣ್ಣು
ನೋಡ ಸಾಲದು ನಮ್ಮ ಒಂದು ಜತೆ ಕಣ್ಣು!

ಲಾರಿಗಳ ಬೆನ್ನು ಬೆನ್ನುಗಳನ್ನು ಸೇರಿಸಿದೆವು. ಲಿಂಗೋಜಿಯು ಅನ್ಸಾರಿಗೆ ವರ್ಗವಾದ. ಹುಡುಗರೆಲ್ಲರೂ ಅನ್ಸಾರಿ ಲಾರಿಯಲ್ಲಿ. ಇದಕ್ಕೆ ಲಿಂಗೋಜಿ ಲಾರಿಯನ್ನು ಕಟ್ಟಿ ಮಂದಗಮನದಿಂದ ಮುಂದೆ ಸುಂದರಾಂಗರ ಮೆರವಣಿಗೆ ಮೆರೆಯಿತು. ಐದಾರು ಮೈಲು ದೂರದ ಬೆಳ್ತಂಗಡಿ ತಲಪುವಾಗ ಕತ್ತಲೆ ಪೂರ್ಣ ಕವಿದಿತ್ತು. ಅಲ್ಲಿದ್ದ ‘ಜಗತ್ಪ್ರಸಿದ್ಧ’ ವರ್ಕ್‌ಷಾಪಿನಲ್ಲಿ ಅಥವಾ ಲಾರೀ ದವಖಾನೆಯಲ್ಲಿ ಲಿಂಗೋಜಿ ಲಾರಿ, ಲಿಂಗೋಜಿ, ಹರೂನ್ ಇವರನ್ನು ಬಿಟ್ಟು ಉಳಿದವರು ನಾವೂರಿನೆಡೆಗೆ ಹೊರಟೆವು. ಅಷ್ಟರಲ್ಲಿ ಅಲ್ಲಿಗೆ ದೊರೆಗಳು (ನಾವೂರಿನಿಂದ ೭ ಮೈಲಿದೆ) ಯಾರದೋ ಕಾರಿನಲ್ಲಿ ಬಂದರು. ಅವರು ಪೋಸ್ಟಾಫೀಸಿನಲ್ಲಿ ತಮ್ಮ ತಂದೆಯವರ ಆರೋಗ್ಯ, ಶ್ರೀಮತಿ ನಿಸಾರರ ಆರೋಗ್ಯ ಮುಂತಾದ ವಿವರ ಸಂಗ್ರಹಿಸಿಡಲು ಬೇಕಾದ ಏರ್ಪಾಡು ಮಾಡಿ ನಮ್ಮ ಲಾರಿಯನ್ನೇರಿದರು.

“ನೀನು ಇಷ್ಟು ತಡಮಾಡಬಾರದಿತ್ತು. ಲಿಂಗೋಜಿಯನ್ನು ಅಲ್ಲಿಯೇ ಬಿಟ್ಟು ಹುಡುಗರನ್ನು ಮೊದಲು ಸಾಗಿಸಿಬಿಡಬೇಕಾಗಿತ್ತು” ಅವರೆಂದರು.
“ಸರಿಯೇ. ಆದರೆ ಲಿಂಗೋಜಿಯ ಅವಸ್ಥೆ?”
“ಪುನಃ ಅನ್ಸಾರಿಯನ್ನು ಓಡಿಸಬಹುದಿತ್ತು.”
“ಒಂದರ್ಧ ಗಂಟೆಯ ಉಳಿತಾಯಕ್ಕಾಗಿ ಎಷ್ಟು ಪೆಟ್ರೋಲ್ ಖರ್ಚು. ಅಲ್ಲದೇ ಅಷ್ಟು ಬೇಗ ಹೋಗಿ ಇವರು ಮಾಡುವುದಾದರೂ ಏನು? ನಮ್ಮ ಹಾಗೆ ತಾನೇ?” ನಾನೊಪ್ಪಲಿಲ್ಲ.
“ಇಲ್ಲ, ಹುಡುಗರು ನಮ್ಮ ಹಾಗಲ್ಲ. ಬಲು ಕೋಮಲ. ಶ್ರಮ, ತಾಪ ವಿಪರೀತವಾಗಿರುವಾಗ ಒಂದೊಂದು ನಿಮಿಷವೂ ಯುಗದಂತಾಗುವುದು. ಹೊಣೆ ಹೊತ್ತವರಿಗೆ ಅದರ ಭಾರದಿಂದಾಗಿ ಇದು ಗೊತ್ತಾಗುವುದಿಲ್ಲ. ಆದರೆ ಹೊರದ ಹುಡುಗರಿಗೆ ಇದು ಅಸಹನೀಯವಾಗುವುದು.”
“ಸರಿ, ಮುಂದಿನ ತಿಳುವಳಿಕೆಗಾಯಿತು” ಎಂದು ನಾನು ಮುಗಿಸಿದೆ. Noted for future guidance! ಅವರೆಂದದ್ದು ಎಷ್ಟು ಸರಿಯೋ ನಾನು ಮಾಡಿದ್ದೂ ಅಷ್ಟೇ ಸರಿ ಎಂದು ತಿಳಿದಿದ್ದೇನೆ. ಯಾವ ಇಬ್ಬರು ವ್ಯಕ್ತಿಗಳೂ ಒಂದೇ ವಿಷಯ ಕುರಿತು ಏಕಪ್ರಕಾರ ಅಭಿಪ್ರಾಯ ನೀಡುವುದು ಸಾಧ್ಯವಿಲ್ಲ.

ಹೀಗೆ ಮಾತು, ವಾದ, ನಗು ಮುಂದುವರಿದಂತೆ ಲಾರಿ ನಾವೂರು ಬಂಗ್ಲೆಯನ್ನು ಪುನಃ ಪ್ರವೇಶಿಸಿತು. ದೊರೆಗಳೆಂದರು, “ಒಂದು ಹೇಳಲು ಮರೆತುಬಿಟ್ಟಿದ್ದೆ. ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಬಂಗ್ಲೆ ಮತ್ತು ಔಟ್‌ಹೌಸ್‌ಗಳನ್ನು ರಿಪೇರಿ ಮಾಡಿಸಿದ್ದಾರೆ. ಅವು ಈಗ ಅಪಾಯರಹಿತವಾಗಿದೆ. ಆದರೆ ನೀರಿನ ಸಮಸ್ಯೆ ಪ್ರಬಲವಾಗಿದೆ. ಡಿಸೆಂಬರಿನಲ್ಲಿ ಹರಿಯುತ್ತಿದ್ದ ಕಿರು ತೊರೆ ಈಗ ಹನಿ ಹನಿ ತೊಟ್ಟಿಕ್ಕುತ್ತಿದೆ. ಅದರ ದಾರಿಯಲ್ಲಿ ಸ್ವಲ್ಪ ಮೇಲೆ ಹೋಗಿ ಗುಂಡಿ ತೋಡಿ ನಾವು ಕುಡಿಯುವ ನೀರು ಸಂಗ್ರಹಿಸಬೇಕು. ಬೇರೆ ಉಪಾಯವಿಲ್ಲ. ಅಲ್ಲಿಂದ ಇಲ್ಲಿಗೆ ಹೊತ್ತು ತರುವುದು ಪ್ರಯಾಸಕರವಾದರೂ ಹುಡುಗರಿರುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಆದರೆ ನೀರು ಸಂಗ್ರಹಿಸಿಡಲು ದೊಡ್ಡ ಬಾನಿಯೇ ಇಲ್ಲವಲ್ಲ?”

ಇದು ಹೇಗೆಯೇ ಇರಲಿ. ನಾವೂರು ಬಂಗ್ಲೆ ಆಗ ಅತಿ ಸಂಭ್ರಮದ ಚಟುವಟಿಕೆಯ ಜೇನುಗೂಡಾಗಿತ್ತು. ಗ್ಯಾಸ್ ಲೈಟ್‌ಗಳು, ಲಾಂದ್ರಗಳು, ಟಾರ್ಚ್ ಲೈಟುಗಳು ಅಲ್ಲಿ ಬೆಳಕಿನ ಹೊನಲು ಹರಿಸಿದುವು. ಹುಡುಗರ ಒಂದು ತಂಡ ನೀರು ತಂದಿತು. ಇನ್ನೊಂದು ಸೌದೆ ಆಯ್ದಿತು. ಮತ್ತೊಂದು ಸಾಮಾನು ಸರಂಜಾಮುಗಳನ್ನು ಔಟ್ ಹೌಸಿನಲ್ಲಿ ಶೇಖರಿಸಿ ವ್ಯವಸ್ಥಿತವಾಗಿ ಜೋಡಿಸುವ ಜಂಬ್ರದಲ್ಲಿ ಜಾಂಬ್ರೆ ಮತ್ತು ಖಾನ್ವೀಲ್ಕರರಿಗೆ ಸಹಾಯ ಮಾಡಿತು. ಅಡುಗೆಯವರು ಪುಟ ನೆಗೆಯುತ್ತಿದ್ದ ರಬ್ಬರ್ ಚಂಡಿನಂತೆ. ಲಾರಿಯಿಂದಿಳಿದ ಅರ್ಧ ಗಂಟೆಯ ಒಳಗೆಎ ಅವರು ಟೀ, ಅವಲಕ್ಕಿ ಉಪ್ಪುಕರಿಯನ್ನು ತಯಾರು ಮಾಡಿ ಹಂಚಿಯೇ ಬಿಟ್ಟರು. ಅಮೃತ ಹೇಗುಂಟೋ ನನಗೆ ಗೊತ್ತಿಲ್ಲ. ಆದರೆ ಅದು ನಾವೂರಿನ ಈ ಪ್ರಥಮ ಟೀಗಿಂತ ಹೆಚ್ಚು ರುಚಿಕರವಾಗಿದ್ದಿರಲಾರದು ಎಂದು ನಂಬಿದ್ದೇನೆ. ಇನ್ನು ರತ್ನ ಹೇಳಿದಂತೆ ಆ ಗಳಿಗೆಯನ್ನು ಪರಮಾತ್ಮ ನನ್ನೆದುರು ಬಂದು ನಿಂತು, “ನಿನಗೆ ಚಿರಂಜೀವಿತ್ವ ನೀಡುವ ಆದರೆ ಕಹಿಯಾದ ಅಮೃತ ಸಾಕೋ ಅಥವಾ ನಾವೂರಿನ ಈ ಮರ್ತ್ಯ ಟೀ ಸಾಕೋ?” ಎಂದು ಪ್ರಶ್ನಿಸಿದರೆ “ಹೋಗಯ್ಯಾ, ಹೋಗು ಟೀನೇ ಸಾಕು. ನಿನ್ನಮೃತ ಮೃತವಾಗಲಿ” ಎಂದು ನಾನು ಮಾತ್ರವಲ್ಲ ನಾವೆಲ್ಲರೂ ಏಕ ಕಂಠದಿಂದ ಒದರಿ ಬಿಡುತ್ತಿದ್ದೆವು. ಹೊಟ್ಟೆಯ ಒಳಗೆ ಖಾರದ ಅವಲಕ್ಕಿಯ ಟೈಮ್ ಬಾಂಬೂ ಸುಮಧುರ ಟೀಯ ಹೈಡ್ರೋಜನ್ ಬಾಂಬೂ ಏಕ ಕಾಲದಲ್ಲಿ ಕೆಲಸ ಮಾಡಿ ಚೈತನ್ಯದ್ವಯವನ್ನು ಪ್ರವಹಿಸಿದುವು. ರಾತ್ರಿ ೯ ಗಂಟೆ ಆಗಲೇ ಆಗಿದ್ದರೂ ನಮಗೆ ಆಗ ಮುಗಿದದ್ದು ಸಾಯಂಕಾಲದ ಟೀ ಅಷ್ಟೆ. ಊಟದ ಏರ್ಪಾಡು ಭರದಿಂದ ಸಾಗಿತು.

ಡಾಕ್ಟರ್ ಪೂಜಾರರು ಬಲು ಸುಟಿ ತರುಣ. ಎಂಬಿಬಿಎಸ್ ಡಿಗ್ರಿಧರರಾಗಿ ಮುಂದಿನ ಎಂಎಸ್ ಪದವಿ ಓದುತ್ತಿದ್ದ ಸರ್ಕಾರೀ ವೈದ್ಯ. ಅವರು ನೀರನ್ನು ಕೂಲಂಕಷವಾಗಿ ಪರಿಶೀಲಿಸಿ, “ಈ ನೀರನ್ನು ಕುದಿಸಿ, ಸೋಸಿ ಕುಡಿಯಬೇಕು. ಬರಿಯ ಬ್ಲೀಚಿಂಗ್ ಪೌಡರ್ ಹಾಕಿದರೆ ಸಾಲದು. ಹಾಗೇ ಕುಡಿದರೆ ಡಿಸೆಂಟ್ರಿ ಬರಬಹುದು” ಎಂದರು.

ಇದನ್ನು ಕೇಳಿದ ಅತ್ಯುತ್ಸಾಹಿ ಜಗನ್ನಾಥ ಶಾಸ್ತ್ರಿ, “ಸಾರ್! ತೋಡಿನ ಮೇಲೆ ಬೆಂಕಿ ಹಾಕಿಬಿಡೋಣ. ಆಗ ಕುದ್ದ ನೀರೇ ನಮಗೆ ಸಿಗುವುದಷ್ಟೆ” ಎಂಬ ಶಾಸ್ತ್ರೀಯ ಸೂಚನೆ ನೀಡಿದ.
“ಆಗ ತೋಡಿನಲ್ಲಿರುವ ಮೀನುಗಳ ಪಾಡು?” ಗುರು ಕೇಳಿದ.
“ಮರ ಹತ್ತಿಬಿಡುತ್ತವೆ ಕಾಣಮ್ಮ” ಶ್ರೀನಿವಾಸ ಕೂಡಿಸಿದ.
“ಮರ ಹತ್ತಲು ಅವೇನು ಎಮ್ಮೆ ಕರುಗಳೇ?” ನಾನು ಮುಗಿಸಿದೆ.
ಕುಡಿಯುವ ನೀರಂತೂ ಹೇಗೋ ಆಗುವುದು. ಆದರೆ ಸ್ನಾನ ಮಾಡಲು? ಬೆಂಗಳೂರಿನ ತಂಪಿನಿಂದ ಬಂದ ಹಸುಗೂಸುಗಳು ನಾವೂರಿನ ಸೆಕೆಯಿಂದ ಚಂಡಿಪಿಂಡಿಯಾಗಿ ಕಂಗಾಲಾಗಿದ್ದರು.

ಬಾಬಾ, ಶ್ರೀಧರನ್, ಲಕ್ಷ್ಮಿ ಮೊದಲಾದವರು ಸೇರಿ ಶಿಬಿರಾಗ್ನಿಯನ್ನು ಭರದಿಂದ ಸಿದ್ಧಗೊಳಿಸಿದರು. ವಿಶಾಲವಾದ ಅಂಗಳವಿದೆ. ಬಂಗ್ಲೆಯ ಚಾವಡಿಯ ಮುಂದೆ ಗುಂಡಿ ತೋಡಿ ಮರದ ಭಾರೀ ಕಾಂಡಗಳನ್ನು ಒಟ್ಟಿದರು. ಅದೊಂದು ಗೋಪುರಾಕೃತಿಗೆ ಬಂದು ಎಲ್ಲವೂ ತಯಾರಾದೊಡನೆಯೇ ದೊರೆಗಳನ್ನು ವಿಧಿ, ಮಂತ್ರ, ತಂತ್ರಪೂರ್ವಕ ಅಲ್ಲಿಗೆ ಆಮಂತ್ರಿಸಲಾಯಿತು. ಅವರು ಸಾಂಕೇತಿಕವಾಗಿ ಅದಕ್ಕೆ ಅಗ್ನಿ ಸ್ಪರ್ಶಿಸುವುದರ ಮೂಲಕ ಶಿಬಿರಾಗ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಅಲ್ಲಿ ಭಾಷಣ ಆಲಿಸುವ (ಕೇಳುವವರು ಸಹಿಸಲೇಬೇಕಾದ) ಮೂಕಸಂಕಟವಿಲ್ಲ. ಆದರೆ ಆಶು ಭಾಷಣದ ಮುಗ್ಧತೆ, ಸೌಂದರ್ಯ ಇದ್ದುವು. ಭಾಷಣಕಾರರು, ನರ್ತನಕಾರರು ಹುಡುಗರೇ. ಕೇಳುವವರು ನಾವೆಲ್ಲ. “ನೋಟಕರುಂ ಆಟಕರೇ!” ಉತ್ಸಾಹ ಮೂಡಿದರೆ ನಾವೂ ಅವರೊಡನೆ ಅವರಂತೆ ಹಾಡು ಅರಚುತ್ತ ನಲಿಯಬಹುದು. ದಿನದ ಶಿಸ್ತಿನ ಬಿಗಿಯಿಂದ ಬಿಸಿಗೊಂಡ ದೇಹಯಂತ್ರಕ್ಕೆ ಇದೊಂದು ಬಗೆಯ ತೈಲಾಭ್ಯಂಜನ. ಕೀಲುಗಳು ನಗುವೆಂಬ ಹೆರೆಯೆಣ್ಣೆಯಿಂದ ಸಡಿಲಗೊಂಡು ಹಗುರವಾಗಿ, ಯಂತ್ರ ಮರುದಿವಸದ ಕಾರ್ಯಕ್ಕೆ ಮೊದಲಿನ ಲವಲವಿಕೆಯಿಂದ ಪುನಃ ಸಿದ್ಧವಾಗುವುದು. ದೊಡ್ಡವರಾದ ನಮಗೆ ಆಗ ಪ್ರಾಯದ ಹೊಣೆಗಾರಿಕೆಯ ಭಾರವನ್ನು ಮರೆತು ಹಗುರಾಗಿ ಎಳೆಯರಾಗಿ ನಲಿಯುವ ಸೌಕರ್ಯವಿದೆ.

ತಾಳ್ಯಾಕ ತಂತ್ಯಾಕ
ರಾಗದ ಚಿಂತ್ಯಾಕ
ಹೆಜ್ಜ್ಯಾಗ ಗೆಜ್ಜ್ಯಾಗ
ಕುಣಿಯೋಣು ಬಾರಾ ಕುಣಿಯೋಣು ಬಾ! – ಅಂಬಿಕಾತನಯದತ್ತ

(ಮುಂದುವರಿಯಲಿದೆ)